ಕುವೆಂಪು ಅವರು ಶ್ರೀಮಂತಗೊಳಿಸಿದ ಹೊಸಗನ್ನಡದ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಚಿಂತನೆಯೂ ಒಂದು. ಈ ಸಾಹಿತ್ಯಚಿಂತನೆ ಅವರಲ್ಲಿ ಎರಡು ಕವಲುಗಳಾಗಿ ಕಾಣಿಸಿಕೊಂಡಿದೆ. ಮೊದಲನೆಯದು “ಸಾಹಿತ್ಯ ವಿಮರ್ಶೆ”, ಎರಡನೆಯದು “ಕಾವ್ಯಮೀಮಾಂಸೆ”. ವಾಸ್ತವವಾಗಿ ಈ ಎರಡೂ ಒಂದಕ್ಕೊಂದು ಪೂರಕವಾದರೂ, ಕಾವ್ಯಮೀಮಾಂಸೆ ಮುಖ್ಯವಾಗಿ ಕವಿಯ ಸೃಜನಶೀಲತೆಯ ಸ್ವರೂಪವನ್ನೂ, ಅದು ಭಾಷೆಯಲ್ಲಿ ಸಂಭವಿಸುವ ಪ್ರಕ್ರಿಯೆಯನ್ನೂ, ಅದರ ಉದ್ದೇಶ ಹಾಗೂ ನಿಯೋಗಗಳನ್ನು ಕುರಿತ ವಿಶ್ಲೇಷಣೆ ಎನ್ನುವುದಾದರೆ, ಸಾಹಿತ್ಯ ವಿಮರ್ಶೆ, ಹಾಗೆ ಕವಿ ಅಥವಾ ಸಾಹಿತಿಯಿಂದ ನಿರ್ಮಿತಿಯಾದ ಸಾಹಿತ್ಯವನ್ನು ಸೂಕ್ಷ ಸಂವೇದನಾಶೀಲನಾದ ಸಹೃದಯನು, ತಾನು ಅರ್ಥಮಾಡಿಕೊಳ್ಳುವ ಮತ್ತು ಸಾಹಿತ್ಯಾಸಕ್ತರಿಗೆ ಪರಿಚಯ ಮಾಡಿಕೊಡುವ ವಿವೇಚನಾ ಮೂಲವಾದ ಒಂದು ಚಟುವಟಿಕೆ ಎನ್ನಬಹುದು. ಇವುಗಳಲ್ಲಿ ಸಾಹಿತ್ಯ ವಿಮರ್ಶೆ ಎನ್ನುವುದು, ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ಸಾಹಿತ್ಯಾಧ್ಯಯನದ ಒಂದು ಶಿಸ್ತಾಗಿ ಮತ್ತು ಸಾಹಿತ್ಯದ ಒಂದು ಪ್ರಮುಖವಾದ ಪ್ರಕಾರ ಎಂಬಂತೆ ತೋರಿದರೂ, ಸಾಹಿತ್ಯ ವಿಮರ್ಶೆ ನಿಜವಾಗಿಯೂ ಸದೃಢವೂ ಮೌಲಿಕವೂ ಆಗುವುದು, ಅದಕ್ಕೆ ಬೇರು-ಬುಡದಂತೆ ಇರುವ “ಕಾವ್ಯಮೀಮಾಂಸೆ” ಯ ತಿಳಿವಳಿಕೆಯಿಂದಲೇ.

ಕುವೆಂಪು ಅವರ ಕಾವ್ಯ ಮೀಮಾಂಸೆ ಹಾಗೂ ಸಾಹಿತ್ಯ ವಿಮರ್ಶೆಯ ಬರೆಹಗಳು, ಪ್ರಾಚ್ಯ-ಪಾಶ್ಚಾತ್ಯ ಸಾಹಿತ್ಯ ಕೃತಿಗಳ ಮತ್ತು ಕಾವ್ಯಮೀಮಾಂಸೆಯ ಆಳವಾದ ಅಧ್ಯಯನದ ತಿಳಿವಿನಿಂದ, ಯೋಗವಿಜ್ಞಾನ, ಮನೋವಿಜ್ಞಾನ ತತ್ವಶಾಸ್ತ್ರಾದಿಗಳ ಅರಿವಿನಿಂದ, ಮತ್ತು ಮೂಲತಃ ಪ್ರತಿಭಾವಂತನಾದ ಕವಿಗೆ ಮಾತ್ರ ಗೋಚರವಾಗುವ ಕಲಾರಹಸ್ಯ ಹಾಗೂ ಹೊಳಹುಗಳಿಂದ ಸಮನ್ವಿತವಾದ ಒಂದು ಬಗೆಯ ಚಿಂತನ ದೀಪ್ತಿಯಿಂದ ಹೊಚ್ಚ ಹೊಸವಾಗಿವೆ. ಮುಖ್ಯವಾಗಿ ಗಮನಿಸಬೇಕಾದ ಮಾತೆಂದರೆ, ಒಬ್ಬ ಪ್ರತಿಭಾವಂತನಾದ ಕವಿ, ಸಾಹಿತ್ಯವನ್ನು, ಸಾಹಿತ್ಯ ನಿರ್ಮಿತಿಯ ಸ್ವರೂಪವನ್ನು ಕುರಿತು ಮಾತನಾಡುವ ರೀತಿಗೂ, ಅದೇ ವಿಷಯವನ್ನು ಕುರಿತು ಒಬ್ಬ ಶಾಸ್ತ್ರಕೋವಿದನಾದವನು ಮಾತನಾಡುವ ರೀತಿಗೂ ವ್ಯತ್ಯಾಸವಿದೆ. ಯಾಕೆಂದರೆ ಒಂದು ಹಂತದಲ್ಲಿ ಕ್ರಿಯಾಶೀಲವಾಗುವ ಅವರ ಸೃಜನ ಪ್ರತಿಭೆ, ಮತ್ತೊಂದು ಹಂತದಲ್ಲಿ ಚಿಂತನಶೀಲ ಪ್ರತಿಭೆಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಅವರ ಸಾಹಿತ್ಯ ನಿರ್ಮಿತಿ ಮತ್ತು ಸಾಹಿತ್ಯ ಚಿಂತನೆಯ ಬರೆಹಗಳು ಸಾಬೀತು ಪಡಿಸುತ್ತವೆ.

ಕನ್ನಡ ನವೋದಯದ ಸಂದರ್ಭದಲ್ಲಿ ಕಾವ್ಯಲೋಕವನ್ನು ಪ್ರವೇಶಿಸಿದ ಕುವೆಂಪು ಒಬ್ಬ ಕವಿಯಾಗಿ ಹಾಗೂ ಸಾಹಿತ್ಯದ ವಿದ್ಯಾರ್ಥಿಯಾಗಿ ಪಡೆದುಕೊಂಡ ಇಂಗ್ಲಿಷ್ ಹಾಗೂ ಕನ್ನಡ ಸಾಹಿತ್ಯದ ತಿಳಿವಳಿಕೆಯಲ್ಲಿ ಮೊದಲು ಅವರ ಕಾವ್ಯಚಿಂತನೆಗಳನ್ನು ರೂಪಿಸಿದ್ದು ಪಶ್ಚಿಮದ ರೊಮ್ಯಾಂಟಿಕ್ ಕವಿಗಳೇ ಎನ್ನಬಹುದು. ಕುವೆಂಪು ಷೆಲ್ಲಿಯ ಡಿಫೆನ್ಸ್ ಆಫ್ ಪೊಯಿಟ್ರಿಯನ್ನು “ಕವಿಯ ಸಮರ್ಥನೆ” ಎಂದು ಭಾರತೀಯ ಅದರಲ್ಲೂ ಕನ್ನಡದ ಸಂದರ್ಭಕ್ಕೆ ಹೊಂದುವಂತೆ ೧೯೩೦ರ ಕಾಲದಲ್ಲಿ ಅನುವಾದಮಾಡಿದರೆನ್ನುವುದನ್ನು ಈ ಹಿನ್ನೆಲೆಯಿಂದ ಗುರುತಿಸಬೇಕು. ಅವರಿಗೆ ತುಂಬ ಪ್ರಿಯವಾದ ಪಾಲ್ಗ್ರೇವ್ ಸಂಪಾದಿಸಿದ “ಗೋಲ್ಡನ್ ಟ್ರೆಜರಿ” ಸಂಕಲನದೊಳಗಿನ, ವರ್ಡ್ಸ್ವರ್ತ್, ಕೋಲ್ರಿಜ್, ಮಿಲ್ಟನ್, ಮೊದಲಾದ ಕವಿಗಳ ಕವಿತೆಗಳಂತೆಯೇ, ಆ ಕವಿಗಳ ಕಾವ್ಯ ಕಲ್ಪನೆಗಳೂ ಗಾಢವಾಗಿ  ಅವರ ಚಿಂತನೆಗಳನ್ನು ಪ್ರಭಾವಿಸಿದ್ದು ಸಹಜವಾಗಿದೆ. ಜತೆಗೆ, ೧೯೨೭ರ ವೇಳೆಗೆ ಕನ್ನಡ ಎಂ.ಎ. ತರಗತಿಗಳನ್ನು ಸೇರಿದ ಕುವೆಂಪು ಅವರಿಗೆ ಪ್ರೊ. ಎ.ಆರ್. ಕೃಷ್ಣಶಾಸ್ತ್ರಿ, ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ ಇಂಥ ಅಧ್ಯಾಪಕರ ಮೂಲಕ ಪರಿಚಯವಾಗುತ್ತಿದ್ದ ಪ್ರಾಚೀನ ಕನ್ನಡ ಸಾಹಿತ್ಯದ ಪಂಪ-ರನ್ನ-ಕುಮಾರವ್ಯಾಸಾದಿಗಳ ಸಾಹಿತ್ಯ ಪರಂಪರೆಯೂ, ಭಾರತೀಯ ಕಾವ್ಯ ಮೀಮಾಂಸೆಯ ಆಲಂಕಾರಿಕರ ಚಿಂತನೆಗಳೂ ಮತ್ತು ಈ ವೇಳೆಗಾಗಲೆ ಏಕಾಂಗ ಸಾಹಸಿಯಾಗಿ, ಪಶ್ಚಿಮದ ಸಾಹಿತ್ಯ, ತತ್ವಜ್ಞಾನ, ಮನೋವಿಜ್ಞಾನಾದಿಗಳನ್ನು ಪರಿಚಯ ಮಾಡಿಕೊಂಡಿದ್ದರ ಹಿನ್ನೆಲೆಯೂ ಒಟ್ಟಾಗಿ ಸೇರಿ ಕುವೆಂಪು ಅವರ ಕಾವ್ಯಚಿಂತನೆ ತನ್ನದೇ ಆದ ಅಭಿವ್ಯಕ್ತಿಯನ್ನು ಪಡೆದುಕೊಳ್ಳಲು ಹವಣಿಸುತ್ತಿತ್ತು–ಎಂಬುದನ್ನು ಗುರುತಿಸಬಹುದು. ಅದರಲ್ಲಿಯೂ ೧೯೨೮ ರಿಂದ ೧೯೩೭ರ ಕಾಲಮಾನದೊಳಗಿನ ಈ ಹತ್ತು ವರ್ಷಗಳಲ್ಲಿ ಅವರು ಮಾಡಿದ ನಾಲ್ಕು ಉಪನ್ಯಾಸಗಳನ್ನು (ಸಾಹಿತ್ಯಪ್ರಚಾರ ೧೯೪೬) ಗಮನಿಸಿದರೆ,[1] ಕುವೆಂಪು ಕಾವ್ಯಚಿಂತನೆಯ ಮೊದಲ ಘಟ್ಟವೊಂದು ಪರಿಚಯವಾಗುತ್ತದೆ.

