ಕನ್ನಡ ನಾಡಿನಲ್ಲಿ ಚಕ್ರವರ್ತಿಗಳ ಅಧೀನದಲ್ಲಿ ಸ್ಥಳೀಯ ಆಡಳಿತವನ್ನು ನಿರ್ವಹಿಸುತ್ತಿದ್ದ ಸಾಮಂತರು ಅಥವಾ ಸ್ಥಳೀಯ ಅರಸರು ಬಹುಮಟ್ಟಿಗೆ ಚಕ್ರವರ್ತಿಗಳು ಕೈಗೊಂಡ ರಾಜ್ಯ ವಿಸ್ತರಣ ಹಾಗೂ ಆಂತರೀಕ ಕಲಹಗಳನ್ನು ಶಮನಗೊಳಿಸುವ ಕಾರ್ಯಗಳಲ್ಲಿ ನೆರವಾಗಿ ರಾಜ್ಯದಲ್ಲಿ ಶಾಂತಿ ನೆಮ್ಮದಿಗಳು ನೆಲೆಗೊಳ್ಳಲು ಕಾರಣರಾಗಿದ್ದಾರೆ.

ರಂಜೋಳದ ಸಿಂದ ಮನೆತನದ ಕೆಲವೊಂದು ವ್ಯಕ್ತಿಗಳ ಆಳ್ವಿಕೆಯ ಬಗೆಗೆ ಸ್ಪಷ್ಟವಾಗಿ ತಿಳಿಯುತ್ತದೆಯಾದರೂ ಅವರ ಇತಿಹಾಸ ಇನ್ನೂ ಪರಿಪೂರ್ಣಗೊಂಡಿಲ್ಲ. ಇವರ ಚರಿತ್ರೆಯನ್ನು ರೂಪಿಸುವಲ್ಲಿ ಸದ್ಯಕ್ಕೆ ಶಾಸನಗಳೇ ಪ್ರಮುಖ ಆಕರಗಳಾಗಿವೆ. ಇತರೆ ಆನುಷಂಗಿಕ ಆಕರಗಳು ಸದ್ಯಕ್ಕೆ ಲಭ್ಯವಿರುವುದಿಲ್ಲ. ಇವರನ್ನು ಕುರಿತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉಲ್ಲೇಖಿಸುವ ಹದಿನೆಂಟು ಶಾಸನಗಳು ಲಭ್ಯ ಇವೆ. ದೊರೆತಿರುವ ಶಾಸನಗಳು ಒದಗಿಸುವ ಮಾಹಿತಿಯ ಇತಿಮಿತಿಯೊಳಗೆ ನಾವು ಇವರ ಚರಿತ್ರೆಯನ್ನು ಗಮನಿಸಬೇಕಾಗಿದೆ.

ಕಲ್ಯಾಣದ ಕರ್ನಾಟಕದ ಸಾಮಂತರಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದ್ದರೂ ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಮನೆತನವಾಗಿದೆ. ಇವರ ಬಗೆಗೆ ಎರಡು ಲೇಖನ ಹಾಗೂ ಸೂಗಯ್ಯ ಹಿರೇಮಠರ ಒಂದು ಚಿಕ್ಕ ಪುಸ್ತಕವನ್ನು ಹೊರತುಪಡಿಸಿದರೆ ಹೆಚ್ಚಿನ ಅಧ್ಯಯನ ನಡೆದಿರುವುದಿಲ್ಲ. ಈಗಿನ ಬೀದರ್ ಜಿಲ್ಲೆಯ ಅಟ್ಟಳೆನಾಡಿನಲ್ಲಿ ಸಿಂದ ಎಂಬುದಾಗಿ ಸ್ಥಳೀಯ ಅರಸರ ಚರಿತ್ರೆಯಲ್ಲಿ ಗುರುತಿಸಬಹುದಾಗಿದೆ. ದಿವಂಗತ ಬಾ.ರಾ. ಗೋಪಾಲ ಅವರು ಈ ಸಾಮಂತ ಅರಸರನ್ನು ಕುರಿತು ಮೊಟ್ಟಮೊದಲಿಗೆ ರಂಜೋಳದಲ್ಲಿ ದೊರೆತ ಶಾಸನವನ್ನಾಧರಿಸಿ ಮಾನವಿಕ ಕರ್ನಾಟಕ ನಿಯತ ಕಾಲಿಕೆಯಲ್ಲಿ ಸಂಕ್ಷಿಪ್ತ ಪರಿಚಯಾತ್ಮಕ ಲೇಖನವನ್ನು ಬರೆದಿದ್ದಾರೆ.

