ಹಂಪಿ ಪ್ರದೇಶದಲ್ಲಿರುವ ಕನ್ನಡ ವಿಶ್ವವಿದ್ಯಾಲಯವು ಕನ್ನಡ ನಾಡಿನ ಅಲಕ್ಷಿತ ಮತ್ತು ಹೊಸ ಕ್ಷೇತ್ರಗಳ ಅಧ್ಯಯನಗಳನ್ನು ಕೇಂದ್ರಿಕರಿಸಿಕೊಂಡು ಅವುಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯವನ್ನು ಆರಂಭದಿಂದಲೂ ಮಾಡುತ್ತಾ ಬಂದಿದೆ. ಈ ಕೈಂಕರ್ಯದಲ್ಲಿ ವಿಶ್ವವಿದ್ಯಾಲಯದ ವಿಭಾಗಗಳು ಅವುಗಳ ಸಾಮರ್ಥ್ಯಗಳಿಗನುಗುಣವಾಗಿ ವಿಶೇಷ ಉಪನ್ಯಾಸಗಳು, ಕಮ್ಮಟಗಳು, ವಿಚಾರ ಸಂಕಿರಣಗಳನ್ನು ಆಯೋಜಿಸಿ, ಅವುಗಳಿಂದ ಹೊರಬರುವ ಫಲಿತಗಳನ್ನು ಕನ್ನಡ ನಾಡಿಗೆ ಸಮರ್ಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ಪ್ರಯತ್ನದಲ್ಲಿ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯವು ಹಿಂದೆ ಬಿದ್ದಿಲ್ಲ. ವಸ್ತುಸಂಗ್ರಹಾಲಯವು ಮಾರ್ಚ್ ೨೦೦೬ ರಲ್ಲಿ ರಾಯಚೂರಿನ ತಾರಾನಾಥ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಅದರಲ್ಲಿ ನಾಡಿನ ನುರಿತ, ಅನುಭವಿ ಮತ್ತು ಹೊಸ ತಲೆಮಾರಿನ ಸಂಶೋಧಕರು, ವಿದ್ವಾಂಸರು ಹೊಸ ಹೊಸ ವಿಷಯಗಳನ್ನು ಆಯ್ದು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವುಗಳನ್ನು ಸಂಸ್ಕರಿಸಿ ಇಲ್ಲಿ ಒಟ್ಟು ಹನ್ನೆರಡು ಪ್ರಬಂಧಗಳನ್ನು ಪ್ರಕಟಿಸಲಾಗಿದೆ.

ಈ ಕೃತಿಗೆ ‘ಕಲ್ಯಾಣ ಕರ್ನಾಟಕದ ಅರಸು ಮನೆತನಗಳು’ ಎಂಬ ಶೀರ್ಷಿಕೆಯನ್ನು ಕೊಟ್ಟಿರುವುದರಿಂದ ಕೆಲವು ಚರ್ಚೆಗಳು ಉದ್ಭವಿಸುತ್ತವೆ. ಹೈದರಾಬಾದ್ ಕರ್ನಾಟಕಕ್ಕೆ ಸಂವಾದಿಯಾಗಿ ಕಲ್ಯಾಣ ಕರ್ನಾಟಕ ಎಂಬ ಪದವನ್ನು ಬಳಸುತ್ತಿರುವವರಲ್ಲಿ ನಾನು ಮೊದಲಿಗನಲ್ಲದಿದ್ದರೂ ಕೃತಿಯೊಂದಕ್ಕೆ ಶೀರ್ಷಿಕೆಯನ್ನು ಕೊಟ್ಟು ಅಧಿಕೃತವಾಗಿ ಪ್ರಕಟಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯದ ಮೊದಲ ಕೃತಿ ಇದಾಗಿದೆ.

ಹಿಸ್ಟಾರಿಕಲ್ ಐಡೆಂಟಿಂಟಿಯಿಂದ ನೋಡುವುದಾದರೆ, ಈ ಅಧ್ಯಯನ ವ್ಯಾಪ್ತಿಗೆ ಒಳಪಡುವ ಪ್ರದೇಶ ರಾಷ್ಟ್ರಕೂಟರ ನಂತರ ಕಲ್ಯಾಣ ಚಾಳುಕ್ಯ ಮತ್ತು ಕಲಚೂರ್ಯರ ಆಡಳಿತದಲ್ಲಿ ಇರುತ್ತದೆ. ಮುಂದೆ ಕ್ರಿ.ಶ. ೧೯ ಮತ್ತು ೨೦ನೇ ಶತಮಾನಗಳಲ್ಲಿ ಹೈದರಾಬಾದಿನ ನಿಜಾಮನ ಆಡಳಿತದಲ್ಲಿ ಸೇರಲ್ಪಡುತ್ತದೆ. ಈ ಪ್ರದೇಶವನ್ನು ಕಲ್ಯಾಣವೆಂದು ಕರೆಯಲಾಗಿದೆ. ‘ಕಲ್ಯಾಣ’ ಎನ್ನುವ ಪದ ಪ್ರಾಚೀನ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. ಸಾಮಾಜಿಕ ಹಾಗೂ ಧಾರ್ಮಿಕವಾಗಿ ಹೊಸ ಮನ್ವಂತರಕ್ಕೆ ಹಾದಿ ಮಾಡಿಕೊಟ್ಟಿದೆ. ಕನ್ನಡ ಸಾಹಿತ್ಯಕ್ಕೆ ಹೊಸ ತಿರುವು ಕೊಟ್ಟ ವಚನಸಾಹಿತ್ಯದ ಕೇಂದ್ರವೂ ಹೌದು. ಕರ್ನಾಟಕದ ಚರಿತ್ರೆ ದಾಖಲೆಯಲ್ಲಿ ಅಂದಿನ ಸಮಕಾಲೀನ ಸಮಾಜದ ಸಾಮರಸ್ಯದ ಸಂಚಲನವನ್ನು ಆರಂಭಿಸಿದ್ದು ಈ ಪ್ರದೇಶದಿಂದಲೇ.

