ಬಳ್ಳಾರಿ ಜಿಲ್ಲೆ ಸಿರುಗುಪ್ಪ, ತಾಲೂಕು ಕೇಂದ್ರದಿಂದ ನೈರುತ್ಯ ದಿಕ್ಕಿಗೆ ೬ ಕಿ.ಮೀ. ಅಂತರದಲ್ಲಿರುವುದೇ ಕೆಂಚನಗುಡ್ಡ. ತುಂಗಭದ್ರ ನದಿಯ ಬಲದಂಡೆಯ ಮೇಲೆ ನಿಸರ್ಗ ನಿರ್ಮಿತ ಬಿಟ್ಟಗುಡ್ಡಗಳಲ ನಡುವೆ ಪುಟ್ಟ, ದ್ವೀಪದಂತೆ ಈ ಗುಡ್ಡವು ಕಂಗೊಳಿಸುತ್ತಿದೆ. ಇವುಗಳ ಸಾಲಿನಲ್ಲಿ ದಕ್ಷಿಣಕ್ಕೆ ನಿಟ್ಟೂರು, ಉದೇಗೊಳಂ ಒಳಗೊಂಡಂತೆ ತೆಕ್ಕಲಕೋಟೆಯವರೆಗೆ ಅವರಿಸಿರುವ ಗಿರಿಶ್ರೇಣಿ ಪ್ರಾಚೀನ ಸಂಸ್ಕೃತಿಯ ನೆಲೆವೀಡಾಗಿರುವುದು ಈಗಾಗಲೇ ವೇದ್ಯವಾಗಿರುವ ಸಂಗತಿ. ಪ್ರಾಗಿತಿಹಾಸಕಾಲದ ಜನಸಮುದಾಯದ ಅವಶೇಷಗಳ ಕುರುಹುಗಳೊಂದಿಗೆ ಚರಿತ್ರಾರಂಭ ಕಾಲದ ಶಾಸನಗಳು ಲಭ್ಯವಾಗಿರುವುದು ಇದೇ ಪರಿಸರದಲ್ಲಿ. ಅಂದರೆ, ಅಶೋಕನ ಬಂಡೆಗಲ್ಲು ಶಾಸನಗಳು ಪ್ರಥಮಬಾರಿಗೆ ಬೆಳಕನ್ನು ಕಾಣುವುದರೊಂದಿಗೆ, ಪ್ರಾಚೀನ ಮೌರ್ಯರಿಂದ ಅರ್ವಾಚೀನ ನಾಗರಿಕ ಯುಗದವರೆಗೂ ಅನೇಕ ಸಮುದಾಯಗಳ ವಿಭಿನ್ನ ಸಂಸ್ಕೃತಿಗಳ ತಾಣವಾಗಿದೆ ಇಲ್ಲಿಯ ಪ್ರದೇಶಗಳು. ಇಂತಹ ಐತಿಹಾಸಿಕ ಮಹತ್ವ ಪಡೆದಿರುವ ಬೃಹತ್ ಪರಿಸರದ ನಡುವೆ ಭತ್ತದ ಚಿಲುಮೆಯಾಗಿ ಸದಾ ಹರಿಯುತ್ತಿರುವ ತುಂಗಭದ್ರೆಯ ತಟದ ಮೇಲೆ ನೆಲೆ ನಿಂತಿರುವುದೇ ಕೆಂಚನಗುಡ್ಡ. ಪ್ರಸ್ತುತ ಈ ಪ್ರದೇಶವು ಮಂಗಾಪುರ ಗ್ರಾಮದ ವ್ಯಾಪ್ತಿಗೆ ಒಳಪಟ್ಟಿದೆ.

ಕೆಂಚನಗೌಡ ಎಂಬಾತನಿಂದ ಈ ಗುಡ್ಡಕ್ಕೆ ಕೆಂಚನಗುಡ್ಡವೆಂದೂ ಕರೆಯಲಾಗಿದೆ ಎಂಬ ಸ್ಥಳೀಯ ಜನಾಭಿಪ್ರಾಯ ಪ್ರಸ್ತುತವಾದುದು. ಆದರೆ, ಇದಕ್ಕೂ ಪೂರ್ವದಲ್ಲಿ ‘ಕಾಂಚನಗಡ’ ಎಂಬ ಅಭಿನಾಮವು ಈ ಸ್ಥಳಕ್ಕೆ ಇರುವುದನ್ನು ಗಮನಿಸಬೇಕಿದೆ. ಅಂದರೆ ಕ್ರಿ.ಶ. ೧೫೬೫ರಲ್ಲಿ ವಿಜಯನಗರ ಸಾಮ್ರಾಜ್ಯವು ಪತನವಾದ ನಂತರ ಈ ಭಾಗದ ಬಹುತೇಕ ಪ್ರದೇಶಗಳು ಬಿಜಾಪುರದ ಆದಿಲ್‌ಶಾಹಿಗಳ ವಶವಾಯಿತು. ಯುದ್ಧ – ತಂತ್ರಗಳ ಸೈನಿಕ ನೆಲೆಯಾಗಿದ್ದ, ಈ ಗುಡ್ಡ ಸಹಜವಾಗಿ ಆದಿಲ್‌ಶಾಹಿಗಳ ಆಡಳಿತಕ್ಕೆ ಒಳಪಟ್ಟಿತು. ಭೌಗೋಳಿಕವಾಗಿ ನದಿ ಪಾತ್ರದ ಇಲ್ಲಿಯ ಬೃಹತ್ ಬಂಡೆಗಳು ಬಿಸಿಲಿನ ಝಳಕ್ಕೆ ಚಿನ್ನದ ಹೊಳಪನ್ನು ಪಡೆದು ಕಂಗೊಳಿಸಿರಬೇಕು. ಪರಿಣಾಮವಾಗಿ ಕಣ್ಣಿಗೆ ಕಾಂಚನದಂತೆ ಹೊಳೆಯಿತ್ತಿದ್ದ ಈ ಗುಡ್ಡಗಳ ಸಮೂಹಕ್ಕೆ ‘ಕಾಂಚನಗಡ’ ‘ಕಂಚನಗಢ’ ಎಂದು ಮರಾಠಿ ಸೈನಿಕರು ಕರೆದಿರುವ ಸಾಧ್ಯತೆ ಇದೆ.

ಆಕರಗಳು

ಕೆಂಚನಗುಡ್ಡದ ನಾಡಗೌಡರನ್ನು ಕುರಿತು ಅಧ್ಯಯನ ಮಾಡಲು ಹೊರಟಾಗ ಎದುರಾದುದು ಆಕರಗಳ ಕೊರತೆ.ವಿಜಯನಗರೋತ್ತರ ಬಳ್ಳಾರಿ ಜಿಲ್ಲೆಯ ಪ್ರಮುಖ ಪಾಳೆಯಗಾರರ ಅಧೀನ (ಸಾಮಂತ) ಅಧಿಕಾರಿಗಳಾಗಿ ಇವರುಗಳು ಇದ್ದುದರ ಪರಿಣಾಮವಾಗಿ ಮುಖ್ಯವಾಹಿನಿಯಾಗಿ ಗುರುತಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಉಳಿದ ಸಾಮಂತ ಮನೆತನಗಳಂತೆ ತಮ್ಮನ್ನು ದಾಖಲಿಸಿಕೊಳ್ಳುವ ಇರಾದೆ ಇವರಲ್ಲಿ ಕಂಡುಬರುವುದಿಲ್ಲ. ಹೀಗಾಗಿ ಇವರ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ವಿಪುಲವಾದ ಶಾಸನಗಳಾಗಲಿ, ಸಾಹಿತ್ಯ ಕೃತಿಗಳಾಗಲಿ, ಜಾನಪದ – ಐತಿಹ್ಯಗಳಾಗಲಿ, ವದೇಶಿಯರ ಬರಹಗಳಾಗಲಿ, ಹಸ್ತಪ್ರತಿ – ಪ್ರಶಸ್ತಿ ಪತ್ರಗಳಾಗಲಿ, ಕಥನಗೀತೆ ಮುಂತಾದ ಪಾರಂಪರಿಕ ಹೇಳಿಕೆಗಳಾಗಲಿ ಈವರೆಗೆ ದೊರೆಯದಿರುವುದು ಕಾರಣವಾಗಿದೆ, ಲಭ್ಯವಿರುವ ಏಕೈಕ ಆಕರವೆಂದರೆ ಗುಡ್ಡದ ಗಂಗಾಧರೇಶ್ವರ ದೇವಾಲಯದ ಗೋಡೆಗೆ ನಿಲ್ಲಿಸಿರುವ ಕ್ರಿ.ಶ. ೧೭೦೯ ಫಬ್ರವರಿ ೮ರ ಒಂದೇ ಕಲ್ಲಿನಲ್ಲಿ ಆರು ತೇದಿವುಳ್ಳ ಶಿಲಾಶಾಸನ. ಇದೊಂದು ಸಮಾಕಾಲೀನ ಪ್ರಾಥಮಿಕ ಲಿಖಿತ ಆಕರವಾಗಿದ್ದು, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೧ರ ಶಾಸನ ಸಂಖ್ಯೆ ೫೨ರಲ್ಲಿ ಪ್ರಕಟಗೊಂಡಿದೆ.

