ಪತ್ರಿಕೋದ್ಯಮಿ ಜನಸೇವಕವಾರ ಪತ್ರಿಕೆ

ಸಮಾಜ ಸೇವೆಯ ಒಂದು ಅಂಗವಾಗಿ ೧೯೫೫ನೇ ಇಸ್ವಿಯಲ್ಲಿ ಜನಸೇವಕ ಪತ್ರಿಕೆಯನ್ನು ದಿನಕರ ದೇಸಾಯಿ ಅವರು ಆರಂಭಿಸಿದರು. ಜನಸೇವಕ ಪತ್ರಿಕೆಯ ಮುಖ ಪುಟದ ಲೇಖನ ಹಾಗೂ ಸಂಪಾದಕೀಯವನ್ನು, ನಿರಂತರವಾಗಿ ಬರೆದರು ದಿನಕರ ದೇಸಾಯಿ. ಆ ಮೂಲಕ ಒಬ್ಬ ನಿರ್ಭೀತ, ನಿಷ್ಪಕ್ಷಪಾತಿ ಹಾಗೂ ಧೀಮಂತ ಪತ್ರಿಕೋದ್ಯಮಿಯಾಗಿ ಅವರು ಮೂಡಿಬಿಂದರು. “The journal is not a commercial venture for earning profits but a medium of mass education for the benefit of our rural population” ಎಂದು ಕೆನರಾ ವೆಲ್ ಫೇರ್ ಟ್ರಸ್ಟಿನ ಎರಡನೇ ವಾರ್ಷಿಕ ವರದಿಯಲ್ಲಿ ಅವರು ಬರೆದರು.

ಜನಸೇವಕ ಪತ್ರಿಕೆ ನಡೆಸುವ ಸಲುವಾಗಿ ದಿನಕರರು ಮುಂಬಯಿಯಿಂದ ಉತ್ತಮ ಗುಣಮಟ್ಟದ ಮುದ್ರಣಯಂತ್ರವನ್ನು ತರಿಸಿ ಅದಕ್ಕೆ ‘ಜನಮುದ್ರಣ’ ಎಂದು ಹೆಸರಿಟ್ಟರು. ಜನಸೇವಕ ನಿರ್ದಿಷ್ಟವಾದ ಧ್ಯೇಯ ಧೋರಣೆಯೊಂದಿಗೆ, ಜನಪರ ಆಶಯಗಳೊಂದಿಗೆ ಪ್ರಕಟವಾದ ಪತ್ರಿಕೆ. ಅದು ಇತರ ಪತ್ರಿಕೆಗಳಂತೆ ಸುದ್ದಿಗೆ ಮಸಾಲೆ ಹಚ್ಚಿ ಪ್ರಕಟಮಾಡಿ ಹಣ ದೋಚಲಿಲ್ಲ. ಈ ಕಾರಣದಿಂದ ಜನಸೇವಕ ಪತ್ರಿಕೆ ಲೋಕಸತ್ತೆಯ ಕಾವಲುಗಾರ ಎಂಬ ಬಿರುದಿಗೆ ಪಾತ್ರವಾಯಿತು. ಜನಸೇವಕ ವಾರಪತ್ರಿಕೆಯ ಮುಖಪುಟದ ಲೇಖನವಲ್ಲದೆ ‘ಭತ್ತದ ತೆನೆ’ ಎಂಬ ಅಂಕಣದಲ್ಲಿ ದಿನಕರರು ಬರೆದ ಚುಟುಕಗಳು ಸಮಕಾಲೀನ ಸಂಗತಿಯನ್ನೊಳಗೊಂಡು ಪ್ರಕಟವಾಗುತ್ತಿದ್ದವು. ‘ಉತ್ತರ ಕನ್ನಡಿಗ’ ‘ಪ್ರತಿಯೊಬ್ಬನ ಕೈಪಿಡಿ’ ಎಂಬ ಶಿರೋನಾಮೆಯಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು, ಅಮೂಲ್ಯವಾದ ಗಿಡಮೂಲಿಕೆ ಹೂವು, ಜನಾಂಗಗಳ ಬಗ್ಗೆ ದಿನಕರರ ಅಭ್ಯಾಸ ಪೂರ್ಣವಾದ ಲೇಖನಗಳನ್ನು ಬರೆದು ಪತ್ರಿಕೆಯ ಮೌಲ್ಯವನ್ನು ಹೆಚ್ಚಿಸುತ್ತಿದ್ದರು. ೧೯೫೫ನೇ ಇಸ್ವಿ ಜನವರಿಯಲ್ಲಿ ಆರಂಭವಾದ ಜನಸೇವಕ ೧೯೭೨ನೇ ಇಸ್ವಿ ಆಗಸ್ಟ್ ೨ ರಂದು ತನ್ನ ಮಿರಿವ ಚಿನ್ನದ ದರಿನಂತೆ ಗುರುತನ್ನು ಉಳಿಸಿ ವಿರಮಿಸಿತು. ಹದಿನೇಳುವರೆ ವರ್ಷಗಳ ಕಾಲ ಒಂದು ಸಂಚಿಕೆಯೂ ತಪ್ಪದಂತೆ ೯೧೫ ಸಂಚಿಕೆಗಳನ್ನು ಪ್ರಕಟಿಸಿದ ಹಿರಿಮೆ ಜನಸೇವಕ ಸಂಪಾದಕೀಯ ಮಂಡಳಿಗೆ ಸಲ್ಲುತ್ತದೆ. ಇದಕ್ಕೆ ಚಾಲನಶಕ್ತಿ ದಿನಕರ ದೇಸಾಯಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದಿನಕರ ದೇಸಾಯಿಯವರ ಪತ್ರಿಕೋದ್ಯಮದ ಮೇಲೆ ನನ್ನ ಮಾರ್ಗದರ್ಶನದಲ್ಲಿ ಒಂದು ಎಂ.ಫಿಲ್ ಪ್ರಬಂಧ ಮಂಡನೆಯಾಗಿದ್ದು, ಈ ವಿಷಯದಲ್ಲಿ ಒಂದು ಮಹಾಪ್ರಬಂಧವನ್ನು ಮಂಡಿಸುವಷ್ಟು ವಿಫುಲ ಆಕರ ಸಾಮಗ್ರಿಗಳಿವೆ.

‘ಜನಸೇವಕ’ ಪತ್ರಿಕೆ ನಿಂತು ಹೋದಾಗ ನಾಡಿನ ಹಲವು ಪತ್ರಿಕೆಗಳು ಬಂಧುಮೊಬ್ಬನನ್ನು ಕಳೆದುಕೊಂಡ ಬಗೆಯಲ್ಲಿ ಪರಿತಪಿಸಿದವು. ‘ಉತ್ತರ ಕನ್ನಡ ಜಿಲ್ಲೆಯ ಪ್ರಗತಿ ಪರ ಪತ್ರ’ ಎಂದು ಹೆಸರಿಟ್ಟುಕೊಂಡ ಜನಸೇವಕ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಸೂಚಿಸಿತು. ಈವರೆಗೆ ಕೈಗೊಂಡ ಯೋಜನೆಗಳ ಸಾಧಕ ಬಾಧಕಗಳನ್ನು ಚರ್ಚಿಸಿತು. ಅಂದಿನ ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ‘ಮೈಸೂರು ಸರಕಾರದ ಮತ್ತೊಂದು ಗಾಳಿಪಟ’ ಎಂದು ಸಂಪಾದಕೀಯದಲ್ಲಿ ಅಣಕವಾಡಿತು. ಜನಸೇವಕ ಕನ್ನಡ ನಾಡು, ನುಡಿಯ ಬಗೆಗೆ ಜನಸೇವಕ ಅಗ್ರಲೇಖಗಳನ್ನು ಪ್ರಕಟಿಸಿತು. ಶಿವರಾಮ ಕಾರಂತರು ಪತ್ರಿಕೆ ನಿಂತಾಗ ನೀವು ನಿಮ್ಮ ಕರ್ತವ್ಯ ಮಾಡಿದ್ದೀರಿ. ಅದು ತೃಪ್ತಿಯ ವಿಷಯ ಎಂದು ಸಾಂತ್ವನ ಹೇಳಿದರು. ಪಾಟೀಲ ಪುಟ್ಟಪ್ಪ ಅವರು ಪ್ರಪಂಚದಲ್ಲಿ ಪತ್ರಿಕೆಯಲ್ಲಿ ಜನಸೇವಕದ ಬಗ್ಗೆ ಬರೆಯುತ್ತಾ ಅದನ್ನು ಅಮೇರಿಕಾದ ರಾಲ್ಪ ಇಂಗರಸಾಲನ ಪಿ.ಎಂ. ಪತ್ರಿಕೆಗೆ ಹೋಲಿಸಿದರು. ‘ಜನಸೇವಕ’ ದ ಮೂಲಕ ದಿನಕರ ದೇಸಾಯಿ ಒಬ್ಬ ಲೋಕಶಿಕ್ಷಹನಾಗಿ ಜ್ಕೆಲಸ ಮಾಡಿದರು. ಅವರೊಬ್ಬ ಸಮರ್ಥ ಪತ್ರಿಕೋದ್ಯಮಿ ಎಂಬುದನ್ನು ತಮ್ಮ ಬರವಣಿಗೆ ಪತ್ರಿಕಾ ಧೋರಣೆ, ಸಮಯ ನಿಷ್ಠೆ, ದಿಟ್ಟ ನಿಲುವಿನ ಮೂಲಕ ಸ್ಪಷ್ಟಪಡಿಸಿದರು. ನಾಮಾಂಕಿತ ಬರಹಗಾರರಾದ ಗೌರೀಶ್ ಕಾಯ್ಕಿಣಿಯವರು ಜನಸೇವಕದ ಖಾಯಂ ಅಂಕಣಕಾರರಾಗಿದ್ದರು. “ಜನಸೇವಕವು ನನ ಸಾಹಿತ್ಯಕ ಪ್ರಜ್ಞೆಗೆ ನಿಜವಾದ ಜನಸೇವೆಯನ್ನು ಕಲ್ಪಿಸಿತು. ನನ್ನ ತಿಕ್ಕಣಿಯನ್ನು ಒಕಣಿಕೆಯನ್ನು ಜನಸೇವೆಗೆ ಪಳಗಿಸಿತು” ಎಂದು ಗೌರೀಶರು ಜನಸೇವಕದಲ್ಲಿ ಬರೆದರು. ಇಂದು ‘ದಿನಕರ್ ದೇಸಾಯಿ’, ;ಜನಸೇವಕ’ ಇಬ್ಬರೂ ನಮ್ಮ ನಡುವೆ ಇಲ್ಲ. ಆದರೆ ಅವರು ನಿರ್ಮಿಸಿದ ಇತಿಹಾಸ, ಉಂಟುಮಾಡಿದ ಸಂಚಲನ, ಬಿಟ್ಟು ಹೋದ ಬೆಳಕು ಇನ್ನೂ ಇವೆ.

