ನಾರಾಯಣಂ ನಮಸ್ಕೃತ್ಯ ನರಂಚೈವ ನರೋತ್ತಮಮ್ |
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ||

ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ ಕಾವ್ಯಗಳಲ್ಲಿ ಜೈಮಿನಿ ಭಾರತವು ಪರಿಗಣಿಸಲ್ಪಟ್ಟಿದೆ. ಪಂಡಿತರು, ಪಾಮರರು, ಶೈವರು, ವೈಷ್ಣವರು, ಅರಮನೆಯವರು, ಗುರುಮನೆಯವರು, ಸನಾತನಿಗಳು, ಸುಧರಕರು ಎಂಬ ಭೇದ ಭಾವವಿಲ್ಲದೆ ಎಲ್ಲರ ಪ್ರೀತಿ-ಗೌರವಗಳಿಗೂ ಪಾತ್ರವಾಗಿರುವುದು ಈ ಗ್ರಂಥದ ವೈಶಿಷ್ಟ್ಯವೆನ್ನಬಹುದು. ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡನಾಡಿನಲ್ಲಿ ಜೈಮಿನಿ ಭಾರತವನ್ನು ಓದಿ ಅರ್ಥ ಹೇಳುವವರನ್ನು ಜನರು ಬಹಳವಾಗಿ ಗೌರವಿಸುತ್ತಿದ್ದರು. ಜೈಮಿನಿಯನ್ನು ಓದಿ ಅರ್ಥ ಹೇಳುವವನು ಒಳ್ಳೆಯ ವಿದ್ವಾಂಸನೆಂದೂ, ಸಹೃದಯನೆಂದೂ, ಲೋಕಾನುಭವಿಯೆಂದೂ ಜನರು ಭಾವಿಸುತ್ತಿದ್ದರು. ಈಗಲೂ ಆ ಭಾವನೆ ಕನ್ನಡಿಗರಲ್ಲುಂಟು. ಹೀಗೆ ಈ ಗ್ರಂಥವು ಕನ್ನಡಿಗರ ಸಂಸ್ಕೃತಿಯ ಅಳತೆಗೋಲಾಗಿ ಭಾವಿಸಲ್ಪಟ್ಟಿದೆ.

ನವರಸಭರಿತವಾದ ಈ ಕಾವ್ಯವನ್ನು ಪಂಡಿತಪಾಮರರೆಲ್ಲರೂ ಸುಲಭವಾಗಿ ಓದಲೆಂಬ ಕಾರಣದಿಂದ ನಮ್ಮ ನಾಡಿನ ಹಿಂದಿನ ವಿದ್ವಾಂಸರನೇಕರು ಈ ಮಹಾಕಾವ್ಯಕ್ಕೆ ಟೀಕೆ-ಟಿಪ್ಪಣಿಗಳನ್ನು ಬರೆದು ಪ್ರಕಟಿಸಿರುತ್ತಾರೆ. ಇಂತಹ ಸಟೀಕ ಜೈಮಿನಿ ಗ್ರಂಥಗಳಲ್ಲಿ ೧೯೧೩ರಲ್ಲಿ ಶ್ರೀ ದಕ್ಷಿಣಾಮೂರ್ತಿಶಾಸ್ತ್ರಿಗಳೂ, ೧೯೧೪ರಲ್ಲಿ ಕರ್ಣಾಟಕ ಭಾಷಾರತ್ನಂ ಶ್ರೀ ಕರಿಬಸವಶಾಸ್ತ್ರಿಗಳೂ, ೧೯೩೨ರಲ್ಲಿ ಶ್ರೀ ದೊಡ್ಡಬೆಲೆ ನಾರಾಯಣಶಾಸ್ತ್ರಿಗಳೂ ಪ್ರಕಟಿಸಿದ ಟೀಕಾ ಗ್ರಂಥಗಳು ಗಣನಾರ್ಹವಾಗಿವೆ. ಇಷ್ಟೊಂದು ಬಗೆಯಿಂದ ಟೀಕೆ-ಟಿಪ್ಪಣಿಗಳನ್ನು ಪ್ರಕಟಿಸಿಕೊಂಡ ಗ್ರಂಥವು ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಜೈಮಿನಿ ಭಾರತ ಹೊರತು ಮತ್ತೊಂದು ಗ್ರಂಥವಿಲ್ಲವೆನ್ನಬಹುದು. ಈ ಟೀಕೆ-ಟಿಪ್ಪಣಿಗಳೂ ಸಹ ಗ್ರಂಥದ ಜನಪ್ರಿಯತೆಗೆ ನಿದರ್ಶನವಾಗಿದೆ. ಜನಸಾಮಾನ್ಯರು ಇತರರ ಸಹಾಯವಿಲ್ಲದೆ ಈ ಗ್ರಂಥವನ್ನು ಓದಿ ತಿಳಿದುಕೊಳ್ಳಲು ಈ ಟೀಕೆ ಟಿಪ್ಪಣಿಗಳು ಸಹಾಯವಾಗಿವೆ.