ಶಾಸನ ಮರು ಓದು

ಏಕಶಿಲೆ ಮೇಲೆ ೨೪ ಸಾಲುಗಳಿಮದ ಕೂಡಿರುವ ಈ ಶಾಸನವನ್ನು ಮೊದಲಿಗೆ ಶಾಸನ ಇಲಾಖೆಯ ವಾರ್ಷಿಕ ವರದಿ ೧೯೭೭ – ೭೮ರಲ್ಲಿ (A.R.No. B.98 of 1977 – 98) ಪರಿಚಯಿಸಲಾಯಿತು. ನಂತರ ೧೯೯೮ರಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಬಳ್ಳಾರಿ ಜಿಲ್ಲೆ ಶಾಸನ ಸಂಪುಟದಲ್ಲಿ ಇದರ ಪೂರ್ಣ ಪಾಠವನ್ನು ಓದಿ ಪ್ರಕಟಿಸಲಾಯಿತು. ಪ್ರಕಟಗೊಂಡ ಶಾಸನ ಪಾಠವು ಹಲವಾರು ತಪ್ಪು ಓದಿನಿಂದ ಕೂಡಿದ್ದು, ಕಾಲನಿರ್ಣಯ ಹಾಗೂ ಘಟನೆಗಳನ್ನು ವಿವರಿಸುವಲ್ಲಿ ಲೋಪಗಳಾದವು. ಕ್ಷೇತ್ರಕಾರ್ಯ ಕೈಗೊಂಡು ಈ ಶಾಸನವನ್ನು ಮರು ಓದಲಾಗಿ ಹಲವು ಪದಗಳು ಹೊಸದಾಗಿ ಸೇರ್ಪಡೆಗೊಂಡವು. ಅಂತಿಮವಾಗಿ ಶಾಸನ ಪಾಠವು ಪರಿಷ್ಕೃತಗೊಂಡಿದ್ದು ಈ ಕೆಳಕಂಡಂತೆ ಇದೆ.

ಶಾಸನಪಾಠ (ಪರಿಷ್ಕೃತ)

ಗಂಗಾಧರ

೧. ಸ್ವಸ್ತಿ ಶ್ರೀಜಯಾಬ್ದೆಯ ಶಾಲಿವಾಹನ ಶಕವರುಷಂಗಳು ೧೬೩೦ ನೆಯ ಸರ್ವ

೨. ಧಾರಿ ನಾಮ ಸಂವತ್ಸರದ ಮಾರ್ಗಶರ ಶು ೫ ಯಲ್ಲು ಶ್ರೀಮತು ವಡೆರಹಟ್ಟಿ ಪುರವರ್ಗಕ್ಕೆ

೩. ಕಾರಣಕರ್ತರಾದ ರಾಜೆಶ್ರೀ ಮೂಲೆಮಟದ ರಾಚೋಟಿದೇವರ ಶಿಷ್ಯರಾದ ಪಂಚ

೪. ಮ ಕುಲೋತ್ಪಂನ್ನ ಸಿರಿಕುಪ್ಪೆ ಸಿಮೆ ಮಜಕೂರು ವ ದೇವರಸನ ಕಾಲುವೆ ವ ಮಂಗಾಪು

೫. ರ ವರ ಯಿಭರಾಮಾಪುರದ ಗೌಡಮಲ್ಲಿ ನಾಯಕನ ಕೊಮಾರ ಚಿಕ್ಕಣಗೌಡನು ಆತಗೆ

೬. ಹೆಂಡರೂ ಯಿಬ್ಬರು ವಬ್ಬ ಹೆಂಡತಿಗೆ ಮಗ ಗಿಡ್ಡ ಕೆಂಚಣಗೌಡ ವ ಬಸವಣಗೌಡ

೭. ಯಿಬ್ಬರದು ನಷ್ಟಸಂಥಾನವಾಯಿತಿ ಯರಡನೆ ಹೆಂಡತಿ ಮಗ ದೇಮಣಗೌಡನು ಆತ

೮. ಗೆ ಮಕ್ಕಳು ಯಲ್ಲಣಗೌಡ ೧ ಕೆಂಚಣಗೌಡ ೧ ಕೆಂಚಣಗೌಡಗೆ ಮಕ್ಕಳು ಯಿಲ್ಲ

೯. ವು ಯಲ್ಲಣಗೌಡಗೆ ಮಕ್ಕಳು ನಾಲ್ಲವರು ರಾಮಣಗೌಡ ೧ ದೇಮಣಗೌಡ ೧ ನಾಗ

೧೦. ಣಗೌಡ ೧ ಮುದುಕಣಗೌಡ ೧ ಯಿದರವಳಗೆ ರಾಮಣಗೌಡನ್ನು ಮುದುಕಣಗೌಡನ್ನ ಕೆ

೧೧. ಂಚನಗೌಡಗೆ ಸಾಕಕೊಟ್ಟರು ರಾಮಣಗೌಡಗೆ ವಬ್ಬ ಮಗಯಿದ್ದಾತ ದೈವಿಕವಾದನು ಮು

೧೨. ದಕಣಗೌಡನ ಹಜರತಿ ಅಬ್ದುಲ್ಲ ವಹಬಸಾಹೇಬನ ಮಗ ಮಲಿಕಿ ಸಾಹೇಬನಾ ಕಾ

೧೩. ಲಕಿರ್ದಿಲಿ ಪರಗಣೆ ಸಿರಿಕುಪ್ಪೆ ಸೀಮೇಯ ನಾಡಗೌಡಿಕೆ ಪಡದನು ಯೀತಗೆ ಮಕ್ಕಳು ನಾಲ್ಲೋರು

೧೪. ದೇಮಣಗೌಡ ೧ ಕೆಂಚಣಗೌಡ ೧ ಸಾಹೇಬಗೌಡ ೧ ರಾಮಣಗೌಡ ೧ ಯೀ ಮುದ

೧೫. ಕಣಗೌಡನು ತನ್ನ ಮಗ ಕೆಂಚಣಗೌಡನ್ನ ತಂಮ್ಮ ಅಣ ರಾಮಣಗೌಡಗೆ ಸಾಕು ಕೊ

೧೬. ಟ್ಟರು ಯೀ ಕೆಂಚಣಗೌಡನು ಮಿರಾಸಿ ವುದ್ಧಾರ ಮಾಡಿ ವೈರಿ ಮೊರೆ ವೆಲ ಹೊ

೧೭. ಡದು ನಾಡಗೌಡಿಕೆ ವುಂಮ್ಮಳಿ ಗ್ರಾಮ ಮಂಗಾಪುರದ ಭೂಮಿವಳಗೆ ಗುಡಹೊ

ಕೆಂಚನಗುಡ್ಡನ ಶಾಸನ

ಕೆಂಚನಗುಡ್ಡನ ಶಾಸನ

೧೮. ಸೂರದುರ್ಗ ನಿರ್ಮಿತ ಮಾಡಿದ ಮುಹೂರ್ಥವು ಪ್ರಮಾದಿನಾಮ ಸಂವತ್ಸ

೧೯. ರದ ಚೈಯಿತ್ರ ಬ ೧೪ ಮಂಗಳವಾರ ರೋಹಿಣಿನಕ್ಷತ್ರ ಪ್ರೀತಿನಾಮ ಯೋ

೨೦. ಗ ಗಳಿಗೆ ೧೬ ರಲಿ ಆರಂಭ ಮಾಡಿದನು ಸರ್ವಜಿತುನಾಮ ಸಂವತ್ಸರದಲಿ

೨೧. ಸರನಾಡಗೌಡಿಕೆ ಪಡೆದನು ಸರ್ವಧಾರಿನಾಮ ಸಂವತ್ಸರದ ವೈಶಾಖ

೨೨. ಬ ೧೨ ಗುರುವಾರ ಅಮ್ರುತಸಿದ್ಧಿಯೋಗದಲಿ ಶ್ರೀ… ಸ್ವಾಮಿವಾಸವಾದರು ಶ್ರೀ

೨೩. ಸ್ವಾಮಿ ರಥೋತ್ಸವ ಯೀ ಸುಂವತ್ಸರದ ಪಾಲ್ಗುಣ ಶು ೪ ಬುಧುವಾರ ಬಸವಪಠ ಕಟ್ಟಿ.

