ಕನ್ನಡ, ನಾಡು, ಬುಡಿಯ ಅಭಿಮಾನ ಅವರ ಕವನ, ಚೌಪದಿ ಮಕ್ಕಳ ಪದ್ಯದಲ್ಲಿ ದಾಂಗುಡಿಯಿಟ್ಟಿದೆ. ‘ಕನ್ನಡ ತಾಯಿ’ ಎಂಬ ಅವರ ಕವನ ಇಂತಿದೆ.

          ಮೂರು ಮುನ್ನೀರುಗಳ ನೀಲ ಜಲ ಮಧ್ಯದಲಿ
          ಮೂರು ಸಾವಿರ ವರ್ಷದಾಚೆ ಜನಿಸಿ
          ಕೋಟಿ ಮಕ್ಕಳ ಹೆತ್ತ ಮುದುಕಿಯಾದರು ತಾಯಿ
          ತರುಣಿಯೋಲು ನೀನಿರುವೆ ಚೆಲುವಸೂಸಿ

          ‘ಕರ್ನಾಟಕಾಂಬೆಯ ಹೆಸರು’ ಕವನದಲ್ಲಿ
          ಚಂದನದ ನಿನ್ನ ಗುಡಿ | ಸಹ್ಯಾದ್ರಿ ನಿನ್ನ ಮುಡಿ |
          ಕನ್ನಡದ ವಚನವೇ ನಿನ್ನ ಬಾಯಿ
          ‘ಏಕೀಕೃತ ಕರ್ನಾಟಕ’

ಎಂಬ ಕವನದಲ್ಲಿ ಕನ್ನಡಿಗರು ಒಗ್ಗೂಡಬೇಕು ಎಂಬ ಸಂದೇಶವಿದೆ.

          ಕರಿಯ ಕಲ್ಲುಗಳು ಕೂಡ ಕೂಡಿದವು | ಗುಡಿಯ ಕಳಸಕಾಗಿ
          ನರನ ಹೃದಯಗಳು ಒಂದುಗೂಡವೇ | ಮಾತೃ ಭೂಮಿಗಾಗಿ?
          ಕನ್ನಡದ ಜನಮೊಂದು | ಕನ್ನಡದ ಮನವೊಂದು
          ಕನ್ನಡದ ಮನವೊಂದು | ಒಂದಾಯ್ತು ಒಂದು
          ನಾಡೆಲ್ಲ ಗೂಡೆಲ್ಲ ಹಾಡೆಲ್ಲ ಒಂದು

ಅವರ ಚೌಪದಿಯಲ್ಲಿಯೂ ಕನ್ನಡ ನುಡಿಯ ಅಭಿಮಾನ ವ್ಯಕ್ತವಾಗಿದೆ.

          ನನ್ನ ಕನ್ನಡ ನುಡಿಯೆ ನೀನೆಷ್ಟು ಚಂದ
          ಏನು ಗೀಚಿದರೂ ಆಗುವುದು ಶ್ರೀಗಂಧ
          ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು
          ಬಂಗಾರಕ್ಕಿಂತಲೂ ಶ್ರೇಷ್ಠ ನುಡಿಮುತ್ತು

ಕನ್ನಡ ನುಡಿಯ ಅಂದ, ಪರಿಮಳ, ಶಬ್ದಸಂಪತ್ತಿನ ನುಡಿಮುತ್ತಿನ ವರ್ಣನೆ ಇಲ್ಲಿದೆ.

          ಹೊಳೆಯ ಹೊನಲಿನ ತೆರದಿ ಉತ್ಸಾಹ ಸಾಗಿರಲಿ
          ಹೊಳೆಗೆ ಕದಲನು ಕೂಡುವಾಗೆ ಧೃಡವಾಗಿರಲಿ
          ಕಡಲತೆರೆ ತಾಯ್ನಾಡ ಪದವ ತೊಳೆಯುತಿರಲಿ
          ಇಂತಿರಲಿ ನನ್ನ ಬಾಳು

ಉತ್ಸಾಹ, ನಿರ್ಧಾರ ತಾಯ್ನಾಡಿನ ಪ್ರೀತಿ ಕಾವ್ಯದ ಚೌಕಟ್ಟಿನಲ್ಲಿ ಅಭಿವ್ಯಕ್ತಗೊಂಡಿದೆ.

          ಯುದ್ಧದ ಭೂತ ಪಿಶಾಚಿಗಳೆದ್ದು |
          ಜಗದೊಳಗೆಲ್ಲಾ ಗುಂಡಿನ ಸದ್ದು
          ದೇವನು ಸತ್ತನು, ಗುಡಿಯಲಿ ತಿಮಿರ |
          ದೇವನ ಬದಲು ಪಿಶಾಚಿಯೆ ಅಮರ
          ………….
          ಯುದ್ಧ ಕುಬೇರನ ರಣಕೊಂಬು |
          ಬುದ್ಧನಿಗಾಗಲಿ, ತಲೆ ದಿಂಬು

ಯುದ್ಧ – ಬೇಡ, ಬುದ್ಧ ಬೋಧಿಸಿದ ಶಾಂತಿ ಬೆಳಕು ಎಂಬ ಆಶಯ ದಿನಕರರದು.

          ಮಂತ್ರಿ ಮೀಡುವ ವಚನ | ನಕ್ಷತ್ರಗಳ ಗಗನ |
          ಬರಿಯ ದಿಟ್ಟಿಸಿ ನೋಡಿ ನಲಿವ ನೋಟ
          ಗುಲ್ಲು ಗದ್ದಲದೊಳಗೆ ರಾಜಕಾರಣಿ ಶ್ರೇಷ್ಠ |
          ಗುಲ್ಲು ಅಡಗಿದ ಕ್ಷಣತೆ ಆತನಾದನು ಬೃಷ್ಠ

