ಯಾವ ಕೈಯನೊ ಸೇರಿ ಕಸವ ಗುಡಿಸಿದ ಮೇಲೆ
ತಾನು ಗುಡಿಸಿದೆನೆಂಬ ಬಿಂಕವಿನಿತಿಲ್ಲದೆಯೆ
ಮೌನದಲಿ ಮಲಗಿಹುದೆಂತು ನೋಡಾ ಕಸಪೊರಕೆ !
ದಿನ ದಿನವು ಗುಡಿಸುವುದು ಕಸವನ್ನು ; ಮರು ಚಣಕೆ
ಎಲ್ಲಿಯೋ ಮಲಗುವುದು ! ಕಸಪೊರಕೆಯಲ್ಲದೆಯೆ
ಬೇರೆ ಗುರುವೇತಕ್ಕೆ ಮಾನವತೆಯನು ಮೇಲೆ
ಎತ್ತಿಕೊಂಡೊಯ್ವುದಕೆ ! ಈ ಜಗವೆಂಬುದೊಂದು
ಕಸ ತುಂಬಿದರಮನೆಯೊ ! ಯುಗ ಯುಗದಿ ಒಂದೊಂದು
ಹಿರಿಯ ಪೊರಕೆಯು ಬಂದು ಗುಡಿಸುವುದು ಈ ಮನೆಯ !
ಆ ಪೊರಕೆಯನೆ ನಾವು ‘ಅವತಾರ’ವೆನ್ನುತ್ತ
ಪೂಜಿಪೆವು ! ದಿನ ದಿನವು ಕಸ ಮತ್ತೆ ತುಂಬುತ್ತ
ಹೋಗುವುದೆ ಈ ಮನೆಯ ವೈಶಿಷ್ಟ್ಯ ! ಈ ಮನೆಯ
ಶುದ್ಧಿಕರಣವೆ ನಮ್ಮ ಕಸಪೊರಕೆಗಿರುವ ಗುರಿ,
ಕಸಪೊರಕೆಯೆನಗೆ ಗುರು ; ಮತ್ತೆನ್ನ ಬಾಳಗುರಿ !