ಅವನತಿ ಹಂತ

ಈ ವೇಳೆಗಾಗಲೀ ಚಿತ್ರದುರ್ಗವು ದಕ್ಷಿಣ ಭಾರತದಲ್ಲಿ ಒಂದು ಬಲಿಷ್ಠ ಸಂಸ್ಥಾನವಾಗಿತ್ತು ಮರಾಠರು ಮತ್ತು ಹೈದರ್‌ದುರ್ಗದ ದೊರೆಗಳ ಸಹಾಯವಿಲ್ಲದೆ ಏನೂ ಮಾಡದ ಸ್ಥಿತಿಯಲ್ಲಿದ್ದರು ಇಕ್ಕೇರಿ, ಬಂಕಾಪುರ ಮುಂತಾದ ಬಲಾಡ್ಯ ಕೋಟೆಗಳನ್ನು ಮದಕರಿಯು ಹೈದರನಿಗೆ ಗೆದ್ದು ಕೊಟ್ಟಿದ್ದನು. ಗುತ್ತಿಯ ಮೇಲಿನ ದಾಳಿಯಲ್ಲಿ ಮದಕರಿಯು ಹೈದರನಿಗೆ ಸಹಾಯ ಮಾಡಿ ಆ ಕೋಟೆಯ ಗೆಲುವಿಗೆ ಕಾರಣನಾಗಿದ್ದನು. ಮದಕರಿಯ ಶಕ್ತಿಯನ್ನು ಅರಿತಿದ್ದ ಹೈದರಾಲಿಯ ಭವಿಷ್ಯದಲ್ಲಿ ಸ್ನೇಹ ನಿಧಾನವಾಗಿ ದ್ವೇಷ, ಸಂದೇಹದ ಕಡೆ ಹೊರಳಿತು. ಇಂತಹ ಸನ್ನಿವೇಷದಲ್ಲಿ ಹೈದರನು ಶ್ರೀರಂಗಪಟ್ಟಣಕ್ಕೆ ಹಿಂತಿರುಗಿದನು. ಚಿತ್ರದುರ್ಗದಲ್ಲಿದ್ದ ಮದಕರಿಯು (ಕ್ರಿ.ಶ. ೧೭೫೫ – ೧೭೭೯) ಸುಮ್ಮನೆ ಕೂರದೆ ಮರಾಠರ ಸ್ನೇಹವನ್ನು ಸಂಪಾದಿಸಿ ಅವರಿಗೆ ಹೈದರನಿಗೆ ಸೇರಿದ್ದ ಹಲವಾರು ಕೋಟೆಗಳನ್ನು ಗೆದ್ದುಕೊಟ್ಟನು. ಕೋಪಗೊಂಡ ಹೈದರಾಲಿಯು ಮದಕರಿಯ ಸೊಕ್ಕನ್ನು ಮುರಿಯಲು ಸೇನಾ ಸಮೇತನಾಗಿ ದುರ್ಗದ ಮೇಲೆ ದಾಳಿ ಮಾಡಲು ಹೊರಟನು. ಮಾರ್ಗ ಮಧ್ಯದಲ್ಲಿ ಅವನು ರತ್ನಗಿರಿಯಲ್ಲಿ ತಂಗಿದ್ದನು. ಈ ಸುದ್ದಿ ಶೀಘ್ರವಾಗಿ ಚಿತ್ರದುರ್ಗವನ್ನು ತಲುಪಿತು. ಮದಕರಿಯೂ ಕೂಡಾ ಹೈದರನನ್ನು ಎದುರಿಸಲು ಸಜ್ಜಾಗಿ ತನ್ನ ಆಶ್ರಿತ ಸಂಸ್ಥಾನಗಳಿಗೆ ಸೇನೆಯನ್ನು ಕಳುಹಿಸಿಕೊಡುವಂತೆ ಪತ್ರ ಬರೆದನು. ಇಂತಹ ಪತ್ರ ಜರೆಮಲೆಯ ನಾಯಕರಿಗೂ ತಲುಪಿತು. ಅಲ್ಲಿದ್ದ ಬೊಮ್ಮಣ್ಣನಾಯಕನು ಸೇನೆಯನ್ನು ಸಂಗ್ರಹಿಸಿ ಸಂಸ್ಥಾನದ ವ್ಯವಹಾರವನ್ನು ತನ್ನ ಸೋದರನಾದ ಮಲ್ಲಿಕಾರ್ಜುನ ನಾಯಕನಿಗೆ ವಹಿಸಿ ಚಿತ್ರದುರ್ಗದತ್ತ ಹೊರಟನು. ಆ ವೇಳೆಗೆ ಹಯದರನು ದುರ್ಗಕ್ಕೆ ಮುತ್ತಿಗೆ ಹಾಕಿ ಮೂರು ತಿಂಗಳುಗಳಾದವು. ಈ ಸನ್ನಿವೇಶದಲ್ಲಿ ದುರ್ಗದವರು ಹೈದರನೊಂದಿಗೆ ಒಪ್ಪಂದವೇನಾದರೂ ಮಾಡಿಕೊಳ್ಳಬೇಕಾದ ಸಂದರ್ಭ ಒದಗಿದರೆ ಸೆರೆಮನೆಯಲ್ಲಿದ್ದ ಜರಿಮಲೆ ನಾಯಕ ಇಮ್ಮಡಿನಾಯಕನನ್ನು ಬಿಡುಗಡೆ ಮಾಡಬೇಕಾಗಬಹುದು ಅವನು ತೊಂದರೆ ಕೊಡುವ ವ್ಯಕ್ತಿ ಅಲ್ಲದೆ ಬಲಾಢ್ಯ ಎಂದು ಆಲೋಚನೆ ಮಾಡಿ ಮದಕರಿ ನಾಯಕನು ಇಮ್ಮಡಿನಾಯಕನ್ನು ಕೊಲೆ ಮಾಡಿದನು.

[1] ಈ ಸುದ್ದಿ ಜರಿಮಲೆಯಲ್ಲಿದ್ದ ಮಲ್ಲಿಕಾರ್ಜುನ ನಾಯಕನಿಗೆ ತಿಳಿದಾಗ ತಮ್ಮ ತಂದೆಗಾದ ಗತಿ ತಮಗೂ ಬರಬಹುದು ಎಂದು ಆಲೋಚಿಸಿ ತನ್ನ ಸೋದರ ಬೊಮ್ಮಣ್ಣನಾಯಕನಿಗೆ ದುರ್ಗದಿಂದ ತಪ್ಪಿಸಿಕೊಂಡು ಬರುವಂತೆ ಸುದ್ದಿ ಕಳುಹಿಸಿದನು. ತನ್ನ ತಂದೆಯ ಸಾವಿನ ಸುದ್ದಿ ಕೇಳಿದ ಬೊಮ್ಮಣ್ಣನಾಯಕನು ದುರ್ಗದವರು ವಿಶ್ವಾಸ ದ್ರೋಹಿಗಳೆಂದು ಭಾವಿಸಿ ಜರಿಮಲೆಗೆ ತಪ್ಪಿಸಿಕೊಂಡು ಹೋದನು. ಸೋದರ ರಿಬ್ಬರೂ ದುರ್ಗದವರ ಬಗೆಗೆ ಎಚ್ಚರವಿರಬೇಕೆಂದು ಭಾವಿಸಿ, ತನ್ನ ಸಂಸ್ಥಾನದ ರಕ್ಷಣೆಗೆ ಹೈದರಾಲಿಗೆ ದುರ್ಗದ ನಾಯಕನ ವಿಶ್ವಾಸ ದ್ರೋಹಿತನವನ್ನು ವಿವರಿಸಿ ಪತ್ರ ಬರೆದನು. ಇದಕ್ಕೆ ಹೈದರಾಲಿಯು ಕೊಟ್ಟ ಉತ್ತರ ಹೀಗಿತ್ತು.[2] “ನೀವೇನೂ ಯಾವುದಕ್ಕೂ ಹೆದರಬೇಡಿ ಪಟ್ಟಣಕ್ಕೆ ಭೇಟಿ ನೀಡಿ ನಾನು ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ” ಆದುದರಿಂದ ಜರಿಮಲೆಯ ಸೋದರರಿಬ್ಬರೂ ಶ್ರೀರಂಗಪಟ್ಟಣಕ್ಕೆ ಹೋಗಿ ವೈಯಕ್ತಿಕವಾಗಿ ಹೈದರಾಲಿಯನ್ನು ಭೇಟಿಮಾಡಿ ಎಲ್ಲಾ ವಿಚಾರಗಳನ್ನು ವಿವರಿಸಿದರು. ಇದರಿಂದ ಸಂತೃಪ್ತಿಗೊಂಡ ಹೈದರನು ಅವರನ್ನು ಕೆಲಕಾಲ ತನ್ನ ಬಳಿಯೇ ಇಟ್ಟುಕೊಂಡು ರಕ್ಷಣೆ ನೀಡಿದನು.

ಚಿತ್ರದುರ್ಗದವರನ್ನು ಸೋಲಿಸಲೇಬೇಕೆಂಬ ಛಲದಿಂದ ಹೈದರಾಲಿಯು ಕೊನೆ ಬಾರಿಗೆ ದುರ್ಗಕ್ಕೆ ಮುತ್ತಿಗೆ ಹಾಕಿದನು. ನಾಯಕನ ಸೈನ್ಯದಲ್ಲಿದ್ದ ಕೆಲವು ಕುತಂತ್ರಿಗಳು ತಮ್ಮ ನಾಯಕನಿಗೆ ಮೋಸಮಾಡಿ ಹೈದರನ ಜೊತೆ ಶಾಮೀಲಾದರು. ಕ್ರಿ.ಶ. ೧೭೭೯ ದುರ್ಗ ಹೈದರನ ವಶವಾಯಿತು. ಮದಕರಿಯನ್ನು ಮತ್ತು ಅವನ ಬಂಧುಗಳನ್ನು ಸೆರೆಹಿಡಿದು ಶ್ರೀರಂಗಪಟ್ಟಣಕ್ಕೆ ಸಾಗಿಸಲಾಯಿತು. ಮದಕರಿಯ ಸೋಲಿನ ಸುದ್ದಿಯಿಂದ ಸಂತೋಷಗೊಂಡ ಜರಿಮಲೆಯವರು ಪುನಃ ತನ್ನ ವಿಚಾರಗಳನ್ನು ಹೈದರನಲ್ಲಿ ಭಿನ್ನವಿಸಿಕೊಂಡರು. ಈ ವೇಳೆಗಾಗಲೇ ಸೆರೆಮನೆಯಲ್ಲಿಯೇ ಜರಿಮಲೆ ಸೋದರರ ತಾಯಿ ಸಾವನ್ನಪ್ಪಿದ್ದಳು. ಅವರ ತಂದೆಯನ್ನು ಕೊಲೆ ಮಾಡಲಾಗಿತ್ತು. ಕಿರಿಯ ಸೋದರನಾದ ಇಮ್ಮಡಿನಾಯಕ ಅವನ ಕುಟುಂಬ ವರ್ಗದವರು ಅಲ್ಲದೆ ಸೆರೆಮನೆಯಲ್ಲಿದ್ದ ಜರಿಮಲೆಯ ಅಧಿಕಾರಿ ವರ್ಗದವರನ್ನೆಲ್ಲಾ ಹೈದರನು ಬಿಡುಗಡೆಗೊಳಿಸಿದನು. ಜರಿಮಲೆಯನ್ನು ನಾಯಕನಿಗೆ ಹಿಂತಿರುಗಿಕೊಟ್ಟು ವರ್ಷವೊಂದಕ್ಕೆ ೩೦೦೦ ಪಗೋಡ ಕಾಣಿಕೆಯನ್ನು ಒಪ್ಪಿಸುವಂತೆ ಆಜ್ಞಾಪಿಸಿದನು.[3] ಬೊಮ್ಮಣ್ಣನಾಯಕನು ತನ್ನ ಪರಿವಾರದೊಂದಿಗೆ ಜರಿಮಲೆಗೆ ತೆರಳಿ ಮೊದಲಿನಂತೆ ಆಡಳಿತ ನಡೆಸತೊಡಗಿದನು.

