1998ರಲ್ಲಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಮ್ಮೂರಿಗೆ ಬಂದಿದ್ದರು. ಕೃಷಿ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಕೃಷಿ ಕಾರ್ಯಾನುಭವ ಶಿಬಿರಕ್ಕೆ ಬಂದಿದ್ದರು. ಅವರೆಲ್ಲ ಹೊಲಗಳಿಗೆ ಭೆಟ್ಟಿ ಕೊಡುತ್ತಿದ್ದರು. ನನ್ನ ತೋಟದಲ್ಲಿ ಬೆಳೆದು ನಿಂತ ಕಸವನ್ನು ನೋಡಿ ‘ಏನ್ರೀ ತೋಟದ ತುಂಬ ಪಾರ್ಥೇನಿಯಂ ಬೆಳೆಸಿದೀರಲ್ರೀ’ ಎಂದರು. ಕೃಷಿ ಕೂಲಿಕಾರರ ಅಭಾವ ಒಂದು ಕಾರಣವಾಗಿದ್ದರೆ ಇನ್ನೊಂದು ಕಾರಣ ಸೇಂಗಾದ ಸುಗ್ಗಿಯಾಗಿದ್ದರಿಂದ ಕಳೆ ತೆಗೆಸಲು ಆಗಿರಲಿಲ್ಲ. ‘ಕಳೆನಾಶಕ ಸಿಂಪಡಿಸಿ ಬಿಡ್ರೀ, ಆಳಗೋಳ ದಾರಿ ಯಾಕ ನೋಡತೀರಿ’ ಎಂದರು. ಒಂದು ವಾರದಲ್ಲಿ ಶೆಂಗಾ ಸುಗ್ಗಿ ಮುಗಿಯುವದು ಕೂಡಲೇ ಕಳೆ ತೆಗೆಸಿದರಾಯಿತೆಂದು ಬಿಟ್ಟಿದ್ದೆ. ಒಕ್ಕಲುತನದಲ್ಲಿ ಪ್ರತ್ಯಕ್ಷವಾಗಿ ಬರುವ ಅಡಚಣೆಗಳು ಕೃಷಿ ಶಾಸ್ತ್ರವನ್ನು ಅಧ್ಯಯನ ಮಾಡಿ ಪದವಿ ಪ್ರಮಾಣ ಪತ್ರ ಗಿಟ್ಟಿಸುವವರಿಗೆ ಹೊಳೆಯದ ಸಂಗತಿ. ಒಂದು ದೃಷ್ಟಿಯಿಂದ ಅವರು ಹೇಳುವದು ಸರಿ. ಒಂದೇ ದಿನದಲ್ಲಿ ಒಬ್ಬನೇ ವ್ಯಕ್ತಿ ಸ್ಪ್ರೇಪಂಪಿನಿಂದ ಕಳೆನಾಶಕ ಸಿಂಪಡಿಸಬಲ್ಲ, ಕಳೆ ಕಸ ಎಲ್ಲವೂ ಸುಟ್ಟು ನಾಶವಾಗಬಲ್ಲದು. ಆಳುಗಳಾದರೆ ನಾಲ್ಕೈದು ದಿವಸ ಕೆಲಸ ಮಾಡಬೇಕು. ಆದರೆ ಈ ರಾಸಾಯನಿಕಗಳ ದುಷ್ಪರಿಣಾಮಗಳು ನೂರಾರು.

ತೋಟದ ಬೆಳೆಯಾಗಿದ್ದರಿಂದ ಹಲವಾರು ಜಾತಿಯ ಗಿಡ, ಮರ, ಕಂಟಿಗಳಿವೆ, ಅಲ್ಲಿ ಗಿಡಗಳ ಸಾಲಿನ ನಡುವೆ ಮಾತ್ರ ಗಳೆ ಹೊಡೆಯಬಹುದು. ಹೊಲದಲ್ಲಿ ಕಾಲಿಡಲು ಅಂಚಿಕೆಯಾಗಬೇಕು ಅಷ್ಟು ಕಳೆ ಬೆಳೆದಿತ್ತು. ಎತ್ತುಗಳು ಖಾಲಿ ಇದ್ದಾಗ ಗಳೆ ಹೊರೆಯಲು ಹದ ಬರುತ್ತಿರಲಿಲ್ಲ. ಹದ ಬಂದಾಗ ಎತ್ತುಗಳಿಗೆ ಬೇರೆ ಹೊಲದಲ್ಲಿ ಗಳೆ ಹೊಡೆಯಬೇಕಾಗಿತ್ತು. ಹೀಗೆ ಹಲವಾರು ತೊಂದರೆಗಳು ಅಂತಹದರಲ್ಲಿ ಸುಗ್ಗಿ ಬೇರೆ ಇತ್ತು. ಶೇಂಗಾ ಕಿತ್ತು ಅದರ ಕಾಯಿಗಳನ್ನು ಕೊಯ್ದು ಒಣಗಿಸಬೇಕು, ಒಣಗಿಸಲು ಮಳೆಯ ಕಾಡಾಟ ಬೇರೆ ಶೇಂಗಾದ ಬಳ್ಳಿಗುಂಪಿ ಹಾಕಬೇಕು. ಅದನ್ನು ತೊಯ್ಯದಂತೆ ಒಣಗಿಸಿ ಬಣಿವೆ ಹಾಕಬೇಕು. ಶೇಂಗಾದ ಬಳ್ಳಿ ದನಗಳಿಗೆ ಒಳ್ಳೇ ಪೌಷ್ಠಿಕ ಮೇವು ಆಗಿದೆ. ಇಂತಹ ಕೆಲಸಗಳಲ್ಲಿ ತೊಡಗಿದ್ದರಿಂದ ಕಳೆಗಳು ಬೆಳೆದು ಹೂವಾಡಿಸುವ ಹಂತ ಮುಗಿದು ಕಾಳು ಅಗುವದರಲ್ಲಿತ್ತು. ನನ್ನದು ಸಾವಯವ ರೀತಿಯಲ್ಲಿ ಬೆಳೆಸಿದ ತೋಟವಾಗಿದ್ದು ನಾನು ರಾಸಾಯನಿಕಗಳ ವಿರೋಧಿ. ಟೆಂಗಿನ ಗಿಡಗಳನ್ನು ನಾನೊಮ್ಮೆಯೂ ಅಗೆತ ಮಾಡಿಲ್ಲ. ಒಣಗಿದ ಟೆಂಗಿನ ಗರಿಗಳನ್ನು ಕಡಿದು ಗಿಡಗಳ ಬುಡಕ್ಕೆ ಹಾಕಿ ಹೊದಿಕೆ ಮಾಡುತ್ತ ಬಂದಿರುವೆ. ನನ್ನ ತೋಟದಲ್ಲಿ ನನ್ನದೇ ಆದ ವಿಚಾರದಂತೆ ಕೆಲವು ವಿಧಾನಗಳನ್ನು ಅಳವಡಿಸಿರುವೆ. ಅವು ವೈಜ್ಞಾನಿಕವಾಗಿವೆಯೋ ಇಲ್ಲವೋ, ಆದರೆ ಖರ್ಚಿನಲ್ಲಿ ಮಿತವ್ಯಯ ಸಾಧ್ಯವಾಗಿದೆ. ಮಿತವ್ಯಯ ಅನ್ನುವುದಕ್ಕಿಂತ ಖರ್ಚಿಲ್ಲದ ಬೇಸಾಯ ನನ್ನದು.

ತೋಟದಲ್ಲಿ ಕೇವಲ ಪಾರ್ಥೇನಿಯಂ ಕಸ ಒಂದೇ ಬೆಳೆದಿರಲಿಲ್ಲ. ಕುದುರೆಮೆಂತೆ, ಹನ್ನಿ ಕಸ, ನರಿಬಾಲದ ಹುಲ್ಲು, ಚಿಂಪಿಗ್ಯಾನ ಹುಲ್ಲು, ಕಡಗೋಲ ಮಂಡ್ಯಾನ ಹುಲ್ಲು, ಇಗಳಿ, ಕಿರಕಸಾಲಿ, ಹಕ್ಕರಿಕೆ, ತೀಕಿ ತಪ್ಪಲಿನ ಕಸ ಮೊದಲಾದ ಕಸಗಳೂ ಬೆಳೆದಿದ್ದವು. ಪಾರ್ಥೇನಿಯಂ ಮಾತ್ರ ಇವುಗಳನ್ನೆಲ್ಲ ಮರೆಮಾಚಿ ತಾನೇ ಮಿಗಿಲೆಂದು ಬೆಳೆದು ನಿಂತಿತ್ತು. ಐದು ಜನ ಹೆಂಗಸರು ಆರು ದಿನಗಳಲ್ಲಿ ಎಲ್ಲ ಕಸವನ್ನು ಕಿತ್ತು ಹಾಕಿ ಅಲ್ಲಲ್ಲಿ ಮೆದೆ ಮಾಡಿ ಇಟ್ಟರು ಮತ್ತು ಮೆದೆ ಮಾಡಿ ಇಟ್ಟ ಕಸವನ್ನೆಲ್ಲಾ ಮಾವು, ಕರಿಬೇವು ನುಗ್ಗೆ ಮೊದಲಾದ ಗಿಡಗಳ ಬುಡದ ಸುತ್ತಲೂ ಹೊದಿಕೆ ಮಾಡಿಸಿದೆ. ಇದಕ್ಕೆ 460 ರೂಪಾಯಿಗಳು ಖರ್ಚಾದವು. ಇದನ್ನೆಲ್ಲಾ ಹೇಳುವದರ ಔಚಿತ್ಯ ಏನೆಂದರೆ ಕಳೆ ಕಸಗಳನ್ನು ವೈರಿಗಳಂತೆ ಕಾಣುವದು ತಪ್ಪು. ಪ್ರತಿ ದಿವಸ ಎರಡು