ಕರ್ನಾಟಕದ ವಿಶಿಷ್ಟವಾದ ಕಲೆ ಗಮಕ. ಆದಿಗಮಕಿಗಳೆನಿಸಿದ ಕುಶಲವರ ಕಾಲದಿಂದಲೂ, ಈ ಕಲೆ ಒಬ್ಬರಿಂದೊಬ್ಬರಿಗೆ ಪ್ರೇರಣೆಯಾಗಿ, ಸ್ಪೂರ್ತಿಯಾಗಿ ನಿರಂತರ ಹರಿದು ಬಂದು ಇಂದು ವಿಶೇಷ ಸ್ಥಾನವನ್ನು ಈ ನಾಡಿನಲ್ಲಿ ಪಡೆದಿದೆ.

ಭಾರತದ ಕೃಷ್ಣರಾಯರೆಂದೇ ಹೆಸರಾದ ಕೃಷ್ಣಗಿರಿ ಕೃಷ್ಣರಾಯರು ಗಮಕ ಕಲಾ ಪ್ರಪಂಚವನ್ನು ಪ್ರವೇಶಿಸಲು ಭಾರತವಾಚನ ಪ್ರವೀಣ ಸಂ.ಗೋ. ಬಿಂದೂರಾಯರು ಪ್ರೇರಣೆಯಾದರೆ, ಕಳಲೆ ಸಂಪತ್ಕುಮಾರಾಚಾರ್ಯರು  ಗಮಕ ಲೋಕವನ್ನು ಪ್ರವೇಶಿಸಲು ಕೃಷ್ಣಗಿರಿ ಕೃಷ್ಣರಾಯರು ಸ್ಪೂರ್ತಿದಾಯಕರಾದರು.

ಕಳಲೆ ಸಂಪತ್ಕುಮಾರಾಚಾರ್ಯರ ಬದುಕು ದಾರುಣವಾದುದು ಹಾಗೂ ವಿಸ್ಮಯವಾದುದೂ ಕೂಡ. ಅತ್ಯಲ್ಪ ಕಾಲದಲ್ಲಿ ಅತ್ಯಂತ ಶ್ರೇಷ್ಠ ಗಮಕಿಗಳಾಗಿ ಬಾಳಿದ ನಿಸ್ಸೀಮರು ಅವರು .

ಸಂಪತ್ಕುಮಾರಾಚಾರ್ಯರು ೧೯೦೩ರಲ್ಲಿ ಜನಿಸಿದರು. ಅವರ ಪೂರ್ವಿಕರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿಗೆ ಸೇರಿದ ಕಳಲೆಯವರು. ಕಳಲೆ ಗುಂಜಾ ಗೋಪಾಲಚಾರ್ಯರು ಸಂಪತ್ಕುಮಾರಾಚಾರ್ಯರ ತಂದೆ-ತಾಯಿ ರಂಗಮ್ಮ. ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ  ಇಬ್ಬರು ಗಂಡು ಮಕ್ಕಳು. ವೃತ್ತಿಯಿಂದ ವೈದಿಕರು, ಆಚಾರ್ಯರ ತಂದೆ ಕಾಲಕ್ರಮೇಣ ಕಳಲೆಯಿಂದ ಮೈಸೂರಿಗೆ ಬಂದು ಅಲ್ಲಿಯ ದೇವಾಂಬ ಅಗ್ರಹಾರದಲ್ಲಿ ನೆಲೆಸಿದರು.

ತಾಯಿ-ತಂದೆ ಹಾಗೂ ಸಂಪತ್ಕುಮಾರಾಚಾರ್ಯರ ಹತ್ತಿರದ ಸಂಬಂಧಿಗಳು ಹಾಗೂ ಚಿಕ್ಕಂದಿನ ಒಡನಾಡಿಗಳು ಬಾಲ್ಯದಲ್ಲಿ ಆಚಾರ್ಯರನ್ನು ಕರೆಯುತ್ತಿದ್ದು ‘ಕುಪ್ಪ’ ಎಂದೇ! ಕಪ್ಪನೆಯ ಬಣ್ಣದ, ದೃಢಕಾಯ ಶರೀರದ ಅವರು ಕಸದ ಕುಪ್ಪೆಯಂತೆ ಹೇಗೋ ಬೆಳೆದು ದೀರ್ಘಾಯುವಾಗಲೆಂದು ತಂದೆ-ತಾಯಿ ಮಗನನ್ನು ‘ಕುಪ್ಪ’ನೆಂದೇ ಕರೆದರೂ, ಭವಿಷ್ಯದಲ್ಲಿ ಅವರ ಮಧ್ಯಮ ವಯಸ್ಸಿನಲ್ಲಿಯೇ ಆಚಾರ್ಯರು ನಿಧನರಾದುದು ಮಾತ್ರ ವಿಧಿ ವಿಪರ್ಯಾಸ! ಆದರೆ ಆ ಹೊತ್ತಿಗೆ ಅವರು ಗಮಕ  ಕಲಾಪ್ರಪಂಚದಲ್ಲಿ ಅದ್ವಿತೀಯರಾಗಿ ಮೆರೆದಿದ್ದರೆಂಬುದು ಮಾತ್ರ ಅಷ್ಟೇ ವಿಸ್ಮಯಕರವಾದುದು.

