‘ಸರ್ವಜ್ಞ’ ಎಂಬುದು ಒಬ್ಬ ವ್ಯಕ್ತಿಯ ಹೆಸರಲ್ಲ; ಅದೊಂದು ಕಾವ್ಯ ಪದ್ಧತಿಗೆ ಇಟ್ಟ ಹೆಸರು. ಎಂದರೆ  ಸರ್ವಜ್ಞನವೆಂದು ನಾವು ಒಪ್ಪಿಕೊಂಡಿರುವ ಈ ತ್ರಿಪದಿಗಳಲ್ಲಿ ಎಷ್ಟನ್ನೋ ವಾಸ್ತವವಾಗಿ ರಚಿಸಿದ ಕವಿಯೊಬ್ಬ ಈ ಪದ್ಧತಿಯ ಮೂಲದಲ್ಲಿ ಇದ್ದಿರಲೆ ಇಲ್ಲವೆಂದು ಈ ಮಾತಿನ ಅರ್ಥವಲ್ಲ. ಖಂಡಿತ ಇದನ್ನು ಬರೆದ ವ್ಯಕ್ತಿಯೊಬ್ಬ ಇದ್ದಿರಬೇಕು. ಅವನ ಹೆಸರೇನೋ ತಿಳಿಯದು. ‘ಸರ್ವಜ್ಞ’ ಎಂಬುದೇ ಈ ತ್ರಿಪದಿಗಳಲ್ಲಿ ಎಷ್ಟನ್ನೊ ಬರೆದ ಕವಿಯ ಹೆಸರಿದ್ದಿರಬೇಕು- ‘ಪ್ರಭು’ ‘ಪ್ರಭುದೇವ’ ಎಂಬ ಹೆಸರಿನಂತೆ, ಸರ್ವಜ್ಞ ಎಂಬುದೂ ಒಬ್ಬ ವ್ಯಕ್ತಿಯ ಹೆಸರಾಗಿದ್ದಿರಬೇಕು ಎನ್ನುತ್ತಾರೆ ಕೆಲವರು. ಸರ್ವಜ್ಞ ಎಂದು ಯಾರಾದರೂ ಹೆಸರಿಟ್ಟು ಕೊಂಡಾರೆಯೇ, ಬಹುತೇಕ ಅದು ಒಂದು ಬಿರುದು ಅಥವಾ ಆತನ ಇಷ್ಟದೈವದ ಅಂಕಿತವಾಗಿರ ಬೇಕು ಎನ್ನುತ್ತಾರೆ ಇನ್ನೂ ಕೆಲವರು.[1] ತನ್ನ ಹೆಸರು ಇತ್ಯಾದಿಗಳ ಹಂಗನ್ನು ಹರಿದುಕೊಂಡು, ಅತ್ಯಂತ ವ್ಯಕ್ತಿನಿರಸನದ ಸಂತೋಷದಲ್ಲಿ ಬದುಕಿದಂತೆ ತೋರುವ ಈ ವ್ಯಕ್ತಿಗೆ ಕೊಟ್ಟದ್ದೇ ಹೆಸರು! ಇಂಥ ಕವಿಯ ಕಾಲದೇಶಾದಿ ಸಂಗತಿಗಳನ್ನು ನಾವು ನಿರ್ದಿಷ್ಟವಾಗಿ ಚೌಕಟ್ಟಿಸಿ ಹೇಳಲು ಸಾಧ್ಯವಿಲ್ಲ. ಅವನು ಹುಟ್ಟಿ ಇಂದಿಗೆ ನಾಲ್ಕು ನೂರು ವರ್ಷಗಳ ಮೇಲಾದುವೆಂಬುದೂ ನಮ್ಮ ಕಲ್ಪನೆಯೇ. ಆದರೆ ಇಷ್ಟು ಮಾತ್ರ ನಿಜ: ವಚನಕಾರರ ಕಾಲದಿಂದ ಈಚೆಗೆ ಹದಿನಾರನೆಯ ಶತಮಾನದ ಒಳಗಿನ ಅವಧಿಯಲ್ಲಿ ಇದ್ದಂಥ ವ್ಯಕ್ತಿತ್ವ ಇದು. ಈ ವ್ಯಕ್ತಿತ್ವದ ಕೆಲವು ಗೆರೆಗಳನ್ನು ಸರ್ವಜ್ಞನವೆಂದು ಹೇಳಲಾದ ತ್ರಿಪದಿಗಳಲ್ಲಿ ಗುರುತಿಸುವುದು ಸಾಧ್ಯ.

ಈ ವ್ಯಕ್ತಿತ್ವ ಅನಿಕೇತನವಾದದ್ದು. ನಿಂತಲ್ಲಿ ನಿಲ್ಲದೆ ಗಾಳಿಯಂತೆ ಅಲೆದವನು ಇವನು. ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ ಸುತ್ತಿದವನು. ಕೈಯಲ್ಲೊಂದು ಕಪ್ಪರವನ್ನು ಹಿಡಿದು, ಹಿರಿದಾದ ನಾಡು ಎದುರಿಗಿರುವಾಗ ಪರಮೇಶನೆಂಬ ನಾಮವನ್ನು ನೆಚ್ಚಿ, ತಿರಿಯುತ್ತಲೇ ಊರೂರು ಸುತ್ತಿದ ಚಾರಣ ಕವಿ ಈತ. ಅಲ್ಲಮಪ್ರಭುವನ್ನು ಬಹುಮಟ್ಟಿಗೆ ನೆನಪಿಗೆ ತರುವ ಈ ‘ಜಂಗಮ’ನಿಗೆ ನೆಲವೇ ಹಾಸಿಗೆ, ಆಕಾಶವೇ ಹೊದಿಕೆ. ತನ್ನ ಪೂರ್ವೋತ್ತರಗಳನ್ನು ಕಳಚಿ ಎಸೆದು ಬಹುಮಟ್ಟಿಗೆ ದಿಗಂಬರನಾದ ಇಂಥವನ ತಂದೆ-ತಾಯಿ ಹಾಗೂ ಹುಟ್ಟಿನ ಗುಟ್ಟುಗಳನ್ನು ಇವನ ಕೆಲವು ತ್ರಿಪದಿಗಳಲ್ಲಿ ಗುರುತಿಸಬಹುದೆನ್ನುತ್ತಾರೆ ಕೆಲವರು. ವಾಸ್ತವವಾಗಿ ಅವನ ತಂದೆ-ತಾಯಿ ಹಾಗು ಸರ್ವಜ್ಞ ಹುಟ್ಟಿದ್ದು ಹೇಗೆ ಎಂಬುದನ್ನು ಹೇಳುವ ತ್ರಿಪದಿಗಳೂ ಯಾರೋ ಕಟ್ಟಿ ಸೇರಿಸಿದವುಗಳೆಂದೇ ನಮ್ಮ ಅಭಿಪ್ರಾಯ. ಕುಂಬಾರ ಮಾಳಿಯಲ್ಲಿ ದ್ವಿಜೋತ್ತಮನೊಬ್ಬನಿಗೆ ಹುಟ್ಟಿದವನು ಸರ್ವಜ್ಞ -ಎಂಬ ಕತೆಯಲ್ಲಿ, ಈ ದೇಶದ ಪ್ರತಿಭೆಯೆಲ್ಲವೂ ಪ್ರತಿಷ್ಠಿತ ವರ್ಗದ ಬೀಜದ ಬೆಳಸು ಎಂಬ ಪರಂಪರಾಗತವಾದ ವರ್ಣಪ್ರತಿಷ್ಠೆಯ ಪ್ರಕ್ಷೇಪ ಇದು ಯಾಕಾಗಿರಬಾರದು ಎಂಬ ಪ್ರಬಲವಾದ ಸಂದೇಹ ನಮಗೆ. ಇನ್ನೂ ಒಂದೆರಡು ತ್ರಿಪದಿಗಳು ಆತನನ್ನು ಕೈಲಾಸದ ಪನ್ನಗಧರನ ಗಣಗಳಲ್ಲಿ ಒಬ್ಬನಾದ ಪುಷ್ಟದತ್ತನೇ ಈತ, ಎಂದು ಅಲೌಕಿಕ ಸ್ತರದವರೆಗೂ ಈತನ ಭವವನ್ನು ಎತ್ತಿ ಹಿಡಿದಿವೆ. ಈ ಪೀಠಿಕಾ ಪ್ರಕರಣಗಳನ್ನು, ಸರ್ವಜ್ಞನೆಂದು ನಾವು ಕರೆಯುವ ಕವಿ ಖಂಡಿತ ಬರೆದಿರಲಾರ. ಸರ್ವಜ್ಞನ ಬದುಕಿನ ಬಗೆಗೆ ಉಳಿದದ್ದೇನೂ ತಿಳಿಯದೆ ಹೋಗಿರುವಾಗ, ಅವನ ಜನನ, ತಂದೆ ತಾಯಂದಿರ ವಿಚಾರವನ್ನು ಕುರಿತ ತ್ರಿಪದಿಗಳು ಮಾತ್ರ ಸಾಚಾ ಎಂದು ನಂಬುವುದು ಕಷ್ಟ.[2]

