ಕಾವ್ಯದ ಕಾರಣ ಸಾಮಗ್ರಿಯನ್ನು ಕುರಿತು ಹೇಳುವಲ್ಲಿ ನಮ್ಮ ಆಲಂಕಾರಿಕರು ಕವಿಗೆ ಮೊಟ್ಟಮೊದಲು ಪ್ರತಿಭಾಶಕ್ತಿಯೆ ಮೂಲಧನವೆಂದು ಒಪ್ಪಿಕೊಂಡರೂ, ಆ ಶಕ್ತಿ ಕ್ರಿಯಾಶೀಲವಾಗುವುದು ಲೋಕ, ಶಾಸ್ತ್ರ, ಕಾವ್ಯ -ಇವುಗಳ ವಿಶೇಷ ಪರಿಚಯದಿಂದಲೇ ಎನ್ನುವುದನ್ನು ಒತ್ತಿ ಹೇಳಿದ್ದಾರೆ.[1] ‘ಲೋಕ’, ಎಂದರೆ ಲೋಕದ ಸಮಸ್ತ ವ್ಯಾಪಾರಗಳ ಸೂಕ್ಷ್ಮ  ನಿರೀಕ್ಷೆ. ‘ಶಾಸ್ತ್ರ’ ಎಂದರೆ ಛಂದಸ್ಸು ವ್ಯಾಕರಣ ಭಾಷಾಶಾಸ್ತ್ರ ಮೊದಲಾದವುಗಳಿಂದ ಹಿಡಿದು ವಿಜ್ಞಾನ ಹಾಗೂ ಕಲೆಗಳಿಗೆ ಸಂಬಂಧಿಸಿದ ಶಾಸ್ತ್ರಗಳ ಅವಲೋಕನ. ‘ಕಾವ್ಯ’ ಎಂದರೆ ಪೂರ್ವಕವಿಗಳಿಂದ ನಿರ್ಮಿತವಾದ ಕಾವ್ಯೇತಿಹಾಸಗಳ ಅಧ್ಯಯನ. ಕವಿ ಪ್ರತಿಭೆ ಈ ಸಂಸ್ಕಾರ ವಿಶೇಷದಿಂದ ಪುಷ್ಟವಾಗದಿದ್ದಲ್ಲಿ ಪುಟವೇರಲಾರದು. ಉತ್ತಮ ಕವಿಕೃತಿ ಈ ಅನುಭವಗಳ ಪರಿಪಾಕದಿಂದ ಮೂಡಿದ ಕಾರಣ ಅದು ಘನವಾಗುತ್ತದೆ, ಮಾನ್ಯವಾಗುತ್ತದೆ. ಈ ದೃಷ್ಟಿಯಿಂದ ಕಾವ್ಯಸಮಸ್ತವನ್ನೂ ಹಂತ ಹಂತವಾಗಿ ಪರಿಶೀಲಿಸಿ ನಮ್ಮ ಆಲಂಕಾರಿಕರು ಕವಿಕೃತಿಯಲ್ಲಿ ಕಂಡುಬರುವ ವಿವಿಧ ಉಕ್ತಿ ವೈಚಿತ್ರ ಗಳೆಲ್ಲವೂ, ಉಕ್ತಿ ವಿಧಾನಗಳೆಲ್ಲವೂ, ಲೋಕಾನುಭವ, ಶಾಸ್ತ್ರಾಧಾರ, ಮತ್ತು ಕಾವ್ಯಾಧ್ಯಯನ-ಇವುಗಳ ಪರಿಣಾಮ ವಾಗಿರುವುದನ್ನು ಗಮನಿಸಿದರು. ಆದರೆ ಇವುಗಳಲ್ಲಿ ಕೆಲವು ಮಾತ್ರ ಲೋಕವೃತ್ತ ವನ್ನಾಗಲಿ, ಶಾಸ್ತ್ರ ವೃತ್ತವನ್ನಾಗಲಿ ಆಶ್ರಯಿಸದೆ ಕೇವಲ ಪ್ರತಿಭಾ ಬಲದಿಂದ ನಿರ್ಮಿತವಾದ ಆಭಿವ್ಯಕ್ತಿ ವಿಶೇಷಗಳಾಗಿ, ಕವಿಪರಂಪರಾಗತವಾಗಿ ಬಂದಿರುವುದನ್ನು ಕಂಡರು. ಚಕೋರಪಕ್ಷಿ ಬೆಳುದಿಂಗಳನ್ನು ಕುಡಿದು ಬದುಕುತ್ತದೆ. ಚಂದ್ರಕಾಂತ ಶಿಲೆ ಬೆಳುದಿಂಗಳಲ್ಲಿ ಕರಗುತ್ತದೆ. ಚಕ್ರವಾಕ ದಂಪತಿಗಳು ಕತ್ತಲಾದೊಡನೆ ವಿರಹವನ್ನನು ಭವಿಸುತ್ತವೆ. ಕೀರ್ತಿ ಬೆಳ್ಳಗಿದೆ, ಅಪಕೀರ್ತಿ ಕಪ್ಪಗಿದೆ -ಇಂತಹ ಎಷ್ಟೋ ಕಾಲ್ಪನಿಕ ಸಂಗತಿಗಳು ಬಹು ಹಿಂದಿನಿಂದಲೂ ಕಾವ್ಯಗಳಲ್ಲಿ ಪರಂಪರಾಗತವಾಗಿ ಬಂದಿವೆ. ಶಿಷ್ಟರಾದ ಸಹೃದಯರೂ ಅವುಗಳನ್ನು ಸಂಭಾವಿಸಿಕೊಂಡು ಬಂದಿದ್ದಾರೆ. ಆದರೆ ಲೋಕದಲ್ಲಿ ಇಂಥ ಸಂಗತಿವಿಶೇಷಗಳನ್ನು ಯಾರೂ ಕಂಡದ್ದಿಲ್ಲ. ಅಥವಾ ಶಾಸ್ತ್ರಗಳಲ್ಲಿ ಇವುಗಳ ವಿಚಾರ ಕಂಡುಬರುವುದಿಲ್ಲ. ಇಂಥವುಗಳನ್ನು ಕೇವಲ ಹುಸಿಕಲ್ಪನೆಗಳೆಂದು ಪರಿಗಣಿಸಿ, ಲೋಕ ಮತ್ತು ಶಾಸ್ತ್ರದ ಆಧಾರವಿಲ್ಲವೆಂಬ ನೆಪದಿಂದ ಕಾವ್ಯವಲಯದಿಂದ ಬಹಿಷ್ಕರಿಸುವಂತಿಲ್ಲ. ಏಕೆಂದರೆ ಅವುಗಳಲ್ಲಿಯೂ ಏನೋ ಒಂದು ಆಹ್ಲಾದ ವಿಶೇಷ ಉಂಟು; ಅವುಗಳಿಗೂ ರಸಲೋಕದ ಪ್ರಜೆಗಳಾಗಿ ಇರುವ ಹಕ್ಕುಂಟು. ಹೀಗಾಗಿ ಅವುಗಳಿಗೆ ‘ಕವಿಸಮಯ’ಗಳೆಂಬ ಪೌರಪ್ರಶಸ್ತಿಯನ್ನು ಆಲಂಕಾರಿಕರು ಕೊಡಬೇಕಾಯಿತು. ಇವುಗಳನ್ನು ಮೊಟ್ಟ ಮೊದಲು ವಿಂಗಡಿಸಿ ಅವುಗಳ ವಿಷಯವನ್ನು ಪ್ರಚುರಪಡಿಸಿದವನು ರಾಜಶೇಖರ.

“ಕವಿಸಮಯದ ವಿಷಯದಲ್ಲಂತೂ ಅವನೇ ಪ್ರಥಮಾಚಾರ್ಯ…. ಇದರ ನಿರೂಪಣೆಗೆ ರಾಜಶೇಖರನು ತನ್ನ ಗ್ರಂಥದ ಮೂರು ಅಧ್ಯಾಯಗಳನ್ನು ವಿನಿಯೋಗಿಸಿ ಕೊನೆಯಲ್ಲಿ ಹೀಗೆ ಹೇಳುತ್ತಾನೆ: “ಈ ಕವಿಸಮಯವು ಕಾವ್ಯದಲ್ಲಿ ಮಲಗಿದಂತೆ ಅಡಗಿತ್ತು. ಈಗ ಅದನ್ನು ನಾವು ಯಥಾಮತಿಯಾಗಿ ಉದ್ಭೋಧನಗೊಳಿಸಿದ್ದೇವೆ.”[2] ಈ ಬಗ್ಗೆ ಆತನ ಸೂತ್ರ ಇದು: “ಅಶಾಸ್ತ್ರೀಯಂ ಅಲೌಕಿಕಂ ಚ ಪರಂಪರಾಯಾತಂ ಯಮರ್ಥಮುಪನಿಬಧ್ನಂತಿ ಕವಯಃ ಸ ಕವಿಸಮಯಃ… ಸಚಿತ್ರಧಾಃ ಸ್ವರ್ಗ್ಯೋಭೌಮಃ ಪಾತಾಲೀಯಶ್ಚ” (ಕಾವ್ಯಮೀಮಾಂಸಾ, ಪುಟ ೭೮)[3] ಇದೇ ಸೂತ್ರವನ್ನೆ ಕಾವ್ಯಾವಲೋಕನದ ನಾಗವರ್ಮ ಬಹು ಸೊಗಸಾಗಿ ಕನ್ನಡಿಸಿದ್ದಾನೆ.

ಆವುದಶೇಷಲೋಕ ವಿಷಯಸ್ಥಿತಿಯಲ್ತು, ಅಖಿಲಾಗಮಾರ್ಥಮುಂ
ಭಾವಿಪೊಡಲ್ತು, ಸತ್ಕವಿ ಪರಂಪರೆಯಿಂ ಪರಿಗೀತಮಾಗಿ ನಿ
ಷ್ಕೇವಳಮಾದ ರೂಢಿವಶದಿಂ ಸಲೆ ಸಲ್ವುದಿದಲ್ತೆ ಶಿಷ್ಟಸಂ
ಭಾವಿತಮಪ್ಪ ಕಾವ್ಯಸಮಯಂ ಭುವನತ್ರಯವಸ್ತು ಗೋಚರಂ.”

ಯಾವುದು ಸಂಪೂರ್ಣವಾಗಿ ಲೋಕವಿಷಯಸ್ಥಿತಿ ಅಲ್ಲವೋ, ಯಾವುದು ಶಾಸ್ತ್ರಗಳಲ್ಲಿಯೂ ಹೇಳಲ್ಪಟ್ಟಿಲ್ಲವೋ, ಆದರೆ ಸತ್ಕವಿ ಪರಂಪರೆಯಿಂದ ಕಾವ್ಯಗಳಲ್ಲಿ ರೂಢಿವಶದಿಂದ ಬಂದಿದೆಯೋ, ಶಿಷ್ಟರಾದ ಸಹೃದಯರಿಂದ ಸಂಭಾವಿತವಾಗಿದೆಯೋ ಅದು ಕವಿಸಮಯ. ಅದರ ವಸ್ತು ಭುವನತ್ರಯ ಗೋಚರವಾದದ್ದು.[4]

ಕವಿಸಮಯಗಳು ಕಾಲದಿಂದ ಕಾಲಕ್ಕೆ ಕವಿಗಳಿಂದ ಸೃಜಿಸಲ್ಪಟ್ಟು ಒಂದು ನಿರ್ದಿಷ್ಟವಾದ ಅರ್ಥಕೋಶವನ್ನು ಹೊತ್ತು ಪರಂಪರಾಗತವಾಗಿ ಬಂದ ಕಾರಣ ಎಲ್ಲ ಕಾಲದ ಕವಿಗಳೂ ತಮ್ಮ ತಮ್ಮ ಕಾವ್ಯಗಳಲ್ಲಿ ಅವುಗಳನ್ನು ಬಳಸುವುದು ಸಾಧ್ಯವಾಯಿತು. ಸತ್ಕವಿಗಳು ಅವುಗಳನ್ನು ಬಳಸುತ್ತಾ ಬಂದಿದ್ದಾರೆ. ಶಿಷ್ಟರಾದ ಸಹೃದಯರು ಒಪ್ಪಿಕೊಂಡು ಬಂದಿದ್ದಾರೆ. ಹೀಗಾಗಿ ಕವಿಸಂಪ್ರದಾಯದಲ್ಲಿ ತೇಲಿ ಬಂದ ಎಷ್ಟೋ ಪ್ರಕಾರಗಳಲ್ಲಿ ಕವಿಸಮಯವೂ ಒಂದು. ಕವಿಸಮಯವೆಂದರೆ ಕವಿ ಸಂಪ್ರದಾಯವೆಂದು ಅರ್ಥವಾಗುವ ಕಾರಣ, ಕವಿಸಮಯವೂ ಕವಿಸಂಪ್ರದಾಯವೂ ಒಂದೇ ಎಂದು ಭ್ರಮಿಸಲು ಅವಕಾಶವುಂಟು. ಆದರೆ ಕವಿಸಮಯ, ಕವಿಸಂಪ್ರದಾಯ ಇವೆರಡೂ ಸಮಾನಾರ್ಥಕ ಪದಗಳಲ್ಲ. ‘ಕವಿಸಮಯ’ -ಎನ್ನುವ ಮಾತಿಗೆ ನಮ್ಮ ಆಲಂಕಾರಿಕರ ಪ್ರಕಾರ ಒಂದು ನಿರ್ದಿಷ್ಟವಾದ ಅರ್ಥಪರಿವೇಷವುಂಟು ಎನ್ನುವುದನ್ನು ಮೊಟ್ಟಮೊದಲು ಸ್ಪಷ್ಟಪಡಿಸಿಕೊಳ್ಳಬೇಕು.

