ಕವಿತೆ ಬರೆಯುವುದು ಬಲು ಸುಲಭ ;
ಈ ಕಾಲದಲ್ಲೂ ಇದರಿಂದ ಇಲ್ಲದೆ ಇಲ್ಲ
ಸಾಕಷ್ಟು ಲಾಭ.
ಕವಿತೆ ಬರೆಯುವುದು ಹೇಗೆ ?
ಪ್ರಶ್ನೆಯೇ ಅಲ್ಲ ಇದು ;
ಐದು, ಕೇವಲ ಐದೇ ಐದು ರೂಪಾಯಿ
ಮನಿಯಾರ್ಡರನು ಮಾಡಿ
ಈ ವಿಳಾಸಕ್ಕೆ
ಕಳಿಸಿಕೊಡುತ್ತೇವೆ ಸುಲಭೋಪಾಯ ಸಾಮಗ್ರಿಗಳ
ಮರುದಿನದ ಟಪ್ಪಾಲಿಗೆ.
*    *     *     *
ಕವಿತೆ ಬರೆಯುವುದು ಹೇಗೆ ?
ನಾ ಏಳಿಸುವುದಿಲ್ಲ ನಿಮ್ಮನ್ನು ಬೆಳಗಿನ ಝಾವ
ಸೂರ್ಯೋದಯದ ಸಂದಶನಕ್ಕೆ.
ನೀವೇರಲೇ ಬೇಕಾಗಿಲ್ಲ ಇದುವರೆಗು ಕವಿಗಳೇರಿದ
ಹಳೆಯ ಗಿರಿನೆತ್ತಿಗೆ,
ಆ ಪಾಡೆಲ್ಲ ಕಳೆದ ಕವಿಗಳಿಗೆ.
ನಿಮಗೊ-
ಸಾಕು, ಬಚ್ಚಲ ಮನೆಯ ಕಿಟಕಿಯಾಚೆಗೆ ಕಾಂಬ
ರೊಚ್ಚೆಯಲಿ ಬಿದ್ದ ಸೂರ್ಯನ ಬಿಂಬ.
ಆ ನಾಯಿ, ಈ ಬೆಕ್ಕು ; ಪಕ್ಕದ ಮನೆಯ ಬಳೆಯ ದನಿ ;
ಹಾಲಿನ ಬಾಕಿಗಾಗಿ ಜಗಳವಾಡುವ ಕವಾಡಿಗರ ಸಂಸ್ಕೃತ ಭಾಷೆ ;
ಬೀದಿಯಲಿ ಕೇಳಿಸುವ ನೂರಾರು ದನಿಗಳೇರಿಳಿತ,
ಲಾರಿ-ಮೋಟಾರುಗಳು ಎಬ್ಬಿಸಿದ ಧೂಳು-
ಈ ಎಲ್ಲವನು ಹದವಾಗಿ ಬೆರಸು,
ತಲೆಯ ಗುಡಾಣದಲಿ ಇರುಳೆಲ್ಲ ಕುದಿಸು,
ಸಿದ್ಧವಾಯಿತು ಇನ್ನು ಹೊಸತೊಂದು ಶೈಲಿ
ಬಿಡು ರೈಲ ಮೈಲಿ ಮೈಲಿ !
*    *     *     *
ಇಲ್ಲಿಗೆ ಸಾಕು-
ಮುಂದಿನದು, ನಾಲ್ಕು ಜನ ವಂದಿಮಾಗಧರ ಹುಡುಕು.
ಅವರಿಗಿರಬೇಕು ಅಲ್ಲಲ್ಲಿ ಸಾಕಷ್ಟು ಕೀರ್ತಿ.
ಅವರಿಗಿರಬಾರದಯ್ಯ ಸ್ವದೇಶೀ ಬುದ್ಧಿ ;
ಏನಿದ್ದರೂ ಆಮದಾಗಿ ಬಂದಿರಬೇಕು
ಸಾಕ್ಷಾತ್ತು ಅಮೇರಿಕಾದಿಂದಲೊ ಇಲ್ಲ ಇಂಗ್ಲೆಂಡಿನಿಂದಲೋ
ಮೆದುಳು.
ಅಲ್ಲಿನಾಲೋಚನೆಯ ಧ್ವನಿಮುದ್ರಿಕೆಯಲ್ಲಿ
ಪಡಿನುಡಿಯಲೇಬೇಕು ಅಪರೂಪ ರಾಗ
ಅದಕ್ಕನುಸಾರವಾಗಿ ಹೆಡೆಯಾಡಿಸಬಹುದು
ನಿನ್ನ ಕವಿತೆಯ ನಾಗ !
*    *     *     *
ನೀ ಬರೆದ ಕವಿತೆ, ಬಡಪೆಟ್ಟಿಗರ್ಥವಾಗಲೇಬಾರದು
ಯಾರಿಗೂ,
ಎಲ್ಲೆಲ್ಲಿಯೊ ಕೈ ಎಲ್ಲೆಲ್ಲಿಯೊ ಕಾಲ್
ಎಲ್ಲೆಲ್ಲಿಯೊ ಕಣ್ ತಾನಾದ
ವಿರಾಡ್‌ರೂಪಕ್ಕೆ ಹುಚ್ಚಾಗಲೇಬೇಕು ಯಾರಾದರೂ
ಸರಳಸುಂದರವಾಯ್ತೊ – ಕೆಟ್ಟೆ.
ಗಹನ, ಗಂಭೀರ, ಗೂಢ, ಗುಹ್ಯಾತ್‌ಗುಹ್ಯತರ-
ವಾಗಿರಬೇಕು ಕವಿಯ ರೀತಿ.
ಹತ್ತಾರು ಬೃಹಸ್ಪತಿಗಳಿಗೂ ಬೆಪ್ಪುಹಿಡಿಸಿದರಷ್ಟೆ
ನಮಗೆ ಸಂಪ್ರೀತಿ.
*    *     *     *
ಕವಿತೆ ಹುಟ್ಟಿತು ಕವಿತೆ !
‘ನ ಭೂತೋ ನ ಭವಿಷ್ಯತಿ’
ಅರ್ಥಮಾಡಿಕೊಳ್ಳಲಿ ಬಿಡು ಹಾಳಾದ ಓದುಗ,
ಅರ್ಥವಾಗಲಿಲ್ಲವೋ ಅವನೇ ಕೆಟ್ಟ.
ಬರೆದ ಕವಿ ಅರ್ಥ ಹೇಳುವುದಿಲ್ಲ ;
ಹುಟ್ಟಿ ಬರುತ್ತಾನಯ್ಯ ಮುಂದೆ ಒಬ್ಬ
ಅರ್ಥ ಹೇಳುವ ಶೂರ.
ಅಲ್ಲಿಯ ತನಕ ನಿನ್ನ ಕವಿತೆಯ ಹಿಂದೆ ಮುಂದೆ
ಸುತ್ತಲಿ ಬಿಡೋ ಈ ಮಂದೆ.