(ರಾತ್ರಿ. ಎಲ್ಲರೂ ಮಲಗಿದ್ದಾರೆ. ಅಡ್ಡಮಳೆಯ ಪೂರ್ವಭಾವಿ ಬಿರುಗಾಳಿ ಬೀಸುತ್ತಿದೆ. ಪಡಸಾಲೆಯಲ್ಲೊಂದು ದೀಪ ಸಣ್ಣದಾಗಿ ಉರಿಯುತ್ತಿದೆ. ಪಾರೋತಿಯ ರೂಮಿನಲ್ಲೂ ಒಂದು ದೀಪ ಉರಿಯುತ್ತಿದೆ. ಆಕೆ ಮಲಗಿದ್ದಾಳೆಂದು ಸ್ಪಷ್ಟವಾಗಿ ಕಾಣಿಸುತ್ತದೆ. ಕೊಟ್ಟಿಗೆಯಲ್ಲಿ ಕುದುರೆ ಚಡಪಡಿಸುವ ಸಪ್ಪಳ ಕೇಳಿ ಪಾರೋತಿ ಅರೆ ಎಚ್ಚರಗೊಂಡು ಹೇಳುತ್ತಾಳೆ.)

ಪಾರೋತಿ : ಏ ದುರ್ಗೀ, ಕುದರಿ ಹಗ್ಗ ಹರಕೊಂಡೈತಿ, ಕಟ್ಟಿ ಹಾಕಬಾರದೇನೇ ಅದನ್ನ? ಇಷ್ಟೊತ್ತಿನಾಗ ಇವ ಎಲ್ಲಿ ಹೋದ್ನೊ?

(ಎನ್ನುತ್ತ ಮಗ್ಗಲು ಬದಲಿಸಿ ಮಲಗುತ್ತಾಳೆ. ಪಡಸಾಲೆಯಲ್ಲಿ ಮಲಗಿದ್ದ ದುರ್ಗಿ ಎದ್ದು, ದೀಪ ದೊಡ್ಡದು ಮಾಡಿ, ಬಾಗಿಲ ಕಡೆ ಹೊರಡುತ್ತಾಳೆ. ಬಾಗಿಲು ಚಿಲಕ ಹಾಕಿಲ್ಲದ್ದನ್ನು ಗಮನಿಸುವಳು.)

ದುರ್ಗಿ : ಆಯ್ ಶಿವನ! ಬಾಗಲ ಚಿಲಕಾ ಯಾರೂ ಹಾಕೇ ಇಲ್ಲಲ್ಲ. ಎಲ್ಲಾರಿಗು ಅದೆಂಥಾ ಮರವೋ ಅಂತೀನಿ! ಅಡಮಳಿ ಸುರುವಾತು.

(ಬಾಗಿಲು ತೆರೆದು ಹೊರಗೆ ನೋಡುವಳು.)

ಕುದುರಿ ಒದ್ದಾಡಕ ಹತ್ತೇತಿ, ಹೊರಗ ಹೋದೇನಂದರ ಈ ಮಳಿ ಬ್ಯಾರಿ. ಎಳಿ ಮಾವಿನ ಗಿಡ ಇದs ಸಲ ಹೂ ಬಿಟ್ಟಿತ್ತು. ಹಾಟ್ಯಾನ ಮಳಿ ಈಗs ಬರಬೇಕ? ಮಳಿ, ಗಾಳಿ ಅಬ್ಬರ ನೋಡಿದರ ಒಂದ ಹೂ ಉಳಿಯೋ ಹಾಂಗ ಕಾಣಸೂದಿಲ್ಲ. ಮೈತುಂಬ ಹೂ ಬಿಟ್ಟಕೊಂಡ ಗುಂಡಗ ಎಂಥಾ ಚಂದ ಕಾಣತಿತ್ತು! ದೇವರಾಟ!

