ಜಟ್ಟಿಂಗರಾಜ

ಇವನು ಚಿತ್ರದುರ್ಗದ ಹಿರಿಮದಕರಿನಾಯಕನ (ಕ್ರಿ.ಶ. ೧೭೨೧ – ೧೭೪೮) ಸಮಕಾಲೀನ, ಜಟ್ಟಿಂಗರಾಜನು ದುರ್ಗದ ಹಿರಿಮದಕರಿನಾಯಕನ ಸಹೋದರಿಯನ್ನು ವಿವಾಹವಾಗಿದ್ದನು. ಜಟ್ಟಿಗರಾಜನ ತಂದೆ ಚಿನ್ನಯರಾಜನು ತನ್ನ ಮಗಳಾದ ಬೊಮ್ಮಕ್ಕಳನ್ನು (ಜಟ್ಟಿಂಗರಾಜನ ಸೋದರಿ) ಹಿರಿಮದಕರಿಗೆ ವಿವಾಹಮಾಡಿಕೊಟ್ಟು ಅವನನ್ನು ತನ್ನ ಅಳೀಯನನ್ನಾಗಿ ಮಾಡಿಕೊಂಡಿದ್ದನೆಂದು ಇಂಗ್ಲೀಷ್ ದಾಖಲೆಯು ತಿಳಿಸುತ್ತದೆ. ಹೀಗೆ ಜಟ್ಟಿಂಗರಾಜನ ಸೋದರಿಯನ್ನು ಹಿರಿಮದಕರಿಯೂ, ಹಿರಿಮದಕರಿನಾಯಕನ ಸೋದರಿಯನ್ನು ಜಟ್ಟಿಂಗರಾಜನೂ ವಿವಾಹವಾಗಿ ಕೆಲಕಾಲ ನಿರಾತಂಕವಾಗಿ ಜಟ್ಟಿಂಗರಾಜನ ತಂದೆ ಚಿನ್ನಯರಾಜನು ಆಳ್ವಿಕೆ ನಡೆಸಿದ್ದನು. ಆದರೆ ಜಟ್ಟಿಂಗರಾಜನು ಪ್ರಾಪ್ತವಯಸ್ಸಿಗೆ ಬಂದ ನಂತರ ಚಿತ್ರದುರ್ಗದವರ ಜೊತೆ ಕದನಕ್ಕಿಳಿದ ಸಂದರ್ಭವನ್ನು ಮೆಕಂಜಿಯವರ ಇಂಗ್ಲೀಷ್ ದಾಖಲೆಯು ವಿವರಿಸಿದೆ.

[1]

“ಜಟ್ಟಿಂಗರಾಜನು ಪ್ರಾಪ್ತವಯಸ್ಸಿಗೆ ಬಂದು ಸಂಸ್ಥಾನದ ನಾಯಕತ್ವವನ್ನು ವಹಿಸಿಕೊಂಡ ನಂತರ ತನ್ನ ತಂದೆ ಚಿನ್ನಯರಾಜನು ಚಿತ್ರದುರ್ಗದವರೊಂದಿಗೆ ಮಾಡಿಸಿದ್ದ ವಿವಾಹವನ್ನು ಧಿಕ್ಕರಿಸಿ ಅವರನ್ನು ಊರುಬೇಡರು ಎಂದು ಜರಿದು ಕನಕಗಿರಿ ಸಂಸ್ಥಾನಕ್ಕೆ ಸೇರಿದ ಒಬ್ಬ ನಾಗತಿ ಮತ್ತು ಗುಡಿಬಂಡೆ ಸಂಸ್ಥಾನಕ್ಕೆ ಸೇರಿದ ನಾಲ್ಕು ಜನ ನಾಗತಿಯರನ್ನು ವಿವಾಹವಾದನು.”

ಈ ಘಟನೆ ಇವರಿಬ್ಬರ ಮಧ್ಯೆ ವಿರಸ ಮೂಡಿಸುತ್ತದೆ. ಚಿತ್ರದುರ್ಗ ನಾಯಕರು ಮೂಲತಃ ಮ್ಯಾಸಬೇಡರಾಗಿದ್ದರೂ ಜಟ್ಟಿಂಗರಾಜನು ಅವರನ್ನು ಊರಬೇಡರು ಎಂದು ಹೀಯಾಳಿಸಲು ಪ್ರಾಯಶಃ ಆ ಭಾಗದಲ್ಲಿ ಹೆಚ್ಚಾಗಿದ್ದ ಮ್ಯಾಸ ಮಂಡಲದ[2] ಮೇಲೆ ರಾಜಕೀಯ ನಿಯಂತ್ರಣದ ಜೊತೆಗೆ ಧಾರ್ಮಿಕ ಹತೋಟೆಯನ್ನು ಪಡೆಯುವ ಇಚ್ಛೆ ಇದ್ದಂತೆ ತೋರುತ್ತದೆ. ಈ ಸುದ್ದಿ ದುರ್ಗದ ಮದಕರಿನಾಯಕನಿಗೆ ತಲುಪಿ ತನ್ನನ್ನು ತನ್ನ ವಂಶವನ್ನು ಅಪಮಾನಿಸಿದವನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟನು. ಒಬ್ಬರು ಮತ್ತೊಬ್ಬರ ಜಾತಿಯನ್ನು ಹೀಯಾಳಿಸುವ ಘಟನೆಗಳು ಮಧುಗಿರಿ ಮತ್ತು ಪಾವಗಡ ನಾಯಕರ ಚರಿತ್ರೆಯಲ್ಲೂ ದಾಖಲಾಗಿದೆ. ಹಿರಿಮದಕರಿನಾಯಕನು ಗುಡೇಕೋಟೆಯ ಸುತ್ತಮುತ್ತಲ ಪ್ರದೇಶಳನ್ನೆಲ್ಲಾ ಕೊಳ್ಳೆ ಹೊಡೆದು ೩ ವರ್ಷಗಳ ಕಾಲ ನಿರಂತರವಾಗಿ ಕೋಟೆಗೆ ಮುತ್ತಿಗೆ ಹಾಕಿದನು. ಕ್ರಿ.ಶ. ೧೭೩೪ರ ಪ್ರಮೋದೀಚ ಸಂವತ್ಸರ ಆಷಾಢ ಮಾಸದಲ್ಲಿ ಚೋರಮನೂರು, ಗುಡೇಕೋಟೆಯನ್ನು ದುರ್ಗದವರು ವಶಪಡಿಸಿಕೊಂಡರು.[3] ಗುಡೇಕೋಟೆಯನ್ನು ಕಳೆದುಕೊಂಡ ಜಟ್ಟಿಂಗರಾಜ ತನ್ನ ಮಗನಾದ ಇಮ್ಮಡಿ ಜಟ್ಟಿಂಗರಾಜನನ್ನು ಕೋಟೆಯೋಲಗೆ ಬಿಟ್ಟು ಪಲಾಯನ ಮಾಡಿದನು. ಆ ಸಂದರ್ಭದಲ್ಲಿ ಇವರ ವಂಶದಲ್ಲೇ ನಡೆಯಬಾರದ ಘಟನೆಯೊಂದು ಜರುಗಿ ಹೋಗುತ್ತದೆ. ಅದನ್ನು ಮಕಂಜಿ ಇಂಗ್ಲೀಷ್ ದಾಕಲೆಯು ಹೀಗೆ ತಿಳಿಸುತ್ತದೆ.[4]

“In his absence his son Immadi Jattinga Raja then a youth took his stepmother to her bed without fear or consideration that it is forbidden by the laws”

ಜಟ್ಟಿಂಗರಾಜ ಗುಡಿಕೋಟೆಯಲ್ಲಿ ಇಲ್ಲದೇ ಇದ್ದಾಗ ಅವನ ಮಗ ಹದಿಹರೆಯದ ಯುವಕ ಇಮ್ಮಡಿ ಜಟ್ಟಿಂಗರಾಜನು ತನ್ನ ಮಲತಾಯಿಯ ಮೇಲೆಯೇ ಅತ್ಯಾಚಾರ ಮಾಡಿದನು. ತನ್ನ ಮಗನ ಅನುಚಿತ ನಡವಳಿಕೆಯಿಂದ ಬೇಸತ್ತ ಜಟ್ಟಿಂಗರಾಜನು ಗುಡೇಕೋಟೆಗೆ ಆಗಮಿಸಿ ಕುಲನಿಯಮಗಳಿಗೆ ಅನುಸಾರವಾಗಿ ಅವನಿಗೆ ಮರಣ ದಂಡನೆ ವಿಧಿಸಲ ಸಿದ್ಧತೆ ನಡೆಸಿದನು. ಆದರೆ ಇಮ್ಮಡಿ ಜಟ್ಟಿಂಗರಾಜನು ತನ್ನ ತಂದೆಯು ಬರುವ ವರೆಗೂ ಕಾಯದೆ ಅವರಿಗೆ ಮುಖವನ್ನು ಕೂಡಾ ತೋರಿಸದೆ ಶಿಕ್ಷೆಗೆ ಹೆದರಿ ಅರಮನೆಯಿಂದಲೇ ಪಲಾಯನ ಮಾಡಿದನು. ಆದುದರಿಂದ ಗುಡೇಕೋಟೆ ನಾಯಕನು ತನ್ನ ಎರಡನೇ ಪುತ್ರ ರಾಮಪ್ಪನಾಯಕ (ಕನಕಗಿರಿ ವಂಶದ ನಾಗತಿಯ ಪುತ್ರ)ನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದನು. ಅವನು ಚಿತ್ರದುರ್ಗದವರ ವಿರುದ್ಧ ಸುಮಾರು ನಾಲ್ಕು ವರ್ಷಗಳ ಕಾಲ ಕೋಟೆಯೊಳಗಡೆ ಇದ್ದು ಕೊಂಡು ಹೋರಾಟ ನಡೆಸಿದನು. ಶತ್ರುಗಳು ಜಟ್ಟಿಂಗರಾಜನ ಬೆನ್ನತ್ತಿದರು. ಕೋಟೆ ಬಾಗಿಲು ತೆರೆಯಲಿಲ್ಲ. ಕೋಟೆಯ ಒಳಗಡೆ ಸಂಗ್ರಹಿಸಿಟ್ಟಿದ್ದ ಆಹಾರ ಪದಾರ್ಥಗಳನ್ನು ದುರ್ಗದವರು ಕಂಡುಹಿಡಿದು ಮುಚ್ಚಿದರು. ಇದರಿಂದ ಎಚ್ಚೆತ್ತುಗೊಂಡ ಜಟ್ಟಿಂಗರಾಜ ಗುಡೇಕೋಟೆಯ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ತನ್ನೆಲ್ಲ ಪತ್ನಿಯರನ್ನು ಚಿತ್ರದುರ್ಗ ವಂಶದ ತನ್ನ ರಾಣಿ ಚಿಕ್ಕನಾಗತಿ ರಕ್ಷಣೆಯಲ್ಲಿಟ್ಟು ತನ್ನ ಮಗ ರಾಮಪ್ಪನಾಯಕನೊಂದಿಗೆ ಹರಪ್ಪನಹಳ್ಳಿಗೆ ಪಲಾಯನ ಮಾಡಿದನು. ಉಳಿವಿನ ಪ್ರಶ್ನೆಯಾಗಿತ್ತು ಮತ್ತು ಚಿತ್ರದುರ್ಗದ ಹಿರಿಮದಕರಿನಾಯಕನ ಸೋದರಿಯ ಮತ್ತು ತನ್ನ ರಾಣಿಯ ಆಶ್ರಯದಲ್ಲಿ ಗುಡೇಕೋಟೆಯೊಳಗೆ ಇನ್ನುಳಿದ ರಾಣಿಯರನ್ನು ಇಟ್ಟಿದ್ದು ಅವನ ರಾಜಕೀಯ ಚತುರತೆಗೆ ಉದಾಹರಣೆಯಾಗಿದೆ.

ಚಿತ್ರದುರ್ಗದ ಹಿರಿಮದಕರಿನಾಯಕನು ತನ್ನ ವಂಶಕ್ಕೆ ಅಪಮಾನ ಮಾಡಿದ ಗುಡೇಕೋಟೆ ಪಾಳೆಯಗಾರ ಜಟ್ಟಿಂಗರಾಜನನ್ನು ಹಿಡಿದು ಶಿಕ್ಷಿಸಲೇಬೇಕೆಂಬ ಹಠದಿಂದ ಅನೇಕ ಬಾರಿ ಆಕ್ರಮಣ ಮಾಡಿದರೂ, ಅವನು ಕೈಗೆ ಸಿಕ್ಕದೆ ಪಲಾಯನ ಮಾಡುತ್ತಿದ್ದನು. ಆದರೆ ಈ ಬಾರಿ ಸೇನೆಯ ನಾಯಕತ್ವವನ್ನು ತಾನೇ ವಹಿಸಿಕೊಂಡು ಹಿರಿಮದಕರಿಯು ಗುಡೇಕೋಟೆಯ ಮೇಲೆ ಆಕ್ರಮಣ ಮಾಡಿದನು. ಕ್ರಿ.ಶ. ೧೭೩೬ರ ರಾಕ್ಷಸಮಾಜದಲ್ಲಿ ಕೋಟೆಯ ಮೇಲೆ ಆಕ್ರಮಣ ಮಾಡಿ ಗೆದ್ದುಕೊಂಡನು.[5] ಸ್ವತಃ ತಾನೇ ಕೋಟೆಯೊಳಗೆ ಪ್ರವೇಶಿಸಿ ತನ್ನ ಸೋದರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದನು. ತನ್ನ ರಕ್ಷಣೆಯಲ್ಲಿ ಇರಲು ಬಯಸುವುದಾದರೆ ಅವಳಿಗೆ ಮತ್ತು ಅವಳ ಹತ್ತಿರದ ಸಂಬಂಧಿಕರೆಲ್ಲರಿಗೂ ಜಾಗೀರನ್ನು ಕೊಡುತ್ತೇನೆಂಬ ಭರವಸೆ ನೀಡಿದನು. ಅದನ್ನು ರಾಣಿ ಚಿಕ್ಕನಾಗತಿ ಮತ್ತು ತೊಂದರೆ ನೀಡದೆ ಕೋಟೆಯನ್ನು ತನ್ನ ಸೇನಾನಾಯಕರಿಗೆ ವಹಿಸಿ ದುರ್ಗಕ್ಕೆ ಹಿಂತಿರುಗಿದನು. ಹೀಗೆ ಗುಡೇಕೋಟೆ ದುರ್ಗದವರ ಅಧೀನಕ್ಕೆ ಒಳಪಟ್ಟಿತು. ಚಿತ್ರದುರ್ಗದವರ ಅಧೀನದಲ್ಲಿರುವ ಕೋಟೆಯೊಳಗೆ ಇರಲು ಬಯಸದ ಚಿಕ್ಕನಾಗತಿ ಮತ್ತು ಉಳಿದವರು ತಮ್ಮ ಪತಿಯನ್ನು ಸೇರಿಕೊಳ್ಳಲು ಹರಪನಹಳ್ಳಿಗೆ ಹೋದರು.

ಇದೇ ಸಂದರ್ಭದಲ್ಲಿ ಗುಡೇಕೋಟೆಯ ರಾಮಪ್ಪನಾಯಕನು ಕನಕಗಿರಿಗೆ ಹೋಗಿ ಸೇನಾಸಹಾಯ ಪಡೆದುಕೊಂಡು ಗುಡೇಕೋಟೆಯನ್ನು ವಶಕ್ಕೆ ತೆಗೆದುಕೊಳ್ಳುವ ಯೋಜನೆಯನ್ನು ರೂಪಿಸಿದನು. ಕನಕಗಿರಿಯವರ ಸಹಾಯದಿಂದ ಅವನು ಕುಡತಿನ, ಕೊಡೆಕಲ್‌ಗಳನ್ನು ಗೆದ್ದುಕೊಂಡಿದ್ದು, ಅಲ್ಲದೇ ಚಿತ್ರದುರ್ಗದವರ ರಕ್ಷಣೆಯಲ್ಲಿದ್ದ ಅನೇಕ ಕೋಟೆಗಳನ್ನು ೩ವರ್ಷಗಳ ಕಾಲ ಲೂಟಿ ಹೊಡೆದು ಆ ಭಾಗದಲ್ಲಿ ತನ್ನ ಪ್ರಭುತ್ವ ಸ್ಥಾಪಿಸಿ ಮತ್ತೊಮ್ಮೆ ಗುಡೇಕೋಟೆಯನ್ನು ವಶಪಡಿಸಿಕೊಂಡು ಆಳ್ವಿಕೆ ಮಾಡಲಾರಂಭಿಸಿದನು.

ಈ ವೇಳೆಗಾಗಲೇ ಚಿತ್ರದುರ್ಗದಲ್ಲಿ ಹಿರಿಮದಕರಿನಾಯನು ಮರಣ ಹೊಂದಿದ್ದನು. ನಂತರ ಬಂದ ಇಮ್ಮಡಿ ಕಸ್ತೂರಿರಂಗಪ್ಪನಾಯಕನು ಇನ್ನು ಸರಿಯಾಗಿ ರಾಜ್ಯದಲ್ಲಿ ಪ್ರತಿಷ್ಠಾಪಿತನಾಗಿರಲಿಲ್ಲವಾಗಿದ್ದುದು ಗುಡೇಕೋಟೆಯವರೆಗೆ ವರದಾನವಾಗಿತ್ತು. ಚಿತ್ರದುರ್ಗದವರ ಉಪಟಳದಿಂದ ತಾತ್ಕಾಲಿಕವಾಗಿಯಾದರೂ ವಿಮೋಚನೆ ಹೊಂದಿದ ಇವರಿಗೆ ಮತ್ತೊಂದು ಆಘಾತವು ಕಾದಿತ್ತು. ಅದನ್ನು ದಾಖಲೆಯು ಹೀಗೆ ಸೃಷ್ಟಿಪಡಿಸಿದೆ.[6] ಗುತ್ತಿಯ ಮುರಾರಿರಾಯನು ಗುಡಿಕೋಟೆಯ ಮೇಲೆ ಆಕ್ರಮಣಮಾಡಿ ಅಲ್ಲಿದ್ದ ರಾಮಪ್ಪ ನಾಯಕ ಮತ್ತು ಆತನ ಕುಟುಂಬವರ್ಗದವರನ್ನು ಕೋಟೆಯಿಂದ ಹೊರಹಾಕಿದನು. ಹೀಗೆ ನೆಲೆ ಕಳೆದುಕೊಂಡ ರಾಮಪ್ಪನು ತನ್ನ ತಂದೆಯ ಜಟ್ಟಿಂಗರಾಜನೊಂದಿಗೆ ಕನಕಗಿರಿಗೆ ಹೋಗಿ ಕೆಲವು ವರ್ಷಗಳ ಕಾಲ ಅವನ ಆಶ್ರಯದಲ್ಲಿ ಇದ್ದನು. ಹೀಗೆ ಗುಡೇಕೋಟೆ ಚಿತ್ರದುರ್ಗದವರಿಂದ ಗುತ್ತಿಯ ಮುರಾರಿರಾಯನ ಅಧಿನಕ್ಕೆ ಒಳಪಟ್ಟಿತು. ಆ ಕೋಟೆಯ ಮೇಲೆ ಇನ್ನೂ ಆಸೆ ಇಟ್ಟಿಕೊಂಡಿದ್ದ ಪಾಳೆಯಗಾರರಿಗೆ ಅದನ್ನು ಪಡೆದುಕೊಳ್ಳುವ ಮತ್ತೊಂದು ಅವಕಾಶವು ಹೈದರಾಲಿಯು ಚಿತ್ರದುರ್ಗದವರ ಮೇಲೆ ದಂಡೆತ್ತು ಬಂದಾಗ ಒದಗಿ ಬಂತು.

