(ದುರ್ಗಿ ಮತ್ತು ಕೊಮಾಲಿ ಕಾರಿಡಾರ್ನಲ್ಲಿ ನಿಂತು ಹೊರಗಡೆ ನೋಡುತ್ತಿದ್ದಾರೆ. ಆಗಾಗ ರಭಸದಿಂದ ಓಡಾಡುವ ಕುದುರೆಯ ಸಪ್ಪಳ. ಹುಡುಗನೊಬ್ಬ ಅದನ್ನು ಪಳಗಿಸುತ್ತಿರುವ ದನಿ. ಕುದುರೆ ಆಗಾಗ ಗುದಮರಿಗೆ ಹಾಕುತ್ತಿದೆ. ಇಬ್ಬರ ಮುಖದಲ್ಲಿ ಆತಂಕ, ಭಯ. ಕುದುರೆ ಹೇಷಾರವಗೈದು ಚಂಗನೇ ಎತ್ತರಕ್ಕೆ ನೆಗೆದ ಸಪ್ಪಳ. ಇಬ್ಬರೂ ಹೆಂಗಸರು, ಅದು ತಮ್ಮ ಮೇಲೇ ನೆಗೆದಂತೆ ’ಅಯ್ ಅಯ್ ಶಿವನs!’ ಎನ್ನುತ್ತ ಕೆಳಕ್ಕೆ ಕೂರುತ್ತಾರೆ. ಕುದುರೆ ದೂರಕ್ಕೆ ಓಡುತ್ತದೆ. ಇಬ್ಬರೂ ಪರಸ್ಪರ ಮುಖ ನೋಡಿಕೊಂಡು, ಮೆಲ್ಲನೆ ಇಳಿದು ಪಡಸಾಲೆಗೆ ಬರುತ್ತಾರೆ. ಕೊಮಾಲಿ ಕಾಳು ಹಸಮಾಡ ತೊಡಗುತ್ತಾಳೆ.)
ಕೊಮಾಲಿ : ಏನಂಬೊ ಕುದರಿ! ಕೆಂಪಗೆ ಗುಲಗಂಜೀ ಕಣ್ಣ!
ನೋಡಿದರ ಕಾದ ಅಲಗ ಎದ್ಯಾಗ ನಟ್ಹಾಂಗ ಆಗತೈತಿ! ನನ್ನ ತೊಡೀ ನಡಕ ಇನ್ನs ಹೋಗಿಲ್ಲ!
ದುರ್ಗಿ : ನಿನ್ನ ರಾತ್ರ್ಯಗಿಂದ ನೀರ ಮೇವ ಮುಟ್ಟೇ ಇಲ್ಲ, ಹಾಂಗs ಒದ್ದಾಡಕ ಹತ್ತಿತ್ತು. ತೊಡೀಮ್ಯಾಲ ಕೈಯಾಡಸಾಕ ಹೋದರ, ಹಿಂಗಾಲೆತ್ತಿ ಎದಿಗೇ ಒದೀತಂತ ಹುಲಿಗೊಂಡಗ!
ಕೊಮಾಲಿ : ಏನs ಹೇಳ ದುರಗವ್ವಾ, ಅವನ ಕುದರೀಹಾಂಗ ಅದಿಲ್ಲಾ, ಅದರ ಸವಾರನ್ಹಾರ ಅವ ಇಲ್ಲ.
ದುರ್ಗಿ : ಕಾಡಕುದರೀ ಗೆಣಿತಾನಂದರ ಹಾಂಗನs ತಂಗಿ. ಅದೇನೋ ಅಂತಾರಲ್ಲಾ. ದಂಟ ಆಡಿದ ಹೆಣ್ಣ ಚಂದ, ಹತ್ತಿ ಓಡಿಸಿದ ಕುದರಿ ಚಂದ, -ಅಂತ. ಇದಂತೂ ಒಂದs ದಿನ ಹತ್ತೋದ ಬಿಡಲಿ, ಮರದಿನ ಹುಲಿಗೊಂಡನ್ನs ಮರಿತೈತಿ. ಮರೀತೈತಲ್ಲಾ ಅಂತ ಹತ್ತಿದರ ಅವನ ಜೋಡಿ ಕುಸ್ತೀ ಹಿಡಧಾಂಗ ಮಾಡತೈತಿ.
ಕೊಮಾಲಿ : ಏನ ಕುದುರೇ ನಮ್ಮವ್ವಾ! ಹುಲಿಗೊಂಡ ಬಕ್ಕಬರಲೆ ಅದರ ಬೆನ್ನಿಗಿ ಆತಕೊಂಡ, ಜುಟ್ಟಹಿಡಿದ ಜಗ್ಗಿದರ, ಮುಂಗಾಲ ಹಿಂಗ ಅಮಾತ ಎತ್ತಿ ಹೈ ಅಂತ ನೆಗೀತು, ನೆಗೀತು, -ಆವಯ್ಯಾ ಅನ್ನೋದರಾಗs ಕೆಳಗ ನೆಲಕ್ಕ, ಮ್ಯಾಲ ಆಕಾಸಕ ಏಕದಂ ಏಕಾಏಕ! ನನಗ ನೋಡs ತಾಯೀ, ಎಂಥಾ ಅಂಜಬುರಕಿ ಅಂತ ಅನ್ನವೊಲ್ಯಾಕ, ಮೈತುಂಬ ಗಮ್ಮಂತ ಬೆವರ ಬಂತ!
