ಇದು ನೂರನಲವತ್ತು ವರ್ಷಗಳ ಹಿಂದಿನ ಕಥೆ. ಕಥೆ ಎಂದರೆ ಕಟ್ಟು ಕಥೆ ಅಲ್ಲ. ಸತ್ಯಕಥೆ. ಬ್ರಿಟಿಷರ ವಿರುದ್ಧ ಹೋರಾಡಿದ ಒಂದು ಸಣ್ಣ ಸಂಸ್ಥಾನದ ಕೆಲವೇ ಜನರ ಧೈರ್ಯ, ಸಾಹಸದ ಕಥೆ.

ಭಾರತದಲ್ಲಿ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮ ನಡೆದದ್ದು ೧೮೫೭ರಲ್ಲಿ. ಅದಕ್ಕೂಇಪ್ಪತ್ತು ಮೂರು ವರ್ಷಗಳ ಹಿಂದಿನ ಸುದ್ದಿ. ಕೊಡಗಿನಲ್ಲಿ ನಡೆದ ಪ್ರಸಂಗ. ರಾಷ್ಟ್ರದ ಮಟ್ಟದಲ್ಲಿ ಹೋಲಿಸಿದರೆ ಈ ಹೋರಾಟದ ಪ್ರಸಂಗ ಚಿಕ್ಕದು. ಆದರೆ ಒಂದು ಸಣ್ಣ ರಾಜ್ಯದ ಇತಿಹಾಸದಲ್ಲಿ ಈ ಸ್ವಾತಂತ್ರ್ಯ ಸಮರ ಮಹತ್ವದ್ದು. ಸರಿಯಾದ ಸಂಪರ್ಕ ಸಾಧನ ಇಲ್ಲ; ರಸ್ತೆಗಳಿಲ್ಲ; ಆಯುಧ ಸಾಮಗ್ರಿ ಇಲ್ಲ. ಎದುರಿಸಬೇಕಾದ ಶತ್ರು ಫಿರಂಗಿ ಮುಂತಾದ ಯುದ್ಧ ಸಾಮಗ್ರಿಗಳಿಂದ ಸುಸಜ್ಜಿತ. ಅಪಾರ ಸೈನಿಕರ ಪಡೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಕೊಡಗಿನ ಒಂದಿಷ್ಟು ಜನ ಒಂದಾಗಿ ಬ್ರಿಟಿಷರನ್ನು ಎದುರಿಸಿ ಓಡಿಸಲು ಪ್ರಯತ್ನಿಸಿದರು ಎನ್ನುವುದು ಹೆಮ್ಮೆ ಪಡಬೇಕಾದ ಸಂಗತಿ. ೧೮೩೫ರಿಂದ ೧೮೩೭ರವರೆಗೆ ನಡೆದ ಈ ದಂಗೆಯ ಪ್ರಯತ್ನ, ಸಿದ್ಧತೆ ಮತ್ತು ನಿರ್ವಹಣೆಗಳ ಹಿನ್ನೆಲೆಯಲ್ಲಿ ಕಲ್ಯಾಣ ಸ್ವಾಮಿಯ ಹೆಸರು ಮುಖ್ಯವಾಗಿ ಕಾಣುತ್ತದೆ.

“ಕಲ್ಯಾಣ ಸ್ವಾಮಿ” ಎಂಬ ಹೆಸರಿನಲ್ಲಿ ಇಬ್ಬರು ವ್ಯವಹರಿಸಿದ ಹಾಗೆ ಇತಿಹಾಸದಲ್ಲಿ ಕಂಡು ಬರುತ್ತದೆ. ಮೊದಲನೆಯ ಕಲ್ಯಾಣ ಸ್ವಾಮಿಯನ್ನು ಬ್ರಿಟಿಷರು ಬಂಧಿಸಿದ ಮೇಲೆ ಇನ್ನೊಬ್ಬ ತಾನು ಕಲ್ಯಾಣ ಸ್ವಾಮಿ ಎಂದು ಹೇಳಿಕೊಂಡು ಅವರ ಕಣ್ಣಿಗೆ ಮಣ್ಣೆರಚಿ ಸ್ವಾತಂತ್ರ್ಯ ಸಂಗ್ರಾಮವನ್ನು ಮುಂದುವರಿಸಿದ ಸ್ವಾರಸ್ಯ ಪ್ರಕರಣ ಕೊಡಗಿನ ಇತಿಹಾಸದಲ್ಲಿ ಬರುತ್ತದೆ. ಇದು ಸ್ವಾರಸ್ಯ ಅಷ್ಟೇ ಅಲ್ಲ, ಕೊಡಗಿನ ಜನರ ದೃಢ ನಿಶ್ಚಯ ಮತ್ತು ಹೋರಾಟದ ಮನೋಭಾವದ ಸಂಕೇತ.

ಹಾಲೇರಿ ವಂಶ

ಈಗಿನ ಕೊಡಗು ಜಿಲ್ಲೆ ಮೈಸೂರು ರಾಜ್ಯದ ನೈಋತ್ಯ ಮೊಲೆಯಲ್ಲಿದೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಸುಂದರ ವನಪ್ರದೇಶ ಇದು. ಜಿಲ್ಲೆಯ ಉದ್ದಗಲಕ್ಕೆ ಬೆಟ್ಟಗುಡ್ಡಗಳು ಹಬ್ಬಿವೆ, ದಟ್ಟವಾದ ಕಾಡು, ಕಾಡುಕಡಿದು ಬೆಳೆಸಿರುವ ಕಿತ್ತಲೆ, ಕಾಫಿ ತೋಟಗಳು, ಭತ್ತದ ಗದ್ದೆಗಳು. ಮೆಣಸು ಏಲಕ್ಕಿಯ ಸಮೃದ್ಧ ಬೆಲೆ. ಕಾವೇರಿ ನದಿಯ ಜನ್ಮಭೂಮಿ. ತಂಪಾದ ಹಿತಕರ ಹವಾಮಾನ. ಇಲ್ಲಿನ ಪ್ರಮುಖ ಜನಾಂಗ ಕೊಡವರದ್ದು. ದೃಢಕಾಯರಾದ ಚೆಲುವಾದ ಜನ.

ಈ ಭೂಭಾಗ ಹಿಂದೆ ಅನೇಕ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ಕೊಡಗಿನ ಕೊನೆಯ ರಾಜವಂಶ ಹಾಲೇರಿ ವಂಶ. ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿಗೆ ಬಂದ ವೀರರಾಜ ಎಂಬ ಒಬ್ಬರಾಜಕುಮಾರ ಕೊಡಗಿನ ರಾಜಕೀಯ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ತಾನೇ ರಾಜನಾದ. ಕೊಡಗಿನ ಹಾಲೇರಿಯನ್ನು ತನ್ನ ರಾಜಧಾನಿ ಮಾಡಿಕೊಂಡ. ಕೋಟೆ ಅರಮನೆ ಕಟ್ಟಿಕೊಂಡ. ಇದು ಕ್ರಿ.ಶ ೧೬೦೦ರಲ್ಲಿ ನಡೆದದ್ದು. ಈ ವಂಶ ಅನಂತರ ೨೩೪ ವರ್ಷಗಳ ಕಾಲ ಅಂದರೆ ೧೮೩೪ರವರೆಗೆ ಕೊಡಗನ್ನು ಆಳಿತು.

ಹಾಲೇರಿಯ ರಾಜ್ಯದಲ್ಲಿ ಕೊನೆಯ ಮೂವರ ಕಾಲದಲ್ಲಿ ಇಂಗ್ಲಿಷರ ಪ್ರಾಬಲ್ಯ ಕೊಡಗಿನಲ್ಲಿ ಬೆಳೆಯಿತು.

೧೭೭೫-೧೭೮೦ರಲ್ಲಿ ಕೊಡಗನ್ನು ಆಳಿದ ಲಿಂಗ ರಾಜೇಂದ್ರ ಮೈಸೂರಿನ ಹೈದರನ ಸಹಾಯದಿಂದ ಕೊಡಗನ್ನು ಪಡೆದಿದ್ದರಿಂದ ಹೈದರನ ಅಧೀನನಾಗಿ ಆಳಬೇಕಾಯಿತು. ಇವನಿಗೆ ವೀರರಾಜೇಂದ್ರ, ಅಪ್ಪಾಜಿ ಅರಸು, ಲಿಂಗರಾಜೇಂದ್ರ ಎಂಬು ಮೂವರು ಮಕ್ಕಳಿದ್ದರು. ೧೭೮೦ರಲ್ಲಿ ಹಿರಿಯ ಲಿಂಗರಾಜೇಂದ್ರ ಮೃತನಾದಾಗ ಇವರು ಚಿಕ್ಕವರು. ಅದುದರಿಂದ ಹೈದರ್ ಕೊಡಗಿನ ಆಡಳಿತವನ್ನು ತಾನೇ ವಹಿಸಿಕೊಂಡ. ರಾಜಕುಮಾರರನ್ನು ಗೊರೂರಿನ ಕೋಟೆಯಲ್ಲಿ ಸೆರೆಯಲ್ಲಿಟ್ಟ. ಅನಂತರ ಪರಿಯಾಪಟ್ಟಣದ ಸೆರೆಮನೆಗೆ ವರ್ಗಮಾಡಿದ. ಹೈದರನ ನಂತರ ಕೊಡಗು ಅವನ ಮಗ ಟಿಪ್ಪು ಸುಲ್ತಾನನ ಆಳ್ವಿಕೆಗೆ ಒಳಪಟ್ಟಿತು. ಕೊಡಗಿನ ಜನರು ಇದನ್ನು ವಿರೋಧಿಸುತ್ತಿದ್ದರು. ಇದರಿಂದಾಗಿ ಆಂತರಿಕ ಗಲಭೆ, ದಂಗೆಗಳು ಆಗಾಗ ನಡೆಯುತ್ತಿದ್ದವು. ಕೊಡಗಿನ ಪ್ರಜೆಗಳು ತಮ್ಮ ದೊರೆಯ ಮಕ್ಕಳನ್ನು ಬಿಡಿಸಿಕೊಂಡು ಬರಲು ಹಂಚಿಕೆ ಮಾಡಿದರು. ಅವರ ಸಹಾಯದಿಂದ ವೀರರಾಜೇಂದ್ರ ಟಿಪ್ಪುಗಿನ ಸೆರೆಯಿಂದ ತಪ್ಪಿಸಿಕೊಂಡು ಬಂದ. ಒಂದೊಂದಾಗಿ ತನ್ನ ಹಿಂದಿನ ಕೋಟೆಗಳನ್ನೆಲ್ಲಾ ಗೆದ್ದ. ಮಡಿಕೇರಿಯೊಂದನ್ನು ವಶಪಡಿಸಿಕೊಳ್ಳಬೇಕಾಗಿತ್ತು.

ಇಂಗ್ಲಿಷರ ಸ್ನೇಹ ಪ್ರಾರ್ಥನೆ

ಈ ಸಮಯದಲ್ಲಿ ಇಂಗ್ಲಿಷರಿಗೂ ಟಿಪ್ಪು ಸುಲ್ತಾನನಿಗೂ ವೈರವಿತ್ತು. ಟಿಪ್ಪುವನ್ನು ಗೆದ್ದರೆ ದಕ್ಷಿಣ ಭಾರತ ಇಂಗ್ಲೀಷರ ಪೂರ್ಣ ಆಡಳಿತಕ್ಕೆ ಒಳಪಡುತ್ತಿತ್ತು. ಬೊಂಬಾಯಿಯಿಂದ ಬರುವ ಇಂಗ್ಲೀಷರ ಸೇನೆ ಟಿಪ್ಪುವಿನ ಮೇಲೆ ಏರಿಹೋಗಲು ಕೊಡಗನ್ನು ಹಾದು ಹೋಗಬೇಕಾಗಿತ್ತು. ಕೊಡಗನ್ನು ಹೇಗಾದರೂ ಮಾಡಿ ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಎಂದು ಇಂಗ್ಲೀಷರು ಹೊಂಚು ಹಾಕುತ್ತಿದ್ದರು. ಕೊಡಗು ಸಣ್ಣ ರಾಜ್ಯವಾದರೂ ಒಳ್ಳೆಯ ಆಯಕಟ್ಟಿನ ಜಾಗದಲ್ಲಿತ್ತು. ಸುತ್ತಮುತ್ತಲಿನ ಅನೇಕ ಪ್ರದೇಶಗಳನ್ನು ಇಲ್ಲಿಂದ ಹಿಡಿತದಲ್ಲಿಟ್ಟು ಕೊಳ್ಳಬಹುದಾಗಿತ್ತು. ಆದುದರಿಂದಲೇ ಕೊಡಗಿನ ಅರಸರೊಡನೆ ಸ್ನೇಹ ಮಾಡಿಕೊಳ್ಳಬೇಕು ಎಂದು ಇಂಗ್ಲೀಷರು ತುಂಬ ಆಸಕ್ತರಾಗಿದ್ದರು.

