-೧-

ವಾಸ್ತವವಾಗಿ ಕವಿರಾಜಮಾರ್ಗ ಕನ್ನಡದ ವಿದ್ವತ್‌ವಲಯದ ಅಧ್ಯಯನಕ್ಕೆ ಲಭ್ಯವಾಗಿ ಈ ಹೊತ್ತಿಗೆ ಸರಿಯಾಗಿ ಒಂದು ಶತಮಾನ ಪೂರ್ಣಗೊಂಡಿದೆ. ೧೮೨೮ರಷ್ಟು ಹಿಂದೆಯೆ ಎಚ್.ಎಚ್. ವಿಲ್ಸನ್ ಸಿದ್ಧಪಡಿಸಿದ, ಕರ್ನಲ್ ಮೆಕಂಜಿ ಸಂಗ್ರಹಿಸಿದ ಹಸ್ತಪ್ರತಿಸೂಚಿಯ ಮೂಲಕ ‘ಕವಿರಾಜಮಾರ್ಗ’ವು ಕನ್ನಡಿಗರಿಗೆ ಪರಿಚಿತವಾಗಿ, ೧೮೯೮ರಂದು ಮೊದಲ ಬಾರಿಗೆ ಕೆ.ಬಿ. ಪಾಠಕ್ ಅವರಿಂದ ಸಂಪಾದಿತವಾಗಿ ಪ್ರಕಟವಾಯಿತು. ಅಂದಿನಿಂದ ಈವರೆಗೆ ಈ ಕೃತಿಯನ್ನು ಕುರಿತು ಅನೇಕ ವಿದ್ವಾಂಸರು ತುಂಬ ಉತ್ಸಾಹದಿಂದ ಚರ್ಚೆ ಮಾಡಿದ್ದಾರೆ; ಎಷ್ಟೋ ಗಂಟುಗಳನ್ನು ಬಿಡಿಸಿದ್ದಾರೆ; ಹಾಗೆಯೇ ಬಿಚ್ಚಬೇಕಾದ ಗಂಟುಗಳು ಸಾಕಷ್ಟಿವೆ.

ಸಮಗ್ರ ಸ್ವರೂಪದಲ್ಲಿ ಉಪಲಬ್ಧವಾದ ಕನ್ನಡದ ಮೊಟ್ಟಮೊದಲ ಕೃತಿಯಾಗಿ, ಕನ್ನಡ ನಾಡು-ನುಡಿ ಹಾಗೂ ಜನದ ಬಗ್ಗೆ ಅತ್ಯಂತ ಅಭಿಮಾನಪೂರ್ವಕವಾದ ಮಾತುಗಳಿಂದ, ಕನ್ನಡದ ಬಗ್ಗೆ ಪ್ರೀತಿ ವಿಶ್ವಾಸಗಳನ್ನು ಬಿತ್ತುವ ಕವಿರಾಜಮಾರ್ಗ, ಒಂದು ಅಲಂಕಾರ ಗ್ರಂಥವಾಗಿದ್ದೂ ಹಿಂದಿನ ಸಾಹಿತ್ಯದ ಮತ್ತು ಅಂದಿನ ಕನ್ನಡದ ‘ಕೈಗನ್ನಡಿ’ಯೂ, ಮುಂದಿನ ಕಾವ್ಯಮಾರ್ಗದ ‘ಕೈದೀವಿಗೆ’ಯೂ ಆಗಿದೆ.

ಈ ಹೊತ್ತು ಕಾವ್ಯಮೀಮಾಂಸೆಯ ಬಗ್ಗೆ ಯೋಚನೆ ಮಾಡುವ ಭಿನ್ನವಾದ ಕ್ರಮದ ಹಿನ್ನೆಲೆಯಿಂದಲೂ ನಾವು ಕವಿರಾಜಮಾರ್ಗದಂಥ ಅಲಂಕಾರಶಾಸ್ತ್ರ ಗ್ರಂಥವನ್ನು ಪರಿಶೀಲಿಸಬೇಕಾಗಿದೆ. ಕಾವ್ಯಸ್ವರೂಪವನ್ನು ಕುರಿತ ಚರ್ಚೆ ಈ ದೇಶದಲ್ಲಿ ನಡೆದದ್ದು ಸಂಸ್ಕೃತದಲ್ಲಿ ಮತ್ತು ಸಂಸ್ಕೃತ ಸಾಹಿತ್ಯದ ಹಿನ್ನೆಲೆಯಲ್ಲಿ. ಭಾರತೀಯ ಸಂದರ್ಭದ ಕಾವ್ಯಚರ್ಚೆಗೆ ಮೊದಲ ಗ್ರಂಥವೆಂದು ಹೇಳಲಾಗಿರುವ ಭರತನ ನಾಟ್ಯಶಾಸ್ತ್ರ (ಸು. ಕ್ರಿ.ಶ. ೨ನೇ ಶತಮಾನ) ದಿಂದ ಹಿಡಿದು ಈ ಕ್ಷೇತ್ರದ ಮೊದಲ ಅಲಂಕಾರ ಶಾಸ್ತ್ರಕೃತಿಗಳನ್ನು  ರಚಿಸಿದ ದಂಡಿ-ಭಾಮಹರನ್ನೂ (ಕ್ರಿ.ಶ. ೭ನೇ ಶತಮಾನ) ಒಳಗೊಂಡು, ೧೭ನೇ ಶತಮಾನದ ಜಗನ್ನಾಥ ಪಂಡಿತನವರೆಗೂ, ಸುಮಾರು ಒಂದೂವರೆ ಸಾವಿರ ವರ್ಷಗಳ ಕಾಲ ವಿವಿಧ ಪ್ರಸ್ಥಾನಗಳ ಮೂಲಕ ಪ್ರಾಚೀನ ಭಾರತದ ಕೆಲವು ವಿದ್ವತ್ ಕೇಂದ್ರಗಳಲ್ಲಿ ಕಾವ್ಯವನ್ನು ಕುರಿತ ಚರ್ಚೆಯ ಶಾಸ್ತ್ರ ಪರಂಪರೆಯೊಂದು ರೂಪುಗೊಂಡಿದೆ. ಇದನ್ನೆ ಅಲಂಕಾರಶಾಸ್ತ್ರ ಎಂದು ಕರೆಯಲಾಗಿದೆ. ಈ ಶಾಸ್ತ್ರವನ್ನು, ಆಧುನಿಕ ಸಾಹಿತ್ಯ ಸಂದರ್ಭದಲ್ಲಿ, ಎಂದರೆ ಈಗ ಯಾವುದನ್ನು ವಸಾಹತುಶಾಹೀ ಸಂದರ್ಭವೆಂದು ಕರೆಯುತ್ತೇವೆಯೋ ಆ ಕಾಲದಲ್ಲಿ , ಪಶ್ಚಿಮದ ಸಾಹಿತ್ಯದೊಂದಿಗೆ ಮುಖಾಮುಖಿಯಾಗುತ್ತ ತೌಲನಿಕ ಅಧ್ಯಯನ ಹಾಗೂ ಬರೆಹಗಳಲ್ಲಿ ತೊಡಗಿದ ಭಾರತೀಯ ಸಾಹಿತ್ಯ ವಿಮರ್ಶಕರು ಮತ್ತು ವಿದ್ವಾಂಸರು ‘ಭಾರತೀಯ ಕಾವ್ಯ ಮೀಮಾಂಸೆ’- Indian Poetics-ಎಂದು ಕರೆಯಲು ಪ್ರಾರಂಭಿಸಿದಂತೆ ತೋರುತ್ತದೆ. ಅದು ಮೂಲತಃ ಸಂಸ್ಕೃತ ಕಾವ್ಯಚಿಂತನೆ ಎಂಬ ಅರಿವಿನಿಂದಾಗಿ, ಸಂಸ್ಕೃತ ಕಾವ್ಯಮೀಮಾಂಸೆ-Sanskrit Poetics ಎಂದೂ ಕರೆಯಲಾಗುತ್ತಿತ್ತು. ಅಷ್ಟೇ ಅಲ್ಲ Sanskrit Poetics ಮತ್ತು Indian Poetics ಈ ಎರಡೂ ಸಮಾನಾರ್ಥಕಗಳು ಎಂಬ ಗ್ರಹಿಕೆ ಅಂದಿನ ಪರಿಸರದಲ್ಲಿ ಹೆಚ್ಚು ಸಾರ್ವತ್ರಿಕವಾಗಲು ಅಷ್ಟೇನೂ ತಡವಾದಂತೆ ತೋರುವುದಿಲ್ಲ.[1] ಸ್ವಾರಸ್ಯದ ಸಂಗತಿ ಎಂದರೆ ಕನ್ನಡದ ನವೋದಯ ಸಾಹಿತ್ಯ ಸಂದರ್ಭದಲ್ಲಿ ಸಂಸ್ಕೃತದ ಅಲಂಕಾರ ಶಾಸ್ತ್ರದ ಚರಿತ್ರೆಯನ್ನು ಕನ್ನಡದಲ್ಲಿ ಅತ್ಯಂತ ಸಮರ್ಥವಾಗಿ ನಿರೂಪಿಸಿದ ಪ್ರೊ. ತೀ.ನಂ. ಶ್ರೀಕಂಠಯ್ಯನವರ ‘ಆಚಾರ್ಯ ಕೃತಿ’ ಪ್ರಕಟವಾಯಿತಲ್ಲ, ಅದರ ಹೆಸರು ‘ಭಾರತೀಯ ಕಾವ್ಯ ಮೀಮಾಂಸೆ’.  ಸಂಸ್ಕೃತ ಸಾಹಿತ್ಯವನ್ನೇ ‘ಭಾರತೀಯ ಸಾಹಿತ್ಯ’ ಎಂದೂ ವೈದಿಕ ಸಂಸ್ಕೃತಿಯನ್ನೇ ‘ಭಾರತೀಯ ಸಂಸ್ಕೃತಿ’ ಎಂದೂ ಪ್ರಚಾರ ಮಾಡಿದ ಮ್ಯಾಕ್ಸ್‌ಮುಲ್ಲರ್ ಅವರಂಥ ಪಾಶ್ಚಾತ್ಯ ವಿದ್ವಾಂಸರ ಗ್ರಹಿಕೆಗಳನ್ನು ನಮ್ಮವರು ಪ್ರಶ್ನೆ ಮಾಡದೆ ಒಪ್ಪಿಕೊಂಡದ್ದರ ಪರಿಣಾಮ ಇದು. ಬಹುಭಾಷಿಕ – ಬಹುಸಾಂಸ್ಕೃತಿಕ ಪರಂಪರೆಗಳನ್ನುಳ್ಳ ಈ ದೇಶದ ‘ಬಹುಮುಖತ್ವ’ವನ್ನೇ ಅದರ ವಿಶಿಷ್ಟ ಲಕ್ಷಣವೆಂಬಂತೆ ಗುರುತಿಸುವ ಈ ಹೊತ್ತಿನ ಚಿಂತನ ಕ್ರಮದ ಹಿನ್ನೆಲೆಯಲ್ಲಿ, ‘ಭಾರತೀಯತೆ’, ‘ಭಾರತೀಯ ಸಂಸ್ಕೃತಿ’ ಇತ್ಯಾದಿ ಪರಿಕಲ್ಪನೆಗಳನ್ನು ಕುರಿತು ನಾವು ಪುನರಾಲೋಚಿಸಬೇಕಾಗಿದೆ. ಯಾಕೆಂದರೆ, ಸಂಸ್ಕೃತ ಈ ದೇಶದ ಪ್ರಾಚೀನವೂ ಪ್ರಮುಖವೂ ಆದ ಭಾಷೆ ಎಂಬುದು ನಿಜವಾದರೂ, ಕ್ರಿ.ಶ. ಮೂರನೆಯ ಶತಮಾನದಿಂದ ಹತ್ತನೆಯ ಶತಮಾನದ ಅವಧಿಯಲ್ಲಿ ಈ ದೇಶದಲ್ಲಿ ಸಂಭವಿಸಿದ ಮಹತ್ವದ ಸಾಂಸ್ಕೃತಿಕ ಪಲ್ಲಟಗಳ ಪರಿಣಾಮದಿಂದ ವಿವಿಧ ಪ್ರಾದೇಶಿಕ ಭಾಷೆಗಳು ಪ್ರಾದುರ್ಭಾವಗೊಂಡು, ಈ ಸಂಸ್ಕೃತದ ಯಜಮಾನಿಕೆಯನ್ನು ಪ್ರಶ್ನಿಸುತ್ತ, ತಮ್ಮದೇ ಆದ ಅಸ್ತಿತ್ವವನ್ನೂ, ವಿಶಿಷ್ಟತೆಯನ್ನೂ ಹಾಗೂ ಪರಂಪರೆಯನ್ನೂ ಸಮಾನಾಂತರವಾಗಿ ಸ್ಥಾಪಿಸಿಕೊಂಡವು ಎಂಬ ಚಾರಿತ್ರಿಕ ಸತ್ಯವನ್ನು ನಾವು ಇಂದು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿದೆ. ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ  ಎಂದರೆ ತಕ್ಕಷ್ಟು ಪ್ರಾಚೀನವೂ, ವಿಶಿಷ್ಟವೂ, ಉಜ್ಜಲವೂ ಆದ ಈ ಪ್ರಾದೇಶಿಕ ಭಾಷಾ ಸಾಹಿತ್ಯ ಪರಂಪರೆಗಳು ಸಂಸ್ಕೃತ ಕಾವ್ಯ ಚಿಂತನೆಗೆ ಸಮಾನಾಂತರವಾಗಿ, ಸಂಸ್ಕೃತಕ್ಕೆ ಪ್ರತಿಕ್ರಿಯೆಯಾಗಿ ಹಾಗೂ ಪೂರಕವಾಗಿ ತಮ್ಮದೇ ಆದೊಂದು ಕಾವ್ಯಮೀಮಾಂಸೆಯನ್ನು ಕಟ್ಟಿಕೊಳ್ಳಲಿಲ್ಲವೇ? ಅಥವಾ ಹಲವರು ಭಾವಿಸುವಂತೆ ಈ ವಿವಿಧ ಪ್ರಾದೇಶಿಕ ಭಾಷೆಗಳೂ ತಮ್ಮದೇ ಆದ ಕಾವ್ಯ ಚಿಂತನಾಕ್ರಮವನ್ನು ಅಷ್ಟಾಗಿ ಬೆಳೆಯಿಸದೆ, ಸಂಸ್ಕೃತದ ಕಾವ್ಯ ಚಿಂತನೆಗಳನ್ನು ಅನುರಣಿಸಿವೆಯೆ? ಸಂಸ್ಕೃತ ಕಾವ್ಯಮೀಮಾಂಸೆಯನ್ನು, ಆ ಭಾಷೆಯಿಂದ ಬೇರೆಯೆ ಆದ ಜಾಯಮಾನಗಳನ್ನುಳ್ಳ ಸಂಸ್ಕೃತೇತರ ಭಾಷೆಗಳ ಸಾಹಿತ್ಯ ಚರ್ಚೆಗೆ ಅನ್ವಯಿಸಿ ನೋಡುವುದು ಎಷ್ಟು ಸಮರ್ಪಕ? ಈ ಕೆಲವು ಪ್ರಶ್ನೆಗಳನ್ನೂ ಕವಿರಾಜಮಾರ್ಗದ ಮರು ಓದಿನ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕಾಗಿದೆ.

ಬಹು ಹಿಂದೆಯೆ ತಮಿಳು ಸಾಹಿತ್ಯವು ಸಂಸ್ಕೃತದಿಂದ ಭಿನ್ನವಾದ ‘ಕಾವ್ಯ ಮೀಮಾಂಸೆ’ಯನ್ನು (ತೊಲ್‌ಕಾಪ್ಪಿಯಂ-ಎಂಬ ಕೃತಿಯಲ್ಲಿ) ಕಟ್ಟಿಕೊಂಡಿದೆ. ಕನ್ನಡ ಸಾಹಿತ್ಯವೂ, ಸಂಸ್ಕೃತ ಕಾವ್ಯಮೀಮಾಂಸೆಗೆ ತೋರಿರುವ ವೈಚಾರಿಕ ಪ್ರತಿಕ್ರಿಯೆ ಗುರುತಿಸಿದರೆ, ಕಾಣುವಷ್ಟು ಇದೆ. ಕನ್ನಡದಲ್ಲಿ ಕಾವ್ಯಮೀಮಾಂಸೆ ಸಂಸ್ಕೃತಕ್ಕಿಂತ ಭಿನ್ನವಾದ ಲಕ್ಷಣವನ್ನು ಪಡೆದುಕೊಂಡಿದೆ. ಅದೆಂದರೆ, ಕನ್ನಡ ಅಲಂಕಾರ ಗ್ರಂಥಗಳು ಕಟ್ಟಿಕೊಡುವ ಕಾವ್ಯಮೀಮಾಂಸೆ, ಮತ್ತು ಕನ್ನಡ ಕವಿಗಳು ತಮ್ಮ ಕೃತಿನಿರ್ಮಿತಿಯ ಚೌಕಟ್ಟಿನೊಳಗೆ ನಡೆಸಿದ ಕಾವ್ಯಚಿಂತನೆ. ಕವಿರಾಜಮಾರ್ಗದಿಂದ ಮೊದಲುಗೊಂಡು, ಸಂಸ್ಕೃತ ಕಾವ್ಯಮೀಮಾಂಸೆಯ ಕೃತಿಗಳನ್ನನುಸರಿಸಿ ರಚಿತವಾದ ಅಲಂಕಾರ ಗ್ರಂಥಗಳು ಕನ್ನಡದಲ್ಲಿ ಬೆರಳೆಣಿಕೆಯಷ್ಟಿವೆ. ನಾಗವರ್ಮನ ಕಾವ್ಯಾವಲೋಕನ; ಉದಯಾದಿತ್ಯನ  ಉದಯಾದಿತ್ಯಾಲಂಕಾರ; ಕವಿಕಾಮನ ಶೃಂಗಾರ ರತ್ನಾಕರ; ಸಾಳ್ವನ ರಸರತ್ನಾಕರ, ಶಾರದವಿಲಾಸ, ತಿರುಮಲಾರ‍್ಯನ ಅಪ್ರತಿಮವೀರಚರಿತೆ- ಈ ಕೆಲವನ್ನು ಹೆಸರಿಸಬಹುದು. ಅವುಗಳಲ್ಲಿ  ಬಹುತೇಕ, ಸಂಸ್ಕೃತದಿಂದ ಕಡತಂದ ಬಂಡವಾಳವನ್ನು ಪುನರಾವರ್ತನೆಗೊಳಿಸುವ ಸ್ವರೂಪದವುಗಳಾಗಿವೆಯೆ ಹೊರತು, ಹೇಳಿಕೊಳ್ಳಬಹುದಾದ ಹೊಸ ವಿಚಾರಗಳನ್ನೇನೂ ಕನ್ನಡ ಕಾವ್ಯಚಿಂತನೆಗೆ ಸೇರಿಸಿದಂತೆ ತೋರುವುದಿಲ್ಲ. ಆದರೆ ಕನ್ನಡ ಕವಿಗಳು ತಮ್ಮ ಕೃತಿಗಳ ಪ್ರಸ್ತಾವನೆಯ ಸಂದರ್ಭದಲ್ಲಿ ತಮ್ಮದೇ ಆದ ಕಾವ್ಯಕಲ್ಪನೆಯನ್ನು ಅಭಿವ್ಯಕ್ತಿಸುವ, ಪೂರ್ವ ಕವಿ-ಕಾವ್ಯ ಪರಂಪರೆಗೆ ಸ್ಪಂದಿಸುವ, ಸತ್ಕವಿ ಪ್ರಶಂಸೆ-ಕುಕವಿನಿಂದೆಯ ಪದ್ಧತಿಯಲ್ಲಿ ಸಮಕಾಲೀನ ಕಾವ್ಯಕಲ್ಪನೆಗೆ ಪ್ರತಿಕ್ರಿಯಿಸುವ ಮೂಲಕ-ಮೂಡುವ ಕೆಲವು ಹೊಸ ಚಿಂತನೆಗಳೂ, ಒಳನೋಟಗಳೂ, ಹೊಳಹುಗಳೂ, ಶಾಸ್ತ್ರೀಯವಾದ ಅಲಂಕಾರ ಗ್ರಂಥಗಳ ನಿರೂಪಣೆಗಿಂತ ಹೆಚ್ಚು ಜೀವಂತಿಕೆಯನ್ನೂ ಲವಲವಿಕೆಯನ್ನೂ ಪ್ರಕಟಿಸುತ್ತವೆ. ಸಂಸ್ಕೃತ ಸಾಹಿತ್ಯದಲ್ಲಿ ಈ ಬಗೆಯ ‘ಕಾವ್ಯಾಂತರ್ಗತ ಕಾವ್ಯ ಚರ್ಚೆ’ಯೊಂದು ಕನ್ನಡದಲ್ಲಿಯಂತೆ ಒಂದು ಪರಂಪರೆಯಾಗಿ ಬೆಳೆದಿಲ್ಲ; ಇದು ಬಹುಶಃ ಕನ್ನಡಕ್ಕೆ ವಿಶಿಷ್ಟವಾದದ್ದು. ಯಾಕೆಂದರೆ ಸಂಸ್ಕೃತದಲ್ಲಿ ಕಾವ್ಯ ನಿರ್ಮಿತಿಯೇ ಬೇರೆ, ಅಲಂಕಾರ ಶಾಸ್ತ್ರವೇ ಬೇರೆ. ಇನ್ನೂ ಆಳವಾದ ಅಧ್ಯಯನದಿಂದ ಕನ್ನsಡಕ್ಕೆ ತನ್ನದೇ ಆದ ಸ್ವತಂತ್ರವಾದ ಕಾವ್ಯ ಚಿಂತನೆಗಳೇನಾದರೂ ಇವೆಯೆ ಎಂಬ ಶೋಧನೆ ನಡೆಯಬೇಕಾಗಿದೆ. ಹಾಗೆಯೇ ವಿವಿಧ ಪ್ರಾದೇಶಿಕ ಸಾಹಿತ್ಯಗಳೂ, ಸಂಸ್ಕೃತಕ್ಕೆ ಭಿನ್ನವಾದ ಹಾಗೂ ಸಮನಾಂತರವಾದ ಕಾವ್ಯ ಚಿಂತನೆಗಳನ್ನೇನಾದರೂ ಕಟ್ಟಿಕೊಂಡಿವೆಯೆ ಎಂಬ ಕೆಲಸ ನಡೆದರೆ, ಆಗ ನಾವು ನಿಜವಾದ ಅರ್ಥದ ‘ಭಾರತೀಯ ಕಾವ್ಯಮೀಮಾಂಸೆ’ಯನ್ನು ಗುರುತಿಸಲು ಸಾಧ್ಯವಾಗಬಹುದು. ಅಲ್ಲಿಯವರೆಗೂ ‘ಸಂಸ್ಕೃತ ಕಾವ್ಯಮೀಮಾಂಸೆ’ಯೆ ‘ಭಾರತೀಯ ಕಾವ್ಯಮೀಮಾಂಸೆ’ ಎಂಬ ಭ್ರಮೆಯಿಂದ ಪಾರಾಗಲು ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ ನೋಡಿದರೆ ‘ಕವಿರಾಜಮಾರ್ಗ’ ಮುಖ್ಯವಾಗಿ ಒಂದು ಅಲಂಕಾರ ಗ್ರಂಥವಾದರೂ ಅದು ಸಂಸ್ಕೃತ ಅಲಂಕಾರಶಾಸ್ತ್ರ ಪರಂಪರೆಯಿಂದ ಭಿನ್ನವಾಗುತ್ತ, ಕನ್ನಡ ಭಾಷೆ, ವ್ಯಾಕರಣ, ಸಾಹಿತ್ಯಚರಿತ್ರೆ ಹಾಗೂ ಕನ್ನಡ ಸಂಸ್ಕೃತಿಯೊಳಕ್ಕೆ ತನ್ನನ್ನು ವಿಸ್ತರಿಸಿಕೊಂಡ ಕೃತಿಯಾಗಿದೆ. ಅದನ್ನು ಕಾವ್ಯಮೀಮಾಂಸೆಯ ದೃಷ್ಟಿಯಿಂದ ನೋಡುವಾಗ ಕೇಳಿಕೊಳ್ಳಬೇಕಾದ ಪ್ರಶ್ನೆಗಳೆಂದರೆ, ಮಾರ್ಗಕಾರನಿಗೆ ಈ ಕೃತಿಯನ್ನು ರಚಿಸುವಾಗ ಸಂಸ್ಕೃತ ಕಾವ್ಯಮೀಮಾಂಸೆಯನ್ನು ಕನ್ನಡಿಗರಿಗಾಗಿ ಪರಿಚಯ ಮಾಡಿಕೊಡುವ ಉದ್ದೇಶವಿತ್ತೆ? ಅಥವಾ ಸಂಸ್ಕೃತ ಕಾವ್ಯಮೀಮಾಂಸೆಯ ತತ್ವಗಳನ್ನು ಕನ್ನಡ ಭಾಷೆಗೆ ಅನ್ವಯಿಸಿ ಅವು ಎಷ್ಟರಮಟ್ಟಿಗೆ ಇಲ್ಲಿ ಸಲ್ಲುತ್ತವೆ ಎಂಬುದನ್ನು ಪರೀಕ್ಷಿಸುವ ಉದ್ದೇಶವಿತ್ತೆ? ಅಥವಾ ಕನ್ನಡದ್ದೇ ಆದ ಒಂದು ಕಾವ್ಯಮೀಮಾಂಸೆಯನ್ನು ಕಟ್ಟುವ ಉದ್ದೇಶವಿತ್ತೆ?

-೨-

ಕವಿರಾಜಮಾರ್ಗ ಕನ್ನಡದ ಮೊದಲ ಅಲಂಕಾರ ಗ್ರಂಥ. ಕನ್ನಡದಲ್ಲಿ ಸಂಸ್ಕೃತ ಕಾವ್ಯಮೀಮಾಂಸೆಯ ಹಿನ್ನೆಲೆ ಹಾಗೂ ತಿಳಿವಳಿಕೆಯಿಂದ ಕಾವ್ಯಮೀಮಾಂಸಯ ‘ಮಾರ್ಗ’ ಅಥವಾ ಪರಂಪರೆಯೊಂದನ್ನು ಪ್ರಾರಂಭಿಸುವ ಪ್ರಥಮ ಪ್ರಯತ್ನ ಇಲ್ಲಿದೆ. ವಿಶೇಷವಾಗಿ ದಂಡಿಯ ‘ಕಾವ್ಯಾದರ್ಶ’, ತಕ್ಕಮಟ್ಟಿಗೆ ಭಾಮಹನ ಕಾವ್ಯಾಲಂಕಾರ ಇವುಗಳನ್ನು ಅವಲಂಬಿಸಿದ್ದರೂ, ಆ ಅವಲಂಬನೆಯ ಯಥಾನುಕರಣವಾಗದೆ, ಕೃತಿಗೆ ಹೆಸರಿಡುವುದರಿಂದ ಹಿಡಿದು, ಅದರ ವಸ್ತು ವಿನ್ಯಾಸ, ಸ್ವತಂತ್ರ ದೃಷ್ಟಿಕೋನ ಇತ್ಯಾದಿಗಳಿಂದ ಅದೊಂದು ಸ್ವತಂತ್ರ ಕೃತಿಯೆಂಬ ವಿಶಿಷ್ಟತೆಯನ್ನು ಪ್ರಕಟಿಸುತ್ತದೆ. ಕವಿರಾಜಮಾರ್ಗದ ಒಟ್ಟು ಪದ್ಯಗಳ ಸಂಖ್ಯೆ ೫೩೬. ಅವುಗಳಲ್ಲಿ ಸುಮಾರು ೪೫ ಪದ್ಯಗಳಿಗೆ ಭಾಮಹನ ಕಾವ್ಯಾಲಂಕಾರವೂ, ೨೩೦ ಪದ್ಯಗಳಿಗೆ ದಂಡಿಯ ‘ಕಾವ್ಯಾದರ್ಶವೂ ಆಕರಗಳು. ಹೀಗಾಗಿ ಅರ್ಧದಷ್ಟು ಭಾಗ ಸ್ವಂತ ಗ್ರಂಥ ರಚನೆ (ಡಾ. ಎಂ.ಎಂ. ಕಲಬುರ್ಗಿ ೧೯೭೩;  ಪ್ರೊ. ಎಂ.ವಿ. ಸೀ. ೧೯೭೪.) ಅವನು ದಂಡಿ ಭಾಮಹರನ್ನು  ಅನುಸರಿಸಿದಷ್ಟು ಭಾಗದಲ್ಲೂ ಮೂಲ ಶ್ಲೋಕಗಳನ್ನು ಗ್ರಹಿಸಿ ತನ್ನದೇ ಆದ ರೀತಿಯಲ್ಲಿ ನಿರೂಪಿಸಿದ್ದಾನೆ. ಲಕ್ಷ್ಯ ಪದ್ಯಗಳ ವಿಚಾರದಲ್ಲೂ ಅವನ ಸ್ವಯಂ ಪ್ರತಿಭೆಯ ಪ್ರಕಾಶ ಸ್ಪಷ್ಟವಾಗಿದೆ.

ಕನ್ನಡದ ಅಲಂಕಾರಶಾಸ್ತ್ರ ಕೃತಿಯೊಂದಕ್ಕೆ ಹೆಸರು ಕೊಡುವಾಗ ಸಂಸ್ಕೃತ ಲಾಕ್ಷಣಿಕರ ಕೃತಿಗಳನ್ನು ಅನುಕರಿಸದೆ, ಬೇರೆಯೆ ಆದ ಶೀರ್ಷಿಕೆಯೊಂದನ್ನು ಕೊಟ್ಟದ್ದು ಮಾರ್ಗಕಾರನ ವಿಶೇಷತೆಯಾಗಿದೆ. ಕವಿರಾಜಮಾರ್ಗಕ್ಕೆ ಹಿಂದಿನ ಹಾಗೂ ಸಮೀಪಕಾಲೀನವಾದ ಸಂಸ್ಕೃತ ಅಲಂಕಾರಗಳ ಕೆಲವು ಹೆಸರುಗಳು ಹೀಗಿವೆ: ಭಾಮಹನ ಕಾವ್ಯಾಲಂಕಾರ; ರುದ್ರಟನ ಕಾವ್ಯಾಲಂಕಾರ, ಉದ್ಭಟನ ಕಾವ್ಯಾಲಂಕಾರ ಸಾರಸಂಗ್ರಹ, ವಾಮನನ ಕಾವ್ಯಾಲಂಕಾರ ಸೂತ್ರ ವೃತ್ತಿ. ಹಾಗೆಯೆ ಮುಂದಿನ ಕನ್ನಡ ಅಲಂಕಾರ ಗ್ರಂಥಗಳು, ಉದಯಾದಿತ್ಯಾಲಂಕಾರ, ರಸರತ್ನಾಕರ- ಹೀಗೆ. ಆದರೆ ಕನ್ನಡದ ಈ ಮೊದಲ ಅಲಂಕಾರಶಾಸ್ತ್ರದ ಹೆಸರು ‘ಕವಿರಾಜಮಾರ್ಗ’.[2] ಇಲ್ಲಿ ಬರುವ ‘ಮಾರ್ಗ’ ಎಂಬುದು ಸಂಸ್ಕೃತ ಅಲಂಕಾರಶಾಸ್ತ್ರದ ಚರಿತ್ರೆಯ ‘ರೀತಿ’ ಸಿದ್ಧಾಂತದಲ್ಲಿ ‘ಬರವಣಿಗೆಯ ಕ್ರಮ’ ಎಂಬುದನ್ನು ನೆನಪಿಗೆ ತರುತ್ತದೆ. ಆದರೆ ‘ಕವಿರಾಜಮಾರ್ಗ’ ಎಂಬ ಶೀರ್ಷಿಕೆಯಲ್ಲಿರುವ ‘ಮಾರ್ಗ’ ಎನ್ನುವುದು ಸಂಸ್ಕೃತದ  ಕಾವ್ಯಮೀಮಾಂಸೆಗೆ ಸಂಬಂಧಿಸಿದ ಆ ಅರ್ಥದಿಂದ ಭಿನ್ನವಾಗಿ, ಕ್ರಮ, ನಿರ್ದೇಶನ, ನಡೆಯಬೇಕಾದ ನಾಳಿನ ದಾರಿ ಎಂಬ ಅರ್ಥಗಳನ್ನು ಸೂಚಿಸುತ್ತದೆ. ಎಂದರೆ, ಕನ್ನಡ ಸಾಹಿತ್ಯದ ಮೊದಲ ದಿನಗಳಲ್ಲಿ ಕನ್ನಡ ಕಾವ್ಯವು ಇನ್ನು ಮುಂದೆ ಕ್ರಮಿಸಬೇಕಾದ ಮಾರ್ಗವೊಂದನ್ನು ಸೂಚಿಸುವುದು ಅದರ ಉದ್ದೇಶವಾಗಿರುವುದರಿಂದಲೆ ಅದು ‘ಕವಿರಾಜ ಮಾರ್ಗ’. ಹಾಗೆ ಮಾರ್ಗದರ್ಶನ ಮಾಡುವಂಥ ಒಂದು ಪರಿಸ್ಥಿತಿ ಅಂದು ಪ್ರಾಪ್ತವಾಗಿತ್ತು. ಆ ಪರಿಸ್ಥಿತಿಯ ಹಿನ್ನೆಲೆಯನ್ನು ಹಾಗೂ ಆಗಿನ ಭಾಷೆ ಹಾಗೂ ಸಾಹಿತ್ಯಕ್ಕೆ  ಒದಗಿದ ಒಂದು ಗೊಂದಲದ ಚಿತ್ರವನ್ನೂ ಕವಿರಾಜಮಾರ್ಗ ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ಆ ಗೊಂದಲ ಯಾವುದೆಂದರೆ: ಕವಿರಾಜಮಾರ್ಗದ ಕಾಲಕ್ಕೆ, ನೆಲಸಿದ್ದ ಹಳಗನ್ನಡ ಭಾಷಾ ಪರಿಸರದಲ್ಲಿ ‘ಆಗಮ ಬಲಹೀನ’ರಾದ ಕವಿಗಳು ಕಾವ್ಯರಚನೆಗೆ ತೊಡಗಿ ಕಾವ್ಯದ ದಾರಿ ದಿಕ್ಕು ತಪ್ಪಿತ್ತು. ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿದ್ದ ಕನ್ನಡನಾಡಿನಲ್ಲಿ-ಅಥವಾ ಅಂದಿನ ರಾಷ್ಟಕೂಟರ ಸಾಮ್ರಾಜ್ಯದಲ್ಲಿ- ಹಲವು ಬಗೆಯ ಕನ್ನಡಗಳು ಬಳಕೆಯಲ್ಲಿದ್ದು, ಈ ಕನ್ನಡದ ಭಾಷಾ ಪ್ರಭೇದಗಳು (ದೇಸಿಗಳು) ಬೇಸರತರಿಸುವಷ್ಟು ದೋಷಪೂರ್ಣವಾಗಿದ್ದವು. ಹೀಗಾಗಿ ‘ನುಡಿಗೆಲ್ಲ ಸಲ್ಲದ’ ಈ ಪ್ರಾದೇಶಿಕ ಭಾಷಾಭೇದಗಳನ್ನು ಸರಿಪಡಿಸಿ ನುಡಿಗೆಲ್ಲ ಸಲ್ಲುವಂಥ ಸಮಾನ ಅಧಿಕೃತ ಭಾಷೆ (Standard Language)ಯೊಂದನ್ನು ರೂಢಿಸುವ ಮೊದಲ ಕಾಳಜಿ ಹಾಗೂ ಒಂದು ಪ್ರೌಢವಾದ ಕಾವ್ಯಮಾರ್ಗವನ್ನು ನಿರ್ಮಾಣ ಮಾಡಬೇಕೆಂಬ ಸಂಕಲ್ಪ ಕವಿರಾಜಮಾರ್ಗದ ಪೂರ್ವ ಪೀಠಿಕೆಯಾಗಿದೆ.

ಕವಿರಾಜಮಾರ್ಗಕಾರ ಇಂಥ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಭಾಷೆಯ ನಿರ್ಮಿತಿಯ ಬಗ್ಗೆ ಮೊದಲು ನೀಡಿದ ಮಾರ್ಗದರ್ಶನದಲ್ಲಿ, ಕಾವ್ಯಲಕ್ಷಣಗಳೇನೋ ಸಂಸ್ಕೃತದಲ್ಲಿ ಆಗಲೇ ಪರಿಚಿತವಾದವುಗಳಾದರೂ, ಸಂಸ್ಕೃತದಿಂದ ಭಿನ್ನವಾದ ಜಾಯಮಾನವನ್ನುಳ್ಳ ಕನ್ನಡದ ಭಾಷಾ ಸಂದರ್ಭದಲ್ಲಿ, ದೋಷ ಅದೋಷಗಳ ನಿರ್ಣಯ ಮಾಡುವ ಸಂಗತಿ ಮುಖ್ಯವಾಗಿದೆ. ಈ ಕಾರ‍್ಯದಲ್ಲಿ ಸಂಸ್ಕೃತದ ನಿದರ್ಶನಗಳ ಅನುವಾದದಿಂದ ಹೆಚ್ಚು ಪ್ರಯೋಜನವಿಲ್ಲ. ಆದಕಾರಣ ಕಾವ್ಯದೋಷಗಳನ್ನು ಕನ್ನಡಕ್ಕೆ ಅನ್ವಯಿಸಿ ಹೇಳುವಲ್ಲಿ ಮಾರ್ಗಕಾರನ ಶಾಸ್ತ್ರಪ್ರತಿಭೆಯ ವೈಶಿಷ್ಟ್ಯ ಸ್ಪಷ್ಟವಾಗಿದೆ. ಈ ಗ್ರಂಥದಲ್ಲೆಲ್ಲ “ಅತಿ ಮಹತ್ವದ ಭಾಗವೇ ಕನ್ನಡಕ್ಕೆ ಮಾತ್ರ ಕೇಂದ್ರಿತವಾದ ದೋಷ ವಿವೇಚನೆಯ” (ಡಾ. ಕೆ. ಕೃಷ್ಣಮೂರ್ತಿ, ೧೯೬೪) ಪ್ರಕರಣ. ದೋಷಾದೋಷ ನಿರ್ಣಯಕ್ಕೆ ಮೊದಲ ಮಾನ್ಯತೆ ನೀಡಿ, ತನ್ನ ವಿಸ್ತಾರವಾದ ಪ್ರತಿಪಾದನೆಯ ಮೂಲಕ ಕನ್ನಡ ವ್ಯಾಕರಣ ನಿರ್ಮಾಣಕ್ಕೂ ನಿರ್ದುಷ್ಟವಾದ ಕಾವ್ಯರಚನಾ ಪದ್ಧತಿಗೂ ಭದ್ರವಾದ ಬುನಾದಿಯನ್ನು ಮಾರ್ಗಕಾರ ಹಾಕಿಕೊಟ್ಟಿದ್ದಾನೆ.

ಈ ಹಿನ್ನೆಲೆಯಿಂದ ಮುಂದಿನ ಕನ್ನಡ ಕಾವ್ಯಭಾಷೆ ಹೇಗಿರಬೇಕು ಎಂಬುದರ ಚರ್ಚೆ ಕವಿರಾಜಮಾರ್ಗದಲ್ಲಿ ಮೌಲಿಕವಾದುದಾಗಿದೆ. ಇಲ್ಲಿ ಮಾರ್ಗಕಾರನು ಪ್ರಸ್ತಾಪಿಸುವ ‘ಉತ್ತರಮಾರ್ಗ’ ‘ದಕ್ಷಿಣಮಾರ್ಗ’ಗಳ  ವಿಷಯ ಮೇಲೆ ನೋಡಲು, ಕನ್ನಡ ಸಾಹಿತ್ಯದ ಮೂಲಮಾನದಲ್ಲಿ ಮುಖ್ಯವಾದ ‘ರೀತಿಭೇದ’ಗಳನ್ನು ಗುರುತಿಸುವ ಹೊಸಪರಿಕಲ್ಪನೆ- ಗಳಾಗಿವೆಯೋ ಏನೊ ಎಂಬ ಭ್ರಮೆಯನ್ನೂ ಉಂಟುಮಾಡಿದರೂ, ಅವನು ಅದಕ್ಕಾಗಿ ಕೊಡುವ ಕನ್ನಡ ಲಕ್ಷ್ಯ ಪದ್ಯಗಳು ಕುತೂಹಲವನ್ನು ಕೆರಳಿಸಿದರೂ, ಈ ಮಾರ್ಗಭೇದಗಳು ದಂಡಿಯು ತನ್ನ ಕಾವ್ಯಾದರ್ಶದಲ್ಲಿ ಪ್ರಸ್ತಾಪಿಸುವ ಗೌಡೀ(ಪೌರ‍್ವಾತ್ಯ) ವೈದರ್ಭೀ(ದಾಕ್ಷಿಣಾತ್ಯ)- ರೀತಿಗಳ ಅನುಕರಣ ಪದಗಳಾಗಿವೆ. ಮಾರ್ಗಕಾರನ ಕಾಲದ ಭಾಷಾ ಪ್ರಯೋಗದ ಪ್ರಾದೇಶಿಕ ಭೇದಗಳು, ದಂಡಿ ಹೇಳುವ ವೈದರ್ಭೀ ಗೌಡೀ ಮಾರ್ಗಗಳಿಗೆ ಸಂವಾದಿಯಾದವುಗಳೆಂದು ಭಾವಿಸುವುದೇ ಕಷ್ಟವಾಗಿರುವಾಗ, ಕವಿರಾಜಮಾರ್ಗಕಾರನ ಮಾರ್ಗಭೇದಗಳು ನಿರುಪಯುಕ್ತವಾಗುತ್ತವೆ. ಅಷ್ಟೇ ಅಲ್ಲ ಸಂಸ್ಕೃತ ಅಲಂಕಾರ ಶಾಸ್ತ್ರದ ರೀತಿ ಸಿದ್ಧಾಂತದ ತತ್ವಗಳು, ವಾಸ್ತವವಾಗಿ ಸಂಸ್ಕೃತಕ್ಕಿಂತ ಭಿನ್ನವಾದ ರಚನಾ ಕ್ರಮಗಳನ್ನು ಜಾಯಮಾನವನ್ನು ಉಳ್ಳ ಕನ್ನಡ ಭಾಷೆಯ ಕಾವ್ಯಾಭಿವ್ಯಕ್ತಿಗೆ ಅಷ್ಟಾಗಿ ಅನ್ವಯಿಸಲು ಬಾರವು ಎಂಬುದನ್ನು ಗುರುತಿಸಿಕೊಳ್ಳ- ಬೇಕಾಗಿದೆ. ಸಂಸ್ಕೃತದಲ್ಲಿ, ಗೌಡೀ, ವೈದರ್ಭೀ, ಪಾಂಚಾಲೀ, ಲಾಟೀಯ ಹೀಗೆ ಐದಾರು ರೀತಿ ಭೇದಗಳಿದ್ದರೆ, ಕನ್ನಡಕ್ಕೆ ಮುಖ್ಯವಾದ ರೀತಿ ಭೇದಗಳೆಂದರೆ ಮೂರೇ: ಮಾರ್ಗ, ದೇಸಿ ಮತ್ತು ಅವೆರಡೂ ಒಡಂಬಡಿಕೆ. ಕನ್ನಡದ ಈ ರೀತಿ ಸಿದ್ಧಾಂತದ ಉಗಮವೇ ಕವಿರಾಜಮಾರ್ಗದಿಂದ, ಎನ್ನುವುದು  ಬಹುಮುಖ್ಯವಾದ ಸಂಗತಿಯಾಗಿದೆ.

ಸಂಸ್ಕೃತ ಅಲಂಕಾರ ಶಾಸ್ತ್ರದಲ್ಲಿ ಪ್ರಸ್ತಾಪಿತವಾಗದ ಮತ್ತು ಸಂಸ್ಕೃತದಲ್ಲಿ ಕೃತಿರಚನೆ ಮಾಡಿದ ಕವಿಗಳಿಗೆ ಇಲ್ಲದ ಶೈಲಿಯ ಸಮಸ್ಯೆಯೊಂದು (ಅಲಂಕಾರಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ ‘ರೀತಿಯ ಸಮಸ್ಯೆ’ಯೊಂದು) ಕನ್ನಡ ಕವಿಗಳನ್ನು  ಕಾಡಿದೆ. ಈ ಸಮಸ್ಯೆಗೆ ಕಾರಣ ಅವರು ಉದ್ದಕ್ಕೂ ದ್ವಿಭಾಷಿಕ ಸಾಹಿತ್ಯ ಸಂದರ್ಭದಲ್ಲಿ ಕೃತಿರಚನೆ ಮಾಡಬೇಕಾದಂಥ ಪರಿಸ್ಥಿತಿಯೇ. ತಾವು ಕೃತಿರಚನೆಗೆ ತೊಡಗಿಸಿಕೊಂಡ ಹಾಗೂ ತಮ್ಮ ಉಸಿರಿಗೆ ಹತ್ತಿರವಾದ ಕನ್ನಡ ಒಂದು; ತಮ್ಮ ಕೃತಿರಚನೆಗೆ ಹಿನ್ನೆಲೆಯಾಗಿ, ತಮ್ಮ ವಸ್ತು-ರೀತಿ ಹಾಗೂ ದೃಷ್ಟಿಕೋನಗಳನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವನ್ನುಳ್ಳ ಪರಂಪರೆಯೂ, ಪ್ರಭಾವವೂ ಆಗಿ ನಿಂತ ಸಂಸ್ಕೃತ ಮತ್ತೊಂದು.

ಕನ್ನಡದಲ್ಲಿ ಕಾವ್ಯರಚನೆ ಯಾವಾಗ ಪ್ರಾರಂಭವಾಯಿತೆಂಬುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲವಾದರೂ, ಕವಿರಾಜಮಾರ್ಗ ಪೂರ್ವದ ಕನ್ನಡ ಶಾಸನಗಳನ್ನು ನೋಡಿದರೆ (ಕ್ರಿ.ಶ. ೪೫೦ರ ಹಲ್ಮಿಡಿ ಶಾಸನ; ಕ್ರಿ.ಶ. ೬೩೪ರ ಐಹೊಳೆ ಶಾಸನ, ಕ್ರಿ.ಶ. ೭೦೦ರ ಕಾಲದ ಶ್ರವಣಬೆಳುಗೊಳದ ಶಾಸನ) ಮತ್ತು ಕವಿರಾಜಮಾರ್ಗವೆಂಬ  ಲಕ್ಷಣ ಗ್ರಂಥವು ಸಂಸ್ಕೃತ ಸಾಹಿತ್ಯ ಹಾಗೂ ಕಾವ್ಯಮೀಮಾಂಸೆಯ ತಿಳಿವಳಿಕೆಯಿಂದ ರಚಿತವಾದ ಕೃತಿ ಎಂಬುದನ್ನು ನೆನೆದರೆ, ಕನ್ನಡ ಸಾಹಿತ್ಯದ ಮೊದಲ ಕಾಲವೆ ದಟ್ಟವಾದ ಸಂಸ್ಕೃತದ ಪ್ರಭಾವಕ್ಕೆ ಒಳಗಾದ ಕಾಲವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಮುಂದಿನ ಕವಿಗಳಿಗೊದಗಿದ ಮುಖ್ಯ ಸಮಸ್ಯೆ ಎಂದರೆ, ಎಷ್ಟರ ಮಟ್ಟಿಗೆ ತಮ್ಮ ಕನ್ನಡದ ಅಭಿವ್ಯಕ್ತಿಯಲ್ಲಿ ಸಂಸ್ಕೃತವನ್ನು  ಹೊಂದಿಸಿಕೊಳ್ಳಬೇಕು ಅನ್ನುವುದೇ ಆಗಿದೆ. ಹೀಗಾಗಿ ಕನ್ನಡ ಕವಿಗಳು ತಮ್ಮ ಕೃತಿರಚನೆಯ ಸಂದರ್ಭದಲ್ಲಿ ಸಂಸ್ಕೃತದ ಬಗ್ಗೆ ತೋರಿದ ಕ್ರಿಯೆ  ಪ್ರತಿಕ್ರಿಯೆಗಳೆ ಕನ್ನಡ ಕಾವ್ಯದ ರೂಪಾಂಶವನ್ನು ನಿರ್ಧರಿಸಿವೆ ಎಂದರೆ ಅದೇನೂ ಉತ್ಪ್ರೇಕ್ಷೆಯಲ್ಲ. ಈ ಪ್ರತಿಕ್ರಿಯೆ ಸ್ಥೂಲವಾಗಿ ಹೇಳುವುದಾದರೆ ಮೂರು ಬಗೆಯಾಗಿದೆ. ೧) ಸಂಸ್ಕೃತವನ್ನು ಕನ್ನಡ ಕಾವ್ಯರಚನೆಗೆ ಒಂದು ಆತಂಕವೆಂದು ಭಾವಿಸದೆ, ಅದೊಂದು ಅನುಕೂಲವೆಂದೇ ತಿಳಿದ ಧೋರಣೆ. ಇದರಿಂದ ನಿಷ್ಪನ್ನವಾದ ರೀತಿಯನ್ನು ‘ಮಾರ್ಗ’  ಎಂದು ಕರೆಯಬಹುದು ೨) ಕನ್ನಡ ಭಾಷೆಗೆ ತನ್ನದೇ ಆದೊಂದು ಸತ್ವವಿರುವಾಗ, ಸಂಸ್ಕೃತದ ಸಂಪರ್ಕ ಪ್ರಭಾವಗಳನ್ನು ದೂರವಿರಿಸಿ ಅಚ್ಚಗನ್ನಡದಲ್ಲಿ ಆಡುನುಡಿಗೆ ಸಮೀಪವಾದೊಂದು  ರೀತಿಯನ್ನು ರೂಪಿಸಿಕೊಳ್ಳಬಹುದು ಎಂಬ ಧೋರಣೆ. ಇದರಿಂದ ನಿಷ್ಪನ್ನವಾದುದು ದೇಸಿ. ೩) ಕನ್ನಡದಂತೆಯೇ ಸಂಸ್ಕೃತವೂ ನಮ್ಮದೇ; ಆದರೆ ಆದು ಕನ್ನಡದ ಸೊಗಸನ್ನು ಕಬಳಿಸದಂತೆ ನೋಡಿಕೊಂಡು ಸಂಸ್ಕೃತದ ಪ್ರೌಢತೆಯನ್ನು (ಮಾರ್ಗವನ್ನು) ಕನ್ನಡದ ಆಡುನುಡಿಯ ಸೊಗಸಿನೊಂದಿಗೆ (ದೇಸೀಯತೆಯೊಂದಿಗೆ) ಹೊಂದಿಸಿ  ಒಂದು ಬಗೆಯ ಒಡಂಬಡಿಕೆಯನ್ನು ಸಾಧಿಸುವುದು ಹೇಗೆ ಎನ್ನುವ ಧೋರಣೆ. ಇದನ್ನು ಮಾರ್ಗ-ದೇಸಿಗಳ ಸಮನ್ವಯ ಎಂದು ಬೇಕಾದರೂ ಕರೆಯಬಹುದು. ಈ ಮೂರೂ ನಿಲುವುಗಳು ಇಡೀ ಕನ್ನಡ ಸಾಹಿತ್ಯದ ಉದ್ದಕ್ಕೂ (ಆಧುನಿಕ ಸಾಹಿತ್ಯವನ್ನೂ ಒಳಗೊಂಡು) ಇಂದಿಗೂ ಕ್ರಿಯಾಶೀಲವಾಗಿದೆ ಎಂಬುದನ್ನು ಯಾರಾದರೂ ಗುರುತಿಸಬಹುದು.[3] ಈ ವಿಷಯವನ್ನು ವಿಲಂಬಿಸದೆ ಇಲ್ಲಿ ಹೇಳಲಪೇಕ್ಷಿಸುವ ಮುಖ್ಯವಾದ ಮಾತೆಂದರೆ ಕನ್ನಡ ನಾಡು-ನುಡಿಯ ಬಗ್ಗೆ ಅತೀವ ಅಭಿಮಾನವುಳ್ಳ ಮಾರ್ಗಕಾರನು ಮೊಟ್ಟಮೊದಲಿಗೆ ಎತ್ತಿಹಿಡಿದುದು, ಈ ಮೂರನೆಯ ‘ಒಡಂಬಡಿಕೆಯ’ ಕ್ರಮವನ್ನು.

ಕವಿರಾಜಮಾರ್ಗದ ಕಾಲಕ್ಕೆ ಆಗಲೇ ಕನ್ನಡ ಕವಿಗಳು ಸಂಸ್ಕೃತದ ಅಕ್ಷರ ವೃತ್ತಗಳನ್ನು ಒಪ್ಪಿಕೊಂಡು, ಅವುಗಳಲ್ಲಿ ಎರಡು ಮುಖ್ಯವಾದ ಮಾರ್ಪಾಟುಗಳನ್ನು ಮಾಡಿದ್ದರು. ಒಂದು ಅಕ್ಷರ ವೃತ್ತಗಳ ಯತಿ ಸ್ಥಾನಗಳನ್ನು ನಿಯತವಾಗಿ ಅನುಸರಿಸದೆ, ‘ಯತಿವಿಲಂಘನ’ ಮಾಡಿದ್ದು. ಎರಡನೆಯದು ಹೊಸದಾಗಿ ದ್ವಿತೀಯಾಕ್ಷರ ಪ್ರಾಸದ ನಿರ್ಬಂಧವನ್ನು ಅಳವಡಿಸಿದ್ದು. ಈ ಬದಲಾವಣೆಗಳಿಂದ ಕನ್ನಡ ಕಾವ್ಯದ ಪದ್ಯಬಂಧ, ಸಂಸ್ಕೃತದ ಪದ್ಯರಚನಾ ಕ್ರಮದಿಂದ ಬೇರೆಯೇ ಆದ ಲಕ್ಷಣವನ್ನು ಪಡೆದುಕೊಂಡಿತು. ಕವಿರಾಜಮಾರ್ಗಕಾರ ಈ ಬರವಣಿಗೆಯ ಕ್ರಮವನ್ನು ಅನುಮೋದಿಸಿದ್ದಲ್ಲದೆ, ಇಡೀ ಕವಿರಾಜಮಾರ್ಗ ಕೃತಿಯನ್ನು  ಈ ವಿಧಾನದಲ್ಲಿಯೆ ರಚಿಸಿ (ಇದಕ್ಕೆ ಹಿಂದಿನ ಕೃತಿಗಳೆಲ್ಲ ಪೂರ್ಣಪ್ರಮಾಣದಲ್ಲಿ ಈ ಮಾದರಿಯಲ್ಲಿದ್ದುವೆ, ಇಲ್ಲವೆ ಎಂಬುದನ್ನು ಗುರುತಿಸಲು ಅವು ಯಾವುವೂ ದೊರಕಿಲ್ಲ) ಮುಂದಿನ ಕನ್ನಡ ಕಾವ್ಯರೂಪದ ಮಾರ್ಗದರ್ಶನ ಮಾಡುವುದರ ಜತೆಗೆ, ಕೃತಿಯ ‘ರೀತಿ’ಯ ಸ್ವರೂಪದ ಬಗ್ಗೆಯೂ ಮೌಲಿಕವಾದ ಸೂಚನೆಗಳನ್ನು ನೀಡಿದ್ದಾನೆ. ಸಂಸ್ಕೃತದ ಬಗ್ಗೆ ಪ್ರೀತಿ-ಅಭಿಮಾನ-ಗೌರವ; ಕನ್ನಡದ  ಬಗ್ಗೆ ಅದಮ್ಯವಾದ ಆತ್ಮೀಯತೆ -ಇಂಥ ನಿಲುವಿನ ಮಾರ್ಗಕಾರನಿಗೆ ತನ್ನ ಕಾಲದಲ್ಲಿ ಹದಗೆಡುತ್ತಿದ್ದ ವಿವಿಧ ದೇಸಿಗಳನ್ನು ಪರಿಷ್ಕರಿಸಿ ಒಂದು ಸಮಾನ ಭಾಷೆಯನ್ನು ರೂಪಿಸುವ  ಉದ್ದೇಶದ ಜತೆಗೆ, ಕಾವ್ಯಭಾಷೆಗೂ ಸಿದ್ಧವಾಗುತ್ತಿದ್ದ ಈ ಕನ್ನಡವನ್ನು ಸಂಸ್ಕೃತದ ಸಾಹಚರ್ಯದಿಂದ ಒಂದು ಗಟ್ಟಿಮುಟ್ಟಾದ ಕಾವ್ಯ ಸಂಪ್ರದಾಯ ನಿರ್ಮಾಣಕ್ಕೆ ನಿಯೋಜಿಸುವುದು ಹೇಗೆ ಎಂಬ ಕಾಳಜಿಗಳೂ ಪ್ರಧಾನವಾಗಿದ್ದವು. ಮಾರ್ಗಕಾರನಿಗೆ ಗೊತ್ತಿತ್ತು, ಸಂಸ್ಕೃತವನ್ನು ನಿರಾಕರಿಸಿ ಕನ್ನಡ ಬೆಳೆಯಲಾರದು. ಆದಕಾರಣ ಅದರಿಂದ ಪಡೆಯಬೇಕಾದ ಸತ್ವವನ್ನು  ಕನ್ನಡ ತನ್ನೊಳಗೆ ಅರಗಿಸಿಕೊಳ್ಳಬೇಕು ಎಂಬುದು; ಜತೆಗೆ ಯಾವ ಕಾರಣಕ್ಕೂ ಸಂಸ್ಕೃತವು ಕನ್ನಡದ ಜಾಯಮಾನಕ್ಕೆ ಮಾರಕವಾಗಬಾರದು, ಎಂಬುದು. ಆದ್ದರಿಂದ ಸಂಸ್ಕೃತವನ್ನೂ ಕನ್ನಡವನ್ನೂ ಒಂದು ಸಮತೂಕದಲ್ಲಿ ಹೊಂದಿಸಿ ಒಂದು ಕಾವ್ಯಭಾಷೆಯನ್ನು ಅಥವಾ ಬರವಣಿಗೆಯ ಕ್ರಮವನ್ನು ರೂಪಿಸುವ ಧೋರಣೆಯೊಂದನ್ನು ಕವಿರಾಜಮಾರ್ಗ ಮಂಡಿಸುತ್ತದೆ. ಮುಖ್ಯವಾಗಿ ಕವಿರಾಜಮಾರ್ಗದ ಮೊದಲ ಪರಿಚ್ಛೇದವೇ, ‘ದೋಷ-ಅದೋಷ’ಗಳ ವಿಚಾರಕ್ಕೆ ಮೀಸಲಾಗಿದ್ದು, ಅದರಲ್ಲಿ ಮಾರ್ಗಕಾರ ಕನ್ನಡ ಸಂಸ್ಕೃತಗಳ ಸಂಬಂಧವನ್ನು ‘ ಕಾವ್ಯಭಾಷೆ’ಯ ಮೂಲಮಾನದಲ್ಲಿ ಚರ್ಚೆಗೆ ಗುರಿಪಡಿಸುತ್ತಾನೆ: ‘ಸರಿಸಮವಾದ ಸಂಸ್ಕೃತೋಕ್ತಿಗಳೊಂದಿಗೆ ಹೊಂದಿಕೊಳ್ಳುವಂತೆ ಕನ್ನಡದ ನುಡಿಗಳು ಬೆರೆಸಿ ಬಂದರೆ ಸೊಗಸಾದ ಸಂಗೀತದಲ್ಲಿ ಸಮರಸಗೊಳ್ಳುವ ಮೃದಂಗ ಮಧುರ ಧ್ವನಿಯಂತೆ ಅವು ಸಂತೋಷವನ್ನುಂಟು ಮಾಡುತ್ತವೆ’ (೧-೫೫); ‘ಸಂಸ್ಕೃತದ ಗುಣಾತಿಶಯದಿಂದ ಪರಿಪೂರ್ಣವಾದ ಉಕ್ತಿಮಾರ್ಗವನ್ನು ಪರಾಮರ್ಶಿಸಿ, ಕನ್ನಡದಲ್ಲಿ ಹೇಳಿದರೆ ಕಾವ್ಯಬಂಧಕ್ಕೊಂದು ಸೊಗಸು ಬರುವುದಲ್ಲದೆ, ನಿಂದನೆಗೂ ಒಳಗಾಗುವುದಿಲ್ಲ (೧-೫೭); ‘ಸಂಸ್ಕೃತ ಪದಗಳೂ ಕನ್ನಡ ಪದಗಳೂ ಸಮಾಸ ರಚನೆಯಲ್ಲಿ ಹಿತವಾಗಿ ಬಂದಾಗ ಮಾತ್ರ ಕವಿಯ ಪದಪ್ರಯೋಗಗಳು ಕನಕ ರಚನೆಯಲ್ಲಿ ಮಣಿನಿಕರದಂತೆ ಸುಂದರವಾಗುತ್ತವೆ’ (೧-೬೧); ‘ಸಂಸ್ಕೃತವನ್ನೂ ಕನ್ನಡವನ್ನೂ ಸರಿಯಾಗಿ ಅರಿಯದೆ ಒಂದೇ ಸಮಾಸದಲ್ಲಿ ಕೂಡಿಸಿಬಿಟ್ಟರೆ ಕುದಿಯುತ್ತಿರುವ ಹಾಲಿನಲ್ಲಿ ಮಜ್ಜಿಗೆಯ ಹನಿಗಳನ್ನು ಬೆರೆಸಿದಂತೆ ವಿರಸವಾಗುತ್ತದೆ’ (೧-೫೮)- ಈ ಕೆಲವು ಉಕ್ತಿಗಳನ್ನು ನೋಡಿದರೆ, ಕವಿರಾಜಮಾರ್ಗಕಾರ  ಸಂಸ್ಕೃತವು, ಕನ್ನಡ ಕಾವ್ಯಭಾಷೆಯೊಂದಿಗೆ ಪಡೆದುಕೊಳ್ಳಬೇಕಾದ ಹೆಣಿಗೆಯ ಸ್ವರೂಪವೆಂಥದು ಎಂಬುದನ್ನು ಅತ್ಯಂತ ಪ್ರಾಯೋಗಿಕವಾಗಿ ನಿರೂಪಿಸಿರುವುದನ್ನು ಕಾಣಬಹುದು. ಈ ಎಲ್ಲ ಸೂಚನೆಗಳ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಇನ್ನು ಮುಂದೆ ರೂಪುಗೊಳ್ಳಬೇಕಾದ ಕಾವ್ಯದ ಭಾಷೆ ಹೇಗಿರಬೇಕು  ಎನ್ನುವುದನ್ನು ಕುರಿತು  ಮಾರ್ಗಕಾರನ ನಿರ್ದೇಶನ ಹೀಗಿದೆ: ‘ಕವಿ ಕೃತಿರಚನೆಯಲ್ಲಿ ಬಳಸುವ ಪದಗಳು ಒಂದಕ್ಕೊಂದು ಹೊಂದಿಕೊಂಡು ಕವಿಯು ಅಭಿವ್ಯಕ್ತಿಪಡಿಸಲಪೇಕ್ಷಿಸುವ ಭಾವವನ್ನು ಉಚಿತವಾದ ರೀತಿಯಲ್ಲಿ ನಿರೂಪಿಸುವಂತಿರಬೇಕು. ಆ ಕನ್ನಡದ ಮಾತುಗಳೊಂದಿಗೆ ‘ನಾೞ್ನುಡಿಯ ಬೆಡಂಗು’ -ಆಡುಮಾತಿನ ಸೊಗಸು ಇರಬೇಕು. ಈ ಕನ್ನಡದ ಮಾತುಗಳೊಂದಿಗೆ ಕವಿ ಬಳಸುವ ಸಂಸ್ಕೃತದ ಪದಗಳು ಕರ್ಕಶವಾದ  ಪರುಷಾಕ್ಷರಗಳಿಂದ ಕೂಡಿರಬಾರದು. ಮತ್ತು ಒಟ್ಟಿನಲ್ಲಿ ರಚನೆ ‘ಮೆಲ್ಪುವೆತ್ತು’ ಎಂದರೆ ಮೃದುಪದ ಬಂಧದಿಂದ ಕೂಡಿರಬೇಕು. ಪದ್ಯದ ರಚನೆ ಬಳ್ಳಿಯೊಂದು ಕೋಮಲವಾಗಿ ಕುಡಿ ಚಾಚಿಕೊಂಡು ಹಬ್ಬಿದಂತೆ ಇರಬೇಕೆಂಬುದೆ ‘ನೀತಿನಿರಂತರ’ ಎಂಬ ಬಿರುದನ್ನು ಪಡೆದ ನೃಪತುಂಗನಿಗೆ ಸಮ್ಮತವಾದ ಮತ’ (೧-೧೪೯).

ಕವಿರಾಜಮಾರ್ಗಕಾರನ ಈ ಹೇಳಿಕೆ ಸ್ಪಷ್ಟವಾಗಿ ಕಾವ್ಯಭಾಷೆಯೊಂದನ್ನು ಕುರಿತ ಸಮತೂಕದ ಧೋರಣೆಯೊಂದನ್ನು ಮೊಟ್ಟಮೊದಲಿಗೆ ಪ್ರತಿಪಾದಿಸುತ್ತದೆ. ಕನ್ನಡ ಕಾವ್ಯ ತನ್ನೊಳಗೆ ಸಂಸ್ಕೃತದ ಪ್ರವೇಶವನ್ನು ಹಾಗೂ ಹೊಂದಾಣಿಕೆಯನ್ನು ಎಷ್ಟರಮಟ್ಟಿಗೆ ಮಾಡಿಕೊಳ್ಳಬೇಕೆಂಬ ಈ ನಿರ್ದೇಶನದಲ್ಲಿ, ಹಾಗೆ ಬಳಕೆಯಾಗುವ ಸಂಸ್ಕೃತವು ಕನ್ನಡದ ನಾಡುನುಡಿಯ ಬೆಡಗಿಗೆ ಧಕ್ಕೆ ತರುವಂತಿರಬಾರದು ಎನ್ನುವ ಎಚ್ಚರಿಕೆ ಬಹುಮುಖ್ಯವಾದುದು. ಮುಂದೆ ಈ ನಿಲುವು ನಯಸೇನ, ಆಂಡಯ್ಯ, ಮಹಲಿಂಗರಂಗ ಅಂಥವರ ಪ್ರತಿಕ್ರಿಯೆ ಹಾಗೂ ಪ್ರಶ್ನೆಗೆ ಒಳಗಾಯಿತೆಂಬುದು ನಿಜವಾದರೂ, ಮತ್ತು ಎಷ್ಟೋ ‘ಮಾರ್ಗ’ ಕವಿಗಳು ಈ ಎಚ್ಚರದ ಮಾತನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ, ತಮ್ಮ ಬರವಣಿಗೆಯನ್ನು ‘ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು’ ಎಂಬ ಟೀಕೆಗೆ ಆಸ್ಪದವಾಗುವಂತೆ ಮಾಡಿದರೂ, ಮಾರ್ಗಕಾರನ ಈ ನಿಲುವನ್ನು ಮೊದಲು ಅನುಮೋದಿಸಿ ‘ದೇಸಿ-ಮಾರ್ಗ’ಗಳ ಒಡಂಬಡಿಕೆಯನ್ನು  ತಂದವನು ಪಂಪನೇ. ಈ ಕುರಿತು ಪಂಪನ ನಿಲುವು ಯಾವುದೆಂದರೆ ‘ದೇಸಿಯೊಳ್ ಪುಗುವುದು’ ಹಾಗೆ ‘ಪೊಕ್ಕು ಮಾರ್ಗದೊಳೆ ತಳ್ವುದು’[4] -ಎಂದರೆ ದೇಸಿಯಲ್ಲಿ  ಪ್ರವೇಶಿಸಿ ಮಾರ್ಗದಲ್ಲಿ ನಿಲ್ಲುವುದು. ಕವಿರಾಜಮಾರ್ಗಕಾರನ  ‘ಸಂಸ್ಕೃತ’ ಹಾಗೂ ‘ನಾಳ್ನುಡಿಯ ಬೆಡಂಗು’ ಎಂಬ ಮೂಲಭಾವಕ್ಕೆ ಸಂವಾದಿಯಾಗಿ ಪಂಪ ‘ಮಾರ್ಗ’ ‘ದೇಸಿ’ಗಳನ್ನು ಬಳಸುತ್ತಾನೆಂದು ತೋರುತ್ತದೆ. ಮಾರ್ಗಕಾರನಂತೆ ಪಂಪನೂ ತಿರುಳ್ಗನ್ನಡದ ಸೊಗಸಿಗೆ ಮಾರುಹೋದವನು. ಅದೇ ಪಂಪನಿಗೆ ಪ್ರಿಯವಾದ ದೇಸಿ. ಈ ತಿರುಳ್ಗನ್ನಡದ ದೇಸಿಯೊಂದಿಗೆ ಮಾರ್ಗದ (ಸಂಸ್ಕೃತದ ಪ್ರೌಢ ಭಾಷಾರಚನೆಯ) ಸತ್ವವನ್ನು ಬೆಸೆಯುವುದು ಪಂಪನ ಉದ್ದೇಶ. ಪಂಪನ ದೇಸಿಯ ಸೊಗಸು ಅವನು ರೂಢಿಸಿದ ಮಾರ್ಗ-ದೇಸಿಗಳ ಒಡಂಬಡಿಕೆಯೂ ಮುಂದಿನ  ಕನ್ನಡ ಕವಿಗಳಿಂದ ಪ್ರಶಂಸಿತವಾಗಿದೆ.

-೩-

ಕವಿರಾಜಮಾರ್ಗ ಸಂಸ್ಕೃತ ಕಾವ್ಯಮೀಮಾಂಸೆಯ ತಿಳಿವಳಿಕೆಯ ಹಿನ್ನೆಲೆಯಲ್ಲಿ ಕನ್ನಡದ ಕಾವ್ಯ ಚಿಂತನೆಯೊಂದನ್ನು ಕಟ್ಟಿಕೊಡುವ ಹಾಗೂ ಮುಂದುವರಿಸುವ ಉದ್ದೇಶದ  ಕೃತಿಯಾಗಿದೆ. ಅದುವರೆಗಿನ ಅಲಂಕಾರಶಾಸ್ತ್ರದ  ಪ್ರಮುಖ ಪ್ರಸ್ಥಾನ ಹಾಗೂ ಪರಿಕಲ್ಪನೆಗಳ ನೆನಪುಗಳನ್ನು  ಅನುರಣಿಸುವ ಈ ಕೃತಿ ಪ್ರಧಾನವಾಗಿ, ಅಲಂಕಾರ ಮತ್ತು  ರೀತಿ ಪ್ರಸ್ಥಾನಗಳಿಗೆ ಸೇರುವಂತೆ ತೋರಿದರೂ, ಕನ್ನಡದ ಸಂದರ್ಭದಲ್ಲಿ ರಸಗಳ  ಸಂಖ್ಯೆ ಒಂಬತ್ತೆಂದೂ, ಅವುಗಳಲ್ಲಿ ಶಾಂತರಸವು ಒಂಬತ್ತನೆಯದೆಂದೂ ಹೇಳುವ ಸಂಗತಿ ಚಾರಿತ್ರಿಕವಾಗಿ ಮಹತ್ವದ್ದಾಗಿರುವಂತೆ, ತನ್ನ ಸಮಕಾಲೀನತೆಯಲ್ಲಿಯೆ ದೂರದ ಉತ್ತರದ ಕಾಶ್ಮೀರದಲ್ಲಿ ಆನಂದವರ್ಧನನಿಂದ ಪ್ರತಿಪಾದಿತವಾದ ಧ್ವನಿ ತತ್ವವನ್ನು ತಾನು ತಿಳಿದುಕೊಂಡಂತೆ ಪ್ರಸ್ತಾಪಿಸಿರುವ ರೀತಿಯು ವಿಶೇಷದ್ದಾಗಿದೆ. ನಮ್ಮ ಆಲಂಕಾರಿಕರು ಕಾವ್ಯವನ್ನು ಯಾವತ್ತೂ ಒಂದು ಜಡ ‘ವಸ್ತು’ ಎಂಬಂತೆ ಭಾವಿಸದೆ ಅದೊಂದು ‘ಸಜೀವ ಶಿಲ್ಪ’ವೆಂಬಂತೆ ತಿಳಿದುಕೊಂಡದ್ದರಿಂದಲೇ ‘ಕಾವ್ಯ ಶರೀರ’, ಆ ಶರೀರಕ್ಕೆ ಶೋಭಾಕರವಾದ ‘ಅಲಂಕಾರ’ಗಳು, ಅದಕ್ಕೊಂದು ‘ಆತ್ಮ’ ಈ ಪರಿಭಾಷೆಗಳಲ್ಲಿ  ಮಾತನಾಡಿದರು. ಉದ್ದಕ್ಕೂ ಕಾವ್ಯ ಶರೀರದ ಲಕ್ಷಣಗಳು ಯಾವುವು; ಕಾವ್ಯದ ಆತ್ಮ ಯಾವುದು ಎಂಬುದನ್ನು ಕುರಿತು ಅಲಂಕಾರಶಾಸ್ತ್ರ ಚರ್ಚಿಸುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಕವಿರಾಜಮಾರ್ಗಕಾರ ಕಾವ್ಯಕ್ಕೆ ಇರುವ ವ್ಯಕ್ತಿವಿಶಿಷ್ಟತೆಯನ್ನು ಕುರಿತು “ಕೈ, ಕಾಲು, ಮೈ, ತಲೆ, ಹೊಟ್ಟೆ, ಮುಖ -ಇವೆಲ್ಲಾ ತಮ್ಮ ತಮ್ಮ ಸ್ಥಾನದಲ್ಲಿದ್ದೂ, ಎಲ್ಲರೂ ಮನುಷ್ಯರಾಗಿದ್ದರೂ ಕೂಡಾ, ಒಬ್ಬರು ಇನ್ನೊಬ್ಬರನ್ನು ಹೇಗೆ ಹೋಲುವುದಿಲ್ಲವೋ ಹಾಗೆ” ಮೇಲೆ ನೋಡಲು ಅದೇ ಪರಿಚಿತವಾದ ಶಬ್ದಾರ್ಥಗಳ ಮೂಲಕ ಬೇರೆಬೇರೆಯ ಕವಿಗಳಿಂದ ವಿರಚನೆಗೊಂಡು, ಒಂದೇ ಎಂಬಂತೆ ಭಾಸವಾದರೂ ತತ್ವಶಃ ಪ್ರತಿಯೊಂದು  ಅಭಿವ್ಯಕ್ತಿಯೂ ತನಗೆ ತಾನೇ ವಿಶಿಷ್ಟವಾದುದು (೨-೪೭) ಎಂಬರ್ಥದ- ಮಾತುಗಳನ್ನು ಹೇಳುವ ರೀತಿ ಚಿಂತನಯೋಗ್ಯವಾಗಿದೆ. ಹಾಗೆಯೆ ಕವಿಗಳ ಶ್ರೇಣೀಕರಣವನ್ನು ಕುರಿತು ‘ಕವಿರಾಜಮಾರ್ಗ’ ಮಂಡಿಸುವ ವಿಚಾರಗಳು ಪರಿಶೀಲನೆಗೆ ಅರ್ಹವಾಗಿವೆ: ಯಾಕೆಂದರೆ ಮಾರ್ಗಕಾರನಿಗೆ ಆಕರವಾದ ದಂಡಿ-ಭಾಮಹರ ಕೃತಿಗಳಲ್ಲಿ ಈ ವರ್ಗೀಕರಣದ ಪ್ರಸ್ತಾಪವಿಲ್ಲ. ಮಾರ್ಗಕಾರ ಕವಿಗಳನ್ನು ನಾಲ್ಕುವಿಧ  ಎಂದು ವರ್ಗೀಕರಿಸುತ್ತಾನೆ. ಆ ಕವಿಗಳು  ಯಾರೆಂದರೆ: ಮಾತಱಿವ, ನಿಪುಣ, ಜಾಣ ಮತ್ತು ಬಲ್ಲಂ (ಬಲ್ಲವನು).

ಅವುಗಳ ವಿವರಣೆ ಹೀಗಿದೆ:

೧. ಮನಸ್ಸಿನಲ್ಲಿರುವ ಅರ್ಥವನ್ನು ಇನ್ನೊಬ್ಬರಿಗೆ ತೆರೆದಿಟ್ಟಂತೆ ತಿಳಿಸಬಲ್ಲವನು ‘ಮಾತಱವ’ ೨. ಕಿರಿದರಲ್ಲಿ ಪಿರಿದರ್ಥವನ್ನು ಅಡಗಿಸಿ ಅಭಿವ್ಯಕ್ತಪಡಿಸಬಲ್ಲವನು (ಮೊದಲನೆಯವಗಿಂತ) ನಿಪುಣ ೩. ನುಡಿಯನ್ನು ಛಂದೋಬಂಧವೊಂದರಲ್ಲಿ ಅಳವಡಿಸಬಲ್ಲವನು (ಈಗ ಪ್ರಸ್ತಾಪಿಸಿದವನಿಗಿಂತ ) ಜಾಣ ೪. ಮಹಾಧ್ವಕೃತಿಗಳನ್ನು (ಒಂದು ಮಾರ್ಗ ಅಥವಾ ಪರಂಪರೆಯನ್ನು ನಿರ್ಮಾಣ ಮಾಡಬಲ್ಲಂಥ ಕೃತಿಗಳನ್ನು) ವಿರಚಿಸಬಲ್ಲಾತ ಈ ಎಲ್ಲರಿಗಿಂತಲೂ ಬಲ್ಲವನು (ಬಲ್ಲಂ) (೧-೧೫-೧೬). ವಾಸ್ತವವಾಗಿ ಸಂಸ್ಕೃತ ಅಲಂಕಾರಶಾಸ್ತ್ರದ ಚರಿತ್ರೆಯಲ್ಲಿ ಕವಿಗಳ ಹಲವು ಪ್ರಭೇದಗಳನ್ನು ಗುರುತಿಸಿದವನು, ಕವಿರಾಜಮಾರ್ಗಕಾರನ ಅನಂತರ ಬಂದ ಹತ್ತನೆಯ ಶತಮಾನಕ್ಕೆ ಸೇರಿದ ರಾಜಶೇಖರ ಎಂಬ ಆಲಂಕಾರಿಕ. ಆದರೆ ಅವನಿಗೂ ಮುನ್ನ ‘ಕವಿರಾಜಮಾರ್ಗ’ದಲ್ಲಿ ಬರುವ ಈ ಕವಿ ಪ್ರಭೇದಗಳನ್ನು ಕೊಂಚ ಗಮನವಿರಿಸಿ ನೋಡಿದರೆ ಇವು ನಾಲ್ಕು ಬಗೆಯ ಕವಿಗಳನ್ನು ಕುರಿತ ಮಾತು ಎನ್ನುವುದಕ್ಕಿಂತ, ಒಟ್ಟು ಕೃತಿರಚನೆಯ ಮುಖ್ಯ ಲಕ್ಷಣಗಳನ್ನು ಕುರಿತಂತೆ ತೋರುತ್ತದೆ. ಮೊದಲನೆಯದು ನಿಜವಾದ ಕವಿಯ ಅಭಿವ್ಯಕ್ತಿಯ ಸ್ವರೂಪವಾದ ‘ಅರ್ಥವ್ಯಕ್ತಿ’ (Clarity)ಯನ್ನೂ, ಎರಡನೆಯದು ಅಭಿವ್ಯಕ್ತಿಗೆ ಇರಬೇಕಾದ ಸಂಗ್ರಾಹಕ (Brevity) ಗುಣವನ್ನೂ, ಮೂರನೆಯದು ಕವಿಯ ಅಭಿವ್ಯಕ್ತಿಗೆ ದೊರೆಕೊಳ್ಳುವ ಛಂದೋಬಂಧ ಕೌಶಲ(Technical  excellence)ವನ್ನೂ, ನಾಲ್ಕನೆಯದು ಮಹತ್ತಾದ ವಸ್ತು ನಿರ್ವಹಣೆಯಿಂದ ಮಾರ್ಗದರ್ಶಕವಾಗಬಲ್ಲ ಅಥವಾ ಪರಂಪರೆಯೊಂದನ್ನು ಕಟ್ಟಬಲ್ಲ ಮಹಾಕವಿಯ ಸಾಮರ್ಥ್ಯ (The epic genius)ವನ್ನೂ ಸೂಚಿಸುತ್ತದೆ ಎಂದು ತಿಳಿಯುವುದೆ ಸೂಕ್ತವಾದದ್ದು.

ಸಾಮಾನ್ಯವಾಗಿ ಸಂಸ್ಕೃತಕಾವ್ಯ ಲಕ್ಷಣಕಾರರು ಕಾವ್ಯಕ್ಕೂ ಇತರ ಲಲಿತ ಕಲೆಗಳಾದ ವಾಸ್ತುಶಿಲ್ಪ ಇತ್ಯಾದಿಗಳಿಗೂ ಇರುವ ಸಂಬಂಧವನ್ನು ಕುರಿತು ಚರ್ಚಿಸುವುದೇ ಇಲ್ಲ. ಚಿತ್ರಕಲೆಯನ್ನು ಕುರಿತು ಪ್ರಾಸಂಗಿಕವಾಗಿ ಎರಡು ಮಾತನ್ನು ಆಡಿದರೂ, ಚಿತ್ರಕಲೆ ವಸ್ತುವಿನ ಪ್ರತಿಕೃತಿ ಅಥವಾ ಅನುಕರಣವೇ ಹೊರತು ಅದರಲ್ಲಿ ಜೀವಭೂತವಾದ ರಸವುಂಟೆಂಬುದನ್ನು ಒಪ್ಪುವುದಿಲ್ಲ. ಆದಕಾರಣವೇ ರಸಭಾವಶೂನ್ಯವಾದ ಕಾವ್ಯಕ್ಕೆ ಆನಂದವರ್ಧನನು ‘ಚಿತ್ರಕಾವ್ಯ’ (ಕನಿಷ್ಠತಮ ಗುಣ ಉಳ್ಳ ಕಾವ್ಯ) ಎಂದು ಕರೆದಿದ್ದಾನೆ. ಎಂಟನೆ ಶತಮಾನದ ವಾಮನನು ಮಾತ್ರ ಚಿತ್ರಪಟದಂತೆ ನಾಟಕವು ಸಕಲ ವಿಶೇಷಗಳನ್ನು ಒಳಗೊಳ್ಳುವುದೆಂದು ಹೇಳುತ್ತಾನೆ. ಈ ಹಿನ್ನೆಲೆಯಲ್ಲಿ ಕವಿರಾಜಮಾರ್ಗಕಾರನು ಕಾವ್ಯಕ್ಕೂ ಚಿತ್ರಕ್ಕೂ ಇರುವ ಸಾಮ್ಯವನ್ನೂ ಸಂಬಂಧವನ್ನೂ ಕುರಿತು ಪ್ರಸ್ತಾಪಿಸಿರುವುದು ಒಂದು ವಿಶೇಷದ ಸಂಗತಿಯಾಗಿದೆ. ಪದ್ಯ ೧-೧೫೦ ಮುಖ್ಯವಾಗಿ ಕವಿರಾಜಮಾರ್ಗವನ್ನು ಶ್ರೀವಿಜಯನಿಂದ ರಚಿತವಾದ ಅಪೂರ್ವ ಲಕ್ಷಣಗಳಿಂದ ಕೂಡಿರುವ ಒಂದು ‘ಚಿತ್ರ’ ಕೃತಿ ಎಂದು ಬಣ್ಣಿಸುತ್ತ, ಕಾವ್ಯಶಾಸ್ತ್ರ ಪ್ರೇರಿತವಾದ ಎಲ್ಲ ಭೇದ-ವಿಭೇದಗಳ ವಿವರಣೆಯನ್ನೂ (ವಾಕ್ಯವೃತ್ತಿ)ಯನ್ನೂ ಒಳಗೊಳ್ಳುತ್ತ, ಚಿತ್ರಕಾರನು ಯಾವರೀತಿಯಲ್ಲಿ ಚಿತ್ರದ ಶ್ರೇಷ್ಠವಾದ ‘ಭಾಗ’ ಮತ್ತು  ‘ಭಾವ’ಗಳನ್ನು ವರ್ಣಕ್ರಮಾವೃತ್ತಿಯಿಂದ ಸುವ್ಯಕ್ತ (ಪ್ರಕಟ)ವಾಗುವಂತೆ ಮಾಡುತ್ತಾನೆಯೋ ಹಾಗೆ, ನಿರೂಪಿಸಿದ ಕೃತಿ ಇದು-ಎಂದು ಕವಿಗಣವು ಸ್ವೀಕರಿಸಬೇಕು -ಎಂಬ ಕೋರಿಕೆಯನ್ನು ಮಂಡಿಸುತ್ತದೆ. ಈ ಪದ್ಯದಲ್ಲಿ ಮಾರ್ಗಕಾರನು ತನ್ನನ್ನು ಚಿತ್ರಕಾರನಿಗೂ, ತನ್ನ ಕೃತಿಯನ್ನು ಚಿತ್ರವೆಂದೂ, ಸಮೀಕರಿಸುತ್ತ, ಚಿತ್ರಕ್ಕೂ ಕಾವ್ಯಕ್ಕೂ, ಸಮಾನವಾದ ‘ವರ್ಣಕ್ರಮಾವೃತ್ತಿ’ಯ ಮೂಲಕ ತನ್ನ ಕೃತಿಯನ್ನು ಸುವ್ಯಕ್ತಗೊಳಿಸಿರುವುದಾಗಿ ಹೇಳಿಕೊಂಡಿದ್ದಾನೆ. ಚಿತ್ರದ ಸಂದರ್ಭದಲ್ಲಿ ‘ವರ್ಣಕ್ರಮಾವೃತ್ತಿ’ ಎಂದರೆ ಬಣ್ಣಗಳ ಬಳಕೆಯ ವಿಧಾನ ಎಂದೂ, ಕಾವ್ಯದ ಸಂದರ್ಭದಲ್ಲಿ ‘ವರ್ಣಕ್ರಮಾವೃತ್ತಿ’ ಎಂದರೆ ಅಕ್ಷರ ಸಮೂಹವನ್ನುಳ್ಳ ಭಾಷೆಯ ಬಳಕೆ ಎಂದೂ ಇಲ್ಲಿ ತಿಳಿಯಬೇಕು. ಕಾವ್ಯಕ್ಕೂ ಚಿತ್ರಕ್ಕೂ ಇರುವ ಸಾಮ್ಯವನ್ನು ಕುರಿತಂತೆ ಕನ್ನಡದಲ್ಲಿ ಇದು ಮೊದಲ ಪ್ರಸ್ತಾಪವಾಗಿದೆ.

ಕವಿರಾಜಮಾರ್ಗ ಒಂದು ಶಾಸ್ತ್ರ ಕೃತಿಯಾಗಿ ವಿದ್ವಜ್ಜನರ ಪ್ರಶಂಸೆಗೆ ಪಾತ್ರವಾಗಿರುವುದರ ಜತೆಗೆ, ಅದು ಒಳಕೊಳ್ಳುವ ನಾಡು ನುಡಿ ಹಾಗೂ ಕನ್ನಡ ಜನವನ್ನು ಕುರಿತ ಅತ್ಯಂತ ಅಭಿಮಾನ ಪೂರ್ವಕವಾದ ಉಕ್ತಿಗಳಿಂದ ಪಂಡಿತರಲ್ಲದ ಸಾಮಾನ್ಯ ಜನರ ನೆನಪಿನಲ್ಲಿ ಉಳಿದುಕೊಂಡಿದೆ. ಕನ್ನಡಪರ ಕಾಳಜಿಯ ಭಾವುಕ ಹೃದಯಗಳಿಗಂತೂ ಮಾರ್ಗಕಾರನು ವರ್ಣಿಸುವ ಈ ಸಂಗತಿಗಳು ವಿಷಾದ, ಅಭಿಮಾನ ಹಾಗೂ ಸಂಭ್ರಮಗಳನ್ನು ಏಕಕಾಲಕ್ಕೆ ಪ್ರೇರಿಸಬಲ್ಲವು. ಮೊದಲ ಪರಿಚ್ಛೇದದ ‘ಕಾವೇರಿಯಿಂದಮಾ ಗೋದಾವರಿವರಮಿರ್ದ’ (೧-೩೬) ಎಂಬ ಕನ್ನಡ ನಾಡಿನ ಭೌಗೋಳಿಕ ಮೇರೆಗಳನ್ನು ಕುರಿತ ಉಲ್ಲೇಖದಿಂದ ಮೊದಲುಗೊಂಡು, ಆ ನಾಡಿನ ಜನದ ‘ಕಾವ್ಯಪ್ರಯೋಗ ಪರಿಣತಮತಿ’ಯನ್ನೂ, ಅವರ ವಿವೇಕ ಹಾಗೂ ವಿಮರ್ಶನ ಪ್ರಜ್ಞೆಯನ್ನೂ ಪ್ರಶಂಸಿಸುವ, ಈ ಐದು ಪದ್ಯಗಳ (೧-೩೬-೪೦) ಜತೆಗೆ, ಎರಡನೆಯ ಪರಿಚ್ಛೇದದ ಲಕ್ಷ್ಯಪದ್ಯದೊಳಗೆ (೨-೨೮)ಬರುವ ಕನ್ನಡ ಜನದ ಶೌರ‍್ಯ ಸಾಹಸಗಳನ್ನು ಬಾಯ್ತುಂಬ ಹೊಗಳುವ ‘ಸುಭಟರ್ಕಳ್, ಸುಪ್ರಭುಗಳ್, ಚೆಲ್ವರ್ಕಳ್’…ಎಂಬ ಪದ್ಯವನ್ನು ಸೇರಿಸಿಕೊಂಡು ನೋಡಿದರೆ ಒಟ್ಟಾರೆಯಾಗಿ ಈ ನಾಡು-ನುಡಿ-ಹಾಗೂ ಜನದ ಚಿತ್ರ ಒಂದು ಚೌಕಟ್ಟನ್ನು ಪಡೆದಕೊಳ್ಳುತ್ತದೆ. ಜತೆಗೆ ಕನ್ನಡ ಸಂಸ್ಕೃತಿಯ ಮುಖ್ಯ ಲಕ್ಷಣಗಳನ್ನು ಎತ್ತಿ ಹಿಡಿಯುವ ಇನ್ನೂ ಅನೇಕ ಸಂಗತಿಗಳೂ ನಡುನಡುವೆ ಹರಡಿಕೊಂಡಿವೆ. ನಿದರ್ಶನಕ್ಕೆ ‘ಉದಾತ್ತ’ವೆಂಬ ಅಲಂಕಾರಕ್ಕೆ ಕವಿರಾಜಮಾರ್ಗಕಾರನಿಂದಲೇ ರಚಿತವಾದ ಎರಡು ಪದ್ಯಗಳನ್ನು (೩-೧೭೪ ರಿಂದ ೧೮೧) ನೋಡಬಹುದು. ಇದಲ್ಲದೆ ಮೂರನೆಯ ಪರಿಚ್ಛೇದದಲ್ಲಿ, ೨೧೯ನೆ ಪದ್ಯದಿಂದ ೨೩೧ ಪದ್ಯದವರೆಗೆ ನೃಪತುಂಗನ ಸಭಾಸದನದ ಕವಿಯನ್ನು (ಅಂದರೆ ಕವಿರಾಜಮಾರ್ಗದ ಕರ್ತೃವನ್ನು) ಅತ್ಯಂತ ಉಜ್ವಲವಾಗಿ ವರ್ಣಿಸುವ ಭಾಗ ಬಂದಿದೆ. ವಾಸ್ತವಾಗಿ ಈ ಎಲ್ಲ ಸಂಗತಿಗಳಿಗೂ ಅಲಂಕಾರಶಾಸ್ತ್ರಕ್ಕೂ ಏನು ಸಂಬಂಧ ಎನ್ನಿಸದೆ ಇರದು. ಆದರೆ ಕವಿರಾಜಮಾರ್ಗ ಆ ಕಾರಣದಿಂದಲೇ, ಸಂಸ್ಕೃತದ ಅಲಂಕಾರಶಾಸ್ತ್ರದ ಚೌಕಟ್ಟನ್ನು ಉಲ್ಲಂಘಿಸುವುದರ ಮೂಲಕವಾಗಿ ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡಿದೆ ಎಂದು ವ್ಯಾಖ್ಯಾನಿಸಬಹುದು. ನಿಜಾಂಶವೇನೆಂದರೆ ಕವಿರಾಜಮಾರ್ಗ ಕೇವಲ ಅಲಂಕಾರಶಾಸ್ತ್ರವಲ್ಲ.

ಈಗ ಪ್ರಸ್ತಾಪಿಸಿದ ಸಂಗತಿಗಳು ಸಾಂಸ್ಕೃತಿಕವಾಗಿ ಮಹತ್ವದವುಗಳೆಂಬುದೇನೋ ನಿಜವೆ. ಆದರೆ ಕನ್ನಡನಾಡು-ನುಡಿ-ಜನರನ್ನು ಕುರಿತು ವರ್ಣಿಸುವ ಈ ಸಂದರ್ಭ ಮತ್ತು ನೃಪತುಂಗನ ಸಭಾಸದನದ ಕವಿಯನ್ನು ಅವನ ಆಸ್ಥಾನದವರು ಮುಕ್ತಕಂಠದಿಂದ ಪ್ರಶಂಸಿಸುವ ಭಾಗ ಈ ಎರಡೂ, ಈ ಕೃತಿಯೊಂದಿಗೆ ಅಂಥ ಸಾವಯವತೆಯನ್ನು ಪಡೆದುಕೊಂಡಂತೆ ತೋರುವುದಿಲ್ಲ. ಯಾಕೆಂದರೆ ಮೊದಲ ಪರಿಚ್ಛೇದದ ೧ ರಿಂದ ೩೫ನೆ ಪದ್ಯದವರೆಗೆ ನಿರೂಪಿತವಾಗುತ್ತಿರುವ ಕವಿ-ಕಾವ್ಯಚಿಂತನೆ, ಬೆದಂಡ-ಚಿತ್ತಾಣಗಳೆಂಬ ಕಾವ್ಯಪ್ರಕಾರಗಳನ್ನು ವಿವರಿಸುವ ಸಂದರ್ಭದಲ್ಲಿ, ಅಲ್ಲಿಗೆ ಯಾವ ರೀತಿಯಿಂದಲೂ ಸಂಬಂಧಿಸದ ಕನ್ನಡ ನಾಡು-ನುಡಿ ಜನವನ್ನು ಕುರಿತ ಐದು ಪದ್ಯಗಳು ಒಂದು ಬಗೆಯ ಅತಿಕ್ರಮ ಪ್ರವೇಶ ಮಾಡಿದಂತಾಗಿ ಮತ್ತೆ ಈ ಕುರಿತು ಐದನೆ ಪದ್ಯದ ನಂತರ ಕಾವ್ಯದೋಷವನ್ನು ಕುರಿತ ವಿಚಾರ ಮುಂದುವರಿಯುತ್ತದೆ. ಹೀಗೆಯೇ ಮೂರನೆಯ ಪರಿಚ್ಛೇದದಲ್ಲಿ ಮಹಾಕಾವ್ಯಲಕ್ಷಣವನ್ನು ಕುರಿತ ನಿರೂಪಣೆ(೩-೨೧೦-೨೧೮)ಯ ಜತೆಜತೆಗೇ ಹದಿಮೂರು ವೃತ್ತಗಳ ಪ್ರಮಾಣದಲ್ಲಿ ನೃಪತುಂಗನ ಸಭಾಸದನಾದ ಕವಿಯ ವರ್ಣನೆ ಬಂದು, ಥಟ್ಟನೆ ಹೆಚ್ಚಿನ ಪ್ರಾಸ ವಿಚಾರ ಪ್ರಾರಂಭವಾಗುತ್ತದೆ. ಈ ಎರಡೂ ತಮಗೆ ತಾನೇ ಪ್ರತ್ಯೇಕವಾಗಿ ಮೌಲಿಕಾಂಶವುಳ್ಳ ಭಾಗವೇ ಆಗಿದ್ದರೂ ಈ ಕೃತಿಯೊಂದಿಗೆ ಅವಿನಾ ಸಂಬಂಧವನ್ನು ಪಡೆದುಕೊಂಡಿಲ್ಲವೆಂದೇ ಹೇಳಬೇಕಾಗುತ್ತದೆ.

ಈ ಎರಡರಲ್ಲಿ ಮೊದಲನೆಯದು, ಅಂದರೆ ಕನ್ನಡ ಜನರ ಗುಣ-ಸ್ವಭಾವ- ಚತುರತೆ-ವಿದ್ವತ್ತು ಇತ್ಯಾದಿಗಳನ್ನು ವರ್ಣಿಸಿರುವ ಕ್ರಮ, ಕವಿರಾಜಮಾರ್ಗಕಾರನು ತನ್ನ ಸಮಕಾಲೀನತೆಯಲ್ಲಿ ಕನ್ನಡಭಾಷೆಗೆ ಒದಗಿದ ‘ಅವಸ್ಥೆ’ಯನ್ನು ಕುರಿತ ಪ್ರಸ್ತಾಪಗಳ ಹಿನ್ನೆಲೆಯಲ್ಲಿ ವಿರೋಧಾಭಾಸದಂತೆಯೂ ತೋರುತ್ತದೆ. ಯಾಕೆಂದರೆ ಕನ್ನಡ ಜನ ಕುರಿತೋದದೆಯೂ ಕಾವ್ಯಪ್ರಯೋಗ ಪರಿಣತಮತಿಗಳಾಗಿದ್ದರು, ಅವರು ಸಹಜವಾಗಿಯೇ ಚದುರರು; ಕೃತಿಯ ಅವಗುಣದ ತಾಣವನ್ನು ಗುರುತಿಸಿ, ಕವಿಯನ್ನೆ ತರಾಟೆಗೆ ತೆಗೆದುಕೊಳ್ಳಬಲ್ಲವರಾಗಿದ್ದರು, ಅಷ್ಟೇನೂ ಪರಿಣಿತರಲ್ಲದವರೂ ತಮ್ಮ ನುಡಿಯಲ್ಲಿ ಜಾಣರು, ಕಿರುಮಕ್ಕಳೂ, ಮಹಾಮೂಕರು ವಿವೇಕವನ್ನೂ ಬುದ್ಧಿಯ ಮಾತುಗಳನ್ನು ಹೇಳಬಲ್ಲವರಾಗಿದ್ದರು -ಇತ್ಯಾದಿ ಗುಣಲಕ್ಷಣಗಳನ್ನು ಪಡೆದ ಜನವಿದ್ದ  ಪರಿಸರದಲ್ಲಿ ‘ಆಗಮ ಬಲಹೀನ’ ರಾದ ಕವಿಗಳಿಂದ ಪ್ರಸ್ತುತ ಕಾವ್ಯ ಪರಂಪರೆ ಯಾಕೆ ಇಂಥ ಸ್ಥಗಿತಗೊಂಡ ಸ್ಥಿತಿಗೆ ಬಂದಿತ್ತು? ಯಾಕೆ-ವಾಸುಕಿಯೂ ಬೇಸರಪಡುವಷ್ಟು ದೋಷದಿಂದ ಕೂಡಿತ್ತು ಅಂದಿನ ದೇಸಿ? ಕನ್ನಡ ಜನದ ವಿವೇಕ ಇತ್ಯಾದಿಗಳನ್ನು ಪ್ರಶಂಸೆ  ಮಾಡುತ್ತಿರುವಂತೆಯೇ, ಅದರ ಬೆನ್ನ ಹಿಂದೆಯೇ ‘ಅವರಿವರನ್ನು ಕೇಳಿಯಾದರೂ ಕಾವ್ಯ ಲಕ್ಷಣವನ್ನು ಹೇಳೋಣವೆಂದರೆ, ಸಂಸ್ಕೃತ ಪ್ರಾಕೃತಗಳಲ್ಲಿಯಂತೆ ಚೆನ್ನಾಗಿ ಬಲ್ಲವರು ಕನ್ನಡದಲ್ಲಿ ಬರಲಿಲ್ಲ. ಕನ್ನಡದ ಓಜರು ಅವರಷ್ಟೇ ಬಲ್ಲಿದರಾಗಿರಲಿಲ್ಲ’ (೧-೪೨) ಎಂದು ಹೇಳುವುದು ವಿರೋಧಾಭಾಸವಲ್ಲವೆ?

ತನ್ನ ಕಾಲದ ಕನ್ನಡಿಗರನ್ನು ಕುರಿತು ಕವಿರಾಜಮಾರ್ಗಕಾರನು ಆಡುವ ಪ್ರೀತಿ-ವಿಶ್ವಾಸ-ಅಭಿಮಾನ ಪ್ರಶಂಸೆಯ ಮಾತುಗಳು, ಅಂದಿನ ಕಾಲದ ವಾಸ್ತವತೆಯನ್ನು ಪ್ರತಿನಿಧಿಸುತ್ತವೆ ಎಂದು ಭಾವಿಸುವುದಕ್ಕಿಂತ, ಅವು ಎಲ್ಲ ಕಾಲದಲ್ಲೂ ಕನ್ನಡಿಗರು ಹೇಗೆ ಇರಬೇಕೆಂದು ಅವನು ಕಲ್ಪಿಸಿಕೊಂಡನೋ, ಅಂಥ ಒಂದು ಆಶಯವನ್ನು ಪ್ರಕಟಿಸುತ್ತವೆ ಎಂದು ತಿಳಿದು ತಿಳಿದುಕೊಳ್ಳವುದೇ ಸರಿಯಾದದ್ದು. ಇಂಥ ಒಂದು ಆಶಯವನ್ನು ಮಂಡಿಸಿದ ಮನಸ್ಸು ನಿಜವಾಗಿಯೂ ದೊಡ್ಡದು.

ಗ್ರಂಥಋಣ

೧.   ಶ್ರೀವಿಜಯಕೃತ ಕವಿರಾಜಮಾರ್ಗಂ : ಸಂ. ಎಂ.ವಿ. ಸೀತಾರಾಮಯ್ಯ (೧೯೬೮), ಕರ್ನಾಟಕ ಸಂಘ, ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು, ಬೆಂಗಳೂರು.

೨.   ನೃಪತುಂಗದೇವಾನುಮತಮಪ್ಪ-ಶ್ರೀವಿಜಯ ಪ್ರಭೂತ ಕವಿರಾಜಮಾರ್ಗಂ- ಡಾ. ಕೆ. ಕೃಷ್ಣಮೂರ್ತಿ (೧೯೮೩)

೩.   ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ – ಡಾ. ಎಂ.ಎಂ. ಕಲಬುರ್ಗಿ (೧೯೭೩)

೪.   ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ : ಬೆಂಗಳೂರು ವಿಶ್ವವಿದ್ಯಾಲಯ ಸಂಪುಟ (೧೯೭೪)

೫.   ಕನ್ನಡದಲ್ಲಿ ಕಾವ್ಯತತ್ವ : ಡಾ. ಕೆ. ಕೃಷ್ಣಮೂರ್ತಿ (೧೯೬೪)

೬.   ಕವಿರಾಜ ಮಾರ್ಗ : ಸಂ. ಎಂ.ವಿ. ಸೀತಾರಾಮಯ್ಯ (೧೯೭೩) ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.

೭.   ಕನ್ನಡ ಕವಿಗಳ ಕಾವ್ಯಕಲ್ಪನೆ : ಜಿ.ಎಸ್. ಶಿವರುದ್ರಪ್ಪ (೧೯೭೩)

ಚದುರಿದ ಚಿಂತನೆಗಳು (೨೦೦೦)

* * *


[1] ವಿದ್ವಾಂಸರಾದ ಪಿ.ವಿ. ಕಾಣೆ, ಎಸ್.ಕೆ.ಡೇ, ಕೃಷ್ಣ ಚೈತನ್ಯ -ಅವರು ತಮ್ಮ ಕೃತಿಗಳಿಗೆ ‘Sanskrit Poetics’ ಎಂಬರ್ಥದ ಶೀರ್ಷಿಕೆಗಳನ್ನು ಬಳಸಿದರೆ, ಡಾ. ವಿ. ರಾಘವನ್, ಡಾ. ಕೆ. ಕೃಷ್ಣಮೂರ್ತಿ ಯಂಥವರು ‘Indian Poetics’ ಎಂಬರ್ಥದ ಶೀರ್ಷಿಕೆಯನ್ನು ಬಳಸಿದ್ದಾರೆ. ಕೆಲವು ಸಲ ಒಬ್ಬರೆ ಲೇಖಕರು ತಮ್ಮ ಬೇರೆ ಬೇರೆ ಕೃತಿಗಳಿಗೆ ಈ ಎರಡನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಬಳಸಿದ್ದಾರೆ.

[2] ‘ಕವಿರಾಜಮಾರ್ಗ’ ಎಂಬ ಹೆಸರು ಇಡೀ ಗ್ರಂಥದಲ್ಲಿ ಒಮ್ಮೆಯೂ ಬಂದಿಲ್ಲ. ಹಸ್ತಪ್ರತಿಗಳ ಶೀರ್ಷಿಕೆ ಹಾಗೂ ಗ್ರಂಥಾಂತ್ಯದ ಪುಷ್ಪಿಕೆಗಳಲ್ಲಿ ಮಾತ್ರ ಇದು ಕಾಣಬರುತ್ತದೆ- ಡಾ. ಕೆ. ಕೃಷ್ಣಮೂರ್ತಿ, ಕವಿರಾಜಮಾರ್ಗ, ಪೀಠಿಕೆ ಪು. ೧೫ (೧೯೮೩).

[3] ‘ಮಾರ್ಗ’ ‘ದೇಸಿ’ -ಎಂಬ ಈ ಪದಗಳು ಸಾಹಿತ್ಯ ಹಾಗೂ ಇನ್ನಿತರ ಕಲೆಗಳ ಸಂದರ್ಭದಲ್ಲಿ ಬಹುಬಗೆಯ ವ್ಯಾಖ್ಯಾನವನ್ನು ಪಡೆದುಕೊಂಡಿವೆ. ಕನ್ನಡದ ಬರವಣಿಗೆಯ ಕ್ರಮ ಎಂಬ ಅರ್ಥದಲ್ಲಿ ಬಳಕೆಯಾಗಿರುವ ಈ ಪದದ ಅರ್ಥ ಸಂಸ್ಕೃತ ಅಲಂಕಾರಶಾಸ್ತ್ರದ ‘ಮಾರ್ಗ’ ಎಂಬ ಪದದಿಂದ, ಹಾಗೂ ಕವಿರಾಜಮಾರ್ಗ ಎಂಬ ಪದಸಮುಚ್ಚಯದೊಳಗಿನ ಮಾರ್ಗ ಪದವು ಸೂಚಿಸುವ

ಅರ್ಥದಿಂದ ಬೇರೆಯಾಗಿದೆ. ಸಂಸ್ಕೃತದ ಸಾಹಚರ್ಯದಿಂದ ಕನ್ನಡದಲ್ಲಿ ರೂಪುಗೊಳ್ಳುವ, ತಕ್ಕಷ್ಟು ಪ್ರೌಢವೂ ಗಂಭೀರವೂ ಆದ ಬರವಣಿಗೆಯ ಕ್ರಮವನ್ನು ‘ಮಾರ್ಗ’ ಎಂದು ಹೇಳಬಹುದು. ದೇಸಿ ಎಂದರೆ, ಸಹಜತೆ, ಚೆಲುವು ಎಂಬ ಅರ್ಥಗಳಿರುವ ಹಾಗೆಯೆ ಪ್ರಾದೇಶಿಕ ವೈಶಿಷ್ಟ್ಯತೆಯ ಸೊಗಡನ್ನುಳ್ಳ ಬರವಣಿಗೆ ಎಂಬ ಅರ್ಥವಿದೆ. ‘ಮಾರ್ಗ’ ‘ದೇಸಿ’ಗಳು ಕನ್ನಡದ ಸಂದರ್ಭದಲ್ಲಿ ಬರವಣಿಗೆಯ ಎರಡು ಕ್ರಮಗಳನ್ನು ಮಾತ್ರವಲ್ಲ, ಎರಡು ಕಾವ್ಯಪ್ರಭೇದಗಳನ್ನೂ ಸೂಚಿಸುತ್ತದೆ.

[4] ಬಗೆ ಪೊಸತಪ್ಪುದಾಗಿ ಮೃದುಪದಬಂಧದೊಳೊಂದುವುದು,
ಒಂದಿ, ದೇಸಿಯೊಳ್ ಪುಗುವುದು, ಪೊಕ್ಕ ಮಾರ್ಗದೊಳೆ ತಳ್ವುದು
ತಳ್ತೊಡೆ ಕಾವ್ಯಬಂಧಮೊಪ್ಪುಗುಂ ಎಳಮಾವು ಕೆಂದಳಿರ
ಪೂವಿನ ಬಿಣ್ಪೊರೆಯಿಂ ಬಳಲ್ದು, ತುಂಬಿಗಳಿನೆ ತುಂಬಿ
ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆ ವೋಲ್
(ವಿಕ್ರಮಾರ್ಜುನ ವಿಜಯ ೧-೮)