‘ಶಿಸ್ತು ಎಂಬುದು ವಸ್ತು ಇದ್ದಷ್ಟು ಕಡಿಮೆ’ ಎಂದು ಚುಟುಕದಲ್ಲಿ ಹೇಳಿದ ದಿನಕರ ದೇಸಾಯಿಯವರು ಶಿಸ್ತು, ಸಮಯ ಪಾಲನೆಗೆ ಹೆಚ್ಚು ಮಹತ್ವ ಕೊಟ್ಟಿದ್ದರು. ಪುಸ್ತಕ, ಪೆನ್ನು, ಪೆನ್ಸಿಲ್ ಎಲ್ಲವನ್ನೂ ಸರಿಯಾಗಿ ಇಡುತ್ತಿದ್ದರು. ಯಾರಾದರೂ ಚೆಲ್ಲಾಪಿಲ್ಲಿ ಮಾಡಿದರೆ ಕೆರಳಿ ಕೆಂಡಾ ಮಂಡಲವಾಗುತ್ತಿದ್ದರು. ಎಲ್ಲ ಕಡೆಗೆ ಸಮಯಕ್ಕೆ ಸರಿಯಾಗಿ ಹೋಗುತ್ತಿದ್ದರು. ಯಾರಾದರೂ ಇಂಥ ಸಮಯಕ್ಕೆ ಬರುತ್ತೇನೆ ಅಂದರೆ ತಮ್ಮ ಕೆಲಸ ಪೂರೈಸಿ ಅವರಿಗಾಗಿ ಕಾಯುತ್ತಿದ್ದರು. ಅವರು ತಡಮಾಡಿ ಬಂದರೆ ತಡವಾಗಿ ಬಂದ ಸಂಗತಿಯನ್ನು ಪ್ರಸ್ತಾಪಿಸಿ ಅವರನ್ನು ಸ್ವಾಗತಿಸುತ್ತಿದ್ದರು.

ಅತಿಥಿ ಸತ್ಕಾರದಲ್ಲಿಯೂ ದಿನಕರರು ಎತ್ತಿದ ಕೈ, ತಮ್ಮಲಿಗೆ ಬರುವ ಅತಿಥಿಗಳ ಅಭಿರುಚಿಯನ್ನು ಗುರುತಿಸಿ ಅವರು ಖುಷಿ ಪಡುವಂತೆ ಅತಿಥಿ ಸತ್ಕಾರ ಮಾಡುತ್ತಿದ್ದರು. ತಾವು ಅತಿಥಿಗಳೊಂದಿಗೆ ಬರಬೇಕಾದ ಕಾರಣ ಅವರನ್ನು ಹೇಗೆ ಸತ್ಕರಿಸಬೇಕು ಎಂದು ಮೊದಲೇ ತಾಲೀಮು ಮಾಡಿ ತಮ್ಮ ಸಹೋದ್ಯೋಗಿಗಳಿಗೆ ತರಬೇತುಗೊಳಿಸಿ ಹೋಗುತ್ತಿದ್ದರು. ಡಾ.ಡಿ.ಸಿ.ಪಾವಟೆ ಅವರು ನಿಯೋಜಿತ ಕಾಲೇಜಿನ ಬಗ್ಗೆ ಚರ್ಚಿಸಲು ಭೇಟಿ ನೀಡುವ ಸಂದರ್ಭದಲ್ಲಿ ಎಲ್ಲೆಲ್ಲಿ ಏನೇನು ಇಡಬೇಕೆಂದು ತಾವೇ ಇಟ್ಟು ತೋರಿಸಿ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಿದ್ದರು. ಜವಾನನಿಂದ ದಿವಾನನವರೆಗೆ ಎಲ್ಲರನ್ನು ಸಮಭಾವದಿಂದ ಕಾಣುವುದು ದಿನಕರ ದೇಸಾಯಿಯವರ ಸ್ವಭಾವವೇ ಆಗಿತ್ತು. ಅಲ್ಲಿ ತರತಮ ಭಾವಕ್ಕೆ ಆಸ್ಪದವೇ ಇರಲಿಲ್ಲ.

ಹೆಸರು ದೇಸಾಯಿ. ಆದರೆ ದೇಸಾಯಿಕೆಯ ಯಾವ ಚಹರೆಯನ್ನು ಅವರಲ್ಲಿ ಹುಡುಕಲು ಸಾಧ್ಯವಿರಲಿಲ್ಲ. ಯಾರೋ ಒಬ್ಬರು ಅವರ ಕಾರ್ಯದ ವೇಗವನ್ನು ಕಂಡು ಕಾರು ಕೊಳ್ಳಲು ಸೂಚಿಸಿದರಂತೆ. ಆಗ ದಿನಕರರು ನಾನು ಸಾದಾ ಮನುಷ್ಯ. ಕಾರಿಗೆ ಕೊಡುವ ಹಣ ಹಾಕಿದರೆ ಒಂದೆರಡು ಹೈಸ್ಕೂಲು ತೆರೆಯಬಹುದು. ಇದರಿಂದ ನೂರಿನ್ನೂರು ಮಕ್ಕಳಾದರು. ಶಿಕ್ಷಣ ಪಡೆಯುತ್ತಾರೆ ಎಂದು ಹೇಳಿದ್ದನ್ನು ಅವರ ಒದನಾಡಿಗಳಾದ ಶ್ಯಾಮ ಹುದ್ದಾರರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. (ದಿನಕರ ದರ್ಶನ. ಲೇ. ಶ್ಯಾಮ ಹುದ್ದಾರ, ಪು. ೧೧೫)

ದಿನಕರ ದೇಸಾಯಿಯವರು ಐಷಾರಾಮಿ ವಸ್ತುಗಳನ್ನು ಖರೀದಿಸಿ ತಮ್ಮ ಜೀವನ ಮಟ್ಟವನ್ನು ಎತ್ತರಿಸಿಕೊಂಡಬರಲ್ಲ. ಉನ್ನತವಾದ ಆದರ್ಶ, ಮಾನವೀಯತೆ, ಸೇವಾ ಮನೋಭಾವದಿಂದ ತಮ್ಮ ಬಾಳಿನ ಮಟ್ಟವನ್ನು ಹೆಚ್ಚಿಸಿಕೊಂಡರು. ಅವರಿಗೆ ಹರಟೆ ಎಂದಿಗೂ ಇಷ್ಟವಾಗಿರಲಿಲ್ಲ. ಮಿತವಾದ ಮಾತು. ಚುರುಕಾದ ಚುಟುಕಾದ ಬರವಣಿಗೆ. ಸುತ್ತು-ಬಳಸು ಇಲ್ಲದ ನೇರ ಮಾತು. ಹೊಗಳಿಕೆ, ವಿಶೇಷಣ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಕೆನರಾ ವೆಲ್‌ಫೆರ್ ಟ್ರಸ್ಟಿನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು. ಸುದೀರ್ಘವಾದ ಪತ್ರ ಬರೆದಾಗ ಇಷ್ಟು ದೀರ್ಘವಾದ ಪತ್ರ ಬರೆಯಬೇಡಿರಿ ಎಂದು ಅವರಿಗೆ ತಿಳಿಸಿದರಂತೆ ದಿನಕರರು.

ವಾಗಾಡಂಭರಕ್ಕೆ ಅವರು ಅವಕಾಶ ಕೊಟ್ಟವರಲ್ಲ. ವಾಖ್ಯ ರಚನೆಯಲ್ಲಿ ಕರ್ಮಣಿ ಪ್ರಯೋಗಗಳಾದ ಹೋಗಲ್ಪಡು, ಮಾಡಲ್ಪಡು ಇಂತಹ ಪದಗಳನ್ನು ಅವರು ಇಷ್ಟ ಪಡುತ್ತಿರಲಿಲ್ಲ. ತಮ್ಮ ವಿಶ್ವಾಸಿಕ ಎಂದು ಬರೆಯದೆ ಅವರು ನಿಮ್ಮ ವಿಶ್ವಾಸಿಕ ಎಂದು ಬರೆಯುತ್ತಿದ್ದರು. ದಿನಕರರಿಗೆ ತಾಳ್ಮೆ ಕಡಿಮೆ, ಪರಿಸ್ಥಿತಿ ವಿಷಮಿಸಿದಾಗ ಅವರು ಸಿಟ್ಟಿಗೆದ್ದು ಕೂಗಾಡಿದ್ದು ಉಂಟು. ತಮ್ಮ ಮನಕ್ಕೆ ಒಪ್ಪದ್ದನ್ನು, ಸಮಾಜಕ್ಕೆ ಅಹಿತವನ್ನು ಯಾರು ಮಾಡಿದರೂ ಅವರು ಒಪ್ಪಿಕೊಳ್ಳುತ್ತಿರಲಿಲ್ಲ. ವ್ಯವಸ್ಥೆ ಅವ್ಯವಸ್ಥೆಯಾದರೆ ಅವರ ಸಿಟ್ಟಿನ ಕಟ್ಟೆ ಒಡೆಯುತ್ತಿತ್ತು. ಆದರೆ ಅವರ ಸಿಟ್ಟು ಕಾಗದದ ಬೆಂಕಿಯಂತೆ ಕ್ಷಣಿಕ. ಯಾರಾದರೂ ಏನಾದರೂ ಹೇಳಿದರೆ ಅವರು ನಂಬಿ ಬಿಡುತ್ತಿದ್ದರು. ಅವರ ನಂಬಿಕಸ್ಥರಾಗಿದ್ದವರು. ತಮ್ಮ ಸ್ವಾರ್ಥಸಾಧಿಸಿಕೊಳ್ಳಲು ಜಾಡಿ ಹೇಳಿದರೆ ಅದಕ್ಕೆ ಕಿವಿಗೊಡುತ್ತಿದ್ದರು. ಚಾಡಿಕೇಳಿ ಇನ್ನೊಬ್ಬರಿಗೆ ಕೇಡು ಬಗೆದವರಲ್ಲ ಅವರು.

