ಮಹಾಕವಿ ಲಕ್ಷ್ಮೀಶನು ಚಿಕ್ಕಮಗಳೂರು ಜಿಲ್ಲಾ ದೇವನೂರಿನವನೆಂದು ಈ ಹಿಂದೆಯೇ ಹೇಳಿದೆ. ಈತನ ತಂದೆಯ ಹೆಸರು ಅಣ್ಣಮಾಂಕ (ಸಂ.೧.ಪ.೧೧, ಸಂ.೩೪.ಪ.೪೧). ಕವಿ ಭಾರದ್ವಾಜ ಗೋತ್ರಕ್ಕೆ ಸೇರಿದವನು. ಈ ಕವಿಯ ಗುರು ಯಾರೆಂಬುದು ಸ್ಪಷ್ಟವಾಗಿಲ್ಲ. ಈತನು ಯಾವ ಪೂರ್ವ ಕವಿಗಳನ್ನೂ ಹೆಸರಿಟ್ಟು ಕರೆಯದೆ, “ಪೂರ‍್ವ ಸತ್ಕವಿಗಳ್ಗೆ ನಮಿಸಿ ನಾಂ ಕೃತಿ ಪೇಳ್ವೆನು” ಎಂದು ಸಾಮೂಹಿಕವಾಗಿ ಎಲ್ಲ ಕವಿಗಳನ್ನೂ ಕಾವ್ಯಾರಂಭದಲ್ಲಿ ನಮಿಸಿದ್ದಾನೆ. ಈ ಕಾವ್ಯವನ್ನು ಕವಿಯು “ವಿದ್ವತ್ಸಭಾವಲಯ ಮರಿಯೆ ವಿರಚಿಸಿದಂ” (ಸಂ.೧.ಪ.೧೧) ಎಂದು ಹೇಳಿರುವುದರಿಂದ ಈ ಗ್ರಂಥವನ್ನು ತನ್ನ ಸಮಕಾಲೀನ ವಿದ್ವಾಂಸರ ಸಭೆಯಲ್ಲಿ ಓದಿ ಅವರ ಮೆಚ್ಚುಗೆಯನ್ನು ಪಡೆದಂತೆ ಕಾಣುತ್ತದೆ. ಒಂದು ವೇಳೆ ಈ ವಿದ್ವತ್ಸಭೆಯು ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿ ಆಗಿದ್ದಿರಬಹುದೆ? ಎಂಬುದು ನಮ್ಮದೊಂದು ಊಹೆ ಮಾತ್ರ.

ಸಮಕಾಲೀನ ವಿದ್ವಾಂಸರ ಮೆಚ್ಚುಗೆಯ ಫಲವಾಗಿಯೇ “ಕರ್ಣಾಟಕ ಕವಿ ಚೂತವನ ಚೈತ್ರ” ಎಂಬ ಬಿರುದು ಈತನಿಗೆ ಬಂದಿರಬಹುದೆಂದು ತೋರುತ್ತದೆ. ಈ ಬಿರುದಿಗೆ ಈ ಕವಿಯು ಸಂಪೂರ್ಣವಾಗಿ ಅರ್ಹನಾಗಿದ್ದಾನೆ. ಶ್ರೀ ಡಿ.ಎಲ್. ನರಸಿಂಹಾಚಾರ‍್ಯರು “ಲಕ್ಷ್ಮೀಶನ ಬಿರುದು ಕರ್ಣಾಟ ಕವಿಚೂತವನ ಚೈತ್ರ” ಎಂಬುದಾಗಿ ಹಲವುಕಡೆ ಅಚ್ಚಾಗಿದೆ. ಆದರೆ ನಮಗೆ ದೊರೆತ ಎರಡು ಹಳೆಯ ಓಲೆಯ ಓಲೆಗಳಲ್ಲಿಯೂ  (ಒಂದರ ಕಾಲ ೧೭೧೮, ಇನ್ನೊಂದರ ಕಾಲ ೧೭೫೩) ‘ಕರ್ಣಾಟ ಕವಿ ಚೈತ್ರವನ ಚೂತ’ ಎಂದು ಲಿಖಿತವಾಗಿದೆ. ಲಕ್ಷ್ಮೀಶನು ತನ್ನ ನಮ್ರಸ್ವಭಾವಕ್ಕೆ ತಕ್ಕಂತೆ ‘ಕರ್ಣಾಟ ಕವಿಚೂತವನ ಚೈತ್ರ’ನೆಂದು ಕರೆದು ಕೊಳ್ಳಲು ಒಡಂಬಡಲಾರನು. ಆದುದರಿಂದ ಅವನ ನಿಜವಾದ ಬಿರುದು ‘ಕರ್ಣಾಟ ಕವಿಚೈತ್ರವನ ಚೂತ’ ಎಂದು ನನಗೆ ತೋರುತ್ತದೆ.” ಎಂದು ಬರೆದಿರುತ್ತಾರೆ.

ಇದೇ ವಿಷಯವನ್ನು ಇತಿಹಾಸ ಸಂಶೋಧಕರಾದ ಶ್ರೀ ಪಾಂಡುಗಂಗ ದೇಸಾಯಿರವರು (ಶರಣಸಾಹಿತ್ಯ ಸಂ. ೧೭. ಸಂ. ೬ ರಲ್ಲಿ) ಕರ್ಣಾಟ ಕವಿ ಚೈತ್ರವನ ಚೂತ ಎಂಬ ಲೇಖನದಲ್ಲಿ, “ಕರ್ಣಾಟ ಕವಿ ಚೈತ್ರವನಚೂತ” ಎಂಬ ಪಾಠವು ಒಂದು ಕಾಲದ ನಾನಾ ಭಾಗಗಳಲ್ಲಿ ಸಾಕಷ್ಟು ಪ್ರಸಾರದಲ್ಲಿ ಇದ್ದಿತು ಎಂಬ ಅಂಶವು ಪ್ರತೀತಿಗೆ ಬರುತ್ತದೆ. ಈ ವಿಷಯದಲ್ಲಿ ಹೆಚ್ಚಿನ ಅನ್ವೇಷಣಗಳು ನಡೆದರೆ ಈ ಪಾಠವನ್ನು ಪುಷ್ಟೀಕರಿಸುವ ಇನ್ನೂ ಅನೇಕ ಮಾತೃಕೆಗಳು ದೊರೆಯಬಹುದು. ‘ಕರ್ಣಾಟಕ ಕವಿಚೂತವನ ಚೈತ್ರ’ ಎಂಬ ಪ್ರಚಲಿತ ಪಾಠವು ಪ್ರಾಮುಖ್ಯತೆಗೆ ಬರಲು ಕಾರಣವೇನು ಎಂಬ ಸಂಗತಿ ವಿಚಾರಾರ್ಹವಾಗಿದೆ. ಈ ಎರಡು ಪಾಠಗಳಲ್ಲಿ ತಾರತಮ್ಯವರಿಯದೆ ಕೆಲ ಅಭಿಮಾನಿಗಳು ಒಂದನೆಯದನ್ನು ಮರೆಯಿಸಿ ಎರಡನೆಯದನ್ನು ಮುಂದಕ್ಕೆ ತಂದರೆಂದು ಊಹಿಸಬಹುದು. ಈಗಲಾದರೂ ‘ಕರ್ಣಾಟ ಕವಿಚೈತ್ರವನ ಚೂತ’ ಎಂಬ ಪಾಠವು ಸರಸವಾಗಿದೆ ಎಂದೂ ಇದುವೇ ಮೂಲಪಾಠವಾಗಿರಬೇಕೆಂದೂ ನಮಗೆ ತೋರುತ್ತದೆ. ಈ ಬಿರುದೇ ಕವಿಯ ವಿನಯಶೀಲ ಭಾವನೆಗೆ ಅನುಗುಣವಾದುದೆಂದು ನಮ್ಮ ನಂಬುಗೆ.” ಎಂದು  ಅನುಮೋದಿಸಿದ್ದಾರೆ. ನಮಗಾದರೂ ಶ್ರೀ ದೇಸಾಯಿಯವರ ವಾದವೇ ಸಮಂಜಸವೆಂದು ತೋರುತ್ತದೆ.

ಕನ್ನಡ ಜೈಮಿನಿ ಭಾರತದಲ್ಲಿ ೩೪ ಸಂಧಿಗಳೂ ೧೯೦೭ ಪದ್ಯಗಳೂ ಇವೆ. ಈ ಕಾವ್ಯದಲ್ಲಿ ಪೌಜು, ಜೀಯ, ಚಪ್ಪನ್ನ ಮೊದಲಾದ ಕನ್ನಡೇತರ ಶಬ್ದಗಳ ಪ್ರವೇಶವಾಗಿರುವುದರಿಂದ ಇದು ೧೬ನೆಯ ಶತಮಾನದಲ್ಲಿ ವಿರಚಿತವಾದುದೆಂದು ನಾವು ನಿರ್ಧರಿಸಬಹುದಾಗಿದೆ.