ದುರ್ಗಿ : (ನಗುತ್ತ) ಕುದರಿಗಿ ಇಷ್ಟ ಅಂಜುವಾಕಿ, ಕುಸ್ತಿ ಹುಡಗೋರ್ನ ಹೆಂಗಸಂಬಾಳಸ್ತೀಯೆ?
ಕೊಮಾಲಿ : (ನಾಚುತ್ತ) ಬಿಡs ದುರಗವ್ವಾ, ಏನ ಚಾಷ್ಟೀ ಮಾಡ್ತಿ.
ದುರ್ಗಿ : ಗಂಡನ್ನ ಬಿಟ್ಟೆಂತ, ಹೌಂದ?
ಕೊಮಾಲಿ : ಹೌದು.
ದುರ್ಗಿ : ಪಾಪ, ಆಕಳಂಥಾ ಗಂಡ.
ಕೊಮಾಲಿ : ನನಗ ಆಕಳ ಬ್ಯಾಡವೊ,-ಹೋರಿ ಬೇಕು ಹೋರಿ!
(ಇಬ್ಬರೂ ನಗುವರು)
ದುರ್ಗಿ : ಯಾಕ? ಹೋರೀನ ಕಂಡ ಅಂಜಿಕಿ ಬರಾಣಿಲ್ಲಾ
ಕೊಮಾಲಿ : ಒಂದ ಸರ್ತೆ ಹಿಡದ ಹೂಡಿದರೆ ಸಾಕು, ತಾನs ಹಾದಿಗಿ ಬಂದ ಹೇಳಿಧಾಂಗ ಕೇಳತೈತಿ! ಕಾಡಕುದರಿ ಹಾಂಗಲ್ಲ ನೋಡು, ದಿನಾ ಪಳಗಿಸಬೇಕು.
(ನಗುತ್ತ ಕಣ್ಣು ಹೊಡೆಯುವಳು)
ದುರ್ಗಿ : ಹಾಳಹರಟಿ, ಕೈಯಾಗ ಪರಟಿ, ತಗೊ ತಗೊ. ಗೌಡ್ತಿ ಬರೋ ಯಾಳೆ ಆಯ್ತು. ತಿರಗಾ ಮರಗಾ ಸೊಲಿಗಿ ಕಾಳ ಅದಾವಾ ಹಸನಮಾಡಾಕ ನಾಕ ನಾಕ ತಾಸ ಬೇಕೇನ್ರೇ-ಅಂತ ಉಗುಳು ಉಪ್ಪ ಹಾಕಿ ಹುರದಾಳು.
ಕೊಮಾಲಿ : ಅನ್ನಾಕ ಇನ್ನೆಷ್ಟ ಕಾಳ ಅದಾವ ತಗೊ, ತಗೊ. ಅಲ್ಲ ದುರಗವ್ವ, ನನಗೆ ಈ ಹುದಲs ತಿಳೀವೊಲ್ದು-
ದುರ್ಗಿ : ಮತ್ತೇನವಾ ತಿಳೀವೊಲ್ದು?
ಕೊಮಾಲಿ : ಹುಲಿಗೊಂಡ ಹೊರಗs, ಕುದರೀ ಬೆನ್ನಮ್ಯಾಲs ಅದಾರು, ಒಳಗ ಚಂಪಕ್ಕನ ಮದಿವೀ ಗಟ್ಟಿ ಮಾಡಿದರಂದರ…
ದುರ್ಗಿ : ಅವನ್ನ ಬಿಟ್ಟs ಗಟ್ಟಿ ಮಾಡಿದಳು.
ಕೊಮಾಲಿ : ಮನೀ ಅಳಿಯಾನ್ನ ಬಿಟ್ಟ?
ದುರ್ಗಿ : ಎಷ್ಟಂತ ಹಾದಿ ನೋಡ್ಯಾರು? ಹರೀವತ್ತ ಕುದರೀ ಹತ್ತಿದಾವ, ಮದ್ಯಾನ್ನಾದರೂ ಹಾದಿಗಿ ಬರವೊಲ್ದು. ಕುದರೀ ತಲೀ ಕೆಟ್ಟಿತಂದರ ಹಿಂಗs: ಹತ್ತಿದಾವ ಜೀವಂತ ಕೆಳಗ ಇಳದಾನಂತ ಹೇಳಾಕs ಅಗಾಣಿಲ್ಲ.
ಕೊಮಾಲಿ : ಬೀಗರ ಬಂದಾಗs ಹಿಂಗ ಆಗಬೇಕ?
