ನನ್ನ ಬಾಲ್ಯದ ನೆನಪುಗಳ ಓಣಿಯೊಳ-
ಗಿನ್ನೂ ತಿರುಗುತ್ತಲೇ ಇದೆ, ನಮ್ಮೂರ
ಕುಂಬಾರಕೇರಿಯ ಗಾಲಿ. ಚಕ್ರದ ಮಧ್ಯೆ
ಮಣ್ಣಿನ ಮುದ್ದೆ. ಕುಂಬಾರ ಗುಂಡನ ಬೆರಳ

ಸ್ಪರ್ಶಕ್ಕೆ ಮಣ್ಣೊಳಗೆ ಮಲಗಿದ್ದ ಆಕೃತಿ-
ಗಳೊಂದೊಂದಾಗಿ ಮೂಡುವ ಪವಾಡಕ್ಕೆ
ನನಗೆ ಮುಗಿಯದ ಬೆರಗು. ಕವಿತೆ ಹುಟ್ಟು-
ವುದು ಹೇಗೆಂದು ಮೊದಲು ಕಂಡದ್ದು ಹೀಗೆ.


ನನ್ನ ಬಾಲ್ಯದ ನೆನಪುಗಳ ಮಬ್ಬಿನೊಳ-
ಗಿನ್ನೂ ಅನುರಣನವಾಗುತಿದೆ ಮಗ್ಗದಲಿ
ಲಾಳಿಯಾಡುವ ಶಬ್ದ. ನೇಕಾರ ಗಂಗಣ್ಣ-
ನೆದುರು ಹಾಸಿಕೊಂಡಿದ್ದ ಬಣ್ಣದ ನೂಲಿ-

ನಂತರಾಳಗಳಲ್ಲಿ ಸಂಚರಿಸುತಿದ್ದಂತೆ
ಮರಿ-ಮಿಂಚು-ಮೀನಿನ ಲಾಳಿ, ಬಗೆ ಬಗೆ
ವಸ್ತ್ರ ಪ್ರತ್ಯಕ್ಷ ! ಛಂದೋಲಯದ ಜೊತೆಯಲ್ಲಿ
ಕವಿತೆ ಮೂಡುವ ಮಾಟ ಕಂಡದ್ದು ಹೀಗೆ.


ನನ್ನ ಬಾಲ್ಯದ ನೆನಪಿನೊಳಗಿನ್ನೂ ಥಳಥಳಿ-
ಸುತಿವೆ ಹೊಚ್ಚ ಹೊಂಬಿಸಿಲಲ್ಲಿ ಗರಿಗೆದರಿ
ಈಗಲೋ ಆಗಲೋ ಹಾರಿಹೋಗಲೆಂದನು-
ವಾದ ಅಸಂಖ್ಯ ಒಂಟಿ ಕಾಲಿನ ಪಕ್ಷಿಯಂತಿ-

ರುವ ತೆಂಗಿನ ಮರದ ವಿಸ್ತಾರ. ಈ ನೆಲದಾಳ
ಗಳಲ್ಲಿ ಬೇರೂರಿ, ವ್ಯಕ್ತಮಧ್ಯದೊಳ-
ಗೆಲ್ಲೊ ಥಟ್ಟನೆ ಅರಳಿ, ನೆಲಮುಗಿಲಿಗೂ ನಡುವೆ
ನಿಂತ ಈ ಒಂದೊಂದೂ ಜೀವಂತ ಕವಿತೆಗಳೆ !