ಕಾರ್ಮಿಕ ಮುಂದಾಳು

ಭಾರತ ಸೇವಕ ಸಮಾಜದ ಆಜೀವ ಸದಸ್ಯರಾಗಿ ಸೇರಿದ ದಿನಕರರಿಗೆ ಕಾರ್ಮಿಕ ಆಂದೋಲನ ಪಿತಾಮಹ ಎಂದೇ ಖ್ಯಾತರಾದ ಎನ್.ಎಂ. ಜೋಶಿಯವರ ಮಾರ್ಗದರ್ಶನ ದೊರಕಿತು. ಅವರು ದಿನಕರರಿಗೆ ಕಾರ್ಮಿಕ ಸಂಘಟನೆಯ ಹೊಣೆಯನ್ನು ಹೊರಿಸಿದರು. ದೇಸಾಯಿಯವರು ಅದನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ನಿಭಾಯಿಸಿ ಕಾರ್ಮಿಕ ಸಂಘಟನೆಯಲ್ಲಿ ಸಿದ್ಧ ಹಸ್ತರೆನಿಸಿದರು. ಬೆಳಗಾವಿಯ ಗೋಕಾಕ ಹತ್ತಿಗಿರಣಿಯಲ್ಲಿ ಕಾರ್ಮಿಕರ ಸಂಪು ನಡೆಯುತ್ತಿತ್ತು. ಕಾರ್ಮಿಕರ ಮಾರ್ಗದರ್ಶನಕ್ಕಾಗಿ ಜೋಶಿಯವರು ಕನ್ನಡಿಗರಾದ ದಿನಕರರನ್ನು ಅಲ್ಲಿಗೆ ಕಳಿಸಿದರು. ಕಾರ್ಮಿಕ ಸಮಸ್ಯೆಯನ್ನು ಅರಿತು ಅವರೊಂದಿಗೆ ಬೆರೆತು ದಿನಕರರು ಕಾರ್ಮಿಕ ಸಂಘಟನೆಯನ್ನು ಬಲಪಡಿಸಿದರು. ಸಂಘ ಯಶಸ್ವಿಯಾಯಿತು. ಕಾರ್ಮಿಕ ಸಂಘಟನೆಯಲ್ಲಿ ಒದಗಿ ಬಂದ ಈ ಸವಾಲನ್ನು ದಿನಕರರು ಸದಾವಕಾಶವನ್ನಾಗಿ ಪರಿವರ್ತಿಸಿಕೊಂಡು ಯಶಸ್ವಿಯಾದರು.

ಅಲಿಖಿಲ ಭಾರತ ಕಡಲ ಕಾರ್ಮಿಕ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ದಿನಕರರು ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಏಳು ಜನ ಸದಸ್ಯರಿಂದ ಆರಂಭವಾದ ಸಂಘ ಮುಂದೆ ಹತ್ತು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿ ಅಂತರಾಷ್ಟ್ರೀಯ ಮಟ್ತದ ಅತಿದೊಡ್ಡ ಕಡಲ ಕಾರ್ಮಿಕರ ಸಂಘಟನೆಯಾಗಿ ಬೆಳೆಯಿತು. ಆರಂಭದಲ್ಲಿ ಕಾಯದರ್ಶಿಯಾಗಿದ್ದ ದಿನಕರರೂ ನಂತರ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರು. ಪಿ ಆಂಡ್ ಒ ಎನ್ನುವ ಬ್ರಿಟಿಷ್ ಹಡಗು ಕಂಪನಿಯು ವಿರುದ್ಧ ನಲವತ್ತು ದಿನ ಕಾಲ ಸಂಪು ನಡೆಸಿ ಭಾರತ ಕಾರ್ಮಿಕ ಚಳುವಳಿಯಲ್ಲಿ ಒಂದು ಇತಿಹಾಸ ನಿರ್ಮಿಸಿದ ಶ್ರೇಯಸ್ಸು ದಿನಕರ ದೇಸಾಯಿಯವರಿಗೆ ಸಲ್ಲುತ್ತದೆ. ಕಡಲ ಕಾರ್ಮಿಕರ ಸಂಘಟನೆಯನ್ನು ಕುರಿತು. “Maritime Labour in India” – ಎಂಬ ಅಭ್ಯಾಸ ಪೂರ್ಣವಾದ ಗ್ರಂಥವನ್ನೇ ರಚಿಸಿದರು. ಹದಿಮೂರು ಅದ್ಯಾಯಗಳ ವ್ಯಾಪ್ತಿಯ ಈ ಪುಸ್ತಕ ಸಮುದ್ರ ಕೆಲಸಗಾರರ ಕುರಿತು ತಿಳಿಯಲಿಚ್ಚಿಸುವವರಿಗೆ ಸಕಲ ವಿವರಗಳನ್ನೊಳಗೊಂಡ ಉತ್ತಮ ಆಕರ ಗ್ರಂಥವಾಗಿದೆ. Among Indian seamen in Great Britan ಎಂಬ ಮುದ್ರಿತ ವರದಿಯಲ್ಲಿಯೂ ಬ್ರಿಟನ್ನಿನ ಕಡಲ ಕಾರ್ಮಿಕರ ಬಗೆಗೆ ಅವರ ವಸತಿ, ಊಟ, ಇತರ ಸವಲತ್ತುಗಳ ಬಗೆಗೆ ಚರ್ಚಿಸಿ ವರದಿಯನ್ನು ಮಂಡಿಸಿದ್ದಾರೆ. ಅವರು ಬರೆದ ‘ನಾ ಕಂಡ ಪಡುವಣ’ ಎಂಬ ಪ್ರವಾಸ ಕಥನದಲ್ಲಿ ನಾವಿಕರನ್ನು ಕುರಿತು ಅನೇಕ ವಿವರಗಳನ್ನು ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸಿದ್ದಾರೆ.

