ಕಸ್ತೂರಿ ರಂಗ ಆಯ್ಯಂಗಾರ್

ಭಾರತದ ಪ್ರಸಿದ್ಧ ‘ಹಿಂದೂ’ ಪತ್ರಿಕೆಯ ಸಂಪಾದಕರಾಗಿ ನಿರ್ಭೀತ ಪತ್ರಿಕೋದ್ಯಮದ ಮೇಲ್ಕಂಕ್ತಿ ಹಾಕಿದರು. ಆಗಿನ ಭಾರತ ಸರ್ಕಾರದ ಅನ್ಯಾಯ ದಬ್ಬಾಳಿಕೆಗಳನ್ನು ವಿರೋಧಿಸಿದರು. ಪತ್ರಿಕೋದ್ಯಮದ ಕೀರ್ತಿಯನ್ನು ಬೆಳೆಸಿದರು.

 

 

ಕಸ್ತೂರಿ ರಂಗ ಅಯ್ಯಂಗಾರ್

ಒಂದೂ ಮುಕ್ಕಾಲು ರೂಪಾಯಿ, ಅದೂ ಸಾಲ ಪಡೆದು ೮೦ ಪ್ರತಿಗಳನ್ನು ಹೊರತರುವ ಸಾಹಸ ಮಾಡಿದವರು ಆರು ಮಂದಿ ಯುವಕರು, ಯಾರಿಗೂ ಅನುಭವ ಇಲ್ಲ, ಬದುಕಿದವರೆಲ್ಲ ಕೀರ್ತಿವಂತರಾಗಿ ಬಾಳುವುದಿಲ್ಲ. ಈ ಮಾತು ಪತ್ರಿಕೆಗಳಿಗೂ ಅನ್ವಯವಾಗುತ್ತದೆ. ಇಂದಿಗೂ ಪತ್ರಿಕಾ ಪ್ರಕಟಣೆ ನಿತ್ಯದ ಬೇನೆಯೆನಿಸಿರುವಾಗ ಒಂದು ನೂರು ವರ್ಷಗಳ ಮೊದಲಿನ ಸ್ಥಿತಿ ಹೇಗಿರಬೇಡ ! ಬಾಲಗ್ರಹಕ್ಕೆ ತುತ್ತಾಗಿ ಹೇಳ ಹೆಸರಿಲ್ಲದೆ ಸತ್ತ ಪತ್ರಿಕೆಗಳಿಗೆ ಲೆಕ್ಕ ಪತ್ರವಿಲ್ಲ. ಒಂದು ಶತಮಾನದ ಕಾಲ ಬಾಳಿ ಇನ್ನೂ ನೂರಾರು ವರ್ಷ ಬಾಳುತ್ತಲೇ ಬೆಳಗುತ್ತ ಹೋಗುವ ನಂಬಿಕೆಯನ್ನು ಮೂಡಿಸಿರುವ ’ಹಿಂದೂ’ ಪತ್ರಿಕೆಯನ್ನು ಬಾಲಗ್ರಹದಿಂದ ಕಾಪಾಡಿ, ಮಡಿಲಲ್ಲಿ ಇಟ್ಟುಕೊಂಡು ಬೆಳೆಸಿ, ತನ್ನದೆಲ್ಲವನ್ನೂ ಅದಕ್ಕೆ ಧಾರೆ ಎರೆದು, ಸಮಾಜದ ಕೈ ದೀವಿಗೆಯನ್ನಾಗಿಸಿದರು ಕೀರ್ತಿಶೇಷ ಕಸ್ತೂರಿ ರಂಗ ಅಯ್ಯಂಗಾರ್ಯರು.

ವಕೀಲರಾಗಿ ದುಡಿದು ಹೇರಳ ಹಣ ಮತ್ತು ಗೌರವ ಗಳಿಸಿಕೊಳ್ಳುವ ಸಾಧ್ಯತೆ ಇತ್ತು: ಈಗಿನ ಕಾಲಕ್ಕೆ ಅಸಾಮಾನ್ಯ ವೆನಿಸುವಷ್ಟು ವಿದ್ಯಾರ್ಹತೆ ಪಡೆದವರಾದ್ದರಿಂದ ಅಂದಿನ ಸರ್ಕಾರದ ಊಳಿಗಕ್ಕೆ ಸೇರಿ ಉನ್ನತಿಯ ಮೆಟ್ಟಿಲು ಏರಿ ಕೂರಬಹುದಿತ್ತು. ಪದವಿ – ಪ್ರಶಸ್ತಿ ಗಳಿಸಿ ಮರೆಯಬಹುದಿತ್ತು. ಇದಕ್ಕೆ ಹೊರತಾದ ಮಾರ್ಗ ಹಿಡಿದು ನಡೆದು ಬಾಳಿದವರು ಕಸ್ತೂರಿ ರಂಗ ಆಯ್ಯಂಗಾರ್ಯರು. ಚಂದನದ ಕೊರಡು ತಾನು ಸವೆದು ಉಳಿದವರಿಗೂ ಕಂಪು ನೀಡಿ ತನ್ನ ಇರವನ್ನು ಕೊನೆಗೊಳಿಸುತ್ತದೆ. ಹೀಗೆ ಬಾಳಿದವರು.

ಮನೆತನ

ಕಸ್ತೂರಿ ರಂಗ ಅಯ್ಯಂಗಾರ್ಯರ ಪೂರ್ವಿಕರು ವಿಜಯನಗರದ ಅರಸರಿಂದ ಮಾನ್ಯರಾಗಿ ಜಹಗೀರಿ ಪಡೆದವರು. ಕಾವೇರಿ ತೀರದ ಸುಪುಷ್ಪ ನೆಲದಲ್ಲಿ ಬೆಳೆದವರು. ದಕ್ಷಿಣ ಭಾರತದ ಬತ್ತದ ಖಣಜವೆಂದು ಹೆಸರು ಪಡೆದಿರುವ ತಂಜಾವೂರಿನ ಇನ್ನಂಬೂರಿನಲ್ಲಿ ನೆಲಸಿದವರು, ಕಸ್ತೂರಿ ರಂಗ ಅಯ್ಯಂಗಾರ್ಯರ ತಂದೆ ಶೇಷ ಅಯ್ಯಂಗಾರ್ಯರು ಈಸ್ಟ್ ಇಂಡಿಯ ಕಂಪನಿ ಸರ್ಕಾರಕ್ಕೆ ಇಂಗ್ಲಿಷ್ ಭಾಷಾಂತರಕಾರರು.

ಶೇಷ ಅಯ್ಯಂಗಾರ್ಯರ ಮೂರನೆಯ ಮಗನಾಗಿ ೧೮೫೯ರ ಡಿಸೆಂಬರ್ ಹದಿನೈದರಂದು ಕಸ್ತೂರಿ ರಂಗ ಅಯ್ಯಂಗಾರ್ ಜನಿಸಿದರು.

ಕಸ್ತೂರಿಯವರ ಅಣ್ಣಂದಿರು ಶ್ರೀನಿವಾಸ ರಾಘವ ಅಯ್ಯಂಗಾರ್ ಮತ್ತು ಸುಂದರರಾಜ ಅಯ್ಯಂಗಾರ್. ಕುಂಭಕೋಣಂದಲ್ಲಿ ಪ್ರಾರಂಭಿಕ ಶಿಕ್ಷಣ. ಅನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ. ಕುಂಭಕೋಣದಲ್ಲಿ ಇನ್ನೂ ಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಕಸ್ತೂರಿ ವಿವಾಹಿತ. ಹದಿನೆಂಟರ ಪ್ರಾಯದಲ್ಲಿದ್ದಾಗ ತಂದೆಯ ಸಾವು. ಆದರೆ ಆ ವೇಳೆಗಾಗಲೇ ಸರ್ಕಾರಿ ಹುದ್ದೆಯಲ್ಲಿದ್ದ ಹಿರಿಯಣ್ಣನ ನೆರವಿನಿಂದ ವಿದ್ಯಾಭ್ಯಾಸಕ್ಕೆ ಅಡ್ಡಿ ತಪ್ಪಿತು. ಇಪ್ಪತ್ತನೆಯ ವಯಸ್ಸಿನಲ್ಲಿ ಪದವೀಧರ. ಅನಂತರ ಕಾನೂನು ಪದವಿ ಪಡೆಯಲು ಎರಡು ವರ್ಷ ಅಧ್ಯಯನ. ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ. ೧೮೮೧ ರಲ್ಲಿ ಸಬ್‌ರಿಜಿಸ್ಟ್ರಾರ್ ಆಗಿ ನೇಮಕ ಹೊಂದಿದರು.

ನೌಕರಿಯಲ್ಲಿದ್ದಾಗಲೇ ಸ್ಥಳೀಯ ಸಂಸ್ಥೆಗಳ ಕಾರ್ಯ ವಿಧಾನದ ಪರಿಚಯ ಪಡೆದರು. ೧೮೮೨ರಲ್ಲಿ ಮದರಾಸ್ ರಾಜ್ಯದ ಸ್ಥಳೀಯ ಸಂಸ್ಥೆಗಳ ಶಾಸನ ಜಾರಿಗೆ ಬಂದಾಗ, ಪೌರಾಡಳಿತವನ್ನು ಕುರಿತು ಒಂದು ಗ್ರಂಥವನ್ನು ರಚಿಸಿದರು, ಅದು ಮುಂದೆ ಶಾಲೆಯಲ್ಲಿ ಪಠ್ಯಗ್ರಂಥವೂ ಆಯಿತು.

೧೯೮೪ರಲ್ಲಿ ಬಿ. ಎಲ್. ಪರೀಕ್ಷೆಯಲ್ಲಿ ತೇರ್ಗಡೆ ಆದಕೂಡಲೇ ನೌಕರಿಗೆ ರಾಜೀನಾಮೆ ನೀಡಿದರು. ಮದರಾಸಿನಲ್ಲಿ ಅಂದಿನ ಪ್ರಖ್ಯಾತ ವಕೀಲರೆನಿಸಿದ್ದ ವಿ. ಭಾಷ್ಯಂ ಅಯ್ಯಂಗಾರ್ ಅವರಲ್ಲಿ ಕಿರಿಯ ವಕೀಲರಾಗಿ ತರಬೇತಿ ಪಡೆದರು. ಮರುವರ್ಷ ಸ್ವತಂತ್ರರಾಗಿ ವೃತ್ತಿಯನ್ನಾರಂಭಿಸಿದರು.

ಕುರಿತು ಒಂದು ಗ್ರಂಥವನ್ನು ರಚಿಸಿದರು, ಅದು ಮುಂದೆ ಶಾಲೆಯಲ್ಲಿ ಪಠ್ಯಗ್ರಂಥವೂ ಆಯಿತು.

೧೯೮೪ರಲ್ಲಿ ಬಿ. ಎಲ್. ಪರೀಕ್ಷೆಯಲ್ಲಿ ತೇರ್ಗಡೆ ಆದಕೂಡಲೇ ನೌಕರಿಗೆ ರಾಜೀನಾಮೆ ನೀಡಿದರು. ಮದರಾಸಿನಲ್ಲಿ ಅಂದಿನ ಪ್ರಖ್ಯಾತ ವಕೀಲರೆನಿಸಿದ್ದ ವಿ. ಭಾಷ್ಯಂ ಅಯ್ಯಂಗಾರ್ ಅವರಲ್ಲಿ ಕಿರಿಯ ವಕೀಲರಾಗಿ ತರಬೇತಿ ಪಡೆದರು. ಮರುವರ್ಷ ಸ್ವತಂತ್ರರಾಗಿ ವೃತ್ತಿಯನ್ನಾರಂಭಿಸಿದರು.

ಕೊಯಮತ್ತೂರಿನಲ್ಲಿ ವಕೀಲರಾಗಿ

ಸಾಮಾನ್ಯವಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಖ್ಯಾತಿಯ ಮೆಟ್ಟಿಲು ಏರುವುದಕ್ಕಾಗಿ ಪ್ರತಿಭಾಸಂಪನ್ನರು ಮದರಾಸ್‌ನಂತಹ ನಗರದಲ್ಲಿ ವಕೀಲಿ ಆರಂಭಿಸುತ್ತಿದ್ದರು. ಆದರೆ ಇದಕ್ಕೆ ವಿರುದ್ಧವಾಗಿ ಕಸ್ತೂರಿಯವರು ವಕೀಲಿಯನ್ನು ಆರಂಭಿಸಲು ಕೊಯಮತ್ತೂರನ್ನು ಆರಿಸಿಕೊಂಡರು. ಅಲ್ಲೂ ವಕೀಲರು ಬಲಾಢ್ಯರೇ ಆಗಿದ್ದರು. “ಸೂಕ್ಷ್ಮ ಮನಸ್ಸಿನ, ಹಿಂಜರಿಕೆ ಪ್ರವೃತ್ತಿಯ, ಮೆದುಮಾತಿನ” ಈ ತರುಣ ವಕೀಲನಾಗಿ ಯಶಸ್ವಿಯಾಗಲಾರ ಎಂಬ ಬಂಧುಮಿತ್ರರ ಶಂಕೆಯನ್ನು ನಿವಾರಿಸಲು ಅವರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ. ಅತಿ ಶೀಘ್ರವಾಗಿ ನ್ಯಾಯಾಧೀಶರ ಮತ್ತು ಸಹ ವಕೀಲರ ಗೌರವಕ್ಕೆ ಪಾತ್ರರಾದರು.