ಎಂದು ರಾಜಕಾರ್ಯವನ್ನು ಕವಿತೆಯನ್ನು ವಿಶ್ಲೇಷಿಸಿದ ದಿನಕರರು,

          ನಿನ್ನ ಪ್ರತಿಮೆಯ ನಿಲಿಸಿ | ನಾವು ಮರೆವುದು ವ್ಯರ್ಥ
          ನಮ್ಮ ಹೃದಯದೊಳಗಿರಲಿ | ನಿನ್ನ ಮರಣದ ಅರ್ಥ
          ನಿನಗೇಕೆ ಸ್ಮಾರಕವು | ಶಿಲ್ಪ ಕೃತಿ ಹೂಮಾಲೆ
          ಲೋಕವನೆ ಬೆಳಗುತಿದೆ | ನಿನ್ನ ಎಲುಬಿನ ಜ್ವಾಲೆ
          ಗಾಂಧೀಜಿಯವರ ತತ್ವ ಮತ್ತು ಮಹತಿಯನ್ನು ಕವನವಾಗಿಸಿದರು.
          ಭೂಮಿ ಇಳಿಜಾರು | ಜಾರಿದನು ನೆಹರು
          ಮಾಡಿಯನಾ ತ್ಯಾಗ | ಹಾಕಿದನು ಲಾಗ
          ಎಂದು ನೆಹರು ಆಡಳಿತವನ್ನು ವ್ಯಾಖ್ಯಾನಿಸಿದರು
          ಕುದುರೆಯಾಯಿತು ಕತ್ತೆ | ಪ್ರತಿಯೆಂಬರು ಮತ್ತೆ

ಎಂದು ರಾಜಕೀಯದ ಪರ್ಯನ್ನು ಅವರು ವಿಡಂಬಿಸಿದರು.

ಮಕ್ಕಳ ಕವಿಯಾಗಿ ದಿನಕರ ದೇಸಾಯಿ ತಮ್ಮದೇ ಹೆಜ್ಜೆ-ಗುರುತುಗಳನ್ನು ಮೂಡಿಸಿದ್ದಾರೆ. ಬಂಗಾಲಿ ಸಾಹಿತ್ಯದಲ್ಲಿ ಹೆಸರಾಂತ ಸಾಹಿತಿಗಳು ಮಕ್ಕಳಿಗಾಗಿ ಸಾಹಿತ್ಯ ರಚಿಸಿದ್ದಾರೆ. ಕನ್ನಡದಲ್ಲಿ ಕುವೆಂಪು, ಕಾರಂತ, ರಾಜರತ್ನ, ದಿನಕರ ದೇಸಾಯಿ ಮಕ್ಕಳಿಗಾಗಿ ಕವನ ಬರೆದಿದ್ದಾರೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ಸಿಂಗರ್ “ಮಕ್ಕಳಿಗೆ ಬರೆಯುವುದು ತುಂಬ ಕಷ್ಟ. ಕಾರಣ ದೊಡ್ಡವರ ಮುಂದೆ ನಾನು ಬರೆದ ಪದ್ಯವನ್ನು ಓದಿದಾಗ ಅವರಿಗೆ ಇಷ್ಟವಾದರೆ ಪೂರ್ತಿ ಕೇಳುತ್ತಾರೆ. ಇಲ್ಲದಿದ್ದರೆ ಆಕಳಿಸಿ ಬಿಡುತ್ತಾರೆ” ಎಂದು ಹೇಳಿದ್ದಾರೆ. ಮಕ್ಕಳ ಅರಿವನ್ನು ವಿಸ್ತರಿಸುವುದಕ್ಕಿಂತ ಮಿಗಿಲಾಗಿ ಅವರ ಭಾವಕೋಶವನ್ನು ವಿಸ್ತರಿಸುವಲ್ಲಿ ದಿನಕರರ ಮಕ್ಕಳ ಪದ್ಯ ಯಶಸ್ವಿಯಾಗಿವೆ. ದಿನಕರರಿಗೆ ಒಲಿದು ಬಂದ ಪ್ರಾಸ ಸಂಯೋಜನೆ ಅವರ ಕವನ, ಚೌಪದಿ, ಮಕ್ಕಳ ಪದ್ಯಗಳಲ್ಲಿ ತುಂಬಾ ಪರಿಣಾಮವನ್ನುಂಟು ಮಾಡಿವೆ.

ರಾಷ್ಟ್ರದ ಶಕ್ತಿಯನ್ನು ಮಿಲಿಟರಿ ಬಲದಿಂದ ಅಳೆಯುವ ಕಾಲ ಮುಗಿದಿದೆ. ಇಂದು ರಾಷ್ಟ್ರದ ಶಕ್ತಿಯನ್ನು ಮಕ್ಕಳ ಬಲದಿಂದ ಅಳೆಯುವ ಕಾಲ ಬಂದಿದೆ ಎಂಬ ಯುನಿಸೆಫ್ ನ ಮಾತನ್ನು ಮೊದಲೇ ಅರ್ಥಮಾಡಿಕೊಂಡಿದ್ದರು ದಿನಕರ ದೇಸಾಯಿ. ಮಗು ಕೇಂದ್ರೀಕೃತವಾದ ಸಾಹಿತ್ಯ ವಿರಳವಾಗಿದ್ದ ಕಾಲದಲ್ಲಿಯೇ ದಿನಕರರು ಮಕ್ಕಳ ಸಾಹಿತ್ಯವನ್ನು ರಚಿಸಿದರು.

          ಕನ್ನಡ ನುಡಿ ಮರದಲಿ ಹಣ್ಣಾಗಿದೆ | ಕವನದ ಮಾದಾಯಿ
          ಸವಿಯೋ ಹುಳಿಯೋ ಕಹಿಯೋ ಕೇಳುವ | ದಿನಕರ ದೇಸಾಯಿ

ಎಂದು ತಮ್ಮ ‘ಮಕ್ಕಳ ಗೀತೆಗಳು’ ಸಂಕಲನದಲ್ಲಿ ಅವರು ಬರೆದರು. ಹಾಸ್ಯ, ವಿಡಂಬನೆ, ಜೀವನ ಪ್ರೀತಿ, ಜೀವನ ದರ್ಶನ, ಕಥನಕವೆ ಎಲ್ಲವನ್ನು ಅವರ ಮಕ್ಕಳ ಪದ್ಯಗಳು ಒಳಗೊಂಡಿವೆ.

