ಸಾಮ್ರಾಜ್ಯದ ಅನೇಕಭಾಗಗಳಲ್ಲಿ ಮಂಡಳವೆಂಬುದು ಒಂದು ಘಟಕ. ಇದಕ್ಕೆ ಒಡೆಯ ಮಂಡಳೇಶ್ವರನಾಗಿದ್ದು ಅವನನ್ನು ಮಂಡಳಾಧಿಪತಿ, ಮಹಾಮಂಡಳೇಶ್ವರನೆಂದು ಕರೆಯಲಾಗಿದೆ. ಇತರ ಅಧಿಕಾರಿಗಳು, ಪ್ರಮುಖ ವ್ಯಕ್ತಿಗಳು ನೀಡುತ್ತಿದ್ದ ದಾನ – ದತ್ತಿ, ಕೈಗೊಳ್ಳುವ ಧಾರ್ಮಿಕ ಕಾರ್ಯಗಳನ್ನು ಹೇಳುವಾಗ ಚಕ್ರವರ್ತಿ ಮತ್ತು ಮಹಾಮಂಡಳೇಶ್ವರನನ್ನು ನೆನೆಯುವುದು ಸ್ವಾಭಾವಿಕವಾಗಿ ಕಾಣುತ್ತದೆ. ಚಕ್ರವರ್ತಿಯಂತೆ ಮಂಡಳೇಶ್ವರರೂ ಸ್ವತಂತ್ರವಾದ ಮಂತ್ರಿಮಂಡಳ, ಅಧಿಕಾರ ವರ್ಗ ಮತ್ತು ಸೈನಿಕರನ್ನು ಹೊಂದಿದ್ದರು. ಇವರಿಗೆ ವಂಶಪರಂಪರೆಯಾಗಿ ಬಂದ ಬಿರುದು, ರಾಜ ಚಿಹ್ನೆಗಳನ್ನು ಧರಿಸುತ್ತಿದ್ದರು.

ಈ ಮಂಡಳೇಶ್ವರದಲ್ಲಿ ಎರಡು ಭಾಗಗಳನ್ನಾಗಿ ಮಾಡಿಕೊಳ್ಳಬಹುದು. ವಂಶಪರಂಪರಾಗತವಾಗಿ ಬಂದ ಆಡಳಿತ. ಇನ್ನೊಂದು ಅರಸನ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಪದೋನ್ನತಿಯನ್ನು ಪಡೆದು ಮಂಡಳೇಶ್ವರರಾಗಿದ್ದುದು. ಬಳ್ಳಾರಿ ಪ್ರದೇಶದಲ್ಲಿ ಆಳ್ವಿಕೆ ಮಾಡಿದ ಪಾಂಡ್ಯರು, ಸಿಂದರು, ಕದಂಬರಂತೆ, ನೊಳಂಬರದು ಒಂದು ಮನೆತನ. ನೊಳಂಬರು ಕರ್ನಾಟಕದ ಕೋಲಾರ, ಬೆಂಗಳೂರು, ತುಮಕೂರು, ಚಿತ್ರದುರ್ಗ ಬಳ್ಳಾರಿ, ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕೆಲವು ಭಾಗಗಳನ್ನು ಆಳಿದರು.

ಅನೇಕ ಶಾಸನಗಳಲ್ಲಿ ಉಲ್ಲೇಖಿತರಾದ ಈ ನೊಳಂಬರ ಚರಿತ್ರೆಯನ್ನು ಕುರಿತು. ಬಹುಕಾಲದ ಹಿಂದೆಯೇ ಬಿ.ಎಲ್. ರೈಸ್ ಅವರ ಆದಿಯಾಗಿ, ಡಾ.ಸಿ. ಶಿವರಾಮಮೂರ್ತಿ, ಡಾ. ಎಂ.ಪಿ. ಕೃಷ್ಣರಾವ್‌ ಮತ್ತು ಶ್ರೀ ಎಂ. ಕೇಶವ ಭಟ್ಟ್‌, ಡಾ. ಎ.ವಿ. ನರಸಿಂಹಮೂರ್ತಿ, ಡಾ. ಎಂ.ವಿ. ಕೃಷ್ಣಮೂತಿ, ಬರ‍್ರೆಟ್‌, ಡಾ. ದೇವರಕೊಂಡಾರೆಡ್ಡಿ ಹಾಗೂ ಜಯಾ, ಎಂಬುವರಲ್ಲದೇ ಇನ್ನೂ ಮುಂತಾದವರು ಒಟ್ಟಾಗಿ ಅಥವಾ ಬಿಡಿ ಬಿಡಿಯಾಗಿ ಹಲವು ಮಗ್ಗಲುಗಳಿಂದ ಅಧ್ಯಯನ ಮಾಡಿದ್ದಾರೆ.

ನೊಳಂಬರ ಪ್ರಾಚೀನತೆ

ನೊಳಂಬರ ಮೂಲ ಅದರ ಅರ್ಥ ಸ್ವರೂಪವನ್ನು ಅನೇಕ ವಿದ್ವಾಂಸರು ಕೋಲ್ಹಾಪುರದ ಕ್ರಿ.ಶ. ೧೧೧೫ರ ಶಿಲಾಹಾರರ ಶಾಸನದ ಉಲ್ಲೇಖವನ್ನಿಟ್ಟುಕೊಂಡು ಪೌರಾಣಿಕ ಹಿನ್ನೆಲೆ ಮತ್ತು ಲಿಂಗ್ವೆಸ್ಟಿಕ್ ಮೂಲದಿಂದ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನೊಳಂಬರ ಮೂಲಪುರುಷ ತ್ರಿಣಯನ ಪಲ್ಲವ, ಕಂಚಿಪತಿ ಎಂದು ಶಾನನದಲ್ಲಿ ವರ್ಣಿತವಾಗಿದೆ.

ಆಂಧ್ರಪ್ರದೇಶದ ಮಡಕಶಿರೂರ ತಾಲೂಕಿನ ಇಂದಿನ ಹೇಮಾವತಿ ಅಥವಾ ಹಿಂದಿನ ಹೆಂಜೇರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ ನೊಳಂಬರನ್ನು ಪಲ್ಲವ ವಂಶದವರೆಂದು ಶಾಸನಗಳಲ್ಲಿ ಕರೆಯಲಾಗಿದೆ. ಆದರೆ ಕಂಚಿ ಪಲ್ಲವರು ತಮ್ಮನ್ನು ನೊಳಂಬರೆಂದು ಯಾವ ಶಾಸನಗಳಿಲ್ಲೂ ಗುರುತಿಸಿಕೊಂಡಿಲ್ಲ.

ಶಾಸನಗಳು ಇವರನ್ನು ಕಾಂಚಿಪುರವರೇಶ್ವರ, ಪಲ್ಲವ ಕುಲತಿಲಕ, ಪಲ್ಲವನ್ವಯ ಮುಂತಾದ ಪ್ರಶಸ್ತಿಗಳೊಂದಿಗೆ ನೊಳಂಬ, ನೊಣಂಬ, ನೊಂಬ, ತಮಿಳು ಶಾಸನಗಳು ನುಳುಂಬ ಎಂದು ಮುಂತಾಗಿ ಕರೆದಿವೆ.

ನೊಳಂಬರ ಆಳ್ವಿಕೆ

ಕರ್ನಾಟಕ ಆಂಧ್ರ – ತಮಿಳು ಪ್ರದೇಶಗಳನ್ನೊಳಗೊಂಡಂತೆ. ನೊಳಂಬರ ಆಳ್ವಿಕೆಯನ್ನು ಮೂರು ಭಾಗಗಳಲ್ಲಿ ವಿಂಗಡಿಸಬಹುದು.

ಬಾದಾಮಿ ಚಾಲುಕ್ಯರ ಕಾಲದಲ್ಲಿ ಪಲ್ಲವರೊಂದಿಗೆ ರಾಜಕೀಯ ಸಂಘರ್ಷಗಳು ನಡೆಯುತ್ತ ಬಂದವು. ರಾಷ್ಟ್ರಕೂಟರ ಕಾಲದಲ್ಲಿ ರಾಷ್ಟ್ರಕೂಟರ ಮತ್ತು ಗಂಗರ ಮಧ್ಯೆ ಇದೇ ರೀತಿಯ ಸಂಘರ್ಷಗಳು ನಡೆದವು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಚಾಲುಕ್ಯ ಮತ್ತು ಚೋಳರ ಮಧ್ಯ ಘರ್ಷಣೆಗಳಾದವು.

ಈ ಒಟ್ಟು ರಾಜಕೀಯ ಹಿನ್ನೆಲೆಯಲ್ಲಿ ನೊಳಂಬರು ವಿವಿಧ ಅರಸು ಮನೆತನಗಳಿಗೆ ಮಾಂಡಳಿಕ ಅರಸರಾಗಿ ಅವರ ಮಧ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಸಂಘರ್ಷಗಳಲ್ಲಿ ಪಾಲ್ಗೊಂಡು ರಾಜ್ಯವಿಸ್ತರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತ ಬಂದರು. ಮೊದಲು ಹೇಮಾವತಿ, ಬರಗೂರು, ಆವನಿಯವರೆಗಿದ್ದ ರಾಜ್ಯ ಎರಡನೆಯ ಹಂತದಲ್ಲಿ ಉಚ್ಚಂಗಿ ದುರ್ಗ ದಕ್ಷಿಣಕ್ಕೆ ಧರ್ಮಪುರಿಯವರೆಗೆ ವಿಸ್ತಾರ ಪಡೆಯಿತು. ಮೂರನೆಯ ಹಂತದಲ್ಲಿ ಬಳ್ಳಾರಿ ಜಿಲ್ಲೆಯ ಕಂಪಲಿ ಆಡಳಿತದ ಕೇಂದ್ರವಾಗಿ ಬಳ್ಳಾರಿ, ಚಿತ್ರದುರ್ಗ, ಆಂಧ್ರದ ಕೆಲವು ಭಾಗಗಳನ್ನೊಳಗೊಂಡಿತ್ತು. ಕೊನೆಯ ಕಾಲದಲ್ಲಿ ಮರೋಳ – ಪಟ್ಟದಕಲ್ಲಿನವರೆಗೂ ವಿಸ್ತಾರ ಪಡೆಯಿತು.

ನೊಳಂಬರು ಕ್ರಿ.ಶ. ೮ನೆಯ ಶತಮಾನದಲ್ಲಿ ಹೆಂಜೆರು ಅಥವಾ ಹೇಮಾವತಿಯಲ್ಲಿ ಆಳುತ್ತಿದ್ದರು. ಅದು ಅವರ ಮೊದಲ ರಾಜಧಾನಿಯಾಗಿತ್ತು. ೧೧ನೆಯ ಶತಮಾನದಲ್ಲಿ ಇವರ ಆಡಳಿತ ಬಳ್ಳಾರಿ ಜಿಲ್ಲೆಯ ಕಂಪಲಿಗೆ ಸ್ಥಳಾಂತರಗೊಂಡಿತು. ಕಲ್ಯಾಣ ಚಾಳುಕ್ಯರೊಂದಿಗೆ ಸೌಖ್ಯ ಬೆಳೆಸಿಕೊಂಡು ಕೌಟುಂಬಿಕ ಸಂಬಂಧಗಳಾಗಿದ್ದುದು ಮತ್ತು ಚೋಳರ ದಾಳಿ ಕರ್ನಾಟಕದ ಮೇಲೆ ಹೆಚ್ಚಾಗತೊಡಗಿ, ಈ ಭಾಗದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ಕಂಪಲಿಗೆ ಬರುತ್ತಾರೆ. ಗಂಗ ಮತ್ತು ರಾಷ್ಟ್ರಕೂಟರಿಗೆ ಸಾಮಂತರಾಗಿದ್ದು, ನಂತರ ಅಧಿಕಾರಕ್ಕೆ ಬಂದಂಥ ಕಲ್ಯಾಣ ಚಾಳುಕ್ಯರಿಗೆ ಸಾಮಂತರಾಗಿದ್ದುದಲ್ಲದೆ, ಅವರ ಸಂಬಂಧವನ್ನು ಬೆಳೆಸುವ ಮೂಲಕ ನೊಳಂಬಾಡಿ – ೩೨೦೦೦ದ ಅಧಿಪತಿಗಳಾಗಿ ಆರನೆಯ ವಿಕ್ರಮಾದಿತ್ಯನವರೆಗೂ ಅಧಿಕಾರದಲ್ಲಿದ್ದರು.

ಆರಂಭದ ಅರಸರು

ನೊಳಂಬರ ಆರೊಭದ ಅರಸರ ಬಗ್ಗೆ ಸರಿಯಾದ ಮಾಹಿತಿ ಇಲ್ಲದ್ದರಿಂದ ಸ್ವಲ್ಪ ಗೊಂದಲವಾಗಿ ಕಾಣುತ್ತದೆ. ಹೇಮಾವತಿಯ ಸ್ತಂಭ ಶಾಸನದ ಆಧಾರದಂತೆ ನೊಳಂಬರ ವಶಾವಳಿಯಲ್ಲಿ ತ್ರಿನಯನನು ಮೊದಲಿಗನಾಗಿದ್ದಾನೆ. ಇವನನ್ನು ಎಂಟನೆಯ ಶತಮಾನದ ಆದಿಭಾಗದಲ್ಲಿ ಚಾಳುಕ್ಯ ಅರಸ ವಿಜಯಾದಿತ್ವನಿಂದ ಸೋಲಿಸಲ್ಪಟ್ಟ ತ್ರಿನಯನನೆಂದು ಗುರುತಿಸಲಾಗಿದೆ. ಸಿಂಹಪೋತನು ಗಂಗ ಶಿವಮಾರನ ಆಶ್ರಯದಲ್ಲಿದ್ದನು. ಶಿವಮಾರನ ಕಿರಿಯ ಸಹೋದರ ದುಗ್ಗಿಮಯ್ಯನು ಸ್ವತಂತ್ರನಾಗಲು ಬಯಸುತ್ತಿದ್ದಾಗ, ಸಿಂಹಪೋತನ್ನು ಅವನ ವಿರುದ್ಧ ಯುದ್ಧ ಮಾಡಲು ಕಳುಹಿಸಿದ್ದನು. ಶಿವಮಾರನನ್ನು ರಾಷ್ಟ್ರಕೂಟರು ಬಂದಿಸಿದಾಗ ಈ ನೊಳಂಬರು ಅವರ ಅಧೀನಕ್ಕೆ ಬಂದರು. ಆಗ ಅವರು ನೊಳಂಬಳಿಗೆ ೧೦೦೦ ಮತ್ತು ಇತರ ಪ್ರಾಂತವನ್ನೊಳಗೊಂಡಂತೆ ಆಡಳಿತ ನಡೆಸಿದರು. ಇದು ನೊಳಂಬ ವಾಡಿ ಕೇಂದ್ರದ ಪ್ರಾಂತವಾಗಿದ್ದಿರಬಹುದೆಂದು ರೈಸ್ ಅವರ ಅಭಿಪ್ರಾಯವಾಗಿದೆ. ಸಿಂಹಪೋತನ ನಂತರ ಚಾರುಪೊನ್ನೆರ ಮತ್ತು ಪೊಳಲ್ಚೋರರ ಆಡಳಿತ ನಡೆಯಿತು.

ಗಂಗ ಅರಸ ಒಂದನೆಯ ರಾಚಮಲ್ಲ ಸತ್ಯೆವಾಕಯನು ರಾಷ್ಟ್ರಕೂಟರಿಂದತಮ್ಮ ರಾಜ್ಯವನ್ನು ಮರಳಿ ಪಡೆದು ಅಧಿಕಾರಕ್ಕೆ ಬರುತ್ತಿದ್ದಂತೆ ಪೊಳಲ್ಚೋರ ಗಂಗರ ಅಧೀನಕ್ಕೆ ಬಂದನು. ರಾಚಮಲ್ಲ ಸತ್ಯೆವಾಕ್ಯನು ಸಿಂಹಪೋತನ ಮೊಮ್ಮಗಳನ್ನು ಮದುವೆಯಾದನು. ಅಲ್ಲದೇ ತನ್ನ ಮಗಳಾದ ಜಯಬ್ಬೆಯನ್ನು ಪೊಳಲ್ಚೋರನಿಗೆ ಮದುವೆ ಮಾಡಿ ಕೊಟ್ಟನು. ಇವನಿಗೆ ನೊಳಂಬಾದಿರಾಜನೆಂದೂ ಕರೆಯಲಾಗಿದೆ. ಆಂಧ್ರಪ್ರದೇಶದ ಕಂಬದೂರು ಶಾಸನದಲ್ಲಿ ನೊಳರಾಜಾಧಿರಾಜನ ಉಲ್ಲೇಖ ಬರುತ್ತದೆ. ಇವನು ಚಿದ್ದುಗೊನ್ವೆಯಲ್ಲಿ ಕೆರೆಯನ್ನು ಕಟ್ಟಿದ ಒಡ್ಡರನ್ನು “ನೊಳಂಬದೊಡ್ಡರೆಂದು” ಕರೆದು “ಅವರಿಗೆ ಶ್ರೀಮುಖ ರಾಮರ್‌ ಶ್ರೀಮುಖ ದೊಡ್ಡರೆಂಬ” ಬಿರುದುಕೊಟ್ಟು ಕಡಗವಿಟ್ಟು ಸನ್ಮಾನಿಸುತ್ತಾನೆ. ಈತನ ರಾಣಿ ಗಂಗವಂಶದ ರಾಚಮಲ್ಲ ಮಹಾದೇವಿಯರ ಪುತ್ರಿ ಜಾಯಬ್ಬರಸಿ. ಇವರಿಗೆ ಮಹೇಂದ್ರ ಎಂಬ ರಾಜ ಕುಮಾರನು ಜನಿಸುತ್ತಾನೆ. ಆದರೆ ಕೋಲಾರ ಜಿಲ್ಲೆಯ ಅವಣಿಯ ಶಾಸನ ಪೊಳಲ್ಚೋರನ ಅಗ್ರಮಹಿಷಿಯಾದ ಕದಂಬವಂಶದ ದೇವಬ್ಬರಸಿಗೆ ಜನಿಸಿದನೆಂದು ಉಲ್ಲೇಖಿಸುತ್ತದೆ.

ಮಹೇಂದ್ರನಿಗೆ ನೊಳಂಬಾಧಿರಾಜ ಮತ್ತು ನೊಳಂಬ ನಾರಾಯಣ ಎಂಬ ಹೆಸರುಗಳೂ ಇದ್ದವು. ಕ್ರಿ.ಶ. ೮೮೩ರ ಕಂಬದೂರು ಶಾಸನದಲ್ಲಿ ಪಲ್ಲವ ಕುಲತಿಲಕ ಶ್ರಿಮನ್ನೊೞಮ್ಬರಾಜ ಮಹೆಂದ್ರ ತ್ರಿಭುವನಧೀರಂ ಎಂದು ಕರೆಯಲಾಗಿದೆ. ಇವನು ತನ್ನ ತಂದೆಯಂತೆ ಗಂಗ – ೬೦೦೦ ವನ್ನು ಆಳುತ್ತಿದ್ದುದಲ್ಲದೆ, ಮಹಾಬಲಿ ವಂಶವನ್ನು ನಾಶ ಮಾಡಿ ಮಹಾಬಲಿ ಕುಲ ವಿಧ್ವಂಸನೆಂಬ ಬಿರುದು ಪಡೆದುಕೊಳ್ಳುತ್ತಾನೆ. ಇದರಿಂದ ಇವನ ರಾಜ್ಯ ಸೆಲಂ ಜಿಲ್ಲೆಯ ಧರ್ಮಪುರಿಯವರೆಗೆ ವಿಸ್ತರಿಸಿತು.

ನಂತರ ನೊಳಂಬರು ರಾಷ್ಟ್ರಕೂಟರಿಗೆ ನಿಷ್ಟರಾಗಿದ್ದಂತೆ ಕಾಣುತ್ತದೆ. ಗಂಗರಾಜ ಬೂತುಗನು ಮಹೇಂದ್ರನೊಡನೆ ಹೋರಾಡಿದನು. ಅವನ ಮಗ ಎರೆಯಪ್ಪನು ಮಹೇಂದ್ರನನ್ನು ಕೊಂದು ಮಹೇಂದ್ರಾಂತಕ ಎಂಬ ಬಿರುದನ್ನು ಪಡೆದುಕೊಳ್ಳುತ್ತಾನೆ.

ಮಹೇಂದ್ರನು ಕದಂಬ ರಾಜಕುಮಾರಿ ದೇವಾಂಬಿಕೆಯನ್ನು ಮತ್ತು ಗಂಗವಂಶದ ಗಾಮಬ್ಬೆಯನ್ನು ಮದುವೆಯಾಗಿದ್ದ. ಗಾಮಬ್ಬೆ ಮಹಾದೇವಿಗೆ ಅಯ್ಯಪ್ಪದೇವನೆಂಬುವನು ಜನಿಸುತ್ತಾನೆ.

ಅಯ್ಯಪ್ಪದೇವನು ರಾಷ್ಟ್ರಕೂಟರ ಅಧೀನದಲ್ಲಿದ್ದು, ಬಳ್ಳಾರಿ ಪ್ರದೇಶವನ್ನು ನೋಡಿಕೊಳ್ಳುತ್ತಿದ್ದ. ರಾಷ್ಟ್ರಕೂಟ ಅರಸ ಗೋವಿಂದವಲ್ಲಭನ ಕ್ರಿ.ಶ. ೯೩೧ ರ ಚಿರಸ್ತಿಹಳ್ಳಿ ಶಾಸನದಲ್ಲಿ ಪಡಿಗನೊಂಬಾ ಎಂಬ ವೀರನು ಊರದಾಳಿಯಲ್ಲಿ ಸತ್ತಾಗ ಮಾಸವಾಡಿ – ೧೪೦, ಕೋಗಳಿ ನಾಡನ್ನು ಆಳುತ್ತಿದ್ದ ಅಯ್ಯಪಯ ಸತ್ತವನ ಕುಟುಂಬಕ್ಕೆ ದಾನನೀಡಿದ್ದಾನೆ. ಅಯ್ಯಪ್ಪದೇವನು “ಪಲ್ಲವಾನ್ವಯ ಶ್ರೀಪೃಥುವಿವಲ್ಲಿಭ ಕುಲತಿಲಕ ನನ್ನಿಗಾಶ್ರಯ ಶ್ರೀಮದಯ್ಯಪದೇವ ರಾಜಙ್ಗೆಯೆ” ಎಂದು ಶಾಸಗಳು ವರ್ಣಿಸುತ್ತವೆ.

ಅಯ್ಯಪದೇವ ಮತ್ತು ಗಂಗ ರಾಜಕುಮಾರಿ ಪೊಲ್ಬ್ಬರಸಿಗೆ ಜನಿಸಿದ ಅಣ್ಣಿಗನು ಪಲ್ಲವಾನವಯ ಶ್ರೀ ಪ್ರುಥುವೀವಲ್ಲಭ ಪಲ್ಲವಕುಲತಿಲಕ ಶ್ರೀಮತು ಬೀರನೊಱಂಬ ಅಣ್ಣಯ್ಯದೇವನೆಂದು ಕರೆಯಲಾಗಿದೆ. ಬಾಗಳಿಯ ಒಂದು ಶಾಸನದಲ್ಲಿ ಅಯ್ಯಪ್ಪನ ಮಗ ಅಣ್ಣಿಗನೊಡನೆ ವೀರನೊಬ್ಬ ಯುದ್ಧಮಾಡಿದ ಉಲ್ಲೇಖವಿದೆ. ಕಡಬಗೆರೆ ಶಾಸನದಲ್ಲಿ ಕದಂಬವಂಶದ ಮದುರದೇವಯ್ಯನ ಮಗ ಮಾಳಯ್ಯನು, ನೊಳಂಬ ಅಯ್ಯಪದೇವನ ಮಗ ಅಣ್ಣಿಗನು ಪಡುಗಲ್ಲನ್ನು ಮುತ್ತಿದ್ದಾಗ ಕಾದು ಸತ್ತನೆಂದು ಹೇಳಿದೆ. ಇವನು ಗಂಗ ಮತ್ತು ರಾಷ್ಟ್ರಕೂಟರ ವೈರತ್ವವನ್ನು ಕಟ್ಟಿಕೊಂಡನು. ರಾಷ್ಟ್ರಕೂಟ ಅರಸ ಮುಮ್ಮಡಿ ಕೃಷ್ಣನು ಕ್ರಿ.ಶ. ೯೪೦ ರಲ್ಲಿ ಇವನನ್ನು ಸೋಲಿಸಿದನು. ತುಮಕೂರು ಜಿಲ್ಲೆಯ ಹಿರೇಗುಂಡಗಲ್ಲಿನ ವೀರಗಲ್ಲು ಇವನ ನೆನಪಿನ ಒಂದು ಸ್ಮಾರಕವಾಗಿ ನಿಂತಿದೆ.

ಅಣ್ಣಿಗನು ಚಾಲುಕ್ಯ ರಾಜಕುಮಾರಿ ಅತ್ತಿಯಬ್ಬರಸಿಯನ್ನು ವರಿಸಿದನು. ಇವರಿಗೆ ವಲ್ಲವ ವಂಶಾಭರಣ ಇರುಳನು ಜನಿಸಿದನು. ಅಣ್ಣಿಗನ ನಂತರ ಪಲ್ಲವ ಕುಲತಿಲಕ ಶ್ರೀಮದಿರುಳ ಚೋರ ಅಧಿಕಾರಕ್ಕೆ ಬಂದಂತೆ ಕಾಣುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ಇರುಳನ ನಂತರ ಅವನ ಸಹೋದರನ ಮಗ ದಿಲೀಪ ಇಮ್ಮಡಿ ನೊಳಂಬಾದಿರಾಜ ಕ್ರಿ.ಶ. ೯೪೩ ರಲ್ಲಿ ಅಧಿಕಾರಕ್ಕೆ ಬಂದನು. ಇವನನ್ನು ನೊಳಪಯ್ಯನೆಂದೂ ಕರೆಯಲಾಗುತ್ತಿತ್ತು. ಇವನು ವೈಡುಂಬ ಮತ್ತು ಮಹಾವಳಿಗಳ ಮೇಲೆ ಅಧಿಕಾರ ನಡೆಸಿದನು. ಅವಣಿಯ ಶೈವಗುರು ತ್ರಿಭುವನಕರ್ತರ ದೇವನು ಇವನ ಸಮಕಾಲೀನವನಾಗಿದ್ದು ದಿಲೀಪನಿಗು ಗುರುವಾಗಿದ್ದಿರಬಹುದೇಂದು ಊಹಿಸಲಾಗಿದೆ. ದಿಲೀಪನು ಗಂಗರಾಜ ಬೂತುಗ ಇಲ್ಲವೆ ಅವನ ಮಗ ಮಾರಸಿಂಹನ ವಿರುದ್ಧ ಯುದ್ಧ ಮಾಡಿದನು. ದಿಲೀಪನ ಪಾದಪದ್ಮೋಪಜೀವಿಯಾಗಿದ್ದ ಮೊಮ್ಮಗ ಪೊಳಲ್ಚೋರದೇವನು ಚಿಂದಗುಂದೆಯ ಬಿತ್ತುವಾಟವನ್ನು ಕೆರೆಗೆ ಕೊಟ್ಟನು. ಹೊಸಕೋಟೆ ತಾಲೂಕಿನ ಬಾಣಹಳ್ಳಿಯ ಕೆರೆಯ ತೂಬಿನಲ್ಲಿರುವ ಶಾಸನ ಸ್ಥಳೀಯ ಗಾವುಂಡರು ಅಲ್ಲಿಯ ಕೆರೆಯನ್ನು ಕಟ್ಟಿದ ವಿಚಾರವನ್ನು ಉಲ್ಲೇಖಿಸುತ್ತದೆ. ಹೇಮಾವತಿಯ ಶಾಸನ ಶ್ರೀಮದಿರುವ ನೊಳಂಬಾದಿರಾಜರ ಮನೋನಯನ ವಲ್ಲಭೆಯರಪ್ಪ ಶ್ರೀಮತ್ ಪಿರಿಯಬ್ಬರಸಿಯರಪ್ಪ ಎಂದು ಕರೆಯಲಾಗಿದೆ.

ದಿಲೀಪನು ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ನೇತೃತ್ವದಲ್ಲಿ ಚೋಳರೊಡನೆ ಯುದ್ಧ ನಡೆಸಿದನು. ಮುಮ್ಮಡಿ ಕೃಷ್ಣ ಚೋಳರಾಜ್ಯದ ಭಾಗವಾದ ತೊಂಡೈಮಂಡಲವನ್ನು ವಶಪಡಿಸಿಕೊಂಡನು. ಅಲ್ಲದೇ ಕ್ರಿ.ಶ. ೯೪೮ ರಲ್ಲಿ ಗಜಾಂಕುಶ ಚೋಳನ ವಿರುದ್ಧ ಇಪಿಲಿ ಯುದ್ಧವನ್ನು ನಡೆಸಿದನು. ಬಲ್ಲಹ (ಮುಮ್ಮಡಿ ಕೃಷ್ಣ)ನ ಆದೇಶದಂತೆ ಕೆಲವು ಶ್ರೇಷ್ಟ ಬಿಲ್ಲಾಳುಗಳು ಇವನ ಕೈಕೆಳಗೆ ಹೋರಾಡಿದರು.

ದಿಲೀಪನ ನಂತರ ಅವನ ಮಗ ನನ್ನಿನೊಳಂಬ ಪಟ್ಟಕ್ಕೆ ಬಂದನು. ಕ್ರಿ.ಶ. ೯೬೬ ರಲ್ಲಿ ನನ್ನಿನೊಳಂಬನ ಅಣಿತಿಯಂತೆ ಜನ್ನಯ್ಯನೆಂಬುವನು ಸಿಂದರ ಮೆಲೆ ತಾಗಿದಂತೆ ಬಲ್ಲಕುಂದೆ ಶಾಸನ ತಿಳಿಸುತ್ತದೆ. ಇವನಿಗೆ ಚಲದಂಕಕಾರ ಮತ್ತು ಪಲ್ಲವರಾಮನೆಂದು ಕಂಬದೂರು ಶಾಸನದಲ್ಲಿ ಸಂಬೋಧಿಸಲಾಗಿದೆ.

ನನ್ನಿನೊಳಂಬನ ನಂತರ ಮೊಮ್ಮಗ ಇಮ್ಮಡಿ ಪೊಳಲ್ಚೋರನು ಅಧಿಕಾರಕ್ಕೆ ಬಂದನು. ಇವನನ್ನು ಕಾಂಚಿ ವಲ್ಲಭ, ಆಳುವ ದೊರೆಯ ಮೊಮ್ಮಗನೆಂದು ಕ್ರಿ.ಶ. ೯೬೫ರ ಕಂಬದೂರು ಶಾಸನ ಉಲ್ಲೇಖಿಸುತ್ತದೆ. ನಂತರ ನೊಳಂಬಾದಿರಾಜ ಇಮ್ಮಡಿ ಮಹೇಂದ್ರ ಪಟ್ಟಕ್ಕೆ ಬಂದನು. ಇವನ ಕಾಲದಲ್ಲಿ ನೊಳಂಬರ ರಾಜ್ಯ ವಿಸ್ತಾರರೂಪ ಪಡೆಯುತ್ತ ಬಂತು. ಚೋಳರಾಜ್ಯದ ಉತ್ತರ ಭಾಗವಾದ ಕಾಂಚಿಯ ಸುತ್ತಲ ತೊಂಡೈಮಂಡಲವನ್ನು ಗೆದ್ದನು. ಚೋಳನಾಡಿನಿಂದ ನೊಳಂಬವಾಡಿಗೆ ಬಂದು ಅಲ್ಲಿಂದ ಕೋಳಾಲ (ಕೋಲಾರ)ದಲ್ಲಿ ತಂಗಿ ಕೀರ್ತಿಗಾವುಂಡನ ಮಗನಿಗೆ ಪಟ್ಟಗಟ್ಟಿ ಪುಲಿನಾಟ್ಟಕೆರೆಯ ಬೆಳಗದೂರನ್ನು ಕೊಡುಗೆಯಾಗಿ ಕೊಟ್ಟನೆಂದು ಕರ್ಶನಪಲ್ಲಿ ಶಾಸನ ತಿಳಿಸುತ್ತದೆ. ಇದರ ನಂತರ ನೊಳಂಬರ ಮೇಲೆ ಗಂಗ ಮತ್ತು ಚೋಳರ ದಾಳಿಗಳು ಹೆಚ್ಚಾಗತೊಡಗಿದವು. ಗಂಗ ಮಾರಸಿಂಹನು ನೊಳಂಬ ಪಲ್ಲವರನ್ನು ಸೋಲಿಸಿ ನೊಳಂಬ ಕುಲಾಂತಕ ಎಂಬ ಬಿರುದು ಧರಿಸಿದನು. ಚೋಳರು ಬಜಯತಿಮಂಗಲ (ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೇತಮಂಗಲ) ತಲುಪಿ ನೊಳಂಬ ಸೇನೆಯನ್ನು ಸೋಲಿಸಿದರು. ಆಗ ನೊಳಂಬರು ಬಳ್ಳಾರಿ ಪ್ರದೇಶಕ್ಕೆ ಬಂದು ಕಂಪಿಲಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು.

ಕಂಪಿಲಿ ರಾಜಧಾನಿ

ಈ ವೇಳೆಗೆ ರಾಷ್ಟ್ರಕೂಟರ ಸಾಮ್ರಾಜ್ಯ ಕೊನೆಗೊಂಡು ಕಲ್ಯಾಣದ ಚಾಲುಕ್ಯ ಅರಸ ತೈಲಪನು ಅಧಿಕಾರಕ್ಕೆ ಬಂದಿದ್ದ. ೯೮೦ರ ಕಂಚುಗಾರಬೆಳಗಲ್ಲು ಶಾಸನದಲ್ಲಿ ವೀರನೊಳಂಬ ಪಲ್ಲವ ಪೆರ್ಮಾಡಿಯೆಂದು ಕರೆದು, ಇವನ ಹೆಂಡತಿ ರೇವಲದೇವಿ ಅಲ್ಲಿಯ ವಿಷ್ಣುದೇವರಿಗೆ ೬೦ ಮತ್ತಿರುಭೂಮಿ ದಾನ ಮಾಡಿದ್ದಾಳೆ. ಹಿರೆಹಡಗಲಿ ಶಾಸನದಲ್ಲಿ ಕಾಂಚಿಪುರದ ರಾಧೀಶ್ವರಂ ಮುಂತಾಗಿ ಹೇಳಿಮಾಹೇಂದ್ರಂ ಸುಖಸಂಕಥಾವಿನೋದದಿಂದ ರಾಜ್ಯಂ ಗೆಯತ್ತಂ ಕೋಗಳಿಯ್ಯಲಿರ್ದ್ದು ಮರಂದಲೆ ಮಾರ್ಯ್ಯಾದೆಯಾಗೆ ನಾಡನ್ನು ಆಳುತ್ತಿದ್ದನೆಂದು ಹೇಳಿದೆ. ಅಲ್ಲಿಯ ಮಹೇಶ್ವರ ಮತ್ತು ವಿಷ್ಣುದೇವಾಲಯಗಳಿಗೆ ದಾನ ಬಿಟ್ಟನು. ಕಲಗೋಡು ಶಾಸನ ಇವನನ್ನು ಮಯ್ದಮ್ಮ ರಸನೆಂದು ಕರೆದರೆ, ಕೋಳೂರು ಶಾಸನ ಮಙ್ಗಪ್ಪರಸ ನೆಂದಿದ್ದು, ಬಳ್ಳಾರೆ ಮೂವತ್ತರ ಪೊಲೆಯರಿಗೆ ತೆರಿಗೆ ವಿನಾಯತಿ ನೀಡಿದ್ದಾನೆ. ಮಹೇಂದ್ರನು ಸತ್ತನಂತರ ಅವನ ತಾಯಿ ದೀವಬ್ಬರಸಿ ಅವನ ಹೆಸರಿನಲ್ಲಿ ಮತ್ತು ತನ್ನ ಹೆಸರಿನಲ್ಲಿ ಕೊಳಗಳನ್ನು ನಿರ್ಮಿಸಿ, ಶಿವ – ವಿಷ್ಣು ದೇವಾಲಯಗಳನ್ನು ಕಟ್ಟಿಸುತ್ತಾಳೆ. ೯೮೩ – ೧೦೧೦ರವರೆಗೆ ನೊಳಂಬರ ರಾಜ್ಯವನ್ನು ಯಾರು ಆಳಿದವರೆಂದು ಸ್ಪಷ್ಟವಾಗುವುದಿಲ್ಲ. ಮಹೇಂದ್ರನ ತಾಯಿ ದೀವಬ್ಬರಸಿ ಕಿರಿಯ ಮಗ ಘಟಿಯಂಕಕಾರನ ನೇತೃತ್ವದಲ್ಲಿ ರಾಜ್ಯದ ಜವಾಬ್ದಾರಿಯನ್ನು ವಹಿಸಿ ಕೊಂಡಿರಲು ಸಾಧ್ಯತೆಯಿದೆ.

02_79_KKAM-KUH

ಇರುವ ನೊಳಂಬ ಘಟೆಯಂಕಕಾರ (೧೧೧೦೨೪)

ಇವನು ನೊಳಂಬಾಧಿರಾಜ ಇಮ್ಮಡಿ ಮಹೇಂದ್ರನ ಸಹೋದರ. ಘಟೆಯಂಕಕಾರನ ಮೊದಲ ಶಾಸನ ಕ್ರಿ.ಶ. ೧೦೧೦ರ ಆಲೂರಿನಲ್ಲಿದೆ. ಚಾಲುಕ್ಯ ಅರಸ ತೈಲಪನ ಮೊಮ್ಮಗಳು ಸತ್ಯಾಶ್ರಯನ ಮಗಳಾದ ಮಹಾದೇವಿಯನ್ನು ಮದುವೆಯಾಗಿದ್ದ. ನೊಳಂಬವಾಡಿ – ೩೨೦೦೦ ಕೋಗಳಿ – ೫೦೦, ಬಲ್ಲಕುಂದೆ – ೩೦೦, ಕುಕನೂರು – ೩೦ ಮಾಸವಾಡಿಯ ಐದುಹಳ್ಳಿಗಳನ್ನು ಕಂಪಲಿಯಿಂದ ಆಳುತ್ತಿದ್ದ. ಚಾಳುಕ್ಯ ಅರಸ ಜಯಸಿಂಹನ ರಾಣಿ ಹೇಮಳದೇವಿ ಈ ಘಟೆಯಂಕಕಾರನ ಮಗಳು.

ಇವನ ತಾಯಿ ದಿವಬ್ಬರಸಿ ೧೦೧೪ರಲ್ಲಿ ಐದನೆ ವಿಕ್ರಮಾದಿತ್ಯ ಆಳುತ್ತಿರುವಾಗ ಪಂಪಾತೀರ್ಥದ ಮಹಾಕಾಳ ದೇವರಿಗೆ ದಾನನೀಡಿದ ಉಲ್ಲೇಖ ಗೋನಹಾಳ ಶಾಸನದಲ್ಲಿದೆ. ಇವನ ಪ್ರಚಂಡ ದಂಡನಾಯಕ ಬ್ರಹ್ಮಾದಿರಾಜನು ಘಟಿಗನ ಗಂಧವಾರಣ ಘಟೆಯಂಕಕಾರ ಮುಂತಾದ ಬಿರುದುಗಳನ್ನು ಧರಿಸಿಕೊಂಡಿದ್ದ. ಘಟೆಯಂಕಕಾರನ ನಂತರ ಅವನ ಮಗ ಉದೆಯಾದಿತ್ಯದೇವ ಅಧಿಕಾರಕ್ಕೆ ಬರುತ್ತಾನೆ. ಅಲ್ಲದೆ ಈ ಉದಯಾದಿತ್ಯನಿಂದ ನೊಳಂಬ ಅರಸರು ತಮ್ಮ ಚಕ್ರವರ್ತಿಗಳ ಆದಿರಾಜರ ವಿಶೇಷಣದ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು. ಇದು ನೊಳಂಬವಾಡಿ – ೩೨೦೦೦ ವನ್ನು ಆಳಿದ ಪಾಂಡ್ಯರು ಕೂಡಾ ಇದೆ ರೀತಿಯ ವಿಶೇಷಣಗಳನ್ನು ಧರಿಸಿದ್ದಾರೆ.

ಜಗದೇಕಮಲ್ಲ ಪೆರ್ಮಾನಡಿ ಉದಯದಿತ್ಯದೇವ (೧೦೧೭೩೬)

ಜಯಸಿಂಹನ (೧೦೧೪ – ೪೨) ಮಾಂಡಳಿಕನಾಗಿ ಆಳುತ್ತಿರುವ ವಿಷಯ ಕ್ರಿ.ಶ. ೧೦೧೭ರ ಮಲ್ಲಯ್ಯನ ಗುಡ್ಡದ ಶಾಸನದಲ್ಲಿದೆ. ಜಗದೇಕಮಲ್ಲ ನೊಳಂಬನು ನೊಳಂಬವಾಡಿ – ೩೨೦೦೦, ಕದಂಬಳಿಗೆ – ೧೦೦೦, ಕೋಗಳಿ – ೫೦೦, ಬಲ್ಲಕುಂದೆ – ೩೦೦, ಕುದಿಯಪರವಿ – ೭೦ನ್ನು ಆಳುತ್ತಿದ್ದಾಗ, ಮೈಲಾರ ದೇವರಿಗೆ ಬಲ್ಲಕುಂದೆ ಮೂನ್ನೂರರ ಹಗರೆಯ ತಡಿಯ ಸಿರಿಯನೂರನ್ನು ಸರ್ವಾಭ್ಯಂತರ ಸಿದ್ಧಿಯಾಗಿ ನೀಡಿದ್ದಾನೆ. ಕ್ರಿ.ಶ. ೧೦೧೮ರಲ್ಲಿ ಬಾಗಳಿಯಲ್ಲಿ ವಿದ್ಯಾರ್ಥಿಗಳಿಗೆ ದಾನಕೊಟ್ಟಿದ್ದಾನೆ. ಇವನು ನೊಳಂಬವಾಡಿ – ೩೨೦೦೦ ದೊಂದಿಗೆ ಹೆಚ್ಚುವರಿಯಾಗಿ ಗಂಗವಾಡಿ – ೯೬೦೦೦ ಅಧಿಕಾರಿಯಾಗಿದ್ದು, ಕಂಪಿಲಿಯ ಸ್ಥಳದಿಂದ ಆಳುತ್ತಿರುವ ವಿಷಯವನ್ನು ಶಾಸನಗಳು ಸ್ಪಷ್ಟಪಡಿಸುತ್ತವೆ. ಬಲ್ಲಿಕುಂದೆ, ತೆಕ್ಕಲಕೋಟೆ, ಹಿರೆಮ್ಯಾಗಳಗೆರೆ, ತೆಲಗಿ, ನಿಟ್ಟೂರು, ಚಿಮ್ನಹಳ್ಳಿ ಮೊದಲಾದ ಶಾಸನಗಳು ಇವನನ್ನು ಉಲ್ಲೇಖಿಸುತ್ತವೆ.

ಚಾಲುಕ್ಯ ಅರಸ ಜಯಸಿಂಹನ ರಾಣಿ ದೇಮಳದೇವಿ ತನ್ನ ತಾಯಿ ಮಹಾದೇವಿಯ ಅಂಗವನ್ನು ಗಂಗೆಯಲ್ಲಿಕ್ಕಿಬಂದ ಬ್ರಾಹ್ಮಣರಿಗೆ ಓರವಾಯಿ ಗ್ರಾಮವನ್ನು ಬಿಟ್ಟು ಕೊಟ್ಟಿದ್ದಾಳೆ. ಉದಯಾದಿತ್ಯ ದೇವನಿಗೆ ಇಮ್ಮಡಿನೊಳಂಬ ಮತ್ತು ನನ್ನಿನೊಳಂಬರೆಂಬ ಪುತ್ರರಿದ್ದರು. ಇವನ ನಂತರ ಇಮ್ಮಡಿ ನೊಳಂಬ ಅಧಿಕಾರಕ್ಕೆ ಬಂದನು.

ಜಗದೇಕಮಲ್ಲ ನಿರ್ಮಡಿ ನೊಳಂಬ ಪೆರ್ಮಾನಡಿದೇವ (೧೦೩೭೪೪)

ಇವನು ಚಾಳುಕ್ಯ ಅರಸ ಇಮ್ಮಡಿ ಜಯಸಿಂಹನ ಪಾದಪದ್ಮೋಪಜೀವಿಯಾಗಿ ಆಳುತ್ತಿದ್ದುದು ಸೋಗಿ ಶಾಸನದಲ್ಲಿದೆ. ಶಿರಿವಾರದ ಶಾಸನ ನಿರ್ಮಡಿ ನೊಳಂಬ ಪಲ್ಲವ ಪೆರ್ಮಾಡಿದೇವನು ಮಾಸೆವಾಡಿ – ೧೪೦ರ ಬಳಿಯ ಪಂಚಗ್ರಾಮಗಳನ್ನು ಹಾಗೂ ತುಂಬಗೆರೆ ಶಾಸನ ಕದಂಬಳಿಗೆ – ೧೦೦೦, ಕೋಗಳಿ – ೫೦೦, ಕರವಿಡಿ – ೩೦ ಗಳನ್ನು ಗಂಗಾವತಿ ನೆಲೆವೀಡಿನಿಂದ ಆಳುತ್ತಿರುವುದಾಗಿ ತಿಳಿಸುತ್ತವೆ.

ತ್ರೈಲೋಕ್ಯಮಲ್ಲ ನನ್ನಿ ನೊಳಂಬ ಪಲ್ಲವ ಪೆರ್ಮಾನಡಿ (೧೦೪೪೫೪)

ಇವನು ಇಮ್ಮಡಿ ನೊಳಂಬನ ಸಹೋದರ. ಜಯಸಿಂಹನ ನಂತರ ಮೊದಲನೆಯ ಸೋಮೇಶ್ವರ ೧೦೪೨ರಲ್ಲಿ ಅಧಿಕಾರಕ್ಕೆ ಬಂದನು. ತ್ರೈಲೋಕ್ಯಮಲ್ಲನೆಂಬ ಶೇಷಣವನ್ನು ಅವನ ಸಾಮಂತ ಉದಯಾದಿತ್ಯದೇವ ಹೊಂದುತ್ತಾನೆ. ಕ್ರಿ.ಶ. ೧೦೪೪ರಲ್ಲಿ ಪಟ್ಟಕ್ಕೆ ಬಂದಾಗ, ಅದರ ನಿಮಿತ್ಯವಾಗಿ ಕಪ್ಪೆಕಲ್ಲನ್ನು (ಶಿರಿವಾರ) ಅಲ್ಲಿಯ ದೇವಾಲಯ, ಮಠಕ್ಕೆ ಜೇಷ್ಠರಾಶಿಬಳಾರರಿಗೆ ಹಾಗೂ ಬ್ರಾಹ್ಮಣರಿಗೆ ದಾನಕೊಟ್ಟನು. ಬಲಿಷ್ಟ ಮಂಡಳೇಶ್ವರ ನಾಗಿದ್ದು ಶೌರ್ಯಾಭರಣ, ಪುರುಷ ವಿಭೂಷಣ, ಛಲಕ್ಕೆ ಬಲ್ದಲೆ, ಭ್ರತ್ಯಾ, ಭ್ರಿತ್ಯ ಚಿಂತಾಮಣಿ, ಸತ್ಯಾಕಾನೀನ, ಮೂರ್ಬಲಸಿಂಗ, ಪರಭಲದೂಮಕೇತು, ಹಯವತ್ಸರಾಜ, ಸಂಗ್ರಾಮ ಜತ್ತಲಂಟ ಪೆರಿಗೆ ಪಳಿವಕ, ಪೆಂಡಿರಗಂಡ ಮುಂತಾದ ಬಿರುದುಗಳನ್ನು ಪಡೆದುಕೊಂಡು ತ್ರೈಲೋಕ್ಯಮಲ್ಲನಿರಿವನೊಳಂಬ ನಾರಸಂಘದೇವ, ವೀರನೊಳಂಬ ಘಟ್ಟಿದೇವಸಿಂದೂ ಎಂದು ಕರೆದುಕೊಂಡಿದ್ದಾನೆ. ತಳಕಲ್ಲು ಶಾಸನ ಜಗದೇಕಮಲ್ಲ ನೊಳಂಬ ಬ್ರಾಹ್ಮದಿರಾಜ ಘಟ್ಟಿಯರಸನನ್ನು ಹೆಸರಿಸುತ್ತದೆ. ೧೦೫೨ ರಲ್ಲಿ ಇವನ ಹೆಂಡತ ನೊಳಂಬಮಹಾದೇವಿ ಹೊಸಗೆರೆಯ ಮಹಾದೇವ ದೇವಾಲಯಕ್ಕೆ ಕೆಲವು ದತ್ತಿಗಳನ್ನು ಬಿಟ್ಟಿದ್ದಾಳೆ.

ನಂದಿಬೇವೂರು ಶಾಸನ ಸಿಂದವಾಡಿ – ೧೦೦೦ನ್ನು ಆಳುತ್ತಿದ್ದುದಾಗಿ ತಿಳಿಸಿದರೆ, ಕಮ್ಮಾರಚೇಡು ಶಾಸನ ಇದನ್ನು ಕಂಪಿಲಿ ನೆಲೆವೀಡಿನಿಂದ ಆಳುತ್ತಿರುವುದನ್ನು ಹೇಳಿದೆ. ಇವನು ಚಾಳುಕ್ಯರ ಮೇಲೆ ಚೋಳರು ಮಾಡಿದ ಕೊಪ್ಪ ಯುದ್ಧದಲ್ಲಿ ಮರಣ ಹೊಂದುತ್ತಾನೆ. ತ್ಯಾವಣಿಯ ಎರಡು ಶಾಸನಗಳು ಚಾಳುಕ್ಯರೊಂದಿಗೆ ಸೇರಿ ಚೋಳರ ಮೇಲೆ ಯುದ್ಧ ಮಾಡಿದ್ದನ್ನು ತಿಳಿಸುತ್ತವೆ. ಇವನಿಗೆ ಕುಮಾರ ಚೋರಯ್ಯನೆಂಬ ಮಗನಿದ್ದ. ಜಗಳೂರು ತಾ. ಆಸಗೋಡಿನ ಕ್ರಿ.ಶ. ೧೦೫೪ರ ಶಾಸನದಲ್ಲಿ ನಾರಸಿಂಹದೇವನು ಕೋಗಳಿ – ೫೦೦, ಕದಂಬಗಳಿಗೆ – ೧೦೦೦, ಆಳುತ್ತಿರುವಾಗ, ಕಾಂಚಿಪುರವೇಶ್ವರ ಕುಮಾರ ಚೋರಯ್ಯ ಉಚ್ಚಂಗಿ – ೩೦ನ್ನು ಆಳುತ್ತಿದ್ದುದನ್ನು ಉಲ್ಲೇಖಿಸಿದೆ. ನನ್ನಿನೊಳಂಬನ ನಂತರ ಅವನ ಮಗ ಅಧಿಕಾರಕ್ಕೆ ಬರದೇ ಇರುವುದನ್ನು ಗಮನಿಸಿದರೆ, ಚೋರಯ್ಯನು ಮರಣ ಹೊಂದಿರಬೇಕು. ಚಾಲುಕ್ಯ ಅರಸ ಅಹಮಲ್ಲ ಸೋಮೇಶ್ವರನ ಮಕ್ಕಳು ಈ ಭಾಗದ ಅಧಿಕಾರವನ್ನು ವಹಿಸಿಕೊಂಡರು.

ಕ್ರಿ.ಶ. ೧೦೫೭ರ ಸುಮಾರಿಗೆ ಗಂಗಪೆರ್ಮಾನಡಿ ವಿಕ್ರಮಾದಿತ್ಯನು ಗಂಗವಾಡಿ – ೯೬೦೦೦, ಬವನಾಸಿ – ೧೨೦೦೦, ನೊಳಂಬವಾಡಿ – ೩೨೦೦೦ ಗಳನ್ನು ಕುಮಾರ ವೃತ್ತಿಯಿಂದ ಆಳುತ್ತಿದ್ದರು. ಕ್ರಿ.ಶ. ೧೦೬೨ರ ವೇಳೆಗೆ ಸೋಮೇಶ್ವನ ಇನ್ನೊಬ್ಬ ಮಗ ವಿಷ್ಣುವರ್ಧನ ವಿಜಯಾಧಿತ್ಯ ಈ ಪ್ರದೇಶಗಳನ್ನು ಆಳುತ್ತಿರುವ ಬಗ್ಗೆ ಹೂವಿನಹಡಗಲಿ, ಉಚ್ಚಂಗಿದುರ್ಗ, ಗುಡಿಹಳ್ಳಿ, ಮೋರಗೆರೆ ಶಾಸನಗಳು ಸ್ಪಷ್ಟಪಡಿಸುತ್ತವೆ. ೧೦೬೪ ರಲ್ಲಿ ದಿಗ್ವೀಜಯಾರ್ಥವಾಗಿ ಬಂದು ಅರಸಿಕೆರೆಯಲ್ಲಿ ಬೀಡುಬಿಟ್ಟಿದ್ದಾಗ ಹಡಗಲಿಯ ಕಲಿದೇವರಿಗೆ ಮೋರಗೆರೆಯ ನೊಳಂಬೇಶ್ವರ ದೇವರಿಗೆ ಭೂದಾನ ಬಿಟ್ಟಿದ್ದಾನೆ.

ಕೆರೆಗುಡಿಹಳ್ಳಿ ಶಾಸನದಲ್ಲಿ ವಿಷ್ಣುವರ್ಧನ ವಿಜಯಾದಿತ್ಯನು ತಂದೆಯ ದಯೆಯಿಂದ ಕದಂಬಳಿಗೆ – ೧೦೦೦, ಕೋಗಳಿ – ೫೦೦ ನ್ನು ಆಳುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಅಹವಮಲ್ಲದೇವರ ಅನುಮತಿಯಂತೆ ಬಿಜ್ಜಲದೇವನು ದಿಗ್ವೀಜಯ ಕೈಗೊಂಡು ಅರಸಿ ಕೆರೆಯಲ್ಲಿ ಬೀಡುಬಿಟ್ಟಿದ್ದಾಗ ಮುತ್ತಗಿ – ೩೦ರಲ್ಲಿಯ ಕಡಕೋಳ ಗ್ರಾಮವನ್ನು ಅರಸಿಕೆರೆಯ ನೊಳಂಬೇಶ್ವರ ದೇವರಿಗೆ ದಾನಕೊಟ್ಟಿದ್ದಾನೆ.

ಕ್ರಿ.ಶ.೧೦೬೮ ರಲ್ಲಿ ಬಾಗಳಿ ಮತ್ತು ಚಿನ್ನತುಂಬಲು ಶಾಸನಗಳಲ್ಲಿ ಚಾಲುಕ್ಯ ಜಗದೇಕ ಮಲ್ಲನು ಆಳ್ವಿಕೆ ಮಾಡುತ್ತಿದ್ದಾಗ ವಿದ್ಯಾಂಗನಾ ಭೂಜಂಗನ ಅಣ್ಣನಸಿಂಗ ತ್ರೈಳೋಕ್ಯಮಲ್ಲ ನೊಳಂಬಪಲ್ಲವ ಪೆರ್ಮಾನಡಿ ಜಯಂಸಿಂಗದೇವನು ನೊಳಂಬವಾಡಿ – ೩೨೦೦೦ ಆಳುತ್ತಿರುವಾಗ ಕಂಪಿಲೆ ನೆಲೆವೀಡಿನಲ್ಲಿದ್ದಂತೆ ಹೇಳಿದೆ. ಆಗ ಈ ಪ್ರದೇಶ ಬಾದಾಮಿ – ಪಟ್ಟದಕಲ್ಲಿನವರೆಗೂ ವಿಸ್ತಾರವಾಗಿತು.

ನೊಳಂಬರ ದೇವಾಲಯಗಳು ಮತ್ತು ಅವುಗಳಿಗೆ ನೀಡಿದ ದಾನದತ್ತಿಗಳು

ನೊಳಂಬರು ತಮ್ಮ ಅಧಿಕಾರವಧಿಯಲ್ಲಿ ಅನೇಕ ಕೆರೆ, ಬಾವಿ, ಸತ್ರ ಮತ್ತು ದೇವಾಲಯ ಗಳನ್ನು ಕಟ್ಟಿಸಿರುವುದಲ್ಲದೆ, ಅವುಗಳ ವ್ಯವಸ್ಥೆಗಾಗಿ ದಾನ – ದತ್ತಿಗಳನ್ನು ನೀಡಿದ್ದಾರೆ. ಹೇಮಾವತಿಯ ದೊಡ್ಡೇಶ್ವರ, ಅಕ್ಕಗುಡಿ, ಅವನೀಯ ಲಕ್ಷಣೇಶ್ವರ, ಧರ್ಮಪುರಿಯ ಕಾಮಾಕ್ಷಮ್ಮ ಮೊದಲಾದವು ಆರಂಭದ ದೇವಾಲಯಗಳು. ತಮ್ಮ ರಾಜಧಾನಿಯನ್ನು ಕಪಿಲಿಗೆ ಸ್ಥಳಾಂತರಿಸಿದ ನಂತರ ಈ ಪರಿಸರದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾದವು.

ಕ್ರಿ.ಶ. ೧೦೦೮ ರಲ್ಲಿ ಬಲ್ಲಿಕುಂದೆ ಗ್ರಾಮದಲ್ಲಿ ಸ್ಥಳೀಯರು ಜೀವಾಲಯವನ್ನು ಕಟ್ಟಿದರು. ಇದಕ್ಕೆ ನೊಳಂಬರಾಜ ಚಿತ್ರವೆಡಂಗ ಘಟಿಯಂಕಕಾರನ ನಿಯೋಗಿ ಶ್ರೀಸಿಂಹಮಾರ್ಯನು ಬಲ್ಲಿಕುಂದ ವಸತೌಕೃತ ಜೈನಬಿಂಬಕ್ಕೆ ಪಂಚವಿವರ್ತನ ಭೂಮಿದಾನ ನೀಡಿದನು. ಚಾಳುಕ್ಯ ಎರಡನೆಯ ತೈಲಪನ ಕಾಲದಲ್ಲಿ ನೊಳಂಬ ಪಲ್ಲವ ಪೆರ್ಮಾಡಿದೇವನ ಪತ್ನಿ ಶ್ರೀಮದ್ದೇವಲ ದೇವಿ ಕಂಚಗಾರ ಬೆಳಗಲಿಯ ವಿಷ್ಣುದೇವರಿಗೆ ಭೂದಾನ ಮಾಡಿದ್ದಾಳೆ. ಕ್ರಿ.ಶ. ೧೦೧೮ ರಲ್ಲಿ ಜಗದೇಕಮಲ್ಲ ನೊಳಂಬಪಲ್ಲವ ಪೆರ್ಮಾನಡಿದೇವ ಉತ್ತರಾಯಣ ಸಂಕ್ರಾಂತಿಯಂದು ಪಂಪಾಪುರ ಕ್ಷೇತ್ರಕ್ಕೆ ಬಿಜಯಂಗೆಯ್ದು ಬಾಗುಳಿಯ ಕಲಿದೇವಸ್ವಾಮಿಗೆ, ತಪೋಧನರಿಗೆ, ಸತ್ರಕ್ಕೆ, ಪನ್ನಿರ್ವಸ್ಸೂಳೆಯಗಳ, ಸೂಳೆವಾಳ ವಂಚಿಗಂಗ, ಪರಿಕಾರ, ಪಾತ್ರಕ್ಕೆ ದೇಸಿಗಛಾತ್ರ ಭೋಜನಕ್ಕೆ ಸೋಮಸಿಂಗಭಳಾರರ ಪಾದಪೂಜೆಮಾಡಿ ದಾನಕೊಟ್ಟನು.

ಜಗದೇಕಮಲ್ಲ ಪೆರ್ಮಾನಡಿ ಉದಯಾದಿತ್ಯದೇವ ೧೦೧೭ ರಲ್ಲಿ ಮಲ್ಲಯ್ಯನ ಗುಡ್ಡದ ಮೈಲಾರದೇವರಿಗೆ ಬಲ್ಲಕುಂದೆ – ೩೦೦ರ ಹಗರೆಯ ತಡಿಯ ಸಿರಿಯನೂರನ್ನೂ ಸರ್ವಾಬ್ಯಾಂತರಸಿದ್ಧಿಯಾಗಿ ಬಿಡುತ್ತಾನೆ.

ಬಾಡಗ್ರಾಮದಲ್ಲಿ (ಹರಪನಹಳ್ಳಿ ತಾ) ಕಲ್ಲೇಶ್ವರ ದೇವಾಲಯ ಬಳಿ ಬಿದ್‌ಇದರುವ ಕಂಬದಲ್ಲಿ ಜಗದೇಕಮಲ್ಲನ ಆಳ್ವಿಕೆಯ ಅವಧಿಯಲ್ಲಿ ಪುಷ್ಬರಸನು ನೊಳಂಬೇಶ್ವರ ದೇವರಿಗೆ ದಾನಾಡಿದಂತೆ ತಿಳಿಯುತ್ತದೆ. ಅದೇ ಕಂಬದಲ್ಲಿಯ ೧೧೭೩ರ ಶಾಸನ ಜಗದೇಕಮಲ್ಲ (ಇರಲಿಲ್ಲ) ಹರಿಹರ ಕ್ಷೇತ್ರದಲ್ಲಿ ನೊಣಂಬೇಶ್ವರ ದೇವರಿಗೆ ನೊಣಂಬ ಚಕ್ರವರ್ತಿ ಬಿಟ್ಟಿ ಭೂಮಿ ಬಗ್ಗೆ ತಿಳಿಸುತ್ತದೆ. ಕೆರೆಗುಡಿಹಳ್ಳಿಯನ್ನು ನೊಣಂಬನರಸಿಕೆರೆ ಎಂದು ಕರೆಯಲಾಗಿದೆ. ಅಲ್ಲಿಯ ಈಶ್ವರ ದೇವಾಲಯ ನೊಳಂಬೇಶ್ವರ ದೇವಾಲಯವಾಗಿರಬಹುದು. ಈ ಹೆಸರು ವಿಜಯನಗರ ಕಾಲದಲ್ಲು ಬಳಕೆಯಲ್ಲಿತ್ತು ಕ್ರಿ.ಶ. ೧೪೧೯ರ ದೇವರಾಜ ಮಹಾರಾಯರ ಕಾಲದಲ್ಲಿ ಪಾಂಡೂನಾಡ ನೊಣಬನರೆಸಿ ಕೆರೆ ಎಂದು ಕರೆದು ಇದನ್ನು ಲಖಮಷ್ಟನ ಮಗ ಹರಿಯಣನು ಆಳುತ್ತಿದ್ದನು.

ಉದಯಾದಿತ್ಯನಿಗೆ ಪರೋಕ್ಷವಿನಯವಾಗಿ ದಂಡನಾಯಕ ತಿಕ್ಕಣ್ಣ ಮತ್ತು ಲೆಂಕಸಾಸಿರ್ವರು ೨೪ ಜನರಿಗೆ ಛತ್ರವನ್ನು, ನೊಳಂಬೇಶ್ವರ ಮತ್ತು ತಿಕೇಶ್ವರವನ್ನು ಮಾಡಿಸಿ, ಅವುಗಳ ಪೂಜೆ, ವಿದ್ಯಾದಾನಕ್ಕೆ ಸವಟಿಪಾಳ್ಯ ಪಡೆದು ಶಿವಪುರವೆಂದು ಹೆಸರಿಟ್ಟರು. ೧೦೪೬ ರಲ್ಲಿ ತಿಕಣ್ಣನೆಂಬುವವನು ಮೋರಗೆರೆಯನ್ನು ಬಿಲ್ಲವರ ಕೈಲೆ ಪಡೆದು ನೊಳಂಬೇಶ್ವರ ಹಾಗೂ ವಿದ್ಯಾಭ್ಯಾಸಕ್ಕಾಗಿ ಸೋಮೇಶ್ವರ ಪಂಡಿತರ ಕಾಲುತೊಳೆದು ವಿರೂಪಾಕ್ಷನ ಸಮಕ್ಷಮದಲ್ಲಿ ದಾನ ಬಿಡುತ್ತಾನೆ. ೧೦೮೨ ನೊಣಂಬೇಶ್ವರದೇವರಹಳ್ಳಿ ಸವಡಿಯಲ್ಲಿ ಶ್ರೀಮತು ರಾಜಗುರು ವಾಮರಾಸಿದೇವರಸನು ಮೋರಗೆರೆಯ ಭೂವರ್ಸನ ಬಾವಿಗೆ ದಾನ ಕೊಟ್ಟಿದ್ದಾನೆ. ೧೦೨೫ರಲ್ಲಿ ಪಲ್ಲವ ಪೆರ್ಮಾನಡಿದೇವನು ವಿಪ್ರನಾರಾಯಣಕೆರೆಯೊಳಗಿದ್ದ ಸಿದ್ದೇಶ್ವರದೇವರಿಗೆ ದಾನಕೊಟ್ಟಿದ್ದಾನೆ.

ಪ್ರಮುಖ ಸಾಮಂತ ಅರಸು ಮನೆತನಗಳಲ್ಲಿ ಕಾಣಿಸಿಕೊಳ್ಳುವ ನೊಳಂಬರು ಆರಂಭದಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಆನಂತರ ಕ್ರಮೇಣ ಉತ್ತರದ ಕಡೆಗೆ ಬಂದು ಕಂಪಿಲಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. ಕಲ್ಯಾಣ ಚಾಳುಕ್ಯರಿಗೆ ನಿಷ್ಟಾವಂತ ಮಹಾಮಂಡಳೇಶ್ವರರಾಗಿದ್ದು, ಚಾಲುಕ್ಯ ರಾಜ್ಯ ವಿಸ್ತರಣೆಗಾಗಿ ಅನೇಕ ಯುದ್ಧಗಳನ್ನು ಮಾಡಿದರು. ಚಾಲುಕ್ಯ ಅರಸ ಮೊದಲನೆಯ ಸೋಮೆಶ್ವರನ ನಂತರ ಅಧಿಕಾರಕ್ಕಾಗಿ ಸಹೋದರರಲ್ಲಿ ಕಲಹ ಏರ್ಪಟ್ಟಿತು. ಆರನೆಯ ವಿಕ್ರಮಾದಿತ್ಯ ಅಧಿಕಾರಕ್ಕೆ ಬರುವ ವೇಳೆಗೆ ನೊಳಂಬರು ಮಾಂಡಳೀಕತ್ವದಿಂದ ಕಣ್ಮರೆಯಾದರು. ವಿಕ್ರಮಾದಿತ್ಯ ನೊಳಂಬರು ಆಳುತ್ತಿದ್ದ ಪ್ರಾಂತ್ಯಕ್ಕೆ ಪಾಂಡ್ಯರನ್ನು ನೇಮಕ ಮಾಡಿದನು. ಕರ್ನಾಟಕ ಸಂಸ್ಕೃತಿಗೆ ತಮ್ಮ ಕೊಡುಗೆಯನ್ನು ನೀಡಿದ ನೊಳಂಬರು ಚರಿತ್ರೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನೊಳಂಬರ ವಾಸ್ತುಶಿಲ್ಪವೆಂದು ಇತಿಹಾಸಕಾರರು ಗುರುತಿಸಿದ್ದಾರೆ.

ಗ್ರಂಥ ಋಣ

  1. Epigraphia Carnatica Vols.
  2. Epigraphia Indica Vols.
  3. Karnataka Inscriptions Vols.
  4. South Indian Inscriptions Vols.
  5. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟಗಳು, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಆಂಧ್ರಪ್ರದೇಶದ ಕನ್ನಡ ಶಾಸನಗಳು.
  6. Krishnamurthy M.S., 1980, the nolambas, Prasaranga, University of Mysore.
  7. ರಾಮಚಂದ್ರಗೌಡ ಹಿ.ಶಿ. (ಸಂ), ೨೦೦೭, ಕನ್ನಡ ವಿಷಯ ವಿಶ್ವಕೋಶ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
  8. ಬಡಿಗೇರ ವಿ.ಎಸ್. ೨೦೦೪, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ (ಅಪ್ರಕಟಿತ ಪಿ.ಹೆಚ್ಡಿ. ಪ್ರಬಂಧ), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.