೧೯೪೫ರಲ್ಲಿ ಡೆನ್ಮಾರ್ಕಿನ ಕೊಪನ್ ಹೇಗನ್‍ನಲ್ಲಿ ನಡೆದ ಹಡಗು ಕಾರ್ಮಿಕರ ಸಮ್ಮೇಳನಕ್ಕೆ, ದಿನಕರ ದೇಸಾಯಿಯವರನ್ನು ಭಾರತದ ಪ್ರತಿನಿಧಿಯಾಗಿ ಆರಿಸಿ ಕಳಿಸಿತು. ಆ ಸಮ್ಮೇಳನ ವಿವರಗಳು ‘ನಾ ಕಂಡ ಪಡುವಣ’ ಪ್ರವಾಸ ಕಥನದಲ್ಲಿ ಸ್ವಾರಸ್ಯಪೂರ್ಣವಾಗಿ ನಿರೂಪಣೆಗೊಂಡಿದೆ. ಬ್ರಿಟಿಷ್ ಸರಕಾರದ ಪ್ರತಿನಿಧಿಯಾದ ಎನ್. ಎ. ಗಟರಿಯವರು ದಿನಕರರನ್ನು ಕಂಡು ನಾವಿಕರ ಸಮಸ್ಯೆಯ ಬಗ್ಗೆ ಚರ್ಚಿಸಲು ಮುಂದಾದರು. ದಿನಕರರು ಮಾಡಿದ ಭಾಷಣದಿಂದ ಅವರು ಸ್ವಾಭಾವಿತರಾಗಿದ್ದರು. ಹಡಗು ಕಂಪನಿಗಳು ಕಾರ್ಮಿಕರ ನಿಧಿಗೆ ಸಂದಾಯ ಮಾಡುತ್ತಿದ್ದ ಹಣ ಭಾರತೀಯ ನಾವಿಕರಿಗೆ ಸಿಗುತ್ತಿರಲಿಲ್ಲ. ಈ ನಿಧಿಯಲ್ಲಿರುವ ಕೋಟಿಗಟ್ಟಲೇ ರೂಪಾಯಿಗಳ ಬಹುಭಾಗ ಭಾರತೀಯ ನಾವಿಕರಿಗೆ ಸಲ್ಲಬೇಕು ಎಂಬ ವಿಷಯವನ್ನು ಅವರು ಭಾಷಣದಲ್ಲಿ ಮಂಡಿಸಿ ಎಲ್ಲರ ಗಮನ ಸೆಳೆದರು.

ಕೊಪನ್ ಹೇಗನ್‍ನಿಂದ ಇಂಗ್ಲೆಂಡಿಗೆ ತೆರಳಿದ ದೇಸಾಯಿಯವರು ಅಲ್ಲಿಯ ಎಲ್ಲ ಮಹತ್ವದ ಬಂದರುಗಳಿಂದ ಭೇಟಿ ನೀಡಿ ಭಾರತೀಯ ಕಾರ್ಮಿಕರ ಪರಿಸ್ಥಿತಿಯಲ್ಲಿ ಪರಿಶೀಲಿಸಿದರು. ಅಲ್ಲಿಯ ಬಂದರುಗಳ ಕ್ಯಾಂಪಿನಲ್ಲಿ ವಾಸವಾಗಿರುವ ಕಾರ್ಮಿಕರ ನರಕ ಸದೃಶವಾದ ಪರಿಸ್ಥಿತಿಯನ್ನು ಕಂಡು ಕನಿಕರಗೊಂಡರು. ಕತ್ತಲೆ ಕೋಣೆ, ಮುರಿದ ನಲ್ಲಿಗಳು, ಹೊಲಸು ನಾರುವ ಬಚ್ಚಲುಗಳು, ಹರಿದ ಹಾಸಿಗೆಗಳು, ಜೀವ ಹಿಂಡುವ ಸೊಳ್ಳೆಗಳ ದಂಡನ್ನು, ಛಾಯಾ ಚಿತ್ರದೊಂದಿಗೆ ವಿವರವಾದ ವರದಿಯನ್ನು ಸಿದ್ಧಪಡಿಸಿ ಬ್ರಿಟಿಷ್ ಮಂತ್ರಿ ಮಂಡಲದ ಸರ್ .ಸ್ಪೆಪೋರ್ಡ್‍ಕ್ರಿಪ್ಸ್ ಅವರಿಗೆ ಸಲ್ಲಿಸಿದರು. ಈ ಹೋರಾಟದಿಂದ ಬ್ರಿಟಿಷ್ ಹಡಗು ಕಂಪನಿಗಳು ಕಾರ್ಮಿಕರ ಹಿತಾಸಕ್ತಿಯ ಬಗೆಗೆ ಗಮನಹರಿಸಿದವು.

ಅಂತಾರಾಷ್ಟ್ರೀಯ ಕಾರ್ಮಿಕ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನುಜನರಿಗೆ ಪರಿಚಯಿಸಿಕೊಡುವ ಉದ್ದೇಶದಿಂದ ಅದನ್ನು ಕುರಿತು ‘ಪ್ರಪಂಚದ ಕೆಲಸಗಾರ’ ಎಂಬ ಗ್ರಂಥವನ್ನು ರಚಿಸಿದರು. ಒಟ್ಟು ಎಂಟು ಅಧ್ಯಾಯಗಳಲ್ಲಿ ಕೆಲಸಗಾರರ ಸಂಘದ ಎಲ್ಲಾ ಮಾಹಿತಿಗಳನ್ನು ದಿನಕರ ದೇಸಾಯಿ ಒದಗಿಸಿದ್ದಾರೆ. ಕೆಲಸಗಾರರ ಸಂಘದ ಎಲ್ಲಾ ಮಾಹಿತಿಗಳನ್ನು ದಿನಕರ ದೇಸಾಯಿ ಒದಗಿಸಿದ್ದಾರೆ. ಯಾವುದೇ ಒಂದು ಕ್ಷೇತ್ರವನ್ನು ಆಯ್ದುಕೊಂಡಾಗಲೂ ಆ ಕ್ಷೇತ್ರದ ಕುರಿತು ಆಳವಾದ ಅಭ್ಯಾಸ ಮಾಡಿ ಮಾಹಿತಿ ಸಂಗ್ರಹಿಸಿ. ಕ್ಷೇತ್ರ ಕಾರ್ಯಮಾಡಿ ದಿನಕರ ದೇಸಾಯಿಯವರು ತಮ್ಮ ಕಾರ್ಯ, ಯೋಜನೆ ರೂಪಿಸುತ್ತಿದ್ದರು. ಅದು ಅವರು ತಮ್ಮನ್ನು ತೊಡಗಿಸಿಕೊಂಡ ರೈತ, ಕಾರ್ಮಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಮಾಜಕಾರ್ಯ ಕ್ಷೇತ್ರಗಳಿಗೆ ಅನ್ವಯಿಸುತ್ತದೆ.

ಶಿಕ್ಷಣ ತಜ್ಞ

ದಿನಕರ ದೇಸಾಯಿಯವರನ್ನು ಶಿಕ್ಷಣ ಪ್ರಸಾರಕ, ಶಿಕ್ಷಣ ಸಂಸ್ಥೆಗಳ ನಿರ್ಮಾಪಕ, ಶಿಕ್ಷಣ ಪ್ರೇಮಿ ಎಂದು ಕರೆಯಲಾಗುತ್ತದೆ. ಅವರನ್ನು ಶಿಕ್ಷಣ ತಜ್ಞ ಎಂದು ಕರೆಯಲು ಬಹಳ ಜನ ಮುಂದಾಗುವುದಿಲ್ಲ. ದಿನಕರರ ಕುರಿತು ಹಾಗೂ ಅವರ ಬರಹಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದಾಗ ಅವರೊಬ್ಬ ಶಿಕ್ಷಣ ತಜ್ಞ ಹಾಗೂ ಶಿಕ್ಷಣ ವ್ಯವಸ್ಥೆಯ ಸುಧಾರಕ ಎಂಬ ಮಾತು ನಮಗೆ ಮನವರಿಕೆಯಾಗುತ್ತದೆ. ೧೯೬೭ ರಿಂದ ೧೯೭೧ರ ವರೆಗೆ ದಿನಕರರು ಲೋಕಸಭಾ ಸದಸ್ಯರಾಗಿದ್ದಾಗ ಸಂಸತ್ ಶಿಕ್ಷಣ ಸಮಿತಿಯ ಸದಸ್ಯರಾಗಿದ್ದರು. ಭಾರತ ಸೇವಕ ಸಮಾಜದ ಸಂಸ್ಥಾಪಕರಾಗಿದ್ದ ಗೋಪಾಲಕೃಷ್ಣ ಗೋಖಲೆಯವರು ಶಿಕ್ಷಣ ತಜ್ಞರಾಗಿದ್ದು, ಭಾರತ ಸೇವಕ ಸಮಾಜ ಶಿಕ್ಷಣದ ಸುಧಾರಣೆಗೆ ಮೊದಲು ಮನ್ನಣೆ ನೀಡಿತ್ತು. ದಿನಕರರು ಇಂಥ ಪ್ರಭಾವಲಯದಿಂದಲೇ ಬಂದವರಾಗಿದ್ದರು. ಕೊಠಾರಿ ಶಿಕ್ಷಣ ಆಯೋಗದ ಶಿಫಾರಸ್ಸನ್ನು ಪರಿಶೀಲಿಸುವ ೨೦ ಜನ ಸಂಸತ್ ಸದಸ್ಯರಲ್ಲಿ ದಿನಕರರೂ ಒಬ್ಬರಾಗಿದ್ದರು. ಲೋಕಸಭೆಯ ಚರ್ಚೆ, ಜನಸೇವಕದ ಬರಹ, ಚೌಪದಿ ಹಾಗೂ ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಎಂಬ ಆಂಗ್ಲ ಭಾಷೆಯ ಪುಸ್ತಕ, ‘ಮುಂಬಯಿ ಸಾಕ್ಷರತಾ ಪ್ರಸಾರದ ಮುದ್ರಿತ ವರದಿಯಲ್ಲಿ ದಿನಕರ ದೇಸಾಯಿ ಒಬ್ಬ ಶಿಕ್ಷಣ ತಜ್ಞ ಎಂಬ ಅಂಶವನ್ನು ಬಿತ್ತರಿಸುವ ವಿಷಯಗಳು ವಿಪುಲವಾಗಿವೆ.