ಆದರೆ ಇಷ್ಟು ಮಾತ್ರ ನಿಜ. ಈ ತ್ರಿಪದಿಗಳನ್ನು ಬರೆದವನು ಅಚ್ಚ ಕನ್ನಡಿಗ. ಅವನು ಬದುಕಿದ್ದು ವಚನಕಾರರ ನಂತರ, ಬಹುಶಃ ಹದಿನಾರನೆಯ ಶತಮಾನದ ಒಳಗಿನ ಅವಧಿಯಲ್ಲಿ. ಅವನೊಬ್ಬ ಚಾರಣ ಕವಿ. ಅತ್ಯಂತ ನಿರ್ಲಿಪ್ತನಾಗಿ ನಿಂತರೂ ಜೀವನ ಪ್ರೀತಿಯನ್ನು ಕಳೆದುಕೊಳ್ಳದ ವಿಲಕ್ಷಣ ಮನೋಧರ್ಮದವನು. ಯಾರ ಹಂಗಿಗೂ ಒಳಗಾಗದ, ವಿಮರ್ಶಕನ ಕಣ್ಣಿನಿಂದ ಲೋಕವನ್ನು ನೋಡಿದವನು. ಅಂಬಿಗರ ಚೌಡಯ್ಯನ ತಮ್ಮ, ಮನಸ್ಸಿನಲ್ಲಿ ಮಾತಿನಲ್ಲಿ.

‘ಸರ್ವಜ್ಞ’ ಎಂದು ಜನಜನಿತವಾಗಿರುವ ಈ ವ್ಯಕ್ತಿ ಒಬ್ಬ ಕವಿ. ಕಂಡದ್ದನ್ನು ಕಂಡೊಡನೆಯ ಪದ್ಯರೂಪದಲ್ಲಿ ಕಟ್ಟಿ ನಿಲ್ಲಿಸುವ ಕೌಶಲವಿರುವ ಕಾರಣ ಈತ ಒಬ್ಬ ಕವಿ ಎನ್ನಬಹುದು. ಈ ಕವಿಯ ಕಾವ್ಯ ‘ವಚನ’ ರೂಪದ್ದು. ‘ವಚನ’ ಎಂದರೆ ಕೂತು ಬರೆದದ್ದು ಎನ್ನುವುದಕ್ಕಿಂತ, ಸುಮ್ಮನೆ ಹೇಳಿದ್ದು, ಮಾತಾಡಿದ್ದು ಎಂದು ಅರ್ಥವಾಗುತ್ತದೆ. ಸರ್ವಜ್ಞನ ತ್ರಿಪದಿಗಳಿಗೆ ‘ಸರ್ವಜ್ಞನ ವಚನ’ ಎಂದು ಹೆಸರಿಸುವುದು ಈ ಕಾರಣದಿಂದಲೇ ಇರಬೇಕು. ಇದು ವಚನ ಅಥವಾ ಅನಿಸಿದ್ದನ್ನು ಅಂದಂದೇ ಹೇಳಿದ್ದು. ಇದರ ಜತೆಗೆ ಇವುಗಳನ್ನು ವಿಂಗಡಿಸಿ ‘ಪದ್ಧತಿ’ ಎಂದೂ ಕರೆಯಲಾಗಿದೆ. ‘ದಾನಪದ್ಧತಿ’ ‘ರಾಜನೀತಿ ಪದ್ಧತಿ’ ‘ಸ್ತ್ರೀ ಪದ್ಧತಿ’ ‘ದೈವ ಪದ್ಧತಿ’ ಹೀಗೆ ಈತನ ತ್ರಿಪದಿಗಳನ್ನು ವಿಷಯಾನುಸಾರಿಯಾಗಿ ವಿಂಗಡಿಸಿ ಪ್ರಕಟಿಸಿದ್ದಾರೆ ಉತ್ತಂಗಿಯವರು. ವಾಸ್ತವವಾಗಿ ದೊರೆತ, ಎಲ್ಲ ಹಸ್ತಪ್ರತಿಗಳಲ್ಲಿಯೂ ಹೀಗಿದ್ದಿತೆಂದು ಕಾಣುತ್ತದೆ. ಕ್ರಿ.ಶ. ೧೬೩೬ರಲ್ಲಿ ಪ್ರತಿಯಾದ ಸರ್ವಜ್ಞನ ಅತ್ಯಂತ ಪ್ರಾಚೀನತಮ ಪ್ರತಿಯಲ್ಲಿಯೂ ಹೀಗೆಯೇ ಇದೆ ಎನ್ನುವುದು ಡಾ. ಬಸವರಾಜು ಅವರು ಸಂಪಾದಿಸಿ ಪ್ರಕಟಿಸಿರುವ ‘ಪರಮಾರ್ಥ’ ದಲ್ಲಿಯೂ ಕಾಣುತ್ತದೆ. ಸರ್ವಜ್ಞನ ತ್ರಿಪದಿಗಳನ್ನು ಅಥವಾ ವಚನಗಳನ್ನು ಹೀಗೆ ‘ಪದ್ಧತಿ’ಗಳೆಂದು ಕರೆದದ್ದು ಸ್ವಾರಸ್ಯವಾದ ಸಂಗತಿಯಾಗಿದೆ. ಸರ್ವಜ್ಞನ ‘ವಚನ’ವಾದ ಈ ಅಭಿವ್ಯಕ್ತಿ  ವಾಸ್ತವವಾಗಿ ಒಂದು ಪದ್ಧತಿ (tradition) ಅಥವಾ ಬರವಣಿಗೆಯ ಕ್ರಮವಾಯಿತೆಂಬುದು ಇದರಿಂದ ಸ್ಪಷ್ಟವಾಗಿದೆ. ಸರ್ವಜ್ಞನ ಈ ‘ಪದ್ಧತಿ’ ಇಂಥ ಎಷ್ಟೋ ರಚನೆಗೆ ಸಲೀಸಾದ ದಾರಿಯಾಗಿ, ಅನೇಕರು ಈ ‘ಪದ್ಧತಿ’ ಯೊಳಗೆ ತಮ್ಮ ಹೆಜ್ಜೆಯನ್ನೂರಿ, ನಿಜವಾದ ಕವಿಯ (ಪದಹತಿ) ‘ಪದ್ಧತಿ’ ಅಥವಾ ಹೆಜ್ಜೆ ಗುರುತುಗಳು ಯಾವುವು ಎಂಬುದು ತಿಳಿಯದಂತಾಗಿದೆ. ಆದ್ದರಿಂದಲೇ ನಾವು ಮೊದಲು ಹೇಳಿದ್ದು ‘ಸರ್ವಜ್ಞ’ ಎನ್ನುವುದು ಒಬ್ಬ ವ್ಯಕ್ತಿಯ ಹೆಸರಲ್ಲ, ಅದೊಂದು ಕಾವ್ಯಪದ್ಧತಿಗೆ ಇಟ್ಟ ಹೆಸರು ಎಂದು.