೧೮೮೪ – ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆ ಹುಟ್ಟುವುದಕ್ಕೂ ಒಂದು ವರ್ಷ ಮೊದಲು; ದೇಶದ ಮಹಾನಗರಗಳಲ್ಲಿ ಬುದ್ಧೀಜೀವಿಗಳು ಬ್ರಿಟಿಷ್ ಆಡಳಿತದ ರೀತಿ-ನೀತಿಗಳಲ್ಲಿ ಮಾರ್ಪಾಟು ಅಪೇಕ್ಷಿಸತೊಡಗಿದ್ದ ಕಾಲ. ಇದಕ್ಕಾಗಿ ಮುಂಬಯಿ, ಕಲ್ಕತ್ತಾ ನಗರಗಳಲ್ಲೂ ಸಂಘಗಳು ಹುಟ್ಟಿಕೊಂಡಂತೆ ಮದರಾಸಿನಲ್ಲೂ ‘ಮಹಾಜನ ಸಭಾ’ ಅವತರಿಸಿತು. ಸಾರ್ವಜನಿಕ ಸೇವೆಯಲ್ಲಿದ್ದ ಆಸಕ್ತಿಯಿಂದಲೇ ಅವರು ‘ಸಭಾ’ದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದರು.

‘ಮಹಾಜನ ಸಭಾ’ ಅಸ್ತಿತ್ವಕ್ಕೆ ಬರುವುದಕ್ಕೆ ಆರು ವರ್ಷಗಳ ಮೊದಲೇ ‘ಹಿಂದೂ’ ಪತ್ರಿಕೆ ಜನಿಸಿತ್ತು. ಮದರಾಸಿನ “ಟ್ರಿಪ್ಲಿಕೇನ್ ಸಾಹಿತ್ಯ ಸಂಘ” ಕೈಗೊಂಡ ಸಾಹಸದ ಫಲ – ಹಿಂದೂ ವಾರಪತ್ರಿಕೆ.

ಜಿ. ಸುಬ್ರಮಣ್ಯ ಅಯ್ಯರ್, ಎಂ. ವೀರರಾಘವಾಚಾರಿ, ಪಿ.ವಿ. ರಂಗಾಚಾರಿ, ಡಿ. ಕೇಶವರಾವ್ ಪಂತ್ ಮತ್ತು ಎನ್. ಸುಬ್ಬರಾವ್ ಪಂತಲು’- ಇವರೇ ಪತ್ರಿಕೆಯ ಸ್ಥಾಪಕರು. ಮೊದಲಿನ ಇಬ್ಬರನ್ನು ಬಿಟ್ಟು ಉಳಿದೆಲ್ಲರೂ ವಿದ್ಯಾರ್ಥಿಗಳು. ಹೀಗಾಗಿ ಸುಬ್ರಮಣ್ಯ ಅಯ್ಯರ್ ಮತ್ತು ವೀರರಾಘವಾಚಾರಿ ಪತ್ರಿಕೆಯ ಸಹ ಮಾಲೀಕರಾದರು. ಮೇಧಾವಿಗಳ ಈ ತಂಡದ ಮುಖ್ಯಸ್ಥರಾದ ಜಿ. ಸುಬ್ರಮಣ್ಯ ಅಯ್ಯರ್ ಸಂಪಾದಕರಾದರು. ಮುಂದಿನ ಇಪ್ಪತ್ತು ವರ್ಷಗಳ ಕಾಲ ಪತ್ರಿಕೆಯ ಸಂಪಾದಕತ್ವವನ್ನು ನಿರ್ವಹಿಸಿದರು.

ಕೊಯಮತ್ತೂರಿನಲ್ಲಿ ಕಸ್ತೂರಿಯವರು ವಕೀಲಿ ವೃತ್ತಿ ನಡೆಸಿದ ಅವಧಿ ಸ್ವಲ್ಪ. ಒಂಬತ್ತು ವಷ ಮಾತ್ರ. ಆದರೆ ಗಳಿಸಿದ ಕೀರ್ತಿ ಅಪಾರ. ಅವರ ಯಶಸ್ಸಿಗೆ ಕಾರಣವಾದ ಹಲವು ಪ್ರಕರಣಗಳಲ್ಲಿ ಒಂದು ಪಡ್ರೆ ಪ್ರಕರಣ. ಕ್ರೈಸ್ತಪಾದರಿಯೊಬ್ಬರು ೧೬ ವರ್ಷದ ಯುವಕ ಪಡ್ರೆಯನ್ನು ಮತಾಂತರಕ್ಕೆ ಒಳಪಡಿಸಲು ಪ್ರಯತ್ನಿಸಿದರು. ಹಿಂದೂ ತಾಯಿ ತಂದೆಯವರ ಪರವಾಗಿ ಕಸ್ತೂರಿಯವರು ವಕೀಲಿ ನಡೆಸಿದರು. ಪಾದರಿಯ ಪರ ಹಾಜರಾದವರು ಆಗಿನ ಪ್ರಖ್ಯಾತ ಆಂಗ್ಲ ವಕೀಲರು. ಗೆಲವು ಕಸ್ತೂರಿಯವರಿಗೇ ಸಿಕ್ಕಿತು.

ಹನ್ನೆರಡು ವರ್ಷಕ್ಕಿಂತ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳಿಗೆ ವಿವಾಹ ಮಾಡಕೂಡದೆನ್ನುವ ಕಾನೂನನ್ನು ಆಂಗ್ಲ ಸರ್ಕಾರ ಜಾರಿಗೆ ತಂದಿತು(೧೯೮೧). ಆ ವೇಳೆಗೆ ಆಗಲೇ ಕಸ್ತೂರಿಯವರು ತಮ್ಮ ಒಂಬತ್ತು ವರ್ಷದ ಮೊದಲ ಮಗಳ ವಿವಾಹ ಜರುಗಿಸಿಯಾಗಿತ್ತು. ಇದು ಸರಿಯಲ್ಲವೆಂದು ಅವರಿಗೇ ವೇದ್ಯವಾಗಿರಬೇಕು, ಸರ್ಕಾರ ಜಾರಿಗೆ ತಂದ ‘ಏಜ್ ಆಫ್ ಕನ್‌ಸೆಂಟ್’ ಶಾಸನಕ್ಕೆ ಬೆಂಬಲ ನೀಡಿ ಸಾರ್ವಜನಿಕವಾಗಿ ಸಮರ್ಥಿಸಿದರು. ಹಿಂದಿನ ಶತಮಾನದಲ್ಲಿ, ಸಮಾಜದಲ್ಲಿ ಇನ್ನೂ ರೂಢಿಗತ ಸಂಪ್ರದಾಯಗಳು ಬಲವಾಗಿದ್ದ ದಿನಗಳಲ್ಲಿ, ಕಸ್ತೂರಿಯವರ ಈ ನಿಲುವು ಅತ್ಯಂತ ಪ್ರಗತಿಪರವೆನಿಸಿತ್ತು.

ಇಪ್ಪತ್ತರರ ಪ್ರಾಯದಲ್ಲೇ ಅವರು ಪುರಸಭೆಯ ಸದಸ್ಯರಾದರು. ಸರ್ಕಾರ, ಜಿಲ್ಲಾಮಂಡಳಿಗೆ ನಾಮಕರಣ ಮಾಡಿತು. ಗೌರವ ನ್ಯಾಯಾಧೀಶರಾಗಿ ನೇಮಕ ಹೊಂದಿದರು. ಯವಕರಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಆಸಕ್ತಿ ಕುದುರಿಸಲು ೧೮೮೬ರಲ್ಲಿ ವಿದ್ಯಾರ್ಥಿ ಸಾಹಿತ್ಯ ಸಂಘವನ್ನು ಕಟ್ಟಿದರು. ಬಿಡುವಿನ ದಿನಗಳಲ್ಲಿ ಸಂಗೀತ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಕಾಸ್ಮಾಪಾಲಿಟಿನ್ ಕ್ಲಬ್ ಪ್ರ್ರಾರಂಭಿಸಿದರು.  ವಕೀಲರ ಸಂಘದ ಕಾರ್ಯದರ್ಶಿಗಳಾದರು. ೧೮೮೫ರಲ್ಲಿ ಕಾಂಗ್ರೆಸ್ ಹುಟ್ಟಿತು. ಅದರ ಪ್ರವರ್ತಕರಲ್ಲಿ ಒಬ್ಬರಾದ ಕಸ್ತೂರಿ ರಂಗ ಅಯ್ಯಂಗಾರ್ಯರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾದರು.

ಕೇವಲ ಒಂಬತ್ತು ವರ್ಷಗಳ ಅವಧಿಯಲ್ಲಿ ಕಸ್ತೂರಿಯವರ ಸೇವಾಕ್ಷೇತ್ರ ಹರವನ್ನು ಪಡೆಯಿತು. ಆಗ ಇಂಥ  ಖ್ಯಾತಿ ಪಡೆಯಬೇಕಾದರೆ ಎಲ್ಲಕ್ಕಿಂತ ಅಗತ್ಯವಾದದ್ದು ವ್ಯಕ್ತಿಯ ನಡವಳಿಕೆ ; ಸ್ಥಾನಮಾನಗಳಲ್ಲ; ಜಾತಿ ಪ್ರತಿಷ್ಠೆಯೂ ಅಲ್ಲ.

ಮದರಾಸಿನಲ್ಲಿ

ಜಿಲ್ಲಾಕೇಂದ್ರಗಳಲ್ಲಿ ವೃತ್ತಿಯಲ್ಲಿ ಪಳಗಿದ ವಕೀಲರು ಮದರಾಸಿಗೆ ಬಂದು ವೃತ್ತಿ ನಡೆಸುವುದೇ ಗೌರವವೆಂದೆಣಿಸಿದ್ದ ಕಾಲ ಅದು. ಮದರಾಸಿನಲ್ಲಿ ಇದ್ದ ವಕೀಲರು ಮಹಾ ಮೇಧಾವಿಗಳು. ಅಲ್ಲಿ ಅವರ ಸಮನೆನಿಸುವುದು ಸುಲಭದ ಮಾತಾಗಿರಲಿಲ್ಲ. ಅದರೆ ಕೊಯಮತ್ತೂರಿನ ಪರಿಣಿತ ವಕೀಲ ಮತ್ತು ಸಾರ್ವಜನಿಕ ಮುಂದಾಳುವೆನಿಸಿ ಪ್ರಸಿದ್ಧರಾಗಿದ್ದ ಕಸ್ತೂರಿ ಯವರಿಗೆ ಮದರಾಸಿನ ವೃತ್ತಿ ಜೀವನ ಸಮಸ್ಯೆಯಾಗಲಿಲ್ಲ.

ಬಹುಬೇಗನೆ ಅವರು ಪರಿಣಿತ ವಕೀಲರ ಪಂಕ್ತಿಗೆ ಸೇರಿದರು. ಆದರೆ ಅವರ ಒಲವೆಲ್ಲ ಸಾರ್ವಜನಿಕ ಸಮಸ್ಯೆ ಗಳಲ್ಲಿತ್ತು. ಜನರ ಸಂಘಟನೆ, ಸಲಹೆ, ಸಮಾಲೋಚನೆಗಳಲ್ಲೇ ಅವರು ಹೆಚ್ಚು ಕಾಲ ವ್ಯಯಿಸಬೇಕಾಗಿತ್ತು. ಅವರ ಸಲಹೆಗಳು ಎಷ್ಟು ಮಾನ್ಯವಾಗಿರುತ್ತಿತ್ತೆಂದರೆ, ರಾಜಕೀಯದ ಉನ್ನತಾಧಿಕಾರಿಗಳಾಗಿದ್ದ ಅಣ್ಣ ಶ್ರೀನಿವಾಸ ರಾಘವ ಅಯ್ಯಂಗಾರ್ಯರು ತಮ್ಮ ಸಮಸ್ಯೆಗಳಿಗೆ ತಮ್ಮನ ಸಲಹೆ ಕೇಳುತ್ತಿದ್ದರು.

ಅಣ್ಣನ ಆಸರೆ, ಮಾರ್ಗದರ್ಶನ ಕಸ್ತೂರಿಯವರಿಗೆ ಹೆಚ್ಚುಕಾಲ ಲಭ್ಯವಿರಲಿಲ್ಲ. ೧೯೦೩ ರ ಅಂತ್ಯದಲ್ಲಿ ಅಣ್ಣನ ಸಾವು  ಸಂಭವಿಸಿತು. ಇದು ಕಸ್ತೂರಿಯವರಿಗೆ ಜೀವನದ ಬಹು ದೊಡ್ಡ ಆಘಾತವೆನಿಸಿತು.

