ಕನ್ನಡ ಕವಿಗಳನ್ನು ಕವಿತಾವೇಶವುಳ್ಳವರು, ಕವಿತಾವಿಚಕ್ಷಣರು ಎಂದು ಎರಡು ಭಾಗ ಮಾಡಿದರೆ, ಹರೀಶ್ವರ ಕುಮಾರವ್ಯಾಸಾದಿಗಳನ್ನು ಕವಿತಾವೇಶ ಪ್ರಧಾನರೆಂದೂ ನೇಮಿಚಂದ್ರ ಷಡಕ್ಷರ ದೇವ ಮೊದಲಾದವರನ್ನು ಕವಿತಾವಿಚಕ್ಷಣರೆಂದೂ ನಾವು ಹೇಳಬಹುದು. ಆದರೆ, ಕವಿತಾವೇಶ-ಕವಿತಾವಿಚಕ್ಷಣತೆ ಎರಡನ್ನೂ ಸಮಸಮವಾಗಿ ಉಳ್ಳ ಕವಿಗಳಲ್ಲಿ ಲಕ್ಷ್ಮೀಶ ಮತ್ತು ಚಾಮರಸರು ಮುಖ್ಯರೆಂದೂ ಹೇಳಬಹುದು. ಈ ದೃಷ್ಟಿಯಿಂದ ಕೂಡ ಲಕ್ಷ್ಮೀಶನು ಸಮ ತೂಕದ ಕವಿಯೆನ್ನಿಸಿಕೊಳ್ಳುತ್ತಾನೆ. ಆದ್ದರಿಂದಲೇ ಅವನ ಕಾವ್ಯದಲ್ಲಿ ಅವೇಶದ ಸೂರ್ತಿಯೂ, ವಿಚಕ್ಷಣತ್ವದ ಓತಪ್ರೋತವಾಗಿ ಸೇರಿವೆ. ಅದು ನಿಮಿತ್ತವೇ ಈ ಕಾವ್ಯ ಎಲ್ಲರ ಮೆಚ್ಚುಗೆಗೂ ಪಾತ್ರವೆನೆಸಿದೆ. ಪ್ರಭು ಸಮ್ಮಿತಗಳಾದ ಕಾವ್ಯಗಳು ಸಹೃದಯರ ಹೃದಯಾಹ್ಲಾದಕರಗಳಾಗಬೇಕಾದರೆ ಅವು ನಿಷ್ಕೇವಳಮಾದ ರೂಢಿವಶದಿಂದ ಕವಿ ಜನಪರಿಗೃಹೀತಮಾಗಿ ಬಂದಿರುವ ಶಿಷ್ಟ ಸಂಭಾವಿತಮಪ್ಪ ಕಾವ್ಯ ಸಮಯವನ್ನು ಅನುಸರಿಸಿರಬೇಕು. ಕನ್ನಡ ಜೈಮಿನಿ ಭಾರತವು ಅಂತಹ ಕವಿ ಸಮಯದ ದೃಷ್ಟಿಯಿಂದಲೂ ಶ್ಲಾಘ್ಯವೆನಿಸಿದೆ. ಉದಾಹರಣೆಗಾಗಿ ಕನ್ನಡ ಜೈಮಿನಿ ಭಾರತದಲ್ಲಿ (ಸಂ. ೩೦, ಪ. ೯)

ಹರಿಯಲೋಚನಂ ಅಜಂ ಕುಳ್ಳಿರ್ಪತಾಣಂ ಇಂ |
ದಿರೆಯನಿಳಯಂ ದಿವಾಕರನ ಕೆಳೆ ಮನ್ಮಥನ |
ಸರಳ್ ಅರಡಿಗಳಿಕ್ಕೆ ಪರಿಮಳದ ಬೀಡು ಎನಿಸಿಕೊಂಡು ಸಂಪೂರ್ಣತೆಯೊಳು ||
ಪರಿಶೋಭಿಸಿದುವಲ್ಲಿ ನೆರೆತಿಂಗಳಂ ಪೋಲ್ವ |
ತರುಣಿಯರ ಚೆಲ್ವ ನಗೆಮೊಗೆದ ಮುಂದೆ ಈಗ ತಾಮ್ |
ಅರೆಯಾದುವೆಂಬಂತೆ ಪೆಣ್ಗಳಾಸ್ಯಕೆ ಸೋಲ್ದವು ಆ ಕೊಳದ ಕಮಲಂಗಳು ||
(ಸಂ. ೩೦. )

