ನೃಪತುಂಗನ ಪ್ರಶಸ್ತಿಗೆ I-೧, ೨, ೬, ೨೩, ೧೪೭-೮, II -೨, ೧೧, ೨೯, ೩೦, ೫೫, ೧೫೫, III -೧, ೧೧, ೧೮, ೧೦೭-೮, ೧೮೨, ೨೦೭, ೨೦೮, ೨೧೮ ಇವುಗಳನ್ನು ವಿಶೇಷತಃ ಉಲ್ಲೇಖಿಸಬಹುದು. ಇವುಗಳಲ್ಲಿ ಅನೇಕ ವೇಳೆ ಅವನ ಗುಣವರ್ಣನೆಯನ್ನಷ್ಟೇ ಅಲ್ಲದೆ ಕೆಲವೊಂದು ಕಾವ್ಯಪ್ರಕ್ರಿಯಾವಿಷಯಕ ಅಭಿಪ್ರಾಯಗಳೂ ಅವನವೇ ಎಂದು ಸ್ಪಷ್ಟವಾದ ಉಲ್ಲೇಖವನ್ನೂ ಕಾಣುತ್ತೇವೆ.

ಹೀಗೇಯೇ ನೃಪತುಂಗನ ಸಭಾಸದರ ಸ್ವಭಾವವನ್ನು ವರ್ಣಿಸುವ ಪದ್ಯಗಳೆಂದರೆ I-೫, ೬, ಇದನ್ನು ಸಾಮಾನ್ಯವರ್ಣನೆಯೆನ್ನಬಹುದು.

ಮುಂದೆ III ೨೧೯-೨೩೦ ರ ವರೆಗೆ ನೃಪತುಂಗಭಾಸದ-ಪ್ರಶಂಸೆ ಬರುತ್ತದೆ. ಇವನು ಸಕಲ ಲೌಕಿಕ, ಸಾಮಯಿಕ ಮತ್ತು ವೈದಿಕ ವಿದ್ಯಾಪಾರಂಗತ, ಸಾಹಿತ್ಯ ವಿದ್ಯೆಯಲ್ಲಿ ಪ್ರಕಟಿತ ಕಲಾ-ಕಲಾಪ; ಅತಿಶಯ ಪ್ರತಿಭಾಶಾಲಿ, ಮಹಾಚತುರ: ಲಕ್ಷಣ-ಲಕ್ಷ್ಯ ನಿರೂಪಣೆಯ ವಿವೇಚಕ; ಅಶೇಷ ಭಾಷಾವಿಶೇಷಗಳಲ್ಲೂ (ಎಂದರೆ ಸಂಸ್ಕೃತ, ಪ್ರಾಕೃತ, ಅಪಭ್ರಂಶ, ಪೈಶಾಚಿ ಮತ್ತು ಕನ್ನಡ) ಜಾಣ; ದೇವತೆ, ಗುರು ವೃದ್ಧಾದಿಗಳ ಪೂಜಕ, ಸಾಮಾನ್ಯರಂತೆ ಚಾಪಲವಿಲ್ಲದವನು; ಪರಮ ದಯಾಳು; ದೋಸಮುಕ್ತ; ಎಲ್ಲರಲ್ಲಿಯೂ ಆದರ ತೋರುವವನು; ಪರಗುಣಸಹಿಷ್ಣು ಆತ್ಮಪ್ರಶಂಸಾವಿಮುಖ; ಅಖಿಲಶಾಸ್ತ್ರಜ್ಞ. ಧರ್ಮವೇ ಮೋಕ್ಷಸುಖಕ್ಕೆ ಮುಖ್ಯ ಸಾಧನವೆಂದು ಬಲ್ಲವನು; ನಿರ್ಮಲ ಕೀರ್ತಿಯಿಂದ ಉಜ್ವಲನಾಗಿ ಜಗತ್ತಿಗೆ ದೀಪಪ್ರಾಯನಾಗಿರುವವನು; ಮಹಾಪುರುಷವ್ರತವನ್ನು ಆಚರಿಸತಕ್ಕವನು; ಎರಡನೆಯವರ ಉಕ್ತಿಗಳತ್ತ ಕೈಯಾನದವನು. ವರಸಂಗೀತದಂತೆ ಉತ್ತಮ ಕಾವ್ಯಾಲಾಪದಿಂದ ನೃಪತುಂಗಸಭಾಸದರು ಎಲ್ಲರನ್ನೂ ಸಂತಸಪಡಿಸಬಲ್ಲವರು. ಅಂತಹವರು ಈತನು ಸರಸ್ವತೀ ತೀಥಾವತಾರನೆಂದು ಹೊಗಳುತ್ತಿರುವರು. ಕುಲ, ಜಾತಿ, ದೇಶ ಎಲ್ಲದರಲ್ಲಿಯೂ ಹಿರಿಯ; ವಿನಯವಂತ; ತನ್ನ ಗುಣಗಳನ್ನು ಕೃತಿಯಲ್ಲಿ ಬಿಂಬಿಸಿರುವಾತ; ಗುಣ-ದೋಷವಿವೇಕದ ಬೆಗೆ ‘ನಿರ್ಮಲ’ ಗುರೂಪದೇಶದ ಫಲವಾಗಿ ಸಕಲಜ್ಞನಾಗಿರುವವನು; ಮದ, ಮಾನ, ಭಯ, ಲೋಭ, ವಿಷಾದ, ಹರ್ಷ ಮುಂತಾದ ಕಷಾಯಗಳಿಂದ ದೂರನು; ಒಳಗಿನ ಷಡ್ರಿಪುಗಳನ್ನು ಜಯಿಸಿದವನು; ತನ್ನ ಪ್ರಜ್ಞಾಬಲದಿಂದ ವಿಶ್ವಲೋಕವನ್ನೇ ಸಾಕ್ಷಾತ್ಕರಿಸಿಕೊಂಡವನು; ಬುಧಜನಪ್ರಿಯ; ಹೇಳಿದಂತೆ ನಡೆವಾತನು. ಮಹಾನುಭಾವ, ಅಭಿಮಾನಿ, ವಿನೋದಶೀಲ; ಉದಾರ ಚರಿತ, ಸರಸಜನರಿಗೆ ಆಶ್ರಯ, ಪರೋಪಕಾರಿ, ಗುಣೋದಯ, ಆಕಾರಣಮಿತ್ರ. ಸಹಾಯ; ಸಾಹಸದಲ್ಲಿ ರಸಿಕ; ವಿವಿಧ ಕೃತಿಗಳಿಂದ ಮಹಾಪ್ರಭಾವವನ್ನು ಪ್ರಕಟಗೊಳಿಸಿದವನು; ವ್ಯಸನದೂರ, ಕಲಾಕಲಾಪಕುಶಲ, ಬೆಳುದಿಂಗಳಂತೆ ಬೆಳ್ಜಸವನ್ನು ಪಡೆದಾತ ! ನೃಪತುಂಗದೇವಮಾರ್ಗದ ಒಳಮರ್ಮವನ್ನು ಬಲ್ಲ ವಿಶೇಷಜ್ಞನು ಕಾವ್ಯಸಾಗರವನ್ನು ಸುಖವಾಗಿ ಪಾರಗಾಣೂವನೆಂಬ ಫಲುಶ್ರುತಿಯಿಂದ ಗ್ರಂಥ ಮುಗಿದಿದೆ.