ನಿರೀಶ್ವರವಾದಿಯಾಗಿದ್ದ ದಿನಕರರು ಸಮಾಜ ಸೇವೆಯಲ್ಲಿಯೇ ದೇವರನ್ನು ಕಂಡವರು. ಮೂಢನಂಬಿಕೆ, ಕಂದಾಚಾರ, ಸಂಪ್ರದಾಯ ಜಡತೆಯನ್ನು ಅವರು ವಿರೋಧಿಸುತ್ತಿದ್ದರು. ತಿಳುವಳಿಕೆ ಬಂದಾಗ ಅವರು ಜನಿವಾರವನ್ನು ತೆಗೆದು ಹಾಕಿದರು. “ಭಾರತದ ಪೀಡೆ” ಎಂಬ ಚಟುಕದಲ್ಲಿ ದಿನಕರರು

ಮೊನ್ನೆಯೇ ಹರಿದು ಹಾಕಿದೆನು ಜನಿವಾರ
          ಜನಿವಾರ ಜಾತಿವಾದಿಯ ಸೂತ್ರಧಾರ.
          ಜಾತಿ ಎಂಬುದು ಕೋತಿ ಮಾನಸಿಕ ಗೋಡೆ
          ಈ ಗೋಡೆ ಎನ್ನುವುದು ಭಾರತದ ಪೀಡೆ

೧೯೭೪ನೇ ಇಸ್ವಿ ಮೇ ತಿಂಗಳ ಮಯೂರ ಮಾಸಪತ್ರಿಕೆಯಲ್ಲಿ ಈ ಚುಟುಕ ಪ್ರಕಟವಾದಾಗ ಹಲವಾರು ಕಟುವಾಗಿ ಪ್ರತಿಕ್ರಿಯಿಸಿದರು. ದಿನಕರರು ಅದಕ್ಕೆ ಸೊಪ್ಪು ಹಾಕಲ್ಲಿಲ್ಲ.

೧೯೮೧ನೇ ಇಸ್ವಿಯಲ್ಲಿ ಗೋವಾದ ಗೋಕರ್ಣ ಪರ್ತಗಾಳಿ ಮಠದ ಸ್ವಾಮಿಗಳು ನೀಡಿದ ವಿದ್ಯಾಧಿರಾಜ ಪುರಸ್ಕಾರವನ್ನು ದಿನಕರರು ಸ್ವೀಕರಿಸಿದರು. ಆಗ ಅವರ ಅಭಿಮಾನಿಗಳೊಬ್ಬರು. ಇದು ದಿನಕರರ ಧೋರಣೆಗೆ ವಿರುದ್ಧವಾದುದು. ಅದನ್ನು ಸ್ವೀಕರಿಸಿ ತಾವು ಸಾಯುವ ಒಂದು ವರ್ಷ ಮೊದಲೇ ಅವರು ಸತ್ತು ಹೋದರು ಎಂದು ಹೇಳಿದರು. ಅವರು ಕೊಡುವ ಐದು ಸಾವಿರ ನಗದು ಕೆನರಾವೆಲ್‍ಫೇರ್ ಟ್ರಸ್ಟಿನ ಚಟುವಟಿಕೆಗೆ ಉಪಯೋಗವಾಗಲಿ ಎಂಬುದು ಒಂದು ಕಾರಣವಾದರೆ ಬದುಕಿನ ಅಂತ್ಯದಲ್ಲಿ ಯಾರ ಮನಸ್ಸನ್ನು ನೋಯಿಸುವ ಮನಸ್ಸು ಸಂಘಟನೆಯೊಂದಿಗೆ ಅವರು ಎಂದಿಗೂ ಗುರುತಿಸಿಕೊಂಡವರಲ್ಲ. ಜಮೀನ್ದಾರರ ಮನೆತನದಿಂದ ಬಂದ ದಿನಕರರು ಸದಾ ರೈತರ ಪರವಾಗಿದ್ದರು. ಜಮೀನ್ದಾರರ ಪ್ರತಿನಿಧಿಯಾದ ‘ಕೇಶವ ಕಾಮ್ತಿ’ ಕುರಿತು ಅವರು ಬರೆದ ಪದ್ಯ ಹೊಸಗನ್ನಡ ಗಮನಾರ್ಹ ಬಂಡಾಯ. ಗೀತೆಯೇ ಆಗಿದೆ. ತಮ್ಮದೇ ಜಾತಿಯ ಜಮೀನ್ದಾರರನ್ನು ದಿನಕರರು ಆ ಪದ್ಯದಲ್ಲಿ ವಿಡಂಬಿಸಿದ ಬಗೆ ಅವರ ಜಾತ್ಯಾತೀತ ನಿಲುವಿಗೆ ಹಿಡಿದ ಕನ್ನಡಿಯಾಗಿದೆ.

ದಿನಕರರಿಗೆ ೬೦ ವರ್ಷ ತುಂಬಿದಾಗ ಅಂಕೋಲೆಯಲ್ಲಿ ಅವರ ಅಭಿಮಾನಗಳು ಕರ್ನಾಟಕ ಸಂಘದವರು ಅವರ ಷಷ್ಠ್ಯಬ್ದಿ ಸಮಾರಂಭವನ್ನು ಆಚರಿಸಿದರು. ಆದರೆ ದಿನಕರರು ಆ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ. ಆ ಬಗ್ಗೆ ಅವರ ಚುಟುಕ ತುಂಬಾ ಮಾರ್ಮಿಕವಾಗಿದೆ.

ನನಗೇಕೆ ಷಷ್ಠ್ಯಬ್ದಿ? ಸಾಕು ಬರವಣಿಗೆ
          ಕವಿಗೆ ಬೇಕಾಗಿಲ್ಲ ಯಾವ ಮೆರವಣಿಗೆ
          ಮೂಲೆಯಲಿ ಕುಳಿತು ಬರೆದರೆ ಒಂದು ಪದ್ಯ
          ತಾಯ್ನುಡಿಗೆ ಅರ್ಪಿಸಿದ ಹಾಗೆ ನೈವೇದ್ಯ
(ದಿನಕರನ ಚೌಪದಿ – ದಿನಕರ ದೇಸಾಯಿ ಚು. ಸಂ. ೧೦೮೩ ಪು. ೨೧೭)

ಕವಿಗೆ ಬರವಣಿಗೆಯೇ ಮುಖ್ಯ. ಮೆರವಣಿಗೆಯಲ್ಲ ಎಂಬುದನ್ನು ದಿನಕರರು ಈ ಚೌಪದಿಯಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ.

೧೯೭೫ನೇ ಇಸ್ವಿನಲ್ಲಿ ದಿನಕರರ ಸಾಹಿತ್ಯ, ಶಿಕ್ಷಣ, ಸಮಾಜಸೇವೆಯನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿತು. ಆ ಪದವಿ ದಾನ ಸಮಾರಂಭಕ್ಕೆ ದಿನಕರರು ಹಾಜರಾಗಲಿಲ್ಲ. ೧೯೭೪ನೇ ಇಸ್ವಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಸಮ್ಮೇಳನ ಸಿರಸಿಯಲ್ಲಿ ನಡೆಯಿತು. ಆ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವಿತ್ತು. ದಿನಕರರೂ ಅಲ್ಲಿಯೂ ಪಾಲ್ಗೊಳ್ಳಲಿಲ್ಲ. ಸನ್ಮಾನ ಹಾರ, ತುರಾಯಿ, ಆಡಂಬರ ಅಬ್ಬರ ಅವರಿಗೆ ಇಷ್ಟವಿರಲಿಲ್ಲ.

ಕನ್ನಡ, ಕೊಂಕಣಿ, ಇಂಗ್ಲೀಷ್ ಭಾಷೆಯಲಿ ದಿನಕರರು ಕೃತಿ ರಚಿಸಿದ್ದಾರೆ. ತಮ್ಮ ಮಾತೃಭಾಷೆಯಲ್ಲಿ ಅವರು ‘ದಿನಕರಾಲಿ ಕವಾನಾಂ’ ಎಂಬ ಸಂಕಲನ ರಚಿಸಿದ್ದಾರೆ. ಅಲ್ಲಿಯ ಕೆಲವು ಕವಿತೆಗಳು ಕೊಂಕಣಿ ಜನರ ಮನೆಮಾತಾಗಿದ್ದು. ಅವು ಜನಪದ ಹಾಡಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಮಾತೃಭಾಷೆಯ ಬಗೆಗೆ ಅಭಿಮಾನವಿದ್ದಂತೆ ಇತರ ಭಾಷೆಗಳನ್ನು ಅವರು ಗೌರವಿಸುತ್ತಿದ್ದರು. ಕನ್ನಡದ ಬಗ್ಗೆ ಅಪಾರ ಅಭಿಮಾನವಿದ್ದ ಅವರು ಕರ್ನಾಟಕ ಏಕೀಕರಣದ ಕರಡನ್ನು ಅವರೇ ಬರೆದುಕೊಟ್ಟಿದ್ದರು. ಅಖಂಡ ಕರ್ನಾಟಕದ ವಿಚಾರವನ್ನು ಜನಸೇವಕ ಪತ್ರಿಕೆಯಲ್ಲಿ ಅಗ್ರ ಲೇಖನ ಬರೆದು ಜನರ ಮುಂದಿಟ್ಟರು. ದಿನಕರರು ಸರಳ ಬದುಕನ್ನು ಬದುಕಿದವರು. ಅವರ ಸಾಹಿತ್ಯದ ಭಾಷೆಯು ಸರಳವಾಗಿಯೇ ಇದೆ.

