ಕೆಲವು ಕವಿತೆಗಳು
ಕರೆದ ಕೂಡಲೇ ಬಂದುಬಿಡುತ್ತವೆ
ಚಿಕ್ಕ ಮಕ್ಕಳ ಹಾಗೆ!
ಇನ್ನು ಕೆಲವಂತು ಹೊಸಿಲು ದಾಟಿ ಹೊರಕ್ಕೆ
ಬರುವುದೇ ಇಲ್ಲ-ಹೊಸಮದುವೆ ಹೆಣ್ಣ್ಣಿನ ಹಾಗೆ,
ಅವಕ್ಕೆ ಮೈ ತುಂಬ ನಾಚಿಕೆ.

ಕೆಲವು ಕವಿತೆಗಳು ಮುಂಜಾನೆ ಗಿಡದ ಮೈ ತುಂಬ
ಸಮೃದ್ಧವಾಗಿ ಅರಳುವ ಹೂವು.
ಇನ್ನೂ ಕೆಲವು ಎಷ್ಟು ಪುಂಗಿಯೂದಿದರೂ
ಹುತ್ತ ಬಿಟ್ಟು ಹೊರಕ್ಕೆ ಬಾರದ ಹಾವು.
ಆಕಾರವಿರದ ನೋವು.

ಕೆಲವು ಕವಿತೆಗಳು ಕಾರ್ತೀಕದಲ್ಲಿ ಮನೆ ತುಂಬ
ಕಿಲಕಿಲ ನಗುವ ಹಣತೆಗಳು.
ಕೆಲವಂತೂ ಯಾವ ದುರ್ಬೀನಿಗೂ
ಕಾಣದಂತಡಗಿರುವ ಅಪರೂಪದ ನಕ್ಷತ್ರಗಳು.

ಕವಿತೆಯ ಕಷ್ಟ-ಸುಲಭದ ಮಾತು
ಹೀಗೇ ಎಂದು ಹೇಳಲಾಗುವುದಿಲ್ಲ
ಒಂದೊಂದು ಸಲ ಸಲೀಸಾಗಿ ನೆಲಬಿಟ್ಟು
ಏರಿದ ವಿಮಾನ
ಅಷ್ಟೇ ಸುಗಮವಾಗಿ ನಿಲ್ದಾಣಕ್ಕೆ ಇಳಿಯುವುದು
ತೀರಾ ಅನುಮಾನ.