ಮರುಭೂಮಿಯಲ್ಲಿ ಸಂಗೀತ ಪುಷ್ಕರಿಣಿ ಸೃಷ್ಟಿಸಷಿದ ಮಹಾನ್‌ ಚೇತನವೇ ಕಾಂಚನ ವೆಂಕಟಸುಬ್ರಹ್ಮಣ್ಯಂ. ತಮ್ಮ ಸಾಧನೆ, ಸಿದ್ಧಿಯ ಮೂಲಕ ದಕ್ಷಿಣ ಜಿಲ್ಲೆಯಲ್ಲಿ ಕರ್ನಾಟಕ ಸಂಗೀತಕ್ಕೆ ಹೊಸ ಆಯಾಮ ತಂದುಕೊಟ್ಟ ಮಹಾನುಭಾವ. ಅಗಣಿತ ಸಂಖ್ಯೆಯಲ್ಲಿ ಶಿಷ್ಯರಿಗೆ ಸಂಗೀತವನ್ನು ಧಾರೆಯೆರೆದು ದೇಶದಾದ್ಯಂತ ಕಾಂಚನದ ಕೀರ್ತಿಯನ್ನು ಪಸರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಅವರೊಬ್ಬ ದೈತ್ಯ ಪ್ರತಿಭೆ ಹಾಗೂ ಯಮ ಸಾಧಕ. ಅವರ ಬದುಕಿನ ಶೈಲಿಯೇ ಅಂದಿನ ಕಾಲದಲ್ಲಿ ದಂತಕತೆಯಾಗಿತ್ತು. ಅವರ ಸನಿಹಕ್ಕೆ ಬಂದ ಒಬ್ಬೊಬ್ಬ ಕಲಾವಿದ ಹಾಗೂ ವಿದ್ಯಾರ್ಥಿಯು ಕೂಡ ಅವರಿಂದ ದಾರ್ಶನಿಕ ಅನುಭವವನ್ನು ಪಡೆದಿದ್ದಾರೆ. ಅವರೊಬ್ಬ ವ್ಯಕ್ತಿಯಾಗಿ ಗೋಚರಿಸುವಕ ಬದಲು, ದೈವೀಕ ಶಕ್ತಿಯಾಗಿಯೇ ಆರಾಧಿಸಲ್ಪಟ್ಟವರು.

ಕಾಂಚನ ಶಾಲೆಯಲ್ಲಿ ಸಂಗೀತಾಭ್ಯಾಸ ಮಾಡಲು ಅವಕಾಶ ಸಿಕ್ಕಿದ್ದು ಈ ಲೇಖಕಿಯ ಭಾಗ್ಯ. ಸಂಗೀತ ಕಲಿಸಿದ ಗುರು ವಿದ್ವಾನ್‌ ಕಾಂಚನ ಸುಬ್ಬರತ್ನಂ. ಇವರು ಕಾಂಚನ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರ ಮಗ.

ಒಂದು ಕಾಲವಿತ್ತು, ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಸಂಗೀತದ ಕಂಪು ಬಲು ಅಪರೂಪವೇ ಆಗಿತ್ತು. ಇಂತಹ ನಾಡಿನಲ್ಲಿ ಸಂಗೀತದ ಅಲೆಯನ್ನು  ಎಬ್ಬಿಸಿದವರು ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರು. ಈ ಕಾರಣಕ್ಕಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ ‘ಕಾಂಚನ’ ಎಂಬ ಗ್ರಾಮ, ಕರ್ನಾಟಕದ ‘ತಿರುವಯ್ಯಾರ್’ ಎಂದು ಪ್ರಸಿದ್ಧಿ ಪಡೆದಿದೆ. ಕಾಂಚನದ ಗುರುಕುಲ ಪದ್ಧತಿಯ ಸಂಗೀತ ಶಿಕ್ಷಣದಲ್ಲಿ ನಡೆಯುತ್ತಿದ್ದ ದಾನ, ಧರ್ಮ, ನಿತ್ಯ ಸಂಗೀತ ಯಜ್ಞ, ಎಲ್ಲವೂ ವರ್ಣಿಸಲಸಾಧ್ಯವಾದ ಅನುಭವಗಳು. ಕರ್ನಾಟಕ ಸಂಗೀತದಲ್ಲಿ ಕಾಂಚನ ಶೈಲಿ ಎಂಬ ಹೊಸ ಛಾಪನ್ನು ತೋರಿಸಿದ ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರು ನಾದದಲ್ಲಿ ಐಕ್ಯರಾಗಿ ಎರಡು ದಶಕಗಳೇ ಸಂದಿವೆ.

ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಕಾಂಚನ ಎಂಬ ಗ್ರಾಮದಲ್ಲಿ ಶತಮಾನಗಳ ಹಿಂದೆ,ತಮಿಳುನಾಡು ಮೂಲದ ವೆಂಕಟರಮಣಯ್ಯರ್ ಎನ್ನುವ ಮಹನುಭಾವರು ನೆಲೆಸಿದ್ದರು. ಅಂದಿನಿಂದಲೇ ದಾನಧರ್ಮಕ್ಕೆ ಕಾಂಚನ ಮನೆತನ ಹೆಸರಾಗಿತ್ತು. ವೆಂಕಟರಮಣಯ್ಯರ್ ರವರು ಶೃಂಗೇರಿ ಮಠದ ಧರ್ಮಾಧಿಕಾರಿಯಾಗಿದ್ದವರು, ಇವರು “ಕಾಂಚನ ಸೇರನೇರು” ಎಂದೇ ಪ್ರಸಿದ್ಧರಾಗಿದ್ದರು. (ಸೇನೇರು ಎಂದರೆ ಶ್ಯಾನುಭೋಗರು) ಜಗದ್ಗುರು ಶ್ರೀ ನರಸಿಂಹ ಭಾರತಿಗಳವರ ಕಾಲದಲ್ಲಿ ವೆಂಕಟರಮಣಯ್ಯರ್ ರವರು ಶೃಂಗೇರಿ ಸಂಸ್ಥಾನದ ಧರ್ಮಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಕಾಂಚನ ಗ್ರಾಮ ಇವರಿಗೆ ಸಂಸ್ಥಾನದ ಕೊಡುಗೆಯಾಗಿ ದೊರೆಯಿತು. ವೆಂಕಟರಮಣಯ್ಯರ್ ಎರಡು ಬಾರಿ ಸಹಸ್ರ ಭೋಜನ ಏರ್ಪಡಿಸಿ, ಚಿನ್ನದ ನಾಣ್ಯಗಳನ್ನು ದಕ್ಷಿಣೆಯಾಗಿ ನೀಡಿ ಕೀರ್ತಿ ಗಳಿಸಿದವರು . ಸದಾ ದಾನಧರ್ಮದ ಬಗ್ಗೆಯೇ ಚಿಂತಿಸುತ್ತಿದ್ದ ಅವರು ನೂರು ಮುಡಿ ಅಕ್ಕಿ ಇಳುವರಿ ಬರುವ ತನ್ನ ಜಮೀನನ್ನು ದಾನ ಮಾಡಿ ಬಡ ಜನತೆಗೆ ಜೀವನಕ್ಕೆ ಆಧಾರವಾದವರು. ಸುತ್ತಮುತ್ತಲಿನ ಅನೇಕ ದೇವಾಲಯ, ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ ದೊಡ್ಡ ದೈವಭಕ್ತ. ಯಕ್ಷಗಾನ ಪ್ರಿಯರಾಗಿದ್ದ ವೆಂಕಟರಮಣಯ್ಯರ್ ರವರು ಪರಿಣತ ಭಾಗವತರಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜಯ್ಯ ಹೆಗ್ಗಡೆ ಅವರೊಂದಿಗೆ ಸ್ನೇಹ ಸಂಪರ್ಕವಿರಿಸಿಕೊಂಡಿದ್ದರು. ಈಕ ಸ್ನೇಹ ಪರಂಪರೆ ಕಾಂಚನ ಮನೆತನದಲ್ಲಿ ಇಂದಿಗೂ ಮುಂದುವರೆದುಕೊಂಡು ಬಂದಿದೆ.

ವೆಂಕಟರಮಣಯ್ಯರ್ ರವರಿಗೆ ಮೊದಲ ಪತ್ನಿ ಗೌರಮ್ಮನವರಲ್ಲಿ ಸಂತಾನ ಪ್ರಾಪ್ತಿಯಾಗಲಿಲ್ಲ. ತನ್ನ ದಾನ ಧರ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಬರಬೇಕೆಂಬ ಹಂಬಲದಿಂದ ವೆಂಕಟರಮಣಯ್ಯರ್ ರವರು ವಂಶೋದ್ಧಾರ ಬಯಸಿದ್ದರು. ಶೃಂಗೇರಿಯ ಶ್ರೀಗಳವರ ಅಪ್ಪಣೆ ಪಡೆದು, ಕೇರಳದ ಪಾಲ್ಘಾಟಿನ ವೀಣಾ ವಿದುಷಿ ಆನಂದಲಕ್ಷ್ಮಿ ಅಮ್ಮ ಅವರನ್ನು ಎರಡನೇ ಪತ್ನಿಯಾಗಿ ಮನೆ ತುಂಬಿಸಿಕೊಂಡರು. ಅವರಿಂದ ಕಾಂಚನ ಮನೆತನಕ್ಕೆ ಸಂಗೀತ ಪಾದಾರ್ಪಣೆ.

ಆನಂದಲಕ್ಷ್ಮಮ್ಮ ಸಂಗೀತವೇ ಜೀವನದ ಉಸಿರಾಗಿತ್ತು. ದೇವರ ಅನನ್ಯ ಭಕ್ತೆಯಾಗಿದ್ದ ಅವರು ಕಾಂಚನದ ನೆಲದಲ್ಲಿ ಹೊಸ ಶಕೆಯನ್ನು ಆರಂಭಿಸಲು ಕಾರಣಕರ್ತರಾದರು. ವೆಂಕಟರಮಣಯ್ಯರ್ ಹಾಗೂ ಆನಂದಲಕ್ಷ್ಮಮ್ಮ ದಂಪತಿಗಳಿಗೆ ಹುಟ್ಟಿದ ಮೊದಲ ಮಗು ಜಯಲಕ್ಷ್ಮಿ. ಎರಡನೇ ಮಗು ಸುಬ್ರಹ್ಮಣ್ಯ ಹಾಗೂ ಮೂರನೆಯವರು ರಾಜಲಕ್ಷ್ಮಿ.

ವೆಂಕಟರಮಣಯ್ಯರ್ ಹಾಗೂ ಆನಂದಲಕ್ಷ್ಮಮ್ಮನವರದು ಸಂತೃಪ್ತ, ಸುಖೀ ಕುಟುಂಬ. ಆದರೆ ಈ ಸುಖ ತುಂಬಾ ಕಾಲ ಉಳಿಯಲಿಲ್ಲ. ಕುಟುಂಬಕ್ಕೆ ಸಿಡಿಲೆರಗಿದಂತೆ, ವೆಂಕಟರಮಣಯ್ಯರ್ ರವರು ಇಹಲೋಕ ತ್ಯಜಿಸಿದರು. ಆನಂದಲಕ್ಷ್ಮಮ್ಮನವರಿಗೆ ತಾರುಣ್ಯದಲ್ಲಿಯೇ ವೈಧವ್ಯ ಪ್ರಾಪ್ತಿಯಾಯಿತು.

ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡ ಆನಂದಲಕ್ಷ್ಮಿ ಅಮ್ಮನವರು ಧೃತಿಗೆಡದೆ, ಮನೆತನದ ವ್ಯವಹಾರಗಳನ್ನು ಧೈರ್ಯದಿಂದ ನಿಭಾಯಿಸಿ, ಮುನ್ನಡೆದರು. ಕಾಂಚನ ಮನೆತನದ ಗೌರವಕ್ಕೆ ಎಳ್ಳಷ್ಟೂ ಕೊರತೆಯಾಗದಂತೆ ಆನಂದ ಲಕ್ಷ್ಮಿ ಅಮ್ಮನವರಿಂದ ದಾನ ಧರ್ಮಸೇವೆಯ ಮುಂದುವರಿಕೆ, ಜೊತೆಗೆ ಸಂಗೀತ ಸೇವೆಯೂ ಕೂಡಾ.

ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರು ಜನಿಸಿದ್ದು ತನ್ನ ತಾಯಿಯ ತವರಾದ ಕೇರಳ ರಾಜ್ಯದ ಪಾಲ್ಘಾಟಿನಲ್ಲಿ ೧೯೨೧ರ ಜುಲೈ ೨೧ ರಂದು. ತಾಯಿ ಸಂಗೀತ ವಿದುಷಿಯಾಗಿದ್ದುದರಿಂದ ಮಗುವಿಗೆ ಮನೆಯೇ ಸಂಗೀತದ ಶಾಲೆ ಹಾಗೂ ತಾಯಿಯೇ ಮೊದಲಲ ಗುರುವೂ ಆದರು . ತಾಯಿಯ ಮೂಲಕ ರಕ್ತಗತವಾಗಿ ಬಂದ ಸಂಗೀತವೂ ಸುಬ್ರಹ್ಮಣ್ಯನಿಗೆ ಆ ಕ್ಷೇತ್ರದಲ್ಲಿ ವಿಶೇಷ ಒಲವು ಮೂಡಿಸಿತು. ಸಣ್ಣ ಮಗುವಿನ ಸಂಗೀತದ ಮೇಲಿನ ವಿಶೇಷ ಒಲವನ್ನು ಕಂಡು ಬೆರಗಾದ ತಾಯಿ, ತನ್ನ ಮಗ ಮುಂದೆ ಬಹು ಶ್ರೇಷ್ಠ ಸಂಗೀತ ವಿದ್ವಾಂಸನಾಗಲಿದ್ದಾನೆಂಬ ಕನಸು ಕಾಣುತ್ತಿದ್ದರು. ತಾಯಿಯ ಕನಸನ್ನು ಆ ಬಾಲಕ ಸುಳ್ಳಾಗಿಸಲಿಲ್ಲ. ಕೆಲವೇ ವರ್ಷಗಳಲ್ಲಿ, ಸಂಗೀತದಲ್ಲಿ ಪ್ರೌಢಿಮೆ ತೋರಿಸಿ ತನ್ನ ತಾಯಿಗೆ ಗೌರವಾರ್ಪಣೆ ಸಲ್ಲಿಸಿದ.

ವೆಂಕಟಸುಬ್ರಹ್ಮಣ್ಯಂ ಅವರ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವು ಉಪ್ಪನಂಗಡಿಯಲ್ಲಿ ನಡೆಯಿತು. ಅನಂತರ ಪ್ರೌಢಶಾಲಾ ವಿದ್ಯಾಭ್ಯಾಸವು ಮಂಗಳೂರಿನ ಗಣಪತಿ ಪ್ರೌಢಶಾಲೆಯಲ್ಲಿ ನಡೆಯಿತು.

ವೆಂಕಟಸುಬ್ರಹ್ಮಣ್ಯಂರವರ ತಂದೆಯವರು ಮಂಗಳೂರಿನಲ್ಲಿ ಕೂಡಾ ಮನೆಯನ್ನು ಹೊಂದಿದ್ದರು. (ಮಂಗಳೂರಿನ ಕಂಕನಾಡಿ ಬಳಿ) ಈ ಮನೆಯು ‘ಕಾಂಚನ ಭವನ’ ಎಂದೇ ಪ್ರಸಿದ್ಧಿ ಪಡೆದಿತ್ತು. ಖ್ಯಾತ ಸಂಗೀತಜ್ಞರೆಲ್ಲಾ ಬಂದು ಸೇರುವ ಸಂಗಮ ಸ್ಥಳ ಕೂಡಾ ಇದಾಗಿತ್ತು. ಸುಬ್ರಹ್ಮಣ್ಯಂನ ಎಳೆಯ ಮನಸ್ಸಿನಲ್ಲಿ ಈ ಸಂಗೀತದ ವಾತಾವರಣ ಅಚ್ಚಳಿಯದ ಪ್ರಭಾವವನ್ನೇ ಬೀರಿತು ಎಂದರೆ ಅತಿಶಯೋಕ್ತಿಯಾಗಲಾರದು.

