ಜರಿಮಲೆಯು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿದ್ದು, ಈಗ ಪಾಳುಬಿದ್ದ ಗ್ರಾಮವಾಗಿದೆ. ಕೂಡ್ಲಿಗಿಯಿಂದ ನೈಋತ್ಯಕ್ಕೆ ೧೫ ಕಿ.ಮೀ. ದೂರದಲ್ಲಿರುವ ಈ ಗ್ರಾಮವು ಸಮುದ್ರ ಮಟ್ಟದಿಂದ ೨೭೫೦ ಅಡಿ ಎತ್ತರವಿದ್ದು, ಸುತ್ತಲ ಪ್ರದೇಶದಿಂದ ೮೦೦ ಅಡಿ ಮೇಲ್ಮಟ್ಟದಲ್ಲಿದೆ. ಬೆಟ್ಟದ ಮೇಲಿನ ಕೋಟೆಯು ಶಿಥಿಲವಾಗಿದೆ. ಈ ಕೋಟೆಯಲ್ಲಿ ವಿಜಯನಗರದ ಕಾಲಾವಧಿಯಲ್ಲಿ ಒಂದು ಚಿಕ್ಕ ಮನೆತನ ಆಳ್ವಿಕೆ ಮಾಡುತ್ತಿತ್ತು. ಸುಮಾರು ಕ್ರಿ.ಶ. ೧೫೦೦ ರಿಂದ ೧೮೦೦ ರವರೆಗೆ ವಿವಿಧ, ತಮಗಿಂತ ಬಲಾಢ್ಯರಾದವರ ಆಳ್ವಿಕೆಗೊಳಪಟ್ಟ ಬಹಳ ಕಷ್ಟಕರ ಪರಿಸ್ಥಿತಿಯಲ್ಲಿ ಆಳ್ವಿಕೆ ಮಾಡಿದವರೇ ಈ ಜರಿಮಲೆ ನಾಯಕರು.

ಇವರು ವಿಜಯನಗರದ ಚಕ್ರವರ್ತಿಗಳಿಂದ ಕೆಲ ಗ್ರಾಮಗಳನ್ನು ಬಳುವಳಿಯಾಗಿ ಪಡೆದುಕೊಂಡು, ನಂತರ ಆದಿಲ್‌ಶಾಹಿಗಳ ಆಳ್ವಿಕೆಗೊಳಪಟ್ಟು ಹರಪನಹಳ್ಳಿ, ಚಿತ್ರದುರ್ಗದವರ ಜೊತೆ ತಮ್ಮ ಉಳಿವಿಗಾಗಿ ಹೋರಾಟಮಾಡಿ, ಹೈದರ್ ಆಲಿಯಿಂದ ಸಹಾಯ ಪಡೆದು ಮುಕ್ತರಾಗಿ ಟಿಪ್ಪುವಿನ ಕಾಲದಲ್ಲಿ ಪದಚ್ಯುತರಾಗಿ, ನಿಜಾಮನ ನಿಯಂತ್ರಣಕ್ಕೆ ಒಳಪಟ್ಟು ಖಂಡಣಿ (ಕಪ್ಪಕಾಣಿಕೆ) ಹಣ ನೀಡಲಾಗಿದೆ ಕ್ರಿ.ಶ.೧೮೦೦ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಅಧೀನಕ್ಕೆ ಒಳಗಾಗಿ ಕೊನೆಗೆ ರಾಜ್ಯ ಕಳೆದುಕೊಂಡು ಅವರಿಂದ ವಿಶ್ರಾಂತ ವೇತನ ಪಡೆಯಲು ಪ್ರಯತ್ನಿಸಿದವರ ಸಂಕ್ಷಿಪ್ತ ಚರಿತ್ರೆಯೇ ಈ ಜರಿಮಲೆಯವರ ರಾಜಕೀಯ ಚರಿತ್ರೆಯಾಗಿದೆ.

ಆಕರಗಳು

ಇದುವರೆಗೂ ಜರಿಮಲೆಯ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕನ್ನು ನೀಡುವ ಯಾವುದೇ ಗ್ರಂಥಗಳು ಅಲ್ಲದೆ ಸಮಗ್ರವಾದ ಲೇಖನವೂ ಕೂಡಾ ಬಂದಿಲ್ಲದೆ ಇತಿಹಾಸಕಾರರ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

೧. ಈ ಮನೆತನಕ್ಕೆ ಸಂಬಂಧಪಟ್ಟ ವಂಶಾವಳಿಯೊಂದನ್ನು ಪ್ರೊ. ಲಕ್ಷ್ಮಣ್‌ತೆಲಗಾವಿಯವರು ಸಂಪಾದಿಸಿ ೧೯೭೬ರಲ್ಲಿ ಚಂದ್ರವಳ್ಳಿ ಎಂಬ ಪುಸ್ತಕದಲ್ಲಿ “ಜರಿಮಲೆ ಸಂಸ್ಥಾನದ ವಂಶಾವಳಿಶೀರ್ಷಿಕೆಯಡಿ ಪ್ರಕಟಿಸಿದ್ದಾರೆ.[1] ಇದು ದಂತಕತೆಯಿಂದ ಕೂಡಿದ್ದು, ಅದರಲ್ಲಿನ ಹೆಸರುಗಳು ಇತಿಹಸಕಾರನಿಗೆ ಗೊಂದಲ ಮೂಡಿಸುತ್ತವೆ. ಈ ವಂಶಾವಳಿಯು ಅರಿಷಿಯಿಂದ ಜರಿಮಲಿ ಸಮುಸ್ಥಾನ್ ತರು ಅರಿಷಿಯಿಂದ ಜರಿಮಲಿ ಸಮುಸ್ಥಾನ್‌ ತರು ಅರಿಷಿಯಿಂದ ಬಂದ ವಂಶಾವಳಿ ಯೊರು ಬಂದದ್ದೂ ಬರಿಯುವುದಕ್ಕೆ ಶುಭಮಸ್ತು ಎಂದಿದೆ. ಈ ಹಸ್ತಪ್ರತಿಯು ಅವರ ರಾಜಕೀಯ ಚರಿತ್ರೆಯ ಬಗೆಗೆ ಹೆಚ್ಚಿನ ವಿವರವನ್ನು ನೀಡಿಲ್ಲ. ಲಕ್ಷ್ಮಣ್‌ತೆಲಗಾವಿಯವರು ಇದೇ ಹಸ್ತಪ್ರತಿಯಲ್ಲಿ ಸುಮಾರು ಏಳುಪುಟಗಳಷ್ಟು ವೃತ್ತಾಂತವನ್ನು ತೆಲುಗಿನಲ್ಲಿ ಬರೆಯಲಾಗಿದೆ, ಸದ್ಯಕ್ಕೆ ಅದನ್ನಿಲ್ಲಿ ಪ್ರಕಟಿಸಲಾಗಿಲ್ಲ ಎಂದಿದ್ದಾರೆ ಪ್ರಕಟವಾದರೆ ಹೆಚ್ಚಿನ ವಿವರಗಳು ದೊರೆಯಬಹುದು.

೨. ಈ ಸಂಸ್ಥಾನದ ರಾಜಕೀಯ ಚರಿತ್ರೆಯ ಮೇಲೆ ಅಲ್ಪಸ್ವಲ್ಪ ಮಾಹಿತಿಯನ್ನು ೧೯೭೨ರಲ್ಲಿ ಪ್ರಕಟವಾದ ಬಳ್ಳಾರಿ ಜಿಲ್ಲಾ ಗೆಜೆಟಿಯರ್‌[2] ೧೯೭೯ರಲ್ಲಿ ಪ್ರಕಟವಾದ ಕರ್ನಾಟಕ ವಿಷಯ ವಿಶ್ವಕೋಶ[3] ೧೯೯೦ರಲ್ಲಿ ಪ್ರಕಟವಾದ ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ[4]ದಲ್ಲಿ ಕಾಣಬಹುದು.

೩. ೧೯೨೪ರಲ್ಲಿ ಹೊರಬಂದ ಎಂ.ಎಸ್. ಪುಟ್ಟಣ್ಣನವರ ಚಿತ್ರದುರ್ಗದ ಪಾಳೆಯಗಾರರು[5] ಹಾಗೂ ೧೯೯೬ರಲ್ಲಿ ಪ್ರಕಟಗೊಂಡ ಹರಪನಹಳ್ಳಿ ಪಾಳೆಯಗಾರರು[6] ಎಂಬ ಕೃತಿಗಳಲ್ಲಿ ಅಲ್ಲಲ್ಲಿ ಪ್ರಾಸಂಗಿಕವಾಗಿ ಇವರ ಸಂಸ್ಥಾನದ ಹೆಸರನ್ನು ದಾಖಲು ಮಾಡಲಾಗಿದೆ.

