ಸಂತೆಪೇಟೆಯಲ್ಲಿ ಹೀಗೇ ಒಮ್ಮೆ ಸುತ್ತಾಡಿ ಬನ್ನಿ. ಆ ಬಟ್ಟೆ ಅಂಗಡಿ, ಕಿರಾಣಿ ಅಂಗಡಿ, ಸ್ಟೇಷನರಿ, ಶೂ ಅಂಗಡಿ, ಔಷಧಿ ಅಂಗಡಿ, ಆ ಥಳಥಳಿಸುವ ಮಾಲ್… ಅವುಗಳಲ್ಲಿ ಮಾರಾಟಕ್ಕಿಟ್ಟ ಎಲ್ಲವೂ ಮುಂದೆ ಒಂದಲ್ಲ ಒಂದು ದಿನ ತಿಪ್ಪೆ ರಾಶಿಗೆ ಹೋಗುತ್ತವೆ ಹೌದಾ? ಎಲ್ಲವೂ ಅಂದರೆ ಎಲ್ಲವೂ! ಆ ಅಂಗಡಿಯ ಶೋ ಕೇಸಿನ ಹಿಂದೆ ನಿಂತಿರುವ ಪಿಓಪಿ ಬೊಂಬೆ, ಅಲ್ಲಿನ ಗಾಜಿನ ಕನ್ನಡಿ, ಅದರ ಕೆಳಗೆ ಹಾಸಿರುವ ಕಾರ್ಪೆಟ್ ಎಲ್ಲವೂ ತಿಪ್ಪೆಗೆ ಹೋಗುವ ವಸ್ತುಗಳೇ ಹೌದು.
ಯಾವುದೇ ರಾಷ್ಟ್ರದ ಜಿಡಿಪಿ ಏರಿಕೆಗೆ ಸಮಸಮನಾಗಿ ತ್ಯಾಜ್ಯದ ರಾಶಿಯೂ ಏರುತ್ತ ಹೋಗುತ್ತದೆ. ಅಂದರೆ, ನಮ್ಮ ವರಮಾನ ಹೆಚ್ಚುತ್ತ ಹೋದ ಹಾಗೆ, ನಮ್ಮ ಭೋಗವೈಖರಿ ಹೆಚ್ಚುತ್ತದೆ. ಅದನ್ನು ಹೆಚ್ಚಿಸುತ್ತಲೇ ಹೋಗಲೆಂದು ಎಲ್ಲೆಲ್ಲೂ ಅಹೋರಾತ್ರಿ ಜಾಹೀರಾತುಗಳ ಥಕಥೈ ನಡೆಯುತ್ತಿದೆ. ಖರೀದಿ ಹೆಚ್ಚುತ್ತ ಹೋದಷ್ಟೂ ತಿಪ್ಪೆ ರಾಶಿಯ ಗಾತ್ರ- ವಿಸ್ತಾರ ಹೆಚ್ಚುತ್ತದೆ. ಈ ಹೆಚ್ಚಳವನ್ನು ನಿಯಂತ್ರಿಸುವುದನ್ನು ನಾವು ಕಲಿಯದೇ ಇದ್ದರೆ ಮುಂದಿನ ಪೀಳಿಗೆಯ ಮೇಲೆ ಈ ರಾಶಿಯನ್ನು ಹೊರಿಸಿ ಹೋಗುತ್ತೇವೆ. ಸುಖವೆಲ್ಲ ನಮಗೆ, ಸಂಕಷ್ಟವೆಲ್ಲ ಅವರಿಗೆ.ಕಸದ ವ್ಯಾಪ್ತಿ ತುಂಬಾ ವಿಶಾಲವಾದುದು. ನಾವು ‘ಹಸಿಕಸ’ ಮತ್ತು ‘ಒಣ ಕಸ’ ಎಂಬ ಎರಡು ಬಗೆಯಲ್ಲಿ ವರ್ಗೀಕರಣ ಮಾಡಬೇಕೆಂದು ಮುನಿಸಿಪಾಲಿಟಿಗಳು ಹೇಳುತ್ತವೆ. ಅಡುಗೆ ಮನೆಯ ತರಕಾರಿ ಸಿಪ್ಪೆ, ಮುಸುರೆಗಳನ್ನು ‘ಹಸಿಕಸ’ ಎಂತಲೂ ಇನ್ನಿತರ ಪ್ಲಾಸ್ಟಿಕ್, ರದ್ದಿ, ಬಾಚಣಿಕೆ, ಔಷಧ ರ‍್ಯಾಪರ್, ಖಾಲಿ ಬಾಟಲಿ, ಬ್ಯಾಟರಿ ಸೆಲ್ ಇತ್ಯಾದಿಗಳನ್ನು ‘ಒಣ ಕಸ’ ಎಂತಲೂ ವಿಂಗಡಿಸಿ ವಿಲೆವಾರಿಗೆ ಕೊಡಬೇಕೆಂದು ಅಧಿಕಾರಿಗಳು ಹೇಳುತ್ತಾರೆ. ಈ ಎರಡೇ ಬಗೆಯ ವಿಂಡನೆಯನ್ನೂ ನಾವು ಸರಿಯಾಗಿ ಮಾಡದೆ ಹೇಗೋಹಾಗೆ ಬಿಸಾಕುತ್ತೇವೆ. ಬೀಡಾಡಿ ಪ್ರಾಣಿಗಳ ಸಂಖ್ಯೆಯನ್ನೂ ಸಂಕಟವನ್ನೂ ಹೆಚ್ಚಿಸುತ್ತೇವೆ. ಸುಧಾರಿತ ದೇಶಗಳಲ್ಲಿ ಎರಡಲ್ಲ, ಐದು ಬಗೆಯಲ್ಲಿ ತ್ಯಾಜ್ಯಗಳನ್ನು ವಿಂಗಡಿಸಿ ವಿಲೆವಾರಿ ಮಾಡಬೇಕಾಗುತ್ತದೆ. ಜನರು ಶಿಸ್ತಾಗಿ ಪಾಲಿಸುತ್ತಾರೆ. ಹಸಿಕಸ, ಪ್ಲಾಸ್ಟಿಕ್, ರದ್ದಿ ಕಾಗದ, ಗಾಜಿನ ವಸ್ತುಗಳು ಮತ್ತು ಇಲೆಕ್ಟ್ರಾನಿಕ್ ತ್ಯಾಜ್ಯಗಳು… ಹೀಗೆ ಐದು ವರ್ಗಗಳಾಗಿ ವಿಂಗಡಿಸುವ ವಿಧಾನವನ್ನು ಅಲ್ಲಿ ಮಕ್ಕಳಿಗೂ ಕಲಿಸುತ್ತಾರೆ. ನಗರದಲ್ಲಿ ದಿನವೂ ಸಂಗ್ರಹವಾಗುವ ನೂರಾರು ಟನ್ ರದ್ದಿ ಕಾಗದಗಳನ್ನೆಲ್ಲ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಸುಟ್ಟು ಅದರಿಂದ ನೀರು ಕುದಿಸಿ, ಆ ಆವಿಯಿಂದ ವಿದ್ಯುತ್ ಉತ್ಪಾದನೆ ಮಾಡುವುದನ್ನು ನಾನು ಅಮೆರಿಕದ ಬಾಲ್ಟಿಮೋರ್ ನಗರದಲ್ಲಿ ನೋಡಿದ್ದೇನೆ. ಸುಟ್ಟ ಬೂದಿಯಿಂದ ಇಟ್ಟಿಗೆಗಳನ್ನು ಮಾಡಿ ಅಲ್ಲಿ ಅಲಂಕಾರಿಕ ಗೋಡೆಗಳನ್ನು ನಿರ್ಮಿಸುತ್ತಾರೆ. ಗಾಜಿನ ವಸ್ತುಗಳು ಫ್ಯಾಕ್ಟರಿಗೆ ಹೋಗಿ ಮತ್ತೆ ಗಾಜಿನ ವಸ್ತುಗಳಾಗುತ್ತವೆ. ಇಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಬಡದೇಶಗಳಿಗೆ ಸಾಗಿಸಿ ಅಲ್ಲಿ ಬಿಡಿಭಾಗಗಳನ್ನು ಬೇರ್ಪಡಿಸಿ ಲೋಹದ ವಸ್ತುಗಳನ್ನು ಮತ್ತೆ ಮರುಬಳಕೆಗೆ ತರುತ್ತಾರೆ.