ವೆಂಕಟಸುಬ್ರಹ್ಮಣ್ಯಂ ತನ್ನ ತಾಯಿಯಿಂದ ಸಂಗೀತದ ಶ್ರೀ ಓನ್ನಾಮಗಳನ್ನು ಅಭ್ಯಸಿಸಿದ ನಂತರ ಆ ಕಾಲದ ಪ್ರಸಿದ್ಧ ಸಂಗೀತ ಕಲಾವಿದರಾದ ಚೆಂಬೈ ವೈದ್ಯನಾಥ ಭಾಗವತರ್ ಮತ್ತು ಜಿ.ಎನ್‌. ಬಾಲಸುಬ್ರಹ್ಮಣ್ಯಂರ ಬಳಿಯೂ ಉನ್ನತ ಅಭ್ಯಾಸ ಮಾಡಿದರು. ಸಿ.ಎನ್‌. ಶಾಸ್ತ್ರಿಗಳು ಕೂಡಾ ಆರಂಭದ ಕಾಲದಲ್ಲಿ ಇವರ ಗುರುಗಳಾಗಿದ್ದರು. ಕಠಿಣ ಹಾಗೂ ಶಿಸ್ತಿನ ಅಭ್ಯಾಸವು ವೆಂಕಟಸುಬ್ರಹ್ಮಣ್ಯಂ ಅವರನ್ನು ಸಂಗೀತ ಲೋಕದ ಧ್ರುವತಾರೆಯನ್ನಾಗಿಸಿತೆಂದರೆ ತಪ್ಪಲ್ಲ.

ಮಂಗಳೂರಿನ ಕಾಂಚನ ಮನೆಯಲ್ಲಿ ಅತಿಥಿಗಳಾಗಿ ಬಂದು ಸಂಗೀತ ಕಚೇರಿ ನೀಡುತ್ತಿದ್ದ ವಿದ್ವಾನ್‌ ಸಿ.ಎನ್‌. ಶಾಸ್ತ್ರಿ, ಬೆಳ್ಳೆ ಅನಂತರಾಮ ಉಪಾಧ್ಯಾಯ, ಎನ್‌.ವಿ. ಮೂರ್ತಿ, ಶೇಷಾಮಣಿ, ಗೋಪೀನಾಥ, ಚೆಂಬೈ, ಜಿ.ಎನ್‌. ಬಾಲಸುಬ್ರಹ್ಮಣ್ಯಂ, ಟಿ. ಚೌಡಯ್ಯ, ಪಾಲ್ಘಾಟ್‌ ಮಣಿ ಅಯ್ಯರ್, ಪಳನಿ ಸುಬ್ರಹ್ಮಣ್ಯಂ ಪಿಳ್ಳೆ, ಅಲಂಗುಡಿ ರಾಮಚಂದ್ರನ್‌, ಸಿ.ಆರ್. ಮಣಿ ಮೊದಲಾದ ಶ್ರೇಷ್ಠ ಕಲಾವಿದರ ಪ್ರಭಾವ ವೆಂಕಟಸುಬ್ರಹ್ಮಣ್ಯಂ ಅವರನ್ನು ಪ್ರಸಿದ್ಧ ಕಲಾವಿದರನ್ನಾಗಿ ರೂಪಿಸಲು ಕಾರಣವಾಯಿತು.

ಕಾಂಚನ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ರವರ ಪ್ರಥಮ ಸಂಗೀತ ಕಚೇರಿ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ತನ್ನ ಗುರು ಚೆಂಬೈಯವರ ಸಮಕ್ಷಮದಲ್ಲಿ ನಡೆಯಿತು. ಪ್ರಥಮ ಕಚೇರಿಯಲ್ಲಿಯೇ ಅವರು ಪ್ರೌಢಿಮೆಯನ್ನು ತೋರಿಸಿದ್ದರು ಹಾಗೂ ಭರವಸೆಯನ್ನು ಮೂಡಿಸಿದ್ದರು.

ತಾಯಿಯ ಇಚ್ಛೆಯಂತೆ ವೆಂಕಟಸುಬ್ರಹ್ಮಣ್ಯಂ ಅವರು ೧೯೪೯ ರಲ್ಲಿ ಸಂಗೀತ ವಿದುಷಿ ಕೆ.ವಿ. ತಂಗಮ್ಮಾಳ್‌ ಅವರನ್ನು ತನ್ನ ಬಾಳ ಸಂಗಾತಿಯಾಗಿಸಿಕೊಂಡರು.

ವೆಂಕಟಸುಬ್ರಹ್ಮಣ್ಯಂರವರ ಮೊದಲ ಸಂಗೀತ ಕಚೇರಿ ಬದುಕಿನ ಸಾಧನೆಯ ಮೊದಲ ಮೆಟ್ಟಿಲಾಗಿತ್ತು. ಮುಂದೆ ಹಂತ ಹಂತವಾಗಿ, ಸಂಗೀತದಲ್ಲಿ ಹಿಡಿತ ಸಾಧಿಸಿ ಹಲವಾರು ಸಂಗೀತ ಕಚೇರಿಗಳನ್ನು ನೀಡಿದರು. ವಿದ್ವಾನ್‌ ಟಿ. ಚೌಡಯ್ಯನವರು ಸ್ವತಃ ಇವರ ಕಚೇರಿಯಲ್ಲಿ ಪಿಟೀಲು ನುಡಿಸಿ ಪ್ರೋತ್ಸಾಹಿಸಿದರು. ೧೯೪೯ರಿಂದ ೧೯೫೫ರ ತನಕ ಅವರು ಹೆಚ್ಚಿನ ಸಂಗೀತಾಭ್ಯಾಸವನ್ನು ಮದರಾಸಿನಲ್ಲಿ ಮಾಡಿದರು.

ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರ ಕಚೇರಿಗೆ ವಯೋಲಿನ್‌ ಸಾಥಿಯಾಗುವುದು ಒಂದು ಅಪೂರ್ವ ಅನುಭವ ಎಂದು ಪಿಟೀಲು ಟಿ. ಚೌಡಯ್ಯನವರು ಭಾವಿಸುತ್ತಿದ್ದರಂತೆ. ಅದಕ್ಕಾಗಿ ಅವರು ಅಂತಹ ಅವಕಾಶಗಳನ್ನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲವಂತೆ.

ಹಲವಾರು ಶ್ರೇಷ್ಠ ಕಲಾವಿದರು ವೆಂಕಟಸುಬ್ರಹ್ಮಣ್ಯಂ ಅವರಿಗೆ ಕಚೇರಿಗಳಲ್ಲಿ ಪಕ್ಕವಾದ್ಯ ನುಡಿಸಿದ್ದಾರೆ. ಲಾಲ್ಗುಡಿ, ಜಯರಾಮನ್‌, ಎಂ.ಎಸ್‌. ಗೋಪಾಲಕೃಷ್ಣನ್‌, ಎಂ. ಚಂದ್ರಶೇಖರನ್ ಅವರುಗಳು ವಯೋಲಿನ್‌ನಲ್ಲೂ, ಟಿ.ವಿ. ಗೋಪಾಲಕೃಷ್ಣನ್‌, ಗುರುವಾಯೂರು ದೊರೈ, ಅಲಂಗಡಿ ರಾಮಚಂದ್ರನ್‌, ವೆಲ್ಲೂರು ರಾಮಭದ್ರನ್‌ ಮುಂತಾದವರು ಮೃದಂಗ ನುಡಿಸಿದ ಪ್ರಮುಖರು.

ವೆಂಕಟಸುಬ್ರಹ್ಮಣ್ಯಂ ಅಯ್ಯರ್ ರವರು ಮದರಾಸಿನಲ್ಲಿ ಉನ್ನತ ಸಂಗೀತಾಧ್ಯಯನ ಮಾಡುತ್ತಿದ್ದ ಅವಧಿಯಲ್ಲಿ ಹಲವಾರು ಕಚೇರಿಗಳನ್ನೂ ಮಾಡಿದ್ದಾರೆ. ಅವರ ಕಚೇರಿಯನ್ನು ಆಲಿಸಲು ಎಂ.ಎಸ್. ಸುಬ್ಬುಲಕ್ಷ್ಮಿ, ಚೆಂಬೈಯವರಂತಹ ವಿದ್ವನ್ಮಣಿಗಳು ಆಗಮಿಸುತ್ತಿದ್ದರಂತೆ. ಆ ಕಾಲದ ಶ್ರೇಷ್ಠ ಕಲಾವಿದರನ್ನು ಕೂಡಾ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರು ತಮ್ಮ ವಿದ್ವತ್ತಿನಿಂದ ಮೋಡಿ ಮಾಡಿದ್ದರು.

ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರು ಹಣ ಸಂಪಾದನೆಗಾಗಿ ಸಂಗೀತವನ್ನು ಮಾರ್ಗವಾಗಿಸಿಕೊಂಡವರಲ್ಲ. ಕೃಷಿ ತೋಟಗಾರಿಕೆಯೇ ಅವರ ಜೀವನೋಪಾಯದ ಆಧಾರವಾಗಿತ್ತು. ಸಂಗೀತವೆಂದರೆ ಸಂಸ್ಕೃತಿಯ ಆರಾಧನೆ ಎಂದೇ ಅವರು ನಂಬಿದ್ದರು. ತನ್ನ ಬದುಕಿನ ನಾಲ್ಕು ದಶಕಗಳಲ್ಲಿ ದೇಶದಾದ್ಯಂತ ಸಾವಿರಾರು ಸಂಗೀತ ಕಚೇರಿಗಳನ್ನು ನೀಡಿದರು. ಆದರೆ ಯಾವ ಕಚೇರಿಗೂ ಅವರು ಸಂಭಾವನೆಯನ್ನು ಸ್ವೀಕರಿಸಲಿಲ್ಲ. ಸಂಗೀತಕ್ಕಾಗಿ ಬದುಕನ್ನೇ ಸಮರ್ಪಿಸಿಕೊಂಡ ಹಿರಿಯ ಚೇತನ ಸುಬ್ರಹ್ಮಣ್ಯಂ ಅಯ್ಯರ್ ಅವರು.

ಕಾಂಚನಕ್ಕೇ ಮರಳಿದ ರತ್ನ: ೧೯೪೯ರಲ್ಲಿ ಉನ್ನತ ಸಂಗೀತಾಭ್ಯಾಸಕ್ಕಾಗಿ ಮದ್ರಾಸಿಗೆ ತೆರಳಿದ್ದ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರು ೧೯೫೩ರಲ್ಲಿ ಕಾಂಚನಕ್ಕೆ ಮರಳಿದರು. ಕೀರ್ತಿ, ಪ್ರಸಿದ್ಧಿಯ ಲಾಲಸೆ ಇಲ್ಲದ ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರಿಗೆ ಸಂಗೀತ ಸೇವೆಯೊಂದೇ ಬದುಕಿನ ಧ್ಯೇಯವಾಗಿತ್ತು. ತಾನು ಕಲಿತ ಸಂಗೀತವನ್ನು ನೂರಾರು ಜನರಿಗೆ ಧಾರೆಯೆರೆಯಬೇಕೆಂಬ ಸಂಕಲ್ಪ ಅವರದಾಗಿತ್ತು. ಈ ಸಂಕಲ್ಪವನ್ನು ಈಡೇರಿಸಲೆಂದೇ ಅವರು, ಸಂಗೀತ ಪ್ರಚಾರ, ಪ್ರಸಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿದರು.