ಹೈದರಾಲಿಯ ಉತ್ತರದ ದಾಳಿಯಲ್ಲಿ ಚಿತ್ರದುರ್ಗದವರು ಅವನಿಗೆ ತನು ಮನ ಧನಗಳಿಂದ ಸಹಾಯ ಮಾಡಿದ್ದರೂ ಹೈದರನು ಅವರನ್ನು ಸಂಪೂರ್ಣವಾಗಿ ನಂಬಿರಲಿಲ್ಲ. ರಾಜ್ಯ ವಿಸ್ತರಣೆಯಲ್ಲಿ ೫ನೇ ಮದಕರಿನಾಯಕನೇ ಅಡ್ಡಗೋಡೆಯೆಂದು ಭಾವಿಸಿದ, ಹೈದರನು ಅವನನ್ನು ಮಟ್ಟ ಹಾಕಲು ನಿರ್ಧರಿಸಿ ದುರ್ಗದ ಮೇಲೆ ದಾಳಿ ಮಾಡಿದನು. ಚಿತ್ರದುರ್ಗದವರ ಉಪಟಳಕ್ಕೆ ತುತ್ತಾಗಿ ಅವರ ಶತ್ರುವಾಗಿದ್ದ ಕನಕಗಿರಿ ಪಾಳೆಯಗಾರರು ಸೇನಾ ಸಮೇತರಾಗಿ ಹೈದರಾಲಿಗೆ ಸಹಾಯ ಮಾಡಲು ಹೊರಟರು. ಈ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಲು ಗುಡೇಕೋಟೆ ರಾಮಪ್ಪನಾಯಕನು ನಿರ್ಧರಿಸಿದನು. “ಕನಕಗಿರಿ ಪಾಳೆಯಗಾರರ ಆಶ್ರಯದಲ್ಲಿದ್ದ ರಾಮಪ್ಪನಾಯಕನು ತನ್ನ ಆಳಿದುಳಿದ ದಂಡಿನ ಸಮೇತ ಕನಕಗಿರಿಯವರೊಂದಿಗೆ ಹೈದರಾಲಿಗೆ ಸಹಾಯ ಮಾಡಲು ಹೋಗಿ ಯುದ್ಧದಲ್ಲಿ ಹೈದರನ ಗಮನ ಸೆಳೆದನು.” ಯುದ್ಧ ಮುಗಿದ ನಂತರ ಹೈದರನು ಕೊಡಗಿನ ದಾಳಿಯಲ್ಲಿ ನಿರತನಾದನು. ಚಿತ್ರದುರ್ಗದವರ ವಿರುದ್ಧ ನಡೆದ ಯುದ್ಧದಲ್ಲಿ ಗಮನ ಸೆಳೆದಿದ್ದ ರಾಮಪ್ಪ ನಾಯಕನನ್ನು ಹೈದರನು ಶ್ರೀರಂಗಪಟ್ಟಣಕ್ಕೆ ಆಹ್ವಾನಿಸಿ ಅವನನ್ನು ಈ ದಾಳಿಗೆ ನಿಯೋಜಿಸಿದನು. ಆಸ್ಥಾನದಲ್ಲಿ ರಾಮಪ್ಪನಾಯಕನ ಸಾಹಸವನ್ನು ಕೊಂಡಾಡಿದ ಹೈದರನು ಅವನಿಗೆ ಖಿಲ್ಲತ್(ಗೌರವಕ್ಕಾಗಿ ಕೊಡುವ ರಾಜವಸ್ತ್ರ) ಸಮಾರಂಭ ಏರ್ಪಡಿಸಿ ಅವನನ್ನು ಗುಡೇಕೋಟೆ ಸಂಸ್ಥಾನದಲ್ಲಿ ಪುನರ್ ಪ್ರತಿಷ್ಠಾಪಿಸುವ ಭರವಸೆ ನೀಡಿದನು. ಇದರಿಂದ ಸಂತೋಷಗೊಂಡ ರಾಮಪ್ಪನಾಯಕನು ಹೈದರಾಲಿಯ ಸೇನೆಯೊಂದಿಗೆ ಕೊಡಗಿಗೆ ತೆರಳಿದನು. ಅಲ್ಲಿ ನಡೆದ ಯುದ್ಧದಲ್ಲಿ ಮರಣ ಹೊಂದಿದನು.

ಕ್ರಿ.ಶ. ೧೭೭೮ರ ವೇಳೆಗೆ ಹೈದರನು ಚಿತ್ರದುರ್ಗದವ ಪ್ರಾಬಲ್ಯವನ್ನು ಮುರಿದು ಘಟ್ಟ ಪ್ರದೇಶಗಳ ಕಡೆಗೆ ಹೊರಟನು. ಹೈದರನ ಮರಣಾನಂತರ ಕ್ರಿ.ಶ. ೧೭೮೨ರಲ್ಲಿ ಟಿಪ್ಪುಸುಲ್ತಾನನು ಅಧಿಕಾರಕ್ಕೆ ಬಂದನು. ಸಣ್ಣಪುಟ್ಟ ಪಾಳೆಯಪಟ್ಟುಗಳ ಕಡುದ್ವೇಷಿಯಾಗಿದ್ದ ಅವನು ಎಲ್ಲಾ ಸಂಸ್ಥಾನಗಳನ್ನು ತನ್ನ ಅಧೀನಕ್ಕೆ ಒಳಪಡಿಸಿಕೊಂಡು ಬಲಾಢ್ಯನಾಗಿದ್ದನು. ಈ ಸನ್ನಿವೇಶಗದಲ್ಲಿ ಗುಡೇಕೋಟೆಯೂ ಕೂಡ ಮೈಸೂರಿನವರ ನಿಯಂತ್ರಣದಲ್ಲಿತ್ತು. ರಾಮಪ್ಪನಾಯಕನ ಮಕ್ಕಳಿಗೆ ಆ ಸಂಸ್ಥಾನವನ್ನು ಬಿಟ್ಟುಕೊಡುವ ಆಲೋಚನೆಯನ್ನು ಟಿಪ್ಪುಸುಲ್ತಾನನು ಹೊಂದಿರಲಿಲ್ಲ. ಟಿಪ್ಪು ಸುಲ್ತಾನನನ್ನು ದ್ವೇಷಿಸುತ್ತಿದ್ದ ಇಂಗ್ಲೀಷರು ಅವನ ವಿರುದ್ಧ ಬಲಾಢ್ಯ ಸೈನ್ಯ ಕೂಡ ರಚಿಸಿಕೊಂಡು ಅವನನ್ನು ಮುಗಿಸುವ ತಂತ್ರವನ್ನು ರೂಪಿಸಿದ್ದರು. ಈ ಕೂಟದಲ್ಲಿ ಮರಾಠರೂ ಕೂಡ ಸೇರಿಕೊಂಡಿದ್ದರು. ಆದ್ದರಿಂದ ಮರಾಠರು ಪರುಶುರಾಂ ಬಾಹುವಿನ ನಾಯಕತ್ವದಲ್ಲಿ ಅನೇಕ ಕೋಟೆಗಳನ್ನು ಮಾರ್ಗ ಮಧ್ಯೆ ಲೂಟಿ ಹೊಡೆದು ತನ್ನ ಅಧಿನಕ್ಕೆ ಒಳಪಡಿಸಿಕೊಂಡಿದ್ದನು. ಈ ಅವಕಾಶವನ್ನು ಉಪಯೋಗಿಸಿಕೊಂಡು ಗುಡೇಕೋಟೆ ಪಾಳೆಯಗಾರ ರಾಮಪ್ಪನಾಯಕನ ಮಕ್ಕಳಾದ ರಾಮಲಿಂಗರಾಜ ಮತ್ತು ಬೊಮ್ಮಂತರಾಜರು ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಗುಡೇಕೋಟೆ ಸೇರಿದರು. ಮರಾಠರೊಂದಿಗೆ ೩೦ ಸಾವಿರ ರೂಗಳ ವಾರ್ಷಿಕ ಕಾಣಿಕೆ ನೀಡುವ ಒಪ್ಪಂದಕ್ಕೆ ಸಹಿ ಹಾಕಿ ಗುಡೇಕೋಟೆ ಪಡೆದುಕೊಂಡು ಪುನಃ ಆಳ್ವಿಕೆ ಮಾಡತೊಡಗಿದರು.[7]

ಕ್ರಿ.ಶ. ೧೭೯೨ರಲ್ಲಿ ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪುಸುಲ್ತಾನನು ಸೋತು ಬ್ರಿಟಿಷರೊಂದಿಗೆ ಶ್ರೀರಂಗಪಟ್ಟಣ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದನು. ಟಿಪ್ಪುಸುಲ್ತಾನನ ಪತನ ಖಚಿತವೆಂದು ನಂಬಿದ್ದ ಗುಡೇಕೋಟೆ ಪಾಳೆಯಗಾರರು ಈ ಒಪ್ಪಂದದಿಂದ ಟಿಪ್ಪುವಿಗೆ ಹೆದರಿ ತಮ್ಮ ಪರಿವಾರದೊಂದಿಗೆ ಗುಡೇಕೋಟೆಯಿಂದ ಪಲಾಯ ಮಾಡಿದರು.[8]

