ಲಕ್ಷ್ಮೀಶ ಕವಿಯ ಕಾಲ ಮತ್ತು ಊರುಗಳ ಬಗ್ಗೆ ಚರ್ಚೆ ನಡೆದಂತೆಯೇ ಕವಿಯ ಮತದ ಬಗ್ಗೆ ಕೂಡ ದೀರ್ಘವಾದ ವಿಮರ್ಶೆ ನಡೆದಿದೆ. ನಿಜವಾಗಿ ಕವಿಯು ಯಾವ ಜಾತಿಗೂ ಸೇರಿದವನಲ್ಲ. ಅವನ ಜಾತಿ ಸಾಹಿತಿಯ ಜಾತಿ; ಅವನ ನೀತಿ ವಿಶ್ವಧರ‍್ಮದ ನೀತಿ; ಅವನ ರೀತಿ ಸಹೃದಯರ ರೀತಿ. ಲಕ್ಷ್ಮೀಶನು ನಿಜವಾಗಿಯೂ ಉದಾರ ಮತ್ತು ಉದಾತ್ತ ಧರ‍್ಮಕ್ಕೆ ಸೇರಿದವನು. ಆದರೆ ಇಲ್ಲಿ ನಾವು ಮಾಡುವ ವಿಮರ್ಶೆ ಕವಿಯ ಚರಿತ್ರೆಯನ್ನು ತಿಳಿಯಲು ಮಾತ್ರ.

ಕನ್ನಡ ಜೈಮಿನಿಯ ಮಂಗಳ ಶ್ಲೋಕವು ಶ್ರೀ ವಿಷ್ಣುವಿನ ಪರವಾಗಿದೆ. ಪ್ರತಿಯೊಂದು ಸಂಧಿಯ ಕಡೆಯಲ್ಲಿಯೂ ಇಷ್ಟದೇವತೆಯಾದ ಲಕ್ಷ್ಮೀಶನನ್ನು ಕವಿ ತಿಳಿಯಬಹುದು. ಆದರೆ ಕಾವ್ಯದ ಎರಡನೆಯ ಪದ್ಯವು ಶಿವನಪರವಾಗಿಯೂ, ಮೂರನೆಯ ಪದ್ಯವು ವಿಘ್ನೇಶ್ವರನ ಪರವಾಗಿಯೂ ಇರುವುದರಿಂದಲೂ ಕಾವ್ಯದ ಮಧ್ಯದಲ್ಲಿ ಶಿವಪಾರ್ವತಿಯರ ಮಹಿಮಾ ಸನ್ನಿವೇಶಗಳು ಬರುವುದರಿಂದಲೂ, ಇವನು ಅದ್ವ್ಯೆತ ಸಿದ್ಧಾಂತವನ್ನು ಅಂಗೀಕರಿಸಿದವನೆಂದು ತಿಳಿಯಬಹುದು. “ಹರಿಹರಾರ್ಚನೆಯ ಸುಕೃತಂಗಳಾದಪುವು ಜೈಮಿನಿ ಭಾರತದೊಳೊಂದು ವರ್ಣಮಂ ಪ್ರೀತಿಯಿಂ ಕೇಳ್ದವರ್ಗೆ.” (ಸಂ.೩೪. ಪ ೪೩). ಎಂಬ ಈ ಮಾತಿನಿಂದ ಕವಿಯು ಮೂಲ ಸಂಸ್ಕೃತದಲ್ಲಿ ಇಲ್ಲದಿರುವುದನ್ನು ಸ್ವತಂತ್ರಿಸಿ ಹೇಳಿರುವುದರಿಂದ ಇವನು ವೀರವೈಷ್ಣವನಲ್ಲವೆಂದು ಸ್ಪಷ್ಟವಾಗಿ ಹೇಳಬಹುದು. ಇನ್ನೊಂದು ಕಡೆ “ಜೀವ ಪರಮಾತ್ಮರ ವಿಚಾರಿಸುವ ತೆರದಿಂದೆ ಕೃಷ್ಣ ಫಲಗುಣರನರಸಿದನು” (ಸಂ ೧೪. ಪ. ೭) ಎಂದು ಹೇಳಿರುವುದನ್ನು ನೋಡಿದರೆ, ಅಹಂ ಬ್ರಹ್ಮಾಸ್ಮಿ, ಶಿವೋಹಂ-ಇತ್ಯಾದಿ ತತ್ವಗಳನ್ನು ಹೇಳಿವ ಶುದ್ಧವಾದ ಅದ್ವೈತಮತಕ್ಕೆ ಸೇರಿದವನಲ್ಲವೆಂದು ತಿಳಿಯಬಹುದು. ಮೂಲಸಂಸ್ಕೃತ ಕಾವ್ಯದಲ್ಲಿ ಇಲ್ಲದಿರುವ ಪಾರ‍್ವತಿಯ ಸ್ತೋತ್ರವು ಚಂದ್ರಹಾಸನ ಕಥೆಯಲ್ಲಿ (ಸಂ ೩೧. ಪ ೭೨-೭೩) ಬಂದಿರುವುದನ್ನು ನೋಡಿದರೆ ಕವಿಯು ಆದಿಶಕ್ತಿಯನ್ನು ಅರ್ಚಿಸುವ ಶಾಕ್ತೇಯ ಪಂಥವನ್ನು ಕೂಡ ಗೌರವಿಸಿದಂತೆ ಕಾಣುತ್ತದೆ.