ಹಡಗಿನಲ್ಲಿ ಕಚಡಾ, ಹಡಗೇ ಗುಜರಿ

ಸುಧಾರಿತ ಸಮಾಜದ ಗುಜರಿ ವಸ್ತುಗಳ ವೈಖರಿ ಎಷ್ಟಿದೆ ಗೊತ್ತೆ? ಫ್ರಾನ್ಸ್ ದೇಶದ ಯುದ್ಧ ವಿಮಾನಗಳನ್ನು ಹೊತ್ತು ಸಾಗಿಸುವ ‘ಎಫ್ಎಸ್ ಕ್ಲೆಮೆನ್ಸೂ’ ಹೆಸರಿನ ಇಡೀ ಒಂದು ಹಡಗನ್ನು ಗುಜರಿ ಹಡಗನ್ನು ಗುಜರಾತಿನ ಅಲಂಗ್ ಬಂದರಿಗೆ ಸಾಗಿಸಿ ಬೇರ್ಪಡಿಸುವ ಹವಣಿಕೆ ನಡೆದಿತ್ತು. ಪರಿಸರಕ್ಕೆ ಮತ್ತು ಕಾರ್ಮಿಕರ ಆರೋಗ್ಯಕ್ಕೆ ಮಾರಕವಾದ ನಂಜುವಸ್ತುಗಳು ಅದರಲ್ಲಿ ಭಾರೀ ಪ್ರಮಾಣದಲ್ಲಿದ್ದವು. ನಮ್ಮ ಕೆಲವು ಪರಿಸರ ರಕ್ಷಣಾ ಸಂಘಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ, ಆ ಮುದಿ ಯುದ್ಧನೌಕೆ ಗುಜರಾತ್ ಬಂದರಿನಿಂದ ಮರಳಿ ಹೋಗುವಂತೆ ಮಾಡಿದವು. ಅದು ಹಾಗಿರಲಿ, ನ್ಯೂಯಾರ್ಕಿನ ವಿಶ್ವ ವ್ಯಾಪಾರ ಕೇಂದ್ರದ 110 ಅಂತಸ್ತುಗಳ ಜೋಡಿ ಕಟ್ಟಡವನ್ನು ಆಲ್ ಕೈದಾ ಉಗ್ರರು 2001ರ ಸೆಪ್ಟಂಬರ್ 11ರಂದು ಬೀಳಿಸಿದರಲ್ಲ? ಅದರ ತ್ಯಾಜ್ಯಗಳೆಲ್ಲ ಭಾರತಕ್ಕೆ ಬಂದವು. ನಮ್ಮ ಗುಜರಿ ವ್ಯಾಪಾರಿಗಳು ಅವನ್ನು ಖರೀದಿಸಿ ನಮ್ಮ ದೇಶದಲ್ಲೇ ಲೋಹದ ಭಾಗಗಳನ್ನು ವಿಂಗಡಿಸಿದರು.

ಏಕೆ ಅಮೆರಿಕ, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳು ತಮ್ಮ ತ್ಯಾಜ್ಯಗಳನ್ನು ತಮ್ಮಲ್ಲೇ ವಿಲೆವಾರಿ ಮಾಡುತ್ತಿಲ್ಲ? ಏಕೆಂದರೆ, ಅಲ್ಲೆಲ್ಲ ‘ನಿಂಬಿ’ ಚಳವಳಿ ಇದೆ. ‘ನಿಂಬಿ’ ಅಂದರೆ (Not In My Back Yard – ‘ನನ್ನ ಹಿತ್ತಲಲ್ಲಿ ಬೇಡ’) ಎಂಬುದರ ಚಿಕ್ಕ ರೂಪ. ಯಾರೂ ತಮ್ಮ ತ್ಯಾಜ್ಯಗಳನ್ನು ಯಾರ ಹಿತ್ತಿಲಲ್ಲೂ ಹಾಕಕೂಡದೆಂಬ ಚಳವಳಿ ಅದು. ನನ್ನ ‘ಹಿತ್ತಿಲು’ ಎಂದರೆ ಕೇವಲ ನನ್ನ ಮನೆಯ ಹಿತ್ತಿಲು ಅಷ್ಟೇ ಅಲ್ಲ. ನಿರುಪಯುಕ್ತ ವಸ್ತುಗಳು ನಮ್ಮ ಇಡೀ ಬಡಾವಣೆಗೇ ಇಡೀ ಊರಿಗೇ ಬೇಡ, ಇಡೀ ರಾಜ್ಯಕ್ಕೇ ಬೇಡ ಎಂದು ಅಲ್ಲಿ ಹಠ ಹಿಡಿದು ಹೋರಾಡುವವರಿದ್ದಾರೆ. ತ್ಯಾಜ್ಯ ಎಂದರೆ ಅದು ತಿಪ್ಪೆರಾಶಿ ಇರಬಹುದು; ಕಾರ್ಖಾನೆಯ ಹೊಗೆತ್ಯಾಜ್ಯ ಇರಬಹುದು; ಉಷ್ಣಸ್ಥಾವರಗಳ ಸೆಕೆತ್ಯಾಜ್ಯ ಇರಬಹುದು; ಮುದಿ ಯುದ್ಧನೌಕೆಯೇ ಇರಬಹುದು ಅಥವಾ ಕುಸಿದ ಕಟ್ಟಡದ ಅವಶೇಷವೂ ಆಗಿರಬಹುದು. ನಮ್ಮಲ್ಲಿ ಅದು ಬೇಡ.
ನ್ಯೂಯಾರ್ಕ್ನ ಕಟ್ಟಡದ ಅವಶೇಷಗಳನ್ನು ಅಮೆರಿಕದ ಐವತ್ತು ರಾಜ್ಯಗಳಲ್ಲಿ ಯಾವ ರಾಜ್ಯವೂ ಸ್ವೀಕರಿಸಲು ಸಿದ್ಧ ಇರಲಿಲ್ಲ. ಏಕೆಂದರೆ ಅದರಲ್ಲಿ ಪಾದರಸ, ಕ್ಯಾಡ್ಮಿಯಂ, ಸೀಸದಂಥ ಸಾಕಷ್ಟು ನಂಜುಲೋಹಗಳಿದ್ದವು. ಜತೆಗೆ ಕರಗಿ ಬಸಿದ ಪ್ಲಾಸ್ಟಿಕ್‌ಗಳಲ್ಲಿ ಡಯಾಕ್ಸಿನ್ ವಿಷ ಇತ್ತು. ಇಟ್ಟಿಗೆ, ಕಾಂಕ್ರೀಟ್ ಹಾಗಿರಲಿ, ಬೆಲೆಬಾಳುವ ಉಕ್ಕು, ತಾಮ್ರದಂಥ ಲೋಹಗಳನ್ನೂ ಸ್ವೀಕರಿಸಲು ಯಾರೂ ಸಿದ್ಧರಿರಲಿಲ್ಲ. ಬೇರೆ ದೇಶಕ್ಕೆ ಸಾಗಿಸಬೇಕು. ಅಗ್ಗದ ಬೆಲೆಗೆ ಸಿಕ್ಕಿತೆಂದು ಭಾರತದ ಕೆಲವು ಕಂಪನಿಗಳು ಬಹಪಾಲು ಕಚಡಾವನ್ನು ಖರೀದಿಸಿ, ಕರಗಿಸಿ, ನಮ್ಮವರಿಗೇ ಮಾರಿ ಲಾಭ ಗಳಿಸಿದವು.