ಹೈದರಾಲಿಯ ಜೊತೆ ಅನೇಕ ಕದನಗಳಲ್ಲಿ ಭಾಗಿಯಾಗಿದ್ದ ಜರಿಮಲೆಯವರು ಮೈಸೂರಿನವರ ಆಪ್ತಮಿತ್ರರಾಗಿದ್ದರು. ಕ್ರಿ.ಶ. ೧೭೮೦ರಲ್ಲಿ ಪಾಲ್ಗಟಿನ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಜರಿಮಲೆಯ ಬೊಮ್ಮಣ್ಣನಾಯಕನು ೧೦೦೦ ಕಾಲಾಳು ಮತ್ತು ೧೦೦ ಅಶ್ವಗಳೊಂದಿಗೆ ಹೈದರಾಲಿಗೆ ಸಹಾಯ ಮಾಡಿ[4] ಅವನ ಆಪ್ತವರ್ಗದವರಲ್ಲಿ ಒಬ್ಬನಾದನು. ಹೈದರಾಲಿಯ ಮರಣದ ತರುವಾಯ ಅವನ ಮಗ ಟಿಪ್ಪೂ ಸುಲ್ತಾನನು ಶ್ರೀರಂಗಪಟ್ಟಣದಲ್ಲಿ ಅಧಿಕಾರಕ್ಕೆ ಕ್ರಿ.ಶ. ೧೭೮೨ ರಲ್ಲಿ ಬಂದನು. ಪಾಳೆಯಪಟ್ಟುಗಳ ಕಡು ವಿರೋದಿಯಾಗಿದ್ದ ಟಿಪ್ಪುಸುಲ್ತಾನನು ಮರಾಠರ ದಾಳಿಗೆ ಸಿಕ್ಕಿ ಜರ್ಜರಿತವಾಗಿದ್ದ ಜರಿಮಲೆ ಮತ್ತು ಅದರ ಸುತ್ತಲಿನ ಪ್ರಾಂತ್ಯಗಳ ಮೇಲೆ ದಾಳಿ ಮಾಡಿ ಹರಪನಹಳ್ಳಿ, ರಾಯದುರ್ಗ, ಸಿರಗುಪ್ಪ, ಹುಮ್ನಾಗರ ಮುಂತಾದ ಪ್ರದೇಶಗಳನ್ನು ಕೊಳ್ಳೆ ಹೊಡೆದನು. ನಂತರ ಮುಂದುವರಿದು ಜರಿಮಲೆಯ ಮೇಲೆ ಆಕ್ರಮಣ ಮಾಡಿ, ಅಲ್ಲಿ ಕೆಲಕಾಲ ತಂಗಿದ್ದನು. ಜರಿಮಲೆಯು ಎಲ್ಲಾ ದೃಷ್ಟಿಯಿಂದಲೂ ಆಯಕಟ್ಟಿನ ಸ್ಥಳ, ಮರಾಠರ ದಾಳಿಯನ್ನು ಸಮರ್ಥವಾಗಿ ಎದುರಿಸಬೇಕಾದರೆ ಇದನ್ನು ಗಡಿ ಕೇಂದ್ರವಾಗಿಟ್ಟುಕೊಂಡರೆ ಸಾಧ್ಯವಾಗುತ್ತದೆ. ಎಂದು ಭಾವಿಸಿ ಅಲ್ಲಿ ರಕ್ಷಣಾ ಪಡೆಯನ್ನಿಡಲು ನಿರ್ಧರಿಸಿ ಜರಿಮಲೆ ನಾಯಕರಿಗೆ ನಿರೂಪವನ್ನು ಕಳುಹಿಸಿದನು. “ನೀವು ನನ್ನ ಹಾಗೂ ಸರ್ಕಾರದ ಹಿತೈಷಿಗಳು, ನೀವು ಬಹಳ ದೂರದಲ್ಲಿರುವುದಕ್ಕಿಂತ ನನ್ನ ಬಳಿ ಇರುವುದು ಉತ್ತಮ. ಆದ್ದರಿಂದ ತಾವು ತಮ್ಮ ಕುಟುಂಬದವರೊಂದಿಗೆ ಶ್ರೀರಂಗಪಟ್ಟಣಕ್ಕೆ ಬರುವುದು ಒಳಿತು.” ಟಿಪ್ಪೂವಿನ ಮಾತಿನ ಅರ್ಥವನ್ನು ಸರಿಯಾಗಿ ಗ್ರಹಿಸದ ನಾಯಕರು ಅವನು ಬೀಸಿದ ಬಲೆಯಲ್ಲಿ ಬಿದ್ದು ಶ್ರೀರಂಗಪಟ್ಟಣಕ್ಕೆ ಆಗಮಿಸಿದರು. ಟಿಪ್ಪೂಸುಲ್ತಾನನು ಹಿರೇಕೊಟ್ಟೂರು ಸಂಮತ್‌ಗೆ ಸೇರಿದ ಹರದನಹಳ್ಳಿ ಮತ್ತು ಯಡೆತೊರೆ ಗ್ರಾಮಗಳನ್ನು ದತ್ತಿಯಾಗಿ ನೀಡಿದ[5] ನಂತರ ದತ್ತಿಯನ್ನು ಕಿತ್ತುಕೊಂಡು ಅವನನ್ನು ೧೭೮೭ರಲ್ಲಿ ತನ್ನ ಭಕ್ಷಿಯನ್ನಾಗಿ ತಿಂಗಳಿಗೆ ೩೦೦ ರೂ.ಗಳ ವೇತನದ ಮೇಲೆ ನೇಮಕ ಮಾಡಿಕೊಂಡನು.[6] ಹೀಗೆ ಮೋಸದಿಂದ ಜರಿಮಲೆಯನ್ನು ಪಡೆದುಕೊಂಡ ನಂತರ ಕೆಲದಿನಗಳಲ್ಲಿಯೇ ಜರಿಮಲೆ ನಾಯಕರ ಕುಟುಂಬವನ್ನು ಇಸ್ಲಾಂಧರ್ಮವನ್ನು ಸ್ವೀಕರಿಸುವಂತೆ ಒತ್ತಾಯಿಸಿದನು, ಇಲ್ಲದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದನು.[7] ಮತಾಂತರಗೊಳ್ಳಲು ಒಪ್ಪದ ನಾಯಕರು ಅಲ್ಲಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿ, ಅವರು ತಮ್ಮವರೊಂದಿಗೆ ಸುರಕ್ಷಿತವಾಗಿ ತಮ್ಮ ಸಂಬಂಧಿಕರ ಸಂಸ್ಥಾನವಾದ ಸುರಪುರಕ್ಕೆ ಪಲಾಯನ ಮಾಡಿದರು.[8] ಮೂರನೇ ಮೈಸೂರು ಯುದ್ಧದಲ್ಲಿ ಬ್ರಿಟೀಷರು ನಿಜಾಮ ಮತ್ತು ಮರಾಠರೊಂದಿಗೆ ಒಕ್ಕೂಟ ಮಾಡಿಕೊಂಡು ಟಿಪ್ಪೂಸುಲ್ತಾನನ್ನು ಕ್ರಿ.ಶ. ೧೭೯೨ ರಲ್ಲಿ ಸೋಲಿಸಿದರು. ತನ್ನ ಶತ್ರು ಸೋತನೆಂಬ ಸುದ್ಧಿ ತಿಳಿದ ನಾಯಕರು ಮರಾಠರ ಬಳಿ ಹೋಗಿ ೨೦,೦೦೦ ಸಾವಿರ ರೂ.ಗಳ ಖಂಡಣಿ ಹಣ ನೀಡಿ ಜರಿಮಲೆಯನ್ನು ವಾಪಸ್‌ಪಡೆದುಕೊಂಡರು.[9] ನಿಜಾಮ ಮತ್ತು ಬ್ರಿಟೀಷರ ಸ್ನೇಹ ಬಹಳ ಕಾಲ ಉಳಿಯಲಿಲ್ಲ. ನಿಜಾಮನು ಮರಾಠರೊಂದಿಗೆ ಯುದ್ಧ ಮಾಡುವಾಗ ಇಂಗ್ಲಿಷರು ಅವನಿಗೆ ಸಹಾಯ ಮಾಡದೆ ಕೈಬಿಟ್ಟರು. ಈ ಯುದ್ಧದಲ್ಲಿ ಟಿಪ್ಪುವು ತಟಸ್ಥನಾಗಿದ್ದುದರಿಂದ ನಿಜಾಮನಿಗೆ ನೆಮ್ಮದಿಯಾಯಿತು. ಟಿಪ್ಪುಸುಲ್ತಾನ ನೇನಾದರೂ ಮೂರನೇ ಮೈಸೂರು ಯುದ್ಧದಲ್ಲಿ ತನಗದ ನಷ್ಟವನ್ನು ತುಂಬಿಕೊಳ್ಳಲು ಯುದ್ಧರಂಗಕ್ಕೆ ಬಂದಿದ್ದರೆ ನಿಜಾಮನ ಸ್ಥಿತಿ ಶೋಚನೀಯವಾಗುತ್ತಿತ್ತು. ಟಿಪ್ಪುಸುಲ್ತಾನನ ತಾಟಸ್ಥ ಹಾಗೂ ಬ್ರಿಟೀಷರ ವಂಚನೆಗಳಿಂದಾಗಿ ನಿಜಾಮನು ಟಿಪ್ಪು ಸುಲ್ತಾನನೊಂದಿಗೆ ಸಂಧಿ ಮಾಡಿಕೊಳ್ಳಲು ಬಯಸಿದನು. ಇಬ್ಬರ ನಡುವೆ ಮತ್ತೊಮ್ಮೆ ಮಿತ್ರತ್ವ ಏರ್ಪಟ್ಟಿತು. ನಿಜಾಮನು ಬ್ರಿಟೀಷರಿಗೆ ಸೇರಿದ್ದ ಪ್ರಾಂತ್ಯಗಳನ್ನು ಕೊಳ್ಳೆ ಹೊಡೆಯಲಾರಂಭಿಸಿದಾಗ ಜರಿಮಲೆಯ ಮೇಲೂ ಕಾಡೂ ಆಕ್ರಮಣ ಮಾಡಿದನು. ಈ ಸನ್ನಿವೇಶದಲ್ಲಿ ನಿಜಾಮನು ಜರಿಮಲೆನಾಯಕರಿಗೆ ಜರಿಮಲೆಯನ್ನು ತೆರವು ಮಾಡಿ ಕೋಟೆಯನ್ನು ಟಿಪ್ಪುಸುಲ್ತಾನನಿಗೆ ಒಪ್ಪಿಸಬೇಕೆಂದು ಪತ್ರವೊಂದನ್ನು ಬರೆದನು.[10] ಅದರ ಪ್ರಕಾರ ನಾಯಕರು ಸುರಪುರಕ್ಕೆ ಹೋದರು. ತಮ್ಮ ಸಂಸ್ಥಾನವನ್ನು ಪುನಃ ಪಡೆದುಕೊಳ್ಳಲು ಹೈದರಾಬಾದಿಗೂ ಕೂಡಾ ಹೋದರು ಅಲ್ಲಿ ಅವರು ನಿಜಾಮನ ಸೇವೆಗೆ ಸೇರಿಕೊಂಡರು.

