. ಪಾರ್ತಿಸುಬ್ಬ

ಪಾರ್ತಿಸುಬ್ಬ ಯಕ್ಷಗಾನ ಕವಿಗಳಲ್ಲಿ ಶ್ರೇಷ್ಠ ಸಾಲಿನಲ್ಲಿ ನಿಲ್ಲುತ್ತಾರೆ. ಇವರ ಕುರಿತು ಪಂಡಿತರಾದ ಮುಳಿಯ ತಿಮ್ಮಪ್ಪಯ್ಯನವರು ‘ಪಾರ್ತಿಸುಬ್ಬ’ ಎಂಬ ಗ್ರಂಥವನ್ನು ಬರೆದು ಅವರಿಗೆ ಗೌರವ ತೋರಿದ್ದಾರೆ. ಕುಕ್ಕಿಲ ಕೃಷ್ಣಭಟ್ಟರು ‘ಪಾರ್ತಿಸುಬ್ಬನ ಯಕ್ಷಗಾನಗಳು’ (ಮೈಸೂರು ವಿದ್ಯಾಲಯ) ಎಂಬ ಹೆಬ್ಬೊತ್ತಿಗೆಯನ್ನು ಸಂಪಾದಿಸಿದ್ದಾರೆ. ಪಾರ್ತಿಸುಬ್ಬ ಕಾಸರಗೋಡಿನ ಕುಂಬಳೆ ಪ್ರದೇಶದವರು ಎಂದು ವಿದ್ವಾಂಸರು ನಿರ್ಣಯಿಸಿದ್ದಾರೆ. ಇವರ ಕಾಲ ೧೮೬೨ ಎಂದು ಕವಿಚರಿತೆಗಾರರು ತಿಳಿಸಿದ್ದಾರೆ. ಇದನ್ನು ಶಿವರಾಮ ಕಾರಂತರೂ ಒಪ್ಪುತ್ತಾರೆ.

ಇವರಿಗೆ ಪಾರ್ತಿಸುಬ್ಬ ಎಂದು ಹೆಸರು ಬರಲು ಅವರ ತಾಯಿ ‘ಪಾರ್ವತಿ’ ಹೆಸರೇ ಕಾರಣ ಎಂದು ಮುಳಿಯ ತಿಮ್ಮಪ್ಪಯ್ಯನವರು ಹೇಳಿದ್ದರೆಂದು ಶಿರವಾಮ ಕಾರಂತರು ತಮ್ಮ ‘ಯಕ್ಷಗಾನ ಬಯಲಾಟ’ (೧೯೬೩) ಗ್ರಂಥದಲ್ಲಿ ಹೇಳುತ್ತಾರೆ. ಹಾಗೆಯೇ ಕಾರಂತರು ಅವರು ಮಾಲೆಯವರು ಎಂದೂ ದಾಖಲಿಸಿದ್ದಾರೆ. “ಇದು ಹೊಂದಾಣಿಕೆಯಾಗುತ್ತದೆ. ಕಯ್ಯಾರ ಕಿಞ್ಞಣ್ಣರೈ ಪಾರ್ತಿಸುಬ್ಬ ಯಕ್ಷಗಾನದ ಆಚಾರ್ಯ ಕವಿ ಲೇಖನದಲ್ಲಿ ತುಳುನಾಡಿನ ಈ ಪ್ರದೇಶದಲ್ಲಿ (ಕಾಸರಗೋಡು) ಸ್ಥಾನಿಕ ಬ್ರಾಹ್ಮಣರೆಂಬೊಂದು ಸಮಾಜವಿದೆ. ಇವರನ್ನು ಶಿವಬ್ರಾಹ್ಮಣರೆಂದೂ ಕರೆಯುತ್ತಾರೆ ಎಂದು ಹೇಳುತ್ತಾರೆ. ಒಟ್ಟಾರೆಯಾಗಿ ದೇವಾಲಯದ ಸಹಚರ್ಯ ಇದ್ದವರಾಗಿದ್ದರೆಂಬುದು ತಿಳಿದುಬರುತ್ತದೆ. ಇವರ ಹೆಸರಿನಲ್ಲಿರುವ ಪ್ರಸಂಗಗಳು ಎಲ್ಲವೂ ಇವರದ್ದೇ ಎಂಬ ಬಗ್ಗೆ ಸಹ ಚರ್ಚೆ ನಡೆದಿದೆಯಾದರೂ ಇವರು ಯಕ್ಷಗಾನ ಪ್ರಸಂಗ ರಚನೆಯ ‘ಆಚಾರ್ಯ ಪುರುಷ’ರೆಂದೂ ‘ಯಕ್ಷಗಾನ ವಾಲ್ಮೀಕಿ’ ಎಂದೂ ಪ್ರಸಿದ್ಧರಾಗಿದ್ದಾರೆ. ಇವರ ಶೈಲಿ ಅಚ್ಚಗನ್ನಡ ಶೈಲಿಯೆಂದೇ ಹೇಳಬಹುದು. ಗ್ರಹಿಕೆಗೆ ಸುಲಭವೂ, ಅನುಭವಕ್ಕೆ ಹಾರ್ದಿಕವೂ ಆಗಿದೆ. ಕೆಲವು ಕಡೆಗಳಲ್ಲಿಯಂತೂ ತುಂಬ ಲಾಲಿತ್ಯಮಯವಾಗಿದೆ. ಹಾಗೆಯೇ ರಸಾಭಿವ್ಯಕ್ತಿ, ನಾಟಕೀಯತೆ ಇವೆಲ್ಲ ವೈಶಿಷ್ಟ್ಯಗಳಿಂದ ಕೂಡಿ ಇವರ ಬಿರುದಿಗೆ ತಕ್ಕದ್ದಾಗಿದೆ.

. ಪೆರಡಾಲ ಕೃಷ್ಣಯ್ಯ

ಪೆರಡಾಲ ಕೃಷ್ಣಯ್ಯನವರು ಸಂಸ್ಕೃತ ಶಾಲೆಯಲ್ಲಿ ಕನ್ನಡ ಮಾಸ್ತರರಾಗಿ ಪಂಪಭಾರತ, ಗದಾಯುದ್ಧ, ಕರ್ಣಾಟಕ ಕಾದಂಬರಿ, ಶಬರಶಂಕರ ವಿಳಾಸ ಮೊದಲಾದ ದಿಗ್ಗಜಕೃತಿಗಳನ್ನು ವಿದ್ಯಾರ್ಥಿಗಳಿಗೆ ಪಾಠಮಾಡಿ ‘ಕನ್ನಡ ನಾಡೋಜ’ ಎಂದೇ ಪ್ರಸಿದ್ಧರಾದವರು. ವೆಂಕಟೇಶಯ್ಯ ಮತ್ತು ಗೌರಮ್ಮ ಎಂಬ ದಂಪತಿಗಳು ಇವರ ತಂದೆ-ತಾಯಿ, ಪೆರಡಾಲ ಹುಟ್ಟಿದ ಊರು. ಇವರು ೨೩-೧೨-೧೮೯೩ರಲ್ಲಿ ಹುಟ್ಟಿದರು. ಅವರ ಬಾಲ್ಯದ ಕಾಲದಲ್ಲಿ ಯಕ್ಷಗಾನದ ಪರಿಸರದಲ್ಲೇ ಬೆಳೆದರು. ಅವರೂ ಯಕ್ಷಗಾನದ ಸೆಳವಿಗೆ ಸಿಕ್ಕಿದರು.

ಇವರು ಭಾಗವತದ ಕಥೆಗಳನ್ನಾಯ್ದುಕೊಂಡು ‘ಯಾದವಾಭ್ಯುದಯ’ ಎಂಬ ಪ್ರಸಂಗವನ್ನು ರಚಿಸಿದರು. ಕೃಷ್ಣನ ಜೀವನದ ಮೊದಲ ಭಾಗವನ್ನು ಇದು ಬಿತ್ತರಿಸುತ್ತದೆ.

ಕೃಷ್ಣ, ಬಲರಾಮರು ಸಂದೀಪರಲ್ಲಿ ವಿದ್ಯಾಭ್ಯಾಸಕ್ಕೆ ಹೋಗುವುದು, ಶಂಖಾಸುರನ ಕೊಲ್ಲುವುದು, ಕಂಸನನ್ನು ಕೊಂದದ್ದಕ್ಕಾಗಿ ಮಗಧ ಯುದ್ಧಕ್ಕೆ ಬರುವುದು. ಉದ್ಧವನನ್ನು ಕಳಸಿ ನಂದಗೋಪರುಗಳನ್ನು ಸಂತೈಸುವುದು. ಮಾಗಧ ಮೂರು ಸಲ ದಂಡೆತ್ತಿ ಬರುವುದು. ಅವನನ್ನು ಸೋಲಿಸಿ ಓಡಿಸುವುದು ಹೀಗೆ ಯಾದವರ ಅಭ್ಯುದಯದ ಬಗೆಯ ವರ್ಣನೆಯನ್ನೊಳಗೊಂಡಿದೆ.

ಪೆರಡಾಲರ ಶೈಲಿಯ ಕುರಿತು ಪಾದೇಕಲ್ಲು ವಿಷ್ಣುಭಟ್ಟರು “ಇವರ ಪ್ರಸಂಗಗಳಲ್ಲಿ ಹಳಗನ್ನಡ, ನಡುಗನ್ನಡ ಅಧ್ಯಯನ ಸ್ಪಷ್ಟ ಪ್ರಭಾವವನ್ನು ಯಾರೂ ಗುರುತಿಸಬಹುದಾಗಿದೆ’’ (ಭಾಗವತ ಯಕ್ಷಗಾನ ಪ್ರಸಂಗಗಳು ಪಿಹೆಚ್.ಡಿ. ಪ್ರಬಂಧ) ಎಂದು ಗುರುತಿಸಿದ್ದಾರೆ.

ಪೆರಡಾಲ ಅವರು ಬರೆದ ಇನ್ನೊಂದು ಪ್ರಸಂಗ ‘ಗೆಲುವಿನಕತ್ತಿ’. ಇದು ಐತಿಹಾಸಿಕವಾಗಿರುವುದು ಚಾರಿತ್ರಿಕವಾಗಿ ಮಹತ್ವದ್ದಾಗಿದೆ. ಪುರಾಣದ ಚೆನ್ನಾದ ಪರಿಚಯವಿದ್ದೂ, ಯಕ್ಷಗಾನಕ್ಕೆ ಪೌರಾಣಿಕ ಮಾತ್ರ ಎಂಬಂಥ ವಾತಾವರಣದ ಮಧ್ಯೆ ‘ಗೆಲುವಿನ ಕತ್ತಿ’ ಅವರ ಮುಕ್ತ ಮನಸ್ಸಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.

ಅವರು ಬರೆದದ್ದು ಎರಡೇ ‘ಪ್ರಸಂಗ’. ಇದರ ಹೊರತಾಗಿ ಅನೇಕ ಸ್ತೋತ್ರ, ಕೀರ್ತನೆಗಳನ್ನು ರಚಿಸಿದರಾದರೂ ‘ಪ್ರಸಂಗ’ ಮಾತ್ರ ಎರಡೇ. ಅವರ ಎಲ್ಲಾ ಕೃತಿಗಳು ಈಗ ಒಂದಾಗಿ ಪ್ರಕಟವಾಗಿರುವುದು ಒಂದು ಉತ್ತಮ ಕೆಲಸವಾಗಿದೆ.

(ಇವರ ಕುರಿತು ಹೆಚ್ಚಿನ ವಿವರಗಳು ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮಂಗಳೂರು ವಿ.ವಿ.ಗೆ ಸಲ್ಲಿಸಿದ ‘ಭಾಗವತ ಪ್ರಸಂಗಗಳು’ ಎಂಬ ಸಂಶೋಧನಾ ಪ್ರಬಂಧದಲ್ಲಿ ಕೊರಕುತ್ತವೆ.)

. ರುಗ್ಮಿಣೀ ಸ್ವಯಂವರದ ಕರ್ತೃ

ಈ ಪ್ರಸಂಗದ ರಚನಾಕಾರರ ಪರಿಚಯ ಲಭ್ಯವಿಲ್ಲ. ಪ್ರಸಂಗದ ಪದ್ಯದಲ್ಲಿಯೂ ಇದಕ್ಕೆ ಬಲವಾದ ಸಾಕ್ಷಿಗಳು ಇಲ್ಲ. “ನಿರುತ ನೀ ಪಾಲಿಸೆ ಸುಜನರ ಬೇಗಾ ವರಕುಟಶಾದ್ರಿಸ್ಥಿರ ಸ್ಥಿರವಾಸೆ ಮುಕಾಂಬೆ’’ ಎಂದೊಂದು ಸ್ತುತಿ ಪದ್ಯ ಉಂಟು. ಇದು ಮಲೆನಾಡ ಸಮೀಪದ ಕವಿ ಎಂದು ಸೂಚಿಸುತ್ತದೆ. “ಅಂಬಾಡಿಯ ಏಯ್ಡೆಡ್ ಎಲಿಮೆಂಟರಿ ಶಾಲಾ ಹೆಡ್‌ಮಾಸ್ತರ್ ಕೆ. ಸುಬ್ಬರಾವ್ ಇವರಿಂದ ಸಂಗ್ರಹಿಸಲ್ಪಟ್ಟ ಈ ಪುಸ್ತಕವು ಪಾವಂಜೆ ಗುರುರಾವ್ ಇವರ ಉಡುಪಿ ಶ್ರೀ ಕೃಷ್ಣ ಮುದ್ರಣಾಲಯದಲ್ಲಿ  ಬಿ. ರಾಮಕೃಷ್ಣಾಚಾರ್, ಬಿ.ಎ. ವಿದ್ವಾನ್ ಇವರಿಂದ ಮುದ್ರಿಸಲ್ಪಟ್ಟು, ಶ್ರೀ ಮನ್ಮಾಧ್ವ ಸಿದ್ಧಾಂತ ಗ್ರಂಥಾಲಯದಿಂದ ಪ್ರಕಟಿಸಲ್ಪಟ್ಟಿತು. ಶಾ. ಶಕೆ ೧೮೬೬ ಇಸವಿ ೧೯೪೩’’ ಎಂಬ ಮಾಹಿತಿ ಪುಸ್ತಕದ ಹಿಂಬದಿಯ ಪುಟದಲ್ಲಿ ಮುದ್ರಿತವಾಗಿದೆ.

. ಹಲಸನಹಳ್ಳಿ ನರಸಿಂಹ ಶಾಸ್ತ್ರಿ

ನರಸಿಂಹ ಶಾಸ್ತ್ರಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಲಸಿನಹಳ್ಳಿಯವರು; ನಾಗೇಂದ್ರ ಶಾಸ್ತ್ರಿಯವರ ಮಗ. ಇವರು ಆಗುಂಬೆಯ ಶ್ರೀಮಂತ ವಾಸುದೇವಯ್ಯನವರ ಮನೆಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಇವರ ಕಲಾ ಹವ್ಯಾಸ ವಿಧವಿಧ. ನಾಟಕದಲ್ಲಿ ಹಾಸ್ಯಗಾರನಾಗಿ ನಗಿಸಿದರೆ ತಾಳುಮದ್ದೆಯಲ್ಲಿ ಸಮರ್ಥ ಅರ್ಥಧಾರಿ. ಮಂಗಳಕಾರ್ಯಗಳಲ್ಲಿ ಹೆಂಗಳೆಯರು ಹಾಡಬಹುದಾದ ಅನೇಕ ಹಾಡುಗಳನ್ನು ಬರೆದಿದ್ದಾರೆ. ೧೮೭೦-೧೯೫೩ ಇವರ ಬದುಕಿನ ಕಾಲ ಎಂದು ಒಂದು ತೀರ್ಮಾನವಾದರೆ ಶಿವರಾಮಕಾರಂತರು ೧೯೩೦ರ ಸುಮಾರಿಗೆ ಇವರು ತೀರಿಕೊಂಡರು ಎಂದು ಹೇಳಿರುವುದನ್ನು ಡಾ. ಜಿ.ಎಸ್. ಭಟ್ಟ ಸಾಗರ ಅವರು ದಾಖಲಿಸುತ್ತಾರೆ. ‘ಶಶಿಕಲಾ ಪರಿಣಯ’ ಇವರ ಮೊದಲ ಕೃತಿಯಾಗಿದೆ. ರಚನೆಯ ವರ್ಷ ೧೮೯೦. ಅನಂತರ ಅವರು ಸುಮಾರು ಮೂವತ್ತಾರು ‘ಪ್ರಸಂಗ’ಗಳನ್ನು ರಚಿಸಿದ್ದಾರೆ. ವಿದ್ಯುನ್ಮತಿ ಕಲ್ಯಾಣ, ಚಂದ್ರಹಾಸ ಚರಿತ್ರೆ, ಭೀಷ್ಮ ವಿಜಯ, ಭೀಷ್ಮೋತ್ಪತ್ತಿ, ಭೀಷ್ಮಾರ್ಜುನ ಕಾಳಗ, ರುಕ್ಮಾಂಗದ ಚರಿತ್ರೆ, ವೀರಮರಣ ಕಾಳಗ ಇವು ಅವುಗಳಲ್ಲಿ ಕೆಲವು ಯಶಸ್ವೀ ಕೃತಿಗಳು. ಶಿವರಾಮ ಕಾರಂತರು ತಮ್ಮ ನೃತ್ಯ ನಾಟಕಕ್ಕೆ ಬಳಸಿಕೊಂಡಿದ್ದು ಇವರದ್ದೇ ರಚನೆಯಾದ ‘ಭೀಷ್ಮ ವಿಜಯ’. ಇವರು ಪ್ರಮುಖ ಪ್ರಸಂಗ ಕರ್ತರಾಗಿದ್ದಾರೆ.

ಇವರ ಕುರಿತು ಹೆಚ್ಚಿನ ಮಾಹಿತಿ ಇದೇ ಪ್ರಕಟನಾ ಮಾಲಿಕೆಯ “ಮಹಾಭಾರತದೊಳಗಿನ ಪ್ರಸಂಗಗಳು’’ ಸಂಪುಟದಲ್ಲಿ ದಾಖಲಾಗಿದೆ.

. ಚೋರಾಡಿ ವೆಂಕಟರಮಣ ಭಟ್ಟ ಜಾಂಬವತೀ ಕಲ್ಯಾಣ ಮತ್ತು ಸತ್ಯಭಾಮ ಪರಿಣಯ

ಈ ರೀತಿ | ಮರಣ ಬಂತೆ | ತಮ್ಮಾ ತಮ್ಮಾ | ನಾನಿ
ನ್ನಾರ ಕೂಡೆ ಬಾಳಲಯ್ಯೊ | ತಮ್ಮಾ ತಮ್ಮಾ
ತನುವ ಸೀಳಿದವರು ಯಾರು | ತಮ್ಮಾ ತಮ್ಮಾ | ನಾನಿ |
ನ್ನೇನುವುದೇನು ದೈವಗತಿಯೊ | ತಮ್ಮಾ ತಮ್ಮಾ

ಪ್ರಸೇನ ಮರಣ ಹೊಂದಿದನೆಂಬ ಸುದ್ದಿಯನ್ನು ಕೇಳಿ ಆತನ ಅಣ್ಣ ಸತ್ರಾಜಿತ ವ್ಯಥೆಪಡುವ ಈ ಸರಳ ರಚನೆ ನಮ್ಮ ಎದೆಯನ್ನು ಒದ್ದೆ ಮಾಡದಿರಲು ಸಾಧ್ಯವಿಲ್ಲ. ಮಾರ್ದವ ಬದುಕಿಗೆ ಹತ್ತಿರವಾದ ಸರಳವಾದ ರಚನೆಯಿಂದ ಭಾವವನ್ನು ಮೀಟುವ ಬಗೆ ಚೋರಾಡಿ ವೆಂಕಟ್ರಮಣ ಭಟ್ಟರದು.

ಚೋರಾಡಿ ವೆಂಕಟರಮಣ ಭಟ್ಟರ ಊರು ಕುಂದಾಪುರ ತಾಲ್ಲೂಕಿನ ಹಾಲಾಡಿ; ಇವರು ೧೯೩೦ರ ಸುಮಾರು ಬದುಕಿದ್ದರೆಂದು ಶ್ರೀಧರ ಉಪ್ಪೂರರು ಹೇಳಿದರೆಂದು ಪಾದೇಕಲ್ಲು ವಿಷ್ಣುಭಟ್ಟರು ತಮ್ಮ ‘ಕಲ್ಯಾಣ ಪ್ರಸಂಗಗಳು’ (೨೦೦೪) ಸಂಕಲನ ಕವಿ ಪರಿಚಯದಲ್ಲಿ ಹೇಳಿದ್ದಾರೆ. ಇವರ ‘ಇಂದ್ರ ವಿಜಯ’ದಲ್ಲಿ ಹಾಲಾಡಿ ಸಮೀಪದ ತೀರ್ಥಾಡಿ ಗಣಪತಿಯ ಸ್ತುತಿ ಇದ್ದು ‘ಜಾಂಬವತೀ ಕಲ್ಯಾಣ ಮತ್ತು ಸತ್ಯಭಾಮಾ ಪರಿಣಯ’ದಲ್ಲಿ ‘ಕ್ಷೀರಪುರವರನಕರುಣದಲಿ’ ಎಂದಿದ್ದು ಕ್ಷೀರಪುರವೆಂದರೆ ಪೆರ್ಡೂರು ಎಂದು ಅರ್ಥವಿರುವುದರಿಂದ ಅಲ್ಲಿಯೂ ಕವಿ ಇರಬಹುದೆಂದು ವಿ.ಎಂ. ಶಣೈ ಹೇಳಿದುಂಟೆಂದು ಪಾದೆಕಲ್ಲು ವಿಷ್ಣು ಭಟ್ಟರು ಹೇಳುತ್ತಾರೆ. (ಪೂರ್ವೋಕ್ತ) ಅಂದರೆ ಜನ್ಮಸ್ಥಳದ ಕುರಿತು ಅನಿಶ್ಚಿತತೆಯಿದ್ದರೂ ತೀರಾ ಗೊಂದಲಮಯ ಇದ್ದಂತಿಲ್ಲ.

. ಅಜಪುರದ ಸುಬ್ಬ

‘ಪಾರಿಜಾತ ಪ್ರಸಂಗ’ದ ಕವಿ ಅಜಪುರದ ಸುಬ್ಬ ಎಂಬುವರು. “ಮಹಿಯ ಸುಮನಸ ಕುಲದೊಳುದಿಸಿದ ಮಹದಧಿಕಮತಿ ವೆಂಕಣಾರ್ಯನ ಮಹಿಳೆ ದೇವಮ್ಮನ ತನೂದ್ಭವ ಮಹಿತಸುಗುಣ ನೀತಿಯುತ ಚನ್ನಯ್ಯವರ ಸಹ ಜಾತ ಸುಬ್ಬನು ಪೇಳಿದನು ಶ್ರೀನಾಥನನುಪಮ ಕಥೆಯನಿದನೀ ಭೂತಳದಲ್ಲಿ ಹೇಳಿ ಕೇಳಿದವರಿಗೆ ಕಾಮ್ಯವ ಲೋಲಲೋಚನೆ ಭಕ್ತ ಪರಿಪಾಲೆ ಮೂಕಾಂಬಿಕೆಯು ಸಂತತ ಪಾಲಿಸುವಳು’’ ಎಂದು ಹೇಳಿಕೊಂಡಿದ್ದಾರೆ. ವೆಂಕಣ್ಣ ಮತ್ತು ದೇವಮ್ಮನವರ ಮಗ ಇವರು. ಚೆನ್ನಯ್ಯ ಎಂಬುವರು ಇವರ ಸೋದರ. ಇವರು ಮೂಕಾಂಬಿಕೆ ಭಕ್ತ. ಇವರ ಊರು ಬ್ರಹ್ಮಾವರ. ಇದು ಉಡುಪಿ ಜಿಲ್ಲೆಯಲ್ಲಿದೆ. ಆಡುವಳ್ಳಿ ಎಂಬ ಅಭಿಪ್ರಾಯ ಇದೆ. ಇವರು ಕೆಳದಿ ಬಸಪ್ಪನಾಯಕನ ಆಶ್ರಿತರಾಗಿದ್ದಾರೆ.

. ನಗಿರೆ ಸುಬ್ರಹ್ಮಣ್ಯ

‘ರತಿಜನ್ಮ’ದ ಕವಿ ನಗಿರೆ ಸುಬ್ರಹ್ಮಣ್ಯ ಎಂಬುವರು. ನಗಿರೆ ಎಂಬುದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಪಂಚಾಯತಕ್ಕೆ ಸೇರಿದೆ. ಈಗಲೂ ನಗಿರೆ-ನಗರೆ ಎಂಬ ಹೆಸರಿನಲ್ಲಿ ಇದೆ. ವಿಠಲ ಮತ್ತು ಗೌರಿ ದಂಪತಿಗಳ ಮಗನಾದ ಸುಬ್ರಹ್ಮಣ್ಯ ಎಂಬುದು ತಮ್ಮ ಹೆಸರು ಎಂದು ಹೇಳಿಕೊಂಡಿದ್ದಾರೆ. ನಗಿರೆಯ ವೆಂಕಟ್ರಮಣ ದೇವರನ್ನು ಇವರು ಸ್ತುತಿಸುತಿದ್ದಾರೆ. ಅಂದರೆ ಇವರು ವೆಂಕಟ್ರಮಣ ದೇವರ ಭಕ್ತ ಎಂಬುದಾಗಿದೆ. ಅವರು ರಚಿಸಿದ ಇನ್ನೊಂದು ಪ್ರಸಂಗ ‘ರಾವಣೋದ್ಭವ’. ಇವರು ೧೬ನೆಯ ಶತಮಾನಕ್ಕೆ ಸೇರಿದವರಾಗಿದ್ದಾರೆ.

. ವಿಷ್ಣು ವಾರಂಬಳ್ಳಿ

‘ಬಾಣಾಸುರ ಕಾಳಗದ’ ಕವಿ ವಿಷ್ಣು ವಾರಂಬಳ್ಳಿ ಎಂಬುವರು. ‘ಭೂಮಿಯಮರರ ಕುಲದಿ ಜನಿಸಿದ ರಾಮಪುತ್ರನು ವಿಷ್ಣುವೆಂಬ ಶ್ರೀ ಮಹಾಲಿಂಗನ ಪದದ್ವಯ ತಾಮರಸದ ಕರುಣದಿಂದೀ ಕಥೆಯನುಸುರಿದೆ’’ ಎಂದು ಕೊಂಡಿದ್ದಾರೆ. ವಾರಂಬಳ್ಳಿ ಎಂಬ ಊರಿನ ಹೆಸರಿನ ಮೇಲಿಂದ ವಾರಂಬಳ್ಳಿ ವಿಷ್ಣು ಎಂಬ ಹೆಸರು ಬಂದಿದೆ. ಇವರು ಅಜಪುರದ ಈಶ್ವರನ ಭಕ್ತರಾಗಿದ್ದಾರೆ. ‘ಬಾಣಾಸುರ ಕಾಳಗ’ ಭಾಗವತದ ಒಂದು ಕಥೆ. ‘ಇಂದ್ರಕೀಲ’ ಎಂಬ ಬೇರೆ ಪ್ರಸಂಗದ ರಚನೆಯನ್ನೂ ಅವರು ಮಾಡಿದ್ದಾರೆ. ಅದು ಪ್ರಕಟವಾಗಲಿಲ್ಲ. ‘ವಿರಾಟಪರ್ವ’ ಇವರ ಇನ್ನೊಂದು ರಚನೆ.

. ಬಲಿಪ ನಾರಾಯಣ ಭಾಗವತರು

‘ನರಕಾಸುರವಧೆ’ ಕವಿಗಳು ಬಲಿಪ ನಾರಾಯಣ ಭಾಗವತರು, ಇವರ ಕಾಲ ೧೮೮೭ ರಿಂದ ೧೯೪೪ರ ತನಕ. ತೆಂಕು ತಿಟ್ಟಿನ ದೊಡ್ಡ ಭಾಗವತರಿವರು. ಹಳೆಯ ಅನೇಕ ಪ್ರಸಂಗಗಳನ್ನು ರಂಗಭೂಮಿಗೆ ಅನುಕೂಲವಾಗುವಂತೆ ಅಳವಡಿಸಿದ್ದಾರೆ. ಅನೇಕ ನೂತನ ಪ್ರಸಂಗಗಳನ್ನು ರಚಿಸಿದ್ದಾರೆ. ಅಂತಹ ೨೧ ಪ್ರಸಂಗಗಳನ್ನು ನಾಲ್ಕು ಸಂಪುಟದಲ್ಲಿ ಪದವೀಧರ ಯಕ್ಷಗಾನ ಮಂಡಳಿ, ಮುಂಬೈ, ಅವರು ಪ್ರಕಟಿಸಿದ್ದಾರೆ.

ಇವರ ಮನೆತನವೇ ಯಕ್ಷಗಾನ ಭಾಗವತ ಮನೆತನ ಎಂದರೂ ಸಲ್ಲುತ್ತದೆ. ಇವರ ಮೊಮ್ಮಗ (ಕಿರಿಯ) ಬಲಿಪ ನಾರಾಯಣ ಭಾಗವತರು ಕೂಡ ಪ್ರಸಿದ್ಧ ಭಾಗವತರಾಗಿದ್ದಾರೆ. ಕಾಸರಗೋಡ ತಾಲೂಕಿನ ಬಲಿಪ ಎಂಬ ಊರಿನಿಂದ ಬಲಿಪ ಭಾಗವತರು ಎಂಬ ಹೆಸರು ಬಂದಿದೆ.

೧೦. ರಾಜಗೋಪಾಲಾಚಾರ್ಯ

ರಾಜಗೋಪಾಲಚಾರ್ಯರ ಕಾಲ ನಿಶ್ಚಯವಾಗಿ ತಿಳಿಯುತ್ತಿಲ್ಲ. ಆದರೆ ಅವರು ಕೀರ್ತನೆ, ಹಾಡುಗಳನ್ನು ರಚಿಸುತ್ತಿದ್ದಂತೆ. ಅವರು ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳೂ ಆಗಿದ್ದರು. ಇವರು ಸೊಂದೆ ಮಠದಲ್ಲಿ ಅಧಿಕಾರಿಗಳಾಗಿದ್ದರು. ಆಗಿನ ಸ್ವಾಮಿಗಳಾದ ಶ್ರೀ ವಿಶ್ವೇಂದ್ರತೀರ್ಥರು ಅವರಿಗೆ ಪ್ರೋತ್ಸಾಹ ಕೊಡುತ್ತಿದ್ದರು. ಅವರು ‘ಕೃಷ್ಣ ದಿನಾಶ್ವಮೇಧ’ ಎಂಬ ಪ್ರಸಂಗವನ್ನಲ್ಲದೇ ‘ಅಷ್ಟ ಮಹಿಶಿಯರ ವಿವಾಹ’ ಎಂಬ ಪ್ರಸಂಗವನ್ನೂ ಬರೆದಿದ್ದಾರೆ. ಅದನ್ನು ಪಾವಂಜಿ ಗುರುರಾಜರು ಸಂಪಾದಿಸಿದ್ದಾರೆ. ಹಾಗೆ ಸಂಪಾದಿಸುವಾಗ ರಾಗ ತಾಳಗಳನ್ನು ಸಂಶೋಧಿಸಿ ತಿದ್ದುಪಡಿ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತದೆ.

ಉಡುಪಿಯ ಮಟ್ಟಿಸುಬ್ರಾಯರಿಗೆ ಇವರ ಪರಿಚಯ ಚೆನ್ನಾಗಿ ಇತ್ತಂತೆ. ಮಟ್ಟಿ ಸುಬ್ರಾಯರು ಸಹ ಪ್ರಸಿದ್ಧ ಅರ್ಥಧಾರಿಗಳು. ಅವರಿಗೆ ಈಗ ತೊಂಬತ್ತು ವರ್ಷ. ಅವರು ಅರ್ಥದಾರಿಗಳಾಗಿ ಪ್ರಸಿದ್ಧಿ ಹೊಂದಿದ್ದರು ಎಂದರೆ ಅವರಿಗೆ ಮೂವತ್ತರಿಂದ ನಾಲ್ವತ್ತು ವರ್ಷಗಳಾದರೂ ಆಗಿದ್ದಿರಬೇಕು. ಅದೇ ಹೊತ್ತಿಗೆ ರಾಜಗೋಪಾಲಚಾರ್ಯರು ಪ್ರಸಿದ್ಧ ಅರ್ಥಧಾರಿಗಳಾಗಿದ್ದರೆಂದರೆ ಸುಮಾರು ಈಗ ಅರವತ್ತು ವರುಷ ಹಿಂದೆ ಸರಿಯಬೇಕಾಗುತ್ತದೆ. ಅಂದರೆ ೧೯೩೦-೪೦ರ ಮಧ್ಯೆ ಅವರು ಬದುಕಿದ್ದರೆಂದು ಊಹಿಸಬಹುದೆಂದು ವಿದ್ವಾಂಸ ರಾಘವ ನಂಬಿಯಾರ್ ಅವರು ನನ್ನೊಡನೆ ಮಾತನಾಡುತ್ತಾ ಹೇಳಿದ್ದಾರೆ.

***