ವಿದ್ಯೆ ಎಂಬುದು ರಾಗಿಯಾಗಬೇಕಣ್ಣ
          ಎಂದಿಗೂ ಆಗಬಾರದು ಬರೀ ಬಣ್ಣ
          ಇವರು ನೀಡುವ ವಿದ್ಯೆ ಚಕಮಕ ಗಿಲೀಟು
          ಎಷ್ಟು ದಿನ ಬಾಳುವುದು ಕಾಗದದ ಕೋಟು?
          (ದಿನಕರನ ಚೌಪದಿ – ಚು.ಸಂ. ೨೦೮೦, ಪು. ೪೧೬)

ವಿದ್ಯೆ ರಾಗಿಯಂತೆ ಜೀವದಾಯಿಯಾಗಿರಬೇಕು. ಅದು ಕಾಗದದ ಕೋಟಿನಂತೆ ತಾತ್ಕಾಲಿಕವಾಗಿರಬಾರದು ಎಂಬ ಆಶಯ ಈ ಚುಟುಕದಲ್ಲಿ ಅಭಿವ್ಯಕ್ತವಾಗಿದೆ.

ಭಾರತದಲ್ಲಿ ಪ್ರಾಥಮಿಕ ಶಿಕ್ಷಣ (Primary education in India) ಎಂಬ ಆಂಗ್ಲಭಾಷೆಯ ಕೃತಿಯ ೧೩ ಅಧ್ಯಾಯಗಳಲ್ಲಿ ದಿನಕರರು ಪ್ರಾಥಮಿಕ ಶಿಕ್ಷಣದ ಸವಾಲು ಹಾಗೂ ಸಾಧ್ಯತೆಗಳನ್ನು ವಿವರಿಸಿದ್ದಾರೆ. ಪ್ರಾಥಮಿಕ ಶಾಲೆಗಳು ಜೀವನದ ತಂಗು ಮನೆಗಳಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಅದರ ಅವಶ್ಯಕತೆ, ಉದ್ದೇಶ, ನೀಡುವ ವಿಧಾನದ ಬಗ್ಗೆ ವಿವರಿಸಿದ್ದಾರೆ. ಕಡ್ಡಾಯ ಶಿಕ್ಷಣ, ಪ್ರಾಥಮಿಕ ಶಿಕ್ಷಣದ ಅವಧಿ, ಮಕ್ಕಳು ಶಾಲೆಗೆ ಹೋಗುವ ವಯಸ್ಸು, ತರಗತಿಯ ಪಾತ್ರ, ಪಾಳಿ ಪದ್ಧತಿ (Shift System) ಶಿಕ್ಷಕರ ಪೂರೈಕೆ, ಪಾಠಕ್ರಮ, ಕಟ್ಟಡಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ ದಿನಕರರು ಈ ಕೃತಿಯ ಮೂಲಕ ತಾನೊಬ್ಬ ಶಿಕ್ಷಣತಜ್ಞ ಎಂಬ ಸಂಗತಿಯನ್ನು ಮಾಡಿಕೊಟ್ಟಿದ್ದಾರೆ.

ದಿನಕರರು ತಾನು ಕಟ್ಟಿ ಬೆಳೆಸಿದ ಪ್ರೌಢಶಾಲೆಗಳಿಗೆ ‘ಜನತಾ ವಿದ್ಯಾಲಯ’ ಎಂದು ಹೆಸರಿಟ್ಟರು. ಇವುಗಳ ಕಟ್ಟಡದ ವಿನ್ಯಾಸ ಒಂದೇ ಬಗೆಯದಾಗಿದೆ. ಪ್ರತಿ ಹೈಸ್ಕೂಲಿನಲ್ಲಿಯೂ ಸುಂದರವಾದ ಹೂದೋಟವಿದೆ. ಒಂದನ್ನು ನೋಡಿ ಮತ್ತೊಂದು ಊರಿಗೆ ಹೋಗಿ ನೋಡಿದರೆ ಹಿಂದೆ ನೋಡಿದ ಜನತಾ ವಿದ್ಯಾಲಯವನ್ನೆ ನೋಡಿದಂತೆ ಅನಿಸುತ್ತದೆ. ಅವರು ಹೈಸ್ಕೂಲು ಕಟ್ಟಲು ನಿಸರ್ಗ ಸುಂದರವಾದ ತಾಣಗಳನ್ನೆ ಆಯ್ದುಕೊಳ್ಳುತ್ತಿದ್ದರು. ಸಮುದ್ರ ತೀರ, ನದಿಯ ದಡ, ಗುಡ್ಡದ ಹಿನ್ನಲೆಯುಳ್ಳ ಜಾಗವನ್ನೇವರು ಆಯ್ದು ಕೊಳ್ಳುತ್ತಿದ್ದರು.

ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದ ಅವರು ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕೆಂಬ ವಿಚಾರ ಹೊಂದಿದ್ದರು. ತ್ರಿಭಾಷಾ ಸೂತ್ರ ಶಾಲಾಮಕ್ಕಳಿಗೆ ತೊಂದರೆಯಾಗುವುದನ್ನು ಗ್ರಹಿಸಿದ ದೇಸಾಯಿಯವರು ಬರೆದ ಚೌಪದಿ ಇಂತಿದೆ.
ಕನ್ನಡವ ಕಲಿಸಿ, ಸಾಕೆನ್ನುವರು ಮಂದಿ
          ಆದರೂ ಜಾಣರಿಗೆ ಬೇಕು ಹಿಂದಿ
          ಕೆಲವರಿಗೆ ಆಂಗ್ಲ ಭಾಷೆಯ ಮೇಲೆ ಪ್ರೀತಿ
          ಈ ಪರಿಸ್ಥಿತಿಯೊಳಗೆ ಮಕ್ಕಳಿಗೆ ಫಜೀತಿ
          (ಜನಸೇವಕ ಸಂ.೧೩, ಸಂ.೧೮, ಪು.೮)

ಭಾರತ ಸೇವಕ ಸಮಾಜದ ಹಲವು ಗಣ್ಯರು ದಿನಕರರು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಗಳನ್ನು ಸಂದರ್ಶಿಸಿ ತಮ್ಮ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ಭಾರತೀಯ ಶಿಶು ಸುಶಿಕ್ಷಿತವಾಗುವಂತೆ ನೋಡಿಕೊಂಡರೆ ಮಾತ್ರ ಗೋಖಲೆಯವರ ಆತ್ಮಕ್ಕೆ ಶಾಂತಿ ದೊರೆಯುವುದು ಎಂದು ದಿನಕರರು ನಂಬಿಕೊಂಡಿದ್ದರು. ದಿನಕರರ ಸಾಹಿತ್ಯಕ, ಶೈಕ್ಷಣಿಕ, ಸಾಮಾಜಿಕ ಸೇವೆಯನ್ನು ಗುರುತಿಸಿ ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿತು. ಉತ್ತರ ಕನ್ನಡದಲ್ಲಿ ನಾವು ಹೊಸ ಮಯೂರಶರ್ಮನನ್ನು ಶಿಕ್ಷಣ ಕ್ಷೇತ್ರದಲ್ಲಿ ದಿನಕರ ದೇಸಾಯಿಯವರ ಮೂಲಕ ನೋಡಿದೆವು ಎಂದು ಪ್ರೊ. ಬಿ.ಎಚ್. ಶ್ರೀಧರರು ನುಡಿದರು.