ಕ್ರಿ.ಶ. ೧೭೯೯ರ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನು ಹತನಾದನು. ಅವನ ರಾಜ್ಯವನ್ನು ಬ್ರಿಟೀಷರು ಹಂಚಿದಾಗ ಜರಿಮಲೆ ಸಂಸ್ಥಾನವು ನಿಜಾಮನಿಗೆ ಸೇರಿತು. ಆ ಸಂಸ್ಥಾನಕ್ಕೆ ನಿಜಾಮನು ಜೆನ್ನೋಡು ಖಾನನನ್ನು ಅಧಿಕಾರಿಯಾಗಿ ನೇಮಿಸಿ ಆಡಳಿತ ನಡೆಸತೊಡಗಿದನು. ಜರಿಮಲೆ ನಾಯಕರು ಸಂಸ್ಥಾನವನ್ನು ತಮಗೇ ಹಿಂತಿರುಗಿಸಬೇಕೆಂದೂ ತಾವು ನಿರ್ಧಿಷ್ಠಪಡಿಸಿದಷ್ಟು ಖಂಡಣಿ ಹಣವನ್ನು ನೀಡುತ್ತೇವೆಂದೂ ನಿಜಾಮನಿಗೆ ಮನವಿ ಸಲ್ಲಿಸಿದರು. ಅವರ ಮನವಿಯನ್ನು ಪರಿಶೀಲಿಸಿದ ನಿಜಾಮನು ಪೊಗದಿ ಹಣವನ್ನು ನಿಗದಿಪಡಿಸಿ ನಾಯಕರಿಗೆ ಜೆರಿಮಲೆಯ ಆಡಳಿತವನ್ನು ನೀಡುವಂತೆ ಖಾನನಿಗೆ ಆದೇಶಿಸಿದನು.[11]

ನಿಜಾಮನ ಆದೇಶ ಬರುವುದರೊಳಗಾಗಿ ಖಾನನು ಜರಿಮಲೆಯಲ್ಲಿದ್ದನು. ಆದೇಶದ ಪ್ರತಿ ತಲುಪಿದ ತಕ್ಷಣ ಖಾನನು ಜರಿಮಲೆ ಪ್ರಾಂತ್ಯದ ಆದಾಯದ ಜಮಾಬಂಧಿಯ ವಿವರವನ್ನು ಸಂಗ್ರಹಿಸಲು ತನ್ನ ಅಧಿಕಾರಿಗಳನ್ನು ಕಳಹಿಸಿದನು. ಆ ಸಮಯದಲ್ಲಿ ಏಳರಿಂದ ಎಂಟು ಸಾವಿರ ರೂ.ಗಳ ಆದಾಯವಿತ್ತು ಆದರೂ ಅವರು ೧೮೦೦ರೂಗಳನ್ನು ನಿಗದಿಪಡಿಸಬಹುದೆಂದು ವರದಿ ಸಲ್ಲಿಸಿದರು. ನಾಯಕರು ಹೈದರಾಬಾದಿನಲ್ಲಿ ನಿಜಾಮನಿಂದ ಪಡೆದಿದ್ದ ಇನಾಯತ್ ನಾಮ ಮತ್ತು ನೆವಜಜ್ ನಾಮ (Navaujes nama) ಗಳನ್ನು ಖಾನನಿಗೆ ನೀಡಿದನು. ಅದನ್ನು ಪರಿಶೀಲಿಸಿದ ಖಾನನು ಈ ಪ್ರಾಂತ್ಯ ೧೮೦೦ ರೂ.ಗಳ ದರಕ್ಕೆ ನಿಗದಿಯಾಗಿದೆ, ನೀನೆಷ್ಟು ಹೆಚ್ಚು ಹಣವನ್ನು ಆಸ್ಥಾನಕ್ಕೆ ನೀಡುವೆ ಎಂದು ಕೇಳಿದನು. ಹೀಗೆ ಚರ್ಚೆ ಏರ್ಪಟ್ಟಾಗ ಖಾನನು ಕ್ರಿ.ಶ. ೧೮೦೦ಕ್ಕೆ ೭೦೦೦ರೂ.ಗಳು, ೧೮೦೧ಕ್ಕೆ ೨೦೦೦ರೂ.ಗಳು ನಂತರದ ವರ್ಷಗಳೂ ಕೂಡಾ ೨೦೦೦ರೂಗಳನ್ನು ನೀಡಬೇಕೆಂದು ನಿಗದಿಪಡಿಸಿದನು.[12] ಈ ರೀತಿ ಇಬ್ಬರ ಮಧ್ಯೆ ಲಿಖಿತ ಒಪ್ಪಂದವೇರ್ಪಟ್ಟು ಜರಿಮಲೆ ಪ್ರಾಂತ್ಯವನ್ನು ಮೇಲೆ ಹೇಳಿದ ದರಕ್ಕೆ ನಿಗದಿಪಡಿಸಿ ಅದರ ಜವಾಬ್ದಾರಿಯನ್ನು ನಾಯಕರಿಗೆ ನೀಡಿ ವ್ಯವಹಾರವನ್ನು ಬಗೆಹರಿಸಿದನು.

ಜರಿಮಲೆ ಪ್ರಾಂತ್ಯಕ್ಕೆ ಖಾನ್‌ನ ಸ್ಥಾನಕ್ಕೆ ಮೀರ್ ಆಲನ್ ಬಹದ್ದೂರ್‌ನನ್ನು ರೆಸಿಡೆಂಟನನ್ನಾಗಿ ನೇಮಕ ಮಾಡಲಾಯಿತು. ಅವನು ಖಂಡಣಿ ಹಣದ ವಸೂಲಿಗೆ ಜೆರಿಮಲೆಗೆ ತನ್ನ ಪೆಷ್ಕರ್ ನಾಗಣ್ಣರಾವ್‌ನನ್ನು ಕಳುಹಿಸಿದನು. ಅವನನ್ನು ನಾಯಕನು ಆದರಾತಿಥ್ಯಗಳಿಂದ ಸ್ವಾಗತಿಸಿ ನಿರ್ದಿಷ್ಟ ಪಡಿಸಿದ ಹಣವನ್ನು ನೀಡಿದಾಗ, ಆ ಅಧಿಕಾರಿ ಅದನ್ನು ತಿರಸ್ಕರಿಸಿ ೩೦೦೦ರೂಗಳನ್ನು ಒತ್ತಾಯಿಸಿದನು. ಅಲ್ಲದೆ ಹಣದ ವಸೂಲಿಗೆ ೧೦೦ ಜನ ಸೈನಿಕರನ್ನು ಕೂಡಾ ಕರೆತಂದನು.[13] ಹೀಗೆ ಹೈದರಾಬಾದಿನ ನಿಜಾಮರ ಆದೇಶ ಇಲ್ಲದಿದ್ದರೂ ಕೂಡಾ ಹೆಚ್ಚಿನ ಹಣವನ್ನು ಒತ್ತಾಯಿಸಿ ಲಿಖಿತ ಒಪ್ಪಂದದ ಅಂಶಗಳಿಗೆ ಆ ಅಧಿಕಾರಿ ಅಗೌರವ ತೋರಿಸಿದ್ದರಿಂದ ನಾಯಕನಿಗೆ ಮತ್ತೆ ಸಮಸ್ಯೆಗಳು ಆರಂಭವಾದವು. ನಿಜಾಮನು ೧೭೯೨ ಹಾಗೂ ೧೭೯೯ರ ಯುದ್ಧದಲ್ಲಿ ಬ್ರಿಟೀಷರಿಂದ ಸಹಾಯ ಪಡೆದುದಕ್ಕಾಗಿ ಕ್ರಿ.ಶ. ೧೮೦೦ರಲ್ಲಿ ತಾನು ಗೆದ್ದುಕೊಂಡಿದ್ದ ಪ್ರಾಂತ್ಯಗಳನ್ನು ಬಿಟ್ಟುಕೊಡಲು ಒಪ್ಪಿದನು. ಬಳ್ಳಾರಿ, ಅನಂತಪುರ, ಕಡಪ, ಕರ್ನೂಲ್‌ನ ಒಂದು ಭಾಗ ಬ್ರಿಟಿಷರಿಗೆ ಹಸ್ತಾಂತರವಾದವು. ಇವುಗಳನ್ನು Ceded Districts ಎನ್ನುವರು. ಈ ಜಿಲ್ಲೆಗಳಿಗೆ ಮೇಜರ್ ಮನ್ರೋನು ಮುಖ್ಯ ಕಲೆಕ್ಟರ್ ಆಗಿ ನೇಮಕವಾದನು. ೧೮೦೦ರಲ್ಲಿ ಆಗಮಿಸಿದ ಮನ್ರೋ ಅನಂತಪುರದಲ್ಲಿ ಅಧಿಕಾರವಹಿಸಿಕೊಂಡನು. ಬಳ್ಳಾರಿಯ ವ್ಯಾಪ್ತಿಗೆ ಸೇರಿದ ಜರಿಮಲೆ ಮತ್ತು ಕೂಡಲಗಿಗಳು ಮನ್ರೋನ ಆಡಳಿತಕ್ಕೊಳಪಟ್ಟವು. ಈ ಪ್ರಾಂತ್ಯಗಳ ಉಸ್ತುವಾರಿ ನೋಡಿಕೊಳ್ಳಲು ರಾಮದುರ್ಗದ ಅಮಲ್ದಾರನಾಗಿದ್ದ ಶಾಮರಾವ್‌ನನ್ನು ನೇಮಕ ಮಾಡಿ ಆದೇಶ ಹೊರಡಿಸಿದನು. ಅಧಿಕಾರಿಯಾಗಿದ್ದ ಶಾಮರಾವ್ ಜರಿಮಲೆ ನಾಯಕನಿಗೆ ಸರಿಯಾದ ಲೆಕ್ಕಪತ್ರಗಳ ಸಮೇತ ಜರಿಮಲೆಯನ್ನು ಇಂಗ್ಲೀಷರಿಗೆ ಒಪ್ಪಿಸಿಬೇಕೆಂದು ಅಮೀಲ್‌ನ ಸಂಗಡ ಪತ್ರವೊಂದನ್ನು ರವಾನಿಸಿದನು. ಆದೇಶದಿಂದ ಧೃತಿಗೆಟ್ಟ ನಾಯಕನು ಲೆಕ್ಕಪತ್ರಗಳನ್ನು ನೀಡದೆ ಜರಿಮಲೆಯನ್ನು ಕಂಪನಿಗೆ ಹಸ್ತಾಂತರಿಸಿ ವಿಶ್ರಾಂತಿ ವೇತನ ಕೋರಿದನು. ಜರಿಮಲೆಯು ಕೂಡಲಗಿಗೆ ಸೇರಿದ ಮೇಲೆ ವೆಂಕಟರಾವ್ ಆ ತಾಲ್ಲೂಕಿನ ಅಮಲ್ದಾರರಾದರು. ಈ ಅಧಿಕಾರಿಯು ಜರಿಮಲೆಯ ನಾಯಕರು ಪಟೇಲ, ಶ್ಯಾನುಭೋಗ, ನಾಡಗೌಡರಿಗೆ ಸಂಸ್ಥಾನದ ಲೆಕ್ಕಪತ್ರಗಳ ವರದಿಯನ್ನು ಧರ್ಮಾವರಂಗೆ ಬಂದು ಆದಷ್ಟು ಬೇಗ ಒಪ್ಪಿಸುವಂತೆ ನಿರ್ದೇಶಿಸಿದನು. ಅವನು ತನ್ನ ಅಧಿಕಾರಿಗಳೊಂದಿಗೆ ತೆರಳಿ ಲೆಕ್ಕವನ್ನು ಕಂಪನಿಗೆ ನೀಡಿದರೂ ಕೂಡಾ ನಾಯಕನ ವಿಶ್ರಾಂತಿ ವೇತನ ನಿಗದಿಯಾಗದೆ ಹಾಗೇ ಉಳಿಯಿತು. ಜರಿಮಲೆ ಮಾತ್ರ ಈಸ್ಟ್ ಇಂಡಿಯಾ ಕಂಪನಿಗೆ ೧೮೦೧ರಲ್ಲಿ ಸೇರಿತು.

ಅವಲೋಕನ

೧. ಭೌಗೋಳಿಕವಾಗಿ ಜರಿಮಲೆ ಸಂಸ್ಥಾನ ಬಯಲು ನಾಡಿನ ಬಳ್ಳಾರಿ ಪ್ರದೇಶದಲ್ಲಿದ್ದುದರಿಂದ ನೈಸರ್ಗಿಕ ರಕ್ಷಣೆಯಿಂದ ವಂಚಿತವಾಗಿರುವ ಅಂಶ ಕಂಡುಬರುತ್ತದೆ. ಆದುದರಿಂದ ಇವರ ರಾಜಕೀಯ ಜೀವನದಲ್ಲಿ ಅಸ್ತಿರತೆಯನ್ನು ಕಾಣಬಹುದು.

೨. ಮೂಲತಃ ಬೆಡ ಸಮುದಾಯಕ್ಕೆ ಸೇರಿದ್ದ ಈಮನೆತನಕ್ಕೆ ವಿಜಯನಗರದವರ ಪ್ರೋತ್ಸಾಹ ಹೆಚ್ಚಾಗಿತ್ತು. ಇವರು ತಮ್ಮ ನಿಷ್ಠೆಯನ್ನು ವಿಜಯನಗರ ಪತನ ಹೊಂದುವವರೆಗೂ ವ್ಯಕ್ತಪಡಿಸಿದ್ದನ್ನು ನೋಡುತ್ತೇವೆ. ವಿಜಯನಗರೋತ್ತರ ಕಾಲದಲ್ಲಿ ಬದಲಾದ ರಾಜಕೀಯಕ್ಕೆ ಅನುಗುಣವಾಗಿ ಬೇರೆ ಸಂಸ್ಥಾನಗಳಂತೆ ಬಿಜಾಪುರದ ಆದಿಲ್‌ಶಾಹಿ ಸುಲ್ತಾನರುಗಳಿಗೆ, ನಿಜಾಮರಿಗೆ, ಹೈದರಾಲಿಗೆ ಚಿತ್ರದುರ್ಗದವರಿಗೆ ಪ್ರಕಟಿಸುತ್ತಾ ತಮ್ಮ ರಾಜ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದುದು ಕಂಡುಬರುತ್ತದೆ.

೩. ಈ ಸಂಸ್ಥಾನದ ಇತಿಹಾಸದ್ದಕ್ಕೂ ಕಂಡುಬರುವುದೆಂದರೆ ರಾಜಕೀಯ ಅಸ್ಥಿರತೆ. ಅದಕ್ಕೆ ಕಾರಣ ಸಂಸ್ಥಾನದ ನಾಲ್ಕು ದಿಕ್ಕುಗಳಲ್ಲಿದ್ದ ಬಲಾಢ್ಯ ರಾಜ್ಯಗಳಾದ ನಿಜಾಮರು, ಮರಾಠರು, ಮೈಸೂರರಸರು ಚಿತ್ರದುರ್ಗದ ನಾಯಕರು ರಾಜಕೀಯ ಮಹತ್ವಾಂಕಾಕ್ಷಿಯ ನಡುವೆ ಉಳಿದುಕೊಳ್ಳುವುದಕ್ಕೆ ಕಷ್ಟಸಾಧ್ಯವಾಗಿತ್ತು.

೪. ರಾಜಕೀಯ ಅಸ್ಥಿತರತೆಯಿಂದ ಈ ಸಂಸ್ಥಾನದಲ್ಲಿ ಯಾವುದೇ ರೀತಿಯ ಸ್ವತಂತ್ರ ಕಲೆ, ಸಂಸ್ಕೃತಿ ಇತ್ಯಾದಿ ಗುರುತಿಸುವುದು ಸಾಧ್ಯವಾಗುವುದು. ಅದಕ್ಕೆ ಕಾರಣವೆಂದರೆ ಸ್ವತಃ ಅರಸರೇ ಅತಂತ್ರತೆಯ ಸ್ಥಿತಿಯನ್ನು ಅನುಭವಿಸುತ್ತಿದ್ದಾಗ ಆಸ್ಥಾನ ಅಥವಾ ದರ್ಬಾರದಂತಹ ವ್ಯವಸ್ಥೆ ಇದ್ದುದು ನಮಗೆ ಕಂಡುಬರುವುದಿಲ್ಲ. ಆದ್ದರಿಂದಾಗಿ ಈ ಸಂಸ್ಥಾನದಲ್ಲಿ ವಿದ್ವಾಂಸರಿಗಾಗಲೀ, ಇತಿಹಾಸಕಾರರಿಗಾಗಲೀ, ಕಲಾವಿದರುಗಳಾಗಲೀ, ಆರ್ಶರಯ ಪಡೆದಿದ್ದುದು ಕಂಡುಬರುವುದಿಲ್ಲ.

೫. ಈ ಮನೆತನದ ಕೊನೆಯ ಅರಸರು ಬ್ರಿಟೀಷರಿಗೆ ಸಂಸ್ಥಾನವನ್ನು ಒಪ್ಪಿಸಬೇಕಾಗಿದ್ದುದು ದುರ್ದೈವದ ಸಂಗತಿಯಾಗಿದೆ. (ಕೃತಜ್ಞತೆಗಳು ಜರಿಮಲೆ ಸಂಸ್ಥಾನದ ವಂಶಾವಳಿಯನ್ನು ಒದಗಿಸಿದ ಪ್ರೊ. ಬಿ. ರಾಜಶೇಖರಪ್ಪನವರಿಗೂ ಸಲಹೆಗಳನ್ನು ನೀಡಿದ ಡಾ. ಅರಣಿಯವರಿಗೂ ಕೃತಜ್ಞತೆಗಳು)

(ಸೂಚನೆ : ಸೌಬತ್ಅಧಿಕಾರ ಪ್ರಧಾನ ಮಾಡುವುದಕ್ಕಾಗಿ ತೊಡಿಸಿದ ದೇಹದ ಮೇಲಿನ ಪಟ್ಟಿ ಇನಾಮತ್ದತ್ತಿ)

* * *

ಜರಿಮಲೆ ಸಂಸ್ಥಾನದ ವಂಶಾವಳಿ (೧೫೦೦೦೮೦೦)

03_79_KKAM-KUH

ಜರಿಮಲೆ ಸಂಸ್ಥಾನದ ವಂಶಾವಳಿ
ಶ್ರೀ ಗುರು ಬಸವಲಿಂಗಾಯ ನಮಃ ಶ್ರೀ ಶಾರದಾಂಬಾಯ ನಮಃ
ಶ್ರೀಗಣಾಧಿಪತಿಯೇನನ್ನಮಃ
ಶ್ರೀಗುರು ಮುರುಳಾದ್ಯನ್ನಮಃ
ಶ್ರೀ ಗುರು ಪ್ರಸನ್ನಂ
ಆರಿಷಿಯಿಂದ ಬಂದಂಥಾ ಜರಿಮಲಿ ಸಮುರ್ಸ್ಥಾತರುದ
ವಂಶಾವಳಿ ಬಂದದ್ದೂ.
ಶ್ರೀ ಗುರು ಪ್ರಸನ್ನಂ