ಈ ಹಂತದ ಕುವೆಂಪು ಅವರ ಕವಿಕಾವ್ಯ ಪರವಾದ ಚಿಂತನೆಗಳಲ್ಲಿ, ಅವರ ತಾರುಣ್ಯ ಸಹಜವಾದ ಉತ್ಸಾಹ ಆವೇಶ ಆದರ್ಶಗಳು ಅಭಿವ್ಯಕ್ತವಾಗಿರುವಂತೆಯೆ, ಕವಿಗಿರಬೇಕಾದ ಪರಂಪರೆಯ ಪ್ರಜ್ಞೆ, ಅವನು ನಿಜವಾಗಿಯೂ ಆಧುನಿಕನಾಗಬೇಕಾದರೆ ಅವನಿಗಿರಬೇಕಾದ ವಿವಿಧ ಜ್ಞಾನ ಶಾಖೆಗಳ ಹಾಗೂ ಸಮಕಾಲೀನ ಜಾಗತಿಕ ವಿದ್ಯಮಾನಗಳ ಅರಿವು ಇತ್ಯಾದಿಗಳನ್ನು ಕುರಿತ ವಿಚಾರಗಳೂ ಪ್ರಸ್ತಾಪಿತವಾಗಿವೆ. ಕವಿಯನ್ನು ಕುರಿತ ಕುವೆಂಪು ಅವರ ಕಲ್ಪನೆ ಭಾರತೀಯ ಕಾವ್ಯಮೀಮಾಂಸೆ ಮತ್ತು ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಅಭಿಪ್ರಾಯಗಳಿಗಿಂತ ಭಿನ್ನವಾಗೇನೂ ಇಲ್ಲ. ‘ಯಾವಾತನು ತನ್ನ ಪುಣ್ಯವಶದಿಂದ ಅಂತರಾತ್ಮನ ದಿವ್ಯವಾಣಿಯ ಮಂಜುಳಗಾನಕ್ಕೆ ನಿಮಿತ್ತ ಮಾತ್ರನಾದ ಕೊಳಲಾಗುತ್ತಾನೋ ಆತನೇ ಕವಿ’ (ಸ.ಗ. ಸಂ.೧. ಪು.೧೦) ‘ಯಾವಾತನು ಸೃಷ್ಟಿಯ ಸೌಂದರ್ಯದಿಂದ ಮೋಹಿತನಾಗಿ ಮೈಮರೆತು ಅದರಲ್ಲಿ ತಲ್ಲೀನನಾಗಿ, ಆ ರಹಸ್ಯಲೋಕದ ಸಂದೇಶಗಳನ್ನು ಹೊರಗೆಡಹಲು ಶಕ್ತನಾಗುತ್ತಾನೋ ಆತನೆ ಕವಿ’ (ಸ.ಗ. ಸಂ.೧. ಪು.೧೧) ‘ಉತ್ತಮ ಕವಿ ಬೇಸರ ಪರಿಹಾರ ಮಾಡುವ ವಿದೂಷಕನಲ್ಲ’. (ಸ.ಗ. ಸಂ.೧. ಪು.೨೯) ‘ಉತ್ತಮ ಕವಿಗೆ ಜೀವನದರ್ಶನ ವಿರಬೇಕು. ತಪಸ್ಸಿನಿಂದಲೂ ಧ್ಯಾನದಿಂದಲೂ ಅವಲೋಕನದಿಂದಲೂ ಮಾತ್ರವೆ ಅದು ಸಾಧ್ಯವಾಗುತ್ತದೆ’. ‘ಅವನು ಪ್ರತಿಭಾಶಾಲಿಯಾಗಿ ರಸಋಷಿಯಾಗಬೇಕು. ದರ್ಶನ ಸಂಪಾದನೆ ಮಾಡಬೇಕು.’ (ಸ.ಗ. ಸಂ.೧. ಪು. ೨೮) ‘ಪೂರ್ಣದೃಷ್ಟಿಯಿಂದಲೇ ಶ್ರೇಯಸ್ಸು, ಪೂರ್ಣದೃಷ್ಟಿಯೆ ನಿಜವಾದ, ಸರ್ವೋತ್ಕೃಷ್ಟವಾದ ದರ್ಶನ’ (ಸ.ಗ. ಸಂ.೧. ಪು.೨೭) ‘ಕಲಾಸುಂದರಿಯ ಅವತಾರಗಳಲ್ಲಿ ಸರ್ವಶ್ರೇಷ್ಠವಾದುದೆಂದರೆ ಕವಿತೆ.’ (ಸ.ಗ. ಸಂ.೧ ಪು.೬೮೨)– ಮೊದಲಹಂತದ, ಕುವೆಂಪು ಅವರ ಕವಿಕಾವ್ಯ ಪರವಾದ ಈ ಉಜ್ವಲವಾದ ಉದ್ಗಾರಗಳು, ಅಂದಿನ ನವೋದಯ ಸಂದರ್ಭದ ಉತ್ಸಾಹ ಆವೇಶಗಳನ್ನು ಪ್ರತಿಬಿಂಬಿಸುವಂತೆ ತೋರಿದರೂ, ವಿಮರ್ಶೆಯ ಭಾಷೆಯೊಳಕ್ಕೆ, ದರ್ಶನ, ಪೂರ್ಣದೃಷ್ಟಿ, ರಸಋಷಿ, ತಪಸ್ಸು, ಧ್ಯಾನ–ಇತ್ಯಾದಿ ಪದಗಳು ಸೇರಿಕೊಂಡಿರುವುದರ ಹಿನ್ನೆಲೆಗೆ ಇರುವ ಕುವೆಂಪು ಅವರ ಮನೋಧರ್ಮವನ್ನು ಗುರುತಿಸಬಹುದು. ಶ್ರೀರಾಮಕೃಷ್ಣಾಶ್ರಮವಾಸಿಯಾಗಿದ್ದ ಕುವೆಂಪು, ಭಾರತೀಯ ವೇದಾಂತದ ಪರಿಭಾಷೆಯಲ್ಲಿ ಕವಿ-ಕಾವ್ಯ ವಿಚಾರಗಳನ್ನು ಕುರಿತು ಮಾತನಾಡಿದ್ದು ಆಶ್ಚರ್ಯವೇನೂ ಅಲ್ಲ. ಅದರಲ್ಲೂ ಕುವೆಂಪು ಮುಂದೆ ಬೆಳೆಯಿಸಿದ ದರ್ಶನವಿಮರ್ಶೆಯ ಸಂದರ್ಭದಲ್ಲಿ, ಈ ಕಾಲದಲ್ಲಿ ವಿಮರ್ಶೆಯೊಳಗೆ ಪ್ರವೇಶಿಸಿದ ‘ಪೂರ್ಣದೃಷ್ಟಿ’ ಮತ್ತು ‘ದರ್ಶನ’ ಎಂಬ ಪಾರಿಭಾಷಿಕಗಳು ಎಂತಹ ವ್ಯಾಖ್ಯಾನ ಹಾಗೂ ಅರ್ಥಪುಷ್ಟಿಯನ್ನು ಪಡೆದುಕೊಂಡವೆಂಬುದನ್ನು ಮುಂದೆ ಪರಿಶೀಲಿಸಲಾಗಿದೆ. ೧೯೨೮ನೆ ಡಿಸೆಂಬರ್ ೧೫ರಂದು ಅವರಿನ್ನೂ ಕನ್ನಡ ಎಂ.ಎ. ತರಗತಿಯ ವಿದ್ಯಾರ್ಥಿಯಾಗಿದ್ದಾಗ–ವಿದ್ಯಾರ್ಥಿ ಕವಿಸಮ್ಮೇಳನದ ಅಧ್ಯಕ್ಷರಾಗಿ, ಸೆಂಟ್ರಲ್ ಕಾಲೇಜಿನಲ್ಲಿ ಮಾಡಿದ ಉಪನ್ಯಾಸದಲ್ಲಿ ಮುಖ್ಯವಾಗಿ ಪ್ರಸ್ತಾಪಿಸುವುದು; ಹೊಸಕಾಲದ ಬರೆಹಗಾರರಿಗೂ ಮತ್ತು ಅವರ ಹಿಂದೆ ಇರುವ ಪರಂಪರೆಗೂ ಇರ ಬೇಕಾದ ಸಂಬಂಧವನ್ನು ಕುರಿತು. ಅವರು ಹೇಳುತ್ತಾರೆ: ‘ಹೊಸತೆಂದರೆ ಏನು? ಹಳೆಯದರ ನಿಷೇಧವಲ್ಲ, ಹಳತಿಲ್ಲದ ಹೊಸತು ಸೃಷ್ಟಿಯಲ್ಲಿ ಎಲ್ಲಾದರೂ ಉಂಟೆ?…. ನಾವು ಹಳೆಯದನ್ನು ಹಳಿದು ಕ್ಷಣಕಾಲವೂ ಬದುಕಲಾರೆವು.’ (ಸ.ಗ. ಸಂ.೧ ಪು.೮) ‘ಹೊಸತೆಂಬುದು ಹಳೆಯದನ್ನು ತ್ಯಜಿಸಿ ನಿಲ್ಲುವುದೆಂದು ಯಾರೂ ತಿಳಿಯಬಾರದು… ಸನಾತನದ ಸಾರವನ್ನು ಹೀರಿಕೊಂಡೇ ನೂತನ ಬೆಳೆಯಬೇಕು. ವರ್ತಮಾನ ಕಾಲ ಭೂತ ಕಾಲದ ನೆಲೆಗಟ್ಟಿನ ಮೇಲೆ ನಿಂತಿದೆ. ಇಂದು ನಿನ್ನೆಗೆ ಋಣಿ, ನಾಳೆ ಇಂದಿಗೆ ಋಣಿ. ಒಂದನ್ನೊಂದು ಎಂದಿಗೂ ತ್ಯಜಿಸಲಾರವು. ಹಾಗೆಯೇ ಇಂದಿನ ಸಾಹಿತ್ಯ ಹಿಂದಿನ ಸಾಹಿತ್ಯವನ್ನು ಎಷ್ಟು ಮಾತ್ರಕ್ಕೂ ಅಲ್ಲಗಳೆಯುವುದಿಲ್ಲ’ (ಸ.ಗ. ಸಂ.೧ ಪು.೧೯). ತಮ್ಮ ಸಾಹಿತ್ಯದ ಪ್ರೇರಣೆಯನ್ನು ಈ ಮೊದಲೆ ಇಂಗ್ಲಿಷ್ ಸಾಹಿತ್ಯ ಪರಂಪರೆಯಿಂದಲೇ ಪಡೆದುಕೊಂಡು ‘ಇಂಗ್ಲಿಷ್ ಕವಿ’ಯಾಗಿ ರೂಪುಗೊಂಡು, ಜೆ.ಎಚ್. ಕಸಿನ್ಸ್ ಅವರನ್ನು ಭೆಟ್ಟಿಯಾಗಿ, ಅವರ ಸಲಹೆಯಂತೆ ಕನ್ನಡದ ಕಡೆ ತಿರುಗಿದ ಕುವೆಂಪು, ಈ ವಿದ್ಯಾರ್ಥಿ ಕವಿ ಸಮ್ಮೇಳನದ ವೇದಿಕೆಯಲ್ಲಿ ತಾವು ಇನ್ನು ಮುಂದೆ ತಮ್ಮ ದೇಶದ ಪ್ರಾಚೀನ ಕವಿಪರಂಪರೆಯೊಂದಿಗೆ ಏರ್ಪಡಿಸಿಕೊಳ್ಳಬೇಕಾದ ಸಂವಾದದ ಅಗತ್ಯವನ್ನು ಕುರಿತು ಮಾತನಾಡಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ತಾ. ೩೧.೩.೧೯೩೭ರಂದು ಮೈಸೂರಿನ ಸಾಹಿತ್ಯ ಸಂಘದಲ್ಲಿ ‘ಹೊಸಸಾಹಿತ್ಯ ಹೊಸದೃಷ್ಟಿ’ ಎಂಬ ವಿಷಯವನ್ನು ಕುರಿತು ಮಾತನಾಡಿದಾಗ ಇದೇ ಚಿಂತನೆ ಇನ್ನೂ ಮುಂದುವರಿದು, ‘ರಸಋಷಿಯಾದ ಕವಿಯು ಅರ್ವಾಚೀನದ ಶಿಖರೇಶ್ವರದಲ್ಲಿ ನಿಂತು ತನ್ನೊಂದು ಕೈಯನ್ನು ಮಸುಗುಗತ್ತಲೆ ಕವಿದ ಪ್ರಾಚೀನತೆಯ ಗೋರಿಯೊಳಗೆ ನೀಡಿ ಹುಡುಕುತ್ತಿರುತ್ತಾನೆ. ಮತ್ತೊಂದು ಕೈಯನ್ನು ಅನಂತತೆಯ ಗಗನ ನೀಲಿಮೆ ತುಂಬಿರುವ ಭವಿಷ್ಯತ್ತಿನ ಗರ್ಭದ ಕಡೆ ಚಾಚಿರುತ್ತಾನೆ’ (ಸ.ಗ. ಸಂ.೧. ಪು.೪೦)–ಎನ್ನುವ ಕಾವ್ಯ ಪ್ರತಿಮೆಯೊಂದರಲ್ಲಿ ಅಭಿವ್ಯಕ್ತಗೊಂಡಿದೆ. ಇದರೊಂದಿಗೆ ಕುವೆಂಪು ಪ್ರಸ್ತಾಪಿಸುವ ಮುಖ್ಯವಾದ ಮಾತೆಂದರೆ: ‘ಕವಿಯಾದವನು ಮತಾಚಾರ ಸಂಪ್ರದಾಯಗಳ ಶೃಂಖಲಾ ಸದೃಶವಾದ ಸಂಕುಚಿತ ದೃಷ್ಟಿಯಿಂದ ವಿಮುಕ್ತನಾಗಿ, ಭೂಮವಾದುದರಲ್ಲಿ ಸಂಚರಿಸಬೇಕು’ (ಸ.ಗ. ಸಂ.೧. ಪು.೨೭)–ಎನ್ನುವುದು. ಈ ಚಿಂತನೆ ಉದ್ದಕ್ಕೂ ಅವರ ಕಾವ್ಯ ಜೀವನವನ್ನು ನಿಯಂತ್ರಿಸುತ್ತ, ಅವರ ಬದುಕು-ಬರಹಗಳಲ್ಲಿ ಅಭಿವ್ಯಕ್ತವಾಗುತ್ತ, ವಿಶ್ವಮಾನವ ಕಲ್ಪನೆಯೊಂದನ್ನು ಕಟ್ಟಿಕೊಡುವುದರಲ್ಲಿ ತನ್ನ ನಿಲುಗಡೆಯನ್ನು ಕಂಡುಕೊಳ್ಳುತ್ತದೆ. ಕವಿಯ ವ್ಯಕ್ತಿತ್ವವನ್ನು ‘ಭಗವದ್ ವಿಭೂತಿಯ ಒಂದು ರಸಪೂರ್ಣವಾದ ರೀತಿ’ (ಸ.ಗ. ಸಂ.೧ ಪು.೨೭೦) ಎಂದು ವರ್ಣಿಸುವ ಕುವೆಂಪು, ಆತನಲ್ಲಿ ಸೃಜನಶೀಲ ಸಾಮರ್ಥ್ಯವು ವಿಶೇಷ ರೂಪದಲ್ಲಿ–ಅಥವಾ ‘ವಿ-ಭೂತಿ’ ರೂಪದಲ್ಲಿ – ಪ್ರಕಟವಾಗಲು ಕಾರಣ, ಆತ ಕೇವಲ ಒಬ್ಬ ವ್ಯಕ್ತಿ ಅಲ್ಲ, ಸಮಷ್ಟಿ ಮನಸ್ಸಿನ ಪ್ರತಿನಿಧಿಯಾಗಿರುವುದ ರಿಂದಲೇ–ಎಂದು ವ್ಯಾಖ್ಯಾನಿಸುತ್ತಾರೆ. ‘ಒಬ್ಬೊಬ್ಬ ವ್ಯಕ್ತಿಗೂ ಮನಸ್ಸಿರುವಂತೆ ಒಂದೊಂದು ಸಮೂಹಕ್ಕೂ ಮನಸ್ಸಿದೆ. ಮೊದಲನೆಯದು ವ್ಯಷ್ಟಿ ಮನಸ್ಸು, ಎರಡನೆಯದು ಸಮಷ್ಟಿ ಮನಸ್ಸು. ಮೊದಲನೆಯದು ತರಂಗದಂತೆ, ಎರಡನೆಯದು ಸಾಗರದಂತೆ. ಆ ಸಮಷ್ಟಿ ಮನಸ್ಸು ದೇಶ ದೇಶಕ್ಕೂ ಬದಲಾಯಿಸುವಂತೆ ಕಾಲಕಾಲಕ್ಕೂ ಬದಲಾಯಿಸಬಹುದು. ಅದನ್ನು ಯುಗ ಮನಸ್ಸು ಯುಗದೇವತೆ ಎಂದು ನಾನಾ ವಿಧವಾಗಿ ಕರೆಯುತ್ತಾರೆ. ಅದನ್ನು ಪರ್ವತದಂತೆ ಎಂದು ಭಾವಿಸಿದರೆ, ಕವಿ ಅದರ ಶಿಖರವಾಗುತ್ತಾನೆ. ಅಥವಾ ಅದನ್ನು ಈಟಿ ಎಂದು ಚಿತ್ರಿಸಿದರೆ ಕವಿ ಅದರ ಮೊನೆಯಾಗುತ್ತಾನೆ’ (ಸ.ಗ. ಸಂ.೧ ಪು.೪೦)-ಕವಿಯ ವ್ಯಕ್ತಿತ್ವವನ್ನು ಕುರಿತು ಈ ಹಂತದಲ್ಲಿ ಕುವೆಂಪು ಪ್ರಸ್ತಾಪಿಸುವ ‘ಸಮಷ್ಟಿ ಮನಸ್ಸು’ ‘ಯುಗ ಮನಸ್ಸು’ ಎನ್ನುವ ಈ ಪರಿಕಲ್ಪನೆಗಳು, ಸುಪ್ರಸಿದ್ಧ ಮನಸ್ ಶಾಸ್ತ್ರಜ್ಞನಾದ ಪ್ರೊ. ಸಿ.ಜೆ. ಯೂಂಗ್ ಅವರ ಕೊಡುಗೆಗಳು. ಮನೋವಿಜ್ಞಾನದ ತಿಳಿವಳಿಕೆಯನ್ನು ಮೊಟ್ಟಮೊದಲ ಬಾರಿಗೆ ಕನ್ನಡ ಸಾಹಿತ್ಯ ವಿಮರ್ಶೆಯೊಳಕ್ಕೆ ತಂದು, ತಮ್ಮ ಕವಿ ಸಹಜ ಪ್ರತಿಭೆಯಿಂದ ಅದನ್ನು ಗ್ರಹಿಸಲಗತ್ಯವಾದ ಭಾಷೆ ಮತ್ತು ಪರಿಭಾಷೆಗಳನ್ನು ರೂಪಿಸಿದವರು ಕುವೆಂಪು- ಎನ್ನುವುದನ್ನು ಗಮನಿಸಬೇಕು. ಕುವೆಂಪು ತಮ್ಮ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಬರುವ ‘ಜನಮನಮೆ ಯುಗಶಕ್ತಿಯಲ್ತೆ? ತಾನಾ ಶಕ್ತಿಮೂರ್ತಿಗೊಳೆ ನಾವದನ್ನವತಾರಮೆಂದು ಪೂಜಿಪೆವಲ್ತೆ, ವ್ಯಷ್ಟಿರೂಪದಿನ್ ಇಳಿವ ಸೃಷ್ಟಿಯ ಸಮಷ್ಟಿಯಂ’–ಎಂಬ ಉಕ್ತಿ, ಮನಸ್ ಶಾಸ್ತ್ರದ ತಿಳಿವಳಿಕೆಯಿಂದ ಮೂಡಿದ್ದು. ಕುವೆಂಪು ಈ ಉಕ್ತಿಯ ಮೂಲಕ ಪರಂಪರಾಗತವಾದ ‘ಅವತಾರ’ ತತ್ವಕ್ಕೆ ಆಧುನಿಕವಾದ ಮನಸ್‌ಶಾಸ್ತ್ರೀಯವಾದ ವ್ಯಾಖ್ಯಾನವನ್ನು ಕೊಡುತ್ತಾರೆ. ಯುಗಮನಸ್ಸನ್ನು ಪರ್ವತ ಎಂದೂ, ಕವಿ ಅದರ ಶಿಖರ ಎಂದೂ ರೂಪಕವೊಂದರಲ್ಲಿ ಪರಿಭಾವಿಸುವ ಕುವೆಂಪು, ‘ಯುಗಮನಸನ್ನು ಈಟಿ ಎಂದು ಭಾವಿಸಿದರೆ, ಕವಿ ಅದರ ಮೊನೆಯಾಗುತ್ತಾನೆ’–ಎಂದು ಮತ್ತೊಂದು ಪ್ರತೀಕವನ್ನು ನಿರ್ಮಿಸುತ್ತಾರೆ. ವಾಸ್ತವವಾಗಿ ಕುವೆಂಪು ಬಳಸುವ ಈ ಪ್ರತೀಕವನ್ನು ಅವರು ಕಾರ್ಲ್‌ಮಾರ್ಕ್ಸ್‌ನ ಬರೆಹದಿಂದ ತೆಗೆದುಕೊಂಡಿದ್ದಾರೆ ಎನ್ನುವುದು ಸ್ವಾರಸ್ಯದ ಸಂಗತಿಯಾಗಿದೆ. ಒಂದೆಡೆ ಮಾರ್ಕ್ಸ್ ‘ವರ್ಗಪ್ರಜ್ಞೆ ಹಾಗೂ ಸ್ವತಂತ್ರ ಸಂಘಟನೆ ಹೊಂದಿರುವ ಕಾರ್ಮಿಕ ವರ್ಗವು ಜನತಾಂತ್ರಿಕ ಚಳುವಳಿಯ ಮುಂಚೂಣಿಯಾಗಿ ಈಟಿ ಮೊನೆಯಾಗಿ ವರ್ತಿಸತಕ್ಕದ್ದು. (ಕಾರ್ಲ್‌ಮಾರ್ಕ್ಸ್: ಬದುಕು-ಬರೆಹ: ಬಿ.ವಿ. ಕಕ್ಕಿಲಾಯ: ಪು. ೨೩೬: ನವಕರ್ನಾಟಕ ೧೯೮೫) ಎಂದು ಹೇಳುತ್ತಾನೆ. ಕುವೆಂಪು ಜನಮನಸ್ಸು ಅಥವಾ ಸಮಷ್ಟಿ ಮನಸ್ಸನ್ನು ಈಟಿ ಎಂದು ಭಾವಿಸಿದರೆ ಕವಿ ಅದರ ಮೊನೆಯಾಗುತ್ತಾನೆ ಎಂದು, ಆ ಮಾತನ್ನು ಕಾವ್ಯಮೀಮಾಂಸೆಯ ಪರವಾಗಿ ಬದಲಾಯಿಸಿಕೊಂಡು ಈಟಿಯ ಪ್ರತೀಕವನ್ನು ಹೀಗೆ ವಿಸ್ತರಿಸಿದ್ದಾರೆ: ‘ಈಟಿಯೆಲ್ಲವೂ ಅದರ ಮೊನೆಯಲ್ಲ; ಮೊನೆಯಿಲ್ಲದಿದ್ದರೆ (ಅದು) ಈಟಿಯಾಗುವುದೂ ಇಲ್ಲ. ಮೊನೆ ಮಾತ್ರಕ್ಕೆ ಗುರಿಭೇದಿಸುವ ಶಕ್ತಿ ಬರುವುದಿಲ್ಲ. ಅದಕ್ಕೆ ಈಟಿಯ ಗಾತ್ರದ ಶಕ್ತಿ ಬೇಕು. ಹಾಗೆಯೆ ಮೊನೆಯಿಲ್ಲದಿದ್ದರೆ ಈಟಿಯ ಗಾತ್ರದಿಂದೇನು ಪ್ರಯೋಜನ?… ಈಟಿಯ ಮೈ ಅದರ ಮೊನೆಗೆ ಬೆಂಬಲವಾಗಿರುವಂತೆ, ಕವಿ ಮನಸ್ಸೂ ಜನಮನಸ್ಸಿನ ಪ್ರಗತಿಗೆ ದಾರಿಮಾಡಿ ಕೊಡುತ್ತದೆ. ಈಟಿಯ ಮೊನೆಯಂತೆ’ (ಸ.ಗ. ಸಂ.೧. ಪು.೪೦-೪೧). ಕುವೆಂಪು ತಮ್ಮ ಸಾಹಿತ್ಯ ಚಿಂತನೆಯೊಳಕ್ಕೆ ಯೂಂಗ್, ಕಾರ್ಲ್‌ಮಾರ್ಕ್ಸ್ ಇಂಥವರ ವಿಚಾರಗಳನ್ನು ಬರಮಾಡಿಕೊಳ್ಳುತ್ತಿದ್ದ, ಕಳೆದ ಶತಮಾನದ ಮೂರನೆಯ ದಶಕದಲ್ಲಿ ಇಡೀ ಜಗತ್ತು ಮತ್ತು ಅದನ್ನೊಳಗೊಂಡ ಈ ನಮ್ಮ ದೇಶವೂ ಒಂದು ಮಹಾಪರಿವರ್ತನೆಯ ಸಂಧಿಕಾಲದಲ್ಲಿತ್ತು. ಈ ಪರಿವರ್ತನೆಯ ಹಿಂದಿನ ಮುಖ್ಯಶಕ್ತಿಗಳೆಂದರೆ, ಒಂದು ವಿಜ್ಞಾನ, ಮತ್ತೊಂದು ರಾಜಕೀಯ. ಒಬ್ಬ ಕವಿಯಾಗಿ ಕುವೆಂಪು ವಿಜ್ಞಾನದ ಆವಿಷ್ಕಾರಗಳಿಗೆ, ವಿಸ್ಮಯಗಳಿಗೆ, ಮತ್ತು ವಿಜ್ಞಾನದ ಕಾರಣದಿಂದ ಪರಂಪರಾಗತ ಜೀವನಕ್ರಮ ಹಾಗೂ ವೈಚಾರಿಕತೆಗಳಲ್ಲಿ ಆಗುತ್ತಿದ್ದ ಬದಲಾವಣೆಗಳಿಗೆ, ಉಳಿದೆಲ್ಲರಿಗಿಂತ ಮಿಗಿಲಾಗಿ ಸ್ಪಂದಿಸುತ್ತಿದ್ದ ರೆಂಬುದನ್ನು ಅವರ ಬರೆಹಗಳು ಪ್ರತಿಫಲಿಸುತ್ತವೆ. ತಾ. ೩೧.೩.೧೯೩೭ರಂದು ಮೈಸೂರಿನ ಸಾಹಿತ್ಯ ಸಂಘದಲ್ಲಿ ‘ಹೊಸ ಸಾಹಿತ್ಯ ಮತ್ತು ಹೊಸ ದೃಷ್ಟಿ’ ಎಂಬ ವಿಷಯವನ್ನು ಕುರಿತು, ಕುವೆಂಪು ಮಾಡಿದ ಉಪನ್ಯಾಸವು, ಈ ದೃಷ್ಟಿಯಿಂದ ತುಂಬ ಮಹತ್ವದ್ದಾಗಿದೆ. ವಿಜ್ಞಾನದ ಕಾರಣದಿಂದ ‘ಶ್ರದ್ಧೆಗಿಂತ ಬುದ್ಧಿಗೆ ಪ್ರಧಾನ ಸ್ಥಾನ ದೊರೆತಿದೆ. ಶ್ರುತಿ ಪ್ರಮಾಣಕ್ಕಿಂತಲೂ ಮತಿಯ ಸಂಶೋಧನೆಗೆ ಹೆಚ್ಚು ಮಹತ್ವ ಸಿಕ್ಕಿದೆ. ದೇವದೇವತೆಗಳೂ ಸ್ವರ್ಗ ನರಕಗಳು ಅಷ್ಟದಿಗ್ಗಜಗಳೂ ಮಾಯವಾಗಿದ್ದಾರೆ. ಮತಿಯ ಒರೆಗಲ್ಲಿನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದದೆ ಯಾವ ನಂಬುಗೆಯೂ ಬದುಕುವಂತಿಲ್ಲ. ಭೂಮಿ ಕಿರಿದಾದರೂ ವಿಶ್ವವು ಭಯಂಕರ ವಿಸ್ತೃತವಾಗಿದೆ. ದೇವತೆಗಳು ಅಳಿದರೂ ಪ್ರಕೃತಿ ನಿಯಮಗಳು ಅವರಿಗಿಂತಲೂ ಮಿಗಿಲು ಅದ್ಭುತವಾಗಿವೆ. ಈಶ್ವರ ಸೃಷ್ಟಿವಾದಕ್ಕಿಂತಲೂ (ಡಾರ್ವಿನ್ನನ) ಪರಿಣಾಮವಾದ ಮತ್ತಷ್ಟು ಮನೋಹರವಾಗಿದೆ; ಅದಕ್ಕಿಂತಲೂ ಹೆಚ್ಚು ವಿಸ್ಮಯಕಾರಿಯಾಗಿದೆ’ (ಸ.ಗ.ಸಂ.೧. ಪು.೪೩). ಹೀಗೆ ವಿಜ್ಞಾನದ ಪರಿಣಾಮಗಳನ್ನು ಗುರುತಿಸುತ್ತಲೇ, ‘ಬಂಡವಾಳ ಷಾಹಿ ಜಿಗಣೆಗಳಿಂದ ನೆತ್ತರು ಹೀರಿಸಿಕೊಂಡು ಬಿಳಿಚಿಹೋಗಿರುವ ಸ್ವತಂತ್ರ ದೇಶಗಳು, ಕೆಲಸ ಮಾಡುವವರಿಗೆ ಹೊಟ್ಟೆಗೆ ಹಿಟ್ಟು ಮೈಗೆ ಬಟ್ಟೆ ದೊರೆಯುವಂತೆ ಮಾಡುವ ಸರಕಾರದ ಸ್ಥಾಪನೆಗೆ ಹಲ್ಲು ಕಚ್ಚಿಕೊಂಡು ಹೋರಾಡುತ್ತಿವೆ. ಸ್ವಾತಂತ್ರ ವನ್ನು ಕಳೆದುಕೊಂಡು ಪ್ರಬಲವಾದ ಪರಕೀಯ ಪದಾಘಾತಕ್ಕೆ ಸಿಕ್ಕಿ ನರಳುತ್ತಿರುವ ದೇಶಗಳು ಸ್ವಾತಂತ್ರ  ಸಂಪಾದನೆಗಾಗಿ ಹಗಲಿರುಳೂ ಹಾರೈಸಿ ದುಡಿಯುತ್ತಿವೆ’ (ಸ.ಗ. ಸಂ.೧ ಪು.೪೫,೪೬)–ಎಂದು ಜಾಗತಿಕ ಮತ್ತು ಭಾರತೀಯ ರಾಜಕೀಯ ಪಲ್ಲಟ ಹಾಗೂ ತಲ್ಲಣಗಳನ್ನು ಗುರುತಿಸುತ್ತ, ಭರತಖಂಡದ ಪ್ರಸ್ತುತ ಪರಿಸ್ಥಿತಿಯಲ್ಲಿ ‘ಎಲ್ಲರೂ ಕೆಲಸ ಮಾಡಿ ಸ್ವಾತಂತ್ರ  ಸಂಪಾದನೆ ಮಾಡಬೇಕು’ (ಸ.ಗ. ಸಂ.೧ ಪು.೪೬)–ಎಂದು ಯುವಕರಿಗೆ ಕುವೆಂಪು ಕರೆ ಕೊಡುತ್ತಾರೆ. ಈ ಹಂತದಲ್ಲಿ (ಕಳೆದ ಶತಮಾನದ ಮೂರನೆಯ ದಶಕದಲ್ಲಿ) ಕುವೆಂಪು, ಕವಿಗಿರಬೇಕಾದ ಸಾಮಾಜಿಕ-ವೈಚಾರಿಕ ಜವಾಬ್ದಾರಿಗಳನ್ನು ಕುರಿತು ಮಂಡಿಸುವ ಅಭಿಪ್ರಾಯಗಳು, ಅಂದಿನ ಅವರ ಸಮಕಾಲೀನ ಬರಹಗಾರರ ಸಾಹಿತ್ಯ ಚಿಂತನೆಗಳಿಗಿಂತ ಸಾಕಷ್ಟು ಭಿನ್ನವಾಗಿವೆ. ಕವಿಗೆ ಇರಬೇಕಾದ ಪರಂಪರೆಯ ಪ್ರಜ್ಞೆ, ಸಿದ್ಧಮತ ಸಂಪ್ರದಾಯಾದಿಗಳಿಂದ ಮುಕ್ತವಾಗಿ ನಿಲ್ಲುವ ಅಗತ್ಯ; ತತ್ತ್ವಶಾಸ್ತ್ರ ಮತ್ತು ಮನೋವಿಜ್ಞಾನದ ಹಿನ್ನೆಲೆ; ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳ ಅರಿವು; ವಿಜ್ಞಾನದ ಬಗ್ಗೆ ಆಸಕ್ತಿ ಹಾಗೂ ವೈಜ್ಞಾನಿಕ ಮನೋಧರ್ಮದಲ್ಲಿ ನಿಷ್ಠೆ; ರಾಷ್ಟ್ರೀಯತೆಯ ಕಾಳಜಿಗಳು- ಇತ್ಯಾದಿಗಳಿಂದ ಮನುಷ್ಯನಾದವನು, ನಿಜವಾದ ‘ಆಧುನಿಕ ಮಾನವ’ನಾಗುವುದು ಹೇಗೆ–ಎನ್ನುವ ವಿಚಾರಗಳು ಅವರ ಕಾವ್ಯಚಿಂತನೆಯ ಮೂಲದ್ರವ್ಯಗಳಾಗಿವೆ. ಅವರ ಪ್ರಕಾರ ಆಧುನಿಕ ಅಥವಾ ನವೀನ ಮಾನವನೆಂದರೆ ಕೇವಲ ‘ವರ್ತಮಾನದಲ್ಲಿ ಜೀವಿಸುತ್ತಿರುವವನು ಎಂದು ಮಾತ್ರ ಅರ್ಥವಲ್ಲ. ಯಾರ ಪ್ರಜ್ಞೆಯ ಎತ್ತರ, ಬಿತ್ತರ ಮತ್ತು ಆಳಗಳು ಪರಮಾವಧಿ ಮುಟ್ಟಿರುತ್ತವೆಯೋ, ಯಾರ ಅಪ್ರಜ್ಞೆ ಅತ್ಯಂತ ಕಡಿಮೆಯಾಗಿರುತ್ತದೆಯೋ, ಯಾರು ಸಮಷ್ಟಿ ಮನಸ್ಸಿನ ನಿಧಿಯೂ ಪ್ರತಿನಿಧಿಯೂ ಆಗಿ ಪ್ರಾಚೀನ ಸಾರಸತ್ವವನ್ನು ಹೀರಿಕೊಂಡು, ಅರ್ವಾಚೀನತೆಯ ಪ್ರಾಣರಸವನ್ನು ನಿರಂತರವೂ ಸಂಗ್ರಹಿಸಿ ಬೆಳೆಯುತ್ತಾ, ಭೂತ ವರ್ತಮಾನಗಳ ತುದಿಯಂಚಿನಲ್ಲಿ ನಿಂತು ಬರಲಿರುವ ಕಾಲದ ಗಂಭೀರ ಪಾತಾಳದ ಕಡೆಗೆ ದೃಷ್ಟಿಯಿಡುತ್ತಾನೆಯೋ ಅಂಥವನೇ ನವೀನ ಮಾನವ’ (ಸ.ಗ.ಸಂ-೧ ಪು.೪೧,೪೨), ‘ಸಾಹಿತಿಯಾದ ಕವಿಯಂತೂ ನವೀನ ಮಾನವನಾಗಿರಲೇಬೇಕು’ (ಸ.ಗ.ಸಂ-೧ ಪು.೪೦) ‘ಅಂಥವರು ಬಹಳ ಮಂದಿ ಇರಲಾರರು’ (ಸ.ಗ.ಸಂ-೧ ಪು.೪೨). ಕುವೆಂಪು ಇಲ್ಲಿ ಇನ್ನೂ ಒಂದು ಮಾತನ್ನು ಹೇಳುತ್ತಾರೆ: ಹೀಗೆ ನವೀನ ಮಾನವನಾದ ‘ಅಂತಹ ಕವಿಯಿಂದ ಕಾವ್ಯರಚನೆಯೇ ಆಗಬೇಕೆಂದೇನಿಲ್ಲ; ರಾಷ್ಟ್ರ ನಿರ್ಮಾಣವೂ ಆಗಬಹುದು. ಅವನಿಂದ ಮತಸ್ಥಾಪನೆಯಾಗಬಹುದು; ಅಥವಾ ಅತಿ ಗಹನವಾದ ವಿಜ್ಞಾನ ಸಂಶೋಧನೆಯಾಗಬಹುದು. ಅಂಥ ಕವಿ ಸಾಕ್ರೆಟೀಸ್ ಆಗುತ್ತಾನೆ, ತಪ್ಪಿದರೆ ಬುದ್ಧದೇವನಾಗುತ್ತಾನೆ. ಅಶೋಕ ಚಕ್ರವರ್ತಿಯಾಗುತ್ತಾನೆ; ಅಥವಾ ಪಂಪನಾಗುತ್ತಾನೆ. ಅವನು ಐನ್‌ಸ್ಟೀನ್ ಬೇಕಾದರೂ ಆಗಬಹುದು; ಅಥವಾ ಏಸುಕ್ರಿಸ್ತನಾದರೂ ಆಗಬಹುದು. ಈ ಸೃಷ್ಟಿಶಕ್ತಿಯಿಂದಲೇ ತ್ಯಾಗರಾಜರಂಥ ಗಾನಯೋಗಿಗಳೂ, ಮಹಾತ್ಮಾಗಾಂಧಿಯವರಂಥ ಕರ್ಮಯೋಗಿಗಳೂ ಸಂಭವಿಸುತ್ತಾರೆ. ಆ ಪ್ರತಿಭೆಯ ಪ್ರಕಾಶನ ವಿಧಾನಕ್ಕೆ ಇತಿಮಿತಿಗಳಿಲ್ಲ’ (ಸ.ಗ.ಸಂ-೧ ಪು.೪೦). ಕವಿ ಎಂದರೆ ಕವಿತೆ ಬರೆಯುವ ಮತ್ತು ಸಾಹಿತ್ಯಕ್ಷೇತ್ರಕ್ಕೆ ಮಾತ್ರ ಸೀಮಿತವಾದ ಪ್ರತಿಭಾ ವಿಶೇಷ–ಎನ್ನುವ ಪಾರಂಪರಿಕ ‘ಕವಿ ಕಲ್ಪನೆ’ಯನ್ನು ಮುರಿದು ಕುವೆಂಪು, ಯಾವುದೇ ಕ್ಷೇತ್ರದಲ್ಲಿ ಪ್ರತಿಭೆಯು ವಿಶೇಷವಾದ ರೀತಿಯಲ್ಲಿ ಅಭಿವ್ಯಕ್ತವಾಗುವ ವ್ಯಕ್ತಿತ್ವಗಳನ್ನೂ ಕವಿಗಳೆಂದೇ ಕರೆಯುತ್ತ, ‘ಕವಿ’ ಕಲ್ಪನೆಯನ್ನು ವ್ಯಾಪಕವಾದ ನೆಲೆಯಲ್ಲಿ ಗುರುತಿಸಿದ್ದು ಒಂದು ವಿಶೇಷವಾದ ಸಂಗತಿಯಾಗಿದೆ.