ಇದನ್ನೆಲ್ಲ ನೋಡಿದರೆ ಹರಿಹರರನ್ನು ಸಮಾನವಾಗೆಣಿಸುವ, ಕ್ರಿ.ಶ. ನಾಲ್ಕನೆಯ ಶತಮಾನದಿಂದ ಭಾರತದಲ್ಲಿ ಪ್ರಚಲಿತವಾಗಿರುವ, ಭಾಗವತ ಧರ‍್ಮಕ್ಕೆ ಕವಿ ಸೇರಿದವನೆಂದು ನಾವು ಸ್ಥೂಲವಾಗಿ ಹೇಳಬಹುದು. ಮೂಲ ಸಂಸ್ಕೃತ ಜೈಮಿನಿ ಭಾರತದಲ್ಲಿ ಕೂಡ ಭಾಗವತ ಧರ‍್ಮವು ನಿರೂಪಿತವಾಗಿದೆಯೆಂದು ವಿದ್ವಾಂಸರು ಹೇಳುತ್ತಾರೆ. ಕವಿಯು ಭೀಷ್ಮನನ್ನು ಕುರಿತು “ಸ್ವೇಚ್ಛಾಮರಣಿ ಭಾಗವತ ಮಸ್ತಕಮಣಿ” (ಸಂ.೯. ಪ ೩೦) ಎಂದೂ, ಚಂದ್ರಹಾಸನನ್ನು ಕುರಿತು, “ಭಾಗವತ ಶಿರೋಮಣಿ” ಎಂದೂ ಹೇಳಿರುವುದರಿಂದ ಇವನು ಭಾಗವತ ಪಂಥದ ಕವಿ ಎಂಬ ಮಾತು ಚೆನ್ನಾಗಿ ದೃಢಪಡುತ್ತದೆ.