ಹಿಂದೂ ಬಾಂಧವ್ಯ

ಮದರಾಸಿಗೆ ಬಂದು ನೆಲೆಸಿದ ಮೇಲೆ ಕಸ್ತೂರಿ ಯವರಿಗೆ ಕಾಂಗ್ರೆಸ್ಸಿನ ಕಾರ್ಯಭಾರ ಹೆಚ್ಚಾಯಿತು. ಎರಡು ಕಾಂಗ್ರೆಸ್ ಮಹಾಧಿವೇಶಗಳನ್ನು (೧೮೯೮ ಮತ್ತು ೧೯೦೩) ಸ್ವಾಗತ ಸಮಿತಿಯ ಕಾರ್ಯದರ್ಶಿಗಳಾಗಿ ಅವರು ಶ್ರಮಿಸಿದರು. ಆಗಿನ ಎಲ್ಲಾ ರಾಜಕಾರಣಕ್ಕೂ ‘ಹಿಂದೂ’ ಪತ್ರಿಕಾ ಕಚೇರಿ ತವರು ಮನೆಯಂತಿತ್ತು. ಮಹಾಜನ ಸಭಾ ಹುಟ್ಟಿದ್ದು (೧೮೮೪) ಹಿಂದೂ ಕಾರ್ಯಾಲಯದಲ್ಲಿ ಮರುವರ್ಷ ಹುಟ್ಟಿದ ಕಾಂಗ್ರೆಸ್‌ನ ಚಟುವಟಿಕೆಗಳ ಕೇಂದ್ರವೂ ‘ಹಿಂದೂ’ ಕಛೇರಿಯಾಯಿತು. ಹೀಗಾಗಿ ಕಸ್ತೂರಿಯವರಿಗೆ ‘ಹಿಂದೂ’ ಪತ್ರಿಕೆಯೊಡನೆ ಸಂಬಂಧ ಬೆಳೆಯಿತು. ಆಗಾಗ್ಗೆ ಸಾರ್ವಜನಿಕ ಮಹತ್ವ ಕುರಿತು ಪತ್ರಿಕೆಗೆ ಲೇಖನ ಬರೆಯುತ್ತಿದ್ದ ಕಸ್ತೂರಿಯವರು ೧೮೯೫ರಲ್ಲಿ ಪತ್ರಿಕೆಯ ಕಾನೂನು ಸಲಹೆಗಾರರಾದರು.

ಬ್ರಿಟಿಷರ ಆಳ್ವಿಕೆಯಲ್ಲಿ ಅತೃಪ್ತಿ ಬೆಳೆಯುತ್ತಿತ್ತು. ಮಾರ್ಪಾಟುಗಳ ಸಲುವಾಗಿ ಒತ್ತಡ ಹೆಚ್ಚುತ್ತ ಬಂತು. ಸ್ವಾಭಿಮಾನ ಕೆರಳತೊಡಗಿತು. ವಿದೇಶೀಯರ ಆಡಳಿತ ಬೇಡ; ನಮ್ಮ ಹಿತವನ್ನು ನಾವೇ ನೋಡಿಕೊಳ್ಳೋಣವೆಂಬ ಭಾವನೆ ಅಂಕುರಿಸಿ, ಬಲಿಯತೊಡಗಿದ್ದ ಕಾಲ. ಈ ಶತಮಾನದ ಆರಂಭ ಹೀಗೆ ಸಾಮಾಜಿಕ – ರಾಜಕೀಯ ಜಾಗೃತಿಯ ದಿನಗಳೆನಿಸಿದ್ದಿತು. ಜನರ ಈ ಭಾವನೆಗಳನ್ನು ಬಿಂಬಿಸುತ್ತಿದ್ದ ‘ಹಿಂದೂ’ ಜನಪ್ರಿಯತೆ ದಿನಕ್ರಮದಲ್ಲಿ ಹೆಚ್ಚತೊಡಗಿತು. ವಾರಪತ್ರಿಕೆಗೆ ಜನರ ಅಪೇಕ್ಷೆಗಳೆಲ್ಲವನ್ನೂ ಈಡೇರಿಸಲಾಗಲಿಲ್ಲ. ೧೮೮೩ರ ಅಕ್ಟೋಬರ್‌ನಿಂದ ವಾರಕ್ಕೆ ಮೂರು ಬಾರಿ ‘ಹಿಂದೂ’ ಪ್ರಕಟವಾಗತೊಡಗಿತು. ೧೮೮೯ರ ವರ್ಷಾರಂಭದಿಂದ ‘ಹಿಂದೂ’ ದಿನಪತ್ರಿಕೆ ಆಯಿತು. ಇಷ್ಟಾದರೂ ಪತ್ರಿಕೆಯ ಪ್ರಸಾರ ಸಂಖ್ಯೆ ಬೆಳೆದಿರಲಿಲ್ಲ. ಆರುನೂರು ಪ್ರತಿಗಳಷ್ಟು ಮಾತ್ರ ಪ್ರಸಾರವಿತ್ತು.

ಜನಪ್ರಿಯತೆ ಬೆಳೆದಿತ್ತು, ಆರ್ಥಿಕ ಸ್ಥಿತಿಗತಿಗಳು ದಯನೀಯವಾಗಿದ್ದವು. ಚಂದಾದಾರರಿಂದ ನಿಗದಿಯಾಗಿ ಹಣ ಬರುತ್ತಿರಲಿಲ್ಲ. ಜಾಹೀರಾತಿನಿಂದ ಆದಾಯವಿರಲಿಲ್ಲ. ದೇಶೀಯ ಉದ್ಯಮ ಬೆಳೆದಿರಲಿಲ್ಲ. ಬ್ರಿಟೀಷ್ ಸಂಸ್ಥೆಗಳು ಜಾಹೀರಾತು ಕೊಡುತ್ತಿರಲಿಲ್ಲ. ಇಂಥ ಸನ್ನಿವೇಶದಲ್ಲಿ ಮಾಲೀಕರಾದ ಸುಬ್ರಮಣ್ಯ ಅಯ್ಯರ್ ಮತ್ತು ವೀರರಾಘವಾಚಾರ್ ಅವರ ನಡುವೆ ವಿರಸ ಮೂಡಿತು. ಅಯ್ಯರ್ ಸಂಸ್ಥೆಯಿಂದ ದೂರ ಆದರು. ವೀರರಾಘವಾಚಾರ್ಯರೊಬ್ಬರೇ ಪತ್ರಿಕೆಯ ಒಡೆತನವನ್ನು ಹೊತ್ತರು. ಕರುಣಾಕರ ಮೆನನ್ ಸಹ ಸಂಪಾದಕರಾದರು.

ಈ ವೇಳೆಗೆ ‘ಹಿಂದೂ’ ಇಪ್ಪತ್ತು ವರ್ಷದ ಯುವಾವಸ್ಥೆಯನ್ನು ಮುಟ್ಟಿತು. ೧೯೦೧ರಲ್ಲಿ ಸಂಸ್ಥೆಯ ವಹಿವಾಟನ್ನು ಸಾರ್ವಜನಿಕ ಒಡೆತನಕ್ಕೆ ವಹಿಸುವ ಪ್ರಯತ್ನ ನಡೆಯಿತು. ಫಲ ಸಿಗಲಿಲ್ಲ. ೧೯೦೩ ರಲ್ಲಿ ಬೆಳ್ಳಿಹಬ್ಬವೂ ಜರುಗಿತು. ಒಂದು ಲಕ್ಷ ರೂಪಾಯಿಗಳಷ್ಟು ಸಾಲ ಬೆಳೆದಿತ್ತು. ಪತ್ರಿಕೆಯನ್ನು ನಡೆಸುವುದೇ ದುಸ್ತರವೆನಿಸಿದ್ದ ಕಾಲದಲ್ಲಿ, ಅದರ ಒಡೆತನವನ್ನು ವಹಿಸಿಕೊಳ್ಳುವ ನಿರ್ಧಾರವನ್ನು ಕಸ್ತೂರಿಯವರು ಕೈಗೊಂಡರು.

ಸಂಪಾದಕ – ಮಾಲಿಕ

ಕಸ್ತೂರಿಯವರು ೪೫ರ ಪ್ರಾಯದಲ್ಲಿ ಅನುಭವ ಇಲ್ಲದ ಹೊಸ ಉದ್ಯಮಕ್ಕೆ ತೊಡಗುವುದು ಅವರ ಬಂಧು ಮಿತ್ರರಿಗೆ ಇಷ್ಟವಿರಲಿಲ್ಲ. ಪತ್ರಿಕೆಯು ಆಂಗ್ಲ ಅರಸರ ಅವಕೃಪೆಗೆ ಪಾತ್ರವಾಗಿತ್ತು.. ಇಂಥ ಸಂಸ್ಥೆಯನ್ನು ಸೆರಗಿಗೆ ಕಟ್ಟಿಕೊಂಡ ಕಸ್ತೂರಿಯವರು ತಳೆದ ದಾರಿ ದುರ್ಗಮವೆನಿಸಿತ್ತು.

ಪತ್ರಿಕೆಯ ಒಡೆತನ ಬಂದನಂತರ ಅದರ ಸಂಪಾದಕತ್ವವನ್ನು ವಹಿಸಿಕೊಳ್ಳಬೇಕಾಯಿತು. ಹೀಗೆ ಒಡೆಯ, ಸಂಪಾದಕ ಎರಡೂ ಒಬ್ಬರೇ ಆದರು.

ಪತ್ರಿಕೆಯನ್ನು ವಹಿಸಿಕೊಂಡ ತಕ್ಷಣ ಅದರ ಸುಧಾರಣೆಯನ್ನು ಕಸ್ತೂರಿಯವರು ಕೈಗೊಂಡರು. ವ್ಯಾಪಕವಾಗಿ ಸುದ್ದಿಗಾರರನ್ನು ನೇಮಿಸಿದರು. ವಿಶ್ವ ವಾರ್ತೆಯನ್ನು ಪಡೆಯಲು ‘ರಾಯಿಟರ್’ ಸುದ್ದಿ ಸಂಸ್ಥೆಯ ಸಂಪರ್ಕ ಪಡೆದರು. ‘ವಾಚಕರ ಪತ್ರ’ ವಿಭಾಗವನ್ನು ಅತ್ಯಂತ ಪರಿಣಾಮಕಾರಿಯನ್ನಾಗಿ ಮಾಡಿದರು. ವಂತಿಕೆಗಳನ್ನು ಪಡೆಯುವುದನ್ನು ನಿಲ್ಲಿಸಿ ಚಂದಾ ವಸೂಲಿ ಕಟ್ಟುನಿಟ್ಟು ಮಾಡಿದರು. ‘ಡೆಮ್ಮಿ ಫೋಲಿಯೋ ಆಕಾರದ ೧೮ ಪುಟಗಳ ಪ್ರಕಟಣೆ ಆರಂಭಿಸಿದರು. ಸಕಾಲಿಕ ಸಮಸ್ಯೆಗಳ ಪಥನದ ವೇದಿಕೆಯನ್ನು ಅರಂಭಿಸಿದರು. ಭಾರತಕ್ಕೆ ಸಂಬಂಧಿಸಿದ ಬ್ರಿಟಿಷ್ ಸಂಸತ್ತಿನ ಕಲಾಪವನ್ನು ತರಿಸಿ ಪ್ರಕಟಿಸುವುದು ಆರಂಭವಾಯಿತು. ಅಂಚೆಯ ಮೂಲಕ ಚಂದಾದಾರರಿಗೆ ಪತ್ರಿಕೆಯ ರವಾನೆ ಶುರು ಆಯಿತು. ಸಮ ಸಾಮಯಿಕ ವಿಷಯಗಳ ಮೇಲೆ ಅಗ್ರ ಲೇಖನಗಳನ್ನು ಬರೆದು ಪ್ರಕಟಿಸಿದರು. ಹೀಗೆ ‘ಹಿಂದೂ’ ರಾಷ್ಟ್ರದ ಪತ್ರಿಕೆಗಳಲ್ಲಿ ಹಲವು ಪ್ರಥಮಗಳ ಕೀರ್ತಿ ಪಡೆಯಿತು. ನಷ್ಟದಲ್ಲಿ ನಡೆಯುತ್ತಿದ್ದ ಪತ್ರಿಕೆ ಮೊದಲ ಬಾರಿಗೆ ೧೫೦ ರೂಪಾಯಿಗಳ ಲಾಭಗಳಿಸಿತು.

ಲೋಕಮಾನ್ಯ ಬಾಲಗಂಗಾಧರ ತಿಲಕರ ಅಂದಿನ ರಾಜಕೀಯ ಒಲವು – ನಿಲವುಗಳನ್ನು ಒಪ್ಪಿದ್ದ ಕಸ್ತೂರಿಯವರು ಅದನ್ನು ಪತ್ರಿಕೆಯಲ್ಲಿ ಸಮರ್ಥವಾಗಿ ಪ್ರತಿಪಾದಿಸುತ್ತಿದ್ದರು. ಜನತೆಗೆ ಅತಿ ಅವಶ್ಕವಿದ್ದ ರಾಜಕೀಯ ಶಿಕ್ಷಣಕ್ಕೆ ಪತ್ರಿಕೆ ಸಾಧನವಾಗಬೇಕು, ಕೇವಲ ಶಿಕ್ಷಿತ ವರ್ಗಕ್ಕಷ್ಟೇ ಅಲ್ಲದೆ, ಸಾಧಾರಣ ಜನ ಸಮುದಾಯಕ್ಕೂ ರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ತಿಳವಳಿಕೆ ನೀಡಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದ ಅವರು ಅದಕ್ಕಾಗಿ ಪತ್ರಿಕೆಯನ್ನು ಬಳಸ ತೊಡಗಿದರು.