ಕವಿ-ಕಾವ್ಯಪರವಾದ ಈ ಚಿಂತನೆಗಳನ್ನು ಕುವೆಂಪು ಅವರು ಅತ್ಯಂತ ಉತ್ಸಾಹದಿಂದ ಮಂಡಿಸಿದ ಹೊಸಗನ್ನಡದ ಮೊದಲ ಉತ್ಕರ್ಷದ ಕಾಲವನ್ನು ಇಂದು ನಾವು ನವೋದಯ ಸಾಹಿತ್ಯ ಸಂದರ್ಭ ಎಂದು ಗುರುತಿಸುತ್ತೇವೆ. ವಾಸ್ತವವಾಗಿ ‘ನವೋದಯ’ ಎನ್ನುವ ಪದವನ್ನು ಮೊದಲು ಬಳಸಿದವರು ಕುವೆಂಪು, ನವೆಂಬರ್ ೮, ೧೯೩೦ರಂದು, ಶಿವಮೊಗ್ಗೆಯ ಕರ್ನಾಟಕ ಸಂಘದ ಪ್ರಾರಂಭೋತ್ಸವದ ತಮ್ಮ ಉಪಕ್ರಮ ಭಾಷಣದಲ್ಲಿ. ಆದರೆ ಈ ಪದ ಕನ್ನಡ ಸಾಹಿತ್ಯ ವಿಮರ್ಶೆಯನ್ನು ಪ್ರವೇಶಿಸಿದ್ದು ಮತ್ತು ಪ್ರಚಲಿತವಾದದ್ದು, ಕುವೆಂಪು ಆ ಪದವನ್ನು ಬಳಸಿದ ಎರಡು ದಶಕಗಳ ಅನಂತರ–ಬಹುಶಃ ನವ್ಯಕಾವ್ಯದ ಉತ್ಕರ್ಷದ ಕಾಲದಲ್ಲಿ, ನವ್ಯಸಾಹಿತ್ಯ ಚಳುವಳಿಯ ವಕ್ತಾರರು, ತಮಗೆ ನಿಕಟಪೂರ್ವದ ಕಾವ್ಯವನ್ನು ‘ರಮ್ಯ ಕಾವ್ಯ’ ಎಂದೋ, ‘ರೊಮ್ಯಾಂಟಿಕ್ ಕಾವ್ಯ’ ಎಂದೋ ಕರೆಯತೊಡಗಿದಾಗ. ನಿಜವಾದ ಸಂಗತಿ ಎಂದರೆ, ಕಳೆದ ಶತಮಾನದ ಎರಡನೆಯ ದಶಕದಿಂದ ಐದನೆಯ ದಶಕದವರೆಗಿನ ಕಾಲವನ್ನು ಅದುವರೆಗೂ ‘ಹೊಸಗನ್ನಡ ಸಾಹಿತ್ಯ’ ಎಂದೂ, ಈ ಕಾಲದಲ್ಲಿ ರಚಿತವಾದ ಕಾವ್ಯವನ್ನು ಹೊಸಗನ್ನಡ ಕಾವ್ಯ ಅಥವಾ ಆಧುನಿಕ ಕಾವ್ಯ ಎಂದು ಕರೆಯಲಾಗುತ್ತಿತ್ತೇ ವಿನಾ, ರಮ್ಯ ಅಥವಾ ರೊಮ್ಯಾಂಟಿಕ್ ಎಂದಾಗಲೀ ಅಲ್ಲ. ಹೊಸಗನ್ನಡ ಕಾವ್ಯ, ಅಂದಿನ ಇತರ ಪ್ರಾದೇಶಿಕ ಭಾಷಾಸಾಹಿತ್ಯಗಳಂತೆಯೆ, ಪಶ್ಚಿಮದ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳಿಂದ ತನ್ನ ಪ್ರೇರಣೆಯನ್ನು ಪಡೆದುಕೊಂಡಿತೆಂಬುದು ಚಾರಿತ್ರಿಕ ವಾಸ್ತವವಾದರೂ, ಅದಷ್ಟೇ ಕಾರಣಕ್ಕೆ, ಪಶ್ಚಿಮದ ರೊಮ್ಯಾಂಟಿಕ್ ಕಾವ್ಯದ ಅನುಕರಣವಾಗಲೀ ಅನುಸರಣವಾಗಲೀ ಅಲ್ಲದ ಹೊಸಗನ್ನಡ ಕಾವ್ಯವನ್ನು, ನವ್ಯ ಚಳುವಳಿಯ ವಕ್ತಾರರು ರೊಮ್ಯಾಂಟಿಕ್ ಕಾವ್ಯ ಎಂದು ಕರೆದದ್ದರ ಅಸಂಗತತೆಯನ್ನು ಮನಗಂಡು, ಕುವೆಂಪು ಎರಡು ದಶಕಗಳ ಹಿಂದೆಯೆ ಸೂಚಿಸಿದ ‘ನವೋದಯ’ ಎನ್ನುವ ಪದವನ್ನು, ಕುವೆಂಪು ಮತ್ತು ಅವರ ಶಿಷ್ಯರು ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಬಳಕೆಗೆ ತಂದರೆಂಬುದು ಈಗ ಚರಿತ್ರೆಯ ಒಂದು ಭಾಗವಾಗಿದೆ. ಅಷ್ಟೇ ಅಲ್ಲ, ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಪಶ್ಚಿಮದ ವಸಾಹತುಶಾಹಿಯ ಹಾಗೂ ಅದರ ಪರಿಣಾಮವಾದ ಇಂಗ್ಲಿಷ್ ಶಿಕ್ಷಣದಿಂದ, ಇಡೀ ಭಾರತೀಯ ಪರಿಸರದ ರಾಜಕೀಯ, ಸಾಮಾಜಿಕ, ಸಾಹಿತ್ಯಕ ವಲಯಗಳಲ್ಲಿ, ಒಟ್ಟಾರೆಯಾಗಿ ಈ ದೇಶದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಭವಿಸಿದ ಪುನರುಜ್ಜೀವನದ ಪರಿಣಾಮವಾದ ಹೊಸ ಎಚ್ಚರವನ್ನು ‘ನವೋದಯ’ ಎಂಬ ಈ ಪದ ಸೂಚಿಸುತ್ತದೆ. ಭಾರತೀಯ ಪುನರುಜ್ಜೀವನದ ಈ ಸಂದರ್ಭದಲ್ಲಿ ಪಶ್ಚಿಮದ ಸಾಹಿತ್ಯದ ಸಂಪರ್ಕ ಹಾಗೂ ಪ್ರೇರಣೆಗಳಿಂದ ಭಾರತದ ವಿವಿಧ ಭಾಷಾಸಾಹಿತ್ಯಗಳು, ತಮ್ಮೊಳಗಿನ ಪ್ರಾದೇಶಿಕ ಹಾಗೂ ಸಾಂಸ್ಕೃತಿಕ ವಿಶಿಷ್ಟತೆಗೆ ಅನುಗುಣವಾಗಿ, ಪುನರ್ಭವಗಳನ್ನು ಪಡೆದುಕೊಂಡವು. ಆದರೆ ಈ ಹೊಸ ಹುಟ್ಟುಗಳ ಸ್ವರೂಪವನ್ನು ಸೂಚಿಸಲು ಅಂದಿನ ವಿವಿಧ ಭಾಷಾಸಾಹಿತ್ಯಗಳು ತಮ್ಮದೇ ಆದ ಪರಿಭಾಷೆಯನ್ನು ಬಳಸಿದವು. ಮಲೆಯಾಳ ‘ಕಾಲ್ಪನಿಕಮ್’ ಎಂಬುದನ್ನೂ, ಗುಜರಾತಿ ‘ಮಸ್ತ್’ ಎಂಬುದನ್ನೂ, ಅಸ್ಸಾಮಿ ‘ನವನ್ಯಾಸ್’ ಎಂಬುದನ್ನೂ, ತೆಲುಗು ‘ಭಾವಕವಿತ್ವ’ ಎಂಬುದನ್ನೂ, ತಮಿಳು ‘ಕರ್ಪನ್ಯೆ’ ಎಂಬುದನ್ನೂ, ತೆಲುಗು ‘ಭಾವಕವಿತ್ವ’ ಎಂಬುದನ್ನೂ, ಹಿಂದಿ ಮರಾಠಿಗಳು ‘ಸ್ವಚ್ಛಂದ’ ಎಂಬುದನ್ನೂ ಬಳಸಿದವು. ಇದರ ಜತೆಗೆ ಇನ್ನೂ ಕೆಲವು ಭಾಷೆಗಳು ‘ರೊಮೆನಿ’ (ಪಂಜಾಬಿ, ಸಿಂಧಿ, ಉರ್ದು), ‘ರೊಮೇನಿ’ (ಕಾಶ್ಮೀರಿ) ‘ರೊಮ್ಯಾಂಟಿಕ್’ (ಪಂಜಾಬಿ, ಒರಿಯಾ)–ಎಂಬ ಪದಗಳನ್ನೂ ಬಳಸಿವೆ ಎನ್ನುವುದು ಕುತೂಹಲಕಾರಿಯಾದ ಸಂಗತಿಯಾಗಿದೆ. ಅಂತೂ ಪಶ್ಚಿಮದ ಪ್ರೇರಣೆಯಿಂದ ಹೊಸ ರೂಪಗಳನ್ನು ತೊಟ್ಟ ಭಾರತೀಯ ಪ್ರಾದೇಶಿಕ ಸಾಹಿತ್ಯಗಳು, ಭಾರತೀಯ ಪುನರುಜ್ಜೀವನ ಕಾಲದ ಸಾಹಿತ್ಯವನ್ನು ನಿರ್ದೇಶಿಸಲು ಬಳಸಿದ ಪದಗಳಲ್ಲಿ ಯಾವುದೇ ಏಕರೂಪತೆಯಿಲ್ಲ. ಆದರೆ ಈ ಕಾಲದ ಸಾಹಿತ್ಯವನ್ನು ಕುವೆಂಪು, ೧೯೩೦ರಷ್ಟು ಹಿಂದೆಯೇ ‘ನವೋದಯ’ ಎಂದು ಕರೆದದ್ದು ಮತ್ತು ಅದು ಇನ್ನಿತರ ಭಾರತೀಯ ಭಾಷಾ ಸಾಹಿತ್ಯಗಳು ಈ ಪುನರುಜ್ಜೀವನವನ್ನು ಸೂಚಿಸಲು ಬಳಸಿದ ಪದಗಳಿಗಿಂತ ಹೆಚ್ಚು ಅರ್ಥಪೂರ್ಣವಾಗಿದೆ– ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ.

ಕುವೆಂಪು ಈ ಪದವನ್ನು ಬಳಸಿದ್ದು ೧೯೩೦ನೇ ಇಸವಿ ನವೆಂಬರ್ ಹನ್ನೊಂದರಂದು- ಶಿವಮೊಗ್ಗೆಯ ಕರ್ನಾಟಕ ಸಂಘದ ಪ್ರಾರಂಭೋತ್ಸವದ ಸಮಾರಂಭದಲ್ಲಿ. ಕುವೆಂಪು ಅವರ ಮೊದಲ ಕವನ ಸಂಗ್ರಹ ‘ಕೊಳಲು’ ಅದೇ ತಾನೆ ಪ್ರಕಟವಾಗಿತ್ತು. ಇದಕ್ಕೆ ಮೊದಲೆ ತಮ್ಮ ‘ಬೊಮ್ಮನಹಳ್ಳಿ ಕಿಂದರಿ ಜೋಗಿ’, ‘ಯಮನ ಸೋಲು’, ‘ಜಲಗಾರ’ ಇಂಥ ಕೃತಿಗಳಿಂದ ಆಗಲೇ ಕವಿ ಎಂದು ಹೆಸರು ಮಾಡಿದ್ದರು. ಅವರು ತಮ್ಮ ಮಲೆನಾಡಿನ ಶಿವಮೊಗ್ಗೆಯ ಕರ್ನಾಟಕ ಸಂಘದ ಪ್ರಾರಂಭೋತ್ಸವಕ್ಕೆಂದು ಬಂದ ಸಂದರ್ಭದಲ್ಲಿ ಬಹುಶಃ ಮಾಸ್ತಿಯವರೂ ಬೇಂದ್ರೆಯವರೂ ಇವರೊಂದಿಗೆ ವೇದಿಕೆಯ ಮೇಲೆ ಉಪಸ್ಥಿತರಿದ್ದರೆಂದು ತೋರುತ್ತದೆ. ಆಗ ಕುವೆಂಪು ಅವರು ತಮ್ಮ ಉಪಕ್ರಮ ಭಾಷಣದಲ್ಲಿ ಭರತಖಂಡದ ಬದುಕಿನಲ್ಲಿ ಸಂಭವಿಸುತ್ತಿದ್ದ ಪರಿವರ್ತನೆಯನ್ನು ಪ್ರಸ್ತಾಪಿಸುತ್ತ ಹೇಳಿದರು. ‘ನಮ್ಮ ಕನ್ನಡ ಸಾಹಿತ್ಯದಲ್ಲಿ ನವ ಚೈತನ್ಯದ ಚಿಲುಮೆ ಚಿಮ್ಮತೊಡಗಿದೆ. ಕನ್ನಡನಾಡು ಕಣ್ದೆರೆಯುತ್ತಿದೆ. ಸಾಹಿತ್ಯ ಪ್ರಪಂಚದ ಸನಾತನ ಪುಣ್ಯಾಕಾಶದಲ್ಲಿ ತುಂಬಿದ್ದ ಕತ್ತಲೂ ಮೌನವೂ ಮೆಲ್ಲಮೆಲ್ಲನೆ ಸರಿಯತೊಡಗಿದೆ. ಈಗ ಮೂಡುತ್ತಿರುವ ಮುಂಬೆಳಗಿನ ಧೀರಶ್ರೀಯನ್ನು ನೋಡಲಾರದೆ ಹಲಕೆಲವು ಗೂಬೆಗಳು ಗೂಗೂ ಎಂದು ಕೂಗುತ್ತಿದ್ದರೂ ಅದನ್ನು ಗಣನೆಗೆ ತಾರದೆ ಅರುಣೋದಯದ ಮಂಗಳ ಕಾಂತಿಗೆ ಸುಖಾಗಮನ ಬಯಸಲು ಅನೇಕಾನೇಕ ಮಧುರ ಕಂಠದ ವಿಹಂಗಮಗಳು ಉಲಿಯಲು ತೊಡಗಿವೆ…. ಈ ನವೋದಯದಲ್ಲಿ ನಮ್ಮ ನಾಡಿನ ಜನರ ಎದೆದಾವರೆಗಳು ಹಿಗ್ಗಿ ಅರಳುತ್ತಿವೆ…..’ (ಸ.ಗ. ಸಂ.೧ ಪು.೧೬) ಹೀಗೆ ಪ್ರಾರಂಭವಾದ ಅವರ ಭಾಷಣ ಅಂದಿನ ಕರ್ನಾಟಕದಲ್ಲಿ ನಡೆಯುತ್ತಿದ್ದ ಸಾಹಿತ್ಯ ಚಟುವಟಿಕೆಗಳನ್ನೂ ಮತ್ತು ಕನ್ನಡ ಸಹೃದಯರು ಅವುಗಳೊಂದಿಗೆ ಇರಿಸಿಕೊಳ್ಳಬೇಕಾದ ಸಂಬಂಧವನ್ನೂ ಪ್ರಸ್ತಾಪಿಸುತ್ತದೆ.