ನಮ್ಮಲ್ಲಿಗೂ ಬಂತು ‘ನಿಂಬಿ’ ಚಳವಳಿ

ಹೀಗೆ ‘ನಮ್ಮ ಹಿತ್ತಿಲಲ್ಲಿ ಬೇಡ’ ಎಂದು ಎಲ್ಲರೂ ಹಠ ಹಿಡಿದರೆ ತ್ಯಾಜ್ಯವಸ್ತುಗಳನ್ನು ಎಲ್ಲಿ ಬಿಸಾಕಬೇಕು? ದೇಶದ ಯಾವುದೇ ತಾಣದಲ್ಲಿ ತಿಪ್ಪೆ ಬಿಸಾಕಲು ಹೋದರೂ ಅದು ಯಾವುದೋ ಊರಿನ ‘ಹಿತ್ತಿಲೇ’ ಆಗಿರುತ್ತದೆ ತಾನೆ? ಅದಕ್ಕೇ ಸುಧಾರಿತ ರಾಷ್ಟ್ರಗಳು ತೀವ್ರ ನಂಜುವಸ್ತುಗಳನ್ನು ಬಡದೇಶಕ್ಕೆ ತಳ್ಳುವ ಕುಟಿಲ ನೀತಿಗಳನ್ನು ರೂಪಿಸುತ್ತವೆ. ಇಂಥ ‘ಟಾಕ್ಸಿಕ್ ಟ್ರೇಡ್’ ವಿರುದ್ಧ ಗ್ರೀನ್‌ಪೀಸ್‌ನಂಥ ಸಂಘಟನೆಗಳು ಹೋರಾಡಿ, ಬಿಗಿಯಾದ ಅಂತರರಾಷ್ಟ್ರೀಯ ನಿಯಮಗಳನ್ನು ರೂಪಿಸಲು ಕಾರಣವಾಗಿವೆ. ಆದರೂ ನಾನಾ ಮಾರ್ಗಗಳ ಮೂಲಕ ಅವು ಹಿಂದುಳಿದ ದೇಶಗಳಿಗೆ ಬರುತ್ತಲೇ ಇರುತ್ತವೆ.