 

ಆಚಾರ್ಯರು ತಮ್ಮ ಹತ್ತು-ಹನ್ನೊಂದರ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಢರು. ಆ ಚಿಕ್ಕವಯಸ್ಸಿನಲ್ಲಿಯೇ ಸಂಸಾರ ಸಂರಕ್ಷಣೆಯ ಭಾರವನ್ನು ಅವರು ನಿರ್ವಹಿಸಬೇಕಾಯಿತು. ಸಂಪತ್ಕುಮಾರಾಚಾರ್ಯರು ದೈವದತ್ತವಾಗಿ ತಮಗೆ ಒಲಿದು ಬಂದ ಕಂಠಶ್ರೀಯನ್ನೇ ತಮ್ಮ ಬದುಕಿನ ಮೂಲ ಬಂಡವಾಳವನ್ನಾಗಿ ಮಾಡಿಕೊಂಡರು. ದಾಸವರೇಣ್ಯರುಗಳ ದೇವರ ನಾಮಗಳನ್ನು ಚೆನ್ನಾಗಿ ಕಂಠಪಾಠ ಮಾಡಿ, ಭಾವಪೂರ್ಣವಾಗಿ ಹಾಡುವುದನ್ನು ಅಭ್ಯಾಸ ಮಾಡಿಕೊಂಡರು. ಅವರ ಹಾಡುಗಾರಿಕೆಯೇ ಅವರಿಗೆ ನಿತ್ಯ ಜೀವನ ನಿರ್ವಹಣೆಗೆ ದಾರಿಯಾಯಿತು-ಉಂಛವೃತ್ತಿಯಂತೆ!

ಹಿರಿಯರು ಕಿರಿಯರೆನ್ನದೇ, ಮಹಿಳೆಯರು-ಪುರುಷರೆನ್ನದೇ, ಆಚಾರ್ಯರ ಕಂಠಶ್ರೀಯಿಂದ  ಹಾಡು ಕೇಳಿದವರೆಲ್ಲರೂ ಭಾವಪರವಶರಾಗುತ್ತಿದ್ದರು, ತನ್ಮಯರಾಗುತ್ತಿದ್ದರು. ಮತ್ತೆ ಮತ್ತೆ ಅವರ ಹಾಡು ಕೇಳಲು ಕಾತುರರಾಗುತ್ತಿದ್ದರು. ಅವರನ್ನು ಬಾಯ್ತುಂಬ ಹರಸುತ್ತಿದ್ದರು.

 

ಸಂಪತ್ಕುಮಾರಾಚಾರ್ಯರ ವಿದ್ಯಾಭ್ಯಾಸ ನಡೆದದ್ದು ಮೈಸೂರಿನ ಶಾರದಾವಿಲಾಸ ಪ್ರೌಢಶಾಲೆಯಲ್ಲಿ. ಆ ದಿನಗಳಲ್ಲಿ ಶಾರದಾವಿಲಾಸ ಶಾಲೆಯು ಅತ್ಯಂತ ಉತ್ತಮವಾದ ಹಾಗೂ ಉದಾರತನದ ಅಧ್ಯಾಪಕರನ್ನು ಪಡೆದಿತ್ತು. ಅದು ಸಂಪತ್ಕುಮಾರಾಚಾರ್ಯರಿಗೆ ವರದಾನವಾದಂತಾಯಿತು. ಆ ಸಮಯದಲ್ಲಿ ಡಾ.ಕೆ.ಆರ್. ರಾಮಸ್ವಾಮಿಯವರು ಅಲ್ಲಿ ಅಧ್ಯಾಪಕರಾಗಿದ್ದರು. ಅವರು ಮೇಧಾವಿಗಳು, ಶಿಕ್ಷಣ ತಜ್ಞರು, ಸಂಗೀತ -ನಾಟಕಗಳಲ್ಲಿ ಅಭಿಮಾನ-ಆಸಕ್ತಿ ಉಳ್ಳವರೂ ಆಗಿದ್ದರು. ಸ್ವತಃ ನಟರೂ ಕೂಡ. ಹೀಗಾಗಿ ಆ ಶಾಲೆಯ ವಿದ್ಯಾರ್ಥಿಯಾಗಿದ್ದ ಸಂಪತ್ಕುಮಾರಾಚಾರ್ಯರ ಸಂಗೀತ ಕಲಾಭಿಜ್ಞತೆ, ಕಂಠಶ್ರೀಯನ್ನು ಗುರುತಿಸಿ ಪ್ರೋತ್ಸಾಹಿಸಿದ ಪ್ರಥಮ ಗಣ್ಯವ್ಯಕ್ತಿ ಅವರು.