ಸಿಂದರು ದಕ್ಷಿಣ ಭಾರತದ ಪ್ರಭಾವಿ ನಾಗ ಜನಾಂಗಕ್ಕೆ ಸೇರಿದ್ದು, ಬಹಳ ಪ್ರಾಚೀನ ಕಾಲದಿಂದಲೇ ಆಡಳಿತ ಸೂತ್ರವನ್ನಿಡಿದುಕೊಂಡು ಬಂದಿದ್ದಾರೆ. ತಮ್ಮ ಮೂಲಪುರುಷ ಕಾರಣವಾಗಿ ಅದೇ ಹೆಸರಿನಿಂದ ಕರೆಯಿಸಿಕೊಂಡರಲ್ಲದೆ ಅವರ ಆಡಳಿತ ಪ್ರದೇಶವೂ ಅದೇ ಹೆಸರಿನಿಂದ ಕರೆಯಲ್ಪಟ್ಟಿದೆ. ಸಿಂದ ಮನೆತನವು ನಂತರದ ದಿನಮಾನಗಳಲ್ಲಿ ವಿವಿಧ ಶಾಖೆಗಳಾಗಿ ಕವಲೊಡೆದು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಆಂಧ್ರಪ್ರದೇಶ ಕರ್ನೂಲ್, ಅನಂತಪುರ ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿದೆ. ಕನ್ನಡ ನಾಡಿನ ವಿವಿಧ ಭಾಗಗಳಲ್ಲಿ ಆಳ್ವಿಕೆ ನಡೆಸಿದ ಸಿಂದ ಅರಸುಮನೆತನದ ಶಾಖೆಗಳಲ್ಲಿ ರಂಜೋಳದ ಸಿಂದ ಮನೆತನವೂ ಒಂದು. ರಂಜೋಳ ಸಿಂದ ಮನೆತನ ವಿಜಯನಗರ ಪೂರ್ವದ ರಾಜಪ್ರಭುತ್ವದ ಅಧ್ಯಯನಗಳಿಗೆ ಸೇರಿಸಬಹುದಾದ ಸಾಮಮತ ಮನೆತನವಾಗಿದೆ. ರಂಜೋಳದ ಸಿಂದ ಮನೆತನದವರು ತಮ್ಮ ವಂಶದ ಮುಲ ಪುರುಷನು ಧರಣೇಂದ್ರ ಮತ್ತು ಆತನ ಅಗ್ರಮಹಿಷಿ ಪದ್ಮಾವತಿ ದೇವಿಯರಿಗೆ ಜನಿಸಿದ ನಿಡುದೋಳ ಸಿಂದ ಎಂಬುದಾಗಿ ಹೇಳಿಕೊಂಡಿರುವುದು ರಂಜೋಳ ಶಾಸನದಿಂದ ತಿಳಿದುಬರುತ್ತದೆ. ಇವರ ಚರಿತ್ರೆ ಕದಂಬ ಅರಸುಮನೆತನದ ಕಾಲದಿಂದಲೇ ಪ್ರಾರಂಭವಾಗುತ್ತದೆಯಾದರೂ ಅಲ್ಲಿಂದ ಕಲ್ಯಾಣ ಚಾಲುಕ್ಯ ದೊರೆ ಆರನೆಯ ವಿಕ್ರಮಾದಿತ್ಯನ ಕಾಲದವರೆಗಿನ ಅವರ ವಂಶಾವಳಿಯನ್ನು ಪೂರ್ಣ ಪ್ರಮಾಣದಲ್ಲಿ ಗುರುತಿಸಲು ಸರಿಯಾದ ಸಾಕ್ಷ್ಯಾಧಾರಗಳು ದೊರೆಯುತ್ತಿಲ್ಲ. ರಂಜೋಳ ಸಿಂದರ ಮೂಲ ಪುರುಷ ನಿಡುದೊಳ ಸಿಂದನು ಕದಂಬರ ಸಾಮಂತನಾಗಿ ಅಳ್ವಿಕೆ ನಡೆಸುತ್ತಿದ್ದುದ್ದಾಗಿ ತಿಳಿದುಬರುತ್ತದೆ.

ಕನ್ನಡ ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯ ವಿಭಾಗವು ರಾಯಚೂರಿನ ತಾರನಾಥ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ದಿನಾಂ ೧, ೨ ಮಾರ್ಚ್ ೨೦೦೬ ರಂದು ರಾಯಚೂರಿನಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ಕಲ್ಯಾಣ ಕರ್ನಾಟಕ ಸಾಮಂತ ಅರಸುಮನೆತನಗಳು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಂಡಿಸಿದ್ದ ಪ್ರಬಂಧದ ವಿಸ್ತೃತರೂಪ.

ಕದಂಬ ದೊರೆ ಮಯೂರವರ್ಮನು ಅವನ ಯೋಗ್ಯತೆಯನ್ನು ನೋಡಿ ತನ್ನ ಮಗಳಾದ ಲಕ್ಷ್ಮೀಮತಿಯನ್ನು ಕೊಟ್ಟು ವಿವಾಹ ಮಾಡಿದ್ದನ್ನು ಹಾಗೂ ಸ್ವತಃ ನಿಡುದೋಳ ಸಿಂದನು ತನ್ನ ಭುಜಬಲದಿಂದಲೇ ಸಾಮಂತ ಪಟ್ಟಕ್ಕೆ ಬಂದುದನ್ನು ರಂಜೋಳ ಶಾಸನದಲ್ಲಿ ಬರುವ ಮಯೂರವರ್ಮನ ಲಲಾಟ ಲೋಚನದ ಉರಿಯನ್ನು ಆರಿಸಲು ತೋಳನ್ನು ಮುಂದೆ ಚಾಚಿದನು ಎಂಬ ಶಾಸನೋಕ್ತಿಯು ಕದಂಬ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ, ಎದುರಾದ ಕಷ್ಟವನ್ನು ಪರಿಹರಿಸುವಲ್ಲಿ ನಿಡುದೋಳ ಸಿಂದನು ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬುದನ್ನು ಸೂಚಿಸುತ್ತದೆ.