ದುರ್ಗಿ : ಗೌಡ್ತಿ ಇಂಥಾದ್ದಕ್ಕೆಲ್ಲಾ ಸೊಪ್ಪ ಹಾಕಿದಾಕೇ ಅಲ್ಲ.
ಕೊಮಾಲಿ : ಗೌಡ್ತಿ ಬ್ಯಾಡವಾ, ಬಂದ ಬೀಗರೇನಂದಾರು? ಮನ್ಯಾಗ ಸಣ್ಣಮಗಳ ಬಷ್ಟಗಿ ಕಾರ್ಯೇ ನಡದೈತಿ, -ಮನಿ ಅಳಿಯಾ, ಊರಿಗಿ ಹಿರಿಯಾ, ಹುಲಿಗೊಂಡ ಗೌಡರs ಇಲ್ಲಂದರ? ಏನಾರ ಜಗಳಾಗೇತೇನ?
ದುರ್ಗಿ : ಜಗಳಿಲ್ಲ, ಗಿಗಳಿಲ್ಲ, ಅವನ ಸೊಭಾವನ ಹಾಂಗ.
ಕೊಮಾಲಿ : ತಗಿ ತಗಿ, ಬೆಂಕಿಲ್ಲದs ಹೊಗಿ ಹೆಂಗ ಕಂಡೀತು?
ದುರ್ಗಿ : ಅದೇನ ಹೊಗಿ ಕಂಡಿಯೋ ನಿನಗs ಗೊತ್ತವಾ! ನನ್ನ ಕಣ್ಣ ಮುಂದ ಆಗ್ಯಾವ; ಹೊಗಿ ಕಾಣಸೂದs ಇಲ್ಲ. ಕಾಡಕುದರೀ ತಲೀ ಯಾವಾಗ ಕೆಡತೈತೀ ಅಂತ ಹೆಂಗ ಹೇಳೂದಾ?
ಕೊಮಾಲಿ : ಸುಮ್ಮನs ಜಾರಿಕೊಬ್ಯಾಡ. ಕುದರೀ ತಲೀ ಕೆಟ್ಟರ ಕೊಟ್ಟಿಗ್ಯಾಗ ಕಟ್ಟಿ ಹಾಕಬೇಕವಾ. ಬೀಗರ ಬಂದಾಗs ಪಳಗಿಸಬೇಕ?
ದುರ್ಗಿ : ಕಾಳ ಹಸಮಾಡಾಕ ಬಂದೀದಿ, ಹಸಮಾಡಿ ಹೋಗs. ಊರ ಮುಂದೆಲ್ಲಾ ತನ್ನ ಮನಿತಾನಾನs ಆಡಿಕೊಳ್ತಾರಂತ ಗೌಡ್ತಿಗಿ ಮೊದಲs ಸಂಶೇ ಐತಿ. ಅದಕ್ಕ ಬಷ್ಟಗಿ ಕಾರ್ಯೇಕ ಯಾರ್ನೂ ಕರೀಲಿಲ್ಲ, ನೋಡಿದಿಲ್ಲ? ಈ ಊರ ಮಂದೀನೂ ಹಾಂಗs; ಕಂಡದ್ದೂ ಆಡತಾರ, ಕಾಣದ್ದೂ ಆಡತಾರ!
ಕೊಮಾಲಿ : ಕಂಡಿರತಾರ, ಆಡತಾರ.
ದುರ್ಗಿ : ಏನ ಕಂಡಿರತಾರಗs?
ಕೊಮಾಲಿ : ಹೋದವರ್ಷ ಹಿರೀಮಗಳು ಪಾರೋತೀ ಮದಿವಿ ಆತು, ಬಂಗಾರದಂಥಾ ಅಳಿಯಾ ಸಿಕ್ಕ, ಬರೋಬರಿ. ಈ ವರ್ಷ ಎರಡನೇದಾಕಿ ಶೀಲಕ್ಕನ ಮದಿವೀ ಬಿಟ್ಟ, ಕಡೀ ಮಗಳು ಚಂಪಕ್ಕನ ಮದಿವಿಗೇ ಅವಸರ ಮಾಡಿದರ ಮಂದಿ ಯಾರ ಆಡಿಕೊಳ್ಳಾಣಿಲ್ಲ? ಹೇಳಲ್ಲ,-
ದುರ್ಗಿ : ಹಿರೀಮಗಳ ಹೆಸರಿಗೆ ಆಸ್ತಿ ಇತ್ತು, ಮದಿವ್ಯಾತು. ಕಡೀಮಗಳು ಚಂಪಕ್ಕ ಚಂದ ಅದಾಳ, ಆಗತೈತಿ, ಶೀಲಕ್ಕಗ ಆಸ್ತೀನೂ ಇಲ್ಲ, ಚೆಲಿವಿಕೀನೂ ಇಲ್ಲ. ಬಾ ಅಂದರ ವರ ಹೆಂಗ ಬಂದಾವು? ಇದರಾಗ ಆಡಿಕೊಳ್ಳುವಂಥಾದ್ದ ಏನೈತಿ?
ಕೊಮಾಲಿ : ದೊಡ್ಡವರ ಮಕ್ಕಳಿಗಿ ವರಾ ಏನ ಕಮ್ಮಿ ಬಿಡ!