೨೪. ಯೀ ಶು ೧ ಮಂಗಳವಾರ……ದಲಿ ರಥೋತ್ಸವ ನೇಮಾ ಮಾಡಿ ಯಿಧೀತು ಯೀ ಕೆಂ

೨೫. ಚಣಗೌಡಗೆ ಮಕ್ಕಳು ೩ ಮದುಕಣಗೌಡ ೧ ವಿರೂಪಾಕ್ಷಗೌಡ ೧ ವೀರಣಗೌಡ ೧ ಪಾದ

೨೬. ಶಾಹಿ ಮೊಗಲಾಯಿ ಅಓರಂಗಶಾಹನ ಅಂತ್ಯ ಭಾಗವು/ ಕಸಬೆ ಗೌಡಿಕೆ ಪಾರ್ಲು ಕ್ಕೆ ಮೂರು ಪಾ

೨೭. ಲು ಗೌಡಿಕೆ ನಂಮ್ಮವು ವುಳದ ಆರುಪಾಲಿಗೆ ಕಟ್ಟೆಕೇರಿ ಅವರದು ೧ ಬೊಗ ಅವರದು ೧ ಗುಣಿಸೆಟ್ಟಿ ಅವ

೨೮. ರದು ೧ ಬಾಲೆನವರುದು ೧ ಅಯ್ಯಪ್ಪ ತಿಂಮ್ಮಣಗೌಡನವರುದು ೧ ಪಟ್ಲಶೆಟ್ಟಿ ಅವರುದು ೧ ಕುಲಕರ್ಣಗ

೨೯. ಳ ಬಣ ೪ ಕ್ಕೆ ಅಕ್ಕಣಯ್ಯನವರದು ೧ ವೆಂಗಳಪ್ಪಯಲ್ಲರಸನವರುದು ೧ ವಿರುಪಾಕ್ಷಯ್ಯನ

೩೦. ವರದು ೧ ನರಹರಿ ಅವರದು ೧ ತಳವಾರ ಗಡಿ ನಂದಿನಾಯಕ ಕಂಮಾರ ಫಣಿಯೋಜ ಬಡಿಗೆ ಸಂ

೩೧. ಬೋಜ ಅಸಗರ ದೇವರಾಜ ಕೋನರಾಜ ಜಕ್ಕರಾಜ ನಾಯಿಂದರ ಮುದಿವಿರೋಜ ಕುಂಭಾರ ಯೆಲ್ಲಿ ಸೆಟ್ಟಿ ಮ

೩೨. ಠಪತಿ ಚೆಂನೆವಡೆರು ಬೋಯಿಸಿಕೆಂಮ್ಮೀಸೆ ಅವರು ಪಾದೇಮಣಭಟ್ಟರು ಬಾರಿಕ ಮಲ್ಲಯ್ಯ ಅಕ್ಕಸಾಲೆ

೩೩. ಮಣೋಜ ಮಾದಾರ ಬೆಕ್ಕಿನ ಸುಂಕ ಮಾದಿಗರ ಹೊಂನ್ನುಗಯಲ್ಲುಗನ/ ಯೀ ಗುಡ್ಡದ ತಳವಾ

೩೪. ರ…………. ಹನಿಮಿನಾಯಕ ತಿಂಮ್ಮಿನಾಯಿಕ ಪೆಂನ್ನಿನಾಯಖ ಶ್ರೀ ಶ್ರೀ ಶ್ರೀ

ಪರಿಷ್ಕೃತಗೊಂಡ ಶಾಸನದನ್ವಯ ಕೆಂಚನಗುಡ್ಡದ ನಾಡಗೌಡರಿಗೆ ಪ್ರಥಮ ಬಾರಿಗೆ ವಂಶಾವಳಿಯನ್ನು ರಚಿಸಲಾಗಿದೆ. ಶಾಸನದ ಕಾಲವನ್ನು ಪ್ರಚಲಿತದಲ್ಲಿರುವ ಕ್ರಿ.ಶ.೧೭೦೪ ಬದಲಾಗಿ ಕ್ರಿ.ಶ.೧೭೦೯ ಫೆಬ್ರವರಿ ೮ ಎಂದು ಮುಂದಿನ ಸಂಶೋಧನೆಯ ಸಂದರ್ಭದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತವಾಗಿರುತ್ತದೆ.

ಶಾಸನ ಬರಹವನ್ನು ಹೊರತುಪಡಿಸಿ ಬಳ್ಳಾರಿ ಜಿಲ್ಲೆಯ ಪ್ರಮುಖ ಪಾಳೆಯಗಾರರ ಮನೆತನಗಳ ಕೈಫಿಯತ್ತು ಬರವಣಿಗೆಗಳಲ್ಲಿ ಅಲ್ಲಲ್ಲಿ ಔಪಚಾರಿಕವಾಗಿ ಕೆಂಚನಗುಡ್ಡವನ್ನು ಉಲ್ಲೇಖಿಸಿರುವುದನ್ನು ಕಾಣುತ್ತೇವೆ. ಇವುಗಳಲ್ಲಿ ಪೂರ್ಣಪ್ರಮಾಣದ ವಿಷಯದ ನಿರೂಪಣೆಯಾಗಲಿ, ವಿವರವಾದ ಸಂಗತಿಗಳಾಗಲಿ ಈ ಲಿಖಿತ ದಾಖಲೆಗಳಲ್ಲಿ ಕಾಣಬರುವುದಿಲ್ಲ. ಉಳಿದಂತೆ ಭೌತಿಕ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ಪ್ರಸ್ತುತವಾಗಿಯೂ ಉಳಿಸಿಕೊಂಡಿರುವ ಕೋಟೆ ಬಯಲು, ಬುರುಜಗಳು, ವಸತಿ ನೆಲೆಗಳು, ದೇವಾಲಯಗಳು, ವೀರಗಲ್ಲುಗಳು, ಮಸೀದಿ, ಸಮಾಧಿ, ಉಯ್ಯಾಲೆ ಕಂಬ ಇತ್ಯಾದಿ ಸಮಕಾಲೀನ ಅವಶೇಷಗಳು ಪ್ರಮುಖ ಅಧ್ಯಯನದ ಆಕರಗಳಾಗಿವೆ. ಹೀಗೆ ಲಿಖಿತ ಆಕರಗಳ ಕೊರತೆಯ ನಡುವೆಯೂ ಕೆಂಚನಗುಡ್ಡ ನಾಡಗೌಡರ ಬಗ್ಗೆ ಸ್ಥೂಲಚಿತ್ರಣವನ್ನು ನೀಡುವ ಯತ್ನ ಮಾಡಲಾಗಿದೆ. ಇಲ್ಲಿ ಒಟ್ಟು ಅಧ್ಯಯನದ ಹಿಂದಿನ ತಾತ್ವಿಕತೆಯ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದರೊಂದಿಗೆ, ವ್ಯಾಪ್ತಿ ಮತ್ತು ಸ್ವರೂಪದ ನೆಲೆಯಲ್ಲಿ ಸ್ಥಳೀಯ ಚರಿತ್ರೆಯನ್ನು ಕಟ್ಟಿಕೊಡುವ, ಆ ಮುಖೇನ ಸಾಮ್ರಾಟರ ಮತ್ತು ಸಾಮಾನ್ಯರ ನಡುವೆ ಸೇತುಬಂಧವಾಗಿ ನಿರ್ವಹಿಸಿದ ಕ್ರಮವನ್ನು, ಆಲೋಚನಾ ವಿಧಾನಗಳನ್ನು ದಾಖಲಿಸುವ ಪ್ರಯತ್ನವನ್ನು ಮಾಡಲಾಗಿದೆ.