ಕನ್ನಡ ನಾಡಿನ ಚರಿತ್ರೆಯಲ್ಲಿ ಸಿಂದ ರಾಜಮನೆತನದ ಇತಿಹಾಸ ಕದಂಬರ ಆಳ್ವಿಕೆಯ ಕಾಲದೊಂದಿಗೆ ತಳುಕು ಹಾಕಿಕೊಂಡಿದ್ದು ನಾಲ್ಕನೇ ಶತಮಾನದಿಂದ ಪ್ರಾರಂಭವಾಗುತ್ತದೆ. ಸಿಂಧ ಮನೆತನದ ಅನೇಕ ಶಾಖೆಗಳ ರಾಜರುಗಳು ಕನ್ನಡ ನಾಡಿನ ವಿವಿಧ ಭಾಗಗಳಲ್ಲಿ ಆಳ್ವಿಕೆ ನಡೆಸಿದರೂ ಸ್ವತಂತ್ರರಾಗಿ ಆಳ್ವಿಕೆ ನಡೆಸದೆ ಸಾಮಂತರಾಗಿ ಪ್ರಮುಖ ರಾಜಮನೆತನಗಳ ಅಧೀನತ್ವದಲ್ಲಿ ಸಾಮಂತರಾಗಿಯೇ ಮುಂದುವರಿದುಕೊಂಡು ಬಂದಿದ್ದಾರೆ. ರಂಜೋಳದ ಸಿಂಧರು ಕಾಲಕ್ಕನುಗುಣವಾಗಿ ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ಸೇವುಣರು ಹಾಗೂ ಕಾಕತೀಯರ ಸಾಮಂತರಾಗಿದ್ದುಕೊಂಡು ಅಟ್ಟಳೆ ನಾಡಿನಲ್ಲಿ ಆಳ್ವಿಕೆ ನಡೆಸಿದ್ದಾರೆ.

ಈ ಮನೆತನದವರು ಆಳ್ವಿಕೆ ನಡೆಸಿದ ಪ್ರದೇಶವನ್ನು ಶಾಸನಗಳು ಅಟ್ಟಳೆನಾಡೆಂದು ಕರೆದಿವೆ. ಬಹುತೇಕ ಈಗಿನ ಬೀದರ್ ಪ್ರದೇಶದ ಭೂಭಾಗವನ್ನು ಹೊಂದಿರುವ ಅಂದರೆ ಮಂಜರಾ ಮತ್ತು ಕಾರಂಜಾ ನದಿಗಳ ಮಧ್ಯದ ಪ್ರದೇಶವು ಅಟ್ಟಳೆ ನಾಡೆಂದು ಖ್ಯಾತಿ ಪಡೆದಿತ್ತು.

ನಿಡುದೋಳ ಸಿಂಧನ ಮಗ ಹಾಗೂ ರಂಜೇರು ಸಿಂದ ಮನೆತನದ ಪ್ರಥಮ ಅರಸನಾದ ಜಗತ್ಸೇಬನನ್ನು ಕುರಿತು ‘ಜಗತ್ಸೇಬ್ದ ಭುವನ ಜನಾಶ್ರರ್ಯಂ ಸೌರ್ಯನಂ ಸಿಂದ ಕುಳಾರ್ಣವ ಮೃಗಲಕ್ಷನುಮೆನಿತ್ಸವದಿಂದೆ ಸೇದಿದನೊಪ್ಪುವ ಅಟ್ಟಳೆ ನಾಡೊಳ್‌’ ಎಂದು ರಂಜೇರು ಶಾಸನಗಳು ಉಕ್ತಿಸಿವೆ.

ಅಟ್ಟಳೆನಾಡು ಹೆಸರಿಗನುಗುಣವಾಗಿ ಎತ್ತರದ ಪ್ರದೇಶವನ್ನು ಹೊಂದಿದ್ದಿತು. ಅಟ್ಟ ಎಂದರೆ ಎತ್ತರ ಭಾಗ, ಇಳೆ ಎಂದರೆ ಭೂಮಿ, ಪ್ರದೇಶ. ಎತ್ತರದ ನಾಡು, ಭೂಭಾಗವನ್ನು ಹೊಂದಿದ ಪ್ರದೇಶವೇ ಅಟ್ಟಳೆನಾಡು. ಶಾಸನಗಳಲ್ಲಿ ಅಟ್ಟಲೆ ನಾಡನ್ನು ಅಟ್ಟಳೆ – ೩೦೦ ಎಂದು ಕರೆದಿವೆ. ಅಟ್ಟಳೆ – ೩೦೦ ರಲ್ಲಿ ಭಲ್ಲುಕೆ – ೮೪, ಪುಲಿಚರ – ೩೦, ನಾಗಾವೆ – ೧೨ ಉಪವಿಭಾಗಗಳು ಒಳಪಟ್ಟಿದ್ದವು. ರಂಜೇರ ಅಟ್ಟಳೆ ನಾಡಿನ ಮುಖ್ಯ ಕೇಂದ್ರವಾಗಿದ್ದಿತು. ಅಟ್ಟಳೆ ನಾಡಿನ ರಂಜೇರವನ್ನು ಕೇಂದ್ರವಾಗಿಟ್ಟುಕೊಂಡು ಈ ಸಿಂದರು ರಾಜ್ಯಭಾರ ಮಾಡಿದ್ದಾರೆ.