ದುರ್ಗಿ : ಶೀಲಕ್ಕನ ನಶೀಬ ಆಕೀ ಹಲ್ಲಿನ್ಹಾಂಗ ಭಾಳ ಖೊಟ್ಟಿ. ಬಂದವರಾ ಆಕೀ ಹಲ್ಲ ನೋಡಿ, ಈಕಿ ಬ್ಯಾಡ, ಕಡೀ ಮಗಳ್ನ ಕೊಡತೀರೇನು?- ಅಂತ ಹಟ ಹಿಡೀತಾರ. ಗೌಡ್ತಿಗೆ ಏನ ಮಾಡಂದಿ?
ಕೊಮಾಲಿ : ಏನೋವಾ! ಅವಸರ ಮಾಡೋದ ನೋಡಿದರ ಹಾದೀಲೆ ಹೋಗವನ್ನ ಕರದು ಚಂಪಕ್ಕನ ಕತ್ತಿಗೆ ಕಟ್ಟೂ ಹಾಂಗ ಕಾಣತೈತಿ.
ದುರ್ಗಿ : ನೀ ಆಡೋ ಮಾತ ಗೌಡ್ತಿ ಕೇಳಿದರ-ನಿನ್ನ ಕೆಲಸಾನೂ ಸಾಕು, ನೀ ಆಡಿಕೊಳ್ಳೋದೂ ಸಾಕಂತ ಮನೀಗಿ ಕಳಸ್ತಾಳಷ್ಟ.
ಕೊಮಾಲಿ : ಆವಯ್ಯಾ! ಆಡಬಾರದ್ದ ನಾ ಏನ ಆಡಿದೆ?
ದುರ್ಗಿ : ದೊಡ್ಡವರ ಸುದ್ದಿ ನಮಗ್ಯಾಕ ತಂಗಿ?
ಕೊಮಾಲಿ : ಅಯ್ ಬಿಡವೋ, ಸಣ್ಣವರು, ನಮ್ಮ ಮುಂದ ಯಾಕ ಹೇಳಿ ನೀನು?
ದುರ್ಗಿ : ಹೇಳಾಕ ನನಗೇನ ಗೊತ್ತೈತಿಗ? ನಾನು ನಿನ್ಹಾಂಗs ಒಂದ ಆಳು.
ಕೊಮಾಲಿ : ನೀ ಒಳ್ಳೆ ಜಾರಿಕೊಳ್ಳುವಾಕಿ ಬಿಡ. ಸಣ್ಣಂದಿರತ ಇದs ಮನ್ಯಾಗ ಬೆಳೆದ ಮುದಿಕಿ ಆದಿ; ನಿನಗ ತಿಳೀದs ಇರತೈತಿ? ಹೇಳಾಕ ಒಲ್ಲೆಂದರ ಆಗಾಣಿಲ್ಲ ಅನ್ನು.
ದುರ್ಗ : ನಾ ಒಲ್ಲೆಂದರೂ ಒಂದs, ಆಗಲೆಂದರೂ ಒಂದs; ಆಗೋದನ್ನ ಯಾರಾದರೂ ತಪ್ಪಸಾಕ ಆಗತೈತಿ? ಅವರವರ ಹಣ್ಯಾಗ ಬರದದ್ದ ಆಗತೈತಿ.
ಕೊಮಾಲಿ : ಅದs ಅಂತೀನ್ನಾನೂ! ಹುಲಿಗೊಂಡ ಮನೀ ಅಳಿಯಾ ಆಗ್ಯಾರ, ಗೌಡರಾಗಿ ಊರಿಗಾರಿಕಿ ಮಾಡತಾರ,-ಹೌಸೀಲೆ ನಗಾಕ ಬಾಯಿ ತೆರದವರು ಸಾಯೋತನಕ ಮುಚ್ಚಬಾರದು. ನಕ್ಕಾರೇನು ಅಂತ ಪಾರೋತೆತ್ವನ ಮದಿವ್ಯಾದಾಗಿಂದ ನೋಡತೇನು, ಅವರೇನೂ ಚಪ್ಪಾಳಿ ಹೊಡದ ಖೊಕ್ಕಂತ ನಗಲಿಲ್ಲ; ಒಬ್ಬರ ಜೋಡೀ ಮೋಜಿನಿಂದ ಮಾತಾಡಲಿಲ್ಲ.
(ಅಷ್ಟರಲ್ಲಿ ಚಂಪಿ ವಿಷಣ್ಣವದನಳಾಗಿ ತನ್ನ ರೂಮಿನಿಂದ ಹೊರಗೆ ಬಂದು ಮಂಚದ ಮೇಲೆ ಕೂರುವಳು. ಅವಳನ್ನು ನೋಡಿ ಕೊಮಾಲಿ ಉತ್ಸಾಹದಿಂದ ಕೈ ಒರಸಿಕೊಂಡು ಚಂಪಿಯ ಬಳಿಗೆ ಹೋಗುತ್ತ)
ಆಯ್ ಚಂಪಕ್ಕಾ! ಮದಿವಿ ಗಟ್ಟಿ ಆಯ್ತಂತ!
