ಒಂದಿಷ್ಟು ಜಾಗಕೊಡಿ ನನಗೆ ಈ ಮನೆಯಲ್ಲಿ
ನಾನು ಒಬ್ಬ ಕವಿ.
ನನಗೆ ಬೇಕಾದದ್ದು ಹೃದಯವಿರುವಂಥ
ಐದೊ ಆರೊ ಕಿವಿ !

ಇಲ್ಲ, ಖಂಡಿತ ಇಲ್ಲ ನನ್ನ ಬಳಿ ಹಾರೆ-ಗುದ್ದಲಿ-ಪಿಕಾಸಿ ;
ಇರುವುದೊಂದೇ ಒಂದು ಸಾಮಾನ್ಯ ಲೇಖನಿ.
ನಾನು ಅಗೆಯುವುದಿಲ್ಲ ಕಾಲಡಿಯ ಈ ನೆಲವ,
ಕದಡುವುದಿಲ್ಲ ಮಲಗಿರುವ ಮೂಳೆಗಳ
ಸುಖನಿದ್ರೆಯ.
ಮಲಗಿರುವ ಜೀವ ಮಲಗಿರಲಿ ಸ್ವಾಮಿ ತಣ್ಣಗೆ,
ನಾನೇನು ಸಂಶೋಧಕನಲ್ಲ, ಭಯ ಬೇಡ ನಿಮಗೆ.

ಬೇಡ ಇಲ್ಲಿ ಕೂರಿಸಬೇಡಿ, ಹಳೆಯ ಕಡತಗಳು
ತುಂಬಿರುವ ಈ ಕಪಾಟಿನ ಬದಿಗೆ
ನಾನು ಧೂಳೊರಸಿ, ಭೂತಗನ್ನಡಿ ಹಿಡಿದು ಹುಡುಕಲಾರೆನೊ
ಗೆದ್ದಲಿನಲ್ಲಿ ಹುದುಗಿದಿತಿಹಾಸಗಳ ಚಿನ್ನದ ಗೆರೆಯ.

ಇಲ್ಲಿ ಕಿಟಕಿಯ ಬದಿಗೆ ಜಾಗಕೊಡಿ ನನಗೆ :
ಸಾಕು, ನನಗಾಚೆ ಬೆಚ್ಚನೆಯ ಬಿಸಿಲಲ್ಲಿ
ಹಚ್ಚಗೆ ಮಲಗಿ ಮೈ ಮುರಿವ ಬಯಲು ;
ದೂರದಲಿ ಥಳ ಥಳ ಹೊಳೆವ ಕೆರೆಯ ತೆರೆಗಳ ಆಟ,
ನೀಲಿಯಲಿ ಲೀಲಾಜಾಲ ಜೋಲಿಯಾಡುವ ಹಕ್ಕಿ
ಮೈಮುರಿದು ದುಡಿದು ಗಾಡಿ ಹೊಡೆಯುವ ಮುದುಕ
ಕಿರಲುವ ಹಳ್ಳಿಯ ಹಾಡು ;
ಕೈ ಕೈಹಿಡಿದು ಭೂಮಂಡಲವ ಚೆಂಡಾಡಲೆಂಬಂತೆ
ನಡೆವ ಈ ಹೊಸಮದುವೆ ಹೆಣ್ಣು-ಗಂಡು ;
ತಾಯ ಸೆರಗಿನಲವಿತು ಹೂ ನಗುವ ಹಸುಗೂಸು ;
ಅಲ್ಲಿ ಮರದಡಿಯಲ್ಲಿ ಉದುರಿದೆಲೆಗಳನೊಟ್ಟಿ
ಸುಟ್ಟ ಬೂದಿಯ ಗುರುತು ;
ತಳಿರ ಕಣ್ಣಂಚಿನಲಿ ತೊಟಕುವಿಬ್ಬನಿ ಬಿಂದು-
ಸಾಕು, ನನಗಿಷ್ಟೇ ಸಾಕು, ಈ ವರ್ತಮಾನದ ಸರುಕು,
ಹಿಡಿದು ಚೌಕಟ್ಟು ಹಾಕುವೆ ನಾನು ಒಬ್ಬನೇ ಕುಳಿತು.

ಜಾಗಕೊಡಿ ಸ್ವಾಮಿ, ನನಗೆ ಈ ಮೂಲೆಯಲಿ,
ನಾನು ಒಬ್ಬ ಕವಿ.
ನನಗೆ ಬೇಕಾದದ್ದು ಹೃದಯವಿರುವಂಥ
ಐದೊ ಆರೊ ಕಿವಿ !