ನೊಂದವರ ದನಿಯಾಗಿ

ಪತ್ರಿಕೆಯ ಪ್ರಸಿದ್ಧಿ – ಪ್ರಸಾರ ಹೆಚ್ಚುವುದು ಒಂದೇ ಕಾರಣಕ್ಕಾಗಿ – ಜನಮನದ ಮಿಡಿತವನ್ನು ಪತ್ರಿಕೆ ಕಂಡು ಹಿಡಿದು ಅವರ ನೋವಿಗೆ ನಾಲಿಗೆಯಾದಾಗ ; ಅನ್ಯಾಯ ಅಕೃತ್ಯಗಳನ್ನು ಬಯಲಿಗೆಳೆಯುವುದು ಪತ್ರಿಕೆಗಳ ಕರ್ತವ್ಯ. ನೂರು ವರ್ಷ ಉರುಳಿದ ಮೇಲೂ ಪತ್ರಿಕೆ ಜನಪ್ರಿಯವಾಗಿ ಉಳಿಯುವು ದೆಂದರೆ ಸಾಮಾನ್ಯದ ಮಾತಲ್ಲ. ಕಾಲದ ಓಟ ಗಮನಿಸಿ ಮನ್ನೋಡಬೇಕು, ‘ಹಿಂದೂ’ ಬೆಳೆದಿರುವುದೇ ಹೀಗೆ.

೧೯೦೬ ರ ಅಕ್ಟೋಬರ್ ೨೨ ರಂದು ಸೋಮವಾರ. ಲಕ್ಷಗಟ್ಟಲೆ ರೂಪಾಯಿಗಳ ಠೇವಣಿ ಸಂಗ್ರಹಿಸಿದ್ದ ಖಾಸಗೀ ಬ್ಯಾಂಕಿಂಗ್ ಸಂಸ್ಥೆ ‘ಆರ್ಬತ್ ನಾಟ್ ಅಂಡ್ ಕಂಪನಿ’ ಏಕಾಏಕಿ ತನ್ನ ವಹಿವಾಟನ್ನು ನಿಲ್ಲಿಸಿತು. ದಕ್ಷಿಣಭಾರತದಲ್ಲೇ ದೊಡ್ಡ ಬ್ಯಾಂಕ್ ವಹಿವಾಟಿನ ಸಂಸ್ಥೆ, ಹಿಂದಿನ ಶನಿವಾರವೂ ವಹಿವಾಟು ನಡೆಸಿತ್ತು. ಠೇವಣಿ ಹಣ ಸ್ವೀಕರಿಸಿತ್ತು. ಸೋಮವಾರ ದಿವಾಳಿ ಎದ್ದಿತೆಂದರೆ ಹೇಗೆ? ೧೦೦೦ ಠೇವಣಿದಾರರಿಗೆ ಹೇಗಾಗಿರ ಬೇಡ? ಅವರ ಆಶ್ರಿತರು ಅಭಿಮಾನಿಗಳ ಸಂಖ್ಯೆ ಎಷ್ಟಿರಬೇಡ!

‘ಹಿಂದೂ’ ಈ ಪ್ರಕರಣವನ್ನು ಬಯಲಿಗೆಳೆಯಲು ತನ್ನ ಶಕ್ತಿಯನ್ನೆಲ್ಲಾ ಬಳಸಿತು. ಪತ್ರಿಕೆಯ ಒತ್ತಾಯದ ಫಲ, ಸಂಸ್ಥೆಯ ದೈನಂದಿನ ವ್ಯವಹಾರ ನೋಡಿಕೊಳ್ಳಲು ಸರ್ಕಾರ, ವಾರಸುದಾರರನ್ನು ನೇಮಿಸಿತು.

ಸಂಸ್ಥೆ ಉದ್ದೇಶಪೂರ್ವಕವಾಗಿ ವಂಚನೆ ಯಲ್ಲಿ ತೊಡಗಿದ್ದು, ಸಂಸ್ಥೆಯ ಪಾಲುಗಾರರ ಸ್ವಂತ ಬಂಡವಾಳವೇ ಇಲ್ಲದೆ ಇದ್ದದ್ದು, ಲಾಭವನ್ನು ತಮ್ಮ ಬಂಧು ಮಿತ್ರರ ಹೆಸರಿಗೆ ವರ್ಗಾಯಿಸಿ ಕೊಂಡದ್ದು – ಎಲ್ಲ ಬೆಳಕಿಗೆ ಬಂದವು. ಈ ಕಪಟ ವಂಚನೆಗಳನ್ನು ಗಮನಿಸಿ ಸರ್ಕಾರ ಕ್ರಮ ಕೈಗೊಳ್ಳದೆ ನಿಷ್ಕ್ರ್ರಿಯವಾಗಿದ್ದನ್ನು ‘ಹಿಂದೂ’  ಅತ್ಯುಗ್ರವಾಗಿ ಖಂಡಿಸಿತು. ಸಂಸ್ಥೆಯ ಜವಾಬ್ದಾರಿ ೨೨೨.೫ ಲಕ್ಷ ರೂಪಾಯಿಗಳಿಷ್ಟಿದ್ದರೆ, ಆಸ್ತಿ ಇದ್ದದ್ದು ೭೬ ಲಕ್ಷ ರೂಪಾಯಿ ಮಾತ್ರ. ಇಂಥ ಸನ್ನಿವೇಶದಲ್ಲಿ ಸರ್ಕಾರ ಸೂಕ್ತವಾಗಿ ನಡೆದುಕೊಳ್ಳದಿದ್ದರೆ “ಬ್ರಿಟಿಷರ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಜನತೆ ನಂಬಿಕೆ ಕಳೆದುಕೊಳ್ಳುವುದು ಖಚಿತ’ವೆಂದು ಹಿಂದೂ ಬರೆಯಿತು.

ತಕರಾರು, ಉಚ್ಚನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಾಗ ಠೇವಣಿದಾರರ ಪರ ವಹಿಸಲು ಭಾರತೀಯ ‘ಬ್ಯಾರಿಸ್ಟರ್‌ಗಳೇ ಸಿಕ್ಕಲಿಲ್ಲ. ಕಂಪನಿಯ ಪರ ಪ್ರಸಿದ್ಧರಾದ ಬ್ರಿಟಿಷ್ ಬ್ಯಾರಿಸ್ಟರ್, ಮದರಾಸಿನ ಖ್ಯಾತ ವಕೀಲ ವಿ. ಕೃಷ್ಣಸ್ವಾಮಿ ಅಯ್ಯರ್ ಸಂಸ್ಥೆಯ ಠೇವಣಿದಾರನ ಅರ್ಹತೆಯ ಮೇಲೆ ಎರಡು ವಾರಗಳ ಕಾಲ ಪಾಟೀ ಸವಾಲು ನಡೆಸಿದರು.

ಲೆಕ್ಕಪತ್ರಗಳ ಕೃತಕತೆ, ಹಣದ ದುರುಪಯೋಗ, ಸ್ವಂತದ ಲೆಕ್ಕಕ್ಕೆ ಹಣ ರವಾನೆ, ಪಡೆದ ಹಣ ಲೆಕ್ಕಕ್ಕೆ ಸೇರದೆ ಇದ್ದದ್ದು ಮತ್ತು ಅಮೂಲ್ಯ ದಾಖಲೆಗಳ ನಾಶದ ಅಂಶಗಳು ತೀರ್ಪಿನಲ್ಲಿ ದೃಢಪಟ್ಟಾಗ ಮದರಾಸಿನ ಪಾಲುಗಾರ, ಆಗ ಸಮಾಜದಲ್ಲಿ ಬಹು ಗೌರವ ಪಡೆದ ವ್ಯಕ್ತಿ ಸರ್ ಜಾನ್ ಆರ್ಬತ್ ನಾಟ್ ೧೮ ತಿಂಗಳ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಯಿತು. ‘ಹಿಂದೂ’ ಜನರ ಪರ ನಿಂತು ಗೆಲುವು ಸಾಧಿಸಿದ್ದಾಯಿತು. ಆದರೆ ಜನತೆಗೇನು ಲಾಭ? ಹಣ ಪೋಲಾಯಿತು. ನಂಬಿಕೆ ಸವೆದಿತ್ತು. ಬ್ಯಾಂಕ್ ಎಂದರೆ ಜನ ಭೀತರಾಗುತ್ತಿದ್ದರು. ದೇಶದ ವಾಣಿಜ್ಯ ವಹಿವಾಟು, ದೇಶೀಯ ಉದ್ಯಮ ಬೆಳೆಸುವ ಉದ್ದೇಶ ಹೊಂದಿದ್ದ ಕಸ್ತೂರಿಯವರು ಮುನ್ನೆಚ್ಚರ ವಹಿಸಿ “ಇಂಡಿಯನ್ ಬ್ಯಾಂಕ್” ಹುಟ್ಟು ಹಾಕಿದರು. ೨೦ ಲಕ್ಷ ರೂಪಾಯಿಗಳ ಬಂಡವಾಳದೊಡನೆ ದೇಶೀಯ ಬ್ಯಾಂಕ್ ಕಾರ್ಯಾರಂಭ ಮಾಡಿತು.

ಅನ್ಯಾಯದ ವಿರುದ್ದ

ಬ್ರಿಟಿಷರ ತಂತ್ರದ ವಿರುದ್ಧ ಪ್ರತಿಭಟಿಸುವ ಕೆಚ್ಚು ದೇಶದಲ್ಲಿ ಮೂಡುತ್ತಿತ್ತು. ದಕ್ಷಿಣದಲ್ಲಿ ‘ಹಿಂದೂ’ ಈ ಕಾರ್ಯದ ಮೊದಲಿಗ ಎನಿಸಿತು.

ತಿರುನೆಲ್‌ವೇಲಿ ಜಿಲ್ಲೆಯ ತೂತುಕ್ಕುಡಿ ರೇವಿನಿಂದ ಕೊಲಂಬೋ (ಸಿಂಹಳ) ವರೆಗಿನ ನೌಕಾಯಾನ ಮತ್ತು ಸರಕು ಸಾಗಣೆಗಳ ಉದ್ದಿಮೆ ಆಂಗ್ಲ್ಲ ಸಂಸ್ಥೆಗಳ ಏಕಸ್ವಾಮ್ಯಕ್ಕೊಳಪಟ್ಟಿತು. ಕಸ್ತೂರಿಯವರು ವ್ಯಾಪಕವಾಗಿ ದೇಶೀಯ ಉದ್ದಿಮೆಯ ಪ್ರಚಾರ ನಡೆಸಿದ್ದರು. ಇದರ ಫಲ ಚಿದಂಬರಂ ಪಿಳ್ಳೆ ಎನ್ನುವವರ ದೇಶೀಯ ನೌಕಾಯಾನ ಸಂಸ್ಥೆ ಕಾರ್ಯಾರಂಭ ಮಾಡಿತು. ಆಂಗ್ಲರ ಸಂಸ್ಥೆಗೆ ಇದರಿಂದ ಒಡಲು ಉರಿ ಆರಂಭವಾಯಿತು.

ಒ. ವಿ. ಚಿದಂಬರಂ ಪಿಳ್ಳೆಯವರು ಕಾರ್ಮಿಕ ನಾಯಕರು ಆಗಿದ್ದರು. ಅಲ್ಲೇ ಇದ್ದ ಬ್ರಿಟಿಷ್ ಒಡೆತನದ ಜವಳಿ ಗಿರಣಿ ಭಾರಿ ಲಾಭ ಗಳಿಸಿ ತನ್ನ ಪಾಲುಗಾರರಿಗೆ ಶೇಕಡ ೬೦ರಷ್ಟು ಲಾಭಾಂಶ ಹಂಚಿಕೊಡುತ್ತಿತ್ತು. ಕಾರ್ಮಿಕರು ವೇತನ ಏರಿಕೆ ಬೇಡಿಕೆ ಮುಂದಿಟ್ಸರು. ಹೋರಾಟದಲ್ಲಿ ಗೆಲವು ಕಾರ್ಮಿಕರದಾಯಿತು. ನೌಕಾಯಾನ ರಂಗದಲ್ಲಿ ಸೋಲು ಎದುರಿಸುತ್ತಿದ್ದಾಗಲೇ ಕಾರ್ಮಿಕರಂಗದಲ್ಲಿ ಉಂಡ ಸೋಲಿನಿಂದ ಆಂಗ್ಲರಲ್ಲಿ ಸೇಡಿನ ಭಾವನೆ ಮೂಡಿತು. ಚಿದಂಬರ ಪಿಳ್ಳೆಯವರು ತೂತುಕ್ಕುಡಿ ಮತ್ತು ತಿರುನೆಲ್‌ವೇಲಿಗಳಲ್ಲಿ ಹಿರಿಯ ದೇಶಭಕ್ತ ಬಿಪಿನ್ ಚಂದ್ರಪಾಲರ ಗೌರವಾರ್ಥ ಉಚಿತ ಆಸ್ಪತ್ರೆ ಮತ್ತು ಉಚಿತ ವಾಚನಾಲಯಗಳ ಪ್ರಾರಂಭೋತ್ಸವದ ಕಾರ್ಯಕ್ರಮ ಹಾಕಿಕೊಂಡಿದ್ದರು.

ಎರಡು ದಿನಗಳ ಮೊದಲು ಜಿಲ್ಲಾಧಿಕಾರಿಗಳ

ಆದೇಶ-‘ಸಮಾರಂಭಗಳನ್ನು ನಡೆಸಕೂಡದು; ಭಾಗ ವಹಿಸಲೂ ಕೂಡದು, ತಕ್ಷಣ ತೂತುಕ್ಕುಡಿಯಿಂದ ಹೊರಕ್ಕೆ ಹೋಗಬೇಕು.’ ಪಿಳ್ಳೆಯವರು ಜಗ್ಗಲಿಲ್ಲ. ನಿಷೇಧಾಜ್ಞೆ ಜಾರಿಯಾಯಿತು. ಅವರು ಸದ್ವರ್ತನೆ ಮುಚ್ಚಳಿಕೆ ಕೊಡಬೇಕೆಂಬ ಆಜ್ಞೆ ಹೊರಡಿಸಿದರು. ಆವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ದರು. ಅವರು ಜಾಮೀನಿನ ಮೇಲೆ ಬಿಡುಗಡೆ ಪಡೆಯಲು ಒಪ್ಪಲಿಲ್ಲ. ಬಂಧನ ಜನತೆ ಸಹಿಸಲಿಲ್ಲ. ಜನರಿಂದ ಪ್ರತಿಭಟನೆ ನಡೆಯಿತು. ಪ್ರದರ್ಶನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ನಾಲ್ಕು ಮಂದಿ ಸತ್ತರು.