ಭಾರತ ಸೇವಕ ಸಮಾಜದ ಅಜೀವ ಸದಸ್ಯತ್ವ, ರೌತಕೂಟದ ಸ್ಥಾಪನೆ, ರೈತ ಹೋರಾಟ, ಕೆನರಾ ವೆಲ್‍ಫೇರ್ ಟ್ರಸ್ಟಿನ ಸ್ಥಾಪನೆ, ಜನಸೇವಕ ಪತ್ರಿಕೆಯ ಆರಂಭ, ಲೋಕಸಭೆಗೆ ಸ್ಪರ್ಧೆ, ಸೋಲು, ಎರಡನೇ ಸಲ ಲೋಕಸಭೆಗೆ ಆಯ್ಕೆ, ನಿರಂತರ ಜನಪರವಾದ ಹೋರಾಟ. ಹಾಗೂ ಬರವಣಿಗೆ ಇವುಗಳನ್ನು ದಿನಕರ ದೇಸಾಯಿ ಅವರ ಬದುಕಿನ ಮುಖ್ಯ ಸಂಗತಿಗಳೆಂದು ಹೇಳಬಹುದಾಗಿದೆ.

ದಿನಕರರು ನಿಧನರಾದಾಗ ಅವರನ್ನು ಹತ್ತಿರದಿಂದ ಕಂಡು ಒಡನಾಡಿನ ಡಾ. ಪಾಟೀಲ ಪುಟ್ಟಪ್ಪನವರು ತಮ್ಮ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಸಂಪಾದಕೀಯ ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ. “ಡಾ. ದಿನಕರ ದೇಸಾಯಿಯವರು ಸರ್ವರ್ಥದಲ್ಲಿಯೂ ದೊಡ್ಡ ವ್ಯಕ್ತಿ ಅವರು ಮನುಷ್ಯರನ್ನು ವ್ಯಕ್ತಿಗಳನ್ನಾಗಿ ರೂಪಿಸತಕ್ಕವರು. ಯಾವುದನ್ನು ಕಟ್ಟಿದರೂ ಅವರು ಅದನ್ನು ದೊಡ್ಡದಾಗಿ ಬಂಧುರವಾಗಿ ಕಟ್ಟುತ್ತಿದ್ದರು. ಅವರು ಜನರ ಸಮೀಪ ಹೋದರು. ಎಷ್ಟು ಸಮೀಪ ಎಂದರೆ ಅವರೊಳಗೆ ಹೋದರು. ಅವರು ದೀನದಲಿತರು ಮೈ ತಯ್ಯಲಿಲ್ಲ. ಅವರನ್ನು ತಮ್ಮ ಹೃದಯದಲ್ಲಿಯೇ ಇರಿಸಿಕೊಂಡರು. ಅವರು ಜನರಿಗೆ ನುಡಿಗಲಿಸಿದರು ನಡೆಗಲಿಸಿದರು. ಗಾಂಧಿವಾದವನ್ನು ಬಾಯಿಂದ ಹೇಳಿದವರಿದ್ದಾರೆ. ಆದರೆ ದಿನಕರ ದೇಸಾಯಿಯವರಂತೆ ಅದನ್ನು ತಮ್ಮ ಜೀವನದಲ್ಲಿ ಬದುಕಿದವರಿಲ್ಲ. ದಿನಕರ ದೇಸಾಯಿಯವರ ನಿಧನದಿಂದ ಅದ್ಭುತ ಸಾಮರ್ಥ್ಯದ ಒಬ್ಬ ಮಹಾನ್ ವಿಧಾಯಕ ಕಾರ್ಯಪುರುಷನು ಕಣ್ಮರೆಯಾಗಿ ಹೋದಂತಾಯಿತು. ಜನರು ಬರುತ್ತಾರೆ ಹೋಗುತ್ತಾರೆ ಆದರೆ ದೇಸಾಯಿಯವರಂಥ ಜನರು ಸಿಕ್ಕುವುದಿಲ್ಲ. ಅವರು ಜೀವಿಸಿದ್ದಾಗಲೂ ಬದುಕಿದರು. ಸತ್ತಾಗಲೂ ಬದುಕಿರುತ್ತಾರೆ.” (ವಿಶ್ವವಾಣಿ, ಸಂ.ಪಾ.ಪು. ೯.೧.೧೧-೮೨-ಪು.೪)

ರಾಜಕಾರಣಿಗಳೇ ದೇಶದ ಆಗು, ಹೋಗುಗಳ ನಿರ್ಮಾಪಕರು ಎಂಬ ನಂಬಿಕೆ ಜನರಲ್ಲಿ ಮೊಳೆಯುತ್ತಿರುವಾಗಲೇ ತಮ್ಮ ಸಾಧನೆ ಹಾಗೂ ಸೇವಾ ಮನೋಭಾವದಿಂದ ಅಲ್ಲಗಳೆದವರು ದಿನಕರ ದೇಸಾಯಿ ರಾಜಕೀಯವನ್ನು ಜನಹಿತಕ್ಕಾಗಿ ಬಳಸಿದ ಬುದ್ಧಿವಂತಿಕೆಯನ್ನು ಸಮಾಜ ಸೇವೆಗಾಗಿ ದುಡಿಸಿಕೊಂಡ, ವಿದ್ಯೆಯನ್ನು ಲೋಕದ ಜನರ ಅರಿವಿನ ಕ್ಶಿತಿಜವನ್ನು ವಿಸ್ತರಿಸಲು ಉಪಯೋಗಿಸಿದ ದಿನಕರ ದೇಸಾಯಿ ಎಲ್ಲರೊಡನಿದ್ದು ಎಲ್ಲರಂತಾಗ ಅಪರೂಪದ ಸಾಧಕ ಹಾಗೂ ಜನಸೇವಕ.

“ರಾಜಕೀಯದಲ್ಲಿ ಪ್ರಗತಿಪಥ ತುಳಿದವರು ದೇಸಾಯಿಯವರು. ಸಾಮಾಜಿಕ ನ್ಯಾಯ ಹಾಗೂ ಜನತಂತ್ರ ಒಂದೇ ನಾಣ್ಯದ ಎರಡು ಮುಖ ಅವರ ಪಾಲಿಗೆ. ಸಮಾಜವಾದ ವ್ಯವಸ್ಥೆಯಲ್ಲಿ ನೇರನಂಬಿಕೆಯಿಂದಾಗಿ ಸರ್ವಾಧಿಕಾರ ಹುಕುಂಶಾಹಿ ಬಗೆಗೆ ನಿರಂತರ ಎಚ್ಚರ ಅವರನ್ನು ಆವರಿಸಿದೆ, ಶಿಕ್ಷಣ ಹಾಗೂ ಮಾಧ್ಯಮದ ವಿಷಯದಲ್ಲಿ ಅವರ ನಿಲುವು ಕರಾರುವಾಕ್ ಆದುದು. ಕನ್ನಡ ಆಡಳಿತ ಭಾಷೆ ಆಗದೆ ಬೆಳವಣಿಗೆ ಕನಸು. ಎಲ್ಲ ಮಟ್ಟದಲ್ಲಿಯೂ ಮಾತೃ ಭಾಷೆಯ ಮೂಲಕವೇ ಶಿಕ್ಷಣ ನೀಡತಕ್ಕದ್ದು. ಸದ್ಯದ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳ ಜ್ಞಾನದ ಮಟ್ಟ ಇಳಿದಿದೆಯೇ ಹೊರತು ತಿಳುವಳಿಕೆಯ ಮಟ್ಟ ಹೆಚ್ಚಿಲ್ಲ ಎಂದು ಅವರ ಅಭಿಪ್ರಾಯ” ಎಂದು ಖಾದ್ರಿ ಶಾಮಣ್ಣ ದಿನಕರರ ಜೀವನ ಧೋರಣೆಯನ್ನು ಚಿತ್ರಿಸಿದ್ದಾರೆ.

ಸಮಾಜ ಸೇವಕ

ಸಮಾಜ ಸೇವೆ ಎಂಬ ಶಬ್ದ ಸವಕಳಿಯಾಗಿ, ವಿವಿಧ ಅರ್ಥಗಳನ್ನು ಪಡೆದು ಕೊಳ್ಳುತ್ತಿರುವ ಸಂದರ್ಭದಲ್ಲಿ ದಿನಕರ ದೇಸಾಯಿ ನಿಸ್ಪೃಹ ಸಮಾಜ ಸೇವಕರಾಗಿ ಮೂಡಿ ಬಂದರು. ಸೇವೆ ಎಂಬ ಪದಕ್ಕೆ ತಮ್ಮ ಜನಪದ ಕಾರ್ಯ ಚಟುವತಿಕೆಗಳ ಮೂಲಕ ಹೊಸ ಅರ್ಥ ಹಾಗೂ ಶಕ್ತಿಯನ್ನು ತುಂಬಿದರು. ೧೯೩೧ರಲ್ಲಿ ಭಾರತ ಸೇವಕ ಸಮಾಜವನ್ನು ಅವರು ಸೇರಿದರು. ಅಂದಿನಿಂದ ಅವರು ಕೊನೆಯವರೆಗೂ ಒಬ್ಬ ನಿಸ್ಪೃಹ ಹಾಗೂ ನಿಷ್ಠಾವಂತ ಸೇವಾವೃತಿಯಾಗಿ ಬದುಕಿದರು. ಗೋಪಾಲಕೃಷ್ಣ ಗೋಖಲೆಯವರು ೧೯೦೫ರಲ್ಲಿ ಆರಂಭಿಸಿದ ಭಾರತ ಸೇವಕ ಸಮಾಜ (ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿ) ಉನ್ನತ ಧ್ಯೇಯ ಹಾಗೂ ಆದರ್ಶವನ್ನು ಹೊಂದಿತ್ತು. ದೇಶದ ಜನತೆಯನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಉದ್ಧರಿಸುವ ಹಾಗೂ ಅವರಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಬಿತ್ತುವ ಉದ್ದೇಶವನ್ನು ಅದು ಹೊಂದಿತ್ತು. ಕೋಮು