‘ಹೈದರಾಬಾದ್’ ಎನ್ನುವುದು ನಿಜಾಮನ ಆಳ್ವಿಕೆಯಲ್ಲಿ ಕೊಟ್ಟ ಹೆಸರು ಹಿಂದೆ ಈ ಸ್ಥಳಕ್ಕೆ ‘ಭಾಗ್ಯನಗರ’ ಎಂದು ಕರೆಯುತ್ತಿದ್ದರು. ಅಲ್ಲದೆ ೨೦ನೇ ಶತಮಾನದಲ್ಲಿ ಈ ಅಧ್ಯಯನದ ವ್ಯಾಪ್ತಿಯ ಪ್ರದೇಶ ‘ರಜಾಕರ’ ದಾಳಿಯಿಂದ ತತ್ತರಿಸಿ ಹೋದುದಕ್ಕೆ ಇಂದಿಗೂ ಅದರ ನೆನಪಾಗಿ ‘ಹೈದರಾಬಾದ್ ವಿಮೋಚನಾ’ ದಿನಾಚರಣೆಯನ್ನು ಆಚರಿಸುತ್ತಿರುವುದು ಕಂಡುಬರುತ್ತದೆ. ಈ ಬಗ್ಗೆ ಹಿಂದೆ ಕಪಟರಾಳ ಕೃಷ್ಣರಾಯರು, ಡಾ. ಎಂ. ಚಿದಾನಂದಂಮೂರ್ತಿ ಹಾಗೂ ಡಾ. ಎಂ.ಎಂ. ಕಲಬುರ್ಗಿ ಅವರು ಸಾಕಷ್ಟು ಚರ್ಚೆಗಳನ್ನು ಮಾಡಿದ್ದಾರೆ ಹಾಗಾಗಿ ಈ ವಿಷಯವನ್ನು ಇಲ್ಲಿಗೆ ಮೊಟಕುಗೊಳಿಸಿ ಮೇಲಿನ ಕಾರಣಗಳಿಂದಾಗಿ ಈ ಪ್ರದೇಶದ ಅರಸುಮನೆತನಗಳ ಕೃತಿಗೆ ‘ಕಲ್ಯಾಣ ಕರ್ನಾಟಕ’ ಎಂಬ ಶೀರ್ಷಿಕೆಯನ್ನು ಕೊಡಲಾಗಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಕರ್ನಾಟಕ ವನ್ನು ನಾಲ್ಕು ಭಾಗಗಳಾಗಿ ಮಾಡಿಕೊಂಡಿದ್ದರು. ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕ, ಮೈಸೂರು ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ. ಸ್ವಾತಂತ್ರೋ ದಯದ ನಂತರ ಅಂದರೆ ಇತ್ತೀಚಿನವರೆಗೆ ನಾವು ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ, ಮಲೆನಾಡು ಕರ್ನಾಟಕ, ಮೈಸೂರು ಕರ್ನಾಟಕ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಇತ್ಯಾದಿ ಹೆಸರುಗಳಿಂದ ಕರೆದುಕೊಳ್ಳುತ್ತಿದ್ದೇವೆ. ಕರ್ನಾಟಕದೊಳಗೆ ಹಲವು ಕರ್ನಾಟಕಗಳಿವೆ ಎಂಬ ಅಂಶವನ್ನು ಭಾಷಾ ತಜ್ಞರಾದ ಡಾ. ಕೆ.ವಿ. ನಾರಾಯಣ ಅವರು ಆಗಾಗ ಉಚ್ಛರಿಸುತ್ತಾರೆ. ಇವರು ಯಾವ ಹಿನ್ನೆಲೆಯಲ್ಲಿ ಈ ಬಗೆಯ ವ್ಯಾಖ್ಯಾನ ಮಾಡಿದ್ದಾರೆಂದು ತಿಳಿಯದು. ಆದರೆ ಈ ರೀತಿಯ ಹಲವು ಚಿಂತನೆಗಳಿವೆ ಎಂಬುವುದನಷ್ಟೆ ತಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ಗ್ರಂಥದಲ್ಲಿರುವ ಪ್ರಬಂಧಗಳನ್ನು ಆಧರಿಸಿ ಹೇಳುವುದಾದರೆ ಸುಮಾರು ೭ ಪುಟಗಳಲ್ಲಿ ವಿಸ್ತರಿಸಿಕೊಂಡಿರುವ ‘ರಂಜೋಳದ ಸಿಂದರು’ ಎಂಬ ಪ್ರಬಂಧವು ದೊರೆತ ೧೮ ಶಾಸನಗಳನ್ನು ಆಧರಿಸಿ ರಚಿತಗೊಂಡಿದೆ. ರಂಜೋಳ ಸಿಂದರ ಬಗ್ಗೆ ಈವರೆಗೆ ನಡೆದ ಅಧ್ಯಯನಗಳನ್ನು ಗಮನಿಸಿ, ಅವರ ವಂಶಾವಳಿಯ ಬಗ್ಗೆ ಚರ್ಚಿಸಲಾಗಿದೆ. ಪ್ರಭಾವಿ ಸಾಮಂತ ಅರಸು ಮನೆತನ ಗಳೊಂದಾದ ರಂಜೋಳ ಸಿಂದರು ವಿಜಯನಗರ ಪೂರ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕ್ರಿ.ಶ. ೧೦೯೯ ರಿಂದ ೧೨೫೦ ರವರೆಗೆ ಆಡಳಿತ ನಡೆಸಿದರು. ಆಳ್ವಿಕೆ ಮಾಡಿದ ೫ ಜನ ರಂಜೋಳ ಸಿಂದರಲ್ಲಿ ಪ್ರಮುಖ ಅರಸ ‘ಹಜ್ಜರಸ’ ಈ ಅರಸನನ್ನು ಒಳಗೊಂಡಂತೆ ಇವರು ದೇವಾಲಯಗಳಿಗೆ, ಮಠಮಾನ್ಯಗಳಿಗೆ ನೀಡಿದ ದಾನ – ದತ್ತಿಗಳ ವಿವರಣೆಗಳನ್ನು ಈ ಪ್ರಬಂಧ ಒಳಗೊಂಡಿದೆ. ಇವರು ಶೈವಧರ್ಮ ಪಕ್ಷಪಾತಿಗಳಾಗಿದ್ದರೂ, ಮೂಲತಃ ಜೈನ ಮತಾವಲಂಬಿಗಳಾಗಿದ್ದಿರಬಹುದೆ ಎಂಬ ಸಂಶಯಗಳು ಕೆಲವು ಹೆಸರುಗಳ ಉಲ್ಲೇಖಗಳಲ್ಲಿ ಗಮನಿಸಬಹುದಾಗಿದೆ. ಈ ಪ್ರಬಂಧದಲ್ಲಿ ರಂಜೋಳ ಸಿಂದರ ಆಡಳಿತ ನಡೆಸಿದ ಪ್ರದೇಶಗಳ ನಕ್ಷೆ. ಛಾಯಚಿತ್ರಗಳು ಇದ್ದಿದ್ದರೆ ಪ್ರಬಂಧ ಹೆಚ್ಚು ಗಮನಸೆಳೆಯುತ್ತಿತ್ತು.

ಈ ಸಂಪುಟದ ಎರಡನೆಯ ಪ್ರಬಂಧವು ‘ಕುರುಗೋಡು ಸಿಂದರ’ನ್ನು ಕುರಿತದ್ದಾಗಿದೆ. ಸಿಂದರ ವಿಸ್ತೃತ ಮಾಹಿತಿಗಳನ್ನು ದಾಖಲೆ ಸಮೇತ ಚರ್ಚಿಸಿ ನಿರ್ಣಯಿಸುವ ಕೆಲಸ ಈ ಪ್ರಬಂಧದಲ್ಲಿ ಆಗಿದೆ. ಮೊದಲ ಬಾರಿಗೆ ಸಿಂದ ಪದದ ಅರ್ಥ, ಮೂಲ, ಆ ವಂಶದ ಮೂಲಪುರುಷನ ಬಗ್ಗೆ ವಿಷಯನಿಷ್ಠ ವಿಶ್ಲೇಷಣೆಯನ್ನು ಕುರುಗೋಡು ಸಿಂದರು ಎಂಬ ಕೃತಿಯಲ್ಲಿ ಈ ಹಿಂದೆ ನೋಡಿದ್ದೇವೆ. ಅದರ ಮುಂದುವರಿಕೆಯ ಭಾಗವೂ ಮತ್ತು ಅದೇ ವಿಷಯವೇ ಇಲ್ಲಿ ಪುನರಾವರ್ತನೆಗೊಂಡಿದೆ. ಸುಮಾರು ೧೮ ಪುಟಗಳ ಸಂಶೋಧನಾ ಲೇಖನವಿದು. ಇತಿಹಾಸದ ಗಟ್ಟಿ ಮೂಲಾಕಾರಗಳಾದ ಶಾಸನಗಳನ್ನು ಹೆಚ್ಚು ಬಳಸಿಕೊಂಡು ಈ ಲೇಖನವನ್ನು ರಚಿಸಲಾಗಿದೆ.