ಆ ದಿನಗಳಲ್ಲಿ ಹೆಸರುವಾಸಿಯಾಗಿದ್ದ “ಚಾಮುಂಡೇಶ್ವರಿ ಕರ್ನಾಟಕ ನಾಟಕ ಸಂಘ”ಕ್ಕೆ ದಾನಶೂರ ಕರ್ಣ” ನಾಟಕವನ್ನು ರಚಿಸಿ ಪ್ರಸಿದ್ಧರಾಗಿದ್ದ ಎಂ.ಎನ್‌. ರಾಮಸ್ವಾಮಿಯವರೂ ಶಾರದ ವಿಲಾಸ ಪ್ರೌಢಶಾಲೆಯ ಮತ್ತೊಬ್ಬ ಅಧ್ಯಾಪಕರಾಗಿದ್ದರು. (ಖ್ಯಾತ ರಂಗಭೂಮಿನಟರಾಗಿದ್ದ ಕೊಟ್ಟೂರಪ್ಪನವರು. ಇದೇ ನಾಟಕದ ಕರ್ಣನ ಪಾತ್ರವನ್ನು ನಿರ್ವಹಿಸಿ ಪ್ರಖ್ಯಾತರಾಗಿದ್ದುದು ಮತ್ತೊಂದು ಸಂಗತಿ). ಎಂ.ಎನ್‌. ರಾಮಸ್ವಾಮಿಯವರು ತಮ್ಮ ‘ಯದುರಾಜವಿಜಯ” ಹಾಗೂ “ವಿದ್ಯಾರಣ್ಯವಿಜಯ” ಮುಂತಾದ ನಾಟಕಗಳಲ್ಲಿ ಸಂಪತ್ಕುಮಾರಾಚಾರ್ಯರಿಗೆ ಪ್ರಮುಖ ಪಾತ್ರಗಳನ್ನಿತ್ತು ಕಂದ, ವೃತ್ತಗಳನ್ನು ಹಾಡುವ ಅವಕಾಶವನ್ನು ಕಲ್ಪಿಸಿಕೊಟ್ಟು ಪ್ರೋತ್ಸಾಹಿಸಿದ್ದರು. ಖ್ಯಾತ ಕವಿಗಳೂ, ವಿಮರ್ಶಕರೂ ಆಗಿದ್ದ ವಿ.ಸೀತಾರಾಮಯ್ಯನವರು (ವಿ.ಸೀ.) ಕೂಡ ಆಚಾರ್ಯರ ಗುರುಗಳಾಗಿದ್ದರು. ಹೀಗೆ ಅವರ ಗುರುಪರಂಪರೆಯು ಉನ್ನತ ಶ್ರೇಣಿ ವ್ಯಕ್ತಿಗಳ ಮಾರ್ಗದಲ್ಲಿ ಹರಿದು ಬಂದಿದ್ದು, ಸರಳ ಹಾಗೂ ಸಹೃದಯ ವ್ಯಕ್ತಿಗಳ ಮಾರ್ಗದಲ್ಲಿ ಹರಿದು ಬಂದಿದ್ದು, ಸರಳ ಹಾಗೂ ಸಹೃದಯ ವ್ಯಕ್ತಿಗಳ ಸಮೂಹದಲ್ಲಿ ಸದಾ ಇದ್ದವರು ಆಚಾರ್ಯರು. ಹೀಗಾಗಿ ಅವರ ಕಲಾಪ್ರತಿಭೆ ಮತ್ತು ವಿದ್ವತ್ತು ಉನ್ನತ ಮಟ್ಟಕ್ಕೇರಲು ಕಾರಣವಾಯಿತು.