          ನಗು ಮುಖವೆಂದಿಗು ಇರಲಣ್ಣಾ | ನೀನೇ ಸುಂದರ ಕಾಮಣ್ಣ
          ಅಳು ಬುರುಕಾದರೆ ನನ ತಮ್ಮಾ | ನಿನಗೆಂಬರು ಕಾಡಿನ ಗುಮ್ಮ
          ಹೀಗೆ ಜೀವನ ದರ್ಶನವನ್ನು ಮೂಡಿಸುವ ಕವಿ
          ಹೊಟ್ಟೆಯು ಪೂರಾ ತುಂಬಿದರೂ | ಉಪವಾಸದ ವೃತ ನಂಬುವರು

ಎಂದು ವೃತ್ತದ ವಿಡಂಬನೆಯನ್ನು ಮಾಡಿದ್ದಾರೆ.

          ತಿರುಗುವ ಪೃಥಿವಿಯು ಮಾಡಿದ್ದಾರೆ.
          ಗಗನದ ಗುಡುಗೇ ಅವನ ಬುಗುರಿ
          ತಾರೆಗಳೆಲ್ಲಾ ಮಿನುಗಲು ಮೇಲೆ
          ಮುಗಿಲೊಳಗೆಲ್ಲಾ ದೇವರ ಲೀಲೆ

ಎಂದು ಪ್ರತಿಮಾತ್ಮಕ ನೆಲೆಯಲ್ಲಿ ದೇವರನ್ನು ಮಕ್ಕಳಿಗೆ ಬಣ್ಣಿಸುತ್ತಾರೆ.

          ಹತ್ತಕ್ಕೆ ದೋಸೆ | ಇಪ್ಪತ್ತಕ್ಕೆ ಮೀಸೆ
          ಮೂವತ್ತಕ್ಕೆ ಅಪ್ಪ | ನಲ್ವತ್ತಕ್ಕೆ ದಪ್ಪ
          ಐವತ್ತಕ್ಕೆ ಮುಪ್ಪ | ಅರವತ್ತಕ್ಕೆ ಕೆಪ್ಪ

ಎಂದು ಹತ್ತು ವರ್ಷಗಳಿಗೆ ಬದಲಾಗುವ ದೇಹದ ಚಹರೆಯನ್ನು ವರ್ಣಿಸಲಾಗಿದೆ.

          ತಿಪ್ಪಾ ಭಟ್ಟರ ಡೊಳ್ಳು | ನೋಡಲು ಮಕ್ಕಳು ಮಳ್ಳು
          ಕುಂಬಳಕಾಯಿಯ ಹಾಗೆ | ಉರುಟುರುಟಾಗಿದೆ ಹೀಗೆ
          ………………………………………………
          ಮಜ್ಜಿಗೆ ನೀರಿನ ಭಟ್ಟ | ಮೀನನು ತಿಂದೆ ಬಿಟ್ಟ
          ತಿಪ್ಪಾ ಭಟ್ಟರ ಚಂದ ಕೊಡೆ | ಸಾವಿರ ತೂತುಗಳೆಲ್ಲಕಡೆ
          ಮಳೆ ನೀರೆಲ್ಲಾ ಒಳಗಡೆ | ಭಟ್ಟರು ಮಿಂದರು ಕೊಡೆಯೊಳಗೆ

ತಿಪ್ಪಾಭಟ್ಟರ ವಿಡಂಬನೆ. ಬೆಕ್ಕಿನ ವರ್ಣನೆ ಮಂಗ ಮತ್ತು ಹೇಟೆ (ಹೆಣ್ಣು ಕೋಳಿ) ಯ ಮದುವೆ, ಕಲ್ಪನೆಯ ಸೊಗಸು, ಊಟ, ತಿಂಡಿ ಕುರಿತ ಪದ್ಯ, ಗಾದೆ ಮಾತು, ಅನುಕರಣೆ ವಾಚಕ ಪದಗಳಿಂದ ದಿನಕರರ ಮಕ್ಕಳ ಪದ್ಯ ಮಕ್ಕಳ ಮನವನ್ನು ರಂಜಿಸುವುದರೊಂದಿಗೆ ಪ್ರಬದ್ಧರ ಗಮನವನ್ನು ಸೆಳೆದಿದೆ.

ಚುಟುಕು ಬ್ರಹ್ಮ : ಉದ್ದ ಕವನಗಳನ್ನು ರಚಿಸುವುದರಲ್ಲಿ ನನಗೆ ಬೇಸರ. ಶಕ್ತಿಯೂ ಸಾಲದು, ಕವನ ಚಿಕ್ಕದಾದಷ್ಟು ನನ್ನ ಮನಸ್ಸಿಗೆ ತೃಪ್ತಿ ಹೆಚ್ಚು. ನನ್ನಲ್ಲಿ ಸಹನೆ ಕಡಿಮೆ. ನೋವನ್ನಾಗಲಿ ಅನ್ಯಾಯವನ್ನಾಗಲಿ ತಾಳ್ಮೆಯಿಂದ ಸಹಿಸುವುದು ನನಗೆ ಕಷ್ಟ. ಇಂದಿನ ಪ್ರಪಂಚದಲ್ಲಿ ಹಸರಿಸಿದ ವಿದ್ವಾಂಸಕ ವಾತಾವರಣ | ಸಾಮಾಜಿಕ ಅನ್ಯಾಯ ಮುಂತಾದ ಅನಿಷ್ಟಗಳಿಂದ ಮನಸ್ಸು ಉದ್ರೇಕಗೊಳ್ಳುವುದು ಸಹಜ. ಉದ್ರೇಕ ಉಗ್ರವಾದಂತೆ ಕವನದ ಶರೀರಮೂ ಸಂಕುಚಿತವಾಗುತ್ತದೆ ಎಂಬ ವಿಚಾರವನ್ನು ಹೂಗೊಂಚಲು ಕವನ ಸಂಕಲನದ ಪ್ರಸ್ತಾವನೆಯಲ್ಲಿ ದಿನಕರರು ವ್ಯಕ್ತಪಡಿಸಿದ್ದಾರೆ. ದಿನಕರರಿಗೆ ಸಹಜವಾಗಿ ಒಲಿದು ಬಂದ ಪ್ರಾಸ ಅವರ ಚೌಪದಿಗೆ ವರವಾಗಿ ಪರಿಣಮಿಸಿದೆ. ಮೈದಾನ ಮುಟ್ಟಿದೆಲ್ಲ ಬಂಗಾರವಾದಂತೆ, ದಿನಕರರು ಬರೆದಿದ್ದೆಲ್ಲಾ ಚುಟುಕವಾಯಿತು. ಸರ್ವಜ್ಞ, ಡಿ.ವಿ.ಜಿ. ವಿಲಿಯಂ ಬ್ಲೆಕ್ ಇವರೆಲ್ಲರೂ ತನ್ನ ಚೌಪದಿಗೆ ಪ್ರೇರಣೆ ಎಂದ ದಿನಕರರು, ನಾನು ಬರೆದದ್ದು ಡೊಂಕಾಪುರದ ಪದ್ಯ ಎಂದರು.