ಮೇಲಿನ ಉಲ್ಲೇಖದಲ್ಲಿ ‘ನವೋದಯ’ ಎಂಬ ಮಾತೇನೋ ಇದೆ. ವಾಸ್ತವವಾಗಿ ಅದು ಬಳಕೆಯಾಗಿರುವುದು ಸಾಹಿತ್ಯ ವಿಮರ್ಶೆಯ ಒಂದು ಪರಿಭಾಷೆಯಾಗಿ ಅಲ್ಲ; ಒಂದು ರೂಪಕವಾಗಿ. ಭರತಖಂಡದಲ್ಲಿ ವಸಾಹತುಶಾಹಿಯ ಕಾರಣದಿಂದ ಸಂಭವಿಸುತ್ತಿದ್ದ ಪರಿವರ್ತನೆಯನ್ನೂ, ಆ ಪರಿವರ್ತನೆಯ ಒಂದಂಗವಾಗಿ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೊಸ ಎಚ್ಚರವನ್ನೂ, ಕುವೆಂಪು ಸೂರ್ಯೋದಯಕ್ಕೆ ಹೋಲಿಸಿ, ಆ ಸೂರ‍್ಯೋದಯದ ಹೊತ್ತಿನ ಹಲವು ನಿಸರ್ಗ ವ್ಯಾಪಾರಗಳನ್ನು–ಕತ್ತಲು ಕಳೆಯುತ್ತಿರುವುದನ್ನು, ಇದನ್ನು ನೋಡಲಾಗದೆ ಕೆಲವು ಗೂಬೆಗಳು ಗೂಗುಟ್ಟುವುದನ್ನು, ಅದನ್ನು ಗಣನೆಗೆ ತಾರದೆ ಅನೇಕಾನೇಕ ಮಧುರ ಪಕ್ಷಿಕಂಠಗಳು ಉಲಿಯುತ್ತಿರುವುದನ್ನು – ವರ್ಣಿಸಿ, ಈ ನವೋದಯದಲ್ಲಿ ಕನ್ನಡಿಗರ ಹೃದಯದ ತಾವರೆಗಳು ಅರಳುತ್ತಿವೆ–ಎಂದು ಆಲಂಕಾರಿಕವಾಗಿ ಅಂದಿನ ಸಾಹಿತ್ಯ ಸಂದರ್ಭವನ್ನು ವರ್ಣಿಸುತ್ತಾರೆ. ಸಾಹಿತ್ಯದ ದೃಷ್ಟಿಯಿಂದ ಇದು ಖಂಡಿತವಾಗಿಯೂ ‘ನವೋದಯವೇ’ ಅಷ್ಟೇ ಅಲ್ಲ, ಆ ಕಾಲದ ಕವಿತೆಯ ಪ್ರಮುಖ ರೂಪಕವೆಂದರೆ ಸೂರ್ಯೋದಯವೇ. ಅಂದಿನ ಅನೇಕ ಕವಿಗಳ ಸೂರ್ಯೋದಯ ಗೀತಗಳು, ಈ ನವೋದಯದ ರೂಪಕಗಳೇ. ಅದರಲ್ಲೂ ಕುವೆಂಪು ಬರೆದಷ್ಟು ಸೂರ್ಯೋದಯ ಗೀತಗಳನ್ನು ಮತ್ತೆ ಯಾರೂ ಬರೆದಿಲ್ಲ. ಹೊಸಗನ್ನಡ ಸಾಹಿತ್ಯ ಸಂದರ್ಭದ ನಾವೀನ್ಯತೆ, ಉತ್ಸಾಹ, ಹೊಸ ಹುಟ್ಟು ಇತ್ಯಾದಿಗಳನ್ನು ಸೂಚಿಸಲು, ಕುವೆಂಪು ೧೯೩೦ರಂದು ಬಳಸಿದ ‘ನವೋದಯ’ ಎನ್ನುವ ಈ ರೂಪಕ, ವಿಮರ್ಶೆಯ ಒಂದು ಪರಿಭಾಷೆಯಾದದ್ದು ೧೯೫೦ರ ಕಾಲದಲ್ಲಿ. ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಈ ಪದಗಳು ಅನಂತರದ ಸಾಹಿತ್ಯ ಚಳುವಳಿಗಳ ಹಾಗೂ ಸಾಹಿತ್ಯದ ಲಕ್ಷಣವನ್ನು ಸೂಚಿಸುವ ಪದಗಳಾದರೆ, ‘ನವೋದಯ’ ಏಕ ಕಾಲಕ್ಕೆ ಹೊಸಗನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ರೂಪಕವೂ ಹೌದು, ಲಕ್ಷಣವೂ ಹೌದು. ಆಚಾರ್ಯ ಬಿ.ಎಂ.ಶ್ರೀಯವರ ನಿಧನಕ್ಕೆ ಸಂತಾಪ ಸೂಚಿಸುತ್ತ ೧೯೪೬ರಲ್ಲಿ ಕುವೆಂಪು, ಅವರನ್ನು ವರ್ಣಿಸಿದ್ದು ‘ನವೋದಯದ ನಾಂದೀ ಸ್ವರೂಪರು’ ಎಂದು (ಸ.ಗ. ಸಂ.೧. ಪು.೬೩೯).

ನವೋದಯ ಸಾಹಿತ್ಯ ಸಂದರ್ಭದ ಬರಹಗಾರರ ಜವಾಬ್ದಾರಿಗಳು ಬಹುಮುಖಿ ಯಾಗಿದ್ದವು. ಸಾಹಿತ್ಯ ನಿರ್ಮಿತಿ, ಕನ್ನಡದ ಪ್ರಚಾರ, ಕರ್ನಾಟಕದ ಏಕೀಕರಣದ ಕನಸು, ರಾಷ್ಟ್ರೀಯ ಆಂದೋಲನದ ತುಡಿತಗಳು-ಇತ್ಯಾದಿಗಳಲ್ಲಿ ಆಸಕ್ತರಾದ ಅಂದಿನ ಸಾಹಿತಿಗಳು, ತಮ್ಮ ಸಾಹಿತ್ಯ ನಿರ್ಮಿತಿಯ ಜತೆಗೆ, ಸಾಹಿತ್ಯ ವಿಮರ್ಶೆಯನ್ನೂ ಕಟ್ಟಿ ಬೆಳೆಯಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿತ್ತು. ಕನ್ನಡ ಸಾಹಿತ್ಯ ಕೃತಿಗಳನ್ನು ಹೊಸ ಕಾಲಕ್ಕೆ ತಕ್ಕಂತೆ ವಿಮರ್ಶಿಸಲು ಅಗತ್ಯವಾದ ಮಾನದಂಡಗಳು ಇನ್ನೂ ರೂಪುಗೊಳ್ಳದಿದ್ದ ಆ ಕಾಲದಲ್ಲಿ ತಮ್ಮ ಸಾಹಿತ್ಯ ನಿರ್ಮಿತಿಯ ಜತೆಗೆ ಸಾಹಿತ್ಯ ವಿಮರ್ಶೆಗೂ ತೊಡಗಿಸಿಕೊಂಡವರ ಎದುರಿಗೆ, ಭಾರತೀಯ (ಸಂಸ್ಕೃತ) ಕಾವ್ಯಮೀಮಾಂಸೆ, ದೇಶೀಯ ಕಾವ್ಯಪರಂಪರೆ ಮತ್ತು ಪಶ್ಚಿಮದ ಕಾವ್ಯಮೀಮಾಂಸೆ ಹಾಗೂ ಸಾಹಿತ್ಯ ವಿಮರ್ಶೆ-ಈ ಮೂರೂ ಇದ್ದವು. ಆಚಾರ್ಯ ಬಿ.ಎಂ.ಶ್ರೀಯವರು ಕನ್ನಡ ನವೋದಯಕ್ಕೆ ಪಶ್ಚಿಮದ ಸಾಹಿತ್ಯ ಮತ್ತು ಕಾವ್ಯ ಚಿಂತನೆಗಳಿಂದ ಪ್ರೇರಣೆ ಪಡೆಯುವುದು ಅಗತ್ಯ ಎಂಬ ನಿಲುವಿನವರು; ಬೇಂದ್ರೆಯವರು ಅನ್ಯದೇಶೀಯ ಕಾವ್ಯ ಹಾಗೂ ಕಾವ್ಯಮೀಮಾಂಸೆಯ ಮೂಲಮಾನಗಳಿಂದ ನಮ್ಮ ಸಾಹಿತ್ಯ ಕೃತಿಗಳನ್ನು ವಿವೇಚಿಸುವ ವಿಧಾನದ ಬಗ್ಗೆ ತಮ್ಮ ಅಸಮ್ಮತಿಯನ್ನು ಪ್ರಕಟಿಸಿದವರು. ಘನ ವಿದ್ವಾಂಸರಾದ ಪ್ರೊ|| ಎ.ಆರ್. ಕೃಷ್ಣಶಾಸ್ತ್ರಿಯವರು ಸಂಸ್ಕೃತ ಅಲಂಕಾರ ಶಾಸ್ತ್ರದ ಪರಿಕಲ್ಪನೆ ಮತ್ತು ಪರಿಭಾಷೆಗಳಿಂದ ಹೊಸ ಸಾಹಿತ್ಯವನ್ನು ವಿಮರ್ಶಿಸುವ ಕುತೂಹಲಕರವಾದ– ಆದರೆ, ಮಾರ್ಗದರ್ಶಕವಾಗದ–ಪ್ರಯತ್ನವನ್ನು ಮಂಡಿಸಿದವರು; ಪ್ರೊ. ಎಸ್.ವಿ. ರಂಗಣ್ಣನವರು ಪಶ್ಚಿಮದ ಸಾಹಿತ್ಯ ವಿಮರ್ಶೆಯ ತರ್ಕಬದ್ಧ ವಿಶ್ಲೇಷಣಾ ಕ್ರಮವನ್ನು, ನಮ್ಮ ಸಾಹಿತ್ಯ ಕೃತಿಗಳ ವಿಮರ್ಶೆಗೆ ಬಳಸಲು ಪ್ರಯತ್ನಿಸಿದವರು. ಮಾಸ್ತಿಯವರು ೧೯೨೬ರ ಕಾಲದಲ್ಲೆ ‘ಸಾಹಿತ್ಯದಲ್ಲಿ ವಿಮರ್ಶೆಯ ಕಾರ್ಯ’ ಎಂಬ ಲೇಖನವನ್ನು ಬರೆದು, ಸಾಹಿತ್ಯ ವಿಮರ್ಶೆ ಸಹೃದಯನಲ್ಲಿ ಸಾಹಿತ್ಯದ ಬಗ್ಗೆ ರುಚಿ ಹುಟ್ಟಿಸುವ ಮತ್ತು ರುಚಿಯನ್ನು ತಿದ್ದುವ ಕಾರ್ಯದಲ್ಲಿ ತೊಡಗಬೇಕೆಂಬ ಒಂದು ಉದಾರವಾದೀ ನಿಲುವನ್ನು ಎತ್ತಿ ಹಿಡಿದವರು. ಈ ಹಿನ್ನೆಲೆಯಲ್ಲಿ ಮೂಲತಃ ಸೃಜನಶೀಲ ಕವಿಯಾದ ಕುವೆಂಪು ಸಾಹಿತ್ಯ ನಿರ್ಮಿತಿಯ ತುರ್ತಿಗೆ ತಮ್ಮನ್ನು ಒಪ್ಪಿಸಿಕೊಳ್ಳುತ್ತಲೇ ಸಾಹಿತ್ಯ ವಿಮರ್ಶೆಯ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಒಂದು ವಿಶೇಷವೆಂದರೆ ಅವರ ಸಾಹಿತ್ಯ ಚಿಂತನೆ ಸಮಾನಾಂತರವಾಗಿ, ಒಂದೆಡೆ ಅವರ ಗದ್ಯಲೇಖನಗಳಲ್ಲಿ ವೈಚಾರಿಕವಾಗಿ ಅಭಿವ್ಯಕ್ತಿಯನ್ನು ಪಡೆದುಕೊಂಡರೆ, ಮತ್ತೊಂದೆಡೆ ಅದು ಅವರ ಕವಿತೆಗಳಲ್ಲಿಯೂ ಪ್ರತಿಮಾರೂಪದಲ್ಲಿ ಅಭಿವ್ಯಕ್ತಿಯನ್ನು ಪಡೆದುಕೊಂಡಿದೆ. ಅದರಲ್ಲೂ ಕವಿ-ಕಾವ್ಯ ಪರವಾದ ಅವರ ಕಲ್ಪನೆಗಳು, ಅವರ ಗದ್ಯ ಬರೆಹಗಳಲ್ಲಿ ಅಭಿವ್ಯಕ್ತಗೊಂಡ ಚಿಂತನೆಗಳಿಗಿಂತ ಭಿನ್ನವಾಗೇನೂ ಇಲ್ಲ; ಭಿನ್ನತೆಯಿರುವುದೇನಿದ್ದರೂ ಅದು ಉಕ್ತಿಯ ಕ್ರಮದಲ್ಲಿ ಮಾತ್ರ. ಅವರು ಬರೆದ ‘ಕಲಾಸುಂದರಿ’ ‘ಕಲ್ಪನಾಸುಂದರಿ’ ‘ತಾವರೆಯ ತೇರು’– ಇಂಥ ಕವಿತೆಗಳಲ್ಲಿ ಈ ಸೃಷ್ಟಿಯ ಹಿಂದಿರುವ ಸೃಜನಶೀಲ ಚೈತನ್ಯವನ್ನು ಮೂರ್ತೀಕರಿಸಿ ಕೀರ್ತಿಸಿರುವುದನ್ನು ಗುರುತಿಸಬಹುದು. ಆದರೆ ಅವರ ಗದ್ಯಬರಹಗಳಲ್ಲಿ ಕಾಣದ, ಅವರ ಕವಿತೆಯ ಸಂದರ್ಭದಲ್ಲಿ ಮಾತ್ರ ಕಂಡುಬರುವ ಇನ್ನೊಂದು ಸಂಗತಿ ಎಂದರೆ, ವಿಮರ್ಶೆ ಹಾಗೂ ವಿಮರ್ಶಕರನ್ನು ಕುರಿತು ಕುವೆಂಪು ತೋರುವ ಪ್ರತಿಕ್ರಿಯೆಗಳು. ಇವುಗಳಂತೂ ವಿಲಕ್ಷಣವಾಗಿವೆ: ಅವರ ಪ್ರಕಾರ ವಿಮರ್ಶೆ ಎನ್ನುವುದು ಕೆಲಸವಿಲ್ಲದ ಅಲಸ ಬುದ್ಧಿಯ ಕಾರ್ಯ. ‘ಕೆಲಸವಿದ್ದ ಚಳಿಗದಿರನು (ಚಂದ್ರನು)  ಕೇಳದೆ ಪ್ರೌಢವಿಮರ್ಶೆಯ ಮೂಡಿಯೆ ಮೂಡಿದನು, ಕೆಲಸವಿಲ್ಲದ ವಿಮರ್ಶಕನಾದರೊ  ನಿಂತು ವಿಮರ್ಶೆಯ ಮಾಡಿದನು (ಸ.ಕಾ. ಸಂ.೧. ಪು.೩೨೬) ಎನ್ನುತ್ತಾರೆ. ಅನಂತರದ ಎರಡು ಸಾನೆಟ್ಟುಗಳಲ್ಲಿ ವಿಮರ್ಶಕನ ಯೋಗ್ಯತೆಯನ್ನೆ ಸವಾಲಿನ ಧಾಟಿಯಲ್ಲಿ ‘ನೀನೇರ ಬಲ್ಲೆಯಾ ನಾನೇರುವೆತ್ತರಕೆ? ನೀ ಹಾರಬಲ್ಲೆಯಾ ನಾ ಹಾರುವಗಲಕ್ಕೆ? ನೀ ಮುಳುಗಬಲ್ಲೆಯಾ ನಾ ಮುಳುಗುವಾಳಕ್ಕೆ?’ (ಸ.ಕಾ. ಸಂ.೧. ಪು.೪೬೪) ಎಂದು ಪ್ರಶ್ನಿಸುತ್ತಾರೆ. ಮತ್ತೊಂದೆಡೆ ಕವಿ, ದೇವೇಂದ್ರನ ಐರಾವತದಂತೆ, ವಿಮರ್ಶಕ ಅದನ್ನು ಕಂಡು ಬೊಗಳುವ ನಾಯಿಯಂತೆ. ಆ ಐರಾವತದ ಕಿವಿಗೆ ‘ಗಲ್ಲಿಯ ವಿಮರ್ಶೆಯೂಳ್’ -ಗಲ್ಲಿಯಲ್ಲಿ ಕೇಳಿಬರುವ ವಿಮರ್ಶೆಯ ಬಗುಳುವಿಕೆ- ಬೀಳುವುದುಂಟೆ’– ಎಂದು ಟೀಕಿಸುತ್ತಾರೆ. (ಸ.ಕಾ. ಸಂ.೧. ಪು.೩೬೬) ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ಆಂಜನೇಯನ ಸಾಗರೋಲ್ಲಂಘನದ ಸಂದರ್ಭವನ್ನು ವರ್ಣಿಸುತ್ತ, ಮಹೇಂದ್ರಾಚಲದ ನೆತ್ತಿಯಿಂದ ನೆಗೆದ ಹನುಮನ ಜತೆಗೆ, ಅವನು ಲಂಘಿಸಿದ ವೇಗಕ್ಕೆ ಒಂದಷ್ಟು ಬಂಡೆ ಗುಂಡುಗಳೂ ಗಿಡಮರಗಳೂ ಕಿತ್ತುಕೊಂಡು ಒಂದಷ್ಟು ದೂರ ಹಾರಿಹೋದುವಂತೆ-ಊರಿಗೆ ಹೋಗುವ ನಂಟರನ್ನು ಕೊಂಚ ದೂರ ಕಳುಹಿಸಿಕೊಡಲೆಂದು ನಡೆದ ಬಂಧುಬಾಂಧವರಂತೆ. ಆದರೆ ಹನುಮನ ಜತೆ ಹಾರಿ ಸ್ವಲ್ಪ ದೂರ ಹೋಗುವುದರ ಒಳಗೇ ಗಮನಗೆಟ್ಟು ಅಂಬುದಿಗೆ ಉರುಳಿದುವಂತೆ, ಕವಿ ಕಲ್ಪನೆಯ ಜತೆಗೆ ಏರಲಾಶಿಸಿಯೂ ಏರಲಾರದ ವಿಮರ್ಶಕರ ಕಾಣ್ಮೆಯಿಲ್ಲದ ಜಾಣ್ಮೆಯ ಹಾಗೆ!

(ಶ್ರೀ ರಾ.ದ. ಸಂಚಿಕೆ ೧೧ ಪಂಕ್ತಿ ೧೧೬-೧೨೧)- ಈ ಕೆಲವು ಉಕ್ತಿಗಳನ್ನು ಗಮನಿಸಿದರೆ, ಕುವೆಂಪು ಯಾಕೆ ಹೀಗೆ ವಿಮರ್ಶಾ ವಿರೋಧಿಯಂತೆ ತೋರುತ್ತಾರೆ ಎಂದು ಯಾರಿಗಾದರೂ ಅನ್ನಿಸಬಹುದು. ಯಾಕೆ ಕುವೆಂಪು ಅವರಿಗೆ ವಿಮರ್ಶಕರ ಬಗೆಗೆ ಈ ತಿರಸ್ಕಾರ? ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ಒಬ್ಬ ವಿಮರ್ಶಕರಾಗಿಯೂ ಕಾರ್ಯನಿರ್ವಹಿಸಿದ ಕುವೆಂಪು ಅವರ ನಿಲುವು ಯಾಕೆ ಹೀಗಿದೆ?

ಈ ಪ್ರಶ್ನೆಗೆ ಉತ್ತರ ಬಹುಶಃ ಅವರ ಸಮಕಾಲೀನ ವಿಮರ್ಶೆಯಲ್ಲೇ ಇರುವಂತೆ ತೋರುತ್ತದೆ. ಅದರಲ್ಲೂ ಕುವೆಂಪು ಅವರನ್ನು ಕುರಿತ ಅಂದಿನ ವಿಮರ್ಶೆಯ ಚರಿತ್ರೆಯನ್ನು ಸೂಕ್ಷ ವಾಗಿ ಗಮನಿಸಿದರೆ ಸಾಕು, ಅದು ಎಂತಹ ವೈಪರೀತ್ಯ ಹಾಗೂ ಏರುಪೇರುಗಳಿಂದ ಕೂಡಿದೆ ಎಂಬುದನ್ನು ಯಾರಾದರೂ ಗುರುತಿಸಬಹುದು.

ಕುವೆಂಪು ಅವರನ್ನು ಕುರಿತ ಮೊದಲ ವಿಮರ್ಶೆಯೇ ಎಂಥ ಅಪಸ್ವರದಿಂದ ಪ್ರಾರಂಭ ವಾಯಿತು ಎನ್ನುವುದನ್ನು ಸೂಚಿಸಲು ಒಂದು ಪ್ರಸಂಗವನ್ನು ಇಲ್ಲಿ ಉಲ್ಲೇಖಿಸಬಹುದು: ಕುವೆಂಪು ಅವರ ಪ್ರಥಮ ಕವನಸಂಕಲನ ‘ಕೊಳಲು’ ಪ್ರಕಟವಾದದ್ದು ಜನವರಿ ೧೯೩೦ನೇ ಇಸವಿಯಲ್ಲಿ. ಅದು ಪ್ರಕಟವಾದ ಕೆಲವೇ ತಿಂಗಳಲ್ಲಿ, ಅಂದರೆ ಆಗಸ್ಟ್ ೧೯೩೦ರ– ಧಾರವಾಡದ ‘ಜಯ ಕರ್ನಾಟಕ’ದಲ್ಲಿ ಅದನ್ನು ಕುರಿತ ವಿಮರ್ಶೆಯೊಂದು ಪ್ರಕಟವಾಯಿತು. ಕುವೆಂಪು ಅವರ ಮಾತುಗಳಲ್ಲೆ ಹೇಳುವುದಾದರೆ, ‘ಧಾರವಾಡದ ಜಯಕರ್ನಾಟಕ ಮಾಸಪತ್ರಿಕೆ ಕೊಳಲಿನ ಕವನಗಳಲ್ಲಿ ಬರಿಯ ದೋಷಗಳನ್ನೆ ಕೆದಕಿ ಪರಿಹಾಸ್ಯ ಮಾಡಿ ತೆಗಳಿತು’ (ನೆನಪಿನ ದೋಣಿಯಲ್ಲಿ ಪು. ೬೪೩) ಆ ಕವನ ಸಂಗ್ರಹದೊಳಗಿನ ‘ಮುಂಗಾರು’ ಎಂಬ ಕವಿತೆಯ ‘ಧಾರೆಯ ದಾರದಿ ನೆಯ್ದಿಹ ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು’ ಎಂಬ ಪಂಕ್ತಿಯನ್ನು ಕುರಿತು[2] ಆ ವಿಮರ್ಶಕ ಮಾನ್ಯರು, ‘ಈ ಜವನಿಕೆಯನ್ನು ಉಡುವ ತಿರೆವೆಣ್ಣಿನ ದಪ್ಪ ಸೊಂಟ ಎಷ್ಟು ಮೈಲಿ ವಿಸ್ತಾರದಿದ್ದಿರಬೇಕು’ ಎಂದು ಲೇವಡಿ ಮಾಡಿದ್ದರು. ಈ ವಿಮರ್ಶೆಯನ್ನೋದಿ ಕುವೆಂಪು, ಮೊದಲಿಗೆ ಅವರ ಗೆಳೆಯರೊಂದಿಗೆ ಹೇಳಿಕೊಂಡು ನಕ್ಕರೂ, ಅದು ಸದರಿ ವಿಮರ್ಶಕರ ‘ಕಲ್ಪನಾ ದಾರಿದ್ರ ವನ್ನೂ ಕರುಬನ್ನೂ’ ಪ್ರದರ್ಶಿಸುತ್ತದೆ– (ನೆ.ದೋ. ಪು. ೬೪೩) ಎಂದು ಅವರು ಅಂದುಕೊಂಡರೂ ಪ್ರಥಮ ಕವನ ಸಂಗ್ರಹದ ಮೂಲಕ ಆಗ ತಾನೇ ಕಾವ್ಯಲೋಕವನ್ನು ಪ್ರವೇಶಿಸಿದ ಸೂಕ್ಷ  ಸಂವೇದನಾಶೀಲವಾದ ಮನಸ್ಸಿಗೆ ಒಂದಿಷ್ಟು ಕಿರಿಕಿರಿಯನ್ನು ಉಂಟುಮಾಡಿರಬೇಕು. ಮತ್ತು ಕಾವ್ಯಕ್ಕೆ ಸುಮುಖರಲ್ಲದ ವಿಮರ್ಶಕರ ಬಗ್ಗೆ ಒಂದು ಬಗೆಯ ತಿರಸ್ಕಾರವನ್ನು ಹುಟ್ಟಿಸಿರಬೇಕು. ಈ ಪ್ರಸಂಗವನ್ನು ಕುವೆಂಪು ತಮ್ಮ ‘ನೆನಪಿನ ದೋಣಿಯಲ್ಲಿ’ ಹಲವು ಕಡೆ ನಮೂದಿಸಿದ್ದಾರೆ. (ಪು. ೬೪೩, ೬೯೩, ೬೯೪, ೬೯೬: ೭೪೫)

