ranga_columnಕಾಗದ ಹಣ, ಅಂದರೆ ಪೇಪರ್ ಕರೆನ್ಸಿಗೂ ಮುಂಚೆ ಲೋಹಗಳು, ಚರ್ಮ, ದವಸಧಾನ್ಯ, ಜಾನುವಾರು ಹೀಗೆ ಅನೇಕ ವಸ್ತುಗಳು ವಿನಿಮಯ ಮಾಧ್ಯಮವಾಗಿ ಚಾಲ್ತಿಯಲ್ಲಿದ್ದವು. ಅಷ್ಟೇ ಅಲ್ಲ, ಅಂದಿನ ದಿನಗಳಲ್ಲಿ ಸಾಕಷ್ಟು ಯಶಸ್ಸನ್ನೂ ಗಳಿಸಿದ್ದವು.

ಆದರೆ ಯಾವುದೇ ವ್ಯವಸ್ಥೆ ಒಂದು ಹಂತದ ನಂತರ ಬದಲಾವಣೆ ಕೇಳುತ್ತದೆ. ಅದಕ್ಕೆ ಮೂಲ ಕಾರಣ ಬದಲಾದ ಜೀವನ ಶೈಲಿ, ಬದಲಾದ ವ್ಯಾಪಾರ ಕ್ರಮ. ಹೀಗೆ ಬದುಕಿನಲ್ಲಿ, ಸಮಾಜದಲ್ಲಿ ಆದ ಬದಲಾವಣೆಗೆ ಒಗ್ಗಿಕೊಳ್ಳಲು ವಿನಿಮಯ ಮಾಧ್ಯಮ ಕೂಡ ಬದಲಾಗದೆ ಅನ್ಯ ಮಾರ್ಗವಿರಲಿಲ್ಲ.

ಕೇವಲ ಒಂದು ನಿಗದಿತ ಪ್ರದೇಶದಲ್ಲಿ ವಿನಿಮಯ ಮಾಧ್ಯಮವಾಗಿ  ಲೋಹ, ಜಾನುವಾರು ಇತರ ವಸ್ತುಗಳು ಬಳಸುವುದರಲ್ಲಿ ಯಾವುದೇ ತೊಂದರೆ ಇರಲಿಲ್ಲ. ವ್ಯಾಪಾರಸ್ಥರು ತಮ್ಮ ವ್ಯಾಪಾರದ ಸಲುವಾಗಿ ತಮ್ಮ ಪ್ರದೇಶ ಬಿಟ್ಟು ದೂರದ ಊರುಗಳಿಗೆ ಪ್ರಯಾಣ ಮಾಡಲು ಶುರು ಮಾಡಿದರು. ಹಣದಂತೆ ಬಳಸಲು ಲೋಹವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯುವುದು ಸಮಸ್ಯೆಯಾಯಿತು. ಕಳ್ಳಕಾಕರ ಕಾಟ, ಹವಾಮಾನ ವೈಪರೀತ್ಯಗಳ ಜೊತೆಗೆ ಲೋಹದ ತೂಕ ಕೂಡ ಸಮಸ್ಯೆ ಸೃಷ್ಟಿಸಿತು.