ವೀರರಾಜೇಂದ್ರ ಮಡಿಕೇರಿಯ ಕೋಟೆಯನ್ನು ವಶಪಡಿಸಿಕೊಳ್ಳಲು ತನ್ನ ಸೇನೆಯನ್ನು ಸಜ್ಜು ಮಾಡತೊಡಗಿದ. ಅವನಿಗೆ ಒಳ್ಳೆಯ ಕುದುರೆಗಳು ಹಾಗೂ ಇತರ ಕೆಲವು ಸಾಮಗ್ರಿಗಳು ಬೇಕಾಗಿದ್ದವು. ಅವನ್ನು ತರಲು ತನ್ನ ಅಧಿಕಾರಿ ಮುತ್ತು ಭಟ್ಟನನ್ನು ಮಲೆಯಾಳದ ತಲಚೇರಿಗೆ ಕಳುಹಿಸಿದ. ಅದು ಇಂಗ್ಲೀಷರ ಆಳ್ವಿಕೆಯಲ್ಲಿತ್ತು. ಅಲ್ಲಿನ ಮುಖ್ಯ ಅಧಿಕಾರಿ ರಾಬರ್ಟ್ ಟೇಲರ್ ಅವನಿಗೆ ಮುತ್ತು ಭಟ್ಟ ಬಂದಿರುವ ವಿಚಾರ ಗೊತ್ತಾಯಿತು. ತನ್ನಲ್ಲಿಗೆ ಆಹ್ವಾನಿಸಿದ. ವೀರ ರಾಜೇಂದ್ರ ಮುತ್ತು ಟಿಪ್ಪುವಿನ ನಡುವಣ ಹೋರಾಟದ ವಿವರಗಳನ್ನು ತಿಳಿದುಕೊಂಡ. ಟಿಪ್ಪು ನಿಮಗೂ ಶತ್ರು, ನಮಗೂ ಶತ್ರು, ಆದ್ದರಿಂದ ನಾವಿಬ್ಬರೂ ಮಿತ್ರರಾಗೋಣ ಎಂದ. ನಿಮಗೆ ಬೇಕಾದ ಕುದುರೆ ನಾನು ಕೊಡುತ್ತೇನೆ, ನಿಮಗೆ ಫಿರಂಗಿ ಗಾಡಿ ಎಳೆಯಲು ಬೇಕಾದ ಒಳ್ಳೆಯ ಜಾತಿಯ ಎತ್ತುಗಳನ್ನು ನೀವು ಕೊಡಿ ಎಂದ. ವೀರರಾಜೇಂದ್ರನನ್ನು ತಲಚೇರಿಗೆ ಕರೆಸಿ ಸ್ನೇಹದಿಂದ ಮಾತಾಡಿಸಿದ. ಸೂರ್ಯ ಚಂದ್ರ ಇರುವವರೆಗೆ ನಾವಿಬ್ಬರೂ ಸ್ನೇಹಿತರಾಗಿರೋಣ, ಪರಸ್ಪರ ಕಷ್ಟದಲ್ಲಿ ಸಹಾಯ ಮಾಡೋಣ ಎಂದು ಇಬ್ಬರೂ ಒಪ್ಪಂದ ಮಾಡಿಕೊಂಡರು.

ಹಾಲೇರಿ ರಾಜಮನೆತನಕ್ಕೂ ಇಂಗ್ಲೀಷರಿಗೂ ಸ್ನೇಹ ಹೀಗೆ ಆರಂಭವಾಯಿತು. ಇಂಗ್ಲೀಷರು ಟಿಪ್ಪುವಿನ ಮೇಲೆ ಯುದ್ಧಕ್ಕೆ ಹೋದಾಗ ವೀರರಾಜೇಂದ್ರ ಅವರಿಗೆ ಅಗತ್ಯವಾದ ಅಕ್ಕಿ ಮುಂತಾದ ದವಸ ಧಾನ್ಯಗಳನ್ನು ಒದಗಿಸಿದ. ಫಿರಂಗಿ ಗಾಡಿಗಳನ್ನು ಎಳೆಯಲು ಎತ್ತುಗಳನ್ನು ಕಳುಹಿಸಿದ. ಘಟ್ಟದ ಕೆಳಗಿನಿಂದ ಇಂಗ್ಲೀಷರ ಯುದ್ಧ ಸಾಮಗ್ರಿಗಳನ್ನು ಸಾಗಿಸಲು ನೆರವಾದ. ಗಾಯಾಳುಗಳಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ. ೧೭೯೯ರಲ್ಲಿ ಇಂಗ್ಲೀಷರಿಗೂ ಟಿಪ್ಪುವಿಗೂ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ ಮಡಿದ. ಮೈಸೂರು ರಾಜ್ಯ ಪೂರ್ತಿಯಾಗಿ ಇಂಗ್ಲೀಷರ ವಶವಾಯಿತು. ವೀರ ರಾಜೇಂದ್ರ ಯುದ್ಧದ ಸಮಯದಲ್ಲಿ ತಾನು ನೀಡಿದ ನೆರವಿಗೆ ಬದಲಾಗಿ ಹಣ ಸ್ವೀಕರಿಸಲು ನಿರಾಕರಿಸಿದ. ಟಿಪ್ಪು ಸುಲ್ತಾನ ವಶಪಡಿಸಿಕೊಂಡಿದ್ದ ಕೊಡಗಿನ ಕೆಲವು ಭಾಗಗಳನ್ನು ವೀರರಾಜೇಂದ್ರನಿಗೆ ವಹಿಸಿಕೊಡಲಾಯಿತು. ಹೊಸ ಮೈತ್ರಿ ಒಪ್ಪಂದ ಮಾಡಿಕೊಂಡರು. ಅದರ ಪ್ರಕಾರ ವರ್ಷಕ್ಕೆ ೨೪,೦೦೦ ರೂಪಾಯಿಗಳನ್ನು ವೀರ ರಾಜೇಂದ್ರ ಇಂಗ್ಲೀಷರಿಗೆ ಕಪ್ಪವಾಗಿ ಕೊಡಬೇಕಾಯಿತು.

ವೀರರಾಜೇಂದ್ರ ೧೮೦೯ರಲ್ಲಿ ದಿವಂಗತನಾದ. ಅವನಿಗೆ ಗಂಡುಮಕ್ಕಳು ಇರಲಿಲ್ಲ. ಆದುದರಿಂದ ಅವನ ಹಿರಿಯ ಮಗಳು ದೇವಮ್ಮಾಜಿ ಅಧಿಕಾರಕ್ಕೆ ಬಂದಳು. ವೀರ ರಾಜೇಂದ್ರನ ಕೊನೆಯ ತಮ್ಮ ಲಿಂಗ ರಾಜೇಂದ್ರ ಎರಡೇ ವರ್ಷಗಳಲ್ಲಿ ಅವಳನ್ನು ಸಿಂಹಾಸನದಿಂದ ಕೆಳಗಿಳಿಸಿ ತಾನೇ ದೊರೆಯೆಂದು ಸಾರಿದ.

ಇಂಗ್ಲೀಷರೊಡನೆ ವಿರಸ

ಲಿಂಗರಾಜೇಂದ್ರನ ಕಾಲದಲ್ಲಿ ಇಂಗ್ಲೀಷರ ಸ್ನೇಹದ ಅಪ್ಪುಗೆ ಇನ್ನಿಷ್ಟು ಬಲವಾಯಿತು. ವಿಹಾರಕ್ಕೆ, ಹಬ್ಬ ಉತ್ಸವಗಳಲ್ಲಿ ಪಾಲ್ಗೊಳ್ಳಲು ಆಗಾಗ ಕೊಡಗಿಗೆ ಬರುತ್ತಿದ್ದರು. ಈ ರಾಜ್ಯವನ್ನುಎಷ್ಟು ಬೇಗ ತಮ್ಮ ಬುಟ್ಟಿಗೆ ಹಾಕಿಕೊಳ್ಳಬಹುದು ಎಂದು ಲೆಕ್ಕ ಹಾಕುತ್ತಿದ್ದರು! ೧೮೨೦ನೇ ಇಸವಿಯಲ್ಲಿ ಲಿಂಗರಾಜೇಂದ್ರ ತನ್ನ ನಲವತ್ತೈದನೆಯ ವಯಸ್ಸಿನಲ್ಲಿ ನಿಧನನಾದ. ಅವನ ನಂತರ ಅವನ ಒಬ್ಬನೇ ಮಗ ಚಿಕ್ಕವೀರರಾಜೇಂದ್ರ ಪಟ್ಟವೇರಿದ. ಆಗ ಅವನಿಗೆ ಹದಿನೆಂಟು ವರ್ಷ. ಅರಮನೆಯಲ್ಲಿ ಯಾವ ಅಡ್ಡಿ ಆತಂಕಗಳೂ ಇಲ್ಲದೆ ಬೆಳೆದ ರಾಜಕುಮಾರ. ಈಗ ಸಂಪೂರ್ಣ ಅಧಿಕಾರ ಕೈಗೆ ಬಂದಿದೆ. ಅವನನ್ನು ಕೇಳುವವರೇ ಇಲ್ಲವಾಯಿತು. ತನ್ನ ರಾಜಪಟ್ಟಕ್ಕೆ ವಿರೋಧ ಮಾಡುವರೆಂಬ ಭಯದಿಂದ ಅನೇಕ ಸಂಬಂಧಿಗಳನ್ನು ಕೊಲ್ಲಿಸಿದ. ತನ್ನ ದೊಡ್ಡಪ್ಪ ದೊಡ್ಡ ವೀರರಾಜೇಂದ್ರನ ಹೆಣ್ಣು ಮಕ್ಕಳು, ಅಳಿಯಂದಿರು, ಚಿಕ್ಕ ಮಕ್ಕಳು ಮುಂತಾದ ಅನೇಕರನ್ನು ಕೊಲೆ ಮಾಡಿಸಿದ. ಸ್ವಂತ ತಂಗಿಯನ್ನು ಸೆರೆಯಲ್ಲಿಟ್ಟ. ತಂಗಿಯ ಗಂಡನನ್ನು ಅನುಮಾನದಿಂದ ನೋಡಿದ. ಅವರಿಬ್ಬರನ್ನೂ ಕೊಲೆ ಮಾಡಿಸಲು ಹಂಚಿಕೆ ಹೂಡಿದ. ಅದು ತಿಳಿದು ಅವರು ಹೆದರಿ, ತಪ್ಪಿಸಿಕೊಂಡು ಓಡಿ ಹೋಗಿ ಇಂಗ್ಲೀಷರ ಮೊರೆಹೊಕ್ಕರು. ಹೀಗೆ ಓಡಿ ಹೋಗುವಾಗ ಅಚಾತುರ್ಯದಿಂದ ಕಳೆದು ಹೋದ ಅವರ ಮಗು ಚಿಕ್ಕ ವೀರರಾಜೇಂದ್ರನ ಕೈಗೇ ಸಿಕ್ಕಿತು. ಮಗುವನ್ನು ಹಿಂತಿರುಗಿಸುವಂತೆ ಇಂಗ್ಲೀಷರು ಕೊಡಗಿಗೆ ಕಾಗದ ಬರೆದರು. ತಂಗಿ ಮತ್ತು ಅವಳ ಗಂಡನ್ನು ಹಿಂತಿರುಗಿಸುವಂತೆ ದೊರೆ, ಇಂಗ್ಲೀಷರಿಗೆ ಉತ್ತರ ಬರೆದ. ದಾರಾಶೇಟ್ ಮತ್ತು ಕರುಣಾಕರ ಮೆನನ್ ಎಂಬ ಇಬ್ಬರು ಪ್ರತಿನಿಧಿಗಳನ್ನು ಮಾತುಕತೆಗಾಗಿ ಇಂಗ್ಲೀಷರು ದೊರೆಯ ಬಳಿಗೆ ಕಳುಹಿಸಿದರು. ದೊರೆ ಅವರನ್ನು ಬಂಧಿಸಿ ಸೆರೆಯಲ್ಲಿಟ್ಟ. ಇಂಗ್ಲೀಷರ ವಿರುದ್ಧ ಯುದ್ಧ ಮಾಡಲು ಸಿದ್ಧತೆ ಮಾಡಿಕೊಳ್ಳ ತೊಡಗಿದ. ತನ್ನ ವಶದಲ್ಲಿದ್ದ ತಂಗಿಯ ಮಗುವನ್ನು ಕೊಲ್ಲಿಸಿದ. ಇಂಗ್ಲೀಷರನ್ನು ನಿಂದಿಸಿ ಪತ್ರ ಬರೆದ. ಇಂಗ್ಲೀಷರು ದೊರೆಯನ್ನ ಕೆಳಗಿಳಿಸಿ ಕೊಡಗನ್ನು ವಶಪಡಿಸಿಕೊಳ್ಳಲು ಇದೇ ಸರಿಯಾದ ಸಮಯವೆಂದು ನಿರ್ಧರಿಸಿದರು. ಕರ್ನಲ್ ಫ್ರೇಸರನ ನೇತೃತ್ವದಲ್ಲಿ ಇಂಗ್ಲೀಷರ ಸೇನೆ ನಾಲ್ಕು ದಿಕ್ಕುಗಳಿಂದ ಕೊಡಗನ್ನು ಆಕ್ರಮಿಸಿತು. ಬೋಪುದಿವಾನ ಫ್ರೇಸರನೊಡನೆ ಸಂಧಾನ ಮಾಡಿಕೊಂಡು ಕೊಡಗನ್ನು ಇಂಗ್ಲೀಷರಿಗೆ ಒಪ್ಪಿ ಶರಣಾದ. ಚಿಕ್ಕ ವೀರರಾಜೇಂದ್ರನಿಗೆ ಶರಣಾಗದೆ ಬೇರೆ ಮಾರ್ಗವೇ ಇರಲಿಲ್ಲ. ಅವನನ್ನು ಸೆರೆಹಿಡಿದು ಅವನ ರಾಣಿವಾಸದ ಪರಿವಾರದೊಡನೆ ವೆಲ್ಲೂರಿಗೆ ಕಳುಹಿಸಲಾಯಿತು. ಅಲ್ಲಿಂದ ಮುಂದೆ ಕೆಲವು ದಿನಗಳ ನಂತರ ಕಾಶಿಗೆ ಕಳುಹಿಸಿದರು. ಅಲ್ಲಿ ಇಂಗ್ಲೀಷರು ಕೊಡುವ ಮಾಸಿಕ ಪರಿಹಾರ ವೇತನದಲ್ಲಿ ದೊರೆ ಪರಿವಾರದೊಡನೆ ಕಾಲ ತಳ್ಳತೊಡಗಿದ.