ರಂಜೋಳ ಸಿಂದರನ್ನು ಕುರಿತ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉಲ್ಲೇಖಿಸಿರುವ ಹದಿನೆಂಟು ಶಾಸನಗಳು ಬೀದರ್, ಗುಲಬರ್ಗಾ ಹಾಗೂ ಆಂಧ್ರಪ್ರದೇಶದ ಮೇಡಕ ಜಿಲ್ಲೆಯಲ್ಲಿ ದೊರೆತಿವೆ. ಈ ಶಾಸನಗಳಲ್ಲಿ ಸೇವುಣರ ಸಿಂಘಣ, ಕಲಚೂರಿ ರಾಯಮುರಾರಿದೇವ ಹಾಗೂ ಕಾಕತೀಯ ರುದ್ರಮಹಾದೇವಿಯ ಕಾಲಕ್ಕೆ ಸೇರಿದ ಒಂದೊಂದು ಶಾಸನವನ್ನು ಹೊರತು ಪಡಿಸಿದರೆ ಉಳಿದವುಗಳು ಕಲ್ಯಾಣ ಚಾಲುಕ್ಯರ ಆರನೆಯ ವಿಕ್ರಮಾದಿತ್ಯ, ಮುಮ್ಮಡಿ ಸೋಮೇಶ್ವರ, ಇಮ್ಮಡಿ ಜಗದೇಕಮಲ್ಲ, ೧ನೇ ಸೋಮೇಶ್ವರ, ಒಂದನೇ ಜಯಸಿಂಹನ ಕಾಲಕ್ಕೆ ಸೇರಿದವುಗಳಾಗಿವೆ. ಶಾಸನೋಕ್ತ ರಂಜೇರುವಿನ ಸಿಂದರು ಬಹುಮಟ್ಟಿಗೆ ಕಲ್ಯಾಣ ಚಾಲುಕ್ಯರ ಸಾರ್ಮಭೌಮತ್ವವನ್ನು ಒಪ್ಪಿಕೊಂಡು ನಿಷ್ಠ ಸಾಮಂತರಾಗಿಯೇ ಮುಂದುವರೆದಿದ್ದಾರೆ.

ರಂಜೋಳ ಹಾಗೂ ಅಣದೂರ ಶಾಸನಗಳಲ್ಲಿಯ ಉಲ್ಲೇಖದಿಂದ ರಂಜೋಳ ಸಿಂದರ ವಂಶಾವಳಿಯನ್ನು ಪುನರ‍್ರಚಿಸಬಹುದಾಗಿದ್ದರೂ ಆರಂಭ ಕಾಲದಿಂದ ಅಂದರೆ ಕದಂಬ ದೊರೆ ಮಯೂರವರ್ಮನ ಕಾಲದೊಂದಿಗೆ ತಳುಕು ಹಾಕಿಕೊಂಡಿರುವ ನಿಡುದೋಳ ಹಾಗೂ ಆತನ ಮಗ ಜಗತ್ಸೇವ್ಯ ಕಾಲದಿಂದ ಕಲ್ಯಾಣ ಚಾಲುಕ್ಯರ ಕಾಲದವರೆಗೆ ಕ್ರಿ.ಶ. ೪ನೇ ಶತಮಾನದಿಂದ ಕ್ರಿ.ಶ. ೧೧ನೇ ಶತಮಾನದವರೆಗೆ ರಂಜೋಳದ ಸಿಂದರ ಇತಿಹಾಸ ಅಸ್ಪಷ್ಟವಾಗಿದೆ.

ಅಟ್ಟಳೆ ನಾಡನ್ನು ಆಳುತ್ತಿದ್ದ ಸಿಂದ ಅರಸರ ಉಲ್ಲೇಖ ಕ್ರಿ.ಶ. ೧೦೯೯ರ ರಂಜೋಳ ಶಾಸನದಲ್ಲಿ ಕಂಡುಬರುತ್ತಿದ್ದ ಅಲ್ಲಿಂದ ಕ್ರಿ.ಶ. ೧೨೫೦ರ ವರೆಗಿನ ಶಾಸನಗಳಲ್ಲಿ ಮಾತ್ರ ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ಸೇವುಣರು ಹಾಗೂ ಕಾಕತೀಯ ಅರಸರ ಸಾಮಂತರಾಗಿ ಆಳ್ವಿಕೆ ನಡೆಸಿದ ರಂಜೋಳದ ಸಿಂಹ ಅರಸರುಗಳ ಉಲ್ಲೇಖ ಕಂಡು ಬರುತ್ತಿದ್ದು ಆ ಅರಸರುಗಳ ವಂಶಾವಳಿಯನ್ನು ಸಧ್ಯಕ್ಕೆ ಪುನರ್ರಚಿಸಿ ಕೊಡಬಹುದಾಗಿದೆ. ಕ್ರಿ.ಶ. ೧೨೫೦ರ ನಂತರದ ಕಾಲದಲ್ಲಿ ಈ ಮನೆತನ ಅರಸರುಗಳ ಉಲ್ಲೇಖ ಶಾಸನಗಳಲ್ಲಿ ಕಂಡುಬರುವುದಿಲ್ಲ.

ಕ್ರಿ.ಶ. ನಾಲ್ಕನೇ ಶತಮಾನದಲ್ಲಿ ನಿಡುದೋಳ ಸಿಂದನ ಮೂರನೆಯ ಮಗನಾದ ಜಗತ್ಸೇಖ್ಯನು ಅಹಿಚ್ಛತ್ರದಿಂದ ಬಂದು ಅಟ್ಟಳೆ ನಾಡಿನಲ್ಲಿ ಆಳ್ವಿಕೆ ನಡೆಸಿದ ಸಿಂದವಂಶದ ಮೊದಲ ಅರಸ. ಈತನ ಪರಾಕ್ರಮದ ಬಗೆಗೆ ವಿಸ್ತೃತವಾದ ವಿವರಣೆ ರಂಜೇರು ಶಾಸನದಲ್ಲಿ ದೊರೆಯುತ್ತದೆ. ಈತನ ಅಹಿಚ್ಛತ್ರದಿಂದ ವಿಪ್ರರನ್ನು ಕರೆಯಿಸಿಕೊಂಡು ಬಂದು ತನ್ನ ರಾಜ್ಯದ ಭಲ್ಲುಂಕೆಯಲ್ಲಿ ನೆಲೆಸಲು ಅವಕಾಶ ಕಲ್ಪಿಸಿ ವಿದ್ಯಾಚಟುವಟಿಕೆಗಳು ನಿರಂತರವಾಗಿ ನಡೆಯಲು ಅವಕಾಶ ಕಲ್ಪಿಸಿದವನಾಗಿದ್ದಾನೆ. ಮುಂದೆ ಈತನ ವಂಶದವರಾದ ಕುನ್ನಲ ಬೊಪ್ಪಲ, ತೇಜದುರ್ಗತಿ, ಹರಕತಿ, ಅಲ್ಲಮರು ಅಧಿಕಾರಕ್ಕೆ ಬಂದ ಬಗ್ಗೆ ಉಲ್ಲೇಖ ದೊರೆಯುತ್ತದೆಯಾದರೂ ಹೆಚ್ಚಿನ ವಿವರಣೆ ಇಲ್ಲ.