ವ್ಯಾಪಾರಸ್ಥರು ಈ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಂಡರು. ತಮ್ಮ ಊರಿನ ಪ್ರಸಿದ್ಧ ವ್ಯಕ್ತಿ ಅಥವಾ ಮನೆತನದವರ ಬಳಿ ತಮ್ಮಲ್ಲಿದ್ದ ಲೋಹವನ್ನು ಇಟ್ಟು ಅವರಿಂದ ಒಂದು ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವುದೇ ಆ ಪರಿಹಾರ. ಆ ಪತ್ರ ಹೊಂದಿರುವರು ತಮ್ಮ ಬಳಿ ಇಷ್ಟು ಮೌಲ್ಯದ ಲೋಹವನ್ನು ಇಟ್ಟಿರುವರೆಂಬ ಹೇಳಿಕೆಯೊಂದಿಗೆ ಅಷ್ಟು ಮೌಲ್ಯಕ್ಕೆ ತಾನು ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಕೂಡ ಆ ವ್ಯಕ್ತಿಗಳು ಬರೆದುಕೊಡುತ್ತಿದ್ದರು. ಮತ್ತೊಂದು ಊರಿನ ಪ್ರಸಿದ್ಧ ವ್ಯಕ್ತಿ ಅಥವಾ ಮನೆತನ ಇಂತಹ ಪತ್ರವನ್ನು ಮಾನ್ಯ ಮಾಡುತ್ತಿತ್ತು. ಎರಡು ಬೇರೆ ಬೇರೆ ಊರಿನ ವ್ಯಕ್ತಿ ಅಥವಾ ಮನೆತನದ ನಡುವಿನ ಮೇಲಿನ ನಂಬಿಕೆ ವ್ಯಾಪಾರ ನಡೆಯಲು ಆಧಾರವಾಗಿತ್ತು. ಹಾಗೆ ನೋಡಿದರೆ ಇವು ಇಂದಿನ ಪೇಪರ್ ಕರೆನ್ಸಿ ಮಟ್ಟದ ವಿನಿಮಯವಲ್ಲದಿದ್ದರೂ, ಪೇಪರ್ ಕರೆನ್ಸಿ ಉಗಮಕ್ಕೆ ಓಂಕಾರ ಹಾಕಿದ ವ್ಯವಸ್ಥೆ ಅನ್ನುವುದಂತೂ ಸ್ಪಷ್ಟ.

ಯಾರು ರೀತಿಯ ವ್ಯವಸ್ಥೆಯ ಹರಿಕಾರರು ?

ಈ ರೀತಿಯ ವ್ಯವಸ್ಥೆ ಮೊದಲು ಜಾರಿಗೆ ಬಂದದ್ದು ಏಳನೇ ಶತಮಾನದಲ್ಲಿ ಚೀನಾ ದೇಶವನ್ನು ಆಳಿದ ಟಾಂಗ್ ಮನೆತನದ (tang dynasty) ಅವಧಿಯಲ್ಲಿ. ಶ್ರೀಮಂತ ವರ್ತಕರು ವ್ಯಾಪಾರ ವಹಿವಾಟು ಸರಾಗವಾಗಿ ಆಗಲು ‘ಮುಚ್ಚಳಿಕೆ ಪತ್ರ’ ಅಥವಾ ಪ್ರಾಮಿಸರಿ ನೋಟ್  ಬರೆದುಕೊಡಲು ಶುರು ಮಾಡಿದರು. ಅವು ಖಾಸಗಿ ವ್ಯಕ್ತಿಗಳು ಬರೆದು ಕೊಟ್ಟ ಮುಚ್ಚಳಿಕೆ ಪತ್ರವಾಗಿತ್ತು. ಅಂದಿನ ದಿನಗಳಲ್ಲಿ ಹಲವು ಶ್ರೀಮಂತ ವರ್ತಕರು ಈ ರೀತಿಯ ಪತ್ರಗಳನ್ನ ನೀಡುತ್ತಿದ್ದರು. ಟಾಂಗ್ ಮನೆತನ ಅಧಿಕೃತವಾಗಿ ಇಂತಹ ಪತ್ರಗಳನ್ನ ಚಲಾವಣೆ ಕೂಡ ತಂದಿತ್ತು.