ಟಿಪ್ಪುಸುಲ್ತಾನನ ಅಧಿಕಾರಿಗಳು ಹರಪ್ಪನಹಳ್ಳಿ ಮತ್ತು ಆನೆಗೊಂದಿ ಪಾಳೆಯಗಾರರನ್ನು ಅನೇಕಬಾರಿ ಅಲ್ಲಿಂದ ಹೊರ ಹಾಕಿದ್ದರೂ ಅವರು ಪುನಃ ತಮ್ಮ ಪಟ್ಟಣಗಳಿಗೆ ಹಿಂತಿರುಗಿದ್ದೂ ಅಲ್ಲದೆ ನಾಲ್ಕೈದು ಸಾವಿರ ಸೈನಿಕರನ್ನು ಕಟ್ಟಿಕೊಂಡು ಆ ಪ್ರದೇಶಗಳನ್ನು ಕೊಳ್ಳೆ ಒಡೆಯುತ್ತಿದ್ದರು. ಈ ಅವಕಾಶವನ್ನು ಉಪಯೋಗಿಸಿಕೊಂಡು ಪಲಾಯನಗೈದಿದ್ದ ಗುಡೇಕೋಟೆ ಪಾಳೆಯಗಾರರು ಕೂಡ ತಮ್ಮ ಸಂಸ್ಥಾನಕ್ಕೆ ಹಿಂತಿರುಗಿ ಅದನ್ನು ಬಲವಂತದಿಂದ ಆಕ್ರಮಿಸಿ ಆಳತೊಡಗಿದರು. ಒಂದು ವರ್ಷಕಾಲ ತಮ್ಮ ವಶದಲ್ಲಿ ಗುಡೇಕೋಟೆ ಸಂಸ್ಥಾನವನ್ನು ಇಟ್ಟುಕೊಂಡಿದ್ದರು. ಈಭಾಗದ ಪಾಳೆಯಗಾರರ ಉಪಟಳವನ್ನು ಹತ್ತಿಕ್ಕಲು ನಿರ್ಧರಿಸಿದ ಟಿಪ್ಪುಸುಲ್ತಾನನು ಕ್ರಿ.ಶ. ೧೭೯೩ರಲ್ಲಿ ಖಾನ್‌ಜಾಹಾನ್‌ಖಾನ್‌ಮತ್ತು ಮೀರ್‌ಕಮರುದ್ದೀನ್‌ಖಾನ್‌ನ ನೇತೃತ್ವದಲ್ಲಿ ಸೇನೆಯನ್ನು ಕಳುಹಿಸಿದನು. ಆ ಸೇನೆ ಮೊದಲು ಶ್ರೀರಂಗಪಟ್ಟಣದಿಂದ ಪಲಾಯನ ಮಾಡಿದ ಗುಡೇಕೋಟೆ ಸಂಸ್ಥಾನದ ಗಿರಿದುರ್ಗದ ಮೇಲೆ ಆಕ್ರಮಣ ಮಾಡಿತು. ೩ ದಿನಗಳ ಕಾಲ ಹೋರಾಟ ಸಂಭವಿಸಿತು. ಎರಡೂ ಕಡೆ ಅನೇಕರು ಬಲಿಯಾದರು ಕೊನೆಗೆ ಪಾಳೆಯಗಾರ ಸಹೋದರರಿಬ್ಬರು ಕೆಲವೇ ಸೈನಿಕರೊಂದಿಗೆ ಬಲಾಡ್ಯ ಸೈನ್ಯದ ವಿರುದ್ಧ ಹೋರಾಡಲು ಮತ್ತು ಕೋಟೆಯನ್ನು ರಕ್ಷಿಸಲು ಸಾಧ್ಯವಿಲ್ಲವೆಂದು ಮನಗಂಡು ರಾತ್ರಿಯವೇಳೆ ತಮ್ಮ ಕುಟುಂಬದವರೊಂದಿಗೆ ಗುಡೇಕೋಟೆಯನ್ನು ಬಿಟ್ಟು ಓಡಿ ಹೋದರು. ಮಾರನೆಯ ಬೆಳಿಗ್ಗೆ ಟಿಪ್ಪುವಿನ ಸೈನಿಕರು ಗುಡೇಕೋಟೆಯನ್ನು ಸುಲಭವಾಗಿ ಪ್ರವೇಶಿಸಿ ಪಾಳೆಯಾಗಾರರಿಗೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಹತಾಶರಾದ ಸೈನಿಕರು ಇಡೀ ಕೋಟೆಯನ್ನೇ ನಾಶಪಡಿಸಿ ಅದನ್ನು ಮತ್ತೊಮ್ಮೆ ಪಾಳೆಯಗಾರರ ಅಡಗುತಾಣವಾದಂತೆ ಮಾಡಿದರು.[9]

ಶ್ರೀರಂಗಪಟ್ಟಣದ ಒಪ್ಪಂದಿಂದ ಅಪಮಾನಿತನಾಗಿದ್ದ ಟಿಪ್ಪು ಸುಲ್ತಾನನು ಬ್ರಿಟಿಷರ ವಿರುದ್ಧ ತನ್ನ ಬಲವನ್ನು ವೃದ್ಧಿ ಪಡಿಸಿಕೊಳ್ಳುತ್ತಿದ್ದನು. ಅಂತಿಮ ಯುದ್ಧಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದನು. ಬ್ರಿಟೀಷರೂ ಕೂಡ ಟಿಪ್ಪುವನ್ನು ಅಂತಿಮವಾಗಿ ಮುಗಿಸಲೇಬೇಕೆಂದು ಹಠತೊಟ್ಟಿದ್ದರು. ಈ ಸಂದರ್ಭದಲ್ಲಿ ಟಿಪ್ಪುವಿನ ರಾಜ್ಯದಲ್ಲಿ ಶಾಂತಿ ನೆಲೆಸಿ, ಹಣಕಾಸು ಪರಿಸ್ಥಿತಿ ಉತ್ತಮಗೊಂಡಿತ್ತು. ಶ್ರೀರಂಗಪಟ್ಟಣದ ಒಪ್ಪಂದ ರೂಪಿಸಿದ್ದ ಶಕ್ತಿ ಸಮತೋಲನ ಅಸ್ಥವ್ಯಸ್ಥೆಗೊಂಡಿತ್ತು. ಆದುದರಿಂದ ಬ್ರಿಟಿಷರು ಭಾರತದಲ್ಲಿ ತಮ್ಮ ಹಿತಾಶಕ್ತಿಗಳನ್ನು ಕಾಪಾಡಲು ಎಂಥದೇ ಬೆಲೆ ತೆತ್ತಾದರೂ ಟಿಪ್ಪುವನ್ನು ನಿರ್ಮೂಲ ಮಾಡಲೇಬೇಕು ಎಂಬ ಆದೇಶದಿಂದ ಲಾರ್ಡ್‌‌ವೆಲ್ಲೆಸ್ಲಿಯನ್ನು ಭಾರತಕ್ಕೆ ಕಳುಹಿಸಿದರು. ಅವನು ಬಂದವನೆ ಶ್ರೀರಂಗಪಟ್ಟಣದ ಒಪ್ಪಂದದ ಅಂಶಗಳನ್ನು ಟಿಪ್ಪು ಉಲ್ಲಂಘಿಸಿದ್ದಾನೆಂದು ಆಪಾದಿಸಿ ಅವನ ವಿರುದ್ಧ ಯುದ್ಧ ಘೋಷಿಸಿದನು. ಕ್ರಿ.ಶ. ೧೭೯೮ರ ಕಾಳಾಯುಕ್ತೆ ಸಂವತ್ಸತರ ಮಾಘ ಮಾಸದಲ್ಲಿ ಇಂಗ್ಲೀಷರ ಸೈನ್ಯ ಟಿಪ್ಪುವಿನ ವಿರುದ್ಧ ಹೋರಾಡಲು ಹೊರಟಿತು. ಈ ಅವಕಾಶವನ್ನುಪಯೋಗಿಸಿಕೊಂಡ ಗುಡೇಕೋಟೆಯ ಪಾಳೆಯಗಾರ ಬೊಮ್ಮಂತರಾಜ; ಟಿಪ್ಪುಸುಲ್ತಾನನ ಗಮನ ಬ್ರಿಟೀಷರ ಕಡೆಗೆ ಹೋಗಿದ್ದುದನ್ನು ಗಮನಿಸಿ ಮತ್ತು ಗುಡೇಕೋಟೆಯಲ್ಲಿದ್ದ ಸೈನ್ಯವನ್ನು ಟಿಪ್ಪು ಹಿಂತೆಗೆದು ಕೊಂಡಮೇಲೆ ಆ ಕೋಟೆಯ ಮೇಲೆ ಆಕ್ರಮಣಮಾಡಿ ಪುನಃ ಆಳ್ವಿಕೆಯನ್ನು ಆರಂಭಿಸಿದನು. ಕ್ರಿ.ಶ. ೧೭೯೮ರ ಮಾಘ ಮಾಸದಿಂದ ಕ್ರಿ.ಶ. ೧೭೯೯ರ ಶ್ರಾವಣ ಮಾಸದವರೆಗೂ ಕಂದಾಯವನ್ನು ಸಂಗ್ರಹಿಸಿದನು.[10] ಕ್ರಿ.ಶ. ೧೭೯೯ರಲ್ಲಿ ಬ್ರಿಟೀಷರಿಗೂ ಮತ್ತು ಟಿಪ್ಪುಸುಲ್ತಾನನಿಗೂ ೪ನೇ ಮೈಸೂರು ಯುದ್ಧ ಜರುಗಿದಾಗ ಟಿಪ್ಪುಸುಲ್ತಾನನು ಯುದ್ಧದಲ್ಲಿ ಮೃತನಾದನು. ಅವನ ಇಡೀ ಪ್ರಾಂತ್ಯ ಬ್ರಿಟೀಷರ ವಶವಾಯಿತು. ಮುಂದೆ ಮೈಸೂರುರಾಜ್ಯದ ವ್ಯವಸ್ಥೆಗಾಗಿ ವೆಲ್ಲೆಸ್ಲಿಯು ಜನರಲ್ ಹ್ಯಾರಿಸ್, ಕರ್ನಲ್ ವೆಲ್ಲೆಸ್ಲಿ, ಹೆನ್ರಿವೆಲ್ಲೆಸ್ಲಿ, ಲೆ.ಕೆ. ಕಿರ್ಕ್‌‌ಪ್ರಾಟ್ರಿಕ್ ಹಾಗೂ ಲೆ.ಕ. ಬ್ಯಾರಿಕ್ಲೋಸ್ ರವರನ್ನೊಳಗೊಂಡ ಒಂದು ಆಯೋಗವನ್ನು ನೇಮಕ ಮಾಡಿದನು. ಅವರ ವರದಿಯ ಪ್ರಕಾರ ಮೈಸೂರು ರಾಜ್ಯವನ್ನು ನಾಲ್ಕು ಭಾಗಗಳಾಗಿ ಮಾಡಲಾಯಿತು. ಗುಡೇಕೋಟೆಯನ್ನೊಳಗೊಂಡ ಅನೇಕ ಪ್ರದೇಶಗಳು ನಿಜಾಮನ ಪಾಲಿಗೆ ಹೋದವು. ಈ ಸನ್ನಿವೇಶದಲ್ಲಿ ಪಾಳೆಯಗಾರ ಬಮ್ಮಂತರಾಜ, ಜನರಲ್ ಹ್ಯಾರಿಸ್ ಮತ್ತು ಲೆ.ಕ. ಬ್ಯಾರಿಕ್ಲೋಸರನ್ನು ಭೇಟಿಯಾಗಿ ಪಾಳೆಯಪಟ್ಟಿನ ಒಡೆತನವನ್ನು ನೀಡುವಂತೆ ಮನವಿ ಮಾಡಿಕೊಂಡನು. ಅವರು ಅವನನ್ನು ಹೈದರಾಬಾದಿನ ಮೀರ್ ಆಲಮ್‌ನ ಬಳಿ ವರದಿ ಮಾಡಿಕೊಳ್ಳುವಂತೆ ಸೂಚಿಸಿದರು. ನಿಜಾಮನ ಬ್ರಿಟೀಷರ ಸಹಾಯಕ ಸೈನ್ಯ ಪದ್ಧತಿಗೆ ಒಪ್ಪಿ ಗೋಡೇಕೋಟೆ ಪ್ರದೇಶವನ್ನು ದತ್ತಿ ಮಂಡಲವಾಗಿ (Ceded District) ಬಿಟ್ಟುಕೊಟ್ಟನು. ಹೀಗೆ ಈ ಪ್ರದೇಶ ಕ್ರಿ.ಶ. ೧೮೦೦ರಲ್ಲಿ ಮದ್ರಾಸ್ ಅಧಿಪತ್ಯಕ್ಕೆ ಸೇರುತ್ತದೆ. ೧೮೦೩ರಲ್ಲಿ ಥಾಮಸ್ ಮನ್ರೋ, ಗುಡೇಕೋಟೆಗೆ ಭೇಟಿಕೊಟ್ಟನು. ಮೀರ್ ಆಲಮ್ ತನ್ನ ಬಳಿ ಕಲೆಕ್ಟರ್ ಥಾಮಸ್ ಮನ್ರೋನ ಕಚೇರಿಗೆ ರವಾನಿಸಿದನು. ಅವನು ಮೇಲಿನ ಅಧಿಕಾರಿಗಳ ಆದೇಶದಂತೆ ಎಲ್ಲಾ ಪಾಳೆಯಗಾರ ಸಂಸ್ಥನಗಳನ್ನೆಲ್ಲಾ ತಮ್ಮ ಅಧಿನಕ್ಕೆ ಒಳಪಡಿಸಿಕೊಂಡು ಅವರನ್ನು ರಾಜಕೀಯದಿಂದ ದೂರವಿರಿಸಲು ತೀರ್ಮಾನಿಸಿದನು. ಅದರಂತೆ ಗುಡೇಕೋಟೆ ಪಾಳೆಯಗಾರ ಬೊಮ್ಮಂತರಾಜನ ಜೀವನ ನಿರ್ವಹಣೆಗೆ ಹುಜೂರ ಖಜಾನೆಯಿಂದ ಮಾಸಿಕ ೫೦೦ ರೂಗಳ ವಿಶ್ರಾಂತ ವೇತನವನ್ನು ನಿಗದಿಪಡಿಸಿದನು. ಅದರಂತೆ ಬೊಮ್ಮಂತರಾಜನು ಈಗ ಮೈಸೂರು ರಾಜರಿಗೆ ಸೇರಿರುವ ಚೋರನೂರಿನಲ್ಲಿ ಸಂತೋಷದಿಂದ ಇದ್ದಾನೆಂದು ಮೆಕಂಜಿ ತಿಳಿಸಿದ್ದಾನೆ.[11]