ಅಲ್ಲಮನ ನಂತರ ಬಂದಂತ ಬದ್ಧಗಭೂಪನು ಮಹಾ ಪರಾಕ್ರಮಿಯಾಗಿದ್ದನೆಂಬುದು ಅಣದೂರ ಶಾಸನದಲ್ಲಿಯ ‘ರಿಪು ಸಂಘಾತಂ ನೆಗಳಲ್ದನ್ ಪ್ರತಾಪಿ ಬದ್ಯಗಭೂಪ’ ಎಂಬ ವಿವರಣೆಯಿಂದ ತಿಳಿದುಬರುತ್ತದೆ. ಈತನ ಮಕ್ಕಳು ಗೊಣ್ಣ ಮತ್ತು ಗೊಂಕರು. ಗೊಂಕನು ಆರನೆಯ ವಿಕ್ರಮಾದಿತ್ಯನ ಸಾಮಂತನಾಗಿದ್ದು ಕೊಂಡು ಕಲ್ಯಾಣ ಚಾಲುಕ್ಯರಿಗೂ ಚೋಳರಿಗೂ ನಡೆದ ಯುದ್ಧದಲ್ಲಿ ಭಾಗವಹಿಸಿ ಚೋಳದೊರೆಯನ್ನು ಹಿಮ್ಮೆಟ್ಟಿಸಿ ಜಯವನ್ನು ತಂದುಕೊಟ್ಟ ಎಂಬ ಸಂಗತಿಯು ರಂಜೋಳ ಶಾಸನದಲ್ಲಿಯ ‘ಮುನಿದುಗ್ರಾರತಿ ಸೈನ್ಯಂಗಳನೆ ತುಳಿದು ಕೊಂದಿಕ್ಕಿ ಚಾಳುಕ್ಯ ಸಿಂಹಾಸನ ಚೋಳ ನಚ್ಚಿಸಲೊತವಗೆ ಲೊಟ್ಟೆಂದಾಡಿಸಿ ತುದಿಯೊಳು ಗೊಂಕ ನಾರಾಡಿಸಿಂಗೊಂಕನೃಪಂ’ ಎಂಬ ವಿವರಣೆಯಿಂದ ತಿಳಿದುಬರುತ್ತದೆ. ಅಟ್ಟಳೆ ನಾಡಿನ ಪ್ರಸಿದ್ಧ ಅರಸನಾಗಿದ್ದ ಗೊಂಕರಸನು ದತ್ತೋಗೆಯ ಶ್ರೀಧೋರೇರ್ಶವರ ದೇವರಿಗೆ ನಾಗಾಪೆ ಪನ್ನೆರಡರೊಳಗಣಯಿಂಚವುದರದ ಮೂಡಲದ ಹೊಲವನ್ನು ದಾನವಾಗಿ ದೇವರಿಗೆ ನಾಗಾಪೆ ಪನ್ನೆರಡರೊಳಗಣಯಿಂಚವುದರದ ಮೂಡಲದ ಹೊಲವನ್ನು ದಾನವಾಗಿ ಬಿಟ್ಟ ವಿವರ ಕ್ರಿ.ಶ. ೧೧೦೪ರ ಇಂಚೂರ ಶಾಸನದಲ್ಲಿ ತಿಳಿದುಬರುತ್ತದೆ.

ರಂಜೇರುವಿನ ಸಿಂದರಲ್ಲಿ ಪ್ರಸಿದ್ಧನಾದ ಅರಸನೆಂದರೆ ಹಜ್ಜರಸ. ಈತನು ಗೊಂಕರಸನ ಮಗನಾಗಿದ್ದು ಸುಧೀರ್ಘವಾದ ಕಾವ್ಯ ಗುಣದಿಂದ ಕೂಡಿರುವ ಸಿಂದವಂಶದ ಪ್ರಾಚೀನತೆಯನ್ನುಳ್ಳ ರಂಜೋಳ ಶಾಸನವನ್ನು ಬರೆಯಿಸಿದವನಾಗಿದ್ದಾನೆ. ಈತನ ಉಲ್ಲೇಕ ರಂಜೋಳ ಶಾಸನದಲ್ಲಿ ಮಾತ್ರವಲ್ಲದೆ ಕ್ರಿ.ಶ. ೧೧೨೫ರ ಹಿಲಾಲಪುರ ಶಾಸನ, ಕ್ರಿ.ಶ. ೧೧೨೭ರ ಹಾಲಹಳ್ಳಿ ಶಾಸನಗಳಲ್ಲಿಯೂ ಕಂಡುಬರುತ್ತದೆ. ಈತನು ಆರನೆಯ ವಿಕ್ರಮಾದಿತ್ಯ ಹಾಗೂ ಮುಮ್ಮಡಿ ಸೋಮೇಶ್ವರರ ಸಾಮಂತನಾಗಿದ್ದುಕೊಂಡು ಆಳ್ವಿಕೆ ನಡೆಸಿದ್ದಾನೆ. ಈತನ ವ್ಯಕ್ತಿತ್ವವನ್ನು ಕುರಿತು ಶಾಸನಗಳು ವರ್ಣಸಿವೆ. ಈತನು ಶ್ರೀಹಜ್ಜೇಶ್ವರ, ಪದ್ಮೇಶ್ವರ, ರಾಮೇಶ್ವ ದೇವರಿಗೆ ದತ್ತಿ ಬಿಟ್ಟ ವಿವರ ಶಾಸನದಿಂದ ತಿಳಿದುಬಂದಿದೆ.