ಈ ‘ವಚನ’ ಕಾವ್ಯದ ಕವಿ, ತನ್ನ ವ್ಯಕ್ತಿತ್ವವನ್ನು ಕುರಿತು:

ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು
ಹಿಂಡನಗಲಿದ ಗಜದಂತೆ ಇಪ್ಪವನ
ಕಂಡು ನಂಬುವುದು ಸರ್ವಜ್ಞ.

ಎಂದು ಹೇಳಿಕೊಂಡಿದ್ದಾನೆ. ಎಲ್ಲದರಿಂದ ಕಳಚಿಕೊಂಡು, ನಿರ್ಭಯ ಏಕಾಕಿತನವನ್ನು ಸಾಧಿಸಿದವನೊಬ್ಬನ ಚಿತ್ರವೊಂದು ಈ ಪದ್ಯದಲ್ಲಿದೆ. ಈ ಬಗೆಯ ಏಕಾಕಿತನವನ್ನು ಸಾಧಿಸಿಕೊಳ್ಳಲಾರದವ ಕವಿಯಾಗಲಾರ. ಇದರ ಜತೆಗೆ,

ಕರದಿ ಕಪ್ಪರವುಂಟು, ಹಿರಿದೊಂದು ನಾಡುಂಟು

ಹರನೆಂಬ ದೈವ ನಮಗುಂಟು, ತಿರಿವರಿಂ
ಸಿರಿವಂತರಾರು ಸರ್ವಜ್ಞ.

ಎಂಬ ಸವಾಲಿನಲ್ಲಿ, ಈ ವಿಸ್ತಾರವಾದ ಜಗತ್ತು ಮತ್ತು ಅದರ ಉದಾರತೆಯ ಬಗ್ಗೆ ಭರವಸೆ, ಈ ಎಲ್ಲವನ್ನೂ, ನಡೆಯಿಸುವ ಯಾವುದೋ ಒಂದು ದೈವ -ಇವು ಸಾಕು ತನ್ನನ್ನು  ನಡೆಸಲು, ಎಂಬ ಧೈರ್ಯವೆ ಈ ವ್ಯಕ್ತಿತ್ವದ ಮೂಲದ್ರವ್ಯವೆಂಬಂತೆ ಹೇಳಲಾಗಿದೆ. ಇಂಥ ಕವಿ ತನ್ನ ಕಾವ್ಯಪ್ರೇರಣೆಯ ಬಗ್ಗೆ ‘ಎನ್ನ ಮನಸಿಗೆ ನೆನಹು ಪನ್ನಗಧರ ಕೊಟ್ಟ’ ಎಂದು ಹಿಂದಿನ ಎಲ್ಲ ಕವಿಗಳಂತೆಯೇ ಹೇಳಿಕೊಂಡಿದ್ದಾನೆ. ಈ ನೆನಹು, ಅಥವಾ ಕಾವ್ಯ ನಿರ್ಮಾಣ ಶಕ್ತಿಯಾದ ಪ್ರತಿಭೆ,[3] ಅನುಭವದ ಉಗ್ರಾಣದಿಂದ ನೆನಹುಗಳನ್ನು ಆಯ್ದು ಕಟ್ಟುವ ಕಲೆಗಾರಿಕೆ, ತನಗೆ ದೈವೀಕೃಪೆಯಿಂದ ಬಂದುದು ಎನ್ನುತ್ತಾನೆ. ಎಂದರೆ, ಅನಿಸಿದ್ದಕ್ಕೆ ಆಕಾರ ಕೊಡುವ ಈ ಪ್ರವೃತ್ತಿ ಸರ್ವಜ್ಞನಿಗೆ ಸಹಜವಾಗಿಯೇ ಬಂದಿತೆಂದು ಈ ಮಾತಿನ ಅರ್ಥ. ಜತೆಗೆ ಅವನು ಆಗೀಗ ಅಂದದ್ದನ್ನು ಕಂಡು ಅಲ್ಲಲ್ಲಿನ ಜನ ಮೆಚ್ಚಿ ಇನ್ನಷ್ಟು ಹೇಳು -ಎಂದು ಕೇಳಿರಬೇಕು. ಆದ್ದರಿಂದಲೆ ‘ಹೇಳಲರಿಯೆನು ನಾನು, ಹೇಳೆನಲು ಹೇಳಿದೆನು’ ಎನ್ನುತ್ತಾನೆ. ಸರ್ವಜ್ಞನ ಪದಗಳು ಹುಟ್ಟಿಕೊಂಡಿದ್ದೆ ಹೀಗೆ, ಅವರಿವರು ‘ಹೇಳೆನಲು’ ಈತ ಹೇಳುತ್ತಾ ಹೋಗಿರಬೇಕು; ಈ ಹೇಳಿದ ಕಾವ್ಯ- ಗಮನಿಸಬೇಕು, ಒಂದೆಡೆ ಕೂತು ಬರೆದ ಕಾವ್ಯ ಅಲ್ಲ- ಸರ್ವಜ್ಞನದು. ಇವುಗಳಿಗೆ ‘ವಚನ’ ಅಥವಾ ಹೇಳಿದ್ದು -ಎಂಬ ಹೆಸರು ಬಂದದ್ದು ತೀರ ಸಹಜವಾಗಿದೆ. ಇಂಥ ಕವಿ ಹೇಳಿದ್ದನ್ನು ಕೇಳಿದ ಜನ, ಅವನ ಉಕ್ತಿಯ ವಿಷಯದ ಬಾಹುಳ್ಯವನ್ನು ಕಂಡು ಬೆರಗಾಗಿ ಅವನನ್ನು ‘ಸರ್ವಜ್ಞ’ ಎಂದು ಕರೆದಿದ್ದಿರಬಹುದು. ಆದರೆ ಈ ಕವಿ ಅದನ್ನು ನಿರಾಕರಿಸಿ ‘ಎಲ್ಲ  ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ’

ಸರ್ವಜ್ಞ ನೆಂಬುವನು ಗರ್ವದಿಂದಾದವನೆ
ಸರ್ವರೊಳಗೊಂದು ನುಡಿಗಲಿತು ವಿದ್ಯೆಯಾ
ಪರ್ವತವೇ ಆದ ಸರ್ವಜ್ಞ.

ಎಂದು ಹೇಳುವುದರ ಮೂಲಕ ಉತ್ತರ ಕೊಟ್ಟು ತನ್ನ ವಿನಯವನ್ನು ಎತ್ತಿ ಹಿಡಿದಿದ್ದಾನೆ.

ಸಾಹಿತ್ಯ ಪರಂಪರೆಯ ದೃಷ್ಟಿಯಿಂದಲೂ ಸರ್ವಜ್ಞ ಏಕಾಂಗಿಯಾಗಿಯೇ ತೋರುತ್ತಾನೆ. ಯಾಕೆಂದರೆ ಅವನು ತನ್ನನ್ನು ತನಗಿಂತ ಹಿಂದಿನ ಕನ್ನಡ ಸಾಹಿತ್ಯದೊಂದಿಗೆ ಬೆಸೆದುಕೊಳ್ಳುವುದೇ ಇಲ್ಲ- ವಚನಕಾರರ ಮನೋಧರ್ಮದೊಂದಿಗೆ ಹೊರತು. ತನಗಿಂತ ಹಿಂದೆ ಒಂದು ಸಾಹಿತ್ಯಕ ಪರಂಪರೆಯಿದೆ, ತಾನು ಅದರದೊಂದು ಭಾಗ, ತಾನು ಬರೆಯುತ್ತಿರುವುದೂ ಸಾಹಿತ್ಯವೇ ಎಂಬ ಯಾವ ಅರಿವಿನಿಂದಲೂ ಈತ ಬದ್ಧನಾದವನಲ್ಲ. ಹೀಗಾಗಿ ಸರ್ವಜ್ಞನವೆಂದು ಹೇಳಲಾದ ಈ ತ್ರಿಪದಿಗಳು, ಕಾವ್ಯ ಎನ್ನಲು ಏನೇನಿರಬೇಕು ಎಂದುಕೊಂಡಿದ್ದೇವೆಯೋ ಅದೆಲ್ಲವನ್ನೂ ಗಾಳಿಗೆ ತೂರುತ್ತವೆ. ಹೀಗಾಗಿ ಸರ್ವಜ್ಞನ ಕಾವ್ಯಕ್ಕೆ ಇಂಥದೇ ವಸ್ತು ಇಲ್ಲ. ಅದಕ್ಕೊಂದು ನಿಶ್ಚಿತವಾದ ಬೆಳವಣಿಗೆ ಆದಿ ಮಧ್ಯ ಅಂತ್ಯ ಇಲ್ಲ. ಇದನ್ನು ಇಂಥಲ್ಲಿಂದ ಓದಬೇಕೆಂಬ ಹಂಗಿಗೆ ಓದುಗರನ್ನು ಒಳಗುಪಡಿಸುವುದಿಲ್ಲ. ಎಲ್ಲಿಂದಾದರೂ ಓದಬಹುದು. ಎಲ್ಲಿ ಬೇಕಾದರೂ ನಿಲ್ಲಿಸಬಹುದು. ಇದು ಯಾವ ಪಂಡಿತ ಮಂಡಲಿಯ ಪ್ರೀತಿಗೆ ಬರೆದದ್ದಾಗಲೀ, ಯಾವನೊಬ್ಬನ ಕಥನವಾಗಲಿ ಅಲ್ಲ. ಹೀಗಾಗಿ ಇದನ್ನು ನಮಗೆ ಪರಿಚಯವಾದ ‘ಕಾವ್ಯ’ಗಳ ಮಾದರಿಯಿಂದ ನೋಡಲೂಬಾರದು. ಹಾಗಾದರೆ ಇದನ್ನು ‘ಕಾವ್ಯ’ವೆಂದು ಕರೆಯುವುದಾದರೂ ಹೇಗೆ? ಒಂದೊಂದು ಬಿಡಿ ಬಿಡಿ ಪದ್ಯಕ್ಕೂ ತನ್ನದೇ ಅಸ್ತಿತ್ವವಿದೆ, ಒಟ್ಟಾಗಿ ನೋಡಿದರೆ ಒಂದು ಧೋರಣೆಯಿದೆ. ಆ ಧೋರಣೆ ಮೂಲತಃ ಜೀವನ ಪರವಾಗಿದೆ; ಜೀವನ ವಿಮರ್ಶೆಯಾಗಿದೆ. ‘ಸಾಹಿತ್ಯ ಜೀವನದ ವಿಮರ್ಶೆ’ (Literature is the criticism of life) ಎಂಬ ಮ್ಯಾಥ್ಯೂ ಆರ‍್ನಾಲ್ಡನ ಮಾತು ಸರ್ವಜ್ಞನಿಗೆ ಅನ್ವಯಿಸುತ್ತದೆ. ಅಂದಂದು ಅನ್ನಿಸಿದ್ದಕ್ಕೆ ಅಂದಂದೇ ಮಾತು ಕೊಟ್ಟು ನಿಲ್ಲಿಸಿದ ‘ಪದ್ಧತಿ’ ಇದು. ಈ ಬಗೆಯ ಅಭಿವ್ಯಕ್ತಿಗೆ ಹಿಂದಿನ ಸಾಹಿತ್ಯದಲ್ಲಿ ನಿದರ್ಶನಗಳಿಲ್ಲದಿಲ್ಲ. ಸಂಸ್ಕೃತದಲ್ಲಿ ಸುಭಾಷಿತಗಳನ್ನು ಬಿಟ್ಟರೆ ಎಲ್ಲಾ ಕವಿಗಳಲ್ಲೂ ಈ ಬಗೆಯ ಲೋಕೋಕ್ತಿ, ಸೂಕ್ತಿ, ಚಾಟೂಕ್ತಿಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಹೇಳಿಕೆ statements ಎಂದು ಕರೆಯಬಹುದು. ಆದರೆ ಇಂಥ ಹೇಳಿಕೆಗಳು, ಮಾರ್ಗಕವಿಗಳಲ್ಲಿ, ಕಾವ್ಯದ ಸಂದರ್ಭದ ಒಳಗೆ ಬರುತ್ತಿದ್ದುವು. ‘ಹರಿ ಕರಿಯನಲ್ಲದಿರಿವುದೆ ನರಿಯಂ? ‘ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ?’ ‘ನಿಡಿಯರ್ಗಂ ನಿಡಿಯರೊಳರ್’, ‘ಸೆಟ್ಟಿಯ ಬಳ್ಳಂ ಕಿರಿದು’, ‘ಮಾನವ ಜಾತಿ ತಾನೊಂದೆವಲಂ’, ‘ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ’, ಇಂಥ ಮಾತುಗಳು ಕಾವ್ಯದ ಸಂದರ್ಭದೊಳಗೆ ಯಥೋಚಿತವಾಗಿ ಬರುತ್ತವೆ. ಹಾಗೆಯೆ ವಿವೇಕದ, ತತ್ವದ, ನೀತಿಯ, ಧರ್ಮಕ್ಕೆ ಸಂಬಂಧಿಸಿದ ಹೇಳಿಕೆಗಳೂ ಕಾಣಿಸುತ್ತವೆ. ಆದರೆ ಸರ್ವಜ್ಞನಲ್ಲಿ ಇಂಥ ಹೇಳಿಕೆ (statements)ಗಳೇ ಪ್ರಧಾನವಾಗಿ, ಹಿಂದಿನ ಕವಿಗಳಿಗಿದ್ದಂಥ ಯಾವ ಕಥಾ ಸಂದರ್ಭದ ನೆರವನ್ನೂ ಕೋರದೆ ನೇರವಾಗಿ  ಅಂದಂದಿನ ಅನುಭವದ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನುವುದೇ ವಿಶೇಷವಾದ ಸಂಗತಿಯಾಗಿದೆ. ಈ ಅರ್ಥದಲ್ಲಿ ಸರ್ವಜ್ಞನ ಕವಿತೆ ಹೇಳಿಕೆಗಳ ಕಾವ್ಯ (Poetry of statements) ಎನ್ನಬಹುದು. ನಿದರ್ಶನಕ್ಕೆ-

‘ಊರಿಂಗೆ ದಾರಿಯನು ಆರು ತೋರಿದರೇನು?’
‘ತುಪ್ಪವಾದಾ ಬಳಿಕ ಹೆಪ್ಪನೆರೆದವರುಂಟೆ?’
‘ಶ್ವಾನ ತೆಂಗಿನಕಾಯ ತಾನು ಮೆಲಬಲ್ಲುದೆ?’
‘ಬೆಟ್ಟ ಕರ್ಪುರ ಉರಿದು ಬೊಟ್ಟಿಡಲು ಬೂದಿಲ್ಲ’
‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ?’
‘ಕುರಿ ಕಬ್ಬಿನೊಳು ಹೊಕ್ಕು ಅರಿವುದೇ ತನಿರಸವ?’
‘ಆನೆ ನೀರಾಟದಲಿ ಮೀನ ಕಂಡಂಜುವುದೆ?’
‘ಉಣ್ಣೆ ಕೆಚ್ಚಲೊಳಿರ್ದು ಉಣ್ಣದದು ನೊರೆವಾಲ’
‘ಸೊಡರೆಣ್ಣೆ ತೀರಿದರೆ ಕೊಡನೆತ್ತಿ ಹೊಯ್ಯುವರೆ?’

ಈ ಹಲವು ಹೇಳಿಕೆಗಳನ್ನು ನೋಡಬಹುದು. ಈ ಹೇಳಿಕೆಗಳು, ಹಿಂದಿನ ಕಾವ್ಯಗಳಲ್ಲಾಗಿದ್ದರೆ, ಯಾವುದೋ ಒಂದು ಸಂದರ್ಭದ ಒಳಗೆ ಬಂದು, ಆ ಸಂದರ್ಭದ ಅರ್ಥವಂತಿಕೆಗೆ ಪೂರಕವಾಗಬಹುದಾದವು. ಆದರೆ ಇಲ್ಲಿ ಅಂಥ ಕಥಾಸಂದರ್ಭ ಇಲ್ಲ; ಆದರೆ ಇಂಥ ಮಾತಾಡಿದ ಅನುಭವದ ಸಂದರ್ಭ ಯಾವುದೆಂದು ಊಹಿಸಬಹುದು. ಈ ಹೇಳಿಕೆಗಳು, ಕೇವಲ ಶುಷ್ಕವಾಗದೆ, ದೃಷ್ಟಾಂತ ರೂಪವನ್ನು ತಾಳುತ್ತವೆ. ಆದರೆ ಈ ದೃಷ್ಟಾಂತಗಳ ಉದ್ದೇಶ ರಸಾನುಭವವಲ್ಲ; ಅಂದರೆ ಅವುಗಳಲ್ಲಿ ಅಂಥ ‘ರಸ’ ಇಲ್ಲವೆಂದು ಅರ್ಥವಲ್ಲ. ಒಂದೆರಡು ಕ್ಷಣ ಅವುಗಳು ಕಟ್ಟುವ ಚಿತ್ರ ಕೊಂಚ ರಸಾನುಭವವನ್ನು ಕೊಟ್ಟರೂ, ಅವುಗಳ ಮುಖ್ಯಉದ್ದೇಶ, ನೀತಿಯನ್ನು, ವಿವೇಕವನ್ನು, ಹೇಳುವುದು. ನಮ್ಮಆಲಂಕಾರಿಕರು ವಾಙ್ಮಯವನ್ನು, ಪ್ರಭು ಸಮ್ಮಿತ, ಮಿತ್ರ ಸಮ್ಮಿತ ಹಾಗೂ ಕಾಂತಾಸಮ್ಮಿತ ಎಂದು ವಿಭಾಗಿಸಿದರು. ಸರ್ವಜ್ಞನ ವಚನಗಳು ಬಹುಮಟ್ಟಿಗೆ ಮಿತ್ರಸಮ್ಮಿತವೆಂಬ ವರ್ಗಕ್ಕೆ ಸೇರುತ್ತವೆ. ಹಿತೈಷಿಯಾದ ಗೆಳೆಯನೊಬ್ಬನು, ಈ ಲೋಕದಲ್ಲಿ ನಡೆದುಕೊಳ್ಳಬೇಕಾದ ನಿರ್ದೇಶನವನ್ನು ನಯವಾಗಿ, ಆದರೆ ಕೆಲವು ಸಲ ಕಟುವಾಗಿ ಹೇಳಿದ ಹಾಗಿದೆ ಸರ್ವಜ್ಞನ ಈ ಧಾಟಿ. ಕಾವ್ಯ ಪ್ರಯೋಜನವನ್ನು ಹೇಳುವಲ್ಲಿ ನಮ್ಮಆಲಂಕಾರಿಕರು ಕಾವ್ಯ ವ್ಯವಹಾರವನ್ನು ಬೋಧಿಸುತ್ತದೆ ಎನ್ನುತ್ತಾರೆ. ಸರ್ವಜ್ಞನ ಕಾವ್ಯ ನಿಜವಾದ ಅರ್ಥದಲ್ಲಿ ವ್ಯವಹಾರಕಾವ್ಯ. ಅನುಭವಿಯೊಬ್ಬನು, ಮನುಷ್ಯ ಸ್ವಭಾವವನ್ನು ಲೋಕದ ನಡವಳಿಕೆಯನ್ನು ಚೆನ್ನಾಗಿ ಕಂಡ ಅನುಭವಿಯೊಬ್ಬನು, ಸುತ್ತಣ ಜನರನ್ನು ತಿದ್ದುವ, ಸುಧಾರಕತನದ ಕಳಕಳಿಯಿಂದ ನುಡಿದ ಅಭಿವ್ಯಕ್ತಿಗಳಿವು. ಇವುಗಳಲ್ಲಿ ಶಸ್ತ್ರಚಿಕಿತ್ಸಕನ ದೃಷ್ಟಿ ಇದೆ. ಶಾಸ್ತ್ರದ ನಿಷ್ಕೃಷ್ಟತೆಯೂ ಇದೆ. ಕಾವ್ಯದ ಸ್ವಾರಸ್ಯವೂ ಇದೆ. ಹೀಗಿರುವುದರಿಂದಲೇ ಈ ಉಕ್ತಿ ಮಾರ್ಗ ಸಲೀಸಾಗಿ ಸುತ್ತಣ ಜನಮನವನ್ನು ಮುಟ್ಟುತ್ತದೆ ಹಾಗೂ ತಟ್ಟುತ್ತದೆ.

ಸರ್ವಜ್ಞನ ಈ ಉದ್ದೇಶವೇ, ಅವನನ್ನು ಇತರ ಕವಿಗಳಿಂದ ಬೇರ್ಪಡಿಸುತ್ತದೆ. ಅವನದು, ಮನಸ್ಸನ್ನು ರಂಜಿಸುವ, ಅಥವಾ ಅರ್ಥ ರಮ್ಯತೆಯನ್ನು ವ್ಯಂಜಿಸುವ ಉಕ್ತಿವಿಧಾನವಲ್ಲ. ಮನಸ್ಸನ್ನು ಕೆದಕುವ ಹೊಡೆದೆಬ್ಬಿಸವ ಉಕ್ತಿ ವಿಧಾನ, ಪ್ರಶ್ನಿಸುವ ವಿಧಾನ-

ದಂಡಿಸದೆ ದೇಹವನು, ಖಂಡಿಸದೆ ಕರಣವನು
ಉಂಡುಂಡು ಸ್ವರ್ಗವೇರಲಿಕೆ ಅದನೇನು
ರಂಡೆಯಾಳುವಳೆ ಸರ್ವಜ್ಞ
ಉಣ್ಣದೊಡವೆಯ ಗಳಿಸಿ ಮಣ್ಣಿನೊಳು ಬಚ್ಚಿಟ್ಟು
ಚೆನ್ನಾಗಿ ನೆಲನ ಸಾರಿಸಿದವನ ಬಾಯೊಳಗೆ
ಮಣ್ಣು ಕಾಣಯ್ಯ ಸರ್ವಜ್ಞ

ಎಂಬಂಥ ಉಕ್ತಿಗಳನ್ನು ಗಮನಿಸಬಹುದು. ಈ ಎರಡೂ, ಬದುಕಿನ ಎರಡು ಧೋರಣೆಗಳನ್ನು ಕುರಿತ ವಿಮರ್ಶೆಯಾಗಿವೆ. ಪರದ ಮೇಲೆ ಕಣ್ಣಿಟ್ಟ ಸೋಮಾರಿ ಸಾಧಕನ ಮತ್ತು ಜಿಪುಣನ ಧೋರಣೆಗಳನ್ನು ವಿಡಂಬಿಸಲಾಗಿದೆ. ಮೂಲತಃ ಸರ್ವಜ್ಞನದು ಜೀವನ ವಿಮರ್ಶೆ. ಈ ಬಗೆಯ ವಿಮರ್ಶನಪ್ರಜ್ಞೆಯಿಂದ ಸಾಹಿತ್ಯ ನಿರ್ಮಿತಿಯಾದದ್ದು ವಚನಕಾರರ ಕಾಲದಲ್ಲಿ. ಆದ್ದರಿಂದಲೇ ವಚನಕಾರರನ್ನು ಸರ್ವಜ್ಞನ ಉಕ್ತಿಗಳು ವಿಶೇಷವಾಗಿ ನೆನಪಿಗೆ ತರುತ್ತವೆ; ಅಷ್ಟೇ ಅಲ್ಲ ವಚನಕಾರನ ಭಾವನೆಗಳನ್ನು ಎಷ್ಟೊಕಡೆ ಪುನರಾವರ್ತಿಸುತ್ತಾನೆ. ವಚನಕಾರರೆ ಸರ್ವಜ್ಞನಿಗೆ ಸ್ಫೂರ್ತಿಯ ಸೆಲೆ. ವಚನಕಾರರ ಕಾಲದ ನಂತರ, ಅದೇ ಮಟ್ಟದ ಹಾಗೂ ಪ್ರಮಾಣದ ವಚನ ನಿರ್ಮಿತಿ ಕಾಣಿಸಿಕೊಳ್ಳುವುದಿಲ್ಲವಾದರೂ, ವಚನ ಪರಿಷ್ಕರಣ ಹಾಗೂ ವ್ಯಾಖ್ಯಾನ ಮತ್ತು ಪ್ರಸಾರ ಕಾರ‍್ಯಗಳು ನಡೆದವು. ಸರ್ವಜ್ಞ ಮುಖ್ಯವಾಗಿ ವಚನಗಳನ್ನು ತ್ರಿಪದಿಗೆ ತಿರುಗಿಸಿ ಪ್ರಸಾರ ಮಾಡಿದವನು. ಆದರೆ ಒಂದು ವ್ಯತ್ಯಾಸ: ವಚನಕಾರರು ಒಂದು ಧಾರ್ಮಿಕ ಸಾಮಾಜಿಕ ಆಂದೋಳನದ ಸಂದರ್ಭದಲ್ಲಿ, ಸಾಂಘಿಕವಾಗಿ ಕೆಲಸ ಮಾಡಿದವರು; ಸರ್ವಜ್ಞ ಅಂಥ ಯಾವ ಉದ್ದೇಶದಿಂದಲೂ ಬದ್ಧವಾಗದೆ, ಏಕಾಂಗಿಯಾಗಿ ಊರೂರು ಅಲೆದವನು. ಆದರೆ ಒಂದು ಧಾರ್ಮಿಕ ಉದ್ದೇಶದಿಂದ ಬದ್ಧವಾದ ವಚನಕಾರರ, ಅದರಲ್ಲೂ ಪ್ರಮುಖ ವಚನಕಾರರ, ವಚನಗಳಲ್ಲಿರುವ ಕಾವ್ಯಗುಣ ಸರ್ವಜ್ಞನಲ್ಲಿಲ್ಲ. ಕೆಲವು ವಚನಕಾರರಲ್ಲಿರುವ ಅನುಭವದ ಕಾವು, ಅದು ತಾನೇ ತಾನಾಗಿ ವ್ಯಕ್ತವಾಗುವಲ್ಲಿನ ಘನೀಭವನಕ್ರಮ (Process of Crystalisation), ಬಹುಕಾಲದ ಪರಿಭಾವನೆಗೆ ನಿಲ್ಲುವ ಸಾಮರ್ಥ್ಯ, ಸರ್ವಜ್ಞನ ತ್ರಿಪದಿಗಳಲ್ಲಿ ಕಡಿಮೆ.

‘ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು’
‘ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ’
‘ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯ ಭವದ ಬೇರನು’
‘ಈಳೆ ನಿಂಬೆ ಮಾವು ಮಾದಲಕ್ಕೆ
ಹುಳಿನೀರನೆರೆದವರಾರಯ್ಯಾ’

ಇಂಥ ವಚನಗಳಲ್ಲಿ ದಟ್ಟೆ ಸಿದ ಅನುಭವ, ಓದಿದನಂತರ ಅವುಗಳು ಉಂಟುಮಾಡುವ ರಸಾಸ್ವಾದ ಹಾಗೂ ಜೀವನದ ಬಗ್ಗೆ ಉಂಟಾಗುವ ಹೊಸ ತಿಳಿವಳಿಕೆ ಸರ್ವಜ್ಞನ ಉಕ್ತಿಗಳಲ್ಲಿ ತೀರಾ ವಿರಳ. ಅದಕ್ಕೆ ಕಾರಣ, ಸರ್ವಜ್ಞ ವಚನಕಾರರ ಮಾತುಗಳನ್ನೆ ಮತ್ತೆ ಹೇಳುವುದು ಒಂದು, ಎಂದುಕೊಂಡರೆ, ಅವನ ಉಕ್ತಿಯ ಅಲ್ಪಗಾತ್ರದ ಪರಿಮಿತಿಯೂ ಇನ್ನೊಂದು ಕಾರಣ ಎನ್ನಬಹುದು.[4] ಆದರೆ ವಚನಕಾರರಲ್ಲಿಲ್ಲದ ಒಂದು ಉದಾರ ಧೋರಣೆ ಸರ್ವಜ್ಞನಲ್ಲಿದೆ. ವಚನಕಾರರು ಮೂಲತಃ ಒಂದು ನೂತನ ಮತಧರ್ಮ ಪ್ರವರ್ತನೆಯ ಉದ್ದೇಶದಿಂದ ಬದ್ಧರಾಗಿದ್ದರೆ, ಸರ್ವಜ್ಞ ತಾನು ಅಂಥ ಯಾವ ಧರ್ಮಪ್ರಸಾರದ ಉದ್ದೇಶಕ್ಕೂ ಬದ್ಧನಾದವನಲ್ಲ. ಎಲ್ಲ ಬಗೆಯ ಹಂಗನ್ನೂ ಹರಿದುಕೊಂಡು ‘ಹಿಂಡನಗಲಿದ ಗಜದಂತೆ’ ತಿರುಗಿದ ಈತ ಯಾವ ಒಂದು ಮತಧರ್ಮವನ್ನೂ ಎತ್ತಿಹಿಡಿಯುವ ಸ್ವಭಾವದವನಲ್ಲ. ಅವನ ತ್ರಿಪದಿಗಳಿಂದ ಆತ ವೀರಶೈವ ಧರ‍್ಮದವನೆಂದು ಊಹಿಸಲು ಸಾಧ್ಯವಿದ್ದರೂ, ಆತ ವಾಸ್ತವವಾಗಿ ಅದನ್ನೂ ಮೀರಿ ಸಂಚರಿಸಿದವನು. ದೇವರು ಧರ್ಮ ಇತ್ಯಾದಿ ವಿಚಾರಗಳಲ್ಲಿ ಆತನ ಕಲ್ಪನೆ ತಕ್ಕಮಟ್ಟಿಗೆ ಜಾತ್ಯತೀತವಾದದ್ದು.[5] ಹೀಗಾಗಿ ಸರ್ವಜ್ಞನ ತ್ರಿಪದಿಗಳು ಎಲ್ಲರಿಗೂ ಪ್ರಿಯವಾಗಿವೆ. ಅವನದು ಮುಖ್ಯವಾಗಿ ಜೀವನ ಪ್ರೀತಿಯಿಂದ ಹುಟ್ಟಿದ ಮಾನವ ಧರ್ಮ. ಸುತ್ತಣ ಬದುಕನ್ನು ಹಸನುಮಾಡುವ ಸುಧಾರಕತನ ಅವನ ಅಭಿವ್ಯಕ್ತಿಯ ಮೂಲ ಪ್ರೇರಣೆ. ಇದರಿಂದಾಗಿ ಅವನ ಅಭಿವ್ಯಕ್ತಿ, ದೃಷ್ಟಾಂತ ಹಾಗೂ ಹೇಳಿಕೆಗಳ ರೂಪದ್ದಾಗುತ್ತದೆ. ಕಾವ್ಯದ ರಮ್ಯತೆಗಿಂತ ತತ್ತ್ವದ ವಾಚ್ಯವೇ ಪ್ರಧಾನವಾಗುತ್ತದೆ. ನಿದರ್ಶನಕ್ಕೆ:

ಆನೆ ನೀರಾಟದಲಿ ಮೀನಕಂಡಂಜುವುದೆ?
ಹೀನ ಮಾನವರ ದುರ್ನುಡಿಗೆ ತತ್ತ್ವದ
ಜ್ಞಾನಿಯಂಜುವನೆ ಸರ್ವಜ್ಞ.

ಎಂಬ ಈ ಪದ್ಯವನ್ನು ನೋಡೋಣ. ಇದರಲ್ಲಿ ನೀತಿಕಾವ್ಯದ ಸಮಸ್ತ ಲಕ್ಷಣಗಳನ್ನೂ ಹಾಗೂ ದೌರ್ಬಲ್ಯಗಳನ್ನೂ ಗುರುತಿಸಬಹುದು. ಮೊದಲ ಪಂಕ್ತಿ, ‘ಆನೆ ನೀರಾಟದಲಿ ಮೀನಕಂಡಂಜುವುದೆ’ ಎಂಬ ಪ್ರಶ್ನೆ, ಆಧುನಿಕ ಅರ್ಥದಲ್ಲಿ ನಿಜವಾಗಿಯೂ ಹರಳುಗೊಂಡು ಒಂದು ಕಾವ್ಯ ಪ್ರತಿಮೆ (Poetic Image)ಯಾಗಿದೆ. ಅದೊಂದು ಪಂಕ್ತಿ ಸಾಕು ಏನೆಲ್ಲವನ್ನೂ ಧ್ವನಿಸಲು. ಆದರೆ ಮುಂದಿನ ಎರಡು ಸಾಲುಗಳು, ಮೊದಲ ಪಂಕ್ತಿ ಧ್ವನಿಸುತ್ತಿದ್ದ ಅರ್ಥ ಪರಂಪರೆಯನ್ನು, ವಿವರಣಾತ್ಮಕವಾದ ಉಪದೇಶದ ಧಾಟಿಯಲ್ಲಿ ಒಂದು ಪರಿಮಿತಾರ್ಥಕ್ಕೆ ಇಳಿಸಿಬಿಡುತ್ತವೆ. ಇದಕ್ಕೆ ಕಾರಣ ಈ ಕವಿಯ ಕಾವ್ಯಧೋರಣೆಯೇ. ಸರ್ವಜ್ಞನಿಗೆ, ಕಾವ್ಯ, ಕಾವ್ಯ ರಚನೆಯ ಬಗ್ಗೆ ಇರುವ ಕಳಕಳಿಗಿಂತ, ಸುತ್ತಣ ಜನರ ಬದುಕನ್ನು ತಿದ್ದುವ ಉದ್ದೇಶವೇ ಪ್ರಧಾನವಾದದ್ದರಿಂದ, ‘ಕಾವ್ಯರೂಪ’ದ ಅಭಿವ್ಯಕ್ತಿ ತಾನು ಹೇಳುವ ನೀತಿಗೆ, ವಿವೇಕಕ್ಕೆ ಸಲೀಸಾಗಿ ಒದಗಿಬರುವ ಒಂದು ಮಾಧ್ಯಮ ಮಾತ್ರವಾಗುತ್ತದೆ. ಆದರೂ ವಿವರಣೆಯ ಭಾಗವನ್ನು ಹೊರತುಪಡಿಸಿ ನೋಡಿದರೆ, ಸರ್ವಜ್ಞನ ಉಕ್ತಿಗಳಲ್ಲಿ ನೆನಪಿನ ನಾಲಗೆಯ ಮೇಲೆ ರಸವೊಸರಿಸುವ ಎಷ್ಟೋ ಪಂಕ್ತಿಗಳು ದೊರಕುತ್ತವೆಯೆಂಬುದು ಸಮಾಧಾನದ ಸಂಗತಿ. ‘ಬಳ್ಳಿಗುರುಡರು ಕೂಡಿ ಹಳ್ಳವನು ಬಿದ್ದಂತೆ’ ಎಂಬ ಪಂಕ್ತಿಯಲ್ಲಿ ‘ಬಳ್ಳಿಗುರುಡ’ -ಎಂಬ ಮಾತನ್ನು ಗಮನಿಸಬೇಕು. ‘ಧನಕನಕ ಉಳ್ಳನಕ ದಿವಸಕರನಂತಕ್ಕು, ಧನಕನಕ ಹೋದ ಮರುದಿವಸ ಹಾಳೂರ ಶುನಕನಂತಕ್ಕು’ -ಎಂಬ ಎರಡು ಹೋಲಿಕೆಗಳ ವೈದೃಶ್ಯದ ಸ್ವಾರಸ್ಯ ಸೊಗಸಾದದ್ದು. ‘ಉಣ್ಣೆ ಕೆಚ್ಚಲೊಳಿರ್ದು ಉಣ್ಣದದು ನೊರೆವಾಲ’ ಎಂಬುದು, ಸಂಪತ್ತಿದ್ದೂ ಅದನ್ನು ಉಣ್ಣಲಾರದ ನಿರ್ಭಾಗ್ಯರನ್ನು ಕುರಿತ ಉಚಿತವಾದ ಟೀಕೆಯಾಗಿದೆ. ‘ಅನ್ನದೇವರ ಮುಂದೆ ಇನ್ನು ದೇವರು ಇಲ್ಲ’ ‘ಮನದಲ್ಲಿ ನೆನೆವಂಗೆ ಮನೆಯೇನು ಮಠವೇನು’ ‘ಅಡಿಯ ಮುಂದಿಡೆ ಸ್ವರ್ಗ ಅಡಿಯ ಹಿಂದಿಡೆ ನರಕ’ ‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ’ ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು,’ ‘ಊರಿಂಗೆ ದಾರಿಯನು ಯಾರು ತೋರಿದರೇನು’ ‘ಚಿತ್ತವಿಲ್ಲದೆ ಗುಡಿಯ ಸುತ್ತಿದರೆ ಫಲವೇನು?’ ‘ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ’ ಇಂಥ ಎಷ್ಟೊಂದು ಹೇಳಿಕೆಗಳು  ಸರ್ವಜ್ಞನ ತ್ರಿಪದಿಗಳ ತುಂಬ ಚದುರಿಕೊಂಡು ಮಿನುಗುತ್ತವೆ. ಈ ಸಂಕ್ಷಿಪ್ತಾಭಿವ್ಯಕ್ತಿ, ಅವುಗಳ ಹಿಂದಿರುವ ಲೋಕಾನುಭವ, ದಿನನಿತ್ಯದ ವ್ಯವಹಾರಕ್ಕೂ ಒದಗಿ ಬರುತ್ತವೆ. ಸುತ್ತಣ ಜನದ ಆಡುಮಾತಿಗೆ ಕಾವ್ಯಾಭಿವ್ಯಕ್ತಿಯ ತಿರುವುಕೊಟ್ಟು, ವ್ಯಂಗ್ಯ, ಕಟಕಿ, ವಿನೋದ, ಸಹಾನುಭೂತಿ ಇತ್ಯಾದಿ ವೈವಿಧ್ಯಗಳಲ್ಲಿ, ಜನರ ಬದುಕನ್ನು ತಿದ್ದುತ್ತಾ, ನಿಜವಾದ ಅರ್ಥದಲ್ಲಿ ಜನತೆಯ ಕವಿಯಾದ ಸರ್ವಜ್ಞ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತನ್ನ ವಿಶಿಷ್ಟ ವ್ಯಕ್ತಿತ್ವದಿಂದ ಕನ್ನಡ ಜನಮನದಲ್ಲಿ ಮನೆಮಾಡಿಕೊಂಡಿದ್ದಾನೆ.