(ಬಾಗಿಲ ಚಿಲಕ ಹಾಕುವಳು. ಮತ್ತೆ ಹಾಸಿಗೆಗೆ ಹೋಗಿ ದೀಪ ಸಣ್ಣದು ಮಾಡಿ “ಎಪ್ಪಾ ಶಿವನಿಂಗ ಸ್ವಾಮೀ” ಎನ್ನುತ್ತ ಮಲಗುವಳು. ತುಸು ಸಮಯಾದ ಬಳಿಕ ಚಂಪಿ ತನ್ನ ರೂಮಿನಿಂದ ಹೊರಡುವಳು. ಬಾಗಿಲ ಬಳಿ ಬರುತ್ತಲೂ ಹೊರಗೆಯಿಂದ ಯಾರೋ ಬಾಗಿಲು ತೆರೆಯಲು ಪ್ರಯತ್ನಿಸುತ್ತಿರುವುದು ಗೊತ್ತಾಗುತ್ತದೆ. ತುಸು ಸಮಯ ಯೋಚಿಸಿ ಬಾಗಿಲು ತೆರೆಯುವಳು. ಹೊರಗಡೆಯಿಂದ ಕೂದಲು ಚದುರಿದ, ಒದ್ದೆ ಮೈಯ ಶೀಲಿ ಒಳಕ್ಕೆ ಬಂದು ನಿಂತದ್ದು ಮಂದಪ್ರಕಾಶದಲ್ಲಿ ಕಾಣಿಸುತ್ತದೆ. ಶೀಲಿ ಗೆದ್ದವಳಂತೆ ವ್ಯಂಗ್ಯವಾಗಿ ಚಂಪಿಯ ಕಡೆ ನೋಡುತ್ತ ನಿಲ್ಲುತ್ತಾಳೆ. ಚಂಪಿ ವ್ಯಗ್ರಳಾಗಿ ಶೀಲಿಯ ಕೂದಲಿಗೆ ಕೈ ಹಾಕಿ ಎಳೆಯುತ್ತಾಳೆ.)

ಚಂಪಿ : ಖರೆ ಹೇಳ ಎಲ್ಲಿಗಿ ಹೋಗಿದ್ದಿ?

ಶೀಲಕ್ಕ : ಕುದರೀ ಕೊಟ್ಟಿಗ್ಗಿ.

(ಚಂಪಿ ಅವಳನ್ನು ಸೀಳುವಂತೆ ಯುದ್ಧಕ್ಕೆ ಅಣಿಯಾಗುವಷ್ಟರಲ್ಲಿ ಗುಡುಗು, ಸಿಡಿಲು ಹೊಡೆದ ಸದ್ದು ಕೇಳಿಸುತ್ತದೆ. ಅದೇ ಕ್ಷಣ ಪಾರೋತಿ “ಎವ್ವಾ ಎವ್ವಾ” ಎಂದು ಕಿರುಚುತ್ತಾಳೆ. ತಕ್ಷಣ ಇಬ್ಬರೂ ಜಗಳ ಬಿಟ್ಟು ಅಲ್ಲಲ್ಲೆ ಅಡಗಿ ಕೂರುತ್ತಾರೆ. ಕೊಟ್ಟಿಗೆಯಲ್ಲಿ ಹುಲಿಗೊಂಡ ಕುದುರೆ ಕಟೆಯುವ, ಅದು ಒದ್ದಾಡುವ ಸಪ್ಪಳ ಕೇಳಿಸುತ್ತದೆ. ಚಂಪಿ ಶೀಲಿಯರಿಬ್ಬರೂ ಪರಸ್ಪರ ಖೆಕ್ಕರಿಸಿ ನೋಡುತ್ತಿದ್ದಾಗ ಪಾರೋತಿ ಮತ್ತೆ ಒದರುತ್ತಾಳೆ.)

ಪಾರೋತಿ : ಎವ್ವಾ! ಎವ್ವಾ!