ಈ ರೀತಿಯ ವ್ಯವಸ್ಥೆ ಅಭಾದಿತವಾಗಿ ೫೦೦ ವರ್ಷ ನಡೆದಿದ್ದಕ್ಕೆ ಇತಿಹಾಸ ಸಾಕ್ಷಿ. ನಂತರದ ದಿನಗಳಲ್ಲಿ ವ್ಯವಸ್ಥೆ ಕುಸಿಯಲು ಮನುಷ್ಯನ ಲೋಭ, ಕಡಿಮೆಯಲ್ಲಿ ಹೆಚ್ಚು ಪಡೆಯುವ ಹಪಹಪಿಕೆ ಕೆಲಸ ಮಾಡುತ್ತದೆ. ತನ್ನಲ್ಲಿರುವ ಲೋಹದ (ಚಿನ್ನ) ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯದ ಪತ್ರಗಳ ವಿತರಣೆ  ಜಗತ್ತಿನ ಮೊಟ್ಟ ಮೊದಲ ಇನ್ಫ್ಲೇಶನ್  (ಹಣದುಬ್ಬರ ) ಸೃಷ್ಟಿ ಮಾಡುತ್ತೆ . ಚೀನಾ ಜಗತ್ತಿನ ಪ್ರಥಮ ಆರ್ಥಿಕ ಕುಸಿತಕ್ಕೂ ಸಾಕ್ಷಿ ಆಗುತ್ತದೆ.

ಹೀಗೆ ವ್ಯವಸ್ಥೆ ಮೇಲಿನ ಅಪನಂಬಿಕೆ ಹೆಚ್ಚಾಗಿ ಈ ರೀತಿಯ ವ್ಯವಸ್ಥೆಯಿಂದ ಚೀನಾ ೧೪ ನೇ ಶತಮಾನದ ಹೊತ್ತಿಗೆ ಪೂರ್ಣ ವಿಮುಖವಾಗುತ್ತದೆ. ಇವರಿಂದ ಪ್ರೇರಿತರಾದ ಮಂಗೋಲರು ಈ ವ್ಯವಸ್ಥೆಯನ್ನ ಅಪ್ಪಿಕೊಳ್ಳುತ್ತಾರೆ. ೧೭ ನೇ ಶತಮಾನದ ಹೊತ್ತಿಗೆ ಯೂರೋಪ್ ಈ ವ್ಯವಸ್ಥೆಯನ್ನ ಹೆಚ್ಚು ಪ್ರಖ್ಯಾತಿಗೆ ತರುತ್ತದೆ.  ಟಾಂಗ್ ಮನೆತನದ ತಾಮ್ರ ಹಾಗೂ ಚಿನ್ನದ ಕಾಯಿನ್ (ನಾಣ್ಯ)  ನಡುವೆ ಚೌಕಾಕಾರದ ರಂಧ್ರ ಇರುತ್ತಿತ್ತು. ಇದನ್ನ ಅವರು  kai-yuans ಎಂದು ಕರೆಯುತ್ತಿದ್ದರು. ಇದು ಇತರ ದೇಶದ ಭಾಷಿಕರ ಬಾಯಿಯಲ್ಲಿ ಅಪಭ್ರಂಶಗೊಂಡು ಕಾಯಿನ್ ಆಗಿ ಪರಿವರ್ತನೆಗೊಂಡು ಕೊನೆಗೆ ಕ್ಯಾಶ್  ಎಂದರೆ ಹಣ  ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಜಗತ್ತಿಗೆ ಕಾಯಿನ್, ಕ್ಯಾಶ್ ನೀಡಿದ ಚೀನಾ ತಾನೇ ಸೃಷ್ಟಿಸಿದ ವ್ಯವಸ್ಥೆಯಲ್ಲಿನ ಲೋಪದೋಷದ ಭಾರಕ್ಕೆ ಕುಸಿದದ್ದು ವಿಪರ್ಯಾಸವಾದರೆ, ಇವರು ತೋರಿದ ದಾರಿಯಲ್ಲಿ ನಡೆದ ಅಮೇರಿಕಾ, ಯೂರೋಪ್ ವಿತ್ತ ಜಗತ್ತನ್ನ ೧೭ ನೇ ಶತಮಾನದಿಂದ ಇತ್ತೀಚಿನ ವರೆಗೆ ತನ್ನ ಇಚ್ಚೆಯಂತೆ ಕುಣಿಸಿದ್ದು ಕೌತುಕ. ಆಕಸ್ಮಾತ್ ಚೀನಾ ತನ್ನ ಅಂದಿನ ವ್ಯವಸ್ಥೆಯ ಲೋಪದ ಭಾರಕ್ಕೆ ಕುಸಿಯದೆ ಇದ್ದಿದ್ದರೆ ಇಂದಿನ ಡಾಲರ್ ವಿತ್ತ ಪ್ರಪಂಚದ ರಾಜನಾಗಿ ಮೆರೆಯಲು ಸಾಧ್ಯವಾಗುತ್ತಿತ್ತೇ? ಎನ್ನುವುದು ಇಂದಿಗೂ ಪ್ರಶ್ನೆ.