ಇಂಗ್ಲೀಷರದೇ ಆಡಳಿತ

ಚಿಕ್ಕ ವೀರರಾಜೇಂದ್ರನನ್ನು ಸಿಂಹಾಸನದಿಂದ ಇಳಿಸಿದ ಮೇಲೆ ಅವನ ಮನೆತನದ ಬೇರೆ ಯಾರೂ ತಮ್ಮ ಹಕ್ಕನ್ನು ಸ್ಥಾಪಿಸಲು ಮುಂದೆ ಬರಲಿಲ್ಲ. ಕರ್ನಲ್ ಫ್ರೇಸರ್ ಕೊಡಗಿನ ಪ್ರಮುಖರ ಒಂದು ಸಭೆ ಸೇರಿಸಿದ. ತನಗೆ ನೆರವಾಗಿದ್ದ ಕೊಡಗಿನ ದಿವಾನ ಅಪ್ಪಾರಂಡ ಬೋಪು ದಿವಾನನನ್ನು ಮುಂದಿಟ್ಟುಕೊಂಡು ಪ್ರಜೆಗಳಿಗೆ ಆತಂಕಕಾರಿಯಾಗಿದ್ದ ದೊರೆಯನ್ನು ಗಾದಿಯಿಂದ ಇಳಿಸಿದ್ದಾಯಿತು. ಮುಂದೆ ಇಂಗ್ಲೀಷರೇ ತಮ್ಮನ್ನು ಆಳಬೇಕು ಎಂದು ಜನಗಳ ಬಾಯಿಂದ ಹೇಳಿಸಿದ. ಆ ಮಾತಿಗೆ ಮತ್ತೆ ಕೆಲವರು ಹೂಗುಟ್ಟಿದರು.

ಬ್ರಿಟಿಷ್ ಸರ್ಕಾರ ಕರ್ನಲ್ ಫ್ರೇಸರನನ್ನು ಮೈಸೂರು ಮತ್ತು ಕೊಡಗು ರಾಜ್ಯಗಳಿಗೆ ಕಮಿಷನರ್ ಆಗಿ ನೇಮಿಸಿತು. ಕ್ಯಾಪ್ಟನ್ ಲೀಡ ಹಾರ್ಡಿಯನ್ನು ಕೊಡಗಿನ ಸೂಪರಿಂಟೆಂಡೆಂಟ್ ಎಂದು ನೇಮಿಸಿತು.

ಅಪರಂಪರ

ಕೊಡಗಿನ ಭೂಮಿ ಬ್ರಿಟಿಷ್ ದಾಸ್ಯದಲ್ಲಿ ಸಿಕ್ಕಿಕೊಂಡಿತು. ಅದನ್ನು ಮುಕ್ತಗೊಳಿಸಲು ಅಲ್ಲಿ ಸ್ವಾತಂತ್ರ್ಯ ಪುರುಷ ಹುಟ್ಟಬೇಕಾಗಿತ್ತು. ಬ್ರಿಟಿಷರ ಆಡಳಿತ ವೈಖರಿ ಇದಕ್ಕೆ ನಾಂದಿ ಹಾಡಿತು. ಜನಗಳಲ್ಲಿ ಅತೃಪ್ತಿ ಹೊಗೆಯಾಡಿತು. ತಮ್ಮ ದೊರೆ ಎಂಥವನೇ ಆಗಿರಲಿ ಅವನು ತಮ್ಮವನೇ ಆಗಿದ್ದ. ಈಗ ಆಡಳಿತ ವಿದೇಶಿಯರ ಕೈಯಲ್ಲಿತ್ತು. ಅವರು ಭೂ ಕಂದಾಯವನ್ನು ವಿಧಿಸಿದರು. ಇದಕ್ಕೆ ಮೊದಲು ರೈತರು ತಾವು ಬೆಳೆದ ಬೆಳೆಯನ್ನೇ ಹತ್ತರಲ್ಲೊಂದು ಪಾಲು ಕಂದಾಯವಾಗಿ ಕೊಡುತ್ತಿದ್ದರು. ಈಗ ಹಣ ಕೊಡಬೇಕು. ಅದಕ್ಕಾಗಿ ಬೆಳೆದ ಕಾಳನ್ನು ಮಾರಬೇಕು. ಕೊಡಗಿನಲ್ಲಿ ಸರಿಯಾದ ರಸ್ತೆ ಮತ್ತು ಸಾಗಾಟದ ಸೌಲಭ್ಯ ಇರಲಿಲ್ಲ. ಇದ್ದಲ್ಲೇ ಮಾರುವುದೆಂದರೆ ಊರಿನ ಶ್ರೀಮಂತರು ಎಷ್ಟು ಕಡಿಮೆ ಬೆಲೆಗೆ ಕೇಳಿದರೆ ಅಷ್ಟಕ್ಕೆ ಕೊಡಬೇಕು. ಬೆಳೆದದ್ದನ್ನೆಲ್ಲ ಮಾರಿದರೂ ಕೊಡಬೇಕಾದ ಕಂದಾಯದಷ್ಟು ಹಣ ಹುಟ್ಟುತ್ತಿರಲಿಲ್ಲ. ಜನ ಕಂಗಾಲಾದರು. ಜನ ತಮ್ಮವರ ಆಳ್ವಿಕೆಗಾಗಿ ಕಾತರಿಸಿದರು.

ಚಿಕ್ಕ ವೀರರಾಜೇಂದ್ರ ಇನ್ನೂ ಕೊಡಗನ್ನು ಆಳುತ್ತಿದ್ದ ಕಾಲದಲ್ಲೇ ಒಬ್ಬ ಸ್ವಾಮಿ ಕಾಣಿಸಿಕೊಂಡಿದ್ದ. ಕಾವಿ. ವಿಭೂತಿಯ ಈ ತರುಣ ಸನ್ಯಾಸಿ ರಾಜ್ಯದಲ್ಲಿ ಸಂಚರಿಸುತ್ತಾ, ಉಪದೇಶ ಮಾಡುತ್ತ ಜನಗಳ ವಿಶ್ವಾಸಗಳಿಸಿದ್ದ, ಈತನನ್ನು ಸ್ವಾಮಿ ಅಪರಂಪರ ಎಂದು ಕರೆಯುತ್ತಿದ್ದರು. ದೊಡ್ಡ ವೀರರಾಜೇಂದ್ರನ ತಮ್ಮ ಅಪ್ಪಾಜಿ ಅರಸನ ಮಗ ವೀರಪ್ಪ ಅರಸನೇ ಈ ಸ್ವಾಮಿ ಅಪರಂಪರ ಎಂದು ಜನ ನಂಬಿದ್ದರು. ಸ್ವಾಮಿಯೂ ಈ ಮಾತನ್ನು ಅಲ್ಲಗಳೆದಿರಲಿಲ್ಲ.

ಅಪ್ಪಾಜಿ ಅರಸನ ಮಗ ವೀರಪ್ಪ ಅರಸು ಬಂದು ಆಡಳಿತವನ್ನು ವಹಿಸಿಕೊಳ್ಳುತ್ತಾನೆ ಎಂದು ಜನ ಹುರುಪಿನಿಂದ ಇದ್ದರು. ಇಷ್ಟರಲ್ಲಿ ಚಿಕ್ಕವೀರರಾಜೇಂದ್ರನ ಆಡಳಿತ ಕೊನೆಗೊಂಡಿತು. ಬ್ರಿಟಿಷರ ಆಡಳಿತ ಬಂದಿತು. ಕ್ಯಾಪ್ಟನ್ ಲೀ ಹಾರ್ಡಿ ಕೊಡಗಿನ ಸೂಪರಿಂಟೆಂಡೆಂಟ್ ಆದ. ಅವನಿಗೆ ಸ್ವಾಮಿ ಅಪರಂಪರನ ವಿಷಯ ಗೊತ್ತಾಯಿತು. ಜನರನ್ನು ಸಂಘಟಿಸುತ್ತಾ ಈ ಸ್ವಾಮಿ ತಮ್ಮ ವಿರುದ್ಧ ಪ್ರಚೋದಿಸುತ್ತಾನೆ ಎಂದು ಲೀ ಹಾರ್ಡಿ ಯೋಚಿಸಿದ. ಈ ಪ್ರಯತ್ನವನ್ನು ಆರಂಭದಲ್ಲಿ ಅಡಗಿಸಬೇಕು ಎಂದು ಕೆಲವು ಬ್ರಿಟಿಷ್ ಸೈನಿಕರನ್ನೂ, ಕೊಡಗು ಸೈನಿಕರನ್ನೂ ಕಳುಹಿಸಿದ. ಅಪರಂಪರನಿಗೆ ಇದರ ಸುಳಿವು ತಿಳಿಯಿತು. ಸಂಗಡಿಗರಿಗೆ ಕಾಡು ಕುರುಬರಂತೆ ವೇಷ ಹಾಕಿಕೊಂಡು ತಪ್ಪಿಸಿಕೊಂಡು ಹೋಗಲು ಹೇಳಿದ. ತಾನು ಕಾವಿ ಕಳಚಿ, ವೇಷ ಬದಲಾಯಿಸಿ ಪರಾರಿಯಾದ. ಮುಂದೆ ೧೯೩೫ರಲ್ಲಿ ಅವನನ್ನು ಮಂಜರಾಬಾದಿನ್ಲಿ ಸೆರೆ ಹಿಡಿದು ತಿರುಚಿನಾಪಳ್ಳಿಯ ಸೆರೆಮನೆಯಲ್ಲಿ ರಾಜಕೀಯ ಕೈದಿಯಾಗಿ ಸೆರೆಯಲ್ಲಿಟ್ಟರು. 

ಕಲ್ಯಾಣ ಸ್ವಾಮಿ ಜನರ ನೆರವನ್ನು ಬೇಡಿದ.

ಕಲ್ಯಾಣಸ್ವಾಮಿ

 

ಸ್ವಾಮಿ ಅಪರಂಪರನ ಜೊತೆಯಲ್ಲಿ ಕಲ್ಯಾಣಪ್ಪ ಎಂಬ ಜಂಗಮ ಓಡಾಡಿಕೊಂಡಿದ್ದ. ೧೮೩೫ರಲ್ಲಿ ಅಪರಂಪರನ ಬಂಧನವಾದ ಮೇಲೆ ಕಲ್ಯಾಣಪ್ಪ ತನ್ನ ಸಂಗಡಿಗರೊಡನೆ ತಲೆ ತಪ್ಪಿಸಿಕೊಂಡು ಕೊಡಗಿನ ಕಾಡುಮೇಡುಗಳಲ್ಲಿ ಅಲೆದಾಡುತ್ತಿದ್ದ. ಮತ್ತೆ ಸಂಗಡಿಗರನ್ನು ಕಲೆ ಹಾಕಿ ಜನಗಳನ್ನು ಸಂಘಟಿಸಲು ಪ್ರಯತ್ನಿಸಿದ. ಜನರು ಅವನನ್ನು “ಕಲ್ಯಾಣ ಸ್ವಾಮಿ” ಎಂದು ಕರೆದರು. ತಾನು ಅಪ್ಪಾಜಿ ಅರಸನ ಎರಡನೆಯ ಮಗ ನಂಜುಂಡ ಅರಸು ಎಂದು ಕಲ್ಯಾಣಸ್ವಾಮಿ ಹೇಳಿಕೊಂಡ. ಕೊಡಗಿನ ಸಿಂಹಾಸನ ಏರಲು ತನಗೆ ಹಕ್ಕಿದೆ ಎಂದು ಜನಗಳಲ್ಲಿ ಪ್ರಚಾರ ಮಾಡಿದ, ಅವರ ನೆರವನ್ನು ಬೇಡಿದ.

ಕಲ್ಯಾಣಸ್ವಾಮಿಯ ಈ ಪ್ರಯತ್ನಕ್ಕೆ ಕೊಡಗಿನ ಕೆಲವರು ಅಡ್ಡಿಯಾಗಿದ್ದರು. ಅವರು ಹೇಳುತ್ತಿದ್ದರು: ಅಪ್ಪಾಜಿ ಅರಸನ ಮಕ್ಕಳೂ ಯಾರು ಜೀವಂತ ಇಲ್ಲ. ಇದ್ದಿದ್ದರೆ ಈ ವೇಳಗೆ ಬ್ರಿಟಿಷರು ಶರಣು ಹೋಗಿ ರಾಜ್ಯ ಕೇಳುತ್ತಿದ್ದರು. ಅಪ್ಪಾಜಿ ಅರಸನ ಇಬ್ಬರು ಮಕ್ಕಳು ಚಿಕ್ಕ ವೀರರಾಜೇಂದ್ರನ ಸೆರೆಮನೆಯಲ್ಲಿ ಹೊಟ್ಟೆಗಿಲ್ಲದೆ ಸತ್ತರು. ಅವರನ್ನು ಕಾಡಿನಲ್ಲಿ ಮಣ್ಣು ಮಾಡಲಾಯಿತು. ಇನ್ನು ಅವರು ಬದುಕಿರಲು ಹೇಗೆ ಸಾಧ್ಯ?

