ಮಹಾಕವಿ ಲಕ್ಷ್ಮೀಶನು ರಸಿಕಶಿರೋಮಣಿಯಾಗಿದ್ದಂತೆಯೇ ಮಹಾತತ್ವಜ್ಞಾನಿಯೂ ಎನಿಸಿದ್ದನು. ಅವನು ಒಳ್ಳೆಯ ಮುಮುಕ್ಷುವೂ, ತತ್ವಜಿಜ್ಞಾಸುವೂ ಆಗಿದ್ದನೆಂಬುದನ್ನು ನಾವು ಆತನ ಗ್ರಂಥದಲ್ಲೆಲ್ಲಾ ಕಾಣಬಹುದಾಗಿದೆ. “ಏಕಂ ಸತ್ ವಿಪ್ರಾಬಹುಧಾ ವದಂತಿ” ಎಂಬ ಶಾಸ್ತ್ರ ವಾಕ್ಯವನ್ನು ಕವಿಯು ಚೆನ್ನಾಗಿ ಮೈಗೂಡಿಸಿಕೊಂಡಿದ್ದನು. ಆದ್ದರಿಂದಲೇ ಅವನು “ದೇವನೊಬ್ಬ ನಾಮ ಹಲವು” ಎಂಬ ಅನುಭವಿಗಳ ಪಂಥವನ್ನು ಅರ್ಥಮಾಡಿಕೊಂಡಿದ್ದನು. ವಿಷ್ಣು, ಶಿವ, ಶಕ್ತಿ, ಗಣಪ, ಸೂರ‍್ಯ ಮೊದಲಾಗಿ ಯಾವ ರೂಪದಲ್ಲಿ ಪೂಜಿಸಿದರೂ ಅದು ಏಕಮೇವಾದ್ವಿತೀಯನೂ, ಆನಂದಸ್ವರೂಪನೂ ಆದ ಒಬ್ಬ ಭಗವಂತನನ್ನೇ ಸೇರುತ್ತದೆ ಎಂಬ ಗೀತಾ ತಾತ್ಪರ‍್ಯವನ್ನು ಚೆನ್ನಾಗಿ ಮನನ ಮಾಡಿಕೊಂಡಿದ್ದನು. ಆದ್ದರಿಂದಲೇ ಅವನ ಕಾವ್ಯವು ಒಂದು ಕಡೆ ಶೃಂಗಾರ ವಿಹಾರಗಳಿಂದ ಕಂಗೊಳಿಸುತ್ತಿದ್ದರೂ ಇನ್ನೊಂದು ಕಡೆ ಆಧ್ಯಾತ್ಮಿಕ ವಿಚಾರ ಪಾರಲೌಕಿಕ ಉಭಯದೃಷ್ಟಿಯ ಜನರನ್ನೂ ತೃಪ್ತಿಪಡಿಸುವ ಹಾಗೆ ಕಾವ್ಯವನ್ನು ಬರೆಯುವುದು ಲಕ್ಷ್ಮೀಶನಂತಹ ಶರಣ ಕವಿಗಳಿಗೆ ಮಾತ್ರ ಸಾಧ್ಯವಾದುದು. ಭಕ್ತಿ ಪ್ರಧಾನವಾದ ಭಾಗವತ ಧರ್ಮದ ಅನುಷ್ಠಾನವು ಕವಿಗೆ ಹರಿತವಾದ ಈ ಆಧ್ಯಾತ್ಮಿಕ ದೃಷ್ಟಿಯನ್ನುಂಟುಮಾಡಿದೆಯೆಂದು ತೋರುತ್ತದೆ.