ಬಳ್ಳಾರಿ ಪ್ರದೇಶದ ಪಾಳೆಯಗಾರರು ತಮ್ಮನ್ನು ರಾಜಕೀಯದಿಂದ ದೂರವಿರಿಸಿದ ಬ್ರಿಟಿಷರ ಕ್ರಮದ ವಿರುದ್ಧ ಒಳಗಿಂದೊಳಗೆ ಅಸಮದಾನವಿದ್ದರೂ ಕೂಡ ಅದನ್ನು ಬಹಿರಂಗವಾಗಿ ತೋರ್ಪಡಿಸುವಂತಿರಲಿಲ್ಲ. ಅವರ ಜೀವನ ನಿರ್ವಹಣೆಗೆ ನೀಡುತ್ತಿದ್ದ ಮಾಸಿಕ ವಿಶ್ರಾಂತಿ ವೇತನವೂ ಕೂಡಾ ತೃಪ್ತಿಯಾಗಲಿಲ್ಲ. ಇದೇ ಸಂದರ್ಭದಲ್ಲಿ ಕ್ರಿ.ಶ ೧೮೨೮ರಲ್ಲಿ ಆ ಪ್ರದೇಶದಲ್ಲಿ ಕ್ಷಾಮ ಸಂಭವಿಸಿತು. ಪಾಳೆಯಗಾರ ಬೊಮ್ಮಂತರಾಜ ತನ್ನ ತಮ್ಮ ಲಿಂಗಪ್ಪ ಸಂಬಂಧಿ ರಾಮಪ್ಪಯ್ಯ ಮತ್ತಿತರ ಬೇಡ ಸಮುದಾಯದ ೫೦೦ ಜನರನ್ನು ಒಟ್ಟುಗೂಡಿಸಿ ಬ್ರಿಟಿಷರ ವಿರುದ್ಧ ದಂಗೆ ಎದ್ದನು ಇದನ್ನು ಪಾಳೆಯಗಾರರ ದಂಗೆ ಎಂದು ಕರೆಯಲಾಗಿದೆ. ಬಳ್ಳಾರಿ ಜಿಲ್ಲೆಯ ಕಲೆಕ್ಟರನ ಆದೇಶದ ಮೇರೆಗೆ ಅಲ್ಲಿನ ಅಮಲ್ದಾರನು ಹಡಗಲಿ, ಹರಪನಹಳ್ಳಿಯಿಂದ ಪೊಲೀಸರನ್ನು ಕರೆಯಿಸಿ ದಂಗೆಯನ್ನು ಹತ್ತಿಕ್ಕಿದನು. ಇಂತಹ ಬಂಡಾಯಗಳು ನಂತರ ೧೮೫೭ರಲ್ಲಿ ನಡೆದ ಬೃಹತ್ ಬಂಡಾಯಕ್ಕೆ ಸ್ಫೂರ್ತಿಯನ್ನು ನೀಡಿದ್ದಲ್ಲಿ ಸಂದೇಹವಿಲ್ಲ ಎಂದು ಹೇಳಬಹುದು.

ಸಾಂಸ್ಕೃತಿಕ ಅಂಶಗಳು

ಇಲ್ಲಿಯವರೆಗೆ ಗುಡೇಕೋಟೆ ಪಾಳೆಯಗಾರರ ಇತಿಹಾಸದಲ್ಲಿ ಕಂಡುಬರುವ ನಾಯಕರ ವೈಯಕ್ತಿಕ ಸಾಧನೆಗಳನ್ನು ಪರಿಚಯ ಮಾಡಿಕೊಂಡೆವು. ಈಗ ನಾವು ಅವರ ರಾಜಕೀಯ ಶಕ್ತಿಗೆ ಪ್ರಬಲ ಮಾಧ್ಯಮವಾಗಿದ್ದ ಸಮರ ವ್ಯವಸ್ಥೆಯನ್ನು ಪರಿಶೀಲಿಸೋಣ. ಈ ವ್ಯವಸ್ಥೆಗೆ ಸಂಬಂಧಿಸಿದಂತೆ ಬಹಳ ಮುಖ್ಯವಾದ ಅಂಶ ಕೋಟೆ ಅಥವಾ ದುರ್ಗ, ಕೋಟೆ ಇಲ್ಲದ ರಾಜ್ಯವನ್ನು ಊಹಿಸಿಕೊಳ್ಳುವುದೂ ಕಷ್ಟ. ಈ ಕೋಟೆ ನಿರ್ಮಾಣ ಮಾಡಲು ಸಮಕಾಲೀನ ಭೌಗೋಳಿಕ ನೆಲೆ ಒಂದೆಡೆಯಾದರೆ ಆ ಕಾಲದ ರಾಜ್ಯದ ತಂತ್ರಗಾರಿಕೆ, ರಾಜಕೀಯ ಪ್ರತಿಷ್ಠೆ, ಆರ್ಥಿಕ ಸ್ಥಿತಿಗತಿ ಮತ್ತೊಂದೆಡೆಯಾದರೆ ಆ ಕಾಲದ ರಾಜ್ಯದ ತಂತ್ರಗಾರಿಕೆ, ರಾಜಕೀಯ ಪ್ರತಿಷ್ಠೆ, ಆರ್ಥಿಕ ಸ್ಥಿತಿಗತಿ ಮತ್ತೊಂದೆಡೆಯಾಗಿದೆ. ಈ ಕೋಟೆ ನಿರ್ಮಾಣದಲ್ಲಿ ವಾಸ್ತುಶೈಲಿಗಳ ಪರಿಚಯ. ಕಲಾಭಿರುಚಿ ಸ್ಥಳೀಯವಾಗಿ ಲಭ್ಯವಾಗುವ ಶಿಲೆ ನಿರ್ಣಾಯಕ ಸಂಗತಿಗಳಾಗಿದ್ದವು. ದೇಗುಲ ವಾಸ್ತುಕಲೆಯಂತೆ ಇದೂ ಕೂಡಾ ಸಂಕೀರ್ಣವಾದುದು ಇಂತಹ ಕೋಟೆಯನ್ನು ತಮ್ಮ ರಕ್ಷಣೆಗೋಸ್ಕರ ಗುಡೇಕೋಟೆಯಲ್ಲಿ ಕಟ್ಟುವಾಗ ಪರಂಪರೆಯಿಂದ ಬಂದ ತತ್ವಗಳನ್ನು ಮತ್ತು ವಿನ್ಯಾಸಗಳನ್ನು ಅಲ್ಪಸ್ವಲ್ಪ ಸ್ಥಳೀಯ ಬದಲಾವಣೆಗಳೊಂದಿಗೆ ಅನುಸರಿಸಿದ್ದಾರೆ. ಗಂಡಳನಾಯಕನೇ ಈ ಕೋಟೆಯ ನಿರ್ಮಾತೃ. ಕ್ರಮೇಣ ಈ ಕೋಟೆ ಅವರ ಮನೆತನದ ಅನೇಕ ನಾಯಕರುಗಳ ಕಾಲದಲ್ಲಿ ವಿವಿಧ ಭಾಗಗಳು ಸೇರ್ಪಡೆಯಾಗಿರುವುದನ್ನು ಕಾಣುತ್ತೇವೆ. ಅಲ್ಲಿನ ಪಾಳು ಬಿದ್ದಿರುವಕೋಟೆಯ ಮತ್ತು ಅದಕ್ಕೆ ಬಳಸಲಾಗಿರುವ ಹೆಬ್ಬಂಡೆಯನ್ನು ನೋಡಿದ ರಾಬರ್ಟ್‌ ಬ್ರೂಸ್‌ ಪೂಟನು “ಇಷ್ಟು ಗಾತ್ರದ ಬಂಡೆ ಬಳಸಿರುವ ಕೋಟೆಯನ್ನು ದಕ್ಷಿಣ ಭಾರತದಲ್ಲಿ ಎಲ್ಲಿಯೂ ತಾನು ಕಂಡಿಲ್ಲವೆಂದು ತಿಳಿಸಿದ್ದಾನೆ”