ರಾಜಕೀಯ ಮುತ್ಸದ್ಧಿ

ರಾಜಕಾರಣ – ರಾಜಕೀಯ – ಇಂಥ ಪದಗಳು ತನ್ನ ಗುರುತ್ವ ಮತ್ತು ಗಾಂಭೀರ್ಯವನ್ನು ಕಳೆದುಕೊಳ್ಳುತ್ತಿರುವ ಕಾಲದಲ್ಲಿಯೇ ದಿನಕರ ದೇಸಾಯಿಯಂಥವರು ಅಂಥ ಪದಗಳಿಗೆ ಹೊಸ ಚೈತನ್ಯ ಹಾಗೂ ಶಕ್ತಿಯನ್ನು ತುಂಬಿದರು. ಭಾರತ ಸೇವಕ ಸಮಾಜದ ಆಜೀವ ಸದಸ್ಯರಾಗಿ ಸೇವಾ ದೀಕ್ಷೆಯನ್ನು ಪಡೆದ ದಿನಕರರು ರಾಜಕಾರಣವನ್ನು ಸಮಾಜ ಸೇವೆಗಾಗಿ ದುಡಿಸಿಕೊಂಡರು. ಕಾರ್ಮಿಕ ಸಂಘಟನೆ, ರೈತಕೂಟದ ಸಂಘಟನೆ, ಪ್ರಜಾಸಮಾಜವಾದಿ ಪಕ್ಷದ ಸಂಘಟನೆಯ ಮೂಲಕ ದಿನಕರರು ತಮ್ಮ ಸಮಾಜಕಾರ್ಯದ ಅನುಭವವನ್ನು ವಿಸ್ತರಿಸಿಕೊಂಡರು. ಈ ಹಿನ್ನಲೆಯೊಂದಿಗೆ ಜನಪದ ಧೋರಣೆಯ ವಿಧಾಯಕ ಚಿಂತನೆಯ ದಿನಕರರು ರಾಜಕೀಯ ರಂಗ ಪ್ರವೇಶ ಮಾಡಿದರು. ೧೯೪೮ರಿಂದ ೧೯೬೧ರವರೆಗೆ ಮುಂಬಯಿ ನಗರಪಾಲಿಕೆಯ ಕಾರ್ಪೋರೇಟರ್ ಆಗಿ ಅವರು ಸಾರ್ಥಕವಾದ ಸೇವೆಯನ್ನು ಸಲ್ಲಿಸಿದ್ದಾರೆ. ಸಮಾಜವಾದವನ್ನು ತಮ್ಮ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಅವರು ಸಮಾಜವಾದವನ್ನು ಒಪ್ಪಿಕೊಂಡರು ಆ ದಿಸೆಯಲ್ಲಿ ಯಶಸ್ವಿಯಾಗಲು ಹಗಲಿರುಳು ದುಡಿದರು. ‘Public life must be spiritualised ಎಂಬ ಗೋಖಲೆಯವರ ಹೇಳಿಕೆಯನ್ನು ದಿನಕರರು ಅನುಷ್ಠಾನಕ್ಕೆ ತರಲು ಶ್ರಮಿಸಿದರು. ದಿನಕರರು ಸಮಾಜವಾದಿ ಪಕ್ಷದ ಒಳಜಗಳ, ಭಿನ್ನಾಭಿಪ್ರಾಯ ಯಾವುದರಲ್ಲಿಯೂ ಪಾಲ್ಗೊಳ್ಳದೆ ಸಮಾಜವಾದದ ಆದರ್ಶ ಹಾಗೂ ಉದ್ದೇಶಗಳನ್ನು ಸಮಾಜ ಹಿತಕ್ಕಾಗಿ ಬಳಸಿಕೊಳ್ಳಲು ಸಿದ್ಧರಾಗಿದ್ದರು. ಸಮಾತಾವಾದವನ್ನು ಅವರು ಓದಿಕೊಂಡಿದ್ದರು. ಅವರು ಲೋಹಿಯಾವಾದಿಗಳಾಗಿರಲಿಲ್ಲ. ಸಂಘಟನೆಯಲ್ಲಿ ತತ್ವಕ್ಕಿಂತ ವ್ಯಕ್ತಿ ಮುಖ್ಯವಾಗುವ ಸಂಗತಿಯನ್ನು ಮನಗಂಡ ದಿನಕರರು ಅದರಿಂದ ದೂರವಾಗಿದ್ದರು. “Political education through agitation is my mission” ಎಂದು ದಿನಕರರು ಹೇಳುತ್ತಿದ್ದರು. ರಾಜಕಾರಣ ಲೋಕಹಿತಕ್ಕಾಗಿ ಎಂಬುದು ಅವರ ನಂಬಿಕೆ.

ಎಂದಿಗೂ ಸೇರಿಲ್ಲ ಸರಕಾರಿ ಪಕ್ಷ
          ನೀರೆರೆದು ಬೆಳೆಸಿದೆನು ಲೋಕಹಿತ ವೃಕ್ಷ
          ಹೋರಾಟದಲ್ಲಿ ಹೋಯ್ತು ಜೀವನದ ಹಗಲು
          ವಿಶ್ರಾಂತಿ ಹೊಂದುವೆನು ಯಮಕೊಡಲು ಹೆಗಲು
          (ದಿನಕರ ಚೌಪದಿ, ದಿನಕರ ದೇಸಾಯಿ, ಚು.ಸಂ.೪೯೮, ಪು. ೧೦೦)

ದಿನಕರರು ೧೯೫೧ರಲ್ಲಿ ಲೋಕಸಭಾ ಚುನಾವಣೆಗೆ ನಿಂತು ಸೋತರು. ೧೯೬೭ರಂದು ಚುನಾವಣೆಯಲ್ಲಿ ಸ್ವತಂತ್ರ ಅಭ್ಯಾರ್ಥಿಯಾಗಿ ಸ್ಪರ್ಧಿಸಿ ಲೋಕಸಭಾ ಸದಸ್ಯರಾದರು. ೧೯೭೧ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರು. ಒಂದು ಅವಧಿಗೆ ಲೋಕಸಭಾ ಸದಸ್ಯರಾದ ಅವರು ಹಿಂದಿನ ಸದಸ್ಯರಿಗಿಂತ ಹೆಚ್ಚು ಕ್ರಿಯಾಶೀಲರಾಗಿ ತಮ್ಮ ಜನಪರವಾದ ಕಾರ್ಯವನ್ನು ಮಾಡಿ ತೋರಿಸಿದ್ದಾರೆ. ತಾನು ಲೋಕಸಭೆಯಲ್ಲಿ ನಾಲ್ಕು ವರುಷವಿದ್ದೆ. ಆದರೆ ಒಂದು ದಿನಮೂ ತನಗೆ ಹರ್ಷವಿರಲಿಲ್ಲ ಎಂದು ಅವರು ಲೋಕಸಭೆಯ ಮೆತ್ತನೆಯ ಗಾದಿಯಲ್ಲಿ ಕುಳಿತರೂ ನನಗೆ ಕಂಡಿದ್ದು ನವಭಾರತದ ನಾರುವ ಬೀದಿ ಎಂದು ಚೌಪದಿಯಲ್ಲಿ ಬರೆದಿದ್ದಾರೆ.

ದಿನಕರ ದೇಸಾಯಿ ಒಬ್ಬ ಸಂಸದೀಯ ಪಟುವಾಗಿ ಗಮನಾರ್ಹ ಕೆಲಸಗಳನ್ನು ಮಾಡಿದ್ದಾರೆ. ಲೋಕಸಭೆಯಲ್ಲಿ ಅವರು ಚರ್ಚೆಯನ್ನು ಸಂಗ್ರಹಿಸಿ ಒಂದು ಪುಸ್ತಕ ಮಾಡಿದರೆ ಅದೊಂದು ಸ್ವಾರಸ್ಯಪೂರ್ಣವಾದ ಹೊತ್ತಿಗೆಯಾಗುತ್ತದೆ. ಅಧಿಕಾರ ವರ್ಗದವರನ್ನು ಸಮದೂರದಲ್ಲಿಟ್ಟಿದ್ದ ಅವರು ತಮ್ಮ ಕ್ಷೇತ್ರದ ಜನತೆಯ ಕೆಲಸವನ್ನು ಅತ್ಯಂತ ಕಾಳಜಿಯಿಂದ ಮಾಡಿಕೊಡುತ್ತಿದ್ದರು. ಅವರು ಲೋಕಸಭೆಗೆ ಆಯ್ಕೆಯಾದಾಗ ಪತ್ರಕರ್ತ ಖಾದ್ರಿ ಶಾಮಣ್ಣ ಅವರು ನೀವು ಲೋಕಸಭೆಗೆ ಯಾಕೆ ಆಯ್ಕೆಯಾದಿರಿ ಎಂದು ಕೇಳಿದಾಗ, ಇಲ್ಲಿ ಒಬ್ಬ ಲಫಂಗ ಕೂಡುವುದನ್ನು ತಪ್ಪಿಸಲಿಕ್ಕಾಗಿ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ಹಾಗೂ ಯೋಗ್ಯವಂತ ಹುರಿಯಾಳುಗಳನ್ನು ಆಯ್ಕೆ ಮಾಡಲು ಜನರನ್ನು ಪ್ರೇರೇಪಿಸಲು ಚುನಾವಣೆಗೆ ನಿಂತ ಕಾರಣವನ್ನು ದಿನಕರರು ತಿಳಿಸಿದ್ದಾರೆ. ಚುನಾವಣೆಯ ಸೋಲಿನಿಂದ ತಮ್ಮ ಜನ ಸೇವೆಯ ಕಾರ್ಯ ನಿಲ್ಲುವುದಿಲ್ಲ ಎಂದು ಜನಸೇವಕ ಪತ್ರಿಕೆಯಲ್ಲಿ ದಿನಕರರು ಸ್ಪಷ್ಟಪಡಿಸಿದರು. ಅನಕ್ಷರತೆ, ರೈಲಿನ ಬಜೆಟ್ಟು, ಚಿನ್ನ ನಿಯಂತ್ರಣ ಮಸೂದೆ, ಕಾರವಾರ ಜಿಲ್ಲೆಗೆ ರೈಲು ಮಾರ್ಗ, ಕೇಂದ್ರ ಸರ್ಕಾರದ ಹರಿಜನ ಗಿರಿಜನ ಕಲ್ಯಾಣ ಚಟುವಟಿಕೆ. ಉಕ್ಕು ಹಾಗೂ ಗಣಿ ಖಾತೆಯ ನಷ್ಟವನ್ನು ಕುರಿತು ಅವರು ಲೋಕಸಭೆಯಲ್ಲಿ ಮಂಡಿಸಿದ ಚರ್ಚೆ ಅಭ್ಯಾಸಪೂರ್ಣ ಹಾಗೂ ಗಮನಾರ್ಹವಾಗಿತ್ತು.