ಈ ಪ್ರಕರಣಧ ಹಿನ್ನೆಲೆಯ ಸವಿಸ್ತಾರ ವರದಿಯನ್ನು ‘ಹಿಂದೂ’ ಪ್ರಕಟಿಸಿತು. ಉಗ್ರ ಟೀಕೆಯ ಸಂಪಾದಕೀಯ

ಬರೆಯಿತು. ಬಂಧನದ ವಿರುದ್ಧ ಉಚ್ಚ ನ್ಯಾಯಾಲಯದ ತೀರ್ಪು ಪಡೆದರೂ, ಸರ್ಕಾರದ ರೊಚ್ಚು ತಗ್ಗಲಿಲ್ಲ. ಚಿದಂಬರ ಪಿಳ್ಳೆಯವರಿಗೆ ನಾಲ್ಕು ವರ್ಷ ಬಂಧನದ ಶಿಕ್ಷೆಯಾಯಿತು. “ಆಪಾದಿತರಿಗೆ” ಸಲ್ಲಬೇಕಾಗಿದ್ದ ನ್ಯಾಯ ಸಮ್ಮತವಾದ ವಿಚಾರಣೆ ನಡೆದಿಲ್ಲವೆಂಬುದು ನ್ಯಾಯಾಲಯದ ನಡವಳಿಕೆಯಿಂದ ಸ್ಪಷ್ಟವಾಗಿದೆ” ಎಂದು ‘ಹಿಂದೂ’ ಬರೆಯಿತು. ಹೀಗೆ ಬರೆಯುವುದು ಆಗಿನ ಕಾಲಕ್ಕೆ ಸುಲಭದ ಮಾತಾಗಿರಲಿಲ್ಲ.

ನಿರ್ಭೀತ ಪತ್ರಕರ್ತ

ದೇಶಭಕ್ತ ರಾಜಕಾರಣಿಗಳನ್ನು ಹತೋಟಿಯಲ್ಲಿ ಇಡಲು ಸರ್ವ ಸಾಹಸ ಮಾಡುತ್ತಿದ್ದ ಆಂಗ್ಲ ಸರ್ಕಾರ, ಪತ್ರಿಕೆಗಳ ಮೇಲೂ ಖಡ್ಗ ಝಳಪಿಸಲು ಪ್ರಾರಂಭಿಸಿತು. ‘ಸ್ವ್ವದೇಶ ಮಿತ್ರನ್’ ಪತ್ರಿಕೆಯ ಸಂಪಾದಕ ಜಿ. ಸುಬ್ರಮಣ್ಯ ಅಯ್ಯರ್ ಮತ್ತು ‘ಇಂಡಿಯ’ ಪತ್ರಿಕೆಯ ಸಂಪಾದಕ ಎಂ. ಶ್ರೀನಿವಾಸನ್‌ರವರ ಮೇಲೆ ರಾಜದ್ರೋಹದ ಆಪಾದನೆಯನ್ನು ಹೊರಿಸಿ ಖಟ್ಲೆ ಹೂಡಲು ನಿರ್ಧರಿಸಿತ್ತು. ಉಭಯ ಸಂಪಾದಕರನ್ನೂ ಬಂಧಿಸಿತು. ಪತ್ರಿಕಾದಮನದ ಈ ವ್ಯವಹಾರವನ್ನು ‘ಹಿಂದೂ’ ಉಗ್ರವಾಗಿ ಪ್ರತಿಭಟಿಸಿದ್ದರಿಂದ ಸರ್ಕಾರ ತನ್ನ ಪ್ರಯತ್ನವನ್ನು ಮುಂದುವರಿಸಲಿಲ್ಲ.

‘ಹಿಂದೂ’ ಸಂಪಾದಕ ಕಸ್ತೂರಿಯವರನ್ನು ಬಂಧಿಸಲಾಗುವುದೆಂಬ ಸರ್ಕಾರದ ಸನ್ನಾಹ ಅವರ ಕಿವಿಗೂ ಮುಟ್ಟಿತು. ರಾತ್ರೋರಾತ್ರಿ ಅವರ ಮನೆಗೆ ಧಾವಿಸಿದ

ಆಭಿಮಾನಿಗಳು ತಮಗೆ ತಲುಪಿದ್ದ ವದಂತಿಯನ್ನು ತಿಳಿಸಿ ‘ಕಚೇರಿ ಶೋಧನೆಯಾಗುತ್ತಿದೆ. ನಿಮ್ಮನ್ನು ಬಂಧಿಸುತ್ತಾರೆ. ಹಾಗಾದರೆ ಅದಕ್ಕೆ ಏನು ಸಿದ್ಧತೆ ಮಾಡಿಕೊಂಡಿದ್ದೀರಿ? ಮಹಾಕವಿ ಸುಬ್ರಮಣ್ಯ ಭಾರತಿಯವರ ಹಾಗೆ ಫ್ರೆಂಚರ ಹತೋಟಿಯಲ್ಲಿರುವ ಪಾಂಡಿಚೆರಿಗೆ ಹೋಗಿಬಿಡಿ” ಎಂದು ಸೂಚಿಸಿದರು.

“ಬಂಧನ ಆಗುವುದಾದರೆ ಆಗಲಿ, ಚಿಂತೆಯಿಲ್ಲ, ನನ್ನ ಕಚೇರಿಯಲ್ಲಿ ಶೋಧಿಸಿ ತೆಗೆದುಕೊಂಡು ಹೋಗಬಹುದಾದ ಗುಪ್ತವಾದ ದಾಖಲೆಗಳೂ ಇಲ್ಲ: ಬಂಧನವಾಗುತ್ತದೆಂದು ನಾನು ಸಿದ್ಧತೆ ಮಾಡಿಕೊಳ್ಳಬೇಕಾದ್ದೂ ಇಲ್ಲ. ಪಾಂಡಿಚೆರಿಗೆ ಹೋಗಿ ತಲೆ ಮರೆಸಿಕೊಳ್ಳುವುದಿಲ್ಲ. ಇಲ್ಲೇ ಇದ್ದು ಸೆಣಸುತ್ತೇನೆ ಏನಾಗುತ್ತದೋ ನೋಡೋಣ” – ಇದು ಕಸ್ತೂರಿಯವರು ತಳೆದ ನಿಲುವು.

ಸರ್ಕಾರದ ಅಧಿಕಾರಿಗಳು ಪ್ರವಾಸ ಕಾಲದಲ್ಲಿ ಅಲ್ಲಲ್ಲಿ ಬಿಡಾರ ಮಾಡುವುದು ರೂಢಿ. ಅಂಥ ಸ್ಥಳಗಳಲ್ಲಿ ಅವರಿಗೆ ಅವಶ್ಯವಿರುವ ವಸ್ತುಗಳ ಸರಬರಾಜು ನಡೆಯುತ್ತದೆ. ಈ ರೀತಿ ಉಚಿತ ಅನುಕೂಲ ಪಡೆಯವುದು ನಿಷಿದ್ಧ. ಇವಕ್ಕೆಲ್ಲ ಉನ್ನತಾಧಿಕಾರಿಗಳೇ ಹೊಣೆಗಾರರೆಂದು ‘ಹಿಂದೂ ಬರೆದಾಗ, ಸರ್ಕಾರಕ್ಕೆ ಸಹಿಸಿಕೊಳ್ಳುವುದು ಕಷ್ಟವಾಯಿತು. ಸರ್ಕಾರದ ಶ್ರೇಷ್ಠ ಕಾರ್ಯದರ್ಶಿ ಪತ್ರ ಬರೆದು ‘ನಿರ್ದಿಷ್ಟ ಪ್ರಕರಣಗಳನ್ನು ತಿಳಿಸಿ’ರೆಂದು ಕೇಳಿದರು.

ಜಿಲ್ಲಾಧಿಕಾರಿಗಳ ಮಡದಿಗೆ ಓಲೆ, ಇನ್ನೊಬ್ಬ ಅಧಿಕಾರಿಗೆ ಚಿನ್ನದ ಸರದ ಕೊಡುಗೆ ನೀಡಿದ ಪ್ರಸಂಗಳನ್ನೆಲ್ಲ ಉದಹರಿಸಿದಾಗ ತೆಪ್ಪನಾಗಬೇಕಾಯಿತು.

ಅಧಿಕಾರಿಗಳನ್ನು ಆಳರಸರನ್ನು ಓಲೈಸಿ ಏನಾದರೂ ಗಿಟ್ಟಿಸಿಕೊಳ್ಳುವ ಹಗುರದ ಹಾದಿಯನ್ನೆಂದೂ ಕಸ್ತೂರಿ ಯವರು ಅನುಕರಿಸಲಿಲ್ಲ. ಸತ್ಯವನ್ನು ಕಂಡು ಹಿಡಿಯವುದು ಘನತೆವೆತ್ತ ವೃತ್ತಿ. ಅದರ ಪ್ರಕಾಶನ ಒಂದು ಕರ್ತವ್ಯವೆಂಬ ಧ್ಯೇಯವಾಕ್ಯಕ್ಕೆ ಚ್ಯುತಿಬಾರದಂತೆ ಅವರು ಪತ್ರಿಕೆಯನ್ನು ನಡೆಸಿದರು.

ವಿಶಿಷ್ಟ ಆತ್ಮಸ್ಥೈರ್ಯವನ್ನು ‘ಹಿಂದೂ’ ಪ್ರಕಟಿಸಿದ್ದು, ೧೯೧೧ರಲ್ಲಿ. ಅದುವರೆಗೆ ಮದರಾಸ್ ರಾಜ್ಯದ ಗೌರ‍್ನರ್ ಆಗಿದ್ದ ವ್ಯಕ್ತಿಯ ಅಧಿಕಾರಾವಧಿಯನ್ನು ಮತ್ತು ಆತ ನಡೆಸಿದ ದಮನ ಕಾರ್ಯವನ್ನು ವಿಸ್ತಾರವಾಗಿ ವಿಮರ್ಶಿಸಿ ‘ಹಿಂದೂ’ ಲೇಖನಮಾಲೆಯನ್ನೇ ಹೊರಡಿಸಿತು. ಪರಾಧೀನತೆಯ ಅಂದಿನ ದಿನಗಳಲ್ಲಿ ಉನ್ನತಾಧಿಕಾರಿ ಇನ್ನೂ ಅಧಿಕಾರದಲ್ಲಿ ಇರುವಾಗಲೇ ಅವನ ಆಡಳಿತಕ್ಕೆ ಕನ್ನಡಿ ಹಿಡಿದು ಕಟೂಕ್ತಿಯಾಡುವುದು ಸಾಮಾನ್ಯ ಸಾಹಸವಾಗಿರಲಿಲ್ಲ, ‘ಹಿಂದೂ’ ವಿರುದ್ಧ ಕತ್ತಿ ಮಸೆಯುತ್ತಿದ್ದರೂ, ಅದಕ್ಕಿದ್ದ ಅಪಾರ ಜನ ಬೆಂಬಲ ಗಮನಿಸಿ ಸರ್ಕಾರ ಮೂಕಯಾತನೆ ಅನುಭವಿಸುತ್ತಿತ್ತು.

ಐದನೇ ಜಾರ್ಜ್ ದೊರೆಯ ಕೀರೀಟ ಧಾರಣೆ

ಸಮಾರಂಭ ದೆಹಲಿಯಲ್ಲಿ ಏರ್ಪಾಟಾಗಿದ್ದು ಈಗಲೇ. ಅದಕ್ಕೆ ಆಮಂತ್ರಣ ಪಡೆಯಲು ಎಲ್ಲರಿಗೂ ಆತುರ. ಆಗ ಅದು ಗೌರವದ ವಿಷಯವಾಗಿತ್ತು. ದೆಹಲಿ ದರ್ಬಾರ್‌ನಲ್ಲಿ ಭಾಗವಹಿಸುವಂತೆ ಕಸ್ತೂರಿಯವರಿಗೆ ಆಮಂತ್ರಣ ತಲುಪಿತು. ಆದರೆ ಅಲ್ಲಿ ಭಾರತೀಯ ಮತ್ತು ಐರೋಪ್ಯ ಪತ್ರಕರ್ತರಿಗೆ ಒಂದೇ ಮಟ್ಟದ ಗೌರವ ದೊರಕದೆಂಬ ವಾರ್ತೆ ತಿಳಿಯಿತು. ತಕ್ಷಣ ಕಾರಣ ತಿಳಿಸಿ, “ಆಹ್ವಾನ ಅಂಗೀಕರಿಸಲು ಸಾಧ್ಯವಿಲ್ಲ’ವೆಂದು ಕಸ್ತೂರಿಯವರು ಬರೆದುಬಿಟ್ಡರು. ತಾರತಮ್ಯವೇನೂ ಇರದು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದನಂತರವೇ ಅದರಲ್ಲಿ ಪಾಲ್ಗೊಂಡರು.