ಗೌಡ್ತಿ : (ಎಚ್ಚತ್ತು) ಪಾರೋತಿ, ಪಾರೋತಿ…

(ಗೌಡ್ತಿ ಎದ್ದು ಪಾರೋತಿಯ ರೂಮಿಗೆ ಬರುತ್ತಾಳೆ.)

ಪಾರೋತಿ, ಏ ಪಾರೋತಿ…

(ಪಾರೋತಿ ಎಚ್ಚತ್ತು ಕೂರುತ್ತಾಳೆ.)

ಗೌಡ್ತಿ : ಕನಸ ಕಂಡೇನ ಮಗಳ? ಹೆದರಿದಿ?

ಪಾರೋತಿ : ಕನಸಿನಾದ ಕುದರಿ ಬಂದಿತ್ತs ಎಪ್ಪಾ! ಉಕ್ಕಿನಂಥ ಕರೀ ಮೈ. ಚೂರಿಯಂಥಾ ಕಣ್ಣಾ-ಕೆಂಡದಂಥಾ ಮೂಗಿನ ಹೊಳ್ಳಿ ಫಳಾ ಫಳಾ ಹೊಳೀತಿತ್ತು! ಬೆಂಕಿ ಹತ್ತಿಧಾಂಗ ಕತ್ತಿನ ತುಂಬ ಕೂದಲಿದ್ದುವು! ಕುಣಕೋತ ಕುಣಕೋತ ನಮ್ ಮನಿ ಹೊಕ್ಕಾಂಗಾತು! ಅಡಕಲ ಗಡಿಗಿ ಬಿದ್ದ, ಸಾಮಾನೆಲ್ಲ ಚೆಲ್ಲಾಪಿಲ್ಲಿ ಆಗಿ ನಮ್ಮ ಮನೀ ನಡುಗಂಬ ಕುಸಿಧಾಂಗಾತು. ಅಯ್ ಶಿವನs, ಕುದುರೇ ಕುದುರೇ ಅನ್ನೊದರಾಗ ಹೈ ಅಂತ ಮುಂಗಾಲೆತ್ತಿ ಮ್ಯಾಲ ಆಕಾಸಕ, ಕೆಳಗ ನೆಲಕ್ಕ ಏಕಾಏಕ ಆಗಿ ನನ್ನ ಎದಿಮ್ಯಾಲ ಹಾರಿಧಾಂಗಾಯ್ತು!

ಗೌಡ್ತಿ : ಛೀ ಹುಚ್ಚೀ, ಏನೇನೋ ಕನಸ ಕಾಣ್ತಿ! ಮಲಗು ಮಲಗು.

ಪಾರೋತಿ : ಎವ್ವಾ ನೀ ಹೋಗಬ್ಯಾಡಬೇ, ನನಗ ಅಂಜಿಕಿ ಬರತೈತಿ.

ಗೌಡ್ತಿ : ಹುಲಿಗೊಂಡ ಎಲ್ಲಿಗಿ ಹೋಗ್ಯಾನ?

ಪಾರೋತಿ : ಅವ ಎಲ್ಲಿ ಹೋಗತಾನೋ, ಯಾವಾಗ ಹೋಗತಾನೋ! ಯಾವಾಗ ಬರತಾನೋ-ನನಗ ಒಂದೂ ಹೇಳಾಣಿಲ್ಲ. ನಾ ನೋಡಿದಾಗೆಲ್ಲಾ ಹಾಸಿಗಿ ಖಾಲೀನs ಇರತೈತಿ.

ಗೌಡ್ತೀ : ಇಂಥಾ ವ್ಯಾಳ್ಯಾದಾಗ ಎಲ್ಲಿ ಹೋಗಿದ್ದಾನಾದೀತು! ಕುದರೀ ಕಟ್ಯಾಕ್ಹತ್ಯಾನಂತ ಕಾಣತೈತಿ, ನಾಳಿ ಕೇಳೋಣು, ಮಲಕ್ಕೊ.

(ಗೌಡ್ತಿ ಯೋಚನಾಮಗ್ನಳಾಗಿ ಹೊರಡುವಳು.)