ಆರಿಷಿಯಿಂದ ಜರಿಮಲ್ಲಿಸಮುಸ್ಥಾನ್ ತರು ಆರಿಷಿಯಿಂದ ಬಂದ ವಂಶಾವಳಿಯೊರು ಬಂದದ್ದೂ ಬರಿಯುವುದಕ್ಕೆ ಶುಭಮಸ್ತು. ಯಿವರು ಕಂಚಿ ದೇಶದಲ್ಲಿ ಹಟ್ಟಯಂ ಹಾಕಿಕೊಂಡು ದಿವ್ಸವನ್ನು ಕಳೆಯುತ್ತಯಿದ್ದರು. ಆ ದೇಶವಂನ್ನು ಆಳುವ ಮುಸುಲ್ಮಾನು ಆತೃದರು(?) ಮಿಯ್ಯಾ ಯಂಬುವರು ರಾಜ್ಯವನ್ನು ಆಳುತ್ತಾಯಿರ್ದ್ದರು. ಕದ್ರಮೂಲ ಪುರುಷರಾದ ಯೀ ಬೂದಿಶಿದ್ದರಾಜು ಯಂಬುವರು ಕದ್ರಿ ಕಂಚಿ ಪ್ರದೇಶದಲ್ಲಿ ಕಾಲವನ್ನು ಕಳೆಯುತ್ತಾಯಿದ್ದರು. ಅವರ ಯೀ ವ್ತ ಯಂಥಾದ್ದು ಅಂದರೆ ಜಂಗಮಯಿಲ್ಲದೆ, ಶಿವಪೂಜೆಯಿಲ್ಲದೆ ವೂಟ ವಗೈರೆಯಾಹೊತ್ತು ಬಿಟ್ಟು ಸುಮ್ಮನೆ ಕ್ಷೇಮವಾಗಿ ಯಿರುತ್ತಾಯಿರಲಾಗಿ ಸಿವಧ್ಯಾನ ಪಾರಾಯಣರಾಗಿ ಸಿವಸ್ಮರಣೆಯಿಂ ಯಿರುವುದಂ ಕಂಡು ಕದ್ರಿಮೂಲಪುರುಷರಾದ ಬೂದಿ ಶಿದ್ದರಾಜೂರ ಭಕ್ತಿ ಭಾವವಂ ಕಂಡು ಮಾಯದಸ್ವಾಮಿಗಳು ಬಂದು ಪ್ರತ್ಯೇಕ್ಷವಾಗಿ ಕಂಡು ಮಾತನಾಡಿದ್ದೆರಂದರೆ ನೀನು ಯಿಲ್ಲಿಯಿರಬೇಡ. ನಿನ್ನ ಕಂಪಳವಂನ್ನು ತೆದೆದುಕೊಂಡೂ ಮುಂದೆ ನಿನ್ನಗೆ ನಾನು ತೋರಿಶಿದಲ್ಲಿ ಹಟ್ಟಿಯಂ ಹಾಕು ಯಂದು ಮಾಯದ ಗುರುಗಳು ಹೇಳಿದರು. ಮೂಲಪುರಷ ಭೂದಿಶಿದ್ದ ರಾಜೂರೂ ಯೀತನ ಭಾರ್ಯಳೂ ಲಿಂಗಮ್ಮ ನಾಗತಿಯವರು. ಯೀ ಯಮ್ಮಗೆ ೭ ಮಂದಿ ಮಕ್ಕಳು. ತಮ್ಮನೆ ದೇವರೂ (ಕಂಚಿವೋಬಳದೇವರೂ) (ಬೊಮ್ಮದೇವರೂ) (ಗಾದ್ರಲಿಂಗ) (ಕಂಕಾಳೈಯ್ಯಾ) ಯೀ ದೇವರುಗಳ ಪೆಟ್ಟಿಗೆಗಳೂ ಪೂಜಾರಿಗಳ ಮೇಲೆ ವರಿಶಿಕೊಂಡೂ ೨೧ ದಿನಕ್ಕೆ ಕಂಚಿ ದೇಶದಿಂದ ಮಳೆ ಭೂಮ ಸಮುದ್ರಕ್ಕೆ ಬಂದರೂ. ವರಿಶೀಕೊಂಡೂ ೨೧ ದಿನಕ್ಕೆ ಕಂಚಿ ದೇಶದಿಂದ ಮಳೆ ಭೂಮ ಸಮುದ್ರಕ್ಕೆ ಬಂದುರೂ. ಮಾಯಾದ ಗುರುಗಳೂ ಆದ ಚನ್ನಬಸವಸ್ವಾಮಿಗಳ ಅಪ್ಪಣೆ ಪ್ರಕಾರ ಮಳೆಭೂಮ ಸಮುದ್ರದಲ್ಲಿ ಹಟ್ಟಿಯಂ ಹಾಕಿಕೊಂಡು ದಿನ ಕಳಿಯುತ್ತಾಯಿದ್ದರು. ಯಿತ್ತಲಾಗಿ ಮೂಲಪುರುಷರಾದಂಥ ಭೂದಿಶಿದ್ದರಾಜು ಯೀತನ ಮಕ್ಕಳೂ ೭ ಯೇಳುಮಂದಿ ವತ್ತು ಕಳಿಯುವ ನಿಮಿತ್ಯವಾಗಿ ಅರಣ್ಯದೊಳು ಷಿಕಾರಿ ವೃದ್ದಿಶ್ಯವಾಗಿ ಕೆಲವು ಮಂದಿ ಕೊಪ್ಪಲ ಗ್ರಾಮ ಶಿಂಮ್ಹಗಳು ತಮ ತಮಗೆ ಬೇಕಾದ ಆಯುಧ ಸಮೇತರಾಗಿ ಅರಣ್ಯದೊಳೊಬೇಂಟೆಯಂ ಆಡುತ್ತಾ ಬಂದರೂ. ಅಲ್ಲಿ ಗುಡ್ಡ ಗಂಹಾರ ಗವಿಗಳೂ ಸರೋವರಗಳೂ ಗಿಡವೃಕ್ಷಗಳೂ ಬಹಳ ಅದ್ಬುತವಾಗಿ ಯಿರುವುದೂ ಯಿವರ ಕಂಣಿಗೆ ಕಾಣಿಸುತ್ತಯಿತ್ತು. ಮೂಲ ಪುರುಷರಾದ ಭೂದಿಶಿದ್ದರಾಜು ತನ್ನ ಮಕ್ಕಳಿಗೆ ಕಾಲಬಲಕ್ಕೆ. ಯೇನೆಂದು ಹೇಳುತ್ತಾರೆ ಯಂದೂ ಯೀ ಮಾಯದ ಸ್ವಾಮಿಗಳನ್ನು ಅರಿಕೆಮಾಡಿ ಅರುವು ತೊಡೊಂಡರೂ ಮಕ್ಕಳಿರಾ ಯಿಲ್ಲಿ ಮಹಾ ಶಂಕರವಾದ ಸ್ಥಳ ಬಹು ಯಚ್ಚರಿಕೆಯ ಮೇಲೆ ಆಡಿರಿ ಯಂದು ಮಾಯದ ಸ್ವಾಮಿಗಳೂ ಹೇಳಿದ್ದರೂ . ಅಷ್ಟರೊಳಗೆ ಅಲ್ಲಿ ಅದ್ಬುತವಾದ ಕೊಳಲು ಜನಯಿರುವ ಸ್ಥಳಾ. ದೊಡ್ಡಗವಿ ಅದರ ವಳಗಿಂದ ವಂದು ಚಿರಿಯು ಯಿವರ ಸಪ್ಪಳಿಗೆ ವರಹೊಂಟು ಬಂದೂ ನಾಯಿಗಳನ್ನು ಯೀ ೭ಮಂದಿ ಧೊರಿ ಮಕ್ಕಳನ್ನು (೭ಮಂದಿಯನ್ನೂ) ಬಹಳ ಭಯಂಕರವಾಗಿ ಜಗಳಮಾಡಿ ಪ್ರಾಣವನ್ನೂ ಬಿಟ್ಟಿತೂ ಯಿವರೂ ಮಾತನಾಡಿದ್ದೂ ಯೀ ಭಾಗ್ಯ ಬಹಳ ಗಂಡುಭೂಮಿಯಾಗಿ ಕಾಣಿಸುತ್ತದೆ.

ವಳ್ಳೆದು ಮುಂದಕ್ಕೆ ಸಾಗಿರಿ ಯಂದು ಮಾಯದಸ್ವಾಮಿಗಳೂ ಹೇಳಿದರೂ ಮತ್ತು ವಂದು ಗುಡ್ಡಕ್ಕೆ ಹೋದರೂ ಅಲ್ಲಿ ಸರೋವರಗಳೂ ಮೇಲು ಯತ್ತರದ ಮೇಲೆ ತಂಗಾಳಿಗೆ ವಂದು ಮೊಲ ಮಲಗಿಯಿತ್ತು. ಯೀಜನರೂ ಧೋರಿ ಮಕ್ಕಳೂ ಕಂಣುತುಂಬಾ ನೋಡೋದೊರಳಗೆ ಮೊಲವು ಯದ್ದುಬಂದೂ ಬಹಳ ಬಹಳ ಜಗಳ ಮಾಡೋದರೊಳಗೆ ಮೂಲ ಪುರುಷರಾ ಚಿಕ್ಕ ಮಗನಾದ ಭೂಮರಾಜರೂ ತಂನ ಬಿಲ್ಲಿನಿಂದ ವಡದೂ ಬಿಟ್ಟರೂ. ಅಲ್ಲಿ ಯಿದ್ದವರೂ ಯಿದು ಯೋನು ಅಶ್ಚರ್ಯ್ಯ ಯೀ ಸ್ಥಳ ಬಹಳಾ ಕಲಿಯ ಜಾಗವಾಗಿಯಿದೆ ಯಂದರೂ. ಮೂಲಪುರಷರಾದ ಬೂದಿಶಿದ್ದರಾಜು ಯೀತನ ಮಕ್ಕಳೂ ೧ ಬೊಮ್ಮಂತ್ತ ರಾಜು ೨ ಯಿಮ್ಮಡಿ ರಾಜ ೩ ಮುಮ್ಮಡಿ ರಾಜು ೪ ಮಲ್ಲಿಖಾರ್ಜುನನಾಯ್ಕ ೫ ಲಿಂಗಳ ನಾಯಕಾ ೬ ಕಕ್ಕುಲ ಪೆನ್ನಪ್ಪನಾಯಕಾ ೭ ಕಲಿಪುರುಷಭೂಮರಾಜೂಯಿವರೂಗಳೂ ಆಲೋಚನೆಯಂಮಾಡಿಕೊಂಡೂ ಶ್ರೀ ಮಾಯದ ಸ್ವಾಮಿಗಳಾದ ಮಳೆಬಗೆ ಚನ್ನಬಸಪ್ಪಸ್ವಾಮಿಯವರಂನು. ೩ ಅಪ್ಪಣೆ ಕೇಳಿಕೊಂಡರೂ. ಯೀ ಸ್ಥಳದಮೇಗೆ ಸ್ಥಿರಪಡಿಶಿಕೊಡಬೇಕು ಯಂದು ಸಾಷ್ಟಂಗ ನಮಸ್ಕಾರಂಗಳಂ ಮಾಡಿ ನಿಂತ್ತು ಕರಗಳಂ ಮುಗಿದೂ ಅಪ್ಪಣೆಕೊಡಬೇಕೂ ಯಂದೂ ಕೇಳಿಕೊಂಡರೂ. ವಳ್ಳೆದು ಮಕ್ಕಳಿರಾ ನೀವು ನೆನದಲ್ಲಿ ನಾನೂ ಮನನಿಷ್ಟ ಪ್ರಕಾರ ನಡೆಯುತ್ತೇನೆಯಂದೂ ಅಭಯ ಹಸ್ತಮಂ ಕೊಟ್ಟು ತನ್ನ ಕೈಯ್ಯಲ್ಲಿಯಿದ್ದಬೆತ್ತವಂ ತೆಗೆದುಕೊಂಡು ಸುತ್ತ ಮಂಡಲವಂ ಬರದೂ ನಿರ್ನಯವಂ ಮಾಡಿಸು ಯಂದು ಅಪ್ಪಣೆಯಾಯಿತು. ಮಾಯದಸ್ವಾಮಿಗಳೂ ತಂದಿ ಮಕ್ಕಳೂ ಕಾಲಬಲ ಯಾ ಹೊತ್ತು ಮಳೆ ಭೂಪ ಸಮುದ್ರಕ್ಕೆ ಬಂದೂ ತಮ್ಮ ಹಟ್ಟಿಯನ್ನೂ ಆಕಿದ್ದ ಸ್ತಳಕ್ಕೆ ಬಂದು ತಾವುಲಡಾಯಿ ಮಾಡಿದ ಮೊಲ ಅದರ ಹೊಟ್ಟೆಯಂ ಬಗಿದೂ ನೋಡಲಾಗಿ ವಟ್ಟೆಯ ವಳಗೆ ಅಶಿ ಕಡ್ಲೆಕಾಳೂ ಯಿದ್ದುವೂ. ಯಿದು ಯಲ್ಲಿ ಹಾಹಾರಕ್ಕೆ ಹೊಗಿಯಿತ್ತು. ಯೀ ಕಡ್ಲಿ ಕಾಳೂ ಯಾವ ಸ್ಥಳದಲ್ಲಿ ಮೇಯುತ್ತದೊ ನೋಡಿ ಬರ್ರಿಯಂದು ಪರಿಚಾರಕರನ್ನೂ ಕಳೂಹಿಶಿ ನೋಡಲಾಗಿ ಮೂಡಲು ನಿಂತ್ತು ನೋಡಿದರೂ ಯಿಲ್ಲಾ ವುತ್ತರಕ್ಕೆ ನೋಡಿದರೂ ಯಿಲ್ಲಾ. ದಕ್ಷಿಣಕ್ಕೆ ನೋಡಿದರೂ ಯಿಲ್ಲಾ. ಪಡುವಲು ನೋಡಿದರೆ ಕೊಟ್ಟೂರು ತೆರಿವಳಗೆ ಲಿಂಗಶೆಟ್ಟಿಯಂಬಾತನೂ ಸ್ವಲ್ಪ ಕಟ್ಟಿಗೆ ಹಾಕಿಶಿ ಈ ಕಟ್ಟವಳಗೆ ಸ್ವಲ್ಪ ಆಕಿದ್ದರೂ. ಆ ಕಡ್ಲಿಯನ್ನು ಯೀ ವೊಲವೂ ತಿಂದು ಜರಿಮಲಿ ಮೇಲುದುರ್ಗದ ಮೇಲೆ ಮಲಗಿಯಿತ್ತು. ಅದನ್ನು ಕೊಯಿದೂ ಪಾಕಮಾಡಿ ಸರ್ವರೂ ವೂಟಮಾಡಿಯಂದೂ ಮಾಯದಸ್ವಾಮಿ ಅಪ್ಪಣೆ ಕೊಟ್ಟು ತಮ್ಮ ಠಾವಿಗೆ ದಯಮಾಡಿದರೂ ಮಾಯದಾ ಮಾತೂ

