ವಯಸ್ಸಾಗುವುದು ಕವಿಗೆ
ಕವಿತೆಗಳಿಗಲ್ಲ.
ಹಲ್ಲು ಹೋಗಿ ಬೆನ್ನು ಬಾಗಿ
ಕವಿ ಸಂಜೆಯಾಕಾಶವನ್ನು ಹೊದ್ದು
ಕೆಮ್ಮುತ್ತ ಮೂಲೆಗೆ ಮುದುರಿ ಕೂತಾಗಲೂ
ಕವಿತೆಯ ಮುಖದಲ್ಲಿ
ಆಯಾಸದ ಗುರುತೇ ಇಲ್ಲ !

ಆಡುತ್ತವೆ ಕವಿತೆಗಳು
ಕವಿಯ ಸುತ್ತ ಅವರಿವರ ಜತೆಯಲ್ಲಿ
ಕೈ ಕೈ ಹಿಡಿದು ಕಿಲಕಿಲ ನಗುತ್ತ,
ಮಧುಮಾಸದ ಮರಗಳಂತೆ, ಸದಾ
ಹೊಚ್ಚ ಹೊಸದಾಗುತ್ತ
ಹತ್ತು ಕಡೆ ಹಾಡುವ ಹಕ್ಕಿಗಳ ಕೊರಳಲ್ಲಿ
ರಾಗದ ಚಿಲುಮೆಯಾಗುತ್ತ.

ಕಾಡುತ್ತವೆ ಕವಿತೆಗಳು
ವಿಮರ್ಶಕರ ತಲೆಗಳಲ್ಲಿ,
ತಕ್ಕಡಿಗಳಲ್ಲಿ ಏರಿಳಿದೂ
ತಪ್ಪಿಸಿಕೊಂಡು ಓಡುತ್ತವೆ
ಹರಿಣಿಯ ಗತಿಯಲ್ಲಿ.

ಬೆಳೆಯುತ್ತವೆ ನಿಜವಾದ ಕವಿತೆಗಳು
ಸದಾ ಪ್ರಬುದ್ಧರ ಮನಸ್ಸಿನಲ್ಲಿ
ಅನೇಕಾರ್ಥಗಳ ಹೊಳೆಯಿಸುತ್ತ
ಅಪ್ಸರೆಯರ ಸೊಬಗಲ್ಲಿ,
ಒಂದೇ ಸಮನೆ ರೆಕ್ಕೆಬಿಚ್ಚಿ ಹಾರುತ್ತವೆ
ಮುಗಿಯದ ಬಯಲಲ್ಲಿ.