ಈತನ ತರುವಾಯ ಒಂದನೇ ವೀರ ಪೆರ್ಮಾಡಿ ಅಧಿಕಾರಕ್ಕೆ ಬರುತ್ತಾನೆ. ಈತನನ್ನು ಕುರಿತ ವಿವರ ರಂಜೋಳ ಶಾಸನದಲ್ಲಿ ಮಾತ್ರವಲ್ಲದೆ ಕ್ರಿ.ಶ. ೧೧೧೭ರ ಗುಲಬರ್ಗಾ ಶಾಸನ ಹಾಗೂ ಕ್ರಿ.ಶ. ೧೧೨೯ರ ನಾರಾಯಣಪುರ ಶಾಸನಗಳಲ್ಲಿಯೂ ಕಂಡುಬರುತ್ತದೆ. ಈತನು ಸರಿಸಿಗೆಯಲು ಶ್ರೀರಾಮೇಶ್ವರ ದೇವರಿಗೆ ದತ್ತಿ ಕೊಟ್ಟಿದ್ದರ ವಿಚಾರ ಕಾಲ ನಿರ್ದೇಶನವಿಲ್ಲದ ರಂಜೇರುವಿನ ಶಾಸನದಿಂದ ತಿಳಿದುಬರುತ್ತದೆ. ಕ್ರಿ.ಶ. ೧೧೦೬ ಭಾಲ್ಕಿಯ ಶಾಸನವು ಈತನನ್ನು ಶ್ರೀಮನ್ಮಹಾಮಂಡಳೇಶ್ವರ ಕುಮಾರ ಹೆಮ್ಮೆ ಪೆರ್ಮ್ಮಾಡಿದೇವರು ಎಂದು ಕರೆದಿದ್ದು ಈತನು ಬಲ್ಲುಂಕೆಯ ಬ್ರಹ್ಮಪುರಿಯ ಮಹಾಜನಂಗಳಿಗೆ ದಾನಕೊಟ್ಟಿದ್ದನ್ನು ತಿಳಿಸಿದೆ. ಈತನ ನಂತರ ಭೈರವನು ಆಳ್ವಿಕೆ ನಡೆಸಿದ ಬಗೆಗೆ ಕಾಲನಿರ್ದೇಶನವಿಲ್ಲದ ರಂಜೇರ ಶಾಸನದಿಂದ ತಿಳಿದುಬರುತ್ತದೆ. ಶ್ರೀಮನ್ಮಹಾಮಂಡೇಶ್ವರ ಭೈರವ ದೇವರಸರು ಸರ್ವೇಶ್ವರದೇವರ ಕಾಲಂಕರ್ಚಿ ದತ್ತಿ ಬಿಟ್ಟ ವಿವರ ಶಾಸನದಿಂದ ತಿಳಿದುಬರುತ್ತದೆ. ಈತನ ನಂತರ ಎರಡನೆ ಹೆಮ್ಮೆ ಪೆರ್ಮಾಡಿ ಆಳ್ವಿಕೆ ನಡೆಸಿದ ಬಗೆಗೆ ಶಾಸನವು ತಿಳಿಸುತ್ತದೆ. ಈತನ ನಂತರ ಈತನ ಮಕ್ಕಳಾದ ಬೀಚಿದೇವ ಹಾಗೂ ಬರ್ಮದೇವರು ಅಧಿಕಾರಕ್ಕೆ ಬಂದುದ್ದಲ್ಲದೆ ಕಲಚೂರಿ ಅರಸರ ಮಾಂಡಳೀಕರಾಗಿದ್ದರು ಎಂಬ ವಿವರ ಕ್ರಿ.ಶ. ೧೧೬೯ರ ಕಲಚೂರಿ ದೊರೆ ರಾಯಮುರಾರಿ ದೇವನ ಶಾಸನದಿಂದ ತಿಳಿದುಬರುತ್ತದೆ.