ಸಂಪತ್ಕುಮಾರಾಚಾರ್ಯರು ಮೈಸೂರು ನಗರದಲ್ಲಿ ನಡೆಯುತ್ತಿದ್ದಕ ಕಂಪನಿ ನಾಟಕಗಳನ್ನು ತಮ್ಮ ಬಾಲ್ಯದಲ್ಲಿ ಒಳಗೆ ಹೋಗಿ ನೋಡಲಾಗದೇ, ನಾಟಕ ನಡೆಯುತ್ತಿದ್ದಾಗ ತಡಕೆಯ ಗೋಡೆಗೆ ಕಿವಿಗೊಟ್ಟು, ನಾಟಕದ ಹಾಡು, ಮಾತುಗಳನ್ನು ಕೇಳಿಸಿಕೊಂಡು, ಅದೇ ಮಟ್ಟು, ರಾಗಗಳನ್ನು ಅನುಕರಿಸಿ ಹಾಡುತ್ತಿದ್ದರೆಂತೆ! ಕರ್ನಾಟಕದ ಪ್ರಸಿದ್ಧ ವೈಣಿಕರಾಗಿದ್ದ ವಿದ್ವಾನ್‌ ಎ.ಲ್‌. ರಾಜಾರಾಯರು ಮತ್ತು ಸಂಪತ್ಕುಮಾರಾಚಾರ್ಯರು ಸಹಪಾಠಿಗಳಾಗಿದ್ದವರು. ಎಲ್‌. ರಾಜಾರಾಯರು ಕೇವಲಲ ವೈಣಿಕರು, ಸಂಗೀತಗಾರರು ಮಾತ್ರವಲ್ಲ. ಅವರೊಬ್ಬ ಉತ್ತಮ ಗಮಕಿಗಳೂ ಆಗಿದ್ದರು. ಆಚಾರ್ಯರು ಮತ್ತು ರಾಜಾರಾಯರು ಇಬ್ಬರೂ ಅನೇಕ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು. ಗಮಕ ಮತ್ತು ಸಂಗೀತಗಳ ಸಂಯೋಜನೆಯಿಂದ ಇವರಿಬ್ಬರಿಂದಲೂ ಪ್ರೇಕ್ಷಕರಿಗೆ ಕರ್ಣರಸಾಯನವಾಗುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು.

ಸಂಪತ್ಕುಮಾರಾಚಾರ್ಯರು ಮೈಸೂರು ಕಾರಂಜಿ ಕೆರೆಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆಯಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು. ಅವರು ಹಾಡುವ ದೇವರ ನಾಮಗಳನ್ನು ಕೇಳಲೆಂಧೇ ಎಷ್ಟೋ ಜನರು ಭಜನಾಗೋಷ್ಠಿಗೆ ಬರುತ್ತಿದ್ದರಂತೆ! ಅವರು ದೈವಭಕ್ತರು, ಆಚಾರನಿಷ್ಠರು, ಅಭಿನಯ, ಭಜನೆ, ಹಾಡುಗಾರಿಕೆಯಲ್ಲಿ ಅತೀವ ಶ್ರದ್ಧೆ, ಸ್ನೇಹಪರಜೀವಿ ಜೊತೆಗೆ ಹಾಸ್ಯ ಪ್ರವೃತ್ತಿಯೂ ಅವರಲ್ಲಿತ್ತು. ಆಚಾರ್ಯರಂತಹ ಮಹಾಗಮಕಿಯನ್ನು ಕರ್ನಾಟಕಕ್ಕೆಕ ಕೊಡುಗೆಯಾಗಿತ೬ತ ಕೀರ್ತಿ ಮೈಸೂರು ಮಹಾರಾಜ ಕಾಲೇಜಿನ ಕರ್ನಾಟಕ ಸಂಘಕ್ಕೆ ಸಲ್ಲಬೇಕು. ಅವರು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ, ಪ್ರಸಿದ್ಧ ಅರ್ಥಶಾಸ್ತ್ರಜ್ಞರೂ ಉತ್ತಮ ಕನ್ನಡಾಭಿಮಾನಿಗಳೂ ಆಗಿದ್ದ ಎನ್‌.ಎಸ್‌. ಸುಬ್ಬರಾಯರು ಕಾಲೇಜಿನ ಮುಖ್ಯಾಧಿಕಾರಿಗಳಾಗಿದ್ದರು. ಆಚಾರ್ಯರು ವ್ಯಾಸಂಗಕ್ಕೆ ಆರಿಸಿಕೊಂಡ ವಿಷಯ ಇತಿಹಾಸ ಮತ್ತು ಅರ್ಥಶಾಸ್ತ್ರ. ಆದ್ದರಿಂದ ಎನ್‌.ಎಸ್‌. ಸುಬ್ಬರಾಯರು ಮತ್ತು ಪ್ರೊ.ಡಿಸೋಜಾ ಅವರು ಅವರ ವಿದ್ಯಾಗುರುಗಳಾಗಿದ್ದರು. ಪ್ರೊ. ಬಿ.ಎಂ.ಶ್ರೀ. ಅವರೂ ಅದೇ ಕಾಲೇಜಿನ ಮುಖ್ಯ ಪ್ರಾಧ್ಯಾಪಕರಲ್ಲಿ ಒಬ್ಬರಾಗಿದ್ದರು.