          ನೀ ಭತ್ತ, ನೀ ರಾಗಿ, ನೀ ಜೋಳ, ಗೋಧಿ
          ಎಲೆ ಚುಟುಕ, ನೀ ನನ್ನ ಜೀವನದ ವ್ಯಾಧಿ
          ನೀ ಬಳ್ಳಿ, ನೀ ಚಿಗುರು, ನೀ ಮೊಗ್ಗು ಹೂವು
          ಎಲೆ ಚುಟುಕ ನೀನ ನನ್ನ ಜೀವನದ ನೋವು
(ದಿನಕರದೇಸಾಯಿ ದಿನಕರನ ಚೌಪದಿ, ಚುಸಂ. ೧೩೮೦, ಪು. ೨೩೬)

ಚುಟುಕ ಅನ್ನ ಹಾಗೂ ಜೀವನದ ವ್ಯಾಧಿಯಾಗಿ ಕಾಡುವ ನೋವಾಗಿ ಅದರಿಂದ ಸಮಾಜದ ವ್ಯಾಧಿಗೆ ಔಷಧವಾಗುವಂತಹ ಚುಟುಕ ಬರೆಸಿಕೊಂಡಿದೆ.

ಇಂದ್ರದೇವನು ಮೊನ್ನೆ ಮಾಡಿ ಟೆಲಿಪೋನು
          ಕೇಳಿದನು ದೇಸಾಯಿ ಹೇಗಿದ್ದಿ ನೀನು?
          ನನ್ನ ರಂಭೆಗೆ ನಿನ್ನ ಚುಟುಕುಗಳ ಹುಚ್ಚು
          ಪ್ರತಿ ಕಳಿಸಿ ಅದು ನನ್ನ ಲೆಕ್ಕಕ್ಕೆ ಹಚ್ಚುಯ್
          (ದಿನಕರದೇಸಾಯಿ ದಿನಕರನ ಚೌಪದಿ, ಚು ಸಂ ೨೫೨ ಪು. ೫೧)

ಸಾಹಿತ್ಯ ಲೋಕದಲ್ಲಿ ಪುಸ್ತಕ ಖರೀದಿಯಲ್ಲಿ ಇರುವ ಉದ್ರಿ ವ್ಯವಹಾರವನ್ನು ದಿನಕರರು ಇಲ್ಲಿ ಪ್ರಭುತ್ವದ ಪ್ರತಿನಿಧಿ ಬಿಂದ್ರನ ಮಾತಿನ ಮೂಲಕ ವಿಡಂಬಿಸಿದ್ದಾರೆ. ಅವರ ಕವನ, ಮಕ್ಕಳ ಪದ್ಯಗಳಲ್ಲಿಯೂ ಚೌಪದಿಯ ಪ್ರವೇಶ ವಿಪುಲವಾಗಿದೆ.

          ಇರುಳಬ್ಬೆ ಬೆಸಲಾಗೆ ಕೂಸು ಮುಂಜಾವು
          ಮುಗುಳು ನಗೆ ಬೀರಿ ಸತ್ಕರಿಸಿದವು ಹೂವು.
          ಗಿಡಬಳ್ಳಿಗಳು ಹಾಡಿದವು ಮಧುರ ಕವನ.
          ಬಾಲರವಿ ಹಣಹಣಕಿ ನೋಡಿದನು ಜನನ.
(ದಿನಕರದೇಸಾಯಿ ದಿನಕರನ ಚೌಪದಿ, ಚುಸಂ ೧೬೫ ಪು. ೩೩)

ಚೌಪದಿಯಲ್ಲಿ ಕಾವ್ಯ ಗುಣವನ್ನು ಇಷ್ಟು ಚೆಂದವಾಗಿ ದುಡಿಸಿಕೊಂಡ ಎಷ್ಟೋ ಚುಟುಕಗಳಿವೆ. ರಾಜಕೀಯದ ವಿಡಂಬನೆ ಅವರ ಚೌಪದಿಗಳಲ್ಲಿ ಅಥೆಂಟಿಕ್ ಆಗಿ ಮೂಡಿಬಂದಿದೆ.

          ನೀನ್ಯಾಕೋ? ನಿನ್ನ ಹಂಗ್ಯಾಕೋ ಹೇ ರಂಗ
          ನಮಗೆ ಬೇಕಾದದ್ದು ಮಂತ್ರಿಗಳ ಸಂಗ
          …………………………………….
          ಮಾರಾಯ ಕುಡಿಕುಡಿದು ರಸ್ತೆಯಲಿ ಬಿದ್ದ
          ಆದರೂ ರಾಜಕಾರಣದಲಿ ಗೆದ್ದ
          ಇವನಾರು ಗೊತ್ತೆ ಕರ್ನಾಟಕದ ಗುಂಡು
          ಇಂದಿರಮ್ಮನ ಕೈಲಿ ರಬ್ಬರಿನ ಚೆಂಡು

ಇಂತಹ ಸಾವಿರಾರು ಚೌಪದಿಗಳನ್ನು ಉದಾಹರಿಸಬಹುದು.

          ಸಹ್ಯಾದ್ರಿಯಾಗಿರಲಿ ಜೀವನದ ಕನಸು
          ಕಾವೇರಿಯಂತಿರಲಿ ಮಾನವನ ಮನಸು
          ಜೋಗ ಜಲಪಾತವಾಗಲಿ ಗೈವ ಕಾರ್ಯ
          ಯಶಗಳಿಸುತಿರಬೇಕು ಕಡಲ ಔದಾರ್ಯ
(ದಿನಕರದೇಸಾಯಿ ದಿನಕರನ ಚೌಪದಿ, ಚುಸಂ ೨೨೨೬ ಪು. ೪೪೬)

ಸೂಭಾಷಿತದಂತಹ ಚೌಪದಿಯನ್ನು ಕಟ್ಟಿಕೊಟ್ಟ ದಿನಕರರು ಚುಟುಕು ಸಾಮ್ರಾಟ. ಚೌಪದಿಯ ಚಕ್ರವರ್ತಿ.