ಆದರೆ ಇದಕ್ಕೆ ಇನ್ನೊಂದು ಪ್ರತಿವಾದವಿತ್ತು. ಸೆರೆಮನೆಯಲ್ಲಿ ಆಹಾರ ಕೊಡದೆ ವೀರಪ್ಪ ಅರಸು ಮತ್ತು ನಂಜುಂಡ ಅರಸವನ್ನು ಕೊನೆಗಾಣಿಸಲು ಪ್ರಯತ್ನಿಸಿದ್ದು ನಿಜ. ಅವರು ಸತ್ತರೆಂದು ಅರಮನೆಯ ಸಿಪಾಯಿಗಳು ಮಣ್ಣು ಮಾಡಲು ಕಾಡಿಗೆ ತೆಗೆದುಕೊಂಡು ಹೋದರು. ಮಣ್ಣು ಮಾಡುವ ಮೊದಲು ನೋಡಿದರೆ ಅವರಿಗೆ ಇನ್ನೂ ಕುಟುಕು ಜೀವ ಇತ್ತು. ಸಿಪಾಯಿಗಳು ಕನಿಕರದಿಂದ ಅವರನ್ನು ಬಿಡುಗಡೆ ಮಾಡಿ, ಅರಮನೆಗೆ ಹಿಂತಿರುಗಿ ಮಣ್ಣು ಮಾಡಿದೆವು ಎಂದು ಹೇಳಿದರು.

ಇದರಲ್ಲಿ ಯಾವುದು ನಿಜವೋ! ಒಟ್ಟಿನಲ್ಲಿ ಕಲ್ಯಾಣಸ್ವಾಮಿ ತಾನೇ ನಂಜುಂಡ ಅರಸು ಎಂದು ಹೇಳಿಕೊಂಡು ಕೊಡಗಿನ ಸಿಂಹಾಸನಕ್ಕೆ ಹಕ್ಕುದಾರನೆಂದು ಜನಗಳಲ್ಲಿ ಪ್ರಚಾರ ಮಾಡಿದ.

ಅತೃಪ್ತಿಯ ಹೊಗೆ ಆಡಿತು

ಕಂದಾಯವನ್ನು ಹಣದ ರೂಪದಲ್ಲಿ ಕೊಡಲು ಸಾಧ್ಯವಾಗದೆ ಕಂಗಾಲಾಗಿದ್ದ ಜನ, ಅರಸನ ಮೆನತನದವರೇ ಮತ್ತೆ ಅಧಿಕಾರಕ್ಕೆ ಬಂದರೆ ಒಳ್ಳೆಯದು ಎಂದು ಯೋಚಿಸತೊಡಗಿದರು.

೧೮೩೪ರಲ್ಲಿ ಬ್ರಿಟಿಷರು ಕೊಡಗನ್ನು ವಶಪಡಿಸಿಕೊಂಡ ಮೇಲೆ ಕೊಡಗಿನಲ್ಲಿ ಕೆಲವಾರು ಬದಲಾವಣೆಗಳು ಆದವು. ಅದರಲ್ಲಿ ಮುಖ್ಯವಾದದ್ದು ಕೊಡಗಿನ ಕೆಲವು ಪ್ರದೇಶಗಳನ್ನೂ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದ್ದು. ಅವರೆಗೆ ಕೊಡಗಿಗೆ ಸೇರಿದ್ದ ಅಮರ ಸುಳ್ಯ ಬೆಳ್ಳಾರ, ಪುತ್ತೂರು ಸೀಮೆಗಳನ್ನು ಆಡಳಿತದ ಅನುಕೂಲದ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿ ಅ ಜಿಲ್ಲೆಯ ಕಲೆಕ್ಟರನ ಅಧೀನಕ್ಕೆ ತಂದರು. ಈ ಬದಲಾವಣೆಯಿಂದ ಅಮರ ಸುಳ್ಯ, ಪಂಜ, ಬೆಳ್ಳಾರೆಯ ಜನ ಬಹಳ ಅತೃಪ್ತರಾಗಿದ್ದರು. ಅವರ ಅಸಮಾಧಾನಕ್ಕೆ ಕಂದಾಯವನ್ನು ಹಣದ ರೂಪದಲ್ಲಿ ಕೊಡುವ ಕಷ್ಟವೂ ಸೇರಿತ್ತು.

ಕಲ್ಯಾಣ ಸ್ವಾಮಿ ಸೆರೆ ಸಿಕ್ಕ

ಕೊಡಗಿನಲ್ಲಿದ್ದಾಗ ಹಲವಾರು ವಿರೋಧಿಗಳ ಪ್ರಚಾರದಿಂದಾಗಿ ಕಲ್ಯಾಣ ಸ್ವಾಮಿಗೆ ಸರಿಯಾದ ಸಹಾಯ ಸಿಗಲಿಲ್ಲ. ಆದುದರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿ ಅಲ್ಲಾದರೂ ಪ್ರಯತ್ನಿಸೋಣ ಎಂದು ಅತ್ತ ಹೊರಟ. ಆದರೆ ಅಲ್ಲಿಗೆ ನೇರವಾಗಿ ಹೋದರೆ ಬ್ರಟಿಷ್ ಸೈನಿಕರ ಕೈಗೆ ಸಿಕ್ಕಿಬೀಳುವ ಹೆದರಿಕೆ ಇತ್ತು. ಆದುದರಿಂದ ಗಡಿನಾಡು ಉಮ್ಮತ್ತು ನಾಡಿನ ಜನರು ಅವನನ್ನು ಗುಟ್ಟಾಗಿ ವೈನಾಡಿಗೆ ಸಾಗಿಸಿದರು. ಅಷ್ಟರಲ್ಲಿ ಕ್ಯಾಪ್ಟನ್ ಲೀ ಹಾರ್ಡಿಗೆ ಕಲ್ಯಾಣಸ್ವಾಮಿ ಕೊಡಗಿನಿಂದ ತಪ್ಪಿಸಿಕೊಂಡಿದ್ದು ತಿಳಿಯಿತು. ಅವನನ್ನು ಹಿಡಿಯಲು ತನ್ನ ಸೈನಿಕರನ್ನು ವೈನಾಡಿಗೆ ಕಳುಹಿಸಿದ. ಇಷ್ಟರಲ್ಲಿ ಕಲ್ಯಾಣಸ್ವಾಮಿ ವೇಷ ಬದಲಾಯಿಸಿಕೊಂಡು ಬೈತೂರು ತಲುಪಿದ್ದ. ಕ್ಯಾಪ್ಟನ್‌ ಲೀ ಹಾರ್ಡಿಯ ಸೈನಿಕರು ಮಲಬಾರಿನ ಸೈನಿಕರ ಸಹಾಯದಿಂದ ೧೮೩೭ನೇ ಇಸವಿ ಜೂನ್‌ ತಿಂಗಳಿನಲ್ಲಿ ಕಲ್ಯಾಣಸ್ವಾಮಿಯನ್ನು ಸೆರೆ ಹಿಡಿದರು. ಅಲ್ಲಿಂದ ಮಡಿಕೇರಿಗೆ ಸಾಗಿಸಿ ಅನಂತರ ಮೈಸೂರಿಗೆ ಕರೆದುಕೊಂಡು ಹೋದರು. 

 

ಕಲ್ಯಾಣ ಸ್ವಾಮಿಗೆ ಮರಣದಂಡನೆ ವಿಧಿಸಲಾಯಿತು.

ಕಲ್ಯಾಣಸ್ವಾಮಿಯ ಪ್ರತಿರೂಪ!

 

ಅಮರ ಸುಳ್ಯದಲ್ಲಿ ದಂಗೆ ಏಳಲು ಭರದಿಂದ ಸಿದ್ಧತೆ ನಡೆಯುತ್ತಿದ್ದ ಕಾಲದಲ್ಲೇ ಕಲ್ಯಾಣ ಸ್ವಾಮಿಯ ಬಂಧನವಾದದ್ದು. ಜನ ಕಲ್ಯಾಣ ಸ್ವಾಮಿಗಾಗಿ ಉತ್ಸಾಹದಿಂದ ಕಾಯುತ್ತಿದ್ದರು. ಅವನನ್ನು ದೊರೆಯಾಗಿ ಮಾಡುವ ಆಸೆಯಿಂದ ಇದ್ದರು. ಕಲ್ಯಾಣ ಸ್ವಾಮಿಯನ್ನು ಸೆರೆಹಿಡಿದ ಸುದ್ದಿ ಅಮರಸುಳ್ಯದ ಜನರಿಗೆ ಇನ್ನೂ ತಲುಪಿರಲಿಲ್ಲ.
ಆಗಿನ ಕಾಲದಲ್ಲಿ ಸಂಪರ್ಕ ಸಾಧನಗಳು ಅಭಿವೃದ್ಧಿ ಹೊಂದಿರಲಿಲ್ಲ. ಸುದ್ದಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಲು ಬಹಳ ದಿನ ಹಿಡಿಯುತ್ತಿತ್ತು.  ಆದರೆ ಕಲ್ಯಾಣಸ್ವಾಮಿಯ ಜೊತೆಗೆ ಓಡಾಡಿಕೊಂಡಿದ್ದ ಜನರಿಗೆ ಸೆರೆಯ ವಿಷಯ ಗೊತ್ತಾಯಿತು. ಕೆದಂಪಾಡಿ ರಾಮಗೌಡ, ಹುಲಿಕುಂದ ನಂಜಯ್ಯ, ಕುಕನೂರ ಚೆನ್ನಯ್ಯ ಮೊದಲಾದವರೇ ಈ ಮುಖಂಡರು ಅಮರ ಸುಳ್ಯದಲ್ಲಿ ದಂಗೆಗೆ ಸಿದ್ಧತೆ ಮಾಡಿ ಕಲ್ಯಾಣ ಸ್ವಾಮಿಯನ್ನು ಕರೆದೊಯ್ಯಲು ಬಂದರೆ ಹೀಗಾಯಿತು. ಮುಂದೆ ಮಾಡುವುದೇನು? ದಂಗೆಯೇಳಲು ಸಿದ್ಧವಾಗಿರುವ ಜನರನ್ನು ಸುಮ್ಮನಾಗಿಸುವ ಹಾಗಿಲ್ಲ. ಕೈಹಿಡಿದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವಂತಿಲ್ಲ. ಬ್ರಿಟಿಷರನ್ನು ಓಡಿಸಬೇಕು. ಜನರಿಗೆ ದೊರೆಯೆಂದು ತೋರಿಸಲು ಅರಸನ ಕಡೆಯ ಹಕ್ಕುದಾರರು ಒಬ್ಬರು ಬೇಕು. ಆದರೆ ಕಲ್ಯಾಣಸ್ವಾಮಿ ಸೆರೆಯಾದ ಮೇಲೆ ಬೇರೆ ಯಾರನ್ನು ತುರುವುದು? ಈಗಾಗಲೇ ಜನ ಕಲ್ಯಾಣಸ್ವಾಮಿಗಾಗಿ ಕಾಯುತ್ತಿದ್ದಾರೆ. ಜನರು ಮುಂದೆ ಕಲ್ಯಾಣಸ್ವಾಮಿಯನ್ನೇ ನಿಲ್ಲಿಸಬೇಕು. ಆದರೆ ಹೇಗೆ? ಅಂಥವರನ್ನೇ ಇನ್ನೊಬ್ಬರನ್ನು ಕಲ್ಯಾಣಸ್ವಾಮಿ ಎಂದು ತೋರಿಸಬೇಕು. ಆತನಿಗೆ ಹಾಲೇರಿ ರಾಜವಂಶದ ಇತಿಹಾಸ ತಿಳಿದಿರಬೇಕು. ನಂಜುಂಡ ಅರಸನಷ್ಟು ವಯಸ್ಸಾಗಿರಬೇಕು. ಆಕಾರದಲ್ಲಿ ಹೋಲಿಕೆ ಇರಬೇಕು. ಜನರಿಗೆ ಹೆಚ್ಚು ಪರಿಚಯ ಅಲ್ಲದ ಮುಖವಾಗಿರಬೇಕು. ಅಂಥವರು ಯಾರಿದ್ದಾರೆ?