ಕನ್ನಡ ದೇವರನಾಮ, ಭಾವಗೀತೆಗಳನ್ನು  ಹಾಡುವುದರಲ್ಲಿ ಸಾಕಷ್ಟು ಅನುಭವವಿದ್ದು, ಯಶಸ್ವಿಯಾಗಿದ್ದ ಸಂಪತ್ಕುಮಾರಾಚಾರ್ಯರು ಕಾಲೇಜಿನ ಕರ್ನಾಟಕ ಸಂಘವು ಏರ್ಪಡಿಸಿದ್ದ “ಭಾರತವಾಚನ” ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದಾದರು. ಕೇಳ್ಮೆಯಿಂದಲೇ ತಮ್ಮ ಹಾಡುಗಾರಿಕೆ ಜೊತೆಗೆ, ಗಮಕವನ್ನೂ ರಕ್ತಗತಮಾಡಿಕೊಂಡಿದ್ದರು. ಆದರೆ ವಾಚನವನ್ನು ಶಾಸ್ತ್ರೋಕ್ತವಾಗಿ ಕಲಿಯಬೇಕೆಂಬ ಆಸೆಯಿಮದ ಒಬ್ಬ ಮಾರ್ಗದರ್ಶಕರನ್ನು ಹುಡುಕುತ್ತಿದ್ದರು.

 

ಮಹಾರಾಜಾ ಕಾಲೇಜಿನಲ್ಲಿಯೇ ಉದ್ಯೋಗಸ್ಥರಾಗಿದ್ದು, ಆ ದಿನಗಳಲ್ಲಿ ತಮ್ಮ ಭಾರತ ವಾಚನದಿಂದ ಪ್ರಸಿದ್ಧರಾಗಿದ್ದ ಹಾಗೂ ವಿದೇಶಿಯರಾಗಿದ್ದ ಪ್ರೊ. ರಾಲೋ ಮುಂತಾದವರನ್ನೂ ತಮ್ಮ ತುಂಬುಕಂಠದ ಗಮಕದ ಗತ್ತು ಮತ್ತು ವ್ಯಕ್ತಿತ್ವಗಳಿಂದ ವಿದ್ವತ್‌ ಸಮೂಹದಲ್ಲಿ ಆಕರ್ಷಿತರಾಗಿದ್ದ ಕೃಷ್ಣಗಿರಿ ಕೃಷ್ಣರಾಯರು ತಮಗೆ ಸೂಕ್ತ ಗುರುಗಳೆನಿಸಿತು. ಆಚಾರ್ಯರಿಗೆ ಒಂದು ನಿಧಿಸಿಕ್ಕಂತಾಯಿತು! ತಮ್ಮ ಮಾರ್ಗದರ್ಶನಕ್ಕೆ ಕೃಷ್ಣಗಿರಿ ಕೃಷ್ಣರಾಯರನ್ನು ಆಶ್ರಯಿಸಿದರು. ತಾವು ಭಾಗವಹಿಸಬೇಕೆಂದಿದ್ದಕ ಸ್ಪರ್ಧೆಗೆ ಆಯ್ಕೆ ಮಾಡಿದ್ದ ಭಾಗವನ್ನು ಅವರ ಮುಂದೆ ವಾಚನ ಮಾಡಿ, ತಮ್ಮ ವಾಚನಕ್ಕೊಂದು ವೈಶಿಷ್ಟ್ಯವನ್ನು ಪಡೆದರು. ಆಚಾರ್ಯರ ಗುರುಭಕ್ತಿ, ವಾಚನದಲ್ಲಿದ್ದ ಶ್ರದ್ಧೆ ಹಾಗೂ ಅವರ ಕಂಠಶ್ರೀಯ ಬಗ್ಗೆ ಕೃಷ್ಣರಾಯರಿಗಂತೂ ಅಪಾರ ಮೆಚ್ಚುಗೆ. ಅವರು ಆಚಾರ್ಯರನ್ನು “ನಮ್ಮ ಸಂಪತ್ಕುಮಾರಾಚಾರ್” ಎಂದೇ ಯಾವಾಗಲೂ ಕರೆಯುತ್ತಿದ್ದುದು.

