ಬೆಟ್ಟಗುಡ್ಡಗಳನ್ನು ಸುತ್ತಾಡುವಾಗ ವೈವಿಧ್ಯಮಯ ಸಸ್ಯ ಸಂಪತ್ತು ನಮ್ಮನ್ನು ಆಕರ್ಷಿಸದೇ ಇರಲಾರದು. ಕೆಲವೊಂದು ಬೃಹತ್ ಗಾತ್ರದವಾದರೆ, ಇನ್ನು ಕೆಲವು ಅತೀ ಚಿಕ್ಕವೂ ಆಗಿವೆ. ಹಚ್ಚ ಹಸಿರಿನಿಂದ ಕೂಡಿದ, ಹೂ ಹಣ್ಣುಗಳಿಂದ ನಳನಳಿಸುವ ಸಸ್ಯ ಸಂಪತ್ತು ಒಂದೆಡೆಯಾದರೆ, ಸಸ್ಯಗಳೇ ಅಲ್ಲವೇ ಎನ್ನುವಂತಹ ಜೀವಿವೈವಿಧ್ಯ ತುಂಬಾ ಕುತೂಹಲವನ್ನುಂಟು ಮಾಡುತ್ತದೆ. ಹೌದು! ತೃಪ್ತಿಕರವಾದ ತೇವಾಂಶ, ಮಿತವಾದ ಉಷ್ಣತೆ, ನೇರ ಸೂರ್ಯನ ಬೆಳಕು, ಇಂತಹ ತಂಪಾದ ವಾತಾವರಣದಲ್ಲಿ ‘ಅರಳಿ’ನಿಲ್ಲುವ ‘ಕಲ್ಲುಹೂ’ (Lichens)ಗಳು ಆಕರ್ಷಕವಾಗಿರುತ್ತವೆ.

ಕಲ್ಲು ಹೂಗಳಲ್ಲಿ 15,000ಪ್ರಭೇದಗಳಿವೆ, ಇವು ಎಲೆಗಳು, ರೆಂಬೆ-ಕೊಂಬೆಗಳು, ಹಳೆಯ ಮರದ ದಿಮ್ಮಿಗಳು ಹಾಗೂ ಅನಾಚ್ಛಾದಿತ ಕಲ್ಲು ಬಂಡೆಗಳ ಮೇಲೆ ಬೆಳೆಯುತ್ತವೆ. ಸದಾ ಮಳೆ ಬೀಳುವ ಪ್ರದೇಶ ಹಾಗೂ ತೇವಾಂಶಭರಿತ ತಂಪು ಪ್ರದೇಶಗಳಲ್ಲಿ ಇವು ಹೇರಳವಾಗಿರುತ್ತವೆ.

‘ಕಲ್ಲು ಹೂ’ಎರಡು ಪ್ರತ್ಯೇಕ ಸಸ್ಯಗಳ ಕೂಡುವಿಕೆಯಿಂದ ಉಂಟಾದ ಸಸ್ಯ ಸಂಪತ್ತು. ಪಾಚಿ (Alga)ಮತ್ತು ಶಿಲೀಂಧ್ರ(Fungi)ಗಳ ಆತ್ಮೀಯ ಸಂಬಂಧ ಈ ಹೊಸದೊಂದು ಸಸ್ಯದ ಉಗಮಕ್ಕೆ ಕಾರಣವಾಗಿದೆ. ಪಾಚಿಕೋಶಗಳನ್ನು ಸುತ್ತುವರೆದಿರುವ ಶಿಲಿಂಧ್ರವು ಜೊತೆಯಾಗಿ ಬೆಳೆದು ಸ್ಪಷ್ಟ ಆಂತರಿಕ ರಚನೆಯೊಂದಿಗೆ ನಿರ್ದಿಷ್ಟ ರೂಪ ಪಡೆದಿದೆ. ‘ಕಲ್ಲುಹೂ’ಗಳನ್ನು ಅವುಗಳ ರಚನೆ ಆಧರಿಸಿ ಮೂರು ವಿಧಗಳಲ್ಲಿ ಗುರುತಿಸಲಾಗಿದೆ. ಚಪ್ಪಟೆಯಾದ ಹಾಗೂ ಆಧಾರಕ್ಕೆ ಅಂಟಿಕೊಂಡಿರುವ ‘ಫ್ರಕ್ಟೋಸ್’ವಿವಿಧ ರೂಪ ಹಾಗೂ ಬಣ್ಣಗಳನ್ನು ಹೊಂದಿವೆ. ‘ಫೋಲಿಯೋಸ್’ ಎಂಬ ಇನ್ನೊಂದು ಬಗೆಯ ಕಲ್ಲುಹೂಗಳಲ್ಲಿ ಎಲೆ ಆಕಾರದ ರಚನೆಯ ಅನಿಯಮಿತ ಮಡಿಕೆಗಳು ಆಧಾರಕ್ಕೆ ಅಂಟಿಕೊಂಡಿರುತ್ತವೆ. ಮೂರನೇ ಬಗೆಯಾದ ‘ಫ್ರುಟಿಕೋಸ್’ಕಲ್ಲುಹೂಗಳ ದೇಹ ರಚನೆ ಬಹಳಷ್ಟು ಶಾಖೆಗಳಾಗಿ (Branch)ಒಡೆದಿದ್ದು, ರಿಬ್ಬನ್ ತರಹದ ಚಪ್ಪಟೆ ರಚನೆಗಳು ಆಧಾರಕ್ಕೆ ಅಂಟಿಕೊಂಡಿರುತ್ತವೆ.