ಇಷೆಲ್ಲ ಕೆಚ್ಚು-ಕಲಿತನ ಪ್ರದರ್ಶಿಸಿದರೂ ಕಸ್ತೂರಿಯವರು ಸಂಪಾದಕತ್ವ ವಹಿಸಿಕೊಂಡ ಐದು ವರ್ಷಗಳ ಅವಧಿಯಲ್ಲಿ ಪತ್ರಿಕೆಯ ಸ್ಥಿತಿಗತಿಯನ್ನೂ ಉತ್ತಮ ಪಡಿಸಿದರು. ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿ ಗೆದ್ದರು. ಎಲ್ಲ ಸಂದರ್ಭಗಳಲ್ಲೂ ಸಂಯಮ, ದೈರ್ಯ ಮತ್ತು ಘನತೆಯಿಂದ ವ್ಯವಹರಿಸಿದರು. ಪತ್ರಿಕೆಯ ಪ್ರಸಾರ ಬೆಳೆಸಿದರು. ಜಾಹೀರಾತುಗಳಿಂದ ಆದಾಯ ದೊರಕತೊಡಗಿತು. ಸಂಸ್ಥೆಯ ಮೇಲಿನ ಒಂದು ಲಕ್ಷ ರೂಪಾಯಿಗಳಿಗೂ ಮೀರಿದ ಭಾರವನ್ನು ಇಳಿಸಿದರು.

ಸರ್ಕಾರದ ಆಯೋಗದ ಮುಂದೆ

ಬ್ರಿಟಿಷರ ಆಡಳಿತದಲ್ಲಿ ಭಾರತೀಯರಿಗೆ ಹೆಚ್ಚು ಪಾಲು ಕೊಡಬೇಕೆಂಬ ಬೇಡಿಕೆಯ ಪರಿಶೀಲನೆಗಾಗಿ ಒಂದು ಆಯೋಗದ ರಚನೆ (೧೯೯೩) ಆಗಿತ್ತು. ಉನ್ನತ ಹುದ್ದೆಗಳಲ್ಲಿ ಭಾರತೀಯರಿಗೆ ಸೂಕ್ತವಾದ ಪಾಲಿರಬೇಕು, ಐ.ಸಿ.ಎಸ್. ಪರೀಕ್ಷೆ ಬ್ರಿಟನ್-ಭಾರತಗಳಲ್ಲಿ ಏಕಕಾಲದಲ್ಲಿ ನಡೆಯಬೇಕು, ಭಾರತೀಯ ನ್ಯಾಯಾಧೀಶರ ನೇಮಕವಾಗಬೇಕು. ಭಾರತೀಯ ನ್ಯಾಯಾಧೀಶನರ ನೇಮಕವಾಗಬೇಕು -ಇವು ಜನತೆಯ ಬೇಡಿಕೆಗಳಾಗಿದ್ದವು. ಮನಮುಟ್ಟುವಂತೆ ಈ ಅಂಶಗಳನ್ನು ಲೇಖನಮಾಲೆಯಲ್ಲಿ ಪ್ರಕಟಿಸಿ ಕಸ್ತೂರಿಯವರು ಉಳಿದೆಲ್ಲರ ಕಾರ್ಯವನ್ನು ಹಗುರಗೊಳಿಸಿದರಲ್ಲದೆ, ಆಯೋಗದ ಮುಂದೆ ಹಾಜರಾಗಿ ಈ ಅಂಶಗಳನ್ನು ಗಂಭೀರವಾಗಿ ಪ್ರತಿಪಾದಿಸಿದರು.

ಸಕ್ರಿಯ ರಾಜಕಾರಣ

೧೯೧೫ರಲ್ಲಿ ಡಾಕ್ಟರ್ ಆನಿ ಬೆಸೆಂಟ್ ಕಾಂಗ್ರೆಸ್ ಸಂಸ್ಥೆ ರಕ್ತಹೀನವಾಗಿರುವುದನ್ನು ಬದಲಿಸಲು ಪ್ರಯತ್ನ ಕೈಗೊಂಡರು. ಪತ್ರಿಕೆಯನ್ನು ಹುಟ್ಟು ಹಾಕಿದರು. ಹೋಮ್ ರೂಲ್ ಲೀಗ್ ಕಟ್ಟಿದರು. ಕಸ್ತೂರಿಯವರ ದೇಶಪ್ರೇಮ ಮತ್ತು ಉಗ್ರಗ್ರಾಮಿ ನಿಲುವು ತಿಳಿದ ಬೆಸೆಂಟರು ಅವರ ಜೊತೆಗೂಡಿದರು. ಆರು ವರ್ಷಗಳ ಬಂಧನದಿಂದ ಮುಕ್ತರಾಗಿ ಹೊರಬಂದ ತಿಲಕರೂ ಕೈಗೂಡಿಸಿದರು.

ಈ ಕೂಟ ಮತ್ತು ನಿರ್ಧಾರಗಳು ಮದರಾಸಿನ ಗೌರ‍್ನರರನ್ನು ಕಂಗೆಡಿಸಿದವು. ಚಳವಳಿಯನ್ನು ತುಳಿಯುವ ಅವರ ನಿರ್ಧಾರ ಮತ್ತು ಮುನ್ನೆಚ್ಚರಿಕೆಗಳನ್ನು ಧಿಕ್ಕರಿಸಿ ಕಸ್ತೂರಿಯವರು ಅಗ್ರ ಲೇಖನಗಳನ್ನು ಬರೆದರು.

ಒಂಬತ್ತು ವರ್ಷಕಾಲ ಕಾಂಗ್ರೆಸ್‌ನಿಂದ ದೂರವಾಗಿದ್ದ ಉಗ್ರಗಾಮಿಗಳ ಕೈ ಬಲವಾಗುತ್ತಾ ಬರತೊಡಗಿತ್ತು (೧೯೯೬). ಲಕ್ನೋ ಕಾಂಗ್ರೆಸ್ ಅಧಿವೇಶನದ ಫಲವಾಗಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ಗಳು ಜತೆಗೂಡಿ ನಡೆಯುವುದು ಸಾಧ್ಯ ವಾಯಿತು. ಬ್ರಿಟಿಷ್ ಸರ್ಕಾರ ಉದ್ದೇಶಿಸಿರುವ ಆಡಳಿತ ಸುಧಾರಣೆಗೆ ಕಾಂಗ್ರೆಸ್ ಮತ್ತು ಲೀಗ್‌ಗಳು ಒಂದುಗೂಡಿ ಒಂದೇ ನಿಲುವನ್ನು ತಳೆಯಬೇಕೆಂಬ ಪ್ರಯತ್ನವನ್ನು ಕೈಗೂಡಿಸಿದ ಶ್ರೇಯಸ್ಸಿನ ಬಹುಪಾಲು ಕಸ್ತೂರಿಯವರದಾಗಿತ್ತು. ಒಂದು ಕಡೆ ಸುಧಾರಣೆಯ ಮಾತನ್ನು ಆಡುತ್ತಲೇ ಇನ್ನೊಂದು ಕಡೆ ದಮನಕಾರ್ಯವನ್ನು ಸರ್ಕಾರ ಮುಂದುವರೆಸಿತ್ತು. ಬೆಸೆಂಟರ ಮೇಲೆ ದಿಗ್ಭಂಧನ ಮತ್ತು ಅವರ ಪತ್ರಿಕೆಯ ಮೇಲೆ ಠೇವಣಿ ವಸೂಲಿಯನ್ನು ಸರ್ಕಾರ ಕೈಗೊಂಡಿತು. ಬೆಸೆಂಟರನ್ನು ಗೃಹಬಂಧನಕ್ಕೆ ಒಳಪಡಿಸಿದಾಗ ದಕ್ಸಿಣ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕರೇ ಇಲ್ಲವಾದಂತೆ ಆಯಿತು. ಕಸ್ತೂರಿಯವರಿಗೆ ಸಂಪಾದಕ ಕಚೇರಿಯಿಂದ ಹೊರಬರುವುದು ಅನಿವಾರ್ಯವಾಯಿತು. ಆವದೆಗೆ ಅವರು ದೈನಂದಿನ ರಾಜಕೀಯದಲ್ಲಿ ಪತ್ರಕರ್ತ ನೇರವಾಗಿ

ಪಾಲ್ಗೊಳ್ಳಬಾರದೆಂಬ ನೀತಿ ಸೂತ್ರಕ್ಕೆ ಕಟ್ಟು ಬಿದ್ದಿದ್ದರು. ಆದರೆ ನಾಯಕರ ಅಭಾವ ನೀಗುವ ನೈತಿಕ ಹೊಣೆಗಾರಿಕೆ ನಿರ್ವಹಿಸಲೇಬೇಕಾದಾಗ ಅದನ್ನು ಒಪ್ಪಿಕೊಂಡರು. ಮದರಾಸ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದರು. ಆಂದೋಲನಕ್ಕೆ ಹೊಸ ಹುರುಪು ಸಿಕ್ಕಿತು.

ಬೆಸೆಂಟರ ಬಿಡುಗಡೆಗಾಗಿ ಕಸ್ತೂರಿಯವರು ನಡೆಸಿದ ಬಿರುಸಿನ ಹೋರಾಟ, ಕೈಗೊಂಡ ಪ್ರತಿಜ್ಞೆಗಳ ಫಲವಾಗಿ ಗುರಿ ಸಾಧನೆಯಾಯಿತು. ಅವರಿಗೆ ಭುಜಬಲ ಸಿಕ್ಕಿದಂತಾಯಿತು.

ವಿದೇಶಿ ನೆಲೆಯಲ್ಲಿ

ಯುದ್ಧರಂಗಕ್ಕೆ ಭಾರತೀಯ ಪತ್ರಕರ್ತರನ್ನು ಕರೆದುಕೊಂಡು ಹೋಗಿ ಪರಿಚಯ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಕಸ್ತೂರಿಯವರನ್ನು ಆಹ್ವಾನಿಸಿತು. ಪ್ರವಾಸದಲ್ಲಿ ಬ್ರಿಟನ್ ಭೇಟಿ ಕೂಡ ಸೇರಿದ್ದರಿಂದ ಅಲ್ಲಿ ಭಾರತೀಯರ ಅಭಿಪ್ರಾಯವನ್ನು ಹರಡಲು ಅಸ್ಪದ ವಾಗುತ್ತದೆಂಬ ಆಸೆ ಮೊಳೆಯಿತು. ಮಿತ್ರ ಅಭಿಮಾನಿಗಳೂ ಒತ್ತಾಸೆ ಕೊಟ್ಟರು. ಹೀಗೆ ಐದು ಮಂದಿ ಪತ್ರಿಕಾ ಸಂಪಾದಕರ ತಂಡದಲ್ಲಿ ಪ್ರಯಾಣ ಮಾಡಿದರು.

ಮದರಾಸ್ ಪ್ರದೇಶ ಕಾಂಗ್ರೆಸ್, ಮಹಾಜನ ಸಭಾ, ಹೋಮ್ ರೂಲ್ ಲೀಗ್ ಮುಂತಾದ ಸಂಸ್ಥೆಗಳು ಒಂದು

ಗೂಡಿ “ದಕ್ಷಿಣ ಭಾರತದ ಪ್ರತಿನಿಧಿ”ಯನ್ನು ಆದರಿಸಿ ಬೀಳ್ಕೊಟ್ಟವು. ಸಮುದ್ರಯಾನ ಮಾಡಿ ಹಲವು ದೇಶಗಳನ್ನು ಹಾಯ್ದು ಬ್ರಿಟನ್ ಮುಟ್ಟಿದಾಗ ಕಸ್ತೂರಿಯವರಿಗೆ ಒಂದು ವಿಸ್ಮಯ ಕಾದಿತ್ತು – ಯಾವ ಸರ್ಕಾರ ಅವರನ್ನು ಗೌರವ ಅತಿಥಿಯಾಗಿ ಆಮಂತ್ರಿಸಿತ್ತೋ ಅದೇ ಸರ್ಕಾರ, ಅವರು ನಡೆಸುತ್ತಿದ್ದ ಪತ್ರಿಕೆಗೆ ಪ್ರವೇಶ ನಿರಾಕರಿಸಿತ್ತು. ಹೀಗೆ ನಿಷೇಧಕ್ಕೊಳಗಾಗಿದ್ದ ಭಾರತೀಯ ಪತ್ರಿಕೆಗಳು ಆನಿ ಬೆಸೆಂಟರ ‘ನ್ಯೂ ಇಂಡಿಯ’, ‘ಅಮೃತ ಬಜಾರ್ ಪತ್ರಿಕಾ’, ‘ಹಿಂದೂ’ ಮತ್ತು ‘ಬಾಂಬೆ ಕ್ರಾನಿಕಲ್’.