ಕರ್ನಾಟಕ ಏಕೀಕರಣದ ಬಗ್ಗೆಯು ದಿನಕರರು ಹೋರಾಟ ನಡೆಸಿದರು. ಕರ್ನಾಟಕ ಏಕೀಕರಣದ ಮನವಿಯ ಕರಡನ್ನು ದಿನಕರ ದೇಸಾಯಿಯವರು ಬರೆದಿದ್ದರು. ಅದನ್ನು ಮೆಚ್ಚಿ ಕರಡು ಸಮಿತಿಯ ಪ್ರಧಾನ ಕಾರ್ಯದರ್ಶಿಗಳೂ ಮುಂಬಯಿ ಅಸೆಂಬ್ಲಿಯ ಉದಾಧ್ಯಕ್ಷರೂ ಆದ ಎಸ್.ಆರ್. ಕಂಠಿಯವರು ದಿನಕರ ದೇಸಾಯಿ ಅವರಿಗೆ ೬-೫-೧೯೫೪ರಂದು ಬರೆದ ಪತ್ರ ಜನಸೇವಕದಲ್ಲಿ ಪ್ರಕಟವಾಗಿದೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕೊಂಕಣಿಗರು ಒತ್ತಾಯ ಮಾಡಿದಾಗ ಸ್ವತಃ ಕೊಂಕಣಿಗರೇ ಆದ ದಿನಕರರು ಅದನ್ನು ಬಲವಾಗಿ ವಿರೋಧಿಸಿದರು. ಪೋರ್ಚುಗೀಸರ ಧರ್ಮ ಪೀಡನೆಗೆ ಬೇಸತ್ತು ಕೊಂಕಣಿ ಜನರ ಹಿರಿಯರು ಕನ್ನಡ ಕರಾವಳಿಯಲ್ಲಿ ಬಂದು ನೆಲೆಸಿದಾಗ ಕನ್ನಡಿಗರು ಇವರನ್ನು ಸ್ವಾಗತಿಸಿ ಪುಣ್ಯ ಕಟ್ಟಿಕೊಂಡರು. ಈವರೆಗೂ ಕೊಂಕಣಿಗರನ್ನು ಚೆನ್ನಾಗಿ ನಡೆಸಿಕೊಂಡು ಬಂದಿದ್ದಾರೆ. ಕೊಂಕಣಿಗರೇ ನಮ್ಮನ್ನು ಕಡೆಗಣಿಸುತ್ತಿದ್ದರೆ ಎಂಬ ಆರೋಪ ಕನ್ನಡಿಗರಲ್ಲಿ ತಲೆಯೆತ್ತಿದ್ದುಂಟು. ಆದ್ದುರಿಂದ ಕಾರವಾರ ಕೊಂಕಣಿಗರು ಕನ್ನಡ ಜಿಲ್ಲೆಗೆ ಕೃತಜ್ಞತೆಯನ್ನು ಬಯಸದೇ ಕನ್ನಡ ನಾಡಿನಲ್ಲಿ ಸಂಪೂರ್ಣ ಸಮರಸವಾಗಬೇಕು ಎಂದು ತಿಳಿಯ ಹೇಳಿದರು. ಅದು ಜನಸೇವಕ ಪತ್ರಿಕೆಯಲ್ಲಿ ಪ್ರಕಟವಾಯಿತು. (೯, ೧೧-೧೯೫೫ ಪು. ೧) ಕರ್ನಾಟಕಕ್ಕೆ ಮೈಸೂರು ಎಂದು ನಾಮಕರಣ ಮಾಡದೆ ‘ಕರ್ನಾಟಕ’ ಎಂದೇ ಹೆಸರಿಡಬೇಕು ಎಂದು ದಿನಕರರು ಬಲವಾಗಿ ಪ್ರತಿಪಾದಿಸಿದರು. ನಾ ಕಂಡ ಪಡುವಣ ಎಂಬ ಪ್ರವಾಸ ಕಥನದಲ್ಲಿ ‘ಲಂಡನ್ನಿನಲ್ಲಿ ಕರ್ನಾಟಕ ಏಕೀಕರಣ’ ಎಂಬ ಅಧ್ಯಾಯವನ್ನೆ ಅವರು ಮೀಸಲಿಟ್ಟರು. ಬ್ರಿಟಿಷ್ ಸರ್ಕಾರದಲ್ಲಿ ಭಾರತದ ಮಂತ್ರಿಯಾಗಿದ್ದ ಲಾರ್ಡ ಪೆಥಿಕ್ ಲಾರೆನ್ಸ್ ಅವರನ್ನು ಭೆಟ್ಟಿಯಾಗಿ ಕರ್ನಾಟಕದ ಏಕೀಕರಣದ ಕುರಿತು ವಿವರ ನೀಡಿ, ಅವರೊಂದಿಗೆ ಸಮರ್ಥವಾಗಿ ವಾದಿಸಿ ಮನವರಿಕೆ ಮಾಡಿಕೊಟ್ಟರು. ಲೇಬರ್ ಪಕ್ಷ ಇಂಗ್ಲೆಂಡಿನಲ್ಲಿ ಅಧಿಕಾರಕ್ಕೆ ಬಂದರೆ ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಪ್ರಸ್ತಾಪವಿದೆ ಎಂದು ಪೆಥಿಕ್ ಲಾರೆನ್ಸ್ ಹೇಳಿ ನಂತರ ಭಾರತ ಸರ್ಕಾರ ಏಕೀಕರಣದ ಸಮಸ್ಯೆ ಬಗೆಹರಿಸುತ್ತದೆ ಎಂದರು. ಡೆನ್ಮಾರ್ಕದ ನಾವಿಕ ಪರಿಷತ್ತಿನಲ್ಲಿ ಏರ್ಪಡಿಸಿದ ಊಟದ ಮೇಜವಾನಿಯಲ್ಲಿ ಮೆನ್ಯುಕಾರ್ಡಿನಲ್ಲಿ ದಿನಕರರು ಕನ್ನಡದಲ್ಲಿಯೇ ಸಹಿ ಮಾಡಿ, ತಮ್ಮಲ್ಲಿ ಸಹಜವಾಗಿದ್ದ ಕನ್ನಡಾಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ದಿನಕರ ದೇಸಾಯಿ ಎಂದಿಗೂ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ ಎಂದಿಗೂ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ ರಾಜಕಾರಣಿಯಾಗಿಲ್ಲ. ಲೋಕಹಿತವೆಂಬ ವೃಕ್ಷವನ್ನು ನೀರೆರೆದು ಬೆಳಸಬೇಕೆಂಬ ಹಂಬಲ ಹೊಂದಿದ್ದವರು ಅವರು. ಆ ಕಾರಣ ದೇಶದ ಮುಂದಿನ ಪ್ರಗತಿಯನ್ನು ಸದಾಕಾಲ ಬಯಸುವ ರಾಜಕೀಯ ಮುತ್ಸಧಿ’ ಯಾಗಿದ್ದರು ದಿನಕರ ದೇಸಾಯಿ.