ಚರಿತ್ರೆ

ವಿಜಯನಗರ ಸಾಮ್ರಾಜ್ಯ ಪತನಾನಂತರ ಬಿಜಾಪುರದ ಆದಿಲ್‌ಶಾಹಿಗಳು ತುಂಗಭದ್ರ ನದಿಯಾಚಿಗಿನ ದಕ್ಷಿಣದ ಬಹುಪ್ರದೇಶಗಳನ್ನು ತಮ್ಮ ಹತೋಟಿಗೆ ತೆಗೆದುಕೊಂಡರು. ಕೇಂದ್ರಾಡಳಿತದ ಅಧಿಕಾರದ ತೆಕ್ಕೆ ಆದಿಲ್‌ಶಾಹಿಗಳಾದಾದರೂ ಸ್ಥಳೀಯ ಮಟ್ಟದ ವ್ಯವಹಾರವೆಲ್ಲ ಸ್ಥಾನೀಕರ, ಸೇನಾಧಿಕಾರಿಗಳ, ಊರ ಗೌಡರ ಹಿಡಿತದಲ್ಲೇ ಇತ್ತು. ಇಂಥ ಸಂದರ್ಭದಲ್ಲಿ ಮುತ್ತಿಗೆ ಎಂಬ ಗ್ರಾಮದಲ್ಲಿ ಹಂಡೆ ಮನೆತನದ ಬಾಲದ ಹನುಮಪ್ಪ ನಾಯಕನು ಊರಗೌಡಿಕೆ ಮಾಡಿಕೊಂಡು ಇದ್ದನು. ಜೊತೆಗೆ ಆದಿಲ್‌ಶಾಹಿಗಳ ನಿಷ್ಠೆ ಸೇವಕನು ಆಗಿದ್ದನು. ಈ ವೇಳೆಗೆ ಬಂಕಾಪುರದಲ್ಲಿ ಅರಾಜಕತೆ ಎದ್ದಿದ್ದರಿಂದ ಅದನ್ನು ಶಮನ ಮಾಡಲು ಸಮರ್ಥ ವ್ಯಕ್ತಿಯೋರ್ವನು ಸುಲ್ತಾನರಿಗೆ ಬೇಕಿತ್ತು. ಆಗ ಎರಡನೇ ಇಬ್ರಾಹಿಂ ಆದಿಲ್‌ಷಾಹನ ಗಮನಕ್ಕೆ ಬಂದವನೇ ಇದೇ ಬಾಲದ ಹನುಮಪ್ಪ ನಾಯಕ. ಬಂಕಾಪುರದ ಅರಾಜಕತೆಯನ್ನು ಹತ್ತಿಕ್ಕುವ ಸಲುವಾಗಿ ಆದಿಲ್‌ಶಾಹಿಗಳು ಹನುಮಪ್ಪ ನಾಯಕನನ್ನು ನೇಮಿಸುತ್ತಾರೆ. ಬಂಕಾಪುರಕ್ಕೆ ಹೊರಡುವ ಮುನ್ನ ಈತನು ಸುಲ್ತಾನನಿಂದ ಪೂರ್ವಭಾವಿಯಾಗಿ ಬಳ್ಳಾರಿ, ತೆಕ್ಕಲಕೋಟೆ, ಕುರುಗೋಡುಗಳ ನಾಡಗೌಡಿಕೆಯನ್ನು ಪಡೆಯುತ್ತಾನೆ. ನಂತರ ಬಂಕಾಪುರದ ಮೇಲೆ ದಂಡೆತ್ತಿ ಹೋಗಿ ಕ್ರಿ.ಶ. ೧೫೮೮ರಲ್ಲಿ ಜಯಗಳಿಸುತ್ತಾನೆ. ಪ್ರತಿಯಾಗಿ ಬಂಕಾಪುರ, ಶಿರಿವಾಳ, ಕುಂದರ್ಪಿ, ಅನಂತಪುರ, ಸಿರಗುಪ್ಪ ಪ್ರದೇಶಗಳ ಒಡೆತನವು ಲಭ್ಯವಾಗುತ್ತದೆ.

ಸಿರುಗುಪ್ಪ ಸೀಮೆಯ ಒಡೆತನವನ್ನು ಗಳಿಸಿದ ಹನುಮಪ್ಪನಾಯಕನು ಕಾಂಚನಗಡ ಸೇರಿದಂತೆ ಕುರುಗೋಡು, ಸಿರುಗುಪ್ಪ ಪ್ರದೇಶಕ್ಕೆ ಬಸವನಗೌಡ (ಚಿಕ್ಕಣಗೌಡನ ೧ನೇ ಹೆಂಡತಿಯ ಮಗ) ಎಂಬುವನನ್ನು ಗ್ರಾಮಗೌಡನನ್ನಾಗಿ ನೇಮಿಸಿ ಮುಂದೆ ಬಳ್ಳಾರಿಗೆ ತೆರಳುತ್ತಾನೆ. ಬಳ್ಳಾರಿ ಕೋಟೆಯನ್ನು ನಿರ್ಮಿಸುವುದರ ಮೂಲಕ ಬಳ್ಳಾರಿ, ಕುರುಗೋಡು ಸೇರಿದಂತೆ ಹಂಡೆ ಮನೆತನದ ಸ್ಥಾಪನೆಗೆ ಕಾರಣಕರ್ತನಾಗುತ್ತಾನೆ. ಈತನಿಗೆ ಐದು ಜನ ಮಕ್ಕಳು. ಅವರನ್ನು ಐದು ವಿಭಾಗಗಳಿಗೆ ನೇವಿಸುವ ಮೂಲಕ ತನ್ನ ಪಾಳೆಯಪಟ್ಟನ್ನು ವಿಸ್ತರಿಸುವ ಯೋಚನೆ ನಾಯಕನದಾಗುತ್ತದೆ. ಅದರಲ್ಲಿ ನಾಲ್ಕನೇ ಪುತ್ರ ಹಿರೇಮಲಕಪ್ಪ ನಾಯಕನಿಗೆ ಬಳ್ಳಾರಿ, ಕುರುಗೋಡು ಪ್ರದೇಶದ ಹೊಣೆಗಾರಿಕೆ ಲಭಿಸುತ್ತದೆ. ಈತನ ೬ನೇ ಸಂತತಿ ಬಳ್ಳಾರಿ ಪಳೆಯಗಾರ ದೇವಪ್ಪನಾಯಕ (ಕ್ರಿ.ಶ. ೧೬೯೩ – ೧೭೦೮)ನವರೆಗೆ ಈ ಪ್ರದೇಶಗಳು ಅಧೀನದಲ್ಲಿದ್ದು ಈತನ ಅವಧಿಯಲ್ಲಿ ಕೆಂಚನಗುಡ್ಡವನ್ನೊಳ ಗೊಂಡಂತೆ ಸಿರುಗುಪ್ಪೆಯ ನಾಡಗೌಡಕೆಯನ್ನು ಮುದುಕಣಗೌಡನಿಗೆ ದಯಪಾಲಿಸುತ್ತಾನೆ. ಈ ನಡುವೆ, ಅಂದರೆ ಕ್ರಿ.ಶ.೧೪೬೬ರಲ್ಲಿ ದೇವರಾಯನ ಅವಧಿಯಲ್ಲಿ ಕೆಂಚನಗುಡ್ಡದ ಸಮೀಪ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಿದರ ಹೊರತಾಗಿ ಮುಂದಿನ ೨೫೦ ವರ್ಷಗಳಲ್ಲಿ ಮತ್ಯಾವ ವಿವರಗಳು ಲಿಖಿತವಾಗಿ ದಾಖಲಾದಂತೆ ಕಂಡುಬರುವುದಿಲ್ಲ.

ಸಿರುಗುಪ್ಪದ ನಾಡಗೌಡಿಕೆಯನ್ನು ವಹಿಸಿಕೊಂಡ ಮುದುಕಣಗೌಡನೇ ಈ ಕೆಂಚನ ಗುಡ್ಡದ ಮೂಲಪುರುಷ. ಈತನಿಗೆ ನಾಲ್ಕು ಜನ ಗಂಡುಮಕ್ಕಳು. ದೇಮಣಗೌಡ, ಕೆಂಚಣಗೌಡ, ಸಹೇಬಗೌಡ ಮತ್ತು ರಾಮನಗೌಡ ಎಂಬುವರು. ಈ ಮುದುಕಣಗೌಡನಿಗೆ ಹಿರಿಯಣ್ಣನಾದ ರಾಮಣಗೌಡನಿಗೆ ಒಬ್ಬ ಮಗನಿರುತ್ತಾನೆ. ಆ ಮಗನು ಬಾಲ್ಯದಲ್ಲೇ ತೀರಿಕೊಳ್ಳುತ್ತಾನೆ. ಪರಿಣಾಮವಾಗಿ ಮುದುಕಣಗೌಡನು ತನ್ನ ಎರಡನೇ ಮಗ ಕೆಂಚನ ಗೌಡನನ್ನು ದತ್ತುವಾಗಿ ಅಣ್ಣನಿಗೆ ನೀಡುತ್ತಾನೆ. ದೊಡ್ಡಪ್ಪನ ಬಳಿ ಬೆಳೆದ ಈ ದತ್ತುಪುತ್ರ ಕೆಂಚನಗೌಡನೇ ಮುಂದೆ ಕೆಂಚನಗುಡ್ಡದ ನಾಡಗೌಡಿಕೆಯ ನಿರ್ವಾಹಕನಾಗುತ್ತಾನೆ. ಇಲ್ಲಿ ಗಮನಾರ್ಹ ಅಂಶವೆಂದರೆ ಮುದುಕಣಗೌಡನಿಗೆ ಉಳಿದ ಮೂವರು ಪುತ್ರ ಸಂತಾನ ವಿದ್ದಾಗ್ಯೂ ದತ್ತು ನೀಡಿದ ಪುತ್ರನಿಗೆ ನಾಡಗೌಡಿಕೆಯನ್ನು ವಹಿಸಿಕೊಟ್ಟಿರುವ ವಿಚಾರ.

