ಇಲ್ಲ್ಲ, ಇನ್ನು ಬರೆಯಲಾರೆ
ತೆರೆಯಲಾರೆ ಹೃದಯವ,
ನಿನ್ನ ನಿರೀಕ್ಷಣೆಯೊಳಿನ್ನು
ತಳ್ಳಲಾರೆ ದಿವಸವ.

ಇಲ್ಲ, ಇನ್ನು ಹಿಡಿಯಲಾರೆ
ಆ ಮಿಂಚಿನ ಚಾಣವ
ಇನ್ನು ನಾನು ಹೂಡಲಾರೆ
ಹೆದೆಯೇರಿಸಿ ಬಾಣವ.

ಮತ್ತೆ ಎತ್ತಿ ನಿಲಿಸಲಾರೆ
ಮುರಿದು ಬಿದ್ದ ಗುಡಿಗಳ
ಸುತ್ತ ಬಿದ್ದ ಬೂದಿಯೊಳಗೆ
ಹುಡುಕಲಾರೆ ಕಿಡಿಗಳ.

ಬೇಡ ಬೇಡ ಬೇಡ ನನಗೆ
ನಿನ್ನ ಕೃಪೆಯ ಸಂಕಲೆ,
ಇನ್ನೇತಕೆ ನಿನ್ನ ಹಂಗು
ಕಾವ್ಯಸ್ಫೂರ್ತಿ ಚಂಚಲೆ.