ಪ್ರತಿ ಪಟ್ಟಣ, ನಗರ, ಮಹಾನಗರಗಳನ್ನು ಗಮನಿಸಿ.  ನದಿ ಇದ್ದರೆ ಅದರ ದಡದಲ್ಲಿ, ಕೆರೆಯ ಬದಿಯಲ್ಲಿ ಒಟ್ಟಾರೆ ನೀರಿರುವ ತಾಣದಲ್ಲಿ ತ್ಯಾಜ್ಯಗಳನ್ನೆಸೆಯುವುದು ಆಡಳಿತವು ನಡೆಸಿಕೊಂಡು ಬಂದ ಪದ್ಧತಿ.

ಮನೆತ್ಯಾಜ್ಯ, ಅಂಗಡಿಗಳಲ್ಲಿ ದೊರೆವ ತ್ಯಾಜ್ಯ, ಇಲಾಖೆ, ಸಂಸ್ಥೆಗಳ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ, ಕಾರ್ಖಾನೆ ತ್ಯಾಜ್ಯ, ಹೋಟೆಲ್ ತ್ಯಾಜ್ಯ ಹೀಗೆ ಇವುಗಳಲ್ಲಿ ಕೊಳೆಯುವ ಮತ್ತು ಅಪಾಯಕಾರಿಯಲ್ಲದ ರಟ್ಟು, ಹಗ್ಗ, ದಾರ, ಮರದತುಂಡು, ಹಳಸಿದ ಪದಾರ್ಥಗಳು, ಕಾರ್ಖಾನೆಗಳಿಂದ ಬರುವ ರಾಸಾಯನಿಕಗಳು, ಬಣ್ಣ, ಬ್ಯಾಟರಿ, ಪ್ಲಾಸ್ಟಿಕ್, ಆಸ್ಪತ್ರೆಗಳಿಂದ ಬರುವ ರೋಗಕಾರಕ ರಕ್ತ, ಕೀವುಭರಿತ ಹತ್ತಿ, ಡ್ರಿಪ್‌ಸೆಟ್, ಇಂಜೆಕ್ಷನ್ ಸೂಜಿ ಮುಂತಾದವುಗಳು ಮುಖ್ಯವಾದವುಗಳು.

ಜನಸಂಖ್ಯೆ ಹೆಚ್ಚಿದಂತೆ ನಗರಗಳು ಬೆಳೆಯುತ್ತಾ ಹೋಗುತ್ತಿವೆ.  ಆಹಾರದ ಅವಶ್ಯಕತೆ ಹೆಚ್ಚುತ್ತಾ ಹೋಗುತ್ತದೆ.  ಜೊತೆಯಲ್ಲಿ ತ್ಯಾಜ್ಯಗಳೂ ಬೆಳೆಯುತ್ತಾ ನಗರಾಡಳಿತಕ್ಕೆ ಸಮಸ್ಯೆಯಾಗುತ್ತದೆ.  ತೊಟ್ಟಿಯಲ್ಲಿ ಬಿದ್ದ ಕಸ ತ್ಯಾಜ್ಯ ಸರಿಯಾದ ನಿರ್ವಹಣೆಯಿಲ್ಲದೆ ಕೊಳಚೆಯನ್ನು ಸೃಷ್ಟಿಸುತ್ತದೆ.  ಇವುಗಳನ್ನು ಅಲ್ಲಿಯೇ ಬಿಟ್ಟರೆ ಮಾಲಿನ್ಯ ಪ್ರಾರಂಭ.  ನದಿ ಅಥವಾ ಕೆರೆ ದಂಡೆಗೋ, ಊರ ಹೊರವಲಯದ ತಗ್ಗಿನ ಪ್ರದೇಶದಲ್ಲೋ ಹಾಕಿದರೆ ಅಲ್ಲಿಯೇ ಕೊಳೆಯುತ್ತಾ ನಾರುತ್ತಾ, ರಾಸಾಯನಿಕಗಳನ್ನು ಸೂಸುತ್ತಾ ಮಾಲಿನ್ಯದ ಹೆಚ್ಚಳ.  ಮಣ್ಣಿನ ಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯ.