ಪೇಪರ್‌ನಲ್ಲಿ ಬರೆದು ಕೊಟ್ಟ ಮುಚ್ಚಳಿಕೆ ಪತ್ರ ಲೋಹಗಳಿಗೆ ಹೋಲಿಸಿದರೆ ಬಹಳಷ್ಟು ಹಗುರಾಗಿತ್ತು  ಹಾಗಾಗಿ ಅಂದಿನ ದಿನಗಳಲ್ಲಿ ಇದಕ್ಕೆ ‘ಹಾರುವ ಹಣ’  ಎನ್ನುವ ಉಪನಾಮ ಕೂಡ ಚಾಲ್ತಿಯಲ್ಲಿತ್ತು.

ನಾವು ಇಂದು ನೋಡುತ್ತಿರುವ ಬ್ಯಾಂಕ್ ನೋಟ್ ಚಲಾವಣೆಗೆ ಯಾವಾಗ ಬಂತು? ಚಲಾವಣೆಗೆ ತಂದವರಾರು?

ಸ್ವೀಡನ್ ದೇಶ ಜಗತ್ತಿನ ಪ್ರಥಮ ಬ್ಯಾಂಕ್ ನೋಟ್ ೧೬೬೧ ರಲ್ಲಿ ಜಾರಿಗೆ ತಂದಿತು . ಚರಿತ್ರೆಯಿಂದ ಅದು ಪಾಠ ಕಲಿತಿತ್ತು. ಚೀನಾ ದೇಶ ಮಾಡಿದ ತಪ್ಪು ತನ್ನ ದೇಶದ ಶ್ರೀಮಂತರು ಬೇಕಾದ ಹಾಗೆ ಮುಚ್ಚಳಿಕೆ ಪತ್ರ ನೀಡಲು ಅನುಮತಿ ನೀಡಿದ್ದು. ಆದರೆ ಸ್ವೀಡನ್ ಅತ್ಯಂತ ನಂಬಿಕೆಗೆ ಅರ್ಹವಾದ ೧೬ ಸಂಸ್ಥೆಗಳಿಗೆ ಈ ರೀತಿಯ ನೋಟ್ ವಿತರಿಸುವ ಪರವಾನಿಗೆ (ಸರ್ಟಿಫಿಕೇಟ್ ) ನೀಡಿತು. ಅಲ್ಲದೆ ಅದರ ಮುದ್ರಿಸುವಿಕೆ, ವಿತರಣೆ ಎಲ್ಲವೂ ನಿಗದಿತ ಕಾನೂನಿನ ಚೌಕಟ್ಟಿನಲ್ಲಿ ಇರುವಂತೆ ರೂಪುರೇಷೆ ಸಿದ್ಧಪಡಿಸಿತು. ಸ್ವೀಡನ್ ತನ್ನ ಬ್ಯಾಂಕ್ ನೋಟ್ ನ ಮುದ್ರಣದ ಮೂಲವನ್ನ ಸ್ಪೈಸಸ್  ಅಂದರೆ ಮಸಾಲೆ ಪದಾರ್ಥ ಅವಲಂಬಿಸಿ ಮುದ್ರಿಸುತಿತ್ತು. ಉದಾಹರಣೆ ಅವರ ಬಳಿ ಇರುವ ಮಸಾಲೆ ಪದಾರ್ಥದ ಮೌಲ್ಯ ಎಷ್ಟಿರುತ್ತದೋ  ಅಷ್ಟು ಮೌಲ್ಯದ ಹಣವನ್ನ ಮುದ್ರಿಸುವ ಅವಕಾಶವಿತ್ತು.