ಕೊಂಕಣ ಕವಿ : ಕೊಂಕಣಿ ದಿನಕರರ ಮಾತೃಭಾಷೆ. ಕೊಂಕಣಿಯಲ್ಲಿ ಅವರು ಬರೆದ ಕವನಗಳು ಕೊಂಕಣಿ ಭಾಷಿಕರ ಮನೆಮಾತಾಗಿ ಅವು ಜನಪದ ಹಾಡಿನ ಜನಪ್ರಿಯತೆ ಪಡೆದುಕೊಂಡಿವೆ. ಅವರು ಬರೆದ ಪಾಳಣೊ(ಜೋಗುಳ), ಶಾಂತೊಲೆಂ ಬಿರಾಡ (ಶಾಂತುವಿನ ಬಿಡಾರ) ಪಾವಸಾಳೊ ದೀಸ (ಮಳೆಗಾಲದ ದಿನ), ಬುಕಲೊ (ಗಂಡು ಬೆಕ್ಕು), ಉನಾಡ ನಾಗೇಶ (ತುಂಟ ನಾಗೇಶ), ಲಾಲ ಬಾವುಟೊ (ಕೆಂಪು ಬಾವುಟ) ಇಂತಹ ಕವನಗಳು ಕಾವ್ಯಗುಣ, ವಿಡಂಬನಾತ್ಮಕತೆ, ನವಿರಾದ ಶೈಲಿಯಿಂದ ಮನಮುಟ್ಟುತ್ತವೆ. ಈ ಎಲ್ಲಾ ಕವಿತೆಗಳು ‘ದಿನಕರಾಲಿ ಕವನಾಂ’ ಎಂಬ ಸಂಕಲನದಲ್ಲಿ ದೇವನಾಗರಿ ಲಿಪಿಯಲ್ಲಿ ಪ್ರಕಟಗೊಂಡಿದೆ. ತಾನು ಬಾಲ್ಯದಲ್ಲಿಯೆ ಕೊಂಕಣಿ ಕವನಗಳನ್ನು ಬರೆದಿದ್ದು, ಅಚ್ಚಿ (ತಾಯಿಯ ತಾಯಿ) ಹಾಡುಗಾರ್ತಿಯಾಗಿದ್ದು ನನ್ನ ಹಾಡಿನ ರಚನೆಗೆ ಅವರು ಪ್ರೇರಣೆಯಾದುದ್ದನ್ನು ದಿನಕರರು ಕವನ ಸಂಕಲನದ ಪ್ರಸ್ತಾವನೆಯಲ್ಲಿ ಬರೆದಿದ್ದಾರೆ.

          ತೂಪ ಲೊಣಯಾವರಿ ಹೋ ಸಂಸಾರ
          ವಾಯಕರ ಜಾತಾ ಖೂಬ ಖಾಲ್ಯಾರ
          ದೇಖೂನ ಆಕ ವಚೂಲ ಕುಳಾರ
          ಉಲಯ ರೆ ಆತಾ ಆಲಯ ರೆ ಭಾಮೋಜೀ

(ತುಪ್ಪ ಹಾಗೂ ಬೆಣ್ಣೆಯ ಮೇಲಿನ ಸಂಸಾರ ಹೆಚ್ಚು ಸೇವಿಸಿದರೆ ಉಪದ್ರವಕ್ಕೆ ಕಾರಣವಾಗುತ್ತದೆ. ಆದ್ದರಿಂದ ಹೀಗೆ ಆಗುವುದು ಬೇಡ. ಇದನ್ನು ತಿಳಿದು ನೋಡು, ಅಕ್ಕ ತವರು ಮನೆಗೆ ಹೋಗಲಿ, ಭಾಮೋಜಿ ಮಾತನಾಡು) ಎಂದು ನೆಂಟ ಭಾವನನ್ನು ಕೆಣಕುವ ರೀತಿ ಸೊಗಸಾಗಿದೆ.

ದಿನಕರರು ಒಬ್ಬ ಗಮನಾರ್ಹ ಕವಿ. ಕಾವ್ಯದ ಎಲ್ಲ ಸಾಧ್ಯತೆಗಳನ್ನು ಜನಹಿತಕ್ಕಾಗಿ ದುಡಿಸಿಕೊಂಡ ಕವಿ ‘ನನ್ನ ದೇಹದ ಬೂದಿ’ ಎಂಬ ಅವರ ಕವನ ದಿನಕರ ಜೀವನಾದರ್ಶವನ್ನು ಕನ್ನಡಿಸಿದೆ.

          ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
          ಇಂದಿಗೀ ನರಜನ್ಮ ಸೇವೆಯೆಂದು
          ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ ದೇವ
          ನಿಜಸೇವೆಗೈಯಲಿಕೆ ಬರಲಿ ಮುಂದು

ದಿನಕರ ದೇಸಾಯಿಯವರಂತೆ ಹೀಗೆ ಬರೆದ ಮತ್ತು ಬದುಕಿನ ಎಷ್ಟು ಜನ ಕವಿಗಳು ನಮಗೆ ಸಿಗುತ್ತಾರೆ. ನೆಹರು ವಿಲ್ ನಾಮೆಯೂ ಇದೆ ಆಶಯವನ್ನು ಹೊಂದಿತ್ತು. ತನ್ನ ಬೂದಿಯನ್ನು ಭತ್ತ ಬೆಳೆಯಲು, ಮೀನು ಪುಷ್ಟಿಗೊಳ್ಳಲು, ಕಮಲ ಅರಳಲು ಬಳಸಿ ಎಂದು ಹೇಳಿದವರು ದಿನಕರರು. ಅವರಿಗೆ ಅವರೇ ಹೋಲಿಕೆ. ‘ನಾನು ಸಾಯಲು ನನ್ನ ಕವನಗಲನ್ನು ಮರೆತು ಬಿಡಿ ಎಂದು ಕವಿ ಹೇಳುತ್ತಾನೆ. ಆದರೆ ಇಂಥ ಮುದ್ದು ಕವನಗಳನ್ನು ಮರೆತು ಬಿಡುವುದು ಹೇಗೆ? ಕವಿಯೇ ಹೇಳಿದಂತೆ ಎಲ್ಲೆಲ್ಲಿಯೂ ದೇವನ ಭಾವ ಪವನ ಬೀಸುತ್ತಿದೆ. ಆ ಕವನದ ಒಂದು ಪಾವನ ಸುಳಿ ಈ ಕಾವ್ಯಮಾಲೆ” ಎಂದು ಡಾ. ವಿ. ಕೆ. ಗೋಕಾಕರು ಕವನ ಸಂಗ್ರಹದ ‘ಕೆಳನುಡಿ’ ಯಲ್ಲಿ ಮರೆಯಬಾರದಂತಹ ಮಾತು ಬರೆದರು.