(ಎಂದು ಆಸೆಬುರುಕತನದಿಂದ ಚಂಪಿಯುಟ್ಟ ಸೀರೆ ಹಿಡಿದು)
ಗಂಡನ ಮನಿ ಸೀರೇನ್ರಿ? ಏನ ಚಂದ ಐತಿದು!
(ಎನ್ನುತ್ತ ಮುಟ್ಟಿ ಮುಟ್ಟಿ ನೋಡುವಳು. ಚಂಪಿ ರೇಗಿ ಚಪ್ಪನೆ ಅವಳ ಕೈಗೆ ಹೊಡೆದು ಕಣ್ಣು ಕಿಸಿಯುವಳು. ಕೊಮಾಲಿಗೆ ಹೊಯ್ಯಾಗುತ್ತದೆ. ಅಷ್ಟರಲ್ಲಿ ಹುಲಿಗೊಂಡ ಹೊರಗಿಂದ ಬಂದು ಅಡಿಗೆಮನೆ ಕಡೆ ಹೋಗುತ್ತ ಹೇಳುವನು.)
ಹುಲಿಗೊಂಡ : ದುರ್ಗೀ, ಊಟಕ್ಕೆ ಕೊಡಬಾರಬೇ.
(ತಕ್ಷಣ ಚಂಪಿ ಎದ್ದು ಸೇಡಿಗೆಂಬಂತೆ ಕುಲು ಕುಲು ನಗುತ್ತ ಸೀರೆ ಸೆರತು ತೂಗಿ ವಯ್ಯಾರ ಮಾಡುತ್ತ)
ಚಂಪಿ : ಹೌಂದs ಕೊಮಾಲಿ, ನನ್ನ ಗಂಡನ ಮನಿಯವರು ತಂದಾರ. ಸಾವಿರ ರೂಪಾಯಿ ಕೊಟ್ಟಾರಂತ. ಏನ ಚಂದ ಐತೆಲ್ಲಾ? ಎಷ್ಟ ಹಗರ ಐತೆಂವಿ? ಉಟ್ಟ ನಡದಾಡಿದರ ಆಕಾಶದಾಗ ಹಾರ್ಯಾಡಿಧಾಂಗ ಅನಸತೈತಿ! ಇದರ ಸೆರಗ ನೋಡs! ಸೆರಗಿನಾಗಿನ ಗಿಣೀ ಹಿಂಡ ನೋಡs!
(ಅಡಿಗೆ ಮನೆ ಬಾಗಿಲಲ್ಲಿ ಇವಳ ಸಂಭ್ರಮ ನೋಡುತ್ತ ನಿಂತಿದ್ದ ಹುಲಿಗೊಂಡನಿಗೆ ಇದನ್ನು ಸಹಿಸಲಾಗುವುದಿಲ್ಲ. ರಭಸದಿಂದ ತಿರುಗಿ ಹೊರಗೇ ಹೋಗುತ್ತಾನೆ. ಚಂಪಿ ನಿರಾಸೆಯಿಂದ ಮಂಚದ ಮೇಲೆ ಕುಸಿದು, ಮುಖಕ್ಕೆ ಸೆರಗು ಹಾಕಿ ಅಳತೊಡಗುವಳು. ಕೊಮಾಲಿಗೆ ಏನೂ ತಿಳಿಯದೆ, ಪೇಚಿನಲ್ಲಿದ್ದಾಳೆ. ಖೇದಗೊಂಡ ದುರ್ಗಿ ಮೆಲ್ಲನೆ ಚಂಪಿಯತ್ತ ಬರುತ್ತಾರೆ. ಚಂಪಿ ಥಟ್ಟನೆ ಎದ್ದು ತನ್ನ ರೂಮಿಗೆ ಹೋಗಿ ಬಾಗಿಲಿಕ್ಕಿಕೊಳ್ಳುತ್ತಾಳೆ. ದುರ್ಗಿ ಹೋಗಿ ಬಾಗಿಲು ಬಡಿಯುತ್ತಾಳೆ.)
ದುರ್ಗಿ : ಚಂಪಕ್ಕಾ, ಚಂಪಕ್ಕಾ, ಬಾಗಿಲು ತಗಿಯವಾ.
(ಕೊಮಾಲಿ ತನ್ನನ್ನೇ ಪ್ರಶ್ನಾರ್ಥಕವಾಗಿ ನೋಡುತ್ತಿದ್ದುದನ್ನು ಗಮನಿಸುತ್ತಾಳೆ. ತಂತಾನೇ ಮಾತಾಡಿಕೊಂಡಂತೆ ಹೇಳುತ್ತಾಳೆ.)