ಮತ್ತೆ ಸಮಾಪ್ತಿಪದ್ಯದಲ್ಲಿ ಶ್ರೀವಿಜಯಪ್ರಭೂತಿಜಯಶ ಆಚಂದ್ರತಾರವಾಗಿ ನೆಲೆಗೊಳ್ಳಲೆಂಬ ಹಾರೈಕೆ ಬಂದಿದೆ. ಅಂತ್ಯದ ಗದ್ಯದಲ್ಲಿ ಮೊದಲಿನಳತೆ ‘ನೃಪತುಂಗ ದೇವಾನುಮತಮಪ್ಪ ಕವಿರಾಜಮಾರ್ಗ’ ಎಂದೇ ಇದೆ.

ಹೀಗೆ ಹಾಸು-ಹೊಕ್ಕಾಗಿ ಬಂದಿರುವ ನೃಪಪ್ರಶಂಸೆ-ನೃಪಸಭಾಸದನ ಪ್ರಶಂಸೆ-ಶ್ರೀವಿಜಯ ಪ್ರಶಂಸೆಗಳನ್ನು ಗಮನಿಸಿ ಕಡೆಯ ಇಬ್ಬರೂ ಒಂದೇ ಎಂದೂ ಆತನೇ ತನ್ನ ಪೋಷಕರಾಜನಾದ ನೃಪತುಂಗನ ಹೆಸರಿನಲ್ಲಿ ಪ್ರಶಸ್ತಿಗಳನ್ನು ಗ್ರಂಥದುದ್ದಕ್ಕೂ ಕೂಡಿಸಿಕೊಂಡು ಗ್ರಂಥರಚನೆಮಾಡಿರಬೇಕೆಂದು ಸದ್ಯಕ್ಕೆ ಊಹಿಸಿಕೊಳ್ಳಬೇಕಾಗಿದೆ. ನೃಪತುಂಗನ ನಾಮೋಚ್ಚಾರಣೆ ಮಾಡಿದ ಸಾಮಾನ್ಯ ರಾಜಪ್ರಶಂಸೆಗೆ ಮೀಸಲಾಗಿರುವ ಲಕ್ಷ್ಯಪದ್ಯಗಳು ಕವಿರಾಜಮಾರ್ಗದಲ್ಲಿ ಬೇಕಾದಷ್ಟಿವೆ. (I-೮೨, ೯೬, ೧೧೫, ೧೨೩, ೧೨೮, ೧೩೯, ೧೪೦, ೧೪೧, ೧೪೨; II -೧೨, ೧೪, ೧೭, ೧೮, ೨೧, ೨೪, ೭೨, ೮೦, ೧೪೨; III -೨೦, ೪೦, ೪೧, ೪೨, ೪೩, ೪೪, ೮೫, ೮೮, ೧೧೦, ೧೧೧, ೧೧೩, ೧೫೬, ೧೬೨, ೧೬೩ ಇತ್ಯಾದಿ.) ಅವನ್ನಿಲ್ಲಿ ಗಣನೆಗೆ ತೆಗೆದುಕೊಳ್ಳದಿರಲು ಕಾರಣ-ಇಂತಹ ರಾಜಪ್ರಶಂಸೆ ಹಾಗು ಸ್ತ್ರೀಪ್ರಶಂಸೆಗಳು ಲಕ್ಷಣಗ್ರಂಥಗಳ ಉದಾಹರಣೆಗಳಲ್ಲಿ ಸಾಮಾನ್ಯ; ಅವು ಯಾವ ಒಬ್ಬ ವಿಶಿಷ್ಟವ್ಯಕ್ತಿಯನ್ನು ಕುರಿತಿಲ್ಲದೆ ಇರಬಹುದು ಎಂಬುದೇ ಆಗಿದೆ.

‘ಅಮೋಘವರ್ಷ’ ಎಂಬ ನೃಪತುಂಗನ ಬಿರುದನ್ನು ಕೂಡ ‘ವಿಕ್ರಮಾದಿತ್ಯ’ ಎಂಬ ಪ್ರಸಿದ್ಧ ಬಿರುದಿನಂತೆಯೇ ಮುಂದೆ ಪರಮಾರವಂಶದ ಮುಂಜರಾಜ ಮುಂತಾದವರು ಧರಿಸಿದುದನ್ನು ಇತಿಹಾಸದಲ್ಲಿ ಕಾಣುತ್ತೇವೆ. ಎಂದಮೇಲೆ ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ವೈಭವ ಎಷ್ಟು ಹಿರಿದಾಗಿದ್ದಿತೆಂಬುದು ವ್ಯಕ್ತವಾಗುತ್ತದೆ.

ನೃಪತುಂಗ ಜೈನಮತಾನುಯಾಯಿಯೆ?

ಕವಿರಾಜಮಾರ್ಗದ ಕೆಲವೊಂದು ಪದ್ಯಗಳು ನಿಚ್ಚಳವಾಗಿ ಜೈನಮತಶ್ರದ್ಧೆಯನ್ನು ವ್ಯಕ್ತಮಾಡುತ್ತವೆ(I-೧೯. ೨೮, ೯೧, ೧೦೪, ೧೦೯; II -೪೯, ೧೧೯, ೧೩೫, ೧೫೨; III -೧೮, ೯೫, ೨೨೮). ಈಗಾಗಲೇ ನೋಡಿದಂತೆ ಶ್ರೀವಿಜಯನು ಜೈನನೆಂಬುದು ನಿರ್ವಿವಾದ. ನೃಪತುಂಗನು ಜೈನಮತವನ್ನು ಸ್ವೀಕಾರಮಾಡಿಯೇ ಇರಲಿಲ್ಲವೆಂಬುದು ಬೇರೆ ಆಧಾರಗಳಿಂದ ಖಚಿತವಾದರೆ, ಅವನು ಕವಿರಾಜಮಾರ್ಗವನ್ನು ಬರೆದಿರಬಹುದೆಂಬ ವಾದ ಬಿದ್ದೇಹೋಗುತ್ತದೆ. ಆದ್ದರಿಂದ ಇದು ವಿಚಾರಣೀಯವಾಗಿದೆ.

