ಜನನ : ೧-೧೧-೧೯೫೦ ರಂದು ಮೈಸೂರಿನಲ್ಲಿ.

ಮನೆತನ : ಸಾಹಿತ್ಯ, ಗಾಯನ ಪರಂಪರೆಯ ಮನೆತನ. ತಂದೆ ಜಿ. ಸಿ. ಶಂಕರಪ್ಪ ಕವಿಗಳು – ಪತಿ ಶಂಕರ್ ವಾದ್ಯ ತಯಾರಕರು ಕಲಾವಿದರು. ಮಾವ ಹೆಸರಾಂತ ಹಾರ್ಮೋನಿಯಂ ಮಾಂತ್ರಿಕ ಅರುಣಾಚಲಪ್ಪನವರು.

ಗುರುಪರಂಪರೆ : ಬಾಲ್ಯದಿಂದಲೂ ಕೇಳಿಕೆಯ ಹಾಗೂ ಅನುಕರಣೆಯ ಅನುಭವದಿಂದ ಗಾಯನದ ಅಭ್ಯಾಸ ಅಕ್ಕಮಹಾದೇವಿ ಸಮಾಜದಲ್ಲಿ ಕೆಲ ಸಮಯ ಸಂಗೀತ ಶಿಕ್ಷಣ. ಅನಂತರ ಗಾನಸುಧಾಕರ ಎ. ಸುಬ್ಬರಾಯರಲ್ಲಿ ಸಂಗೀತ ಶಿಕ್ಷಣ.

ಸಾಧನೆ : ಮೊದಮೊದಲಿಗೆ ವಾದ್ಯ ವೃಂದಗಳೊಂದಿಗೆ ಗಾಯನ.  ಪ್ರಧಾನ ಗಾಯಕಿ ಪಟ್ಟ. ಮುಂದೆ ತಮ್ಮದೇ ಆದ ವಾದ್ಯ ವೃಂದವನ್ನು ರಚಿಸಿ ಕನ್ನಡ ಕವಿಗಳ ಭಾವಗೀತೆಗಳನ್ನು ಹಾಡಲು ಉಪಕ್ರಮಿಸಿದರು. ರಾಜ್ಯದ ಪ್ರಮುಖ ನಗರಗಳೆ ಅಲ್ಲದೆ ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳ ಕೆಲವು ಪ್ರಮುಖ ಸ್ಥಳಗಳಲ್ಲೂ ಹಾಡಿದ್ದಾರೆ. ಕಾರ್ಯಕ್ರಮಗಳನ್ನು ನೀಡಿದ್ದಾರೆ. ೧೯೭೪ ರಿಂದ ಬಹುಭಾಷಾ ಹಿನ್ನೆಲೆಗಾಯಕಿಯಾಗಿ ಅನೇಕ ಚಲನಚಿತ್ರಗಳಿಗೆ ಹಾಡಿದ್ದಾರೆ. ವೆಂಕಟೇಶ್ವರ ಸುಪ್ರಭಾತ, ವಿಶ್ವಕರ್ಮ ಸುಪ್ರಭಾತ, ಅಷ್ಟಲಕ್ಷ್ಮಿ ಸುಪ್ರಭಾತ ಮುಂತಾಗಿ ಸುಮಾರು ೨೨ ಧ್ವನಿ ಸುರುಳಿಗಳು ಬಿಡುಗಡೆಯಾಗಿವೆ. ಆಕಾಶವಾಣಿ ’ಎ’ ದರ್ಜೆ ಕಲಾವಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.

ಪ್ರಶಸ್ತಿ – ಸನ್ಮಾನ : ಲಾವಣ್ಯ ಬಳಗದವರಿಂದ ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಮುಂತಾಗಿ ಹಲವಾರು ಗೌರವ ಸನ್ಮಾನಗಳಿಗೆ ಭಾಜನರಾಗಿರುತ್ತಾರೆ.