ಕಲ್ಲಂಗಡಿ ತರಕಾರಿಯಲ್ಲದಿದ್ದರೂ ಹಣ್ಣುಗಳ ತಿರುಳನ್ನು ಹಿಂಡಿ ಷರಬತ್ತು, ಪಾನಕ, ರಸ ಮುಂತಾಗಿ ತಯಾರಿಸಿ ಹೆಚ್ಚಿನ ಹಣ ಗಳಿಸಬಹುದು.

ಪೌಷ್ಟಿಕ ಗುಣಗಳು: ಕಲ್ಲಂಗಡಿ ಹಣ್ಣಿನಲ್ಲಿ ಗಣನೀಯ ಪ್ರಮಾಣದ ಶರ್ಕರಪಿಷ್ಟ, ಖನಿಜ ಪದಾರ್ಥ ಮತ್ತು ಜೀವಸತ್ವಗಳಿರುತ್ತವೆ.

೧೦೦ ಗ್ರಾಂ ತಿರುಳಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ – ೯೫.೮ ಗ್ರಾಂ
ಶರ್ಕರಪಿಷ್ಟ – ೩.೩ ಗ್ರಾಂ
ಪ್ರೊಟೀನ್ – ೦.೨ ಗ್ರಾಂ
ಕೊಬ್ಬು – ೦.೨ ಗ್ರಾಂ
ರಂಜಕ – ೦.೦೭ ಮಿ.ಗ್ರಾಂ
’ಎ’ ಜೀವಸತ್ವ – ೫೯೭ ಐಯು
ರೈಬೋಪ್ಲೇವಿನ್ – ೦.೦೫ ಮಿ.ಗ್ರಾಂ
ಥಯಮಿನ್ – ೦.೦೫ ಮಿ.ಗ್ರಾಂ
’ಸಿ’ ಜೀವಸತ್ವ – ೬ ಮಿ.ಗ್ರಾಂ
ಕ್ಯಾಲ್ಸಿಯಂ – ೦.೦೭ ಮಿ.ಗ್ರಾಂ

ಔಷಧೀಯ ಗುಣಗಳು : ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ತಿರುಳಿನಲ್ಲಿರುವ ನೀರು ಶುದ್ಧ ನೀರಾಗಿದ್ದು ಜೀರ್ಣಕೋಶದಲ್ಲಿನ ಆಮ್ಲಗಳನ್ನು ತೊಳೆದು ಹಾಕುತ್ತದೆ. ಹೆಚ್ಚಿನ  ಪ್ರಮಾಣದಲ್ಲಿ ಸೇವಿಸಿದ್ದೇ ಆದರೆ ಉಷ್ಣವೆನ್ನುತ್ತಾರೆ.

ಉಗಮ ಮತ್ತು ಹಂಚಿಕೆ : ಕಲ್ಲಂಗಡಿ ಭಾರತ ಮತ್ತು ಆಫ್ರಿಕಾಗಳ ನಿವಾಸಿ. ಜಗತ್ತಿನ ಎಲ್ಲಾ ಕಡೆ ಬೆಳೆದು ಬಳಸುತ್ತಾರಾದರೂ ಉಷ್ಣಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭಾರತದಲ್ಲಿ ಬಹುತೇಕ ರಾಜ್ಯಗಳಲ್ಲಿ ಇದರ ಬೇಸಾಯವಿದ್ದು ಸ್ವಲ್ಪಮಟ್ಟಿಗೆ ಹೊರದೇಶಗಳಿಗೂ ಸಹ ರಫ್ತು ಮಾಡಲಾಗುತ್ತಿದೆ.

ಸಸ್ಯ ವರ್ಣನೆ : ಕಲ್ಲಂಗಡಿ ಭಾರತ ಮತ್ತು ಆಫ್ರಿಕಾಗಳ ನಿವಾಸಿ. ಜಗತ್ತಿನ ಎಲ್ಲಾ ಕಡೆ ಬೆಳೆದು ಬಳಸುತ್ತಾರಾದರೂ ಉಷ್ಣಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭಾರತದಲ್ಲಿ ಬಹುತೇಕ ರಾಜ್ಯಗಳಲ್ಲಿ ಇದರ ಬೇಸಾಯವಿದ್ದು ಸ್ವಲ್ಪಮಟ್ಟಿಗೆ ಹೊರದೇಶಗಳಿಗೂ ಸಹ ರಫ್ತು ಮಾಡಲಾಗುತ್ತಿದೆ.