ಮೂರು ಹೊರೆಯಷ್ಟು ಹುಲ್ಲು, ಕಸ ಹಸಿರು ಮೇವು ಸಿಕ್ಕಿತು. ಕಿರಕಸಾಲಿ ಮತ್ತು ಹಕ್ಕರಿಕೆಯ ತಪ್ಪಲು ಪಲ್ಯ ಸಿಕ್ಕತು. ಉಳಿದ ಕಸವೆಲ್ಲ ಗಿಡಗಳ ಬುಡದಲ್ಲಿ ಹಾಕಿದ್ದರಿಂದ ತೇವಾಂಶವು ಕಡಿಮೆಯಾಗಲಿಲ್ಲ. ಮೂರನೆಯದಾಗಿ ಕಳೆಕಸಗಳು ಕಳಿತು ಸಾವಯವ ಚಟುವಟಿಕೆಗಳು ಹೆಚ್ಚಲು ಹಾಗೂ ಸೂಕ್ಷ್ಮಾಣು ಜೀವಿಗಳ ವಂಶವೃದ್ಧಿಗೆ ಕಾರಣವಾಯಿತು. ಐದನೆಯದಾಗಿ ಗಿಡಗಳಿಗೆ ಸತ್ವಯುತವಾದ ಗೊಬ್ಬರವ (ಪೋಷಕಾಂಶಗಳ) ನ್ನು ಒದಗಿಸಿದಂತಾಯಿತು. ಇನ್ನು ಖರ್ಚಿನ ಲೆಕ್ಕಾಚಾರ ಮಾಡಿದರೆ ರಾಸಾಯನಿಕ ಕಳೆನಾಶಕಕ್ಕೆ ಮಾಡುವ ಖರ್ಚಿಗಿಂತ ನೂರು ರೂಪಾಯಿ ಕಡಿಮೆ ಖರ್ಚಾಯಿತು. ಕಳೆನಾಶಕ ಸಿಂಪಡಿಸಿದ್ದರೆ ಕಿರಕಸಾಲಿ, ಹಕ್ಕರಿಕೆಯಂತಹ ಒಳ್ಳೇ ಸತ್ವಯುತ ಹಸಿರು ಪಲ್ಯಗಳು, ಹುಲ್ಲು ಮತ್ತು ಕಸಗಳು (ಮೇವು) ಸುಟ್ಟು ಕರಕಾಗುತ್ತಿದ್ದವು. ನಮ್ಮ ಹಳ್ಳಿಯ ಜನರಿಗೆ ಉದ್ಯೋಗ ಸಿಗುತ್ತಿರಲಿಲ್ಲ. ಇದೆಲ್ಲದಕ್ಕೂ ಹೆಚ್ಚಾಗಿ ಸಾವಯನ ಕೃಷಿಗೆ ಪೂರಕವಾದ ಸೂಕ್ಷ್ಮಾಣು ಜೀವಿಗಳಿಗೆ ಆಹಾರ ದೊರಕುತ್ತಿರಲಿಲ್ಲ.

ಕಳೆಯನ್ನು ಆಳುಗಳಿಂದ ತೆಗೆಸಿದ್ದರಿಂದ ಸ್ವಾವಲಂಬಿ ಒಕ್ಕಲುತನ ಸಾಧ್ಯವಾಯಿತು. ಯಾವುದೋ ಕಂಪನಿಯವರು ಅವರು ಹೇಳಿದ ದರಕ್ಕೆ ಖರೀದಿಸಿ ತಂದು ಕಳೆನಾಶಕ ಸಿಂಪಡಿಸುವುದರಿಂದ ಆ ಕಂಪನಿಗೆ ಲಾಬವಾಗುತ್ತಿತ್ತು. ಈ ಕಂಪನಿಗಳೆಲ್ಲ ವಿದೇಶಿ ಕಂಪನಿಗಳು. ನಮ್ಮ ಬೆವರಿನ ಫಲದ ಲಾಬ ವಿದೇಶಿ ಕಂಪನಿಯ ಪಾಲಾಗದೆ ಇರುವದು ಕಳೆ ತೆಗೆಸಿದ್ದರಿಂದ ಸಾಧ್ಯವಾಯಿತು. ಇದು ನನಗೆ ಹೆಮ್ಮೆ ಹಾಗೂ ಸಂತೋಷದ ಸಂಗತಿಯಾಗಿದೆ. ರಾಸಾಯನಿಕ ದುಷ್ಪರಿಣಾಮದ ಅಪಾಯಗಳಿಂದ ನನ್ನ ತೋಟವನ್ನು ರಕ್ಷಿಸಿದ, ದುಡಿವ ಕೈಗೆ ಕೆಲಸ ಕೊಟ್ಟ, ಪರಿಸರ ರಕ್ಷಣೆ ಮಾಡಿದ ಹಾಗೂ ಪರಾವಲಂಬಿಯಾಗದ ಹಲವಾರು ಪ್ರಯೋಜನಗಳಿಗೆ ಕಳೆಯನ್ನು ಕೈಯಿಂದ ತೆಗೆಸಿದ ಕ್ರಮ ಕಾರಣವಾಗಿದೆ ಎಂಬುದು ಗಮನಾರ್ಹ ಸಂಗತಿ.