ಕುವೆಂಪು ಅವರನ್ನು ಕುರಿತ ಸಾಹಿತ್ಯವಿಮರ್ಶೆಯ ಚರಿತ್ರೆಯುದ್ದಕ್ಕೂ, ಅವರ ಪ್ರಥಮ ಕವನ ಸಂಕಲನವನ್ನು ಕುರಿತ ‘ಜಯ ಕರ್ನಾಟಕ’ದಿಂದ ಪ್ರಾರಂಭವಾದ ವಿಮರ್ಶೆಯ ಅಪಸ್ವರದ ಧಾರೆಯೊಂದು ನಿರಂತರವಾಗಿ ಇರುವುದಾದರೂ, ಕಳೆದ ಐದು ದಶಕಗಳ ಕಾಲಮಾನದಲ್ಲಿ ಕುವೆಂಪು ಅವರನ್ನು ಕುರಿತು ಬಂದಿರುವ ವಿಮರ್ಶೆಯಲ್ಲಿ ಗುರುತಿಸಬಹುದಾದ ಏರುಪೇರುಗಳಿರುವುದು ನಿಜವಾದರೂ, ವಿವಿಧ ಸಾಹಿತ್ಯ ಚಳುವಳಿಗಳ ಸಂದರ್ಭದಲ್ಲಿ ಕನ್ನಡ ವಿಮರ್ಶೆ ಕುವೆಂಪು ಅವರ ಸಾಹಿತ್ಯವನ್ನು ತುಂಬ ಉತ್ಸಾಹದಿಂದಲೇ ಚರ್ಚಿಸಿದೆ. ಮುಖ್ಯವಾದ ಮಾತೆಂದರೆ ಕುವೆಂಪು ನಮ್ಮ ಕಾಲದ ಮಹತ್ವದ ಲೇಖಕರೆಂಬುದು ಯಾವತ್ತೂ ಚರ್ಚಾಸ್ಪದವಾದ ಸಂಗತಿಯಾಗಿಲ್ಲ. ೧೯೩೦ರ ಕಾಲದ ‘ಕೊಳಲು’ ಸಂಗ್ರಹದಿಂದ ಹಿಡಿದು, ೧೯೮೦ರಲ್ಲಿ ಪ್ರಕಟವಾದ ಅವರ ‘ನೆನಪಿನ ದೋಣಿಯಲ್ಲಿ’ ಎಂಬ ಕೃತಿಯವರೆಗೆ, ಅವರ ಸೃಜನಶೀಲತೆ ಮತ್ತು ವೈಚಾರಿಕತೆಗಳು ಒಂದು ಅದಮ್ಯವಾದ ಪ್ರವಾಹದಂತೆ ಮುನ್ನಡೆಯುತ್ತಾ ಅನೇಕ ಮಹತ್ ಕೃತಿಗಳನ್ನು ನಿರ್ಮಿಸಿವೆ. ಈ ಪ್ರಚಂಡ ಸಾಹಿತ್ಯ ನಿರ್ಮಿತಿಯ ಮಹಾವೇಗಕ್ಕೆ ವಶರಾದ ಕುವೆಂಪು, ಅವರಿವರ ಪ್ರಶಂಸೆ ಹಾಗೂ ವಿಮರ್ಶೆಯ ಕಡೆಗೆ ಯಾವತ್ತೂ ಒಂದು ಬಗೆಯ ‘ದಿವ್ಯ ನಿರ್ಲಕ್ಷ ’ವನ್ನು ತಾಳಿದ್ದಾರೆ. ಇದನ್ನು ವಿಮರ್ಶಾ ವಿರೋಧಿ ನಿಲುವು ಎಂದು ಹೇಳಲು ಬರುವುದಿಲ್ಲ, ವಾಸ್ತವವಾಗಿ ಅವರು ವಿರೋಧಿಸುವುದು ವಿಮರ್ಶೆಯನ್ನಲ್ಲ; ವಿಮರ್ಶೆಯ ಹೆಸರಿನಲ್ಲಿ ನಡೆಯುವ ವ್ಯಾಧವೃತ್ತಿಯನ್ನು. ಆದುದರಿಂದಲೇ ಕಾವ್ಯಲೋಕವನ್ನು ಪ್ರವೇಶಿಸುವವರಿಗೆ ಅವರು ಹೇಳುವುದು ‘ಕೊಲ್ವ ಬತ್ತಳಿಕೆ ಬಿಲ್ಲು ಬಾಣವನು ಅಲ್ಲೆ ಬಿಟ್ಟು ಬಾ’ (ಸ.ಕಾ. ಸಂ.೧. ಪು.೬೨೭) ಎಂದು. ಕೊಲ್ವಬತ್ತಳಿಕೆ ಬಿಲ್ಲು ಬಾಣಗಳನ್ನು ಹಿಡಿದು ಪ್ರವೇಶಿಸುವ ವಿಮರ್ಶಕ ವ್ಯಾಧನಿಗೆ ಇಲ್ಲಿ ಪ್ರವೇಶವಿಲ್ಲ- ಎನ್ನುತ್ತಾರೆ.  ಹೀಗೆ ಕಾವ್ಯಕ್ಕೆ ಸುಮುಖರಲ್ಲದ ಇಂಥ ‘ವಿಮರ್ಶಕ ವ್ಯಾಧ’ರನ್ನು ಕುರಿತ ಖಂಡನೆಯ ಹಾಗೂ ತಿರಸ್ಕಾರಗಳ ಪ್ರತಿಕ್ರಿಯೆಯ ಒಂದು ಪರಂಪರೆಯೇ ಇದೆ. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ–ಸತ್ಕವಿ ಪ್ರಶಂಸೆ, ಕುಕವಿನಿಂದೆ ಎಂದು ಇದನ್ನು ಗುರುತಿಸಲಾಗಿದೆ. ಕುವೆಂಪು ವಿಮರ್ಶಕರನ್ನು ಕುರಿತು ಕ್ವಚಿತ್ತಾಗಿ ವ್ಯಕ್ತಪಡಿಸಿರುವ ಪ್ರತಿಕ್ರಿಯೆಗಳು ಈ ಪರಂಪರೆಯ ಒಂದು ಭಾಗ ಎಂದು ಭಾವಿಸುವುದು ಸೂಕ್ತವೆಂದು ತೋರುತ್ತದೆ.

ಮೂಲತಃ ಕವಿಯಾದ ಕುವೆಂಪು, ಒಬ್ಬ ವಿಮರ್ಶಕರೂ ಆಗಿ ರೂಪುಗೊಳ್ಳುತ್ತಿದ್ದ ನವೋದಯದ ಉತ್ಸಾಹದ ಕಾಲದಲ್ಲಿ ಅವರಿಗೆ ವಿಮರ್ಶೆಯನ್ನು ಕುರಿತು ತಮ್ಮದೇ ಆದ ಕಲ್ಪನೆಯಿತ್ತು. ಸ್ವಾರಸ್ಯದ ಸಂಗತಿಯೆಂದರೆ ಮುಂದೆ ಅವರ ವಿಮರ್ಶೆಯ ವಿಧಾನಗಳು ಕಾಲದಿಂದ ಕಾಲಕ್ಕೆ ಗಣನೀಯವಾಗಿ ಬದಲಾದರೂ, ವಿಮರ್ಶೆ ಎಂದರೇನು–ಎಂಬುದನ್ನು ಕುರಿತ ಅವರ ಕಲ್ಪನೆಯಲ್ಲಿ ಅಂತಹ ಬದಲಾವಣೆಯೇನೂ ಕಾಣುವುದಿಲ್ಲ. ಕುವೆಂಪು  ಅವರ ಪ್ರಕಾರ ವಿಮರ್ಶೆ ಎಂದರೆ, ‘ಕವಿ ಪ್ರತಿಭೆಯಿಂದ ಹೊರ ಹೊಮ್ಮುವ ಸುಂದರ ಭಾವಮಯ ಕಾವ್ಯಕ್ಷೇತ್ರಗಳಲ್ಲಿ ಸೂಕ್ಷ ಮತಿಯಾದ ಸಹೃದಯನು ಕೈಕೊಳ್ಳುವ ವಿಹಾರಯಾತ್ರೆ ಅಥವಾ ಸಾಹಸಯಾತ್ರೆಯ ಕಥನಕಾರ್ಯ’ ‘ಕವಿಯ ಪ್ರತಿಭಾ ಪ್ರವಾಹದಲ್ಲಿ ತನ್ನ ಆತ್ಮವನ್ನು ಪ್ರತಿಭಟನೆಯಿಲ್ಲದೆ ತೇಲಿಬಿಡುವ’ (ಕಾವ್ಯವಿಹಾರ. ಸ.ಗ.ಸಂ.೧. ಪು.೧೨೪) ಒಂದು ಕ್ರಿಯೆ. ಅಂದರೆ ಸಹೃದಯ ಅಥವಾ ವಿಮರ್ಶಕ, ಮಹಾಭಾರತ ಕಥಾಶ್ರವಣಕ್ಕೆ ಕಿವಿಯಾದ ಜನಮೇಜಯನಿಗಿಂತ ಬೇರೇನಲ್ಲ! ಹಾಗೆಯೇ ಕುವೆಂಪು ಅವರ ಪ್ರಕಾರ, ಸಾಹಿತ್ಯ ವಿಮರ್ಶಕರಾಗಿ ತಮ್ಮ ಕೆಲಸವೇನಿದ್ದರೂ, ಸಮಕಾಲೀನ ಸಾಹಿತ್ಯಾಸಕ್ತ ಸಹೃದಯರಿಗೆ, ವರ್ತಮಾನದ ಹಾಗೂ ಪ್ರಾಚೀನ ಸಾರಸ್ವತ ಪರಂಪರೆಯನ್ನು ಪರಿಚಯ ಮಾಡಿಕೊಡುವುದರ ಮೂಲಕ ತಾವು ಎಂತಹ ಒಂದು ಪರಂಪರೆಗೆ ಸೇರಿದ್ದೇವೆ ಅನ್ನುವುದರ ಅರಿವನ್ನು ಓದುಗರಲ್ಲಿ ಹುಟ್ಟಿಸುವುದು. ಎರಡನೆಯದು, ಇಪ್ಪತ್ತನೆ ಶತಮಾನದ ವಿಜ್ಞಾನಯುಗದ ಓದುಗರಿಗೆ ಪ್ರಾಚೀನ ಸಾಹಿತ್ಯವನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ಇರುವ ಆತಂಕ ಗಳನ್ನು ನಿವಾರಿಸಿ, ಕಾವ್ಯಾಸ್ವಾದನದಿಂದ ಅವರು ಪಡೆಯಬಹುದಾದ ರಸಪುಷ್ಟಿಯಿಂದ ಅವರು ವಂಚಿತರಾಗದಂತೆ ನೋಡಿಕೊಳ್ಳುವುದು. ಈ ಆತಂಕಗಳು ಯಾವುವೆಂದರೆ, ಪ್ರಾಚೀನ ಕವಿಕೃತಿಗಳನ್ನು ಓದುವಾಗ ಏನೋ ಒಂದು ಶ್ರದ್ಧೆಯಿಂದ, ಅವಿಚಾರಿತವಾಗಿ ಪೌರಾಣಿಕ ಪ್ರಸಂಗಗಳನ್ನು ಗ್ರಹಿಸುತ್ತಿದ್ದ ಮುಗ್ಧನಾದ ಓದುಗ ಅಥವಾ ಶ್ರಾವಕರಿಗಿಂತ ಭಿನ್ನವಾದ ಹೊಸಕಾಲದ ಮನಸ್ಸು, ಈಗ ಅವುಗಳ ಸತ್ಯಾಸತ್ಯತೆಗಳನ್ನು ಪ್ರಶ್ನಿಸುತ್ತ, ಅವುಗಳೆಲ್ಲ ಭ್ರಮೆಗಳೆಂದೋ ಮಿಥ್ಯೆಯೆಂದೋ ತಿರಸ್ಕರಿಸುವುದರ ಮೂಲಕ ಆ ಮೌಲಿಕವಾದ ಪ್ರಾಚೀನ ಸಾಹಿತ್ಯ ಪರಂಪರೆಗೆ ವಿಮುಖವಾಗುವ ಅಪಾಯದ ಸಂದರ್ಭವೊಂದು ನಿರ್ಮಾಣವಾಗುತ್ತಿದೆ. ಈ ಅಪಾಯದಿಂದ ಅವನನ್ನು ಪಾರುಮಾಡಬೇಕಾದರೆ, ಅವನಿಗೆ, ಈ ಅಭಿವ್ಯಕ್ತಿಗಳ ಸಾಂಕೇತಿಕ ಅರ್ಥಗಳನ್ನೂ ಮತ್ತು ಅವು ಯಾವ ನಿತ್ಯಸತ್ಯದ ಪ್ರತಿಮೆಗಳಾಗಿವೆ ಎಂಬುದನ್ನೂ, ಭಾಷೆಯ ಬಳಕೆಯ ಮೂಲಕ ಅಭಿವ್ಯಕ್ತವಾದ ಕವಿತೆಯ ನಿಜವಾದ ಅರ್ಥವನ್ನು ಗ್ರಹಿಸುವುದು ಹೇಗೆ ಎಂಬುದನ್ನೂ ತಿಳಿಸಿಕೊಡುವುದು ಇಂದಿನ ಸಾಹಿತ್ಯ ವಿಮರ್ಶೆಯ ಜವಾಬ್ದಾರಿ ಎನ್ನುವುದನ್ನು ಕುವೆಂಪು ಮೊಟ್ಟಮೊದಲಿಗೆ ತಮ್ಮ ಸಾಹಿತ್ಯ ವಿಮರ್ಶೆಯ ಮೂಲಕ ಸಾಬೀತು ಪಡಿಸುತ್ತಾರೆ. ಅದಕ್ಕೆ ಅವರು ಅನೇಕ ಹೊಸ ಪರಿಕಲ್ಪನೆಗಳನ್ನು ರೂಪಿಸುತ್ತಾರೆ. ಈ ಪರಿಕಲ್ಪನೆಗಳ ಆವಿಷ್ಕಾರ ಉದ್ದಕ್ಕೂ ಅವರ ಸಾಹಿತ್ಯ ವಿಮರ್ಶೆ ಹಾಗೂ ಕಾವ್ಯಮೀಮಾಂಸೆಯ ಬರಹಗಳಲ್ಲಿ ಕಾಲದಿಂದ ಕಾಲಕ್ಕೆ ನಡೆದಿದೆ.

ಕುವೆಂಪು ಅವರ ಸಾಹಿತ್ಯ ಚಿಂತನೆಯ ಬರಹಗಳಲ್ಲಿ ಸ್ಥೂಲವಾಗಿ ಎರಡು ಹಂತಗಳಿವೆ ಎನ್ನಬಹುದು. ಮೊದಲನೆಯದು ವರ್ಣನಾ ವಿಮರ್ಶೆ ಹಾಗೂ ತೌಲನಿಕ ವಿಮರ್ಶೆ. ಎರಡನೆಯದು ಕಾವ್ಯಮೀಮಾಂಸೆಯ ಹೊಸ ಪರಿಕಲ್ಪನೆಗಳಿಂದ ಸಾಹಿತ್ಯ ವಿಮರ್ಶೆಯ ಆಯಾಮಗಳನ್ನು ವಿಸ್ತರಿಸಿದ ಹಂತ.

ಕುವೆಂಪು ವಿಮರ್ಶೆಯ ಪ್ರಧಾನ ವಸ್ತುಪ್ರಪಂಚ, ಹಳಗನ್ನಡ ಸಾಹಿತ್ಯವನ್ನು ಕುರಿತದ್ದು. ಸಮಕಾಲೀನ ಸಾಹಿತ್ಯದ ಬೇರಾವ ಕವಿ ಕೃತಿಗಳನ್ನು ಕುರಿತು ಅಷ್ಟಾಗಿ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರಾಚೀನ ಕವಿಕೃತಿಗಳನ್ನು ಕುರಿತು ಅವರು ಬರೆದ ವಿಮರ್ಶೆ ಮೂಲತಃ ಅವರ ಅಧ್ಯಯನದ ಒಂದು ಭಾಗ ಮತ್ತು ಅದರ ಉಪ ಉತ್ಪನ್ನ. ಇದು ಒಂದು ರೀತಿಯಲ್ಲಿ ಅವರು ಪ್ರಾಚೀನ ಸಾಹಿತ್ಯ ಪರಂಪರೆಯೊಂದಿಗೆ ನಡೆಯಿಸಿದ ಅನುಸಂಧಾನ ಎನ್ನಬಹುದು. ತಮ್ಮ ಹೈಸ್ಕೂಲಿನ ದಿನಗಳಿಂದಲೇ ಷೇಕ್ಸ್‌ಪಿಯರ್ ಮಿಲ್ಟನ್ ಮೊದಲಾದವರ ಸಾಹಿತ್ಯವನ್ನು ಓದಿ ಅರ್ಥಮಾಡಿಕೊಳ್ಳುವಷ್ಟು ಸಮರ್ಥರಾದ ಕುವೆಂಪು ಅವರಿಗೆ, ತಮ್ಮದೇ ಆದ ಸಾಹಿತ್ಯ ಪರಂಪರೆಯ ಪರಿಚಯವನ್ನು ಮಾಡಿಕೊಳ್ಳುವುದು ಮತ್ತು ಅದರೊಂದಿಗೆ ಅನುಸಂಧಾನ ಮಾಡುವುದು ಅವರ ಸೃಜನಶೀಲತೆಯ ಒಂದು ಅಗತ್ಯವೂ ಆಗಿತ್ತು. ಜತೆಗೆ ಕುವೆಂಪು ಮೈಸೂರಿನಲ್ಲಿ ಆಗ ತಾನೇ ಪ್ರಾರಂಭವಾದ ಕನ್ನಡ ಎಂ.ಎ. ತರಗತಿಗಳಿಗೆ ಸೇರಿದ ಆ ಕಾಲದಲ್ಲಿ ಆಚಾರ್ಯ ಬಿ.ಎಂ.ಶ್ರೀ, ಪ್ರೊ. ಟಿ.ಎಸ್. ವೆಂಕಣ್ಣಯ್ಯ, ಪ್ರೊ. ಎ.ಆರ್. ಕೃಷ್ಣಶಾಸ್ತ್ರೀ ಇಂಥ ಅಧ್ಯಾಪಕರಿಂದ ಕನ್ನಡ ಅಧ್ಯಯನಕ್ಕೆ ಒಂದು ಹೊಸ ತಿರುವು ಬಂದಿತ್ತು. ಕುವೆಂಪು ಗುರುತಿಸಿದಂತೆ ‘ವೆಂಕಣ್ಣಯ್ಯನವರು ಒಂದು ನಿಶ್ಶಬ್ದ ಕ್ರಾಂತಿಯನ್ನೆ ಉಂಟುಮಾಡಿದರು. ಅದೊಂದು ಕ್ರಾಂತಿ ಎಂದು ಯಾರೊಬ್ಬರಿಗೂ ಅನ್ನಿಸದ ನಿರಾಡಂಬರದ ರೀತಿಯಲ್ಲಿ. ಅಧ್ಯಾಪಕರಾಗಿ ಅವರು ಅದುತನಕ ಕನ್ನಡಕ್ಕೆ ಅಪರಿಚಿತವಾದ ಬೋಧನ ವಿಧಾನವನ್ನೂ ವಿಮರ್ಶನ ಪ್ರಕಾರವನ್ನೂ ಬಳಕೆಗೆ ತಂದರು–ಪ್ರಾಚೀನ ಕನ್ನಡ ಸಾಹಿತ್ಯದ ಸತ್ವ ಮತ್ತು ಹಿರಿಮೆ ಗರಿಮೆಗಳು ವಿದ್ಯಾರ್ಥಿಗಳಿಗೆ ಅನಾವರಣಗೊಳ್ಳುವಂತೆ’ (ಸ.ಗ.೧-ಪು. ೭೯೬).[3]