ಶಾಸನಗಳಲ್ಲಿ ನೃಪತುಂಗನು ಜಿನಾಲಯಗಳಂತೆ ಶಿವಾಲಯಗಳಿಗೂ ಭೂದಾನ ಮಾಡಿದ ಉಲ್ಲೇಖಗಳು ದೊರೆತಿವೆಯೇ ಹೊರತು, ಅವನು ಜೈನಧರ್ಮೀಯನೇ ಆಗಿದ್ದನೆನ್ನಲು ಆಧಾರ ದೊರೆತಿಲ್ಲ. ಆದರೆ ಜೈನ ಸಾಹಿತ್ಯಗ್ರಂಥಗಳಲ್ಲಿ, ಅದೂ ಸಮಕಾಲೀನ ಗ್ರಂಥಗಳಲ್ಲಿಯೇ ದೊರೆಯುವ ಸಾಕ್ಷ್ಯ ಅವನು ಜೈನನಾಗಿದ್ದಿರಬಹುದೆಂಬುದನ್ನೇ ಸಮರ್ಥಿಸುತ್ತದೆ-

೧. ಮಹಾವೀರಾಚಾರ್ಯನ ‘ಗಣಿತಸಾರಸಂಗ್ರಹ’:

ಇದು ಗಣಿತಶಾಸ್ತ್ರ ಗ್ರಂಥ, ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲೇ ರಚಿತವಾದುದು. ಇದರ ಲೇಖಕ ಜೈನ. ಈತನು ಗ್ರಂಥಾರಂಭದಲ್ಲಿ ‘ಸಂಖ್ಯಾಜ್ಞಾತಪ್ರದೀಪ’ನಾದ ಜಿನೇಂದ್ರನ ಸ್ತೋತ್ರವಾದೊಡನೆ ಪೋಷಕನಾದ ಅಮೋಘವರ್ಷನನ್ನು ಆರು ಪದ್ಯಗಳಲ್ಲಿ ಸ್ತುತ್ತಿಸುತ್ತಾನೆ-

ಪ್ರೀಣಿತಃ ಪ್ರಾಣಿಸಸ್ಯೌಘಃ ನಿರೀತಿರ್ನಿರವಗ್ರಹಃ |

ಶ್ರೀಮತಾಮೋಘವರ್ಷೇಣ ಯೇನ ಸ್ವೇಷ್ಟಹಿತೈಷಿಣಾ ||

 

ಪಾಪರೂಪಾಃ ಪರಾ ಯಸ್ಯ ಚಿತ್ತವೃತ್ತಿಹವಿರ್ಭುಜಿ |

ಭಸ್ಮಸಾದ್ಭಾವಮೀಯುಸ್ತೇಽ ವಂಧ್ಯಕೋಪೋಽ ಭವತ್ತತಃ ||

 

ವಶೀಕುರ್ವನ್ ಜಗತ್ಸರ್ವಂ ಸ್ವಯಂ ನಾನುವಶಃ ಪರೈಃ |

ನಾಭಿಭೂತಃ ಪ್ರಭುಸ್ತಸ್ಮಾದಪೂರ್ವಮಕರಧ್ವಜಃ ||

 

ಯೋ ವಿಕ್ರಮಕ್ರಮಾಕ್ರಾಂತ ಚಕ್ರಿಚಕ್ರಕೃತಕ್ರಿಯಃ |

ಚಕ್ರಿಕಾಭಂಜನೋ ನಾಮ್ನಾ ಚಕ್ರಿಕಾಭಂಜನೋಽಂಸಾ ||

 

ಯೋ ವಿದ್ಯಾನದ್ಯಧಿಷ್ಠಾನೋ ಮರ್ಯಾದಾವಜ್ರವೇದಿಕಃ |

ರತ್ನಗರ್ಭೋ ಯಥಾಖ್ಯಾತಚಾರಿತ್ರಜಲಧಿರ್ಮಹಾನ್ ||

 

ವಿಧ್ವಸ್ತೈಕಾಂತಪಕ್ಷಸ್ಯ ಸ್ಯಾದ್ವಾದನ್ಯಾಯವಾದಿನಃ |

ದೇವಸ್ಯ ನೃಪತುಂಗಸ್ಯ ವರ್ಧತಾಂ ತಸ್ಯ ಶಾಸನಮ್ ||[30]