ಸಂಶೋಧಕ ದಿನಕರ ದೇಸಾಯಿ

ದಿನಕರ ದೇಸಾಯಿಯವರು ತಮ್ಮ ವ್ಯಕ್ತಿತ್ವದ ಎಲ್ಲ ಸಾಧ್ಯತೆಗಳನ್ನು ಸಮರ್ಥವಾಗಿ ದುಡಿಸಿಕೊಂಡರು. ಬಿ.ಎ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವುದರೊಂದಿಗೆ ಕ್ಯಾಂಡಿ ಪಾರಿತೋಷಕವನ್ನು ಪಡೆದುಕೊಂಡರು. ನಂತರ ಅವರು ಎಂ.ಎ ಹಾಗೂ ಎಲ್.ಎಲ್.ಬಿ. ವ್ಯಾಸಂಗವನ್ನು ನಡೆಸಿದರು. ಕಲ್ಯಾಣಿ ಚಾಲುಕ್ಯರ ಆಡಳಿತದಲ್ಲಿಯ ಮಹಾಮಂಡಲೇಶ್ವರರು (Mahamandaleshwaras under the chalukyas of Kalyani) ಎಂಬ ವಿಷಯದ ಮೇಲೆ ಜಗತ್ತಿನ ಶ್ರೇಷ್ಠ ಇತಿಹಾಸ ಪ್ರಾಧ್ಯಾಪಕರಾದ ಫಾದರ ಹೆರಾಸ್ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದರು. ಈ ಮಹಾಪ್ರಬಂಧಕ್ಕೆ ಸೇಂಟ್ ಜೇವಿಯರ್ ರಜತ ಪದಕ ದೊರೆಯಿತು. ಅವರು ಮಂಡಿಸಿದ ಈ ಮಹಾಪ್ರಬಂಧ ಇತಿಹಾಸದ ಅಭ್ಯಾಸಿಗಳಿಗೆ ಒಂದು ಉತ್ತಮ ಆಕರಗ್ರಂಥವಾಗಿದೆ. ಮಹಾಮಂಡಳೇಶ್ವರರ ಇತಿಹಾಸವನ್ನು ಹಿಂದಿನ ಇತಿಹಾಸಕಾರರು ಅಲಕ್ಷಿಸಿದ್ದರು. ಪ್ಲೀಟ್ ಅವರು ಈ ಬಗ್ಗೆ ಅಧ್ಯಯನ ಆರಂಭಿಸಿದ್ದರು. ದಿನಕರರು ಅದನ್ನು ವಿಸ್ತರವಾಗಿ ಅಧ್ಯಯನ ಮಾಡಿದರು. ಶಾಸನಗಳನ್ನು ಆಕರವಾಗಿಟ್ಟುಕೊಂಡು ಅಧ್ಯಯನ ಅಧ್ಯಯನ ನಡೆಸಿದ ದಿನಕರರು ಹಲವಾರು ಹೊಸಸಂಗತಿಗಳನ್ನು ಬೆಳಕಿಗೆ ತಂದಿದ್ದಾರೆ. ನಾಯಕ, ಗೌಡ, ಅರಸು, ಆಳು ಎಂಬ ಪದವನ್ನು ಹೊಸ ದೃಷ್ಟಿಕೋನದೊಂದಿಗೆ ವಿಶ್ಲೇಷಿಸಿದ್ದು ಈ ಕೃತಿಯ ವಿಶೇಷ. ನಾಣ್ಯ, ತೂಕ ಮತ್ತು ಅಳತೆ, ನ್ಯಾಯ ನಿರ್ಣಯ, ಆರ್ಥಿಕ ಸ್ಥಿತಿ, ಸಾಮಾಜಿಕ ಜೀವನ ಆ ಕಾಲದ ಮಾಸ್ತಿಕಲ್ಲು, ವೀರಗಲ್ಲು ಆ ಕಾಲದ ಧರ್ಮವನ್ನು ವಿವೇಚಿಸಲಾಗಿದೆ. ಬಸವಣ್ಣ ಬಿಜ್ಜಳವನ್ನು ಕೊಲೆ ಮಾಡಿದನೆ? ಎಂಬ ಸಂಗತಿಯನ್ನು ಬಸವಣ್ಣನ ವಚನಗಳು ಮೂಲಕವೇ ವಿಶ್ಲೇಷಿಸಿ ಆತನ ಅಹಿಂಸಾತತ್ವವನ್ನು ನಿರೂಪಿಸಿ, ಬಸವಣ್ಣ ಹಿಂಸಾವಾದಿಯಲ್ಲ ಎಂದು ಪ್ರತಿಪಾದಿಸಿದ್ದಾರೆ. ಮಹಾಮಂಡಲೇಶ್ವರರ ಕಾಲದ ಭಾಷೆ, ಸಾಹಿತ್ಯ, ಶಿಕ್ಷಣದ ಸ್ಥಿತಿಗತಿಗಳನ್ನು ಕುರಿತು ಗಂಭೀರವಾದ ಚರ್ಚೆ ನಡೆದಿದ್ದು ಈ ಮಹಾಪ್ರಬಂಧ ದಿನಕರರು ಒಬ್ಬ ಸಂಶೋಧಕ ಎಂಬ ಸಂಗತಿಯನ್ನು ಸ್ಪಷ್ಟಪಡಿಸಿದೆ.