ಸಸ್ಯವರ್ಣನೆ : ಇದು ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದ ವಾರ್ಷಿಕ ಬಳ್ಳಿ. ಕಾಂಡ ಬಲಹೀನ, ಕವಲು ಹಂಬುಗಳಿದ್ದು ನೆಲದ ಮೇಲೆ ತೆವಳಿ ಹಬ್ಬುತ್ತದೆ. ಎಲೆಗಳು ಹಸ್ತದ ಆಕಾರದಲ್ಲಿದ್ದು ಅಂಚು ಬೆರಳುಗಳಂತೆ ಕಚ್ಚುಗಳನ್ನು ಹೊಂದಿರುತ್ತದೆ. ಎಲೆಗಳ ಬಣ್ಣ ದಟ್ಟ ಹಸುರು. ನರಗಳ ಬಲೆಕಟ್ಟು ಸ್ಫುಟವಾಗಿರುತ್ತದೆ. ನುಲಿ ಬಳ್ಳಿಗಳ ನೆರವಿನಿಂದ ಹಂಬುಗಳು ಆಸರೆಯ ಮೇಲಕ್ಕೆ ಹಬ್ಬಬಲ್ಲವು. ಹೂವು ಏಕಲಿಂಗಿಗಳು. ಅವು ಗಾತ್ರದಲ್ಲಿ ಸಣ್ಣವಿರುತ್ತವೆ. ಹೂದಳಗಳ ಬಣ್ಣ ಹಳದಿ. ಜೇನುನೊಣ ಮುಂತಾದ ಕೀಟಗಳು ಪರಾಗಸ್ಪರ್ಶ ಕಾರ್ಯದಲ್ಲಿ ನೆರವಾಗುತ್ತವೆ. ಕಾಯಿ ದುಂಡಗೆ, ಗೋಲಾಕಾರ ಇಲ್ಲವೇ ಉರುಳೆಯಂತೆ ಇರುತ್ತವೆ. ಎರಡೂ ತುದಿ ಗುಂಡಗೆ ಇಲ್ಲವೇ ಸಮತಟ್ಟಾಗಿರುತ್ತವೆ. ಮೇಲ್ಮೈ ನುಣ್ಣಗಿದ್ದು ದಟ್ಟ ಹಸಿರು, ಬಿಳಿ ಹಸುರು ಅಥವಾ ಹಳದಿ ಹಸುರು ಬಣ್ಣದ್ದಿರುತ್ತದೆ. ಅದರ ಮೇಲೆ ಉದ್ದಕ್ಕೆ ಜರಿ ನೇಯ್ದಂತೆ ಆಕರ್ಷಕ ಪಟ್ಟಿಗಳಿರುವುದುಂಟು. ತೊಟ್ಟು ಸಣ್ಣಗೆ ಉದ್ದಕ್ಕಿದ್ದು ಪೋಷಣೆಯನ್ನು ಒದಗಿಸುತ್ತದೆ. ಸಿಪ್ಪೆ ಮಂದ; ತಿರುಳು ರಸವತ್ತಾಗಿದ್ದು ಆಕರ್ಷಕ ಕೆಂಪು ಬಣ್ಣವಿರುತ್ತದೆ. ಬೀಜ ಅಂಡಾಕರ; ಅದುಮಿದಂತೆ ಚಪ್ಪಟೆಯಾಗಿರುತ್ತವೆ. ತಿರುಳಿನಲ್ಲಿ ಹುದುಗಿರುತ್ತವೆ. ಬೀಜಗಳ ಬಣ್ಣ ಮಾಸಲು ಕಂದು; ಗಾತ್ರದಲ್ಲಿ ಸಾಧಾರಣ ದೊಡ್ಡವಿರುತ್ತವೆ. ಕಾಯಿಗಳು ಬಲಿತು ಪಕ್ವಗೊಂಡಂತೆಲ್ಲಾ ಅವುಗಳ ಸಿಪ್ಪೆಯ ಬಣ್ಣ ಬಿಳಿ ಹಳದಿ ಬಣ್ಣಕ್ಕೆ ಮಾರ್ಪಡುತ್ತದೆ ಹಾಗೂ ಮೇಲೆ ಬೆರಳ ತುದಿಯಿಂದ ಬಡಿದರೆ ಒಂದು ವಿಧವಾದ ಶಬ್ಧ ಹೊರಡುತ್ತದೆ. ಸಸ್ಯಭಾಗಗಳು ಹಾಗೂ ಹೂವು ಮತ್ತು ಹೀಚುಗಳ ಮೇಲೆಲ್ಲಾ ಮೃದುವಾದ ತುಪ್ಪಳವಿರುತ್ತದೆ. ಕಲ್ಲಂಗಡಿ ಗಿಡಗಳ ಬೇರು ಸಮೂಹ ನೆಲದಲ್ಲಿ ಸ್ವಲ್ಪ ಆಳಕ್ಕೆ ಇಳಿಯಬಲ್ಲದು. ಬೀಜಗಳ ಮೇಲಿನ ಸಿಪ್ಪೆ ಗಡುಸು. ಬಿತ್ತುವ ಮುಂಚೆ ನೀರಲ್ಲಿ ೫-೬ ತಾಸುಗಳ ಕಾಲ ನೆನೆಸಿಟ್ಟರೆ ಅವು ಮೆತ್ತಗಾಗಿ, ಬೇಗ ಮೊಳೆಯುತ್ತವೆ.

ಹವಾಗುಣ : ಈ ಬೆಳೆ ಬೆಚ್ಚಗಿನ ಹವೆಯಲ್ಲಿ ಬಹು ಚೆನ್ನಾಗಿ ಫಲಿಸುತ್ತದೆ. ಇದು ಬೇಸಿಗೆ ಕಾಲದ ಬೆಳೆ. ಯಥೇಚ್ಛ ಬಿಸಿಲಿದ್ದು ಒಣಹವೆ ಇದ್ದರೆ ಹಣ್ಣುಗಳಲ್ಲಿನ ಸಕ್ಕರೆ ಅಂಶ ಉತ್ತಮಗೊಳ್ಳುತ್ತದೆ. ಉಷ್ಣತೆ ೧೮.೩ ರಿಂದ ೩೨.೩ ಸೆ. ಇರಬೇಕು ಮತ್ತು ೨೫.೯ ರಿಂದ ೨೬.೭ ಸೆ. ಇದ್ದರೆ ಅತ್ಯಂತ ಸೂಕ್ತ. ಮಂಜು ಸುರಿಯುವುದು ಅಥವಾ ಮೋಡ ಕವಿದ ವಾತಾವರಣದಲ್ಲಿ ಸಸ್ಯಹೇನುಗಳ ಹಾವಳಿ ಜಾಸ್ತಿ. ಬಿತ್ತನೆಗೆ ನವೆಂಬರ್ -ಜನವರಿ ಸೂಕ್ತ.