ಕಾವ್ಯರಚನೆಯ ಕ್ರಮದಲ್ಲಿ ಒಂದು ನಿರ್ದಿಷ್ಟರೂಪವಾದ ಬರವಣಿಗೆಯ ಮಾದರಿ ಏಕಪ್ರಕಾರವಾಗಿ ಒಂದು ಕಾಲದ ಅಥವಾ ಹಲವು ಕಾಲದ ಕವಿಗಳಲ್ಲಿ ಕಂಡುಬಂದಾಗ ಅದೆಲ್ಲವನ್ನೂ ಸಮಗ್ರವಾಗಿ ಗಮನಿಸಿ ಸಂಪ್ರದಾಯವೆನ್ನುತ್ತೇವೆ. ಉದಾಹರಣೆಗೆ ಅಷ್ಟಾದಶವರ್ಣನೆಯು ಹಳೆಯ ಕಾವ್ಯಗಳಲ್ಲಿ ಏಕಪ್ರಕಾರವಾಗಿ ಕಂಡುಬರುವ ಕಾರಣ, ಅದು ಸಂಪ್ರದಾಯದ ಬಹು ಮುಖ್ಯವಾದ ಒಂದು ಪ್ರಕಾರ ಎಂದು ಪರಿಗಣಿಸುತ್ತೇವೆ. ಬರವಣಿಗೆಯ ಕ್ರಮದಲ್ಲಿ, ಅಲಂಕಾರಗಳ ವಿರಚನೆಯಲ್ಲಿ, ವಸ್ತುನಿರ್ವಹಣೆಯಲ್ಲಿ ಕಂಡುಬರುವಂಥ ಏಕತಾನತೆ ಇದರ ಮುಖ್ಯಲಕ್ಷಣ. ‘ಮುಖಕಮಲ’ ‘ಪಾದಪದ್ಮ’ ಎನ್ನುವಂಥ ಅಲಂಕಾರಗಳು, ‘ವಸಂತ ವರ್ಣನೆ’ ‘ವನವಿಹಾರ ವರ್ಣನೆ’ ಎನ್ನುವಂತಹ ಭಾಗಗಳೂ, ಕವಿ ಕಾವ್ಯದ ವಸ್ತು-ರೀತಿಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಾದರೂ, ಸಾವಿರಾರು ವರ್ಷಗಳ ಕಾಲ ಏಕಪ್ರಕಾರವಾಗಿ ಬಂದಿವೆ. ಇವುಗಳ ಜೊತೆಗೆ ‘ಚಕೋರ’ ‘ಚಂದ್ರಕಾಂತ’ ‘ಚಕ್ರವಾಕ’ ಇವುಗಳ ವಿಷಯವೂ ಈ ಪರಂಪರೆಯಲ್ಲಿ ಬಂದಿವೆ. ಆದರೆ, ‘ಮುಖಕಮಲ’ ‘ಪಾದಪದ್ಮ’ ಎನ್ನತಕ್ಕವು ಸಂಪ್ರದಾಯದ ಅಲಂಕಾರಗಳಾದರೆ, ‘ಚಕೋರ’ ‘ಚಂದ್ರಕಾಂತ’ಗಳು ಅದೇ ಸಂಪ್ರದಾಯದ ಕವಿಸಮಯಗಳು. ವಸಂತ ವರ್ಣನೆ ಕವಿಸಂಪ್ರದಾಯವಾದರೆ, ವಸಂತದಲ್ಲಿ ಮಾತ್ರ ಕೋಗಿಲೆ ಕೂಗುತ್ತದೆ ಎನ್ನುವ ಸಂಗತಿ ಕವಿಸಮಯವಾಗುತ್ತದೆ. ಯಾವ ಕಾಲದ ಕಾವ್ಯದಲ್ಲಿ ಬಳಸಲ್ಪಟ್ಟರೂ ಕವಿಸಮಯಗಳಿಗೆ ಪರಂಪರಾಗತವಾಗಿ ಬಂದ ಸಾಂಕೇತಿಕ ಅರ್ಥದ ಸೀಮಾವಲಯವುಂಟು. ಇಂಥ ಅರ್ಥಕೋಶವನ್ನು ಹೊತ್ತ ಕವಿಸಮಯಗಳು ಕವಿಪರಂಪರೆಯಲ್ಲಿ ತೇಲಿಬಂದಿವೆ. ಆದರೆ ಕವಿಸಂಪ್ರದಾಯದಲ್ಲಿ ಕವಿಸಮಯಗಳು ಅತ್ಯಲ್ಪಸಂಖ್ಯಾತವಾದ ಒಂದು ಪ್ರಕಾರ ಮಾತ್ರ. ಆದಕಾರಣ ಕವಿಸಂಪ್ರದಾಯವೆಲ್ಲವೂ ಕವಿಸಮಯವಲ್ಲ; ಹಾಗೆಯೆ ಕವಿಸಮಯವೆಂದರೆ ಕವಿಸಂಪ್ರದಾಯವಲ್ಲ.[5]

ಕಾವ್ಯಸಮಸ್ತವೂ ಒಂದಲ್ಲ ಒಂದು ಬಗೆಯ ಅಲಂಕಾರಗಳ ಪರಂಪರೆ ಎಂದು ಭಾವಿಸಿ ಪ್ರತಿಯೊಂದು ಉಕ್ತಿವೈಚಿತ್ರ್ಯವನ್ನೂ ವಿಂಗಡಿಸಿ ಹೆಸರಿಸುತ್ತಾ ಹೊರಟ ಆಲಂಕಾರಿಕರ ದೃಷ್ಟಿಗೆ ಕವಿಸಮಯಗಳು ಒಂದು ರೀತಿಯ ವಿಚಿತ್ರ ಸೃಷ್ಟಿಯಾಗಿ ತೋರಿರಬೇಕು. ಏಕೆಂದರೆ ಕವಿಸಮಯಗಳು ಕವಿ ಕಲ್ಪನೆಯಿಂದ ಮೂಡಿದರೂ, ಅಲಂಕಾರಗಳ ನಿರ್ಮಾಣದಲ್ಲಿರುವಂಥ ಯಾವ ಸಾದೃಶ್ಯದ ಆಧಾರವೂ ಇವುಗಳಲ್ಲಿ ತೋರಲಿಲ್ಲ, ಅಥವಾ ಸ್ವಭಾವೋಕ್ತಿಗಳಂತೆ ಲೋಕವಿಷಯಗಳ ರಮ್ಯನಿರೂಪಣೆಯೂ ಇವುಗಳಲ್ಲ. ಇವುಗಳಿಗೆ ಅಲಂಕಾರಗಳಿಂದ ಭಿನ್ನವಾದ ಒಂದು ಅಸ್ತಿತ್ವವಿರುವುದು ಸ್ಪಷ್ಟವಾಗಿಯೆ ಇದೆ. ಅಲಂಕಾರಗಳ ನಿರ್ಮಾಣದಲ್ಲಿ ಕವಿಕಲ್ಪನೆಯ ಅಂಶ ಪ್ರಧಾನವಾಗಿದ್ದರೂ ಅವು ಲೋಕದಲ್ಲಿ ಎಲ್ಲರಿಗೂ ಗೋಚರವಾದ ವಸ್ತುಗಳೆರಡರ ಸಾದೃಶ್ಯ ವೈದೃಶ್ಯಗಳ ಆಧಾರದಿಂದ ಮೂಡಿದವುಗಳು. ‘ಮುಖಕಮಲ’ ಎನ್ನುವ ಒಂದು ರೂಪಕ ನಿರ್ಮಾಣದಲ್ಲಿ ಕವಿ ಪ್ರತಿಭೆ ಮುಖಕ್ಕೂ ಕಮಲಕ್ಕೂ ಇರುವ ಸಾದೃಶ್ಯವೆರಡರ ಸ್ಮೃತಿಯನ್ನು ತಟಕ್ಕನೆ ಸಂಘಟಿಸುವುದರ ಮೂಲಕ ನೂತನತೆಯನ್ನು ತಂದಿದೆ. ಆದರೆ ‘ಚಂದ್ರಕಾಂತ’ ಎನ್ನುವ ಒಂದು ಕವಿಸಮಯದಲ್ಲಿ ಅಂಥ ಸೃಜನೆಗೆ ಯಾವ ಆಧಾರವಿದೆ? ಹಾಗೆಯೆ ಬೆಳದಿಂಗಳನ್ನು ಕುಡಿದು ಬದುಕುವ ಚಕೋರ, ಮಳೆಗೆ ಕಾತರಿಸುವ ಚಾತಕ, ಕತ್ತಲಾದೊಡನೆಯೆ ಅಗಲಿ ಕಾತರಿಸುವ ಚಕ್ರವಾಕ ಇವುಗಳಿಗೆ ಯಾವ ಆಧಾರವಿದೆ? ಅವುಗಳು ಕವಿಯ ಭಾವಗೃಹೀತವಾದ, ಕಲ್ಪನಾ ನಿರ್ಮಿತವಾದ ಸಂಗತಿಗಳು ಮಾತ್ರ. ಶಿಲೆಯೊಂದು ಬೆಳುದಿಂಗಳಲ್ಲಿ ಕರಗುವುದೂ, ಹಕ್ಕಿಯೊಂದು ಬೆಳದಿಂಗಳನ್ನು ಕುಡಿದು ಬದುಕುವುದೂ ಲೋಕವಿಷಯ ಸ್ಥಿತಿಯಲ್ಲದಿದ್ದರೂ ಎಂಥ ಸೊಗಸಾದ ಕಲ್ಪ್ಪನೆಗಳು! ಎಂದೋ ಯಾವನೋ ಕವಿಯೊಬ್ಬ ಇಂಥ ಸುಂದರವಾದ ಸಂಗತಿಗಳನ್ನು ಕಲ್ಪಿಸಿದ. ಅದೂ ಪ್ರತಿಭೆಯ ಕೆಲಸವೇ. ಉದ್ದಕ್ಕೂ ಕವಿಗಳು ಅದನ್ನು ಲೋಕಾಧಾರದ ಸಂಗತಿಯನ್ನೆಂತೋ ಅಂತೆಯೆ ಒಪ್ಪಿಕೊಂಡು ತಮ್ಮ ಕಾವ್ಯಗಳಲ್ಲಿ ಬಳಸುತ್ತಾ ಬಂದಿದ್ದಾರೆ. ಈ ಕವಿಸಮಯಗಳು ಉದ್ದಕ್ಕೂ ಕಾವ್ಯಗಳಲ್ಲಿ ಕೆಲವೆಡೆ ಕೇವಲ ಸಂಗತಿಗಳಾಗಿ, ಕೆಲವಡೆ ಸಂಕೇತಗಳಾಗಿ, ಕೆಲವೆಡೆ ಅಲಂಕಾರ ನಿರ್ಮಾಣದ ಉಪಮಾನ ಸಾಮಗ್ರಿಯಾಗಿ, ಇನ್ನು ಕೆಲವೆಡೆ ಧ್ವನಿವ್ಯಂಜಕವಾದ ಪ್ರತಿಮೆಗಳಾಗಿ ಬಳಸಲ್ಪಟ್ಟಿವೆ.