ಸೌಹಾರ್ದತೆ, ರಾಜಕೀಯ ಶಿಕ್ಷಣ, ವಿಧಾಯಕ ಆಂದೋಲನ, ಶಿಕ್ಷಣದ ಸಾರ್ವತ್ರೀಕರಣ, ಸ್ತ್ರೀಶಿಕ್ಷಣ, ದೀನದಲಿತರ ಉದ್ಧಾರದ ಹಂಬಲವನ್ನು ಭಾರತ ಸೇವಕ ಸಮಾಜ ಹೊಂದಿತ್ತು. ಈ ಸಮಾಜದ ಸದಸ್ಯನಾದವನು ಕೆಲವು ನಿಯಮಗಳನ್ನು ಪಾಲಿಸಬೇಕಾಗಿತ್ತು. ದೇಶ ಸೇವೆ, ಸ್ವಂತ ಹಿತಕ್ಕಿಂತ ಮೊದಲು ದೇಶದ ಹಿತ. ಎಲ್ಲ ಭಾರತೀಯರಲ್ಲೂ ಸಹೋದರ ಭಾವನೆ. ದೊರೆತ ಸ್ವಲ್ಪ ಸಂಭಾವನೆಯಲ್ಲಿ ಸಂತೃಪ್ತಿ. ಸ್ವಂತಕ್ಕೆ ಗಳಿಕೆ ನಿಷೇಧ, ಪವಿತ್ರವಾದ ವೈಯಕ್ತಿಕ ಜೀವನ, ಯಾರೊಂದಿಗೂ ಜಗಳ ಕೂಡದು. ಭಾರತ ಸೇವಕ ಸಮಾಜದ ಅಭಿವೃದ್ಧಿಯೇ ಮುಖ್ಯವಾಗಿರಬೇಕು. ದಿನಕರರು ಆಜೀವ ಸದಸ್ಯರಾಗಿ ಈ ಎಲ್ಲ ನಿಯಮಗಳನ್ನು ಪಾಲಿಸಿದರು.

೧೯೩೬ ರಿಂದ ೧೯೩೮ರವರೆಗೆ, ೧೯೪೦ ರಿಂದ ೧೯೪೩ರವರೆಗೆ ಬಿಜಾಪುರ ಜಿಲ್ಲೆ ಬರಗಾಲ ಪೀಡಿತವಾಗಿತ್ತು. ಆಗ ಭಾರತ ಸೇವಕ ಸಮಾಜದ ಉಪಾಧ್ಯಕ್ಷರಾಗಿದ್ದ ಎ.ವಿ.ಥಕ್ಕರ ಅವರ ಅಧ್ಯಕ್ಷತೆಯಲ್ಲಿ ಸೊಸೈಟಿಯು ಬರಪರಿಹಾರ ಸಮಿತಿಯನ್ನು ರಚಿಸಿತು. ದಿನಕರ ದೇಸಾಯಿ ಹಾಗೂ ಎಚ್.ಎಸ್.ಕೌಜಲಗಿಯವರು ಆ ಸಮಿತಿಯ ಗೌರವ ಕಾರ್ಯದರ್ಶಿಗಳಾಗಿದ್ದರು. ಎ.ವಿ. ಥಕ್ಕರ ಅವರ ನಿರ್ದೇಶನದಂತೆ ದಿನಕರರು ಬಿಜಾಪುರಕ್ಕೆ ಹೋಗಿ ಅಲ್ಲಿಯ ಬರಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿಯನ್ನು ನೀಡಿದರು. ಅವರ ವರದಿಯನ್ನು ಆಧರಿಸಿ ಪರಿಹಾರವನ್ನು ಭಾರತ ಸೇವಕ ಸಮಾಜ ನೀಡಿತು. ಹತ್ತು ಲಕ್ಷಕ್ಕಿಂತ ಹೆಚ್ಚು ರೂಪಾಯಿಗಳನ್ನು ಆ ಕಾಲದಲ್ಲಿಯೇ ಸಂಗ್ರಹಿಸಿದ್ದು, ನೆರವು ನೀಡಿದ ದಾನಿಗಳನ್ನು ದಿನಕರರು ಕೃತಜ್ಞತೆಯಿಂದ ಸ್ಮರಿಸಿದ್ದು ಆ ವರದಿಯಲ್ಲಿ ದಾಖಲಾಗಿದೆ. ಸರಕಾರ ನೀಡುವ ಪರಿಹಾರದಲ್ಲಿ ತಾರತಮ್ಯವಿದ್ದು ಅದನ್ನು ಸರಿಪಡಿಸಲು ಬರಪರಿಹಾರ ಸಮಿತಿ ಒತ್ತಾಯಿಸಿದ್ದನ್ನು ‘ಬಿಜಾಪುರ ಬರಪರಿಹಾರ ಸಮಿತಿಯ ವರದಿ (Report of the bigapur Famine Relief committe 1943) ಯಲ್ಲಿ ದಿನಕರರು ವಿವರಿಸಿದ್ದಾರೆ. ಈ ವರದಿಯನ್ನಾದರಿಸಿ ಭಾರತ ಸೇವಕ ಸಮಾಜವು ಸಂತ್ರಸ್ಥರಿಗೆ ಅಡಿಗೆ ಮನೆ ತೆರೆದು ಊಟದ ವ್ಯವಸ್ಥೆ, ಕೆಲವು ಕಡೆ ಆಹಾರ ಧಾನ್ಯ, ಬಟ್ಟೆ ಗಿರಣಿಗಳು ನೀಡಿದ ಬಟ್ಟೆಯು ಉಚಿತ ವಿತರಣೆ, ನೇಕಾರರಿಗೆ ಬಣ್ಣ ಹಾಕುವ, ಸೀರೆ ನೇಯುವ ಕೆಲಸ ಒದಗಿಸಿ ಬರಪರಿಹಾರ ನೀಡಲಾಯಿತು. ೧೨ ಮೇವಿನ ಕೇಂದ್ರ ತೆರೆದು ದನ ಕರುಗಳಿಗೆ ಮೇವು ನೀಡಿದ್ದನ್ನು ಈ ವರದಿಯಲ್ಲಿ ವಿವರಿಸಲಾಗಿದೆ.