ಭೂಗುಣ : ಇದಕ್ಕೆ ನೀರು ಬಸಿಯುವ ಮರಳು ಮಿಶ್ರಿತ ಗೋಡು ಮಣ್ಣಿನ ಭೂಮಿ ಅತ್ಯುತ್ತಮವಿರುತ್ತದೆ. ನದಿ ದಂಡೆಗಳ ಮರಳು ಮಿಶ್ರಿತ ರೇವೆಗೋಡು ಸಹ ಉತ್ತಮವೇ. ಬಹಳಷ್ಟು ಹುಳಿಯಿಂದ ಕೂಡಿದ ಅಥವಾ ಚೌಳುಮಣ್ಣಿನ ಭೂಮಿ ಸೂಕ್ತವಿರುವುದಿಲ್ಲ.

ತಳಿಗಳು ಹಾಗೂ ಮಿಶ್ರತಳಿಗಳು : ಈ ಬೆಳೆಯಲ್ಲಿ ತಳಿ ಅಭಿವೃದ್ಧಿಗೆ ಸೂಕ್ತ ಗಮನ ನೀಡಲಾಗಿದೆ. ಹಲವಾರು ಸುಧಾರಿತ ತಳಿಗಳನ್ನು ಹೊರದೇಶಗಳಿಂದ ತರಿಸಿಕೊಂಡು, ನಮ್ಮ ಹವಾ ಮತ್ತು ಭೂಗುಣಗಳಲ್ಲಿ ಬೆಳೆದು ಅನಂತರ ರೈರಿಗೆ ವಿತರಿಸಲಾಗಿದೆ. ರೋಗ ನಿರೋಧಕ ತಳಿಗಳೂ ಸಹ ಬೇಸಾಯಕ್ಕೆ ಬಂದಿವೆ. ಅಧಿಕ ಇಳುವರಿಯ ಜೊತೆಗೆ ಉತ್ತಮ ಗುಣಮಟ್ಟ, ಬೀಜ ಕಡಿಮೆ ಇರುವುದು ಹಾಗೂ ಕೀಟ ಮತ್ತು ರೋಗ ನಿರೋಧಕ ಸಾಮರ್ಥ್ಯಗಳಿಂದ ಕೂಡಿರುವ ತಳಿಗಳು ಬೇಕಾಗಿವೆ. ಈ ದಿಶೆಯಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮುಂತಾದುವು ಗಮನಾರ್ಹ ಪ್ರಗತಿ ಸಾಧಿಸಿವೆ. ಕಲ್ಲಂಗಡಿಯಲ್ಲಿನ ಮುಖ್ಯತಳಿ ಹಾಗೂ ಮಿಶ್ರತಳಿಗಳು ಹೀಗಿವೆ :

. ಅಷಾಹಿಯಮಟೊ : ಇದು ಮಧ್ಯಮಾವಧಿ ತಳಿ; ಜಪಾನ್ ದೇಶದ್ದು, ಬಿತ್ತನೆಯಾದ ಸುಮಾರು ೯೫ ದಿನಗಳಲ್ಲಿ ಹಣ್ಣು ಕೊಯ್ಲಿಗೆ ಬರುತ್ತವೆ. ಹಣ್ಣು ಸಾಧಾರಣ ದೊಡ್ಡವಿದ್ದು ೬-೭ ಕಿ.ಗ್ರಾಂ. ಗಳಷ್ಟು ತೂಗುತ್ತವೆ. ಸಿಪ್ಪೆಯ ಬಣ್ಣ ತೆಳು ಹಸಿರು; ಮೇಲೆಲ್ಲಾ ಕಲೆಗಳಿರುತ್ತವೆ. ತಿರುಳಿನ ಬಣ್ಣ ಕಡುಗೆಂಪು; ರುಚಿಯಲ್ಲಿ ಮಧುರ, ಬೀಜ ಸಣ್ಣವು. ಇದನ್ನು ಎಲ್ಲಾ ಕಡೆ ಬೆಳೆಯಬಹುದು.

. ಷುಗರ್ಬೇಬಿ : ಬಹು ಬೇಗ ಕೊಯ್ಲಿಗೆ ಬರುತ್ತದೆ. ಇದು ಅಮೆರಿಕಾ ದೇಶದ ತಳಿ. ಬಿತ್ತನೆ ಮಾಡಿದ ಸುಮಾರು ೭೫ ದಿನಗಳಲ್ಲಿ ಹಣ್ಣು ಕೊಯ್ಲಿಗೆ ಸಿದ್ದವಿರುತ್ತವೆ. ಹಣ್ಣು ಗಾತ್ರದಲ್ಲಿ ಸಾಧಾರಣ ದೊಡ್ಡವಿದ್ದು ಸರಾಸರಿ ೪-೬ ಕಿ.ಗ್ರಾಂ ತೂಗುತ್ತವೆ. ಹಣ್ಣು ಗುಂಡಗಿರುತ್ತವೆ. ಸಿಪ್ಪೆ ನೀಲಿಗಪ್ಪು ಬಣ್ಣದ್ದು. ತಿರುಳು ಕಡುಗೆಂಪು ಬಣ್ಣದ್ದಿದ್ದು ತಿನ್ನಲು ಮಧುರವಾಗಿರುತ್ತದೆ.