ಏನ ಹೇಳಲೆ ತಂಗಿ! ಈ ಮನ್ಯಾಗ ಇದ್ದವರ ಎದ್ಯಾಗ ಒಂದೊಂದ ಹುಣ್ಣ ಅದಾವ. ಒಂದ ಕೈಲೆ ತಮ್ಮ ಹುಣ್ಣ ಹಿಡಕೊಳ್ತಾರ, ಇನ್ನೊಂದ ಕೈಯಾಗ ಚೂರಿ ಹಿಡಕೊಂಡ ಹಗಲಿ ರಾತ್ರಿ ಕಾಯುತ್ತಾರ. ಯಾರಾದರೂ ಎದರ ಬಂದ ಸಾಕು, ತಾವs ಮುಂದಾಗಿ ಅವರ ಹುಣ್ಣಿನಾಗ ಚೂರಿ ಆಡಸಾಕ ಹೋಗತಾರ. ಇದು ಮನೀ ಅಲ್ಲs ಮಗಳs, ಇರದಾಡೋ ಕಣ!
(ಹುಲಿಗೊಂಡ ಕುದುರೆ ಕಟೆಯುವ ಸಪ್ಪಳ ಕೇಳಿಸುತ್ತದೆ.)
ಕೊಮಾಲಿ : ಹಾ, ನನಗ ಆಗ, ಸಂಶೆ ಬಂತs ಎವ್ವಾ, ಇಕ್ಕs ಈಗ ಚಂಪಕ್ಕನ ಮನಿತನ ಗಟ್ಟಿ ಆಗೇತಿ, ಎಷ್ಟು ಖುಷಿ ಮೋಜಿನಿಂದ ಇರಬೇಕು; ಬೀಗರುಂಡ ಮುಸರಿ ಇನ್ನs ತೊಳದಿಲ್ಲಾ, ಅತ್ತ ಅತ್ತ ಊರದ ಬೆಂಕೀ ಕೆಂಡ ಆಗ್ಯಾಳ! ಬಷ್ಟಗೀ ಕಾರ್ಯೇಕ ಬೀಗರ ಬಂದಾರ, ಮನೀ ಅಳಿಯಾ ಕುದರೀ ಹತ್ತಿ ಓಡಿಸ್ಯಾಡಕ ಹತ್ಯಾನ! ಇಕಾ, ನಿನ್ನ ಕಣ್ಣು ತೇವಾದುವು. ನನ್ನ ಮುಂದ ಹೇಳಬಾರದ್ದ ಅದೇನೈತಿ?
ದುರ್ಗಿ : ಚಂಪಕ್ಕನ್ನ ಕಂಡರ ಜೀವ ಮರಗತೈತಿ. ಏನಂದರೂ ಈ ಮನ್ಯಾಗ ಕರುಳ ಇದ್ದಾಕೀ ಅಂದರ ಆಕಿ ಒಬ್ಬಾಕೀನs. ಅಕಿದೊಂದು ಮದಿವಿ ಅದರ ತಣ್ಣಗ ಕಣ್ಣಮುಚ್ಚಬೇಕಂತೀನಿ. ದೇವರು ಯಾವ ದಡಕ್ಕ ಹಚ್ಚತಾನೊ!
ಕೊಮಾಲಿ : ಎಲ್ಲಾ ಚೆಲೋ ಆಗತೈತಿ ತಗೊ.
ದುರ್ಗಿ : ನಿನ್ನ ಮಾತ ಖರೇ ಬರಲೇ ತಾಯಿ, ನಿನ್ನ ಬಾಯಿಗಿ ಬೆಲ್ಲಾ ಇಡತೇನು.
ಕೊಮಾಲಿ : ಇಟ್ಟೀಯಂತ, ಇದರ ಹಿಂದಾ ಮುಂದಾ ಅಷ್ಟ ಹೇಳಲ್ಲಾ. ಇನ್ನs ಗೌಡ್ತಿ ಬೀಗರ್ನ ಕಳಿಸಿ ಬರಬೇಕು, ಅಲ್ಲೀತನಕಾ ಹಿಂಗs ಕೂರೋದಾ?
ದುರ್ಗಿ : (ಒಳಗಿನ ದುಗುಡ ಮುಚ್ಚುತ್ತ)
ಕುದುರೀ ಕತಿ ಹೇಳ್ತೇನ ಕೇಳ.
ಕೊಮಾಲಿ : ಚಂಪಕ್ಕನ ಸುದ್ದಿ ಹೇಳಂದರ….
ದುರ್ಗಿ : ಕತಿ ಹೇಳ್ತೀನಿ ಕೇಳಗs. ದೊಡ್ಡಕತಿ. ಎಷ್ಟು ದೊಡ್ಡದೈತಂದರ ಆ ಕತಿ ಇನ್ನs ಮುಗಿದs ಇಲ್ಲ.
ಕೊಮಾಲಿ : ಅದೇನ ಹೇಳ್ತಿಯೋ ಹೇಳವಾ.