ಕುರುಗೋಡು ಸಿಂದರ ರಾಜಕೀಯ ಇತಿಹಾಸ ಅದರಲ್ಲಿ ನಿಡುದೋಳ ಸಿಂದ, ಅರಿಬಲ್ಲಿದಾಗ್ರ, ಉದಯಾದಿತ್ಯ, ಚೋಕರಸ, ಇರುಂಗೋಳ ೨ನೇ ರಾಚಮಲ್ಲ ವೀರಕಲಿದೇವರಸರ ಬಗ್ಗೆ ಮಾಹಿತಿಗಳಿವೆ. ದೊರವಡಿ, ಆರುಬಂಡ, ಸಬಾಲ, ನಲ್ವಿಡಿ, ತೆಕ್ಕೆಕಲ್ಲು ಆಡಳಿತ ವಿಭಾಗಗಳು, ಸಾಮಾಜಿಕ ಸ್ಥಿತಿಗತಿಗಳು, ಧಾರ್ಮಿಕ ವ್ಯವಸ್ಥೆಯ ವಿಷಯಗಳಿವೆ. ಧಾರ್ಮಿಕ ವ್ಯವಸ್ಥೆಯಲ್ಲಿ ಕಾಳಾಮುಖರು ಮತ್ತು ಅವರ ಮಠಗಳು, ವೀರಶೈವ ಧರ್ಮದ ಪ್ರಾಬಲ್ಯವನ್ನು ಇಲ್ಲಿ ಗುರುತಿಸಲಾಗಿದೆ. ಕೊನೆಗೆ ಸಿಂದರ ವಂಶಾವಳಿ ಹಾಗೂ ೭೮ಕ್ಕೂ ಹೆಚ್ಚು ಟಿಪ್ಪಣಿಗಳು ಇದರಲ್ಲಿವೆ.

ಕಲ್ಯಾಣ ಕರ್ನಾಟಕವನ್ನು ಆಳಿದ ಅರಸು ಮನೆತನಗಳಲ್ಲಿ ಸಿಂದರಸರು ಪ್ರಮುಖರು ಸಿಂದರ ಇನ್ನೊಂದು ಶಾಖೆ ಯಲಬುರ್ಗಿಯ ಸಿಂದರದು. “ಯಲಬುರ್ಗಿ ಸಿಂದರು” ಎಂಬ ೧೦ ಪುಟಗಳ ಈ ಸಂಶೋಧನಾ ಲೇಖನದಲ್ಲಿ ಸಪ್ತ ಸಹೋದರರಿಂದ ಅದರಲ್ಲೂ ನಾಗಾದಿತ್ಯನಿಂದ ಯಲಬುರ್ಗಿ ಸಿಂದರ ವಂಶ ಆರಂಭವಾಗುತ್ತದೆ. ಆದರೆ ಇದಕ್ಕೆ ಯಾವ ಶಾಸನಾಧಾರಗಳಿಲ್ಲ. ಸಪ್ತರಲ್ಲಿ ಹಿರಿಯವನಾದ ‘ಅಚುಗೆ’ಯ ಉಲ್ಲೇಖ ಶಾಶನಗಳಲ್ಲಿದೆ. ಹಾಗಾಗಿ ‘ಅಚುಗೆ’ ಶಾಸಾನಾಧಾರಿತ ಮೊದಲ ಅರಸ. ಪ್ರಖ್ಯಾತ ಪ್ರಮುಖ ಅರಸನೆಂದು ೨ನೇ ಅಚರಸ, ಹಾಗೆಯೇ ೧ನೇ ಪೆರ್ಮಾಡಿದೇವ, ಚಾವುಂಡರು ಪ್ರಮುಖ ಅರಸರು. ಚಾವುಂಡನು ೨೫ ವರ್ಷ ಆಳ್ವಿಕೆ ಮಾಡಿದ.

ಶಾಸಾನಾಧಾರಗಳನ್ನು ಪ್ರಧಾನವಾಗಿರಿಸಿಕೊಂಡು ಯಲಬುರ್ಗಿಯ ಸಿಂದರ ಇತಿಹಾಸವನ್ನು ಶ್ರಮವಹಿಸಿ ಕಟ್ಟಿಕೊಟ್ಟಿರುವುದು ಈ ಲೇಖನದಲ್ಲಿ ಕಂಡುಬರುತ್ತದೆ. ವಿಷಯವಾರು ವಿಂಗಡಣೆ ಮಾಡಿ, ಕ್ರಮಬದ್ಧತೆಯ ಜೋಡಣೆಯ ಕೊರತೆಯನ್ನು ಇಲ್ಲಿ ಕಾಣುತ್ತೇವೆ.