(ಯಿತ್ತಲಾಗಿ ನಾಲ್ಕುನಿ?) ಅದೇ ಪ್ರಾಂತ್ಯದಲ್ಲು ಲೇಖಣಿಕೆರಿ ಎಂಬ ಗ್ರಾಮದಲ್ಲಿ ವಂದು ವರಹಾ ಯಂದರೆ ಕಾಡುಹಂದಿ ಆ ಗ್ರಾಮದ ಅತ್ತಾರಾ ಸರೋವರದಲ್ಲಿ ಸೇರಿಕೊಂಡು ಬ್ಯಾಂಟಿಗೆ ಹೊದಂತವರನ್ನೂ ಕಾಲುಗಳನ್ನೂ ಆದಿಬಟ್ಟಿಯವರನ್ನೂ ಅನೇಕೆ ಜನರನ್ನೂ ಬಡಿದು ಬಹಳಾ ಗಾಭರಿಮಾಡಿ ಆ ಸರಹದ್ದು ಆಳುಗವರೂ ತಮ್ಮ ತಮ್ಮ ಕೆಲಸಕ್ಕೆ ಹೋಗುವುದಕ್ಕೆ ಭಯಸ್ತರಾಗಿ ಮನೆಗಳಲ್ಲಿ ಶೇರಿಕೊಂಡುಯಿದ್ದರೂ. ಯಿದರ ಪೈಕಿ ಬೇಟೆಗಾರ ಬೈಯಪ್ಪ ಯಂಬುವನೂ ಕಂಚೀದೇಶದಿಂದಾ ಧೊರಿಮಕ್ಕಳೂ ಯೇಳೂ ಮಂದಿ ಬಂದು ಭುಮಸಮುದ್ರಾವಾ ಅತ್ತಿರ ಹಟ್ಟಿಯಂ ಹಾಕಿಕೊಂಡು ಯಿರುತ್ತಾರಂತ್ತೆ. ಅವರು ಮಹಾ ಸಾಮರ್ಥರಂತ್ತೆ. ಮಹಾಬಲ್ಲಿದರೂ ಯಂದು ಹೇಳುತ್ತಾರೆ. ಅವರಂನ್ನು ಕರಕೊಂಡು ಬರಬೇಕೂ ಯಂದು ಯಲ್ಲಾ ಜನರಂನ್ನೂ ತರಿಶಿ ಯಜಮಾನನಾದ ಭೈಯಪ್ಪನೂ ಯೀ ಧೊರಿಮಕ್ಕಳಿಗೆ ಬಿನೈಶಿ ಕೇಳಿದರೂ. ಅವರೂ ಅಂದುದೂ ನಮ್ಮ ತಂದಿ ವಿಚಾರ ಮಾಡಿರಿ ಯಂದೂ ಹೇಳಿದರೂ. ಅವರೂ ಬಂದೂ ಮುಜೂರಿ ಸಲಾಮು ಮಾಡಿ ಕೇಳೊದರೊಳಗೆ ಭೂದಿಶಿದ್ದರಾಜಗೆ ಸಾಷ್ಟಂಗ ನಮಸ್ಕಾರ ಮಾಡಿ ಯಿವರೊಬರಿಂದ ವರ್ತಮಾನವನ್ನೂ ಹೇಳೊದರೊಳಗೆ ಅಪ್ಪಾ ಮಗನೆ ನಿಮ್ಮ ಕಾರ್ಯ್ಯ ಜಯವಾಯಿತು. ಯಿಗಲೆ ಹೇಳಿರಿ ತಡಮಾಡಕೂಡದೂ ಯಂದೂ ಕಾರಣ ನೀವೇ ಹೋಗಿ ಬನ್ನಿರಿ ಯೇನೂ ಸಂಸಯವಿಲ್ಲಾ ಯಂದೂ ಅಪ್ಪಣೆ ಆಯಿತೂ. ಗುರುವುಗಳೂ ಅಷ್ಟರೊಳಗೆ ಕೆಲವು ಧೊರಿಮಕ್ಕಳೂ ಕೆಲವೂ ಮಂದಿ ತಮ್ಮ ತಮ್ಮ ಆಯುಧಗಳನ್ನೂ ತೆಗೆದುಕೊಂಡು ಸರ್ವರೂ ಲೇಖಣಿಕೆರೆ ಯಂಭಾ ವೂರೂ ಅತ್ರ ಯಿರೋ ಕೊಣನದಿನ್ನೆ ಹಳ್ಳಿಕೆ ಯಾಹೊತ್ತು ಜನರೂ ಧೊರಿಮಕ್ಕಳೂ ಹಳ್ಳ ಕೊಳ್ಳ ಸರೋವರಗಳೂ ಭೇದಿಶಿಲ್‌ಡಲಾಗಿ ವಂದು ಕೊಳಲೂ ಶೀಗೇಪೊದೆಯಾಗಳಿಂದ ಯೆದ್ದು ನಿಂತ್ತು ತನ್ನ ಧರ್ಪಸ್ವರದಿಂದಾ ವದರಿ ಮುಂದಕ್ಕೆ ಸಾಗಿಯೂ ಜನರು ನೋಡುವ ಹಾಗೆ ಗದ್ದಲಿಶಿ ಹಾರಲು ಕೆಲವು ಧೊರಿಮಕ್ಕಳೂ ಭಂಟರೂ ಗಧಗಧನೆ ನಡುಗಿ ನಿಂತ್ತ ಠಾವಿನಲ್ಲಿ ನಿಂತ್ತರೂ. ಬೂದಿಶಿದ್ದರಾಜರ ಮಕ್ಕಳೂ ಯೇಳು ಮಂದಿ ತಮ್ಮ ಬಾಣ ಬತ್ತಳಿಕೆಯಂ ತೆಗೆದುಕೊಂಡೂ ಆ ಕಾಡಹಂದಿ ಬೆನ್ನ ನಾಯಿಗಳನ್ನೂ ಕರೆದುಕೊಂಡೂ ಆ ಕಾಡಹಂದಿಯ ಬೆನ್ನ ಮೇಲೆ ಬಂದರೂ. ವಂದು ಗುಂಡಿನ ಕೆಳಗೆ ದಮ್ಮೆತ್ತಿ ನಿಂತ್ತು ಯಿವರೂ ತ್ರಾಣ ದಪ್ಪಿ ಬಾಯಾರಿ ನಿಂತ್ತರೂ ಹಿರೇ ಮಗನಾದ ಮುಮ್ಮಡಿ ಅರಸೂ ಯೆಬ್ಬಿಶಿದರೂ ಅದು ಕೋಪಕ್ಕೆ ಬಂದು ತಾನು ನಿಂತ್ತ ಕಲ್ಲು ನಾಲ್ಕು ಅಂಗುಲ ಪ್ರಮಾಣ ಕಲ್ಲು ಕತ್ತರಿಶಿ ಬಿದ್ದದ್ದೂ ಯೀ ಧೊರಿಗಳೂ ನೋಡಿ ಚೋಧ್ಯಒಟ್ಟರೂ ಅಂತೂ ತಮ್ಮಗಳೂ ಕೂಡಿಯೇಕಾಂತ್ತ ಮಾತನಾಡಿ ಮುಂದಕ್ಕೆ ಯಿಟಟ ಕಾಲು ಯಿಂದಕ್ಕೆ ತೆಗೆಯಬಾರದೂ. ಯಿದು ರಾಜರಾ ಪದ್ಧತಿ ಅಲ್ಲಾ ಅಂದ ಮಾತಿಗೆ ರೋಷ ಹುಟ್ಟಿ ಯೀ ಕಾಡಹಂದಿಯ ಬೆನ್ನೂಹತ್ತಿ ವಪ್ಪತ್ತಿಗೆ ಯರಡು ದಿನ ಮಧ್ಯಾನ್ನವಾಯಿತೂ. ಅಲ್ಲಿಂದಾ ವುಜೇನೆ (ಉಜ್ಜಿಯಿನಿ) ಯಂಬಾ ಗ್ರಾಮಾವೂ ರೂಪವಾಗಿಯಿತ್ತು. ಅಲ್ಲೆ ಶೀಗೆಪೊದೆವಳಕ್ಕೆ ಮುದಯದವರ ಹತ್ತಿ ಸರಿ ಮಾಯವಾಯ್ತು ಅಲ್ಲಿಗೆ ಯೀ ಅಂಣತಮ್ಮಗಳೂ ನೀರೂ ಯಿಲ್ಲದೆ ಅನ್ನವಿಲ್ಲದೇ ಬಳಲಿ ಬಾಯಾರಿ ತ್ರಾಣವಿಲ್ಲದೆ ಕಂದಿ ಕುಂದಿ ನಿಂತ್ತರೂ. ಅದರ ಪೈಕಿ ವಂದೂ ಗ್ರಾಮ ಶಿಂಮ್ಹವೂ ತೂರಿಹೋಗಿ ಆ ಪೊದೆಯಲ್ಲಿ ಕರು ಮುಣಿಗಿ ಮತ್ತು ಬಂತ್ತೂ. ಯೀ ಧೊರೆ ಮಕ್ಕಳಾಯದುರಿಗೆ ನಿಲ್ಲಲೂ ಅವರೂ ಕಂಡೂ ಯೀ ರಾಷ್ಟ್ರವನ್ನು ನೋಡಿದರೂ ಕರು ಕಾಣಲಿಲ್ಲಾ ಯಿಲ್ಲೆ ಯೀ ಗ್ರಾಮ ಶಿಂಮ್ಹವೂ ಮೈ ತೊಳೆಕೊಂಡೂ ಬಂತೂ ಯಂದೂ ನೋಡೊಣಯಂದು ಯೇಳು ಮಂದಿ ಧೊರಿಮಕ್ಕಳೂ ವಬ್ಬರಿಗೊಬ್ಬರೂ ಆಶ್ರಾ ಮಾಡಿಕೊಂಡೂ ಹೋಗೊದರೊಳಗೆ ಅಲ್ಲಿ ವಂದು ವರ್ತಿಯೂ ಯಿವರ ಕಂಣಿಗೆ ಕಾಣಿಶಿತೂ. ಹಿರಿಯ ಮಗನಾದ ಮುಮ್ಮಡಿ ಅರಸೂ ನೋಡೊದರೊಳಗೆ ಸಾಕ್ಷಾತ್ ಪರಮೇಶ್ವರನೂ ತೂಗ ಮಂಚದ ಮೇಲೆ ಕುಂತ್ತಂತ್ತ ಗುರುವು ನೋಡಿ ತಂಮ್ಮಗಳೂ ಸರ್ವರೂ ನೋಡೊದರೊಳಗೆ ಯತ ಪ್ರಕಾರ ತಾವು ಯಾರುಯಂದೂ ಕೇಳಿ ದಲ್ಲಿ ನಿಂಮ್ಮ ಮುಂದೆ ಹೇಳುವದುಯಿಲ್ಲಾ. ನಿಂಮ್ಮ ಬೆನ್ನಿಲಿ ಬಂದಂಥ ಚಿಕ್ಕಾತನನ್ನು ಯಿಲ್ಲಿಗೆ ಕಳುಹಿ ಸಿದರೆ ನಾನು ಹೇಳುತ್ತೇನೆ ಯಂದರೂ. ಆ ಮಾತು ಅಂಣತಮ್ಮಗಳೂ ಮಾತನಾಡಿ ಚಿಕ್ಕಾತಮ್ಮನಾದ ಭೂಮ ರಾಜನನ್ನೂ ಕಳುಹಿಶಿದರೂ. ನಾನೂ ಹೋಗಿ ನೋಡಿ ಬರುತ್ತೇನೆ ಯಂದು ಅಂಣನವರಿಗೆ ನಮಸ್ಕಾರವಂ ಮಾಡಿ ತನ್ನ ಗುರುಗಳಾ ಧ್ಯಾನವಂನ್ನೂ ಮಾಡಿ ವರ್ತಿಯವಳಕ್ಕೆ ಯಿಳಿದು ಯರಡು ಕರಗಳಂ ಜೋಡಿಸಿಕೊಂಡು ಯದುರಿಗೆ ನಿಂತನೂ. ಅಪ್ಪಾಮಗನೆ ನಿನ್ನಗೆ ರಾಜ್ಯಪಟ್ಟವಾಗಲಿ. ದೇಶಾ ಸಾಧನವಾಗಲಿ ನೀನು ನೆನದೆ ಕೂಡ್ಲೆ ಪ್ರತ್ತೆಕ್ಷವಾಗುತಕ್ತೆವೆಯಂದೂ ತಮ್ಮ ಹಸ್ತದಲ್ಲಿದ್ದ ಚತುಷ್ಕದ ಬಿಜವನ್ನೂ ನಿಂನ್ನ ಕೊರಳಲ್ಲಿ ಧರಿಶಿಕೋ ಯಂದೂ ಯರಡು ಕರದೊಳಗೆ ಯಿಟ್ಟರೂ. ನೀನು ಯೀ ಸ್ಥಳದಲ್ಲಿ ನನ್ನ ಮಠಮಹತ್ತು ಅನುವದೂ ಭೂಗತವಾಗಿ ಯಿರುತ್ತದೆ. ಕಾಮಟಗರನ್ನೂ ಕರಶಿ ಯಾ ಹೊತ್ತು ತಯಾರು ಮಾಡ್ಸಿ ಯಿಲ್ಲಿಯೆಳು ಕೊಪ್ಪರಿಗೆ ಲಕ್ಷ್ಮಿಯಿರುತ್ತಾಳೆ. ನೀನು ಯೂ ಮಠಮಹತ್ತು ತಯಾರು ಮಾಡ್ಸಿ ನಿನ್ನ ಹಿಂದೆ ಬಂದಾ ಮಾಯದ ಸ್ವಾಮಿಯವರಾ ಮಂಟಪ ಮಹತ್ಮೆಯನ್ನೂ ನಿರ್ಮಾಣ ಮಾಡುಯಂದರೂ. ಯೀ ಭೂಲೋಕ ಯೇಕ ಚಕ್ರವರ್ತಿಯಾಗಿ ಸಾಧನ ಮಾಡಿ ಸಿಂಹ್ಮಾಸನನಾವಂನ್ನೂ ಪ್ರತಿಷ್ಠೆ ಮಾಡುವುದೂ. ದೇಶಮಾಧ್ಯಾಯಿರುವಂಥಾ ಪೇಟಶಟ್ಟಿ, ಪಟ್ಲಶೆಟ್ಟ ದೊಡ್ಡ ದೊಡ್ಡ ಪೇಟೆಯವನ್ನೂ ಕರಶಿ ನೀನು ನಿರ್ಮಾಣಮಾಡಿದ್ದು ದೇಶಕ್ಕೆ ಜಗದ್ಗುರುವು ಮಾಡಿಸು. ಮೂರು ದೇಶದ ಸಮುಸ್ಥಾನೀಕರೂ ಮುವ್ವತ್ತು ಸಾವಿರ ಪೇಟೆಸ್ತರೂ ಕಲಿತೂ ಯೀ ಸಿಂಹ್ಮಾಸನವನ್ನೂ ನಿರ್ಮಾಣಮಾಡಿ ಪಾದ ಕಾಣಿಕೆಯಿಟ್ಟು ಯೀ ದೇವಸ್ಥಾನ ಮರುಳಾರ್ಯನ ಭಾರ ತಮ್ಮದೇ ಯಿರುತ್ತದೆ(ಯಿರುತ್ತಾರೆ) ಯಂದು ಹೊರಟು ಹೋಗುತ್ತಾರೆ. ಯಿತ್ತಲಾಗಿ ಭೂಮರಾಜರು ದೇಶಸಾಧನೆ ಮಾಡಿಕೊಂಡು ಬಂದೂ ಕಲಿಗದ್ದಿಯಾ ಹೊತ್ತು ಮರಿಯಾದಿ ಜನಗಳಿಗೆ ಮರಿಯಾದಿ ನಡಶಿ ಮಹಾಸ್ವಾಮಿ ಯಾಶೆ…. ದೊಡನೆ ಯಿದ್ದರೂ. ಆರು ಮಂದಿ ಅಂಣತಂಮ್ಮಗಳೂ ಹೋಗಿ ತಂಮ್ಮ ತಂದಿಯ ಮುಂದೆ ಯೀ ವೃತ್ತಾಂತವಂ ಹೇಳಿ ಭೂಮಸಮುದ್ರವಂನ್ನೂ ಬಿಟ್ಟು ಬೇಂಟಿಮಾಡಿದ ಜಾಗಕ್ಕೆ ಬಂದೂ ಮಾಯದ ಗುರುವುಗಳೂ ಬೆತ್ತದಿಂದಾ ಮಂಡಲವಂ ಬರದು ಯಿದ್ದಷ್ಟು ವುಗ್ಗಿಯನ್ನು ವಯಶಿ ಬುಡ್ಡೆಕಲ್ಲೂ ನಿರ್ಮಾಣ ಮಾಡಿದ್ದೂ ಚಿತ್ರಭಾನು ಸಂಕ ಕಾರ್ತ್ತಿಕ ಶುರ್ದ್ಧ ಬುಧವಾರ ಜರಿಮಲಿಯಂದು ಭಟ್ಟಂಗಿಯವನ ಕೂಡಾ ೩ ಸಾರಿ ಕೂಗಿಶಿ ಮುಂದೆ ಕೊಟೆಕೊತ್ತಳಾ ಭಾವಿತೆರೆ ಗ್ರಾಮ ಭಕ್ತಿಗೆ ೪೮ ಲಕ್ಷ ವಹಂ ತರಿಶಿ ಪಟ್ಣ ತಯಾರು ಮಾಡ್ಸಿ ೧೦ ವರುಷಕ್ಕೆ ವುಲ್ಲು ರೈತರಿಗೆ ಕೊಡಿಶಿ ರಾಜ್ಯವನ್ನೂ ಸಾಧನೆ ಮಾಡಿದ್ದೂ….