ಅಭೇದ್ಯವಾದ ಈ ಗಿರಿದುರ್ಗಕ್ಕೆ ಆಯತಾಕಾರದ ಕಲ್ಲುಗಳನ್ನು ಬಳಸಿಕೊಳ್ಳಲಾಗಿದೆ. ಅವುಗಳನ್ನು ಒಂದರ ಮೇಲೊಂದರಂತೆ ಬೆಲ್ಲದ ಅಚ್ಚಿನಂತೆ ಪೇರಿಸಲಾಗಿದೆ. ಈ ಕೋಟೆಗೆ ಮಹಾದ್ವಾರ, ದಿಡ್ಡಿ ಬಾಗಿಲುಗಳಿವೆ. ಈ ಗಿರಿದುರ್ಗಕ್ಕೆ ಒಂದು ಸುತ್ತ ಗೋಡೆ ಇದೆ. ಇದನ್ನು ಮಲ್ಲದುರ್ಗ ಎಂದು ಕರೆಯುತ್ತಾರೆ. ಈ ಬೆಟ್ಟದ ದಕ್ಷಿಣದಿಂದ ಕೋಟೆಗೆ ಪ್ರವೇಶಿಸಲು ಮೆಟ್ಟಿಲುಗಳಿವೆ. ಎರಡೂ ಕಡೆ ಮಾರ್ಗದಲ್ಲಿ ಗೋಡೆಯನ್ನು ನಿರ್ಮಾನ ಮಾಡಲಾಗಿದೆ. ಈಗ ಆ ಗೋಡೆಗಳು ಸಂಪೂರ್ಣ ಹಾಳಾಗಿದ್ದು ಅದರ ಅವಶೇಷಗಳಿವೆ. ಸುಂದರವಾದ ಬತ್ತೇರಿಯನ್ನು (ಬುರುಜು) ಹೊಂದಿರುವ ಈ ದುರ್ಗದಲ್ಲಿ ಎಂಟು ವಿವಿಧ ಜಾಗದಲ್ಲಿ ಬಾಗಿಲುಗಳ ಅವಶೇಷಗಳಿವೆ. ಈ ಕೋಟೆಯಲ್ಲಿ ಪಾಳೆಯಗಾರರ ರಾಮರಾಜನಿಂದ ನಿರ್ಮಿಸಲಾದ ಮೂರು ಹೊಂಡಗಳನ್ನು ಕಾಣಬಹುದು. ಅವುಗಳನ್ನು ಮೆಕಂಜಿಯು ಗಚ್ಚಿನಹೊಂಡ, ಉಸುಕಿನ ಹೊಂಡ ಮತ್ತು ಖಣಜದ ಹೊಂಡ ಎಂದು ದಾಖಲಿಸಿದ್ದಾನೆ.

ಈ ದುರ್ಗದ ಮೇಲ್ಭಾಗದಲ್ಲಿ ಕೆಲವು ಕಣಜಗಳನ್ನು ಕಾಣುತ್ತೇವೆ. ಇವುಗಳನ್ನು ಸ್ಥಳೀಯರು ರಾಗಿ ಕಣಜ, ತುಪ್ಪದ ಕಣಜ ಎಂದು ಕರೆಯುವರು. ರಾಗಿ ಕಣಜವು ೩ ಕೋಣೆಗಳಿಂದ ಕೂಡಿದ್ದು ಮೇಲೆ ಹೋಗಲು ೩ ಚಿಕ್ಕ ಬಾಗಿಲುಗಳು ಸುಟ್ಟ ಇಟ್ಟಿಗೆ ಗಾರೆಯಿಂದ ನಿರ್ಮಿಸಲಾಗಿದೆ. ಇದು ೬೦ ಅಡಿ ಅಗಲವಿದೆ. ತುಪ್ಪದ ಕಣಜವನ್ನು ವಿಶಾಲವಾದ ಬಂಡೆಯ ಮೇಲೆ ಕಟ್ಟಿದ್ದು ಅದರಲ್ಲಿ ತುಪ್ಪವನ್ನು ಸಂಗ್ರಹಿಸುತ್ತಿದ್ದುದರಿಂದ ತುಪ್ಪದ ಕಣಜ ಎಂದು ಕರೆಯಲಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ಅನೇಕ ಗುಹೆಗಳನ್ನು ಕಾಣಬಹುದು. ಈ ಗುಹೆಗಳಿಗೆ ಕೊನೆ ಎಂಬುದೇ ಕಾಣಸಿಗುವುದಿಲ್ಲ. ಕೋಟೆ ಇರುವ ಬೆಟ್ಟವನ್ನು ದೊರೆ ಬೆಟ್ಟ ಎಂದು ಸ್ಥಳೀಯರು ಈಗಲೂ ಕರೆಯುತ್ತಾರೆ. ಕೆಳಗಣ ಕೊಟೆಯ ದಕ್ಷಿಣ ಭಾಗದ ಬುಡದಲ್ಲಿ ದಕ್ಷಿಣ ಮತ್ತು ಪೂರ್ವಕ್ಕೆ ೨ ದ್ವಾರಗಳಿವೆ ಅವು ಈಗ ಸಂಪೂರ್ಣ ನಾಶವಾಗಿವೆ ಎಂದು ಮೆಕಂಜಿ ದಾಖಲಿಸಿದ್ದಾನೆ. ಈ ಕೋಟೆಯ ದಕ್ಷಿಣ ಭಾಗಕ್ಕೆ ಮತ್ತೊಂದು ಬೆಟ್ಟವಿದ್ದು ಅದನ್ನು ಹುಣಸಮಾರನಗುಡ್ಡ ಎಂದು ಕರೆಯುವರು. ಗುಡೇಕೋಟೆ ಪಾಳೆಯಗಾರರು ಇದನ್ನು ತಮ್ಮ ಹೊರಕೋಟೆಯನ್ನಾಗಿ ಮಾಡಿಕೊಂಡು ಅಲ್ಲಿಗೆ ಕೈಲಸೈನಿಕರನ್ನು ಗಡಿಕಾಯಲು ನೇಂಕ ಮಾಡುತ್ತಿದ್ದಾರೆಂದು ಹೇಳಲಾಗಿದೆ. ಈ ಕೋಟೆಯ ಈಶಾನ್ಯ ದಿಕ್ಕಿಗೆ ಮತ್ತೊಂದು ಬೆಟ್ಟವಿದ್ದು ಅದರಲ್ಲಿ ೪ ಬತ್ತೇರಿಗಳಿವೆ ಈ ಬೆಟ್ಟಕ್ಕೆ ಚಿತ್ರದುರ್ಗ ಮದಕರಿ ನಾಯಕನು ಕೋಟೆ ನಿರ್ಮಿಸಿದ್ದನೆಂದು ಮೆಕಂಜಿ ತಿಳಿಸುತ್ತಾನೆ. ಆಗ್ನೇಯ ದಿಕ್ಕಿಗೆ ಮತ್ತೊಂದು ಬೆಟ್ಟವಿದೆ ಅಲ್ಲಿಯೂ ಬತ್ತೇರಿ, ಕಾವಲು ಗೋಪುರವಿದೆ. ಇವುಗಳನ್ನು ಟಿಪ್ಪುಸುಲ್ತಾನನು ನಾಶಗೊಳಿಸಿದನು. ಈ ನಾಲ್ಕು ಬೆಟ್ಟಗಳ ಮಧ್ಯೆ ಗುಡೇಕೋಟೆ ಊರು ಇದೆ.

ಕ್ರಿ.ಶ. ೧೮೦೦ರಲ್ಲಿ ಬ್ರಿಟೀಷರ ಅಧಿನಕ್ಕೆ ಒಳಪಟ್ಟ ಗುಡೀಕೋಟೆಯನ್ನು ಆರು ಸಂಮತು ಅಥವಾ ತರಫ್‌ಗಳನ್ನೊಳಗೊಂಡ ಜಿಲ್ಲಾಕೇಂದ್ರವನ್ನಾಗಿ ಮಾಡಲಾಯಿತು. ಮೆಕಂಜಿ ದಾಖಲೆಯ ಉಲ್ಲೇಖದಂತೆ ಕ್ರಿ.ಶ. ೧೭೯೯ – ೧೮೦೦ರ ಆ ಜಿಲ್ಲೆಯ ಅಮಲ್ದಾರ ಮತ್ತು ಶ್ಯಾನುಬೋಗರ ವರದಿಯ ಪ್ರಕಾರ “ಗುಡೇಕೋಟೆ, ಚೋರನೂರು, ದೇವಸಮುದ್ರ, ಉಮಾಮಹೇಶ್ವರದುರ್ಗ, ಸೂಯನಹಳ್ಳಿ, ಸಿರೆಕೊಳ್ಳಗಳನ್ನೊಳಗೊಂಡ ಗುಡೇಕೋಟೆಯ ಜಿಲ್ಲೆಯಾಗಿತ್ತು.”

ಗುಡೇಕೋಟೆ ಜಿಲ್ಲೆಯ ವಿವಿಧ ಮಾಹಿತಿನ್ನೊಳಗೊಂಡ ಪಟ್ಟಿ ೧೭೯೯ರಲ್ಲಿ ತಯಾರಿಸಿದ್ದು.

ಗ್ರಾಮ ನೀರು
ಸಂಮತು ಹೆಸರು ಅಸಲಿ ದಕನಲಿ ವಾಸ ನಾಶ ಒಟ್ಟು ನದಿ ಕೆರೆ ಕಾಲುವೆ ಬಾವಿ ಕಪಿಲೆ ಗಿರಿದುರ್ಗ ಮನೆ
ಗುಡೀಕೋಟೆ
(ಬಳ್ಳಾರಿ ಜಿಲ್ಲೆ)
೫೭ = ೨೩ ೩೪ ೫೭  – ೧೪೮ ೪೭೫
ಚೋರನೂರು
(ಬಳ್ಳಾರಿ ಜಿಲ್ಲೆ)
೧೮ ೧೦ ೧೨ ೧೬ ೨೮  – ೧೯  –  –  – ೬೨೯
ಸೊಯನಹಳ್ಳಿ (ಚಿತ್ರದುರ್ಗಜಿಲ್ಲೆ) ೧೮ ೧೧ ೧೯ ೧೦ ೨೯  – ೧೩  ೧ ೧೩ ೪೯೯
ಸೀರೆಕೊಳ್ಳ
(ಚಿತ್ರದುರ್ಗ ಜಿಲ್ಲೆ)
೧೭ ೧೫ ೧೮  –  – ೧೬ ೧೨೧ ೫೬೨
ದೇವಸಮುದ್ರ (ಚಿತ್ರದುರ್ಗಜಿಲ್ಲೆ) ೧೬ ೧೪ ೧೮  –  – ೧೦೧  – ೭೧೫
ಉಮಾಮಹೇಶ್ವರ ೧೬ ೧೦ ೧೯  –  – ೨೫೧
ಒಟ್ಟು ೧೪೨ ೨೭ ೯೩ ೭೬ ೧೬೯ ೪೩ ೪೭ ೩೭೨ ೩೧೩೧