ಕನ್ನಡ ಜೈಮಿನಿ ಭಾರತವನ್ನು ಆದ್ಯಂತವಾಗಿ ಓದಿದರೆ ಅವನು ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮೊದಲಾದ ಯಾವ ಮತಗಳಿಗೂ ಕಟ್ಟು ಬಿದ್ದಿಲ್ಲವೆಂದು ಹೇಳಬಹುದು. ಕವಿಯ, ಉದಾರವಾದ ಭಾಗವತ ಪಂಥಕ್ಕೆ ಸೇರಿದುದರಿಂದ ಅವನು ಯಾವ ಮತವನ್ನೂ ವಿರೋಧಿಸಲು ಕಾರಣವಿಲ್ಲ. ಮೂಲ ಸಂಸ್ಕೃತ ಜೈಮಿನಿಯು ಭಾಗವತ ಪಂಥದ ಗ್ರಂಥವಾಗಿರುವುದು ಲಕ್ಷ್ಮೀಶನ ವ್ಯಾಸ, ಕುಮಾರ ವಾಲ್ಮೀಕಿ, ಕನಕದಾಸ, ಚಾಟುವಿಠಲನಾಥ ಮೊದಲಾದ ಕನ್ನಡ ಕವಿಗಳ ಭಾಗವತ ಪಂಥಕ್ಕೇ ಈ ಲಕ್ಷ್ಮೀಶನು ಸೇರಿದವನೆಂದೇ ತೋರುತ್ತದೆ. ಈ ಎಲ್ಲ ಕವಿಗಳಲ್ಲಿಯೂ ತ್ರಿಮೂರ್ತಿಗಳನ್ನು ಗೌರವಿಸುವುದು, ಹರಿಹರರಲ್ಲಿ ಭೇದವನ್ನು ಮಾಡದಿರುವುದು, ಭಕ್ತಿ ಮಾರ್ಗವನ್ನು ಮಿಗಿಲಾಗಿ ಬೋಧಿಸುವುದು, ಎಲ್ಲ ದೇವತೆಗಳನ್ನೂ ಗೌರವಿಸುವುದು, ಶ್ರೀ ವಿಷ್ಣುವಿಗೂ ಅವನ ಅವತಾರಗಳಿಗೂ ಒಂದು ಬಗೆಯ ವಿಶಿಷ್ಟ ಮಹತ್ವವನ್ನು ಕೊಡುವುದು, ಇತ್ಯಾದಿ ಲಕ್ಷಣಗಳನ್ನು ನಾವು ಕಾಣಬಹುದು. ಲಕ್ಷ್ಮೀಶನು ಇಂತಹ ಉದಾತ್ತ ಧರ‍್ಮವನ್ನು ಅನುಸರಿದ್ದರಿಂದಲೇ ಅವನ ಅಮರ ಕಾವ್ಯವು ಹೆಚ್ಚು ಜನಪ್ರಿಯವಾಯಿತೆಂದು ತೋರುತ್ತದೆ.