‘ನಾ ಕಂಡ ಪಡುವಣ’ ಎಂಬ ಪ್ರವಾಸ ಕಥನ ದಿನಕರರ ನೇರ, ಸರಳ ಹಾಗೂ ಸುಲಭ ಸಂವಹನಗೊಳ್ಳುವ ಗದ್ಯ ಶೈಲಿಯಿಂದ ಕೂಡಿದೆ. ಸಮಾಜವಾದಿ ನಿಲುವಿನ ಕಾರ್ಮಿಕ ನಾಯಕ, ರಾಜಕೀಯ ಮುತ್ಸದ್ಧಿ ದಿನಕರರು ತಾವು ಕಂಡ ಡೆನ್ಮಾರ್ಕ, ಕೋಪನ್-ಹೆಗನ್ … ಇಂಗ್ಲೆಂಡ್‍ನಲ್ಲಿಯ ನಿಸರ್ಗ, ತಂತ್ರಜ್ಞಾನ, ರಾಜಕೀಯ, ಕಾರ್ಮಿಕರ ಹಿತಾಸಕ್ತಿ, ಮೂಡನಂಬಿಕೆ, ಸಾಮ್ರಾಜ್ಯಶಾಹಿ ಧೋರಣೆಗಲನ್ನು ಮನಮುಟ್ಟುವಂತೆ ಚಿತ್ರಿಸಿದ್ದು, ದಿನಕರರ ಗದ್ಯ ಬರವಣಿಗೆಗೆ ಉತ್ತಮ ನಿದರ್ಶನವಾಗಿದೆ.

ದಿನಕರ ದೇಸಾಯಿಯವರು ಅಧ್ಯಯನ ನಡೆಸಿ, ಬರೆದು ಭಾರತ ಸೇವಕ ಸಮಾಜಕ್ಕೆ ಒಪ್ಪಿಸಿದ ಐದು ವರದಿಗಳು ಇಂಗ್ಲಿಷ್ ಭಾಷೆಯಲ್ಲಿವೆ.

೧. ಅಮಲನಾರದಲ್ಲಿಯ ಪೊಲೀಸ್ ಗೋಲಿಬಾರಿನ ವರದಿ ೨. ಸಾಕ್ಷರತೆಯತ್ತ ಮುಂಬಯಿ ೩. ಬ್ರಿಟನ್ನಿನಲ್ಲಿ ಭಾರತದ ನಾವಿಕರ ನಡುವೆ. ೪. ಬಿಜಾಪುರ ಬರಪರಿಹಾರ ಸಮಿತಿಯ ವರದಿ ೫. ಉತ್ತರ ಕನ್ನಡದಲ್ಲಿ ಗೇಣಿ ಪದ್ಧತಿ. ಈ ವರದಿಗಳು ಸಾಕಷ್ಟು ಅಂಕಿ-ಸಂಕಿಗಳೊಂದಿಗೆ ಸಂಬಂಧಿಸಿದ ಸಂಗತಿಗಳ ವಿವರವನ್ನು ತುಂಬಾ ಶಿಸ್ತು ಹಾಗೂ ಅಚ್ಚುಕಟ್ಟುತನದಿಂದ ಮಂಡಿಸಿವೆ. ಇವು ಕೇವಲ ವರದಿಯಾಗಿರದೆ ಸಾಹಿತಿಯೊಬ್ಬ ಭಾಷಾಶೈಲಿ, ಸಮಾಜ ಸೇವಕನೊಬ್ಬನ ಮಾನವೀಯ ಅಂತಃಕರಣವನ್ನು ನಿರೂಪಿಸಿದ್ದು ವಿಶೇಷ.

ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡ ದಿನಕರನ್ನು ಕಾಣಲು ಬಂದ ಬಂಧುಗಳು ಅವರಿಗೆ ದುಡ್ಡು ಕೊಡುತ್ತಿದ್ದರು. ಈ ದುಡ್ಡಿನಿಂದ ಸಿಹಿ ತಿಂಡಿಯನ್ನು ತಿನ್ನದೆ ಅವರು ಮೇಣಬತ್ತಿಯನ್ನು ಕೊಂಡು ತಂದು ಹಚ್ಚಿ ಸಂತಸಪಡುತ್ತಿದ್ದರು. ಈ ಮೇಣಬತ್ತಿಯನ್ನು ಹಚ್ಚುವ ಸುಳಿಯೇ ಅವರಲ್ಲಿ ದೀಪ್ತವಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹಳ್ಳಿಗಾಡಿನಲ್ಲಿ ಜನತಾ ವಿದ್ಯಾಲಯಗಳ ಮಾಲೆಯನ್ನು ಹೆಣೆದರು. ಅವು ಇಂದು ಎಷ್ಟೋ ಕುಟುಂಬದ ಯುವಕರಿಗೆ ಬೆಳಕಿನ ದಾರಿಯನ್ನು ತೋರಿಸಿವೆ. ಮೇಣಬತ್ತಿಯನ್ನು ಹಚ್ಚಿದ ದಿನಕರರು ತಾವು ಮೇಣಬತ್ತಿಯಂತೆ ಬೆಳಕನ್ನು ಬೀರುತ್ತಾ ಕರಗಿ ಹೋದರು. ಮೇಣಬತ್ತಿ ತನ್ನನ್ನು ಸುಟ್ಟುಕೊಳ್ಳುತ್ತಾ ಇತರರಿಗೆ ಬೆಳಕು ನೀಡುತ್ತದೆ. ಶಿಕ್ಷಕನ ಮಗನಾದ ದಿನಕರ ದೇಸಾಯಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಶಿಕ್ಷಣದ ಕುರಿತು ಪುಸ್ತಕ, ಲೇಖನ, ಚೌಪದಿಯನ್ನು ಬರೆದರು. ಲೋಕ ಶಿಕ್ಷಕರಾದರು.