ಪುಟ್ಟ ಬಸಪ್ಪ

ಆಗ ಅವರಿಗೆ ಏಳು ಸಾವಿರ ಸೀಮೆಯ ಪುಟ್ಟ ಬಸಪ್ಪನ ನೆನಪಾಯಿತು ಪುಟ್ಟ ಬಸಪ್ಪ ಶನಿವಾರ ಸಂತೆ ಹತ್ತಿರದ ಹೆಮ್ಮನಿ ಎಂಬ ಗ್ರಾಮದಲ್ಲಿ ವ್ಯವಸಾಯ ಮಾಡುತ್ತಿದ್ದ ರೈತ ಸ್ವಾಮಿ ಅಪರಂಪನೊಡನೆ ಆತ ಮೊದಲು ಓಡಾಡಿದ್ದ ಅಪರಂಪರನ ಬಂಧನವಾದ ಮೇಲೆ ತನ್ನ ಊರಿಗೆ ಹಿಂತಿರುಗಿ ವ್ಯವಸಾಯದಲ್ಲಿ ಮಗ್ನನಾಗಿದ್ದ. ಕಲ್ಯಾಣಸ್ವಾಮಿಯ ಪಾತ್ರ ವಹಿಸಲು ಆತನೇ ಸರಿಯಾದ ವ್ಯಕ್ತಿ ಎಂದು ನಿರ್ಧರಿಸಿದರು. ಹುಲಿಕುಂದ ನಂಜಯ್ಯ ಮತ್ತು ತಿಮ್ಮಪ್ಪ ಹೆಮ್ಮನಿ ಗ್ರಾಮಕ್ಕೆ ಹೋಗಿ ಪುಟ್ಟ ಬಸಪ್ಪನನ್ನು ಅಮರಸುಳ್ಯದ ದಂಗೆಯಲ್ಲಿ ಭಾಗವಹಿಸುವುದಕ್ಕಾಗಿ ಕರೆದುಕೊಂಡು ಬಂದರು.

ಕೆದಂಬಾಡಿಯ ಉಕ್ಕಡದ ಬಳಿ ಪುಟ್ಟ ಬಸಪ್ಪ ಮತ್ತು ಅವನ ಸಂಗಡಿಗರು ಕುದುರೆ ಸವಾರಿ ಮಾಡಿಕಂಡು ಬಂದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ ನೂರಾರು ಜನ ಕಲ್ಯಾಣ ಸ್ವಾಮಿಗಾಗಿ ಕಾದಿದ್ದರು. ಕುದುರೆ ಏರಿ ಬಂದ ಹೊಸಬರನ್ನು ತೆಡೆದು ನಿಲ್ಲಿಸಿದ ಜನ ಅವರು ಯಾರು, ಏನು ಎಂದು ವಿಚಾರಿಸಿ ಕೊಳ್ಳತೊಡಗಿದರು. ಅಷ್ಟರಲ್ಲಿ ರಾಮಗೌಡನೂ ಅವನ ಇತರ ಮಿತ್ರರೂ ಅಲ್ಲಿಗೆ ಕುದುರೆ ಏರಿ ಬಂದರು. ಪುಟ್ಟ ಬಸಪ್ಪನನ್ನು ನೋಡುತ್ತಿದ್ದಂತೆಯೇ ರಾಮಗೌಡ ಕಲ್ಯಾಣಸ್ವಾಮಿಗೆ ಜಯವಾಗಲಿ” ಎಂದು ಜೋರಾಗಿ ಕೂಗಿದ. ನೆರೆದಿದ್ದ ಜನರಿಗೆ ಕಲ್ಯಾಣಸ್ವಾಮಿ ಯಾರೆಂದು ತಿಳಿಯದೆ ತಬ್ಬಿಬ್ಬಾಯಿತು. ಆಗ ಕುದುರೆ ಇಳಿದ ರಾಮಗೌಡ ಮುಂದೆ ಹೋಗಿ, ಪುಟ್ಟ ಬಸಪ್ಪನನ್ನು ಕೆಳಗೆ ಇಳಿಸಿ ಮತ್ತೊಮ್ಮೆ ಜಯಘೋಷ ಮಾಡಿದ ಈ ಸಲ ಅಲ್ಲಿ ಸೇರಿದ್ದ ಜನರೆಲ್ಲ ಒಂದೇ ಕಂಠದಿಂದ ಜಯಕಾರ ಹಾಕಿದರು. ತಮ್ಮ ದಾಸ್ಯವನ್ನು ಬಿಡಿಸುವ ದೇವರು, ತಮ್ಮ ಮುಂದಿನ ದೊರೆಯನ್ನು ಜನ ಕಣ್ತುಂಬ ನೋಡಿದರು. ಪುಟ್ಟಬಸಪ್ಪನ ಗಂಭೀರ ದೃಢ ಆಕಾರ, ಎತ್ತರ ನಿಲುವು ಅವರಿಗೆ ಇಷ್ಟವಾಯಿತು. ಕಲ್ಯಾಣಸ್ವಾಮಿಗೆ ಮತ್ತೆ ಮತ್ತೆ ಜಯಕಾರ ಹಾಕುತ್ತ ಜನರೆಲ್ಲಾ ತಮ್ಮ ಮುಖಂಡರನ್ನು ಮೆರವಣಿಗೆಯಲ್ಲಿ ಗೌಡನ ಮನೆಗೆ ಕರೆದುಕೊಂಡು ಹೋದರು.

ಈ ಎಲ್ಲ ಸಂಭ್ರಮದ ನಡುವೆ ಪುಟ್ಟ ಬಸಪ್ಪನಿಗೆ ತಬ್ಬಿಬ್ಬಾಯಿತು. ತಾನು ಹೇಗೆ ಇದ್ದಕ್ಕಿದ್ದ ಹಾಗೆ ಕಲ್ಯಾಣಸ್ವಾಮಿ ಯಾದೆ ಎಂದು ಅವನಿಗೇ ಆಶ್ಚರ್ಯ! ಸ್ವಾಮಿ ಅಪರಂಪರನ ಜೊತೆಯಲ್ಲಿದ್ದಾಗ ಕಲ್ಯಾಣ ಸ್ವಾಮಿಯ ಸಂಪರ್ಕ ಪುಟ್ಟ ಬಸಪ್ಪನಿಗೂ ಇತ್ತು. ಆದರೆ ಈಚೆಗೆ ಕಲ್ಯಾಣ ಸ್ವಾಮಿಯನ್ನು ಬಂಧಿಸಿದ ವರ್ತಮಾನ ತಿಳಿದಿತ್ತು. ಹಾಗಾದರೆ ಅಮರ ಸುಳ್ಯದ ಜನಕ್ಕೆ ಈ ಸಂಗತಿ ಇನ್ನೂ ತಿಳಿದಿದಲ್ಲವೇ? ಈ ಯೋಚೆನಯಲ್ಲೇ ಪುಟ್ಟ ಬಸಪ್ಪ ರಾಮಗೌಡನ ಮನೆ ತಲುಪಿದ. ಊಟವಾದ ಮೇಲೆ ಏಕಾಂತದಲ್ಲಿ ಮಾತನಾಡುವ ಅವಕಾಶ ದೊತೆತಾಗ ಪುಟ್ಟಬಸಪ್ಪ,”ಇದೇನು ಗೌಡರೆ ನಿಮ್ಮ ತಮಾಷೆ! ನನ್ನನ್ನು ಏಕೆ ಕಲ್ಯಾಣಸ್ವಾಮಿ ಮಾಡುತ್ತಿದ್ದೀರಿ? ಕಲ್ಯಾಣ ಸ್ವಾಮಿಯನ್ನು ಲೀ ಹಾರ್ಡಿ ಸೆರೆ ಹಿಡಿದದ್ದು ಇಲ್ಲಿನ ಜನಕ್ಕೆ ತಿಳಿದಿಲ್ಲವೇ? ಎಂದ.

ಆಗ ರಾಮಗೌಡ “ಪುಟ್ಟ ಬಸಪ್ಪ, ಇಲ್ಲಿ ದಂಗೆ ಏಳಲು ಎಲ್ಲ ಸಿದ್ಧತೆ ಆಗಿದ್ದಾಗ ಅಲ್ಲಿ ಕಲ್ಯಾಣಸ್ವಾಮಿಯನ್ನು ಸೆರೆ ಹಿಡಿದರು. ಈ ಸುದ್ದಿ ಜನರಿಗೆ ಇನ್ನೂ ಗೊತ್ತಿಲ್ಲ. ಇವರೆಲ್ಲ ಬ್ರಿಟಿಷರನ್ನು ಹೊಡೆದೋಡಿಸಲು ಸಿದ್ಧವಾಗಿದ್ದಾರೆ. ಈಗ ತಮ್ಮ ಮುಖಂಡನೇ ಸೆರೆಯಲ್ಲಿದ್ದಾನೆ ಎಂದರೆ ಜನರ ಉತ್ಸಾಹವೆಲ್ಲ ದಿಕ್ಕಾ ಪಾಲಾಗುತ್ತದೆ. ಆದ್ದರಿಂದ ನೀನು ಕಲ್ಯಾಣ ಸ್ವಾಮಿಯ ಪಾತ್ರ ವಹಿಸಬೇಕು” ಎಂದ.

ಪುಟ್ಟ ಬಸಪ್ಪನಿಗೆ ಈ ಮಾತು ಒಪ್ಪಿಗೆಯಾಗಲಿಲ್ಲ. ಅವನೆಂದ, ವೇಷ ಮರೆಸಿಕೊಂಡು ಹೋರಾಡುವುದು ನನಗೆ ಇಷ್ಟವಿಲ್ಲ ಗೌಡರೆ, ಕಾದಿದರೆ ರಾಜಾರೋಷವಾಗಿ ಕಾದಬೇಕು. ಬೇರೆಯವರ ಹೆಸರನ್ನು ನಾನು ಇಟ್ಟುಕೊಂಡು ಜನಗಳ ಕಣ್ಣಿಗೆ ಮಣ್ಣೆರಚುವುದು ನನಗೆ ಸಾಧ್ಯವಿಲ್ಲ”.

“ಒಂದು ಮಾತು ತಮ್ಮಾ, ಕಲ್ಯಾಣ ಸ್ವಾಮಿಯ ಹೆಸರು ಇಟ್ಟುಕೊಳ್ಳುವುದು ಯಾರಿಗೂ ಮೋಸ ಮಾಡುವುದಕ್ಕಲ್ಲ, ಸಿಂಹಾಸನದಲ್ಲಿ ಹಕ್ಕು ಕೇಳುವುದಕ್ಕೂ ಅಲ್ಲ, ನಮ್ಮ ಗುರಿಯೆಲ್ಲ ಇಂಗ್ಲೀಷರನ್ನು ಓಡಿಸಿ ಸ್ವದೇಶಿ ಆಡಳಿತವನ್ನು ಸ್ಥಾಪಿಸುವುದು. ಅದಕ್ಕಾಗಿ ನಾವು ಯಾವ ವೇಷ ಹಾಕಲಿ, ಯಾವ ಹೆಸರು ಇಟ್ಟುಕೊಳ್ಳಲಿ ದೋಷವಿಲ್ಲ. ನೀನು ಕಲ್ಯಾಣಸ್ವಾಮಿ ಆಗಲೇಬೇಕು ತಮ್ಮಾ. ಇದು ಸಾವಿರಾರು ಜನರ ಆಸೆಯ ಪೂರೈಕೆ” ಎಂದ ರಾಮಗೌಡ. ಪುಟ್ಟಬಸಪ್ಪ ಒಪ್ಪಬೇಕಾಯಿತು. ಅಂದಿನಿಂದ ಅವನು ಕಲ್ಯಾಣ ಸ್ವಾಮಿಯಾದ.

ಬಲ ಬೆಳೆಯಿತು

ಕೆದಂಬಾಡಿಗೆ ಹತ್ತಿರದ ಪೂಮಾಲೆ ಬೆಟ್ಟದಲ್ಲಿ ಒಂದು ಗುಡಿಸಲು ಕಟ್ಟಿಸಿ ಕಲ್ಯಾಣಸ್ವಾಮಿಯನ್ನು ಅಲ್ಲಿ ನೆಲೆಸಿದ್ದಾಯಿತು. ಅವನ ಕಾವಲಿಗಾಗಿ ಗಟ್ಟಿಮುಟ್ಟಾದ ನಾಲ್ಕು ಜನರನ್ನು ನೇಮಿಸಿದ ರಾಮಗೌಡ. ಕಲ್ಯಾಣಸ್ವಾಮಿಯ ಆಶ್ರಯಕ್ಕೆ ಜನ ಸುತ್ತು ಮುತ್ತಿನ ಊರುಗಳಿಂದ ಗುಂಪು ಗುಂಪಾಗಿ ಬರತೊಡಗಿದರು.ಅಪರಂಪರ ಸ್ವಾಮಿಯ ತಮ್ಮ ಕಲ್ಯಾಣ ಸ್ವಾಮಿಯ ದರ್ಶನ ಮಾಡಿಕೊಂಡು ಹೋರಾಟದ ಕಿಡಿಯನ್ನು ತಮ್ಮ ಎದೆಯಲ್ಲಿ ತುಂಬಿಕೊಂಡು ಹಿಂತಿರುಗಿದರು.

ಚಿಕ್ಕ ವೀರರಾಜೇಂದ್ರನಿಗೆ ಗುರಿಹೊಡೆಯಲು ಕಲಿಸಿದ್ದ ಇಬ್ಬರು ಸಹೋದರರಿದ್ದರು. ಕೊಡಗಿನ ಬೆಂಗುನಾಡಿನಲ್ಲಿದ್ದ ಈ ವೀರರ ಹೆಸರು ಚಟ್ಟ ಕುಡಿಯ ಮತ್ತು ಕುರ್ತುಕುಡಿಯ. ಇವರು ಅಸಾಧಾರಣ ಗುರಿಕಾರರು. ಹಾರುವ ಹಕ್ಕಿಯ ಕಣ್ಣಿಗೆ ಗುರಿಯಿಟ್ಟು ಗುಂಡು ಹೊಡೆಯುವ ಸಾಮರ್ಥ್ಯ ಇವರದು. ರಾಮಗೌಡ ಇವರಿಬ್ಬರನ್ನೂ ಕರೆಸಿ ಕಲ್ಯಾಣಸ್ವಾಮಿಯ ಬಂಡರನ್ನಾಗಿಸಿದ. ಹಳ್ಳಿ ಹಳ್ಳಿಗಳಿಂದ ವೀರ ಪುರುಷರು ಬಂದು ಕಲ್ಯಾಣ ಸ್ವಾಮಿಯ ಸೈನ್ಯಕ್ಕೆ ಸೇರಿಕೊಳ್ಳ ತೊಡಗಿದರು. ದಿನದಿನಕ್ಕೆ ಸೈನ್ಯ ಬೆಳೆಯತೊಡಗಿತು.

ಅಮರಸುಳ್ಯ, ಬೆಳ್ಳಾರೆಗಳಲ್ಲಿ ಬ್ರಿಟಿಷರ ವಿರುದ್ಧ ತಾವು ದಂಗೆಯೆದ್ದರೆ, ಕೊಡಗಿನ ತಾವುನಾಡು, ಬೆಂಗುನಾಡು, ಗಡಿನಾಡು, ಎಡೆನಾಡು ಮತ್ತು ಏಳು ಸಾವಿರ ಸೀಮೆಗಳ ಜನರೂ ದಂಗೆಯೇಳಬಹುದು ಎಂದು ಕಲ್ಯಾಣಸ್ವಾಮಿಯ ಕಡೆಯ ಜನರ ನಿರೀಕ್ಷೆಯಾಗಿತ್ತು. ೧೮೩೭ನೇ ಇಸವಿ ಏಪ್ರಿಲ್‌ ೬ನೇ ತಾರೀಕು ಯುಗಾದಿಯ ದಿನ ಅಮರ ಸುಳ್ಯದಲ್ಲ ದಂಗೆ ಏಳಬೇಕು ಎಂದು ನಿರ್ಧರಿಸಲಾಗಿತ್ತು.

ಅಮಲ್ದಾರ ರಾಮಪ್ಪಯ್ಯ

ಅಮರಸುಳ್ಯದಲ್ಲಿ ರಾಮಪ್ಪಯ್ಯ ಎಂಬ ಅಮಲ್ದಾರ ಆಡಳಿತ ನಡೆಸುತ್ತಿದ್ದ. ಇವನು ಕೊಡಗಿನ ದಿವಾನ ಲಕ್ಷ್ಮೀ ನಾರಾಯಣಯ್ಯನ ತಮ್ಮ. ಈ ಕಾರಣದಿಂದ ರಾಮಪ್ಪಯ್ಯ ಬಹಳ ಅಹಂಕಾರದಿಂದ ಅಮಲ್ದಾರಿಕೆ ನಡೆಸುತ್ತಿದ್ದ. ಅವನ ನಡವಳಿಕೆ ಬಹಳ ಕ್ರೂರ, ಜನರನ್ನು ಬಹಳ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ. ಪತ್ರದ ಮೇಲೆ ಹೆಬ್ಬಟ್ಟು ಒತ್ತಿಸಿಕೊಂಡು ಎಷ್ಟೋ ಜನರ ಸ್ವತ್ತನ್ನು ತನ್ನ ವಶಮಾಡಿಕೊಂಡಿದ್ದ. ಎದುರು ಬಿದ್ದವರನ್ನು ನಿರ್ದಯವಾಗಿ ಕೊಲ್ಲಿಸುತ್ತಿದ್ದ. ಇವನ ಹತ್ತಿರದ ಬಂಧುಗಳು ತಾವುನಾಡು, ಚೆಂಬು ಪೆರಾಜೆಗಳಲ್ಲಿ ಪಾರುಪತ್ತೆಗಾರರಾಗಿದ್ದರು. ಇವನನ್ನು ಅಮರ ಸುಳ್ಯದವರೆಲ್ಲಾ ಅಟ್ಲೂರು ದೊರೆ ಎಂದು ಕರೆಯಬೇಕಾಗಿತ್ತು. ಇವನ ಆಡಳಿತದಿಂದ ಅಮರಸುಳ್ಯದ ಜನಗಳಿಗೆ ಬೇಸರ ಹುಟ್ಟಿತ್ತು. ಹೇಗಾದರೂ ಮಾಡಿ ಇವನನ್ನು ಅಧಿಕಾರದಿಂದ ತೊಲಗಿಸಬೇಕು ಎಂದು ಯೋಚಿಸಿ ಅವರು ರಾಮಗೌಡನಲ್ಲಿ ಹೇಳಿಕೊಂಡರು. ಅವನು ಕಲ್ಯಾಣ ಸ್ವಾಮಿಯನ್ನು ಕರೆಸಿ ದಂಗೆ ಏಳುವ ಯೋಜನೆ ಹಾಕಿದ.

ಈ ವಿವರ ತಿಳಿದು ರಾಮಪ್ಪಯ್ಯ ರಾಮಗೌಡನ ಕೆಲವು ಆಸ್ತಿಪಾಸ್ತಿಗಳನ್ನು ಬಲವಂತದಿಂದ ತನ್ನ ವಶಪಡಿಸಿಕೊಂಡ. ಅಂದಿನಿಂದ ರಾಮಗೌಡನಿಗೆ ರಾಮಪ್ಪಯ್ಯನನ್ನು ಕಂಡರೆ ಬದ್ಧ ದ್ವೇಷ. ಏನಾದರೂ ಮಾಡಿ ಈ ಅಮಲ್ದಾರನನ್ನು ನಿರ್ಮೂಲ ಮಾಡಬೇಕು ಎಂದು ಯೋಚಿಸುತ್ತಿದ್ದ. ತನ್ನ ವಿರೋಧಿಗಳ ಸಂಖ್ಯೆ ದಿನ ದಿನಕ್ಕೆ ಹೆಚ್ಚುತ್ತಿರುವುದರಿಂದ ಇಲ್ಲಿನ ಒಳಸಂಚಿನ ವಿವರವನ್ನು ಮಂಗಳೂರಿನ ಕಲೆಕ್ಟರನಿಗೆ ತಿಳಿಸುವುದಾಗಿ ರಾಮಪ್ಪಯ್ಯ ಬೆದರಿಸಿದ. ಹಾಗಾದರೆ ತಮ್ಮ ದಂಗೆಯ ಪ್ರಯತ್ನಕ್ಕೆ ಭಂಗ ಬರುತ್ತದೇನೋ ಎಂದು ಎಲ್ಲರೂ ಯೋಚಿಸಿದರು. ಯುಗಾದಿಯ ವರೆಗೆ ಕಾಯದೆ ಎಂಟು ದಿನ ಮುಂಚಿತವಾಗಿಯೇ ದಂಗೆಯೆದ್ದು ಅಮರಸುಳ್ಯದ ಅಮಲ್ದಾರನ ಮನೆಗೆ ಅಕ್ರಮಣ ಮಾಡಬೇಕು ಎಂದು ನಿರ್ಧರಿಸಿದರು.

ಕಲ್ಯಾಣ ಸ್ವಾಮಿಯ ಧ್ವಜ ಏರಿತು

ಒಂದು ವಿವಾದವನ್ನು ಬಗೆಹರಿಸಲು ಬರುವಂತೆ ರಾಮಪ್ಪಯ್ಯನಿಗೆ ರಾಮಗೌಡನ ಕಡೆಯವರು ಹೇಳಿ ಕಳುಹಿಸಿದರು. ರಾಮಪ್ಪಯ್ಯ ಕುದುರೆ ಏರಿ ಬರುವಾಗ ಕಾಂತಮಂಗಲದ ಬಳಿ ಕೆಲವು ಜನರು ಅವನಿಗೆ ಎದುರಾದರು. ಪರಸ್ಪರ ಘರ್ಷಣೆಯಾಗಿ ರಾಮಪ್ಪಯ್ಯ ಕತ್ತಿಯ ಹೊಡೆತಕ್ಕೆ ತುತ್ತಾಗಿ ಕೆಳಗೆ ಬಿದ್ದು ಸತ್ತು ಹೋದ. ಅಮಲ್ದಾರ ಸತ್ತ ಸುದ್ದಿ ಗೊತ್ತಾಗುತ್ತಿದ್ದಂತೆಯೇ ರೈತರು ಅವನ ಮನೆಗೆ ನುಗ್ಗಿದರು. ಅನ್ಯಾಯದಿಂದ ಅವನು ಸಂಪಾದಿಸಿ ಸಂಗ್ರಹಿಸಿದ್ದ ಒಡವೆ, ವಸ್ತು, ದವಸ ಧಾನ್ಯವನ್ನೆಲ್ಲ ಸೊರೆ ಮಾಡಿದರು. ಸುಳ್ಳು ಸಾಲಪತ್ರ ಬರೆಸಿಕೊಂಡು ಜನರ ಆಸ್ತಿಯನ್ನು ನುಂಗಿದ್ದ ಅವನ ದಾಖಲೆ ಪತ್ರಗಳನ್ನೆಲ್ಲ ಸುಟ್ಟರು. ಎಲ್ಲರಿಗೂ ಹಿಂಸೆಯನ್ನೇ ಕೊಟ್ಟಿದ್ದ ರಾಮಪ್ಪಯ್ಯ, ಸತ್ತಾಗ ಅವನಿಗಾಗಿ ಕಣ್ಣೀರಿಡುವವರು ಒಬ್ಬರೂ ಇರಲಿಲ್ಲ.

ಅಮರಸುಳ್ಯದಲ್ಲಿ ಬ್ರಿಟಿಷರ ಧ್ವಜ ಇಳಿದು ಕಲ್ಯಾಣ ಸ್ವಾಮಿಯ ಧ್ವಜ ಮೇಲೇರಿತು. ರಾಮಪ್ಪಯ್ಯನ ಮನೆಯಲ್ಲಿ ಗುಲಾಮರಾಗಿದ್ದವರಿಗೆಲ್ಲ ಬಿಡುಗಡೆ ದೊರೆಯಿತು. ಅಮಲ್ದಾರನ ಖಜಾನೆ ಕಲ್ಯಾಣಸ್ವಾಮಿಯ ವಶವಾಯಿತು.

ಮೊದಲ ವಿಜಯದಿಂದ ಕಲ್ಯಾಣ ಸ್ವಾಮಿಯ ಸೇನೆಗೆ ಅಪೂರ್ವ ಆನಂದ. ಅವರ ಮುಂದಿನ ಗುರಿ ಬೆಳ್ಳಾರೆಯ ಕೋಟೆ. ಸೈನ್ಯ ವ್ಯವಸ್ಥಿತವಾಗಿ ಅತ್ತ ಕಡೆ ನುಗ್ಗಿತು.

ಮತ್ತೊಂದು ವಿಜಯ

ದಾರಿಯುದ್ದಕ್ಕೂ ಕಲ್ಯಾಣ ಸ್ವಾಮಿಯ ಸೇನೆ ಜನರನ್ನು ಆಕರ್ಷಿಸಿತು. “ಕಲ್ಯಾಣಪ್ಪನ ದಂಡು” ಎಂದು ಕರೆದರು ಜನ. ಅಮರಸುಳ್ಯ ಸ್ವತಂತ್ರವಾದ ಸುದ್ದಿ ಈ ವೇಳೆಗಾಗಲೇ ಸುತ್ತಮುತ್ತ ಹಬ್ಬಿತು. ಮುಂದಿನ ಮೂರು ವರ್ಷಗಳ ಕಾಲ ಕಂದಾಯ ಕೊಡಬೇಕಾಗಿಲ್ಲ. ಆಮೇಲೆ ಮೊದಲಿದ್ದಂತೆ ಧಾನ್ಯರೂಪದಲ್ಲೇ ಕಂದಾಯದ ಸಂದಾಯ. ಇನ್ನು ಮೇಲೆ ಹೊಗೆಸೊಪ್ಪು ಮತ್ತು ಉಪ್ಪಿನ ಕಾಯಿ ಮಾರಾಟಕ್ಕೆ ಪರವಾನಗಿ ಬೇಕಾಗಿಲ್ಲ. ಯಾರು ಬೇಕಾದರೂ ಮಾರಾಟ ಮಾಡಬಹುದು. ಕಲ್ಯಾಣ ಸ್ವಾಮಿ ಹೊರಡಿಸಿದ್ದ ಇಸ್ತಿ ಹಾರುನಾಮೆಯ ಮುಖ್ಯ ಅಂಶಗಳು ಇವು. ಈ ಸಾಮಾಚಾರ ಜನರಲ್ಲಿ ವೇಗವಾಗಿ ಹರಡುತ್ತಿತ್ತು. ಸ್ವಾತಂತ್ರ್ಯ ಅರ್ಥವೇನೆಂದು ಜನರಿಗೆ ಅರಿವಾಗ ತೊಡಗಿತ್ತು. ಕಲ್ಯಾಣಸ್ವಾಮಿಯ ಸೇನೆಗೆ ಸೇರಲು ಜನ ಹೆಚ್ಚಿನ ಸಂಖ್ಯೆಯಿಂದ ಮುಂದೆ ಬರತೊಡಗಿದರು.