. ಅರ್ಕಾಮಾಣಿಕ್ : ಇದು ಮಿಶ್ರತಳಿ. ಐಎಚ್‌ಆರ್-೨೧ ಮತ್ತು ಕ್ರಿಮ್ಸನ್‌ಸ್ವೀಟ್ ತಳಿಗಳನ್ನು ಸಂಕರಿಸಿ ಇದನ್ನು ಅಭಿವೃದ್ಧಿ ಪಡಿಸಿದೆ. ಹಣ್ಣು ಗುಂಡಗೆ ಇಲ್ಲವೇ ಸ್ವಲ್ಪ ಉದ್ದನಾಗಿ ಅಂಡಾಕಾರವಿರುತ್ತವೆ. ಸಿಪ್ಪೆ ಹಸುರು ಬಣ್ಣ, ಮೇಲೆಲ್ಲಾ ಉದ್ದನಾದ ಮೂಲೆಗಳಿಂದ ಕೂಡಿದ ಪಟ್ಟಿಗಳನ್ನು ಹೊಂದಿರುತ್ತದೆ. ತಿರುಳು ದಟ್ಟ ಕುಂಕುಮ ಬಣ್ಣವಿದ್ದು ಹರಳುಗಳಂತಿರುತ್ತದೆ. ತಿರುಳಿನ ಒಟ್ಟು ಕರಗಿದ ಘನಪದಾರ್ಥಗಳ ಪ್ರಮಾಣ ಶೇಕಡಾ ೧೨ ರಿಂದ ೧೫ ರಷ್ಟು ಇದ್ದು ತಿನ್ನಲು ಸ್ವಾದಿಷ್ಟವಾಗಿರುತ್ತದೆ. ಬಿತ್ತನೆ ಮಾಡಿದ ೧೦೦ ರಿಂದ ೧೧೦ ದಿನಗಳಲ್ಲಿ ಹಣ್ಣು ಕೊಯ್ಲಿಗೆ ಬರುತ್ತವೆ. ಈ ತಳಿಯ ವಿಶಿಷ್ಟ ಗುಣವೆಂದರೆ ಚಿಬ್ಬುರೋಗ, ಬೂದಿರೋಗ ಹಾಗೂ ತುಪ್ಪುಳಿನ ರೋಗಗಳಿಗೆ ನಿರೋಧಕವಿರುವುದು. ಬಿಡಿ ಹಣ್ಣು ಸುಮಾರು ೬ ಕಿ.ಗ್ರಾಂ ತೂಗುತ್ತವೆ. ಹಣ್ಣುಗಳ ಸಂಗ್ರಹಣಾ ಗುಣ ಉತ್ತಮವಿದ್ದು ದೂರದ ಮಾರುಕಟ್ಟೆಗಳಿಗೆ ಸಾಗಿಸಬಹುದು. ಈ ಮಿಶ್ರ ತಳಿ ಹೆಕ್ಟೇರಿಗೆ ೬೦ ಟನ್‌ಹಣ್ಣನ್ನು ಉತ್ಪಾದಿಸಬಲ್ಲದು. ಇದು ಕರ್ನಾಟಕದಲ್ಲಿ ಹಿಂಗಾರು ಹಾಗೂ ಬೇಸಿಗೆಗಳಿಗೆ ಸೂಕ್ತವಿರುತ್ತದೆ.

. ಅರ್ಕಾಜ್ಯೋತಿ : ಅದೂ ಸಹ ಮಿಶ್ರತಳಿಯೆ, ರಾಜಾಸ್ತಾನದ ಐಎಚ್‌ಆರ್-೨೦ ಮತ್ತು ಕ್ರಿಮ್ಸನ್‌ಸ್ವೀಟ್ ತಳಿಗಳ ಸಂಕರಣ. ಬೇಗ ಕೊಯ್ಲಿಗೆ ಬರುತ್ತದೆ. ಬಿಡಿ ಹಣ್ಣು ೬-೮ ಕಿ.ಗ್ರಾಂ ತೂಗುತ್ತವೆ. ಹಣ್ಣು ಆಕಾರದಲ್ಲಿ ಗುಂಡಗಿರುತ್ತವೆ. ಸಿಪ್ಪೆಯ ಬಣ್ಣ ತೆಳು ಹಸುರು. ಅದರ ಮೇಲೆ ದಟ್ಟ ಹಸಿರು ಪಟ್ಟೆಗಳಿರುತ್ತವೆ. ತಿರುಳು ದಟ್ಟ ಕೆನ್ನೀಲಿ ಬಣ್ಣವಿದ್ದು ತಿನ್ನಲು ಸಿಹಿಯಾಗಿರುತ್ತದೆ. ತಿರುಳಿನ ಒಟ್ಟು ಕರಗಿದ ಘನಪದಾರ್ಥಗಳ ಪ್ರಮಾಣ ಶೇಕಡಾ ೧೨ ರಿಂದ ೧೪ ರಷ್ಟು. ಇದು ಅತ್ಯಧಿಕ ಫಸಲು ಕೊಡುವ ಮಿಶ್ರ ತಳಿ. ಹೆಕ್ಟೇರಿಗೆ ೮೦ ಟನ್ನುಗಳಷ್ಟು ಫಸಲು ಸಾಧ್ಯ. ಹಣ್ಣುಗಳ ಸಂಗ್ರಹಣಾ ಮತ್ತು ಸಾಗಾಣಿಕೆ ಗುಣಗಳು ಉತ್ಕೃಷ್ಟವಿರುತ್ತವೆ.