ಮುಂದೆ ಸಂಪತ್ಕುಮಾರಾಚಾರ್ಯರು ಬೆಂಗಳೂರಿನ “ದೊಡ್ಡಣ್ಣನವರ ಹೈಸ್ಕೂಲ್‌” ಎಂದೇ ಹೆಸರಾಗಿದ್ದ ಎಸ್‌.ಎಲ್‌.ಎನ್‌. ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿಯನ್ನಾರಂಭಿಸಿದರು. ಆ ಸಮಯದಲ್ಲಿ ಅವರ ಮಿತ್ರ ವೃಂದದಲ್ಲಿ ಸಂಜೆಯ ಹೊತ್ತು ಅವರ ವಾಚನ ಕಾರ್ಯಕ್ರಮಗಳು ಪ್ರತಿ ನಿತ್ಯವೂ ತಪ್ಪದೇ ನೆರವೇರುತ್ತಿದ್ದವು. ಅಂದಿನ ಎಲ್ಲ ಕನ್ನಡ ಸಮಾರಂಭಗಳಲ್ಲಿ, ಸಮ್ಮೇಳನಗಳಲ್ಲಿ ಸಂಪತ್ಕುಮಾರಾಚಾರ್ಯರು ಇರಲೇಬೇಕು. ಪೂಜ್ಯ ಡಿ.ವಿ.ಜಿ.ಯವರಂತೂ ತಮ್ಮೊಡನೆ ಆಚಾರ್ಯರನ್ನು ತಪ್ಪದೇ ಕರೆದೊಯ್ಯುತ್ತಿದ್ದರಂತೆ. ಸಂಪತ್ಕುಮಾರಾಚಾರ್ಯರ ತುಂಬು ಕಂಠದ, ಮಧುರ ಧ್ವನಿಯ ಪ್ರಾರ್ಥನೆಯಿಲ್ಲದೇ ಸಭೆಗಳೇ ಪ್ರಾರಂಭವಾಗುತ್ತಿರಿಲಿಲ್ಲ. ವಿ.ಸೀ. ಅವರ ಮನೆ ತುಂಬಿಸಿಕೊಳ್ಳುವ ಹಾಡು “ಎಮ್ಮ ಮನೆಯಂಗಳದಿ ಬೆಳೆದೊಂದಹೂವನ್ನು….” ನಾಡಿನಾದ್ಯಂತ ಜನಜನಿತವಾಗಿ ಹಾಡುವಂತೆ ಮಾಡಿದವರೇ ಸಂಪತ್ಕುಮಾರಾಚಾರ್ಯರು. ಆ ಹಾಡು ಮುದವೆಯ ಮನೆಗಳಲ್ಲಿ ಹಾಡುವ ಸಂಪ್ರದಾಯದ ಹಾಡಿನಂತಾಗಿದ್ದೂ ಅವರಿಂದಲೇ!

 

ಕರ್ನಾಟಕದ ಪ್ರಮುಖ ನಗರಗಳಲ್ಲಿ ಅವರ ಭಾರತವಾಚನ, ಭಾವಗೀತೆ, ದೇವರನಾಮಗಳ ಕಾರ್ಯಕ್ರಮಗಳು ನಿರಂತರವಗಿ ನಡೆಯುತ್ತಿದ್ದವು. ಆ ದಿನಗಳಲ್ಲಿ ಪ್ರಸಿದ್ಧ ಸಂಸ್ಥೆಯಾಗಿದ್ದ ದಿ ಮ್ಯೂಸಿಕಲ್‌ ಪ್ರೊಸೆಸ್‌ ಲಿಮಿಟೆಡ್‌ ಆಚಾರ್ಯರ ವಾಚನದ ಧ್ವನಿಮುದ್ರಣವನ್ನು ತಯಾರಿಸಿದ್ದರು. ಮದರಾಸಿನ ಆಕಾಶವಾಣಿಯಿಂದ ಪ್ರಸಾರವಾದ ಮಯೂರ ಧ್ವಜ ರೂಪಕದಲ್ಲಿ ಆಚಾರ್ಯರು ಮಯೂರ ಧ್ವಜನ ಪಾತ್ರವನ್ನು ವಹಿಸಿ ತಮ್ಮ ಸಿರಿಕಂಠದಿಂದ ಲಕ್ಷಮೀಶನ ಜೈಮಿನಿ ಭಾರತದ ಪದ್ಯಗಳನ್ನು ಸೊಗಸಾಗಿ ಹಾಡಿದ್ದರು. ಮದರಾಸಿನ ಸಂಗೀತಸಭೆಯು ಅವರಿಗೆ, ಗಮಕ ವಿದ್ವಾನ್‌, ಶ್ಲೋಕ ಸಂಗೀತ ಎಂಬ ಪ್ರಶಸ್ತಿ ಬಿರುದುಗಳನ್ನಿತ್ತು ಗೌರವಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅವರು ಕೆಲವು ವರ್ಷಗಳ ಕಾಲ ಗಮಕ ತರಗತಿಗಳನ್ನು ನಡೆಸಿ ತಮ್ಮದೇ ಆದ ಸಂಪ್ರದಾಯವನ್ನು ಹಾಕಿಕೊಟ್ಟರು.

ಎಂ. ರಾಮಕೃಷ್ಣರಾಯರು, ಡಿ.ಆರ್. ರಾಮಯ್ಯ, ‘ಗಮಕ ಕಲೆ’ ಪುಸ್ತಕದ ಕರ್ತೃ ಕೆ.ಟಿ. ರಾಮಸ್ವಾಮಿ ಅಯ್ಯಂಗಾರ್ ಹಾಗೂ ಶೇಷಾದ್ರಿಪುರದ ನಿವಾಸಿಗಳಾಗಿದ್ದು, ಬಹುದಿನಗಳವರೆಗೂ “ಕಾವ್ಯ ಪ್ರಚಾರ ಮಂಡಲಿ” ಮುಂತಾದ ಸಂಸ್ಥೆಗಳಲ್ಲಿ ಕಾವ್ಯವಾಚನವನ್ನು ಮಾಡುತ್ತಿದ್ದ ಕೆ.ವಿ. ಸಂಪತ್ಕುಮಾರಾಚಾರ್ ಹಾಗೂ ಆಚಾರ್ಯರ ಸೋದರಳಿಯ ಎಂ.ಎಸ್‌. ಗೋಪಾಲ್‌ ಅವರುಗಳು ಸಂಪತ್ಕುಮಾರಾಚಾರ್ಯರ ಶಿಷ್ಯ ಪರಂಪರೆಯಲ್ಲಿ ಬಂದವರು.