೪. ಕ್ರಿ.ಶ. ೧೫೦೦ ರಿಂದ ೧೮೦೦ರ ವರೆಗೆ ಸುಮಾರು ೩೦೦ ವರ್ಷ ಆಳ್ವಿಕೆ ನಡೆಸಿದ್ದರೂ ಇವರ ಯಾವುದೇ ಶಾಸನವೂ ದೊರಕದೇ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ. ಇತ್ತೀಚೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದವರು ಹೊರತಂದಿರುವ ಬಳ್ಳಾರಿ ಜಿಲ್ಲೆಯ ಶಾಸನ ಸಂಪುಟದಲ್ಲಿಯಾಗಲೀ ಅಥವಾ ದಕ್ಷಿಣ ಭಾರತದ ಶಾಸನ ಸಂಪುಟಗಳಲ್ಲಿಯಾಗಲೀ ಇವರ ಶಾಸನಗಳು ಉಲ್ಲೇಖವಾಗಿಲ್ಲ. ಪ್ರಾಯಶಃ ಈ ಮನೆತನವು ಶಾಸನಗಳನ್ನು ಹಾಕಿಸುವಷ್ಟು ಸಾಮರ್ಥ್ಯವನ್ನು ಹೊಂದಿರಲಿಲ್ಲವೇನೋ ಅಥವಾ ಹಾಕಿಸಿದ್ದರೂ ಅವುಗಳು ಬೆಳಕಿಗೆ ಬಂದಿಲ್ಲವೇನೋ; ಇವರ ಶಾಸನಗಳೇನಾದರೂ ಸಿಕ್ಕಿ ಪ್ರಕಟಗೊಂಡರೆ ಈ ಸಂಸ್ಥಾನದ ಚರಿತ್ರೆಗೆ ಹೊಸ ರೂಪ ಬರಬಹುದು.

೫. ಇತ್ತೀಚೆಗೆ ಈ ಲೇಖನದ ಲೇಖಕನಿಗೆ ಈ ಸಂಸ್ಥಾನಕ್ಕೆ ಸಂಬಂಧಿಸಿದ ಮೆಕಂಜಿ ಸಂಗ್ರಹದ ಒಂದು ಹೊಸ ಹಸ್ತಪ್ರತಿ ದೊರೆತ್ತಿದ್ದು ಅದರ ಶೀರ್ಷಿಕೆ ಇಂತಿದೆ “The Vamshavalle of the Jeremale Samstan Family Translated from a Maratha Account Communicated by the Jeremale poligar in January 1801. ಈ ದಾಖಲೆಯು ಜರಿಮಲೆ ಸಂಸ್ಥಾನದ ರಾಜಕೀಯ ಚರಿತ್ರೆಯ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತದೆ. ಅಲ್ಲದೆ Memorandums of the ceded Districts ಎಂಬ ಶೀರ್ಷಿಕೆಯಿರುವ ಥಾಮಸ್‌ಮನ್ರೋನ ವರದಿಯ ದಾಖಲೆಯೂ ಕೂಡ ಈ ಸಂಸ್ಥಾನದ ಚರಿತ್ರೆಗೆ ನೆರವಾಗುತ್ತದೆ.

ಮೂಲ

ಯಾವುದೇ ರಾಜ ಮನೆತನದ ಮೂಲವನ್ನು ಹುಡುಕುವುದು ಇತಿಹಾಸಕಾರರಿಗೆ ಒಂದು ಕುತೂಹಲಕಾರಿ ವಿಷಯವಾಗಿರುತ್ತದೆ. ಪ್ರಸಿದ್ಧ ರಾಜಮನೆತನಗಳ ಮೂಲವನ್ನು ಕೆದಕಿ ನೋಡಿದಾಗ ನಮಗೆ ಕೆಲವು ಸಮಾನ ಅಂಶಗಳು ದೊರಕುತ್ತವೆಯೇ ಅಲ್ಲದೇ, ಅನೇಕ ಐತಿಹ್ಯಗಳಿಂದ ಮೂಲ ಪುರುಷನ ಸುತ್ತ ಘಟನೆಗಳನ್ನು ಹೆಣೆಯಲಾಗಿದೆ. ಅದೇ ರೀತಿ ಕರ್ನಾಟಕದ ಅನೇಕ ಕಡೆ ೧೬, ೧೭, ೧೮ನೇ ಶತಮಾನಗಳಲ್ಲಿ ತಲೆ ಎತ್ತಿದ ಚಿಕ್ಕಮನೆತನಗಳ ಮೂಲ ಪುರುಷರ ಬಗೆಗಂತೂ ಸ್ಪಷ್ಟವಾಗಿ ಏನನ್ನೂ ಹೇಳುವುದು ಅಸಾಧ್ಯ, ಆದಾಗ್ಯೂ ಈ ಅವಧಿಯಲ್ಲಿ ಉದಯವಾದ ಚಿಕ್ಕಮನೆತನಗಳು ವಿಜಯನಗರ ಸಾಮ್ರಾಜ್ಯದ ಸ್ವರೂಪದ ಚೌಕಟ್ಟಿನೊಳಗೆ ಅವುಗಳ ಹುಟ್ಟು ಮತ್ತು ಬೆಳವಣಿಗೆಗಳು ಅಂತರ್ಗತವಾಗಿದ್ದವು ಎಂಬ ಅಂಶವನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.[7] ಈ ಹಿನ್ನೆಲೆಯಲ್ಲಿ ಜರಿಮಲೆ ಸಂಸ್ಥಾನದ ಸ್ಥಾಪಕರ ಮೂಲದ ಬಗೆಗೆ ದೊರೆಯುವ ಕೆಲ ಮಾಹಿತಿಗಳನ್ನು ವಿಶ್ಲೇಷಿಸಿ ನೋಡಿದಾಗ ಮೊದಲು ಆ ಮನೆತನದವರ ಮೂಲಸ್ಥಳ ಯಾವುದು ಎಂಬ ಪ್ರಶ್ನೆ ನಮ್ಮ ಮುಂದೆ ಸುಳಿಯುತ್ತದೆ. ತೆಲಗಾವಿಯವರು ಸಂಪಾದಿಸಿರುವ ಜರಿಮಲೆ ಸಂಸ್ಥಾನದ ವಂಶಾವಳಿಯಲ್ಲಿ ಈ ಅರಸರು ಕದ್ರಿ ಮೂಲ ಪುರುಷರೆಂದು ಕರೆದುಕೊಂಡಿದ್ದಾರೆ.[8] ಇದೊಂದು ಮಾತ್ರ ನಮಗೆ ಇವರ ಮೂಲದ ಬಗ್ಗೆ ತಿಳಿದುಬರುವ ಅಂಶ. ಗೆಜೆಟಿಯರ್‌ಗಳಾಗಲೀ, ಇತರ ಆಕರಗಳಾಗಲೀ ಅವರ ಮೂಲದ ಬಗ್ಗೆ ಯಾವ ಮಾಹಿತಿಯನ್ನು ಒದಗಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಇವರು ಕದ್ರಿ ಪ್ರದೇಶದವರೆಂದು ಹೇಳಬಹುದು. ಕದ್ರಿ ಆಂಧ್ರಪ್ರದೇಶದ ಅನಂತಪುರದ ಜಿಲ್ಲೆಯ ಒಂದು ಗ್ರಾಮ. ಈ ಪ್ರದೇಶ ಬೇಡರ ಪ್ರಬಲ ನೆಲೆ ಎಂದು ಗುರ್ತಿಸಲಾಗುತ್ತಿದೆ. ಈ ಭಾಗದಿಂದಲೇ ಅನೇಕ ಬೇಡ ನಾಯಕರು ವಲಸೆ ಹೋಗಿ ನಾಡಿನ ಇತರ ಭಾಗಗಳಲ್ಲಿ ವಿಜಯನಗರ ಕಾಲದಲ್ಲಿ ಸ್ವತಂತ್ರ ಸಂಸ್ಥಾನಗಳನ್ನು ಸ್ಥಾಪಿಸಿರುವುದನ್ನು ನಾವು ಇತಿಹಾಸದಲ್ಲಿ ನೋಡುತ್ತೇವೆ. ಉದಾ: ಹಾಗಲವಾಡಿ, ಚಿತ್ರದುರ್ಗ, ಸುರಪುರ, ಯಲಹಂಕ ಇತ್ಯಾದಿ. ಅಂದರೆ, ಈ ಮನೆತನದ ಮೂಲ ಪುರುಷ ಆಂಧ್ರಮೂಲ ಅಥವಾ ತೆಲುಗು ಮೂಲದವನೆಂದು ಸ್ಪಷ್ಟಪಡಿಸಬಹುದು. ವಿಜಯನಗರ, ನಗರೋತ್ತರ ಕಾಲದಲ್ಲಿ ಉದಯವಾದ ಚಿಕ್ಕಪುಟ್ಟ ಮನೆತನದ ಮೂಲಪುರುಷರು ಬಹುಪಾಲು ತೆಲುಗು ಮೂಲದವರು ಇಲ್ಲವೆ ತಮಿಳು ಮೂಲದವರು ಆಗಿರುವುದನ್ನು ನೆನಪಿಸಿಕೊಳ್ಳಬಹುದು.