. ಪೂಸಾಬೆಡಾನ : ಇದು ಬೀಜರಹಿತ ಮಿಶ್ರತಳಿ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಕೊಡುಗೆ. ಅಮೆರಿಕಾದ ಟೆಟ್ರ-೨ ಮತ್ತು ಸ್ಥಳೀಯ ಶುದ್ಧೀಕರಿಸಿದ ರಸ್ಸಲ್ ಬಗೆಗಳನ್ನು ಸಂಕರಿಸಿ ವೃದ್ಧಿಪಡಿಸಲಾಗಿದೆ. ತಿರುಳು ದಟ್ಟ ಕೆನ್ನೀಲಿ ಬಣ್ಣವಿದ್ದು ತಿನ್ನಲು ಸಿಹಿಯಾಗಿರುತ್ತದೆ.

. ನ್ಯೂ ಹ್ಯಾಂಪ್ ಷೈರ್ ಮಿಡ್ಜೆಟ್ : ಇದು ಅಮೆರಿಕಾದ ತಳಿ; ಬೇಗ ಕೊಯ್ಲಿಗೆ ಬರುತ್ತದೆ. ಬಿಡಿ ಹಣ್ಣು ೧.೫-೨.೦ ಕಿ.ಗ್ರಾಂ ತೂಗುತ್ತವೆ. ಆಕಾರದಲ್ಲಿ ಮೊಟ್ಟೆಯಂತೆ. ಸಿಪ್ಪೆ ಹೊಳಪು ಹಸಿರು ಬಣ್ಣವಿದ್ದು ಮೇಲೆ ಉದ್ದಕ್ಕೆ ದಟ್ಟ ಹಸುರಿನ ಕಲೆಗಳನ್ನು ಹೊಂದಿರುತ್ತದೆ. ತಿರುಳಿನ ಬಣ್ಣ ಕೆಂಪು ಹೂಗಳಲ್ಲಿ ಪರಾಗಸ್ಪರ್ಶವೇರ್ಪಟ್ಟು ೨೮ ರಿಂದ ೩೦ ದಿನಗಳಲ್ಲಿ ಹಣ್ಣು ಕೊಯ್ಲಿಗೆ ಸಿದ್ಧ. ಕೈ ತೋಟಗಳಿಗೆ ಸೂಕ್ತ ತಳಿ.

. ಮಧು : ಇದು ಬೆಂಗಳೂರಿನ ಇಂಡೋ-ಅಮೇರಿಕನ್ ಹೈಬ್ರಿಡ್‌ಸೀಡ್ಸ್ ಕಂಪೆನಿಯ ಕೊಡುಗೆ. ಅಧಿಕ ಇಳುವರಿಯ ತಳಿ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ೨.೫-೩.೦ ಮೀ. ಗೊಂದರಂತೆ ಪಾತಿಗಳನ್ನು ತಯಾರಿಸಿ ಪಾತಿಗಳ ನಡುವೆ ೯೦ ಸೆಂ.ಮೀ. ಅಂತರ ಇರಬೇಕು. ಪೂರ್ಣಪ್ರಮಾಣದ ತಿಪ್ಪೆಗೊಬ್ಬರ, ಅರ್ಧಭಾಗ ಸಾರಜನಕ ಮತ್ತು ಪೂರ್ಣ ಪ್ರಮಾಣದ ರಂಜಕ ಹಾಗೂ ಪೊಟ್ಯಾಷ್ ಸತ್ವಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ಪ್ರತಿ ಕುಳಿಗೆ ೪-೫ ಬೀಜ ಬಿತ್ತಬೇಕು. ಅವು ೧೦-೧೨ ದಿನಗಳಲ್ಲಿ ಮೊಳೆಯುತ್ತವೆ. ಆಗ ಒಂದು ಕುಳಿಗೆ ಒಂದು ಇಲ್ಲವೇ ಎರಡು ಸಸಿಗಳನ್ನು ಉಳಿಸಿಕೊಂಡು ಮಿಕ್ಕವುಗಳನ್ನು ಕಿತ್ತುಹಾಕಬೇಕು. ಬೀಜಗಳ ಮೇಲಿನ ಸಿಪ್ಪೆ ಗಡುಸಾಗಿದ್ದು ನೆನೆಸಿಟ್ಟರೆ, ಬೇಗ ಮೊಳೆಯುತ್ತವೆ. ಹೆಕ್ಟೇರಿಗೆ ೭೫೦ ಗ್ರಾಂ ಗಳಿಂದ ೧.೧೨೫ ಕಿ.ಗ್ರಾಂ ಬೀಜ ಬೇಕಾಗುತ್ತವೆ. ಮಿಶ್ರತಳಿಗಳಲ್ಲಿ ಕಡಿಮೆ ಬೀಜ ಇದ್ದರೂ ಸಾಕು. ಬಿತ್ತನೆಗೆ ಮುಂಚೆ ಶೇಕಡಾ ೦.೧ ಕಾರ್ಬೆಂಡಜಿಂ ದ್ರಾವಣದಲ್ಲಿ ಅದ್ದಿ, ಬೀಜೋಪಚಾರ ಮಾಡಬೇಕು.

