ಮಹಾಕವಿ ಲಕ್ಷ್ಮೀಶನು ಯಾವ ಊರಿನವನು ಎಂಬ ಬಗ್ಗೆ ವಿದ್ವಾಂಸರಲ್ಲಿ ತುಂಬ ಚರ್ಚೆ ನಡೆದಿದೆ. ಕವಿ ಈ ಕಾವ್ಯದಲ್ಲಿ “ದೇವಪುರ ಲಕ್ಷ್ಮೀರಮಣ” (ಸಂ.೧.ಪ.೧.), “ಗೀರ‍್ವಾಣ ಪುರನಿಲಯ ಲಕ್ಷ್ಮೀವರಂ” (ಸಂ.೧.ಪ.೮), “ದೇವಪುರದ ಲಕ್ಷ್ಮೀಶ”, (ಸಂ.೧.ಪ.೧೧), “ದೇವಪುರ ಲಕ್ಷ್ಮೀಶ” (ಸಂ.೨.ಪ.೬೭), (ಸಂ.೩.ಪ.೪೨) ಮತ್ತು (ಸಂ.೪.ಪ.೭೨), “ಸುರಪುರದ ಲಕ್ಷ್ಮೀಶನು” (ಸಂ.೬.ಪ.೫೫), “ದೇವಪುರ ಲಕ್ಷ್ಮೀಪತಿ” (ಸಂ.೭.ಪ.೬೭) ಮತ್ತು (ಸಂ.೮.ಪ.೪೯), “ಸುರಪುರದ ಲಕ್ಷ್ಮೀಕಾಂತ” (ಸಂ.೯.ಪ.೩೪), “ದಿವಿಜಪುರದ ಲಕ್ಷ್ಮೀಶ” (ಸಂ.೧೦.ಪ.೫೪), “ದೇವಪುರದ ಲಕ್ಷ್ಮೀಪತಿ” (ಸಂ.೧೧.ಪ.೪೧), “ದೇವಪುರ ನಿಲಯ ಲಕ್ಷ್ಮೀಪತಿ” (ಸಂ.೧೨.ಪ.೫೧), “ದೇವಪುರದೊಡೆಯ ಲಕ್ಷ್ಮೀವರಂ” (ಸಂ.೧೨.ಪ.೬೩), “ಅಮರಪುರದೊಡೆಯ ಲಕ್ಷ್ಮೀಕಾಂತ” (ಸಂ.೩೪.ಪ.೪೦),” – ಹೀಗೆ ಪ್ರತಿ ಸಂಧಿಯ ಕಡೆಯಲ್ಲಿಯೂ ತನ್ನ ಇಷ್ಟದೇವತೆಯಾದ ಲಕ್ಷ್ಮೀರಮಣನನ್ನು ಸ್ಮರಿಸಿದ್ದಾನೆ.

ಈ ಕವಿಯ ಜನ್ಮಸ್ಥಳವಾದ “ದೇವಪುರ” ಯಾವುದು ಎಂದು ಚರ್ಚಿಸುವ ವಿದ್ವಾಂಸರಲ್ಲಿ ಕೆಲವರು ಚಿಕ್ಕಮಗಳೂರು ಜಿಲ್ಲಾ ದೇವನೂರು ಎಂದೂ, ಮತ್ತೆ ಕೆಲವರು ಗುಲ್ಬರ್ಗ ಜಿಲ್ಲಾ ಸುರಪುರದ ಪಕ್ಕದಲ್ಲಿರುವ ದೇವಪುರ ಎಂದೂ ಹೇಳುತ್ತಾರೆ. ಈ ಎರಡು ಊರುಗಳಲ್ಲಿಯೂ ಲಕ್ಷ್ಮೀಪತಿಯ ದೇವಾಲಯವಿದೆ. ಈ ಉಭಯ ಸ್ಥಳಗಳಲ್ಲಿಯೂ, ‘ಕವಿ ನಮ್ಮಲ್ಲಿ ಹುಟ್ಟಿದವನು, ತಮ್ಮಲ್ಲಿ ಹುಟ್ಟಿದವನು’ ಎಂದು ಹೇಳುವ ಕಥೆಗಳು ಪ್ರಸಿದ್ಧವಾಗಿವೆ. ಆದರೆ ಕವಿಯ ವರ್ಣನಾವೈಭವವನ್ನು ನೋಡಿದರೆ ಅವನು ಪ್ರಕೃತಿಸೌಂದರ‍್ಯದ ನೆಲೆವೀಡಾದ ಚಿಕ್ಕಮಗಳೂರು ಜಿಲ್ಲಾ ದೇವನೂರಿನವನೇ ಆಗಿರಬೇಕೆಂದು ವಾದಿಸುವವರ ಪಕ್ಷಕ್ಕೆ ಬಲ ಹೆಚ್ಚಾಗಿದೆ ಎಂದು ನಮಗೆ ತೋರುತ್ತದೆ. “ದೇವನೂರು” ಎಂಬುದರ ಸಂಸ್ಕೃತದ ರೂಪಗಳೇ ಗೀರ್ವಾಣಪುರ, ಸುರಪುರ, ದೇವಪುರ, ಅಮರಪುರ ಮೊದಲಾದ ಹೆಸರುಗಳು.

ಈ ದೇವನೂರಿನ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಆಳ್ವಾರರುಗಳೆಂಬ ಭಕ್ತರ ವಿಗ್ರಹಗಳ ಜತೆಯಲ್ಲಿ ಲಕ್ಷ್ಮೀಶನ ವಿಗ್ರಹವೂ ಪೂಜಿಸಲ್ಪಡುತ್ತಿದೆ. ದೇವಸ್ಥಾನದ ಪಶ್ಚಿಮಭಾಗದ ಮಂಟಪವನ್ನು “ಲಕ್ಷ್ಮೀಕಾಂತ ಹೆಬ್ಬಾರ ಮಂಟಪ” ಎಂದು ಆ ಊರಿನ ಜನರು ಕರೆಯುತ್ತಾರೆ. ದೇವನೂರಿನ ಶ್ರೀ ವೈಷ್ಣವ ಬ್ರಾಹ್ಮಣರ ಮನೆಯಲ್ಲಿನ ಶುಭಶೋಭನಾದಿ ಕಾರ‍್ಯಗಳಲ್ಲಿ ಲಕ್ಷ್ಮೀಶನಿಗೆ ಅಗ್ರತಾಂಬೂಲವನ್ನೆತ್ತುವ ಸಂಪ್ರದಾಯವಿದೆ. ದೇವರ ಪೂಜೆಯ ಕಾಲದಲ್ಲಿ ಜೈಮಿನಿ ಭಾರತದ ಸ್ತೋತ್ರಗಳನ್ನು ಹೇಳುತ್ತಾರೆ. ಲಕ್ಷ್ಮೀಶನು ದೇವನೂರಿಗೆ ಅನತಿದೂರದಲ್ಲಿರುವ ವಿಜಯನಗರದ ವೈಭವವನ್ನು ಕಣ್ಣಾರೆ ಕಂಡು ಆ ಅನುಭವಗಳನ್ನು ತನ್ನ ಕಾವ್ಯದಲ್ಲಿ ಸಮಾವೇಶಗೊಳಿಸಿ ಬಣ್ಣಿಸಿರುವನೆಂದು ಹಲವಾರುಮಂದಿ ವಿಮರ್ಶಕರು ಹೇಳಿರುವುದ್ನು ನೋಡಿದರೆ, ಅವನ ಕಾವ್ಯದಲ್ಲಿ ತೆಂಗು, ಕಂಗು, ನಾಗವಲ್ಲಿ ಮೊದಲಾದುವುಗಳ ವರ್ಣನೆಯು ಮೇಲಿಂದ ಮೇಲೆ ಬಂದಿರುವುದನ್ನು ನೋಡಿದರೆ, ಅವನು ಇಂತಹ ಪ್ರಕೃತಿ ಸೌಂದರ‍್ಯದಿಂದ ಕೂಡಿದ ಚಿಕ್ಕಮಗಳೂರು ಜಿಲ್ಲೆಯ ದೇವನೂರಿನವನೇ ಎಂದು ನಾವು ಹೇಳಬೇಕಾಗುತ್ತದೆ. ಈ ಕವಿಯು ಕನ್ನಡ ಜೈಮಿನಿ ಭಾರತವನ್ನಲ್ಲದೆ ಕೆಲವು ಕೀರ್ತನೆಗಳನ್ನೂ ಬರೆದಿರುವನು. ಅವನ್ನು ಈ ಗ್ರಂಥದ ಕಡೆಯಲ್ಲಿ ಕೊಟ್ಟಿದೆ. ದೇವನೂರು ಹೊಯ್ಸಳರ ಕಾಲದಿಂದ ಸಾಹಿತ್ಯಸೇವೆಗೆ ಪ್ರಸಿದ್ಧವೆನಿಸಿದೆ.