ದಿನಕರರು ಸಮಾಜ ಸೇವಾ ಚಟುವಟಿಕೆಯು ರೈತ ಸಂಘಟನೆ ಅವರ ಹಕ್ಕಿಗಾಗಿ ಹೋರಾಟ, ಅದರ ಫಲಶ್ರುತಿಯಾಗಿ ಕೆನರಾವೆಲ್‌ಫೇರ್ ಟ್ರಸ್ಟ್ ಸ್ಥಾಪನೆ. ಆ ಮೂಲಕ ಶಿಕ್ಷಣ ಪ್ರಸಾರದ ಕಡೆಗೆ ಹೊರಳಿತು. ೧೯೩೭ರ ಸುಮಾರಿಗೆ ದಿನಕರರು ರೈತರ, ಕೂಲಿಕಾರರ, ಮೀನುಗಾರರ, ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ವಿವರವಾಗಿ ಅಭ್ಯಾಸ ಮಾಡಿ ಅಂಕಿ ಅಂಶಗಳನ್ನು ಕಲೆ ಹಾಕಿದರು. ಉತ್ತರ ಕನ್ನಡ ಜಿಲ್ಲೆಯ ಗೇಣಿ ಪದ್ಧತಿಯನ್ನು ಕುರಿತು “Land Rent in north kanara” ಎಂಬ ಅಭ್ಯಾಸಪೂರ್ವ ವಾದ ವರದಿಯನ್ನು ಭಾರತ ಸೇವಕ ಸಮಾಜವು ೧೯೪೦ರಲ್ಲಿ ಪ್ರಕಟಿಸಿತು. ಸರಕಾರ ಮತ್ತು ಭೂಮಾಲೀಕರು ಭೂಮಿಯ ಉತ್ಪನ್ನದ ಎಲ್ಲ ಅಂಶವನ್ನು ಹೀರಿ ಬಿಡುತ್ತಿದ್ದ ಕಾರನ ಬಡರೈತರು ಶೋಷಣೆಗೆ ಒಳಗಾಗುತ್ತಿದ್ದುದನ್ನು ಇಲ್ಲಿ ವಿವರಿಸಿದ್ದಾರೆ. ಇದಕ್ಕೆ ರೈತ ಸಂಘಟನೆಯೊಂದೇ ಪರಿಹಾರ ಎಂದು ತಿಳಿಸಿದ್ದಾರೆ. ಅಂಕೋಲಾದಲ್ಲಿ ದಿನಕರರು ರೈತ ಚಳುವಳಿಯನ್ನು ಸುಸಂಘಟಿತ ರೀತಿಯಲ್ಲಿ ಆರಂಭಿಸಿದರು. ೧೯೪೦ನೇ ಇಸ್ವಿ ಮಾರ್ಚ್ ೧೬ ರಂದು ರೈತರ ಬೃಹತ್ ಸಮಾವೇಶ ಅಂಕೋಲೆಯಲ್ಲಿ ಏರ್ಪಟ್ಟಿತು. ಅಂದು ಅಂಕೋಲಾ ತಾಲೂಕ್ ರೈತ ಸಂಘ ಜನ್ಮ ತಾಳಿತು. ಮೂರರಲ್ಲಿ ಒಂದು ಪಾಲಿಗಿಂತ ಹೆಚ್ಚು ಗೇಣಿ ಕೊಡದಿರಲು ರೈತರು ನಿರ್ಧರಿಸಿದರು. ಇದರಿಂದ ಒಡೆಯ ಮತ್ತು ಒಕ್ಕಲ ನಡುವಿನ ಸಂಬಂಧ ಹಳಸಿತು. ಭೂಮಾಲೀಕರು ದಿನಕರರ ನೇತೃತ್ವದ ರೈತ ಸಂಘವನ್ನು ತಿರಸ್ಕರಿಸಿದರು. ೧೯೫೦ನೇ ಇಸ್ವಿ ಮೇ ೧೨ ರಂದು ಅಂಕೋಲಾದಲ್ಲಿ ಜಿಲ್ಲಾ ಮಟ್ಟದ ರೈತ ಸಮ್ಮೇಳನದಲ್ಲಿ ೫೦೦೦ದಷ್ಟು ರೈತರು ಪಾಲ್ಗೊಂಡು ಜಮೀನ್ದಾರರು ಆಘಾತಕ್ಕೊಳಗಾದರು. ರೈತರು ಗೇಣಿ ಕೊಡುವುದನ್ನು ನಿಲ್ಲಿಸಿದರು. ಆಗ ಕಾಂಗ್ರೆಸ್ ಪಕ್ಷದಲ್ಲಿದ್ದ ಭೂಮಾಲೀಕರು ಒಟ್ಟಾಗಿ ದಿನಕರ ದೇಸಾಯಿಯವರನ್ನು ಗಡಿಪಾರು ಮಾಡುವಂತೆ ಮುಂಬಯಿ ಸರ್ಕಾರಕ್ಕೆ ಒತ್ತಾಯ ತಂದರು. ದಿನಕರರನ್ನು ಜಿಲ್ಲೆಯಿಂದ ಐದು ವರ್ಷಗಳವರೆಗೆ ಗಡಿಪಾರು ಮಾಡಲಾಯಿತು. ದಿನಕರರು ರೈತರ ನಾಯಕರಾಗಿ ಪ್ರಭಾವಿ ವ್ಯಕ್ತಿಗಳಾದರು. ಭೂಮಾಲೀಕರು ಅವರನ್ನು ‘ಹಾವಳಿ ಮಂಜ’ ಎಂದು ಕರೆದರು. ಅವರನ್ನು ಗಡಿಪಾರು ಮಾಡಿದ್ದರಿಂದ ರೈತ ಚಳುವಳಿ ಸ್ಥಗಿತಗೊಳ್ಳುವ ಬದಲು ಅದು ಇನ್ನಷ್ಟು ತೀವ್ರವಾಯಿತು. ದಿನಕರರ ಅನುಪಸ್ಥಿತಿಯಲ್ಲಿ ಅವರ ಒಡನಾಡಿಗಳಾದ ಶೇಷಗಿರಿ ಪಿಕಳೆ ಮತ್ತು ದಯಾನಂದ ನಾಡಕರ್ಣಿಯವರು ರೈತರನ್ನು ಚೆನ್ನಾಗಿ ಸಂಘಟಿಸಿದರು. ರೈತ ಸಂಘಟನೆಯನ್ನು ದೇಸಾಯಿ, ಪಿಕಳೆ, ನಾಡಕರ್ಣಿ ಅವರು ಸಮರ್ಥವಾಗಿ ಸಂಘಟಿಸಿ ಮುನ್ನಡೆಸಿದರು. ಈ ಮೂವರನ್ನು ಭೂಮಾಲೀಕರ ಪಾಲಿನ ‘ತಾಪತ್ರಯ’ ರೆಂದೇ ಕರೆಯಲಾಗುತ್ತದೆ.

ದಿನಕರರು ರೈತ ಸಭೆಗಳನ್ನು ಸರಕಾರಿ ಕಚೇರಿಗಳ ಮುಂದೆ ನಡೆಸುತ್ತಿದ್ದರು. ರೈತರಿಗೆ ಅಧಿಕಾರಿಗಳ ಬಗೆಗೆ ಇರುವ ಭಯವನ್ನು ದೂರ ಮಾಡುವ ಹಾಗೂ ಅವರಲ್ಲಿ ಹೋರಾಟದ ಕೆಚ್ಚನ್ನು ಹೆಚ್ಚಿಸುವ ಹಂಬಲ ದಿನಕರರಿಗಿತ್ತು.

ರೈತರು ಕೂಟಾ ಕಟ್ಟಿದರೋ
          ಒಡೆಯರು ಘಟ್ಟಾ ಹತ್ತಿದರೊ
          ………………………..
          ನವುದೇ ಇದ್ದ ಭೂಮಿ
          ನವುದೇ ಆಗಲಿ ಹೇ ಸ್ವಾಮಿ
          ಅದಕ್ಕೇ ಕೂಟಾ ಕಟ್ಟುವುದು
          ಹೊಟ್ಟೆಯ ಗುರಿಯನು ಮುಟ್ಟುವುದು
(ರೈತರ ಹಾಡುಗಳು – ದಿನಕರ ದೇಸಾಯಿ, ಪು.೧)

ಎಂದು ಹಾಡು ಕಟ್ಟಿದರು. ಈ ಹಾಡನ್ನು ಹಾಲಕ್ಕಿ ಒಕ್ಕಲಿಗರು. ಇತರ ರೈತರು ಕೂಡಿ ಗುಮಟೆ ಪಾಂಗಿನಲ್ಲಿ ಹಾಡಿದರು. ಈ ಹಾಡು ಜನರ ಮನೆ ಮನದಲ್ಲಿ ನೆಲೆ ನಿಲ್ಲುವಂತೆ ಮಾಡಿದರು. ಫೆಬ್ರವರಿ ೧೧, ೧೯೫೦ನೇ ಇಸ್ವಿಯಲ್ಲಿ ಕುಮಟಾ ತಾಲೂಕಿನ ಹಿರೇಗುತ್ತಿಯಲ್ಲಿ ರೈತರ ಪ್ರಚಂಡ ಸಭೆಯಲ್ಲಿ ರೈತ ಕೂಟದ ಉದ್ದೇಶವನ್ನು ವಿವರಿಸಿ, ಅಶ್ವಮೇಧದ ಕುದುರೆಯನ್ನು ಫೆಬ್ರವರಿ ೨೫ರಂದು ಬಿಡುತ್ತೇನೆ. ಸಾಹಸಿ ಬಬ್ರುವಾಹನರು ಯಾರಾದರೂ ಇದ್ದರೆ ಮುಂದೆ ಬರಲಿ ಎಂದಾಗ ಹಿರೇಗುತ್ತಿಯ ತರುಣ ಕಾಂಗ್ರೆಸ್ ಮುಂದಾಳು ಒಬ್ಬರು ಮುಂದೆ ಬಂದಾಗ ಸಭೆಯಲ್ಲಿ ಘರ್ಷಣೆ ಗೊಂದಲ ಉಂಟಾಯಿತು. ಆಗ ಸಗಡಗೇರಿ ವೆಂಕಟ್ರಮಣ ನಾಯಕರು ಹಾಗೂ ರೈತ ಕೂಟದ ಜನರು ದಿನಕರರನ್ನು ಅಲ್ಲಿಂದ ಎತ್ತಿಕೊಂಡು ಹೋಗಿ ಅವರಿಗೆ ರಕ್ಷಣೆ ನೀಡಿದರು. ರೈತರೊಂದಿಗೆ ಉಳಿದು ಊಟ ಮಾಡಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದ ಅವರು ರೈತ ಚಳುವಳಿಗೆ ನವ ಚೈತನ್ಯವನ್ನು ತುಂಬಿದರು. ಈ ರೈತ ಕೂಟದ ಹೋರಾಟ ಮನೋಭಾವ, ಶಿಸ್ತು ಹಾಗೂ ಸಮುದಾಯದ ಹಿತ ಚಿಂತನೆಯ ಫಲಶೃತಿಯಾಗಿ ಕೆನರಾವೆಲ್‌ಫೇರ್ ಟ್ರಸ್ಟ್ ಜನ್ಮತಾಳಿತು.

೧೯೪೧ನೇ ಇಸ್ವಿಯಲ್ಲಿ ದಿನಕರ ದೇಸಾಯಿಯವರಿಗೆ ವಿಧಿಸಿದ್ದ ಹದ್ದುಪಾರಿನ ಆಜ್ಞೆಯನ್ನು ಸರಕಾರ ಹಿಂತೆಗೆದುಕೊಂಡಿತು. ಐದು ವರ್ಷದ ನಂತರ ಜಿಲ್ಲೆಗೆ ಮರಳಿ ಬಂದ ರೈತನಾಯಕ ದಿನಕರ ದೇಸಾಯಿಯವರನ್ನು ರೈತರು ಹೆಗಲ ಮೇಲೆ ಹೊತ್ತು ಜಯಘೋಷದೊಂದಿಗೆ ಬರಮಾಡಿಕೊಂಡ ರೀತಿ ಅನುಪಮವಾಗಿತ್ತು. ದಿನಕರರ ಆಗಮನ ರೈತ ದಿನಕರ ದೇಸಾಯಿಯವರೊಂದಿಗೆ ಸೇರಿ ಭೂಮಾಲೀಕರ ವಿರುದ್ಧ ರೈತ ಚಳುವಳಿ ನಡೆದಿದ್ದರು. ಇದು ಜಮೀನ್ದಾರರೇ ಹೆಚ್ಚಾಗಿ ಇರುವ ಪೀಪಲ್ಸ್ ಹೈಸ್ಕೂಲಿನ ಆಡಳಿತ ಮಂಡಳಿಗೆ ಸರಿಬರಲಿಲ್ಲ. ಶಿಕ್ಷಕರಾದ ಅವರು ರೈತ ಚಳುವಳೀಯಲ್ಲಿ ಪಾಲ್ಗೊಂಡಿದ್ದು ತಪ್ಪು ಎಂಬ ನೆಪ ಹೇಳಿ ಪಿಕಳೆಯವರನ್ನು ಜನವರಿ ೨೦, ೧೯೫೩ರಂದು ನೌಕರಿಯಿಂದ ವಜಾಗೊಳಿಸಿದರು.