ಈ ಮೇಲಿನ ಅಂಕಿ ಅಂಶಗಳನ್ನು ನೋಡಿದರೆ ಗುಡೇಕೋಟೆ ಪಾಳೆಯಗಾರರ ಕಾಲದಲ್ಲಿಯೂ ಕೂಡಾ ಹೆಚ್ಚು ಗ್ರಾಮ ನೀರು ಮನೆಗಳ ಸಂಖ್ಯೆ ಇಷ್ಟೇ ಇದ್ದಿರಬಹುದು ಎಂದು ಹೇಳಬಹುದು. ಅವರ ಪ್ರಾಂತ್ಯವೂ ಕೂಡಾ ಇಷ್ಟೇ ವಿಸ್ತಾರ ಇದ್ದಿತೆಂದು ಊಹಿಸಲಾಗಿದೆ. ಅಂದರೆ ಈ ಪಾಳೆಯಗಾರರಿಗೆ ಇಂದಿನ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರ ತಾಲ್ಲೂಕಿನ ಕೆಲ ಭಾಗಗಳೂ ಸೇರಿದ್ದವು. ಈ ಪ್ರದೇಶದಲ್ಲಿ ವ್ಯವಸಾಯವೇ ಜನರಮುಖ್ಯ ಕಸುಬಾಗಿದ್ದಿತು. ಅವರು ಭತ್ತ, ರಾಗಿ, ಜೋಳ ಮುಖ್ಯ ಬೆಳೆಯನ್ನಾಗಿ ಬೆಳೆಯುತ್ತಿದ್ದರು. ಕಬ್ಬಿಣದ ಅದಿರನ್ನು ಇಲ್ಲಿ ತೆಗೆಯಲಾಗುತ್ತಿದ್ದು, ಉಪ್ಪನ್ನು ತಯಾರಿಸುವ ಕೈಗಾರಿಕೆಗಳಿದ್ದವು. ಉತ್ತಮವಾದ ಕಂಬಳಿಯನ್ನು ನೇಯಲಾಗುತ್ತಿತ್ತು. ಒಂದು ಕಂಬಳಿಯು ೪ ಪಗೋಡ ಹಣಕ್ಕೆ ಮಾರಾಟವಾಗುತ್ತಿತ್ತೆಂದು ಮೆಕಂಜಿಯು ತಿಳಿಸಿದ್ದಾನೆ. ಹತ್ತಿಯಿಂದ ನೂಲನ್ನು ತೆಗೆದು ಬಟ್ಟೆ ತಯಾರಿಸಲಾಗುತ್ತಿತ್ತು. ರೇಷ್ಮೆ ವಸ್ತ್ರ ತಯಾರಿಕೆ ಚಾಲ್ತಿಯಲ್ಲಿತ್ತು. ರೇಷ್ಮೆ ನೇಯುವವರು ಗುಡೇಕೋಟೆಯಿಂದ ಮೊಳಕಾಲ್ಮೂರಿಗೆ ವಲಸೆ ಹೋದರೆಂದು ಮೆಕಂಜಿ ತಿಳಿಸುತ್ತಾ ಅಲ್ಲಿಯೂ ಕೂಡಾ ಈಗ ರೇಷ್ಮೆ ತಯಾರಿಕಾ ಕುಟುಂಬಗಳು ಇಲ್ಲವೆಂದು ದಾಖಲಿಸಿದ್ದಾನೆ. ಆನೆಗಳನ್ನು ಹೊರತುಪಡಿಸಿ ಹುಲಿಯೂ ಸೇರಿದಂತೆ ಅನೇಕ ಕ್ರೂರ ಪ್ರಾಣಿಗಳು ಈ ಪ್ರದೇಶದ ಕಾಡಿನಲ್ಲಿದ್ದವೆಂದೂ ಕೂಡಾ ಅವನು ತಿಳಿಸುತ್ತಾನೆ.

ಗುಡೇಕೋಟೆ ಪಾಳೆಯಪಟ್ಟಿನ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಜಾತಿಗಳ ಜೊತೆಗೆ ಅನೇಕ ಜಾತಿಗಳು ಇದ್ದವು. ಇಲ್ಲಿರುವ ಜಾತಿ, ಉಪಜಾತಿಗಳು ವೈವಿಧ್ಯಪೂರ್ಣವಾಗಿದ್ದು ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಸವಾಗಿದ್ದರು. ಗ್ರಾಮಗಳೇ ಅತಿ ಹೆಚ್ಚು ಇದ್ದ ಈ ಪಾಳೆಯಪಟ್ಟಿನಲ್ಲಿ ಮೆಕಂಜಿಯು ಅನೇಕ ಜಾತಿಯ ಕುಟುಂಬಗಳ ವಿವರಣೆಯನ್ನು ನೀಡಿದ್ದಾನೆ. ಅದರ ವಿವರ ಈ ಕೆಳಕಂಡಂತಿದೆ.

ಗುಡೇಕೋಟೆ ತರಫ್‌ನಲ್ಲಿ ಬ್ರಾಹ್ಮಣರ – ೮, ವೈಶ್ಯ – ೫, ಕುಂಚಟಿಗ – ೮, ವೈಶ್ಯ – ೫, ಕುಂಚಟಿಗ – ೮, ಲಿಂಗಾಯಿತ – ೧೬೩, ರೆಡ್ಡಿ – ೬, ರಜಪೂತ – ೧, ಗೊಲ್ಲ – ೪೩, ನೇಕಾರ – ೨, ಕುಂಬಾರ – ೩, ನಾಯಿಂದ – ೩, ಅಗಸ – ೯, ಮೇದರ – ೩, ಪಾಂಚಾಲ – ೧೯, ಈಡಿಗ – ೧, ಮೊದಲಿಯಾರ್ – ೧೨, ಬೇಡರು – ೩೫, ಹೊಲೆಯ – ೨, ಮಾದಿಗ – ೨೪, ಮುಸಲ್ಮಾನ – ೫, ಕುಟುಂಬಗಳಿದ್ದವೆಂದು ಹೇಳಿದ್ದಾನೆ. ಇವರೇ ಅಲ್ಲದೆ ಈ ಪ್ರದೇಶದಲ್ಲಿ ಜೈನರು, ಜಲಗಾರರು, ಕೊರಚರು, ಕಮ್ಮಾರ, ಜೇಡರು, ಇದ್ದರೆಂದು ತಿಳಿಸುತ್ತಾನೆ ಅವನ ದಾಖಲೆಯನ್ನು ಪರಿಶೀಲಿಸಿದರೆ ಗುಡೇಕೋಟೆ ಸಂಮತುವಿನಲ್ಲಿ ಬೇಡರ ೮೦೦ ಕುಟುಂಬಗಳನ್ನು ಬಿಟ್ಟರೆ ಅತಿ ಹೆಚ್ಚು ಲಿಂಗಾಯತ ೭೧೩ ಕುಟುಂಬಗಳಿದ್ದವು. ಸಮಾಜದಲ್ಲಿ ಈ ಎರಡೂ ಜನಾಂಗಗಳೇ ಪ್ರಬಲವಾಗಿದ್ದವು. ಎಂದು ಹೇಳಬಹುದು. ಕೇವಲ ೭೬ ಕುಟುಂಬಗಳಿದ್ದ ಬ್ರಾಹ್ಮಣ ಜನಾಂಗವು ಈ ಪ್ರಾಂತ್ಯದಲ್ಲಿ ಹಳ್ಳಿಗಳಿಗಿಂತ ಹೆಚ್ಚಾಗಿ ಪಟ್ಟಣದಲ್ಲಿಯೇ ವಾಸಿಸುತ್ತಿದ್ದರೆಂದು ಊಹಿಸಬಹುದು. ವೀರಶೈವರು ಮತ್ತು ಬೇಡರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿಯೂ ನೆಲಸಿದ್ದರು ಲಿಂಗಾಯಿತರು ವ್ಯಾಪಾರ ಮತ್ತು ವ್ಯವಸಾಯ ಎರಡರಲ್ಲೂ ಪ್ರಧಾನ ಪಾತ್ರವಹಿಸಿದ್ದರು. ಇವರ ಸಾಮಾಜಿಕ ಸಿದ್ಧಾಂತ ಅನೇಕ ರೀತಿಯಲ್ಲಿ ಇತರ ಹಿಂದೂ ಸಮೂಹ ಅಥವಾ ಪಂಥಗಳಿಗಿಂತ ಭಿನ್ನವಾಗಿತ್ತು. ಹೀಗೆ ಈ ಪ್ರದೇಶದಲ್ಲಿ ಪ್ರಾಚೀನ ಪರಂಪರೆಗೆ ಅನುಗುಣವಾಗಿ ಜಾತಿಪದ್ಧತಿಯ ಆಧಾರದ ಮೇಲೆ ಸಮಾಜ ರೂಪುಗೊಂಡಿದ್ದರೂ ವರ್ಣಪದ್ಧತಿ ಜಾತಿಪದ್ಧತಿಯಾಗಿ ಮಾರ್ಪಾಡುಗೊಂಡು ವೈವಿಧ್ಯರೀತಿಯಲ್ಲಿ ಬೆಳೆದದ್ದು ಕಂಡುಬರುತ್ತದೆ. ಈ ಎಲ್ಲಾ ಜಾತಿಗಳು ತನ್ನದೇ ಆದ ವಿಶಿಷ್ಟವಾದ ಸಾಮಾಜಿಕ ನಂಬಿಕೆಗಳಿಂದ ಬೆಂದು ಬಂದಿದ್ದವೆಂದು ಹೇಳಬಹುದು.