ಮಹಾಕವಿ ಲಕ್ಷ್ಮೀಶನ ಜೈಮಿನಿಯಲ್ಲಿ ಧರ‍್ಮರಾಜನ ಯಜ್ಞಾಶ್ವವು ವಧಿಸಲ್ಪಡುವ ಸಂದರ್ಭದಲ್ಲಿ ಅಹಿಂಸಾಧರ‍್ಮದ ಪ್ರಭಾವ ಕಂಡುಬರುತ್ತದೆ. ಇದಕ್ಕೆ ನಿದರ್ಶನವಾಗಿ “ಉಳಿದ ಯೂಪಂಗಳೊಳ್ ಕಟ್ಟಿರ್ದ ಪಶುಗಳಂ ಕಳೆದು ಎಲ್ಲಮಂ ಬಿಡಿಸಿ; ತೊಳಗಿ ಬೆಳಗಿದನ್ ಇಂದ್ರತೇಜದಿಂ ಮನುಜೇಂದ್ರನು” (ಸಂ.೩೪. ಪ. ೩೦). ಅಂದರೆ ಯಜ್ಞಾರ್ಥವಾಗಿ ಬಂದಿದ್ದ ಮತ್ತುಳಿದ ಎಲ್ಲ ಪಶುಗಳನ್ನೂ ವಧಿಸದೆ ಹಾಗೆಯೇ ಬಿಟ್ಟರೆಂದು ಹೇಳಿದೆ. ಇದೂ ಕೂಡ ಅಹಿಂಸಾಧರ‍್ಮಕ್ಕೆ ನಿದರ್ಶನವಾಗಿದೆ. ಇಲ್ಲಿ ಆದ ಹವನವು ವಿನೂತನವಾಗಿದೆ. ಯಜ್ಞದಲ್ಲಿ ಸತ್ತ ಪಶುವಿಗೆ ಸ್ವರ್ಗಸುಖವೆಂದು ಶಾಸ್ತ್ರಜ್ಞರು ಹೇಳಿದ್ದಾರೆ. ಆದರೆ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ “ಅವಧರಿಸು ಹಯಮುಪರಿ ಲೋಕದ ಅಶ್ವಪದವಿಯಂ ತಾನೊಲ್ಲೆಂ ಉಪಮೆಗೈದದ ಕೃಷ್ಣಸಾಯುಜ್ಯಮಂ ಪಡೆವೆಂ” ಎಂದು ತನ್ನಲ್ಲಿ ಹೇಳಿತೆಂದು ವಿಪುಲಮತಿ ನಕುಲನು ಹೇಳುತ್ತಾನೆ. (ಸಂ. ೩೪, ಪ. ೧೩) ಆ ಮೇಲೆ ಭೀಮನು ಅಶ್ವದ ತಲೆಯನ್ನು ಛೇದಿಸಲು ಆ ತಲೆ ಇಳೆಗೆ ಬೀಳದೆ “ನಭಸ್ಥಳಕೆ ಅಡರ್ದು ಅಡಗಿತು ಇನಮಂಡಲದೊಳು” (ಸಂ.೩೪, ಪ. ೧೭). ಅನಂತರ ಆ ಕುದುರೆಯ ‘ಜೀವಾತ್ಮನತಿತೇಜ ದಿಂದಚ್ಯುತಾಸ್ಯದೊಳಡಗಲು’ ಶ್ರೀ ಕೃಷ್ಣನ ಹೃದಯದಲ್ಲಿ ಅಡಗುತ್ತದೆ. ಅದನ್ನು ನೋಡಿದ ಋಷಿಗಳು, “ಎಲೆ ಯುಧಿಷ್ಠರ, ಪೂರ‍್ವಯುಗದ ಅಧ್ವರಂಗಳೊಳ್ ಕಾಣಿವೀಪರಿವ್ರತದ ಪಶುವನು ಇದು ನಿನಗೆ ದೊರೆಕೊಂಡು ಕ್ರತು ಸಫಲಮಾದುದು” (ಸಂ. ೩೪, ಪ. ೧೮) ಎಂದು ಹೇಳುತ್ತಾರೆ. ಈ ಚಮತ್ಕಾರ ಇಷ್ಟಕ್ಕೇ ನಿಲ್ಲದೆ “ಏವೇಳ್ವೆಂ ಆಶ್ಚರ‍್ಯಮಂ ಬಳಿಕಾವಾಜಿಯ ಕಳೇವರಂ ಕರ‍್ಪೂರಮಾದುದು ಅತಿಶುಭ್ರದಿಂ.” ಎಂಬಂತೆ ಕುದುರೆಯ ದೇಹವು ಕರ‍್ಪೂರಮಯವಾಗಿಬಿಡುತ್ತದೆ. ಇಷ್ಟೊ ಅಲ್ಲದೆ, “ಕರಾಗ್ರದಿಂ ಪಿಡಿದು ಹಯದ ಎಡಗಿವಿಯಂ ಸೀಳಿದೊಡೆ ನೆತ್ತರಿಲ್ಲದೆ ಮಹಾಕ್ಷೀರಧರೆ ಪೊರಮಟ್ಟುದು.’ (ಸಂ. ೩೪, ಪ. ೧೬) ಎಂದು ಹೇಳಿ ಕವಿಯು ಈ ಧರ‍್ಮರಾಜನ ಯಾಗವು ಅಹಿಂಸಾಮಯವಾದುದೆಂದು ಹೇಳಲು ಯತ್ನಿಸಿರುತ್ತಾನೆ. ಆದರೆ ಈ ಕಥಾವಸ್ತುವು ಮೂಲ ಸಂಸ್ಕೃತ ಜೈಮಿನಿ ಭಾರತದಲ್ಲಿರುವುದು ಗಮನಾರ್ಹವಾಗಿದೆ. ಕವಿಯ ದಯಾಧರ‍್ಮ ನಿರೂಪಣಿಗೆ ಇದು ನೆರವಾಗಿದೆ. ಭಾರತದಲ್ಲಿ ಜೈನ-ಬೌದ್ಧ ಧರ‍್ಮಗಳು ತಲೆಯೆತ್ತಿ ಅಹಿಂಸಾ ಧರ್ಮವನ್ನು ಎತ್ತಿಹಿಡಿದ ಮೇಲೆ ಸಂಸ್ಕೃತ ಜೈಮಿನಿ ಭಾರತ ವಿರಚಿತವಾಗಿದ್ದು. ಅಶ್ವಮೇಧ ಯಾಗವು ಅಹಿಂಸಾತ್ಮಕವೆಂಬಂತಾಗಲು ಕಾರಣವಾಗಿರಬೇಕು. ಪರಮವೈದಿಕರಾದ ಶ್ರೀ ಮಧಾಚಾರ‍್ಯರು ಪಿಷ್ಠ ಪಶು ವಧೆಯನ್ನು ಹೇಳಿರುವುದು ಇಲ್ಲಿ ಗಮನಾರ್ಹವಾಗಿದೆ.