ಸುತ್ತಲಿನವರ ಆರೋಗ್ಯದಲ್ಲಿ ಏರುಪೇರು, ವಾತಾವರಣದಲ್ಲಿ ದುರ್ಗಂಧ.  ಮೊದಲಿಗೆ ಶಾಲಾಮಕ್ಕಳು ಬಲಿಪಶು.  ಬಾಲಕಾರ್ಮಿಕರು, ಕಸ ಹೆಕ್ಕುವ ಮಹಿಳೆಯರು, ಕಾರ್ಖಾನೆಗಳ ಕೆಲಸಗಾರರು, ತ್ಯಾಜ್ಯದ ಅಕ್ಕಪಕ್ಕ ವಾಸಿಸುವವರು ಇವರೇ ಬಲಿಪಶುಗಳು.  ತ್ಯಾಜ್ಯವು ನೀರಿನೊಂದಿಗೆ ಸೇರಿದರೆ ಆ ನೀರನ್ನು ಬಳಸುವವರಿಗೆಲ್ಲಾ ರೋಗ ಉಚಿತ.  ಹೀಗೆ ನಮ್ಮ ತ್ಯಾಜ್ಯಗಳೇ ನಮಗೆ ಶತ್ರು.

ವಿದೇಶಿ ಕೊಡುಗೆ

ನಾವು ಎಣ್ಣೆಪದಾರ್ಥಗಳಿಂದ ಹಿಡಿದು ರಾಕೆಟ್ ತಯಾರಿಸುವ ತಂತ್ರಜ್ಞಾನಗಳವರೆಗೆ ಆಮದು ಮಾಡಿಕೊಳ್ಳುತ್ತಿದ್ದೇವೆ.  ಅವುಗಳಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಸಿಗುವ ವಸ್ತುವೆಂದರೆ ತ್ಯಾಜ್ಯ.  ಅದು ಕಸದಿಂದ ರಸ ಎನ್ನುವ ಬಹುದೊಡ್ಡ ಯೋಜನೆಯಡಿಯಲ್ಲಿ ನಮ್ಮ ದೇಶಕ್ಕೆ ಬರುತ್ತಿದೆ.  ಬೃಹತ್ ರಫ್ತುದಾರ ಬ್ರಿಟನ್.  ಅಲ್ಲಿ ಒಂದು ಟನ್ ತ್ಯಾಜ್ಯ ಪುನರ್‌ಬಳಕೆ ಮಾಡಲು ಆಗುವ ಖರ್ಚು ೧೫೦೦ ಪೌಂಡ್.  ಆದರೆ ಭಾರತಕ್ಕೆ ೩೦ ಪೌಂಡ್ ವ್ಯಯಿಸಿ ಕಳುಹಿಸಲು ಸಾಧ್ಯ.  ಕೊಯಮತ್ತೂರಿನ ಸಮೀಪದಲ್ಲಿ ಅಮೇರಿಕಾದ ೧೮೦ ಟನ್ ತ್ಯಾಜ್ಯ, ವಿಶಾಖಪಟ್ಟಣ ಬಂದರಿನಲ್ಲಿ ಒಂದು ಹಡಗು ತುಂಬಾ ವರ್ಲ್ಡ್ ಟ್ರೇಡ್ ಸೆಂಟರ್‌ನ ತ್ಯಾಜ್ಯ, ಟುಟಿಕೋರನ್ ಬಂದರಿನಲ್ಲಿ ೧೦೦೦ ಟನ್ ತ್ಯಾಜ್ಯಗಳು ಬಂದು ನಿಂತಿವೆ.  ಜಪಾನಿನ ೩೦೦ ಟನ್ ತ್ಯಾಜ್ಯ ಹಾಗೂ ೫೦೦ ಟನ್ ರಾಸಾಯನಿಕಗಳು ಕೊಲ್ಕೊತ್ತಾ ತಲುಪಿದೆ.

ಈ ತ್ಯಾಜ್ಯಗಳಲ್ಲಿರುವುದು ಝಿಂಕ್ ಬೂದಿ, ಲೆಡ್ ಆಸಿಡ್ ಬ್ಯಾಟರಿ, ಪಿವಿಸಿಪ್ಲಾಸ್ಟಿಕ್, ಡಿಡಿಟಿ, ಕೆಪಾಸಿಟರ್ ಫ್ಯೂಯಿಡ್ ಮುಂತಾದ ಆ ದೇಶದಲ್ಲಿ ನಿಷೇಧಿಸಿದ ಭೀಕರ ರಾಸಾಯನಿಕಗಳು.