ಹೋರಾಟದ ಹಾದಿಯನ್ನೇ ಹೆದ್ದಾರಿಯೆಂದು ಭಾವಿಸಿದ್ದ ಪಿಕಳೆಯವರು ಇದನ್ನು ಸವಾಲಾಗಿ ಸ್ವೀಕರಿಸಿದರು. ರೈತ ಚಳುವಳಿಯ ಸಂಗಾತಿ ದಯಾನಂದ ನಾಡಕರ್ಣಿ ಅವರೊಂದಿಗೆ ಮಾತನಾಡಿ ಹೊಸ ಶಾಲೆಯನ್ನು ಸ್ಥಾಪಿಸುವ ತೀರ್ಮಾನ ಮಾಡಿದರು. ದಿನಕರರು ಇದನ್ನು ಬೆಂಬಲಿಸಿದರು. ಪಿಕಳೆಯವರಿಗಾದ ಅನ್ಯಾಯ ಕಂಡು ರೈತರು ಅವರಿಗೆ ಬೆಂಬಲ ನೀಡಿದರು. ಪ್ರತಿ ಎಕರೆಗೆ ೫ ರೂಪಾಯಿಯಂತೆ ರೈತರಿಂದ ವಂತಿಗೆ ಕೂಡಿಸಲಾಯಿತು. ವಂತಿಗೆ ನೀಡಲು ಆಗದವರು ಕಟ್ಟಡದ ಕೆಲಸದಲ್ಲಿ ತೊಡಗಿಕೊಂಡು ಶ್ರಮದಾನ ಮಾಡಿದರು. ‘ಕೆನರಾ ಎಗ್ರಿಕಲ್ಚರ್ ಸ್ಕೂಲ’ ಎಂದು ಅದಕ್ಕೆ ಹೆಸರಿಡಲಾಯಿತು. ೧೯೫೩ನೇ ಇಸ್ವಿ ಜೂನ್ ೮ ರಂದು ಪಿಕಳೆಯವರು ಮುಖ್ಯಾಧ್ಯಾಪಕರಾಗಿ ಹೈಸ್ಕೂಲ್ ಆರಂಭವಾಯಿತು. ನಂತರ ೧೯೫೪ರಲ್ಲಿ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿಯವರು ಇದರೊಂದಿಗೆ ವಿಲೀನಗೊಂಡು ಪೀಪಲ್ಸ್ ಮಲ್ಟಿ ಪರ್ಪಸ್ ಹೈಸ್ಕೂಲ್ ಎಂದು ಹೆಸರನ್ನು ಪಡೆಯಿತು. ಈ ಸಂಸ್ಥೆ ಆರಂಭವಾಗುವ ಸಂದರ್ಭದಲ್ಲಿಯೇ ಕೆನರಾ ವೆಲ್‌ಫೇರ್ ಟ್ರಸ್ಟ್ ಜನ್ಮತಾಳಿತು. ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಕೆನರಾವೆಲ್‌ಫೇರ್ ಟ್ರಸ್ಟು ವಿದ್ಯಾಪ್ರಸಾರದ ಹೊಸ ಶಕೆಯನ್ನೇ ಆರಂಭಿಸಿತು. ದಿನಕರ ದೇಸಾಯಿ ಅಧ್ಯಕ್ಷರಾಗಿ, ಶೇಷಗಿರಿ ಪಿಕಳೆ ಕಾರ್ಯದರ್ಶಿಯಾಗಿ, ದಯಾನಂದ ನಾಡಕರ್ಣಿಯವರು ಸ್ಥಾಪಕ ಟ್ರಸ್ಟಿಯಾಗಿ ಕೆನರಾವೆಲ್‌ಫೇರ್‌ಟ್ರಸ್ಟ್ ಆರಂಭವಾಯಿತು. ಬೊಂಬಾಯಿ ಪಬ್ಲಿಕ್ ಟ್ರಸ್ಟ್ ಆಕ್ಟ್ ಪ್ರಕಾರ ೧೯೫೩ನೇ ಇಸ್ವಿ ನವೆಂಬರ್ ೪ ರಂದು ಟ್ರಸ್ಟಿನ ನೋಂದಣಿ ಆಯಿತು. ಜನಸಾಮಾನ್ಯರ ಹಾಗೂ ತೀರ ಹಿಂದುಳಿದವರ ಅಭಿವೃದ್ಧಿಯ ಹಂಬಲದೊಂದಿಗೆ ಕೆನರಾ ವೆಲ್‍ಫೇರ್‌ಟ್ರಸ್ಟ್ ಆರಂಭವಾಯಿತು.

ಕೆನರಾವೆಲ್‍ಫೇರ್‌ಟ್ರಸ್ಟಿನ ಕಾರ್ಯಚಟುವಟಿಕೆ ಉತ್ತರ ಕನ್ನಡ ಜಿಲ್ಲೆಗೆ ಸೀಮಿತವಾಗಿತ್ತು. ಹಿಂದುಳಿದ ವರ್ಗದವರಲ್ಲಿ ವೃತ್ತಿ ವಿಷಯಕವಾದ ಜ್ಞಾನ ಹರಡುವ ಶಿಕ್ಷಣ ಸಂಸ್ಥೆಯ ನಿರ್ಮಾಣ ಹಾಗೂ ಅವರಿಗೆ ವಸತಿ ಗೃಹ ನಿರ್ಮಾಣ ಯೋಜನೆಯನ್ನು ಟ್ರಸ್ಟು ಹೊಂದಿತ್ತು. ಬಡ ಮತ್ತು ಹಿಂದುಳಿದ ಮಹಿಳೆಯರಿಗೆ ಶುಶ್ರೂಷಾ ವ್ಯವಸ್ಥೆ ಕಲ್ಪಿಸುವುದು. ಸಮಾಜ ಸೇವಾ ಸಂಸ್ಥೆಗಳನ್ನು ಸ್ಥಾಪಿಸುವುದು. ಗ್ರಾಮೀಣ ಜನರಲ್ಲಿ ಸ್ವಾವಲಂಬನೆಯ ಹಂಬಲವನ್ನುಂಟು ಮಾಡುವುದು, ಜನರಲ್ಲಿ ಭೂವ್ಯವಸಾಯದೊಂದಿಗೆ ಇನ್ನಿತರ ಉಪಯುಕ್ತ ಜ್ಞಾನವನ್ನು ಹೆಚ್ಚಿಸಿ ಅವರ ಸಂಘಟನೆಗೆ ಹೆಚ್ಚಿನ ಬಲವನ್ನು ತಂದಿತು. ೧೯೪೬ರಲ್ಲಿ ಗಿರಿ ಪಿಕಳೆಯವರು ಹಾಲಕ್ಕಿ ಒಕ್ಕಲಿಗರ ಸಂಘವನ್ನು ಸ್ಥಾಪಿಸಿದರು. ಅಂಕೋಲೆಯಲ್ಲಿ ನಡೆದ ಪ್ರಥಮ ಸಮ್ಮೇಳನದಲ್ಲಿ ಪಾಲ್ಗೊಂಡ ದಿನಕರರು ಭೂಮಾಲೀಕ ವರ್ಗ ನಿರ್ಮೂಲನೆಯಾಗುವವರೆಗೂ ರೈತರಿಗೆ ಸುಖ ನೆಮ್ಮದಿಯಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ೧೯೪೭ನೇ ಇಸ್ವಿ ಮೇ ೮ ರಂದು ಉತ್ತರ ಕನ್ನಡದ ಇತಿಹಾಸದಲ್ಲಿಯೇ ಬೃಹತ್ತಾದ ಅಂದಿನ ಸಮ್ಮೇಳನದಲ್ಲಿ ಉಳುವವನೆ ಹೊಲದೊಡೆಯನಾಗಬೇಕು ಎಂದು ಜೋರಾಗಿ ಘೋಷಿಸಿದರು.

ಏಳಿರಿ ಏಳಿರಿ ರೈತರೆ ಎಲ್ಲ
          ಜಾಗೃತರಾಗಿರಿ ಊರೊಳಗೆಲ್ಲ
          ಹಳ್ಳಿ ಹಳ್ಳಿಗೂ ಕೂಟವೂ ಬೇಕು
          ಒಡೆಯರ ಅವಲಂಬಿಸುವುದು ಸಾಕು