ಸ್ಥಾಪನೆ

ಜರಿಮಲೆ ಸಂಸ್ಥಾನವು ಯಾರಿಂದ ಹೇಗೆ ಮತ್ತು ಯಾವಾಗ ಸ್ಥಾಪಿತವಾಯಿತು? ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಅನೇಕ ಸಂಗತಿಗಳು ತಿಳಿಯುತ್ತವೆ. ಜರಿಮಲೆ ಸಂಸ್ಥಾನದ ವಂಶಾವಳಿಯು ಈ ವಿಷಯದ ಬಗೆಗೆ ಸರಿಯಾದ ಮಾಹಿತಿಯನ್ನು ನೀಡದೆ ಇರುವುದರಿಂದ ಸ್ಥಾಪಕರ ಬಗೆಗೆ ಹೆಚ್ಚಿಗೆ ಹೇಳಲು ಸಾಧ್ಯವಾಗದು. ಆದಾಗ್ಯೂ ಕೂಡಾ ಜರಿಮಲೆಯ ಆಸುಪಾಸಿನಲ್ಲಿರುವ ಸಮಕಾಲೀನ ಪಾಳೆಯಪಟ್ಟುಗಳ ಕೈಫಿಯತ್ತುಗಳಾದ[9] ಅಂತಾಪುರ ಕೈಫಿಯತ್ತು, ಧರೋಜಿಗ್ರಾಮದ ಕೈಫಿಯತ್ತು, ಕೊಮಾರದೇವರ ಕ್ಷೇತ್ರದ ಕೈಫಿಯತ್ತುಗಳಲ್ಲಿನ ವಿಷಯವನ್ನು ಪರಿಶೀಲಿಸಿದಾಗ ಇವುಗಳಲ್ಲಿ ಬರುವ ಆರಂಭಿಕ ವಿಷಯಗಳೂ ಸಾಮ್ಯವಿದ್ದುದಲ್ಲದೆ ಎಲ್ಲಾ ಕೈಫಿಯತ್ತುಗಳಲ್ಲಿನ ಏಳೂಜನ ಸೋದರರ ಹೆಸರನ್ನು ತಿಳಿಸಲಾಗಿದೆ. ಅವರು ಕುತ್ತಾನೆ, ಸೊಂಡೂರು, ಬಾಣರಾವಿ, ಜರಿಮಲೆ, ಗುಡಿಕೋಟೆ, ವುಜನಿ, ವಡ್ಡು, ಧರೋಜಿಗಳಲ್ಲಿ ಆಳ್ವಿಕೆ ನಡೆಸುತ್ತಿದ್ದುದನ್ನು ಹೇಳಲಾಗಿದೆ. ಇಲ್ಲಿ ಆಡಳಿತ ನಡೆಸುತ್ತಿದ್ದವರೆಲ್ಲರೂ ಕೊಮಾರರಾಮನ ವಂಶಿಕನಾದ ಭೂಮಿರಾಜನ ಮಕ್ಕಳು. ಈ ಅಂಶವನ್ನು ಆಧಾರವಾಗಿಟ್ಟುಕೊಂಡು ನೋಡಿದಾಗ ಪ್ರಾಯಶಃ ಇವರೆಲ್ಲರೂ ಒಂದೇ ಮನೆತನಕ್ಕೆ ಸೇರಿದವರಾಗಿದ್ದು ವಿವಿಧ ಪ್ರಾಂತ್ಯಗಳಲ್ಲಿ ಆಳ್ವಿಕೆ ನಡೆಸುತ್ತಿದ್ದುದು ಸ್ಪಷ್ಟವಾಗುತ್ತದೆ. ಇದುವರೆಗಿನ ದಾಖಲೆಗಳನ್ನು ಪರಿಶೀಲಿಸಿದಾಗ ಜರಿಮಲೆ ಸಂಸ್ಥಾನವು ಭೂಮಿರಾಜನಿಗಿಂತ ಮೊದಲೇ ಸ್ಥಾಪಿತವಾಗಿತ್ತು ಎಂಬ ಅಂಶ ತಿಳಿಯುತ್ತದೆ. ಕೈಫಿಯತ್ತುಗಳಲ್ಲಿರುವಂತೆ.[10]

ಭೂಮಿರಾಜ ಕೃಷ್ಣದೇವರಾಯನಿಗೆ ಅರಿಕೆ ಮಾಡಿಕೊಂಡಿದ್ದು ಹೀಗೆ

ಕೊಮಾರರಾಮನ ವಂಶಸ್ಥನಾದ ದಳವಾರ ಮರಳೆ ಭೂಮಿರಾಜ ಕೃಷ್ಣರಾಯರಿಗೆ ಭಿನ್ನಹ – ಪೂರ್ವದಲ್ಲಿ ನಮ್ಮಾಗೆ ನಾಡದಳವಾರಿಕೆ ಕೌಲಸ್ವಾಸ್ತಿಗೆ ಜಹಗೀರು ಸುದ್ದಾ ನಡವುತ್ತಾಯಿತ್ತು ಅದ ಪಾಲಿಸಿದರೆ ದಯಪಾಲಿಸಬೇಕೆಂದು ಭಿನ್ನಹ ಮಾಡಿಕೊಳ್ಳಲಾಗ ಅದ ಮೇರೆಗೆ ಕೃಷ್ಣರಾಯರು ಸಂತೋಷದಿಂದ ಕೊಟ್ಟತಾಲ್ಲೂಕು ವಿವರ. ೧ ಕುತ್ತಾನೆ ೧ ಸೊಂಡೂರು ೧ ಜರಿಮಲೆ ೧ ಗುಡೇಕೋಟೆ ೧ ಬಾಣರಾವಿ ೧ ವುಜನಿ. ನಂತರ ಭೂಮಿರಾಜ ಇವುಗಳನ್ನು ತನ್ನ ಏಳು ಮಕ್ಕಳಲ್ಲಿ ಹಂಚಿ ಜರಿಮಲೆಯನ್ನು ಮಲ್ಲಿಕಾರ್ಜುನನಾಯಕನಿಗೆ ಬಿಟ್ಟುಕೊಡುತ್ತಾನೆ ಎಂಬ ವಿವರವಿದೆ. ಭೂಮಿರಾಜನು ವಿಜಯನಗರದ ಕೃಷ್ಣದೇವರಾಯನಿಗೆ ಭಿನ್ನಹ ಮಾಡಿಕೊಳ್ಳುವಾಗ ನಮಗೆ ಹಿಂದೆ ನಾಡದಳವಾರಿಕೆ ಇತ್ತು ಎನ್ನುವುದನ್ನು ನೆನಪಿಸಿದ್ದಾನೆ. ಆದುದರಿಂದ ಭೂಮಿರಾಜನಿಗಿಂತ ಮೊದಲೇ ಈ ಸಂಸ್ಥಾನ ಸ್ಥಾಪಿತವಾಗಿತ್ತು ಎಂಬ ಅಂಶ ಸ್ಪಷ್ಟವಾಗುತ್ತದೆ. ಆದರೆ ಭೂಮಿರಾಜನಿಗಿಂತ ಮೊದಲು ಇದ್ದವರು ಯಾರು ಎನ್ನುವ ಪ್ರಶ್ನೆ ಏಳುತ್ತದೆ. ಅದಕ್ಕೆ ಮೆಕಂಜಿ ಸಂಗ್ರಹದ ವಂಶಾವಳಿಯ ಮೂಲಕ ಸ್ಪಷ್ಟಪಡಿಸಬಹುದು.