ಐದನೇ ಜಾರ್ಜ್ ದೊರೆಯನ್ನು ಭೇಟಿ ಮಾಡಿದಾಗ ಭಾರತಕ್ಕೆ ಸ್ವಾತಂತ್ರ್ಯ ಕೋರಿ ವಿಜ್ಞಾಪನಾ ಪತ್ರ ಅರ್ಪಿಸಿದರು. ಅಲ್ಲಿನ ‘ಬ್ರಿಟಿಷ್ ಕಮಿಟಿ ಆಫ್ ಕಾಂಗ್ರೆಸ್’ ನಿಷ್ಕ್ರಿಯವಾಗಿತ್ತು. ಅದನ್ನು ಚೇತರಿಸಲು ಪ್ರಯತ್ನಿಸಿದರು. ಅಲ್ಲಿಗೆ ತಮಗಿಂತ ಮೊದಲೇ ಭೇಟಿ ನೀಡಿದ್ದ ಲೋಕಮಾನ್ಯ ತಿಲಕರ ಜತಗೂಡಿ ಅವರ ಪ್ರಯತ್ನಕ್ಕೆ ನೆರವಿತ್ತರು. ಹಲವಾರು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಭಾರತೀಯರ ಆಶೋತ್ತರ, ಸ್ವಾತಂತ್ರ್ಯದ ಅಪೇಕ್ಷೆಗಳನ್ನು ವಿವರಿಸಲು ದೊರೆತ ಎಲ್ಲ ಅವಕಾಶವನ್ನೂ ಬಳಸಿಕೊಂಡರು. ಮಹಾರಾಷ್ಟ್ರದ ಮರಾಠ ದಿನ ಪತ್ರಿಕೆ ಕಸ್ತೂರಿಯವರ ಪ್ರಚಾರಕಾರ್ಯವನ್ನು ಪ್ರಶಂಶಿಸುತ್ತಾ ಬೋನಿನಿಂದ ಸಿಂಹವನ್ನು ಹೊರಕ್ಕೆ ಬಿಟ್ಟಂತಾಗಿದೆ” ಎಂದು ಬರೆಯಿತು.

ಸ್ವದೇಶಕ್ಕೆ ಸಿಂಹಳದ ಮೂಲಕ ಹಿಂದಿರುಗಿದಾಗ ಅಲ್ಲಿ, ಅನಂತರ ಹಾದಿಯುದ್ದಕ್ಕೂ, ಕೊನೆಗೆ ಮದರಾಸಿನಲ್ಲೂ ವಿರೋಚಿತ ಸ್ವಾಗತ ಪಡೆದರು. ವಯಸ್ಸು, ವಿದೇಶ ಪ್ರಯಾಣದ ಅನನುಕೂಲಗಳನ್ನು ಲೆಕ್ಕಿಸದೆ ದೇಶದ ಹಿತಸಾಧನೆಗಾಗಿ ಸಾಗರೋತ್ತರ ಪ್ರಯಾಣ ಮಾಡಿ ಐದು ತಿಂಗಳ ನಂತರ ಮನೆಗೆ ಹಿಂದಿರುಗಿದರೆ, ಹಲವು ದುಃಖದ ಸಮಾಚಾರಗಳನ್ನು ಕೇಳಬೇಕಾಯಿತು. ಒಬ್ಬ ಸೊಸೆ, ಸೋದರಿ, ಅತ್ತಿಗೆ, ಅಣ್ಣನ ಹಿರಿಯ ಮಗ, ಒಬ್ಬ ಮಗಳು ಅಣ್ಣನ ಮೊಮ್ಮಗ ಮತ್ತು ಆತನ ಹೆಂಡತಿ ಇನ್ನೂ ಹಲವು ಬಂಧುಗಳು “ಇನ್‌ಪ್ಲೂಯಂಜಾ” ಎಂಬ ವ್ಯಾಧಿಗೆ ಬಲಿಯಾಗಿದ್ದರು.

ಕಾರ್ಯಮಗ್ನ

ಶೋಕಿಸುತ್ತಾ ಮನೆಯಲ್ಲಿ ಕೂರಲು ವ್ಯವಧಾನ ಇರಲಿಲ್ಲ. ಬ್ರಿಟಿಷ್ ಸರ್ಕಾರ ‘ರೌಲೆಟ್’ ಶಾಸನಗಳೆಂದು ಪ್ರಸಿದ್ಧವಾಗಿದ್ದ ಎರಡು ವಿಧೇಯಕಗಳನ್ನು ಕೇಂದ್ರ ಶಾಸನಸಭೆಯ ಮುಂದಿಟ್ಟಿತು. ದೇಶದಾದ್ಯಂತ ಈ ಶಾಸನಗಳನ್ನು ಪ್ರತಿಭಟಿಸುವ ಸಿದ್ಧತೆ ನಡೆದಿತ್ತು.

ಮದರಾಸಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕಸ್ತೂರಿಯವರು, “ಯುದ್ಧದಲ್ಲಿ ಸಾವುನೋವು” ಉಂಡ ಪಾಲುಗಾರನಿಗೆ ಮಾಡಿದ ವಿಶ್ವಾಸದ್ರೋಹ, ಇವು ಕರಾಳ ಶಾಸನಗಳು” ಎಂದು ಕೆಂಡ ಕಾರಿದರು.

ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ಮಹಾತ್ಮಾ ಗಾಂಧಿಯವರು ಆಗಿನ್ನೂ ಭಾರತದ ರಾಜಕಾರಣಕ್ಕೆ

ಪ್ರವೇಶಿಸಿದ್ದರು. ಶಾಸನವನ್ನು ಹಿಂತೆಗೆದು ಕೊಳ್ಳುವಂತೆ ವೈಸ್‌ರಾಯರನ್ನು ಒಪ್ಪಿಸುವುದರಲ್ಲಿ ವಿಫಲರಾದ ಅವರು ‘ನಿಷ್ಕ್ರಿಯ ಪ್ರತಿರೋಧಕ್ಕೆ ಕರೆ ನೀಡಿದರು. ಹಿಂಸೆಗೆ ಇಳಿಯದೆ ಕಾನೂನನ್ನು ಪ್ರತಿಭಟಿಸುವುದು, ಅದನ್ನು ಪಾಲಿಸದಿರುವ ಪ್ರತಿಜ್ಞೆಯನ್ನು ಸ್ವೀಕರಿಸಿ ಆಚರಿಸುವದು, ಗಾಂಧಿ ಸೂಚಿಸಿದ ಮಾರ್ಗ. ಇದು ಕಸ್ತೂರಿಯವರಿಗೆ ಒಪ್ಪಿಗೆ ಆಯಿತು. ‘ರೌಲೆಟ್’ ಶಾಸನ ವಿರೋಧಿ ಸಮಿತಿಯ ಅಧ್ಯಕ್ಷರನ್ನಾಗಿ ಮದರಾಸಿಗೆ ಗಾಂಧಿಯವರನ್ನು ಬರಮಾಡಿಕೊಂಡರು. ಪ್ರಚಂಡ ಸಭೆ ಗಾಂಧಿವಾಣಿಯನ್ನು ಆಲಿಸಿತು. ಸಾವಿರಾರು ಮಂದಿ ಪ್ರತಿಜ್ಞೆ ಸ್ವೀಕರಿಸಿದರು.

ಪಂಚಾಬಿನಲ್ಲಿ ಅಲ್ಲೋಕಲ್ಲೋಲದ ವಾತಾವರಣ ಉಂಟಾಯಿತು. ಇತಿಹಾಸದಲ್ಲಿ ‘ಕರಾಳ ಕೃತ್ಯ’ವೆನಿಸಿದ ಜಲಿಯನ್ ವಾಲಾಬಾಗ್ ದುರಂತ ೧೩ರಂದು ಸಂಭವಿಸಿತು. ಕ್ರೌರ್ಯದ ರುದ್ರ ನರ್ತನ ನಡೆಯಿತು. ಸುದ್ದಿಯ ಮೇಲೆ ನಿಯಂತ್ರಣವಿದ್ದ ಕಾರಣ ದೇಶಕ್ಕೆಲ್ಲ ಬೇಗನೇ ಈ ಸುದ್ಧಿ ತಿಳಿಯಲಿಲ್ಲ.

ಭಾರತದ ಆರು ಪತ್ರಿಕಾ ಸಂಪಾದಕರ ಪರವಾಗಿ ದೀನಬಂಧು ಸಿ.ಎಫ್. ಆಂಡ್ರೂಸರಿಗೆ ಪಂಚಾಬಿನಲ್ಲಿ ಸಂಚರಿಸಿ ವಸ್ತುಸ್ಥಿತಿ ತಿಳಿಯಲು ಅವಕಾಶ ನೀಡಬೇಕೆಂದು ಕಸ್ತೂರಿ ಯವರು ಪಂಚಾಬ್ ಸರ್ಕಾರವನ್ನು ಕೋರಿದರು. ಅನುಮತಿ ದೊರಕದಿದ್ದಾಗ ಅದನ್ನು ಪ್ರತಿಭಟಿಸಿ ಆಂಡ್ರೂಸರು ಬಂಧನಕ್ಕೆ ಈಡಾದರು.

ಜಲಿಯನ್‌ವಾಲಾಬಾಗ್ ಹತ್ಯಾಕಾಂಡ ಕುರಿತು ಮೇ ಐದರಂದು ಕಸ್ತೂರಿ ಅಗ್ರಲೇಖನ ಬರೆದು ಅಮಾನುಷ ಕ್ರೌರ್ಯವನ್ನು ಖಂಡಿಸಿದರು. ಅದೇ ದಿನ ಸಾರ್ವಜನಿಕ ಸಭೆಯಲ್ಲೂ ಆಂಗ್ಲ ಸರ್ಕಾರವನ್ನು ಉಗ್ರವಾಗಿ ಟೀಕಿಸಿದರು. ಪುನಃ ೮ ರಂದು ಜಲಿಯನ್ ವಾಲಾಬಾಗ್ ದುರಂತ ಕುರಿತು ಲೇಖನ ಬರೆದು “ನೀಲಗಿರಿಯ ತಂಪಿನ ತಾಣದಲ್ಲಿ ಕುಳಿತ ಮದರಾಸ್ ಸರ್ಕಾರಕ್ಕೆ ಪಂಜಾಬಿನ ಬೇಗುದಿ ಅರ್ಥವಾಗಲು ಸಾಧ್ಯವಿಲ್ಲ, ಹಾಗೇ ತಾಯ್ನಾಡಿನ ಪ್ರೇಮ ತುಂಬಿಕೊಂಡ ಪತ್ರಕರ್ತರಿಗಿಂತ ಹೆಚ್ಚು ಆಸಕ್ತಿ ತಳೆಯುವುದು ಸಾಧ್ಯವಿಲ್ಲ ,,,,,,, ಈ ದೇಶದಲ್ಲಿ ಕೇಂದ್ರ ಸರ್ಕಾರವೆಂಬುದೇನಾದರೂ ಅಸ್ತಿತ್ವದಲ್ಲಿದೆಯೇ?” ಎಂದು ಪ್ರಶ್ನಿಸಿದರು.

ಇಂತಹ ಸಮಯಕ್ಕಾಗೇ ಕಾಯುತ್ತಿದ್ದ ಸರ್ಕಾರ ತಕ್ಷಣ ಪತ್ರಿಕೆಯಿಂದ ಎರಡು ಸಾವಿರ ರೂಪಾಯಿಗಳ ಠೇವಣಿ ಕೇಳಿತು. ‘ಹಿಂದೂ’ವನ್ನೇ ಬಗ್ಗು ಬಡಿದ ಮೇಲೆ ಉಳಿದ ಪತ್ರಿಕೆಗಳನ್ನೇಕೆ ಬಿಡುವುದೆಂದು ಸರ್ಕಾರ ಅವುಗಳಿಂದಲೂ ಠೇವಣಿ ಪಡೆಯಿತು.

ಕೆರಳಿದ ಕಸ್ತೂರಿಯವರು ಮಣಿಯದೆ “ದಮನದ ಯಾಗ”ವೆಂಬ ಶೀರ್ಷಿಕೆಯಲ್ಲಿ ಸಂಪಾದಕೀಯ ಬರೆದು “ಈ ಶಿಕ್ಷೆ ‘ಹಿಂದೂ’ಗೆ ಶಿಕ್ಷೆಯೆಂದೇ ನಾವು ಭಾವಿಸುವುದಿಲ್ಲ, ಕವೀಂದ್ರ ರವೀಂದ್ರರು ಯಾವ ಕಾರಣಕ್ಕಾಗಿ ತಮ್ಮ ಪ್ರಶಸ್ತಿಯನ್ನು ತಳ್ಳಿಹಾಕಿದರೋ ಆ ಕಾರಣಕ್ಕೆ ತನ್ನ ಪಾಲಿನ ಕಾಣಿಕೆ ನೀಡುವುದು ಅಭಿಮಾನದ ಸಂಗತಿ” ಎಂದರು.

ಸರ್ಕಾರದ ದಮನ ದೌರ್ಜನ್ಯಗಳನ್ನು ಕುರಿತು ವಿಶೇಷವಾಗಿ ವಿದೇಶಗಳಲ್ಲಿ ಪ್ರಚಾರ ಮಾಡಲೆಂದೇ “ರಾಷ್ಟ್ರೀಯ ಕಾರ್ಯನಿಧಿ”ಯನ್ನು ಬೆಳೆಸಿದರು. ಆಗ ಕಾಂಗ್ರೆಸ್ ಇಂಗ್ಲೆಂಡಿಗೆ ನಿಯೋಗವೊಂದನ್ನು ಕಳಿಸಿತು. ಅದಕ್ಕೆ ಅಗತ್ಯವಾದ ಹಣದ ನೆರವು ಮತ್ತು ಅನುಕರಿಸಬೇಕಾದ ಕಾರ್ಯ ವಿಧಾನದ ಬಗ್ಗೆ ಕಸ್ತೂರಿಯವರು ಸಲಹೆ ನೀಡಿದರು. ನಿಯೋಗವು ಪ್ರಧಾನವಾಗಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ವಿಶೇಷ ಒತ್ತಾಯ ಮಾಡಬೇಕೆಂದು ಕೋರಿದರು.