ಇದೇ ಸಂದರ್ಭವು ಮಹಾಭಾರತದಲ್ಲಿ ಇದಕ್ಕೆ ಭಿನ್ನವಾಗಿದೆ. ವಿಜಯನಗರದ ಕೃಷ್ಣದೇವರಾಯನಿಗೆ ಅಂಕಿತವಾಗಿ ತಿಮ್ಮಣ್ಣಕವಿಯಿಂದ ವಿರಚಿತವಾಗಿರುವ ಕಡೆಯ ಎಂಟು ಪರ‍್ವಗಳ ಭಾರತ ಕಾವ್ಯ ಕನ್ನಡದಲ್ಲಿ ಅಚ್ಚಾಗಿ ಪ್ರಕಟವಾಗಿದೆ.

ಅದರಲ್ಲಿ-

ಕ್ಷಿತಿಪ ಕೇಳ್ ಯೂಪಂಗಳಲಿ ವಿಧಿ |

ಯುತವೆನಿಸಿ ಮೃಗಪಕ್ಷಿ ಜಲ ಚರ |
ತತಿಗಳನು ಸಂಯೋಜಿಸಿದರುಚಿತದಲಿ ಋತ್ವಿಜರು ||
ಅತಿ ಲಲಿತ ವೆಂಬಂದದಲಿ ತತ್ |
ಕ್ರತುವಿನಲಿ ಮುನ್ನೂರು ನಂದಾ |
ಯತವ ಮಾಡಿದರುಚಿತ ಲಕ್ಷಣ ಯುಕ್ತ ಪಶುಚಯವ ||

ಲಲಿತಯೂಪ ಸುಯೋಜಿತಾಶ್ವವ |
ಬಳಸಿಕೊಂಡಿಪ್ಪಂತೆ ಪಶುತತಿ |
ಗಳನು ನಿಲಿಸಿದರಾಗಮೋಕ್ತ ಕ್ರಮವಿದೆಂಬಂತೆ ||
ಬಳಿಕ ತತ್‌ಕ್ರಮ ಋತ್ವಿಜಾವಳಿ |
ಯೊಳಗೆ ಸದಲಂಕಾರವಾಗುತ |
ಲಲಘು ಮಹಿಮೆಯನುಳ್ಳ ಪಾರಾಶರ‍್ಯನೊಪ್ಪಿದನು ||

ಬಲಿದು ಸರ‍್ವಪಶು ಶ್ರವಣಗಳ |
ನಲವು ವಿಧಿಯಲಿ ಮಾಡಿಕ್ರಮದಲಿ |
ಬಳಿಕ ಶಾಲ್ವಂಬನವ ಪರಿರಚಿಸಿದರು ಯಾಜ್ಞಿಕರು ||
ಲಲಿತವಾದಾ ಹಯದ ಮಾಂಸಂ |
ಗಳನು ತತ್ತದ್ದೇವತಾ ಸಂ |
ಕುಳಕುಚಿತವೆಂಬಂದದಲಿ ಯಾಹುತಿಯ ಮಾಡಿದರು ||

ಬಳಿಕ ಶೇಷಿಸಿ ದಶ್ವಮಾಂಸಂ |
ಗಳನು ಯಾಜಕರಾಗ ಯಾಗ |
ಜ್ವಲನೊಳಗಾಹುತಿಯ ಮಾಡಿದರರುಹ ಮಂತ್ರದಲಿ || (ಕನ್ನಡ ಮಹಾಭಾರತ, ಅಶ್ವಮೇಧ ಪರ‍್ವ, ಸಂ. ೮. ಪ.೧೯, ೨೦,೨೧,೨೩)

ಮೇಲೆ ಕಂಡ ಪದ್ಯಗಳು ಮಹಾಭಾರತದ ಅಶ್ವಮೇಧದಲ್ಲಿ ಪ್ರಾಣಿ ಹಿಂಸೆಯು ಧಾರಾಳವಾಗಿ ನಡೆದಂತೆ ಹೇಳಿದೆಯಲ್ಲವೆ?