ಜರಿಮಲೆ ಸಂಸ್ಥಾನದ ವಂಶೀಕನಾದ ಪಾಪಣ್ಣನಾಯಕನು ವಿಜಯನಗರದ ಚಕ್ರವರ್ತಿಯಾದ ಸಾಳುವ ವೀರನರಸಿಂಹನ (ಕ್ರಿ.ಶ. ೧೪೯೧ – ೧೫೦೫) ಸೇವಕರಲ್ಲಿ ಒಬ್ಬನಾಗಿ ಸೇವೆ ಸಲ್ಲಿಸುತ್ತಿದ್ದನು. ಚಕ್ರವರ್ತಿಯು ಕಾಂಚಿಪುರಂಗೆ ಹೋದ ಸಂದರ್ಭದಲ್ಲಿ ಜೊತೆಗಿದ್ದು ಅವನ ವಿಶ್ವಾಸಕ್ಕೆ ಪಾತ್ರನಾಗಿದ್ದನು ವಿಜಯನಗರದ ಸುತ್ತ ಹಾವಳಿ ಮಾಡುತ್ತಿದ್ದ ಹಾಗೂ ಜನರನ್ನು ಸುಲಿಗೆ ಮಾಡುತ್ತಿದ್ದ ದಂಗೆಕೋರರನ್ನು ಹತ್ತಿಕ್ಕಲು ಸಾಳುವ ವೀರನರಸಿಂಹನು ಪಾಪಣ್ಣನಾಯಕನಿಗೆ ಆದೇಶಿಸಿದಾಗ ತನ್ನ ಶಕ್ತಿಸಾಮರ್ಥ್ಯಗಳಿಂದ ಆ ದಂಗೆಯನ್ನು ಅಡಗಿಸಿದನು. ಇದರಿಂದ ಸಂಪ್ರೀತನಾದ ಚಕ್ರವರ್ತಿಯು ಪಾಪಣ್ಣನಾಯಕನಿಗೆ ವಡ್ಡು, ಧರೋಜಿ ಗ್ರಾಮಗಳನ್ನು ಬಳುವಳಿಯಾಗಿ ನೀಡಿದನು.[11] ಆದರೆ ಗೆಜೆಟಿಯರ್‌ಗಳು, ವಿಶ್ವಕೋಶ ಈ ಮನೆತನ ಪೆನ್ನಪ್ಪನಾಯಕನಿಂದ ಆರಂಭವಾಯಿತೆಂದು ತಿಳಿಸುತ್ತವೆ. ಮೆಕಂಜಿಯ ಅಪ್ರಕಟಿತ ಹೊಸ ಆಧಾರದ ಮೂಲಕ ಈ ಸಂಸ್ಥಾನವು ಪೆನ್ನಪ್ಪನಾಯಕನ ತಂದೆ ಪಾಪಣ್ಣನಾಯಕನಿಂದ ಸ್ಥಾಪಿತವಾಯಿತೆಂದು ದೃಢವಾಗುತ್ತದೆ. ಪಾಪಣ್ಣನಾಯಕನ ವಂಶಿಕರು ಕದ್ರಿಯವರಾಗಿದ್ದು ಕಾರಣಾಂತರದಿಂದ ಅವರು ವಿಜಯನಕ್ಕೆ ಆಗಮಿಸಿರಬಹುದು. ನಂತರ ಅರಮನೆಯಲ್ಲಿ ಕೆಲಸಕ್ಕೆ ಸೇರಿ, ತಮ್ಮ ನಿಷ್ಠೆಯಿಂದ ಚಕ್ರವರ್ತಿಯ ಆಪ್ತವರ್ಗದವರಾಗಿ ಕ್ರಮೇಣ ಈ ಸಂಸ್ಥಾನವನ್ನು ಸ್ಥಾಪಿಸಿದರೆಂದು ಹೇಳಬಹುದು.

ರಾಜಕೀಯ ಇತಿಹಾಸ

ಪಾಪಣ್ಣನಾಯಕನ ನಂತರ ಅವನ ಮಗ ಪೆನ್ನಪ್ಪನಾಯಕನು ತನಗೆ ಬಳುವಳಿಯಾಗಿ ಬಂದ ಗ್ರಾಮಕ್ಕೆ ಒಡೆಯನಾದನು. ಇವನಿಗೆ ಚಕ್ರವರ್ತಿ ತುಳುವ ವೀರನರಸಿಂಹನು (೧೫೦೫ – ೧೫೦೯) ಗುಡೀಕೋಟೆ ಭೂಪಸಮುದ್ರ ಗ್ರಾಮಗಳನ್ನು ಉಡುಗೊರೆಯಾಗಿ ನೀಡಿ ಪುರಸ್ಕರಿಸಿದನು.[12] ಕೆಲ ಕಾಲಾನಂತರ ಉಜ್ಜನಿಯ ದಟ್ಟ ಅರಣ್ಯಕ್ಕೆ ನಾಯಕನು ಭೇಟಿಗಾಗಿ ಹೋದನು. ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಸಿದ್ದೇಶ್ವರ ದೇವರು ಕನಸಿನಲ್ಲಿ ಕಾಣಿಸಿಕೊಂಡು ದೇವಾಲಯ ಮತ್ತು ಮಠವನ್ನು ಸ್ಥಾಪಿಸುವಂತೆ ಆದೇಶಿದಿಂತೆ. ಅದರಂತೆ ಅವನು ಅವೆರಡನ್ನು ಸ್ಥಾಪಿಸಿ ಅದರ ಸುತ್ತ ಕೋಟೆ ಕಟ್ಟಿ ಅದಕ್ಕೆ ಉಜ್ಜನಿಯೆಂದು ನಾಮಕರಣ ಮಾಡಿ ತನ್ನ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡೆಂದು ವಂಶಾವಳಿಯು ತಿಳಿಸುತ್ತದೆ.[13] ಉಜ್ಜನಿಯ ಹೆಸರಿನ ಉಲ್ಲೇಖುವ ಕ್ರಿ.ಶ. ೧೨೯೮ರ ಶಾಸನದಲ್ಲಿ[14] ಇದೆ. ಅಲ್ಲದೆ ಈ ಸಿದ್ದೇಶ್ವರ ದೇವಾಲಯಕ್ಕೆ ಮೊದಲು ಮಲ್ಲಿಕಾರ್ಜುನ[15] ಎಂದು ಹೆಸರಿದ್ದು ನಂತರ ಸಿದ್ದೇಶ್ವರ ಎಂದು ಬದಲಾಗಿರುವುದು ಸ್ಪಷ್ಟವಾಗುತ್ತದೆ. ಪ್ರಾಯಶಃ ಮರುಳ ಸಿದ್ದೇಶ್ವರರು ಇಲ್ಲಿಗೆ ಬಂದು ನೆಲಸಿದ ತರುವಾಯ ಈ ಹೆಸರು ಬಂದಿದೆ ಎಂದು ಈಗಾಗಲೇ ಲೇಖಕರು ತಿಳಿಸಿದ್ದಾರೆ[16] ಉಜ್ಜನಿಯ ೧೭೧೨ರ ಶಾಸನದಲ್ಲಿ ಶ್ರೀ ಸ್ವಾಮಿ ಉಜಿನಿ ಸಿದ್ದೇಶ್ವರ ದೇವರ ಪಾದಕ್ಕೆ ದೇವರ ಭಕ್ತರು[17] ಎಂದು ಉಲ್ಲೇಖವಾಗುವುದನ್ನು ಗಮನಿಸಿದರೆ ೧೬ನೇ ಶತಮಾನದ ಕೊನೆಯ ಭಾಗದಲ್ಲಿ ಮಲ್ಲಿಕಾರ್ಜುನ ದೇವರು ಸಿದ್ದೇಶ್ವರನಾಗಿರಬಹುದು. ಇದರಿಂದ ನಮಗೆ ಸ್ಪಷ್ಟವಾಗುವುದೇನೆಂದರೆ ಆ ವೇಳೆಗಾಗಲೇ ಉಜ್ಜನಿಯು ಪ್ರಮುಖ ಸ್ಥಳವಾಗಿದ್ದು ಅದರ ಮೇಲೆ ಪೆನ್ನಪ್ಪನಾಯಕನು ಆಕ್ರಮಣ ಮಾಡಿ ಗೆದ್ದುಕೊಂಡು ತನ್ನ ಸ್ಥಳವನ್ನು ಧರೋಜಿಯಿಂದ ಉಜ್ಜನಿಗೆ ಬದಲಾಯಿಸಿದನೆಂದು ಸ್ಪಷ್ಟವಾಗಿ ಹೇಳಬಹುದು. ಪೆನ್ನಪ್ಪನಾಯಕನು ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಇದ್ದನು. ಅಚ್ಯುತರಾಯನ ಕಾಲದಲ್ಲಿ ಜರಿಮಲೆಯವರಿಗೆ ಅತಿ ಹೆಚ್ಚಿನ ಲಾಭವಾಯಿತು. ಚಕ್ರವರ್ತಿಗಳಿಂದ ೧೫೩೦೦ ಮಹಮ್ಮದೇ ಷಾಹಿ ಪಗೋಡಾ ಆದಾಯ ವಿರುವ ನಾಲ್ಕು ಮಾರ್ಗಗಳನ್ನು ಪಡೆದುಕೊಂಡರು. ಕೆಲ ಕಾಲಾನಂತರ ಅಚ್ಚುತರಾಯನು ಜರಿಮಲೆಯ ಪೆನ್ನಪ್ಪ ನಾಯಕನಿಗೆ ೫೦೦ ಆಶ್ವದಳ ಮತ್ತು ೩೦೦೦ ಕಾಲಾಳು ಪಡೆ ಇಟ್ಟುಕೊಳ್ಳಲು ಅನುಮತಿ ನೀಡಿ ಕೇಳಿದಾಗ ಅದನ್ನು ಪೂರೈಸುವ ಷರತ್ತಿನ ಮೇರೆಗೆ ೩೫೧೫೦ ಮಹಮ್ಮದ್‌ಶಾಹಿ ಪಗೋಡಾ ಆದಾಯವಿರುವ ಮತ್ತೆರಡು ಹೆಚ್ಚಿಗೆ ಮಾಗಣಿಗಳನ್ನು ನೀಡಿದನು.[18]