ನಾಲ್ಕು ಗುಡ್ಡಗಳ ತಪ್ಪಲಿನಲ್ಲಿರುವ ಗುಡೇಕೋಟೆಯಲ್ಲಿ ಪಾಳೆಯಗಾರರು ಕಾಲದಲ್ಲಿ ನಿರ್ಮಿಸಿದ ದೇವಾಲಯಗಳೇ ಅಲ್ಲದೇ ಅದಕ್ಕಿಂತ ಹಿಂದಿನ ಮತ್ತು ಇತ್ತೀಚಿನ ಸ್ಮಾರಕಗಳನ್ನು ಕಾಣಬಹುದು. ಪಾಳೆಯಗಾರರು ತಮಗಿಂತ ಹಿಂದಿನ ದೇವಾಲಯಗಳನ್ನು ನವೀಕರಿಸಿದ್ದೇ ಅಲ್ಲ ಅವರು ತಮಗೆ ಬೇಕಾದ ದೇವಾಲಯಗಳನ್ನು ಕಟ್ಟಿಕೊಂಡರು. ಅವರ ಕಾಲದಲ್ಲೇ ನಿರ್ಮಿಸಲಾದ ದೇವಾಲಯಗಳೆಂದರೆ ಈಶ್ವರ ದೇವಾಲಯ, ರಾಮಲಿಂಗೇಶ್ವರ ದೇವಾಲಯ, ಉಮಾಮಹೇಶ್ವರಿ ದೇವಾಲಯ, ಲಕ್ಷ್ಮಿವೆಂಕಟೇಶ್ವರ ದೇವಾಲಯ. ಪಾಳೆಯಗಾರರ ಪೂರ್ವದ ದೇವಾಲಯಗಳೆಂದರೆ ಚೌಳೇಶ್ವರ ಮತ್ತು ಪಂಚಲಿಗೇಶ್ವರ ದೇವಾಲಯಗಳು. ಚೌಡಮ್ಮ, ಮರಿಯಮ್ಮ, ಬಸವಣ್ಣ, ಕಾಳಮ್ಮ, ಇತ್ತೀಚಿನ ದೇವಾಲಯಗಳಾಗಿವೆ.

ವಾಸ್ತುಶಿಲ್ಪದ ದೃಷ್ಟಿಯಿಂದ ಪ್ರಮುಖ ದೇಗುಲವೆಂದರೆ, ಉಮಾಮಹೇಶ್ವರಿ ದೇಗುಲವಾಗಿದೆ. ಸ್ಥಳೀಯ ಗ್ರಾನೈಟ್, ಗಾರೆ, ಇಟ್ಟಿಗೆ, ಮರದ ತುಂಡಿನಿಂದ ಕಟ್ಟಲಾಗಿದೆ. ಗರ್ಭಗುಡಿ, ಅಂತರಾಳ, ನವರಂಗ ಮಂಟಪಗಳಿಂದ ಸರಳವಾಗಿ ರಚನೆಯಾಗಿದೆ. ಗೋಪುರ ಇಟ್ಟಿಗೆಯಿಂದ ರಚಿತವಾಗಿದ್ದು ಸುತ್ತು ಗೋಡೆಯನ್ನು ಕಟ್ಟಲಾಗಿದೆ. ದೇವಾಲಯದ ದ್ವಾರದ ಬದಿಯಲ್ಲಿ ಗಣೇಶ, ಮಹಿಷ ವಿಗ್ರಹಗಳಿದ್ದು, ೩ ಅಡಿ ಎತ್ತರದ ನಂದಿಶಿಲ್ಪವಿದೆ. ಗರ್ಭಗೃಹದಲ್ಲಿನ ಉಮಾಮಹೇಶ್ವರ ಆಕರ್ಷಣೀಯವಾಗಿದೆ. ಇದು ಸುಮಾರು ೩ ಅಡಿ ಎತ್ತರದ ಪೀಠದ ಮೇಲೆ ೬ ಅಡಿ ಎತ್ತರದ ಕಪ್ಪು ಶಿಲೆಯ ವಿಗ್ರಹವಾಗಿದೆ. ಶಿವನು ನಾಲ್ಕು ಕೈಗಳಲ್ಲಿ ಎಡದ ಭಾಗದ ಹಿಂಬದಿ ಕೈಯಲ್ಲಿ ತ್ರಿಶೂಲ ಹಿಡಿದು ಅದರಲ್ಲಿ ಕುಂಡವಿದೆ. ಬಲ ಬದಿಯ ಹಿಂಗೈಯಲ್ಲಿ ಢಮರುಗ ಹಿಡಿದ ಶಿವ ಮುಂಗೈಯನ್ನು ಬಲತೊಡೆಯ ಸುಖಾಸೀನಳಾದ ಪಾರ್ವತಿಯು ಎರಡು ಕಾಲುಗಳನ್ನು ಕೆಳಗೆ ಬಿಟ್ಟು ದ್ವಿಬಾಹುಗಳನ್ನು ಎಡಗೈಯಲ್ಲಿ ಕಟುವಾಂಗ ಹಿಡಿದು ಬಲಗೈಯಿಂದ ಶಿವನ ಕೊರಳು ಬಳಸಿ ಹಿಡಿದು ಕುಳಿತಿದ್ದಾಳೆ. ಪೀಠದ ಕೆಳಭಾಗದಲ್ಲಿ ನಂದಿಯ ಉಬ್ಬುಶಿಲ್ಪವಿದೆ.

ಈಶ್ವರ ದೇವಾಲಯವನ್ನು ಸ್ಥಳೀಯರು ಏಣಿ ಈರಪ್ಪನ ಗುಡಿ ಎಂದು ಕರೆಯುವರು. ಗರ್ಭಗುಡಿಯಲ್ಲಿನ ಲಿಂಗವು ಶಿಥಿಲವಾಗಿದ್ದು ನಂದಿಶಿಲ್ಪವೂ ಭಿನ್ನವಾಗಿರುವುದು ಶೋಚನೀಯವಾಗಿದೆ. ನಿಧಿ ಚೋರರು ಈ ರೀತಿ ಭಗನಗೊಳಿಸಿದ್ದಾರೆಂದು ಹೇಳಲಾಗುತ್ತಿದೆ. ದೇವಾಲಯದ ನಾಲ್ಕು ಕಂಬಗಳು ಚೌಕಾಕಾರವಾಗಿದ್ದು, ವೃತ್ತಾಕಾರದ ಬೋದಿಗೆಯನ್ನು ಹೊಂದಿವೆ. ಗೋಡೆಯ ಮೇಲೆ ನಂದಿ ಮತ್ತು ನಾಗಶಿಲ್ಪಗಳಿವೆ. ಗ್ರಾನೈಟ್ ಕಲ್ಲಿನಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು ಗಾರೆ ಮತ್ತು ಇಟ್ಟಿಗೆ ಕೂಡಾ ಬಳಸಲಾಗಿದೆ. ಗುಡೇಕೋಟಿ ಪಾಳೆಯಗಾರ ಬೊಮ್ಮಂತರಾಜನಿಂದ ನಿರ್ಮಾಣಗೊಂಡ ಕೆರೆಯ ಉಮಾಮಹೇಶ್ವರನ ಗುಡಿಯ ಪಶ್ಚಿಮಕ್ಕೆ ಇದೆ. ಇದನ್ನು ಬೊಮ್ಮಲಿಂಗನಕೆರೆ ಎಂದು ಕರೆಯಲಾಗುತ್ತಿದೆ. ಇಲ್ಲಿನ ಸ್ಮಾರಕಗಳಲ್ಲಿ ಉಪ್ಪರಿಗೆ ಮಹಲ್ ಅತ್ಯಂತ ಆಕರ್ಷಕವಾಗಿದೆ. ಕೂಡ್ಲಿಗೆಯ ಮೂಲಕ ಗುಡೀಕೋಟೆ ಪ್ರವೇಶಿಸುವಾಗ ಇದು ಸಿಗುತ್ತದೆ. ಇದು ಶಿಥಿಲಾವಸ್ಥೆಯಲ್ಲಿದೆ ಇದನ್ನು ಅಂಗವಿಕಲ ಮಹಲ್ ಎಂದೂ ತಂಗಾಳಿ ಮಹಲ್‌ ಎಂದೂ ಕರೆಯುವರು. ಇದನ್ನು ಕಲ್ಲು, ಇಟ್ಟಿಗೆ, ಗಾರೆ ಬಳಸಿ ಕಟ್ಟಲಾಗಿದೆ.

ಒಟ್ಟಿನಲ್ಲಿ ಗುಡೇಕೋಟೆಯಲ್ಲಿರುವ ಪ್ರಾಚೀನವಶೇಷಗಳು ನಾಶವಾಗುವ ಹಂತದಲ್ಲಿರುವುದರಿಂದ ಅವುಗಳನ್ನು ರಕ್ಷಣೆ ಮಾಡಬೇಕಾದುದು ಸ್ಥಳೀಯ ಜನತೆಯ ಜೊತೆಗೆ ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಇದನ್ನು ವ್ಯವಸ್ಥಿತವಾಗಿ ಮಾಡಿದರೆ ಅಂತಹ ಸಂಸ್ಕೃತಿಯನ್ನು ನಮ್ಮ ಭವಿಷ್ಯದ ಜನಾಂಗಕ್ಕೆ ಮುಂದುವರಿಸಬಹುದು, ಇದರಿಂದ ಮಾನವನ ಬದುಕು ಅರ್ಥಪೂರ್ಣವಾಗುತ್ತದೆ.

ಗುಡೇಕೋಟೆ ಪಾಳೆಯಗಾರರ ವಂಶಾವಳಿ

04_79_KKAM-KUH 

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1] ಮೆಕಂಜಿ ಇಂಗ್ಲೀಷ್ ದಾಖಲೆ

[2] ಚಿತ್ರದುರ್ಗ ಜಿಲ್ಲೆಯೂ ಸೇರಿದಂತೆ ದಾವಣೆಗೆರೆ ಜಿಲ್ಲೆಯ ಜಗಲೂರು, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಹೊಸಪೇಟೆ, ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕುಗಳ ವ್ಯಾಪ್ತಿ ಒಳಗೊಂಡಿದೆ. ಮ್ಯಾಸ ಮಂಡಲವನ್ನು ಆಡಳಿತಾತ್ಮಕವಾದ ಭೌತಿಕ ಗಡಿಗಳನ್ನು ಮೀರಿದ ಒಂದು ಸಾಂಸ್ಕೃತಿಕ ಗಡಿ ಎಂದು ಭಾವಿಸಬೇಕಾಗುತ್ತದೆ.

[3] ಮೆಕಂಜಿ ಅಪ್ರಕಟಿತ ಕೈಫಿಯತ್ತು.

[4] ಮೆಕಂಜಿ ಇಂಗ್ಲೀಷ್ ದಾಖಲೆ

[5] ಮೆಕಂಜಿ ಅಪ್ರಕಟಿತ ಕೈಫಿಯತ್ತು.

[6] ಅದೇ.

[7] ಅದೇ.

[8] ಅದೇ.

[9] ಅದೇ.

[10] ಅದೇ.

[11] ಅದೇ.