ಸೇನೆ ನೇರವಾಗಿ ಬೆಳ್ಳಾರೆಯ ಕೋಟೆಗೆ ಹೋಯಿತು. ಆಗ ರಾತ್ರಿ, ಕೋಟೆಯೊಳಗೆ ಬ್ರಿಟಿಷ್‌ ಸೈನಿಕರು ಇರಲಿಲ್ಲ. ಕಲ್ಯಾಣಸ್ವಾಮಿ ಸೈನಿಕರು ಕೋಟೆಯೊಳಗೆ ನುಗ್ಗಿದರು. ಬ್ರಿಟಿಷರ ನೌಕರರಾಗಿದ್ದ ಪಾರುಪತ್ತೆಗಾರರು, ಕರಣಿಕರು, ಮುತ್ಸದ್ದಿಗಳು, ಸೇವಕರು ಮೊದಲಾದವರನ್ನು ಸೆರೆ ಹಿಡಿದರು. ಒಂದು ಹನಿ ರಕ್ತ ನೆಲಕ್ಕೆ ಬೀಳದ ಬೆಳ್ಳಾರೆಯ ಕೋಟೆ ಕ್ರಾಂತಿಕಾರಿಗಳ ವಶವಾಯಿತು. ಖಜಾನೆಯ ಹಣವನ್ನು ವಶಪಡಿಸಿಕೊಂಡರು. ಕಲ್ಯಾಣ ಸ್ವಾಮಿಯ ಊರಿನ ಮುಖಂಡರ ಸಭೆ ಸೇರಿಸಿದ. “ನಮ್ಮ ಯುದ್ಧ ತಮ್ಮವರ ಮೇಲೆ ಅಲ್ಲ, ಇಲ್ಲಿ ಬಂದು ಜನರ ಸ್ವಾತಂತ್ರ ಕಿತ್ತುಕೊಂಡ ಬ್ರಿಟಿಷರ ಮೇಲೆ” ಎಂದು ಸ್ಪಷ್ಟಪಡಿಸಿದ. ತಮ್ಮ ಸೈನ್ಯ ಯಾರನ್ನೂ ಲೂಟಿ ಮಾಡುವುದಿಲ್ಲ ಎಂದು ಭರವಸೆ ನೀಡಿದ. ಇದರಿಂದ ಜನರಿಗೆಲ್ಲ ಸಮಾಧಾನವಾಯಿತು. ಸೇನೆಗೆ ಅಗತ್ಯವಿದ್ದ ಆಹಾರ ಸಾಮಗ್ರಿಗಳನ್ನು ಒದಗಿಸಲು ಮುಂದೆ ಬಂದರು. ಬೆಲೆ ಕೊಡಲು ಹೋದರೂ ತೆಗೆದುಕೊಳ್ಳಲಿಲ್ಲ. ಈ ಕೋಟೆಯಲ್ಲಿ ಕಲ್ಯಾಣ ಸ್ವಾಮಿಯ ಸೇನೆ ತಂಗಿದ್ದಾಗಲೇ ಸುತ್ತು ಮುತ್ತಿನಿಂದ ಸುಮಾರು ಎರಡು ಸಾವಿರ ಜನ ದೃಢಕಾಯರು ಬಂದು ಸೈನ್ಯಕ್ಕೆ ಸೇರಿಕೊಂಡರು. ಝರಿಯಾಗಿ ಹುಟ್ಟಿದ ನದಿ ಮುಂದೆ ಹರಿಯುತ್ತಾ ಅನೇಕ ಉಪನದಿಗಳನ್ನು ಸೇರಿಸಿಕೊಂಡು ಮಹಾನದಿಯಾಗಿ ಹರಿಯುತ್ತದೆ. ಕಲ್ಯಾಣ ಸ್ವಾಮಿಯ ಸೇನೆ ಹೀಗೆ ಬೆಳೆಯುತ್ತಾ ಮಹಾನದಿಯಾಗಿ ಮುಂದೆ ಸಾಗಿತು.

ರಾಮಗೌಡ ಮತ್ತು ಕುಕನೂರ ಚಿನ್ನಯ್ಯ ಎಂಬ ಮುಖಂಡರು ಸೇರಿಕೊಂಡು ಕಲ್ಯಾಣ ಸ್ವಾಮಿಯ ಕಾರ್ಯಾಚರಣೆಯನ್ನು ಕುರಿತ ನಿರೂಪಗಳನ್ನು ಕೊಡಗಿನ್ಯಾದಂತ ಕಳುಹಿಸಿದರು. ಇದರಲ್ಲಿ ಕೊಡಗಿನ ಜನರು ತಮ್ಮ ಹಿಂದಿನ ರಾಜಮನೆತನಕ್ಕೆ ಭಕ್ತಿ ತೋರಿಸಬೇಕು, ಬ್ರಿಟಿಷರಿಂದ ಕೊಡಗನ್ನು ಸ್ವತಂತ್ರಗೊಳಿಸುವ ಸಂದರ್ಭವನ್ನು ಕಳೆದುಕೊಳ್ಳಬಾರದು ಎಂದು ತಿಳಿಸಲಾಗಿತ್ತು. ಮುಂದಿನ ಮೂರು ವರ್ಷ ಕಂದಾಯವನ್ನು ರದ್ದು ಮಾಡಿರುವುದನ್ನೂ, ಹೊಗೆ ಸೊಪ್ಪು ಮತ್ತು ಉಪ್ಪಿನ ಮಾರಾಟದ ಗುತ್ತಿಗೆಯನ್ನು ತೆಗೆದಿರುವುದನ್ನೂ ತಿಳಿಸಿದ್ದರು. ಇದರ ಜೊತೆಯಲ್ಲಿ ಕಾಶಿಯಲ್ಲಿ ಗೃಹಬಂಧನದಲ್ಲಿದ್ದ ಚಿಕ್ಕವೀರರಾಜೇಂದ್ರ ಅಲ್ಲಿಂದ ತಪ್ಪಿಸಿಕೊಂಡು ಬಂದು ಈಗ ತಮ್ಮೊಡನೆ ಇದ್ದಾನೆ ಎಂಬ ಸುದ್ದಿಯನ್ನೂ ಹರಡಿದರು.

ಗಾಬರಿಯಾದ ಲೀ ಹಾರ್ಡಿ

ಈ ನಿರೂಪಗಳು ಘಟ್ಟದ ಕೆಳಗಿನ ಚೆಂಬು ಪೆರಾಜೆ, ಕೊಡಗಿನ ತಾವುನಾಡು. ಬೆಂಗುನಾಡುಗಳಿಗೆ ತಲುಪಿ ಅಲ್ಲಿಂದ ಅನೇಕ ಜನ ಬಂದು ಕಲ್ಯಾಣ ಸ್ವಾಮಿಯ ಸೇನೆಯನ್ನು ಸೇರಿಕೊಂಡರು. ಕೊಡಗಿನ ಜನರಿಗೆ ಇದೆಲ್ಲ ಆಶ್ಚರ್ಯದ ಸಂಗತಿಯಾಗಿತ್ತು. ಏಕೆಂದರೆ ಕಲ್ಯಾಣ ಸ್ವಾಮಿಯನ್ನು ಲೀ ಹಾರ್ಡಿ ಸೆರೆ ಹಿಡಿದಿರುವ ವಿಷಯ ಅವರಿಗೆ ತಿಳಿದಿತ್ತು. ಮೊದಲು ಅವರು ಈ ನಿರೂಪಗಳನ್ನು ನಂಬಲಿಲ್ಲ. ಆದರೆ ಚೆಂಪು ಪರಾಜೆಯ ರೈತರು ಈ ಸೇನೆಯನ್ನು ಸೇರಿಕೊಂಡಿದ್ದು. ಕೊಡಗಿನ ಉತ್ತರ ಭಾಗದ ಗಡಿಗಳನ್ನು ಕಲ್ಯಾಣ ಸ್ವಾಮಿಯ ಸೇನೆ ವಶಪಡಿಸಿಕೊಂಡಿದ್ದು ಕೇಳಿ ಲೀ ಹಾರ್ಡಿ ಗಾಬರಿಗೊಂಡ. ದಿವಾನರ ನೆಂಟರು ಈ ಸೇನೆಗೆ ಸೇರಿರುವುದನ್ನು ತಿಳಿದು ಅವರ ಮೇಲೆ ರೇಗಿದ. ಈ ರೈತರ ದಂಗೆಯನ್ನು ಅಡಗಿಸಲು ವ್ಯವಸ್ಥೆ ಮಾಡತೊಡಗಿದ.

ಮಂಗಳೂರು ಕೈವಶವಾಯಿತು

ಇಷ್ಟರಲ್ಲಿ ಕಲ್ಯಾಣ ಸ್ವಾಮಿಯ ಸೇನೆ ಪುತ್ತೂರನ್ನು ತಲುಪಿ ಅದನ್ನು ವಶಪಡಿಸಿಕೊಂಡಿತು. ಅಲ್ಲಿನ ಕರಣಿಕ ದೇವಪ್ಪಯ್ಯ ಇವರ ಕೈಗೆ ಸಿಕ್ಕಬಿದ್ದ. ಕಲ್ಯಾಣ ಸ್ವಾಮಿ ಸರ್ಕಾರದ ಕಚೇರಿಗೆ ಹೋಗಿ ಕಲೆಕ್ಟರನ ಆಸನದಲ್ಲಿ ಕುಳಿತು ದರ್ಬಾರ ಮಾಡಿದ. ದೇವಪ್ಪಯ್ಯನ ವಿಚಾರಣೆ ಮಾಡಿ, ಅನಂತರ ಮುಂದಿನ ಕಾರ್ಯಕ್ರಮವನ್ನು ರೂಪಿಸಿದ. ಪುತ್ತೂರಿನ ಖಜಾನೆಯ ಸುಲಿಗೆ ಆದಮೇಲೆ ಕಲ್ಯಾಣ ಸ್ವಾಮಿಯ ಸೇನೆ ಪಾಣೆ ಆದಮಳೆ ಮಂಗಳೂರಿಗೆ ಹೋಯಿತು. ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಜನರು ಈ ಸೇನೆಯನ್ನು ಕೂಡಿಕೊಂಡರು. ನಂದಾವರದ ಲಕ್ಷ್ಮಪ್ಪ ಬಂಗರಸ ಅವರೊಡನೆ ಸೇರಿಕೊಂಡು ಸೇನೆಗೆ ಅಗತ್ಯವಾದ ಆಹಾರ ಸಾಮಗ್ರಿಗಳನ್ನು ಒದಗಿಸಿದ.

ಕಲ್ಯಾಣಸ್ವಾಮಿಯ ಸೇನೆ ಮಂಗಳೂರು ತಲುಪುವಷ್ಟರಲ್ಲಿ ಬ್ರಿಟಿಷ್ ಅಧಿಕಾರಿಗಳು ಹಾಗೂ ಅವರ ಕುಟುಂಬದವರು ದೋಣಿ ಏರಿ ಅಲ್ಲಿಂದ ಪರಾರಿಯಾಗಿ ಮುಂದೆ ಹಡಗಿನಲ್ಲಿ ಕಣ್ಣಾನೂರು ಸೇರಿದರು. ಕಲ್ಯಾಣ ಸ್ವಾಮಿಗೆ ಮಂಗಳೂರು ಕೂಡ ಅನಾಯಸವಾಗಿ ಕೈ ವಶವಾಯಿತು. ಸೆರೆಮನೆಗೆ ಹೋಗಿ ಕೈದಿಗಳನ್ನು ಬಿಡುಗಡೆ ಮಾಡಿ ತನ್ನ ಪಕ್ಷಕ್ಕೆಸೇರಿಸಿಕೊಂಡ. ತಾಲೂಕು ಕಚೇರಿಗೆ ಹೋಗಿ ಖಜಾನೆಯನ್ನು ಒಡೆದು ಒಳಗಿದ್ದ ಹಣವನ್ನೆಲ್ಲ ಸೇನೆಯ ವಶಕ್ಕೆ ತೆಗೆದುಕೊಂಡ. ಮಂಗಳೂರಿನಲ್ಲಿದ್ದ ಇಂಗ್ಲೀಷ್ ಅಧಿಕಾರಿಗಳ ಮನೆಗೆ ಬೆಂಕಿ ಇಡಿಸಿದ. ಮಂಗಳೂರಿನ ಕಲೆಕ್ಟರನ ಕಚೇರಿಯ ಮೇಲೆ ಬ್ರಿಟಿಷರ ಧ್ವಜ ಇಳಿದು ಕಲ್ಯಾಣ ಸ್ವಾಮಿಯ ಧ್ವಜ ಹಾರಾಡಿತು. ಅವರ ಸೇನೆ ಮಂಗಳೂರನ್ನು ಹದಿಮೂರು ದಿನ ತನ್ನ ವಶದಲ್ಲಿ ಇಟ್ಟುಕೊಂಡಿತ್ತು.

ಸೋಲು ಪ್ರಾರಂಭವಾಯಿತು

ಈ ವೇಳೆಗೆ ತಲಚೇರಿ ಮತ್ತು ಕಣ್ಣಾನೂರುಗಳಿಂದ ಹಡಗಿನಲ್ಲಿ ಇಂಗ್ಲೀಷರ ಸೇನೆ ಬಂದು ರಾತ್ರಿಯಲ್ಲಿ ಮಂಗಳೂರನ್ನು ಮುತ್ತಿತು. ಅನಿರೀಕ್ಷಿತ ಅಕ್ರಮಣದಿಂದ ಕಲ್ಯಾಣ ಸ್ವಾಮಿಯ ಸೇನೆ ತಬ್ಬಿಬ್ಬಾಯಿತು. ಆದರೂ ಧೈರ್ಯದಿಂದ, ಕೆಚ್ಚಿನಿಂದ ಇಂಗ್ಲೀಷ್ ಸೈನಿಕರನ್ನು ಎದುರಿಸಿದರು. ಕೋವಿ ಮತ್ತು ಫಿರಂಗಿಗಳಿಂದ ಸುಸಜ್ಜಿತವಾದ ಇಂಗ್ಲೀಷ್ ಸೇನೆಯ ಎದುರು ಕಲ್ಯಾಣ ಸ್ವಾಮಿಯ ಸೈನಿಕರ ಆಟ ನಡೆಯಲಿಲ್ಲ. ಕೊಡಗಿನ ಸೇನೆ ನುಚ್ಚು ನೂರಾಗತೊಡಗಿತು. ಅಪಾರ ಸಾವು ನೋವುಗಳಾದವು. ಅನೇಕರು ಓಡಿಹೋದರು. ಕಲ್ಯಾಣ ಸ್ವಾಮಿ ತನ್ನ ಸಂಗಡಿಗರೊಡನೆ ಅಮರಸುಳ್ಯಕ್ಕೆ ಓಡಿಹೋದ.