ಕರ್ಣಾಟಕ ಬ್ರಾಹ್ಮಣ ಕವಿಗಳಲ್ಲಿ ಪ್ರಖ್ಯಾತನೂ ಪ್ರಾಚೀನನೂ ಆದ ರುದ್ರಭಟ್ಟನು (೧೧೮೦) ತನ್ನ ಜಗನ್ನಾಥ ವಿಜಯ ಎಂಬ ಮಹಾಕಾವ್ಯದ ಅಶ್ವಾಸದ ಕಡೆಯ ವಚನದಲ್ಲಿ, “ಸಕಲಾಮ್ನಾಯತಂತ್ರ ಲಕ್ಷ್ಮೀಕಾಂತ ಶ್ರೀಪಾದ ಭಕ್ತಿಯುಕ್ತ ಸುಕವೀಂದ್ರ ರುದ್ರಪ್ರಣೀತ” ಎಂದು ಹೇಳಿರುವುದರಿಂದಲೂ; ರುದ್ರಭಟ್ಟ-ಷಡಕ್ಷರದೇವ-ಲಕ್ಷ್ಮೀಶರಿಗೆ ಸಂಬಂಧಪಟ್ಟಂತೆ ದಂತ ಕತೆಯ ಪ್ರಸಿದ್ಧವಾಗಿದ್ದು ಆ ಕತೆಯಲ್ಲಿ ‘ರುದ್ರಭಟ್ಟನ ಗೌರವ ಉಳಿಸಿಕೊಳ್ಳಲು ಲಕ್ಷ್ಮೀಶನು ಕಾವ್ಯರಚನೆ’ ಮಾಡಿದಂತೆ ಹೇಳಿರುವುದರಿಂದಲೂ; ರುದ್ರಭಟ್ಟನು ಕೂಡ ಭಾಗವತ ಪಂಥದ ಕವಿಯೆಂದು ವಿದ್ವಾಂಸರು ಅಭಿಪ್ರಾಯಪಟ್ಟಿರುವುದರಿಂದಲೂ, ಮಹಾಕವಿ ರುದ್ರಭಟ್ಟ ಮತ್ತು ಲಕ್ಷ್ಮೀಶರಿಬ್ಬರೂ ದೇವನೂರಿನವರೇ ಆಗಿರಬೇಕೆಂದು ನಾವು ತರ್ಕಿಸುತ್ತೇವೆ. ರುದ್ರಭಟ್ಟನು (ಕ್ರಿ.ಶ.೧೧೭೨-೧೨೧೯) ಹೊಯ್ಸಳರ ವೀರಬಲ್ಲಾಳನ ಆಶ್ರಿತನಾಗಿದ್ದನೆಂದೂ, ಅವನು ದ್ವಾರಸಮುದ್ರಕ್ಕೆ ಸವಿಪದ ದೇವನೂರಿನವನೇ ಆಗಿರಬೇಕೆಂದೂ ತರ್ಕಿಸಲು ಕಾರಣವಿದೆ. ರುದ್ರಭಟ್ಟನ ಗೌರವ ಕಾಪಾಡಲು ಲಕ್ಷ್ಮೀಶನು ಕಾವ್ಯರಚನೆ ಮಾಡಿದನೆಂಬ ದಂತ ಕಥೆಯು ಈ ಉಭಯರೂ ದೇವನೂರಿನವರೆಂಬುದನ್ನೂ, ಒಂದೇ ಪಂಥದವರೆಂಬುದನ್ನೂ ಸಮರ್ಥಿಸುತ್ತದೆ.