ಈ ಗರುಡಿಯಲ್ಲಿ ತಯಾರಾದ ಕುವೆಂಪು, ಪ್ರಾಚೀನ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಳ್ಳುತ್ತ, ಅದನ್ನು ಹೊಸದೃಷ್ಟಿಯಿಂದ ಅರ್ಥ ಮಾಡಿಕೊಳ್ಳುತ್ತ ತಮ್ಮ ಆಯ್ಕೆಯ ಕವಿಗಳಲ್ಲಿ ತಾವು ಕಂಡ ಸ್ವಾರಸ್ಯವನ್ನು ವಿಶೇಷತೆಯನ್ನೂ ತಮಗಾಗಿ ಹಾಗೂ ತಮ್ಮ ಸಮಕಾಲೀನ ಸಾಹಿತ್ಯಾಸಕ್ತರಿಗಾಗಿ ವರ್ಣಿಸುವ ಅಥವಾ ವ್ಯಾಖ್ಯಾನಿಸುವ ನೆಪದಲ್ಲಿ ಅವರು ಬರೆದ ಲೇಖನಗಳೇ ಅವರ ವಿಮರ್ಶೆಯ ದಾರಿಯನ್ನು ತೆರೆದಂತೆ ತೋರುತ್ತದೆ. ೧೯೪೪ರಲ್ಲಿ ಪ್ರಕಟವಾದ ಅವರ ‘ಸಾಹಿತ್ಯ ಪ್ರಚಾರ’ ಎಂಬ ಸಂಕಲನ, ಅವರ ಕವಿ-ಕಾವ್ಯ- ಕಲ್ಪನೆಯನ್ನು ಕುರಿತ ಸಾಹಿತ್ಯ ಚಿಂತನೆಯ ಮೊದಲ ಹಂತದ ಪ್ರತಿನಿಧಿಯಂತೆ ತೋರಿದರೆ, ೧೯೪೬ರಲ್ಲಿ ಪ್ರಕಟವಾದ ಅವರ ‘ಕಾವ್ಯ ವಿಹಾರ’ ಅವರ ಸಾಹಿತ್ಯ ವಿಮರ್ಶೆಯ ಮೊದಲ ಹಂತವನ್ನು ಪ್ರತಿನಿಧಿಸುವಂತೆ ತೋರುತ್ತದೆ. ಈ ಎರಡೂ ಸಂಕಲನದೊಳಗಿನ ಬರೆಹಗಳು, ಅದಕ್ಕೂ ಮೊದಲ ಒಂದೂವರೆ ದಶಕದಲ್ಲಿ ಉದ್ದಕ್ಕೂ ಅವರಿಂದ ರಚಿತವಾದವುಗಳು. ೧೯೨೬ರಂದು ಧಾರವಾಡದ ಜಯಕರ್ನಾಟಕದಲ್ಲಿ ಪ್ರಕಟವಾದ ‘ಪ್ರಕೃತಿ ಸೌಂದರ್ಯ’  (ಸ.ಗ. ಸಂ.೧. ಪು.೫೭೩) ಎಂಬ ಬರೆಹ ಕುವೆಂಪು ಅವರ ಸಾಹಿತ್ಯ ವಿಮರ್ಶೆಯ ಮೊದಲ ಬರೆಹವೆಂದು ಹಲವರು ಭಾವಿಸುವರಾದರೂ, ಅದು ಪ್ರಕೃತಿ ಸೌಂದರ್ಯವನ್ನು ಕುರಿತ ಒಂದು ಬಗೆಯ ತಾತ್ವಿಕ ಚರ್ಚೆಯನ್ನು ಒಳಗೊಂಡಿರುವ ಕಾರಣದಿಂದ ಅದನ್ನು ಸಾಹಿತ್ಯವಿಮರ್ಶೆಯ ಬರೆಹಗಳ ಸಾಲಿನಲ್ಲಿ ಸೇರಿಸುವುದು ಅಷ್ಟಾಗಿ ಸರಿಹೊಂದಲಾರದು.[4] ಆದರೆ ಮಲೆನಾಡಿನ ದಟ್ಟವಾದ ಪ್ರಕೃತಿಯ ನೆಲೆವೀಡಿನಿಂದ ಬಂದ ಕುವೆಂಪು, ಪ್ರಕೃತಿ ಸೌಂದರ್ಯವನ್ನು ಕುರಿತು ಮೊಟ್ಟಮೊದಲು ನಡೆಯಿಸಿದ ಚಿಂತನೆಯನ್ನು ಈ ಬರಹ ಒಳಗೊಳ್ಳುತ್ತದೆ ಎನ್ನುವುದು ಅರ್ಥಪೂರ್ಣವಾಗಿದೆ. ಇದನ್ನು ಬರೆದಾಗ ಅವರಿನ್ನೂ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ತತ್ವಶಾಸ್ತ್ರವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಆಯ್ದುಕೊಂಡು ಅಧ್ಯಯನ ಮಾಡುತ್ತಿದ್ದ ಬಿ.ಎ. ತರಗತಿಯ ವಿದ್ಯಾರ್ಥಿಯಾಗಿದ್ದರು. ಮತ್ತು ಅವರ ಸಾಹಿತ್ಯ ವಿಮರ್ಶೆಯ ಬರೆಹಗಳ ಪ್ರಾರಂಭ, ಅವರು ಅನಂತರ ಕನ್ನಡ ಎಂ.ಎ. ತರಗತಿಗಳಿಗೆ ಸೇರಿ, ಕನ್ನಡ ಸಾಹಿತ್ಯದ ಅದರಲ್ಲೂ ಪ್ರಾಚೀನ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಂಡ ಸಂದರ್ಭದಿಂದಲೇ ಎಂದು ತೋರುತ್ತದೆ. ಈ ಹಿನ್ನೆಲೆಯಿಂದ ಹೇಳುವುದಾದರೆ  ಅವರ ‘ರನ್ನನ ವೀರಕೌರವ’ ಎಂಬ ಬರೆಹವೇ ಅವರ ಸಾಹಿತ್ಯ ವಿಮರ್ಶೆಯ ಪ್ರಥಮ ಲೇಖನವೆಂದು ಹೇಳಬಹುದು.[5] ಇದನ್ನು ಅವರು ರನ್ನಕವಿ ಪ್ರಶಸ್ತಿಗಾಗಿ, ೧೯೨೭ರ ಬೇಸಿಗೆಯ ರಜದಲ್ಲಿ ಕುಪ್ಪಳಿಯ ಮನೆಯ ಉಪ್ಪರಿಗೆಯಲ್ಲಿ ಕೂತು ಬರೆದರು (ನೆ.ದೋ. ಪು.೫೭೧). ಅನಂತರ ಇದು ಸೆಂಟ್ರಲ್ ಕಾಲೇಜ್ ಕರ್ನಾಟಕ ಸಂಘ ೧೯೨೮ರಲ್ಲಿ ಪ್ರಕಟಿಸಿದ ‘ರನ್ನ ಕವಿಪ್ರಶಸ್ತಿ’ಯಲ್ಲಿ ಅಚ್ಚಾಗಿದೆ. ಇದರ ಜತೆಗೆ, ಒಂದೂವರೆ ವರ್ಷದ ನಂತರ ಕುವೆಂಪು ಬರೆದ ಇನ್ನೊಂದು ಲೇಖನ ‘ಸೀತಾ ವನವಾಸ’ ಲಕ್ಷಿ ಶನ ಜೈಮಿನಿ ಭಾರತದ ಸೀತಾಪರಿತ್ಯಾಗದ ಪ್ರಸಂಗವನ್ನು ಕುರಿತದ್ದು. ಇದನ್ನು ಬರೆದದ್ದು ೧೦.೮.೧೯೨೮ ಎಂದೂ, ಅದು ಅನಂತರ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟವಾಯಿತೆಂದೂ ಕುವೆಂಪು ತಮ್ಮ ‘ನೆನಪಿನ ದೋಣಿಯಲ್ಲಿ’ (ಪು.೬೨೯) ದಾಖಲಿಸಿದ್ದಾರೆ. ೧೯೨೭-೧೯೨೮ ರಲ್ಲಿ ಕುವೆಂಪು ಬರೆದ ಈ ಎರಡು ಲೇಖನಗಳೆ ಅವರ ಸಾಹಿತ್ಯ ವಿಮರ್ಶೆಯ ಮೊದಲ ಬರೆಹಗಳೆಂದು ಎಣಿಸಬಹುದಾಗಿದೆ. ಈ ಲೇಖನಗಳನ್ನು ಬರೆದಾಗ ಕುವೆಂಪು ಇನ್ನೂ ಎಂ.ಎ. ತರಗತಿಯ ವಿದ್ಯಾರ್ಥಿ. ಈ ಕಾಲದ ಕುವೆಂಪು ಅವರ ತಾರುಣ್ಯೋತ್ಸಾಹದ ಮನಸ್ಸನ್ನು ರನ್ನ ಲಕ್ಷಿ ಶರು ಆಕರ್ಷಿಸಿದ್ದು ಆಶ್ಚರ್ಯವೇನಲ್ಲ. ಯಾಕೆಂದರೆ ಈ ಲೇಖನ ಬರೆದಾದ ಎರಡು ದಶಕಗಳ ನಂತರ ಅವರೇ ಬರೆದ ‘ಶಕ್ತಿ ಕವಿ ರನ್ನ’ ಎಂಬ ಲೇಖನದಲ್ಲಿ ಹೇಳಿಕೊಳ್ಳುವಂತೆ ‘ರನ್ನನಂತೆ ಪ್ರಥಮ ಪರಿಚಯದಲ್ಲಿಯೆ ಸಾಹಿತ್ಯದ ಪ್ರೌಢ ವಿದ್ಯಾರ್ಥಿಯನ್ನು ತೆಕ್ಕನಾಕ್ರಮಿಸಿ ಅಪ್ಪಳಿಸಿ ಉದ್ರೇಕಿಸಿ ಹೊಡೆದೆಬ್ಬಿಸಿ ಬೆರಗುಗೊಳಿಸಿ ವಶಪಡಿಸಿಕೊಳ್ಳುವ ವೀರಕವಿ ಮತ್ತೊಬ್ಬನಿಲ್ಲ’ (ಸ.ಗ. ಸಂ.೧. ಪು.೨೭೨). ‘ರನ್ನನ ವೀರ ಕೌರವ’ ಎಂಬ ಲೇಖನವನ್ನು ಬರೆದಾಗ ಕುವೆಂಪು ಒಳಗಾದದ್ದು ಇಂತಹ ಮನಃಸ್ಥಿತಿಗೆ. ರನ್ನನ ಗದಾಯುದ್ಧವನ್ನು ಓದಿದಾಗ ಅವರಿಗಾದ ಸಂಭ್ರಮ, ಕವಿಪರವಾದ ಉತ್ಸಾಹ, ಮೊಟ್ಟಮೊದಲ ಬಾರಿಗೆ ಕೌರವನಂಥ ಪ್ರತಿನಾಯಕನ ಪಾತ್ರಕ್ಕೆ ಒದಗಿದ ಉದಾತ್ತೀಕರಣ, ಕೌರವನ ಛಲ, ಅಭಿಮಾನ, ಅವನಿಗಾದ ಅನ್ಯಾಯ ಮತ್ತು ಕೌರವನ ಅವಸಾನದಿಂದ ಮಹತ್ತಾದುದರ ವಿನಾಶದ ಯಾತನೆ, ‘ಜಯವೀರ ಗೌರವ; ಛೇ ಭೀಮಸೇನ’ (ಸ.ಗ. ಸಂ.೧. ಪು.೬೧೯) ಎಂಬ ಉದ್ಗಾರ– ಇತ್ಯಾದಿಗಳು ಕುವೆಂಪು ಅವರ ಈ ಲೇಖನದಲ್ಲಿ ಅನುರಣನಗೊಂಡಿವೆ. ಮುಂದೆ ಅವರು ಬರೆದ ‘ಶಕ್ತಿ ಕವಿರನ್ನ’ ಎಂಬ ಲೇಖನದೊಂದಿಗೆ ಹೋಲಿಸಿದರೆ ಈ ಲೇಖನದ ಮಿತಿಗಳೇನೆಂಬುದು ತಿಳಿಯುತ್ತದೆ. ಕುವೆಂಪು ಅವರ ಸಾಹಿತ್ಯ ವಿಮರ್ಶೆಯ ಮೊದಲ ಹಂತಕ್ಕೆ ಸೇರುವ ಇನ್ನಿತರ ಬರೆಹಗಳೆಂದರೆ: ಕುಮಾರವ್ಯಾಸನ ದುರಂತ ಕರ್ಣ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಉಪಮಾಲೋಲ ಲಕ್ಷಿ ಶ ಮತ್ತು ಸೀತಾ ವನವಾಸ. ಮೂಲತಃ ‘ವರ್ಣನಾ ವಿಮರ್ಶೆ’ಗೆ ಸೇರುವ ಈ ಬರೆಹಗಳು, ಸ್ವರೂಪದಲ್ಲಿ, ಕುವೆಂಪು ಅವರ ಪ್ರಥಮ ವಿಮರ್ಶಾ ಸಂಕಲನದ ಶೀರ್ಷಿಕೆಯೆ ಸೂಚಿಸುವಂತೆ ‘ಕಾವ್ಯ ವಿಹಾರ’ಗಳೇ ಆಗಿವೆ. ಮತ್ತು ಕುವೆಂಪು ಅವರ ಅಂದಿನ ವಿಮರ್ಶೆಯ ಕಲ್ಪನೆಗೆ ಅನುಗುಣವಾಗಿವೆ. ವಿಮರ್ಶೆಯ ಭಾಷೆ ತೀರಾ ಭಾವುಕವೂ ಸಾಲಂಕೃತವೂ ಆಗಿ ಕೃತಿ ಪರಿಚಯದ ಸಂಭ್ರಮದಿಂದ ಕೂಡಿದೆ.[6] ಮುಂದೆ ಇದೇ ಕವಿಗಳು, ಕುವೆಂಪು ಅವರ ಹೊಸ ಪರಿಕಲ್ಪನೆಗಳ ಬೆಳಕಿನಲ್ಲಿ ವ್ಯಾಖ್ಯಾನಿತವಾಗಿರುವ ಕ್ರಮ ತೀರಾ ಬೇರೆಯೇ ಆಗಿದೆ ಎನ್ನುವುದನ್ನು ಒಪ್ಪಿದರೂ, ಇಲ್ಲಿನ ಕೆಲವು ಬರೆಹಗಳಲ್ಲಿ ಕ್ವಚಿತ್ತಾಗಿ ತೌಲನಿಕ ವಿಮರ್ಶೆಯ ಪೂರ್ವರೂಪಗಳು ಮತ್ತು ಕಾವ್ಯಮೀಮಾಂಸೆಗೆ ಕೊಡುಗೆಯಾಗಬಲ್ಲ ಮತ್ತು ಕುವೆಂಪು ಅವರ ಸಾಹಿತ್ಯ ನಿರ್ಮಿತಿಗೆ ಮತ್ತು ವಿಮರ್ಶೆಗೆ ಪ್ರೇರಕವಾಗಬಲ್ಲ ಕೆಲವು ಹೊಳಹುಗಳೂ ಕಾಣಿಸಿಕೊಂಡಿವೆ. ನಿದರ್ಶನಕ್ಕೆ ಹೇಳುವುದಾದರೆ, ೧೯೩೩ರಂದು ಚಿಕ್ಕಮಗಳೂರಿನವರು ಪ್ರಕಟಿಸಿದ ‘ಲಕ್ಷಿ ಶ ಕವಿ ಪ್ರಶಸ್ತಿ’ (ಸ.ಗ. ಸಂ.೧. ಪು. ೫೮೫)ಗಾಗಿ ಕುವೆಂಪು ಈ ಮೊದಲೇ ತಾ. ೧೬.೮.೧೯೩೧ರಂದು ಬರೆದ (ನೆ.ದೋ.ಪು. ೭೩೧) ‘ಉಪಮಾಲೋಲ ಲಕ್ಷಿ ಶ’–ಎಂಬ ವಿಸ್ತಾರವಾದ ಲೇಖನದಲ್ಲಿ, ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ, ಕುವೆಂಪು ‘ರೂಪೋಪಮೆ, ಗುಣೋಪಮೆ, ಮತ್ತು ‘ಭಾವೋಪಮೆ’ಗಳ ಲಕ್ಷಣಗಳನ್ನು ಪ್ರಸ್ತಾಪಿಸಿ, ಲಕ್ಷಿ ಶನ ಕಾವ್ಯದ ಉಪಮೆಗಳನ್ನು ಈ ದೃಷ್ಟಿಯಿಂದ ಪರಿಶೀಲಿಸುವ ಸಾಧ್ಯತೆಯನ್ನು ಸೂಚಿಸುತ್ತಾರೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಮೂರು ಬಗೆಯ ‘ಉಪಮೆ’ಗಳ ಕಲ್ಪನೆಯ ಪ್ರಸ್ತಾಪ ಇದೇ ಮೊದಲು ಮತ್ತು ಕನ್ನಡಕ್ಕೆ ಹಿನ್ನೆಲೆಯಾದ ಸಂಸ್ಕೃತ ಕಾವ್ಯಮೀಮಾಂಸೆಯಲ್ಲೂ ಕಾಣದ್ದು. ಸಂಸ್ಕೃತ ಅಲಂಕಾರಶಾಸ್ತ್ರದಲ್ಲಿ ಉಪಮಾ ಅಲಂಕಾರ ವನ್ನೂ, ಅದರ ಪ್ರಭೇದಗಳನ್ನು ಕುರಿತು ಸಾಕಷ್ಟು ಚರ್ಚೆ ನಡೆದಿದೆ; ಆದರೆ ಕುವೆಂಪು ೧೯೩೧ರಷ್ಟು ಹಿಂದೆಯೇ ಪ್ರಸ್ತಾಪಿಸಿದ ‘ರೂಪೋಪಮೆ, ಗುಣೋಪಮೆ, ಭಾವೋಪಮೆ’– ಎನ್ನುವ ಉಪಮಾ ಪ್ರಭೇದಗಳು ಈ ಮೊದಲು ಎಲ್ಲಿಯೂ ಕಂಡುಬರುವುದಿಲ್ಲ. ಕುವೆಂಪು ಅವರ ಮೊದಲ ಹಂತದ ಬರೆಹವಾದ ‘ಸೀತಾ ವನವಾಸ’ (೧೯೨೮)– ಎಂಬ ವಿಮರ್ಶಾ ಲೇಖನ ಮೂಲತಃ ಸೀತಾ ಪರಿತ್ಯಾಗದಂಥ ಕರುಣಾಪೂರ್ಣವಾದ ಸನ್ನಿವೇಶವನ್ನು ಕುರಿತ ಪರಿಚಯಕ್ಕೆ ಮೀಸಲಾದರೂ, ರಾಮನಿಗೂ ಲವಕುಶರಿಗೂ ನಡೆಯಲಾದ ಯುದ್ಧವನ್ನು ಮತ್ತು ಆ ಯುದ್ಧದಲ್ಲಿ ಶ್ರೀರಾಮನು ಲವಕುಶರ ಬಾಣಗಳಿಂದ ಮೂರ್ಛಿತನಾಗಿ ಪರಾಜಯ ಹೊಂದಿದ ಸಂದರ್ಭವನ್ನು ಕುರಿತು, ಕುವೆಂಪು ಒಂದು ಮಾತು ಹೇಳುತ್ತಾರೆ. ಅದೆಂದರೆ: ‘ಶ್ರೀರಾಮನ ತಪ್ಪಿಗೆ ಆತನು ತನ್ನ ಮಕ್ಕಳಿಂದ ಪರಾಜಯ ಹೊಂದುವುದೇ ಲೌಕಿಕಾರ್ಹವಾದ ಪ್ರಾಯಶ್ಚಿತ್ತ, ಯಾರಾದರೇನಂತೆ ಧರ್ಮಕ್ಕೆ ಹೊರತಲ್ಲ’  (ಸ.ಗ. ಸಂ.೧. ಪು.೭೭-೭೮) ಶ್ರೀರಾಮನು ಜನಾಪವಾದದ ಮಾತಿಗೆ ಮನ್ನಣೆ ಕೊಟ್ಟು ಗರ್ಭಿಣಿಯಾದ ಸೀತೆಯನ್ನು ವನವಾಸಕ್ಕೆ ಕಳುಹಿಸಿದ್ದು ಒಂದು ಅಪರಾಧ. ಅಂಥವನು ಹೀಗೆ ತನ್ನ ಮಕ್ಕಳಿಂದಲೆ ಪರಾಜಯ ಹೊಂದುವಂತಾದದ್ದು ‘ಲೌಕಿಕಾರ್ಹವಾದ ಪ್ರಾಯಶ್ಚಿತ್ತ’. ಈ ಮೂಲಕ ಆತ ಮಕ್ಕಳ ಸಮೇತ ಸೀತೆಯನ್ನು ಪರಿಗ್ರಹಿಸಲು ಅರ್ಹನಾಗುತ್ತಾನೆ. ‘ಒಂದು ವೇಳೆ (ಇದಾವುದೂ ಘಟಿಸದೆ) ವಾಲ್ಮೀಕಿಯೇ ಸೀತೆಯನ್ನು ಆಕೆಯ ಮಕ್ಕಳೊಡನೆ ಪುನಃ ರಾಮನ ಬಳಿಗೆ ಕರೆದುಕೊಂಡು ಹೋಗಿದ್ದರೆ, ಧರ್ಮಕ್ಕೆ ಸಂಪೂರ್ಣ ಜಯವಾಗುತ್ತಿರಲಿಲ್ಲ. ರಾಮಚಂದ್ರನೇ ಆಶ್ರಮಕ್ಕೆ ಬಂದು ತನ್ನ ಸುತರಿಂದ ಸೋತು ತರುವಾಯ ವಾಲ್ಮೀಕಿಯ ಮಾತಿನಂತೆ ತಾಯಿ ಮಕ್ಕಳನ್ನು ಸ್ವೀಕರಿಸುವುದು, ಧರ್ಮಸಾಮ್ರಾಜ್ಯದ ಅಸ್ತಿತ್ವವನ್ನು ಬಿಚ್ಚಿ ತೋರಿಸುತ್ತದೆ’ (ಸ.ಗ.ಸಂ ೧. ಪು. ೭೮). ಇದು ಕುವೆಂಪು ಈ ಸಂದರ್ಭವನ್ನು ನೋಡುವ ಕ್ರಮ ಮತ್ತು ಅವರು ಒಪ್ಪಿಕೊಂಡ ಹಾಗೂ ಎತ್ತಿ ಹಿಡಿಯುವ ಒಂದು ನೈತಿಕ ನಿಲುವು. ಇದು ಅವರ ಕೃತಿ ನಿರ್ಮಿತಿಯ ಮತ್ತು ಸಾಹಿತ್ಯ ವಿಮರ್ಶೆಯ ಹಿಂದೆ ಇರುವ ಒಂದು ದೃಷ್ಟಿಕೋನ ಕೂಡಾ. ಇದು ಅವರ ಚಿತ್ರಾಂಗದಾ, ಬೆರಳ್ಗೆ ಕೊರಳ್ ಕೃತಿಗಳಲ್ಲಿ, ರಾಮಾಯಣದರ್ಶನದ ಮಂಥರೆ, ಅಹಲ್ಯೆ, ವಾಲಿ, ಸಂಪಾತಿ ಮತ್ತು ರಾವಣ ಇಂಥ ಪಾತ್ರಗಳ ಹಿಂದೆ ಇರುವ, ‘ತಪ್ಪು, ಅದಕ್ಕೊಂದು ಶಿಕ್ಷೆ ಹಾಗೂ ಆ ಮೂಲಕ ವ್ಯಕ್ತಿತ್ವಕ್ಕೆ ಒದಗುವ ಶುದ್ಧೀಕರಣ ಅಥವಾ ಬಿಡುಗಡೆ’–ಎಂಬ ತಾತ್ವಿಕ ತಿಳಿವಳಿಕೆಯಾಗಿದೆ. ಹಾಗೆಯೇ ಕಾಳಿದಾಸನ ಶಕುಂತಲೆ, ನಾಗವರ್ಮನ ಕಾದಂಬರೀಕಾವ್ಯದ ಮಹಾಶ್ವೇತೆ, ಟ್ಯಾಗೂರರ ಚಿತ್ರಾಂಗದೆ–ಇಂಥ ಪಾತ್ರಗಳನ್ನು ವಿಮರ್ಶಿಸುವಲ್ಲಿಯೂ ಒಂದು ಕೀಲಿಕೈಯಂತೆ ವರ್ತಿಸಿದೆ. ಈ ಒಂದು ಹೊಳಹು ಅವರಿಗೆ ಸ್ಫುರಿಸಿದ್ದು ೧೯೨೮ರ ಕಾಲದ ಅವರ ಮೊದಲ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಇದು ಕುವೆಂಪು ಅವರ ವರ್ಣನಾವಿಮರ್ಶೆಗೆ ಒಂದು ತಾತ್ವಿಕ ಆಯಾಮವನ್ನು ತಂದುಕೊಟ್ಟಿದೆ.

ಪ್ರಾಚೀನ ಕವಿ ಕೃತಿಗಳನ್ನು ಹೊಸತೊಂದು ದರ್ಶನದ ಬೆಳಕಿನಲ್ಲಿ ಪರಿಶೀಲಿಸಬಹುದೆಂಬ ಸಾಧ್ಯತೆ ಬಹುಶಃ ಕುವೆಂಪು ಅವರಿಗೆ ರವೀಂದ್ರನಾಥ ಟ್ಯಾಗೂರ್ ಅವರ ಬರಹಗಳಿಂದ ಸೂಚಿತವಾಗಿರಬಹುದೆಂದು ತೋರುತ್ತದೆ. ಹಾಗೆಯೇ ತೌಲನಿಕ ವಿಮರ್ಶೆಯ ಮಾದರಿಗಳು ಕೂಡಾ.[7] ಕುವೆಂಪು ಅವರ ಪ್ರಾಧ್ಯಾಪಕರಾದ ಪ್ರೊ. ಟಿ.ಎಸ್. ವೆಂಕಣ್ಣಯ್ಯ ಅವರು, ರವೀಂದ್ರನಾಥ ಟ್ಯಾಗೂರರ ‘ಪ್ರಾಚೀನ ಸಾಹಿತ್ಯ’ ಎಂಬ ವಿಮರ್ಶನ ಕೃತಿಯನ್ನು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದು ೧೯೨೭ರಲ್ಲಿ. ಸಹಜವಾಗಿಯೆ ಅಂದಿನ ಪಾಠಪ್ರವಚನಗಳ ಸಂದರ್ಭದಲ್ಲಿ, ಎಂ.ಎ. ವಿದ್ಯಾರ್ಥಿಯಾದ ಕುವೆಂಪು ಅವರ ಗಮನಕ್ಕೆ ಈ ಕೃತಿ ಬಂದೇ ಇರುತ್ತದೆ. ರವೀಂದ್ರನಾಥ ಟ್ಯಾಗೂರರ ಈ ಕೃತಿ ವಾಲ್ಮೀಕಿ-ಬಾಣ-ಕಾಳಿದಾಸ ಇಂಥವರ ಕೃತಿಗಳನ್ನು ಕುರಿತ ವಿಮರ್ಶೆಯ ಕೆಲವು ಬರೆಹಗಳನ್ನು ಒಳಗೊಂಡಿದೆ. ಅವುಗಳಲ್ಲಿ ‘ಶಾಕುಂತಲಾ’ ಮತ್ತು ‘ಕುಮಾರ ಸಂಭವ’ಗಳ ನಾಯಿಕೆಯರನ್ನು ಕುರಿತು ರವೀಂದ್ರರ ವಿಮರ್ಶೆಯ ನಿಲುವೊಂದು ಹೀಗೆ ನಿರೂಪಿತವಾಗಿದೆ: ಈ ಎರಡೂ ಕಾವ್ಯಗಳ ನಾಯಿಕೆಯರ ಬದುಕಿನಲ್ಲಿ ‘ಮನ್ಮಥನು ಯಾವ ಸಮಾಗಮವನ್ನು ಸಾಧಿಸುವುದಕ್ಕೆ ಪ್ರಯತ್ನಿಸುತ್ತಾನೆಯೋ ಅದು… ಋಷಿಶಾಪದಿಂದ ಪ್ರತಿಹತವಾದದ್ದು ಮತ್ತು ದೇವರೋಷದಿಂದ ಭಸ್ಮೀಕೃತವಾದದ್ದು’. ಅನಂತರ ‘ಅಸದಳವಾದ ದುಃಖದ ಮತ್ತು ದುಸ್ಸಹವಾದ ವಿರಹ ವ್ರತದ ಮೂಲಕವಾಗಿ ಲಭಿಸತಕ್ಕ ಸಮಾಗಮದ ಸ್ವರೂಪವೇ ಬೇರೆ. ಅದು ಸೌಂದರ್ಯದ ಬಾಹ್ಯಾವರಣಗಳನ್ನೆಲ್ಲವನ್ನು ಪರಿತ್ಯಾಗ ಮಾಡಿ ಸ್ನಿಗ್ಧವೂ ನಿರ್ಮಲವೂ ಆದ ರೂಪವನ್ನು ತಾಳಿ ಮಂಗಳಕರವಾದ ಶುಭ್ರಕಾಂತಿಯಿಂದ ಮನೋಹರವಾಗಿ ಪರಿಣಮಿಸುತ್ತದೆ’ (ಪ್ರಾಚೀನ ಸಾಹಿತ್ಯ: ಟಿ.ಎಸ್. ವೆಂಕಣ್ಣಯ್ಯ ಪು.೧೯;೨೨;೧೯) ರವೀಂದ್ರರ ಈ ವ್ಯಾಖ್ಯಾನದಲ್ಲಿ ನಿಷ್ಪನ್ನವಾದ ನಿಲುವನ್ನೆ ಕುವೆಂಪು ತಮ್ಮ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಅಳವಡಿಸಿ ಕೊಂಡಿದ್ದಾರೆ–ತಪ್ಪು, ಶಿಕ್ಷೆ, ಲೌಕಿಕವಾದ ಪ್ರಾಯಶ್ಚಿತ್ತ-ಮತ್ತು ತಪಸ್ಸಿನಿಂದ ಪ್ರಾಪ್ತವಾಗುವ ಶುದ್ಧೀಕರಣ ಎಂಬ ‘ನೈತಿಕ ಪರಿಭಾಷೆ’ಗಳಲ್ಲಿ. ‘ಮಹಾಶ್ವೇತೆಯ ತಪಸ್ಸು ಎಂಬ ಲೇಖನ ದಲ್ಲಿ ಕುವೆಂಪು ‘ಕ್ಷಣಿಕ ಕಾಮ ಕಷ್ಟದ ಮೂಸೆಯಲ್ಲಿ ಕರಗಿ ಕಾಲದ ಒರೆಗಲ್ಲಿನಲ್ಲಿ ಪರೀಕ್ಷಿತವಾಗಿ ಶಾಶ್ವತ ಪ್ರೇಮದಲ್ಲಿ ಪರಿಣಮಿಸಿದ್ದಕ್ಕೆ ಪುಂಡರೀಕ ಮಹಾಶ್ವೇತೆಯರ ಕಥೆ ನಿದರ್ಶನವಾಗಿದೆ (ಸ.ಗ. ಸಂ.೧. ಪು.೧೫೬)’; ‘ದೈಹಿಕ ಕಾಮ ಜನ್ಮ ಜನ್ಮಾಂತರಗಳ ಕ್ಲೇಶಕಷ್ಟ ವಿರಹಗಳ ಉಗ್ರ ತಪಸ್ಸಿನಿಂದ ಕಾಳಿಕೆ ಕಳೆದುಕೊಂಡು ಅಚ್ಚ ಹೊನ್ನಾಗಿ ದೈವಿಕ ಪ್ರೇಮದಲ್ಲಿ ಸಾರ್ಥಕತೆಯನ್ನು ಸಂಪಾದಿಸಿದ ಪುಣ್ಯಕಥೆ’ (ಸ.ಗ. ಸಂ.೧ ಪು.೧೫೫) –ಎಂದು ವ್ಯಾಖ್ಯಾನಿಸುತ್ತಾರೆ. ಕಾಳಿದಾಸನ ಶಾಕುಂತಲಾ ನಾಟಕದಲ್ಲಿ, ಕವಿ ‘ಒಂದು ನೀತಿದೃಷ್ಟಿಯ ‘ದರ್ಶನ’ವನ್ನು ವ್ಯಕ್ತಗೊಳಿಸಿದ್ದಾನೆ ಎಂದು ತೋರುತ್ತದೆ. ಅದಾವುದೆಂದರೆ, ತಪಸ್ಯೆಯಿಂದ ಪರಿಶುದ್ಧವಾಗಿ, ಐಂದ್ರಿಯ ಸ್ವಾರ್ಥದ ತಮಸ್ಸಿನಿಂದಲೂ, ಪ್ರಾಣಮಯ ಸ್ವಾರ್ಥದ ರಜಸ್ಸಿನಿಂದಲೂ ವಿಮೋಚನೆ ಹೊಂದುವ ಸಾತ್ವಿಕ ಪ್ರೇಮದ ಔತ್ತಮ್ಯ’ (ಸ.ಗ. ಸಂ.೧. ಪು.೨೬೩)–ಎಂದು ಬರೆಯುತ್ತಾರೆ. ರವೀಂದ್ರನಾಥ ಟ್ಯಾಗೂರರ ಚಿತ್ರಾಂಗದಾ ನಾಟಕವನ್ನು ಕುರಿತು ತಮ್ಮ ಚಿತ್ರಾಂಗದಾ ಕಾವ್ಯದ ಮುನ್ನುಡಿಯಲ್ಲಿ, ಟ್ಯಾಗೂರರು ತಮ್ಮ ಕೃತಿಯಲ್ಲಿ ‘ತಾರುಣ್ಯದ ಸಂಯಮರಹಿತ ವ್ರತಭ್ರಷ್ಟತೆಗೆ ಪ್ರಾಯಶ್ಚಿತ್ತ ವಿಹೀನವಾದ ಭೋಗ ಕಿರೀಟವನ್ನಿಟ್ಟು ಪ್ರೇಮದ ಮಂಗಳಾರತಿ’ ಎತ್ತಿದ್ದಾರೆಂದು (ಚಿತ್ರಾಂಗದಾ: ೧೯೩೬) ಆಕ್ಷೇಪಿಸುವ ಕುವೆಂಪು ‘ಎಷ್ಟೇ ಪರಿಶುದ್ಧವಾದುದಾಗಲಿ, ಎಷ್ಟೆ ಮುಗ್ಧವಾದುದಾಗಲಿ, ತಪಸ್ಸಿನಿಂದ ಪರೀಕ್ಷಿತವಾಗಿ ಚಂಚಲತಾ ವಿಮುಕ್ತವಾಗದಿದ್ದರೆ, ಪರಿಷ್ಕೃತವಾಗಿ ಪಕ್ವವಾಗದಿದ್ದರೆ, ತಾರುಣ್ಯದ ತರಳಭೋಗಕ್ಕೆ ಚಿರಪ್ರೇಮದ ಮಹತ್ತಾಗಲಿ ಗೌರವವಾಗಲಿ ದೊರೆಯುವುದಿಲ್ಲ’ (ಸ.ಗ. ಸಂ.೧. ಪು.೧೫೮) ಎಂದು ಟ್ಯಾಗೂರರ ಚಿತ್ರಾಂಗದದ ಬಗ್ಗೆ ತಮ್ಮ ಆಕ್ಷೇಪಣೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಇದು ಕುವೆಂಪು ಅವರ ಸಾಹಿತ್ಯ ವಿಮರ್ಶೆಯಲ್ಲಿ ಪ್ರಧಾನವಾಗಿ ಕಾಣುವ ನೀತಿನಿಷ್ಠ ನಿಲುವೆಂಬುದು ನಿಜವಾದರೂ, ಪ್ರಾಚೀನ ಸಾಹಿತ್ಯ ಕೃತಿಗಳ ಅರ್ಥವಂತಿಕೆಗೆ ಒಂದು ರೀತಿಯಲ್ಲಿ ನೆರವಾಗುವುದೆನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

ಈ ಬಗೆಯ ವಿಸ್ತರಣೆಗಳನ್ನು ಪಡೆದುಕೊಳ್ಳುವ ಕುವೆಂಪು ಅವರ ವಿಮರ್ಶೆ, ಕನ್ನಡ ಸಾಹಿತ್ಯ ಪರಂಪರೆಯನ್ನು ಅದರ ಮಹತ್ವದ ಕೆಲವು ಕವಿಗಳ ಮೂಲಮಾನದಲ್ಲಿ ಗ್ರಹಿಸಿ ವ್ಯಾಖ್ಯಾನಿಸಿದ ಕ್ರಮ ವಿಶೇಷ ರೂಪದ್ದಾಗಿದೆ. ಒಂದು ಸಾವಿರದ ಐನೂರು ವರ್ಷಗಳಷ್ಟು ಸುದೀರ್ಘವಾದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವರ ಆಯ್ಕೆ ಕೆಲವೇ ಕೆಲವು ಮುಖ್ಯ ಕವಿಗಳಿಗೆ ಸೀಮಿತವಾಗಿದೆ: ಪಂಪ-ರನ್ನ-ನಾಗವರ್ಮ-ಕುಮಾರವ್ಯಾಸ-ಲಕ್ಷಿ ಶ ಮತ್ತು ಪ್ರಾಸಂಗಿಕವಾಗಿ ಜನ್ನ, ರಾಘವಾಂಕ, ರತ್ನಾಕರ. ಅದರಲ್ಲಿಯೂ ಪಂಪ ಕುಮಾರವ್ಯಾಸರಿಗೆ ಮೊದಲಮಣೆ. ‘ಹಳಗನ್ನಡ ಕವಿ ಪಂಪ-ಕಲಿತವರ ಕಲ್ಪತರು. ನಡುಗನ್ನಡದ ಕವಿ ನಾರಣಪ್ಪ ಕಲಿಯದವರಿಗೂ ಕಾಮಧೇನು. ಕರ್ನಾಟಕದ ಕವಿಜೀವನದ ಮೇಲೆ ಪಂಪನ ಪ್ರಭಾವ ವಿಶೇಷವಾಗಿರಬಹುದು. ಆದರೆ ಜನ ಹೃದಯವೇದಿಕೆಯಲ್ಲಿ ನಾರಣಪ್ಪನೆ ಅಗ್ರಾಸನಸ್ಥ ಮಹಾಧ್ಯಕ್ಷ’ (ಸ.ಗ. ಸಂ.೧. ಪು.೨೭೯)–ಇದು ಇಬ್ಬರು ಮಹಾಕವಿಗಳನ್ನು ಕುವೆಂಪು ಗ್ರಹಿಸುವ ರೀತಿ. ಕುಮಾರವ್ಯಾಸನು ಜನಮನದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡದ್ದಕ್ಕೆ ಕಾರಣ, ‘ನಾರಣಪ್ಪನ ನಡುಗನ್ನಡದ ಭಾಮಿನೀಗಣದ ತರಂಗ ಶೈಲಿಯ ಸುಲಭ ಸರಳತೆ ಮಾತ್ರವಲ್ಲ; ಪ್ರವಾಹಪೂರ್ಣವಾದ ಪರ್ವತ ಭಾಗೀರಥಿಯ ಅದಮ್ಯ ವೇಗದ ಭೀಮಗಮನ ವಿನ್ಯಾಸದಿಂದ ಮುನ್ನುಗ್ಗುವ ಆತನ ಪ್ರತಿಭೆಯೊಂದೇ ಅಲ್ಲ; ಹೆಮ್ಮೋಡದಂತೆ ದಿಗಂತದಿಂದ ಅನಿರೀಕ್ಷಿತವಾಗಿ ಮೇಲ್ವಾಯುವ ಅವನ ಕಲ್ಪನಾಶಕ್ತಿ, ಕಾರ್ಗಾಳಿಯಂತೆ ಬೀಸಿ ಬಡಿಯುವ ಅವನ ಭಾವಾವೇಗ, ಮಿಂಚಿನ ಬಳ್ಳಿಯಂತೆ ಅಲ್ಲಲ್ಲಿ ತಳ ತಳಿಸುವ ಆತನ ಉಪಮಾರೂಪಕಾದಿಗಳ ರುದ್ರರಮ್ಯತೆ, ಸಿಡಿಲು  ಗುಡುಗಿನ ಡಮರು ಡಿಂಡಿಮಗಳನ್ನೆ ಹಿಡಿದು ಬಡಿದು ಕುಣಿವ ನಾದ ತಾಂಡವನಂತಹ ಆತನ ರುಂದ್ರನೃತ್ಯಶೈಲಿ–ಇವು ಮಾತ್ರವೆ ಸಮಸ್ತ ಕಾರಣವಲ್ಲ, ಗದುಗಿನ ಭಾರತದ ಜನಪ್ರಿಯತೆಗೆ; ಕವಿವಿರಾಟ್ ಕುಮಾರವ್ಯಾಸನ ಕಾವ್ಯಲಕ್ಷ್ಮಿಗೆ ಆಕೆಯ ನಾಡಿಯ ನಿತ್ಯಸ್ಪಂದನೆಗಳೇನೋ ನಿಜ, ಮೇಲೆ ಹೇಳಿದ ಗುಣಗಳೆಲ್ಲ. ಜೊತೆಗೆ ಬಹುಮುಖ್ಯವಾಗಿ, ಅವನ ಮಹಿಮೆಗೆ ಕಾರಣ-ಆತನ ಧರ್ಮದೃಷ್ಟಿ, ಆತನ ಭಗವದ್‌ಭಕ್ತಿ, ಆತನ ಋಷಿದರ್ಶನ’. (ಸ.ಗ. ಸಂ.೧. ಪು.೨೭೯)– ಕುವೆಂಪು ಅಲ್ಲದೆ ಇನ್ನಾರೂ ಕುಮಾರವ್ಯಾಸನ ಮಹತ್ತನ್ನು ಹೀಗೆ ರೂಪಕ ಶೈಲಿಯಲ್ಲಿ ವರ್ಣಿಸಲಾರರು! ‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎಂದು ಮೊದಲಾಗುವ ಕವಿತೆ ಈ ಕಾವಿನಿಂದಲೇ ಹುಟ್ಟಿಕೊಂಡಿರಬೇಕು.

ಕುಮಾರವ್ಯಾಸನಂತೆಯೆ ಪಂಪನೂ ಮಹಾಕವಿಯೇನೋ ಹೌದು. ಅವನು ಕುಮಾರವ್ಯಾಸನಿಗೂ ಮೊದಲು ವ್ಯಾಸಭಾರತದ ಕಥಾವಸ್ತುವನ್ನು ಕನ್ನಡದಲ್ಲಿ ನಿರ್ವಹಿಸಿದವನು. ಆದರೆ ಅವನ ಕಾವ್ಯಪ್ರತಿಭೆ ‘ಬೆಳಗುವೆನಿಲ್ಲಿ ಲೌಕಿಕಮನ್ ಅಲ್ಲಿ ಜಿನಾಗಮಮಂ’ ಎಂದು ಪಂಪಭಾರತ ಮತ್ತು ಆದಿಪುರಾಣಗಳಲ್ಲಿ ಕವಲೊಡೆಯಿತು. ಕುವೆಂಪು ಅವರು, ಕುಮಾರ ವ್ಯಾಸನು ಕಲಾದೃಷ್ಟಿಯಿಂದ ಪಂಪನಿಗೆ ದ್ವಿತೀಯನಾದರೂ, ಪಂಪನಂತೆ ‘ಲೌಕಿಕ ಆಗಮಿಕ, ಐಹಿಕ ಆಮುಷ್ಮಿಕ ಎಂದು ಕವಲೊಡೆಯದೆ ತನ್ನ ಪ್ರತಿಭೆಯನ್ನು ಅಖಂಡವಾಗಿ ಅಭಿವ್ಯಕ್ತಿಸಿರುವ ಕಾರಣದಿಂದ ಆದಿಕವಿ ಪಂಪನಿಗೂ ಅದ್ವಿತೀಯವಾಗಿ, ಆತನನ್ನೂ ದ್ವಿತೀಯನನ್ನಾಗಿ ಮಾಡುವ ಯೋಗಕವಿ’–ಎಂದು ವರ್ಣಿಸುತ್ತಾರೆ. (ಸ.ಗ. ಸಂ.೧. ಪು. ೨೨೭-೨೨೮) ಆದರೆ ಬೇರೊಂದು ದೃಷ್ಟಿಯಿಂದ ಪಂಪ ‘ಜಗತ್ ಕವಿ, ಏಕೆಂದರೆ ಆತನ ಕಾವ್ಯಗಳಲ್ಲಿ ಸಾಕ್ಷಾತ್ಕಾರಗೊಂಡಿರುವ ಭವ್ಯತೆ ಇತರ ಜಗತ್ ಕವಿಗಳ ಮಹಾಕಾವ್ಯಗಳಲ್ಲಿ ಮೈಗೊಂಡಿರುವ ಭವ್ಯತೆಗೆ ಸಮಸ್ಪರ್ಧಿಯಾಗಿದೆ’ (ಸ.ಗ. ಸಂ.೧. ಪು.೧೮೪-೧೮೫)–ಎಂದು ‘ಪಂಪನಲ್ಲಿ ಭವ್ಯತೆ’ ಎಂಬ ಲೇಖನದಲ್ಲಿ ಹೇಳುತ್ತಾರೆ. ಕುವೆಂಪು ಈ ಮಾತನ್ನು ಅವರು ಜಗತ್ತಿನ ಇತರ ಮಹಾಕವಿಗಳ ಅಧ್ಯಯನದ ಹಿನ್ನೆಲೆಯಲ್ಲಿ ಹೇಳುತ್ತಾರೆಂಬುದನ್ನು ಗಮನಿಸಬೇಕು. ಪಂಪನ ಪ್ರತಿಭೆ ಕುಮಾರವ್ಯಾಸನಲ್ಲಿಯಂತೆ ಏಕಾಖಂಡವಾಗಿ ಅಭಿವ್ಯಕ್ತಗೊಳ್ಳದೆ ‘ಲೌಕಿಕ-ಆಗಮಿಕ, ಐಹಿಕ-ಆಮುಷ್ಮಿಕ’- ಎಂದು ಕವಲೊಡೆದದ್ದು ಅಷ್ಟು ಅಪೇಕ್ಷಣಿಯವಾದ ಸಂಗತಿಯಲ್ಲವೆಂಬ ಗ್ರಹಿಕೆಯೊಂದು ಕುವೆಂಪು ಅವರಲ್ಲಿ ಇರುವಂತೆ ತೋರುತ್ತದೆ. ಇದು ಹೇಗೆ ಇರಲಿ, ವಿಮರ್ಶಕ ಕುವೆಂಪು ಅವರು, ವಿಮರ್ಶೆಯ ವಿವಿಧ ಪರಿಕಲ್ಪನೆಗಳನ್ನು ಅನ್ವಯಿಸಿ ಸಾಹಿತ್ಯವಿಮರ್ಶೆಯ ಹಾಗೂ ಕಾವ್ಯಮೀಮಾಂಸೆಯ ವಿಚಾರಗಳನ್ನು ವಿಸ್ತರಿಸುವಲ್ಲಿ, ‘ಲಕ್ಷ ’ವಾಗಿ ಒದಗುವ ಬಹುತೇಕ ನಿದರ್ಶನಗಳು ಪಂಪ ಕುಮಾರವ್ಯಾಸರವೇ ಆಗಿವೆ ಎನ್ನುವುದು ಸ್ವಾರಸ್ಯದ ಸಂಗತಿಯಾಗಿದೆ.