ದಿನಕರ ದೇಸಾಯಿಯವರ ಬರಹ

ದಿನಕರ ದೇಸಾಯಿಯವರ ಬದುಕು ದೊಡ್ದದು. ಅವರ ಬರಹಮೂ ಹಾಗೆ, ‘ನಡೆ-ನುಡಿಗಳೊಂದಾದ ಭಕ್ತಿ ಹಿತವಾಗಿವುದು ಶಿವಗೆ’ ಎಂಬುದು ಬಸವಣ್ಣ ವಚನ. ನಡೆ, ನುಡಿಗಳನ್ನು ಒಂದೇ ಆಗಿಸಿ ಆ ಮೂಲಕ ತಮ್ಮ ಹೋರಾಟಕ್ಕೆ ಶಕ್ತಿಯನ್ನು ಆವಹಿಸಿಕೊಂಡು ಜನರಿಗೆ ಹಿತವಾಗುವಂತೆ ನಡೆದವರು ನುಡಿದವರು ದಿನಕರ ದೇಸಾಯಿ. ಅವರು ಬದುಕಿದಂತೆ ಬರೆದ ಬಂಡಾಯಗಾರ “ನುಡಿದಂತೆ ನಡೆ ಇದೇ ಜನ್ಮ ಕಡೆ” ಎಂಬ ರೀತಿಯಲ್ಲಿ ಅವರು ನುಡಿದು ನಡೆದು ತೋರಿಸಿದರು.

ಕನ್ನಡ ನಮೋದಯದ ಸಂದರ್ಭದಲ್ಲಿ ಅವರು ಕಾವ್ಯರಚನೆಯನ್ನು ಮಾಡಿದರು. ನಮೋದಯದ ದೇಶಾಭಿಮಾನ ನಾಡು-ನುಡಿಯಪ್ರೇಮ-ಗೇಯಗುಣವನ್ನು ದಿನಕರರು ತಮ್ಮ ಕಾವ್ಯದಲ್ಲಿ ಸ್ವೀಕರಿಸಿದರು. ನಮೋದಯದ ಭಾವೋದ್ವೇಗ, ಪ್ರಕೃತಿ ವರ್ಣನೆ, ವಾಸ್ತವದಿಂದ ದೂರ ನಿಂತು ಕಾಲ್ಪನಿಕ ಲೋಕದಲ್ಲಿ ವಿಹರಿಸುವುದು ದಿನಕರರಿಗೆ ಒಗ್ಗದ ವಿಚಾರ. ವಾಸ್ತವತೆಯ ಅರಿವು, ದೀನ ದಲಿತರ ಹಿತ ಚಿಂತನೆ, ಬಡವರು ಏಳಿಗೆಯ ಚಿಂತನೆ ಅವರ ಮಕ್ಕಳ ಪದ್ಯ, ಚೌಪದಿ ಹಾಗೂ ಕವನಗಳಲ್ಲಿ ಕಾಣಬಹುದಾಗಿದೆ. ದಿನಕರ ದೇಸಾಯಿಯವರು ಕವನ ಸಂಗ್ರಹ, ಹೂಗೊಂಚಲು, ದಾಸಾಳ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದರು. ಈಗ ಅದು ಸಮಗ್ರ ಕಾವ್ಯವಾಗಿ ಪ್ರಕಟವಾಗಿದೆ. ಮಕ್ಕಳ ಗೀತೆಗಳು, ಮಕ್ಕಳ ಪದ್ಯಗಳು ಹಾಗೂ ಇವೆರಡನ್ನೂ ಕ್ರೋಡಿಕರಿಸಿದ ಮಕ್ಕಳ ಪದ್ಯ ಎಂಬ ಸಂಕಲನ ಪ್ರಕಟವಾಗಿದೆ. ೨೫೦೦ ಚೌಪದಿಗಳನ್ನೊಳಗೊಂಡ ಅವರ ‘ದಿನಕರನ ಚೌಪದಿ’ ಚುಟುಕು ಬ್ರಹ್ಮ ಚೌಪದಿಯ ಚಕ್ರವರ್ತಿ ಎಂದು ಹೆಸರಾದ ದಿನಕರ ದೇಸಾಯಿಯವರ ಚುಟುಕಗಳ ಸಂಕಲನವಾಗಿದೆ.

ಕಾವ್ಯ ಜನರಿಗೆ ತಲುಪಬೇಕು. ದಂತಗೋಪುರದಲ್ಲಿ ಕುಳಿತು, ಕಾವ್ಯ ಬರೆಯುವ ಕಾಲ ಇದಲ್ಲ. ಸಮಕಾಲೀನತೆ ಹಾಗೂ ವರ್ತಮಾನದ ತುರ್ತುಗಳಿಗೆ ಸ್ಪಂದಿಸಿದ್ದಾರೆ. ಅಂಥ ಕಾವ್ಯದಿಂದ ದೊರಕುವ ಕೀರ್ತೆಯು ಸುಡಲಿ ಎಂದು ನಂಬಿದವರು ದಿನಕರರು.

ಎಲೆ ಕವಿಯೆ ಸುಡು ನಿನ್ನ ಕವನಗಳ ಕೀರ್ತಿ
ತಿಳಿಬಾಳು ಗಿರಿಕಾನುಗಳೆ ನಿನ್ನ ಸ್ಫೂರ್ತಿ
ಕೇರಿ ಕೇರಿಗಳಲ್ಲಿ ಉರಿದರೂ ಜ್ವಾಲೆ
ಕವನ ಕಟ್ಟುವೆ ನೀನು ಮಲ್ಲಿಗೆಯ ಮೇಲೆ
(ದಿನಕರನ ಚೌಪದಿ, ದಿನಕರ ದೇಸಾಯಿ, ಚು.ಸಂ. ೪೬೬ ಪು ೯೪)

ಎಂದು ಕವಿಗೆ ಸವಾಲು ಹಾಕಿದವರು ದಿನಕರ ದೇಸಾಯಿ. ದಿನಕರರ ಬದುಕು ಹೋರಾಟದ ಸಾಹಸಗಾಥೆಯಾಗಿದೆ. ಅವರ ಕಾವ್ಯ ಜನಪದ ನಿಲುವಿನೊಂದಿಗೆ ಜನಮನವನ್ನು ತಲುಪಿದೆ. ವಿಮರ್ಶಕರು ಸಾಹಿತ್ಯ ಚರಿತ್ರೆಕಾರರು, ದಿನಕರರಿಗೆ ನಿಜವಾಗಿ ದಕ್ಕ ಬೇಕಾದ ಸ್ಥಾನಮಾನಗಳನ್ನು ತಮ್ಮ ಬರಹಗಳಲ್ಲಿ ನೀದಲಿಲ್ಲ. ಇದರಿಂದ ವಿಮರ್ಶಕರ, ಸಾಹಿತ್ಯ ಚರಿತ್ರೆಕಾರರ ಮಟ್ಟ ತಿಳಿಯಿತೇ ಹೊರತು ದಿನಕರರಿಗೆ ಇದು ಯಾವುದು ತಾಗಲಿಲ್ಲ ತಟ್ಟಲಿಲ್ಲ. ಜನಪದ ನಿಲುವಿನ ಜೀವಪರ ಚಿಂತನೆಯು ಅವರ ಕಾವ್ಯ ಕನ್ನಡ ಸಾಹಿತ್ಯದ ಆಯಾಮವನ್ನು ವಿಸ್ತರಿಸಿದೆ. “ಭಾವನಿರ್ಭರತೆ, ನೇರತೆ ಹಾಗೂ ಸಹಜಾಭೀವ್ಯಕ್ತಿ” ಇವು ದಿನಕರರ ಕಾವ್ಯದ ಲಕ್ಷಣ ಎಂದು ಡಾ. ವಿ.ಕೆ.ಗೋಕಾಕರು ‘ಕವನ ಸಂಗ್ರಹ’ ದ ಕೆಳೆನುಡಿಯಲ್ಲಿ ಸರಿಯಾಗಿ ಗುರುತಿಸಿದ್ದಾರೆ. ಅವರ ಕವನಗಳನ್ನು ೧. ವ್ಯಕ್ತಿ ಚಿತ್ರಗಳು, ೨. ಸ್ವಭಾವ ಚಿತ್ರಗಳು, ೩. ಸಾಮಾಜಿಕ ಪ್ರಜ್ಞೆ ೪. ವಿಡಂಬನೆ ಮತ್ತು ತಿಳಿಹಾಸ್ಯ, ೫. ಜೀವನ ದರ್ಶನ, ೬. ನಾಡು ನುಡಿಯ ಅಭಿಮಾನ, ಉತ್ತರ ಕನ್ನಡ ೭. ರಾಜಕೀಯ ಪ್ರಜ್ಞೆ, ೮. ಕಥನ ಕವನ, ೯. ಪ್ರೇಮಕವನ ೧೦. ಮಕ್ಕಳ ಗೀತೆಗಳನ್ನು ಹೋಲುವ ಕವನ ಎಂದು ಸಮಗ್ರ ಕಾವ್ಯವನ್ನು ವಿಂಗಡಿಸಿಕೊಂಡು ‘ದಿನಕರ ದೇಸಾಯಿ ಬದುಕು ಬರಹ’ ಎಂಬ ನನ್ನ ಪಿ.ಎಚ್.ಡಿ ಪ್ರಬಂಧದಲ್ಲಿ ಸುದೀರ್ಘವಾದ ವಿವರಗಳನ್ನು ನೀಡಲಾಗಿದೆ (ದಿನಕರ ದೇಸಾಯಿ, ಬದುಕು-ಬರಹ, ಡಾ. ಶ್ರೀಪಾದ ಶೆಟ್ಟಿ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾದ).