ಗೊಬ್ಬರ : ಕಲ್ಲಂಗಡಿ ಬೆಳೆಗೆ ಹೆಕ್ಟೇರಿಗೆ ೨೫ ಟನ್ ತಿಪ್ಪೆಗೊಬ್ಬರ, ೧೦೦ ಕಿ.ಗ್ರಾಂ ಸಾರಜನಕ, ೮೭.೫ ಕಿ.ಗ್ರಾಂ ರಂಜಕ ಮತ್ತು ೧೦೦ ಕಿ.ಗ್ರಾಂ ಪೊಟ್ಯಾಷ್ ಸತ್ವಗಳನ್ನು ಶಿಫಾರಸು ಮಾಡಿದೆ.

ನೀರಾವರಿ : ಈ ಬೆಳೆಗೆ ಹದವರಿತು ನೀರು ಕೊಡಬೇಕು. ಹವಾ ಮತ್ತು ಭೂಗುಣಗಳನ್ನನುಸರಿಸಿ ೪ ರಿಂದ ೬ ದಿನಗಳಿಗೊಮ್ಮೆ ನೀರು ಕೊಡಬೇಕಾಗುತ್ತದೆ. ನದೀ ದಂಡೆಗಳು ಹಾಗೂ ಕೆರೆ ಅಂಗಳಗಳಲ್ಲಿ ಬೆಳೆದಾಗ ನೀರು ಕೊಡುವ ರೂಢಿ ಇಲ್ಲ. ಕಾಯಿ ಬಲಿತು ಪಕ್ವಗೊಳ್ಳುವ ದಿನಗಳಲ್ಲಿ ಹೆಚ್ಚು ನೀರನ್ನು ಕೊಟ್ಟರೆ ಅವು ಒಡೆದು ಸೀಳುವ ಸಾಧ್ಯತೆ ಇರುತ್ತದೆ.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆಗಳನ್ನು ಕಿತ್ತು ಬಿತ್ತನೆಯಾದ ಸುಮಾರು ಒಂದು ತಿಂಗಳ ನಂತರ ಉಳಿದ ಅರ್ಧಭಾಗ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು. ಅದೇ ಸಮಯಕ್ಕೆ ಸಸಿಗಳ ಸುಳಿಯನ್ನು ಚಿವುಟಿ ಹಾಕಬೇಕು. ಹೀಗೆ ಮಾಡುವುದರಿಂದ ಕವಲು ರೆಂಬೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತವೆ. ಹೂವು ಪರಾಗಸ್ಪರ್ಶಗೊಂಡು ಕಾಯಿಕಚ್ಚಿದ ನಂತರ ಅಗತ್ಯಕ್ಕಿಂತ ಹೆಚ್ಚಿನ ಹೀಚುಗಳನ್ನು ಕಿತ್ತು ತೆಳುಗೊಳಿಸಬೇಕು. ಅದರಿಂದ ಕಾಯಿಗಳು ಗಾತ್ರದಲ್ಲಿ ಹಿಗ್ಗುತ್ತವೆ. ಕಾಯಿಗಳು ಬೆಳೆದು ಬಲಿತಂತೆಲ್ಲಾ ನೆಲಭಾಗಕ್ಕೆ ತಾಕುವ ಪಾರ್ಶ್ವ ಬೆಳ್ಳಗಾಗಿ ನೋಡಲು ಆಕರ್ಷಕವಿರುವುದಿಲ್ಲ. ಅಂತಹ ಕಾಯಿಗಳ ತಳಭಾಗದಲ್ಲಿ ಒಣಹುಲ್ಲು ಹರಡಿ ಮೆತ್ತೆ ಒದಗಿಸಬೇಕು.

ಕೊಯ್ಲು ಮತ್ತು ಇಳುವರಿ : ತಳಿಯನ್ನನುಸರಿಸಿ ಬಿತ್ತನೆಯಾದ ೭೫ ರಿಂದ ೧೧೦ ದಿನಗಳಲ್ಲಿ ಹಣ್ಣುಗಳನ್ನು ಕೊಯ್ಲು ಮಾಡಬಹುದು. ಕಾಯಿಗಳು ಬಲಿತು ಪಕ್ವಗೊಳ್ಳುವ ಕಾಲಕ್ಕೆ, ಹಣ್ಣುಗಳ ಬುಡಭಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಣ್ಣುಗಳ ಮೇಲೆ ಬೆರಳ ತುದಿಯಿಂದ ಲಘುವಾಗಿ ಬಡಿದರೆ ಒಂದು ವಿಧವಾದ ಶಬ್ಧ ಕೇಳಿಬರುತ್ತದೆ. ನುಲಿಬಳ್ಳಿಗಳು ಒಣಗಲು ಪ್ರಾರಂಭಿಸುತ್ತವೆ. ಬೆಳಗಿನ ತಂಪು ಹೊತ್ತಿನಲ್ಲಿ ಪೂರ್ಣ ಬಲಿತು ಪಕ್ವಗೊಂಡ ಹಣ್ಣುಗಳನ್ನು ಮಾತ್ರವೇ ಜೋಪಾನವಾಗಿ ಸ್ವಲ್ಪ ಭಾಗ ತೊಟ್ಟಿನೊಂದಿಗೆ ಕಿತ್ತು ತೆಗೆಯಬೇಕು. ಇದಕ್ಕೆ ಹರಿತವಿರುವ ಚಾಕು ಅಥವಾ ಕುಡುಗೋಲು ಇದ್ದರೆ ಉತ್ತಮ. ಕೊಯ್ಲು ಮಾಡಿದ ಹಣ್ಣುಗಳನ್ನು ಜೋಪಾನವಾಗಿ ಸಾಗಿಸಿ ಮಾರಾಟ ಮಾಡಬೇಕು. ಹಾಗೆಯೇ ದಾಸ್ತಾನು ಮಾಡಿಟ್ಟರೆ ಅವು ಸುಮಾರು ೧೦-೧೨ ದಿನಗಳವರೆಗೆ ಚೆನ್ನಾಗಿರಬಲ್ಲವು. ಶೈತ್ಯಾಗಾರಗಳಲ್ಲಿ ಜೋಪಾನ ಮಾಡಿದರೆ ಇನ್ನೂ ಹೆಚ್ಚು ಕಾಲ ಸುಸ್ಥಿತಿಯಲ್ಲಿರಬಲ್ಲವು. ತಳಿಯನ್ನನುಸರಿಸಿ ಹೆಕ್ಟೇರಿಗೆ ೩೫ ರಿಂದ ೫೦ ಟನ್ ಇಳುವರಿ ಸಾಧ್ಯ. ಮಿಶ್ರ ತಳಿಗಳಲ್ಲಿ ಇದರ ಪ್ರಮಾಣ ಹೆಕ್ಟೇರಿಗೆ ೭೫ ಟನ್ನುಗಳಷ್ಟಿರುತ್ತದೆ.