ಈ ಪ್ರದೇಶದಲ್ಲಿ ನೆಲೆನಿಂತು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜಾಪುರದ ಸುಲ್ತಾನರು ವಿಜಯನಗರದ ಪ್ರಾಂತ್ಯಗಳ ಮೇಲೆ ದಾಳಿಮಾಡುವ ಸೂಚನೆ ದೊರೆತಾಗ ಚಕ್ರವರ್ತಿಯಾದ ಅಚ್ಯುತರಾಯನು (೧೫೨೯ – ೧೫೪೨) ತನ್ನ ಸಂಸ್ಥಾನಗಳಾದ ಕನಕಗಿರಿ, ರಾಯದುರ್ಗ, ಸಿರಾ, ಬಸವಾಪಟ್ಟಣ ಮತ್ತು ಉಜ್ಜನಿಯ ನಾಯಕರುಗಳಿಗೆ ತಮ್ಮ ತಮ್ಮ ಸೇನಾ ಬಲದೊಂದಿಗೆ ಸಜ್ಜಾಗಬೇಕೆಂದು ಆದೇಶಿಸಿದನು. ಇಂತಹ ಸನ್ನಿವೇಶದಲ್ಲಿ ಸುಲ್ತಾನನು ವಿಜಯನಗರದ ಗಡಿಗಳ ಭಾಗಕ್ಕೆ ನುಗ್ಗಿ ಕೊಳ್ಳೆ ಹೊಡೆಯುತ್ತಿದ್ದ ಸಂದರ್ಭದಲ್ಲಿ ಗುತ್ತಿ, ಬಳ್ಳಾರಿ, ಸಿರಾ, ಬಸವಾಪಟ್ಟಣ, ಪಾವಗಡ, ಕಣಕುಪ್ಪೆ, ಕುಂದರ್ಪಿ, ನಾರಾಯಣ ದೇವರಕೆರೆ, ಡಣಾಯಕನಕೆರೆ, ಸೊಂಡೂರು, ಕುಡತಿನಿಯಲ್ಲಿದ್ದ ಪಾಳೆಯಗಾರರಿಗೆಲ್ಲ ಸಜ್ಜಾಗಲು ಆದೇಶಿಸಿದನು. ಎಲ್ಲರೂ ತಮ್ಮ ತಮ್ಮ ಶಕ್ತ್ಯಾನುಸಾರ ಸೇನೆಯನ್ನು ಒದಗಿಸಿದರು. ಕೆಲವರು ಸುಲ್ತಾನನೊಂದಿಗೆ ಒಳಸಂಚು ನಡೆಸಿದ್ದರ ಫಲವಾಗಿ ಕೋಪಗೊಂಡ ಚಕ್ರವರ್ತಿಯು ಒಳಸಂಚಿನಲ್ಲಿ ಭಾಗಿಯಾಗಿದ್ದ ಸಂಸ್ಥಾನಗಳನ್ನು ಕಿತ್ತುಕೊಳ್ಳುವಂತೆ ತನ್ನ ನಿಷ್ಠನಾಯಕರಿಗೆ ಆದೇಶಿಸಿದನು. ಚಕ್ರವರ್ತಿಗೆ ನಿಷ್ಠಾನಗಿದ್ದ ಪೆನ್ನಪ್ಪನಾಯಕನು ಕಣಕುಪ್ಪೆ ಕೂಡಲಗಿ, ನಾರಾಯಣದೇವರಕೆರೆ, ಡಣಯಕನಕೆರೆ, ಸೊಂಡೂರು ಪ್ರದೇಶವನ್ನು ಆಕ್ರಮಿಸಿಕೊಂಡು ಅಲ್ಲಿ ತನ್ನ ಸೇನಾಬಲವನ್ನಿಟ್ಟನು.[19]

ಹೀಗೆ ಉಜ್ಜನಿಯಲ್ಲಿ ನಿರಾತಂಕವಾಗಿ ಆಳ್ವಿಕೆ ನಡೆಸುತ್ತಿದ್ದ ಪೆನ್ನಪ್ಪನಾಯಕನಿಗೆ ಬಸವಂತರಾಜ, ಭೂಮಿರಾಜ, ಬೂದಿಸಿದ್ಧರಾಜ ಎಂಬ ಮೂರು ಜನ ಪುತ್ರರು ಇದ್ದರು. ಇರೆಲ್ಲರೂ ತಮ್ಮ ತಂದೆಯ ಏಳಿಗೆಗೆ ಕಾಣಿಕೆ ಸಲ್ಲಿಸಿ ಧೈರ್ಯ ಸಾಹಸಗಳಿಗೆ ಹೆಸರು ವಾಸಿಯಾಗಿದ್ದಾರೆ.

ಇವರಲ್ಲಿ ಭೂಮಿರಾಜ ಅತ್ಯಂತ ಪ್ರತಿಭಾನ್ವಿತ ಹಾಗೂ ಸಾಹಸಿ. ಅವನ ಸಾಹಸವನ್ನು ಈ ಘಟನೆಯೊಂದಿಗೆ ಸಮರ್ಥಿಸಬಹುದು.[20] ವಿಜಾಪುರದ ಬಾದ್‌ಷಹಾನ ಆಸ್ಥಾನದಲ್ಲಿ ವಿಶೇಷವಾದ ಕುದುರೆ ಇತ್ತು ಅದನ್ನು ಏರಿ ಸವಾರಿ ಮಾಡಲು ಎಲ್ಲರೂ ಭಯ ಪಡುತ್ತಿದ್ದರು. ಕುದುರೆ ಸವಾರಿಯಲ್ಲಿ ಪ್ರತಿಭಾನ್ವಿತನಾದ ಭೂಮಿರಾಜನನ್ನು ಬಾದ್‌ಷಹಾನು ಬಿಜಾಪುರಕ್ಕೆ ಆಹ್ವಾನಿಸಿ ಆ ಕುದುರೆಯನ್ನು ಪಳಗಿಸು ಎಂದು ಆದೇಶಿಸಿದನು. ಅವನು ಅದನ್ನು ಸುಲಭವಾಗಿ ಪಳಗಿಸಿದನು. ಅವನ ಸಾಹಸಕ್ಕೆ ಮೆಚ್ಚಿದ ಬಾದ್‌ಷಹಾನು ಅವನಿಗೆ ಜುಮ್ಮೇದಾರ್‌ಗುಡ್ಡಯ್ಯ ಜರಿಮಲ್ಲ ಎಂಬ ಬಿರುದನ್ನು ನೀಡಿ ದರ್ಬಾರ್‌ಗೆ ಹಾಜರಾಗುವಂತೆ ಸೂಚಿಸಿದನು. ಅಲ್ಲದೆ ನಾಲ್ಕು ಮಾಗಣಿಗಳನ್ನು ಅವನಿಗೆ ನೀಡಿ ೩೦೦೦ ರೂಗಳ ಕಾಣಿಕೆಯನ್ನು ನೀಡಿದರು. ಮತ್ತು ೨೦೦೦ ಕಾಲಾಳು ಪಡೆ ಹಾಗೂ ೩೦೦ ಅಶ್ವದಳವನ್ನು ಇಟ್ಟುಕೊಳ್ಳಲು ಅನುಮತಿ ನೀಡಿದನು.[21] ಹೀಗೆ ವಿಜಾಪುರದವರ ಸ್ನೇಹವನ್ನು ಸಂಪಾದಿಸಿದ ಭೂಮಿರಾಜನು ನೆರೆಹೊರೆಯವರ ಪಾಳೆಯಗಾರರಲ್ಲಿ ಭೀತಿ ಹುಟ್ಟಿಸಿದುದು ಸಹಜವಾಗಿದೆ. ಭೂಮಿರಾಜನಿಗೆ ಏಳುಜನ ಪುತ್ರರಿದ್ದುದನ್ನು ಅಂತಾಪುರ ಕೈಫಿಯತ್ತು ಮತ್ತು ಧರೋಜಿ ಗ್ರಾಮದ ಕೈಫಿಯತ್ತುಗಳು[22] ತಿಳಿಸಿದರೆ ಜರಿಮಲೆ ಸಂಸ್ಥಾನದ ವಂಶಾವಳಿಯು[23] ಬೂದಿಶಿದ್ದರಾಜನಿಗೆ ಏಳುಜನ ಪುತ್ರರಿದ್ದುದನ್ನು ತಿಳಿಸುತ್ತದೆ. ಹೀಗೆ ವಿಭಿನ್ನ ಮಾಹಿತಿ ಇವುಗಳಲ್ಲಿ ಇರುವುದರಿಂದ ಯಾರು? ಯಾರಿಗೆ? ಯಾವ ರೀತಿಯ ಸಂಬಂಧ? ಎಂದು ಹೇಳಲು ಅತ್ಯಂತ ತೊಡಕಾಗಿದೆ. ಪೆನ್ನಪ್ಪ ನಾಯಕನ ನಂತರ ಅವನ ಹಿರಯ ಪುತ್ರ ಬಸವಂತರಾಜ[24] ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಭೂಮಿರಾಜ, ಬೂದಿಸಿದ್ದ ರಾಜ ತಮ್ಮ ಅಣ್ಣನಿಗೆ ನೆರವು ನೀಡಿ ಈ ಪಾಳೆಯ ಪಟ್ಟಿನ ಔನ್ನತ್ಯಕ್ಕೆ ಕಾರಣರಾದರೆಂಬುದನ್ನು ಮಾತ್ರ ಹೇಳಲಿಕ್ಕೆ ಸಾಧ್ಯವಾಗುತ್ತದೆ. ಮೆಕಂಜಿ ಸಂಗ್ರಹಿಸರುವ ವಂಶಾವಳಿಯ ಬಸವಂತರಾಜನು ರಾಜ್ಯವನ್ನು ತನ್ನ ಏಳು ಮಕ್ಕಳಲ್ಲಿ ಹಂಚಿದನೆಂದು ತಿಳಿಸುತ್ತದೆ.[25] ಅವರಲ್ಲಿ ಹಿರಿಯವನಾದ ಇಮ್ಮಡಿ ನಾಯಕನು ಕಣಕುಪ್ಪೆ, ಉಜ್ಜಯಿನಿ, ಕೂಡಲಗಿ, ಭೂಮಸಮುದ್ರಗಳನ್ನು ಪಡೆದುಕೊಂಡು ಮುಂದೆ ಚರಿತ್ರೆಯಲ್ಲಿ ಬೆಳಕಿಗೆ ಬರುತ್ತಾನೆ.