ಕುವೆಂಪು ಅವರ ಸಾಹಿತ್ಯ ವಿಮರ್ಶೆಯಲ್ಲಿ ಅವರ ಗಮನವನ್ನು ಪಂಪ ಕುಮಾರ ವ್ಯಾಸರ ನಂತರ ಸೆಳೆದುಕೊಳ್ಳುವ ಕವಿ ರನ್ನ. ಪ್ರಥಮ ಪರಿಚಯದಲ್ಲಿಯೆ ಸಾಹಿತ್ಯದ ಪ್ರೌಢ ವಿದ್ಯಾರ್ಥಿಯ ಗಮನವನ್ನು ತೆಕ್ಕನೆ ಸೆಳೆದುಕೊಳ್ಳುವ ರನ್ನನಲ್ಲಿರುವ ಮುಖ್ಯ ಲಕ್ಷಣವೆಂದರೆ ‘ಶಕ್ತಿ’ ಎಂದು ಕುವೆಂಪು ಗುರುತಿಸುತ್ತಾರೆ. ಯಾಕೆಂದರೆ ‘ರನ್ನನ ವಿಶಿಷ್ಟ ಗುಣವಾದ ‘ಶಕ್ತಿ’ ಅದೇ ಪ್ರಮಾಣದಲ್ಲಿ ಆ ತೂಕದಲ್ಲಿ ಆ ವೇಗದಲ್ಲಿ ಆ ಮಿಂಚಿನಲ್ಲಿ ಮತ್ತೆಲ್ಲಿಯೂ ಲಭಿಸುವುದಿಲ್ಲ’ (ಸ.ಗ. ಸಂ.೧. ಪು.೨೭೩). ಈ ದೃಷ್ಟಿಯಿಂದ ಕುವೆಂಪು ರನ್ನನನ್ನು ‘ಶಕ್ತಿಕವಿ’ ಎಂದು ಕರೆಯುತ್ತಾರೆ. ‘ಶಕ್ತಿ’ ಎನ್ನುವ ಪದ ಸಾಹಿತ್ಯದ ವಿದ್ಯಾರ್ಥಿಗಳಿಗೆ ಅಪರಿಚಿತವಾದುದೇನೂ ಅಲ್ಲ. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಶಕ್ತಿ, ಪ್ರತಿಭೆ, ಪ್ರತಿಭಾನ ಎಂಬ ಈ ಮೂರು ಪದಗಳೂ ಇದ್ದು, ಆ ಮೂರೂ ಹೆಚ್ಚು ಕಡಿಮೆ ಸಮಾನಾರ್ಥಕಗಳೆಂದೇ ಭಾವಿತವಾಗಿವೆ. ಪ್ರೊ. ತೀ.ನಂ.ಶ್ರೀಕಂಠಯ್ಯನವರು ತಮ್ಮ ಭಾರತೀಯ ಕಾವ್ಯಮೀಮಾಂಸೆ (೧೯೬೧)ಯಲ್ಲಿ, ನಮ್ಮ ಆಲಂಕಾರಿಕರಲ್ಲಿ ಕಾಣುವ ‘ಶಕ್ತಿ ಎಂಬುದನ್ನು ವಿಶಾಲ ತರವಾದ genius ಎಂಬ ಅರ್ಥದಲ್ಲಿಯೂ ಪ್ರತಿಭೆ ಎಂಬುದನ್ನು Imagination ಎಂಬ ಅರ್ಥದಲ್ಲಿಯೂ ನಿಯತವಾಗಿ ಉಪಯೋಗಿಸುವುದು ಉತ್ತಮ’ (ಭಾ.ಕಾ.ಮೀ.ಪು. ೧೬೨. ಅಡಿಟಿಪ್ಪಣಿ) ಎಂದು ಸೂಚಿಸುತ್ತಾರೆ. ಹೀಗೆ ಭಾರತೀಯ ಕಾವ್ಯಮೀಮಾಂಸೆಯೊಳಗಿರುವ ಈ ಪಾರಿಭಾಷಿಕವನ್ನು, ಕವಿ ಪ್ರತಿಭೆಯ ವಿಶೇಷ ಸೂಚಕವಾಗಿ ‘ಶಕ್ತಿಕವಿ’–ಎಂಬ ಪದಸಮುಚ್ಚಯದಲ್ಲಿ ಮೊದಲು ಬಳಸಿದವರು ಕುವೆಂಪು. ಕುವೆಂಪು ‘ಶಕ್ತಿ’ ಎಂಬ ಪದವನ್ನು ಬಹುಶಃ ತೀ.ನಂ.ಶ್ರೀ. ಯವರು ಸೂಚಿಸುವ ‘ಜೀನಿಯಸ್’ ಎಂಬರ್ಥದಲ್ಲಿ ಬಳಸಿರಬಹುದು. ಆದರೆ ಅವರೇ ಹೇಳುವಂತೆ ‘ಅದು ಅವನದೇ ಆದ ಚೈತನ್ಯದ ವಿಶಿಷ್ಟ ಪ್ರತಿಭಾನ’ (ಸ.ಗ.ಸಂ.೧. ಪು.೨೭೭)[8] . ಮುಟ್ಟಿದೆಡೆಯಲ್ಲೆಲ್ಲಾ ಥಟ್ಟನೆ ಅನುಭವ ಗೋಚರವಾಗುವ ಒಂದು ವಿದ್ಯುತ್ ಸ್ಪರ್ಶ. ಕುವೆಂಪು ಬರೆದ ಮೊದಲ ವಿಮರ್ಶಾ ಲೇಖನವೇ ರನ್ನನ ಗದಾಯುದ್ಧ ಕಾವ್ಯವನ್ನೋದಿ, ಅವರಿಗಾದ ಅನುಭವವನ್ನು ಕುರಿತದ್ದು.

ತಮ್ಮ ಆಯ್ಕೆಯ ಕೆಲವೇ ಪ್ರಮುಖ ಕವಿಗಳ ಮೂಲಮಾನದಲ್ಲಿ ‘ಕಾವ್ಯವಿಹಾರ’ಕ್ಕೆ ತೊಡಗುವ ಕುವೆಂಪು ಅವರ ಸಾಹಿತ್ಯ ವಿಮರ್ಶೆಯು ಕವಿಗಳನ್ನೂ ಕೃತಿಗಳನ್ನೂ ಕುರಿತು ತೆರೆಯುವ ಹೊಳಹುಗಳು, ಎಷ್ಟು ಸಾರವತ್ತಾಗಿ ಕುವೆಂಪು ಅವರು ಕೃತಿಗಳನ್ನು ವಿಭಿನ್ನ ರೀತಿಯಲ್ಲಿ ಗ್ರಹಿಸುತ್ತಾರೆಂಬುದನ್ನು ಸೂಚಿಸುವುದರ ಜತೆಗೆ, ಸಹೃದಯರ ಸಾಹಿತ್ಯಾಧ್ಯಯನಕ್ಕೆ ಹೊಸ ದಿಗ್ದರ್ಶನಗಳನ್ನೂ ನೀಡುತ್ತದೆ. ಅವರ ವಿಮರ್ಶೆಯ ಕ್ರಮ ಕೃತಿಯೊಂದನ್ನು ಬೌದ್ಧಿಕವಾಗಿ ವಿಶ್ಲೇಷಿಸಿ ವಿವರಿಸುವ ಸ್ವರೂಪದ್ದಲ್ಲ; ಬದಲು ಓದುಗರು ಕೃತಿಯನ್ನು ಗ್ರಹಿಸಲಗತ್ಯವಾದ ಸೃಜನಶೀಲ ಒಳನೋಟಗಳನ್ನು ತೆರೆಯುವಂಥದು: ‘ಹಳಗನ್ನಡ ಕವಿ ಪಂಪ, ಕಲಿತವರಿಗೆ ಕಲ್ಪತರು, ನಡುಗನ್ನಡದ ಕವಿ ನಾರಣಪ್ಪ ಕಲಿಯದವರಿಗೂ ಕಾಮಧೇನು’ (ಸ.ಗ.ಸಂ.೧. ಪು.೨೭೯) ‘ರನ್ನನಲ್ಲಿ ಅಂತಹ ಶಕ್ತಿಗುಣವೊಂದಿಲ್ಲದಿದ್ದರೆ, ಅವನದು ಪಂಪ ಸೂರ್ಯಕಾಂತಿಯನ್ನು ಪ್ರತಿಬಿಂಬಿಸುವ ಚಂದ್ರಕೀರ್ತಿ ಮಾತ್ರವಾಗುತ್ತಿತ್ತು’. (ಸ.ಗ. ಸಂ.೧. ಪು.೨೭೩) ಕುಮಾರವ್ಯಾಸ ‘ಪದ ವಿಷ್ಣು ಪದಗಳಿಂದ ಭಾವ ಭಾಗೀರಥಿಯನ್ನು ಸೃಜಿಸಿ ನೆಲಕ್ಕೆ ತರುವ ಕಲಾಬ್ರಹ್ಮ’ (ಸ.ಗ. ಸಂ.೧. ಪು.೨೩೩); ‘ಕನ್ನಡ ಸಾಹಿತ್ಯರಂಗದಲ್ಲಿ ದ್ರೌಪದಿಯ ಶ್ರೀಮುಡಿಗೆ ಕೈಯಿಟ್ಟ ನಾಲ್ವರು ಸಮರ್ಥರಲ್ಲಿ ಇಬ್ಬರು ಮಹಾಕಲಿಗಳು, ಇನ್ನಿಬ್ಬರು ಮಹಾ ಕವಿಗಳು: ಭೀಮ, ದುಃಶ್ಶಾಸನ; ಪಂಪ, ನಾರಣಪ್ಪ’ (ಸ.ಗ. ಸಂ.೧. ಪು.೩೯೭); ನಾಗವರ್ಮನ ಕಾದಂಬರೀ ಕಾವ್ಯದಲ್ಲಿ ‘ಶೃಂಗಾರವೂ ತಪೋಮಯವಾಗಿದೆ; ತಪಸ್ಸೂ ಶೃಂಗಾರಪೂರ್ಣವಾಗಿದೆ’ (ಸ.ಗ.ಸಂ. ೧. ಪು. ೧೫೫); ಪಂಪನ ‘ಭಾರತ ಎಷ್ಟರಮಟ್ಟಿಗೆ ಹಿಂಸಾಕಾವ್ಯವೊ ಆದಿಪುರಾಣ ಅಷ್ಟರಮಟ್ಟಿಗೆ ಅಹಿಂಸಾಕಾವ್ಯ. ಅಲ್ಲಿ ರಾಜ್ಯಸಂಪಾದನೆಗೆ ಒಂದು ಕುರುಕ್ಷೇತ್ರವೇ ಏರ್ಪಟ್ಟರೆ, ಇಲ್ಲಿ ರಾಜ್ಯ ಪರಿತ್ಯಾಗದಿಂದಲೇ ಅನೇಕ ತಪಃಕ್ಷೇತ್ರಗಳು ಉದ್ಭವಿಸುತ್ತವೆ. ಅಲ್ಲಿಯ ರಣವ್ರತದ ಸ್ಥಾನವನ್ನು ಇಲ್ಲಿ ಅಣುವ್ರತ ಆಕ್ರಮಿಸುತ್ತದೆ. ಅಲ್ಲಿ ಬಹಿರ್ಮುಖತೆ ಧನುರ್ಧಾರಿಯಾಗಿದ್ದರೆ ಇಲ್ಲಿ ಅಂತರ್ಮುಖತೆ ಧ್ಯಾನಶೀಲವಾಗಿದೆ. ಅಲ್ಲಿ ವ್ಯಕ್ತಿಯ ಮತ್ತು ವ್ಯಕ್ತಿತ್ವದ ವೈಭವಾಭಿವೃದ್ಧಿ ಹೆಮ್ಮೆಪಟ್ಟುಕೊಳ್ಳುತ್ತಿದೆ. ಇಲ್ಲಿ ಆ ಹೆಮ್ಮೆ ಅರ್ಹತ್ ಪದವಿಗೆ ಅಡಚಣೆಯಾಗುವುದರಿಂದ ಅದರ ಸಂಪೂರ್ಣದ ದಮನವೇ ಆತ್ಮದ ಪ್ರಯತ್ನವಾಗುತ್ತದೆ’ (ಸ.ಗ. ಸಂ.೧. ಪು.೧೮೭)– ಈ ಕೆಲವು ಹರಳುಗೊಂಡ ಚಿಂತನೆಗಳು, ಕೃತಿಯೊಂದಿಗೆ ಚಿಂತನಶೀಲವೂ ಧ್ಯಾನಶೀಲವೂ ಆದೊಂದು ಮನಸ್ಸು ನಡೆಯಿಸಿದ ಸೃಜನಶೀಲ ಸಂವಾದದ ಪರಿಣಾಮಗಳಾಗಿವೆ. ಮತ್ತು ಸಹೃದಯರು ಕವಿಕೃತಿಯ ವಿಶೇಷತೆಯನ್ನು ಗ್ರಹಿಸಲು ಮಿಂಚಿನ ಕೀಲಿಕೈಗಳಂತೆ ವರ್ತಿಸುತ್ತವೆ.


[1] ೧) ವಿದ್ಯಾರ್ಥಿ ಕವಿಗಳಲ್ಲಿ (೧೫.೧೨.೧೯೨೮) ಸೆಂಟ್ರಲ್ ಕಾಲೆಜ್ ಕರ್ನಾಟಕ ಸಂಘದಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷ ಭಾಷಣ.

೨) ಸಾಹಿತ್ಯ ಪ್ರಚಾರ (೮.೧೨.೧೯೩೦) ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಮಾಡಿದ ಭಾಷಣ.

೩) ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ (೩೦.೧೨.೧೯೩೩) ಹುಬ್ಬಳ್ಳಿಯ, ಕರ್ನಾಟಕ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷ ಭಾಷಣ.

೪) ಹೊಸ ಸಾಹಿತ್ಯ ಮತ್ತು ಹೊಸ ದೃಷ್ಟಿ (೩೧.೩.೧೯೩೭) ಮೈಸೂರಿನ ಸಾಹಿತ್ಯ ಸಂಘವೊಂದರಲ್ಲಿ ಮಾಡಿದ ಭಾಷಣ.

[2] ‘ನೆನಪಿನ ದೋಣಿಯಲ್ಲಿ’ (ಪು. ೬೪೩) ಕುವೆಂಪು ‘ಮುಂಗಾರು’ ಹೆಸರಿನ ಈ ಕವನ ‘ಕೊಳಲು’ ಸಂಗ್ರಹದಲ್ಲಿ ಅದು ಪ್ರಕಟವಾಯಿತು ಎನ್ನುತ್ತಾರೆ. ಆದರೆ ಈಗ ದೊರಕುವ ಕೊಳಲು ಸಂಗ್ರಹದಲ್ಲಿ ಅದಿಲ್ಲ. ಅದು ಕಾಣಿಸಿಕೊಳ್ಳುವುದು ೧೯೪೬ರಲ್ಲಿ ಪ್ರಕಟವಾದ ‘ಪಕ್ಷಿಕಾಶಿ’–ಸಂಕಲನದಲ್ಲಿ. ಹೀಗಿರುವಾಗ, ೧೯೩೦ರ ಕಾಲದಲ್ಲಿ ಜಯಕರ್ನಾಟಕದಲ್ಲಿ ಇದರ ವಿಮರ್ಶೆ ಬಂದದ್ದು ಹೇಗೆ? ಹೀಗಾಗಿ ಕುವೆಂಪು ಅವರ ‘ನೆನಪಿನ ದೋಣಿ’ಯ ದಾಖಲೆಯಲ್ಲಿ ಏನಾದರೂ ಗೊಂದಲವಿದೆಯೆ? ಅಥವಾ ೨೨.೪.೧೯೨೯ರಲ್ಲಿ ರಚಿತವಾಯಿತೆಂದು ನಮೂದಾಗಿರುವ (ಸ.ಕಾ.ಸಂ.೧ ಪು. ೬೮೨) ಈ ಕವಿತೆ, ಅವರ ಕೊಳಲು (೧೯೩೦) ಸಂಕಲನದ ಮೊದಲ ಮುದ್ರಣದಲ್ಲಿಯೇ ಪ್ರಕಟವಾಗಿದ್ದು, ಮುಂದೆ ಅದನ್ನು ಕುವೆಂಪು ಅವರೇ ಪಕ್ಷಿಕಾಶಿ (೧೯೪೬) ಸಂಗ್ರಹದೊಳಗೆ ಸೇರಿಸಿರಬಹುದೆ?

[3] ಹರಿಹರನ ‘ಬಸವರಾಜ ದೇವರ ರಗಳೆ’ಗೆ, ಮತ್ತು ಹರಿಶ್ಚಂದ್ರ ಕಾವ್ಯ ಸಂಗ್ರಹಕ್ಕೆ ಪ್ರೊ. ವೆಂಕಣ್ಣಯ್ಯನವರೂ ಮತ್ತು ಪ್ರೊ. ಎ.ಆರ್. ಕೃಷ್ಣಶಾಸ್ತ್ರಿಗಳು ಜತೆಗೂಡಿ ಬರೆದ ಸಂಪಾದಕೀಯ ಪ್ರಸ್ತಾವನೆಗಳನ್ನು ಗಮನಿಸಿದರೆ ಪ್ರಾಚೀನ ಸಾಹಿತ್ಯವನ್ನು ಹೊಸ ಕಾಲದ ಓದುಗರಿಗೆ ಅವರು ಹೇಗೆ ವ್ಯಾಖ್ಯಾನಿಸುತ್ತಿದ್ದರು ಎಂಬುದರ ಸ್ವರೂಪವನ್ನು ಗುರುತಿಸಬಹುದು.

[4] ವಾಸ್ತವವಾಗಿ ಇದು, ಅವರು ತಾ ೧೧.೮.೧೯೨೫ರಂದು, ಮೈಸೂರು ಮಹಾರಾಜಾ ಕಾಲೇಜಿನ ಕರ್ನಾಟಕ ಸಂಘದಲ್ಲಿ, ಮಾಡಿದ ಭಾಷಣ (ನೋಡಿ: ನೆ.ದೋ. ಪು. ೪೧೨)

[5] ಇದೇ ಕಾಲದಲ್ಲಿ, ಅಂದರೆ ೧೯೨೭ನೇ ಅಕ್ಟೋಬರ್ ೨೧ನೆಯ ತಾರೀಖು ಕುವೆಂಪು ಬರೆದ ಒಂದು ಲೇಖನ ‘ಕನ್ನಡ ಸಾಹಿತ್ಯದ ಮೇಲೆ ಇಂಗ್ಲಿಷ್ ಸಾಹಿತ್ಯದ ನವೀನ ಪ್ರಭಾವ’ ಎನ್ನುವುದು. ತಿರುಮಲೆ ತಾತಾಚಾರ್ಯ ಶರ್ಮರು ಹೊರಡಿಸುತ್ತಿದ್ದ ‘ವಿಶ್ವಕರ್ನಾಟಕ’ ಪತ್ರಿಕೆಯ ಒಂದು ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ. ಅದನ್ನು ಬೇರೆಡೆ ಎಲ್ಲಿಯೂ ಇನ್ನು ಪ್ರಕಟಿಸಿಲ್ಲ-ಎಂದು ಕುವೆಂಪು ತಮ್ಮ ನೆನಪಿನ ದೋಣಿಯಲ್ಲಿ (ಪು. ೬೨೦) ದಾಖಲಿಸಿದ್ದಾರೆ. ಕನ್ನಡ ವಿ.ವಿ.ಯ ‘ಸಮಗ್ರ ಗದ್ಯ ಸಂಪುಟ’ಗಳ ಸಂಪಾದಕರ ಗಮನಕ್ಕೂ ಇದು ಬಂದಿಲ್ಲ.

[6] ‘ನಾವೀಗ ಜನ ವಿಹೀನವಾದ ಮಂಗಳ ಗಂಗಾತೀರದ ಏಕಾಂತದಲ್ಲಿದ್ದೇವೆ. ಅಲ್ಲಿಯ ನೀರವತೆ ಶಕುನ ಪೂರ್ಣವಾದ ಮೌನದಂತಿದೆ. ಇದ್ದಕ್ಕಿದ್ದ ಹಾಗೆ ಬರುತ್ತದೆ ಒಂದು ಸದ್ದು. ಆ ಸದ್ದು ಬರುವ ಕಡೆಯೆ ನಾವು ಕಣ್ಬಿಟ್ಟುಕೊಂಡಿರಲು ಅನಿಲ ವೇಗದಿಂದ ಹಾರಿಬರುವ ಪೊಂದೇರೊಂದು ಗೋಚರಿಸುತ್ತದೆ. ಅದರಲ್ಲಿ, ಒಳಗೊಳಗೆ ಮರುಗಿ ಬಿಸುಸುಯ್ದು ಬೆಂದು ಬೇಗುದಿಗೊಳ್ಳುವ ರಾಮಾನುಜನು ಕುದುರೆಗಳ ವಾಘೆಗಳನ್ನು ಕೈಲಾಂತು ಮೌನವಾಗಿ ಕುಳಿತಿದ್ದಾನೆ. ಮತ್ತೊಬ್ಬ ದಿವ್ಯಮಂಗಳ ಸುಂದರಮೂರ್ತಿ ಯಾರು? ಆಜನ್ಮ ದುಃಖಿನಿಯಾದ ಸೀತಾಮಾತೆ!…’

‘ಸೀತಾವನವಾಸ’ ಲೇಖನದ ಒಂದು ಭಾಗ (ಸ.ಗ. ಸಂ.೧. ಪು.೭೧)

[7] ಕುವೆಂಪು ಅವರ ಕಾವ್ಯದ ಮೇಲೆ ಕವೀಂದ್ರನಾಥ ಟ್ಯಾಗೂರ ಪ್ರಭಾವ ಎಷ್ಟರಮಟ್ಟಿಗೆ ಆಗಿದೆ ಎನ್ನುವುದನ್ನು ಕನ್ನಡ ವಿಮರ್ಶೆ ಇನ್ನೂ ಗುರುತಿಸಬೇಕಾಗಿದೆ.

[8] ನಾಗವರ್ಮನು ಹೇಳುವ ‘ಪ್ರತಿಭಾನಂ ಶಕ್ತಿ’ ಎನ್ನುವ ಮಾತನ್ನು ನೆನೆಯಬಹುದು.