ಬೇರೆ ದೇಶದ ತ್ಯಾಜ್ಯಗಳು ನಮ್ಮಲ್ಲಿಗೆ ಬರದಂತೆ ಕೆಲಮಟ್ಟಿಗೆ ನ್ಯಾಯಾಲಯಗಳ ಮೂಲಕ ತಡೆಯಬಹುದು. ನಮ್ಮ ದೇಶದಲ್ಲೇ ಸಿದ್ಧವಾಗುವ ತ್ಯಾಜ್ಯಗಳನ್ನು ನಾವೇನು ಮಾಡಬೇಕು? ಯಾವುದೋ ಹಳ್ಳಿಯ ಕಡೆ ತಳ್ಳೋಣವೆ? ಭೋಪಾಲ ಅನಿಲ ದುರಂತದ ನಂತರದ ನಂಜುತ್ಯಾಜ್ಯಗಳನ್ನು 25 ವರ್ಷ ಕಳೆದ ಮೇಲೆ ಗುಜರಾತಿನ ಅಂಕಲೇಶ್ವರಕ್ಕೆ, ಮಧ್ಯಪ್ರದೇಶದ ಪೀತಂಪುರಕ್ಕೆ ಸಾಗಿಸುವ ಯೋಜನೆಗೆ ಆಯಾ ಊರಿನ ಸ್ಥಳೀಯರು ತಡೆ ಒಡ್ಡಿದ್ದಾರೆ. ದಿಲ್ಲಿಯ ಪಕ್ಕದ ಗುಡಗಾಂವ್ (ಈಗ ಗುರುಗ್ರಾಮ) ಕೈಗಾರಿಕಾ ನಗರದ ತಿಪ್ಪೆಗಳನ್ನು ಅಲ್ಲೇ ಸಮೀಪದ ದೂಂಡಾಹೇರಾ ಎಂಬ ಹಳ್ಳಿಯ ಬಳಿ ಹೂಳಲು ಹೊರಟಾಗ, ಅಲಹಾಬಾದ್ ಹೈಕೋಟ್‌ನಿಂದ ಸ್ಥಳೀಯರು ನಿಷೇಧಾಜ್ಞೆ ತಂದಿದ್ದಾರೆ. ದೂರದ ಉದಾಹರಣೆ ಏಕೆ, ನಮ್ಮ ಬೆಂಗಳೂರಿನ ಸರಹದ್ದಿನ ಮಂಡೂರಿನ ಬೆಟ್ಟದಷ್ಟೆತ್ತರದ ತ್ಯಾಜ್ಯದ ರಾಶಿಯ ಬಳಿ ಸ್ಥಳೀಯರು ಸ್ವಾತಂತ್ರ್ಯಯೋಧ ಎಚ್.ಎಸ್. ದೊರೆಸ್ವಾಮಿಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ತ್ಯಾಜ್ಯ ಸಾಗಿಸುತ್ತಿದ್ದ ಲಾರಿಗಳು ಅಲ್ಲಲ್ಲೇ ನಿಲ್ಲುವಂತಾಯಿತು. ಅದೇ ರೀತಿ ಮಾವಳ್ಳಿಪುರ, ದೊಡ್ಡಬಳ್ಳಾಪುರದ ಸಮೀಪದ ಗುಡ್ಲಹಳ್ಳಿ, ಆನೇಕಲ್ ಬಳಿಯ ಬಗ್ಗನದೊಡ್ಡಿ ಮುಂತಾದ ಕಡೆ ಗ್ರಾಮಸ್ಥರು ಬೆಂಗಳೂರಿನ ತ್ಯಾಜ್ಯವನ್ನು ತಡೆಯುವ ಚಳವಳಿಗಳನ್ನು ನಡೆಸಿದ್ದಾರೆ.

ಅಲ್ಲಿಗೆ ‘ನಿಂಬಿ’ಗಿರಿ ನಮ್ಮಲ್ಲಿಗೂ ಬಂದಿದೆ ಎಂದಂತಾಯಿತು. ಅದು ಶಾಂತಿಯುತ ಒತ್ತಾಯವಾದರೆ ನಾವದನ್ನು ಸ್ವಾಗತಿಸಬೇಕು. ಏಕೆಂದರೆ ಅದು ಪರಿಸರ ಪ್ರಜ್ಞೆಯ, ಪ್ರಜಾ ಜಾಗೃತಿಯ ಸಂಕೇತ ಅಷ್ಟೇ ಅಲ್ಲ; ತ್ಯಾಜ್ಯವನ್ನು ನಿಯಂತ್ರಿಸುವ ಹಾಗೂ ಮರುಬಳಕೆಯ ಹೊಸ ವಿಧಾನಗಳನ್ನು ಹುಡುಕಲು ಪ್ರೇರಣೆ ನೀಡುವ ಪವಿತ್ರ ಅಸ್ತ್ರವೂ ಹೌದು. ಮಂಡೂರಿನ ಚಳವಳಿಯ ನಂತರವೇ ಬೆಂಗಳೂರಿನಲ್ಲಿ ಆಯಾ ವಾರ್ಡ್‌ಗಳಲ್ಲೇ ತ್ಯಾಜ್ಯ ಸಂಸ್ಕರಣೆ ಮಾಡಲು, ಹೂಳುಗುಂಡಿಯಿಂದ ಹೊಮ್ಮುವ ಮೀಥೇನ್‌ನಿಂದ ವಿದ್ಯುತ್ ಉತ್ಪಾದನೆ ಮಾಡಲು ಕ್ರಮ ಕೈಗೊಳ್ಳುವಂತಾಯಿತು.

ಆದರೆ ‘ನಿಂಬಿ’ ಚಳವಳಿ ರಸ್ತೆಯಲ್ಲಿ ನಡೆಯುವ ಮುನ್ನ ನಮ್ಮ ನಮ್ಮ ಮನೆಯಲ್ಲೇ ಆರಂಭವಾಗಬೇಕು. ಬೆಂಗಳೂರಿನ ಬೀದಿಬೀದಿಯಲ್ಲಿ ಕಸದ ರಾಶಿ ಬಿದ್ದಿರುವ ಬಗ್ಗೆ ಬಿಬಿಸಿಯಲ್ಲೂ ನ್ಯೂಯಾರ್ಕ್ ಟೈಮ್ಸ್‌ನಲ್ಲೂ ವರದಿ ಬಂದರೆ ನಮಗೆ ಅದು ನಾಚಿಕೆ ಉಂಟುಮಾಡಬೇಕು. ಎಲ್ಲರೂ ತಂತಮ್ಮ ಮನೆಯ ಕಸವನ್ನು ಸರಿಯಾಗಿ ವಿಲೆವಾರಿ ಮಾಡಿ ಸಾಮೂಹಿಕ ಜವಾಬ್ದಾರಿ ಪ್ರದರ್ಶಿಸಬೇಕು. ಅದು ಸುಧಾರಿತ ಸಮಾಜದ ಲಕ್ಷಣ.