ಸ್ವೀಡನ್ ನ ಈ ವ್ಯವಸ್ಥೆ ಕೆಲವೇ ತಿಂಗಳುಗಳಲ್ಲಿ ಅಂದಿನ ದಿನದಲ್ಲಿ ಅತಿ ಹೆಚ್ಚು ಯಶಸ್ಸು ಗಳಿಸಿತು. ಇತರೆ ಯೂರೋಪಿನ ದೇಶಗಳು ಈ ವ್ಯವಸ್ಥೆಯನ್ನ ಅತ್ಯಂತ ಕಡಿಮೆ ಸಮಯದಲ್ಲಿ ತಮ್ಮದಾಗಿಸಿಕೊಂಡವು. ಸ್ವೀಡನ್ ಮುದ್ರಣ ಮತ್ತು ಚಲಾವಣೆಯಲ್ಲಿ ಶಿಸ್ತನ್ನ ಪಾಲಿಸುತ್ತಿತ್ತು, ಆದರೇನು ಎಲ್ಲಾ ದೇಶಗಳು ಅವರಂತೆ ಶಿಸ್ತು ಪಾಲಿಸಲಿಲ್ಲ ಹೀಗಾಗಿ ಜಗತ್ತು ಪೂರ್ಣ ಒಪ್ಪಿಕೊಳ್ಳುವಂತ ಬ್ಯಾಂಕ್ ನೋಟ್ ಅದಾಗಲಿಲ್ಲ. ಯೂರೋಪಿನ ಇತರ ದೇಶಗಳು ತಮ್ಮಲ್ಲಿರುವ ಮಸಾಲೆ ಪದಾರ್ಥದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯದ ನೋಟಗಳನ್ನ ಮುದ್ರಿಸ ಹತ್ತಿದವು. ಪರಿಣಾಮ ಯಾವ ನೋಟ್‌‌ಗೆ ಮೌಲ್ಯವಿದೆ ಯಾವುದಕ್ಕೆ ಇಲ್ಲ ಎನ್ನುವ ಗೊಂದಲ ಜನರಲ್ಲಿ ಹೆಚ್ಚಾಗಿ ಬ್ಯಾಂಕ್ ನೋಟ್ ಗಳು ಮೌಲ್ಯ ಕಳೆದು ಕೊಂಡು ಕೇವಲ ಪೇಪರ್ ಸ್ಥಿತಿ ತಲುಪಿತು.

ಇಂಗ್ಲೆಂಡ್, ಸ್ವಿಸ್, ಸ್ವೀಡನ್‌ಗಳಲ್ಲಿ ಇದ್ದ ಗೋಲ್ಡ್ ಸ್ಮಿತ್ಸ್ (ಚಿನ್ನದ ವ್ಯಾಪಾರಿಗಳು) ಗಳು ವಿತ್ತ ಪ್ರಪಂಚದ ಅಂದಿನ ಬ್ಯಾಂಕರ್‌ಗಳಂತೆ ಕೆಲಸ ಮಾಡುತ್ತಿದ್ದರು. ಇಡಿ ಜಗತ್ತು ಒಪ್ಪುವಂತ ಒಂದು ಕರೆನ್ಸಿ ಉಗಮವಾಗಲೇ ಇಲ್ಲ. ಗೋಲ್ಡ್ ಸ್ಮಿಥ್ ಅಥವಾ ಬ್ಯಾಂಕ್ ನೋಟ್ ವಿತರಿಸುವ ಸಂಸ್ಥೆಯ ಪ್ರಸಿದ್ಧಿಯ ಮೇಲೆ ನೋಟುಗಳ ಸ್ವೀಕೃತಿ ಜನರ ನಡುವೆ ತೀರ್ಮಾನವಾಗುತಿತ್ತು.  ೧೯ ನೇ ಶತಮಾನದಲ್ಲೂ ಅಮೇರಿಕಾ ದೇಶದಲ್ಲಿ ೫೦೦೦ ಬ್ಯಾಂಕ್ ನೋಟ್‌ಗಳು ಇದ್ದವು ಎನ್ನುವುದು ತೀರಾ ಇತ್ತೀಚಿನವರೆಗೆ ವಿತ್ತ ಪ್ರಪಂಚ ಎಷ್ಟು ಅವ್ಯವಸ್ಥೆಯ ಅಗರವಾಗಿತ್ತು ಎನ್ನುವುದಕ್ಕೆ ಧ್ಯೂತಕ .