ಲೋಕ, ಶಾಸ್ತ್ರ, ಕಾವ್ಯ ಈ ಮೂರು ಕವಿಪ್ರತಿಭೆಗೆ ಅಗತ್ಯವಾದ ಪರಿಕರಗಳೆಂದು ಒಪ್ಪಿಕೊಂಡ ಮೇಲೆ, ಲೋಕಕ್ಕಾಗಲಿ, ಶಾಸ್ತ್ರಕ್ಕಾಗಲಿ ಋಣಿಯಾಗದ ಕವಿಸಮಯಗಳು ಮತ್ತೊಂದು ಪರಿಕರವಾದ ಕಾವ್ಯಕ್ಕೆ ಋಣಿಯಾಗಿವೆ ಎನ್ನುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಕವಿಗೆ ಲೋಕಶಾಸ್ತ್ರಗಳು ಹೇಗೆ ಆಧಾರವೋ ಹಾಗೆ ಪೂರ್ವ ಕವಿಗಳ ಕಲ್ಪನಾಸಾಮಗ್ರಿಯೂ ಆಧಾರವೆ. ಆದರೆ ಅವುಗಳನ್ನು ವಿನೂತನವನ್ನಾಗಿ ಬಳಸಿ ರಸಾನುಭವಕಾರಿಯನ್ನಾಗಿ ಮಾಡಿದ ಕವಿಗಳೂ ವಿರಳವೆ. ಬಹುಮಟ್ಟಿಗೆ ಕವಿಸಮಯಗಳು ಕೇವಲ ಸಂಗತಿಗಳಾಗಿ ನಿರೂಪಿತವಾಗಿರುವುದು ಸಾಮಾನ್ಯವಾದ ವಿಷಯ. ಮಳೆಗಾಲದ ವರ್ಣನೆಗೆ ಕವಿ ತೊಡಗಿದನೆಂದರೆ ಅಲ್ಲಿ ಕಾತರಿಸುವ ಚಾತಕದ ವರ್ಣನೆ ಸಾಂಪ್ರದಾಯಿಕವಾಗಿ ಬರುತ್ತದೆ. ಮಿಕ್ಕ ಕಾಲದಲ್ಲಿ ಮೂಗುವಟ್ಟ ಕೋಗಿಲೆ ವಸಂತ ವರ್ಣನೆಯಲ್ಲಿ ಮಾತ್ರ ಕೂಗುತ್ತದೆ. ಹುಣ್ಣಿಮೆಯಿರುಳು ತೆರೆದರೆ ಅಲ್ಲಿ ಚಕೋರ ಚಂದ್ರಕಾಂತಗಳು ಹಾಜರು. ಹಾಗೆಯೆ ಇರುಳಾದೊಡನೆ ಚಕ್ರವಾಕಗಳಿಗೆ ವಿರಹ, ಉದಯದಂದು ಮಿಲನ ಅತ್ಯಂತ ಲೆಕ್ಕಾಚಾರವಾದ ರೀತಿಯಲ್ಲಿ ನಿರೂಪಿತವಾಗಿದೆ ಕವಿಕೃತಿಗಳಲ್ಲಿ. ಇಂಥ ಕಡೆಗಳಲ್ಲೆಲ್ಲಾ ಕವಿಸಮಯಗಳು ಕವಿಗಳ ಸಮಯಕ್ಕೆ ಒದಗಿದ ಸಾಮಗ್ರಿಗಳು. ಇನ್ನು ಇದಕ್ಕಿಂತ ಕೊಂಚ ಜೀವಂತವಾಗಿ, ಧ್ವನಿಪ್ರಚುರವಾಗಿ ಬಳಸಲ್ಪಟ್ಟಿರುವ ನಿದರ್ಶನಗಳೂ ಇಲ್ಲದಿಲ್ಲ. ಸತಿಪತಿಯರ ವಿರಹದ ಹಿನ್ನೆಲೆಯಲ್ಲಿ ಚಕ್ರವಾಕದ ವಿರಹವ್ಯಥೆ ಚಿತ್ರಿತವಾದರೆ, ಯಾವುದೋ ತಳಮಳದ ಸ್ಥಿತಿಯಲ್ಲಿ ತಪಿಸುವ ವ್ಯಕ್ತಿಯ ಮನಃಸ್ಥಿತಿಯ ಹಿನ್ನೆಲೆಯಲ್ಲಿ ಅಥವಾ ಅನ್ಯೋಕ್ತಿ ಚಿತ್ರಣದಲ್ಲಿ ಚಾತಕದ ಕಾತರತೆ ಚಿತ್ರಿತವಾದರೆ, ಅಲ್ಲಿ ಅವುಗಳಿಗೆ ಅಲಂಕಾರತ್ವವೂ ಧ್ವನಿಪ್ರಚುರತೆಯೂ ಒದಗಿ ಅವು ರಸವ್ಯಂಜಕವಾಗಬಲ್ಲವು. ಇಷ್ಟಲ್ಲದೆ ಅಲಂಕಾರಗಳ ನಿರ್ಮಾಣದಲ್ಲಿ ಕವಿಸಮಯಗಳು ಉಪಮಾನ ವಸ್ತುಗಳಾಗಿ ಪರಿಣಮಿಸಿರುವುದು ಗಮನಾರ್ಹವಾದ ಅಂಶವಾಗಿದೆ. ‘ಚಕೋರದಂತೆ ಕಾತರಿಸಿ’ ‘ಕೋಕದಂತೆ ಕೊರಗಿ’ ‘ಚಾತಕದಂತೆ ಬಾಯ್ವಿಟ್ಟು’ ಎನ್ನುವಂಥ ಉಪಮಾಲಂಕಾರದಿಂದ ಹಿಡಿದು ‘ಚಕೋರ ವಿಲೋಲನೇತ್ರೆ’ ‘ಚಕ್ರಮಿಥುನಸ್ತನೆ’ ಎನ್ನುವಂಥ ರೂಪಕ ನಿರ್ಮಾಣಗಳ ತನಕ ಇವುಗಳನ್ನು ಗುರುತಿಸಬಹುದು. ‘ಸರಸಿಜನೇತ್ರೆ’ ಮತ್ತು ‘ಚಕೋರ ವಿಲೋಲ ನೇತ್ರೆ’ ಎನ್ನುವ ಈ ಎರಡು ರೂಪಕಗಳಲ್ಲಿ, ಒಂದು ಲೋಕವೃತ್ತಿಗಳೆರಡರ ಸಾದೃಶ್ಯಶ್ರೀಯಿಂದ ಸಿದ್ಧವಾದ ಅಲಂಕಾರ, ಮತ್ತೊಂದು ಕವಿಸಮಯ ಸಿದ್ಧವಾದ ಅಲಂಕಾರ. ಕವಿಸಮಯ ನಿರ್ಮಿತವಾದ ಅಲಂಕಾರಗಳಲ್ಲಿ ಉಪಮೇಯ ಈ ಲೋಕದ್ದು, ಉಪಮಾನ ಮಾತ್ರ ಕವಿಸಮಯದ್ದು ಅಥವಾ ಕವಿಕಲ್ಪನಾ ಸಿದ್ಧವಾದ ಪರಂಪರಾಗತವಾದ ಸಾಮಗ್ರಿಗಳದು. ‘ಚಕೋರ ವಿಲೋಲ ನೇತ್ರೆ’ ಎನ್ನುವ ಒಂದು ರೂಪಕದ ಭಾವಸಿದ್ಧಿಗೆ ಸಹೃದಯರ ಮನಸ್ಸು ಕಾವ್ಯಾಭ್ಯಾಸ ಸಿದ್ಧವಾದ ಚಕೋರದ ವಿಷಯಕವಾದ ಸಾಂಕೇತಿಕ ಅರ್ಥವನ್ನು ಸ್ಮರಿಸಿಕೊಳ್ಳಬೇಕಾಗುತ್ತದೆ.

ಧ್ವನಿ ಮತ್ತು ಆಧುನಿಕ ಪ್ರತಿಮಾತತ್ವದ ದೃಷ್ಟಿಯಿಂದ ನೋಡಿದರೆ ಕೆಲವು ಕವಿಸಮಯಗಳು ತತ್ವಗರ್ಭಿತವೂ ಧ್ವನಿಪೂರ್ಣವೂ ಆಗುತ್ತವೆ. ಚಕೋರ ಚಾತಕಗಳು ಈ ದೃಷ್ಟಿಯಿಂದ ಬೇರೊಂದು ಸತ್ಯಕ್ಕೆ ಒಡ್ಡಿದ ಪಕ್ಷಿ ಪ್ರತಿಮೆಗಳು. ಚಾತಕ ರಜಃಸ್ಪರ್ಶವಾಗದ ನಭದ ನೀರಿಗೆ ಕಾತರಿಸುವ ಪಕ್ಷಿ ವಿಶೇಷ. ಅದಕ್ಕೆ ಬೇಕಾದದ್ದು ನೆಲದ ಮಣ್ಣಿನ ಮೇಲೆ ಬಿದ್ದ ನೀರಲ್ಲ; ಅದಕ್ಕೆ ಬೇಕಾದದ್ದು ಶುದ್ಧವಾದ ಅಂಬರ ಲೋಕದ ನೀರು. ಕೆಳಗೆ ನದೀ ನದ ತಟಾಕಗಳು ತುಂಬಿದ್ದರೂ ಸಹ ಆ ನೀರಿನ ಕಡೆ ಕಣ್ಣೆತ್ತಿ ಕೂಡ ನೋಡುವುದಿಲ್ಲ. ಅಂಥ ಪಕ್ಷಿ ಅದು! ಚಕೋರ ಇನ್ನೂ ವಿಚಿತ್ರವಾದ ಪಕ್ಷಿ. ಅದು ನೀರನ್ನು ಕೂಡ ಅಲ್ಲ, ಕೇವಲ ಬೆಳಕನ್ನು, ಅದರಲ್ಲಿಯೂ ಬೆಳುದಿಂಗಳನ್ನು ಕುಡಿದು ಬದುಕತಕ್ಕದ್ದು. ಸಾಮಾನ್ಯವಾಗಿ ಹಕ್ಕಿಗಳೆಲ್ಲ ಕಾಳು ತಿಂದು ನೀರು ಕುಡಿದು ಬದುಕುತ್ತವೆ ಎನ್ನುವುದು ಲೋಕಪ್ರಸಿದ್ಧವಾದ ವಿಷಯ. ಆದರೆ ಚಕೋರ ಬೆಳಕನ್ನೆ ಕುಡಿದು ಬದುಕುತ್ತದೆ! ಪರಿಭಾವಿಸಿದಷ್ಟೂ ರಮ್ಯವಾಗುವ ಈ ಕಲ್ಪನೆ ದಿವ್ಯಾಭೀಪ್ಸೆಯ ಸೊಗಸಾದ ಪ್ರತಿಮೆಯೂ ಆಗುತ್ತದೆ.[6] ಯಾವ ಜೀವ ಕೇವಲ ಮರ್ತ್ಯವನ್ನೊಲ್ಲದೆ ಅಮರ್ತ್ಯದ ಬೆಳಕಿಗಾಗಿ ಕಾತರಿಸುವುದೋ ಅಂಥ ಚೇತನದ ಪ್ರತಿಮೆ ಈ ಚಾತಕ, ಚಕೋರಗಳು. ವೈರಾಗ್ಯ, ಹಾಗೂ ದಿವ್ಯಾನ್ವೇಷಣೆಯ ಈ ಪಕ್ಷಿ ಪ್ರತಿಮೆಗಳನ್ನು ಶಕ್ತನಾದ ಕವಿ ತನ್ನ ಕಾವ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಲ್ಲ[7]. ಚಕ್ರವಾಕಗಳ ವಿಷಯವೂ ಅಷ್ಟೆ. ಚಕ್ರವಾಕಗಳು ಅಗಲುವುದೂ ಕೂಡುವುದೂ ಪರಿಶುದ್ಧ ಪ್ರೇಮದಲ್ಲಿ ಒದಗುವ ವಿರಹ -ಮಿಲನಗಳ ಸಂಕೇತ. ಅವುಗಳ ನಡುವೆ ಬರುವ ಇರುಳ ಕತ್ತಲು, ಹಗಲು ಬೆಳಕು, ಲೋಕದ ಸುಖ ದುಃಖಗಳನ್ನೂ ನೋವು-ನಲಿವುಗಳನ್ನೂ ಧ್ವನಿಸುತ್ತದೆ.

ಕಾವ್ಯಗಳನ್ನು ಪರಿಶೀಲಿಸಿ, ಅದರಲ್ಲಿ ಬರುವ ಕವಿಸಮಯಗಳನ್ನು ಕಲೆಹಾಕಿ ಅವುಗಳನ್ನು ಅಸದಾಖ್ಯಾತಿ, ಸದಕೀರ್ತನ, ನಿಯಮ, ಐಕ್ಯ ಎಂದು ಆಲಂಕಾರಿಕರು ವಿಭಾಗಿಸಿದ್ದಾರೆ.[8] ಇವುಗಳಲ್ಲಿ ‘ಯಾವುದು ಲೋಕ ವಿಷಯಸ್ಥಿತಿ ಅಲ್ಲವೋ ಅದು ಕವಿಸಮಯ ಎನ್ನುವ ಸೂತ್ರ ಅನ್ವಯಿಸುವುದು ಈ ನಾಲ್ಕರಲ್ಲಿ ಒಂದಾದ ‘ಅಸದಾಖ್ಯಾತಿ’ಯನ್ನು ಕುರಿತು ಮಾತ್ರ. ಉಳಿದ ಮೂರು ವಿಭಾಗಗಳೂ ಲೋಕದಲ್ಲಿ ಇರುವುದನ್ನು ಇಲ್ಲವೆಂಬಂತೆ ಹೇಳಿದ ಅಥವಾ ಲೋಕವಿಷಯ ಸ್ಥಿತಿಗೆ ಸ್ಥಿತ್ಯಂತರವನ್ನು  ತಂದ ಕವಿಕಲ್ಪನೆಯ ಪರಿಗಳು. ಹೀಗಾಗಿ ಇವುಗಳಲ್ಲಿ ಲೋಕವಿಷಯ ಸ್ಥಿತಿ ಅಲ್ಲದ್ದು ಹಾಗವಾದರೆ, ಲೋಕವಿಷಯ ಸ್ಥಿತಿಗೇ ಸ್ಥಿತ್ಯಂತರವನ್ನು ತಂದ ಬಗೆ ಮುಪ್ಪಾಗ. ಹೀಗೆ ಮಾರ್ಪಾಟುಹೊಂದಿದ ಈ ‘ಮುಪ್ಪಾಗ’ ಕವಿಸಮಯಗಳು ಕವಿಯ ಕಾವ್ಯಗಳಲ್ಲಿ ಮಾತ್ರ ಕಂಡುಬರುತ್ತಿವೆಯೆ ಹೊರತು, ಈ ರೀತಿಯ ಬದಲಾವಣೆಗೆ ಲೋಕದ ಅಥವಾ ಶಾಸ್ತ್ರದ ಆಧಾರವಿಲ್ಲವೆನ್ನುವುದಷ್ಟೆ ಇದರಲ್ಲಿನ ಸ್ವಾರಸ್ಯ. ಹಾಗೆ ನೋಡಿದರೆ ‘ನಿಯತಿಕೃತ ನಿಯಮರಹಿತಾಂ’ ಎಂದು ಸ್ತುತ್ಯವಾದ ಪ್ರತಿಭಾಶಕ್ತಿ, ತನ್ನ ನಿರ್ಮಿತಿಗಳಲ್ಲಿ ಲೋಕಕ್ಕಾಗಲಿ, ಶಾಸ್ತ್ರಕ್ಕಾಗಲಿ ಋಣಿಯಾಗಿಲ್ಲವಲ್ಲ ಎಂದು ಯಾರೂ ಆಕ್ಷೇಪಿಸಿಲ್ಲ. ಅದರ ಬದಲು ಲೋಕಕ್ಕಾಗಲಿ ಶಾಸ್ತ್ರಕ್ಕಾಗಲಿ ಋಣಿಯಾಗದ ಇಂಥ ಕೆಲವು ಅಂಶಗಳನ್ನು ಪ್ರತ್ಯೇಕವಾಗಿಯೇ ಪರಿಶೀಲಿಸಿದ್ದಾರೆ.

ಕವಿಸಮಯಗಳು ಲೋಕವಿಷಯ ಸ್ಥಿತಿ ಅಲ್ಲ ಎಂದರೆ ಅವುಗಳು ಕಾವ್ಯದಲ್ಲಿ ಕಂಡುಬರುವ ರೂಪದಲ್ಲಿ ಲೋಕದಲ್ಲಿ ಇಲ್ಲ ಎಂದು ಅರ್ಥಮಾಡಬಹುದೇ ಹೊರತು, ಅಂಥ ಕಲ್ಪನೆಗೆ ಲೋಕದ ಆಧಾರವೇ ಇಲ್ಲವೆಂಬ ಅರ್ಥವಾಗುವುದಿಲ್ಲ. ಚಕೋರ, ಚಾತಕಾದಿಗಳು, ಚಂದ್ರಕಾಂತ ಶಿಲೆಗಳು, ಇವುಗಳ ಕಲ್ಪನೆಯನ್ನು ಗಮನಿಸಿದರೆ ಲೋಕದ ಪಕ್ಷಿಗೆ, ಲೋಕದ ಕಲ್ಲಿಗೆ ಕವಿಕಲ್ಪನೆಯಿಂದ ಪ್ರಾಪ್ತವಾದ ಪದವಿಗಳಲ್ಲವೆ ಅವು?* ಕವಿಕಲ್ಪನಾ ನಿರ್ಮಿತವಾದ ಎಷ್ಟೋ ಪಾತ್ರಗಳನ್ನೂ, ಅಘಟಿತ ಘಟನೆಗಳನ್ನೂ ನಾವು ಕಾವ್ಯಲೋಕದಲ್ಲಿ ಕಂಡರೂ ಅವುಗಳ ರಸೌಚಿತ್ಯವನ್ನು ಗಮನಿಸಿ ಮೆಚ್ಚುವಂತೆ ಕವಿಸಮಯಗಳನ್ನೂ ಶಿಷ್ಟರಾದ ಸಹೃದಯರು ಸಂಭಾವಿಸುತ್ತಾರೆ. ಆದುದರಿಂದ ‘ಆವುದಶೇಷಲೋಕ ವಿಷಯಸ್ಥಿತಿಯಲ್ತು’ -ಎನ್ನುವ ಮಾತಿಗೆ, ಅಂಥ ವಸ್ತುಗಳು ಲೋಕದಲ್ಲಿ ಕಾಣುವುದಿಲ್ಲವೆಂದು ಅರ್ಥವೇ ಹೊರತು ಅಂಥವುಗಳ ಕಲ್ಪನೆಗೆ ಲೋಕದ ಯಾವ ಆಧಾರವೂ ಇಲ್ಲವೇ ಇಲ್ಲವೆಂದು ಅರ್ಥವಲ್ಲ. ಹಾಗೆ ನೋಡಿದರೆ ಕಾವ್ಯದಲ್ಲಿ ಚಿತ್ರಿತವಾದ ಘಟನೆಗಳೆಷ್ಟೋ, ತಾವೂ ‘ಲೋಕ ವಿಷಯಸ್ಥಿತಿಯಲ್ತು’ ಎನ್ನುವುದನ್ನೆ ಸಮರ್ಥಿಸುತ್ತವೆ. ಕಾವ್ಯದ ಘಟನೆಗಳೆಲ್ಲ ಬಹುಮಟ್ಟಿಗೆ ‘ಲೋಕವಿಷಯಸ್ಥಿತಿಯಲ್ತು’ ಎಂಬ ಮಾತಿನ ನೆಪದಲ್ಲಿ ಕಾವ್ಯ ಸಮಸ್ತವೂ ಕವಿಸಮಯವಲ್ಲದೆ ಬೇರೆ ಅಲ್ಲ ಎಂದು ಭ್ರಮಿಸುವ ಸಂಭವವಿದೆ. ಆದರೆ ಕವಿಸಮಯ ಕಾವ್ಯಸಂಪ್ರದಾಯದ ಒಂದು ಅಂಗ ಮಾತ್ರ ಎನ್ನುವುದನ್ನೂ, ಕವಿಸಮಯ ಅಂಥ ಒಂದು ಅಲ್ಪಸಂಖ್ಯಾತ ವರ್ಗದ ನಿರ್ದೇಶನಕ್ಕೆ ಬಳಸಿದ ಪಾರಿಭಾಷಿಕ ಪದ ಎನ್ನುವುದನ್ನೂ ಮರೆಯಬಾರದು.

ಲೋಕವಿಷಯಸ್ಥಿತಿಯ ತೀವ್ರಾನುಭವವನ್ನೂ, ತಿಳಿವಳಿಕೆಯನ್ನೂ, ಆಧಾರ ವನ್ನಾಗಿರಿಸಿಕೊಂಡು ಕವಿಪ್ರತಿಭೆ ಮೂಡಿಸಿದ ಕೆಲವು ಉಕ್ತಿವಿಶೇಷಗಳನ್ನೂ, ಸಂಕೇತಗಳನ್ನೂ ಆಲಂಕಾರಿಕರು ಕವಿಸಮಯಗಳೆಂದು ಗುರುತಿಸಿದ್ದಾರೆ.  ವಾಸ್ತವವಾಗಿ ಇವುಗಳಲ್ಲೆಷ್ಟೊ ಕವಿಸಮಯವನ್ನು ಕುರಿತ ಸೂತ್ರದ ವ್ಯಾಪ್ತಿಗೆ ಹೊರತಾಗಿವೆ. ಉದಾಹರಣೆಗೆ ತಿಮಿಂಗಿಲಾದಿಗಳು ಕಡಲಲ್ಲಿ ಮಾತ್ರ ಇವೆ ಎಂದೂ, ಶ್ರೀಗಂಧದ ಮರ ಮಲಯಾಚಲದಲ್ಲಿ ಮಾತ್ರ ಬೆಳೆಯುವುದೆಂದೂ, ಕೋಗಿಲೆ ವಸಂತದಲ್ಲಿ ಮಾತ್ರ ಕುಕಿಲುತ್ತದೆಂದೂ, ನವಿಲು ವರ್ಷಾಕಾಲದಲ್ಲಿ ಮಾತ್ರ ನರ್ತಿಸುವುದೆಂದೂ, ಕವಿಗಳು ಪರಂಪರಾಗತವಾಗಿ ವರ್ಣಿಸಿದ್ದಾರೆ. ಈ ಬಗೆಯ ನಿಯಾಮನದಲ್ಲಿ ಲೋಕವಿಷಯ ಸ್ಥಿತಿಯ ತಿಳಿವಳಿಕೆಯಿಲ್ಲದೆ ಇಲ್ಲ. ಯಾವ ವಸ್ತು ವಿಶೇಷಗಳು ಮತ್ತು ಘಟನಾ ವಿಶೇಷಗಳು ಯಾವಯಾವ ಸ್ಥಳಗಳ ಹಾಗೂ ಕಾಲಗಳಲ್ಲಿ ವಿಶೇಷವಾಗಿ ಉಂಟೋ ಹಾಗೂ ವಿಶೇಷವಾಗಿ ಗಮನಕ್ಕೆ ಬರುತ್ತವೋ ಅವುಗಳನ್ನು ಕವಿಗಳು ಇಲ್ಲಿ ಹೇಳಿದ್ದಾರೆ. ತಿಮಿಂಗಿಲಾದಿಗಳು ಬೇರೆ ಬೇರೆಯ ಕಡೆ ಇರಬಹುದೇನೋ; ಆದರೆ ಕಡಲಿನಲ್ಲಿ ಮಾತ್ರ ವಿಶೇಷವಾಗಿವೆ. ಕೋಗಿಲೆ ಬೇರೆ ಬೇರೆಯ ಕಾಲದಲ್ಲಿಯೂ ಕೂಗಬಹುದು, ಕವಿಗಳ ಆಕ್ಷೇಪಣೆಯೇನಿಲ್ಲ; ಆದರೆ ವಸಂತದಲ್ಲಿ ಮಾತ್ರ, ಸಂಭ್ರಮಾನ್ವಿತವಾದ ಹಿನ್ನೆಲೆಯಲ್ಲಿ ಅದರ ಸ್ವರ ಎದ್ದು ಕೇಳುತ್ತದೆ. ನವಿಲುಗಳು ವರ್ಷಾಕಾಲದಲ್ಲಿ ವಿಶೇಷವಾಗಿ ಕೇಕೆ ಹಾಕುತ್ತವೆ ಎನ್ನುವುದು ತಿಳಿದ ಸಂಗತಿ. ಚಂದನ, ಮಲಯಪರ್ವತದಲ್ಲಿಯೆ ವಿಶೇಷವಾಗಿದ್ದಿತೆನ್ನುವ ಖ್ಯಾತಿ ನಿರಾಧಾರವಾದುದೇನಲ್ಲ. ಇಲ್ಲೆಲ್ಲಾ ಕವಿಗಳು ಈ ಘಟನೆಗಳ, ಸಂಗತಿಗಳ ವಿಶೇಷಾಧಿಕ್ಯವನ್ನು ಕುರಿತು ವರ್ಣಿಸಿದ ಪರಿಯನ್ನು ಗುರುತಿಸಬಹುದೇ ಹೊರತು ಇವು ‘ಅಶೇಷಲೋಕ ವಿಷಯ ಸ್ಥಿತಿಯಲ್ತು’ ಎಂದು ತಳ್ಳಿಹಾಕಲು ಆಧಾರವಿಲ್ಲ. ಏಕೆಂದರೆ ಇವು ವಿಶೇಷಲೋಕವಿಷಯ ಸ್ಥಿತಿಯ ಚಿತ್ರವನ್ನು ಕೊಡುತ್ತವೆ. ಎಲ್ಲಿ ಯಾವುದು, ಯಾವ ಕಾಲದಲ್ಲಿ ವಿಶೇಷವಾಗಿ ವಾಸ್ತವವಾಗಿ ಅನುಭವಕ್ಕೆ ಬರುವುದೋ ಅಂಥ ಲೋಕವೃತ್ತವನ್ನೇ ಕವಿಗಳು ಎತ್ತಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಕೋಗಿಲೆಯ ಕುಕಿಲು, ನವಿಲಿನ ಕೇಕೆ ಇವುಗಳು ಎರಡು ಪ್ರಮುಖವಾದ ಋತು ಪರಿವರ್ತನೆಯನ್ನು ಸೂಚಿಸುವ ಸಂಕೇತಗಳೂ ಆಗಬಲ್ಲವು.

ಕವಿಸಮಯಗಳೆಂದು ಆಲಂಕಾರಿಕರು ಕೊಡುವ ಒಂದೆರಡು ನಿದರ್ಶನಗಳು ವಾಸ್ತವವಾಗಿ ಕವಿಯ ತೀವ್ರಾನುಭವದ ಅಭಿವ್ಯಕ್ತಿಗಳಾಗಿವೆ. ಬೆಳದಿಂಗಳನ್ನು ಬೊಗಸೆಯಲ್ಲಿ ತುಂಬಿಕೊಳ್ಳಬಹುದು, ಕತ್ತಲೆ ಮುಷ್ಟಿಗ್ರಾಹ್ಯವಾಗಿದೆ, ಸೂಜಿಯನ್ನು ಚುಚ್ಚಲೂ ತೆರಪಿಲ್ಲದಂತೆ ನಿಬಿಡವಾಗಿದೆ ಎಂಬ ಉಕ್ತಿಗಳು ಕವಿಸಮಯಗಳೆನ್ನಿಸಿ ಕೊಂಡಿವೆ. ಆದರೆ ವಾಸ್ತವವಾಗಿ ಯಾವ ಕವಿಗೆ ಬೆಳದಿಂಗಳನ್ನು ಕಂಡು   ಅದನ್ನು ಬೊಗಸೆಯಲ್ಲಿ ತುಂಬಬಹುದು ಎನ್ನಿಸಿತೋ, ಅದು ಆತನ ಪಾಲಿಗೆ ಒಂದು ರೋಮಾಂಚನಕಾರಿಯಾದ ಅನುಭವವೇ. ಬೆಳುದಿಂಗಳನ್ನು ಕುರಿತು ಈ ಪದ್ಯವನ್ನು ನೋಡಿ:

ಬೊಗಸೆದೀವಿಕೊಂಡು ಕುಡಿಯಲ್, ಮೊಗೆಯಲ್ ಕೊಡಂಗೊಂಡು ತಿರ್ದಿ
ಬಚ್ಚಲನೆಲೆದೋಂಟದೊಳ್ ಪರಿಯಿಸಲ್, ಪಱುಗೋಲ್ಗಳನಿಕ್ಕಿ ಪಾಯಿಸಲ್,
ನೆಲೆಯಿನಿಸೆಂದು ನೋಡಲೊಳಪೊಕ್ಕು ದುಡುಮ್ಮಿಳಿದಾಡಲೀಸಲ್ ಅ
ಗ್ಗಲಿಸಿದಲಂಪಿನಿಂ ಬಗೆದುದಂದು ಜನಂ ಘನಚಂದ್ರಿಕಾಂಬುವಂ”
(ರನ್ನ : ಅಜಿತನಾಥ ಪುರಾಣ, ೬-೪೫)

ಕವಿ ರನ್ನನ ಈ ಅಪೂರ್ವ ಪದ್ಯದಲ್ಲಿ ಬೆಳುದಿಂಗಳಿನ ರಸಾನುಭವವೆ ಹೆಪ್ಪುಗಟ್ಟಿದೆ. ಬೆಳುದಿಂಗಳನ್ನು ಕಂಡಾಗ ಕವಿಗೆ ವೈಯಕ್ತಿಕವಾಗಿ ಆದ ಉನ್ಮಾದದ ಹೊನಲು ಇದು. ಈ ಬೆಳುದಿಂಗಳು ಎಷ್ಟೊಂದು ಸಾಂದ್ರವಾಗಿದೆ! ಇದರಲ್ಲಿ ತಾನು ಹೇಗೆ ಒಂದಾಗುವುದು, ಈ ಸೊಗಸನ್ನು ಹೇಗೆ ಸವಿಯಲಿ ಎನ್ನುವ ಚಿತ್ತದ ಕಾತರತೆಯ ಪ್ರಯತ್ನದ ಒಂದೊಂದು ಹಾರೈಕೆಯೂ ಈ ಪದ್ಯದಲ್ಲಿ ಹಂತ ಹಂತವಾಗಿ ಮೂಡಿದೆ. ಇಲ್ಲಿರುವುದು ಬೆಳುದಿಂಗಳ ಸೊಗಸನ್ನು  ತನ್ಮಯೀಭಾವದಲ್ಲಿ ಬದುಕುವ ‘ಅಗ್ಗಲಿಸಿದಲಂಪು’. ಇದೊಂದು ತೀವ್ರಾನುಭೂತಿ. ಹಾಗೆಯೇ ಕಗ್ಗತ್ತಲನ್ನು ಕಂಡು ಅದರ ನಿಬಿಡತೆಯ ಅನುಭವವನ್ನು ಕವಿ ಕಗ್ಗತ್ತಲು ಮುಷ್ಟಿಗ್ರಾಹ್ಯವಾಗಿದೆ ಎಂದೂ, ಸೂಜಿಯಿಂದ ಭೇದಿಸಲೂ ಅಸಾಧ್ಯವಾಗಿದೆ ಎಂದೂ ಹೇಳಿದರೆ ಅದು ಕಗ್ಗತ್ತಲಿನ ಅತಿಶಯವನ್ನು ಕುರಿತ ಉಕ್ತಿಯೇ ಹೊರತು ಲೋಕವಿಷಯ ಸ್ಥಿತಿಯಲ್ಲದ ಸಂಗತಿಯೇನಲ್ಲ; ಅಥವಾ ಇಂಥ ತೀವ್ರಾನುಭವಕ್ಕೆ ಬೇರೆ ಯಾವ ಸಾಕ್ಷಿಯೂ ಬೇಕಾಗಿಲ್ಲ. ಇವು ಅನುಭವದೂರವಾದ, ಕೇವಲ ಕಲ್ಪನಾಸೃಷ್ಟವಾದ ಮತ್ತು ಪರಂಪರಾಗತವಾಗಿ ಬಂದದ್ದರಿಂದ ಒಪ್ಪಿಕೊಳ್ಳಬೇಕಾದ ಸಂಗತಿ ಅಲ್ಲ. ಜೊತೆಗೆ ಇನ್ನೂ ಒಂದು ವಿಷಯವನ್ನು ಗಮನಿಸಬೇಕು. ಬೆಳದಿಂಗಳು ಬೊಗಸೆಯಲ್ಲಿ ತುಂಬುವಷ್ಟು ಸಾಂದ್ರವಾಗಿದೆ, ಸೂಜಿಯಿಂದ ಭೇದಿಸಲು ಸಾಧ್ಯವಾಗದಷ್ಟು ನಿಬಿಡವಾದ ಕತ್ತಲೆ ಕವಿದಿದೆ ಎನ್ನುವ ಉಕ್ತಿಗಳೂ, ಕವಿ ಸಮಯಗಳೆಂದು ಪ್ರಸಿದ್ಧವಾದ ‘ಚಂದ್ರಕಾಂತ’ ‘ಚಕೋರ’ ಇವುಗಳೂ ಒಂದೇ ಅಲ್ಲ. ಕಗ್ಗತ್ತಲನ್ನು, ಬೆಳುದಿಂಗಳನ್ನು ಕುರಿತ ಈ ಅಭಿವ್ಯಕ್ತಿಗಳು ಕವಿಯ ‘ಲೋಕವಿಷಯ ಸ್ಥಿತಿಯ’ ತೀವ್ರಾನುಭವದಿಂದ ಜನ್ಯವಾದವು. ಆದರೆ ಚಕೋರ ಬೆಳುದಿಂಗಳನ್ನು ಕುಡಿದು ಬದುಕುತ್ತದೆ, ಚಂದ್ರಕಾಂತ ಶಿಲೆ ಬೆಳುದಿಂಗಳಲ್ಲಿ ದ್ರವಿಸುತ್ತದೆ ಎನ್ನುವ ವಿಚಾರಗಳು ಅಂಥ ತೀವ್ರಾನುಭವದ ಅಭಿವ್ಯಕ್ತಿಗಳೇನು? ಅವು ಲೋಕಾಧಾರ ಮತ್ತು ಶಾಸ್ತ್ರಾಧಾರಗಳನ್ನು ಆಶ್ರಯಿಸದ ಕವಿಕಲ್ಪನಾ ಸಿದ್ಧವಾದ ಸಂಗತಿಗಳು. ಅಷ್ಟೇ ಅಲ್ಲ ಸೂಚೀಭೇದ್ಯ ಅಂಧಕಾರ, ಬೊಗಸೆಯಲ್ಲಿ ತುಂಬುವ ಬೆಳದಿಂಗಳು-ಈ ಅಭಿವ್ಯಕ್ತಿಗಳು ನಮ್ಮ ಆಲಂಕಾರಿಕರು ಗುರುತಿಸಿದ ಅತಿಶಯೋಕ್ತಿ ಎಂಬ ಅಲಂಕಾರಗಳ ವರ್ಗಕ್ಕೆ ಸೇರುತ್ತವೆ. ಈ ‘ಅಲಂಕಾರ’ ಮೊದಲು ಅನುಭವಿಸಿದ ಕವಿಗೆ ವಾಸ್ತವವಾಗಿ ಸಹಜವಾದ ಅಲಂಕಾರವೆ, ಅಥವಾ ಸೌಂದರ್ಯಾನುಭವದ ಅನಿವಾರ್ಯವಾದ ಅಭಿವ್ಯಕ್ತಿಯೆ. ಆದರೆ ಎಷ್ಟೋ ಅಲಂಕಾರಗಳಂತೆ, ಇವುಗಳೂ ತಮಗೆ ಅನುಭವವಿರಲಿ ಇಲ್ಲದಿರಲಿ, ಬಳಸಿದ ಕವಿ ಪರಂಪರೆಯಿಂದ ಸವೆದ ಕಾರಣ ಅವೂ ಸಂಪ್ರದಾಯದಲ್ಲಿ ತೇಲಿಬಂದ ಉಕ್ತಿವೈಚಿತ್ರ್ಯಗಳಾಗಿ ನಿಂತಿವೆ. ಇವುಗಳನ್ನೂ ನಮ್ಮ ಆಲಂಕಾರಿಕರು ಕವಿಸಮಯಗಳ ಗುಂಪಿಗೆ ಸೇರಿಸಿಬಿಟ್ಟಿರುವುದು ತುಂಬ ಸೋಜಿಗದ ವಿಷಯವಾಗಿದೆ.

“ಕೀರ್ತಿ ನಗು ಇವುಗಳಲ್ಲಿ ಬಿಳಿಯ ಬಣ್ಣವನ್ನೂ, ಅಪಯಶಸ್ಸಿನಲ್ಲಿ ಕಪ್ಪು ಬಣ್ಣವನ್ನೂ, ಕೋಪ ಅನುರಾಗ ಇವುಗಳಲ್ಲಿ ಕೆಂಪುಬಣ್ಣವನ್ನೂ ಆರೋಪಿಸುವುದು”[9] -ಕವಿಸಮಯಗಳಲ್ಲಿ ಒಂದು ಬಗೆ. ಆದರೆ ಇಲ್ಲಿನ ಬಣ್ಣ ವಾಸ್ತವವಾಗಿ ಜನಮನದಲ್ಲಿ ಪ್ರಚಲಿತವಾದ ಸಾಂಕೇತಿಕ ಅರ್ಥದ ಹಿನ್ನೆಲೆಯನ್ನು ಯಶಸ್ವಿಯಾಗಿ ಉಪಯೋಗಿಸಿ ಕೊಂಡು ಮೂಡಿದ್ದು. ಬೆಳಕು, ಕತ್ತಲೆ ಮತ್ತು ಇವೆರಡರ ನಡುವಣ ಮಬ್ಬು ಜನಮನದಲ್ಲಿ ಬಗೆ ಬಗೆಯಾದ ಕಲ್ಪನೆಗಳನ್ನೂ ಭಾವನೆಗಳನ್ನೂ ಮೂಡಿಸಿದೆ. ಬೆಳಕು- ಕತ್ತಲೆಗಳ ಭಾವನೆಯೇ ದೇವ, ಅಸುರ; ಅರಿವು, ಮರೆವು; ಪಾಪ, ಪುಣ್ಯ; ಬದುಕು, ಸಾವು -ಇಂಥ ಚಿತ್ರಪರಂಪರೆಗೆ, ಪ್ರಚೋದನೆಯನ್ನು ನೀಡಿದೆ. ಮೇಲೆ ಹೇಳಿದ ಕೆಲವು ಕವಿಸಮಯಗಳು ಜನಮನದಲ್ಲಿ ಪರಂಪರಾಗತವಾಗಿ ಪ್ರಚಲಿತವಾದ ಇಂಥ ಭಾವಸಾಮಗ್ರಿಯಿಂದ ಮೂಡಿದವೆಂದು ಹೇಳಬಹುದು. ಯಶಸ್ಸು ಬೆಳ್ಳಗೆ, ಅಪಯಶಸ್ಸು ಕಪ್ಪಗೆ ಎನ್ನುವ ಕಲ್ಪನೆಯನ್ನು ಯಶಸ್ಸಿನಿಂದ ಒದಗುವ ಉಲ್ಲಾಸ ಶ್ರೇಯಸ್ಸು ಇತ್ಯಾದಿಗಳೂ, ಅಪಯಶಸ್ಸಿನಿಂದ ವ್ಯಕ್ತಿಗೆ ಒದಗುವ ಕಳಂಕ, ಅವಮಾನ, ದುಃಖ, ತಿರಸ್ಕಾರ ಇವುಗಳೂ ಧ್ವನಿತವಾಗುತ್ತವೆ. ಕೋಪವನ್ನು ಕಡುಗೆಂಪೆಂದು ಹೇಳುವಾಗ ಕೋಪಿಸಿಕೊಂಡವನ ಮನಃಸ್ಥಿತಿಯ ಉರುಬನ್ನು, ಕೋಪದ ಅನುಭಾವಗಳನ್ನು ಎಷ್ಟು ಸೊಗಸಾಗಿ ತಿಳಿಸಲು ಆ ವರ್ಣವೆ ಸಮರ್ಥವಾಗಿದೆ! ಹಾಗೆ ನೋಡಿದರೆ ಪ್ರತಿಯೊಂದು ವರ್ಣವೂ ಒಂದೊಂದು ಮನಃಸ್ಥಿತಿಗೆ ಸಂಕೇತ. ಸರಸ್ವತಿಯನ್ನು ಸರ್ವ ಶುಕ್ಲಾ ಎಂದು ವರ್ಣಿಸುವಲ್ಲಿ, ರಾಕ್ಷಸ ಪಾತ್ರಗಳನ್ನು ಕಪ್ಪು-ಕೆಂಪು ಬಣ್ಣಗಳಲ್ಲಿ ಚಿತ್ರಿಸುವಲ್ಲಿ, ಆಯಾಪಾತ್ರದ ಮನಃಸ್ಥಿತಿಯ ಅಭಿವ್ಯಕ್ತಿಗೆ ಇಂತಿಂಥ ವರ್ಣ ಸರಿಯಾದ ಸಂಕೇತ ಎಂಬುದು ಪರಂಪರಾಗತವಾಗಿ ಬಂದ ಭಾವನೆಯ ಫಲವಾಗಿದೆ. ಬಿಳಿಬಣ್ಣ ಸಾತ್ವಿಕಕ್ಕೆ, ಕಾವಿ ತ್ಯಾಗಕ್ಕೆ, ಹಳದಿ ಕರುಣೆಗೆ, ಕೆಂಪು ಅಪಾಯಕ್ಕೆ ಇತ್ಯಾದಿ ಸಂಕೇತಗಳು ಸಾಮಾನ್ಯವಾಗಿ ದಿನಬಳಕೆಯ ಬದುಕಿನಲ್ಲಿ ರೂಢಿಯಾಗಿವೆ. ಈ ಎಲ್ಲ ಲೋಕಭಾವ ಸಾಮಗ್ರಿಯಿಂದ ಈ ಕೆಲವು ಕವಿಸಮಯಗಳು ಮೂಡಿವೆ. ಆದರೆ “ಯಶಸ್ಸು ಬೆಳ್ಳಗಿದೆ” ಎನ್ನುವ ಸೊಗಸಾದ ವರ್ಣಪ್ರತಿಮೆ ಯಾವ ಕವಿಯಲ್ಲಿ ಮೊದಲು ಅಪೂರ್ವವಾದ ಅರ್ಥದಲ್ಲಿ ಮೂಡಿತೋ, ಅದು “ನಿಷ್ಕೇವಳಮಾದ ರೂಢಿವಶ”ದಲ್ಲಿ ಸಮೆದೂ ಸಮೆದೂ ಸವಕಲು ನಾಣ್ಯವಾಗಿದೆ ಎನ್ನುವುದೂ ನಿಜ.

ಕವಿಕಲ್ಪನೆಯಿಂದ ಸಿದ್ಧವಾದ ಸುಂದರವಾದ ಸಂಗತಿಗಳೂ ಆಗದೆ, ಯಾವುದೋ ಒಂದು ವಾಸ್ತವಾನುಭವಕ್ಕಾಗಲಿ, ಮನಃಸ್ಥಿತಿಗಾಗಲಿ ಸಂಕೇತಗಳೂ ಆಗದೆ, ಲೋಕಾನುಭವ ಸಾಲದೆಯೋ ಅಥವಾ ಲೋಕ ವ್ಯಾಪಾರಗಳ ಕಡೆಗೆ ಕವಿ ತಾಳಿದ ಔದಾಸೀನ್ಯದಿಂದಲೋ, ಕವಿಪ್ರಮಾದ ಜನಿತವಾದ, ಆದರೆ ಪರಂಪರಾಗತವಾದ ಕೆಲವು ‘ಜಾರಿ ಬಿದ್ದ ಪಟ್ಟು’ಗಳನ್ನೂ ಕವಿಸಮಯಗಳೆಂದು ಕರೆದಿರುವುದು ಬಹಳ ತಮಾಷೆಯಾಗಿ ತೋರುತ್ತದೆ. ಕವಿಸಮಯಗಳೆಂದು ಕೊಟ್ಟಿರುವ ಈ ಹಲವನ್ನು ಗಮನಿಸಿ: ೧) ಶುಕ್ಲಪಕ್ಷದಲ್ಲಿ ಕತ್ತಲೆಯಿದ್ದರೂ, ಕೃಷ್ಣಪಕ್ಷದಲ್ಲಿ ಬೆಳುದಿಂಗಳಿದ್ದರೂ, ಶುಕ್ಲಪಕ್ಷದಲ್ಲಿ ಬರಿಯ ಬೆಳುದಿಂಗಳನ್ನೂ, ಕೃಷ್ಣಪಕ್ಷದಲ್ಲಿ ಬರಿಯ ಕತ್ತಲೆಯನ್ನು ವರ್ಣಿಸುವುದು; ೨) ಹಲ್ಲುಗಳು ಯಾವ ಬಣ್ಣಕ್ಕೇ ಇರಲಿ, ಅದನ್ನು ಹೇಳದೆ ಬಿಳುಪನ್ನು ಮಾತ್ರ ಹೇಳುವುದು; ಮೊಗ್ಗು ಹಳದಿಯಾಗಿದ್ದರೂ ಹಸುರಾಗಿದ್ದರೂ ಹೂವಿನಲ್ಲಿ ಯಾವಾಗಲೂ ಬಿಳಿಯ ಬಣ್ಣವನ್ನು ಮಾತ್ರ ಹೇಳುವುದು, ೩) ಇತರ ಬಣ್ಣಗಳಿದ್ದರೂ ಹೂವಿನಲ್ಲಿ ಯಾವಾಗಲೂ ಬಿಳಿಯ ಬಣ್ಣವನ್ನೂ, ರತ್ನಗಳಲ್ಲಿ ಕೆಂಪು ಬಣ್ಣವನ್ನೂ ಮೇಘ ಸಾಮಾನ್ಯದಲ್ಲಿ ಕಪ್ಪು ಬಣ್ಣವನ್ನೂ ಮಾತ್ರ ವರ್ಣಿಸುವುದು; ೪) ಬಣ್ಣಗಳಲ್ಲಿರುವ ಪರಸ್ಪರ ವ್ಯತ್ಯಾಸವನ್ನು ಹೇಳದಿರುವುದೂ, ಹೂವರಳುವ ಕ್ರಿಯೆಯಲ್ಲಿ ವ್ಯತ್ಯಾಸವನ್ನು ಹೇಳದಿರುವುದು; ೫) ಚಂದ್ರನಲ್ಲಿರುವ ಕಳಂಕವನ್ನು ಮೊಲವೆಂದೂ ಜಿಂಕೆಯೆಂದೂ ಮಾತ್ರ ವರ್ಣಿಸುವುದು, ಇತ್ಯಾದಿ….[10] ಈ ಒಂದೊಂದು ನಿದರ್ಶನಗಳೂ ಕವಿಗಳು ತಮಗೆ ಸರಿಯಾದ ಲೋಕವ್ಯಾಪಾರ ವಿವರ ಜ್ಞಾನವಿಲ್ಲದೆ, ಅಥವಾ ಪರಂಪರಾಗತವಾಗಿ ಬಂದ ವರ್ಣನಾ ವ್ಯಾಪಾರಗಳನ್ನು ಮುರಿದು ತಮ್ಮ ವಿನೂತನ ಅನುಭವವನ್ನಾಗಲಿ ಅಥವಾ ವಾಸ್ತವಾನುಭವವನ್ನಾಗಲಿ ಹೇಳುವ ಸತ್ವವಿಲ್ಲದೆ ಅಥವಾ ಮನಸ್ಸಿನಲ್ಲದೆ ಎಸಗಿದ ಪ್ರಮಾದಗಳು ಮಾತ್ರ. ನಿಜವಾದ ಜೀವನಾನುಭವ ಹಾಗೂ ಪ್ರತಿಭೆ ಇರುವ ಕವಿಗಳಲ್ಲಿ ಇಂಥ ಪ್ರಮಾದಗಳು ಕಡಿಮೆ. ಹೂವರಳುವ ಕ್ರಿಯೆಯನ್ನು, ಹೂಗಳ ವರ್ಣ ವಿಲಾಸವನ್ನು, ವೈವಿಧ್ಯವನ್ನು, ಮೋಡಗಳ ವಿವಿಧ ವರ್ಣ ವೈಖರಿಗಳನ್ನು ಕಣ್ಣಾರೆ ಕಂಡು ವರ್ಣಿಸಿದ ಪಂಪನಂಥ ಸಹಜ ಕವಿಯಲ್ಲಿ ಮತ್ತು ಇತರ ಕೆಲವು ಕವಿಗಳ ವರ್ಣನೆಯಲ್ಲಿ, ಮೇಲೆ ನಿರೂಪಿಸಿದ ಪಟ್ಟಿಯಲ್ಲಿ ಕಂಡುಬರುವ ವಸ್ತುಗಳ ವರ್ಣನೆ ಎಷ್ಟೊಂದು ಲೋಕವಾಸ್ತವವಾಗಿದೆ, ಸಹಜವಾಗಿದೆ, ಸುಂದರವಾಗಿದೆ ಎನ್ನುವುದನ್ನು ಶಿಷ್ಟರಾದ ಸಹೃದಯರು ಗುರುತಿಸಬಹುದು. ಕವಿಗಳು ಬೇಕಾದರೆ ‘ಲೋಕವಿಷಯಸ್ಥಿತಿ’ ಅಲ್ಲದ್ದನ್ನು ಕಲ್ಪಿಸಿಕೊಂಡು ಹೇಳಲಿ, ಅದನ್ನು ಪರಿಗಣಿಸಬಹುದು; ಆದರೆ ‘ಲೋಕವಿಷಯಸ್ಥಿತಿ’ಯ ಬಗೆಗೆ ತಮಗಿರುವ ಅಜ್ಞತೆಯನ್ನೋ, ಅವಜ್ಞತೆಯನ್ನೋ ಆಧಾರವಾಗಿರಿಸಿಕೊಂಡು ಹೊಸೆದ ಸಂಗತಿಗಳನ್ನೂ ‘ಲೋಕವಿಷಯ ಸ್ಥಿತಿಯಲ್ತು ಎಂದು ಹೇಳುವ ಬದಲು, ‘ನಿಷ್ಕೇವಳಮಾದ ರೂಢಿವಶದಿಂ’ ಬಂದವು ಎನ್ನಬಹುದು. ಇಂಥ ಸವಕಲು ಸಾಮಗ್ರಿಯನ್ನು ಬಳಸಿಕೊಂಡ ‘ಸತ್ಕವಿ ಪರಂಪರೆ’ಗೂ ಅವುಗಳನ್ನು ಸಂಭಾವಿಸಿದ ‘ಶಿಷ್ಟ’ರಿಗೂ ಏನು ಹೇಳಬೇಕೋ ತೋರದು.

ಲೋಕದಲ್ಲಿ ಇರತಕ್ಕದ್ದನ್ನು ಕವಿಕಲ್ಪನೆ ಕೊಂಚಮಟ್ಟಿಗೆ ಸ್ಥಿತ್ಯಂತರಗೊಳಿಸುವುದರ ಮೂಲಕವೋ, ವಿಪರ್ಯಾಸಗೊಳಿಸುವುದರ ಮೂಲಕವೋ ನಿರ್ಮಿತವಾದ ‘ಕವಿ ಸಮಯ’ಗಳಿಗಿಂತ, ‘ಅಸದಾಖ್ಯಾತಿ’ ಎನಿಸಿಕೊಳ್ಳುವ ಅಥವಾ ಲೋಕದಲ್ಲಿ ಇಲ್ಲದ್ದು ಇರುವುದೆಂಬಂತೆ ಹೇಳಿದ್ದರ ವರ್ಗಕ್ಕೆ ಸೇರುವ ಕವಿಸಮಯಗಳು ಹೆಚ್ಚು ಕಾಲ್ಪನಿಕವೂ ಸಾಂಕೇತಿಕವೂ ಆಗಿವೆ ಎಂಬುದು ಗಮನಿಸಬೇಕಾದ ಸಂಗತಿ. ಚಕೋರ, ಚಂದ್ರಕಾಂತ ಇತ್ಯಾದಿಗಳು ಮೊದಲಸಲ ಕಾವ್ಯದಲ್ಲಿ ಅವುಗಳನ್ನು ಸಂಧಿಸುವ ಓದುಗನಿಗೆ ಅಪರಿಚಿತವೂ, ಅರ್ಥವಿವರಣೆಯನ್ನು ನಿರೀಕ್ಷಿಸತಕ್ಕವೂ ಆಗುವಂತೆ, ವಸಂತದಲ್ಲೆ ಕೋಗಿಲೆ ಕೂಗುವುದೆಂಬ ಸಂಗತಿಯಾಗಲಿ, ಸಮುದ್ರದಲ್ಲಿಯೆ ತಿಮಿಂಗಿಲಗಳಿವೆ ಎನ್ನುವ ಸಂಗತಿಯಾಗಲಿ ಅಷ್ಟರಮಟ್ಟಿನ ವಿವರಣೆಯನ್ನು ನಿರೀಕ್ಷಿಸುವುದಿಲ್ಲ. ಆದಕಾರಣ ಕವಿಸಮಯಗಳಲ್ಲಿ ‘ಅಸದಾಖ್ಯಾತಿ’, ಎನಿಸಿಕೊಳ್ಳತಕ್ಕವೆ ಮೊದಲು ಒಂದು ಸಲ ಅವುಗಳ ಪರಂಪರಾಗತವಾದ ಅರ್ಥಕೋಶದ ಪರಿಚಯವಾಗುವ ತನಕ ಓದುಗನಿಗೆ ಅಪರಿಚಿತವಾದಂತೆ ತೋರಬಹುದು. ಒಮ್ಮೆ ಅವು ಪರಿಚಿತವಾಗಿ ತಮ್ಮ ಇರುವಿಕೆಯ ಅರ್ಥವನ್ನು ಸ್ಪಷ್ಟಪಡಿಸಿದ ಮೇಲೆ, ಪರಂಪರಾಗತವಾದ ಈ ಸಾಮಗ್ರಿಗಳನ್ನು ಕವಿಗಳು ಎಷ್ಟರಮಟ್ಟಿಗೆ ತಮ್ಮ ಕಾವ್ಯಗಳಲ್ಲಿ ಬಳಸಿಕೊಂಡಿದ್ದಾರೆ ಎನ್ನುವುದರ ಕಡೆಗೆ ಸೂಕ್ಷ್ಮಜ್ಞನಾದ ಓದುಗನ ಗಮನ ಹರಿಯುತ್ತದೆ.

“ಕವಿಸಮಯವು ತಿಳಿಯದಿದ್ದರೆ ಅದನ್ನು ಅನುಸರಿಸಿ ರಚಿತವಾದ ಕಾವ್ಯಗಳು ಮನಸ್ಸಿಗೆ ಹಿಡಿಯುವುದಿಲ್ಲ, ಅರ್ಥವೇ ಆಗುವುದಿಲ್ಲ…. ಅನೇಕ ಸಂದರ್ಭಗಳಲ್ಲಿ ರಸ ಚರ್ವಣಕ್ಕೆ ಕವಿಸಮಯ ಜ್ಞಾನವು ಪ್ರತಿಬಂಧಕವೇ ಆಗುತ್ತದೆ”[11] -ಎನ್ನುವ ಒಂದು ಆಕ್ಷೇಪಣೆಯುಂಟು. ಈ ಆಕ್ಷೇಪಣೆ ಸತ್ಯದೂರವಾದುದೇನೂ ಅಲ್ಲ. ಆದರೆ ಯಾವ ಸಹೃದಯನಲ್ಲಿ ವಿಶೇಷವಾದ ಕಾವ್ಯಸಂಸ್ಕಾರದಿಂದ ಕವಿಸಮಯದ ಸಾಮಗ್ರಿಗಳೂ, ಹೆಜ್ಜೆಹೆಜ್ಜೆಗೆ ಅರ್ಥ ವಿವರಣೆಯನ್ನು ನಿರೀಕ್ಷಿಸದಂತಹ ವಿಭಾವಗಳೆ ಆಗಿ ಪರಿಣಮಿಸಿವೆಯೋ, ಅಂಥವು ಸಹೃದಯನ ಪಾಲಿಗೆ ಅಡ್ಡಿಯಾಗುವುದಾದರೂ ಹೇಗೆ? ಸಂಸ್ಕೃತ ಕಾವ್ಯಗಳಿಂದ ಹಿಡಿದು ಸಮಸ್ತ ಭಾರತೀಯ ಭಾಷಾಸಾಹಿತ್ಯದಲ್ಲಿ ಕವಿಗಳು ಪರಂಪರಾಗತವಾಗಿ ಚಕೋರ, ಚಂದ್ರಕಾಂತ ಇತ್ಯಾದಿಗಳಿಗೆ ಒಂದು ನಿರ್ದಿಷ್ಟವಾದ ಅರ್ಥವಲಯವನ್ನಾಗಲೇ ಕಲ್ಪಿಸಿಯೇ ಇರುವಾಗ, ನುರಿತ ಸಹೃದಯನ ಪಾಲಿಗೆ ಕಾವ್ಯಾಸ್ವಾದನ ಸಮಯದಲ್ಲಿ ಇವು ಆತಂಕಕಾರಿಗಳಾಗಲಾರವು. ಹಾಗೆ ನೋಡಿದರೆ ಒಂದು ಸಲ ಹೃದಯ ಸಂವಾದವನ್ನು ಪಡೆಯುವತನಕ ನಮ್ಮ ಕಾವ್ಯಗಳಲ್ಲಿ ಬರುವ ಪೌರಾಣಿಕ ಪ್ರತಿಮೆಗಳೂ, ಪ್ರಸಂಗಗಳೂ ಒಂದು ರೀತಿಯಲ್ಲಿ ಇಂತಹ ಸ್ಥಿತಿಗೆ ಪಕ್ಕಾಗಬೇಕಾಗುತ್ತದೆ. ‘ಕೂರ್ಮನ ಬೆನ್ನು ಕುಸಿದುದು’ ‘ಪ್ರಳಯ ಘನಘಟೆ’ ‘ಅಷ್ಟದಿಗ್ಗಜ’ ‘ತಿಣುಕಿದನು ಫಣಿರಾಯ’ ಇವುಗಳಿಗೂ ‘ಚಕೋರ ಕಾತರಿಸಿತು’ ‘ಚಂದ್ರಕಾಂತ ಒಸರಿತು’ ‘ಚಾತಕ ಬಾಯಾರಿತು’ -ಇವುಗಳಿಗೂ ಏನು ವ್ಯತ್ಯಾಸ? ಒಂದು ಪುರಾಣ ಪ್ರಪಂಚನಿಷ್ಠವಾದ ದೈತ್ಯಸೃಷ್ಟಿಗಳು, ಮತ್ತೊಂದು ಕೇವಲ ಕವಿಕಲ್ಪಿತವಾದ ರಮ್ಯಸಂಗತಿಗಳು. ಒಂದಕ್ಕೆ ಶಾಸ್ತ್ರ  ಅಥವಾ ಪುರಾಣಗಳ ಆಧಾರವಿದೆ; ಮತ್ತೊಂದಕ್ಕೆ ಅದೂ ಇಲ್ಲ. ಆದರೆ ‘ಕೂರ್ಮ’ ‘ದಿಗ್ಗಜ’ ‘ಪ್ರಳಯ ಘನಘಟೆ’, ಎನ್ನುವಂಥ ಪುರಾಣನಿಷ್ಠ ಸಂಗತಿಗಳು ಜನಮನದಲ್ಲಿ ಯಾವ ಭಾವಕೋಶವನ್ನು ನಿರ್ಮಿಸಿವೆಯೋ ಅಂಥವನ್ನು ‘ಚಕೋರ’ ‘ಚಾತಕಾ’ದಿಗಳು ನಿರ್ಮಿಸಿಲ್ಲದೆ ಇರಬಹುದು. ‘ನಿರ್ಮಿಸಿಲ್ಲದೆ ಇರಬಹುದು’ ಎನ್ನುವ ಮಾತು ಸಂಪೂರ್ಣ ಸತ್ಯವಲ್ಲ. ಚಾತಕ ಚಕೋರಗಳು ತಕ್ಕಮಟ್ಟಿಗೆ ಸಹೃದಯರ ಮನಸ್ಸಿನಲ್ಲಿ ಒಂದು ಬಗೆಯ ಅರ್ಥಕೋಶವನ್ನು ನಿರ್ಮಿಸಿಕೊಂಡು, ದಿವ್ಯಾಭೀಪ್ಸೆಯ ಸಂಕೇತಗಳೂ ಆಗಿ ಪ್ರಚಲಿತವಾಗಿವೆ. ಆದಕಾರಣ ರಸಾನುಭವಕ್ಕೆ ಇವು ಆತಂಕಕಾರಿ ಎನ್ನುವುದು ಸಂಪೂರ್ಣ ಸರಿಯಲ್ಲ. ಏಕೆಂದರೆ ಸಮರ್ಥನಾದ ಕವಿ ಕವಿಸಮಯದ ಸಾಮಗ್ರಿಯಿಂದಲೂ ರಸವ್ಯಂಜನೆ ಮಾಡಬಲ್ಲ. ಉತ್ತಮ ಕವಿಪ್ರತಿಭೆಗೆ ಯಾವುದು ತಾನೆ ಅಸಾಧ್ಯ?

ಚಾತಕ, ಚಕೋರ, ಚಕ್ರವಾಕ: ಒಂದು ಟಿಪ್ಪಣಿ

೧) ಕವಿ ಸಮಯಗಳಲ್ಲಿ ಕಂಡುಬರುವ ಚಕ್ರವಾಕ, ಚಾತಕ, ಚಕೋರ ಇವುಗಳು ಕೇವಲ ಕವಿಕಲ್ಪಿತವಾದ ಪಕ್ಷಿಗಳಲ್ಲ; ಲೋಕದಲ್ಲಿ ವಾಸ್ತವವಾಗಿ ಇರತಕ್ಕವು ಎನ್ನುವ ಸಂಗತಿ ಕುತೂಹಲಕಾರಕವಾಗಿದೆ: ‘ಚಕ್ರವಾಕ’ ಎನ್ನುವ ಹೆಸರಿನ ನಿಷ್ಪತ್ತಿ ಆ ಹಕ್ಕಿಗಳ ಕೊರಳ ದನಿಯಿಂದ ಬಂದದ್ದು. ಹಿಂದಿಯಲ್ಲಿ ಇದನ್ನು ‘ಚಾಕ್ವಾ’ ಎಂದು ಕರೆಯುತ್ತಾರೆ. ಇಂಗ್ಲೀಷ್‌ನಲ್ಲಿ ಇದಕ್ಕೆ Brahmany Duck ಎಂದು ಹೆಸರು.  ಋಗ್ವೇದಲ್ಲಿ (ii-೨೯, ೩) ಈ ಪಕ್ಷಿಯ ಹೆಸರಿದೆ. ಯಜುರ್ವೇದದಲ್ಲಿ (ವೈತ್ರಾಯಣೀ ಸಂಹಿತಾ: iii-೧೪. ೩, ೧೩) ಅಶ್ವಮೇಧಯಾಗದಲ್ಲಿ ಬಲಿಕೊಡುತ್ತಿದ್ದ ಪಕ್ಷಿಗಳ ಪಟ್ಟಿಯಲ್ಲಿ ಚಕ್ರವಾಕದ ಹೆಸರು ಬರುತ್ತದೆ. ಚಕ್ರವಾಕ ಪಕ್ಷಿಗಳು ಶುದ್ಧದಾಂಪತ್ಯ ಪ್ರೇಮದ ಮಾದರಿ ಎಂಬಂತೆ ಸಂಸ್ಕೃತ ಸಾಹಿತ್ಯದಲ್ಲಿ ಪ್ರಚಲಿತವಾಗಿದೆಯಷ್ಟೆ? ಈ ವಿಚಾರ ಮೊದಲು ದೊರೆಯತಕ್ಕದ್ದು ಅಥರ್ವವೇದದಲ್ಲಿ (xiv. ೨.೬).

Vedic Index of names and subjects By A.A. Macdonell and A.B. Keith, Vol. 1, p. 252, 253.

೨) “ಚಕೋರ: ಇದು Greek Patridge. ಇದರಲ್ಲಿ ಅನೇಕ ಬಗೆಗಳಿವೆ. ನೆಟ್ಟತಲೆಯ, ಅತ್ಯಂತ ಚಟುವಟಿಕೆಯುಳ್ಳ ಈ ಹಕ್ಕಿಯಲ್ಲಿ ಎದ್ದು ಕಾಣತಕ್ಕದ್ದು ಅದರ ಕೆಂಪು ಕಣ್ಣು ಮತ್ತು ಕಾಲುಗಳು. ಉಷ್ಣವಲಯಗಳಲ್ಲಿ ಮಳೆಗಾಲದ ನಂತರ ಹಚ್ಚಹಸಿರ ಹುಲ್ಲುಗಾವಲುಗಳಲ್ಲಿ ಸಾಮಾನ್ಯವಾಗಿ ಜೊತೆಜೊತೆಯಾಗಿ ಇವು ಕಂಡುಬರುತ್ತವೆ. ಚಾತಕ: ಇದು ಕೋಗಿಲೆಯ ಜಾತಿಗೆ ಸೇರಿದ ಹಕ್ಕಿ, ಇದು ಮಳೆಯ ನೀರನ್ನು ಮಾತ್ರವೆ ಕುಡಿಯುತ್ತದೆ ಎಂದು ಪ್ರತೀತಿ. ಶ್ರೀ ಎಸ್.ಪಿ. ಪಂಡಿತರು ಹೇಳುವಂತೆ (Vikramorvasi, II Notes) ‘ಇದು ಕಾಲ್ಪನಿಕ ಪಕ್ಷಿಯಲ್ಲ. ಇದೊಂದು ಪುಟ್ಟ ಹಕ್ಕಿ, ಸಣ್ಣ ಪಾರಿವಾಳಕ್ಕಿಂತಲೂ ಸಣ್ಣ ಹಕ್ಕಿ. ಅದಕ್ಕೆ ಉದ್ದವಾದ ಪುಕ್ಕವಿದೆ. ಅದರ ಬಣ್ಣ ಕಪ್ಪು ಹಳದಿ ಬಿಳಿ ಇವುಗಳ ಮಿಶ್ರಣ. ಅದರ ತಲೆಯ ಮೇಲೆ ಹೆದೆಯೇರಿಸಿದ ಬಿಲ್ಲಿನಾಕಾರದ ಉದ್ದವಾದ ಚೂಡವಿದೆ. ಯಾವಾಗ ಅದು ನೀರು ಕುಡಿಯಲೆಂದು ನೆಲದ ಕಡೆ ಕೊಕ್ಕನ್ನು ಚಾಚಿದರೂ, ಮೇಲಿನ ಧನುರಾಕೃತಿಯ ಆ ಚೂಡ ಅಡ್ಡಬರುತ್ತದೆ. ಪೂರ್ವಜನ್ಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಸೊಸೆಗೆ ಕುಡಿಯಲು ನೀರು ಕೊಡದೆ ಗೋಳು ಹೊಯ್ದುಕೊಂಡ ತಪ್ಪಿಗೆ ಅತ್ತೆಯಾದವಳಿಗೆ ಒದಗಿದ ಶಿಕ್ಷೆಯ ರೂಪ ಈ ಹಕ್ಕಿ ಎನ್ನುವುದು ಹಳ್ಳಿಗಳಲ್ಲಿ ಪ್ರಚಲಿತವಾಗಿರುವ ದಂತಕತೆ.’ ಶ್ರೀ ಎಸ್.ಪಿ. ಪಂಡಿತರ ಈ ವರ್ಣನೆ ಸಮರ್ಪಕವಾಗಿದ್ದಲ್ಲಿ ಈ ಹಕ್ಕಿ ಉತ್ತರ ಪ್ರದೇಶದ ಪೂರ್ವ ಭಾಗಗಳಲ್ಲಿ ನೈನ್ ಎಂದು ಕರೆಯಿಸಿಕೊಳ್ಳುವ ಪಕ್ಷಿ ಅಲ್ಲದೆ ಬೇರೆ ಅಲ್ಲ. ‘India in Kalidasa`, B.S. Upadhyaya, pp. 47, 48.