ತ್ಯಾಜ್ಯದ ಸಮರ್ಪಕ ವಿಲೆವಾರಿ ಎಂದರೇನು? ಅದಕ್ಕೆ ಮೂರು ಮೂಲಮಂತ್ರಗಳಿವೆ. ಇಂಗ್ಲಿಷ್‌ನಲ್ಲಿ ಅದಕ್ಕೆ ರಿಡ್ಯೂಸ್, ರೀಯೂಸ್ ಮತ್ತು ರೀಸೈಕಲ್ ಎನ್ನುತ್ತಾರೆ. ಅಂದರೆ, ಬಳಕೆಯನ್ನೇ ಕಡಿಮೆ ಮಾಡಬೇಕು; ಬಳಸಿದ್ದನ್ನು ಮತ್ತೆ ಮತ್ತೆ ಬಳಸಬೇಕು; ಕೊನೆಯದಾಗಿ, ಬಳಸಿದ್ದನ್ನು ಮತ್ತೊಂದು ರೂಪದಲ್ಲಿ ಬಳಸಬೇಕು. ಗಾಂಧೀಜಿ ಅದನ್ನೇ ಮಾಡುತ್ತಿದ್ದರು. ಅವರು ತೀರಾ ಕಡಿಮೆ ವಸ್ತುಗಳನ್ನು ಬಳಸುತ್ತಿದ್ದರು. ಲಕೋಟೆಯ ಹಿಂಭಾಗದ ಖಾಲಿ ಸ್ಥಳವನ್ನೇ ಟಿಪ್ಪಣಿ ಬರೆಯಲು ಬಳಸುತ್ತಿದ್ದರು. ಕೊನೆಯದಾಗಿ ಗಂಜಳ ಎತ್ತಲು ಅದೇ ಕಾಗದವನ್ನು ಬಳಸುತ್ತಿದ್ದರು. ಅವಕಾಶ ಇದ್ದಿದ್ದರೆ ಕೊನೆಯದಾಗಿ ಆ ಕಾಗದವನ್ನೇ ಹೊಸ ಕಾಗದವನ್ನಾಗಿ ಮಾರ್ಪಡಿಸಲೆಂದು ಫ್ಯಾಕ್ಟರಿಗೇ ಕಳಿಸುತ್ತಿದ್ದರೇನೊ. ಪರಿಸರ ಸಂರಕ್ಷಣೆಯ ಪ್ರಶ್ನೆ ಬಂದಾಗ ಗಾಂಧೀಜಿಯವರಿಗೇ ಪ್ರಥಮ ಸಮ್ಮಾನ ಸಲ್ಲಬೇಕು.

ನಾವು ನಮ್ಮನಮ್ಮ ಮನೆಯಲ್ಲಿನ ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಲು ನಿರ್ಧರಿಸಿದರೆ ಇಡೀ ಊರು ಬಹುಪಾಲು ಶುದ್ಧವಾಗುತ್ತದೆ. ಮನೆಯಲ್ಲಿ ಕಲಿತಿದ್ದನ್ನೇ ನಮ್ಮ ಅಂಗಡಿಗಳಲ್ಲಿ, ಹೊಟೆಲ್‌ಗಳಲ್ಲಿ, ಫ್ಯಾಕ್ಟರಿಗಳಲ್ಲಿ, ಬಸ್‌ನಿಲ್ದಾಣದಲ್ಲಿ ಅನುಸರಿಸಿದರೆ ಇಡೀ ನಗರ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಇಡೀ ದೇಶ ಸ್ವಚ್ಛವಾಗುತ್ತದೆ.