ಅಸ್ತಿತ್ವಕ್ಕಾಗಿ ಹೋರಾಟ

ವಿಜಾಪುರದ ಸುಲ್ತಾನನಿಂದ ಬಿರುದು ಪಡೆದುಕೊಂಡಿದ್ದ ಜರಿಮಲೆಯವರು ಸುಲ್ತಾನರಿಗೆ ಅವಿಧೇಯವಾಗಿ ನಡೆದುಕೊಂಡು ನಗರದವರ ಜೊತೆ ಸೇರಿಕೊಂಡಿದ್ದರಿಂದ ಅವರನ್ನು ಶಿಕ್ಷಿಸಲು ಸೇನಾ ಸಮೇತರಾಗಿ ಬಂದರು. ಆ ವೇಳೆಗೆ ಭೂಮಿರಾಜ ಮತ್ತು ಆತನ ಸೋದರರು ಮರಣ ಹೊಂದಿದ್ದು ಇಮ್ಮಡಿ ನಾಯಕನು ಆಳ್ವಿಕೆ ಮಾಡುತ್ತಿದ್ದನು. ವಿಜಾಪುರದ ಸುಲ್ತಾನನು ಉಜ್ಜಯನಿಗೆ ಮುತ್ತಿಗೆ ಹಾಕಿ ನಾಯಕನನ್ನು ಸೆರೆ ಹಿಡಿದನು. ನಂತರ ತಮ್ಮ ಸೇನಯ ಒಂದು ತುಕಡಿಯನ್ನು ಅಲ್ಲಿ ಇಟ್ಟು ನಗರದವರ ವಿರುದ್ಧ ಹೊರಟನು ಅವರನ್ನೂ ಶಿಕ್ಷಿಸಿದರು. ಈ ಅವಧಿಯಲ್ಲಿ ಇಮ್ಮಡಿ ನಾಯಕನಿಗೆ ಉಜ್ಜಯನಿಯನ್ನು ಹಿಂತಿರುಗಿ ಪಡೆದುಕೊಳ್ಳಲಿಕ್ಕೆ ಹಣ ನೀಡಬೇಕೆಂದು ಒತ್ತಾಯಿಸಿದಾಗ, ಅದನ್ನು ಸಂದಾಯ ಮಾಡುವುದಕ್ಕೆ ಇಮ್ಮಡಿ ನಾಯಕನು ಪ್ರಯತ್ನ ಮಾಡುತ್ತಿದ್ದನು. ಅವಕಾಶಕ್ಕಾಗಿ ಕಾಯುತ್ತಿದ್ದ ಹರಪನಹಳ್ಳಿ ನಾಯಕರು ಆ ವಿಜಾಪುರದವರಿಗೆ ೭೦೦ ಪಗೋಡ ಹಣವನ್ನು ನೀಡು ಉಜ್ಜಯನಿಯನ್ನು ಪಡೆದುಕೊಂಡರು.[26] ಹೀಗೆ ಉಜ್ಜಯನಿಯನ್ನು ಕಳೆದುಕೊಂಡ ಇಮ್ಮಡಿ ನಾಯಕನು ಹರಪನಹಳ್ಳಿಯವರ ವಿರುದ್ಧ ಒಳಗೇ ದ್ವೇಷ ಸಾಧಿಸುತ್ತಾ ತನ್ನ ಮತ್ತೊಂದು ಜಾಗೀರಾದ ಕೂಡಲಗಿಗೆ ಆಗಮಿಸಿದನು. ಇದೇ ಸಮಯದಲ್ಲಿ ಚಿತ್ರದುರ್ಗದ ನಾಯಕರು ಇಮ್ಮಡಿ ನಾಯಕನಿಗೆ ಸೇರಿದ್ದ ಕಣಕುಪ್ಪೆಯ ಮೇಲೆ ಆಕ್ರಮಣ ಮಾಡಿ ಗೆದ್ದುಕೊಂಡರು. ಚಿತ್ರದುರ್ಗದವರ ಶಕ್ತಿಯನ್ನು ಅರಿತಿದ್ದ ಇಮ್ಮಡಿನಾಯಕನು ಅವರ ಜೊತೆ ಸಂಘರ್ಷವನ್ನು ಮಾಡಲಿಚ್ಚಿಸದೆ ಸ್ನೇಹವೇ ಲೇಸೆಂದು ಬಗೆದು ದುರ್ಗದವರನ್ನು ಗೌರವಿಸಲಿಕ್ಕೆ ಕೂಡಲಗಿಯಿಂದ ಭೂಪಸಮುದ್ರಕ್ಕೆ ಹೋದನು. ಈ ಅವಕಾಶವನ್ನುಪಯೋಗಿಸಿಕೊಂಡ ಹರಪನಹಳ್ಳಿ ನಾಯಕರು ಕೂಡಲಗಿಯನ್ನು ಆಕ್ರಮಿಸಿಕೊಂಡರು. ತನ್ನ ತಂದೆಯಿಂದ ಪಡೆದುಕೊಂಡಿದ್ದ ಎಲ್ಲಾ ಭಾಗಗಳನ್ನು ಕಳೆದುಕೊಂಡ ಇಮ್ಮಡಿನಾಯಕನು ನೆಲೆಯಿಲ್ಲದೆ ಅಲೆದಾಡು ವಂತಾಯಿತು. ತನ್ನ ಸುರಕ್ಷತೆಗೋಸ್ಕರ ಭದ್ರವಾದ ಸ್ಥಳವನ್ನು ಹುಡುಕ ತೊಡಗಿದನು. ಅವನು ಈಗಿನ ಜರಿಮಲೆ ಎಂಬ ಸ್ಥಳಕ್ಕೆ ಬಂದು ಅದನ್ನು ತನ್ನ ರಕ್ಷಣೆಗೆ ಸೂಕ್ತ ಸ್ಥಳವೆಂದು ತಿಳಿದುಕೊಂಡು, ಚಿತ್ರದುರ್ಗದ ನಾಯಕರೊಂದಿಗೆ ಮಾತುಕತೆ ನಡೆಸಿ ಶಾಂತಿ ಒಪ್ಪಂದ ಮಾಡಿಕೊಂಡನು. ಸ್ನೇಹವು ವೈವಾಹಿಕ ಸಂಬಂಧಕ್ಕೆ ತಿರುಗಿ ಚಿತ್ರದುರ್ಗ ನಾಯಕ ಮನೆತನಕ್ಕೆ ಅಳಿಯನಾದನು. ದುರ್ಗದವರ ಬೆಂಬಲವನ್ನು ಅವರ ಸಂಬಂಧವನ್ನು ಪಡೆದುಕೊಂಡಿದ್ದ ಈತನು ತನ್ನ ಸುತ್ತಲಿನ ಪಾಳೆಯಗಾರರ ಭೀತಿಯಿಂದ ಪಾರಾಗಿ ಧೈರ್ಯದಿಂದ ಜರಿಮಲೆಯಲ್ಲಿ ಕೋಟೆಯನ್ನು, ಅರಮನೆಯನ್ನು ನಿರ್ಮಣ ಮಾಡಿ ಜನರು ವಾಸಿಸುವುದಕ್ಕೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟನು.[27] ಹಟ್ಟಿನಾಯಕ ಮನೆತನದ ಮಲ್ಲಪ್ಪ ನಾಯಕನ ಮಗಳನ್ನು ವಿವಾಹವಾಗಿ ಜರಿಮಲೆಯಲ್ಲಿ ನಿರಾತಂಕವಾಗಿ ಯಾವ ಪಾಳೇಗಾರರ ವಿರೋಧವಿಲ್ಲದೆ ಕೆಲಕಾಲ ರಾಜ್ಯವಾಳಿದನು. ಅಂದಿನ ರಾಜಕೀಯ ಸನ್ನಿವೇಶದಲ್ಲಿ ಇಮ್ಮಡಿ ನಾಯಕನ ಕ್ರಮ ಸರಿಯಾದುದೇ ಆಗಿದೆ. ಇವನ ಇಬ್ಬರು ಪತ್ನಿಯರಲ್ಲಿ ಬೊಮ್ಮಂತರಾಜ ಮತ್ತು ಕಿರಿ ಇಮ್ಮಡಿ ನಾಯಕ ಎಂಬ ಇಬ್ಬರು ಮಕ್ಕಳು ಜನಿಸಿದರು. ಅಕಾಲ ಮರಣಕ್ಕೀಡಾದ ಬೊಮ್ಮಂತರಾಜನ ಉತ್ತರಾಧಿಕಾರಿಯಾಗಿ ಕಿರಿ ಇಮ್ಮಡಿ ನಾಯಕನು ಜರಿಮಲೆ ಸಂಸ್ಥಾನದ ನಾಯಕನಾಗಿ ಆಳ್ವಿಕೆ ನಡೆಸಿದನು. ಶತ್ರುಗಳಾಗಿದ್ದ ಹರಪನಹಳ್ಳಿ ಪಾಳೆಯಗಾರರು ಜರಿಮಲೆಯವರಿಗೆ ಪದೇ ಪದೇ ಕಿರುಕುಳ ಕೊಡಲಾರಂಭಿಸಿದರು. ನಂತರ ಬಂದ ಬೊಮ್ಮಣ್ಣ ನಾಯಕನ ಕಾಲದಲ್ಲಿ ಇದು ಹೆಚ್ಚಾಯಿತು. ಹರಪನಹಳ್ಳಿಯವರೇ ಅಲ್ಲದೇ ಚಿತ್ರದುರ್ಗದವರೂ ಕೂಡ ಜರಿಮಲೆಯವರಿಗೆ ತೊಂದರೆ ಕೊಡಲಾರಂಭಿಸಿದರು. ಚಿತ್ರದುರ್ಗದ ಚಿಕ್ಕಣ್ಣನಾಯಕನು (೧೬೭೫ – ೧೬೮೬) ಜರಿಮಲೆಯವರಿಗೆ ಸೇರಿದ್ದ ಉಜ್ಜಯನಿ ದುರ್ಗದ ಮೇಲೆ ಆಕ್ರಮಣ ಮಾಡಿದನು.