ಕೆಂಚನಗುಡ್ಡದ ರೂವಾರಿ

ಕಾಂಚನಗಡವನ್ನು ಕೆಂಚನಗುಡ್ಡವಾಗಿ ಪರಿವರ್ತಿಸಿದ ರೂವಾರಿ ಕೆಂಚನಗೌಡ. ಶಾಸನದಲ್ಲಿ ಈತನನ್ನು ಕೆಂಚಣಗೌಡನೆಂದು ಕರೆದಿದೆ. ಕೈಫಿಯತ್ತು ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಕೆಂಚನಗೌಡನೆಂದು ನಮೂದಿಸಿದೆ. ಈತನ ದೂರದೃಷ್ಟಿ ಫಲವಾಗಿ ಕಲ್ಲುಮಣ್ಣಿನಿಂದ ಕೂಡಿದ್ದ ಬೃಹತ್‌ಬೆಟ್ಟ ವ್ಯವಸ್ಥಿತ ಹೊಸದುರ್ಗವಾಯಿತು. ಕ್ರಿ.ಶ. ೧೬೯೯ ಏಪ್ರಿಲ್ ೧೮ ಮಂಗಳವಾರದಂದು ನಿಸರ್ಗದತ್ತವಾದ ಎರಡು ಬೆಟ್ಟಗಳನ್ನು ಸುತ್ತುವರೆದಂತೆ ಸುತ್ತಲೂ ಕೋಟೆಯನ್ನು ಕಟ್ಟಲು ಶಂಕುಸ್ಥಾಪನೆ ಮಾಡುತ್ತಾನೆ. ಈ ಕೋಟೆಯನ್ನು ಕಟ್ಟುವ ಮುನ್ನ ವೈರಿಗಳ ಮೊರೆ ಮೇಲೆ ದಾಳಿ ಮಾಡಿದನೆಂದು ಶಾಸನದಲ್ಲಿ ಹೇಳಲಾಗಿದೆ.ಕ್ರಿ.ಶ. ೧೭೦೭ರಲ್ಲಿ ಕೆಂಚನಗುಡ್ಡ ಸೇರಿದಂತೆ ಸಿರುಗುಪ್ಪೆಯ ಸರನಾಡಗೌಡಿಕೆಯನ್ನು ಪಡೆಯುತ್ತಾನೆ. ಇದೇ ಸಂದರ್ಭದಲ್ಲಿ ಗುಡ್ಡದ ಮೇಲೊಂದು ಸುತ್ತಿನ ಕೋಟೆಯನ್ನು ಕೆಳ ಆವರಣದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿಯ ದೇವಸ್ಥಾನವನ್ನು ಕಟ್ಟಿಸುತ್ತಾನೆ. ಮುಂದೆ ಕ್ರಿ.ಶ. ೧೭೦೯ ಫೆಬ್ರವರಿ ೨ ಬುಧವಾರದಂದು ಬಸವ ಪ(ಮ)ಠ ಕಟ್ಟಿ ಮುಂದಿನ ಮಂಗಳವಾರದಂದು ಸ್ವಾಮಿಯ ರಥೋತ್ಸವ ಆಚರಿಸಿದನೆಂದು ಶಾಸನವು ತಿಳಿಸುತ್ತದೆ. ಈತನು ಪ್ರಜಾವಾತ್ಸಲ್ಯಕನು, ಪರಾಕ್ರಮಿಯೂ ಆಗಿದ್ದರಿಂದ ಈತನ ಸಾವಿನ ನಂತರ ಈ ಗುಡ್ಡಕ್ಕೆ ನೆನಪಾಗಿ ಕೆಂಚನಗುಡ್ಡವೆಂದು ಕರೆಯಲಾಗಿದೆ.

ಕೆಂಚನಗೌಡನಿಗೆ ಮೂರುಜನ ಗಂಡುಮಕ್ಕಳು ಮುಕುಕಣಗೌಡ, ವಿರೂಪಾಕ್ಷಗೌಡ ಮತ್ತು ವೀರಣ್ಣಗೌಡ ಎಂಬುವರು. ಇವರಲ್ಲಿ ಎರಡನೇ ಪುತ್ರ ವಿರೂಪಾಕ್ಷಗೌಡ ತಂದೆಯ ನಂತರ ಉತ್ತರಾಧಿಕಾರಿಯಾಗುತ್ತಾನೆ. ಅವನ ನಂತರ ಪಂಪಾಪತಿ ಎಂಬ ಮಗ ಗದ್ದುಗೆ ಏರಿದನೆಂದು ಕೈಫಿಯತ್ತು ಬರಹಗಳಿಂದ ತಿಳಿದುಬರುತ್ತದೆ. ಈ ಪಂಪಾಪತಿಗೌಡನು ಕೆಂಚನಗುಡ್ಡದ ಒಡೆಯನಿದ್ದಾಗ, ಬಳ್ಳಾರಿಯ ಪಾಳೆಯಗಾರ ದೊಡ್ಡತಲೆ ರಾಮಪ್ಪನಾಯಕನ ತಮ್ಮ ಹನುಮಪ್ಪನಾಯಕನು ಹಚ್ಚಹಳ್ಳಿ ಕೋಟೆಯ ಸೆರೆಮನೆಯಿಂದ ತಪ್ಪಿಸಿಕೊಂಡು ಈತನ ಆಶ್ರಯಕ್ಕೆ ಬರುವನು. ಅತಿಥಿ ಸತ್ಕಾರ ಮಾಡಿದ ಗೌಡನು ಗೌರವದಿಂದ ನಡೆಸಿ ಕೊಂಡನೆಂದು ಹೇಳಲಾಗಿದೆ. ಪಂಪಾಪತಿಗೌಡನ ಪತ್ನಿ ತಂಗಮ್ಮ. ಇವರಿಗೆ ಇಬ್ಬರು ಗಂಡು ಮಕ್ಕಳು. ಇಲ್ಲಿ ಪಂಪಾಪತಿಗೌಡನು ಅಕಾಲಿಕ ಮರಣಕ್ಕೆ ತುತ್ತಾದ ಕಾರಣ ಪತ್ನಿ ತಂಗಮ್ಮ ಗಂಡನ ಸ್ಥಾನವನ್ನೇರುತ್ತಾಳೆ. ಕ್ರಿ.ಶ. ೧೭೬೫ರ ವೇಳೆಗೆ ಈ ಘಟನೆ ಸಂಭವಿಸಿರುವ ಸಾಧ್ಯತೆ ಇದೆ.

ತಂಗಮ್ಮನು ಸಹ ದಕ್ಷತೆಯಿಂದ ನಾಡಗೌಡಿಕೆಯನ್ನು ನಡೆಸಿದ್ದು, ಪ್ರಜೆಗಳ ಪರಿಪಾಲಕಳಾಗಿದ್ದಳೆಂದು ತಿಳಿದುಬರುತ್ತದೆ. ಈಕೆಯನ್ನು ಸ್ಥಳೀಯರು ‘ದೇಶಾಯಿಣಿ’ ಎಂದು ಕರೆದಿದ್ದಾರೆ. ಈಕೆಯೂ ಸಹ ಅಗಸೂರಿನಲ್ಲಿ ಕೋಟೆಯೊಂದು ಕಟ್ಟಿಸದಳೆಂದು ಹೇಳಲಾಗಿದೆ. ಮುಂದೆ, ಹೈದರಾಲಿಯು ಬಳ್ಳಾರಿ ಕೋಟೆಯನ್ನು ವಶಪಡಿಸಿಕೊಂಡಾಗ ಹಾಗೂ ತೆಕ್ಕಲಕೋಟೆಯನ್ನು ರಾಯದುರ್ಗದ ಕೃಷ್ಣಪ್ಪನಾಯಕನಿಗೆ ಜಹಗೀರ್‌ಯಾಗಿ ನೀಡಿದಾಗಲೂ ಸಹ ಈಕೆಯೇ ಕೆಂಚನಗುಡ್ಡದ ಒಡತಿಯಾಗಿರುತ್ತಾಳೆ. ನಂತರ ಬಂದ ಟಿಪ್ಪು ಸುಲ್ತಾನನ ಕಾಲದಲ್ಲಿ ಕೆಂಚನಗುಡ್ಡ ನರಹರಿಶಾಸ್ತ್ರಿ ಎಂಬುವವನ ಸ್ವಾಧೀನವಗುತ್ತದೆ. ಈ ಸಂದರ್ಭದಲ್ಲಿ ತಂಗಮ್ಮನ ಇಬ್ಬರು ಮಕ್ಕಳನ್ನು ಸೆರೆಹಿಡಿದ ಟಿಪ್ಪು ಒಬ್ಬನನ್ನು ಕೊಂದು ಮತ್ತೊಬ್ಬನನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದನೆಂದು ಮೌಖಿಕ ಜನಾಭಿಪ್ರಾಯವಿದೆ. ಇಲ್ಲಿ ದುಃಖ ತಪ್ತಳಾದ ತಂಗಮ್ಮ ಮತಾಂತರಗೊಂಡ ಪುತ್ರ ಈ ಪ್ರದೇಶದ ಉತ್ತರಾಧಿಕಾರಿ ಯಾಗಬಾರದೆಂದು ಬ್ರಿಟಿಷರಿಗೆ ತನ್ನ ಒಡೆತನವನ್ನು ಒಪ್ಪಿಸಿ ಜೀವಾವಧಿ ನಿವೃತ್ತಿ ವೇತನ ಪಡೆದಳೆಂದು ಬ್ರಿಟಿಷ್ ದಾಖಲೆಗಳು ತಿಳಿಸುತ್ತದೆ. ಮತ್ತೊಂದು ದಾಖಲೆಯ ಪ್ರಕಾರ ಟಿಪ್ಪುಸುಲ್ತಾನನು ಇಬ್ಬರೂ ಮಕ್ಕಳನ್ನು ಸೆರೆಯಲ್ಲಿರಿಸಿದ್ದನೆಂದು, ಟಿಪ್ಪುವಿನ ಪತನ ನಂತರ ಬಿಡುಗಡೆಗೊಂಡರೆಂದು ತಿಳಿಸುತ್ತದೆ. ಇಂಥ ವಿಚಾರಗಳ ಬಗೆಗೆ ಮತ್ತಷ್ಟು ಸಂಶೋಧನೆ ಆಗಬೇಕಿದೆ.