ಕೀಟ ಮತ್ತು ರೋಗಗಳು :

. ಸಸ್ಯಹೇನು : ಇವು ಗುಂಪು ಗುಂಪಾಗಿದ್ದು, ಸಸ್ಯಭಾಗಗಳನ್ನು ಕಚ್ಚಿ ರಸ ಹೀರುತ್ತವೆ. ಅಂತಹ ಭಾಗಗಳು ಬಲಹೀನಗೊಂಡು, ಸುರುಟಿಗೊಳ್ಳುತ್ತವೆಯಲ್ಲದೆ ತೀವ್ರ ಹಾನಿ ಇದ್ದಾಗ ಸಾಯುತ್ತವೆ.

. ಕುಂಬಳದ ದುಂಬಿ : ಇವುಗಳ ಎಳೆಯ ಮರಿಗಳು ಮಣ್ಣೊಳಗಿದ್ದು ಬೇರುಗಳನ್ನು ಕಚ್ಚಿ ಗಾಯ ಮಾಡಿದರೆ, ಪ್ರಾಯದ ದುಂಬಿಗಳು ಎಲೆಗಳನ್ನು ಕಚ್ಚಿ ತಿನ್ನುತ್ತವೆ. ಹಾಗಾಗಿ ಎಲೆಗಳಲ್ಲಿ ಹಲವಾರು ರಂಧ್ರಗಳು ಕಂಡುಬರುತ್ತವೆ.

ಈ ಎರಡೂ ಕೀಟಗಳ ಹತೋಟಿಗೆ ಬಿತ್ತನೆಯಾದ ನಂತರ ೧೦ ಲೀಟರ್ ನೀರಿಗೆ ೪೦ ಗ್ರಾಂ ಕಾರ್ಬರಿಲ್ ಬೆರೆಸಿ, ಸಿಂಪಡಿಸಬೇಕು. ಹೆಕ್ಟೇರಿಗೆ ೩೫೦ ಲೀಟರ್ ದ್ರಾವಣ ಬೇಕಾಗುತ್ತದೆ.

. ಹಣ್ಣಿನ ನೊಣ : ಪ್ರಾಯದ ಹೆಣ್ಣು ನೊಣಗಳು ಎಳೆಯ ಹೀಚುಗಳಲ್ಲಿ ತಮ್ಮ ಅಂಡನಾಳ ಚುಚ್ಚಿ ಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದು ಹೊರಬಂದ  ಮರಿಹುಳುಗಳು ತಿರುಳನ್ನು ತಿಂದು ಆ ಭಾಗ ಕೊಳೆಯವಂತೆ ಮಾಡುತ್ತವೆ. ಅಂತಹ ಹೀಚುಗಳು ಬಳ್ಳಿಯಿಂದ ಉದುರಿಬೀಳುತ್ತವೆ. ಇವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೧೦ ಮಿ.ಲೀ. ಮೆಟಾಸಿಡ್ ಹಾಗೂ ೧೦೦ ಗ್ರಾಂ ಬೆಲ್ಲ ಅಥವಾ ಸಕ್ಕರೆ ಬೆರೆಸಿ ಸಿಂಪಡಿಸಿದರೆ ಅವು ಸಾಯುತ್ತವೆ. ಈ ಮಿಶ್ರಣಕ್ಕೆ ಐದಾರು ತೊಟ್ಟು ಮೀಥೈಲ್ ಯೂಜೆನಾಲ್ ಅಥವಾ ಸಿಟ್ರೊನೆಲ್ಲ ತೈಸಿ ಬೆರೆಎಸಿ ಅಲ್ಲಲ್ಲಿ ಇಟ್ಟರೆ ಅವು ಕುಡಿದು ಸಾಯುತ್ತವೆ.