ನೊಳಂಬರು ವಿಷಯ ಕುರಿತಾಗಿರುವ ಲೇಖನವು ೮ ಪುಟಗಳನ್ನು ಹೊಂದಿದೆ. ಪ್ರಮುಖ ರಾಜಮನೆತನಗಳಾದ ಪಲ್ಲವ, ರಾಷ್ಟ್ರಕೂಟ, ಗಂಗ ಹಾಗೂ ಚಾಳುಕ್ಯರ ಕಾಲದಲ್ಲಿ ನೊಳಂಬರು ಇವರ ಅಧೀನ ರಾಜರಾಗಿ ಹೇಗೆ ಆಡಳಿತ ಮಾಡಿದರು. ಇವರು ಬಳ್ಳಾರಿ, ತುಮಕೂರು, ಚಿತ್ರದುರ್ಗ, ಕೋಲಾರ, ಬೆಂಗಳೂರು, ತಮಿಳುನಾಡಿನ ಕೆಲವು ಭಾಗಗಳು ಸೇರಿದಂತೆ ನೊಳಂಬವಾಡಿ ೩೨೦೦ ದ ಅಧಿಪತಿಗಳಾದ್ದರು. ನೊಳಂಬರ ಪ್ರಾಚೀನತೆ, ನೊಳಂಬರ ವಿವಿಧ ಶಾಖೆಗಳ ಕುರಿತಾಗಿ ಮಾಹಿತಿಗಳಿವೆ.

ಶಾಸನಗಳನ್ನು ಆಧರಿಸಿ ಸಾಂದರ್ಭಿಕವಾಗಿ ಅವುಗಳನ್ನು ವ್ಯಾಖ್ಯಾನಿಸಿರುವುದು ಕಂಡುಬರುತ್ತದೆ. ನೊಳಂಬರಲ್ಲಿ ಇರುವನೊಳಂಬ ಘಬೆಯಂಕಕಾರ, ಜಗದೇಕಮಲ್ಲ ನಿರ್ಮಾಡಿ ನೊಳಂಬ ಪೇರ್ಮಾಡಿದೇವ ಮತ್ತು ತ್ರೈಲೋಕ್ಯಮಲ್ಲ ನನ್ನಿನೊಳಂಬ ಪಲ್ಲವಪೇರ್ಮಾಡಿ ದೊರೆಗಳು ಪ್ರಮುಖ ಅರಸರಾಗಿರುವುದನ್ನು ಈ ಲೇಖನದಿಂದ ಕಂಡುಕೊಳ್ಳಬಹುದು. ನೊಳಂಬರ ವಂಶಾವಳಿ ಹಾಗೂ ಅವರು ಕಟ್ಟಿಸಿದ ದೇವಾಲಯಗಳು ಇವರುಗಳಿಗೆ ನೀಡಿದ ದಾನ – ದತ್ತಿಗಳ ಬಗ್ಗೆ ವಿವರಣೆಗಳಿವೆ.

ವಿಜಯನಗರ ಮತ್ತು ನಂತರದ ಪಾಳೆಯಗಾರರ ಇತಿಹಾಸ ರಚನೆಯೇ ಕ್ಲಿಷ್ಟಕರವಾಗಿರುವಾಗ ಕ್ರಿ.ಶ.೮ ರಿಂದ ೧೧ನೇ ಶತಮಾನದ ನೊಳಂಬರ ಇತಿಹಾಸ ರಚನೆಯ ಸಂದಿಗ್ಧತೆಯನ್ನು ಗ್ರಹಿಸಬಹುದು. ಕಷ್ಟಸಾಧ್ಯವಾದ ಕೆಲಸಕ್ಕೆ ಲೇಖಕರು ಶ್ರಮಿಸಿದ್ದಾರೆ. ಜಾನಪದ ಮತ್ತು ಇತರೆ ಸಾಹಿತ್ಯಕ ಆಕರ ಲೇಖಕರಿಗೆ ದೊರೆತಂತೆ ಕಾಣದು. ಇದೊಂದು ಸಂಶೋಧನಾ ವಿಧಾನವುಳ್ಳ ಮತ್ತು ಕ್ರಮಬದ್ಧತೆಯುಳ್ಳ ಪ್ರಬಂಧವಾಗಿದೆ.

‘ಗೆಜ್ಜಲಗಟ್ಟಿ ದೇಸಾಯಿಗಳು’ ಈ ಲೇಖನವು ೯ ಪುಟಗಳ ವ್ಯಾಪ್ತಿಯನ್ನು ಹೊಂದಿದೆ. ವಿಜಯನಗರ ಪತನ ನಂತರ ಕರ್ನಾಟಕದಲ್ಲಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಅನೇಕ ಪಾಳೆಯಪಟ್ಟುಗಳು ಉದಯವಾದವು. ಅದರಲ್ಲಿ ಗೆಜ್ಜಲಗಟ್ಟಿ ದೇಸಾಯಿ ಮನೆತನವು ಒಂದು.

ಗೆಜ್ಜಲಗಟ್ಟಿ ದೇಸಾಯಿಗಳ ಬಗ್ಗೆ ಇರುವ ಹೆಳವರ ಹೇಳಿಕೆಗಳು ಪ್ರಸ್ತುತ ಗೋಚರಿಸುವ ಪಳೆಯುಳಿಕೆಗಳು, ಸ್ಮಾರಕಗಳು, ಆ ವಂಶಸ್ಥರ ಮಾಹಿತಿಗಳನ್ನು ಆಧರಿಸಿ ಈ ಲೇಖನ ಸಿದ್ಧಗೊಂಡಿದೆ.