ಮತ್ತೊಂದು ದಾಖಲೆಯ ಪ್ರಕಾರ ಕ್ರಿ.ಶ.೧೮೩೩ – ೩೪ರ ವೇಳೆಗೆ ಈ ಮನೆತನದವರು ಬ್ರಿಟಿಷ್ ಸರಕಾರದಿಂದ ಗೌರವ ವೇತನ ಪಡೆಯುತ್ತಿದ್ದುದರ ಬಗ್ಗೆ ಪತ್ರಾಗಾರದ ದಾಖಲೆಗಳಿಂದ ತಿಳಿದುಬರುತ್ತದೆ. ಈ ಪತ್ರಾಗಾರದ ದಾಖಲೆಗಳಲ್ಲಿ ಇವರನ್ನು ಕರ್ನಾಟಕದ ೧೫ ಪ್ರಮುಖ ಪಾಳೆಯಗಾರ ಮನೆತನದ ೮೬ ವಂಶಿಕರಲ್ಲಿ ಈ ಕೆಂಚನಗುಡ್ಡದ ವಂಶಸ್ಥರು ಸೇರಿದ್ದು, ಕೆಂಚನಗುಡ್ಡದ ಪಾಳೆಯಗಾರರೆಂದು ಗುರುತಿಸಿಕೊಂಡಿದ್ದಾರೆ. ಹೀಗೆ ಈ ವಂಶಸ್ಥರ ಕೆಂಚನಗುಡ್ಡದ ನಾಡಗೌಡಿಕೆ ಕೊನೆಗೊಳ್ಳುತ್ತದೆ. ಸತ್ತ ತಂಗಮ್ಮನಿಗೆ ಸ್ಥಳೀಯರು ಗುಡ್ಡದಲ್ಲೇ ಸಮಾಧಿ ಮಾಡಿ ಅಲಂಕಾರಯುತವಾದ ಕೆತ್ತನೆಯ ಸಮಾಧಿ ಗದ್ದುಗೆಯನ್ನು ಕಟ್ಟುತ್ತಾರೆ. ಹೀಗೆ ಕೇವಲ ನಾಲ್ಕು ತಲೆಮಾರುಗಳ ಅಂದಾಜು ಒಂದುನೂರು ವರುಷಗಳ ನಾಡಗೌಡಿಕೆಯನ್ನು ನಡೆಸಿದ ಕೆಂಚನಗುಡ್ಡದ ನಾಡಗೌಡರು ಜನಾನುರಾಗಿಯಾಗಿದ್ದಾರೆ. ಸ್ಥಳೀಯ ಚರಿತ್ರೆಯ ದೃಷ್ಟಿಯಿಂದ ಗಮನಾರ್ಹ ಕಾರ್ಯವೆಸಗಿದ್ದಾರೆ.

ಸ್ಮಾರಕಗಳು

ಕೆಂಚನಗುಡ್ಡವನ್ನು ಪ್ರವೇಶಿಸಿದಂತೆ ಮೊದಲಿಗೆ ನಮಗೆ ಗೋಚರವಾಗುವುದು ಮೂರುಸುತ್ತಿನ ಕೋಟೆ. ನಿಸರ್ಗದತ್ತವಾದ ಎರಡು ಬಟ್ಟಗಳನ್ನು ಬಳಸಿ ಸುತ್ತ ಕೋಟೆಯನ್ನು ನಿರ್ಮಿಸಲಾಗಿದೆ. ಮೊದಲ ಸುತ್ತಿನ ಕೋಟೆಯಲ್ಲಿ ಬೆಟ್ಟಗಳ ನಡುವೆ ವಿಶಾಲವಾದ ವಸತಿ ಪ್ರದೇಶವಿದೆ. ಎರಡನೇ ಸುತ್ತಿನ ಕೋಟೆಯಲ್ಲಿ ಗಂಗಾಧರೇಶ್ವರ ದೇವಾಲಯ ಹಾಗೂ ಅರ್ಧಬೆಟ್ಟವು ಸೇರಿದೆ. ಮೂರನೇ ಸುತ್ತಿನಲ್ಲಿ ಪಾಳುಬಿದ್ದ ವಸತಿ ಸಮುಚ್ಛಯಗಳ ಅವಶೇಷಗಳು ಕಂಡುಬರುತ್ತವೆ. ಕೋಟೆಗೋಡೆಯನ್ನು ಮಧ್ಯಮ ಗಾತ್ರದ ಕಲ್ಲುಗಳಿಂದ ಕಟ್ಟಲ್ಪಟ್ಟೆದ್ದರೂ ಅಲ್ಲಲ್ಲಿ ಮಣ್ಣಿನ ಗೋಡೆಗಳು ಕಂಡುಬರುತ್ತದೆ. ಆದರೆ ಹೊರಸುತ್ತಿನ ಕೋಟೆಗೋಡೆಗಳಲ್ಲಿ ಬಂದೂಕು ಕಿಂಡಿಗಳನ್ನು ಆಯಾಕಟ್ಟಿನ ಸ್ಥಳಗಳಲ್ಲಿ ವೃತ್ತಾಕಾರ ಹಾಗೂ ಚೌಕಾಕಾರದ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಕೋಟೆಯ ಮುಖ್ಯ ಪ್ರವೇಶದ್ವಾರವು ಆಗ್ನೇಯ ಭಾಗಕ್ಕಿದ್ದು ಸುಮರು ೨೦ ಅಡಿ ಉದ್ದ ೮ ಅಡಿ ಅಗಲವಾಗಿದೆ. ಬಾಗಿಲು ಚೌಕಗಳು ಸಾದ ಕೆತ್ತನೆಯಿಂದ ಕುಡಿದ್ದು ಲಲಾಟ ಬಿಂಬದ ಇಕ್ಕೆಲಗಳಲ್ಲಿ ಇಳಿಬಿದ್ದ ಕಲ್ಲಿನ ಮೊಗ್ಗುಗಳಿವೆ. ಮುಖ್ಯದ್ವಾರದ ಬಲಭಾಗಕ್ಕೆ ಚಿಕ್ಕಬಾಗಿಲಿದ್ದು, ಮುಖ್ಯದ್ವಾರವು ಮುಚ್ಚಿದಾಗ ಬಳಸಲಾಗಿತ್ತಿದ್ದ ಕಿರುದ್ವಾರವಾಗಿದೆ. ಈ ದ್ವಾರದ ಗೋಡೆಗೆ ಎರಡು ವೀರಗಲ್ಲು ಶಿಲ್ಪಗಳನ್ನು ನಿಲ್ಲಿಸಲಾಗಿದೆ. ಇವು ಕೆಂಚನಗುಡ್ಡದ ವಂಶಸ್ಥರಿಗೆ ಸಂಬಂಧಿಸಿದವೆಂದು ಹೇಳಲಾಗಿದೆ.

