Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಕವಿತಾ ಸನಿಲ್

ದೇಶ ವಿದೇಶಗಳಲ್ಲಿ ಕರಾಟೆಯ ಕರಾಮತ್ತನ್ನು ಪ್ರದರ್ಶಿಸಿ ನಾಡಿಗೆ ಕೀರ್ತಿ ತಂದಿರುವ ಕರಾಟೆಪಟು ಕುಮಾರಿ ಕವಿತಾ ಸನಿಲ್, ಮಂಗಳೂರಿನ ಮರಕಡದ ನಾರಾಯಣ ಪೂಜಾರಿ ಮತ್ತು ವೇದಾವತಿ ಸನಿಲ್ ದಂಪತಿಗಳ ಕಿರಿಯ ಪುತ್ರಿ. ೧೯೯೨ರಿಂದ ೨೦೦೪ರ ವರೆಗೆ ಮುಂಬಯಿ, ಬೆಂಗಳೂರು, ಹೈದರಾಬಾದ್, ಗುಜರಾತ್, ಭೂಪಾಲ್, ನಾಗಪುರ ಮುಂತಾದ ಕಡೆಗಳಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ.
೧೯೯೯ರಲ್ಲಿ ಜಪಾನಿನ ಪ್ರತಿಸ್ಪರ್ಧಿಯನ್ನು ಎದುರಿಸಿ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ತಂದುಕೊಡುವುದರ ಜೊತೆಗೆ ‘ಅಂತರರಾಷ್ಟ್ರೀಯ ಕರಾಟೆಪಟು’ ಎಂಬ ಬಿರುದು ಪಡೆದರು. ೨೦೦೩ರಲ್ಲಿ ಆಸ್ಟ್ರೇಲಿಯಾದ ಪ್ರತಿಸ್ಪರ್ಧಿಯನ್ನು ಎದುರಿಸಿ ಚಿನ್ನದ ಪದಕದೊಂದಿಗೆ ‘ಗ್ಯಾಂಡ್ ಚಾಂಪಿಯನ್’ ಪ್ರಶಸ್ತಿ ಪಡೆದರು. ಇಂಡಿಯನ್ ಮತ್ತು ಬುಡೋಕಾನ್ ಕರಾಟೆಯ ಎರಡೂ ಶೈಲಿಯಲ್ಲಿ ಬ್ಲಾಕ್ಬೆಲ್ಟ್ ಪಡೆದ ಭಾರತದ ಏಕೈಕ ಮಹಿಳೆ ಕುಮಾರಿ ಕವಿತಾ ಸನಿಲ್, ಮಂಗಳೂರು ಮಹಾನಗರ ಪಾಲಿಕೆಯ ಅತ್ಯಂತ ಕಿರಿಯ ವಯಸ್ಸಿನ ಸದಸ್ಯರಾಗಿದ್ದಾರೆ. ವೈಟ್ ಲಿಫ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ.
ದೇಶಕ್ಕೆ ಹೆಮ್ಮೆ ತರುವ ಹೋದಲ್ಲೆಲ್ಲಾ ಕರಾಟೆ ತಂತ್ರದೊಂದಿಗೆ ಯಶಸ್ವಿಯಾಗಿ ಪದಕಗಳ ಬಿರುದುಗಳ ಪುರಸ್ಕಾರ ಪಡೆದಿರುವ ಉದಯೋನ್ಮುಖ ಯುವ ಪ್ರತಿಭೆ ಕುಮಾರಿ ಕವಿತಾ
ಸನಿಲ್ ಅವರು.