ಮನೋಹರವಾದ ಶೈಲಿ, ಆಕರ್ಷಕವಾದ ಕಥಾವಸ್ತು, ಪ್ರತಿಭಾಮಯವಾದ ವರ್ಣನೆ, ಉತ್ತಮೋತ್ತಮ ಪಾತ್ರ ಪೋಷಣೆ, ಹೃದಯಂಗಮ ರಸಭಾವ ನಿರೂಪಣೆ. ಕಿವಿಗಿಂಪಾದ ಶಬ್ದಾಲಂಕಾರ-ಅರ್ಥಾಲಂಕಾರಗಳು, ಚಿತ್ತ ಪರಿಪಾಕವನ್ನುಂಟುಮಾಡುವ ನೀತಿಬೋಧ, ಎಲ್ಲಕ್ಕೂ ಮಿಗಿಲಾಗಿ ಉದಾರವೂ, ಗಂಭೀರವೂ, ಉಜ್ವಲವೂ ಆದ ಭಾವನೆಗಳಿರುವುದೇ ಈ ಗ್ರಂಥದ ಸರ್ವೋತ್ಕೃಷ್ಟತೆಗೆ ಕಾರಣವೆನ್ನಬಹುದು. ಈ ಕಾವ್ಯದ ಹಿರಿಮೆಯನ್ನು ಕುರಿತು ಹಿಂದಿನ ಮತ್ತು ಇಂದಿನ ವಿದ್ವಾಂಸರು ಏನು ಹೇಳಿರುವರೆಂಬುದನ್ನು ಮೊದಲು ನಾವಿಲ್ಲಿ ತಿಳಿಯೋಣ.

“ಕನ್ನಡ ಕವಿಚರಿತ್ರೆ” ಯಲ್ಲಿ ಮಹಾ ಮಹೋಪಾಧಯ ಪೂಜ್ಯ ಆರ್.ನರಸಿಂಹಾಚಾರ್ಯರು, “ಈತನಿಗೆ ಕರ್ಣಾಟಕ ಕವಿಚೂತ ವನಚೈತ್ರ ಎಂಬ ಬಿರುದಿದ್ದಂತೆ ತಿಳಿಯುತ್ತದೆ. …….. ಇವನ ಬಂಧವು ಲಲಿತವಾಗಿಯೂ, ಮನೋಹರವಾಗಿಯೂ ಇದೆ. ಆಧುನಿಕವಾದರೂ ಈ ಗ್ರಂಥಕ್ಕೆ ಕನ್ನಡನಾಡಿನಲ್ಲಿರುವ ಪ್ರಾಶಸ್ತ್ಯವೂ, ಪ್ರಸಿದ್ಧಿಯೂ ಮತ್ತಾವ ಗ್ರಂಥಕ್ಕೂ ಇಲ್ಲ. ಇದು ಪಂಡಿತ-ಪಾಮರರೆಲ್ಲರೂ ಆದರಕ್ಕೂ ಪಾತ್ರವಾಗಿದೆ. ಪ್ರಾಯಕವಾಗಿ ಇದನ್ನು ಓದದ ಕನ್ನಡಿಗರೇ ಇಲ್ಲ….. ಶೈಲಿಯಲ್ಲಿ ಸ್ವಲ್ಪಮಟ್ಟಿಗೆ “ಚೆನ್ನಬಸವ ಪುರಾಣ” ವನ್ನು ಅನುಸರಿಸಿದಂತೆ ತೋರುತ್ತದೆ.” ಎಂದು ಹೇಳಿರುತ್ತಾರೆ. *ಕನ್ನಡ ಕವಿ ಚರಿತ್ರೆ, ಭಾಗ೨, ಪು.೫೩೨-೨೪.