ಸ್ಕಾಟಿಷ್ ಬ್ಯಾಂಕ್, ಇಂಗ್ಲೆಂಡ್ ಸೆಂಟ್ರಲ್ ಬ್ಯಾಂಕ್  ನಂತರದ ದಿನಗಳಲ್ಲಿ ಅಂದರೆ ೧೯೧೩ ರಲ್ಲಿ ಅಮೇರಿಕಾ ಫೆಡರಲ್ ರಿಸರ್ವ್‌ ಬ್ಯಾಂಕ್ ಸ್ಥಾಪಿಸಿದ ನಂತರ ಜಗತ್ತಿನ ಇತರ ದೇಶಗಳ ನಡುವಿನ ಮಾತುಕತೆ, ಒಪ್ಪಂದಗಳಿಂದ ಇಂದು ನಾವು ನೋಡುತ್ತಿರುವ ಬ್ಯಾಂಕ್ ನೋಟ್‌ಗಳು ಚಲಾವಣೆಗೆ ಬಂದವು. ಅಮೆರಿಕಾದ ಡಾಲರ್, ಬ್ರಿಟಿಷರ ಪೌಂಡ್ ಇತ್ತೀಚಿಗೆ ಬಂದ ಯುರೋ ಕರೆನ್ಸಿ ವಿತ್ತ ಪ್ರಪಂಚವನ್ನ ಆಳ ತೊಡಗಿದವು. ಹಾಗೆಂದ ಮಾತ್ರಕ್ಕೆ ಎಲ್ಲವೂ ಸರಿ ಹೋಗಿದೆ ಎಂದೇನೂ ಅಲ್ಲ. ಭಾರತದ ರೂಪಾಯಿ ಜಗತ್ತಿನ ಮುಂದುವರಿದ ದೇಶಗಳಲ್ಲಿ ಎಕ್ಸ್ಚೇಂಜ್ ಮಾಡಲು ಬರುವುದಿಲ್ಲ.  ಅಮೆರಿಕಾದ ಗೋಲ್ಡ್ ಬ್ಯಾಕಪ್ ಇಲ್ಲದ ಪೇಪರ್ ಕೊಟ್ಟರೆ ಭಾರತದಲ್ಲಿ ನಿಗದಿತ ಮೌಲ್ಯದ ರೂಪಾಯಿ ನೀಡಲಾಗುತ್ತದೆ. ಅಮೇರಿಕಾದಲ್ಲಿ ನಮ್ಮ ರುಪಾಯಿಗೆ ಕವಡೆಯ ಕಿಮ್ಮತ್ತೂ ಇಲ್ಲ.  ಉಗಮದ ಹಂತದಲ್ಲಿ ಒಂದು ಪೌಂಡು, ಒಂದು ಡಾಲರ್, ಒಂದು ರುಪಾಯಿಗೆ ಸಮವಾಗಿದ್ದವು. ಇಂದಿನ ಅವುಗಳ ನಡುವಿನ ಅಂತರ ವಿತ್ತ ಜಗತ್ತಿನಲ್ಲಿ ಮೌಲ್ಯಕ್ಕಿಂತ ಹೆಚ್ಚಾಗಿ ಮೌಲ್ಯ ನಿರ್ಧರಿಸುವರು ಮುಖ್ಯ ಎನ್ನುವುದನ್ನು ತೋರಿಸುತ್ತಿದೆ.