ಗುಡಿಕೋಟೆ, ಸೊಂಡೂರು, ವಡ್ಡು, ಧರೂಚಿ – ಬ್ರಾಂಡಾವಿ ತುಡುತುಸಿ ತೊಳಗಲ್ಲೂ ಬಳ್ಳಾರಿ ಪರಿಯಾಂತ್ರ ಸಾಧನೆಮಾಡಿದರೂ. ಮಲುಖಾರ್ಜುನನಾಯ್ಕ ೫೦೦ ಕಾಲಬಲ ದೊಡನೆ ೩೦೦ ಕುದುರೆ ೫ ಆನೆ ೯ ವಂಟೆಯಿಷ್ಟು ದಂಡು ತೆಗೆದುಕೊಂಡು ಹೋಗಿ ಯುದ್ಧ ಮಾಡಿ ಸುರಾಪುರದ ಹೆಂಣುಮಗಳೂ ತಲೆ ಕೊಯಿದೂ ಬಿಟ್ಟು ಹೆಂಣು ಮಗಳು ಸಂಪಾದಿಶಿದ ಭಕ್ಷ ಭಂಡಾರವನ್ನೂ ತೆಗೆದುಕೊಂಡು ಬಂದೂ ಜರಿಮಲಿಗೆ ಶೆರೊದರೊಳಗೆ ಆ ರುಂಡಾ ಬಂದೂ ಮನಿವಳಗೆ ಕುಂತುಯಿತ್ತು. ನಾನು ನಿಮ್ಮ ಮನೆ ದೇವತೆ ಆಗಿಯಿರುತ್ತೇನೆ. ನಾನು ದಂಡಿನವಳಗೆ ಯಿರುತ್ತೇನೆ. ನಂನ ನಾಮಕರಣ ದುರ್ಗದೇವತೆಯಂದು ಪೂಜಿಸೂ. ನಿನ್ನ ಕಾರ್ಯಕ್ಕೆ ಅಪಜಯವಿಲ್ಲಾ.