ಮನೆಯಲ್ಲಿ ತ್ಯಾಜ್ಯ ನಿರ್ವಹಣೆಯ 10 ಉಪಾಯಗಳು:

ಸ್ವೀಡನ್ ದೇಶ ತನ್ನ ತ್ಯಾಜ್ಯದ ಶೇ. 96ರಷ್ಟನ್ನು ಮರುಬಳಕೆ ಮಾಡುತ್ತಿದೆ. ಕೇವಲ ಇನ್ನುಳಿದ ಶೇ. 4ರಷ್ಟನ್ನು ಮಾತ್ರ ಗುಂಡಿಯಲ್ಲಿ ಹೂಳುತ್ತಿದೆ. ಅದು ಸಾಧ್ಯವಾಗಿದ್ದು ಅಲ್ಲಿನ ನಾಗರಿಕರ ಸಹಕಾರದಿಂದ. ಅವರು ತ್ಯಾಜ್ಯ ನಿರ್ವಹಣೆ ತಮ್ಮ ನಿತ್ಯದ ಡ್ಯೂಟಿ ಎಂಬಂತೆ ಕಟ್ಟುನಿಟ್ಟಾಗಿ ಪರಿಪಾಲಿಸುತ್ತಿದ್ದಾರೆ. ಅದು ರಾಷ್ಟ್ರಕ್ಕೆ ತಾವು ಸಲ್ಲಿಸುವ ಪವಿತ್ರ ಸೇವೆ ಎಂದು ಅಲ್ಲಿನ ಪ್ರಜೆಗಳು ಪರಿಗಣಿಸುತ್ತಾರೆ. ತನ್ನ ಮನೆಯಿಂದ ಈ ತಿಂಗಳು ಎಷ್ಟು ಕಮ್ಮಿ ತ್ಯಾಜ್ಯವನ್ನು ಹೊರಹಾಕಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಂಥ ನಾಗರಿಕತೆ ನಮಗೆ ಮಾದರಿಯಾಗಬೇಕು. ಕಸ ವಿಲೆವಾರಿ ಸರಿಯಾಗಿ ಆಗುತ್ತಿಲ್ಲವೆಂದು ಸರಕಾರವನ್ನೊ, ನಗರಸಭೆಯನ್ನೊ, ಮುನಿಸಿಪಾಲಿಟಿಗಳನ್ನೊ ದೂರುವ ಬದಲು ನಮ್ಮ ಹೊಣೆಗಾರಿಕೆಯನ್ನು ನಾವು ಸರಿಯಾಗಿ ನಿಭಾಯಿಸಬೇಕು. ಮನೆಯಿಂದ ಆದಷ್ಟೂ ಕಡಿಮೆ ತ್ಯಾಜ್ಯ ಹೊರಕ್ಕೆ ಹೋಗುವಂತೆ, ಆದಷ್ಟೂ ವ್ಯವಸ್ಥಿತವಾಗಿ ಅದು ಹೊರಕ್ಕೆ ಹೋಗುವಂತೆ ನೋಡಿಕೊಳ್ಳಬೇಕು. ಆಗ ಇಡೀ ನೆರೆಹೊರೆ, ಇಡೀ ನಗರ, ಇಡೀ ದೇಶ ಚೊಕ್ಕಟವಾಗುತ್ತದೆ.

ಪೈಪ್ ಡಸ್ಟ್ ಬಿನ್

ಇಲ್ಲಿವೆ ಅಂಥ ಹತ್ತು ಉಪಾಯಗಳು:

1. ಮನೆಯೊಳಕ್ಕೆ ಬರುವ ವಸ್ತುಗಳ ಬಗ್ಗೆ ನಿಗಾ ಇಡಿ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಆದಷ್ಟೂ ಕಮ್ಮಿ ಪ್ರಮಾಣದಲ್ಲಿ ಮನೆಯೊಳಕ್ಕೆ ತನ್ನಿ. ಹೊಸವಸ್ತುವನ್ನು ಖರೀದಿಸುವಾಗ ಸಾಧ್ಯವಾದಷ್ಟೂ ಅದರ ಪ್ಯಾಕಿಂಗ್‌ಗಳನ್ನು ಅಲ್ಲೇ ಬಿಟ್ಟು ಬನ್ನಿ.
2. ಹೊರಗಡೆ ಹೋಗುವಾಗ ನಿಮ್ಮದೇ ಚೀಲಗಳನ್ನು ಸಾಧ್ಯವಾದಾಗಲೆಲ್ಲ ಒಯ್ಯಿರಿ.
3. ನಿನ್ನೆಯ ಪತ್ರಿಕೆಗಳನ್ನು ಜೋಡಿಸಿ ಇಡುವಾಗ ಅದರ ಪುಟಗಳ ಮಧ್ಯೆ ಇತರ ಕಾಗದ-ಕರಪತ್ರಗಳನ್ನು – ಕ್ಯಾಲೆಂಡರಿನ ಕಿತ್ತ ಹಾಳೆಗಳನ್ನು, ಕಳ್ಳೇಪುರಿ ಕಟ್ಟಿಸಿ ತಂದ ಕಾಗದವನ್ನೂ ಸೇರಿಸಿ ತಿಂಗಳಿಗೊಮ್ಮೆ ಮಾರಿ.
4. ರಟ್ಟು, ಟೆಟ್ರಾಪ್ಯಾಕ್ ರಟ್ಟಿನ ಡಬ್ಬ, ದಪ್ಪ ಕಾಗದಗಳನ್ನು ಪ್ರತ್ಯೇಕ ಜೋಡಿಸಿಟ್ಟು ಮೂರು ತಿಂಗಳಿಗೊಮ್ಮೆ ಮಾರಿ.
5. ಪ್ಲಾಸ್ಟಿಕ್ ಚೀಲಗಳನ್ನು ಶಿಸ್ತಾಗಿ ಮಡಚಿ, ಜೋಡಿಸಿ ಇಟ್ಟು ಅಂಗಡಿಗಳಿಗೆ ಆರು ತಿಂಗಳಿಗೊಮ್ಮೆ ಮರಳಿಸಿ.
6. ಇಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಿ ವರ್ಷಕ್ಕೊಮ್ಮೆ ಇ-ತ್ಯಾಜ್ಯ ಸಂಗ್ರಾಹಕರಿಗೆ ನೀಡಿ.
7. ಅಡುಗೆ ಮನೆಯ ಹಸಿ ತ್ಯಾಜ್ಯಗಳನ್ನು ದಿನವೂ ಹಿತ್ತಲಿನ ಅಥವಾ ಬಾಲ್ಕನಿಯ ಗಿಡದ ಬುಡಕ್ಕೆ ಹಾಕಬಹುದು. ಅಥವಾ ಹಳೇ ಬಕೆಟ್ ಅಥವಾ ಮಡಕೆಯಲ್ಲಿ ಶೇಖರಿಸಿ, ನೊಣ ನುಗ್ಗದಂತೆ ಬಾಯಿ ಕಟ್ಟಿಟ್ಟರೆ ಕಾಂಪೋಸ್ಟ್ ಆಗುತ್ತದೆ.
8. ತೆಂಗಿನ ಕರಟ, ಒಣ ರಟ್ಟು ಮುಂತಾದವು ಬಚ್ಚಲ ಒಲೆಯಲ್ಲಿ ಉರಿಸಿ, ಇಲ್ಲವೆ ದಾನ ಕೊಡಿ.
9. ಇಂಥ ವಿಂಗಡನೆಯೇ ಸಾಧ್ಯವಿಲ್ಲದ ನಜ್ಜುಗುಜ್ಜಾದ ಪ್ಲಾಸ್ಟಿಕ್‌ಗಳನ್ನು (ಮಾತ್ರೆ ಕವರ್, ಶಾಂಪು ಸ್ಯಾಷೆ, ಟೂಥ್‌ಪೇಸ್ಟ್ ಟ್ಯೂಬ್, ಮುಗಿದ ಬಾಟಲಿ, ಮುರಿದ ಬಾಚಣಿಕೆ ಇತ್ಯಾದಿಗಳನ್ನು) ತುಂಬಲು ಒಂದು ದೊಡ್ಡ ಚೀಲವನ್ನು ಮನೆಯ ಮೂಲೆಯಲ್ಲಿ ಇಡಿ. ಅದನ್ನು ಆಗಾಗ ಒತ್ತಿ ಒತ್ತಿ ತುಂಬುತ್ತಿದ್ದರೆ ವರ್ಷವಿಡೀ ನೀವದನ್ನು ಹೊರಕ್ಕೆ ಹಾಕಬೇಕಾಗಿಲ್ಲ.
10. ಗಾಜಿನ ವಸ್ತುಗಳಿಗೂ ಅಂಥ ಚೀಲ ಅಥವಾ ಬಕೆಟ್ಟನ್ನು ನಿಗದಿಪಡಿಸಿ ಅದರಲ್ಲೇ ತುಂಬುತ್ತ ಹೋಗಿ.
ಕೊನೆಯ ಎರಡನ್ನು ಸಂಗ್ರಹಿಸಿ ಕೊಟ್ಟರೆ ಅದನ್ನೂ ವಿಂಗಡಿಸುವ ಸೇವಾ ಸಂಸ್ಥೆಗಳು ದೊಡ್ಡ ನಗರಗಳಲ್ಲಿವೆ. ಸಾಧ್ಯವಿದ್ದರೆ ಅವಕ್ಕೇ ನೀಡಿ; ಇಲ್ಲಾಂದರೆ ಹೂಳುಗುಂಡಿಗೆ ಕಳಿಸಿ. ಸರಿಯಾಗಿ ನಿಗಾ ವಹಿಸಿದರೆ ಸ್ಯಾನಿಟರಿ ನ್ಯಾಪ್ಕಿನ್‌ಗಳು ಮಾತ್ರ ಹೂಳುಗುಂಡಿಗೆ ಹೋಗಬೇಕು. ಆಸುಪಾಸಿನ ಮನೆಯವರು ಒಗ್ಗಟ್ಟಾಗಿದ್ದರೆ ಇತರೆಲ್ಲ ವಸ್ತುಗಳನ್ನೂ ಮರುಬಳಕೆಗೆ ರವಾನಿಸಬಹುದು.

            

– ನಾಗೇಶ ಹೆಗಡೆ