ಕರ್ನಾಟಕದ ಪ್ರಸಿದ್ಧ ಗಮಕಿಗಳಲ್ಲಿ ಒಬ್ಬರಾಗಿದ್ದ ಮೈ.ಶೇ. ಅನಂತಪದ್ಮನಾಭರಾಯರು ಸಂಪತ್ಕುಮಾರಾಚಾರ್ಯರ ಆಪ್ತಮಿತ್ರರು. ಸಂಪತ್ಕುಮಾರಾಚಾರ್ಯರ ಗಮಕ ಕಲೆಯ ಶೈಲಿಗೆ ಮಾರು ಹೋದವರಲ್ಲಿ ಅವರೂ ಒಬ್ಬರು. ಕೊಡಗಿನ ಮಡಿಕೇರಿಯಲ್ಲಿ ನಡೆದ ೧೯೩೨ರ ಸಾಹಿತ್ಯ ಸಮ್ಮೇಳನದಲ್ಲಿ ಮೊಟ್ಟ ಮೊದಲು ಆಚಾರ್ಯರ ಭಾರತ ವಾಚನವನ್ನು ಕೇಳಿದ ಮೈ.ಶೇ. ಅನಂತಪದ್ಮನಾಭರಾಯರು ಮುಂದೆ ಮಡಿಕೇರಿ, ವೀರಾಜಪೇಟೆ ಮುಂತಾದ ಸ್ಥಳಗಳಲ್ಲಿ ಅವರ ಭಾರತವಾಚನವನ್ನು ಏರ್ಪಡಿಸಿದ್ದರು. ಬೆಂಗಳೂರಿಗೆ ಬಂದಾಗಲೆಲ್ಲ ರಾಯರು ಸಂಪತ್ಕುಮಾರಾಚಾರ್ಯರ ಅತಿಥಿಗಳು. ಕೊಡಗಿನ ಪ್ರವಾಸದಲ್ಲಿ ಆಚಾರ್ಯರು ಅನಂತಪದ್ಮನಾಭರಾಯರ ಅತಿಥಿಗಳು. ಹೀಗೆ ಅವರಿಬ್ಬರಲ್ಲಿಯೂ ಪರಸ್ಪರ ಸ್ನೇಹ-ವಿಶ್ವಾಸಗಳು ನಿರಂತರವಾಗಿ ಬೆಳೆದವು.

ಖ್ಯಾತ ಸಾಹಿತಿಗಳಾಗಿದ್ದ ಸಿ.ಕೆ. ನಾಗರಾಜರಾಯರು, ಹಿರಿಯ ಗಮಕಿಗಳಾಗಿದ್ದ ಎಸ್‌. ನಾಗೇಶರಾಯರು ಸಂಪತ್ಕುಮಾರಾಚಾರ್ಯರ ನಿಕಟ ಮಿತ್ರ ವರ್ಗದವರಾಗಿದ್ದರು. ಭಾರತ ವಿದ್ಯಾಮಂದಿರದ ಆರ್. ಗೋಪಾಲಕೃಷ್ಣರಾಯರು ಆಚಾರ್ಯರಲ್ಲಿ ಕೆಲವು ಕಾಲ ಗಮಕ ಅಭ್ಯಾಸ ಮಾಡಿದ್ದರು.

ಪ್ರಸಿದ್ಧ ಸಾಹಿತಿಗಳೂ ಲೋಕ ಸೇವಾಸಕ್ತರೂ ಆಗಿದ್ದ ಪಂಡಿತ ಸುಂದರಲಾಲರ ಸಮ್ಮುಖದಲ್ಲಿ ಸಂಪತ್ಕುಮಾರಾಚಾರ್ಯರು ವಾಚನ ಮಾಡಿದಾಗ, ಅದರಲ್ಲಿಯೂ ವಿ.ಸೀ. ಅವರ “ಮನೆತುಂಬಿಸುವ ಹಾಡು” ಹಾಡಿದಾಗ ಸುಂದರಲಾಲರ ಮೇಲೆ ಎಷ್ಟು ಗಂಭೀರವಾದ ಪರಿಣಾಮವನ್ನು ಬೀರಿತ್ತು ಎಂಬುದನ್ನು ಹಿರಿಯ ನ್ಯಾಯಮೂರ್ತಿಗಳಾದ ನಿಟ್ಟೂರು ಶ್ರೀನಿವಾಸರಾಯರು ತಮ್ಮ ಲೇಖನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

