ದಕ್ಷಿಣ ಕನ್ನಡ ಜಿಲ್ಲೆಯ ಕಾಂಚನದಲ್ಲಿ ಸಂಗೀತಗಾರರ ಮನೆತನದಲ್ಲಿ ೨೩-೧೨-೧೯೪೮ರಲ್ಲಿ ಜನಿಸಿದ ಸುಬ್ಬರತ್ನಂ ಅವರ ತಾತ ವೆಂಕಟರಮಣಯ್ಯನವರು ಕಲಾಪ್ರೇಮಿಗಳಾಗಿದ್ದುದು ಮಾತ್ರವಲ್ಲದೆ ಕಾಂಚನದ ಸುತ್ತಮುತ್ತಲೆಲ್ಲ ಅನೇಕ ದೇವಾಲಯಗಳನ್ನೂ ನಿರ್ಮಿಸಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರಗಳನ್ನಾಗಿ ಮಾಡಿದ ದಿವ್ಯ ಚೇತನ. ಅಜ್ಜಿ ಆನಂದಲಕ್ಷ್ಮಮ್ಮ ಸ್ವತಃ ಗಾಯಕಿ. ತಂದೆ ವೆಂಕಟ ಸುಬ್ರಹ್ಮಣ್ಯಂ ಅವರೂ ಸಹ ಸಂಗೀತ ವಿದ್ವಾಂಸರಾಗಿದ್ದರು. ಸಂಗೀತ ರತ್ನ ಖುಷಿ ಗಂಧರ್ವ ಎಂದೆಲ್ಲ ಹೆಸರು ವಾಸಿಯಾಗಿದ್ದ ತಂದೆಗೆ ತಕ್ಕ ಮಗನಾಗಿ ಸುಬ್ಬರತ್ನಂ ಚಿಕ್ಕಂದಿನಿಂದಲೇ ಸಂಗೀತಾಸಕ್ತಿ ಹೊಂದಿದ್ದು ತಂದೆಯವರಿಂದ ಗಾಯನ ಶಿಕ್ಷಣ ಪಡೆದು ಸ್ವಯಂ ಸಾಧನೆಯಿಂದ ಪಿಟೀಲು ವಿದ್ವಾಂಸರಾದರು.

ಮೊದಲಿಗೆ ತಂದೆಯವರ ಗಾಯನಕ್ಕೆ ಪಕ್ಕವಾದ್ಯ ನುಡಿಸಿ ಅಭ್ಯಾಸ ಪರಿಶ್ರಮಗಳಿಂದ ಉನ್ನತಮಟ್ಟದ ವಾದಕರಾಗಿ ಕ್ಷೇತ್ರದ ದಿಗ್ಗಜರೆನಿಸಿಕೊಂಡ ವಿದ್ವಾಂಸರುಗಳಿಗೆಲ್ಲ ಪಿಟೀಲು ಸಹಕಾರ ನೀಡುವವರಾದರು. ತನಿಯಾಗಿಯೂ, ಪಕ್ಕವಾದ್ಯಗಾರರಾಗಿಯೂ ಇವರ ಖ್ಯಾತಿ ಮುಗಿಲೆತ್ತರ. ಆಕಾಶವಾಣಿ – ದೂರದರ್ಶನ ಕೇಂದ್ರಗಳಿಂದ ಇವರ ವಾದನ ಪ್ರಸಾರವಾಗುತ್ತಿತ್ತು. ‘ಎ’ ದರ್ಜೆಯ ಕಲಾವಿದರಾಗಿದ್ದ ಇವರು ಮಂಗಳೂರು ಆಕಾಶವಾಣಿ ನಿಲಯದ ಕಲಾವಿದರಾಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದ್ದರು. ಆಡಿಷನ್‌ ಬೋರ್ಡ್ ಸದಸ್ಯರಾಗಿ, ರಾಜ್ಯ ಪರೀಕ್ಷಾ ಮಂಡಲಿಯ ಸದಸ್ಯರಾಗಿ, ರಾಜ್ಯ ಪರೀಕ್ಷಾ ಮಂಡಲಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರ ವಾದನ ವೈಖರಿಗೆ ಮೆಚ್ಚಿ ಚೌಡಯ್ಯನವರು ತಮಗೆ ಬಹುಮಾನವಾಗಿ ದೊರೆತಿದ್ದ ಪಿಟೀಲನ್ನು ನೀಡಿದ್ದು ಸುಬ್ಬರತ್ನಂ ಅವರ ಸಾಧನೆಗೆ ಸಿಕ್ಕಿದ ಪುರಸ್ಕಾರ.

ಸುಬ್ಬರತ್ನಂ ಅವರ ವಾದನದ ಧ್ವನಿಸುರುಳಿಗಳು ಲಭ್ಯವಿದೆ. ಅವರು ನಿರ್ದೇಶಿಸಿರುವ ಧ್ವನಿಸುರುಳಿಗಳೂ ಅನೇಕವಿವೆ. ಸಂಶೋಧನಾತ್ಮಕ ಪ್ರವೃತ್ತಿಯ ಶ್ರೀಯುತರು ಅನೇಕ ಪ್ರಯೋಗಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಪ್ರದರ್ಶಿಸಿದ್ದರು. ಉತ್ತಮ ಬೋಧಪ್ರದ ಸೋದಾಹರಣ ಪ್ರಾತ್ಯಕ್ಷಿಕ ಕಾರ್ಯಕ್ರಮಗಳನ್ನೂ ನೀಡಿದ್ದರು.

ಕಾಂಚನದಲ್ಲಿ ‘ಶ್ರೀ ಲಕ್ಷ್ಮೀನಾರಾಯಣ ಸಂಗೀತ ಮಹಾವಿದ್ಯಾಲಯ’ದ ಪ್ರಾಂಶುಪಾಲರಾಗಿ ಅನೇಕಾನೇಕ ಶಿಷ್ಯರನ್ನು ತರಬೇತಿಗೊಳಿಸಿದ ಕೀರ್ತಿಗೆ ಭಾಜನರು.

‘ಸಂಗೀತ ಕಲಾಸಿಂಧು’, ‘ನಾದ ಜ್ಯೋತಿ’, ‘ಅತ್ಯುತ್ತಮ ಪಿಟೀಲು ವಾದಕ’, ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದ್ದ ಶ್ರೀಯುತರು ಅಕಾಲಿಕವಾಗಿ ೨೦೦೫ರಲ್ಲಿ ನಾದದೇವಿಯ ಚರಣಾರವಿಂದಗಳನ್ನು ಸೇರಿದರು.