ಈ ರೀತಿ ತ್ಯಾಜ್ಯವನ್ನು ಚೆಲ್ಲಲು ೧೦೫ ದೇಶಗಳು ಸಿದ್ಧವಾಗಿವೆ.  ಅವೆಲ್ಲಾ ಅಪಾಯಕಾರಿ ಎಲೆಕ್ಟ್ರಾನಿಕ್ ತ್ಯಾಜ್ಯಗಳು, ವಿಕಿರಣ ತ್ಯಾಜ್ಯಗಳು ಹಾಗೂ ರಾಸಾಯನಿಕಗಳು.  ನ್ಯಾಷನಲ್ ಎನ್‌ವಿರಾನ್‌ಮೆಂಟ್ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ ಅಧ್ಯಯನ ಹೀಗಿದೆ.  ತ್ಯಾಜ್ಯ ಪ್ಲಾಸ್ಟಿಕ್ ಆಮದಿನಿಂದ ಹೆಚ್ಚಿದ ತ್ಯಾಜ್ಯದ ಪ್ರಮಾಣ ಶೇಕಡಾ ೭೦.  ಉಳಿದಿದ್ದು ರಾಸಾಯನಿಕಗಳು ಹಾಗೂ ವಿಕಿರಣಕಾರಕಗಳಾಗಿವೆ.  ಹೀಗೆ ಭಾರತದ ವಾರ್ಷಿಕ ಗಟ್ಟಿತ್ಯಾಜ್ಯದ ಉತ್ಪಾದನೆ ೫೦ ಟನ್. ಇವನ್ನೆಲ್ಲಾ ಆಳ ಭೂಮಿಯಲ್ಲಿ ಹೂಳಬೇಕು.  ನಮ್ಮಲ್ಲಿ ತ್ಯಾಜ್ಯ ವಿಂಗಡಣೆ ಪದ್ಧತಿಯೇ ಇಲ್ಲ.  ಸಾವಯವವನ್ನು ಮರುಬಳಕೆ, ರಾಸಾಯನಿಕ ಹಾಗೂ ವಿಷಕಾರಿಗಳನ್ನು ವಿಲೇವಾರಿ ಮಾಡುವಿಕೆ ಕುರಿತ ಕಾನೂನು ಇಲ್ಲ.   ಮಹಾನಗರಗಳ ತ್ಯಾಜ್ಯ ವಿಲೇವಾರಿ ಖರ್ಚು ವಾರ್ಷಿಕ ೩೦೦೦ ಕೋಟಿ ರೂಪಾಯಿಗಳು.  ಸಣ್ಣ ಪಟ್ಟಣದ ಖರ್ಚು ೫೦ ಕೋಟಿ.  ಇದರಲ್ಲಿ ಭ್ರಷ್ಟಾಚಾರದ ಪ್ರಮಾಣದಲ್ಲಿ ಖರ್ಚಾಗುವ ಕೋಟಿ ಎಷ್ಟೆಂದು ಊಹಿಸುವಿರಾ?

ಆಂತರಿಕ ನೀತಿಯನ್ನು ರೂಪಿಸುವ ಮೂಲಕ ಭ್ರಷ್ಟಾಚಾರ, ಮೋಸ, ವಂಚನೆಗಳನ್ನು ತಡೆಯುವ ಬಾಸೆಲ್ ಒಪ್ಪಂದವನ್ನು ಭಾರತ ಸರ್ಕಾರ ಇನ್ನೂ ಒಪ್ಪಿಲ್ಲ.  ಒಪ್ಪಿದರೆ ವೈಜ್ಞಾನಿಕವಾಗಿ ತ್ಯಾಜ್ಯದ ನಿರ್ವಹಣೆ ಮಾಡಬೇಕಾಗುತ್ತದೆ.  ಹೊರದೇಶದ ತ್ಯಾಜ್ಯಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ಇರದು.  ಆಯಾ ಪಟ್ಟಣದ ತ್ಯಾಜ್ಯಗಳಿಗೆ ಅವೇ ಪಟ್ಟಣಗಳು, ಆಡಳಿತ ಹಾಗೂ ನಾಗರಿಕರೇ ಹೊಣೆಯಾಗುತ್ತಾರೆ.

ಜೈವಿಕ ತ್ಯಾಜ್ಯದಿಂದ ಗೊಬ್ಬರ

ಕೊಳೆತ ಪದಾರ್ಥಗಳು, ಹಣ್ಣು ತರಕಾರಿಗಳು, ಮೀನಿನ ತ್ಯಾಜ್ಯ, ಕೋಳಿಫಾರಂ ತ್ಯಾಜ್ಯ, ಕಸಾಯಿಖಾನೆ ತ್ಯಾಜ್ಯ, ಹೊಟ್ಟು ಹೀಗೆ ಎಲ್ಲಾ ರೀರಿಯ ಸಾವಯವ ತ್ಯಾಜ್ಯಗಳು ಗೊಬ್ಬರ ತಯಾರಿಸಲು ಯೋಗ್ಯ.

  • ಜೈವಿಕ ತ್ಯಾಜ್ಯಗಳ ಸಂಗ್ರಹಣೆ
  • ಅಂತರ್ಜಲಕ್ಕೆ, ಮಣ್ಣಿಗೆ ಸೇರದಂತೆ ಸಿಮೆಂಟ್ ತೊಟ್ಟಿಗಳ ನಿರ್ಮಾಣ.  ಅಳತೆ ೧೦ ಅಡಿ ಅಗಲ ೬ ಅಡಿ ಎತ್ತರ ೧೦ ಅಡಿ ಉದ್ದ.
  • ಅದಕ್ಕೆ ಸುಮಾರು ಒಂದು ಕಿಲೋಗ್ರಾಂ ಸೂಕ್ಷ್ಮಜೀವಾಣು ಸಿಂಪಡಣೆ.  ಇದನ್ನು ಕೃಷಿ ಅಥವಾ ತೋಟಗಾರಿಕಾ ಇಲಾಖೆಯಿಂದ ಪಡೆದುಕೊಳ್ಳಬಹುದು.
  • ಒಂದು ಟನ್ ಜೈವಿಕ ತ್ಯಾಜ್ಯಕ್ಕೆ ಸೂಕ್ಷ್ಮ ಜೀವಾಣು ಕ್ರಿಯೆ ನಡೆಯಲು ೫೦೦ ಲೀಟರ್ ನೀರು ಬೇಕು.
  • ೪೦ ದಿನಗಳ ಕಾಲ ತೇವಾಂಶ ಆರದಂತೆ ನೋಡಿಕೊಳ್ಳಬೇಕು.  ಬಿಸಿಲು ತಾಗದಂತೆ ಮುಚ್ಚಬೇಕು.
  • ಐದು ದಿನಗಳಿಗೊಮ್ಮೆ ತ್ಯಾಜ್ಯವನ್ನು ಮೇಲೆ ಕೆಳಗೆ ಮಾಡಬೇಕು.  ಇದರಿಂದ ಸೂಕ್ಷ್ಮಜೀವಾಣುಕ್ರಿಯೆ ಹೆಚ್ಚುತ್ತದೆ.
  • ಬ್ಯಾಕ್ಟೀರಿಯಾಗಳ ಚಟುವಟಿಕೆಯಿಂದ ತ್ಯಾಜ್ಯದ ಉಷ್ಣಾಂಶ ೪೫ ಡಿಗ್ರಿ ಸೆಂಟಿಗ್ರೇಡ್‌ಗೆ ಏರುತ್ತದೆ.  ಹೀಗೆ ಹೆಚ್ಚುತ್ತಾ ೭೦ ಡಿಗ್ರಿ ಸೆಂಟಿಗ್ರೇಡ್ ತಲುಪುತ್ತದೆ.  ಆಗ ತ್ಯಾಜ್ಯದ ಬಣ್ಣ ಕಂದಾಗುತ್ತದೆ ಅಥವಾ ಕಪ್ಪಾಗುತ್ತದೆ.  ಇಲ್ಲಿಗೆ ಒಂದು ಚಕ್ರ ಮುಗಿದಂತೆ.
  • ಕಳಿತ ತ್ಯಾಜ್ಯವನ್ನು ವಿಭಾಗಿಸಿ ಒಣಗಿಸಬೇಕು.  ತೇವಾಂಶ ಕಡಿಮೆ ಮಾಡಬೇಕು.
  • ಚಿಕ್ಕ ರಂಧ್ರವಿರುವ [೩೫ಮಿಲಿಮೀಟರ್] ಸಾಣಿಗೆಯಲ್ಲಿ ಜಾಳಿಸಬೇಕು.  ಆಗ ಕಲ್ಲುಗಳು, ಗಾಜು, ಪ್ಲಾಸ್ಟಿಕ್, ರಬ್ಬರ್ ಮತ್ತು ಲೋಹಗಳು ಮೇಲೆ ಉಳಿಯುತ್ತವೆ.  ಆಮೇಲೆ ಎರಡು ಮಿಲಿಮೀಟರ್ ರಂಧ್ರದ ಸಾಣಿಗೆಯಲ್ಲಿ ಜಾಳಿಸಬೇಕು.  ಕೆಳಗೆ ಬಿದ್ದ ಗೊಬ್ಬರವನ್ನು ಗಿಡಗಳಿಗೆ ಬಳಸಬಹುದು.  ಮೇಲುಳಿದದ್ದನ್ನು ಡಿಸ್ಟೋನರ್ ಬಳಸಿ ಪುಡಿ ಮಾಡಿ ಗೊಬ್ಬರವಾಗಿ ಬಳಸಬಹುದು.

ಈ ಎಲ್ಲಾ ಪ್ರಕ್ರಿಯೆಗಳಿಗೂ ಮೊದಲು ತ್ಯಾಜ್ಯವನ್ನು ಸಂಶೋಧನಾ ಕೇಂದ್ರದಲ್ಲಿ ಪರಿಶೀಲಿಸಿಕೊಳ್ಳಬೇಕು.  ಕೆಲವು ತ್ಯಾಜ್ಯಗಳಲ್ಲಿ ಕೆಲವು ರೀತಿಯ ಸೂಕ್ಷ್ಮಾಣುಜೀವಿಗಳು ಮಾತ್ರ ಕಾರ್ಯಚಟುವಟಿಕೆ ನಿರ್ವಹಿಸಬಲ್ಲವು.  ಅಂತಹ ಸೂಕ್ಷ್ಮಾಣುಜೀವಿಗಳನ್ನೇ ಸಿಂಪಡಿಸಬೇಕಾದ್ದು ಅಗತ್ಯ.

ಅವುಗಳಲ್ಲಿ ಮೂರು ರೀತಿಯ ಸೂಕ್ಷ್ಮಾಣುಜೀವಿಗಳು ಮುಖ್ಯವಾದವುಗಳು.

೧. ಸೈಕ್ರೋಫೈಲ್ಸ್[Psychrophiles]: ಸೊನ್ನೆಡಿಗ್ರಿ ಸೆಂಟಿಗ್ರೇಡ್‌ನಲ್ಲೂ ಬೆಳೆಯುವ ಸೂಕ್ಷ್ಮಾಣುಜೀವಿ.  ೧೫ಡಿಗ್ರಿ ಸೆಂಟಿಗ್ರೇಡ್‌ನಿಂದ ೩೦ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಚೆನ್ನಾಗಿ ಬೆಳೆಯುತ್ತದೆ.

೨. ಮಿಸೋಫೈಲ್ಸ್[Mesophiles]: ಇವು ೨೦ಡಿಗ್ರಿ ಸೆಂಟಿಗ್ರೇಡ್‌ನಿಂದ ೪೫ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಬೆಳೆಯುವ ಜೀವಿಗಳು.  ತ್ಯಾಜ್ಯದ ಉಷ್ಣತೆಯನ್ನು ಹೆಚ್ದಿಸುತ್ತದೆ.

೩. ಥರ್ಮೋಫೈಲ್ಸ್[Thermophiles]: ಇವು ೪೫ಡಿಗ್ರಿ ಸೆಂಟಿಗ್ರೇಢ್ ಮೇಲಿನ ಉಷ್ಣತೆಯಲ್ಲಿಯೇ ಬೆಳೆಯುವುದು.  ತ್ಯಾಜ್ಯದ ಉಷ್ಣತೆಯನ್ನು ೭೫ಡಿಗ್ರಿ ಸೆಂಟಿಗ್ರೇಡ್‌ವರೆಗೆ ಹೆಚ್ಚಿಸುತ್ತದೆ.

ತ್ಯಾಜ್ಯ ಗೊಬ್ಬರದಲ್ಲಿರುವ ಪ್ರಮುಖ ಅಂಶಗಳು

ಗೊಬ್ಬರವು ಗಾಢಕಂದುಬಣ್ಣದ್ದಾಗಿರುತ್ತದೆ.  ದುರ್ವಾಸನೆ ಇರುವುದಿಲ್ಲ.  ಕಳೆ, ಬೀಜಗಳು, ಹೊರಪದಾರ್ಥಗಳಿಂದ ಮುಕ್ತವಾಗಿರುತ್ತದೆ.  ಕೊಟ್ಟಿಗೆ ಗೊಬ್ಬರಕ್ಕಿಂತ ಹೆಚ್ಚು ಬೇಗ ಮಣ್ಣಿಗೆ ಸೇರುವ ಗುಣ ಹೊಂದಿರುತ್ತದೆ.  ನೀರನ್ನು ಹಿಡಿದಿಡುವ ಸಾಮರ್ಥ್ಯ ಹಾಗೂ ಅಧಿಕ ಪೋಷಕಾಂಶಗಳಿಂದ ಕೂಡಿರುವುದನ್ನು ಸಂಶೋಧನಾ ಕೇಂದ್ರಗಳ ಪ್ರಯೋಗಗಳ ಮೂಲಕ ತಿಳಿಯಬಹುದು.

ಒಂದು ಗ್ರಾಂ ಗೊಬ್ಬರದಲ್ಲಿ;

ಒಟ್ಟು ಬ್ಯಾಕ್ಟೀರಿಯಾಗಳ ಸಂಖ್ಯೆ – ೧೦೧೦   ಜೊತೆಗೆ

ಆಕ್ಟಿನೋ ಮೈಸಿಟಸ್ – ೧೦೪

ಫಂಗೈ – ೧೦೬

ಅಝಟೋ ಬ್ಯಾಕ್ಟರ್ – ೧೦೬

ಬೇರು ಗಂಟು ಬ್ಯಾಕ್ಟೀರಿಯಾ – ೧೦೪

ಫಾಸ್ಪೇಟ್ ಕರಗಿಸುವ ಜೀವಿ – ೧೦೬

ನೈಟ್ರೋಬ್ಯಾಕ್ಟರ್ – ೧೦೨

ರಾಸಾಯನಿಕಗಳು;

ಗೊಬ್ಬರದ PH – ೬.೮ರಿಂದ ೭.೮

ಸಾವಯವ ವಸ್ತುಗಳು% – ೬.೮ರಿಂದ ೭.೮

ಸಾವಯವ ಇಂಗಾಲ% – ೧೧ರಿಂದ ೧೬

ಸಾರಜನಕ – ೧.೨ಯಿಂದ ೨.೨

ಲಭ್ಯ ಫಾಸ್ಪರಸ್% – ೧.೦ಯಿಂದ ೧.೫

ಒಟ್ಟು ಫಾಸ್ಪರಸ್% – ೨.೫ರಿಂದ ೩.೨

ಪೊಟ್ಯಾಷಿಯಂ% – ೧.೦ಯಿಂದ ೧.೫

ಕ್ಯಾಲ್ಸಿಯಂ% – ೨.೦ಯಿಂದ ೪.೦

ಮೆಗ್ನೀಷಿಯಂ% – ೦.೭೦ರಿಂದ ೦.೯೦

ಸಲ್ಫೇಟ್ಸ್% – ೦.೫೦ರಿಂದ ೦.೮೦

ಫೆರಸ್% – ೦.೫೦ರಿಂದ೧.೦೦

ಝಿಂಕ್  (ಪಿಪಿಎಂ) – ೩೦೦ರಿಂದ ೭೦೦

ಮ್ಯಾಂಗನೀಸ್(ಪಿಪಿಎಂ) – ೨೫೦ರಿಂದ ೭೪೦

ಕಾಪರ್ (ಪಿಪಿಎಂ) – ೨೦೦ರಿಂದ ೩೦೦

ಜೊತೆಗೆ ಕೋಬಾಲ್ಟ್, ಮಾಲಿಬ್ಡಿನಂ ಹಾಗೂ ಬೋರಾನ್‌ಗಳು ಲಭ್ಯ.