ಈ ಮಧ್ಯೆ ಬಿಸಲೆ ಘಾಟಿನಲ್ಲಿ ಸೇರಿದ್ದ ಕಲ್ಯಾಣ ಸ್ವಾಮಿಯ ಸೇನೆಯ ಇನ್ನೊಂದು ತುಕಡಿಯ ಮೇಲೆ ಲೀ ಹಾರ್ಡಿಯ ಮೂವತ್ತಾರನೇ ರೆಜಿಮೆಂಟು ಬಿದ್ದು ಸೋಲಿಸಿತು. ನಾಲ್ಕು ನಾಡಿನಲ್ಲಿ ಕೊಡವರು ಬ್ರಿಟಿಷರ ವಿರುದ್ಧ ದಂಗೆಯೇಳಬಹುದೆಂಬ ಸೂಚನೆ ಬಂದಿತು. ದಿವಾನ್ ಬೋಪು ಭಾಗಮಂಡಲಕ್ಕೆ ಹೋಗಿ ಅಲ್ಲಿನ ಜನರಿಗೆ, ಕಲ್ಯಾಣ ಸ್ವಾಮಿ ಅಪ್ಪಾಜಿ ಅರಸನ ಮಗನಲ್ಲವೆಂದೂ, ಚಿಕ್ಕ ವೀರರಾಜೇಂದ್ರ ಕಾಶಿಯಿಂದ ತಪ್ಪಿಸಿಕೊಂಡು ಬಂದಿಲ್ಲವೆಂದೂ ಹೇಳಿ ಜನಗಳು ಕ್ರಾಂತಿಕಾರಿಗಳೊಡನೆ ಸೇರುವುದನ್ನು ತಡೆಯಲು ಪ್ರಯತ್ನಿಸಿದ. ಮಡಿಕೇರಿಯಲ್ಲಿ ಲೀ ಹಾರ್ಡಿ ಸೈನ್ಯವನ್ನು ಸಿದ್ಧವಾಗಿಟ್ಟುಕೊಂಡು ಆಹಾರ ಧಾನ್ಯಗಳನ್ನು ಸಂಗ್ರಹಿಸತೊಡಗಿದ. ಉತ್ತಮ ಕೊಡಗಿನ ಕ್ರಾಂತಿಕಾರಿಗಳು ಇಂಗ್ಲೀಷರ ಹತ್ತೊಂಬತ್ತನೆಯ ರೆಜೆಮೆಂಟಿಗೆ ಶರಣಾಗತರಾದರು. ಲೀ ಹಾರ್ಡಿ ಅವರನ್ನು ಸೆರೆಯಲ್ಲಿಟ್ಟು, ಆಯುಧಗಳನ್ನು ಕಸಿದುಕೊಂಡ. ವಿಚಾರಣೆ ಮಾಡಿ ರೈತರಿಗೆ ಎಚ್ಚರಿಕೆ ಹೇಳಿ ಬಿಡುಗಡೆ ಮಾಡಿದ. ಮುಖಂಡರನ್ನು ಸೆರೆಯಲ್ಲಿಟ್ಟ.

ಮೋಸದ ಕೈ ಹಿಡಿಯಿತು

ಕಲ್ಯಾಣಸ್ವಾಮಿ ಮತ್ತು ಅವನ ಕೆಲವು ಸಂಗಡಿಗರು ಇಂಗ್ಲೀಷರಿಗೆ ಸಿಕ್ಕದೆ ತಪ್ಪಿಸಿಕೊಂಡಿದ್ದರು. ಕಲ್ಯಾಣ ಸ್ವಾಮಿಯನ್ನು ಹಿಡಿದುಕೊಟ್ಟವರಿಗೆ ಹತ್ತು ಸಾವಿರ ರೂಪಾಯಿ, ಕುಕನೂರು ಚಿನ್ನಯ್ಯ, ಕರಣಿಕ ಸುಬ್ರಾಯನನ್ನು ಹಿಡಿದು ಕೊಟ್ಟವರಿಗೆ ಐದೈದು ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ಕಂಪೆನಿ ಸರ್ಕಾರದವರು ಜಾಹಿರುನಾಮೆ ಹೊರಡಿದರು. ಉಳಿದ ಮುಖಂಡರಾದ ನಾಲ್ಕು ನಾಡಿನ ಉತ್ತು, ಶಾಂತಳ್ಳಿ, ಮಲ್ಲಯ್ಯ ಗುಡ್ಡೆ ಮನೆ ಅಪ್ಪಯ್ಯ, ಚೆಟ್ಟಿ ಕುಡಿಯ ಕುರ್ತುಕುಡಿಯ, ಲಕ್ಷ್ಮಪ್ಪ ಬಂಗರಸ ಮೊದಲಾದವರು ಸೆರೆ ಸಿಕ್ಕಿದರು.

ಕಲ್ಯಾಣಸ್ವಾಮಿಗಾಗಿ ಹುಡುಕಾಟ ಭರದಿಂದ ಸಾಗಿತು. ಎಲ್ಲ ಕಡೆಗೂ ಸೈನಿಕರನ್ನು ಗೂಢಚಾರರನ್ನೂ ಅಟ್ಟಿದರು. ಕಲ್ಯಾಣ ಸ್ವಾಮಿ ತನ್ನ ರಾಜ ಉಡುಪುಳನ್ನು ಕಳಚಿದ. ಜಂಗಮ ವೇಷ ಧರಿಸಿದ. ಹದಿನೈದು ಜನರನ್ನು ತನ್ನೊಡನೆ ಕರೆದುಕೊಂಡು ಕಾಡುದಾರಿಗಳಲ್ಲಿ ತಲೆತಪ್ಪಿಸಿಕೊಂಡು ತಿರುಗಾಡುತ್ತಾ ಮುಜರಾಬಾದಿನ ಹತ್ತಿರದ ತನ್ನ ಊರಿಗೆ ಹೋದ. ಜೊತೆಯವರು ಅವನನ್ನು ಅಲ್ಲಿ ಬಿಟ್ಟು ತಮ್ಮ ತಮ್ಮ ಹಳ್ಳಿಗಳಿಗೆ ಹೋದರು. ಈ ವೇಳೆಗೆ ಕಲ್ಯಾಣ ಸ್ವಾಮಿಯ ತಲೆ ಬೆಲೆ ಹತ್ತು ಸಾವಿರ  ರೂಪಾಯಿ ಎಂಬ ಸುದ್ದಿ ಆ ಊರಿಗೂ ತಲುಪಿತ್ತು. ಇದರಿಂದ ಕಲ್ಯಾಣ ಸ್ವಾಮಿ ಕಾಡಿಗೆ ಹೋಗಿ, ಹಗಲೆಲ್ಲ ಅಲ್ಲಿ ಕಣ್ಮರೆಯಾಗಿದ್ದು, ರಾತ್ರಿ ಮನೆಗೆ ಬಂದು ಮಾಡಿಕೊಂಡು ಹೋಗುತ್ತಿದ್ದ. ಅವನು ಒಂದು ದಿನ ರಾತ್ರಿ ಮನೆಗೆ ಊಟಕ್ಕೆ ಬಂದಿದ್ದಾಗ ಅವನ ಮಾವ ಕರಿಬಸವಯ್ಯ ಮೋಸದಿಂದ ಕಲ್ಯಾಣಸ್ವಾಮಿಯನ್ನು ಸೆರೆ ಹಿಡಿದುಕೊಟ್ಟ. ಅದು ೧೮೩೭ನೇ ಇಸವಿ ಮೇ ತಿಂಗಳ ಹದಿಮೂರನೆಯ ದಿನ. ಸ್ವಾತಂತ್ರ್ಯ ಪ್ರೇಮಿಗಳಿಗೆ ದುರ್ದಿನ. ಸೆರೆ ಹಿಡಿದ ಸುಭೇದಾರ ಕಲ್ಯಾಣ ಸ್ವಾಮಿಯನ್ನು ಮಡಿಕೇರಿಗೆ ಸಾಗಿಸಿದ.

 

"ನಮ್ಮ ಯುದ್ಧ ಬ್ರಿಟಿಷರ ಮೇಲೆ "

ಸ್ವಾತಂತ್ರ್ಯಕ್ಕಾಗಿ ಪ್ರಾಣಕೊಟ್ಟ ವೀರರು

ಮೇ ೧೫ರಂದು ಮಡಿಕೇರಿಯಲ್ಲಿ ಕಲ್ಯಾಣ ಸ್ವಾಮಿ ಅವನ ಸಂಗಡಿಗರ ವಿಚಾರಣೆ ನಡೆಯಿತು. ಕ್ಯಾಪ್ಟನ್ ಲೀ ಹಾರ್ಡಿ ವಿಚಾರಣೆ ನಡೆಸಿ ಬ್ರಿಟಿಷ್‌ ಸರ್ಕಾರದ ವಿರುದ್ಧ ದಂಗೆ ಎದ್ದ ಆಪಾದನೆಯ ಮೇಲೆ ಅವರೆಲ್ಲರಿಗೆ ಮರಣ ದಂಡನೆ ವಿಧಿಸಿದ. ಮಂಗಳೂರಿನ ಬಿಕ್ರನ ಕಟ್ಟೆ ಪದವಿನ ಹತ್ತಿನ ಗಲ್ಲು ಗಂಬಗಳನ್ನು ನಿಲ್ಲಿಸಿ ದಂಗೆಯಲ್ಲಿ ಭಾಗವಹಿಸಿದ್ದ ಮುಖಂಡರನ್ನೆಲ್ಲಾ ಸಾಲಾಗಿ ಗಲ್ಲು ಹಾಕಲಾಯಿತು. ಕಲ್ಯಾಣ ಸ್ವಾಮಿ ದೇಶಕ್ಕಾಗಿ ಪ್ರಾಣಕೊಟ್ಟ. ಉಳಿದ ಅನೇಕ ಜನರಿಗೆ ಬೇರೆ ಬೇರೆ ಅವಧಿಯ ಕಾಲ ಜೈಲು ಶಿಕ್ಷೆ ವಿಧಿಸಿದರು. ಅನೇಕರನ್ನು ಎಚ್ಚರಿಸಿ ಬಿಟ್ಟುಬಿಟ್ಟರು. ದಂಗೆ ಅಡಗಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವರಿಗೆ ಅವರವರ ಯೋಗ್ಯತೆಗೆ ಅನುಸಾರವಾಗಿ ಪದಕಗಳನ್ನೂ ಬಹುಮಾನಗಳನ್ನೂ ವಿತರಣೆ ಮಾಡಿದರು. ಅಮರಸುಳ್ಯ ಮತ್ತು ಕೊಡಗಿನ ದಂಗೆಗಳನ್ನು ಸಮರ್ಥವಾಗಿ ಅಡಗಿಸಿದ ಕ್ಯಾಪ್ಟನ್ ಲೀ ಹಾರ್ಡಿಗೆ ಬಡತಿ ನೀಡಲಾಯಿತು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಗಲ್ಲು ಶಿಕ್ಷೆ, ಅದನ್ನು ಅಡಗಿಸಲು ಶ್ರಮಿಸಿದವರಿಗೆ ಪ್ರಶಸ್ತಿ!

ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಈ ಪ್ರಯತ್ನ ಸುಂಟರಗಾಳಿಯಂತೆ ಸ್ವಲ್ಪ ಸಮಯದಲ್ಲೇ ಸುತ್ತು ಮುತ್ತಿನ ಪರಿಸರವೆನ್ನೆಲ್ಲಾ ಅಲ್ಲೋಲ ಕಲ್ಲೋಲ ಮಾಡಿತು. ಮತ್ತೆ ಶಾಂತವಾಯಿತು. ಬ್ರಿಟಿಷರ ಸಾಮರ್ಥ್ಯವನ್ನು ತಿಳಿದೋ ತಿಳಿಯದೆಯೋ ಅಂತೂ ಕೊಡಗಿನ ಕೆಲವು ವೀರರು ಈ ಸ್ವಾತಂತ್ರ್ಯದ ಹೋರಾಟದ ಅಗ್ನಿಯಲ್ಲಿ ಹಾರಿ ತಮ್ಮ ಪ್ರಾಣ ಅರ್ಪಿಸಿದರು. ಅವರ ಸ್ವಾತಂತ್ರ್ ಪ್ರೇಮ, ದೇಶಭಕ್ತಿ, ಧೈರ್ಯ ಹಾಗೂ ಕೆಚ್ಚು ಇಂದಿಗೂ ಆದರ್ಶಪ್ರಾಯವಾಗಿದೆ.