ಈ ವಿವರಣೆಗಳನ್ನು ನೋಡಿದರೆ ಈ ಮೂರು ಕಾಲ್ಪನಿಕವಲ್ಲ ಎನ್ನುವ ಸಂಗತಿ ತಿಳಿದುಬರುತ್ತದೆ. ಚಕ್ರವಾಕದಂತೆ ಚಾತಕವೂ ವೇದ ಕಾಲದಲ್ಲಿ ಇದ್ದ ಪಕ್ಷಿ. ವೇದದಲ್ಲಿ ‘ಚಾತಕ’ ಎನ್ನುವ ಹೆಸರು ಇಲ್ಲದಿದ್ದರೂ ಅದು ಸಾರ್ಗ ಎಂಬ ಹೆಸರಿನಿಂದ ನಿರ್ದೇಶಿತವಾಗುತ್ತಿದ್ದಂತೆ ತೋರುತ್ತದೆ. (“Sarga is the name of a bird in the list if Victims at the Asvamedha (horse sacrifice) in the Yajurveda Samhitas. Sayana on the Taittiriya Samhita Calls it the ‘Wild Chataka` -(Vedic index of names and Subject, A.A. Macdonell and A.B. Keith, Vol, 1. p. 374”) ಚಕೋರದ ಹೆಸರು ವೇದದಲ್ಲಿ ಕಾಣಿಸದು. ಈ ಮೂರು ಹಕ್ಕಿಗಳಲ್ಲಿ ಚಕ್ರವಾಕಕ್ಕೆ ಉಳಿದೆರಡು ಹಕ್ಕಿಗಳ ವಿಷಯಕ್ಕೆ ಆರೋಪಿತವಾದಂಥ ‘ಯಾವ ಅಲೋಕ ವಿಷಯ ಸ್ಥಿತಿ’ಯೂ ಇಲ್ಲ. ಸದಾ ಜೊತೆ ಜೊತೆಯಾಗಿರುವ ಚಕ್ರವಾಕಗಳು ಕವಿಗಳಲ್ಲಿ ಪರಿಶುದ್ಧ ದಾಂಪತ್ಯ ಪ್ರೇಮದ ಕಲ್ಪನೆಯನ್ನು ಮೂಡಿಸಿರಬಹುದು. ಚಕೋರ ಬೆಳದಿಂಗಳನ್ನು, ಚಾತಕ ಕೇವಲ ಮಳೆಹನಿಗಳನ್ನು ಕುಡಿದು ಜೀವಿಸುತ್ತದೆ ಎನ್ನುವ ರಮ್ಯ ಕಲ್ಪನೆ ಪರಂಪರಾಗತವಾಗಿ ಬಂದಿದೆ.

 


[1] ಶಕ್ತಿರ್ನಿಪುಣತಾ ಲೋಕಶಾಸ್ತ್ರ ಕಾವ್ಯಾದ್ಯವೇಕ್ಷಣಾತ್
ಕಾವ್ಯಜ್ಞ ಶಿಕ್ಷಯಾಭ್ಯಾಸ : ಇತಿ ಹೇತುಸ್ತದುದ್ಭವೇ.

ಮಮ್ಮಟ : ‘ಕಾವ್ಯಪ್ರಕಾಶ’. ೧-೩

[2] ತೀ.ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ, ಪು. ೩೪-೩೫.

[3] ಕನ್ನಡ ಕೈಪಿಡಿ ಸಂಪುಟ ೧,  ಪು. ೨೪೧.

[4] ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ (೨೭-೧-೧೯೪೨)ರಲ್ಲಿ ಶ್ರೀ ಮುಳಿಯ ತಿಮ್ಮಪ್ಪಯ್ಯನವರು ಬರೆದಿರುವ ‘ಸಾಹಿತ್ಯದಲ್ಲಿ ಕವಿಸಮಯದ ಸ್ಥಾನ’ ಎಂಬ ಲೇಖನವನ್ನು ಗಮನಿಸಬಹುದು. ಅದರಲ್ಲಿ ಅವರು ರಾಜಶೇಖರನು ಕೊಡುವ ಕವಿಸಮಯದ ಲಕ್ಷಣದಿಂದ ನಾಗವರ್ಮನು ಕೊಡುವ ಕವಿಸಮಯದ ಲಕ್ಷಣವು ಬೇರೆಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

[5] ಕವಿಸಮಯವನ್ನು ಕುರಿತು ‘ಕರ್ಣಾಟಕ ಕಾವ್ಯ ಕಲಾನಿಧಿ’ ಶ್ರೀ ಎಂ.ಎ. ರಾಮಾನುಜ ಐಯ್ಯಂಗಾರ್ ಅವರು ೧೯೦೮ರಲ್ಲಿ ‘ಕವಿಸಮಯಂ’ (ಪ್ರಥಮಭಾಗ) ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಅವರು ಉದ್ದಕ್ಕೂ ಕವಿಸಮಯವನ್ನು ಕವಿ ಸಂಪ್ರದಾಯವೆನ್ನುವ ವಿಶಾಲಾರ್ಥದಲ್ಲಿಯೇ ಭಾವಿಸಿ ಕಾವ್ಯಕಲೆಯಲ್ಲಿ ಸೌಂದರ್ಯೋತ್ಪಾದಕವಾದ ನೈಪುಣ್ಯ ಸಮಸ್ತವನ್ನೂ ಕವಿಸಮಯವೆಂದೇ ಕರೆದಿದ್ದಾರೆ. ಅವು ‘ಕವಿಪರಂಪರಾ ಪ್ರಾಪ್ತವಾಗಿ ಬಂದಿರುವುದರಿಂದ ಅವು ‘ಕವಿಸಂಪ್ರದಾಯ’ವೆಂದೂ ಕರೆಯಲ್ಪಡುವುದು’ ಎನ್ನುತ್ತಾರೆ. ಹೀಗೆ ಕವಿಸಮಯಗಳು, ಕವಿಪರಂಪರೆಯ ಒಂದು ಅಂಗ ಎನ್ನುವ ಬದಲು, ಕವಿಸಮಯಗಳನ್ನು ಕವಿ ಸಂಪ್ರದಾಯದೊಂದಿಗೆ ಸಮಾನಾರ್ಥಕವಾಗಿ ಭಾವಿಸಿದ್ದಾರೆ.

[6] ವೇದಾಂತ ಗ್ರಂಥದಲ್ಲಿ, ಸಂತರ ಉಪದೇಶವಾಣಿಯಲ್ಲಿ ಮತ್ತು ಸ್ತೋತ್ರಗಳಲ್ಲಿ ಚಾತಕ, ಚಕೋರಗಳನ್ನು ವಿಶೇಷವಾಗಿ, ಸಾಧಕನ ಮನಃಸ್ಥಿತಿಯನ್ನು ನಿರೂಪಿಸಲು ದೃಷ್ಟಾಂತಗಳನ್ನಾಗಿ ಬಳಸಿರುವುದು ಕಂಡುಬರುತ್ತದೆ. ಭಕ್ತಿಸಾಹಿತ್ಯದ ತುಂಬಾ ಈ ಕೆಲವು ಪಕ್ಷಿ ಪ್ರತಿಮೆಗಳನ್ನು ಕಾಣಬಹುದು. ಶ್ರೀ ರಾಮಕೃಷ್ಣರ ಉಪದೇಶ ಸಂವಾದಗಳನ್ನು ಒಳಗೊಳ್ಳುವ “ಶ್ರೀ ರಾಮಕೃಷ್ಣ ವಚನವೇದ” (ಪೂರ್ವಾರ್ಧ, ಪು. ೨೩)ದಲ್ಲಿ ಒಂದು ಸ್ವಾರಸ್ಯವಾದ ಪಕ್ಷಿಯ ವಿಷಯ ಕಂಡುಬರುತ್ತದೆ. ಹೋಮಾಪಕ್ಷಿ ಎಂಬುದೊಂದು ಇದೆಯಂತೆ. ಇದರ ವಾಸ ಸದಾ ಅಂತರಿಕ್ಷದಲ್ಲಿ;  ಅಲ್ಲೇ ಅದರ ಸಂಸಾರ.  ಆ ಹಕ್ಕಿ ಮೊಟ್ಟೆಯಿಟ್ಟಾಗ ಆ ಮೊಟ್ಟೆ ನೆಲದ ಕಡೆ ಬೀಳುತ್ತಲೇ ಇರುವಾಗ ಮೊಟ್ಟೆ ಬಿರಿದು ಮರಿಹೊರಗೆ ಬರುವುದಂತೆ: ಆ ಮರಿ ನೆಲವನ್ನು ತಲುಪುವ ಮುನ್ನವೇ ಎಚ್ಚತ್ತು ತನ್ನ ತಾಯ್ಮನೆಯಾದ ನೀಲಾಕಾಶದ ಕಡೆಗೆ ಹಾರಿಹೋಗುವುದಂತೆ. ಈ ಕಥೆ ವೇದದಲ್ಲಿ ಬರುತ್ತದೆ ಎನ್ನುತ್ತಾರೆ ಪರಮಹಂಸರು. ಆದರೆ ವೇದದಲ್ಲಿ ಈ ಪಕ್ಷಿಯ ಹೆಸರೇ ಇಲ್ಲ. ಪರಮಹಂಸರ ಕಾಲಕ್ಕೆ ಈ ಪಕ್ಷಿಯ ಕಥೆ ಜನಮನದಲ್ಲಿ ಪ್ರಚಲಿತವಾಗಿದ್ದಿರಬೇಕು. ಏಕೋ ಏನೋ ಇದು ‘ಕವಿಸಮಯ’ವಾಗಿ ಕಾವ್ಯಲೋಕವನ್ನು ಪ್ರವೇಶಿಸದೆ ಇರುವುದು ಸೋಜಿಗದ ಸಂಗತಿ.

[7] ಶ್ರೀ ಕುವೆಂಪು ಅವರ ‘ಚಂದ್ರಮಂಚಕೆ ಬಾ ಚಕೋರಿ’ ಎನ್ನುವ ಕವನ ಸಂಗ್ರಹದಲ್ಲಿ ‘ಚಂದ್ರಮಂಚಕೆ ಬಾ ಚಕೋರಿ’ ಮತ್ತು ‘ಚಕೋರಾಭೀಪ್ಸೆ’ – ಎಂಬ ಕವಿತೆಗಳನ್ನು ನೋಡಿ. ಅಲ್ಲಿ ಚಕೋರ ಉದಾತ್ತ ಪ್ರೇಮದ ಸಂಕೇತವಾಗಿ ಚಿತ್ರಿಸಲ್ಪಟ್ಟಿದೆ.

[8] ‘ಅಸದಾಖ್ಯಾತಿ’ ಎಂದರೆ ಇಲ್ಲದೆ ಇರುವುದನ್ನು ಇರುವಂತೆ ವರ್ಣಿಸುವುದು; ‘ಸದಕೀರ್ತನ’ ಎಂದರೆ ಲೋಕದಲ್ಲಿ ಇದ್ದುದನ್ನು ಇಲ್ಲವೆಂಬಂತೆ ವರ್ಣಿಸುವುದು; ಅನೇಕ ಕಡೆಗಳಲ್ಲಿ ದೊರಕಬಹುದಾದ್ದನ್ನು ಒಂದೇ ಕಡೆ ದೊರೆಯುವುದೆಂಬಂತೆ ನಿಯಮನಗೊಳಿಸಿ ಹೇಳುವುದು ನಿಯಮ; ಲೋಕದಲ್ಲಿ ವಸ್ತುತಃ ಭೇದವಿರತಕ್ಕ ಕಡೆಗಳಲ್ಲಿಯೂ ಭೇದ ರಾಹಿತ್ಯವನ್ನು ಹೇಳುವುದು ಐಕ್ಯ.

* ವಿವರಗಳಿಗೆ ಈ ಲೇಖನದ ಕೊನೆಯ ಟಿಪ್ಪಣಿಯನ್ನು ನೋಡಿ.

[9] ಕನ್ನಡ ಕೈಪಿಡಿ, ಸಂಪುಟ ೧, ಪು. ೨೧೪.

[10] ಕನ್ನಡ ಕೈಪಿಡಿ, ಸಂಪುಟ ೧, ‘ಕವಿಸಮಯ’ ವಿಭಾಗವನ್ನು ನೋಡಿ.

[11] ಕನ್ನಡ ಕೈಪಿಡಿ, ಸಂ. ೧, ಪು. ೨೪೨