ಕಳಲೆ ಸಂಪತ್ಕುಮಾರಾಚಾರ್ಯರು ಗಮಕ ಕಲೆಯ ಪ್ರಸಾರಕ್ಕಗಿಯೇ ಹುಟ್ಟಿದ ಜೀವಿ ಎನ್ನುತ್ತಾರೆ ಗುಡಿಬಂಡೆ ಬಿ.ಎಸ್‌. ರಾಮಾಚಾರ್ಯರು.

ಸಂಪತ್ಕುಮಾರಾಚಾರ್ಯರು “ಬಹು ಪ್ರಯೋಗಶೀಲರು” ಎಂದು ಉದ್ಗರಿಸಿದ್ದಾರೆ ಡಾ.ಜಿ. ವರದರಾಜರಾವ್‌.

ಇಂಥ ಕಲಾಸೇವಕರು ಕಾಯಿಲೆಯಿಂದ ನರಳಿ ಸೊರಗಿದಾಗ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವವರಿಲ್ಲದೆ ಆಚಾರ್ಯರು ಬಹುವಾಗಿ ತೊಂದರೆಪಟ್ಟರೆಂದೂ ಅವರ ಕೊನೆಯ ದಿನಗಳನ್ನು ಪ್ರತ್ಯಕ್ಷ ಕಂಡ ಡಾ.ಜಿ. ವರದರಾಜರಾಯರು ತಮ್ಮ ಲೇಖನವೊಂದರಲ್ಲಿ ನೆನೆಸಿಕೊಂಡಿದ್ದಾಋಎ. ಆಚಾರ್ಯರನ್ನು ಆಜನ್ಮವೂ ಬಡತನ ಕಾಡಿತು. ಆದರೂ ಅವರು ತಮ್ಮ ದುಃಖಗಳನ್ನು ನುಂಗಿಕೊಂಡು, ಸರ್ವದಾ ಹಸನ್ಮುಖಿಗಳಾಗಿರುತ್ತಿದ್ದರು. ಯಾವಾಗಲೂ ಜನರನ್ನು ತುಂಬಿಕೊಂಡಿರುತ್ತಿದ್ದ ಆಚಾರ್ಯರ ಕೊನೆಯುಸಿರಿನ ಸಮಯದಲ್ಲಿ, ಅವರ ಅಂತ್ಯ ಕಾಲದಲ್ಲಿ ಕೆಲವೇ ಜನರಿದ್ದರು. ಅವರ ಪತ್ನಿಯವರ ಅಸಹಾಯಕತೆ ಹೃದಯ ವಿದ್ರಾವಕವಾಗಿತ್ತು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಆಚಾರ್ಯರ ನಿಧನದ ವಾರ್ತೆ ಕೇಳಿದೊಡನೆಯೆ ವಿಕ್ಟೋರಿಯಾ ಆಸ್ಪತ್ರೆಗೆ ಧಾವಿಸಿ ಬಂದರಂತೆ. ಸಂಪತ್ಕುಮಾರಾಚಾರ್ಯರ ಸಾವಿನ ನಂತರ ನಡೆದ ಸಂತಾಪ ಸಭೆಯೊಂದರಲ್ಲಿ ಮಾಸ್ತಿಯವರು ಮಾತನಾಡುತ್ತ, “ಇಂತಹ ತರುಣನ ಭಾವಚಿತ್ರ ಈ ಸಭೆಗೆ ಬರಬಾರದಿತ್ತು” ಎಂದು ಗದ್ಗದ ಕಂಠದಿಂದ ಕಣ್ತುಂಬಿ ನುಡಿದರಂತೆ.

೧೯೪೫ರ ಡಿಸೆಂಬರ್ ೫ ರಂದು ತಮ್ಮ ನಲವತ್ತರಡನೆಯ ವಯಸ್ಸಿನಲ್ಲಿ ಸಂಪತ್ಕುಮಾರಾಚಾರ್ಯರು ವಿಧಿವಶರಾದರು. ತಮ್ಮ ಅಲ್ಪಜೀವನಾವಧಿಯಲ್ಲಿ ಅಪಾರ ಶ್ರೇಯಸ್ಸನ್ನು ಸಂಪಾದಿಸಿದರು. ಗಮಕ ಕಲೆಯ ಕೀರ್ತಿ ಉನ್ನತ ಶಿಖರಕ್ಕೇರುವಂತೆ ಮಾಡಿದರು. ಗಮಕ ಅವರ ಜೀವನದ ಉಸಿರಾಗಿತ್ತು.