ಕೋಟೆಯ ಮುಖ್ಯ ಪ್ರೆವೇಶ ದ್ವಾರ, ಕೆಂಚನಗುಡ್ಡ

ಕೋಟೆಯ ಮುಖ್ಯ ಪ್ರೆವೇಶ ದ್ವಾರ, ಕೆಂಚನಗುಡ್ಡ

ದೇವಾಲಯಗಳು

ಕೆಂಚನಗುಡ್ಡದ ಕೋಟೆಯೊಳಗೆ ಇರುವ ಪ್ರಮುಖ ದೇವಾಲಯವೆಂದರೆ ಗಂಗಾಧರೇಶ್ವರ ಮತ್ತು ಅಂಜನೇಯ ದೇವಾಲಯಗಳು. ಗಂಗಾಧರೇಶ್ವರ ದೇವಾಲಯ ಕೋಟೆಯ ಎರಡನೇ ಸುತ್ತಿನ ಮಧ್ಯಭಾಗದಲ್ಲಿದ್ದು ಪೂರ್ವಾಭಿಮುಖವಾಗಿದೆ. ಬಹು ವಿಶೇಷವಾದ ಈ ದೇವಾಲಯವು ಪಂಚಕೂಟ ಗರ್ಭಗುಡಿಯಿಂದ ಕೂಡಿದ್ದು, ಸಭಾಮಂಟಪವನ್ನು ಹೊಂದಿದೆ. ಈ ಐದೂ ಗರ್ಭಗೃಹಗಳಿಗೆ ದ್ರಾವಿಡ ಶೈಲಿಯ ಇಟ್ಟಿಗೆ ಗಾರೆಗಳಿಂದ ಮಾಡಿದ ಗೋಪುರಗಳಿವೆ. ಮಧ್ಯದ ಗರ್ಭಗೃಹವು ಅಂತರಾಳವನ್ನು, ಪ್ರದಕ್ಷಿಣೆ ಹಾಕಲು ಪ್ರದಕ್ಷಿಣಾ ಪಥವನ್ನು ಹೊಂದಿರುವುದರಿಂದ ಇದೇ ಮುಖ ಗರ್ಭಗೃಹವೆಂದು ಹೇಳಬಹುದು. ಇದರಲ್ಲಿ ಶಿವಲಿಂಗವಿದೆ. ಉಳಿದ ನಾಲ್ಕು ಗರ್ಭಗೃಹಗಳಲ್ಲಿ ಈಗ ಯಾವುದೇ ವಿಗ್ರಹಗಳಿಲ್ಲ. ಮುಖ್ಯ ಗರ್ಭಗೃಹದ ಎಡಭಾಗಕ್ಕಿರುವ ಎರಡು ಗರ್ಭಗೃಹಗಳು ಒಂದು ಪೂರ್ವಕ್ಕೆ ಮತ್ತೊಂದು ದಕ್ಷಿಣಕ್ಕೆ ಮುಖ ಮಾಡಿದೆ. ಬಲಭಾಗಕ್ಕಿರುವ ಎರಡು ಗರ್ಭಗೃಹಗಳು ಒಂದು ಪೂರ್ವಕ್ಕೆ ಮತ್ತೊಂದು ಉತ್ತರಕ್ಕೆ ಮುಖಮಾಡಿವೆ. ಈ ಐದು ಗರ್ಭಗೃಹಗಳ ಲಲಾಟ ಬಿಂಬಗಳಲ್ಲಿ ಗಜಲಕ್ಷ್ಮಿ ಇದ್ದು, ಬಾಗಿಲವಾಡದಲ್ಲಿ ಡಮರು ಹಾಗೂ ತ್ರಿಶೂಲಧಾರಿಗಳಾದ ದ್ವಾರಪಾಲಕರ ವಿಗ್ರಹಗಳನ್ನು ಕೆತ್ತಲಾಗಿದೆ. ಮಧ್ಯದ ಸಭಾಮಂಟವು ಚಚ್ಚೌಕ ಹಾಗೂ ಅಷ್ಟಕೋನಗಳುಳ್ಳ ಹದಿನಾರು ಕಂಬಗಳಿಂದ ನಿರ್ಮಿತವಾಗಿದ್ದು ವಿಶಾಲವಾದ ಪ್ರಾಕಾರವನ್ನು ಹೊಂದಿದೆ. ಈ ಪ್ರಾಕಾರದ ಗೋಡೆಯ ಮೇಲೆಯೇ ಕೆಂಚನಗೌಡರ ಶಾಸನವಿರುವುದು. ಗೋಡೆಗಳ ಮೇಲೆ ತೈಲವರ್ಣ ಚಿತ್ರಗಳಿದ್ದು ಬಹುತೇಕ ನಶಿಸಿಹೋಗಿವೆ. ಈ ತೈಲ ಚಿತ್ರಗಳು ಹಂಪಿ ವಿರೂಪಾಕ್ಷ ದೇವಾಲಯದಲ್ಲಿನ ತೈಲಚಿತ್ರಗಳನ್ನು ಹೋಲುವ ಸಾಧ್ಯತೆ ಇದೆ.

ಕೋಟೆಯ ಒಳಭಾಗದಲ್ಲಿರುವ ದೇವಾಲಯದ ಸಮುಚ್ಚಯ

ಕೋಟೆಯ ಒಳಭಾಗದಲ್ಲಿರುವ ದೇವಾಲಯದ ಸಮುಚ್ಚಯ

ಗಂಗಾಧರೇಶ್ವರ ದೇವಾಲಯದ ಹಜಾರ

ಗಂಗಾಧರೇಶ್ವರ ದೇವಾಲಯದ ಹಜಾರ

ಕೆಂಚನಗೌಡನ ಹೋರಾಟವನ್ನು ಸಾರುವ ವೀರಗಲ್ಲು

ಕೆಂಚನಗೌಡನ ಹೋರಾಟವನ್ನು ಸಾರುವ ವೀರಗಲ್ಲು

ತಂಗಮ್ಮನ ಹೋರಾಟದ ಚಿತ್ರಣ

ತಂಗಮ್ಮನ ಹೋರಾಟದ ಚಿತ್ರಣ

ಆಂಜನೇಯ ದೇವಾಲಯವು ಕೋಟೆಯ ಮುಂಭಾಗದಲ್ಲಿದ್ದು ಪೂರ್ವಾಭಿಮುಖವಾಗಿದೆ. ಕಣಶಿಲೆಯಿಂದ ನಿರ್ಮಾಣಗೊಂಡಿರುವ ಈ ದೇವಾಲಯವು ಗರ್ಭಗೃಹ, ಸಭಾಮಂಟಪ, ದೀಪಸ್ತಂಭವನ್ನು ಹೊಂದಿದೆ. ಗರ್ಭಗೃಹದ ಸುತ್ತ ಪ್ರದಕ್ಷಿಣಾಪಥವಿದ್ದು ಪೀಠದಲ್ಲಿ ಎರಡೂವರೆ ಅಡಿ ಎತ್ತರದ ಆಂಜನೇಯನ ಮೂರ್ತಿಯನ್ನು ಇರಿಸಲಾಗಿದೆ. ಸಭಾಮಂಟಪದಲ್ಲಿ ಆಯತಾಕಾರದ ನಾಲ್ಕು ಕಂಭಗಳಿದ್ದು ನೀರಾಲಂಕಾರದಿಂದ ಕೂಡಿದೆ. ದೇವಾಲಯದ ಎದುರು ಹದಿನೈದು ಅಡಿ ಎತ್ತರದ ಕಲ್ಲಿನ ದೀಪಸ್ತಂಭವನ್ನು ನಿಲ್ಲಿಸಲಾಗಿದೆ.

ಕೋಟೆಯ ಹೊರಭಾಗದ ಗ್ರಾಮದೊಳಗೆ ಮತ್ತೆರಡು ಆಂಜನೇಯ ಮತ್ತು ಈಶ್ವರ ದೇವಾಲಯಗಳು ನಾಡಗೌಡರಿಂದಲೇ ನಿರ್ಮಿತವಾಗಿದೆ. ಆಂಜನೇಯ ದೇವಾಲಯದಲ್ಲಿ ಗರ್ಭಗೃಹ, ಸಭಾಮಂಟಪ, ದೀಪಸ್ತಂಭ, ಪ್ರಾಕಾರ ಹಾಗೂ ದ್ವಾರಗೋಪುರಗಳಿವೆ. ಗರ್ಭಗೃಹದೊಳಗೆ ಐದಡಿ ಎತ್ತರದ ಆಂಜನೇಯ ಉಬ್ಬುಶಿಲ್ಪವಿದೆ. ಶಿಲ್ಪಕ್ಕೆ ಕಂಚಿನ ಪ್ರಭಾವಳಿಯನ್ನು ಹೊಂದಿಸಿದೆ. ಸಭಾಮಂಟಪದಲ್ಲಿ ಚೌಕಾಕಾರದ ಕಂಭಗಳಿದ್ದು ಅಲಂಕಾರ ರಹಿತವಾಗಿವೆ. ದೇಗುಲ ಮುಂಭಾಗದಲ್ಲಿ ಹದಿನೈದು ಅಡಿ ಎತ್ತರದ ದೀಪ ಸ್ತಂಭವಿದೆ. ಈಶ್ವರ ದೇವಾಲಯದಲ್ಲಿ ಮೂರು ಗರ್ಭಗೃಹಗಳಿವೆ. ಮಧ್ಯದ ಗರ್ಭಗೃಹದಲ್ಲಿ ಲಿಂಗವಿದೆ. ಅಂತರಾಳದಲ್ಲಿ ನಂದಿ ವಿಗ್ರಹವಿದೆ. ಅಂತರಾಳದ ಬಲಗಡೆ ಗರ್ಭಗೃಹದಲ್ಲಿ ಜನಾರ್ಧನ, ಎಡಗಡೆ ಗರ್ಭಗೃಹದಲ್ಲಿ ಪಾರ್ವತಿಯ ವಿಗ್ರಹಗಳಿವೆ. ಸಭಾಮಂಟಪವು ಚೌಕಾಕಾರದ ಸರಳ ರಚನೆಯಾಗಿದ್ದು ನಗರೇಶ್ವರ ದೇವಾಲಯವೆಂದು ಕರೆಯಲ್ಪಟ್ಟಿದೆ.