ವೆಂಕಟಸುಬ್ರಹ್ಮಣ್ಯಂ ಅವರು ೧೯೫೩ರಲ್ಲಿ ಕಾಂಚನದ ತನ್ನ ವಿಶಾಲವಾದ ಮನೆಯಲ್ಲೇ ಗುರುಕುಲ ಪದ್ಧತಿಯ ಸಂಗೀತ ಶಿಕ್ಷಣವನ್ನು  ಪ್ರಾರಂಭಿಸಿದರು. ಈ ಗುರುಕುಲದಲ್ಲಿ ಇವರ ಸೋದರ ಮಾವ ವಿದ್ವಾನ್‌ ಕೆ.ಇ. ಕೃಷ್ಣಅಯ್ಯರ್ ಮೃದಂಗ ಶಿಕ್ಷಣವನ್ನು ನೀಡುತ್ತಿದ್ದರು.

‘ಗುರುಕುಲ’ ಎಂಬ ಪ್ರಾಚೀನ ಪದ್ಧತಿಗೆ ಹೊಸ ಆಯಾಮ ನೀಡಿ, ತನ್ನ ಮನೆಯನ್ನು ಸಂಗೀತ ದೇಗುಲಕವಾಗಿಸಿದ ವೆಂಕಟಸುಬ್ರಹ್ಮಣ್ಯಂ ಅವರ ಸೇವೆ ಸಂಗೀತ ಕ್ಷೇತ್ರದ ಅಪರೂಪ ಸಾಧನೆಯೇ ಸರಿ. ವೆಂಕಟ ಸುಬ್ರಹ್ಮಣ್ಯಂರವರ ಸಂಗೀತ ದೇಗುಲಕ್ಕೆ ದೂರ ದೂರದ ಊರುಗಳಿಂದ ಸಂಗೀತಾಸಕ್ತರು ಶಿಷ್ಯತ್ವ ಪಡೆಯಲು ಬರಲಾರಂಭಿಸಿದರು.

ಗುರುಕುಲದ ಶಿಷ್ಯರಿಗೆ ಉಚಿತ ಊಟ, ವಸತಿ ನೀಡಿ, ಪೋಷಿಸಿ ಅವರನ್ನು ಸಂಗೀತಗಾರರಾಗಿಸಲು ಪಣತೊಟ್ಟು, ಸುಬ್ರಹ್ಮಣ್ಯಂ ಅವರು ವಿದ್ಯೆಯನ್ನು ಧಾರೆ ಎರೆಯುತ್ತಿದ್ದರು. ಅವರಿಗೆ ತನ್ನ ಶಿಷ್ಯರಲ್ಲಿ ಅಪಾರ ಪ್ರೀತಿ. ಶಿಷ್ಯರ ಊಟ, ಉಪಚಾರದ ನಂತರವೇ ಆಹಾರ ಸೇವಿಸುವುದು ಸುಬ್ರಹ್ಮಣ್ಯಂರವರ ಪದ್ಧತಿ. ಶಿಷ್ಯರಿಗೆ ಪಾಠ ಹೇಳಿ ಕೊಡುವಲ್ಲಿ ಅವರದೇ ಆದ ವಿಶೇಷತೆ ಇತ್ತು. ೧೯೫೯ರಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಸಂಗೀತ ಕಲಾ ಶಾಲಾ ಸಂಸ್ಥೆಯನ್ನು ಆರಂಭಿಸಲಾಯಿತು. ಉದಯೋನ್ಮುಖ ಕಲಾವಿದರನ್ನು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಗಾಗ ಸಂಗೀತ ಕಚೇರಿಗಳನ್ನು ನಡೆಸಲಾಗುತ್ತಿತ್ತು. ಊರಲ್ಲೂ ಅಕ್ಕಪಕ್ಕದ ಗ್ರಾಮಗಳಲ್ಲಿರುವ ಸಂಗೀತಾಸಕ್ತರನ್ನು ಆಕರ್ಷಿಸಿ ಅವರಲ್ಲಿ ಕಲಾಭಿಮಾನವನ್ನು ತುಂಬುವುದಕ್ಕಗಿ ಅನೇಕ ಉತ್ಸವಗಳನ್ನು ಆಚರಿಸತೊಡಗಿದರು.

ಇಂತಹ ಆಚರಣೆಗಳಲ್ಲಿ ತ್ಯಾಗರಾಜರ ಆರಾಧನಾ ಸಪ್ತಾಹ ಮುಖ್ಯವಾದುದು. ದೇಶದಾದ್ಯಂತದಿಂದ ಪ್ರಸಿದ್ಧ ಕಲಾವಿದರನ್ನು ಕರೆಸುತ್ತಿದ್ದರಲ್ಲದೆ, ಹೊಸ ಪ್ರತಿಭೆಗಳಿಗೆ ಸಪ್ತಾಹದ ವೇಳೆ ಅವಕಾಶ ಕಲ್ಪಿಸಿ ಕೊಡುತ್ತಿದ್ದರು. ಕಾಂಛನ ಗುರುಕುಲದಲ್ಲಿ ಪುರಂದರ ದಾಸರು, ಮುತ್ತುಸ್ವಾಮಿ ದೀಕ್ಷಿತರ್, ಶ್ಯಾಮಶಾಸ್ತ್ರಿ ಮುಂತಾದವರ ದಿನಾಚರಣೆ, ರಾಮನವಮಿ, ವಿನಾಯಕ ಚೌತಿ, ವಿಜಯದಶಮಿ, ದೀಪಾವಳಿಗಳಲ್ಲದೇ ಏಕಾಹ ಭಜನೆ, ಸತ್ಯನಾರಾಯಣ ಪೂಜೆ ಮೊದಲಾದ ಧಾರ್ಮಿಕ ಕಲಾಪಗಳೂ ನಡೆಯುತ್ತಿದ್ದವು. ಪ್ರತಿಯೊಂದು ಸಮಾರಂಭದಲ್ಲೂ ಸಂಗೀತಾರಾಧನೆ ಇದ್ದೇ ಇರುತ್ತಿತ್ತು.

ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರು ತಮ್ಮ ಕಲಾಶಾಲೆಯಲ್ಲಿ ಹಲವಾರು ಕಲಾವಿದರನ್ನು ರೂಪಿಸಿದರು. ಶ್ರೀನಾಥ ಮರಾಠೆ, ಕಾಂಚನ ನಾರಾಯಣ ಭಟ್‌, ಉಡುಪಿ ಗೋಪಾಲಕೃಷ್ಣ ಭಟ್‌, ವಿಷ್ಣುಮೂರ್ತಿ ಭಟ್‌, ಶ್ರೀಮತಿ ಕ್ಷಮಾ, ಲಲಿತಾಂಬಾ, ಹೇಮಾವತಿ, ಮಗ ಕಾಂಚನ ಸುಬ್ಬರತ್ನಂ ಇವರ ಶಿಷ್ಯರಲ್ಲಿ ಪ್ರಮುಖರು.

ಕಾಂಚನದಲ್ಲಿ ವೆಂಕಟಸುಬ್ರಹ್ಮಣ್ಯಂ ಅವರು ಸೃಷ್ಟಿಸಿದ ಕಲಾ ಸಂಸ್ಥೆಯು ೧೯೬೬ರಲ್ಲಿ ಸರಕಾರದಿಂದ ಮಾನ್ಯತೆ ಪಡೆಯಿತು.

ಕಾಂಚನ ಶೈಲಿ: ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅನನ್ಯ ಸಾಧನೆ, ಸಿದ್ಧಿ ಗಳಿಸಿದ ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರು ಕರ್ನಾಟಕ ಸಂಗೀತದಲ್ಲಿ ತಮ್ಮದೇ ಆದ ಶೈಲಿಯನ್ನು ಕೂಡಾ ಮಾಡಿದ್ದಾರೆ. ಕಾಂಚನ ಶೈಲಿ ಎಂದರೆ ವೆಂಕಟಸುಬ್ರಹ್ಮಣ್ಯಂ ಅವರ ಶೈಲಿ. ಇದು ಚೆಂಬೈ, ಜಿ.ಎನ್‌.ಬಿ. ಶೈಲಿಗಳ ಪರಂಪರೆಯ ಭದ್ರ ಬುನಾದಿಯಿಂದ ಮೂಡಿಬಂದ ಸ್ವತಂತ್ರ, ಬಲಿಷ್ಠ ಶೈಲಿ.

ವೆಂಕಟಸುಬ್ರಹ್ಮಣ್ಯಂ ಅವರದು ಕೋಮಲ ಮಧುರ ಧೃಡ ಶಾರೀರ. ಭಾವ ಪೂರ್ಣ ಮತ್ತು ಮನೋಧರ್ಮ ಯುಕ್ತ ಗಾಯನ ಶೈಲಿ ಅವರಿಗೆ  ಸಿದ್ಧಿಸಿತ್ತು. ಮೂರು ನಾಲ್ಕು ಗಂಟೆಯ ಅವಧಿಯ ಬೈಠಕ್‌ ಕೂಡ ಅವರಿಗೆ ಲೀಲಾ ವಿಹಾರ. ಆನಂದ ಭೈರವಿ, ಯದುಕುಲ ಕಾಂಬೋಜಿ, ಕೇದಾರ ರಾಗಗಳ ಬಗ್ಗೆ ಅವರಿಗೆ ವಿಶೇಷ ಪ್ರೀತಿ.

ಸಾಮಾಜಿಕ ಕಳಕಳಿ: ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರು ತನ್ನ ಊರಿನ ಅಭಿವೃದ್ಧಿ, ಧಾರ್ಮಿಕ, ಶೈಕ್ಷಣಿಕ ಸೇವಾ ಕ್ಷೇತ್ರಗಳಲ್ಲೂ ಕೈಯಾಡಿಸಿದವರು. ಯಕ್ಷಗಾನದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇತ್ತು. ಹೀಗೆ ಅವರ ಜೀವನ ವಿಶಾಲ ವ್ಯಾಪ್ತಿಯನ್ನು ಹೊಂದಿತ್ತು.

ತನ್ನ ಊರಿನ ಮಕ್ಕಳಿಗೆ ಶಿಕ್ಷಣ ದೊರೆಯಬೇಕೆಂಬ ಹಂಬಲದಿಂದ ೧೯೫೩ರಲ್ಲಿ ಕಾಂಚನದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಪ್ರಾಥಮಿಕ ಶಾಲೆ ಆರಂಭಿಸಿದ್ದರು. ಓದು ಬರಹ ಇಲ್ಲದ ಕುಗ್ರಾಮದ ಜನತೆಯ ಬದುಕನ್ನು ವಿದ್ಯಾರ್ಜನೆಯ ಜ್ಞಾನದ ಬೆಳಕಿನೆಡೆಗೆ ನಡೆಸುವಲ್ಲಿ ಇನ್ನೊಂದು ಪ್ರಮುಖ ಹೆಜ್ಜೆಯಾಯಿತು. ೧೯೫೫ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿತ್ತು. ಮುಂದೆ ಪ್ರೌಢಶಾಲೆಯೂ ಸ್ಥಾಪನೆಯಾಯಿತು.