ಈತನ ನಂತರ ಬಂದಂತಹ ಆದ್ಯರಸು ಸೇವುಣರ ಮಾಂಡಳಕ ನಾಗಿದ್ದುಕೊಂಡು ಆಳ್ವಿಕೆ ನಡೆಸುತ್ತಾನೆ. ಆದ್ಯರಸನು ಹಜ್ಜವರಿಗೆಯ ಶ್ರೀಹಜ್ಜೇಶ್ವರ ದೇವರನ್ನು ಪುನಃ ಪ್ರತಿಷ್ಠೆಯ ಮಾಡಿ ದತ್ತಿಬಿಟ್ಟಿದ್ದನ್ನು ಕ್ರಿ.ಶ. ೧೨೯೦ರ ರಂಜೋಳ ಶಾಸನ ತಿಳಿಸುತ್ತದೆ. ಈತನ ನಂತರ ಬಂದ ನೂರ್ಮಡಿ ಗಂಡ ಭೈರವ ಅರಸನು ಸೇವುಣರಲ್ಲಿಟ್ಟಿದ್ದ ತನ್ನ ನಿಷ್ಠೆಯನ್ನು ಬದಲಿಸಿ ಕಾಕತೀಯ ರುದ್ರಮದೇವಿಗೆ ನಿಷ್ಠರಾಗಿರುವುದನ್ನು ವಿವರಿಸುತ್ತದೆ. ಸೇವುಣರಿಗೂ ಕಾಕತೀಯ ರುದ್ರಮದೇವಿಗೂ ನಡೆದ ಯುದ್ಧದಲ್ಲಿ ಭಾಗವಹಿಸಿ ಸೇವುಣರನ್ನು ಸೋಲಿಸಿ ಕಾಕತೀಯರಿಗೆ ಜಯವನ್ನು ತಂದುಕೊಟ್ಟ ವಿವರ ಬೀದರ್ ಶಾಸನದಿಂದ ತಿಳಿದುಬರುತ್ತದೆ. ಈತನ ತರುವಾಯ ದುಗ್ಗರಸ, ದುಗ್ಗರಸನ ಮಗ ಗೊಂಕರಸ, ಗೊಂಕರಸನ ಮಗ ಹಿರಿಯ ಭೈರವದೇವರ ಪ್ರಸ್ತಾಪ ಈ ಶಾಸನದಲ್ಲಿ ದೊರೆಯುತ್ತದೆಯಾದರೂ ದುಗ್ಗರಸ ಮತ್ತು ಗೊಂಕರಸರ ಬಗೆಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ.

ಸದ್ಯಕ್ಕೆ ಹಿರಿಯ ಭೈರವದೇವನೇ ಶಾಸನೋಕ್ತ ರಂಜೋಳ ಸಿಂದ ಮನೆತನದ ಕೊನೆಯ ಅರಸ. ಈತನ ನಂತರದ ರಂಜೇರದ ಸಿಂದರ ಅರಸರನ್ನು ಉಲ್ಲೇಖಿಸುವ ಶಾಸನಗಳು ದೊರೆಯುತ್ತಿಲ್ಲ. ಶಾಸನೋಕ್ತ ಕೊನೆಯ ಅರಸನು ಕಾಕತೀಯ ರಾಣಿ ರುದ್ರಮದೇವಿಯ ಕಾಕತೀಯರಿಗೆ ದೊರಕಿಸಿ ಕೊಟ್ಟುದ್ದಾಗಿ ತಿಳಿದುಬರುತ್ತದೆ. ಹಿರಿಯ ಭೈರವ ದೇವರ ನಂತರ ರಜೇರು ಸಿಂದರ ಇತಿಹಾಸ ಅಸ್ಪಷ್ಟವಾಗಿದೆ. ಬಹುಶಃ ಈ ಪ್ರದೇಶವು ಮುಸ್ಲಿಂರ ಆಳ್ವಿಕೆಗೆ ಒಳಗಾದಾಗ ರಂಜೇರ ಸಿಂದರ ಆಳ್ವಿಕೆಯು ಕೊನೆಗೊಂಡಿರಬೇಕು ಎಂದೆನಿಸುತ್ತದೆ. ಶಾಸನಗಳನ್ನಾಧರಿಸಿ ರಂಜೇರನ ಸಿಂದರನ್ನು ಕುರಿತು ಹೇಳುವುದಾದರೆ ಕ್ರಿ.ಶ. ೧೦೯೯ರಿಂದ ಕ್ರಿ.ಶ. ೧೨೫೦ರವರೆಗೆ ಸುಮಾರು ೧೫ ಜನ ಸಿಂದ ಅರಸರು ಆ ಕಾಲದ ಪ್ರಮುಖ ರಾಜ ಮನೆತನಗಳಿಗೆ ನಿಷ್ಟರಾಗಿದ್ದುಕೊಂಡು ಅಟ್ಟಳ ನಾಡಿನಲ್ಲಿ ಆಳ್ವಿಕೆ ನಡೆಸಿದವರಾಗಿದ್ದಾರೆ. ಕಲ್ಯಾಣ ರಂಝೇರನ ಸಿಂದ ಮನೆತನವು ಒಂದಾಗಿದೆ. ಆರನೆಯ ವಿಕ್ರಮಾದಿತ್ಯನಂತಹ ಸಾರ್ವಭೌಮರು ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ನಿಷ್ಟಾವಂತ ಸಾಮಂತರಾಗಿದ್ದು ಅಟ್ಟಳೆ ನಾಡನ್ನು ಆಳಿದ ಈ ರಂಜೇಶನ ಸಿಂದರು ತಮ್ಮ ಹೆಸರಿನಲ್ಲಿಯೇ ಕೆಲವಡೆ ಶಾಸನಗಳನ್ನು ಹಾಕಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಇವರ ಶೈವಧರ್ಮ ಪಕ್ಷ ಪಾತಿಗಳಾಗಿದ್ದರೂ ಅನ್ಯ ಧರ್ಮಗಳನ್ನು ಪೋಷಿಸಿದ್ದಾರೆ. ಅವರು ವಂಶಪಾರಂಪರ್ಯವಾಗಿ ಬಂದಂತಹ ಭೋಗವತಿ ಪುರವವೇಶ್ವರರು ಅಹಿಚ್ಛತ್ರ ಪುರದರಾಮರರಕ್ಷೆ, ಪದ್ಮಾವತೀ ಲಬ್ದವರ ಪ್ರಸಾದ ಪಾತಾಳ ಚಕ್ರವರ್ತಿ ಇತ್ಯಾದಿ ಬಿರುದುಗಳ ಜೊತೆಗೆ ತಮ್ಮನ್ನು ಉತ್ತರೇಶ್ವರ ಪಾದಕಮಳ ಭ್ರಿಂಗರೆಂದು ಕರೆದುಕೊಂಡಿದ್ದಾರೆ. ಭೋಗವತಿ ಪುರವರೇಶ್ವರ ಎಂಬ ಬಿರುದಿನ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಈ ವಂಶ ಪಾರಂಪರ್ಯವಾಗಿ ಬಂದ ಬಿರುದು ಸಿಂದರ ಮೂಲ ನೆಲೆಯನ್ನು ಸಂಕೇತಿಸುತ್ತದೆ.