ಶಿಲೀಂಧ್ರದೊಂದಿಗೆ ಸಂಯೋಜಿತ ಗೊಂಡ ಪಾಚಿಯು ನೀಲಿ ಹಸಿರು ಪಾಚಿ (Myxophyceae) ಅಥವಾ ಹಸಿರು ಪಾಚಿ (Chlrophyceae) ಯಾಗಿರುತ್ತದೆ. ಏಕೆಂದರೆ ಇಲ್ಲಿ ಆಹಾರ ತಯಾರಿಕೆಗೆ ಹರಿತ್ತಿನ ಅವಶ್ಯಕತೆ ಇರುತ್ತದೆ. ಶಿಲೀಂಧ್ರವು ತೇವಾಂಶವನ್ನು ಹೀರುವುದರ ಜೊತೆಗೆ ಪಾಚಿಗೆ ಆಧಾರ ಒದಗಿಸಿದರೆ, ಪಾಚಿಯು ಅವಶ್ಯಕ ಕಾರ್ಬೊಹೈಡ್ರೇಟ್‌ಗಳನ್ನು  ಒದಗಿಸುತ್ತದೆ.  ಹೀಗೆ ಇವು ಆಹಾರ ತಯಾರಿಸಿ, ಪರಸ್ಪರ ಕೂಡಿ ಬದುಕುತ್ತವೆ. ಈ ರೀತಿಯ ಸಹಜೀವನ (Symbiosis)ಕ್ಕೆ ‘ಹೆಲಿಯೋಟಿಸಮ್’ (Heliotism)ಎನ್ನುತ್ತಾರೆ.

‘ಕಲ್ಲುಹೂ’ಗಳ ಈ ಸ್ವಭಾವ ನಿಜಕ್ಕೂ ಚರ್ಚೆಯ ವಿಷಯ. ಪಾಚಿ ಶಿಲೀಂಧ್ರಗಳು ಸಮ್ಮಿಳಿತಗೊಳ್ಳುವ ಈ ಸ್ವಭಾವ ಅವುಗಳ ‘ಪರಾವಲಂಬನೆ’ (Parasitic nature)ಯನ್ನು ಸೂಚಿಸುತ್ತದೆ ಎನ್ನುವವರು ಕೆಲವರಾದರೆ, ಮತ್ತೆ ಕೆಲವರು ಇದು ಅವುಗಳ  ‘ಸಹಜೀವನ’ (Symbiotic nature)ದ ಸಂಕೇತ ಎನ್ನುತ್ತಾರೆ. ಅದೇನೇ ಇರಲಿ ನಿತ್ಯ ಸ್ವಾರ್ಥದಿಂದ ಬಾಳುತ್ತಿರುವ ಮನುಷ್ಯ ಇವುಗಳಿಂದ ಕೂಡಿ ಬಾಳುವುದನ್ನು ಕಲಿಯಲಿ ಎಂದು ಪ್ರಕೃತಿ ನಮಗೆ ನೀಡಿದ ಆದರ್ಶ ಸಹಜೀವನದ ಪಾಠಕ್ಕೆ ಇವು ಮಾದರಿಯಲ್ಲವೇ?