ಅಪ್ರತಿಮ ದೈವಭಕ್ತಿಯಿದ್ದ ಸುಬ್ರಹ್ಮಣ್ಯಂ ಅಯ್ಯರ್ ಅವರು ತಮ್ಮ ಊರಿನ ಅನೇಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಗೊಳಿಸಿದರು. ೧೯೫೪ರಲ್ಲಿ ಕಾಂಚನ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮತ್ತು ಬ್ರಹ್ಮ ಕಳಶ ನೆರವೇರಿಸಿದರು.

ಯಕ್ಷಗಾನ ತರಬೇತಿ ಕೇಂದ್ರ: ಕರಾವಳಿ ಜಿಲ್ಲೆಯ ಗಂಡು ಕಲೆ ಎಂದೇ ಪ್ರಸಿದ್ಧಿಯಾಗಿರುವ ಯಕ್ಷಗಾನಕ್ಕೂ ವೆಂಕಟ ಸುಬ್ರಹ್ಮಣ್ಯಂ ಅವರಿಗೂ ಹತ್ತಿರದ ನಂಟು. ಯಕ್ಷಗಾನದ ಬಗ್ಗೆ ವಿಶೇಷ ಪ್ರೀತಿ ಇದ್ದ ಅವರು ಕಾಂಚನದಲ್ಲಿ ೧೯೫೩ರಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನು ಸ್ಥಾಪಿಸಿದರು. ಇಲ್ಲಿಯೂ ಶಿಷ್ಯರಿಗೆ ಊಟ, ವಸತಿ, ಶಿಕ್ಷಣ ಎಲ್ಲ ಉಚಿತ.

ಹಲವಾರು ಹೆಸರಾಂತ ಯಕ್ಷಗಾನ ಕಲಾವಿದರು. ರೂಪುಗೊಳ್ಳುವಲ್ಲಿ ಈ ಕೇಂದ್ರ ಪ್ರಮುಖ ಪಾತ್ರವಹಿಸಿದೆ. ಪಾತಾಳ ವೆಂಕಟರಮಣ ಭಟ್‌, ಶಿವರಾಮ ಜೋಗಿ, ಸಂಜೀವ ರೈ, ದಿವಾಕರ ಭಟ್‌, ದಾಮೋದರ ಮಂಡೆಚ್ಚ, ಮಾಧವ ಭಟ್‌ ಮೊದಲಾದವರು ಪ್ರಮುಖರು.

ಪ್ರಶಸ್ತಿ-ಗೌರವ: ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರು ಎಂದಿಗೂ ಪ್ರಶಸ್ತಿ ಸನ್ಮಾನಗಳಿಗೆ ಅಪೇಕ್ಷೆ ಪಟ್ಟವರಲ್ಲ. ಅವರೊಬ್ಬ ಸಂಗೀತ ಸಾಧಕ. ಇವರ ಸೇವೆಯನ್ನು ಗುರುತಿಸಿ ಹಲವರು ಪ್ರೀತಿಯ ಗೌರವ ಅರ್ಪಿಸಿದ್ದಾರೆ. ಶ್ರೀ ವಾದಿರಾಜ ಕನಕದಾಸ ಉತ್ಸವದಲ್ಲಿ ಸಂಗೀತ ರತ್ನ ಎಂಬ ಬಿರುದು ನೀಡಿ ಗೌರವಿಸಲಾಗಿದೆ. ಮೈಸೂರು, ಕಲಾಭಿವರ್ಧಿನಿ ಸಭಾದವತಿಯಿಂದ, ಕಾರ್ಕಳದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ವೆಂಕಟಸುಬ್ರಹ್ಮಣ್ಯಂ ಅವರನ್ನು ಸನ್ಮಾನಿಸಲಾಗಿದೆ.

೧೯೮೨ರ ಜನವರಿ ೨೧ ರಂದು ಶ್ರೀ ತ್ಯಾಗರಾಜ ಆರಾಧನೆಯ ಎಲ್ಲಾ ಕಾರ್ಯಕ್ರಮಗಳೂ ನೆರವೇರಿದ ಮರುದಿನ ಹೃದಯಾಘಾತದಿಂದ ವಿದ್ವಾನ್‌ ಶ್ರೀ ಕಾಂಚನ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅಸ್ತಂಗತರಾದರು. ಆ ದಿವ್ಯ ಚೇತನದ ಆತ್ಮ ನಾದದಲ್ಲಿ ಲೀನವಾಯಿತು.

ಸಂಗೀತ ರತ್ನ ಕಾಂಚನ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರ ಸುಪುತ್ರ ವಯೋಲಿನ್‌ ವಿದ್ವಾನ್‌ ಶ್ರೀ ಕಾಂಚನ ಸುಬ್ಬರತ್ನಂ ಅವರು ತನ್ನ ತಂದೆಯವರ ಧ್ಯೇಯ, ಆಶೋತ್ತರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮಾತ್ರವಲ್ಲದೇ, ತಂದೆಯವರು ಸ್ಥಾಪಿಸಿದ ಸಂಸ್ಥೆಯನ್ನು ಅದೇ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಕಾಂಚನ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರ ಪುತ್ರಿಯರಾದ ಶ್ರೀಮತಿ ವಸಂತ ಪ್ರಭಾ ಹಾಗೂ ಶ್ರೀಮತಿ ಮಾಯಲಕ್ಷ್ಮಿ ಅವರೂ ಸಂಗೀತ ವಿದುಷಿಯರಾಗಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.