ರಂಜೋಳದ ಸಿಂದರು ಇತರೆ ಸಿಂದ ಮನೆತನಗಳ ಹಾಗೆ ಕದಂಬರ ಕಾಲಕ್ಕೆ ಅಸ್ತಿತ್ವಕ್ಕೆ ಬಂದು ನಂತರದ ಕಾಲದಲ್ಲಿ ಕಲ್ಯಾಣ ಚಾಳುಕ್ಯ, ಕಲಚೂರಿ, ಸೇವುಣ ಹಾಗೂ ಕಾಕತೀಯ ಅರಸರ ಆಳ್ವಿಕೆಯ ಕಾಳದವರೆಗೂ ಅವರ ಸಾಮಂತರಾಗಿದ್ದು ಕೊಂಡು ಅಟ್ಟಳೆ ನಾಡಿನಲ್ಲಿ ಆಳ್ವಿಕೆ ನಡೆಸಿ ಅವರ ಪತನಾನಂತರ ತಾವೂ ಸಹ ಇತಿಹಾಸದಿಂದ ಕಣ್ಮರೆಯಾಗಿ ಹೋಗಿದ್ದಾರೆ. ಇವರು ಕರ್ನಾಟಕದ ಮಧ್ಯಕಾಲೀನ ಇತಿಹಾಸದಲ್ಲಿ ಸಾಮಂತ ಮನೆತನದವರಾಗಿ ಆಡಳಿತ ನಡೆಸಿ, ಚಕ್ರವರ್ತಿ ಹಾಗೂ ಜನತೆಯ ನಡುವೆ ಸಂಪರ್ಕದ ಸೇತುವೆಯಾಗಿದ್ದುಕೊಂಡು ಅಟ್ಟಳೆ ನಾಡಿನ ನಾಡಿನ ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಕಾರಣಕರ್ತರಾಗಿದ್ದರೂ ವ್ಯವಸ್ಥಿತ ಅಧ್ಯಯನ ನಡೆಯದೆ ಕರ್ನಾಟಕದ ಸ್ಥಳೀಯ ಅರಸರ ಚರಿತ್ರೆಯಲ್ಲಿ ಸರಿಯಾದ ಸ್ಥಾನ ಪಡೆಯದೇ ಹೋಗಿದ್ದಾರೆ. ಇನ್ನು ಮುಂದೆಯಾದರೂ ಕುರುಗೋಡು ಸಿಂದರನ್ನು ಕುರಿತು ನಡೆದಿರುವ ವ್ಯವಸ್ಥಿತ ಅಧ್ಯಯನದ ಹಾಗೆ ರಂಜೋಳ ಸಿಂದರ ಬಗೆಗೆ ಅಧ್ಯಯನ ನಡೆಯಬೇಕಾಗಿದೆ. ರಂಜೋಳ ಸಿಂದ ಮನೆತನದ ಪ್ರಧಾನವಾದ ಮನೆತನವಲ್ಲ ಆದರೆ ಕನ್ನಡ ನಾಡಿನ ಮಧ್ಯಕಾಲೀನ ಚರಿತ್ರೆಯಲ್ಲಿ ರಾಜಕೀಯ ಶಕ್ತಿಗೆ ಸ್ಥಿರತೆಯನ್ನೊದಗಿಸಿದ ಮನೆತನವಾಗಿದೆ. ಇವರು ಅಟ್ಟಳೆ ನಾಡಿನಲ್ಲಿ ನಡೆಸಿದ ಆಳ್ವಿಕೆಯ ವಿವರ, ಯುದ್ಧದಲ್ಲಿ ಪಾಲ್ಗೊಂಡ ವಿವರ, ಇವರ ಕಾಲದ ಧಾರ್ಮಿಕ ಹಾಗೂ ಸಾಮಾಜಿಕ ಜೀವನ, ಆಳುವ ಪ್ರಭುಗಳ ನಡುವೆ ಹೊಂದಿದ್ದ ಸಂಬಂಧ, ನಾಡಿನ ಇತಿಹಾಸ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಈ ಮನೆತನದ ಕೊಡಿಗೆಯ ಬಗ್ಗೆ ಇನ್ನೂ ವಿಸ್ತೃತ ಅಧ್ಯಯನ ನಡೆಯಬೇಕಾಗಿದೆ.

ಗ್ರಂಥ ಋಣ

೧. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬೀದರ ಜಿಲ್ಲೆ, (ಸಂ), ದೇವರಕೊಂಡಾರೆಡ್ಡಿ ಮತ್ತು ಇತರರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬.
೨. ಹೈದರಾಬಾದ್ ಕರ್ನಾಟಕ ಕನ್ನಡ ಶಿಲಾಶಾಸನಗಳು(ಸಂ), ವಿ. ಶಿವಾನಂದ ಬನಾರಸ್ ಹಿಂದು ವಿಶ್ವವಿದ್ಯಾಲಯ ವಾರಣಾಸಿ, ೧೯೯೨.
೩. ಸೂಗಯ್ಯ ಹಿರೇಮಠ ರಂಜೇರಿನ ಸಿಂದರು, ಶ್ರೀಸಿದ್ಧಲಿಂಗೇಶ್ವರ ಪ್ರಕಾಶನ, ಗುಲಬರ್ಗಾ, ೨೦೦೨.