. ಬಾಡುವ ರೋಗ : ಗಿಡಗಳು ಇದ್ದಕ್ಕಿದ್ದಂತೆ ಬಾಡಿ ಸಾಯುತ್ತವೆ. ಅಂತಹ ಗಿಡಗಳನ್ನು ಬೇರು ಸಹಿತ ಕಿತ್ತು ನಾಶಗೊಳಿಸಬೇಕು. ಅಂತಹ ಜಮೀನಿನಲ್ಲಿ ಕಲ್ಲಂಗಡಿ ಅಥವಾ ಆ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಬೆಳೆಯನ್ನು ಬೆಳೆಯಬಾರದು. ಇತರ ತರಕಾರಿ ಬೆಳೆಗಳೊಂದಿಗೆ ಸೂಕ್ತ ಪರಿವರ್ತನೆ ಅನುಸರಿಸುವುದು ಒಳ್ಳೆಯ ಪದ್ಧತಿ. ನಿರೋಧಕ ತಳಿಗಳನ್ನು ಬೆಳೆಯಬೇಕು.

. ಚಿಬ್ಬುರೋಗ : ಈ ರೋಗ ಕಾಣಿಸಿಕೊಂಡಾಗ ಎಲೆ ಮತ್ತು ಹೀಚುಗಳ ಮೇಲೆ ಕುಸಿದ ಬೊಕ್ಕೆಗಳು ಉಂಟಾಗುತ್ತವೆ. ಅವುಗಳ ಸುತ್ತಂಚು ಉಬ್ಬಿರುತ್ತದೆ. ಹಾನಿಗೀಡಾದ ಭಾಗಗಳು ಸ್ವಲ್ಪ ಕಾಲದಲ್ಲಿಯೇ ವಿಕಾರಗೊಂಡು ದಿನಕಳೆದಂತೆ ಉದುರಿ ಬೀಳುತ್ತವೆ. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೩೦ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿ ಬೆಳೆಯ ಮೇಲೆ ಸಿಂಪಡಿಸಬೇಕು.

. ತುಪ್ಪುಳಿನ ರೋಗ : ಚಿಗುರೆಲೆಗಳ ತಳಭಾಗ, ಚಿಗುರುಕುಡಿಗಳು, ಹೂವು, ಹೀಚು ಮುಂತಾಗಿ ನೀರಿನಲ್ಲಿ ಅದ್ದಿದಂತಹ ಭಾಗಗಳು ಕಾಣಿಸಿಕೊಂಡು ನಂತರ ತುಪ್ಪಳದಂತಹ ಬೆಳವಣಿಗೆ ಕಂಡುಬರುತ್ತದೆ. ಇದರಿಂದ ಬಹಳಷ್ಟು ನಷ್ಟ ಸಂಭವಿಸುತ್ತದೆ. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೬೦ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿ ಸಿಂಪಡಿಸಬೇಕು.

. ಬೂದಿರೋಗ : ಎಲೆಗಳು, ಕುಡಿಭಾಗಗಳು, ಹೂವು ಮತ್ತು ಹೀಚುಗಳ ಮೇಲೆ ಬೂದಿಯಂತಹ ನವಿರಾದ ಧೂಳು ಕಂಡುಬರುತ್ತದೆ. ಅವೆಲ್ಲವೂ ಶಿಲೀಂಧ್ರ ರೋಗಾಣುಗಳೇ. ಅಂತಹ ಭಾಗಗಳು ತಮ್ಮ ವಾಸ್ತವ ಬಣ್ಣ ಕಳೆದುಕೊಂಡು ನಂತರ ಸಾಯುತ್ತವೆ. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೧೦ ಗ್ರಾಂ ದಿನಕಾಪ್ ಬೆರೆಸಿ ಎರಡು ವಾರಗಳಿಗೊಮ್ಮೆ ಸಿಂಪಡಿಸಬೇಕು. ಎರಡು ಸಾರಿಯಾದರೂ ಸಿಂಪಡಿಸಬೇಕಾಗುತ್ತದೆ. ಹೆಕ್ಟೇರಿಗೆ ಸುಮಾರು ೭೦೦ ಲೀಟರ್ ದ್ರಾವಣ ಬೇಕಾಗುತ್ತದೆ.

. ಸೊರಗು ರೋಗ : ಈ ರೋಗ ತಗುಲಿದ ಬಳ್ಳಿಯ ಎಲೆಗಳು ಸೊರಗಿ ಸಾಯುತ್ತವೆ. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೨೫ ಗ್ರಾಂ ಮ್ಯಾಂಕೊಜೆಬ್ ಬೆರೆಸಿ ಸಿಂಪಡಿಸಬೇಕು.

ಬೀಜೋತ್ಪಾದನೆ : ಕಲ್ಲಂಗಡಿ ಪರಕೀಯ ಪರಾಗಸ್ಪರ್ಶದ ಬೆಳೆ. ಯಾವುದೇ ಎರಡು ತಳಿಗಳ ನಡುವೆ ಮೂಲಬೀಜಕ್ಕಾದರೆ ೮೦೦ ಮೀಟರ್ ಮತ್ತು ಪ್ರಮಾಣೀಕೃತ ಬೀಜಕ್ಕಾದರೆ ೪೦೦ ಮೀಟರ್ ಅಂತರ ಇರಬೇಕು. ಹೆಕ್ಟೇರಿಗೆ ೫೦೦-೬೦೦ ಕಿ.ಗ್ರಾಂ. ಗಳಷ್ಟು ಬೀಜ ಸಾಧ್ಯ.

* * *