ಮತ್ತೊಂದು ದೇವಾಲಯ ಹೆಚ್ಚೊಳ್ಳಿಯಲ್ಲಿರುವ ಪಂಪಾಪತಿ ದೇವಾಲಯ. ಕೆಂಚನಗೌಡನ ಮೊಮ್ಮಗನಾದ ಪಂಪಾಪತಿ ಗೌಡನು ಕಟ್ಟಿಸಿದನೆಂದು ಹೇಳುವ ಈ ದೇವಾಲಯವು ಗರ್ಭಗೃಹ ಹಾಗೂ ಸಭಾಮಂಟಪಗಳನ್ನು ಹೊಂದಿವೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು ಮೇಲೆ ದ್ರಾವಿಡ ಮಾದರಿಯ ಶಿಖರವಿದೆ. ಸಭಾಮಂಟಪದಲ್ಲಿ ನಂದಿಯ ವಿಗ್ರಹವಿದ್ದು ಸರಳ ಚೌಕಾಕಾರದ ನಾಲ್ಕು ಕಂಭಗಳ ಆಶ್ರಯದಿಂದ ಕಟ್ಟಲಾಗಿದೆ.

ಇವಲ್ಲದೆ ಕೋಟೆ ಒಳಗಡೆ ಉಯ್ಯಲ ಗಂಭ, ಸಮಾಧಿ ಗದ್ದುಗೆಗಳು, ಮಸೀದಿ, ಮನೆಯ ಕಟ್ಟಡಾವಶೇಷಗಳು ಶ್ರೀ ವಸುಧೇಂದ್ರ ತೀರ್ಥ ಶ್ರೀಪಾದಂಗಳವರ ವೃಂದಾವನ ಇದ್ದು ಇವೆಲ್ಲವು ಕೆಂಚನಗೌಡ ವಂಶಸ್ಥರ ಕಾಲಾವಧಿಯಲ್ಲಿ ನಿರ್ಮಾಣಗೊಂಡಂಥ ರಚನೆಗಳಾಗಿವೆ ಎಂದು ಹೇಳಬಹುದು.

ಹೀಗೆ ಒಟ್ಟು ಅಧ್ಯಯನದ ಫಲಶೃತಿಯಾಗಿ ಈ ಕೆಳಗಿನ ಅಂಶಗಳನ್ನು ದಾಖಲಿಸಬಹುದಾಗಿದೆ:

  • ಕೆಂಚನಗುಡ್ಡದ ವಂಶಸ್ಥರು ತಮ್ಮ ವಂಶಪಾರಂಪರೆಯಾಗಿ ನಾಡಗೌಡಿಕೆಯನ್ನು ಅನುಸರಿಸಿಕೊಂಡು ಬಂದಿದ್ದರಿಂದ ಇವರನ್ನು ಪಾಳೆಯಗಾರರೆನ್ನದೆ ನಾಡಗೌಡರೆಂದು ಕರೆಯುವುದು ಸೂಕ್ತ. ಏಕೆಂದರೆ ಪಾಳೆಯಗಾರ ವ್ಯವಸ್ಥೆಯ ಸೈನ್ಯಬಲವಾಗಲಿ, ಆಡಳಿತ ಎಲ್ಲೆಗಳಾಗಲಿ ಇವರು ಹೊಂದಿರುವುದಿಲ್ಲ.

 11_79_KKAM-KUH

  • ಈ ಗುಡ್ಡವು ಸೈನಿಕ ನೆಲೆಯಾಗಿದ್ದು ಹೊರಗಿನ ಶತ್ರುಗಳ ಅಕ್ರಮಣವನ್ನು ತಡೆಗಟ್ಟಲು ಹಾಗೂ ಎದುರಿಸಲು ಸಮರ್ಪಕವಾದ ಆಶ್ರಯತಾಣವಾಗಿದೆ. ಇದನ್ನು ನಿರ್ವಹಿಸುವ ಹೊಣೆಯನ್ನು ಈ ವಂಶಸ್ಥರು ಸಮರ್ಥವಾಗಿ ಸಂಭಾಳಿಸಿರುತ್ತಾರೆ.
  • ನೋಡಲಿಕ್ಕೆ ಇವರು ಇತರೆ ಸಾಂಮತ ಮನೆತನಗಳ ಹಾಗೆ ಸ್ವತಂತ್ರರಾಗಿ ಕಂಡುಬಂದರೂ ಅಧೀನ ಸಾಮಂತರಾಗಿಯೆ ಗುರುತಿಸಬೇಕಾಗುತ್ತದೆ.
  • ಇವರ ವಂಶಾವಳಿ, ಇನ್ನಿತರ ಸಂಗತಿಗಳನ್ನು ಗುರುತಿಸಲು ಸಹಕಾರಿಯಾಗಿರುವ ಶಾಸನವೂಂದು ಪ್ರಮುಖ ಆಕರವಾಗಿದ್ದು ಇದರ ಕಾಲವನ್ನು ಇನ್ನೂ ಮುಂದೆ ಕ್ರಿ.ಶ.೧೭೦೯ ಫೆಬ್ರವರಿ ೮ ಎಂದು ದಾಖಲಿಸುವುದು ಸರಿಯಾದ ಕ್ರಮವಾಗಿರುತ್ತದೆ.

ಇಲ್ಲವಾದರೆ ಈಗಾಗಲೇ ಇವರನ್ನು ಕುರಿತು ಪ್ರಕಟವಾಗಿರುವ ಒಂದೆರಡು ಬರಹಗಳು ಸಹ ಮೂಲ ಆಕರಗಳನ್ನು ನೋಡದೆ ತಪ್ಪು ತೇದಿಯ ಮೊದಲ ಬರವಣಿಗೆಯನ್ನೇ ಅನುಸರಿಸಿ ಬರೆದ ಬರಹಗಳಂತೆ ಮುಂದೆಯೂ ಅದೇ ತಪ್ಪುಗಳು ಮರುಕಳಿಸುವ ಸಾಧ್ಯತೆ ಇದೆ. ಇದರಿಂದ ಹೊಸ ಶೋಧಗಳ ಹುಡುಕಾಟಕ್ಕಿಂತ ಹಳೆಯ ತಪ್ಪುಗಳ ಮುಂದುವರಿಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಅಜಾತವಾಗಿರುವ ಬಹುತೇಕ ಸಂಗತಿಗಳನ್ನು ಕ್ಷೇತ್ರಕಾರ್ಯದ ಮೂಲಕ ಜ್ಞಾತಗೊಳಿಸುವ ಕೆಲಸ ಜರೂರಾಗಬೇಕೆಂದು ಒತ್ತಾಯಿಸುತ್ತೇನೆ.*

ಆಕರಗಳು

೧. Finance Department : Salary and Allowences (S.A.): No. 1 of 1833 – 34: Increased rate of pension to palyagars, S.N.12.

೨. ಜೆ. ಶೇಷಗಿರಿ ಆಚಾರ್, ೧೯೭೭, ಸಿರುಗುಪ್ಪೆಯ ಸಿರಿ, ಉದಯ ಸರಸ್ವತಿ ಪ್ರಕಾಶನ, ಅಗಸನೂರು, ಸಿರುಗುಪ್ಪ ತಾಲೂಕು.

೩. ಎಂ.ರಾಘವೇಂದ್ರ, ೧೯೮೮, ಸಿರುಗುಪ್ಪ ತಾಲೂಕು ದರ್ಶನ, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು

೪. ಲಕ್ಷ್ಮಣ್ ತೆಲಗಾವಿ, ೧೯೮೮, ಎಪ್ಪತ್ತೇಳು ಪಾಳೆಯಗಾರರು, ಇತಿಹಾಸ ದರ್ಶನ, ಸಂಪುಟ ೩, ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು.

೫. ಶರಣಬಸಪ್ಪ ಕೋಲ್ಕಾರ,೧ ನವೆಂಬರ್ ೧೯೮೮, ನೀರಾವರಿಯ ಪಳೆಯುಳಿಕೆಬಸವನ ಆಣೆ, ಸುಧಾ ವಾರಪತ್ರಿಕೆ, ಬೆಂಗಳೂರು

೬. ಎಂ.ಎಂ. ಕಲಬುರ್ಗಿ (ಸಂ),೧೯೯೪, ಕರ್ನಾಟಕದ ಕೈಫಿಯತ್ತುಗಳು, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೭. ದೇವರ ಕೊಂಡಾರೆಡ್ಡಿ ಹಾಗೂ ಇತರರ (ಸಂ.) ೧೯೯೮, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.

೮. ಶ್ಯಾಮಲ ಸಿ.ಆರ್.೨೦೦೪, ಪೂರ್ವ ಕರ್ನಾಟಕದ ಪಾಳೆಯಗಾರರು : ಒಂದು ಅಧ್ಯಯನ, ಪಿಎಚ್.ಡಿ. ಅಪ್ರಕಟಿತ ಪ್ರಬಂಧ, ಮುಂಬೈ ವಿಶ್ವವಿದ್ಯಾಲಯ, ಮುಂಬೈ.

೯. ಎಂ. ಕೊಟ್ರೇಶ್, ೨೦೦೫, ಕೆಂಚನಗುಡ್ಡ ಪರಿಸರಒಂದು ಪರಿಶೀಲನೆ, ಇತಿಹಾಸ ದರ್ಶನ, ಸಂಪುಟ ೧೫, ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು.