“ಸುಮಾರು ಮೂವತ್ತು ವರ್ಷಗಳಿಂದ ಆಕೆ ನನ್ನ ತಾಯಿಯಾಗಿ ನಡೆದುಕೊಂಡಿದ್ದಾಳೆ. ತಾಯಿ, ಪರಿಚಾರಿಕೆ, ಅಡಿಗೆಯವಳು, ಕೆಲಸದವಳು ಎಲ್ಲವೂ ಆಗಿದ್ದಾಳೆ. ನಮ್ಮ ಬಾಳು ಮೊದಲಾದಾಗಲೇ ನಾವು ಒಂದು ಏರ್ಪಾಡು ಮಾಡಿಕೊಂಡೆವು. ಗೌರವವೆಲ್ಲ ನನಗೆ, ದುಡಿತವೆಲ್ಲ ಆಕೆಗೆ. ಇಲ್ಲದಿದ್ದರೆ, ಇಬ್ಬರೂ ಸಮ ಎಂದು ಹೊರಟಿದ್ದರೆ, ನನಗೆ ಹೊಟ್ಟೆಗಿಲ್ಲದೆ ಬಟ್ಟೆಯಿಲ್ಲದೆ ಹೋಗುತ್ತಿತ್ತು.”

ಮಹಾತ್ಮ ಗಾಂಧಿಯವರು ಈ ಮಾತನ್ನು ಹೇಳಿದ್ದರು.

ಇಷ್ಟು ಮೆಚ್ಚಿಕೆಯ ಮಾತನ್ನು ಆಡಿದ್ದು ತಮ್ಮ ಹೆಂಡತಿ ಕಸ್ತೂರಿ ಬಾ ಅವರ ವಿಷಯ.

ಗಾಂಧೀಜಿಯಿಂದ ಇಂತಹ ಮಚ್ಚಿಕೆಯ ಮಾತನ್ನು ಪಡೆದ ಕಸ್ತೂರಿ ಬಾಗೆ, ಶಾಲೆಯ ವಿದ್ಯೆ ಇರಲೇ ಇಲ್ಲ ಎನ್ನಬೇಕು. ತಮ್ಮ ಮಾತೃಭಾಷೆ ಗುಜರಾತಿಯಲ್ಲಿ ಓದುವಷ್ಟು-ಬರೆಯುವಷ್ಟು ಕಲಿತಿದ್ದರು.

ಮದುವೆಯಾದಾಗ ಹದಿಮೂರು ವರ್ಷ. (ಗಂಡನಿಗೂ ಅಷ್ಟೇ ವಯಸ್ಸು!) ಮುಗ್ಧ ಹುಡುಗಿ ಗಂಡನ ಮನೆಗೆ ಬಂದಳು.

ಗಂಡ ಮೋಹನದಾಸ್ ಕರಮಚಂದ್ ಗಾಂಧೀ ಎಲ್ಲರಿಗೂ ’ಮಹಾತ್ಮ’ ಆದರು.

ಅವರ ಹೆಂಡತಿಯಾಗಿ ಅವರೊಡನೆ ಹೆಜ್ಜೆ ಹಾಕುವುದು ಮುಳ್ಳು ಹರಡಿದ ಹಾದಿಯಲ್ಲಿ ಹೆಜ್ಜೆ ಹಾಕಿದಂತೆ.

ಆ ದಾರಿಯಲ್ಲೆ ದಿಟ್ಟತನದಿಂದ ನಡೆದು ಕಸ್ತೂರಿ ಬಾ ಎಲ್ಲರಿಗೂ ’ಬಾ’ ಆದರು, ’ತಾಯಿ’ ಆದರು.

ಮದುವೆ-ಅತ್ತೆಯ ಮನೆ

ಗಾಂಧೀಜಿಯ ತಂದೆ ಕರಮಚಂದರು ರಾಜಕೋಟೆಯ ಆಸ್ಥಾನದಲ್ಲಿ ದಿವಾನರಾಗಿದ್ದರು. ಗೋಕುಲ ದಾಸ್ ಮಾಕಂಜಿ ಎಂಬವರು ಇವರ ಬಾಲ್ಯದ ಗೆಳೆಯರು. ಇವರು ಪೋರ್ ಬಂದರಲ್ಲಿ ವರ‍್ತಕರು, ಬಹು ಹಣವಂತರು. ಅವರ ಮಗಳೇ ಕಸ್ತೂರಿ ಬಾ. ಹುಟ್ಟಿದ್ದು ೧೮೬೯ರಲ್ಲಿ. ಈಕೆ ಚಿಕ್ಕಂದಿನಿಂದಲೂ ಧೈರ್ಯ, ಸಾಹಸ ಪ್ರವೃತ್ತಿಯುಳ್ಳವಳು. ಕರಮಚಂದರು ಈಕೆಯನ್ನು ತಮ್ಮ ಸೊಸೆಯನ್ನಾಗಿ ಮಾಡಿಕೊಳ್ಳಲು ಇಷ್ಟಪಟ್ಟರು. ಕರಮಚಂದರ ಮಗ ಮೋಹನದಾಸ್. ಆತನಿಗೂ ಕಸ್ತೂರಿಬಾಗೂ ೧೮೮೨ರಲ್ಲಿ ಮದುವೆಯಾಯಿತು.

ಮದುವೆ ಎಂದರೆ ಎಷ್ಟು ಹೊಣೆ ಎಂಬುದೇನೂ ಈ ಎಳೆಯ ಮಕ್ಕಳಿಗೆ ತಿಳಿಯದು. ಹೊಸ ಹೊಸ ಉಡುಪುಗಳು, ದೊಡ್ಡ ಮೆರವಣಿಗೆ, ಬ್ಯಾಂಡ್ ವಾದ್ಯಗಳ ಸಂಭ್ರಮ- ಇಷ್ಟೇ ಅವರಿಗೆ ತಿಳಿದಿದ್ದುದು. ಗಾಂಧೀಜಿಗೆ ಸಂತೋಷ-ತಮ್ಮ ಜೊತೆಗೆ ಆಟವಾಡಲು ಹೊಸ ಹುಡುಗಿಯೊಬ್ಬಳು ಸಿಕ್ಕಳು ಎಂದು.

ಅತ್ತೆಯ ಮನೆಗೆ ಬಂದಾಗ ಕಸ್ತೂರಿ ಬಾಗೆ ಮನೆಗೆಲಸ ಮಾಡುವುದನ್ನು ಬಿಟ್ಟರೆ ಏನೂ ಬರುತ್ತಿರಲಿಲ್ಲ. ಓದುಬರಹದ ಬಗ್ಗೆ ಹೆಚ್ಚಿನ ಆಸ್ಥೆಯೂ ಇರಲಿಲ್ಲ. ಅತ್ತೆಮಾವಂದಿರನ್ನು ಆಶ್ರಯಿಸಿಕೊಂಡಿದ್ದು, ಮನೆಗೆಲಸವನ್ನು ಒಪ್ಪ ಓರಣವಾಗಿ ಮಾಡುತ್ತಿದ್ದರು. ಹೆಂಡತಿಗೆ ಓದು ಕಲಿಸಬೇಕು ಎಂದು ಗಾಂಧೀಜಿ ಆಸೆ. ಅದಕ್ಕಾಗಿ ಬಹುವಾಗಿ ಪ್ರಯತ್ನಪಟ್ಟರು. ಆದರೆ ಕಸ್ತೂರಿ ಬಾಗೆ ತಮ್ಮ ಪತಿ ಉಪಾಧ್ಯಾಯರಂತೆ ಪಾಠ ಹೇಳಿಕೊಡುವುದು ಇಷ್ಟವಿರಲಿಲ್ಲ. ಗಾಂಧೀಜಿ ಮಾಡಿದ ಯತ್ನ ವಿಫಲವಾಯಿತು. ಕಸ್ತೂರಿ ಬಾ ತಮ್ಮ ಮಾತೃಭಾಷೆಯಾದ ಗುಜರಾತಿಯಲ್ಲಿ ಕಾಗದ ಬರೆಯುವಷ್ಟರ ಮಟ್ಟಿಗೆ ಕಲಿತರು. ಆಕೆ ಕಲಿತ ’ಓದು’ ಎಂದರೆ ಪತಿಯನ್ನು ನೆರಳಿನಂತೆ ಅನುಸರಿಸುವ ದೊಡ್ಡ ಗುಣ.

ಇಂಗ್ಲೆಂಡಿಗೆ ಹೋಗಿ ಬಂದರು ಗಾಂಧೀಜಿ

೧೮೮೮ರಲ್ಲಿ ಗಾಂಧೀಜಿ ಬ್ಯಾರಿಸ್ಟರ್ ಪರೀಕ್ಷೆಗೆ ಓದಲು ಲಂಡನ್‌ಗೆ ಹೊರಟರು. ಅವರ ತಂದೆತಾಯಿಗಳಿಗೂ ಬಂಧುವರ್ಗದವರಿಗೂ ಇದು ಇಷ್ಟವಿರಲಿಲ್ಲ.

ಹತ್ತೊಂಬತ್ತು ವರ್ಷದ ಕಸ್ತೂರಿ ಬಾಗೆ ಮನಸ್ಸಿನಲ್ಲಿ ಆತಂಕ. ಆಗಲೆ ಅವರಿಗೆ ನಾಲ್ಕು ತಿಂಗಳ ಮಗು. ಇಂಗ್ಲೆಂಡಿನಂತಹ ದೇಶದಲ್ಲಿ ತನ್ನ ಪತಿ ಒಬ್ಬನೇ ಹೇಗಿರುವನೋ? ಮದ್ಯ ಮಾಂಸಗಳ ಅಭ್ಯಾಸವಾದರೆ ತನ್ನ ಗತಿ ಏನು? ವಿದ್ಯೆಗಾಗಿ ಹಠ ಹಿಡಿದು ಸೀಮೆಗೆ ಹೊರಟಿದ್ದ ಗಂಡನನ್ನು ತಡೆಯಲು ಕಸ್ತೂರಿ ಬಾಗೆ ಹೆದರಿಕೆ. ಯಾರೊಂದಿಗೂ ಹೇಳಿಕೊಳ್ಳುವಂತಿಲ್ಲ. ನಾಲ್ಕು ತಿಂಗಳ ಮಗುವನ್ನು ಎದೆಗವಚಿಕೊಂಡು ಗಂಡನನ್ನು ಬೀಳ್ಕೊಟ್ಟರು. ಪತಿಯ ಶ್ರೇಯಸ್ಸಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡುವುದಷ್ಟೆ ಅವರ ಕೈಯಲ್ಲಿದ್ದದ್ದು.

ಗಂಡ ಹಿಂತಿರುಗಿ ಬರುವ ದಿನವನ್ನೇ ಕಾಯುತ್ತ ಕಾಲ ಸವೆಸಿದರು ಕಸ್ತೂರಿ ಬಾ. ಕೊನೆಗೊಮ್ಮೆ ಅಂತಹ ಸಂತಸದ ಸುದ್ದಿ ಇಂಗ್ಲೆಂಡಿನಿಂದ ಬಂದೇ ಬಂತು. ಗಾಂಧಿ ಬ್ಯಾರಿಸ್ಟರ್ ಪದವಿಯೊಂದಿಗೆ ಹಿಂತಿರುಗಲಿದ್ದಾರೆ!

ಗಾಂಧೀಜಿಯ ಸ್ವಾಗತಕ್ಕಾಗಿ ಆಕೆಯ ಮೈದುನ ಭಾರಿ ಏರ್ಪಾಡುಗಳನ್ನೆ ಮಾಡತೊಡಗಿದ. ಮನೆಯ ಹಳೆಯ ಛಾವಣಿಯ ಬದಲಾಗಿ ಹೊಸ ಛಾವಣಿ ಬಂತು. ಸುಣ್ಣಬಣ್ಣಗಳ ಸಾರಣೆ. ಮನೆಗೆ ಹೊಸ ಪೀಠೋಪಕರಣಗಳನ್ನೂ ವಸ್ತು ಸಾಮಾಗ್ರಿಗಳನ್ನೂ ತಂದರು. ರಾಜಕೋಟೆಯ ಗಾಂಧೀಜಿಯ ಮನೆ ಒಂದು ಪಾಶ್ಚಾತ್ಯ ಗೃಹವಾಗಿಬಿಟ್ಟಿತ್ತು. ಇಂಗ್ಲೆಂಡಿನಿಂದ ಗಾಂಧೀಜಿ ಬಂದ ನಂತರ ಹಲವಾರು ಚಿಕ್ಕಪುಟ್ಟ ಆಧುನಿಕ ಪರಿಕರಗಳೂ ಬಂದವು. ಊಟಕ್ಕೆ ಮೇಜು, ಕುರ್ಚಿ, ಚಮಚ, ಫೋರ್ಕುಗಳು, ಕಾಫಿ, ಟೀ, ಕೋಕೋ ಇಂತಹ ಪಾನೀಯಗಳು. ಪಾಶ್ಚಾತ್ಯ ಪದ್ಧತಿಯಂತೆ ಮನೆಯನ್ನು ಸಿಂಗರಿಸಲಾಗಿತ್ತು. ಮನೆಯಲ್ಲಿ ಏನೆಲ್ಲ ಬದಲಾವಣೆಗಳಾಗಿದ್ದರೂ ಕಸ್ತೂರಿ ಬಾ ಮಾತ್ರ ಬದಲಾಗಲಿಲ್ಲ. ಬ್ಯಾರಿಸ್ಟರರ ಹೆಂಡತಿ ಎಂದ ಮೇಲೆ ನಡವಳಿಕೆಯಲ್ಲಿ ತನ್ನ ಜೊತೆಗೆ ಸರಿಸಮವಾಗಿ ಪಾಶ್ಚಾತ್ಯ ಮಹಿಳೆಯಂತೆ ನಡೆದುಕೊಳ್ಳಲಿ ಎಂದು ಗಾಂಧಿಯ ಆಸೆ. ಆದರೆ ಕಸ್ತೂರಿ ಬಾಗೆ ಇದೊಂದು ತಿಳಿಯದು.

ಪತಿ ಹಿಂತಿರುಗಿ ಬರುತ್ತಾರೆ ಎಂದು ಆಸೆಯಿಂದ ನಿರೀಕ್ಷಿಸುತ್ತಿದ್ದರು ಕಸ್ತೂರಿ ಬಾ. ಕೊನೆಗಾದದ್ದು ನಿರಾಸೆ. ಪಾಶ್ಚಾತ್ಯರಂತೆ ಹಿಂತಿರುಗಿ ಬಂದ ಗಾಂಧೀ ಆಕೆಯನ್ನು ಸರಿಯಾಗಿ ಆದರಿಸಲಿಲ್ಲ. ಆಗಾಗ ಅವರಿಬ್ಬರ ನಡುವೆ ಅಸಮಾಧಾನವಾಗುತ್ತಿತ್ತು. ಕೊನೆಗೊಂದು ದಿನ ಗಾಂಧೀಜಿ ಆಕೆಯನ್ನು ತವರಮನೆಗೆ ಅಟ್ಟಿದರು. ಪುನಃ ತಮ್ಮ ತಪ್ಪು ತಿಳಿದುಕೊಂಡು ಆಕೆಯನ್ನು ಹಿಂದಕ್ಕೆ ಕರೆಸಿಕೊಂಡರು ಗಾಂಧಿ.

ಗಾಂಧೀಜಿ ಬ್ಯಾರಿಸ್ಟರ್ ಪದವೀಧರರಾಗಿ ಹಿಂತಿರುಗಿದ ನಂತರ ಲಕ್ಷಗಟ್ಟಲೆ ಹಣ ಸಂಪಾದಿಸಬಹುದೆಂದು ಎಲ್ಲ ಬ್ಯಾರಿಸ್ಟರರ ಹೆಂಡತಿಯರಂತೆ ಕಸ್ತೂರಿ ಬಾ ಸಹ ಕನಸು ಕಂಡಿದ್ದರು. ಆದರೆ ಸತ್ಯಸಂಧರಾದ ಗಾಂಧೀಜಿ ಹಾಗೆ ಹಣ ಸಂಪಾದಿಸುವುದು ಸಾಧ್ಯವೆ? ಇದು ಆಕೆಗಾಗ ಎರಡನೆ ನಿರಾಸೆ.

ಇಂತಹ ಪರಿಸ್ಥಿತಿಯಲ್ಲಿ ಗಾಂಧೀಜಿಗೆ ದಕ್ಷಿಣ ಆಫ್ರಿಕದಲ್ಲಿ  ಕೆಲಸ ಸಿಕ್ಕಿತು. ಮೊದಲು ಗಾಂಧೀಜಿಯವರೊಬ್ಬರೇ ಗೋದರು. ದಕ್ಷಿಣ ಆಫ್ರಿಕದಲ್ಲಿ ಬಿಳಿಯ ಜನರು ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಭಾರತೀಯರು ಮನುಷ್ಯರೇ ಅಲ್ಲ, ಪ್ರಾಣಿಗಳಿಗೂ ಕಡೆ ಎಂದು ಕಾಣುತ್ತಿದ್ದರು. ಅವರ ಕ್ರೌರ‍್ಯವನ್ನು ಕಂಡು ಗಾಂಧೀಜಿ ಮನಸ್ಸು ತುಂಬ ನೊಂದಿತು. ಅಲ್ಲಿಯ ಭಾರತೀಯರು ಪಡುತ್ತಿದ್ದ ಕಷ್ಟಗಳನ್ನು ಕಂಡು ಅವರಿಗಾಗಿ ಬಿಳಿಯರ ವಿರುದ್ಧ ಹೋರಾಡಲು ನಿಶ್ಚಯಿಸಿದರು. ದಕ್ಷಿಣ ಆಫ್ರಿಕಕ್ಕೆ ತಮ್ಮ ಹೆಂಡತಿ ಮಕ್ಕಳನ್ನು ಕರೆದೊಯ್ಯಲು ಭಾರತಕ್ಕೆ ಬಂದರು.

ಪೋರ್‌ಬಂದರ್ ಎಲ್ಲಿ? ದಕ್ಷಿಣ ಆಫ್ರಿಕ ಎಲ್ಲಿ? ಬೇರೆಯ ದೇಶಕ್ಕೆ ಸಮುದ್ರಪ್ರಯಾಣ ಮಾಡುವುದೆಂದರೆ ಕಸ್ತೂರಿ ಬಾಗೆ ಹೆದರಿಕೆ. ಜೊತೆಗೆ ಸಮುದ್ರಯಾನವೆಂದರೆ ಸಂಪ್ರದಾಯಸ್ಥರು ಮೂಗು ಮುರಿಯುತ್ತಿದ್ದ ಕಾಲವದು. ಆದರೆ ಗಂಡನಿದ್ದ ಕಡೆ ಹೆಂಡತಿ ಇರಬೇಕು. ಹಡಗಿನ ಮೊದಲನೆ ತರಗತಿಯಲ್ಲಿ ಗಂಡ, ಮಕ್ಕಳೊಡನೆ ಹೊರಟ ಕಸ್ತೂರಿ ಬಾ ತಾಯ್ನಾಡು ದೂರವಾದಂತೆ ಕಣ್ಣೀರು ಒರೆಸಿಕೊಳ್ಳತೊಡಗಿದರು. ಹೊಸ ದೇಶದಲ್ಲಿ ಜನರು ಹೇಗೋ ಏನೋ? ಎಂತಹವರೋ? ಅವರೊಂದಿಗೆ ತಾನು ಹೇಗೆ ನಡೆದುಕೊಳ್ಳಬೇಕೋ?- ಹೀಗೆ ಆಕೆಯನ್ನು ಬಗೆಬಗೆಯ ಯೋಚನೆಗಳು ಮುತ್ತಿದ್ದವು. ಆದರೆ ಅವರ ಮಡಿಲಲ್ಲಿ ಕುಳಿತಿದ್ದ ಮಕ್ಕಳು ಮಾತ್ರ ಹೊಸ ಬಗೆಯ ಉಡುಗೆಯುಟ್ಟಿದ್ದ ತಮ್ಮ ತಾಯಿಯ ಕಡೆಗೆ ಕೌತುಕದಿಂದ ನೋಡುತ್ತಿದ್ದರು. ಏಕೆಂದರೆ ಇದುವರೆಗೆ ಕಸ್ತೂರಿ ಬಾ ಬನಿಯಾ (ಗುಜರಾತಿ ವೈಶ್ಯರು) ಸ್ತ್ರೀಯರಂತೆ ಸೀರೆಯುಡುತ್ತಿದ್ದರು. ಈಗ ಅಚ್ಚ ಪಾರಸಿ ಮಹಿಳೆಯಂತಿದ್ದ ತಮ್ಮ ತಾಯಿಯನ್ನು ಬೆರಗುಗಣ್ಣಗಳಿಂದ ನೋಡುತ್ತಿದ್ದ ತಮ್ಮ ಮುಗ್ಧ ಹಸುಳೆಗಳನ್ನು ನೋಡಿ ನಕ್ಕರು ಕಸ್ತೂರಿಬಾ. ಗಾಂಧೀಜಿ ’ಫ್ಯಾಷನ್’ನ ಹೆಸರಿನಲ್ಲಿ ಹೆಂಡತಿ ಮಕ್ಕಳಿಗೆ ಪಾರಸಿ ಉಡುಗೆಗಳನ್ನೆ ಬಲವಂತವಾಗಿ ತೊಡಿಸಿದ್ದರು.

ದಕ್ಷಿಣ ಆಫ್ರಿಕದ ಕಡೆಗೆ ಪ್ರಯಾಣ ಸಾಗುತ್ತಿರುವಂತೆ ದೊಡ್ಡ ಬಿರುಗಾಳಿ ಎದ್ದಿತು. ಸಮುದ್ರದ ಅಲೆಗಳು ಅತಿ ಎತ್ತರದಿಂದ ಅಪ್ಪಳಿಸತೊಡಿದವು. ಜೊತೆಗೆ ಮಳೆ ಧಾರಾಕಾರವಾಗಿ ಸುರಿಯಿತು.

“ಬಿರುಗಾಳಿ ಪ್ರಾರಂಭವಾಗಿದೆ. ಹೆದರಬೇಡಿ, ಭಗವಂತನನ್ನು ಸ್ಮರಿಸಿ” ಎಂದು ಕ್ಯಾಪ್ಟನ್ ಎಚ್ಚರಿಕೆ ಕೊಟ್ಟ.

ಎಲ್ಲರೂ ದೇವರ ಪ್ರಾರ್ಥನೆ ಮಾಡತೊಡಗಿದರು. ಮಕ್ಕಳನ್ನು ಎದೆಗವಚಿಕೊಂಡು ರಾಮಸ್ಮರಣೆ ಮಾಡುತ್ತ ಕುಳಿತರು ಕಸ್ತೂರಿ ಬಾ. “ಎಂತಹ ಅಪಶಕುನ! ಏನು ಗತಿ? ದೇಶ ಬಿಟ್ಟು ಬಂದುದಕ್ಕೆ ತಕ್ಕ ಶಾಸ್ತಿಯಾಯಿತು” ಎಂದು ಪರಿಪರಿಯಾಗಿ ಯೋಚನೆ ಅವರಿಗೆ. ಗಾಂಧೀಜಿ ಹೆಂಡತಿಗೆ ಧೈರ್ಯ ಹೇಳುತ್ತ ನಿರ್ಭಯವಾಗಿ ಕುಳಿತಿದ್ದರು. ಅಷ್ಟೆ ಅಲ್ಲ, ಪ್ರತಿಯೊಬ್ಬರ ಬಳಿಗೂ ಹೋಗಿ ಧೈರ್ಯ ಹೇಳುತ್ತಿದ್ದರು. ಹಡಗು ಎಡಕ್ಕೂ ಬಲಕ್ಕೂ ತುಯ್ದಾಡುತ್ತ ಚಲಿಸುತ್ತಿತ್ತು. ಕೊನೆಗೊಮ್ಮೆ ಚಲನವೂ ನಿಂತು ಭಯಂಕರ ಅಲೆಗಳ ಹೊಡೆತಕ್ಕೆ ಸಿಕ್ಕಿ ಅತ್ತಿತ್ತ ಅಲ್ಲಾಡಿತು. ಅನೇಕರು ಪ್ರಾಣದ ಮೇಲಿನ ಆಸೆ ತೊರೆದು ಕೂಗಿಕೊಳ್ಳಲು ಪ್ರಾರಂಭಿಸಿದರು. ಆದರೆ ಬಹಳ ಹೊತ್ತಿನ ಮೇಲೆ ಬಿರುಗಾಳಿಯ ರಭಸ ತಗ್ಗಿ ಹಡಗಿಗೆ ಅಪಾಯ ತಪ್ಪಿತು. ಹೀಗೆ ಚಂಡಮಾರುತದಿಂದ ಪಾರಾದ ನೌಕೆ ಡರ್ಬಾನ್ ಬಂದರು ತಲುಪಿದಾಗ ಇದಕ್ಕಿಂತ ದೊಡ್ಡ ಗಂಡಾಂತರ ಒಂದು ಕಾದಿತ್ತು.

ದಕ್ಷಿಣ ಆಫ್ರಿಕದಲ್ಲಿ ಭಾರತೀಯರಿಗೆ ಅನ್ಯಾಯವಾಗಿದೆ ಎಂದು ಗಾಂಧೀಜಿ ಲೇಖನಗಳನ್ನು ಬರೆದಿದ್ದರು. ಇದರಿಂದ ತಮಗೆ ಅಪಮಾನವಾಯಿತು ಎಂದು ಬಿಳಿಯರು ಅವರ ಮೇಲೆ ವಿಷ ಕಾರತೊಡಗಿದ್ದರು. ಗಾಂಧೀಜಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಬರುತ್ತಿದ್ದಾರೆಂಬ ವಿಷಯ ತಿಳಿದು ಅವರು ಆ ಹಡಗು ಬಂದರಿಗೆ ಬಾರದಂತೆ ವಿಶ್ವ ಪ್ರಯತ್ನ ಮಾಡಿದರು.

ಇಪ್ಪತ್ತಮೂರು ದಿನಗಳವರೆಗೆ ಆ ಹಡಗು ಸಮುದ್ರದಲ್ಲಿಯೇ ಇರುವಂತೆ ಮಾಡಿದರು. ಕೊನೆಗೆ ಹಡಗು ತೀರವನ್ನು ಸೇರಿದೊಡನೆ ವಿರೋಧಿಗಳು ಗಾಂಧೀಜಿಯ ಮೇಲೆ ಹಲ್ಲೆ ನಡೆಸಲು ಕಾದಿದ್ದರು. ಬಹು ಕಷ್ಟದಿಂದ ಕಸ್ತೂರಿ ಬಾ, ಅವರ ಮಕ್ಕಳು ರುಸ್ತಂಜೀ ಎಂಬ ಅವರ ಮಿತ್ರನ ಕಾರಿನಲ್ಲಿ ಅವರ ಮನೆಗೆ ತಲುಪಿದರು. ಗಾಂಧೀಜಿಯ ಪ್ರಾಣಕ್ಕೇ ಅಪಾಯವಾಗಿತ್ತು. ಅವರ ಸುತ್ತ ಗುಂಪು ಸೇರಿ ಅವರಿಗೆ ಕಲ್ಲು ಹೊಡೆದರು. ರುಸ್ತುಂಜಿಯ ಮನೆಯ ಸುತ್ತ ನೂರಾರು ಜನ ಗುಂಪು ಸೇರಿದರು. ಕತ್ತಲಾಗುತ್ತಿತ್ತು. ಜನ ’ಗಾಂಧೀಜಿಯನ್ನು ನಮಗೆ ಒಪ್ಪಿಸಿ’ ಎಂದು ಕೂಗಾಡುತ್ತಿದ್ದರು. ಪೊಲೀಸಿಗೂ ಅವರನ್ನು ತಡೆಹಿಡಿಯುವುದು ಅಸಾಧ್ಯವಾಯಿತು. ಕಡೆಗೆ ಗಾಂಧೀಜಿ ವೇಷ ಮರೆಸಿಕೊಂಡು ಪಾರಾಗಬೇಕಾಯಿತು.

ಹುಟ್ಟಿದ ದೇಶ ಬಿಟ್ಟು ಸಮುದ್ರ ಪ್ರಯಾಣ ಮಾಡಿ ಸಾವಿರಾರು ಮೈಲಿಗಳಾಚೆ ಬಂದದ್ದೆ ಕಸ್ತೂರಿ ಬಾಗೆ ಕಳವಳವಾಗಿತ್ತು. ದಕ್ಷಿಣ ಆಫ್ರಿಕ ತಲುಪುತ್ತಲೇ ಈ ಸ್ವಾಗತ! ಇಷ್ಟೊಂದು ವಿರೋಧಿಗಳಿರುವ ಈ ವಿದೇಶದಲ್ಲಿ ತಮ್ಮ ಜೀವನ ಹೇಗೆ ಸುಸೂತ್ರವಾಗಿ ಸಾಗಬಲ್ಲದು? ಕಸ್ತೂರಿ ಬಾ ಹೆಜ್ಜೆಹೆಜ್ಜೆಗೆ ಸವಾಲು ಎದ್ದು ನಿಲ್ಲುವ ದಾರಿಯಲ್ಲಿ ಹೆಜ್ಜೆ ಇಟ್ಟಾಗಿತ್ತು. ಭಾರತದಲ್ಲಿನ ಗಾಂಧೀಜಿಗೂ ದಕ್ಷಿಣ ಆಫ್ರಿಕದಲ್ಲಿನ ಈಗಿನ ಗಾಂಧೀಗೂ ಇರುವ ವ್ಯತ್ಯಾಸ ಆಕೆಗೆ ಅರ್ಥವಾಗತೊಡಗಿತ್ತು. ಗಾಂಧೀಜಿಗೆ ಈಗ ಸತ್ಯಪಾಲನೆಯೊಂದಲ್ಲದೆ ಬೇರೆಯ ಉತ್ತಮ ಆದರ್ಶಗಳೆಷ್ಟೋ ಇದ್ದವು. ’ನಾನು, ನನ್ನದು’ ಎಂಬ ಸ್ವಾರ್ಥವಿರಲಿಲ್ಲ. ಕುಲ ಮತ ಭೇದ ಮಾಯವಾಗಿತ್ತು. ಒಂದು ಮಾತಿನಲ್ಲಿ ಹೇಳುವುದಾದರೆ ಗಾಂಧಿ ’ಮಹಾತ್ಮ’ರಾಗಿ ರೂಪುಗೊಳ್ಳುತ್ತಿದ್ದ ಕಾಲವದು. ಅವರು ಮತ್ತೆ ಮತ್ತೆ ಮಾಡಿದ ಅಗ್ನಿಪ್ರವೇಶದಲ್ಲಿ ಜೊತೆಗೆ ಹೆಜ್ಜೆ ಇಟ್ಟರು ಕಸ್ತೂರಿ ಬಾ. ಗಾಂಧೀಜಿಯವರ ಜೀವನದೊಂದಿಗೆ ಕಸ್ತೂರಿ ಬಾರವರ ಜೀವನ ಸಹ ಬದಲಾಯಿಸಿತು. ಕಸ್ತೂರಿ ಬಾ ’ಮಹಾತ್ಮ’ರಿಗೆ ತಕ್ಕ ಹೆಂಡತಿಯಾಗಿ ದೇಶದ ತಾಯಿಯಾಗಿ ಗಾಂಧೀಜಿಯ ಆದರ್ಶಗಳನ್ನು ಆಚರಣೆಗೆ ತರುವ ಅರ್ಧಾಂಗಿಯಾದರು.

ನನಗೂ ಅವಳನ್ನು ಬಿಡುವುದು ಸಾಧ್ಯವಿರಲಿಲ್ಲ’

ಗಾಂಧೀಜಿ ಡರ್ಬಾನಿನಲ್ಲಿ ವಕೀಲರಾಗಿದ್ದರು. ಅವರ ಕಾರ್ಯಾಲಯದಲ್ಲಿ ಹಲವಾರು ಜಾತಿಗಳ ಗುಮಾಸ್ತರಿದ್ದರು. ಅವರೆಲ್ಲರನ್ನೂ ಗಾಂಧೀಜಿ ಸಮಾನವಾಗಿ ನೋಡಿ ಕೊಳ್ಳುತ್ತಿದ್ದರು. ಗಾಂಧೀಜಿ ಇದ್ದ ಮನೆ ಪಾಶ್ಚಾತ್ಯ ರೀತಿಯದು. ಮೂತ್ರ ವಿಸರ್ಜನೆಗಾಗಿ ಬೇರೆ ಬೇರೆ ಪಾತ್ರೆಗಳನ್ನಿಡಲಾಗಿತ್ತು. ಅವರವರ ಪಾತ್ರೆಯನ್ನು ಅವರೇ ಸ್ವಚ್ಛಗೊಳಿಸಬೇಕಿತ್ತು.

ಒಮ್ಮೆ ಗಾಂಧೀಜಿಯ ಬಳಿ ಹರಿಜನ ಕ್ರೈಸ್ತನೊಬ್ಬ ಹೊಸತಾಗಿ ಸೇರಿದ. ಆತನಿಗೆ ಪಾತ್ರೆಯನ್ನು ಸ್ವಚ್ಛಗೊಳಸಬೇಕೆಂದು ತಿಳಿಯದು. ತನ್ನ ಪಾತ್ರೆಯನ್ನು ಹಾಗೆ ಇಟ್ಟುಬಿಟ್ಟಿದ್ದ. ಆಗ ಈ ಕೆಲಸ ಕಸ್ತೂರಿ ಬಾ ಮಾಡಬೇಕಾಯಿತು. ಹರಿಜನ ಕ್ರೈಸ್ತನೆಂದು ತಿಳಿದ ಕೂಡಲೇ ಆಕೆಗೆ ಅಸಹ್ಯವೆನಿಸಿತು. ಆದರೆ ಆ ಕೆಲಸ ತಾವು ಮಾಡದಿದ್ದರೆ ಗಾಂಧೀಜಿ ಸ್ವತಃ ತಾವೇ ಮಾಡಿ ಬಿಡುತ್ತಿದ್ದರು. ಕಸ್ತೂರಿ ಬಾಗೆ ಇದೊಂದು ದೊಡ್ಡ ಸಮಸ್ಯೆಯಾಯಿತು.

ಕಣ್ಣೀರು ಸುರಿಸುತ್ತ ಮುಖ ಕೆಂಪಗೆ ಮಾಡಿಕೊಂಡು ಆ ಪಾತ್ರೆ ಹಿಡಿದು ಮಹಡಿ ಇಳಿಯುತ್ತಿದ್ದರು ಕಸ್ತೂರಿ ಬಾ. ಗಾಂಧೀಜಿ ಹೆಂಡತಿಯನ್ನು ನೋಡಿದರು.

“ನೀನು ಹೀಗೆ ಅರೆಮನಸ್ಸಿನಿಂದ ಮಾಡುವುದನ್ನು ನೋಡಿ ಸಹಿಸಲಾರೆ!” ಎಂದು ಕೋಪದಿಂದ ಗರ್ಜಿಸಿದರು.

ಮೊದಲೇ ಅಳುತ್ತಿದ್ದ ಕಸ್ತೂರಿ ಬಾಗೆ ಈ ಮಾತು ಕೇಳಿ ಸಹಿಸಲಿಲ್ಲ.

“ಹಾಗಿದ್ದರೆ ನಿಮ್ಮ ಮನೆ ನಿಮಗೇ ಇರಲಿ. ನನ್ನನ್ನು ಕಳಿಸಿಬಿಡಿ” ಎಂದರು ಬಾ ಕೋಪದಿಂದ.

ಗಾಂಧೀಜಿ ಬೆಂಕಿಯಾದರು. “ಹೆಂಗಸಿಗೆ ಎಷ್ಟು ದುರಹಂಕಾರ!” ಎಂದು ದಡದಡನೆ ಹೆಂಡತಿಯ ರಟ್ಟೆ ಹಿಡಿದು ಆಕೆಯನ್ನು ಬೀದಿಗೆಳೆದು ತಂದರು.

ಕಸ್ತೂರಿ ಬಾ ಬಿಕ್ಕಿ ಬಿಕ್ಕಿ ಅತ್ತರು. ಗಂಡನಿಗೆ ಹೇಳಿದರು: “ನಿಮಗೇನು ನಾಚಿಕೆಯಾಗುವುದಿಲ್ಲವೆ? ಹೊರಟುಹೋಗು ಎಂದರೆ ಎಲ್ಲಿಗೆ ಹೋಗಲಿ? ಇಲ್ಲಿ ನನಗೆ ಯಾರಿದ್ದಾರೆ? ತಂದೆ ತಾಯಿ ಇಲ್ಲಿದ್ದಾರೆಯೇ? ನಿಮ್ಮ ಜೊತೆಗೆ ಇಲ್ಲಿಗೆ ಬಂದದ್ದು ಈ ಹೊಡೆತ, ಈ ಅವಮಾನ ಪಡುವುದಕ್ಕೋಸ್ಕರವೆ? ಇತರ ಜನ ನಮ್ಮನ್ನು ನೋಡಿದರೆ ನಗುವುದಿಲ್ಲವೆ? ದಾರಿ ಬಿಡಿ, ಒಳಕ್ಕೆ ಹೋಗೋಣ, ಬಾಗಿಲು ಮುಚ್ಚಿ.”

ಗಾಂಧೀಜಿಗೂ ನಾಚಿಕೆಯಾಯಿತು. ಗಂಭೀರವಾಗಿ ಬಾಗಿಲು ಮುಚ್ಚಿದರು.

ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ: “ನನ್ನನ್ನು ಬಿಟ್ಟು  ಹೋಗುವುದು ಕಸ್ತೂರಿ ಬಾಗೆ ಸಾಧ್ಯವಿರಲಿಲ್ಲ. ಅವಳನ್ನು ಬಿಡುವುದು ನನಗೂ ಸಾಧ್ಯವಿರಲಿಲಲ್ಲ.”

‘ದಾರಿ ಬಿಡಿ, ಒಳಕ್ಕೆ ಹೋಗೋಣ, ಬಾಗಿಲು ಮುಚ್ಚಿ’

ಹೀಗೆ ಮೊದಮೊದಲು ಕಸ್ತೂರಿ ಬಾಗೆ ಗಂಡನ ಆದರ್ಶಗಳನ್ನು ರೀತಿ ನೀತಿಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಯಿತು. ಜೊತೆಗೆ ಗಾಂಧೀಜಿ ಹಠ, ಕೋಪ. ಆದರೂ ಕ್ರಮೇಣ ಬಾ ಗಾಂಧೀಜಿಯ ಆದರ್ಶಗಳ ಹಿರಿಮೆಯನ್ನೂ ಗ್ರಹಿಸತೊಡಗಿದರು. ತಾವಾಗಿ ಪತಿಯ ರೀತಿನೀತಿಗಳನ್ನು ಅನುಸರಿಸತೊಡಗಿದರೇ ವಿನಾ ಭಯದಿಂದಲ್ಲ. ಹೀಗೆ ಪತಿಯ ಹೆಜ್ಜೆಯಲ್ಲಿ ನಡೆಯುವಾಗ ಆಕೆ ತಾನು ಎಂಬ ಭಾವನೆಯನ್ನೆ ಕರಗಿಸಿಬಿಟ್ಟರು.

ಗಾಂಧೀಜಿ ದಕ್ಷಿಣ ಆಫ್ರಿಕದಲ್ಲಿದ್ದಾಗ ತಮ್ಮ ಆದರ್ಶಗಳನ್ನು ಆಚರಣೆಗೆ ತರಲೆಂದು ’ಫೀನಿಕ್ಸ ಸೆಟಲ್‌ಮೆಂಟ್’ ಮತ್ತು ’ಟಾಲ್‌ಸ್ಟಾಯ್ ಫಾರಂ’ ಎಂಬ ಎರಡು ಆಶ್ರಮಗಳನ್ನು ಸ್ಥಾಪಿಸಿದರು. ನಗರದಿಂದ ದೂರದಲ್ಲಿದ್ದ ಆ ಆಶ್ರಮಗಳಲ್ಲಿ ತಮ್ಮ ಶಿಷ್ಯರೊಂದಿಗೆ ವಾಸಿಸುತ್ತಿದ್ದರು. ಈ ಆಶ್ರಮದಲ್ಲಿ ಸೇರುವವರಿಗೆ ಕೆಲವೊಂದು ಕಠಿಣ ನಿಯಮಗಳಿರುತ್ತಿದ್ದವು.

ಯಾವಾಗಲೂ ಸತ್ಯವನ್ನೇ ಹೇಳಬೇಕು.

ಯಾವ ಕೆಲಸವನ್ನಾದರೂ ಕೀಳುಕೆಲಸವೆಂದು ಭಾವಿಸದೆ ಶ್ರದ್ಧೆಯಿಂದ ಮಾಡಬೇಕು.

ತನಗಾಗಿ ಏನನ್ನೂ ಬಚ್ಚಿಟ್ಟುಕೊಳ್ಳಬಾರದು.

ಯಾರನ್ನಾಗಲಿ ಮುಟ್ಟಬಾರದು ಎಂಬ ಭಾವನೆ, ಅಸ್ಪೃಶ್ಯತೆ ಎನ್ನುವುದೇ ಇರಬಾರದು.

ಬಾಯಿಯ ಚಾಪಲ್ಯ ತಡೆದು ನಿರಾಡಂಬರದಿಂದ ಬಾಳಬೇಕು.

ಅನ್ಯಾಯಕ್ಕೆ ಪ್ರತಿಭಟನೆ

ಫೀನಿಕ್ಸ್ ಆಶ್ರಮದಲ್ಲಿದ್ದಾಗ ಒಂದು ವಿಚಿತ್ರ ಘಟನೆ ನಡೆಯಿತು.

ಅಲ್ಲಿನ ರಾಜ್ಯದ ನ್ಯಾಯಾಲಯ ಒಂದು ವಿಚಿತ್ರ ತೀರ್ಪನ್ನು ಕೊಟ್ಟಿತು. ಅದರ ಪ್ರಕಾರ ದಕ್ಷಿಣ ಆಫ್ರಿಕದಲ್ಲಿ ಮದುವೆಗಳ ರಿಜಿಸ್ಟ್ರಾರರ ಬಳಿ ’ರಿಜಿಸ್ಟರ್’ ಆದ ಮದುವೆಗಳು ಮಾತ್ರ ನ್ಯಾಬದ್ಧ; ಉಳಿದ ಯಾವ ಸಂಪ್ರದಾಯದ ಮದುವೆಗಳೂ ನ್ಯಾಯಬದ್ಧವಲ್ಲ. ಇದರ ಪ್ರಕಾರ ಹಿಂದುಗಳೂ, ಮುಸ್ಲಿಮರೂ ತಮ್ಮತಮ್ಮ ಸಂಪ್ರದಾಯಗಳ ಪ್ರಕಾರ ಮಾಡಿಕೊಂಡ ಮದುವೆಗಳು ಕಾನೂನಿನ ದೃಷ್ಟಿಯಲ್ಲಿ ಮದುವೆಗಳೇ ಅಲ್ಲ. ಕಾನೂನಿನ ದೃಷ್ಟಿಯಲ್ಲಿ ಅವರಿಗೆ ಗಂಡಹೆಂಡಿರು ಎಂಬ ಮರ್ಯಾದೆ ಇಲ್ಲದೆ ಹೋಯಿತು.

ಭಾರತೀಯರಿಗೆ ಸರ್ಕಾರದಿಂದುಂಟಾದ ಈ ಅನ್ಯಾಯ ಗಾಂಧೀಜಿಯ ಮನಸ್ಸಿಗೆ ತುಂಬ ನೋವನ್ನುಂಟುಮಾಡಿತು. ಇದನ್ನು ಪ್ರತಿಭಟಿಸುವುದು ಹೇಗೆ? ಯೋಚಿಸಿ ಯೋಚಿಸಿ ಅವರ ಮೆದುಳು ಬಿಸಿಯಾಯಿತು.

ಆಗ ಅಡಿಗೆಮನೆಯಲ್ಲಿ ಕಸ್ತೂರಿ ಬಾ ರೊಟ್ಟಿ ಮಾಡುತ್ತಿದ್ದರು. ಇಲ್ಲಿಗೆ ಬಂದು ಕುಳಿತುಕೊಳ್ಳುತ್ತ ಗಾಂಧಿ ಹೇಳಿದರು-

“ಈ ಸಮಾಚಾರ ಕೇಳಿದೆಯಾ?”

“ಯಾವ ಸಮಾಚಾರ?”

“ಓ…. ! ಇನ್ನೂ ನಿನಗೆ ಈ ವಿಷಯ ತಿಳಿದೇ ಇಲ್ಲ. ಪಾಪ! ಇನ್ನು ಮೇಲೆ ನೀನು ನನಗೆ ಹೆಂಡತಿಯಲ್ಲ.”

ಈ ಮಾತು ಕೇಳಿ ಕಸ್ತೂರಿ ಬಾಗೆ ನಗೆ ಬಂತು. ಅವರು ನಗುತ್ತ “ಹೀಗೆಂದು ನಿಮಗೆ ಯಾರು ಹೇಳಿದರು? ನೀವು ಹೊಸಹೊಸದಾಗಿ ಏನಾದರೊಂದನ್ನು ಕಂಡು ಹಿಡಿಯುತ್ತಲೇ ಇರುತ್ತೀರಿ.”

“ನಾನು ಕಂಡುಹಿಡಿದಿದ್ದಲ್ಲ. ಈ ಸರ್ಕಾರ ಕಂಡು ಹಿಡಿದಿದೆ. ಕ್ರೈಸ್ತ ಸಂಪ್ರದಾಯದಂತೆ ಮದುವೆಯಾದವರು ಮಾತ್ರ ಗಂಡ ಹೆಂಡಿರಂತೆ. ಉಳಿದವರು ಅಲ್ಲವಂತೆ!”

ಈ ಮಾತಿನಿಂದ ಬಾರವರ ಮುಖ ಕೆಂಪಗಾಯಿತು.

“ಈ ಮಾತುಗಳಿಗೆ ಅರ್ಥವಿಲ್ಲ.”

“ನಿಜ, ನಾನು ಸಹ ಅದನ್ನೇ ಹೇಳುತ್ತಿರುವೆ. ಆದರೆ ಸರ್ಕಾರ ಈ ಮಾತು ಒಪ್ಪಿಕೊಳ್ಳುವುದಿಲ್ಲವಲ್ಲ?”

“ಹಾಗಾದರೆ…… ಈಗ ನಾವೇನು ಮಾಡಬೇಕು?” ತವಕ ಬೆರೆತ ಪ್ರಶ್ನೆ ಬಾರವರಿಂದ ಬಂತು.

“ಅದನ್ನೇ ಯೋಚಿಸುತ್ತಿದ್ದೇನೆ. ಸತ್ಯಾಗ್ರಹ ತಪ್ಪುವ ಹಾಗಿಲ್ಲ.”

“ಹೌದು, ನಿಜ. ತಪ್ಪುವಂತಿಲ್ಲ” ಎಂದರು ಕಸ್ತೂರಿ ಬಾ ಪತಿಯ ಮಾತನ್ನೇ ಸಮರ್ಥಿಸುತ್ತ.

ಕಸ್ತೂರಿ ಬಾ – ಗಾಂಧಿಜಿ

“ಈ ಕಾನೂನಿನಿಂದ ಹೆಂಗಸರಿಗೂ, ಗಂಡಸರಿಗೂ ಸಮನಾದ ಸಮಸ್ಯೆ ಹುಟ್ಟಿದೆ. ಇದರಿಂದ ಇಬ್ಬರಿಗೂ ಸಮಾನ ನಷ್ಟ ಉಂಟಾಗುತ್ತದೆ. ಅದುದರಿಂದ ಇಬ್ಬರೂ ಸತ್ಯಾಗ್ರಹ ಮಾಡಬೇಕು.”

“ಹೆಂಗಸರೂ ಮಾಡಬೇಕೆ?” ಅಚ್ಚರಿಯಿಂದ ಕೇಳಿದರು ಬಾ.

“ಹೌದು, ಖಂಡಿತ ಮಾಡಲೇಬೇಕು”

“ಹಾಗಾದರೆ…. ಅವರನ್ನು ಸೆರೆಯಲ್ಲಿಡುವುದಿಲ್ಲವೇ?”

“ಯಾಕೆ ಇಡುವುದಿಲ್ಲ?”

“ಹೆಂಗಸರು ಸೆರೆಮನೆಗೆ ಹೋಗಬಹುದೆ?”

“ಏಕೆ ಹೋಗಬಾರದು? ಗಂಡ ಸೆರೆಮನೆಗೆ ಹೋಗುವುದಾದರೆ ಹೆಂಡತಿ ಸಹ ಅವನೊಡನೆ ಹೋಗಲೇಬೇಕು. ಪತಿವ್ರತೆಯರ ಕಥೆಗಳನ್ನು ನೀನು ಕೇಳಿಲ್ಲವೆ?” ಎಂದರು ಗಾಂಧಿ.

ಕಸ್ತೂರಿ ಬಾ ಯೋಚಿಸುತ್ತಿದ್ದರು. ಹೀಗೆ ಯೋಚಿಸಿ ಯೋಚಿಸಿ ಕೊನೆಗೆ ಆಕೆ ತಮಗೆ ಕೊಡುವ ಉತ್ತರವೇನೆಂದು ಗಾಂಧೀಜಿಗೆ ಗೊತ್ತಿತ್ತು.

ಗಾಂಧಿಜಿ ಹೆಂಡತಿಯನ್ನು ಪರೀಕ್ಷಿಸಲೆಂದು ಹಾಗೆವಾದಿಸಿದರೇ ಹೊರತು ಆಕೆಯೂ ಸತ್ಯಾಗ್ರಹದಲ್ಲಿ ಪಾಲುಗೊಳ್ಳಲೆಂದಲ್ಲ. ತಾವು ಹೇಳಿದರೆಂದು ಆಕೆ ಸತ್ಯಾಗ್ರಹದಲ್ಲಿ ಭಾಗವಹಿಸುವುದು ಅವರಿಗೆ ನಿಜವಾಗಿ ಇಷ್ಟವಿರಲಿಲ್ಲ. ತಾನು ಮಡುವ ಕೆಲಸದಲ್ಲಿ ಸಂಪೂರ್ಣ ವಿಶ್ವಾಸವಿಲ್ಲದ ವ್ಯಕ್ತಿ ಪ್ರಜಾಸೇವಕಿಯಾಗಲಾರಳು. ಒಂದು ವೇಳೆ ಸೆರೆಮನೆಯಲ್ಲಿ ಅಧಿಕಾರಿಗಳು ಕ್ರೂರವಾಗಿ ವರ್ತಿಸಿದಾಗ ಅಥವಾ ಸೆರೆಮನೆಯ ವಾಸಕ್ಕೆ ಹೊಂದಿಕೊಳ್ಳಲಾಗದೆ, ತಾನು ಅಲ್ಲಿಗೆ ಬಂದದ್ದು ತಪ್ಪಾಯಿತು ಎಂದು ಕಸ್ತೂರಿ ಬಾಗೆ ಅನ್ನಿಸಬಹುದು. ಆಕೆ ಅಲ್ಲಿಂದ ಹೊರಬರಲು ಇಚ್ಛಿಸಿದಲ್ಲಿ ತನ್ನ ಮಾನಮರ್ಯಾದೆಗಳು ಮಣ್ಣುಗೂಡಿದಂತೆಯೇ. ಗಾಂಧಿಜಿ ಇದೆಲ್ಲವನ್ನೂ ಯೋಚಿಸಿ ಟಾಲ್‌ಸ್ಟಾಯ್ ಫಾರಂನಲ್ಲಿದ್ದ ಇಬ್ಬರು ಸೋದರಿಯರಿಗೆ ಹೇಳಿಕಳುಹಿಸಿದರು. ಈ ವಿಷಯವನ್ನು ಅವರೊಂದಿಗೆ ಚರ್ಚೆ ಮಾಡುತ್ತಿದ್ದಾಗ ಕಸ್ತೂರಿ ಬಾ ಹೇಳಿದರು-

“ನೀವು ನನ್ನೊಂದಿಗೇಕೆ ಈ ವಿಷಯ ಹೇಳಲಿಲ್ಲ? ಸೆರೆಮನೆಗೆ ಬರುವ ಯೋಗ್ಯತೆ ನನಗಿಲ್ಲವೆ? ನಿಮ್ಮ ದಾರಿಯಲ್ಲಿ ನಡೆಯಲು ನನಗೂ ಅವಕಾಶ ಕೊಡಿ.”

ಗಾಂಧಿ ಈ ಮಾತಿಗೆ ಸಂತೋಷಪಟ್ಟರು. ಆದರೂ ಆಕೆಯ ಮನೋಸ್ಥೈರ್ಯವನ್ನು ಒರೆಗಲ್ಲಿಗೆ ಹಚ್ಚದೇ ಬಿಡಲಿಲ್ಲ.

“ನೀನು ಸಹ ಸೆರೆಮನೆಗೆ ಹೋಗಲು ಸಿದ್ಧಳಾಗಿರುವುದು ನನಗೆ ತುಂಬ ಸಂತೋಷವೇ. ಆದರೆ ನನಗಾಗಿ ನೀನು ಸೆರೆಮನೆಗೆ ಹೋಗಿ ಅಲ್ಲಿಯ ಕಷ್ಟಗಳನ್ನು ಸಹಿಸಲಾರದೆ ಕ್ಷಮಾಪಣೆ ಕೇಳಿಕೊಂಡು ಹೊರಬಂದರೆ ನಿನ್ನ ಮುಖವನ್ನು ನಾನು ಹೇಗೆ ನೋಡಲಿ?”

ಕಸ್ತೂರಿ ಬಾ ದೃಢ ನಿರ್ಧಾರದಿಂದ ಉತ್ತರವಿತ್ತರು: “ಸೆರೆಮನೆಯ ಕಷ್ಟಗಳಿಗೆ ಹೆದರಿ ನಾನು ಕ್ಷಮಾಪಣೆ ಕೇಳಿಕೊಂಡು ಬಂದರೆ ಪುನಃ ನಿಮ್ಮ ಕಣ್ಣಿಗೆ ಬೀಳಲಾರೆ.”

ಆಗ ಗಾಂಧೀಜಿಯ ಮನಸ್ಸು ಹಗುರವಾಯಿತು. ಕಸ್ತೂರಿ ಬಾ ತಮ್ಮ ಪತಿಯೊಂದಿಗೆ ಸತ್ಯಾಗ್ರಹ ಸಮರ ರಂಗಕ್ಕೆ ಧುಮುಕಿದರು.

ದಕ್ಷಿಣ ಆಫ್ರಿಕದ ಸೆರೆಮನೆ

ಸರ್ಕಾರ ಕಸ್ತೂರಿ ಬಾ ಮತ್ತು ಅವರ ಜೊತೆಯವರನ್ನು ಬಂಧಿಸಿ ಮಾರಿಟ್ಜ್‌ಬರ್ಗ್‌ಸೆರೆಮನೆಯಲ್ಲಿಟ್ಟಿತು.

ದಕ್ಷಿಣ ಆಫ್ರಿಕದಲ್ಲಿ ಆಗಿನ ದಿನಗಳಲ್ಲಿ ಸೆರೆಮನೆಯ ವಾಸವೆಂದರೆ ಭಯಂಕರ ಶಿಕ್ಷೆ. ಅಲ್ಲಿ ಕೊಡುತ್ತಿದ್ದ ಆಹಾರವನ್ನು ಬಾಯಿಗೆ ಹಾಕುವಂತಿರಲಿಲ್ಲ. ಅದಕ್ಕೆ ರುಚಿಯೇ ಇಲ್ಲ. ಹೊಟ್ಟೆಗೆ ಆಹಾರವಿಲ್ಲದೆ ಬಳಲಿದ ಸೆರೆಮನೆಯಾಳುಗಳಿಗೆ ಕಷ್ಟವಾದ, ಅಸಹ್ಯವಾಗುವಂತಹ ಕೆಲಸಗಳನ್ನು ಕೊಡುತ್ತಿದ್ದರು. ಅವರನ್ನು ಕೂಡಿ ಹಾಕುತ್ತಿದ್ದ ಕೊಠಡಿಯಲ್ಲಿ ತಕ್ಕಷ್ಟು ಬೆಳಕಿಲ್ಲ, ಗಾಳಿ ಇಲ್ಲ.

ಕಸ್ತೂರಿ ಬಾ ಬಹು ನೇಮನಿಷ್ಠೆಯವರು. ಸೆರೆಮನೆಯಲ್ಲಿ ಕೊಡುತ್ತಿದ್ದ ಆಹಾರವನ್ನು ತಿನ್ನಲು ಅವರು ಒಪ್ಪಲಿಲ್ಲ. ಹಣ್ಣುಗಳನ್ನು ಕೊಡಿ ಎಂದರು.

ಅಧಿಕಾರಿಗಳು “ಕೊಟ್ಟದ್ದನ್ನು ತಿನ್ನಬೇಕು” ಎಂದರು.

ಆದರೆ ಗಾಂಧೀಜಿಯ ಪತ್ನಿಯಾದ ಕಸ್ತೂರಿ ಬಾ ಇಷ್ಟಕ್ಕೆಲ್ಲ ಹೆದರುವರೆ? ಆಕೆ ಈ ಆಹಾರ ಮುಟ್ಟುವುದಿಲ್ಲ ಎಂದು ಸತ್ಯಾಗ್ರಹ ಹೂಡಿದರು. ನಾಲ್ಕು ದಿನಗಳು ಕಳೆದವು. ಆಕೆ ನಿರಾಹಾರ ದೀಕ್ಷೆ ಬಿಡಲಿಲ್ಲ. ಅಧಿಕಾರಿಗಳು ನಯವಾಗಿ ಹೇಳಿ ನೋಡಿದರು. ಬಾ ಮನಸ್ಸು ಬದಲಾಯಿಸಲಿಲ್ಲ. ಕಸ್ತೂರಿ ಬಾರ ನಿರಾಹಾರ ದೀಕ್ಷೆಯ ಸುದ್ದಿ ದಕ್ಷಿಣ ಆಫ್ರಿಕದ ತುಂಬ ಹರಡಿತು.

ಆ ದೇಶದಲ್ಲಿ ಭಾರತೀಯ ಮಹಿಳೆಯರಿಗೆ, ಅದರಲ್ಲೂ ಕಸ್ತೂರಿ ಬಾಗೆ, ಆಗುತ್ತಿರುವ ಹಿಂಸೆ-ತೊಂದರೆಗಳ ಬಗೆಗೆ ಭಾರತದಲ್ಲಿಯೂ ಪ್ರತಿಭಟನೆ ಆಯಿತು.

ಕಡೆಗೆ ದಕ್ಷಿಣ ಆಫ್ರಿಕಾದ ಸರ್ಕಾರ ಮಣಿಯಲ್ಲೆ ಬೇಕಾಯಿತು. ಬಾ ಅವರಿಗೆ ಕೆಲವು ಹಣ್ಣುಗಳನ್ನು ಕೊಡಲು ಒಪ್ಪಿತು. ಒಟ್ಟಿನಲ್ಲಿ ಉಪವಾದಿಂದಲೇ ಸೆರೆಮನೆಯ ವಾಸ ಕಳೆದರು ಬಾ.

ಸೆರೆಮನೆಯಿಂದ ಬಿಡುಗಡೆಯಾಗಿ ಬರುವ ಹೊತ್ತಿಗೆ ಕಸ್ತೂರಿ ಬಾ ಸಣ್ಣಗಾಗಿದ್ದರು. ನಿಶ್ಯಕ್ತರಾಗಿದ್ದರು. ಗಾಂಧೀಜಿ ದಿಗ್ಬ್ರಮೆಯಿಂದ “ನೀನು ಬಹಳ ಮುದುಕಿಯಂತೆ ಕಾಣುತ್ತಿರುವೆ” ಎಂದರು.

ಸೆರೆಮನೆಯ ವಾಸದಲ್ಲಿ ಕಸ್ತೂರಿ ಬಾರ ಮನಸ್ಸೂ ಪಕ್ವವಾಗಿತ್ತು.

’ನಾನು ತೀರ್ಮಾನ ಮಾಡಿ ಆಗಿದೆ’

ಗಾಂಧೀಜಿಯ ನಿಯಮಗಳಲ್ಲಿ ಶಾಕಾಹಾರವೂ ಒಂದಾಗಿತ್ತು. ಪತಿಯ ನೆರಳಿನಂತೆ ನಡೆಯುತ್ತಿದ್ದ ಕಸ್ತೂರಿ ಬಾಗೆ ಇದರಿಂದ ಸಂತೋಷವೇ ಆಗಿತ್ತು.

ದಕ್ಷಿಣ ಆಫ್ರಿಕದಲ್ಲಿದ್ದಾಗ ಒಮ್ಮೆ ಕಸ್ತೂರಿ ಬಾಗೆ ತುಂಬ ಖಾಯಿಲೆಯಾಯಿತು. ಆಕೆಯನ್ನು ಜೋಹನ್ಸ್‌ಬರ್ಗ್‌‌ನ ಆಸ್ಪತ್ರೆಗೆ ಸೇರಿಸಿದರು. ವೈದ್ಯರು ಕಸ್ತೂರಿ ಬಾಗೆ ದನಸ ಮಾಂಸದ ಕಷಾಯ (ಬೀಫ್‌ಟೀ) ಕೊಡದಿದ್ದರೆ ಆಕೆ ಬದುಕುವುದಿಲ್ಲ ಎಂದು ಹೇಳಿದರು. ಗಾಂಧೀಜಿಗೆ ಇದು ಇಷ್ಟವಿಲ್ಲದಿದ್ದರೂ ಹೆಂಡತಿಯ ಒಪ್ಪಿಗೆ ಕೇಳಿದರು. ಆಕೆ “ನನಗೆ ಖಾಯಿಲೆ ವಾಸಿಯಾಗದಿದ್ದರೂ ಚಿಂತೆಯಿಲ್ಲ. ನಾನು ದನದ ಮಾಂಸದ ಕಷಾಯ ಕುಡಿಯುವುದಿಲ್ಲ” ಎಂದರು.

ವೈದ್ಯರು ಆಕೆಗೆ ಚಿಕಿತ್ಸೆ ಮಾಡುವುದಿಲ್ಲ ಎಂದರು.

ಗಾಂಧೀಜಿ ಇದನ್ನು ಬಾ ಅವರಿಗೆ ತಿಳಿಸಿದರು. ಎಷ್ಟೋ ಜನ ಹಿಂದುಗಳು ಆರೋಗ್ಯಕ್ಕಾಗಿ ಮಾಂಸ ತಿಂದಿದ್ದಾರೆ ಎಂದರು. ಬಾ ಒಪ್ಪಲಿಲ್ಲ. “ಇಲ್ಲಿಂದ ನನ್ನನ್ನು ಕರೆದುಕೊಂಡು ಹೋಗಿ” ಎಂದರು.

ಸರಿ, ಇನ್ನು ಫೀನಿಕ್ಸ್‌ಆಶ್ರಮಕ್ಕೆ ಹಿಂತಿರುಗಬೇಕು.

ಮಳೆ ಸುರಿಯುತ್ತಿತ್ತು. ಗಾಂಧೀಜಿ ಕಸ್ತೂರಿ ಬಾ ಅವರನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋದರು. ಮೊದಲೇ ಶಸ್ತ್ರ ಚಿಕಿತ್ಸೆಯಿಂದ ಸೊರೆಗಿಹೋಗಿದ್ದ ಆಕೆ ತೀರ ನಿಶ್ಯಕ್ತರಾಗಿದ್ದರು. ಆಕೆಯನ್ನು ಎತ್ತಿಕೊಂಡು ಹೋಗಿ ರೈಲಿನಲ್ಲಿ ಕೂಡಿಸಿದಾಗ ಗಾಂಧೀಜಿಯ ಕಣ್ಣಿನಲ್ಲಿ ನೀರು ತುಂಬಿತು.

ಪತಿಯ ಕಣ್ಣೀರು ನೋಡಿ, ಅಶಕ್ತರಾಗಿದ್ದ ಬಾ ಮೊಗದ ಮೇಲೆ ನಗೆ ತಂದುಕೊಂಡು ಹೇಳಿದರು: “ನನಗೇನೂ ಆಗುವುದಿಲ್ಲ, ಹೆದರಬೇಡಿ.”

ಎರಡು ಮೂರು ದಿನಗಳಲ್ಲಿ ಆಶ್ರಮಕ್ಕೆ ಸ್ವಾಮಿಗಳೊಬ್ಬರು ಬಂದರು. ವೈದ್ಯರ ಮಾತನ್ನು ತೆಗೆದುಹಾಕಬಾರದಾಗಿತ್ತು ಎಂದು ಅವರ ಅಭಿಪ್ರಾಯ. ಗಾಂಧೀಜಿಗೂ ಬಾ ಅವರಿಗೆ ಹೇಳಿದರು, ಚರ್ಚೆ ಮಾಡಿದರು.

ಕಡೆಗೆ ಕಸ್ತೂರಿ ಬಾ ಎಂದರು: “ನೀನು ಏನೆ ಹೇಳಿ, ನನಗೆ ಮಾಂಸದ ಕಷಾಯ ಬೇಡ. ನಾನು ತೀರ್ಮಾನ ಮಾಡಿ ಆಗಿದೆ ಚರ್ಚೆ ನಿಲ್ಲಿಸಿ.”

ಕೊನೆಗೆ ಆಕೆಯ ಧೈರ್ಯವೇ ಗುಣಪಡಿಸಿತು. ತಮ್ಮ ಪತಿ ನಡೆಸಿದ ಜಲಚಿಕಿತ್ಸೆಯಿಂದ ಗುಣಮುಖರಾದರು.

’ಒಂದು ಸರ ಇಟ್ಟುಕೊಳ್ಳಲೆ?’

ಗಾಂಧಿ ದಂಪತಿಗಳು ದಕ್ಷಿಣ ಆಫ್ರಿಕದಿಂದ ಹಿಂತಿರುಗುವಾಗ ಅಲ್ಲಿನ ಭಾರತೀಯರು ಇವರಿಗೆ ಬಗೆಬಗೆಯ ಉಡುಗೊರೆಗಳನ್ನಿತ್ತರು ಇವರಿಗೆ ಬಗೆಬಗೆಯ ಉಡುಗೊರೆಗಳನ್ನಿತ್ತರು. ವಜ್ರದ ಒಡವೆಗಳು, ಚಿನ್ನದ ಆಭರಣಗಳು, ಉಂಗುರ, ಚೈನು! ಈ ಒಡವೆಗಳನ್ನು ನೋಡಿ ಸಹಜವಾಗಿ ಹಿಗ್ಗಿಹೋದರು ಕಸ್ತೂರಿ ಬಾ. ಅಂದು ರಾತ್ರಿ ಎಲ್ಲ ಗಾಂಧೀಜಿಗೆ ನಿದ್ರೆ ಇಲ್ಲ. ಸಾವಿರಾರು ರೂಪಾಯಿಗಳ ಒಡವೆಗಳನ್ನು ಇಟ್ಟುಕೊಳ್ಳುವುದೂ ಕಷ್ಟ, ಬಿಡುವುದೂ ಕಷ್ಟ.

ಕಡೆಗೆ ಅವನ್ನು ಒಂದು ನಿಧಿಯಾಗಿ ಮಾಡಿಬಿಡುವುದು ಎಂದು ನಿರ್ಧರಿಸಿದರು. ಕಸ್ತೂರಿ ಬಾಗೆ “ಈ ಉಡುಗೊರೆಗಳನ್ನು ಖಂಡಿತ ಮುಟ್ಟಬಾರದು. ಇವುಗಳನ್ನು ನಾವು ತೆಗೆದುಕೊಂಡರೆ ನಾವು ಮಾಡಿದ ಪ್ರಜಾಸೇವೆಗೆ ಬೆಲೆ ಕಟ್ಟಿದಂತಾಗುತ್ತದೆ” ಎಂದರು.

ಪತಿಯ ಮಾತು ಕೇಳಿ ಕಸ್ತೂರಿ ಬಾಗೆ ತುಂಬ ಕೋಪ ಹಾಗೂ ದುಃಖ ಉಂಟಾಯಿತು. ನಾಳೆ ಮನೆಗೆ ಸೊಸೆಬಂದಾಗ ಒಂದಾದರೂ ಒಡವೆ ಕೊಡಲಿಕ್ಕೆ ಬೇಡವೆ? ಎಂಬ ಯೋಚನೆ ಆಕೆಯದು. ಆದರೆ ಗಾಂಧೀಜಿಯ ಆದರ್ಶ ಬೇರೆ. ಅದರಲ್ಲಿ ಸ್ವಾರ್ಥಕ್ಕೆಡೆ ಇರಲಿಲ್ಲ. ಕಸ್ತೂರಿ ಬಾ ಗಾಂಧಿಜಿಯವರ ಜೊತೆಗೆ ವಾದ ಮಾಡಿದರು. ಕಡೆಗೆ ಕೇಳಿಯೇ ಬಿಟ್ಟರು, “ಹೋಗಲಿ, ಈ ಒಂದೇ ಒಂದು ಸರ (ಕಂಠಿಹಾರ) ಆದರೂ ಇಟ್ಟುಕೊಳ್ಳಲೆ? ಅದು ನನಗೆ ಕೊಟ್ಟಿದ್ದು. ಇಟ್ಟುಕೊಳ್ಳೋಣ.” ಮುಗ್ಧಳಾದ ತಮ್ಮ ಹೆಂಡತಿಯ ಈ ಚಿಕ್ಕ ಕೋರಿಕೆ ಕೇಳಿ ಗಾಂಧಿಜಿಯವರ ಮನ ಕರಗಿತು. ಆದರೂ ಯಾರಿಗಾಗಿಯೇ ಆಗಲಿ, ಅವರು ತಮ್ಮ ಆದರ್ಶಗಳನ್ನು ತ್ಯಜಿಸಲಾರರು. ಅವರು ಖಂಡಿತ ಆಗದು ಎಂದರು. ಕಸ್ತೂರಿ ಬಾ ತಮ್ಮ ಆಶೆಯನ್ನು ಹತ್ತಿಕ್ಕಿ ಒಡೆವೆಗಳನ್ನು ಹಿಂದಕ್ಕೆ ಬಾ ತಮ್ಮ ಆಶೆಯನ್ನು ಹತ್ತಿಕ್ಕಿ ಒಡವೆಗಳನ್ನು ಹಿಂದಕ್ಕೆ ಕೊಟ್ಟರು. ಹೀಗೆ ಕಸ್ತೂರಿ ಬಾ ಗಾಂಧಿಜಿಯವರ ಅರ್ಧಾಂಗಿಯಾಗಿ ಅಡಿಗಡಿಗೂ ಅಗ್ನಿ ಪರೀಕ್ಷೆಗೆ ಗುರಿಯಾಗುತ್ತಿದ್ದರು. ಈ ಎಲ್ಲ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸುತ್ತಿದ್ದರು ಬಾ.

ಗಾಂಧೀಜಿ ಹೆಂಡತಿಯ ಬಗ್ಗೆ ತಮ್ಮ ಆತ್ಮ ಕಥೆಯಲ್ಲಿ ಹೀಗೆ ಬರದಿದ್ದಾರೆ:

“ಸಹನೆಯುಳ್ಳ ಹೆಂಡತಿ ಯಾವಾಗಲೂ ಗೆಲ್ಲುವಳು. ಹೆಂಡತಿ ಗಂಡನಿಗೆ ದಾಸಿಯಲ್ಲ. ಆತನ ಸ್ನೇಹಿತಳು. ಅವನ ಜವಾಬ್ದಾರಿಗಳನ್ನೂ ಹಕ್ಕುಗಳನ್ನೂ ಸಮನಾಗಿ ಹಂಚಿಕೊಳ್ಳುವ ಸಹಚರಿ.”

ಮರಳಿ ಮನೆಗೆ

೧೯೧೪ನೇ ಇಸವಿ ಜುಲೈ ಹದಿನೆಂಟನೆ ತಾರೀಖು. ಗೋಖಲೆಯ ಕರೆಗೆ ಓಗೊಟ್ಟು ಗಾಂಧೀಜಿ ತಮ್ಮ ಸಂಸಾರದೊಂದಿಗೆ ಭಾರತಕ್ಕೆ ಹೊರಟರು. ಹಡಗು ಬಂದರು ಬಿಡುತ್ತಿದ್ದ ಹಾಗೆ ಕಸ್ತೂರಿ ಬಾರ ಮನಸ್ಸು ಭಾರವಾಯಿತು. ದಕ್ಷಿಣ ಆಫ್ರಿಕದ ಜನರು ತಮ್ಮ ಬಗೆಗೆ ತೋರಿದ ಆತ್ಮೀಯತೆ, ಪ್ರೀತಿ, ಗೌರವಗಳು ನೆನಪಿಗೆ ಬಂದು ಕಣ್ಣು ತೇವಗೊಂಡಿತು. ’ಮಹಾತ್ಮ’ನಾದ ತನ್ನ ಪ್ರಿಯ ಪುತ್ರನನ್ನು ಭಾರತ ಆನಂದದಿಂದ ಸ್ವಾಗತಿಸಿತು.

ಆಶ್ರಮದ ಜೀವನಾಡಿ

ಗಾಂಧೀಜಿ ಭಾರತಕ್ಕೆ ಹಿಂತಿರುಗಿದ ಮೇಲೆ ದಕ್ಷಿಣ ಆಫ್ರಿಕದಲ್ಲಿನ ಆಶ್ರಮಗಳಂತೆ ಉದಾತ್ತ ಆಶಯಗಳನ್ನೊಳಗೊಂಡ ಆಶ್ರಮವೊಂದನ್ನು ಸ್ಥಾಪಿಸಲು ನಿಶ್ಚಯಿಸಿದರು. ಅವರ ಕೋರಿಕೆಯಂತೆ ಸಬರ‍್ಮತೀ ತೀರದ ಆಶ್ರಮ ನಿರ್ಮಿತವಾಯಿತು. ಆಶ್ರಮದಲ್ಲಿ ಸೇರಲು ಬಯಸುವವರು ಆಶ್ರಮದ ನಿಯಮಗಳನ್ನು ಚಾಚೂ ತಪ್ಪದಂತೆ ಪಾಲಿಸಬೇಕಿತ್ತು. ಇವರಿಗೆ ಹೊರಗಿನ ಪ್ರಪಂಚದೊಂದಿಗೆ ಸಂಬಂಧವೇ ಇರುತ್ತಿರಲಿಲ್ಲ. ಆಶ್ರಮದಲ್ಲಿದ್ದವರಿಗೆ ಕಸ್ತೂರಿ ಬಾ ಹೆತ್ತ ತಾಯಿಗಿಂತ ಹೆಚ್ಚಾದ ವಾತ್ಸಲ್ಯ, ಮಮತೆಗಳನ್ನು ತೋರುವ ತಾಯಿಯಾಗಿದ್ದರು. ಹೊಸತಾಗಿ ಆಶ್ರಮಕ್ಕೆ ಸೇರುವವರಿಗೆ ಈ ನಿಯಮಗಳು ಬಹು ಕಠಿಣವೆನಿಸುತ್ತಿತ್ತು. ಕಸ್ತೂರಿ ಬಾ ಅವರಿಗೆ ಬೆಂಬಲವಾಗಿ ನಿಂತು ಬೇಸರ ಹೋಗಲಾಡಿಸುತ್ತಿದ್ದರು. ಆಶ್ರಮದ ಅಡಿಗೆಶಾಲೆಯ ಕೆಲಸಗಳನ್ನು ಕಸ್ತೂರಿ ಬಾ ನಿರ್ವಹಿಸುತ್ತಿದ್ದರು. ಕಸ್ತೂರಿ ಬಾ ಜೊತೆಗೆ ಕೆಲಸ ಮಾಡುವುದು ಸುಲಭವಾಗಿರಲಿಲ್ಲ. ಪ್ರತಿಯೊಂದು ಕೆಲಸವನ್ನೂ ಅಚ್ಚುಕಟ್ಟಾಗಿ ಹೊತ್ತಿಗೆ ಸರಿಯಾಗಿ ಮಾಡುವುದು, ಮರ್ಯಾದೆಯಿಂದ ನಡೆದುಕೊಳ್ಳುವುದು, ಪ್ರತಿಯೊಂದು ವಸ್ತುವನ್ನೂ ಶುಭ್ರವಾಗಿಡುವುದು-ಇಂತಹ ವಿಷಯಗಳಲ್ಲಿ ಆಕೆ ತುಂಬ ನಿಷ್ಠುರರಾಗಿರುತ್ತಿದ್ದರು.

ಆಕೆಗೆ ಬೇರೆಯವರಿಗೆ ಹೇಳಿ ಕೆಲಸ ಮಾಡುವುದರಲ್ಲಿದ್ದಂತೆಯೇ ತಾವೇ ಸ್ವತಃ ಕೆಲಸ ಮಾಡಿಸುವುದರಲ್ಲೂ ತುಂಬಾ ಶ್ರದ್ಧೆ ಇತ್ತು. ಅಡಿಗೆ ಮಾಡುವುದು, ಪಾತ್ರೆ ತೊಳೆಯುವುದು, ನೆಲ ಒರೆಸುವುದು ಮುಂತಾದ ಕೆಲಸಗಳನ್ನೂ ತುಂಬ ಚೊಕ್ಕಟವಾಗಿ ಮಾಡುತ್ತಿದ್ದರು. ಆಶ್ರಮಕ್ಕೆ ಬರುವವರನ್ನು ಸ್ವಾಗತಿಸಿ ಆದರಿಸುವ ಕೆಲಸ ಬಾರವರದಾಗಿತ್ತು. ಆಕೆ ಬಡಿಸವುದುರಲ್ಲಿ ಸಹ ವೈಶಿಷ್ಟ್ಯವಿತ್ತು. ಯಾರಾದರೂ ಸರಿಯಾಗಿ ಊಟ ಮಾಡದಿದ್ದಾಗ, “ಯಾಕೆ ಮೈಯಲ್ಲಿ ಚೆನ್ನಾಗಿಲ್ಲವೆ? ಸರಿಯಾಗಿ ಊಟ ಮಾಡು” ಎಂದು ತಾವೇ ಹತ್ತಿರ ಕುಳಿತು ತಿನ್ನಿಸುತ್ತಿದ್ದರು.

ಅನೇಕ ಸತ್ಯಾಗ್ರಹಗಳಲ್ಲಿ ಕಸ್ತೂರಿ ಬಾ ಭಾಗವಹಿಸಿದರೆ. ಗಾಂಧೀಜಿಯ ನೆರಳಾಗಿದ್ದರು

ಅತಿಥಿ ಮರ್ಯಾದೆಯನ್ನು ಸ್ವಲ್ಪವೂ ಲೋಪವಾಗದಂತೆ ನೋಡಿಕೊಳ್ಳುವುದಕ್ಕೆ ಬಾ ತುಂಬ ಶ್ರಮ ವಹಿಸುತ್ತಿದ್ದರು. ಒಮ್ಮೊಮ್ಮೆ ಅತಿಥಿಗಳು ಪೂರ್ವ ಸೂಚನೆಯಿಲ್ಲದೆ ಪ್ರತ್ಯಕ್ಷವಾಗುತ್ತಿದ್ದರು. ಆಗ ಕಸ್ತೂರಿ ಬಾ ಬೇಸರವಿಲ್ಲದೆ ಮೊದಲಿನಿಂದ ಅಡಿಗೆ ಆರಂಭಿಸಿ ಆತಿಥ್ಯ ನೀಡುತ್ತಿದ್ದರು. ಬಾರವರ ದೃಷ್ಟಿಯಲ್ಲಿ ದೊಡ್ಡವರು ಚಿಕ್ಕವರು ಎಂಬ ಭೇದವಿರಲಿಲ್ಲ. ನಮ್ಮವರು ಪರರು ಎಂಬ ತಾರತಮ್ಯವೇ ಆಕೆಗೆ ಗೊತ್ತಿಲ್ಲ. ಎಲ್ಲರನ್ನೂ ತಮ್ಮ ಸ್ವಂತ ಮಕ್ಕಳಂತೆ ಕಾಣುತ್ತಿದ್ದರು.

ದೇಶಸೇವೆಯಲ್ಲಿ ಬಾ

ಕಸ್ತೂರಿ ಬಾ ದೇಶಸೇವೆಯ ಕಾರ‍್ಯಕ್ರಮದಲ್ಲಿ ಮೊಟ್ಟಮೊದಲಿಗೆ ಪಾಲ್ಗೊಂಡಿದ್ದು ೧೯೧೩ರಲ್ಲಿ ದಕ್ಷಿಣ ಆಫ್ರಿಕದಲ್ಲಿದ್ದಾಗ, ಆಗಿನಿಂದ ಪಾಶ್ಚಾತ್ಯರು ದೇಶದಿಂದ ತೊಲಗಲಿ ಎಂದು ೧೯೪೨ರಲ್ಲಿ ನಡೆಸಿದ ’ಭಾರತದಿಂದ ತೊಲಗಿ’ ಎಂಬ ಸತ್ಯಾಗ್ರಹದವರೆಗೂ ಅನೇಕ ಸತ್ಯಾಗ್ರಹಗಳಲ್ಲಿ ಭಾಗವಹಿಸಿ ಹೋರಾಡಿದರು. “ನಮಗೆ ಕಸ್ತೂರಿ ಬಾರ ನಾಯಕತ್ವ ಬೇಕಾಗಿದೆ. ಆಕೆಯ ಧೈರ್ಯ ಪ್ರೋತ್ಸಾಹದ ನುಡಿಗಳು ನಮಗೆ ಬೆಂಬಲವಾಗಿರಲಿ” ಎಂದು ಎಲ್ಲಿ ಮಹಿಳಾ ಸತ್ಯಾಗ್ರಹಿಗಳು ಕರೆಯುತ್ತಿದ್ದರೋ ಅಲ್ಲಿಗೆ ಧಾವಿಸುತ್ತಿದ್ದರು ಬಾ.

೧೯೨೨ರಲ್ಲಿ ಗುಜರಾತಿನಲ್ಲಿ ಸತ್ಯಾಗ್ರಹ ನಡೆಯುತ್ತಿದ್ದಾಗ ಬೋರ‍್ಸಾದ್‌ನಲ್ಲಿ ಹೆಂಗಸರ ಮೇಲೆ ಲಾಠಿ ಪ್ರಹಾರ ನಡೆಯಿತೆಂದು ತಿಳಿದ ಕೂಡಲೇ ಕಸ್ತೂರಿ ಬಾ ಸೂರತ್ ನಿಂದ ಅಲ್ಲಿಗೆ ಹೊರಟರು. ಆಗ ಅವರು ತೀರ ಅಶಕ್ತರಾಗಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದುತ್ತಿದ್ದ ಸ್ತ್ರೀಯರ ಬಳಿಗೆ ಹೋಗಿ ಹಿತನುಡಿಗಳನ್ನಾಡಿ ಸಾಂತ್ವನ ಗೊಳಿಸುವವರೆಗೂ ಸಮಾಧಾನವಾಗಲಿಲ್ಲ. ಗಾಂಧಿಜಿ ಸೆರೆಮನೆಯಲ್ಲಿದ್ದಾಗ ಬಾರವರ ಜವಾಬ್ದಾರಿ ಇನ್ನಷ್ಟ ಹೆಚ್ಚುತ್ತಿತ್ತು. ಒಂದು ಕ್ಷಣವೂ ವಿಶ್ರಾಂತಿ ತೆಗೆದುಕೊಳ್ಳದೆ ದೇಶಸೇವೆಯ ಕಾರ‍್ಯಕ್ರಮಗಳಲ್ಲಿ ತೊಡಗಿರುತ್ತಿದ್ದರು.

ಗಾಂಧೀಜಿಯ ನೆರಳು

ಗಾಂಧೀಜಿ ಆಶಿಸಿದ್ದು ಕೇವಲ ಸ್ವರಾಜ್ಯ ಮಾತ್ರವಲ್ಲ. ಅದು ’ಸುರಾಜ್ಯ’ವಾಗಿರಬೇಕೆಂದು ಕನಸು ಕಂಡಿದ್ದರು. ಸುರಾಜ್ಯ ಸಿದ್ಧಿಸಬೇಕಾದರೆ ಕೆಲವು ಆದರ್ಶಗಳನ್ನು ಪಾಲಿಸಬೇಕೆಂದು ಹೇಳುತ್ತಿದ್ದರು. ’ಅಸ್ಪೃಶ್ಯತೆಯ ನಿರ್ಮೂಲನೆ’ ಅವರ ಧ್ಯೇಯಗಳಲ್ಲೊಂದಾಗಿತ್ತು. ಹರಿಜನ ಸೇವೆಗಾಗಿ ಕಂಕಣ ಬದ್ಧರಾದರು. ಕಸ್ತೂರಿ ಬಾಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ಹೆಣ್ಣು ಮಕ್ಕಳಿರಲಿಲ್ಲ. ಆಶ್ರಮದಲ್ಲಿದ್ದ ಹರಿಜನರ ಹುಡುಗಿ ಲಕ್ಷ್ಮಿಯನ್ನು ಬಾ ತಮ್ಮ ಮಗಳಂತೆ ಬೆಳೆಸಿ ’ದತ್ತು ಪುತ್ರಿ’ಯಾಗಿ ಸ್ವೀಕರಿಸಿದರು. ಹೀಗೆ ತಮ್ಮ ಪತಿಯ ಧ್ಯೇಯ-ಆಶಯಗಳನ್ನು ಆಚರಣೆಯಲ್ಲಿ ತೋರಿಸುತ್ತಿದ್ದರು.

ನೂಲುವುದು ಗಾಂಧೀಜಿ ಆಶಯಗಳಲ್ಲಿ ಇನ್ನೊಂದು. ’ರಾಟೆಯಿಲ್ಲದ ಜಾಗದಲ್ಲಿ ಕ್ಷಾಮ’ ಎನ್ನುತ್ತಿದ್ದರು ಗಾಂಧಿಜಿ. ನೂಲು ತೆಗೆಯುವುದು ಕಸ್ತೂರಿ ಬಾರವರ ದಿನಚರಿಗಳ ಲ್ಲೊಂದು. ಅವರು ಒಮ್ಮೆ ಸೆರೆಮನೆಯಲ್ಲಿ ತೀವ್ರ ಅನಾರೋಗ್ಯದಿಂದ ನರಳುವಾಗಲೂ ನೂಲುವುದನ್ನು ಬಿಡುತ್ತಿರಲಿಲ್ಲ. ’ವಿಶ್ರಾಂತಿ ತೆಗೆದುಕೊಳ್ಳಿ’ ಎಂದು ಯಾರಾದರೂ ಹೇಳಿದಾಗ ’ನಾನು ಓದು ಬರೆಯುವುದರಲ್ಲಿ ಹೇಗೂ ಅವರಿಗೆ ಸಹಾಯ ಮಾಡಲಾರೆ, ಕೊನೆಗೆ ನೂಲು ತೆಗೆಯುವುದರಲ್ಲಾದರೂ ಸಹಾಯಕಳಾಗಿರಗೊಡಿ’ ಎನ್ನುತ್ತಿದ್ದರು. ಮೊದಮೊದಲು ಕಸ್ತೂರಿ ಬಾ ಖಾದಿ ಸೀರೆಯುಡಲು ಇಷ್ಟಪಡುತ್ತಿರಲಿಲ್ಲ. ಕಾರಣ ತುಂಬ ಭಾರ ಎನ್ನುತ್ತಿದ್ದರು. ಅದಕ್ಕೆ ಗಾಂಧಿ “ಒಂಬತ್ತು ತಿಂಗಳವರೆಗೆ ಶಿಶುವನ್ನು ಹೊರುವ ತಾಯಂದಿರಿಗೆ ಈ ಖಾದಿ ಸೀರೆ ಭಾರವೆ? ನಮ್ಮ ದೇಶದ ವಿಮೋಚನೆಗಾಗಿ ಈ ಭಾರ ಹೊರಲಾಗದೆ?” ಎಂದಾಗ ಆಕೆ, “ಈ ಸೀರೆ ಒಗೆಯುವುದು ಕಷ್ಟ” ಎಂದರು. ಗಾಂಧೀಜಿ “ನಾನೇ ಒಗೆಯುತ್ತೇನೆ” ಎಂದರು. ಕ್ರಮೇಣ ಬಾ ಖಾದಿಯ ಬಗ್ಗೆ ಅಭಿಮಾನ ಬೆಳೆಸಿಕೊಂಡರು. ಪೆಟ್ಟು ತಗುಲಿದಾಗ ಕಟ್ಟುವುದಕ್ಕೆ ಸಹ ಖಾದಿಯನ್ನೇ ಉಪಯೋಗಿಸುತ್ತಿದ್ದರು. ಕಡೆಯಲ್ಲಿಯೂ ಬಾ ತಮ್ಮ ದೇಹಕ್ಕೆ ಖಾದಿ ಬಟ್ಟೆ ಹೊದಿಸಬೇಕೆಂದು ಅಪೇಕ್ಷಿಸಿದರು.

ಗಾಂಧೀಜಿಯವರ ಇನ್ನೊಂದು ಸಿದ್ಧಾಂತ-ಯಾರೇ ಆಗಲಿ ತಮಗೆ ಅವಶ್ಯಕವಾಗಿದ್ದನ್ನು ಮಾತ್ರ ಇಟ್ಟುಕೊಳ್ಳಬೇಕು, ಬೇರೆ ಏನನ್ನೂ ತನ್ನದನ್ನಾಗಿ ಮಾಡಿಕೊಳ್ಳಬಾರದು ಎಂಬುದು. ಗಂಡನ ಈ ಆಶಯವನ್ನು ಬಾ ಪೂರ್ಣ ಭಕ್ತಿ ವಿಶ್ವಾಸಗಳಿಂದ ಪಾಲಿಸಿದರು. ಆಕೆಯ ನಿರಾಡಂಬರವನ್ನು ಎಷ್ಟೋ ಸಲ ಗಾಂಧೀಜಿಯವರೇ ಮೆಚ್ಚಿಕೊಂಡಿದ್ದರು.

ಸೆರೆಮನೆಯಲ್ಲೆ ಸಾವು

೧೯೪೨ರಲ್ಲಿ ಸ್ವಾತಂತ್ರ‍್ಯಕ್ಕಾಗಿ ಮಹಾಸಂಗ್ರಾಮ ಪ್ರಾರಂಭವಾಯಿತು. ’ಭಾರತದಿಂದ ತೊಲಗಿ’ ಚಳವಳಿ ದೇಶದಲ್ಲಿ ಹಬ್ಬಿತು. ಸರ್ಕಾರ ಗಾಂಧೀಜಿಯವರನ್ನು ದಸ್ತಗಿರಿ ಮಾಡಿತು. ಆ ಹೊತ್ತಿಗೆ ಸರಿಯಾಗಿ ಗಾಂಧೀಜಿ ಒಂದು ಬಹಿರಂಗ ಸಭೆಯಲ್ಲಿ ಮಾತಾಡಬೇಕಿತ್ತು. ಅದನ್ನು ತಿಳಿದೇ ಸರ್ಕಾರ ಅವರನ್ನು ಮೊದಲೇ ಬಂಧಿಸಿತು. ಗಾಂಧೀಜಿ ಯವರ ಭಾಷಣಕ್ಕಾಗಿ ಜನ ಕಾತುರರಾಗಿ ಕಾಯುತ್ತಿದ್ದರು. ಜನರಿಗೆ ನಿರಾಶೆ ಮಾಡಲು ಇಷ್ಟವಿಲ್ಲದೆ ಕಸ್ತೂರಿ ಬಾ ತಾವು ಭಾಷಣ ಮಾಡುವುದಾಗಿ ಪ್ರಕಟಿಸಿದರು. ಪೊಲೀಸ್ ಅಧಿಕಾರಿಗಳು ಆಕೆಯ ಬಳಿ ಬಂದು ವಿನಯದಿಂದ “ಅಮ್ಮಾ! ನೀವು ತುಂಬ ನಿಶ್ಯಕ್ತರಾಗಿದ್ದೀರಿ. ಈ ವಯಸ್ಸಿನಲ್ಲಿ ನಿಮಗೆ ವಿಶ್ರಾಂತಿ ಅಗತ್ಯ. ದಯವಿಟ್ಟು ನೀವು ಆ ಸಭೆಗೆ ಹೋಗಬೇಡಿ” ಎಂದು ಕೇಳಿಕೊಂಡರು. ಆದರೆ ಬಾ ತಮ್ಮ ನಿರ್ಧಾರ ಬದಲಿಸಲಿಲ್ಲ. ಸರ್ಕಾರ ಅವರನ್ನು ಬಂಧಿಸಿತು. ವೃದ್ಧರೂ ನಿಶ್ಯಕ್ತರೂ ಆಗಿದ್ದ ಬಾ ಸೆರೆಮನೆಯ ಕಠಿಣ ಜೀವನವನ್ನು ತಡೆದುಕೊಳ್ಳದಾದರು. ತೀವ್ರ ಅನಾರೋಗ್ಯಕ್ಕೆ ಗುರಿಯಾದರು. ಪರಿಸ್ಥಿತಿ ವಿಷಮಿಸುತ್ತಿದೆ ಎಂದು ತಿಳಿದ ಸರ್ಕಾರ ಅವರನ್ನು ಗಾಂಧೀಜಿಯಿದ್ದ ಸೆರೆಮನೆಗೆ, ಆಗಾಖಾನರ ಅರಮನೆಗೆ ಬದಲಾಯಿಸಿತು. ಸೆರೆಮನೆಯ ವಾಸದಿಂದ ದಿನದಿನಕ್ಕೆ ಕಸ್ತೂರಿ ಬಾರ ಆರೋಗ್ಯ ಕ್ಷೀಣಿಸತೊಡಗಿತು.

೧೯೪೪ರ ಫೆಬ್ರವರಿ ೨೨ ರಂದು, ಮಹಾಶಿವರಾತ್ರಿ, ಬಾಗೆ ವಿಪರೀತ ನೀಶ್ಯಕ್ತಿ.

ಮಗ ದೇವದಾಸನನ್ನು ಹತ್ತಿರ ಕೂಡಿಸಿಕೊಂಡು ಬಾ ಹೇಳಿದರು:

“ಒಂದಲ್ಲ ಒಂದು ದಿನ ಸತ್ತೆ ಸಾಯಬೇಕು. ಈ ಹೊತ್ತೇ  ಹೋಗಲೇ?”

ಅನಂತರ ಮಗನ ಕೈ ಬಿಟ್ಟು ಮುಖ ತಿರುಗಿಸಿ ಕೊಂಡರು. ಅನಂತರ ಯಾರ ಸಹಾಯವೂ ಇಲ್ಲದೆ ಎದ್ದು ಕುಳಿತರು. ಎರಡು ಕೈಗಳನ್ನೂ ಸೇರಿಸಿ ಮುಗಿದರು. ತಲೆ ಬಗ್ಗಿಸಿಕೊಂಡು ರಾಮನಾಮ ಜಪಮಾಡಿದರು. ’ಭಗವಂತ! ಕೃಪೆ ಮಾಡು!’ ಎಂದು ಪ್ರಾರ್ಥಿಸಿದರು.

ಅಂದೇ ಅವರು ತೀರಿಕೊಂಡದ್ದು.

ವಿಮಾನದ ಮೂಲಕ ಪೆನ್ಸಿಲಿನ್ ಇಂಜೆಕ್ಷನ್ ತರಿಸಿ ಆ ಚುಚ್ಚುಮದ್ದನ್ನು ಕೊಡಿಸಲು ಅವರ ಮಗನಾದ ದೇವದಾಸ್ ಪ್ರಯತ್ನಿಸಿದ್ದರು. ಆದರೆ ಗಾಂಧೀಜಿ ಹೇಳಿದರು: “ಮರಣ ಶಯ್ಯೆಯ ಮೇಲಿರುವ ತಾಯಿಗೆ ಸೂಜಿಯಿಂದ ಚುಚ್ಚಿ ನೋಯಿಸುತ್ತೀಯಾ? ಈಗ ಯಾವ ಔಷಧಿಯೂ ಉಪಯೋಗವಿಲ್ಲ. ರಾಮನಾಮ ಸ್ಮರಣೆಯೇ ಸರಿ.”

ತಂದೆ ಮಗ ಮಾತನಾಡುತ್ತಿದ್ದ ಹಾಗೆ ಯಾರೋ ಬಂದು, ’ನಿಮ್ಮನ್ನು ಬಾ ಕರೆಯುತ್ತಾರೆ’ ಎಂದರು.

ರಾಮಧ್ಯಾನ ಪ್ರಾರಂಭವಾಯಿತು.

ಗಾಂಧಿ ಕಸ್ತೂರಿ ಬಾರ ಹತ್ತಿರ ಹೋದರು. ಆಕೆಯ ತಲೆಯನ್ನು ತಮ್ಮ ತೊಡೆಯ ಮೇಲಿರಿಸಿಕೊಂಡರು. ಅಲ್ಲಿದ್ದವರೆಲ್ಲ ರಾಮಭಜನೆ ಮಾಡುತ್ತ ಗೀತೆಯ ಶ್ಲೋಕಗಳನ್ನು ಪಠಿಸುತ್ತಿದ್ದರು. ಎಲ್ಲರ ಕಣ್ಣುಗಳಲ್ಲಿಯು ನೀರು.

ಏಳು ಗಂಟೆ ಮೂವತ್ತೈದು ನಿಮಿಷಕ್ಕೆ ಕಸ್ತೂರಿ ಬಾರ ಜೀವ ಜ್ಯೋತಿ ನಂದಿತು.

ಬಾರವರ ಕೊನೆಯ ಕೋರಿಕೆಯಂತೆ ಗಾಂಧೀಜಿ ಸ್ವತಃ ತಾವೇ ನೂಲಿನಿಂದ ಮಾಡಿದ ಖಾದಿ ಸೀರೆಯನ್ನು ಹೊದಿಸಿದರು. ಸೆರೆಮನೆಯಲ್ಲಿಯೇ ಅಂತ್ಯಕ್ರಿಯೆ ನಡೆಯಿತು.

೧೯೪೫ ಅಕ್ಟೋಬರ್ ಎರಡರಂದು ಸರೋಜಿನಿ ನಾಯ್ಡು ಭಾರತದ ಜನರ ಪರವಾಗಿ ಒಂದು ಲಕ್ಷ ರೂಪಾಯಿಗಳನ್ನು ’ಕಸ್ತೂರಿ ಬಾ ನಿಧಿ’ಗಾಗಿ ಗಾಂಧೀಜಿಗೆ ಅರ್ಪಿಸಿದರು. ಗಾಂಧೀಜಿ ’ಕಸ್ತೂರಿ ಬಾ ಸ್ಮಾರಕ ಸಂಸ್ಥೆ’ ಸ್ಥಾಪಿಸಿದರು.

ಧೀರ ಸತಿ

ಮಹಾಪುರುಷರ ಹೆಂಡತಿಯಾಗುವುದು, ಹತ್ತಿರದ ಅನುಯಾಯಿ ಆಗುವುದು ಸುಲಭವೇನಲ್ಲ. ಮತ್ತೆ ಮತ್ತೆ ಅಗ್ನಿಪರೀಕ್ಷೆಯನ್ನು ಎದುರಿಸಬೇಕು.

ಗಾಂಧೀಜಿಯಂತೂ ಸತ್ಯವ್ರತರು, ನಿಷ್ಠುರ ನಿಯಮದವರು.

ಬೇಕಾದದ್ದಲ್ಲದೆ ಏನನ್ನೂ ಇಟ್ಟುಕೊಳ್ಳಬಾರದು ಎಂದು ಅವರ ನಿಯಮ ಎಂದು ಕಂಡೆವಲ್ಲ? ಅವರ ಆಶ್ರಮದಲ್ಲಿ ಯಾರೂ, ’ನಾಳೆಗಿರಲಿ, ನಾಡಿದ್ದಿಗಿರಲಿ’ ಎಂದು ಏನನ್ನೂ ಸಂಗ್ರಹಿಸಬಾರದು.

ಒಮ್ಮೆ ಕಸ್ತೂರಿ ಬಾ ಎರಡು ಮೂರು ರೂಪಾಯಿ ಗಳನ್ನು, ಯಾವಾಗಲಾದರೂ ಬೇಕಾಗಬಹುದು ಎಂದು ಇಟ್ಟುಕೊಂಡಿದ್ದರು.

ಗಾಂಧೀಜಿಗೆ ವಿಷಯ ತಿಳಿಯಿತು.

’ನನ್ನಲ್ಲಿಯೆ ದೋಷವಿದೆ. ನಾನು ಆಸೆಯನ್ನು ಸಂಪೂರ್ಣವಾಗಿ ಬಿಟ್ಟಿದ್ದರೆ ನನ್ನ ಹೆಂಡತಿ ಹೀಗೆ ಮಾಡುತ್ತಿದ್ದಳೆ?’ ಎನ್ನಿಸಿತು.

ಸಂಜೆ ಆಶ್ರಮದಲ್ಲಿ ಎಲ್ಲರೆದುರಿಗೆ ಕಸ್ತೂರಿ ಬಾರ ತಪ್ಪನ್ನು ಹೇಳಿಬಿಟ್ಟರು! ಆಕೆ ಇಡೀ ಆಶ್ರಮಕ್ಕೆ ತಾಯಿ, ಎಲ್ಲರೆದುರಿಗೆ ಆಕೆಗೆ ಈ ಮರ್ಯಾದೆ!

ಮತ್ತೊಮ್ಮೆ ಆಶ್ರಮದಲ್ಲಿ ಯಾರಿಗೂ ಖಾಯಿಲೆ ಯಾಯಿತು. ಗಾಂಧೀಜಿ ಹೆಂಡತಿಯನ್ನು ಆತನ ಆರೋಗ್ಯದ ವಿಷಯ ಕೇಳಿದರು. ಆಕೆಗೆ ಆತನಿಗೆ ಖಾಯಿಲೆ ಎಂಬುದೇ ತಿಳಿದಿರಲಿಲ್ಲ. ಆಶ್ರಮದ ಮೇಲ್ವಿಚಾರಣೆ ಆಕೆಯ ಕರ್ತವ್ಯ. ಆಶ್ರಮದಲ್ಲಿ ಒಬ್ಬ ಮನುಷ್ಯನಿಗೆ ಖಾಯಿಲೆ ಎಂಬುದೇ ಗೊತ್ತಿಲ್ಲ ಎಂದರೇನು ಎನ್ನಿಸಿತು ಗಾಂಧೀಜಿಗೆ. ಅಂದು ಸಂಜೆ ಪ್ರಾರ್ಥನೆಯ ಹೊತ್ತಿನಲ್ಲಿ ಎಲ್ಲರೆದುರಿಗೆ ಬಾ ಅವರಿಗೆ ಎಂದರು: “ನಿನ್ನ ಮಗ ದೇವದಾಸ ಖಾಯಿಲೆ ಬಿದ್ದಿದ್ದರೆ ನಿನಗೆ ಕೂಡಲೆ ತಿಳಿಯುತ್ತಿರಲಿಲ್ಲವೆ? ಉಳಿದವರು ಖಾಯಿಲೆ ಬಿದ್ದರೆ ನಿನಗೆ ತಿಳಿಯಲೇ ಇಲ್ಲ ಎಂದರೆ ಏನರ್ಥ?”

ಇಂತಹ ಗಾಂಧೀಜಿ, ಒಮ್ಮೆ ಸೆರೆಮನೆಗೆ ಹೋಗುವಾಗ ಯಾರೋ ಕೇಳಿದರು: “ಕಸ್ತೂರಿ ಬಾಗೆ ಏನು ಹೇಳಬೇಕು?” ನಗುತ್ತ ಉತ್ತರ ಕೊಟ್ಟರು ಗಾಂಧೀಜಿ: “ಆಕೆಗೆ ಹೇಳುವುದೇನಿದೆ? ಆಕೆ ಧೀರ ಸತಿ.”

ಗಾಂಧೀಜಿ ಬಾಯಿಯಲ್ಲಿ ’ಧೀರ ಸತಿ’ ಎನ್ನಿಸಿಕೊಂಡ ಬಾ ನಿಜವಾಗಿ ತಪಸ್ವಿನಿ. ’ನಾನು, ನನ್ನದು’ ಎಂಬ ಭಾವನೆಯನ್ನೆ ಗೆದ್ದ ಹಿರಿಯ ಜೀವ.

೧೯೩೨ರಲ್ಲಿ ಗಾಂಧೀಜಿ ಸೆರೆಮನೆಯಲ್ಲಿದ್ದಾಗ ಪ್ರತಿ ದಿನ ಗಾಂಧೀಜಿಯವರನ್ನು ನೋಡಬಹುದೆಂದು ಸರ್ಕಾರ ಕಸ್ತೂರಿ ಬಾಗೆ ಅನುಮತಿ ನೀಡಿತ್ತು. ಆದರೆ ಬಾ ಈ ಸೌಲಭ್ಯವನ್ನು ನಿರಾಕರಿಸುತ್ತ “ಗಾಂಧೀಜಿಯವರೊಂದಿಗೆ ಸೆರೆಮನೆಯಲ್ಲಿ ಅನೇಕರಿದ್ದಾರೆ. ಅವರ ಹೆಂಡತಿಯರಿಗೆ ತಂದೆತಾಯಿಗಳಿಗೆ ಲಭಿಸದ ಸೌಲಭ್ಯ ನನಗೆ ಮಾತ್ರಯಾತಕ್ಕೆ? ನನಗೆ ಬೇಕಾಗಿಲ್ಲ” ಎಂದರು.

ಗಾಂಧೀಜಿ ಎಷ್ಟೋ ಬಾರಿ ಉಪವಾಸ ಮಾಡುವರು. ಒಮ್ಮೊಮ್ಮೆ ಅವರು ಉಳಿಯುವುದೇ ಅನುಮಾನವಾಗುತ್‌ಇತ್ತು. ಕಸ್ತೂರಿ ಬಾ ಎಷ್ಟು ಸಂಕಟಪಟ್ಟರೋ! ಆದರೆ ಗಂಡನ ಆದರ್ಶಕ್ಕಾಗಿ, ದೇಶಕ್ಕಾಗಿ ಎಲ್ಲವನ್ನು ಸಹಿಸಿದರು. ಒಮ್ಮೆ ಹೀಗೆ ಗಾಂಧೀಜಿ ಉಪವಾಸ ಮಾಡಿದಾಗ ಬಾ ಎಂದರು: ’ಇಷ್ಟು ದಿನ, ಹಿಂದಿನ ಅಗ್ನಿಪರೀಕ್ಷೆಗಳಲ್ಲೆಲ್ಲ ಅವರನ್ನು ಕಾಪಾಡಿದ ದೇವರು ಈಗಲು ಕಾಪಾಡುತ್ತಾನೆ.”

ಶ್ರೀರಾಮ-ಸೀತಾದೇವಿ, ನಳ-ದಮಯಂತಿ ಒಟ್ಟಿಗೆ ಜನರ ಹೃದಯಗಳಲ್ಲಿ ನಿಂತಂತೆ ನಿಂತಿದ್ದಾರೆ ಗಾಂಧೀಜಿ-ಕಸ್ತೂರಿ ಬಾ.