ಯಿತ್ತಲಾಗಿ ಭೂಮರಾಜರೂ ತನ್ನ ಮನೆಗುರುವೂ ಆದ ಮರುಳು ಶಿದ್ಧನ ಶೇವಾ ಮಂಟಪಗಳೂ ದೇವಸ್ಥಾನಗಳೂ ಬಾವಿಗಳೂ ಬೀದಿ ಬಾಜಾರುಗಳೂ ಗುಡಿಸುತ್ತ ಆವರಣಂಗಳೂ ಮಹಾಧ್ವಾರ ಗೋಪುರಗಳೂ ಕಾಮಟಗರ ಕಡೆಯಿಂದ ಕಟ್ಟಶಿದರೂ. ಮಹಾ ಸ್ವಾಮಿಯಾ ಪೂಜೆಯಂ ಮಾಡುವುದಕ್ಕೆ ಪಟ್ಟದ ಕಾಶಿಯ ಪೂಜಾರಿಯಂ ನೇಮಿಶಿದರೂ. ವುಗ್ರಾಣೀಕರು ಯಂದೂ ಭಾಧ್ಯನ್ನ ಮಾಡಿಯಿಟ್ಟರೂ ಗುಡಿನಾಯ್ಕ ಯಂದು ಯೀತಗೆ ಮಡಿ ಮಾನ್ಯವೊ ಹಿನಾಮು ನಾಯ್ಕನಿಗೆ ಕೊಟ್ಟರೂ. ಯೀ ಗುಡಿಗೆ ನೀವು ಮುವ್ವರೂ ಕರ್ತರೂ ಮಾಲು ಯಾ ಹೊತ್ತು ನಿಧಿ ನಿಕ್ಷೇಪಣೆ ಯೇನು ಬಂದರೂ ಖರ್ಚು ವಗೈರೆ ನಮ್ಮದೇ ಯಿರುತ್ತದೆ. ಯಾವತ್ತು ಖರ್ಚು ಸಾಧನ ಮಾಡಿದಲ್ಲದೆ ವುಳಿದ ಮಾಲು ನಿಮ್ಮ ಭಾಗಕ್ಕೆ ತೆಗೆದುಕೊಳ್ಳಬಹುದು ಮೆಲಾಗಿ ಮಹಾ ಸಂಸ್ತಾನದಿಂದ ರತೋತ್ಸಕ್ಕೆ ಮಹೋತ್ಸಗಳಿಗೆ ಮರುಳಾರ್ಯನ ಶೇವಕ್ಕೆ ವರುಷಾ ವಂದಕ್ಕೆ ೫೦ ವರಹಾ ಸಂಸ್ಥಾನದಿಂದಾ ಗುಡಿಗೆ ವಪ್ಪಿಸತಕ್ಕದ್ದೂ ಶ್ರೀ ಶ್ರೀ ಶ್ರೀ ಶ್ರೀ ಶ್ರೀ

ವಿಕ್ಕಮಾನಾಮ….. ಕಾರ್ತಿಕ ಶುದ್ಧ ೧೦ ಗುರುವಾರ ಮುಹೂರ‍್ತದಶನಾಮ ವರ್ತ್ತಿಯಲ್ಲೂ… ವುಜೀನಿಯ ಯಂಬ ನಾನು… ಮಾಡಿ ಹನ್ನೆರಡು ಮಂದಿ ಆಯಗಾರರನ್ನು ನಿರ್ನಯವಂ ಮಾಡಿ ವುತ್ತರದಿಕ್ಕಿನಲ್ಲಿ ಬುರ್ಜು ಕಟ್ಟಿಸಿ ಆ ಸ್ಥಳದಲ್ಲಿ ವುಗ್ಗಿಮನೆಯಂದೂ ಹೆಸರು ಕರೆದೂ ವುಗ್ಗಿಶಾಸ್ತ್ರವಂ ಮಾಡಿ ಶಾಸ್ತ್ರೀಕರಿಂದ ಬುಡ್ಡೆಕಲ್ಲು ಪೂಜರಿಂದ ನಿರ್ನಯವಂ ಮಾಡಿ ಮಾಯದ ಸ್ವಾಮಿಯಾದ ಕಂಚಿದೇಶದಿಂದ ತಂದ ಮಳೆಬಗೆ ಚನ್ನಬಸವಸ್ವಾಮಿಗಳನ್ನು ಪಟ್ಟಾಭಿಷೇಕ ಮಾಡುವುದಕ್ಕೆ ಹರಪನಹಳ್ಳಿ ಸಮುಸ್ಥಾನದವರೂ ಚಿತ್ರದುರ್ಗದ ಸಮುಸ್ಥಾನದವರೂ ಜರಿಮಲಿ…. ಯಿವರುಗಳು ಬಂದು ದೇಶ ಮಧ್ಯವರ‍್ತಕರೂ ಸಾವುಕಾರನೂ ಪೇಟಶೆಟ್ಟ ಪಟ್ಣಶೆಟ್ಟಯವರೂ ಯಿನ್ನು ಮುಂತಾದವೂರ ಕಲಿತೂ ಯೀ ಸಿಂಹ್ಮಾಸನಕ್ಕೆ ಅಧಿಪತಿಯನ್ನು ಮಾಡಿ ಮಠ ಮಹತ್ತು ತಯಾರು ಮಾಡ್ಸಿ ಆ ಸಿಂಹ್ಮಾಸನದ ಗದಿಗೆ ಮೇಲೆ ಕೂಡ್ರಿಸಿ ಪಾದಗಾಣಿಕೆಯನ್ನು ಯಿಟ್ಟು ಯೀ ಮಠಕ್ಕೆ ಕಾರ್ಯ ಕತ್ತರಾಗಿಯಿರುವುದೂ ಯಂದೂ ಸರ್ವಜನರನ್ನೂವಪ್ಪಿಶಿದರೂ. ಯಿತ್ತಲಾಗಿ ಶ್ರೀ ಮರುಳೂಸಿದ್ಧೇಶ್ವರ ದೇವರಗುಡಿ ಭೂಸ್ತಾಪನೆ ಆಗಿಯಿತ್ತು. ಅದನ್ನು ಕಾಮಟಗರನ್ನು ತರಿಶಿ ತೆಗೆಸಲಾಗಿ ಮರ್ಮದ್ದಾರೆ ಆಳ್ವೆರಿ ಯಾಹೊತ್ತೂ ಖರ್ಚು ಆದ್ದು ೩ ಲಕ್ಷ ನಾಣ್ಯವಾರ ಮುಟ್ಟಿಯಿರುತ್ತೆ ಮರುಳಾರ್ಯ.

ಮೂಲ: ಲಕ್ಷ್ಮಣತೆಲಗಾವಿ(ಸಂ) ಜರಿಮಲೆ ಸಂಸ್ಥಾನದ ವಂಶಾವಳಿ
ಚಂದ್ರವಳ್ಳಿ(ಸಂ)ಡಾ. ಎಂ.ವಿ. ಶ್ರೀನಿವಾಸ ಲಕ್ಷ್ಮಣ್ ತೆಲಗಾವಿ
ಜಿಲ್ಲಾ ಇತಿಹಾಸ ಸಂಶೋಧನಾ ಮಂಡಳಿ, ಚಿತ್ರದುರ್ಗ ೧೯೭೬
ಭಾಗ ಪು. ೩೭ರಿಂದ ೪೩ರವರೆಗೆ

ಈ ಹಸ್ತಪ್ರತಿಯು ಬೆಳ್ಳಿಬಟ್ಲು ಶ್ರೀ ಸುಬ್ಬರಾಯನಿಗೆ ನಿಡುಗಲ್ಲಿನಲ್ಲಿ ದೊರೆಯಿತು. ಅವರ ನೆಂಟರಾದ ಜಾನಕಲ್ಲು ಹೋಟೆಲ್ ಮಾಲೀಕ ಶ್ರೀ ಆನಂದರಾಯರಲ್ಲಿ ಕಾರಣಾಂತರದಿಂದ ಬಂದು ಸೇರಿದ್ದು, ಚಿತ್ರದುರ್ಗದ ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯದ ಶ್ರೀ ಕೆ.ವಿ. ಮಂಜುನಾಥರಾಯರ ಮೂಲಕ ನನಗೆ ತಲುಪಿತು. ಈ ವಂಶಾವಳಿಯ ಮೂಲಪ್ರತಿಯಲ್ಲಿರುವ ಭಾಷೆಗೆ ಸ್ವಲ್ಪವೂ ಲೋಪ ಬಾರದಂತೆ ಇಲ್ಲಿ ಪ್ರಕಟಿಸಲಾಗಿದೆ. ಈ ಪ್ರತಿಯು ಉಪಲಬ್ಧವಿರಬಹುದಾದ ಮೂಲ ಪ್ರತಿಯೊಂದರ ನಕಲಾಗಿದೆ. ೧೯೨೭ – ೨೮ರಲ್ಲಿ ಈ ನಕಲನ್ನು ತಯಾರಿಸಿದಂತೆ ತೋರುತ್ತದೆ. ಅಲ್ಲದೆ ಇದೇ ಹಸ್ತಪ್ರತಿಯಲ್ಲಿ ಸುಮಾರು ೭ ಪುಟಗಳಷ್ಟು ವೃತ್ತಾಂತವನ್ನು ತೆಲುಗಿನಲ್ಲಿ ಬರೆಯಲಾಗಿದೆ. ಸಧ್ಯಕ್ಕೆ ಅದನ್ನಿಲ್ಲಿ ಪ್ರಕಟಿಸಲಾಗಿಲ್ಲ.

ಸಂ. ಲಕ್ಷ್ಮಣ್‌ ತೆಲಗಾವಿ.

[1] The vemshavalle of Jeremale Samsthen Family

[2] ಅದೇ.

[3] ಕರ್ನಾಟಕ ವಿಷಯ ವಿಶ್ವಕೋಶ ಮೈಸೂರು ವಿ.ವಿ. ಪು-೬೮೫.

[4] Memorandum of poligars of the ceded Districts deted 1802 Munro Report

[5] The vemshavalle of Jeremale Samsthen Family

[6] Memorandum of poligars of the ceded Districts deted 1802 Munro Report

[7] ಅದೇ. The vemshavalle of Jeremale Samsthen Family

[8] ಕಪಟರಾಳ ಕೃಷ್ಣರಾವ್ ಸುರುಪುರದ ಸಂಸ್ಥಾನ ಇತಿಹಾಸ ಉಷಾ ಪ್ರಕಾಶನ, ಬೆಂಗಳೂರು. Arul S.K. History and Culture of Surapura samsthan 1652-1858 A Phd Thesis-Pune-1998.

[9] Memorandum of poligars of the ceded Districts deted 1802 Munro Report

[10] The vemshavalle of Jeremale Samsthen Family

[11] ಅದೇ.

[12] ಅದೇ.

[13] ಅದೇ.