ಪಾಲಿಮರ್ ಬ್ಯಾಂಕ್ ನೋಟ್ಸ್  ಏನಿದು ?

ಹಣ ಎಂದರೆ ಅದು ಪೇಪರ್ ಮೇಲೆ ಮುದ್ರವಾಗಿರಬೇಕು ಎನ್ನುವ ಪರಿಕಲ್ಪನೆಯನ್ನ  ಬದಿಗಿಟ್ಟು ಪ್ಲಾಸ್ಟಿಕ್ ಪೇಪರ್ ಮೇಲೆ ಆಸ್ಟ್ರೇಲಿಯಾ ೧೯೮೮ ರಲ್ಲಿ ಪ್ರಥಮ ಭಾರಿಗೆ ಪಾಲಿಮರ್ ಹಣವನ್ನ ಚಾಲನೆಗೆ ತಂದಿದೆ.

ಆಸ್ಟ್ರೇಲಿಯಾ ದೇಶದಲ್ಲಿ ಹೆಚ್ಚಾದ ನಕಲಿ ಹಣದ ಹಾವಳಿ ತಡೆಯಲು ಈ ಕ್ರಮವನ್ನ ಕೈಗೊಳ್ಳಲಾಗಿದೆ. ಪೇಪರ್‌ಗೆ ಹೋಲಿಸಿದರೆ ಹೆಚ್ಚು ಬಾಳಿಕೆ ಕೂಡ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಪಾಲಿಮರ್ ಬಳಸಿ ಹಣ ಮುದ್ರಿಸುವ ದೇಶಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಪೇಪರ್ ಹಣ ನಡೆದು ಬಂದ ದಾರಿಯನ್ನ ಮುಖ್ಯವಾಗಿ ನಾಲ್ಕು ಹಂತದಲ್ಲಿ ವಿಂಗಡಿಸಬಹುದು. ಅವೆಂದರೆ.

# ಚೀನಿಯರ ಪೇಪರ್ ಹಣದ ಪರಿಕಲ್ಪನೆ, ಉಗಮ, ಅವನತಿ.

# ಯೂರೋಪಿನ ವ್ಯಾಪಾರಿಗಳ , ಯೂರೋಪಿನ ನಾವಿಕರ ನಡುವಿನ ಒಪ್ಪಂದ ಪತ್ರಗಳು .

# ಆಧುನಿಕ ಬ್ಯಾಂಕ್ ನೋಟ್ ಜನಕ ಸ್ವೀಡನ್.

# ಸೆಂಟ್ರಲ್ ಬ್ಯಾಂಕ್‌ಗಳ ಜನನ, ಸಾರ್ವಜನಿಕವಾಗಿ ಒಪ್ಪಲ್ಪಟ್ಟ ಬ್ಯಾಂಕ್ ನೋಟುಗಳ ಉಗಮ.

ಇವತ್ತು ಪರವಾಗಿಲ್ಲ ಎನ್ನುವ ಒಂದು ವ್ಯವಸ್ಥೆ ಸೃಷ್ಟಿ ಆಗುವುದಕ್ಕೆ ಮುಂಚೆ ಎಷ್ಟೆಲ್ಲಾ ತಲ್ಲಣಗಳು, ಎಷ್ಟೆಲ್ಲಾ ಹೊಯ್ದಾಟಗಳು! ನಮಗೆ ಇಂದು ಸಿಕ್ಕಿರುವ ಆರ್ಥಿಕ ಸ್ವಾತಂತ್ರದ ಹಿಂದಿನ ಶಕ್ತಿಗಳ ನೆನೆಯೋಣ ಅಂತೆಯೇ ಸಿಕ್ಕಿರುವ ಸ್ವಾತಂತ್ರ‍್ಯವನ್ನು ಸರಿಯಾಗಿ ಬಳಸೋಣ.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]