ಇದು ಕವಿ ಸಮಯಕ್ಕೆ ಸಮ್ಮತವಾದ ಪದ್ಯ. ತಾವರೆಯ ಹೂವು ಮಹಾ ವಿಷ್ಣುವಿಗೆ ಕಣ್ಣು, ಬ್ರಹ್ಮದೇವನ ಪೀಠ, ಲಕ್ಷ್ಮೀದೇವಿಯ ಮನೆ, ಸೂರ‍್ಯನ ಸ್ನೇಹಿತ, ಕಾಮರಾಜನ ಬಾಣ, ತುಂಬಿಗಳ ನಿವಾಸ ಸ್ಥಳ, ಸುಗಂಧದ ಬೀಡು ಎನಿಸಿಕೊಂಡು ಹಿರಿಮೆಯಿಂದ ಕೂಡಿದ ತಾವರೆ ಹೂಗಳು ಅಲ್ಲಿ ಪರಿಶೋಭಿಸಿದುವು. ಆದರೆ, ಅಲ್ಲಿ ನೆರೆದ ಚಂದ್ರನನ್ನು ಹೋಲುವ ಹರೆಯಾದ ಹೆಣ್ಣುಗಳ ಚೆಲುವಾದ ನಗೆಮೊಗವನ್ನು ನೋಡಿ ಚಂದ್ರನೆಂಬ ಭ್ರಾಂತಿಯಿಂದ ಆ ಕಮಲಗಳು ಅಂದರೆ ತಾವರೆಗಳು ತಾವು+ಅರೆ (ತಾವರೆ)ಯಾದುವು. ಆರ್ಥಾತ್ ಆ ಹೆಣ್ಣುಗಳ ಮುಖ ಚಂದ್ರಕ್ಕೆ ಸೋತುಹೋದುವು ಎಂದು ಕವಿ ಚಮತ್ಕಾರವಾಗಿ ಹೇಳಿದ್ದಾನೆ.

ಇಂತಹ ಸಂದರ್ಭಗಳನ್ನು ಪ್ರಾಚೀನ ಕವಿಗಳು ಹೇಗೆ ಸ್ವಾರಸ್ಯವಾಗಿ ಹೇಳಿರುವರೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳೋಣ.

ಕಂದ || ಗಿರಿಜೆ ಶಶಿವದನೆ ಕೊಳನಂ |
ಭರದಿಂ ಪೊಗೆ ನೆಯ್ದಿಲೆಯ್ದಿದುವು ವಿಕಸನಮಂ |
ವಿರಹವನಾಂತವು ಕೋಕಂ |
ಸರಸಿರುಹಂ ಮುಗಿದುವರರೆ ಪಗಲೊಳ್ ಚಿತ್ರಂ ||
(
ಗಿರಿಜಾ ಕಲ್ಯಾಣ ಅ. , . ೨೧)

ಪಾರ್ವತೀದೇವಿಯು ಸಖಿಯರೊಡನೆ ಕೊಳಕ್ಕೆ ಸ್ನಾನಕ್ಕೆ ಬಂದಾಗ ಆಕೆಯ ಮುಖಚಂದ್ರನನ್ನು ನೋಡಿ ಚಂದ್ರೋದಯವೆಂಬ ಭ್ರಾಂತಿಯಿಂದ ಕನ್ನೈದಿಲೆ ಅರಳಿತು, ತಾವರೆ ಮುಚ್ಚಿತು, ಕೋಕ ಪಕ್ಷಿಗಳು ವಿರಹವಾಂತುವು, ಹಗಲಿನಲ್ಲಿಯೇ ಇಂತಹ ವಿಚಿತ್ರವಾಯಿತು ಎಂದು ಮಹಾಕವಿ ಹರೀಶ್ವರನು ಹೇಳಿದ್ದಾನೆ.

ಹೊಸ ಬನದೊಳಿರ‍್ಪಬಲೆಯರ ತೊಡಿಗೆ ವೆಳಗು ಹೊಂ |
ಬಿಸಿಲಂತಿರಲ್ ಕಂಡು ಕಮಲವರಳುವವರ |
ನಸುನಗೆಯ ಬೆಳಗು ಬೆಳ್ದಿಂಗಳಂತಿರೆ ಕಂಡು ಕುಮುದವರಳುವುವಲ್ಲದೆ ||
ಶಶಿ ರವಿಗಳಾಟವಾ ಬನದೊಳಗೆ ಹೊಗದು ನಿ |
ಟ್ವಿಸಲು ರವಿಕಾಣದುದ ಕವಿ ಕಂಡನೆಂಬ ನುಡಿ |
ಹುಸಿಯಲ್ಲ ಸುಕವಿ ಹಂಪೆಯ ರಾಘವಾಂಕನದರಳವ ಬಣ್ಣಿಸಿದನಾಗಿ ||
(ಹರಿಶ್ಚಂದ್ರಕಾವ್ಯ. ಸ್ಥಲ ೩. ೪೦).

ಈ ಪದ್ಯದಲ್ಲಿ ರಾಘವಾಂಕ ಪಂಡಿತನು, ವನದಲ್ಲಿರುವ ತರುಣಿಯರ ಆಭರಣಗಳ ಕಾಂತಿಯು ಹೊಂಬಿಸಿಲಂತೆ ಕಾಣಲು ಸೂರ‍್ಯೋದಯವಾಯಿತೆಂಬ ಭ್ರಾಂತಿಯಿಂದ ಕಮಲಗಳು ಅರಳುತ್ತಿವೆಯೆಂದೂ, ಆ ಸುಂದರ ತರುಣಿಯರ ನಸುನಗೆಯ ಬೆಳಗು ಬೆಳುದಿಂಗಳಂತಿರಲು ಚಂದ್ರೋದಯವಾಯಿತೆಂದು ಭಾವಿಸಿ ಕನ್ನೈದಿಲೆಗಳು ಅರಳುವುವೆಂದೂ, ಸೂರ‍್ಯ ಚಂದ್ರರ ಕಿರಣಗಳು ಪ್ರವೇಶಿಸಲು ಸಾಧ್ಯವಿಲ್ಲದಷ್ಟು ದಟ್ಟವಾಗಿ ಬೆಳೆದಿರುವ ಆ ಅಡವಿಯಲ್ಲಿ ಹೀಗೆ ಸೂರ‍್ಯ ಚಂದ್ರರ ಉದಯವು ಒಮ್ಮೆಗೇ ಉಂಟಾದ ಪರಿಣಾಮವಾಯಿತೆಂದೂ, ರವಿ ಕಾಣದುದನು ಕವಿ ಕಂಡನೆಂಬ ನುಡಿ ಹುಸಿಯಲ್ಲವೆಂದೂ ಕವಿಯು ಸ್ವಾರಸ್ಯವಾಗಿ ಹೇಳಿದ್ದಾನೆ.

ಹೀಗೆ ಹಿಂದಿನಿಂದ ನಡೆದುಬಂದ ಕವಿಸಮಯ-ಸಂಪ್ರದಾಯಗಳನ್ನು ಕರ್ಣಾಟ ಕವಿಚೈತ್ರವನಚೂತನಾದ ಲಕ್ಷ್ಮೀಶನು ನಡೆಸಿಕೊಂಡು ಬಂದನಲ್ಲದೆ, ಅಂತಹ ಸಂದರ್ಭಗಳಲ್ಲಿಯೂ ತನ್ನ ವಿನೂತನ ಪ್ರತಿಭೆಯನ್ನು ಪ್ರಕಾಶಿಸಿರುವನು.

ಪ್ರಾಚೀನ ಲಾಕ್ಷಣಿಕರು ಒಳ್ಳೆಯ ಕಾವ್ಯದಲ್ಲಿ ಇರಬೇಕೆಂದು ಹೇಳಿರುವ ರಮಣೀಯ, ರಸಾತ್ಮಕ, ವಕ್ರೋಕ್ತಿ, ಗುಣ, ರೀತಿ, ಧ್ವನಿ, ರಸ ಇತ್ಯಾದಿ ಕಾವ್ಯಾಂಶಗಳೆಲ್ಲವೂ ಲಕ್ಷ್ಮೀಶನ ಕಾವ್ಯದಲ್ಲಿವೆ ಎಂಬುದನ್ನು ಈ ಗ್ರಂಥಾವಲೋಕನದಿಂದ ನಾವು ಮನಗಾಣಬಹುದು.

ಕನ್ನಡ ಸಾಹಿತ್ಯದಲ್ಲಿ ಚಂಪೂ ಗ್ರಂಥಗಳನ್ನು ವಸ್ತುಕ ಕಾವ್ಯಗಳೆಂದೂ, ಷಟ್ಪದಿ, ಸಾಂಗತ್ಯ, ರಗಳೆ ಮೊದಲಾದ ಕಾವ್ಯಗಳನ್ನು ವರ್ಣಕ ಕಾವ್ಯಗಳೆಂದೂ ಪಂಡಿತರು ಕರೆವರು. ಚಂಪೂ ಗ್ರಂಥಗಳು ಶ್ರೇಷ್ಠವೆಂದೂ, ಷಟ್ಪದಿ ಗ್ರಂಥಗಳು ಸಾಮಾನ್ಯವೆಂದೂ ಭಾವಿಸುವವರುಂಟು ಛಂದಸ್ಸು, ಅಲಂಕಾರ, ವ್ಯಾಕರಣ ನಿಯಮಗಳು ಷಟ್ಪದಿ ಕಾವ್ಯಗಳಿಗೆ ಅಷ್ಟಾಗಿ ಇಲ್ಲವೆಂದು ಹೇಳುವವರೂ ಉಂಟು. ಮಹಾಕವಿ ಲಕ್ಷ್ಮೀಶನು ಬರೆದ ಕನ್ನಡ ಜೈಮಿನಿಯಲ್ಲಿ ಮೇಲೆ ಕಂಡಂತೆ ಹೇಳುವವರ ಮಾತನ್ನು ಹಾಡುಗಬ್ಬಗಳೆನಿಸಿದ ಷಟ್ಪದಿಗಳು ಓದುಗಬ್ಬಗಳಂತೆಯೇ “ವಿದ್ವತ್ಸಭಾನೀರೇರುಹಾಕರ”ದಲ್ಲಿ ಝೇಂಕರಿಸುವಂತೆ ಮಾಡಿರುವನು. ಈ ದೃಷ್ಟಿಯಿಂದಲೂ ಕವಿಯು ಕನ್ನಡ ಸಾಹಿತ್ಯಕ್ಕೆ ಉಪಕಾರಿಯೇ ಸರಿ. ಈತನ ಕಾವ್ಯವು ಕವಿಸಮಯದ ಹದಿನೆಂಟು ವರ್ಣನೆಗಳಿಂದ ತುಂಬಿರುವುದು ಗಮನಾರ್ಹವಾಗಿದೆ. ಈ ಅನುಕರಣವು ನಮ್ಮ ಕವಿಗಳ ಜಾಯಮಾನ.