ಅನುರಣನ (೧೯೭೮)

* * *


[1] ಡಾ. ಎಲ್. ಬಸವರಾಜು ಅವರು ಇತ್ತೀಚೆಗೆ (೧೯೭೨) ಸಂಪಾದಿಸಿ ಪ್ರಕಟಿಸಿರುವ ಸರ್ವಜ್ಞನ ವಚನ ಸಂಗ್ರಹದಲ್ಲಿ ಪ್ರತಿಯೊಂದು ತ್ರಿಪದಿಯಲ್ಲೂ, ‘ಸರ್ವಜ್ಞ’ ಎಂದಿರದೆ ‘ಪರಮಾರ್ಥ’ ಎಂದು ಕಾಣಿಸಿಕೊಳ್ಳುತ್ತದೆ. ಡಾ. ಬಸವರಾಜು ಅವರಿಗೆ ಆಧಾರವಾಗಿ ದೊರೆತ ಸರ್ವಜ್ಞನ ಅತ್ಯಂತ ಪ್ರಾಚೀನ ಪ್ರತಿ.ಕ್ರಿ.ಶ.೭-೩-೧೬೩೬ರಲ್ಲಿ, ವೆಂಕನೆಂಬುವನು ಮಾಡಿಕೊಂಡ ಓಲೆಯ ಪ್ರತಿಯಲ್ಲಿ ಪ್ರತಿಪದ್ಯದ ಅಂಕಿತ ‘ಸರ್ವಜ್ಞ’ ಎಂಬುದರ ಬದಲು ‘ಪರಮಾರ್ಥ’ ಎಂದಿರುವುದರಿಂದ, ಡಾ. ಬಸವರಾಜು ಅವರು “ಈ  ಕೃತಿಯ ಹೆಸರು “ಪರಮಾರ್ಥ”. ಇದನ್ನು ಬರೆದವನು (ದೇವಸಾಲೆ) ಸರ್ವಜ್ಞ  ಎಂಬ ತೀರ್ಮಾನಕ್ಕೆ ಬರುತ್ತಾರೆ. ಎಂದರೆ ದೊರೆತ ಒಂದು ಪ್ರತಿಯಲ್ಲಿ ಪ್ರತಿಮಾಡಿಕೊಂಡ ತೇದಿ ಇರುವುದರಿಂದ ಅದನ್ನು ಪ್ರಬಲ ಆಧಾರವಾಗಿ ತೆಗೆದುಕೊಂಡು, ಅದರಲ್ಲಿನ ‘ಪರಮಾರ್ಥ’ ಎಂಬ ಅಂಕಿತವೇ ಸಾಚಾ ಎಂದು ಡಾ. ಬಸವರಾಜು ಭಾವಿಸಿದ್ದಾರೆ. ಆದರೆ ತೇದಿಯನ್ನು ಕಾರಣಾಂತರದಿಂದ ಹಾಕದೆ ಇರುವ ಪ್ರತಿಗಳು, ತೇದಿಯನ್ನು ಹಾಕಿದ ಒಂದೇ ಒಂದು ಪ್ರತಿಗಿಂತ ಯಾಕೆ ಪ್ರಾಚೀನವಾಗಿರಲು ಸಾಧ್ಯವಿಲ್ಲ ಎಂಬುದನ್ನೂ, ಉಳಿದ ಎಲ್ಲಾ ಪ್ರತಿಗಳಲ್ಲೂ ಸರ್ವಜ್ಞ ಎಂದೇ ಅಂಕಿತವಾಗಿರುವಾಗ ಒಂದೇ ಒಂದು ಪ್ರತಿಯಲ್ಲಿರುವ ‘ಪರಮಾರ್ಥ’ ಎಂಬ ಅಂಕಿತವೇ ವಿಶ್ವಾಸಾರ್ಹವಾಗಲು ಹೇಗೆ ಸಾಧ್ಯ ಎಂಬುದನ್ನೂ, ಡಾ. ಬಸವರಾಜು ಅವರು ಯಾಕೆ ವಿಚಾರ ಮಾಡಲಿಲ್ಲವೆಂಬುದು ಆಶ್ಚರ್ಯದ ಸಂಗತಿಯಾಗಿದೆ.

[2] ಸರ್ವಜ್ಞನ ಜನನ ವೃತ್ತಾಂತವನ್ನು ಹೇಳುವ ಈ ತ್ರಿಪದಿಗಳು ಕೈಬರಹದ ಪ್ರತಿಗಳಲ್ಲಿ ಏಕರೂಪವಾಗಿ ಬಂದಿಲ್ಲ. ಹಾಗೆಯೆ ಸಂಪಾದನೆಯ ಸಿದ್ಧವೀರಣ್ಣದೇವರು ಸಂಗ್ರಹಿಸಿರುವ ‘ಸರ್ವಜ್ಞ ಮೂರ್ತಿಯ ಆಚರಣೆಯ ಸಂಬಂಧದ ತ್ರಿಪದಿ’ಗಳಲ್ಲಿ ಇಲ್ಲವೇ ಇಲ್ಲ. ಅಲ್ಲದೆ ಸರ್ವಜ್ಞನ ತ್ರಿಪದಿಗಳಲ್ಲಿ ಪ್ರಕ್ಷೇಪಗಳು ವಿಶೇಷವಾಗಿದ್ದು, ಈಗಲೂ ನಿಜವಾಗಿ ಸರ್ವಜ್ಞನವು ಎಷ್ಟೆಂಬುದನ್ನು ನಿರ್ಣಯಿಸುವುದು ದುಃಸಾಧ್ಯವಾಗಿರುವಾಗ ಅವನ ಹುಟ್ಟನ್ನು ಕುರಿತ ಹೇಳುವ ತ್ರಿಪದಿಗಳು ಮಾತ್ರ ಪ್ರಕ್ಷೇಪವಲ್ಲವೆಂದು ಹೇಳಲು ಆಧಾರವಿಲ್ಲ. ಅಲ್ಲದೆ, ತನ್ನ ತಂದೆ ತಾಯಂದಿರ ಪ್ರಣಯದ ಸಂಗತಿಯನ್ನು, ಮಗನಾದವನು ಹೇಳುವುದು, ಆದೂ ಆ ಸಂದರ್ಭವನ್ನು ಗಮನಿಸಿದರೆ, ತೀರಾ ಅಸಂಭವವೆನ್ನಿಸುತ್ತವೆ.

[3] Imagination is nothing but the exercise of memory: Stephen Spender.

[4] ಹರಿಹರನ ರಗಳೆಗಳನ್ನು ಓದಓದುತ್ತಾ ಯಾವ ಒಂದು ಬಗೆಯ ಏಕತಾನತೆ  ಅನುಭವಕ್ಕೆ ಬರುತ್ತದೋ, ಈತನ ತ್ರಿಪದಿಗಳನ್ನು ಒಂದೆ ಸಮನೆ ಓದತೊಡಗಿದರೆ ಅದೇ ಅನುಭವವಾಗುತ್ತದೆ. ತ್ರಿಪದಿಯ ತೀರಾ ಕಿರುಬಂಧದಲ್ಲಿ ಅಂಥ ಯಾವ ಛಂದಸ್ಸಿಗೆ ಸಂಬಂಧಿಸಿದ ಪ್ರಯೋಗವನ್ನೂ ನಡೆಯಿಸುವುದು ಸಾಧ್ಯವಾಗಿಲ್ಲ. ಆದರೆ ಆ ಕಿರುಬಂಧದಲ್ಲಿ ಜಾಣ್ಮೆಯ, ದೃಷ್ಟಾಂತದ, ಅಲಂಕಾರದ ಉಕ್ತಿ ಕೋದುಕೊಂಡು ಒಂದೊಂದು ತ್ರಿಪದಿಯೂ ಚುಟುಕಗಳಂತೆ ಸ್ವಾದುವಾಗುತ್ತದೆ.

[5] ಒಬ್ಬನಲ್ಲದೆ ಜಗಕೆ ಇಬ್ಬರುಂಟೇ ಮತ್ತೆ
ಒಬ್ಬ ಸರ್ವಜ್ಞ ಕರ್ತನೀ ಜಗಕೆಲ್ಲ
ಒಬ್ಬನೇ ದೈವ ಸರ್ವಜ್ಞ.
ನಡೆವುದೊಂದೇ ಭೂಮಿ, ಕುಡಿದುದೊಂದೇ ನೀರು
ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ
ನಡುವೆ ಎತ್ತಣದು ಸರ್ವಜ್ಞ.
ಊರೆಲ್ಲ ನೆಂಟರು, ಕೇರಿಯೆಲ್ಲವು ಬಳಗ
ಧಾರುಣಿಯು ಎಲ್ಲ ಕುಲದೈವವಾಗಿನ್ನು
ಯಾರನ್ನು ಬಿಡಲೊ ಸರ್ವಜ್ಞ.
ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ
ಜಾತಿ ವಿಜಾತಿಯೆನಬೇಡ, ದೇವನೊಲಿ
ದಾತನೇ ಜಾತ ಸರ್ವಜ್ಞ.