ಎಂದು ರೈತರಿಗಾಗಿ ಹಾಡನ್ನು ಬರೆದು, ರೈತರ ಸಭೆಗಳಲ್ಲಿ ಅದನ್ನು ಹಾಡಿ, ರೈತರ ಕೂಟವನ್ನು ಕಟ್ಟಿ, ರೈತರ ಸಂಘಟನೆಗಳನ್ನು ಬಲಪಡಿಸಿದರು. ಅಂಕೋಲಾ, ಹೊನ್ನಾವರ, ಕುಮಟಾ ತಾಲೂಕುಗಳ ಹಲವಾರು ಹಳ್ಳಿಗಳಲ್ಲಿ ರೈತ ಸಭೆಯನ್ನು ನಡೆಸಿದರು. ದಿನಕರ ದೇಸಾಯಿಯವರ ಸಂಘಟಿತ ಹೋರಾಟಕ್ಕೆ ಮಣಿದ ಸರಕಾರವು ೧೯೫೬ನೇ ಇಸ್ವಿಯಲ್ಲಿ ಬೊಂಬಾಯಿ ಟೆನೆನ್ಸಿ ಹಾಗೂ ಎಗ್ರಿಕಲ್ಚರ್ ಲ್ಯಾಂಡ್ ಕಾಯಿದೆಗೆ ತಿದ್ದುಪಡಿ ಮಾಡಿ ಎಕರೆಗೆ ಇಪ್ಪತ್ತು ರೂಪಾಯಿ ಗೇಣಿಯನ್ನು ನಿಗದಿಪಡಿಸಿತು. ಅರಣ್ಯ ಭೂಮಿಯನ್ನು ಸಾಗುವಳಿಗೆ ಕೊಡಬೇಕು ಎಂದು ದಿನಕರರು ಬಲವಾದ ಹೋರಾಟ ನಡೆಸಿದ್ದರು. ಅಂದಿನ ಅರ್ಥ ಸಚಿವ ರಾಮಕೃಷ್ಣ ಹೆಗಡೆಯವರು ಒಂದು ಲಕ್ಷ ಸಾಗುವಳಿ ಯೋಗ್ಯ ಅರಣ್ಯ ಭೂಮಿಯನ್ನು ರೈತರ ಉಪಯೋಗಕ್ಕೆ ಬಿಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಅದು ಅನುಷ್ಠಾನಕ್ಕೆ ಬರಲಿಲ್ಲ. ಕಾರ್ಮಿಕ ಸಂಘಟನೆಯ ಶಿಸ್ತನ್ನು ರೈತರ ಸಂಘಟನೆಗೂ ಅಳವಡಿಸಿಕೊಂಡು ದಿನಕರರು ಯಶಸ್ವಿಯಾದರು. ರೈತ ಸಭೆಯ ಚಟುವಟಿಕೆ. ಕಾರ್ಯ ಕಲಾಪ, ಕ್ರಿಯಾಯೋಜನೆಗಳ ಬಲದಿಂದ ಜನಬೆಂಬಲದೊಂದಿಗೆ ಅವರು ಲೋಕಸಭೆಗೂ ಆಯ್ಕೆಯಾದರು. ಕಾಗೋಡು ಸತ್ಯಾಗ್ರಹ ಅಥವಾ ರೈತ ಹೋರಾಟಕ್ಕಿಂತ ಮೊದಲೇ ಉತ್ತರ ಕನ್ನಡದಲ್ಲಿ ವ್ಯವಸ್ಥಿತವಾಗಿ ರೈತ ಸಂಘಟನೆಯನ್ನು ಕಟ್ಟಿ ಬೆಳೆಸಿದವರು ದಿನಕರ ದೇಸಾಯಿ.

ಕೆನರಾ ವೆಲ್‌ಫೇರ್ ಟ್ರಸ್ಟ್

ನನ್ನ ಕನ್ನಡ ಜಿಲ್ಲೆ ಬಡತನದ ಬಿಲ್ಲೆ,
          ಈ ಬಿಲ್ಲೆ ಹವ್ವಿಕೊಂಡವರಾರು, ನಲ್ಲೆ?
          ಆಗೇರಮುರಕುಂಡಿ, ಹಾಲಕ್ಕಿರಾಕು.
            ಮುಕ್ರಿ ವೆಂಕಟರಮಣ, ಹಳ್ಳೆರ ತೋಕು.
            (ದಿನಕರನ ಚೌಪಡಿ-ದಿನಕರ ದೇಸಾಯಿ ಚು.ಸಂ ೧೦೯೮ ಪು೨೨೦)

ಎಂದು ಉತ್ತರ ಕನ್ನಡ ಜಿಲ್ಲೆಯ ಬಡವರ ಹಿಂದುಳಿದವರ ಹಾಗೂ ದೀನದಲಿತರ ಅಬಿವೃದ್ಧಿಯ ಹಂಬಲವನ್ನು ಹೊತ್ತಿದ್ದ ದಿನಕರ ದೇಸಾಯಿ ಒಬ್ಬ ವ್ಯವಹಾರಿಕ ಕನಸುಗಾರರಾಗಿದ್ದರು. ಅವರ ಕನಸನ್ನು ನಿಜ ಜೀವನದಲ್ಲಿ ಅನುಷ್ಠಾನಕ್ಕೆ ತರಲು ಶ್ರಮಿಸಿದವರು ಶೇಷಗಿರಿ ಪಿಕಳೆ. ೧೯೪೧ರಲ್ಲಿ ಅಂಕೋಲಾದಲ್ಲಿ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿ ಆರಂಭವಾಯಿತು. ಗಿರಿ ಪಿಕಳೆಯವರು ಅದರ ಆಜೀವ ಸದಸ್ಯರು ಸಂಸ್ಥಾಪಕ ಮುಖ್ಯಾಧ್ಯಾಪಕರು ಆಗಿದ್ದರು. ಜೀವನ ಮಟ್ಟವನ್ನು ಏರಿಸುವ ಉದ್ದೇಶವನ್ನು ಕೆನರಾವೆಲ್‌ಫೇರ್‌ಟ್ರಸ್ಟ್ ಹೊಂದಿತ್ತು. ಭಾರತ ಸೇವಕ ಸಮಾಜದ ಮಾದರಿಯಲ್ಲಿಯೇ ಟ್ರಸ್ಟು ಆಜೀವ ಕಾರ್ಯಕರ್ತರನ್ನು ನೇಮಿಸಿಕೊಳ್ಳುವ ನೀತಿಯನ್ನು ರೂಪಿಸಿತು. ಉಚಿತ ಪ್ರಾಥಮಿಕ ಶಾಲೆ ಹಾಗೂ ಶಿಕ್ಷಕರ ತರಬೇತಿ ಸಂಸ್ಥೆ, ಎಗ್ರಿಕಲ್ಚರ್ ಹೈಸ್ಕೂಲ್ ತೆರೆದು, ಅದರಲ್ಲಿ ವಿಜ್ಞಾನ, ಕೃಷಿ, ವಾಣಿಜ್ಯ ಹಾಗೂ ತಾಂತ್ರಿಕ ವಿಭಾಗ ತೆರೆಯುವುದು ಟ್ರಸ್ಟಿನ ಯೋಜನೆಯಾಗಿತ್ತು. ಹಿಂದುಳಿದ ವರ್ಗದವರಿಗೆ ವಿರ್ದ್ಯಾನಿಲಯ, ಜನರಲ್ಲಿ ಸಹಬಾಳ್ವೆಯನ್ನು ಮೂಡಿಸಲು ಸಮುದಾಯ ಕೇಂದ್ರ, ಸಾರ್ವಜನಿಕ ವಾಚನಾಲಯ, ವಸ್ತು ಸಂಗ್ರಹಾಲಯ, ಪ್ರಕಾಶನ ಸಂಸ್ಥೆ, ಮುದ್ರಣಾಲಯ, ಗ್ರಾಮೀಣ ಸಂಶೋಧನಾ ಘಟಕದ ಮೂಲಕ ಜನರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಜೀವನವನ್ನು ಅಭ್ಯಸಿಸುವ ಯೋಜನೆಯನ್ನು ಕೆನರಾವೆಲ್‌ಫೇರ್‌ಟ್ರಸ್ಟ್ ಹೊಂದಿತ್ತು. ಇದನ್ನು ದಿನಕರರು ಕೆನರಾವೆಲ್‍ಫೇರ್‌ಟ್ರಸ್ಟಿನ ಮುಖವಾಣಿಯಾದ ‘ಜನಸೇವಕ’ ಪತ್ರಿಕೆಯಲ್ಲಿ ಪ್ರಕಟಿಸಿದರು.

ಸಮಾಜ ಸೇವೆಯ ಹಿರಿಯ ಹಂಬಲದೊಂದಿಗೆ ಆರಂಭಗೊಂಡ ಕೆನರಾವಲ್‍ಫೇರ್‌ಟ್ರಸ್ಟು. ತಾನು ತೆರೆದ ಪ್ರತಿಯೊಂದು ಕೇಂದ್ರವು ಚತುರ್ಮುಖ ಕೇಂದ್ರವಾಗಿ ರೂಪುಗೊಳ್ಳುವ ಆಶಯವನ್ನು ಹೊಂದಿತ್ತು. ೧. ವಿದ್ಯಾಮಂದಿರ ೨. ವಾಚನಾಮಂದಿರ ೩. ಸೇವಾಕೇಂದ್ರ ೪. ವೈದ್ಯಕೀಯ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶ ಟ್ರಸ್ಟಿನದಾಗಿತ್ತು. ಈ ಎಲ್ಲ ಯೋಚನೆಗಳನ್ನು ಯೋಜನೆಯನ್ನಾಗಿ ರೂಪಿಸಿ ಅದನ್ನು ಅನುಷ್ಠಾನಕ್ಕೆ ತರಲು ದಿನಕರ ದೇಸಾಯಿಯವರು ತಮ್ಮ ಒಡನಾಡಿಗಳೊಂದಿಗೆ ಅನವರತ ಶ್ರಮಿಸಿದರು. ಗ್ರಾಮೀಣ ಪ್ರದೇಶದಲ್ಲಿಯೇ ಸೇವಾ ಘಟಕಗಳು ಇರುವಂತೆ ದಿನಕರರು ನೋಡಿಕೊಂಡರು. ಆರಂಭದಲ್ಲಿ ಹದಿನೈದು ಹೈಸ್ಕೂಲುಗಳನ್ನು ತೆರೆದ ದಿನಕರರು ಅವುಗಳಿಗೆ ಜನತಾ ವಿದ್ಯಾಲಯ ಎಂದೇ ಹೆಸರಿಟ್ಟರು. ಕ್ರಮೇಣ ಅವುಗಳಿಗೆ ಸೇವಾಕೇಂದ್ರ, ಸಾರ್ವಜನಿಕ ವಾಚನಾಲಯ ಹಾಗೂ ವೈದ್ಯಕೀಯ ಕೇಂದ್ರವನ್ನು ಜೋಡಿಸುವ ಹಂಬಲವನ್ನು ದಿನಕರ ದೇಸಾಯಿ ಹೊಂದಿದ್ದರು. ಈ ಚತುರ್ಮುಖ ಕೇಂದ್ರ ಬಂಕಿಕೊಡ್ಲ ಮತ್ತು ಸಿರಾಲಿಯಲ್ಲಿ ಕಾರ್ಯರೂಪಕ್ಕೆ ಬಂದಿತು. ಆದರೆ ಕೆಲವು ಅನಾನುಕೂಲತೆಯಿಂದ ಟ್ರಸ್ಟಿನ ಎಲ್ಲಾ ಕೇಂದ್ರಗಳಲ್ಲಿ ಅದನ್ನು ತೆರೆಯಲು ಸಾಧ್ಯವಾಗಲಿಲ್ಲ. ದಿನಕರರು ತಮ್ಮ ಜೀವಿತಾವಧಿಯಲ್ಲಿಯೇ ೧೫ ಪ್ರೌಢಶಾಲೆ, ಮೂರು ಪದವಿ ಪೂರ್ವ ಕಾಲೇಜು ಹಾಗೂ ಎರಡು ಪದವಿ ಕಾಲೇಜುಗಳನ್ನು ಸ್ಥಾಪಿಸಿದರು. ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ನೀಡಿ ದಿನಕರ ಎಂಬ ಹೆಸರನ್ನು ಅನ್ವರ್ಥಕ ಮಾಡಿಕೊಂಡರು.