ಜೈಮಿನಿಯ ಮೊದಲನೆಯ ಪದ್ಯದಲ್ಲಿ “ಲಕ್ಷ್ಮೀರಮಣನಾಸ್ಯ ಚಂದ್ರ ನಾನಂದಮಂ ನಮಗೀಯಲಿ” ಎಂದು ಕವಿ ಪ್ರಾರ್ಥಿಸಿದ್ದಾನೆ. ಜಗತ್ತಿಗೆ ಸುಖ ಸಂತೋಷಗಳನ್ನುಂಟುಮಾಡುವ ಲಕ್ಷ್ಮೀದೇವಿಯ ಪತಿಯಾದ ನಾರಾಯಣನು ಆನಂದಸ್ವರೂಪನೆಂದು ನಿಗಮಾಗಮಗಳು ಸಮರ್ಥಿಸುತ್ತವೆ. ಉಪನಿಷತ್ತುಗಳು ಭಗವಂತನನ್ನು ಸತ್-ಚಿತ್-ಆನಂದಸ್ವರೂಪನೆಂದು ಹೇಳುತ್ತವೆ. ಕವಿಯು ಅಂತಹ ಆನಂದಸ್ವರೂಪನಾದ ಲಕ್ಷ್ಮೀರಮಣನನ್ನು ತನಗೂ, ಜಗತ್ತಿಗೂ ಸಂತೋಷವನ್ನುಂಟುಮಾಡೆಂದು ಪ್ರಾರ್ಥಿಸಿರವಲ್ಲಿ ಎಷ್ಟೊಂದು ಔಚಿತ್ಯವಿದೆ ಎಂದರಿಯಬಹುದು. ಎರಡನೆಯ ಪದ್ಯವಾದ ಶಿವಸುತ್ತಿಯಲ್ಲಿ ಕವಿಯು ಪರಮೇಶ್ವರನನ್ನು ಕುರಿತು, “ಲೋಕವಿಸ್ತರಣ ಪ್ರಭಾವ ನಯನತ್ರಯಂ ದೇವ ಗಂಗಾಧರಂ ಬಿಡದೆ ಸಲಹುಗೆ ನಮ್ಮನು” ಎಂದು ಪ್ರಾರ್ಥಿಸಿದ್ದಾನೆ. ಇಲ್ಲಿ ಶಿವನ ತ್ರಿನೇತ್ರಗಳಾದ ಸೂರ‍್ಯ-ಚಂದ್ರ-ಅಗ್ನಿಗಳು ಲೋಕದ ವಿಸ್ತರಣಕ್ಕೆ ಕಾರಣವಾದುವೆಂಬುದು ಕವಿಯ ತಾತ್ಪರ‍್ಯ. ಶಿವನ ತ್ರಿನೇತ್ರಗಳೂ ಜಗತ್ತಿಗೆ ಪ್ರಕಾಶವನ್ನು ನೀಡತಕ್ಕವು ಎಂಬುದನ್ನು ತಿಳಿಸುವುದು ಕವಿಯ ಅಂತರ್ಗತ ಉದ್ದೇಶವಾಗಿದೆ.

ವಿನಾಯಕನ ಸ್ತೋತ್ರವಾದ ಮೂರನೆಯ ಪದ್ಯದಲ್ಲಿ “ಸಮಸ್ತ ಸಿದ್ಧಿಪ್ರದಾಯಕ ವಿನಾಯಕ ಮಾಳ್ಪುದೆನಗೆ ನಿರ್ವಿಘ್ನತೆಯನು” ಎಂದು ಕವಿ ಪ್ರಾರ್ಥಿಸಿಕೊಂಡಿದ್ದಾನೆ. ಇಲ್ಲಿ ಮನುಷ್ಯನು ಯಾವುದೊಂದು ಕಾರ‍್ಯವನ್ನು ಮಾಡಬೇಕಾದರೂ ಮೊದಲು ಈಶ್ವರನ ಕೃಪೆಗೆ ಪಾತ್ರನಾಗಬೇಕು. “ತೇನವಿನಾ ತೃಣಮಪಿ ನಚಲತಿ” ಎಂಬ ಶಾಸ್ತ್ರ ವಾಕ್ಯವು ಇದಕ್ಕೆ ನಿದರ್ಶನ. ಅಂತೆಯೇ ಕಾವ್ಯಾರಂಭದಲ್ಲಿ ಸಮಸ್ತ ಸಿದ್ಧಿ ಪ್ರದಾಯಕನಾದ ವಿನಾಯಕನು ತನ್ನನ್ನು ಅನುಗ್ರಹಿಸಲಿ ಎಂದು ಕೇಳುವುದರಲ್ಲಿಯೂ ಒಳ್ಳೆಯ ಭಾವನೆ ಇದೆ. ನಾಲ್ಕನೆಯ ಪದ್ಯವಾದ ಸರಸ್ವತೀ ಸೋತ್ರದಲ್ಲಿ ಜಗತ್ತಿನ ತಾಯಿಯಾದ ಶಾರದೆಯನ್ನು ಕುರಿತು, “ಕಾವ್ಯಮಿದು ಭುವನದೊಳ್ ಸಕಲ ಜನರಿಂದೆ ಸುಶ್ರಾವ್ಯಮಪ್ಪಂತೆ ಎನ್ನ ವದನಾಬ್ಜದಲ್ಲಿ ನೀನೇ ವ್ಯಾಪಿಸಿರ್ದು ಅಮಲ ಸುಮತಿಯಂತಾ ಎನಗೆ ತಾಯೆ ನಗೆಗೂಡಿ ನೋಡಿ” ಎಂದು ಕವಿ ಕೇಳಿಕೊಳ್ಳುತ್ತಾನೆ. ಇಲ್ಲಿ ಕವಿಯು ತಾನು ಕಾವ್ಯ ಕರ್ತೃವೆಂಬ ಅಹಂಕಾರವನ್ನು ತೊರೆದು, ಈ ಕಾವ್ಯದ ಕರ್ತೃತ್ವವು ವಿದ್ಯಾಭಿಮಾನ ದೇವತೆಯಾದ ಶಾರದೆಗೆ ಸೇರಿದುದು ಎಂದು ಹೇಳಿರುತ್ತಾನೆ. ಇದು ಕವಿಯ ‘ದಾಸೋಹಂ’ ಭಾವ ತತ್ವಕ್ಕೆ ನಿದರ್ಶನ.

ಮುಂದೆ ಪೀಠಿಕೆಯಲ್ಲಿ (ಸಂ. ೧, ಪ. ೮.) “ಗೀರ‍್ವಾಣಪುರನಿಲಯ ಲಕ್ಷ್ಮೀವರಂ ವೀನೇಯಿಂ ಗಾನಮಂ ನುಡಿಸುವಂದದೊಳ್ ಎನ್ನ ವಾಣಿಯಿಂ ಕವಿತೆಯಂ ಪೇಳಿಸಿದಂ” ಎಂದು ಹೇಳುತ್ತಾನೆಂಬುದನ್ನು ಹಿಂದೆಯೇ ತಿಳಿಸಿದೆ. ಇಲ್ಲಿಯೂ ಕವಿಯ ಅಹಂಕಾರ ಶೂನ್ಯತೆ, ದಾಸೋಹಂಭಾವ ಸ್ಪಷ್ಟಗೊಂಡಿದೆ. ಈ ಪದ್ಯದಲ್ಲಿ ಲಕ್ಷ್ಮೀಶನು ತನ್ನನ್ನು ಭಗವಂತನ ಕೈವೀಣೆ ಎಂದು ಮಾತ್ರ ತಿಳಿದುಕೊಂಡಿದ್ದಾನೆ. ಇದು ಕವಿಯ ಮಿಗಿಲಾದ ತತ್ವಜ್ಞಾನದಿಂದುಂಟಾದ ಶರಣಭಾವ. ಮುಂದೆ (ಸಂ. ೨, ಪ. ೧ ೮.)  ಧರ‍್ಮರಾಜನ ಮುಖದಿಂದ “ಅಖಿಲ ಬಾಂಧವರೊಡನೆ ಬದುಕುವ ಮನುಷ್ಯ ಸಂಸಾರದಿಂದೇನು? ಆದರಿಂ ನಿಜಾಯುಷ್ಯ ಮುಳ್ಳನ್ನ ಪರ‍್ಯಂತ ವನವಾಸಮಂ ಮಾಡುವುದೆ ಲೇಸು” ಎಂದು ಹೇಳಿಸಿದ್ದಾನೆ. ಇದು ತನ್ನ ಸುಖಕ್ಕಾಗಿ ಸಕಲ ಬಂಧು ಭಾಂದವರನ್ನೆಲ್ಲಾ ಕೊಂದೆನೆಲ್ಲಾ ಎಂದು ಧರ‍್ಮರಾಜನು ಪಶ್ಚಾತ್ತಾಪ ಪಡುವ ಸನ್ನಿವೇಶ. ಇಂತಹ ಮನೋಭಾವ ಬರಬೇಕಾದರೆ ಮನುಷ್ಯನಿಗೆ ಆಧ್ಯಾತ್ಮದ ಹಿನ್ನಲೆ ಬೇಕು “ಶಶಿ ಮೌಳಿತಾರಕ ಬ್ರಹ್ಮೋಪದೇಶದಿಂ ಪ್ರಾಣಿಗಳ್ಗಾತ್ಮ ಸಾಯುಜ್ಯಮೀವ, ಭೂರಿದುರಿತಂಗಳಂ ಕಂಡ ಮಾತ್ರದೊಳೆ ಸಂಹಾರಮಾಳ್ಪ, ನಿಖಿಳ ಪ್ರಳಯಬಾಧೆಗಳ ದೂರಮೆನಿಪ ವಿಮುಕ್ತಕಾಶಿ” ಎಂದು (ಸಂ. ೫, ಪ. ೩೦) ಕವಿ ಹೇಳುತ್ತಾನೆ. ಇಲ್ಲಿ ಕವಿಗೆ ಕಾಶಿಯಲ್ಲಿಯೂ ಆ ಕ್ಷೇತ್ರ ಮಹಾತ್ಮ್ಯೆಯಲ್ಲಿಯೂ ಇರುವ ಶ್ರದ್ಧಾಸಕ್ತಿಗಳು ವ್ಯಕ್ತವಾಗಿವೆ. ಇದು ಆಧ್ಯಾತ್ಮದೃಷ್ಟಿ ಇಲ್ಲದ ಕವಿಗೆ ಸಾಧ್ಯವಲ್ಲದ ವಿಚಾರ.

ಕಾದ ಎಣ್ಣೆಯಲ್ಲಿ ಮುಳುಗಿದ್ದ ಸುಧನ್ವನು ‘ಗೋವಿಂದ ನೀನಲ್ಲದೆ ವಿಚಾರಿಸುವರಿಲ್ಲ’ ಎಂದು ‘ಚಿತ್ತದೊಳ್ ಕೃಷ್ಣನಂ ಧಾನಿಸುತೆ ನಿರ್ಭಯದಿಂದೆ ಹೇಳುತಿರ್ದನು’ (ಸಂ. ೧೧, ಪ. ೩೫.). ಅಂತಹ ಆಪತ್ಕಾಲದಲ್ಲಿಯೂ ಇಷ್ಟೊಂದು ಧೈರ‍್ಯದಿಂದ ಇದ್ದ ಭಾಗವತ ಶಿರೋಮಣಿ ಸುಧನ್ವನ ನಿಶ್ಚಲತೆ ತತ್ವಜ್ಞಾನವಲ್ಲದೆ ಮತ್ತೇನು ? “ಕೃಷ್ಣನ ಮುಂದೆ ಭಾಷೆಯಂ ಪೂರೈಸಿ ಟೆಂಟೆಣಿಸದೊಡಲಂ ತೊರೆದು ಮುಕ್ತಿರಾಜ್ಯಮಂ ವೆಂಟೆಣಿಸಿಕೊಂಡಂ ಸುಧನ್ವಂ” (ಸಂ. ೧೩, ಪ. ೬೨). ಇಲ್ಲಿ ವೀರರಿಗೆ ಪ್ರಾಪ್ತವಾಗುವ ಮುಕ್ತಿರಾಜ್ಯವು ಭಕ್ತ ವೀರನಾದ ಸುಧನ್ವನಿಗೆ ಪ್ರಾಪ್ತವಾಯಿತೆಂದು ಕವಿ ಹೇಳುತ್ತಾನೆ. ಅಧ್ಯಾತ್ಮದ ಪರಮಾವಧಿಯೇ ಆನಂದ ಮತ್ತು ಮುಕ್ತಿಯಲ್ಲವೆ ? ಮುಂದೆ (ಸ.೧೫) ಪುಣ್ಯಾರಣ್ಯದಲ್ಲಿ ಪಾರ‍್ವತಿಯು ಶಿವನನ್ನು ಕುರಿತು ತಪಸ್ಸು ಮಾಡುವ ರೀತಿಯನ್ನು “ಇಂದು ಮೌಳಿಯ ಪದಧಾನವಂ ಮಾಡುವ ಆನಂದ ಮಿನ್ನೇತರತಿಶಯಮೋ” ಎಂದು ಬಣ್ಣಿಸಿದ್ದಾನೆ. (ಸಂ.೧೫, ಪ. ೧೬) ತಪಸ್ಸು ಮನುಷ್ಯನ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿ ಜೀವನನ್ನು ದೇವನನ್ನಾಗಿ ಮಾಡುತ್ತದೆ ಎಂಬುದು ಇಲ್ಲಿ ಕವಿಯ ತಾತ್ಪರ‍್ಯವಾಗಿದೆ.

“ನಿನ್ನ ಸರ‍್ವಸ್ವಮಂ ತಾತನಂಘ್ರಿಗೆ ಸಮರ‍್ಪಿಸಿದೊಡೆ ಆಂ ಮಾಡಿದ ತಪೋನಿಷ್ಠೆ ಸಫಲಮಾದಪುದು” (ಸಂ. ೧೭, ಪ.೩೪) ಎಂದು ಬಭ್ರುವಾಹನನಿಗೆ ತಾಯಿಯಾದ ಚಿತ್ರಾಂಗದೆಯು ಪಿತೃಭಕ್ತಿಯನ್ನು ಬೋಧಿಸುವಳು. “ಆತ್ಮಾವೈಪುತ್ರನಾಮಾಸಿ “-‘ತಂದೆಯೇ ಮಗನಾಗಿ ಹುಟ್ಟುವನು’-ಎಂದು ಉಪನಿಷತ್ತುಗಳು ಹೇಳುತ್ತವೆ. ತಂದೆಯನ್ನು ವಿರೋಧಿಸುವುದು ಮಗನ ಕರ್ತವ್ಯವಲ್ಲ ಎಂಬುದು ಸನಾತನ ಧರ‍್ಮ ತತ್ವ. ಶ್ರೀರಾಮನ ಅವತಾರ ತತ್ವವು ಅವನ ಪಿತೃಭಕ್ತಿಯಿಂದ ಹೊರಹೊಮ್ಮಿದೆ ಎಂದು ನಾವು ರಾಮಾಯಣದಲ್ಲಿ ಅರಿಯುತ್ತೇವೆ. ಇಂತಹ ದಿವ್ಯ ತತ್ವಗಳನ್ನೇ ಚಿತ್ರಾಂಗದೆ ಮಗನಿಗೆ ಬೋಧಿಸುತ್ತಾಳೆ. ಪತಿಯಾದ ಅರ್ಜುನನ ಆಗಮನಾರ್ಥವಾಗಿಯೇ ತಾನು ಅದುವರೆವಿಗೂ ತಪಸ್ಸು ಮಾಡಿದುದಾಗೆ ಹೇಳುತ್ತಾಳೆ. ಈ ಮಾತು ಅವಳ ಸತೀಧರ‍್ಮಕ್ಕೆ ಮೆರಗು ಕೊಟ್ಟಿದೆ. (ಸಂ. ೧೮, ಪ. ೫೪ರಲ್ಲಿ) ಪ್ರಭು ಶ್ರೀರಾಮಚಂದ್ರನು ಲೋಕರಂಜನಾರ್ಥವಾಗಿ, ಪ್ರಜೆಗಳ ತೃಪ್ತಿಗಾಗಿ “ಮಮತೆಯಂ ಮಹಾಯೋಗಿ ಬಿಡುವಂತೆ” ನಿರಪರಾಧಿಯೆಂದು ತಿಳಿದಿದ್ದರೂ ಸೀತೆಯನ್ನು ತಾನು ಬಿಡುವುದಾಗಿ ಲಕ್ಷ್ಮಣನೊಡನೆ ಹೇಳುತ್ತಾನೆ. ಅಹಹ! ಎಂತಹ ತತ್ವನಿಷ್ಠೆಯಿದು.

ಮಮತೆಯು ಎಲ್ಲ ದುಃಖಗಳ ಮೂಲವೆಂದು ವೇದಾಂತ ಶಾಸ್ತ್ರವು ತಿಳಿಸುತ್ತದೆ. ಕಾರಣ ಅಂತಹ ಮಮತೆಯನ್ನು ಬಿಡುವವನೇ ಯೋಗಿಯೆಂದು ಸ್ವಯಂ ಸಿದ್ಧಾಂತವಾಗಿರುವುದಲ್ಲವೆ ? “ಕೊಂದು ಕೊಂಬೊಡೆ ತನ್ನ ಬೆಂದೊಡಲೊಳಿದೆ ಬಸಿರದಂದು ಗಂ” (ಸ. ೧೯-೨೪) ಎಂದು ಮಾತೆ ಸೀತೆಯು ಹೇಳುತ್ತಾಳೆ. ಶ್ರೀರಾಮಚಂದ್ರನು ತನ್ನನ್ನು ಲೋಕಾಪವಾದಕ್ಕಾಗಿ ಬಿಟ್ಟನೆಂದೂ, ಉಗ್ರವಾದ ಅಡವಿಗೆ ಅಟ್ಟಿದನೆಂದೂ, ಲಕ್ಷ್ಮಣನಿಂದ ಮಾತುಗಳನ್ನು ಕೇಳಿದ ಮೇಲೆ ಸೀತಾ ದೇವಿಯು ಆಡಿದ ಮಾತುಗಳಿವು. ನಿರಾಶರೂ ದುಃಖಿತರೂ ಆದ ಸ್ತ್ರೀಯರು ಆತ್ಮಹತ್ಯಮಾಡಿಕೊಳ್ಳಲು ತವಕಿಸುವುದನ್ನು ನಾವು ಲೋಕದಲ್ಲಿ ಕಾಣುತ್ತೇವೆ. ಇದು ಅವರ ಚಿತ್ತ ದೌರ್ಬಲ್ಯದ ಲಕ್ಷಣ; ಆತ್ಮಜ್ಞಾನವಿಲ್ಲದ್ದರ ಫಲ. ಆದರೆ ಲೋಕಮಾತೆ ಸೀತಾದೇವಿಯು ತಾನು ಗರ್ಭಿಣಿಯಾದುದರಿಂದ ಆತ್ಮಹತ್ಯೆಮಾಡಿಕೊಳ್ಳಲು ತನಗೆ ಹಕ್ಕಿಲ್ಲವೆಂದೂ, ಗರ್ಭದಲ್ಲಿ ಶ್ರೀರಾಮನ ಸಂತಾನವಿದೆಯೆಂದೂ ವಿವೇಕದಿಂದ ಭಾವಿಸುತ್ತಾಳೆ. ಈ ಭಾವನೆಗೆ ಅವಳ ಆತ್ಮಜ್ಞಾನದ ಅರಿವಿನ ಹಿನ್ನೆಲೆ ಇದೆ.

“ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ?” (ಸಂ. ೧೯, ಪ. ೫೨), “ಜಗದೊಳುಪಕಾರಿಯಾದವಂ ತನ್ನ ನೋವಂ ನೋಳ್ಪನೆ” (ಪ. ೩೫), ಭೂರಿಶೋಕಾರ್ತರಾಗಿರ್ದರಂ ಕಂಡು ಸುಮ್ಮನೆ ಪೋಪನಲ್ಲ (ಪ. ೩೯). “ವಸುಮತಿಯೊಳ್ ಆರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯಲ್ತೆ” (ಸಂ. ೨೮, ಪ. ೩೫), “ಕರುಬರಿದ್ಧೂರಿಂದೆ ಕಾಡೊಳ್ಳಿತೆನಿಸುವಂತೆ” (ಪ. ೩೬) “ಬಹುದುರಿತಮಂ ಸ್ವಧರ್ಮದೊಳೊರಸುವಂತೆ” (ಸಂ. ೨೦, ಪ. ೩೨) “ಜೀವ ಪರಮಾತ್ಮರ ವಿಚಾರಸುವ ತೆರದಿಂದೆ” (ಸಂ. ೧೪, ಪ. ೭), “ಪರಮಿಯೋಗಿಗೆ ಭವದ ಬಂಧನಂ ಬಂದಪುದೆ”, “ದುರಿತಗಣಮಿರ್ದಪುದೆ ಗೌತಮಿಯೊಳಾಳ್ದಂಗೆ”, “ಜೀವ ಪರಮರವೊಲಿರ್ದರಾ ವೃಷಧ್ವಜಪಾರ್ಥರು”, “ಲಕ್ಷ್ಮೀಕಾಂತನೊಲವಿಂದೆ ವಿಷಮಮೃತಮಹುದು”, “ಸಂಸಾರ ಪ್ರಲಾಪ ಮಾಲಾಕುಲಮಂ ಅಧ್ಯಾತ್ಮಸಾರದಿಂ ತಡೆವ ಯೋಗೀಶ್ವರನ ಚಿತ್ತದಂತೆ”  (ಸಂ. ೨೮, ಪ. ೮) “ಘೋರ ಸಂಸಾರದೊಳ್ ಮುಸುಕುವ ಮರವೆಯಂ ನಿವಾರಿಸಿ ಮಹಾಯೋಗಿ ಜೀವ ಪರಮಾತ್ಮರ ವಿಚಾರಿಸುವ ತೆರದಂತೆ” (ಸಂ. ೧೪, ಪ. ೭)*ಈ ಮೇಲೆ ಕಂಡ ಎಲ್ಲ ಮಹಾ ವಾಕ್ಯಗಳೂ ಲಕ್ಷ್ಮೀಶ ಕವಿಯ ಭೂತ ಕಾರುಣ್ಯ, ತತ್ಪಜ್ಞಾನ, ವಿಶ್ವ ಬಂಧುತ್ವ, ಮಿಗಿಲಾದ ದೈವಭಕ್ತಿ ಕರುಣಾರ್ದ್ರ ಹೃದಯ-ಇವುಗಳ ಫಲವಾದುವು ಎಂದು ನಾವು ಹೇಳಬಹುದು. ಹೀಗೆ ಕವಿ ಲಕ್ಷ್ಮೀಶನು ಅಧ್ಯಾತ್ಮಿಕ ದೃಷ್ಟಿಯುಳ್ಳವನಾದುದರಿಂದ ಕನ್ನಡ ಜೈಮಿನಿಯನ್ನು ಓದಿದವರಿಗೆ “ಹರಿಹರಾರ್ಚನೆಯ ಸುಕೃತಂಗಳಾದಪುವು” ಎಂದೂ, “ಪುಣ್ಯಮಿದು ಶ್ರೀ ಕೃಷ್ಣಚರಿತಾಮೃತಂ” ಎಂದೂ ಹೇಳಿರುತ್ತಾನೆ. ಹೀಗೆ ಕಾವ್ಯವು ಅಧ್ಯಾತ್ಮದ ಹಿನ್ನಲೆಯಲ್ಲಿ ವಿರಚಿತವಾಗಿರುವುದರಿಂದ ಈ ಗ್ರಂಥವನ್ನು ಮನಮುಟ್ಟಿ ಓದುವವರ ಮನಸ್ಸಿನ ಮೇಲೆ ಗಂಗಾಸ್ನಾನದಿಂದುಂಟಾಗುವ ಚಿತ್ತ ಪಾರಿಶುದ್ಧವೂ, ಅಮೃತಪಾನಮಾಡಿದವರಿಗೆ ಉಂಟಾಗುವ ಆನಂದಾತಿಶಯವೂ, ಮಂಜುಳ ವೀಣಾಗಾನವನ್ನು ಕೇಳುವುದರಿಂದುಂಟಾಗುವ ಮನೋವಿಲಾಸವೂ ಅನುಭವಕ್ಕೆ ಬರುತ್ತದೆ.