ಸಾವಯವ ಗೊಬ್ಬರದ ಅಗತ್ಯ

೧. ಭಾರತದ ಕೃಷಿ ಪರಿಸರವು ಮುಂಗಾರು ಮಳೆಯನ್ನೇ ಆಧರಿಸಿದೆ.  ಸುಮಾರು ೯೦ ದಿನಗಳು ಬರುವ ಮಳೆಯು ಉಳಿದೆಲ್ಲಾ ೨೭೫ ದಿನಗಳಿಗೆ ತೇವಾಂಶ ನೀಡುವುದು ಕಷ್ಟ.  ಸಾವಯವ ಗೊಬ್ಬರ ಬೇರಿನ ಬುಡದಲ್ಲಿ ತೇವಾಂಶ ಉಳಿಯುವಂತೆ ಮಾಡುತ್ತದೆ.

೨. ಈಗ ರಾಸಾಯನಿಕ ಗೊಬ್ಬರದ ಬಳಕೆಯ ಪ್ರಮಾಣ ಒಂದು ಹೆಕ್ಟೇರ್‌ಗೆ ಒಂದು ವರ್ಷಕ್ಕೆ ೬೬ ಕಿಲೋಗ್ರಾಂ.  ಇದನ್ನು ಕಡಿಮೆಗೊಳಿಸುವುದು ಅತ್ಯಗತ್ಯ.  ಅದಕ್ಕಾಗಿ ಪುರಸಭೆ ತ್ಯಾಜ್ಯವನ್ನು ಗೊಬ್ಬರವಾಗಿಸುವುದು ಅಗತ್ಯ.

೩. ಗುಣಮಟ್ಟದ ಉತ್ಪಾದನೆಗೆ ಸಾವಯವ ಗೊಬ್ಬರವೇ ಬೇಕು.  ಭಾರತದ ೧೫೦ ಪ್ರಮುಖ ಬೆಳೆಗಳಿಗೆ ಸಮಗ್ರ ಪೋಷಕಾಂಶಗಳನ್ನು ಒದಗಿಸುವುದು ಈ ರೀತಿಯ ಗೊಬ್ಬರ ಮಾತ್ರ.

೪. ಅತಿಯಾಗಿ ರಾಸಾಯನಿಕ ಗೊಬ್ಬರಗಳನ್ನು ನೀಡಿದ ಪ್ರಯುಕ್ತ ಉಂಟಾದ ಮಣ್ಣಿನಲ್ಲಿನ ಸೂಕ್ಷ್ಮಜೀವಿ ಅಸಮತೋಲನದ ನಿವಾರಣೆಗೆ ಸಾಯವಯ ಗೊಬ್ಬರ ಅತ್ಯಗತ್ಯ.

೫. ರಾಸಾಯನಿಕ ಗೊಬ್ಬರದಲ್ಲಿ N:P:Kಯು ೯:೩:೧ ಪ್ರಮಾಣದಲ್ಲಿದೆ.  ವಾಸ್ತವವಾಗಿ ಇದು ೪:೩:೧ ಪ್ರಮಾಣ ಇರಬೇಕಿತ್ತು.  ಈ ತಪ್ಪಿದ ಲೆಖ್ಖವೂ ಸಹ ಮಣ್ಣನ್ನು ವಿಷಯುಕ್ತಗೊಳಿಸುತ್ತಿದೆ.  ಹೀಗಾಗಿ ಸಾವಯವ ಗೊಬ್ಬರ ಹೆಚ್ಚು ಸೂಕ್ತ.

ಉಪಸಂಹಾರ

ಮಣ್ಣಿನ ಗುಣವರ್ಧನೆಗೆ ಈ ಪುರಸಭೆ ಜೈವಿಕ ತ್ಯಾಜ್ಯ ಗೊಬ್ಬರ ಹೆಚ್ಚು ಪೋಷಕಾಂಶಭರಿತವಾಗಿದೆ.  ಕಡಿಮೆ ಖರ್ಚು, ಕಡಿಮೆ ಬಂಡವಾಳ, ಸರ್ಕಾರದ ಅನುದಾನಗಳಿಂದ ನಿಭಾಯಿಸಬಹುದು.  ಎಲ್ಲಕ್ಕಿಂತ ಹೆಚ್ಚಾಗಿ ಪಟ್ಟಣದ ಪರಿಸರವನ್ನು, ಈ ಮೂಲಕ ನದಿ, ಕೆರೆ, ತಗ್ಗುಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯ.

ಮಾಹಿತಿ: ಎಸ್ ಶರ್ಮಾ