ಇವುಗಳಲ್ಲಿ ಮೊದಲ ಮೂರು ಅವನ ಶೌರ್ಯ, ಔದಾರ್ಯಾದಿಗಳನ್ನು ಮಾತ್ರ ಕುರಿತಿವೆ. ಕಡೆಯ ಮೂರರಲ್ಲಿ ಅವನ ಜೈನಧರ್ಮಶ್ರದ್ಧೆಯ ಸುಸ್ಪಷ್ಟ ಸೂಚನೆಗಳಿವೆ. ಪರಾಕ್ರಮದಿಂದ ಅರಿನೃಪಚಕ್ರವನ್ನು ಕುಟ್ಟಿಕೆಡಹಿ ಅವನು ‘ಚಕ್ರಿಕಾ-ಭಂಜನ’ನೆಂಬ ಬಿರುದಾಂತಂತೆಯೇ, ವಾಸ್ತವವಾಗಿಯೂ ಇನ್ನೊಂದು ಪ್ರಸಿದ್ಧ ಹಾಗು ಪ್ರಬಲ ಚಕ್ರವನ್ನು ಎಂದರೆ (ಜನ್ಮ-ಮರನಾದಿ ದೂಷಿತ) ಸಂಸಾರಚಕ್ರವನ್ನು ಕುಟ್ಟಿಕೆಡಹಿದವನೆಂಬ ಶ್ಲೇಷೆ ಚಮತ್ಕಾರವಾಗಿ ನಾಲ್ಕನೆಯ ಪದ್ಯದಲ್ಲಿದೆ.

ಐದನೆಯ ಪದ್ಯದಲ್ಲಿ ಅವನನ್ನು ವಿದ್ಯಾನದಿಗೆ ‘ಅಧಿಷ್ಠಾನ’ವೆಂದು ಹೊಗಳಲಾಗಿದೆಯಲ್ಲದೆ ಸದಾಚಾರವೆಂಬ ವಜ್ರವೇದಿಕೆಯುಳ್ಳವನೆಂದೂ ನುತಿಸಲಾಗಿದೆ. ಅಷ್ಟೇ ಅಲ್ಲ, ಅವನು ‘ರತ್ನ ಗರ್ಭ’ನಾಗಿ ‘ಚಾರಿತ್ರಸಾಗರ’ನೆಂದು ಪ್ರಖ್ಯಾತನಾಗಿದ್ದಾನೆನ್ನುವಾಗ ಶ್ಲೇಷೆಯಿಂದ ಜೈನಧರ್ಮದ ರತ್ನತ್ರಯವನ್ನು ಸಂಪಾದಿಸಿರುವನೆಂಬ ಭಾವವೂ ಅಡಕವಾಗಿದೆ.

ಕಡೆಯ ಪದ್ಯದಲ್ಲಿ ಯಾವ ಸಂದೇಹಕ್ಕೂ ಆಸ್ಪದವಿಲ್ಲದಂತೆ ನೇರವಾಗಿ ಹೀಗೆನ್ನಲಾಗಿದೆ- “ಅವನು ಏಕಾಂತದ ಅಥವಾ ಜೈನೇತರದ ಏಕಾತ್ಮ ವಾದವನ್ನುನ ಧ್ವಂಸ ಮಾಡಿರುವನು. ಸ್ಯಾಧ್ವಾದ ಅಥವಾ ಜೈನ ಅನೈಕಾಂತಿಕ ವಾದವನ್ನು ಅಂಗೀಕರಿಸಿರುವನು”, ಎಂದು.

ಹೀಗೆ ಸಮಕಾಲೀನ ಅಶ್ರಿತ ಸಭಾಸದನೋಬ್ಬನ ನಿಸ್ಸಂದಿಗ್ಧ ಉಕ್ತಿಯನ್ನು ನಾವು ನಂಬದಿರುವುದು ಸರಿಯಾದೀತೆ?[31]

. ಜೈನ ಶಾಕಟಾಯನನ ಸಂಸ್ಕೃತ ವ್ಯಾಕರಣ ಸೂತ್ರವೃತ್ತಿಗಳ ಸಾಕ್ಷ್ಯ:

ಜೈನ ವ್ಯಾಕರಣ ಪರಂಪರೆಯಲ್ಲಿ ಹೊಸ ಪ್ರಸ್ಥಾನದ ಪ್ರವರ್ತಕನೆಂದು ವಿಖ್ಯಾತನಾಗಿರುವ ಶಾಕಟಾಯನನು ತನ್ನ ಸೂತ್ರಗಳಿಗೆ ತಾನೇ ‘ವೃತ್ತಿ’ಯನ್ನು ವಿರಚಿಸಿದ್ದು ಆ ವೃತ್ತಿಗೆ ತನ್ನ ಆಶ್ರಯದಾತನಾದ ಅಮೋಘವರ್ಷನ ಸ್ಮರಣಾರ್ಥವಾಗಿ “ಅಮೋಘವೃತ್ತಿ”ಯೆಂದೇ ಹೆಸರಿಟ್ಟಿದ್ದಾನೆ. ಇಷ್ಟೇ ಅಲ್ಲದೆ ತನ್ನ ಜೀವಿತಕಾಲದಲ್ಲೇ ನಡೆದು ತಾನು ನೋಡದೆ ಹೋದ ಕ್ರಿಯೆಯನ್ನು ನಿರ್ದೇಶಿಸಲು ಅನದ್ಯತನಬೂತಕಾಲ ಅಥವಾ ‘ಲಜ್’-ಲಕಾರವನ್ನು ಬಳಸಬೇಕೆಂಬ ನಿಯಮಕ್ಕೆ (åñ.೩-೨೦೭) ಉದಾಹರಣೆಯಾಗಿ “ಅದಹದಮೋಘವರ್ಷೋ ಅರಾತೀನ್” ಎಂಬ ಐತಿಹಾಸಿಕವಾದ ಉದಾಹರಣೆಯನ್ನು ಕೊಟ್ಟಿದ್ದಾನೆ. ಸ್ಯಾದ್ವಾದವಿದ್ಯಾಪತಿ ವಾದಿರಾಜನ ಸಹಪಾಠಿ ದಯಾಪಾಲನ “ರೂಪಸಿದ್ಧಿ” (ಚಾಲುಕ್ಯ ಜಗದೇಕಮಲ್ಲ ಜಯಸಿಂಹನ ಕಾಲ) ‘ಅಮೋಘವೃತ್ತಿ’ಯನ್ನಾಧರಿಸಿ ಬರೆದ ಗ್ರಂಥವಾಗಿದೆ.

. ‘ಧವಳಾ ಮತ್ತು ಜಯಧವಳಾ

‘ಧವಳಾ’ ಎಂಬುದು ಜಿನಸೇನರ ಗುರುಗಳಾದ ವೀರಸೇನರಿಂದ ಪ್ರಾಕೃತಭಾಷೆಯಲ್ಲಿ ರಚಿತವಾಗಿರುವ ಬೃಹಟ್ಟೀಕೆ. ಜೈನಾಗಮದಲ್ಲಿ ಪ್ರಸಿದ್ಧವಾಗಿರುವ ಷಟ್ಖಂಡಾ ಗಮಸೂತ್ರಗಳಮೇಲೆ ೭೦೦೦೦ ಶ್ಲೋಕವಷ್ಟು ವಿಸ್ತಾರವಾಗಿ ಈ ಟೀಕೆ ರಚಿತವಾಗಿದೆ. ಇವನೇ ಆಚಾರ್ಯ ಗುಣಧರನ ‘ಕಸಾಯ ಪಾಹುಡ’ಕ್ಕೂ ಇನ್ನೊಂದು ವಿಸ್ತ*ತಟೀಕೆಯನ್ನು ಬರೆದಿರುವನಲ್ಲದೆ ಇದು ಪೂರ್ಣಗೊಳ್ಳುವ ಮೊದಲೇ ಕ್ರಿ.ಶ. ೮೧೬ ರಲ್ಲಿ ನಿಧನಹೊಂದಿದನು. ಆಗತಾನೆ ಪಟ್ಟಾಭಿಷೇಕಗೊಂಡಿದ್ದ ಅತಿಶಯ-ಧವಳ ಬಿರುದಾಂಕಿತ ನೃಪತುಂಗನ ಅಭಿನಂದನಾರ್ಥವಾಗಿಯೇ ಅವನು ತನ್ನ ಷಟ್ಖಂಡಾಗಮ ಬೃಹಟ್ಟೀಕೆಗೆ ‘ಧವಲಾ’ ಎಂಬ ಹೆಸರು ಕೊಟ್ಟಿರುವನೆಂದು ಜೈನವಾಙ್ಮಯದ ಶ್ಲೋಕ ಪ್ರಮಾಣದ ಟೀಕಾರಚನೆಯಿಂದ ಪೂರ್ತಿಗೊಳಿಸಿದ ಮಹನೀಯರಾಗಿದ್ದಾರೆ. ತಮ್ಮ ವಿಸ್ತ*ತಟೀಕೆಗೆ ಜಿನಸೇನರಿತ್ತಿರುವ ಹೆಸರಾದರೂ “ಜಯ-ಧವಳಾ”. ಇದು ಪೂರ್ಣವಾದ ಕಾಲ ಕ್ರಿ.ಶ. ೮೩೭. ಇದರ ಆರಂಭದಲ್ಲಿ ಬರುವ ಗುರುಸ್ತುತಿ ಪದ್ಯಗಳಲ್ಲಿ ಒಮ್ಮೆ ವೀರಸೇನರನ್ನು “ಶ್ರೀವೀರಸೇನ ಇತ್ಯಾತ್ತಭಟ್ಟಾರಕಪೃಥುಪ್ರಥಃ ಎಂದು ಇನ್ನೊಮ್ಮೆ ಆ ಪ್ರಕ್ರಾಂತ ವೀರಸೇನರನ್ನೇ ಜಯಸೇನರೆಂದೂ ಹೆಸರಿಸಲಾಗಿದೆ:

ಜನ್ಮಭೂಮಿಸ್ತಪೋಲಕ್ಷ್ಯಾಃ ಶ್ರುತಪ್ರಶಮಯೋರ್ನಿಧಿಃ |

ಜಯಸೇನಗುರುಃ ಪಾತು ಬುಧವೃಂದಾಗ್ರಣೀಃ ಸ ನಃ || (ಶ್ಲೋಕ ೫೯)

ಜಿನಸೇನರು ತಮ್ಮ ಟೀಕೆಗೆ ಹೆಸರೀಯುವಾಗಲೂ ನೃಪತುಂಗ-ಅತಿಶಯ-ಧವಳನನ್ನೇ ಪುರಸ್ಕರಿಸಿರುವುದನ್ನು ನೋಡುತ್ತೇವೆ.

ಜಿನಸೇನರು ‘ಆದಿಪುರಣ’ದ ಮಹಾಕವಿಗಳೆಂದು ಎಲ್ಲರಿಂದ ಗೌರವ ಪಡೆದವರು. ‘ಕವಿರಾಜಮಾರ್ಗದ ಕೆಲವು ಕೆಲವು ಮಾತುಗಳು ‘ಮಹಾಪುರಾಣ’ದ ಸೂಕ್ತಿಗಳ ಮಾರ್ದನಿಗಳಂತಿವೆಯೆನ್ನಲಾಗಿದೆ-[32]

(a) ಕವೇರ್ಭಾವೋಽಥವಾ ಕರ್ಮ ಕಾವ್ಯಂ ತಜ್ಞೈರ್ನಿರುಚ್ಯತೇ | (I-೯೪)

“ಕವಿಭಾವ ಕೃತಾನೇಕಪ್ರ ವಿಭಾಗ ವಿವಿಕ್ತಸೂಕ್ತಮಾರ್ಗಂ ಕಾವ್ಯಂ”

 

(b)       ಶರದ್ವರ್ಣನೆಯ ಆದಿಪುರಾಣ ಶ್ಲೋಕ-

ವಿಕಾಸಂ ಬಂಧುಜೀವೇಷು ಶರದಾವಿರ್ಭವಂತ್ಯಧಾತ್ |

ಸತೀವ ಸುಪ್ರಸನ್ನಾಶಾ ವಿಪಂಕಾ ವಿಶದಾಂಬರಾ || XXVI-೨೨)

“ದೆಸೆಗಳ್ ವಿಶಾಲಮಾದುವು ಕೆಸರಿಂ ಪಿಂಗಿತ್ತು ಧರಣಿ ತಿಳಿದುವು

ಕೊಳಗಳ್” II -೬೨)

ಆದರೆ ಈ ಹೋಲಿಕೆಗಳಲ್ಲಿ ಮೂಲಭೂತವಾದ ಸಾಮ್ಯಕ್ಕಿಂತ ವೈಷಮ್ಯಗಳೇ ಹೆಚ್ಚಾಗಿವೆ; ಸಂಸ್ಕೃತ ವ್ಯಾಕರಣದಲ್ಲಿ ‘ಕವೃ’ ಧಾತುವಿನಮೇಲೆ ಭಾವಾರ್ಥದಲ್ಲಿ ‘ಯ’ ಪ್ರತ್ಯಯ ಸೇರಿ ‘ಕಾವ್ಯ ಆಗುವುದೆನ್ನುವಲ್ಲಿ ‘ಭಾವ’ ಪಾರಿಭಾಷಿಕ ಅರ್ಥವೇ ಬೇರೆ, ಕವಿರಾಜಮಾರ್ಗದಲ್ಲಿ ‘ಅಭಿಪ್ರಾಯ’ವೆಂಬ ಉದ್ದಿಷ್ಟಾರ್ಥವೇ ಬೇರೆ.

ಶರದ್ವರ್ಣನೆಯ ಕವಿಸಮಯಸಿದ್ಧವಾದ ಅಂಶಗಳಿಂದ ಕೂಡಿದೆಯೇ ಹೊರತು ಇಲ್ಲಿ ಇಂತಹವರದೇ ಪ್ರಭಾವವೆಂದು ನಿರ್ಣಯಿಸುವಂತಿಲ್ಲ. ವಾಲ್ಮೀಕಿಯಲ್ಲಿಯೂ ಕಾಳಿದಾಸನ ಋತುಸಂಹಾರದಲ್ಲಿಯೂ ಈ ಬಗೆಯ ವರ್ಣನಾಂಶವಿದೆ.

ಆದರೆ ಜಯಕೀರ್ತಿಯೆಂಬ ಸಂಸ್ಕೃತ ಛಂದಶ್ಯಾಸ್ತ್ರಕಾರನು ತನ್ನ ‘ಛಂದೋನು ಶಾಸನ’ದಲ್ಲಿ “ನಿಗದಿತಾ ಗೀತಿಕಾಲಂಕಾರೇ ಪ್ರಭುಸೇನಿಯೈಃ” ಎಂದಿರುವ ಮಾತು ವಿದ್ವಾಂಸರಿಂದ ವಿಚಾರಾರ್ಹವಿದೆ. ಗೀತಿಕೆಯ ಲಕ್ಷಣವನ್ನೊಳಗೊಂಡ ಕನ್ನಡ “ಅಲಂಕಾರ” ಗ್ರಂಥವೊಂದಿತ್ತು. ಅದರ ಕರ್ತೃ ಪ್ರಭುಸೇನ’ ಅವನ ಮತಾನುಯಾಯಿಗಳು ಪ್ರಭುಸೇನೀಯರು ಎಂದಿಲ್ಲಿ ಮೊತ್ತಮೊದಲಿಗೆ ತಿಳಿದುಬರುತ್ತದೆ.[33] ಈ ಪ್ರಭು ಸೇನನೂ ವೀರಸೇನನೂ ಅಭಿನ್ನರಿರಬಹುದೆ (ವೀರ=ಪ್ರಭು)? ಇದು ಇನ್ನೂ ವಿಚಾರಣೀಯ.

ಜಿನಸೇನರ ಆದಿಪುರಾಣವನ್ನು ಪೂರ್ಣಗೊಳಿಸಲು ‘ಉತ್ತರಪುರಾಣ’ವನ್ನು ಬರೆದ ಅವರ ಶಿಷ್ಯ ಗುಣಭದ್ರನು ತನ್ನ ಗ್ರಂಥದ ಸಮಾಪ್ತಿವಾಕ್ಯಗಳಲ್ಲಿ (ಕ್ರಿ.ಶ. ೮೯೮)-

“ಜಿನಸೇನ ಭಗವತ್ಪಾದರ ಪಾದಧೂಳಿಯನ್ನು ತನ್ನ ತಳತಳಿಸುವ ಕಿರೀಟದೆಡೆಯಲ್ಲಿ ತಳೆದು, ಅದರ ರತ್ನಕಾಂತಿ ಗುರುನಖಕಿರಣಗಳ ಧಾರಾಂತರ್ಗತವಾದ ದೂಳಿಯಿಂದ ಕೆಂಪೇರುತ್ತಿರಲು, ‘ನಾನಿಂದು ಪುನೀತನಾದೆ’ ಎಂದು ಅಮೋಘವರ್ಷ ನರಪತಿಯು ನೆನೆಯುತ್ತಿದ್ದನು”

ಎಂಬ ಉಲ್ಲೇಖವಿದೆ-

ಯಸ್ಯ ಪ್ರಾಂಶುನಖಾಂಶುಜಾಲವಿಸರತ್‌ಧಾರಾಂತರಾವಿರ್ಭವತ್

ಪಾದಾಂಭೋಜರಜಃ ಪಿಶಂಗಮುಕುಟಪ್ರತ್ಯಗ್ರರತ್ನದ್ಯುತಿಃ |

ಸಂಸ್ಮರ್ತಾ ಸ್ವಮಮೋಘವರ್ಷನೃಪತಿಃ ಪುತೋಽಹಮದ್ಯೇತ್ಯಲಂ

ಸ ಶ್ರೀಮಾನ್ ಜಿನಸೇನಪೂಜ್ಯಭಗವತ್ಪಾದೋ ಜಗನ್ಮಂಗಲಮ್ ||

ರಾಜನಿಗೆ ಜೈನಧರ್ಮಶ್ರದ್ಧೆ ಎಷ್ಟು ಉತ್ಕಟವಿತ್ತೆಂಬುದಕ್ಕೆ ಇದೊಂದು ಪ್ರಬಲ ಸಾಕ್ಷಿ.