ಗೆಜ್ಜಲಗಟ್ಟಿ ದೇಸಾಯಿಗಳು ಮೂಲತಃ ಈಗಿನ ಆಂಧ್ರಪ್ರದೇಶದಲ್ಲಿರುವ ಆದವಾನಿಯವರು, ರೆಡ್ಡಿ ಲಿಂಗಾಯಿತ ಬಣಕ್ಕೆ ಸೇರಿದವರು. ಈ ದೇಸಾಯಿಗಳು ಮೊಗಲ್ ಔರಂಗಜೇಬ, ಬ್ರಿಟಿಷರ ಪ್ರೀತಿಗೆ ಪಾತ್ರರಾಗಿ ರಾಜ್ಯಭಾರ ಮಾಡಿದರು. ಸುಮಾರು ೧೨೦೦೦ ಕ್ಕೂ ಹೆಚ್ಚು ಎಕರೆ ಭೂಮಿಯ ಒಡೆತನ ಇವರದಾಗಿತ್ತು. ಇವರ ಆಡಳಿತ ವ್ಯಾಪ್ತಿಗೆ ೧೫ ಹಳ್ಳಿಗಳು ಇದ್ದವು. ಅದರಲ್ಲಿ ೧೦ ಹಳ್ಳಿಗಳು ಬಿಲ್ ಮುಕ್ತಾಯಿ ಗ್ರಾಮಗಳಾಗಿದ್ದವು.

ಸಂಗಾರೆಡ್ಡಿ ಈ ಮನೆತನದ ಮೂಲಪುರುಷ ಮುಂದೆ ರಾಜಾ ಸೋಮಸರ್ಜ ನಾಯಕ, ವೆಂಕಟರಾವ್ ನಾಡಗೌಡರು, ಮಾನಪ್ಪಗೌಡರು, ರಾಣಿ ಲಕ್ಷ್ಮೀದೇವಿ ಆಳ್ವಿಕೆ ನಡೆಸಿದರು.

ರಾಣಿ ಲಕ್ಷ್ಮೀದೇವಿಯ ಮುಂದಾಲೋಚನೆ, ಜಾಣ್ಮೆ, ರಾಜಕೀಯ, ಆಡಳಿತ, ಸಾಮಾಜಿಕ ಹಾಗೂ ಧಾರ್ಮಿಕ ಸಾಧನೆಗಳನ್ನು ಉದಾಹರಣೆ ಸಮೇತ ವಿಸ್ತೃತವಾಗಿ ಹೇಳಲಾಗಿದೆ.

ರಾಣಿ ಲಕ್ಷ್ಮೀದೇವಿಯ ದೈವೀಭಕ್ತಿ, ಇದರಿಂದ ಗೆಜ್ಜಲಗಟ್ಟಿ ‘ಮರಿ ಕಲ್ಯಾಣ’ ವಾಯಿತ್ತೆಂಬ ಅಭಿಪ್ರಾಯ ಲೇಖಕರದು. ಕನ್ನಡದ ಮತ್ತು ಸಂಸ್ಕೃತದ ಬೆಳವಣಿಗೆಗೆ ಪಾಠಶಾಲೆಗಳನ್ನು ಆರಂಭಿಸಿದಳು. ಒಟ್ಟು ಈ ಲೇಖನದಲ್ಲಿ ರಾಣಿ ಲಕ್ಷ್ಮೀದೇವಿಯ ಜೀವನ ಸಾಧನೆಗಳನ್ನು ಕೇಂದ್ರಿಕರಿಸಿಕೊಳ್ಳಲಾಗಿದೆ.

ರಾಣಿ ಲಕ್ಷ್ಮೀದೇವಿಯ ಪತಿ ಮಾನಪ್ಪಗೌಡರ ಬಗ್ಗೆ ಯಾವುದೇ ಮಾಹಿತಿಗಳು ಲೇಖಕರಿಗೆ ದೊರೆದಂತೆ ಕಂಡುಬರುವುದಿಲ್ಲ. ಗೆಜ್ಜಲಗಟ್ಟಿಯಲ್ಲಿ ಆಳ್ವಿಕೆ ಮಾಡಿದ ಇತರೆ ದೇಸಾಯಿಗಳ ಸಾಧನೆಗಳ ಬಗ್ಗೆಯು ಲೇಖನ ಮೌನವಹಿಸಿದೆ. ಏನೇ ಆದರೂ ಒಬ್ಬ ಸ್ತ್ರೀಯಾಗಿ ರಾಣಿ ಲಕ್ಷ್ಮೀದೇವಿಯ ವಹಿಸಿದ ವಿಭಿನ್ನ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.

ವಿಜಯನಗರ ಪತನಾ ನಂತರ ಪ್ರಾಬಲ್ಯಕ್ಕೆ ಬಂದ ಪಾಳೆಯಗಾರರಲ್ಲಿ ಗುಡೇಕೋಟೆ ಹಾಗೂ ಜರಿಮಲೆಯವರು ಪ್ರಮುಖರು. ಕೂಡ್ಲಿಗಿ ತಾಲೂಕಿನ ಆಯಾಕಟ್ಟಿನ ಸ್ಥಳಗಳಲ್ಲಿ ಈ ಎರಡು ಪ್ರದೇಶಗಳಿವೆ. ಈ ಎರಡು ಪಾಳೆಯಪಟ್ಟುಗಳು ಒಂದೇ ಸಮಕಾಲೀನವು. ಇವುಗಳ ಬಗ್ಗೆ ಸಂಶೋಧನಾ ಲೇಖನವನ್ನು ಈ ಸಂಪುಟಕ್ಕೆ ಬರೆದವರು ಒಬ್ಬರೇ.