ಜಲಿಯನ್ ವಾಲಾಬಾಗ್ ವಿಚಾರಣಾ ಸಮಿತಿ ಸದಸ್ಯರಾಗಿ ಕೆಲಸ ಮಾಡಲು ಒಪ್ಪಿದ ಕಸ್ತೂರಿಯವರಿಗೆ ಆರೋಗ್ಯ ಉತ್ತಮವಿರಲಿಲ್ಲ. ಹಲವು ಹತ್ತು ಹೊಣೆಗಾರಿಕೆ ಗಳಿದ್ದವು. ಆದರೂ ಕರ್ತವ್ಯ ವಿಮುಖರಾಗಲಿಲ್ಲ. ೧೯೨೦ರ ಜನವರಿ ಒಂಬತ್ತರಂದು ಅವರ ಷಷ್ಟ್ಯಬ್ಧಿ ಉತ್ಸವ. ಮದರಾಸಿನ ಎಲ್ಲ ಧರ್ಮೀಯರೂ, ಎಲ್ಲ ವರ್ಗಗಳ ಮುಖಂಡರೂ ಕೂಡಿ ಅಭಿನಂದನೆ ಸಲ್ಲಿಸಿದರು. ಸರ್ಕಾರವೂ ಸದ್ಭಾವನೆ ತೋರಿಸಿ ಪಡೆದಿದ್ದ ಠೇವಣಿ ಹಣವನ್ನು ಹಿಂದಿರುಗಿಸಿತು.

ಮಾರ್ಗದರ್ಶನ

‘ಅಸಹಕಾರ’ದ ತತ್ವವನ್ನು ರೂಪಿಸಿದವರಲ್ಲಿ ಒಬ್ಬರಾದ ಕಸ್ತೂರಿಯವರಿಗೂ, ಈ ತತ್ವಕ್ಕೆ ನೈತಿಕ ಸತ್ವ ತುಂಬಿದ ಗಾಂಧಿಯವರಿಗೂ, ಆಚರಣೆಯ ಹಂತದಲ್ಲಿ ಒಮ್ಮತವಿರಲಿಲ್ಲ. ಅಸಹಕಾರದ ಹಲವು ಮಜಲುಗಳಿದ್ದು, ಒಂದನ್ನು ಕೈಗೊಂಡು

ಗುರಿ ಮುಟ್ಟಿಸಿದ ನಂತರವೇ ಅಗತ್ಯ ಕಂಡು ಬಂದರೆ ಮುಂದಿನ ಮಜಲನ್ನು ಆರಂಭಿಸಬೇಕೆಂಬುದು ಕಸ್ತೂರಿಯವರ ನಿಲುವಾಗಿತ್ತು. ಆದ್ದರಿಂದ ಏಕಾಏಕಿ ಚುನಾವಣೆಯನ್ನು ಬಹಿಷ್ಕರಿಸುವುದು ಬೇಡವೆಂಬ ನಿಲುವು ತಳೆದಿದ್ದರು.

ಅಖಿಲ ಭಾರತ ಕಾಂಗ್ರೆಸ್ ಒಪ್ಪಿಕೊಂಡು ‘ನಾಗರಿಕ ಅಸಹಕಾರ’ ಆಂದೋಲವನ್ನು ಮುಂದೂಡಲು ಒಪ್ಪಿದ್ದರೂ ಸರ್ಕಾರ ವಿವೇಕರಹಿತವಾಗಿ ಮಹಾತ್ಮರನ್ನು ಬಂಧಿಸಿತು. ಬ್ರಿಟಿಷ್ ಸರ್ಕಾರದ ನೀತಿಯನ್ನೂ ‘ಹಿಂದೂ’ ಅತ್ಯಂತ ಕಟುವಾಗಿ ವಿಮರ್ಶಿಸಿತು. ಪುನಃ ನಾಗರಿಕ ಅಸಹಕಾರ ಆಂದೋಲನ ಅರಂಭಿಸಬೇಕೆಂಬ ಒತ್ತಾಯ ಮಾಡಿದ್ದರಿಂದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮೋತಿಲಾಲ್, ಕಸ್ತೂರಿ, ರಾಜಾಜಿಯವರ ಸಮಿತಿಯನ್ನು ರಚಿಸಿತು. ನಾಗರಿಕ ಅಸಹಕಾರ ಆಂದೋಲನದ ಪುನರಾರಂಭಕ್ಕೆ ದೇಶ ಸಿದ್ಧವಾಗಿದೆಯೇ ಎಂಬುದನ್ನು ಕಂಡುಹಿಡಿಯುವ ಕಾರ್ಯವನ್ನು ಸಮಿತಿಗೆ ಒಪ್ಪಿಸಲಾಯಿತು. ಕಸ್ತೂರಿಯವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಲಿವರ್ ಬಾಧೆಯಿಂದ ನರಳುತ್ತಿದ್ದರೂ ಡಾಕ್ಟರ್ ಅನ್ಸಾರಿಯವರು ನೀಡಿದ ಧೈರ್ಯದ ಮೇಲೆ ಆರು ತಿಂಗಳ ಸತತ ಪ್ರವಾಸಕ್ಕೆ ಒಪ್ಪಿದರು.

ಸಮಿತಿಯ ಸದಸ್ಯರು ದೇಶವಿನ್ನೂ ನಾಗರಿಕ ಅಸಹಕಾರ ಆಂದೋಲನಕ್ಕೆ ಸಂಪೂರ್ಣ ಸಿದ್ಧವಾಗಿಲ್ಲ, ಆದರೆ

ಅನುಕೂಲವಿದ್ದ ಸ್ಥಳಗಳಲ್ಲಿ ಆರಂಭಿಸಲು ಅಡ್ಡಿಬೇಡ, ತತ್ಕಾಲದಲ್ಲಿ ಶಾಸನಸಭೆ ಪ್ರವೇಶಿಸುವುದು ಬೇಡವೆಂಬ ನಿರ್ಧಾರಕ್ಕೆ ಬಂದರು.

೧೯೨೩ನೇ ಡಿಸೆಂಬರ್ ಹನ್ನೆರಡಕ್ಕೆ ೬೪ ವರ್ಷ ತುಂಬಲು ಮೂರು ದಿನಗಳ ಮೊದಲೇ ಕಸ್ತೂರಿಯವರ ದೇಹಾವಸಾನವಾಯಿತು.

ಆಧುನಿಕಗೊಳ್ಳುತ್ತಿದ್ದ ಪತ್ರಿಕೆಯ ಹೊಣೆಗಾರಿಕೆಯೇ ಸಾಕಷ್ಟಿತ್ತು. ಅದರ ಜತೆಗೆ ರಾಷ್ಟ್ರ ಮತ್ತು ರಾಜ್ಯದ ರಾಜಕಾರಣ ಸರ್ಕಾರದ ಕಿರುಕುಳಗಳಿಂದಾಗಿ ಅವರಿಗೆ ಬಿಡುವು ಸಿಕ್ಕಿದ್ದು ಸಾವಿನಲ್ಲಿ.

ಸೇವೆಯ ಹಲವು ಮುಖಗಳು

ಅಖಿಲ ಭಾರತ ಪತ್ರಕರ್ತರ ಸಂಘದ ಪ್ರಥಮ ಅಧ್ಯಕ್ಷರಾಗಿದ್ದ ಕಸ್ತೂರಿಯವರು ಪತ್ರಿಕಾರಂಗದಲ್ಲಿ ಕಾಣಬೇಕಾದ ಅತ್ಯುತ್ತಮ ಗುಣವಿಶೇಷಗಳ ಪ್ರತಿನಿಧಿ ಎನಿಸಿದ್ದರು. ಓದುಗನ ಮನಸ್ಸಿನಲ್ಲಿ ಸತ್ಯವನ್ನು ನಾಟುವಂತೆ ಬರೆಯುತ್ತಿದ್ದ ಅವರ ಶೈಲಿಯೇ ವೈಶಿಷ್ಟ್ಯ ಪೂರ್ಣವಾಗಿತ್ತು. ಸಹೃದಯ ವಿಮರ್ಶಕರಾಗಿದ್ದ ಅವರು ತಮ್ಮ ನಿಲುವು ನಂಬಿಕೆಗಳಲ್ಲಿ ಎಂದೂ ಅಸ್ಥಿರತೆ ಪ್ರದರ್ಶಿಸಿದವರಲ್ಲ. ಅವರು ನಡೆಸಿದ ಪತ್ರಿಕಾವೃತ್ತಿಯೂ ದೇಶದ ಮನೋಗತಿಯನ್ನು ಬಿಂಬಿಸುವ

ರೀತಿಯದು. ರಾಷ್ಟ್ರದ ಚಿಂತನೆಯನ್ನು ತಿಳಿದ, ಅದನ್ನು ನಿರ್ಭೀತಿಯಿಂದ ನಿರೂಪಿಸಿದ ಪ್ರತಿಭಾವಂತರಾಗಿ ಬಾಳಿ, ಮಾರ್ಗದರ್ಶಕರೆನಿಸಿದರು.

೧೯೧೯ರಲ್ಲೇ ಸರ್ವಮತೀಯರ ಭೋಜನಕೂಟ ವನ್ನು ಅವರು ಏರ್ಪಡಿಸಿದ್ದರೆಂದರೆ (ತಿಲಕರ ಗೌರವಾರ್ಥ) ಅವರು ನಂಬಿ ನಡೆದ ಉದಾರ ತಳಹದಿಯ ನೆಲೆಯ ಪರಿಚಯ ಸಿಗುತ್ತದೆ. ೧೯೧೫ರಿಂದ ೧೯೨೯ರವರೆಗೆ ಸಮಾಜದಲ್ಲಿ ಹಿಂದುಳಿದ ವರ್ಗಗಳ ನೆರವಿಗಾಗಿ ದುಡಿಯುತ್ತಿದ್ದ ಡಿಪ್ರೆಸ್ಡ್ ಕ್ಲಾಸ್ ಮಿಷನ್ ಸೊಸೈಟಿಯ ಉಪಾಧ್ಯಕ್ಷರಾಗಿದ್ದರು. ಈ ಸಂಸ್ಥೆ ತನ್ನದೇ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿತ್ತು. ಕಟ್ಟಡಕ್ಕೆ ಹಣ ಸಂಗ್ರಹವಾಗಿರಲಿಲ್ಲ. ಹಣಕ್ಕೆ ಕಸ್ತೂರಿಯವರು ಖಾತರಿಯಾಗಿ ನಿಂತಮೇಲೆ ಕಂಟ್ರಾಕ್ಟರ್ ಕಟ್ಟಡ ಕಟ್ಟಿ ಮುಗಿಸಿದ, ಗಾಂಧಿಯವರಿಗೂ ಮೊದಲೇ ಅವರಿಗೆ ಪ್ರಿಯವೆನಿಸಿದ ಕಾರ್ಯವನ್ನು ಕಸ್ತೂರಿಯವರು ಆರಂಭಿಸಿದ್ದರು.

೧೯೨೧ರಲ್ಲಿ ಮದರಾಸಿನ ಬಿನ್ನಿ ಕಾರ್ಮಿಕರು ಮುಷ್ಕರ ಹೂಡಿದರು. ಕಾರ್ಮಿಕರ ಸಂಖ್ಯೆ ಹತ್ತು ಸಾವಿರ. ಮಾರ್ಷಲ್ ಲಾ ಆಡಳಿತವಿದ್ದ ಪ್ರದೇಶವದು. ಮುಷ್ಕರಕ್ಕೆ ಬೆಂಬಲವಿತ್ತ ಕಸ್ತೂರಿಯವರು ಕಾರ್ಮಿಕರ ನಿಧಿಗೆ ನೀಡಿದ ಕಾಣಿಕೆ ಐದು ಸಾವಿರ ರೂಪಾಯಿ. ಸೀಮೆಎಣ್ಣೆ ಕಾರ್ಮಿಕರ ಸಂಘ, ಕಾರ್ಮಿಕರ ತರಬೇತಿಗೆ ವರ್ಕ್‌ಷಾಪ್, ಲೇಬರ್ ಸರ್ವೀಸ್ ಬ್ಯೂರೋ, ದಕ್ಷಿಣ ಭಾರತ ರೈಲ್ವೆ ಕಾರ್ಮಿಕರ ಸಂಘ – ಹೀಗೆ ಹತ್ತಾರು

ಸಂಘಟನೆಗಳಿಗೆ ಆಸರೆ ಇತ್ತರು. ಅದ್ದರಿಂದಲೇ ಅವರು ನಿಧನರಾದಾಗ ಕಾರ್ಮಿಕ ನಾಯಕರೆಲ್ಲ, “ನಾವು ಅವರಿಗೆ ಎಂದೆಂದಿಗೂ ಕೃತಜ್ಞರಾಗಿರಬೇಕು” ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದರು.

ಭಾರತೀಯ ಪತ್ರಿಕಾರಂಗದ ಪ್ರವರ್ತಕ, ಮಹಾನ್ ದೇಶಪ್ರೇಮಿ, ವರ್ಚಸ್ವೀ ನಾಯಕರೆನಿಸಿ ಖ್ಯಾತಿ ಪಡೆಯಲು ಅವರಿಗೆ ಸಾಧ್ಯವಾಗಿದ್ದು, “ಅವರ ಮಾನವೀಯ ಅನುಕಂಪ ತುಂಬಿದ ಆರ್ದ್ರ ಹೃದಯ”ದಿಂದ ಎಂಬುದನ್ನು ಮರೆಯುವಂತಿಲ್ಲ.