ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ
ಸಂಜೆಯ ಕೆಂಪು ಕರಗುವ ಹೊತ್ತು,
ಮರದ ಬೊಡ್ಡೆಗೆ ಆತು
ಕೂತಿದ್ದ ಪುಟ್ಟ ಹುಡುಗ.

ಸುತ್ತ ಗಿಜಿ ಗಿಜಿ ಕಾಡು ; ಮರಮರದ ನಡುವೆ
ಜೀರುಂಡೆಗಳ ಮೊರೆತ : ಮಳೆ ಬಂದು
ನಿಂತ ನೀರುಗಳಲ್ಲಿ ಕಪ್ಪೆಗಳ ವಟವಟ :
ಸಂಜೆಯಾಕಾಶಕ್ಕೆ ಗೆರೆಬರೆದ
ಗಿರಿಶಿಖರಗಳ ನೆರಳು.

ಈ ನೆರಳುಗಳ ನಡುವೆ
ನೆರಳಾಗಿ ಕೂತವನನ್ನು
‘ಯಾಕೋ ಇಲ್ಲಿ ಕೂತಿದ್ದೀಯಾ?’-
ಅಂದೆ.

ಹೆದರಿ ಮೇಲೆದ್ದ. ಕಡ್ಡಿ ಕಾಲಿನ ಮೇಲೆ
ಹರುಕು ಚಿಂದಿಯ, ಜೋಲು ಮೋರೆಯ,
ಕೆದರಿದ ತಲೆಯ ಕೆಳಗೆ ಗಾಬರಿ ಕಣ್ಣು ;
ಅಳು ಬೆರೆತ ಮಾತು :
ದನ ಬರಲಿಲ್ಲ, ಮನೆಯಲ್ಲಿ
ಒಡೇರು ಒದೀತಾರೆ…. ಅದಕ್ಕೆ ಇಲ್ಲಿ….,

ಸುತ್ತ ಕತ್ತಲ ಕಾಡು ; ಆ ಬಗ್ಗೆ
ಭಯವಿಲ್ಲ ಇವನಿಗೆ
ತಪ್ಪಿಸಿಕೊಂಡ ದನ ಬಾರದ್ದಕ್ಕೆ
ತನಗೆ ಬಿಳುವೇಟಿನ ಭಯಕ್ಕೆ
ಇಲ್ಲಿ, ಸದ್ದಿರದೆ ಕೂತಿದ್ದಾನೆ.

ದನ ಬಾರದ್ದು ಇವನ ತಪ್ಪಲ್ಲ ;
ಆದರೂ ದನ ಬಾರದೆ ಇವನು
ಹಿಂದಿರುಗುವಂತಿಲ್ಲ ; ಹಿಂದಿರುಗಿದನೊ
ಏಟು ತಪ್ಪುವುದಿಲ್ಲ. ಹಾಗಂತ
ದಟ್ಟ ಕಾಡಿನ ಮೇಲೆ ಕತ್ತಲೆ ಇಳಿದು
ಹಬ್ಬುವುದು ನಿಲ್ಲುವುದಿಲ್ಲ ; ಕಪ್ಪೆಗಳ
ವಟ ವಟ, ಚಿಕ್ಕೆಗಳ ಮಿಣ ಮಿಣ – ಯಾವುದೂ
ನಿಲ್ಲುವುದಿಲ್ಲ. ಈ ಕತ್ತಲೆಯ ಒಳಗೆಲ್ಲೊ
ಕಾದಿದ್ದಾನೆ ಒಡೆಯ,
ಕೈಯಲ್ಲಿ ಚಾವಟಿ ಹಿಡಿದು, ಹೀಗೆಯೇ
ಇಂಥ ಕಡ್ಡಿ ಕಾಲಿನ, ಜೋಲು ಮೋರೆಯ
ಹಾಲುಗಣ್ಣಿನ ಮೈಯ ಚರ್ಮ ಸುಲಿಯುತ್ತ
ಈ ದಟ್ಟಗಾಡಿನ ಕತ್ತಲೆಗೆ ಕೆಂಗಣ್ಣು ಹಾಯಿಸುತ್ತ