ಗುಡೇಕೋಟೆ ಪಾಳೆಯಗಾರರು ಜರಿಮಲೆ ಪಾಳೆಯಗಾರರಿಗಿಂತ ಹೆಚ್ಚು ಪ್ರಬಲರು ಎಂಬ ಅಂಶ ಅವರ ದಾಖಲೆಗಳಿಂದ ದೃಢಪಡುತ್ತದೆ. ಪಾಳೆಯಗಾರರ ಮೂಲ, ರಾಜಕೀಯ ಚರಿತ್ರೆ, ಸ್ಥಳದ ಮಹತ್ವ, ವಂಶಾವಳಿ, ಅಲ್ಲಿರುವ ಕೋಟೆ, ಕೆರೆ, ಬಾವಿ, ಕಣಜ ಹಾಗೂ ಕೋಷ್ಟಕವನ್ನು ನೀಡಿದ್ದಾರೆ. ಕೈಫಿಯತ್ತು ಈ ಲೇಖನಗಳ ಪ್ರಮುಖ ಆಧಾರ. ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ ವಿಶ್ಲೇಷಣೆ ಮಾಡಲಾಗಿದೆ. ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಪ್ರಬಂಧಗಳನ್ನು ಗಮನಿಸಬಹುದಿತ್ತು.

ವಿಜಯನಗರದ ಸಮಕಾಲೀನ ಅರಸು ಮನೆತನ ಕನಕಗಿರಿಯದ್ದು. ಈ ಮನೆತನ ಕುರಿತಾಗಿ ವಿರಳ ಮಾಹಿತಿಗಳನ್ನು ಸೇರಿದಂತೆ ಉತ್ತಮ ವಿಶ್ಲೇಷಣೆಯನ್ನು ಲೇಖಕರು ಮಾಡಿದ್ದಾರೆ.

ಪಾಂಡ್ಯರ ಹಲವು ಶಾಖೆಗಳಲ್ಲಿ ಉಚ್ಚಂಗಿಯದು ಒಂದು. ಪಾಂಡ್ಯರ ಬಹಳಷ್ಟು ಶಾಸನಗಳು ಉಚ್ಚಂಗಿದುರ್ಗದ ಪರಿಸರದಲ್ಲಿ ದೊರೆಯುತ್ತವೆ. ಇವುಗಳನ್ನು ಆಧರಿಸಿ ಈಗಾಗಲೇ ಸಾಕಷ್ಟು ಪ್ರಕಟಣೆಗಳು ಹೊರಬಂದಿವೆ. ಆದರೂ ಕನ್ನಡದಲ್ಲಿ ಸುದೀರ್ಘ ಮಾಹಿತಿಗಳನ್ನು ಆಧರಿಸಿದ ಸಂಶೋಧನಾ ಪ್ರಬಂಧದ ಕೊರತೆ ಇತ್ತು ಇದನ್ನು ಉಚ್ಚಂಗಿ ಪಾಂಡ್ಯರ ಲೇಖನದ ಮೂಲಕ ಲೇಖಕರು ತುಂಬಿಕೊಟ್ಟಿದ್ದಾರೆ. ಎಲ್ಲಾ ಸಂಶೋಧನಾ ಲೇಖನಗಳಂತೆ ಈ ಪ್ರಬಂಧವನ್ನು ಸಂಶೋಧನಾ ವಿಧಿ – ವಿಧಾನಗಳಿಂದ ಅಳೆಯದೆ ನೋಡಬೇಕಷ್ಟೆ. ಲೇಖಕರ ಪರಿಶ್ರಮ ಮೆಚ್ಚುವಂತದ್ದು. ವಂಶಾವಳಿಯ ವಿವರಗಳು ಹೇರಳವಾಗಿವೆ.

ವಿಜಯನಗರ ಪೂರ್ವ ಹಾಗೂ ನಂತರದಲ್ಲಿ ಆನೆಗೊಂದಿ ಅರಸರು ಇತಿಹಾಸದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುತ್ತಾರೆ. ವಿಜಯನಗರ ಪೂರ್ವದಲ್ಲಿ ಆನೆಗೊಂದಿಯನ್ನು ಕುಮ್ಮಟದ ಅರಸರು ಆಳಿದ್ದಾರೆ. ಅದರಲ್ಲೂ ಕುಮಾರರಾಮ ಕೆಂಪಲಿರಾಯ, ಮುಂಮ್ಮಡಿ ಸಿಂಗೆಯರ ಬಗ್ಗೆ ‘ಆನೆಗೊಂದಿ ಅರಸರು’ ಎಂಬ ಲೇಖನದಲ್ಲಿ ಚರ್ಚಿಸಲಾಗಿದೆ. ಇವರು ಮೂಲತಃ ಬೇಡ ಸಮುದಾಯಕ್ಕೆ ಸೇರಿದವರೆಂದು ಲೇಖಕರು ತೀರ್ಮಾನಿಸಿದ್ದಾರೆ.