          ಹಳ್ಳಿಯಲಿ ಕಟ್ಟುವನು | ದಿಲ್ಲಿಯಲಿ ಕುಟ್ಟುವನು
          ಚೌಪದಿಯ ಸಾಲಡಿಗೆ | ಕೆದಕು ಮೆಟ್ಟುವನು
          ಎಂದು ಕವಿ ವಿ.ಜಿ.ಭಟ್ಟರು ದಿನಕರರ ಬಗ್ಗೆ ಬರೆದರು.
          ನಿಂದಿರೆ ದಂಡಾಧೀಶ ಕುಳ್ಳಿರೆ ಮಂತ್ರಿ
          ತೊಡಂಕೆತೆ ಕವಿ ನಾಳ್ಪ್ರಭು ಜನಾರ್ಧನದೇವಂ

ಎಂದು ಜನ್ನ ಕವಿ ತನ್ನ ಕುರಿತು ಹೇಳಿಕೊಂಡಿದ್ದಾನೆ. ಹಾಗೆ ದಿನಕರ ದೇಸಾಯಿ ನಿಂತುಕೊಂಡರೆ ರೈನಾಯಕ, ಕಾರ್ಮಿಕರ ಮುಂದಾಳು, ಕುಳಿತುಕೊಂಡಿದ್ದರೆ ಸಂಸದೀಯ ಪಟು, ಪತ್ರಿಕೋದ್ಯಮಿ, ಶಿಕ್ಷಣ ಸಂಸ್ಥೆಗಳ ರೂವಾರಿ, ತೊಡಗಿಸಿಕೊಂಡರೆ ಕವಿ, ಸಂಶೋಧಕಮ್ ಚಿಂತನಶೀಲ.

ಒಳಿತು ಮಾಡಿದರೆ ಅದು ಪುಣ್ಯಗಳ ರಾಶಿ.
          ಕೆಡಕು ಮಾಡಿದರೆ ಅದು ಪಾಪ ಬಿಕನಾಸಿ.
          ಯಾವ ದೇವರ ಪೂಜೆ ಮಾಡಿದರು ವ್ಯರ್ಥ.
          ಜನಸೇವೆಯೇ ಪೂಜೆ, ಇದುವೆ ಪುರುಷಾರ್ಥ.
          (ದಿನಕರದೇಸಾಯಿ ದಿನಕರನ ಚೌಪದಿ, ಚುಸಂ ೫೬೨ ಪು. ೧೦೯)

ದಿನಕರರು ಬರೆದ ಈ ಚೌಪದಿ ಅವರ ಜೀವನ ದೃಷ್ಟಿಯ ಅಭಿವ್ಯಕ್ತಿಯೂ ಹೌದು. ಸದಾಕಾಲ ಜನಹಿತದ ಕಾರ್ಯವನ್ನು ಮಾಡುತ್ತ, ಜನಸೇವೆಯನ್ನು ಪೂಜೆ ಎಂದು ಭಾವಿಸಿದವರು ದಿನಕರ ದೇಸಾಯಿ. ಜನತಾ ವಿದ್ಯಾಲಯ, ಜನತಾ ಪ್ರಕಾಶನ, ಜನ ಮುದ್ರಣ ಜನಸೇವಕ, ಜನತಾಸ್ಪೋರ್ಸ. ಹೀಗೆ ಜನರ ಹೆಸರಿನಲ್ಲಿಯೇ ಸೇವಾಕಾರ್ಯ ಆರಂಭಿಸಿದರು ಅವರು. ಕನ್ನಡಕ್ಕೊಬ್ಬನೆ ದಿನಕರ. ಇಂದಿಗೂ ಅವರಂತೆ ಯಾರು ಹಾಡಿಲ್ಲ ಎಂದರು ಡಾ.ವಿ.ಕೆ. ಗೋಕಾಕ. “ಶ್ರೀ ದಿನಕರ ದೇಸಾಯಿಯವರ ಜೀವನದಲ್ಲಿ ಅರಳಿದ ಎರಡು ಮಂದಾರಗಳು ಇವು; ಒಂದು ಕಾವ್ಯ ಇನ್ನೊಂದು ದೇಶ ಸೇವೆ, ವಿನಯದಿಂದ ಬಾಗಿ ಬಳಕುವ ಲತೆ ಅದು, ಅದಕ್ಕೆ ವೃಥಾಡಂಬರ ಬೇಡ ಮೈತುಂಬ ಹೂ ಬೇಡ, ಬರಿ ಎರಡು ಹೂಗಳಲ್ಲಿ ತನ್ನ ಅಮೃತ ತತ್ವವನ್ನು ಅರಳಿಸಿ ಅದು ಕೃತ ಕೃತ್ಯವಾಗುತ್ತಲಿದೆ.” ಡಾ. ಗೋಕಾಕರ ಈ ಕೆಳ ನುಡಿ ದಿನಕರರ ಜನಸೇವೆ ಮತ್ತು ಕವಿತ್ವದಿಂದೊಡಗೂಡಿದ ವ್ಯಕ್ತಿತ್ವಕ್ಕೆ ಬರೆದ ಮುನ್ನುಡಿಯೂ ಹೌದು. ದಿನಕರ ದೇಸಾಯಿ, ಕಡಲತೀರದ ದ್ರೋಣ. ಅವರಿಗೆ ಅವರೇ ಹೋಲಿಕೆ “ಡಾ. ದಿನಕರ ದೇಸಾಯಿಯವರ ಬರಹ ದೊಡ್ದದು. ಬದುಕು ಅದಕ್ಕೂ ದೊಡ್ದದು. ಅವರ ಚರಿತ ಚಾರಿತ್ರ್ಯ ಎಲ್ಲ ಸದಾ ಸ್ವಾರಸ್ಯದ ಸ್ಪೂರ್ತಿಯ ಸೆಲೆ ” ಡಾ. ಗೌರೀಶ ಕಾಯ್ಕಿಣೆ ‘ದಿನಕರ ದೇಸಾಯಿ ಬದುಕು-ಬರಹ, ಮಹಾಪ್ರಬಂಧಕ್ಕೆ (ಡಾ. ಶ್ರೀಪಾದ ಶೆಟ್ಟಿ) ಬರೆದ ಬೆನ್ನುಡಿ, ಅವರ ಜೀವನ ಮತ್ತು ಸಾಧನೆಗೆ ಹಿಡಿದ ಕನ್ನಡಿಯೂ ಹೌದು. ದಿನಕರ ಎಂದರೆ, ಅರಿವಿನ ಬೆಳಕು, ಹೋರಾಟದ ಪಂಜು, ಅಕ್ಷರ ಸೂರ್ಯ.