ದಿನಕರರ ಕಾವ್ಯದಲ್ಲಿ ಸಾಮಾಜಿಕ ಪ್ರಜ್ಞೆ – ಅಂತಸ್ತವಾಗಿದೆ.

          ಹರಿಗೆ ಎಂದು ಗುಡಿಯನೊಂದ | ಕಟ್ಟುತಿರುವೆಯಾ
          ಹರಿಯ ಒಲುಮೆ ಪಡೆದು ಪುಣ್ಯ | ಗಳಿಸುತಿರುವೆಯಾ?
          ಹುಚ್ಚ. ನೀನು ಹಳ್ಳಿಗೋಡು | ದೀನ ಜನರ ಪಾಡ ನೋಡು,
          ಇರಲು ಗುಡಿಲು ಇಲ್ಲವಲ್ಲ | ಹೊಟ್ಟೆ ತುಂಬ ಅನ್ನವಿಲ್ಲ
          ದೀನಗೊಂದು ಗೂಡು ಸಾಕು | ದೇವಗೊಂದು ವಿಶ್ವ ಬೇಕು

ಎಂಬ ‘ದೀನಗಿಂತ ದೇವ ಬಡವ’ ಎಂಬ ಅವರ ಕವನ ಗಮನಾರ್ಹವಾಗಿದೆ. ‘ಹರಿಜನರು’ ಎಂಬ ಅವರ ಕವನ ಹರಿಜನರ ಇರವನ್ನು ಸಾದರಪಡಿಸಿದೆ.

          ಆಗೇರ ಸೋಮೂ | ಮುಕ್ರಿ ಓಮೂ | ಹಳ್ಳೇರ ಖೇಮೂ ಹರಿಜನರೋ
          ಹಗಲು ಇರುಳೂ | ಬೆಳಗೂ ಬೈಗು | ದುಡಿದೂ ಹೊಟ್ಟೆಗೆ ಸಿಗದವರೋ
          ಸರಕಾರ ಸುಳ್ಳು | ಜನರಿಗೆ ಮಳ್ಳು | ಬಡವರದಲ್ಲಾ ಒಡೆಯರದೊ
          ಇಲ್ಲಾಗದ್ದೆ | ಇರುವುದು ಹುದ್ದೆ | ಹರಿಜನ ಹುದ್ದೆಯು ನಿಮಗಿಲ್ಲ
          ಹರನೂ ನೋಡಾ | ಹರಿಗೂ ಬೇಡಾ ಹೆಸರಿಗೆ ಮಾತ್ರ ಹರಿಜನರೋ

‘ಬಿರುಗಾಳಿ’ ಎಂಬ ಅವರ ಕವನ ಜಡ ಹಾಗೂ ಸ್ಥಗಿತ ಸ್ಥಿತಿಗೆ ಒಳಗಾದವರನ್ನು ಬಡಿದೆಚ್ಚರಿಸುವ ರೀತಿಯಲ್ಲಿ ರಚನೆಗೊಂಡಿದೆ.

          ಬಿರುಗಾಳಿಯೇ ಬೇಕು ನಮ್ಮ ಉದ್ಧಾರಕ್ಕೆ
          ಪೊಳ್ಳು ಮರಿಗಳನೆಲ್ಲ ಭೂಮಿಗುರುಳಿಸಲಿಕ್ಕೆ
          ………………….
          ಸೋರುವಾ ಮಾಡುಗಳು ಮುರಿದು ಬಿದ್ದರೆ ಶಾಂತಿ
          ನಾರುವಾ ಗೂಡುಗಳು ಕಳಚಿ ಬಿದ್ದರೆ ಕ್ರಾಂತಿ
          ದರಗೆಲ್ಲ ದೂರಾಗಿ ಚೊಕ್ಕವಾಗಲಿ ನೆಲವು
          ಬಿರುಗಾಳಿಯಲ್ಲಿಯೆ ಬರಲಿ ನರನಿಗೆ ಗೆಲವು

ದಾಸಾಳದೊಂದಿಗೆ ನಮ್ಮ ಜೀವನವನ್ನು ಸಮೀಕರಿಸಿಕೊಂಡು ಕಾವ್ಯ ಬರೆದವರು ದಿನಕರ ದೇಸಾಯಿ. ಅವರು ತಾವು ಕಟ್ಟಿದ ಶಿಕ್ಷಣ ಸಂಸ್ಥೆಯ ಎದುರು ದಾಸಾಳ ಗಿಡ ನೆಡುತ್ತಿದ್ದರು. “ದಾಸಾಳ” ಎಂಬ ಹೆಸರಲ್ಲಿ ಅಂಕೋಲಾ ಜೆ.ಪಿ. ಕಾಲೇಜಿನ ವಾರ್ಷಿಕ ಪ್ರಕಟವಾಗುತ್ತಿದೆ.

          ಸಾಮಾನ್ಯ ಹೂ ಜಾತಿ | ಬೇಕಿಲ್ಲ ಪ್ರಖ್ಯಾತಿ |
          ದಾಸಾಳ ನನ್ನ ಜೀವನದ ರೀತಿ
          ದಾಸಾಳದೊಳಗುಂಟು | ನನ್ನ ಜೀವನದ ಗಂಟು
          ಹನ್ನೆರಡು ತಿಂಗಳು ಬಿರಿದು ಬಿರಿದೂ |
          ಇದಕ್ಕೆ ಬೇಕಾಗಿಲ್ಲ ಯಾವ ಬಿರುದೂ

ದಿನಕರರು ಎಲ್ಲಾ ಪ್ರಶಸ್ತಿ ಮಾನಸನ್ಮಾನಗಳಿಂದ ದೂರ ಉಳಿದವರು. ದಾಸಾಳ ಹೂವಿನಂತೆ ದಿನವು ಅರಳಿದರು. ಯಾವುದೇ ಬಿರುದನ್ನು ಬಯಸದೇ ಸೇವಾ ವೃತ್ತಿಗಳಾಗಿ ಬದುಕಿದರು. ಅವರಿಗೆ ಅವರ ಪ್ರತಿಭೆಯನ್ನು ಗುರುತಿಸಿ, ಕ್ಯಾಂಡಿ, ಪಾರಿತೋಷಕ, ಸೇಂಟ ಜೇವಿಯರ್ ರಜತ ಪದಕ, ಅವರ ಕವನ ಸಂಗ್ರಹಕ್ಕೆ ಮುಂಬಯಿ ಸರ್ಕಾರದ ಪುರಸ್ಕಾರ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ದಿನಕರ ಚೌಪದಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ, ಬಿ.ಎನ್.ಗುಪ್ತ ಜನ್ಮಭೂಮಿ ಟ್ರಸ್ಟಿನ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪ್ರಶಸ್ತಿಗಳು ಅವರ ಕರ್ತವ್ಯ, ಸೇವಾ ಮನೋಭಾವವನ್ನು ಗುರುತಿಸಿ ಅವರಿಗೆ ಸಂದಾಯವಾದವು. ಇದನ್ನೆಲ್ಲಾ ದಿನಕರರು ಖುದ್ದಾಗಿ ಸ್ವೀಕರಿಸದೆ ತಮ ಪ್ರತಿನಿಧಿಗಳ ಮೂಲಕ ತರಿಸಿಕೊಂಡರು. ಪ್ರಶಸ್ತಿಯಿಂದ ಬಂದ ಹಣ, ಲೇಖನ, ಚೌಪದಿಯ ಪ್ರಕರಣೆಗೆ ದೊರೆತ ಗೌರವ ಸಂಭಾವನೆ ಎಲ್ಲವನ್ನು ಅವರು ಕೆನರಾವೆಲ್‍ಫೇರ್‌ಟ್ರಸ್ಟಿನ ಖಾತಗೆ ಜಮಾ ಮಾಡಿದರು. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ದಿನಕರ ದೇಸಾಯಿ ತಮ್ಮ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಲೇ ಇಲ್ಲ. ಇದು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ತತ್ವ ಹಾಗೂ ಆದರ್ಶವೂ ಆಗಿತ್ತು.