[28] ದುರ್ಗದ ದಂಡನ್ನು ಎದುರಿಸುವಷ್ಟು ಬಲ ಹೊಂದಿಲ್ಲದ ಜೆರಿಮಲೆಯ ಬೊಮ್ಮಣ್ಣನಾಯಕನು ಅವರೊಂದಿಗೆ ಸಂಧಾನ ನಡೆಸಿ ಉಜ್ಜಯನಿಯನ್ನು ವಾಪಸ್ ಪಡೆದುಕೊಂಡನು. ಅವಕಾಶವಾದಿಗಳಾಗಿದ್ದ ಹರಪನಹಳ್ಳಿ ನಾಯಕರು ಉಜ್ಜಯನಿಯನ್ನು ಪಡೆದೇ ತೀರಬೇಕೆಂಬ ಛಲದಿಂದ ಬಿದನೂರಿನವರ ಜೊತೆ ಕೈಜೋಡಿಸಿದರು. ಇಬ್ಬರೂ ಒಟ್ಟಾಗಿ ಜರಿಮಲೆಯವರ ಮೇಲೆ ಆಕ್ರಮಣ ಮಾಡಿದರು ಬೊಮ್ಮಣ್ಣ ನಾಯಕನ ಸಹಾಯಕ್ಕೆ ಚಿತ್ರದುರ್ಗದ ಸೇನೆ ಆಗಮಿಸಿತು. ಕ್ರಿ.ಶ. ೧೬೮೫ರ ಕಾರ್ತೀಕ ಶುದ್ಧದಲ್ಲಿ ಉಜ್ಜಿನಿಯ ಕೋಟೆಯನ್ನು ೧೨ ದಿವಸಗಳು ಮುತ್ತಿ ಊರನ್ನು ತೆಗೆದುಕೊಂಡರು. ಆ ಯುದ್ಧದಲ್ಲಿ ದುರ್ಗದ ದಂಡು ಸೋತು ಹೋಯಿತು. ಆ ಕೋಟೆಯಲ್ಲಿದ್ದ ಜರಿಮಲೆ ಬೊಮ್ಮಣ್ಣ ನಾಯಕನನ್ನು ಹರಪನಹಳ್ಳಿಯವರು ಖೈದಿಯಾಗಿ ಹಿಡಿದುಕೊಂಡರು ೩ – ೪ ತಿಂಗಳ ಮೇಲೆ ಬಿಟ್ಟರು.[29] ಬೊಮ್ಮಣ್ಣನಾಯಕನ ದುರ್ಬಲತೆಯ ಲಾಭವನ್ನು ಪಡೆದುಕೊಂಡ ಮರಾಠರ ದಂಡನಾಯಕ ಸಿದ್ದಾಜಿ ಗೋರ್ಪಡೆಯು ಕ್ರಿ.ಶ. ೧೭೨೮ ರಲ್ಲಿ ಗುತ್ತಿಯಿಂದ ಬಂದು ಸೊಂಡೂರು, ಕುಡತಿನಿ ಮುಂತಾದ ಪ್ರದೇಶಗಳ ಮೇಲೆ ಆಕ್ರಮಣ ಮಾಡಿ ಗೆದ್ದುಕೊಂಡು ೮ ವರ್ಷಗಳ ಚೌತ್ ನೀಡುವಂತೆ ಒತ್ತಾಯಿಸದನು.[30] ಇದೇ ಸಮಯದಲ್ಲಿ ಹರಪನಹಳ್ಳಿಯವರೂ ಕೂಡಾ ಕ್ರಿ.ಶ. ೧೭೪೨ ರಲ್ಲಿ ಜರಿಮಲೆಯವರ ನಾರಾಯಣದೇವರ ಕೆರೆ, ಡಣಾಯಕನಕೆರೆ ಪ್ರದೇಶಗಳನ್ನೂ ವಶಪಡಿಸಿಕೊಂಡರು.[31] ಹೀಗೆ ಬೊಮ್ಮಣ್ಣ ನಾಯಕನು ತನ್ನ ಪೂರ್ವಜರಿಂದ ಬಳುವಳಿಯಾಗಿ ಪಡೆದಿದ್ದ ಪ್ರಾಂತ್ಯಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಟ ಮಾಡಿ ದುರ್ಗದವರ ಸ್ನೇಹ ಸಂಪಾದಿಸಿದರೂ ಕೂಡಾ ಗಳಿಸಿದ್ದುದಕ್ಕಿಂತ ಕಳೆದುಕೊಂಡುದೇ ಹೆಚ್ಚಾಯಿತು. ಇವನಿಗೆ ಮುಮ್ಮಡಿ ನಾಯಕ ಮತ್ತು ಇಮ್ಮಡಿ ನಾಯಕ ಎಂಬ ಇಬ್ಬರು ಪುತ್ರರಿದ್ದರು. ಇಮ್ಮಡಿ ನಾಯಕನು ಜರಿಮಲೆ ಸಂಸ್ಥಾನದ ನಾಯಕನಾದನು. ಇವನಿಗೆ ಬೊಮ್ಮಣ್ಣನಾಯಕ, ಮಲ್ಲಿಕಾರ್ಜುನ ನಾಯಕ, ಇಮ್ಮಡಿ ನಾಯಕ ಎಂಬ ಮೂರು ಜನ ಪುತ್ರರಿದ್ದರು. ಇವನ ಕಾಲ ಜರಿಮಲೆಯವರಿಗೆ ಅತಿ ಸಂಕಷ್ಟದ ಕಾಲ ಎನ್ನಬಹುದು. ಚಿತ್ರದುರ್ಗದ ನಾಯಕರು ಜರಿಮಲೆಯ ದಂಡನಾಯಕ ಶಂಕರದೇವರ ಹಂಪಣ್ಣನನ್ನು ಸೇನಾ ಸಮೇತ ದುರ್ಗಕ್ಕೆ ಕಳುಹಿಸುವಂತೆ ಇಮ್ಮಡಿನಾಯಕನಿಗೆ ಕೋರಿದಾಗ; ಅದನ್ನು ಅವನು ತಿರಸ್ಕರಿಸಿದನು. ಅಲ್ಲದೆ ದುರ್ಗದ ಗಡಿಪ್ರದೇಶಗಳಲ್ಲಿ ದಾಂಧಲೆ ಆರಂಭಿಸಿದನು. ಇದರಿಂದ ಕೋಪಗೊಂಡ ರಾಜಾವೀರ ಮದಕರಿ ನಾಯಕನು (ಕ್ರಿ.ಶ. ೧೭೫೫ – ೧೭೭೯) ಜರಿಮಲೆಯ ಮೇಲೆ ದಂಡೆತ್ತಿ ಬಂದನು. ಮುತ್ತಿಗೆ ಹಲವಾರು ದಿನಗಳ ಕಾಲ ಮುಂದುವರಿಯಿತು. ಜರಿಮಲೆಯ ಕೋಟೆ ಬಾಗಿಲು ತೆರೆಯಿತು. ಜನರಿಗೆ ಯಾವುದೇ ರೀತಿಯ ತೊಂದರೆ ಕೊಡದೆ ನಾಯಕ ಕುಟುಂಬದವರನ್ನೆಲ್ಲಾ ಸೆರೆ ಹಿಡಿಯಲಾಯಿತು. ಅವರನ್ನು ಚಿತ್ರದುರ್ಗದ ಕೋಟೆಗೆ ಕರೆತಂದು ಸೆರೆಯಲ್ಲಿಟ್ಟನು. ಕೆಲವು ದಿನಗಳ ನಂತರ ಇಮ್ಮಡಿ ನಾಯಕನ ಮಕ್ಕಳಾದ ಬೊಮ್ಮಣ್ಣನಾಯಕ ಮತ್ತು ಮಲ್ಲಿಕಾರ್ಜುನ ನಾಯಕನನ್ನು ಸೆರೆಯಿಂದ ಬಿಡುಗಡೆ ಮಾಡಿ ಜರಿಮಲೆಗೆ ಕಳುಹಿಸಿದನು.[32] ಮತ್ತು ೫೦೦ ಕಾಲಾಳು ಪಡೆಯೊಂದಿಗೆ ದುರ್ಗದವರಿಗೆ ಸೇವೆ ಸಲ್ಲಿಸಲು ಷರತ್ತಿಗೆ ಒಪ್ಪಿದರು.[33]

[1] ಜರಿಮಲೆ ಸಂಸ್ಥಾನದ ವಂಶಾವಳಿ (ಸಂ) ಲಕ್ಷ್ಮಣ್‌ತೆಲಗಾವಿ ಚಂದ್ರವಳ್ಳಿ ಚಿತ್ರದುರ್ಗ- ೧೯೭೬.

[2] ಬಳ್ಳಾರಿ ಜಲ್ಲಾ ಗೆಜೆಟಿಯರ್-೧೯೭೨.

[3] ಕರ್ನಾಟಕ ವಿಷಯ ವಿಶ್ವಕೋಶ, ಮೈಸೂರು ವಿಶ್ವವಿದ್ಯಾನಿಲಯ, ಪುಟ-೬೮೫, ೧೯೭೯

[4] ಬಳ್ಳಾರಿ ಜಿಲ್ಲಾ ಸಂಸ್ಕೃತಿಕ ದರ್ಶನ, ಕುಂ.ಬಾ.ಸ. ಮಾಲತೇಶ ಪ್ರಕಾಶನ, ಕುಂಚೂರು, ೧೯೯೦.

[5] ಚಿತ್ರದುರ್ಗ ಪಾಳೆಯಗಾರರು ಎಂ.ಎಸ್.ಪುಟ್ಟಣ್ಣ, ೧೯೨೪ ಪುನರ್ ಮುದ್ರಣ ಕಾವ್ಯಾಲಯ ಪ್ರಕಾಶನ ಮೈಸೂರು ೧೯೯….

[6] ಕುಂ.ಬಾ. ಸದಾಶಿವಪ್ಪ ಹರಪನಹಳ್ಳಿ ಪಾಳೆಯಗಾರರು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು-೧೯೯೬.

[7] ಡಿ.ಎನ್. ಯೋಗೀಶೃವರಪ್ಪ ಹಾಗಲವಾಡಿ ನಾಯಕರ ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ-೧೯೯೯.

[8] ಜರಿಮಲೆ ಸಂಸ್ಥಾನದ ವಂಶಾವಳಿ (ಸಂ) ಲಕ್ಷ್ಮಣ್ ತೆಲಗಾವಿ ಚಂದ್ರವಳ್ಳಿ ಚಿತ್ರದುರ್ಗ-೧೯೭೬.

[9] ಕರ್ನಾಟಕದ ಕೈಫಿಯತ್ತುಗಳು (ಸಂ) ಎಂ.ಎಂ.ಕಲಬುರ್ಗಿ, ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ-೧೯೯೪.

[10] ಅದೇ.

[11] ಮೆಕಂಜಿ The Vamshavallee of Jeremale Samsthan family

[12] ಅದೇ.

[13] ಅದೇ.

[14] ಕನ್ನಡ ವಿ.ವಿ. ಶಾಸನ ಸಂಪುಟ ಬಳ್ಳಾರಿ ಜಿಲ್ಲೆ ಕೂಡ್ಲಿಗಿ-೯.

[15] ಅದೇ.

[16] ಕುಂಬಾಸ ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ ಕುಂಚೂರು-೧೯೯೦.

[17] ಕನ್ನಡ ವಿ.ವಿ. ಶಾಸನ ಸಂಪುಟ ಬಳ್ಳಾರಿ, ಕೂಡ್ಲಿಗಿ-೮

[18] Memorandum of poligars of the ceded Districts deted 1802 Munro Report.

[19] The vamshavalle of Jeremale Samsthen Family.

[20] ಅದೇ.

[21] Memorandum of poligars of the ceded Districts, deted 1802, Munro Report.

[22] ನೋಡಿ ಕರ್ನಾಟಕ ಕೈಫಿಯತ್ತುಗಳು.

[23] ಜರಿಮಲೆ ಸಂಸ್ಥಾನದ ವಂಶಾವಳಿ (ಸಂ) ಲಕ್ಷ್ಮಣ್‌ತೆಲಗಾವಿ ಚಂದ್ರವಳ್ಳಿ ಚಿತ್ರದುರ್ಗ-೧೯೭೬.

[24] The vemshavalle of Jeremale Samsthen Family.

[25] ಅದೇ.

[26] ಅದೇ.

[27] ಅದೇ.

[28] ಬಿ. ರಾಜಶೇಖರಪ್ಪ ಚಿತ್ರದುರ್ಗ ನಾಯಕರು ದಕ್ಷಿಣ ಕರ್ನಾಟಕದ ಅರಸು ಮನೆತನಗಳು ಪ್ರಸಾರಾಂಗ, ಹಂಪಿ, ಕನ್ನಡ ವಿ.ವಿ. (೨೦೦೧) ಪು. ೧೦೧.

[29] ಎಂ.ಎಸ್. ಪುಟ್ಟಣ್ಣ, ಚಿತ್ರದುರ್ಗ ಪಾಳೆಯಗಾರರು ಪು. ೪೨, ಪುನರ್‌ಮುದ್ರಣ ಕಾವ್ಯಾಲಯ ಪ್ರಕಾಶನ, ಮೈಸೂರು-೧೯೯೭.

[30] Memorandum of poligars of the ceded Districts deted 1802 Munro Report

[31] The vemshavalle of Jeremale Samsthen Family

[32] ಅದೇ.

[33] Memorandum of poligars of the ceded Districts deted 1802 Munro Report