ಚತುರ್ಮುಖ ಕೇಂದ್ರ ಯೋಜನೆಯ ಅಡಿಯಲ್ಲಿ ದೇಸಾಯಿಯವರು ಶಿಕ್ಷಣ ಪ್ರಸಾರದ ಜೊತೆಗೆ ಬಡ ಜನರಿಗೆ ಅಂದು ಅಗತ್ಯವಾಗಿದ್ದ ವೈದ್ಯಕೀಯ ಸೌಲಭ್ಯವನ್ನು ಒದಗಿಸಿದರು. ಹೆರಿಗೆ ಕೇಂದ್ರ, ತಾಯಿ ಮತ್ತು ಮಗುವಿನ ಕಲ್ಯಾಣ ಕೇಂದ್ರ, ನೇತ್ರ ಚಿಕಿತ್ಸಾ ಶಿಬಿರ, ಕುಟುಂಬ ಯೋಜನಾ ಕಾರ್ಯಕ್ರಮ, ಬಡವರಿಗೆ ಉಚಿತ ವೈದ್ಯಕೀಯ ನೆರವು. ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ. ಮಕ್ಕಳಿಗೆ ಹಾಲು, ಹರಿಜನ ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡುವ ಕಾರ್ಯಕ್ರಮವನ್ನು ದಿನಕರರು ಅನುಷ್ಠಾನಕ್ಕೆ ತಂದರು.

ವಸತಿ ಸೌಕರ್ಯವಿಲ್ಲದ ಹರಿಜನರಿಗೆ ಅದರಲ್ಲಿಯೂ ವಿಶೇಷವಾಗಿ ಆಗೇರ ಜನರಿಗೆ ಹರಿಜನ ಕಾಲನಿಯನ್ನು ನಿರ್ಮಿಸಲಾಯಿತು. ಅವರಿಗೆ ಕೃಷಿ ಯೋಗ್ಯವಾದ ಭೂಮಿಯನ್ನು ಟ್ರಸ್ಟು ಒದಗಿಸಿತು. ಇಂದು ಸರಕಾರ ಅನುಷ್ಠಾನಕ್ಕೆ ತರುತ್ತಿರುವ ಯೋಜನೆಗಳನ್ನು ಅರ್ಧಶತಮಾನದ ಹಿಂದೆ ಅನುಷ್ಠಾನಕ್ಕೆ ತಂದಿದ್ದರು. ರೈತರಿಗೆ ಯೋಗ್ಯ ಬೆಲೆಯಲ್ಲಿ ಸಾಮಾಗ್ರಿ ದೊರಕಿಸಿಕೊಡುವ ಉದ್ದೇಶದಿಂದ ಟ್ರಸ್ಟು ಶಿರಾಲಿಯಲ್ಲಿ ಜನತಾ ಸ್ಟೋರ್ಸನ್ನು ತೆರೆಯಿತು. ಭಾರತ ಸೇವಕ ಸಮಾಜ ಈ ಕೆಲಸಕ್ಕೆ ಟ್ರಸ್ಟಿಗೆ ೨ ಸಾವಿರ ರೂಪಾಯಿ ನೆರವನ್ನು ಒದಗಿಸಿತ್ತು. ಕೆನರಾವೆಲ್‍ಫೇರ್‌ಟ್ರಸ್ಟಿನ ಶಾಲೆಗಳಿಗೆ ಭಾರತ ಸೇವಕ ಸಮಾಜ ಮತ್ತು ಕೇಂದ್ರ ಸರ್ಕಾರದ ನೆರವಿನಿಂದ ಮಕ್ಕಳಿಗೆ ಪ್ರತಿನಿದಿ ಮಧ್ಯಾಹ್ನ ಉಪಹಾರ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಬಟ್ಟೆ ಮತ್ತು ಉಚಿತ ಪಠ್ಯಪುಸ್ತಕಗಳನ್ನು ಒದಗಿಸಿತು. ಅಂಕೋಲಾ ಮತ್ತು ಮುಂಡಗೋಡ ತಾಲೂಕುಗಳಲ್ಲಿ ಮಹಿಳಾ ಸ್ವಾವಲಂಬನೆಯನ್ನು ಗುರಿಯಾಗಿಟ್ಟುಕೊಂಡು ಹೊಲಿಗೆ ಶಾಲೆಯನ್ನು ಭಾರತ ಸೇವಕ ಸಮಾಜದ ನೆರವಿನಿಂದ ತೆರೆಯಿತು. ಬಹುಪಾಲು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಿದ ಸ್ವಾವಲಂಬಿಗಳಾಗಿ ಬದುಕಲು ಅನುವು ಮಾಡಿಕೊಟ್ಟ ಈ ಹೊಲಿಗೆ ಶಾಲೆಗಳು ಸಲ್ಲಿಸಿದ ಸೇವೆ ಉಲ್ಲೇಖನೀಯ. ಇಂದು ಕೆನರಾ ವೆಲ್‍ಫೇರ್‌ಟ್ರಸ್ಟ್ ಹೆಮ್ಮರವಾಗಿ ಬೆಳೆದಿದೆ. ಹಳ್ಳಿಗಾಡಿನಲ್ಲಿ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ದಿನಕರ ದೇಸಾಯಿಯವರ ನಂತರ ಕಾರವಾರದ ಹಿರಿಯ ವ್ಯಾಯವಾದಿ, ಸಮಾಜ ಸೇವಾಕರಾದ ಶ್ರೀ. ಎಸ್. ಪಿ. ಕಾಮತ್ ಅವರು, ಟ್ರಸ್ಟಿನ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದು ಹದಿನೆಂಟು ಶಾಲೆ ಕಾಲೇಜುಗಳಿದ್ದ ಸಂದರ್ಭದಲ್ಲಿ ದಿನಕರರು ಚೌಪದಿ ಬರೆದಿದ್ದರು. ಇಂದು ಕೆನರಾವೆಲ್‍ಫೇರ್‌ಟ್ರಸ್ಟಿನ ಅಡಿಯಲ್ಲಿ ೪೨ ಸಂಸ್ಥೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಹದಿನೆಂಟು ಶಾಲೆ ಕಾಲೇಜುಗಳ ಕಟ್ಟಿ
ಮಕ್ಕಳಿಗೆ ಬಡಿಸಿದೆನು ಜೀವನದ ರೊಟ್ಟಿ
ಆದರೂ ತೃಪ್ತಿಯಿಲ್ಲಮೊ ಕರುಣ ಸಿಂಧು
ನಾನು ಮಾಡಿದ ಕೆಲಸ ಬರಿ ಒಂದು ಬಿಂದು
(ದಿನಕರನ ಚೌಪದಿ, ದಿನಕರ ದೇಸಾಯಿ, ಚು.ಸಂ. ೨೩೬೫ ಪು. ೪೭೩)

ಸೇವಾವೃತ್ತಿಗಳಾದ ದಿನಕರರ ನಿರಹಂಕಾರ ಮನೋಭಾವ, ಈ ಚೌಪದಿಯಲ್ಲಿ ಅಭಿವ್ಯಕ್ತಿಗೊಂಡಿದೆ.

ಟ್ರಸ್ಟಿನ ಆರ್ಥಿಕ ಅವಶ್ಯಕತೆಗಳನ್ನು ನೀಗಿಸಲು ದಿನಕರರು ವಿದ್ಯಾರ್ಥಿ ಹಾಗೂ ಶಿಕ್ಷಣದಿಂದ ವರ್ಷಕ್ಕೆ ಒಂದು ರೂಪಾಯಿಯನ್ನು ಸ್ವಯಂ ಪ್ರೇರಣೆಯಿಂದ ಸಂಗ್ರಹಿಸಲು ಯೋಚಿಸಲಾಯಿತು. ಈ ಯೋಜನೆ ಯಶಸ್ವಿಯಾಯಿತು. ಕೆನರಾವೆಲ್‍ಫೇರ್‌ಟ್ರಸ್ಟಿನ ಸಂಸ್ಥೆಗಳನ್ನು ಭೇಟಿಯಾದವರು ವ್ಯಕ್ತಪಡಿಸಿದ ಅಭಿಪ್ರಾಯ, ಮೆಚ್ಚಿಗೆ ದಿನಕರರ ಸೇವಾ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ.