ಚಿಕ್ಕೆಗಣ್ಣಿನ ಕೆಳಗೆ ಬೆಳ್ಳಿ ಮೋಡದ ಗಡ್ಡ,
ಅಲ್ಲಿಂದ ಇಲ್ಲಿನ ತನಕ ಬೆಳಕುಗಳ
ನಿಲುವಂಗಿ ತೊಟ್ಟು ನಿಂತವನು.
ಬೈಗು ಬೆಳಗಿನ ಬೆಂಕಿಯೆದೆಯಲ್ಲಿ
ಗಾಳಿಕುಂಚವನದ್ದಿ ಸಾವಿರ ಚಿತ್ರ ಬರೆದವನು
ಮೂಕ ಹೃದಯದಸಂಖ್ಯ ಭಾವನೆಗಳಿಗೆ
ಬಣ್ಣದಂಗಿಯ ತೊಡಿಸಿ ಗೆಜ್ಜೆಯ ಕಟ್ಟಿ
ಆಡಿಸಿದವನು

ಮಿರುಗುವಿಬ್ಬನಿಯಿಂದ ಉರಿವ ಚಿಕ್ಕೆಯ ತನಕ
ಇರುವ ಬೆರಗಿನ ತಂತಿಯೆಲ್ಲವನು ಮಿಡಿದವನು.
ಓ ಕವಿವರ‍್ಯ
ನೀನು ಪ್ರತಿಭೆಯ ಸೂರ್ಯ.