‘ರಾಯಚೂರು ಜಿಲ್ಲೆಯ ಕೆಲವು ನಾಯಕ ಮನೆತನಗಳು’ ಈ ಸಂಶೋಧನಾ ಪ್ರಬಂಧವು ಹೊಸ ಪ್ರಯತ್ನದಿಂದ ಕೂಡಿದೆ. ಚರಿತ್ರೆಯಲ್ಲಿ ಅಲಕ್ಷಿತ ನಾಯಕ ಮನೆತನಗಳಾದ ಗುಡಗುಂಟಿ, ಗುಂತಗೋಳ, ದೇವದುರ್ಗ ಇತ್ಯಾದಿಗಳ ಬಗ್ಗೆ ಹೊಸ ಬೆಳಕನ್ನು ಈ ಲೇಖನ ನೀಡುತ್ತದೆ. ಸಂಶೋಧನಾ ಚೌಕಟ್ಟಿನಿಂದ ಕೂಡಿದ ಪ್ರಬಂಧವು ಪರಿಶ್ರಮದಿಂದ ರಚನೆಗೊಂಡಿದೆ.

‘ಕೆಂಚನಗುಡ್ಡದ ನಾಡಗೌಡರು’ ಈ ಸಂಶೋಧನಾ ಪ್ರಬಂಧದಲ್ಲಿ ಈಗಾಗಲೇ ಪ್ರಕಟಗೊಂಡಿದ್ದ ಶಾಸನದ ಮರು ಓದಿನೊಂದಿಗೆ ಸ್ಥಳೀಯ ದಾಖಲೆ ಆಧಾರದಿಂದ ಲೇಖನವನ್ನು ಗಟ್ಟಿಗೊಳಿಸಿದ ಲೇಖಕರು ಪರಿಶ್ರಮ ಶ್ಲಾಘನೀಯವಾಗಿದೆ.

ಈ ಕೃತಿಯು ಬೆಳಕು ಕಾಣಲು ವಸ್ತುಸಂಗ್ರಹಾಲಯದ ನಿರ್ದೇಶಕರಾದ ಡಾ.ಕೆ.ಎಂ. ಸುರೇಶ ಅವರು ಪ್ರಮುಖ ಕಾರಣ. ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರ ಒತ್ತಾಸೆ ಕುಲಸಚಿವರು ಹಾಗೂ ಪ್ರಸಾರಾಂಗದ ನಿರ್ದೇಶಕರೂ ಆದ ಡಾ. ಮಂಜುನಾಥ ಬೇವಿನಕಟ್ಟಿ ಅವರ ಸಹಕಾರ ಹಾಗೂ ಅಧ್ಯಯನಾಂಗದ ನಿರ್ದೇಶಕರಾದ ಡಾ. ವೀರೇಶ ಬಡಿಗೇರ ಇವರೆಲ್ಲರನ್ನು ಮೊದಲು ನೆನೆಯುತ್ತೇನೆ.

ವಿಚಾರ ಸಂಕಿರಣಕ್ಕೆ ಸ್ಥಳಾವಕಾಶ ಕಲ್ಪಿಸಿ, ಸಹಕರಿಸಿದ ರಾಯಚೂರಿನ ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಆಡಳಿತ ಸಿಬ್ಬಂದಿ ಅವರಿಗೆ ಮತ್ತು ವಿಚಾರಸಂಕಿರಣದಲ್ಲಿ ಆಶಯ ಭಾಷಣ ಮಾಡಿದ ಪ್ರೊ. ಲಕ್ಷ್ಮಣ್ ತೆಲಗಾವಿ ಅವರಿಗೆ ಕೃತಜ್ಞತೆಗಳು.

ಶಾಸನಶಾಸ್ತ್ರ ವಿಭಾಗದ ಎಲ್ಲ ಸಹ ಪ್ರಾಧ್ಯಾಪಕರನ್ನು ಈ ಕೃತಿಗೆ ಸಂಶೋಧನಾ ಪ್ರಬಂಧಗಳನ್ನು ಸಕಾಲದಲ್ಲಿ ನೀಡಿ ಸಹಕರಿಸಿದ ಎಲ್ಲ ಲೇಖಕರನ್ನು ಪ್ರಸಾರಾಂಗದ ಗೆಳೆಯರನ್ನು, ಅಚ್ಚುಕಟ್ಟಾಗಿ ಡಿ.ಟಿ.ಪಿ. ಮಾಡಿದ ಶ್ರೀ ಬಸವರಾಜ ಹಾಗೂ ಶ್ರೀಮತಿ ಎ. ನಾಗವೇಣಿ ಅವರನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ.

ಈ ಕೃತಿಯು ಹೊರಬರಲು ಸಹಕರಿಸಿದ ನೆಚ್ಚಿನ ಮಡದಿ ಶ್ರೀಮತಿ ಜೆ. ಸುಧಾ, ಪುತ್ರರಾದ ಚಿರಂಜೀವಿ ಅಖಿಲೇಶ್ ಹಾಗೂ ಆಕಾಂಕ್ಷ ಇವರನ್ನು ನೆನೆಯಲೇಬೇಕು.