* ಆಸ್ಥಾನ ಮಹಾವಿದ್ವಾ, ಕರ್ಣಾಟಕ ಭಾಷಾರತ್ನಂ ಪೂಜ್ಯ ಕೈ||ಕರಿಬಸವಶಾಸ್ತ್ರಿಗಳು, “ಈ ಗ್ರಂಥವು ಸರಸಾಲಂಕಾರಸಂಶೋಭಿತವಾಗಿಯೂ, ಮಧುರತರ ಪದಪುಂಜರಂಜಿತವಾಗಿಯೂ, ಮನೋಜ್ಞಸಂದರ್ಭಗರ್ಭಿತವಾಗಿಯೂ ಇರುವುದರಿಂದ ಈ ಕಾವ್ಯವನ್ನು ಕನ್ನಡಿಗರಾದ ಪಂಡಿತ-ಪಾಮರರೆಲ್ಲರೂ, ಪಠನ, ಲೇಖನ, ಅರ್ಥ, ಕಥನ, ಶ್ರವಣಾದಿಗಳಿಂದ ಪ್ರಚಾರದಲ್ಲಿ ತಂದರು. ಕರ್ಣಾಟಕದೇಶದಲ್ಲಿ ಕನ್ನಡ ಭಾರತ, ಜೈಮಿನಿ ಭಾರತಗಳಿಗಿರುವ ಪ್ರಾಶಸ್ತ್ಯವೂ, ಪ್ರಸಿದ್ಧಯೂ, ಪುರಸ್ಕಾರವೂ, ಯಾವ ಗ್ರಂಥಗಳಿಗೂ ಬರಲಿಲ್ಲ.” ಇಂದು ಪೀಠಿಕೆಯಲ್ಲಿ ಹೇಳಿರುತ್ತಾರೆ. ಪೂರ‍್ವೋಕ್ತ ಬ್ರಹ್ಮಶ್ರೀ ದಕ್ಷಿಣಾಮೂರ್ತಿ ಶಾಸ್ತ್ರಿಗಳು, “ಜನರು ಇದನ್ನು ಓದಿದ್ದರಿಂದ ಭಕ್ತಿಯುಳ್ಳವರಾಗಿ, ಭಗವದುಪಾಸನೆಯಿಂದ ಕೃತಕೃತ್ಯರಾಗಲೆಂಬುದಾಗಿ ನವರಸಭರಿತವಾಗಿರುವಂತೆ ವಾರ್ಧಕ ಷಟ್ಟದಿರೂಪವಾಗಿ ಕವಿ ಜೈಮಿನಿ ಭಾರತವನ್ನು ರಚಿಸಿದನು.” ಎಂದು ಹೇಳಿರುತ್ತಾರೆ. ಹಾಗೆಯೇ ಶ್ರೀದೊಡ್ಡಬೆಲೆ ನಾರಾಯಣಶಾಸ್ತ್ರಿಗಳು, “ಪದಲಾಲಿತ್ಯ, ಅರ್ಥಗಾಂಭೀರ‍್ಯ, ಮಾಧುರ‍್ಯ, ಶೈಲಿ, ಸರಸತೆ, ಸಾರಳ್ಯ, ಅರ್ಥಚಮತ್ಕೃತಿ, ಭಾವ ವೈಚಿತ್ರ್ಯ, ಅಲಂಕಾರ ವೈಖರಿ, ಗುಣಪರಿಪಾಟಿ, ಭಾವೋದಯ ಫಕ್ಕಿಕೆ, ಶ್ರಾವ್ಯತೆ ಮುಂತಾದುವುಗಳನ್ನು ಎಷ್ಟು ಕೊಂಡಾಡಿದರೂ ಸಾಲದು. ಕನ್ನಡ ಕಾವ್ಯಾಮೃತಪಾನವನ್ನು ಮಾಡಬೇಕೆಂದು ಬಯಸುವ ಕನ್ನಡಿಗರಿಗೆ ಇಂತಹ ಅಮೃತನಿಧಿಯು ಮತ್ತೊಂದಿಲ್ಲ” ಎಂದು ಹೇಳಿದ್ದಾರೆ.

“A History  of Kannada Literature ” ಎಂಬ ಗ್ರಂಥವನ್ನು ಬರೆದ . ಪಿ. ರೈಸ್, ಬಿ.ಎ., ಅವರು (೧೯೨೧ರಲ್ಲಿ) “ Jaimini Bharata-(which) is more famous than any other work of Kanarese literature, esteemed alike by learned and unlearned and universally studied. . . . His poem is written throughout in Shatpadi, and is the best specimen of that style (Page 85.) ” ಎಂದು ಅಭಿಪ್ರಾಯಪಟ್ಟಿರುತ್ತಾರೆ. “ ಕನ್ನಡ ಸಾಹಿತ್ಯ ಚರಿತ್ರೆ” ಯನ್ನು ಬರೆದಿರುವ ಪ್ರೊ|| ಆರ್.ಎಸ್. ಮುಗಳಿ ಯವರು, “ಜೈಮುನಿ ಭಾರತವು ಸಾಂಪ್ರದಾಯಿಕ ಲಕ್ಷಣಗಳಿಂದ ಮಹಾ ಕಾವ್ಯ ……… ಅವನದು ಮಹಾಕವಿ ಯೋಗ್ಯತೆ. ಇಡಿಯ ಗ್ರಂಥದಲ್ಲಿಯ ಛಂದಸ್ಸು-ಶೈಲಿಗಳ ಪರಿಪಾಕದಿಂದಲೂ ಅವನ ಹಿರಿಯಶಕ್ತಿ ತಿಳಿಯುತ್ತದೆ. ಅವನು ಪ್ರಧಮತಃ ಪಂಡಿತನೆನ್ನುವುದಕ್ಕಿಂತಲೂ ಕಥನಕವಿ ಎಂದರೆ ಹೆಚ್ಚು ಯುಕ್ತ. ಸಾಂಪ್ರದಾಯಿಕನಾದರೂ ಸಂಪ್ರದಾಯ ಶರಣನಲ್ಲ. ಪಾಂಡಿತ್ಯ ಚಮತ್ಕೃತಿಗಳ ವ್ಯಾಮೋಹ ಅವನ ಕಾವ್ಯರಚನೆಯಲ್ಲಿ ಎದ್ದು ಕಾಣಿಸುತ್ತಿದ್ದರೂ, ಅದರ ಬುಡದಲ್ಲಿ ಕವಿತಾ ಸತ್ವವು ಸಿಲುಕಿ ಜರ್ಜರಿತವಾದ ಸಂದರ್ಭಗಳು ಕಡಿಮೆ. ಒಟ್ಟಿನಲ್ಲಿ ಲಕ್ಷ್ಮೀಶ ಮಹಾಕವಿಯಾದರೂ ಅವನ ಜೈಮಿನಿ ಭಾರತವು ಅಂಶದಲ್ಲಿ ಮಹತ್ತಾಗಿದೆ.” *ಕನ್ನಡ ಸಾಹಿತ್ಯ ಚರಿತ್ರೆ, ಪುಟ ೨೭೫.* ಎಂದು ಹೇಳಿರುತ್ತಾರೆ.

ಸುಪ್ರಸಿದ್ಧ ಕನ್ನಡ ಸಾಹಿತಿಗಳಾದ ಶ್ರೀ ತ.ಸು.ಶಾಮರಾಯರು, “ಪುಷ್ಪ ಸಮುದಾಯದಲ್ಲಿ ಗುಲಾಬಿ ಹೇಗೋ ಕವಿ ಸಮುದಾಯದಲ್ಲಿ ಲಕ್ಷ್ಮೀಶ ಹಾಗೆ. ಗುಲಾಬಿಗಿಂತಲೂ ಸುಂದರವಾದ ಪುಷ್ಪಗಳಿರಬಹುದು. ಅವುಗಳಿಗದರ ವಾಸನೆ ಇಲ್ಲ. ಗುಲಾಬಿಗಿಂತಲೂ ತಂಪಾದ ಕಂಪನ್ನು ಪಡೆದಿರುವ ಪುಷ್ಪಗಳಿರಬಹುದು. ಆದರೆ ಅವುಗಳಿಗದರ ಸೊಬಗಿಲ್ಲ. ಸೊಬಗು-ಸುವಾಸನೆಗಳೆರಡನ್ನೂ ಏಕಕಾಲದಲ್ಲಿ ಪಡೆದು ಮೆರೆಯುವ ಭಾಗ್ಯ ಗುಲಾಬಿಯದು. ನಮ್ಮ ‘ಕವಿ ಚೈತ್ರವನ ಚೂತನು’ ಅದರಂತೆಯೇ ವಿಶಿಷ್ಟ ವ್ಯಕ್ತಿತ್ವವುಳ್ಳವನು. ಆತನಿಗಿಂತಲೂ ದೊಡ್ಡ ಕವಿತಾಶಕ್ತಿಯುಳ್ಳವರು ಕನ್ನಡ ಸಾಹಿತ್ಯ ಜಗತ್ತಿನಲ್ಲಿದ್ದಾರೆ. ಆದರೆ ಆ ಪಾಂಡಿತ್ಯ, ಆ ಷಟ್ಟದ ಝೇಂಕಾರ, ಆ ಹಿತಮಿತ ಜ್ಞಾನ, ಆ ಪ್ರಜ್ಞೆ ಇವು ಎಲ್ಲಿ ದೊರೆತಾವು? ಲಕ್ಷ್ಮೀಶನಿಗಿಂತಲೂ ಪಂಡಿತರಾದ ಕವಿಗಳಿಗೆ ನಮ್ಮಲ್ಲಿ ಕೊರತೆಯೇನೂ ಇಲ್ಲ. ಆದರೆ ಆತನ ಪದಲಾಲಿತ್ಯ, ಪ್ರಜ್ಞಾಪೂರ್ಣ ಪ್ರತಿಭೆ ಮತ್ತೆಲ್ಲಿ ದೊರೆತಾವು? ಒಂದು ದೃಷ್ಟಿಯಿಂದ ನಮ್ಮ ಲಕ್ಷ್ಮೀಶ ಅದ್ವಿತೀಯ.” ಎಂದಿದ್ದಾರೆ. *ಜೈಮಿನಿ ಭಾರತ ಸಂಗ್ರಹ, ಪೀಠಿಕೆ.*

ವಿಖ್ಯಾತ ಆಧುನಿಕ ಕವಿಗಳಾದ ಪ್ರೊ|| ಕೆ.ವಿ. ಪುಟ್ಟಪ್ಪನವರು, “ಕಾವ್ಯ ಭಾಗಗಳಲ್ಲಿ ಲಕ್ಷ್ಮೀಶನ ಕಥಾಲಾಪನೆಯು ಆದರ್ಶ ಸೀಮಾಸ್ಪರ್ಶವಾಗಿದೆ. ಆತನ ಶೈಲಿಯು ವಸಂತವನ ಶೋಭೆಯೊಡನಾಡುವ ವಿಹಂಗಮ ಕೂಜನದಂತೆ ಸುಂದರ ಮಂಜುಳವಾಗಿದೆ. ಅಲ್ಲಿ ಕಂಡುಬರುವ ನುಣ್ಪುನಯಗಳು ಅನ್ಯಾದೃಶವೆಂದು ಹೇಳಿದರೆ ಇತರ ಷಟ್ಟದಿ ಕರ್ತೃಗಳು ಕರುಬಲಾರರು.” ಎಂದು ಹೇಳಿದ್ದಾರೆ. *ಕವಿ ಲಕ್ಷ್ಮೀಶ, ಪುಟ ೧೯೩.* ಈ ಮೇಲೆ ಕಂಡ ವಿದ್ವಾಂಸರ ಅಭಿಪ್ರಾಯಗಳಿಂದ ಲಕ್ಷ್ಮೀಶನ ಕಾವ್ಯವು ಎಷ್ಟೊಂದು ಜನಮನ್ನಣೆಯನ್ನು ಪಡೆದಿದೆ ಎಂಬುದನ್ನು ನಾವು ಸುಲಭವಾಗಿ ಅರಿತುಕೊಳ್ಳಬಹುದು.