ದುರ್ಗಿ : ಹೆಂಗs ಹೇಳsಲೇ ತಂಗೀ ನಿನಗಾ
ಆ ಕುದುರಿ ಬೆರಗಾ||
ಗಂಡಮೆಟ್ಟಿ ನಾಡಿನಾಗೊಬ್ಬ ಪುಂಡ ಸರದಾರಿದ್ದಾ, ನೆಲ ಒದ್ದ ನೀರ ತಗೀತಿದ್ದ. ಬೆರಳಿನಾಗ ಬೆಟ್ಟ ಎತ್ತತಿದ್ದಾ. ಒಂದ ದಿನ ಏನೇನೋ ಕನಸ ಕಾಣತಾ ಶಿವಾಪುರಕ್ಕೆ ಹೊಂಟಿದ್ದಾ. ದಾರ್ಯಾಗ ಕಾಡಮಲ್ಲಿಗೆ ಹೂ ಹರಕೊಂಡ ಉಡೀ ತುಂಬಿಕೊಂಡಾ. ಕಾಡ ದಾಟಿದ ಮ್ಯಾಲೊಂದ ಕಬ್ಬಿನ ತೋಟ ಇತ್ತ. ತೋಟದಾಗೊಂದ ಮಗೀದುರುಬಿನ ಹೆಣ್ಣ ಕುಂತಿತ್ತು. ಆಕಿ ಚೆಲ್ವಿಕಿ ನೋಡಿ ಹುಡುಗ ಕರಗಿಹೋದ. ಯಾರ ಮಗಳು, ಏನು, ಎತ್ತಾ ತಿಳಿಕೊಂಡಾ. ಮನೀಗಿ ಬಂದು ಕಂಬಳಿ ಹೊತ್ತ ಮಲಗಿದ. ಅವ್ವ ಬಂದು ಎಬ್ಬಿಸಿದಳು, ಏಳಲಿಲ್ಲ. ಅಪ್ಪ ಬಂದ ಎಬ್ಬಿಸಿದ, ಏಳಲಿಲ್ಲ. ಊರ ಹೀರೇರಿಗೂ ಏಳಲಿಲ್ಲ. ಕಡೀಕ ಒಬ್ಬ ಹಿರ್ಯಾ ಕೇಳಿದ: ಈ ಹುಡುಗ್ಗ ಮದಿವೀ ಮಾಡೀರೇನು?
ಹುಡುಗ ಥಟ್ಟನs ಎದ್ದ ಕೂತ. ” ಹಾ ಅದನ್ನ ಮಾಡ್ಯಾರೇನು, ಕೇಳ್ರಿ, ಮಾಡ್ಯಾರೇನು ಕೇಳ್ರಿ” ಅಂದ. ಹಿರೇರೆಲ್ಲಾ ನಕ್ಕರು. “ಯಾರನ್ನ ಮದಿವ್ಯಾಗ್ತಿ?” ಅಂದರು.
ಮಗೀದುರುಬಿನ ಅಸsಲ ಹೆಣ್ಣ
ಎದ್ಯಾಗ ಮಾಡ್ಯಾಳ ಮಾಯದ ಹುಣ್ಣು
ತಂದ ಕೊಟ್ಟರ ಬದುಕೇನಣ್ಣಾ
ಸಾವಿಗು ಇಲ್ಲೊ ನನ್ನ ಮ್ಯಾಲ ಕರುಣಾ||
ಅಪ್ಪ ಅಂದಾ:
ಅವರನ್ನೋಡೀಯಾ? ರಾಜರು. ನಮ್ಮನ್ನೋಡೀಯಾ? ಬಡರೈತರು. ನಮ್ಮಂಥವರಿಗಿ ಮಗಳ್ನ ಹೆಂಗ ಕೊಟ್ಟಾರು? ಬ್ಯಾರೇ ಹುಡಿಗೀನ್ನ ತರ್ತೀನಿ.
ಮಗ ಅಪ್ಪನ ಕಾಲ ಹಿಡದಾ. ಮಗನ ತಾಪ
ನೋಡಲಾರದ ಅಪ್ಪ: ಸಿಕ್ಕರ ಶಿಕಾರಿ,
ಸಿಗದಿದ್ದರ ಭಿಕಾರಿ; ಬಾ-ಅಂದ, –
ಹೆಂಗ ಹೇಳಲಿ ತಂಗೀ ನನಗಾ
ಆ ಕುದುರೀ ಬೆರಗಾ||
ರಾಜನ ಅರಮನೀ ಮುಂದೊಂದು ಕಾಡಕುದರಿ ಕಟ್ಟಿಹಾಕಿದ್ದರು. ನಾಡಿನಾಗಿನ ಸವಾರರೆಲ್ಲಾ ಅದನ್ನ ಪಳಗಿಸಬೇಕಂದ ಬಂದು, ಮೀಸಿಗೆ ಮಣ್ಣ ಹಚ್ಚಿಕೊಂಡ ಹೋಗಿದ್ದರು. ಹಾಕಿದ ಜೀನ ಸೈತ ಬಿಚ್ಚೋ ಧೈರ್ಯ ಯಾರಿಗೂ ಆಗಿರಲಿಲ್ಲ. ರಾಜ ಅದನ್ನs ನೋಡ್ತಾ ನಿಂತಿದ್ದ. ಅಪ್ಪ, ಮಗ ಬಂದರು,
“ರಾಜರ ರಾಜರs…”
“ನಮ್ಮಲ್ಲಿ ಕೂಲಿ ಕೆಲಸ ಇಲ್ಲಪಾ”
“ರಾಜರ ರಾಜರs….”
“ನಮ್ಮಲ್ಲಿ ನೌಕರಿ ಚಾಕರಿ ಇಲ್ಲಪಾ”
“ನೌಕರಿಗಾಗಿ ಬಂದಿಲ್ಲ, ಚಾಕರಿಗಾಗಿ ಬಂದಿಲ್ಲ ನನ್ನ ಮಗನಿಗೆ ನಿಮ್ಮ ಮಗಳ್ನ ಕೇಳಾಕ ಬಂದೀನಿ.”
ರಾಜಾ ಹುಬ್ಬೇರಿಸಿ ನೋಡಿದಾ: ಹರಕಬಟ್ಟಿ ತಿರುಕರು, ಚಿಂದೀ ಬಟ್ಟಿ ಗೊಂದಲದವರು, ಕಾಡರೈತರು ನನ್ನ ಮಗಳ್ನ ಕೇಳೋಹಾಂಗ ಆಯ್ತಲ್ಲಪಾ! ಬಾ ಮುಂದಂದ, ಕುದರೀ ತೋರಿಸಿದ-
ಹತ್ತಿ ಪಳಗಿಸೋ ಮಾಡಿ ಸವಾರಿ
ಮಗಳ ಕರೆದೊಯ್ಯೋ ಕುದುರೆಯನೇರಿ|
ಹೆಂಗ ಹೇಳsಲೆ ತಂಗೀ ನಿನಗಾ
ಆ ಕುದುರೀ ಬೆರಗಾ||
ನೋಡೀಯಾ? ಕಾಡಕುದುರಿ. ಹತ್ತೀಯಾ? ಜೀವದಾಸೆ ಇಲ್ಲ. ಬಿಟ್ಟೀಯಾ? ಮಗೀದುರುಬಿನ ಹೆಣ್ಣ ಅಟ್ಟದ ಮ್ಯಾಲ ನಿಂತಾಳ!
ಮಿರಿಮಿರಿ ಮಿಂಚಿತು ಕಾಡಿನ ಕುದರಿ
ಕರಿ ಮೈ ಬಣ್ಣದ ಉಕ್ಕಿನ ಕುದರಿ
ಕತ್ತಿನ ಕೇಶ ಹೊತ್ತಿದ ಉರಿ ಉರಿ
ಕಣ್ಣಾಗಿದ್ದವು ಸಣ್ಣಾನ ಚೂರಿ
ಪಳಗಿಸುವಂಥಾ ಘನ ಎಂದಿವಂತಾ
ಹುಟ್ಟಿರಲಿಲ್ಲದ ಹೈಹೈ ಕುದರಿ
ಹುಡುಗ ನೋಡಿದ. ಹೌಸೀಲೆ ಕಡಿವಾಣ ಕೈಯಾಗ ಹಿಡಕೊಂಡ. ಹತ್ತಾಕ ಕಾಲ್ಕಂಡೀ ಒಳಗ ಕಾಲ ಹಾಕಿದ. ಅಯ್ ಶಿವನ!
ಕುದರಿ ಹ್ಯಾಕರಿಸಿದ್ದs ಚಂದನs ನೇಗೀತು, ನೆಗೀತು,-
ಕಾಲ್ಕಂಡೀ ಒಳಗಿನ ಕಾಲು ಅಲ್ಲೇ ಐತಿ, ಹುಡುಗ ಅಂಗಾತ ಬಿದ್ದಾ. ಬಿದ್ದ ಹುಡುಗನ್ನ ದರದರ ಎಳಕೊಂಡ ಬಂದೂಕಿನ ಗುಂಡ ಹಾರಿಧಾಂಗ ಓಡಿತು! ಕೂಡಿದ ಮಂದಿ ಹಾ ಹಾ ಅನ್ನೂದರಾಗ ಹೈ ಹೈ ಅಂತ ಕಾಡಿನಾಗ ಓಡಿ ಕಣ್ಮರಿ ಆಯ್ತು!
ಎಲ್ಲಾರು ಹುಡುಗನ ಆಸೇಬಿಟ್ಟರು. ಹೆಣ್ಣ ಕೊಡಾಣಿಲ್ಲಾಂತ ಭಿಡೇ ಬಿಟ್ಟ ಹೇಳಬೇಕಾಗಿತ್ತು. ಕುದರೀ ಪಳಗಸು ಅಂತ ಯಾಕಾದರೂ ಹೇಳಿದ್ನೋ-ಅಂತ ರಾಜ ಮರುಗಿದ. ಅಟ್ಟದ ಮ್ಯಾಲ ಮಗೀದುರುಬಿನ ಹುಡಿಗಿ-ಬಂದಾನೋ ಬಾರನೋ ಅಂತ ನಿಂತಿದ್ಲು. ತುರುಬ ಬಿಚ್ಚಿ ಬಿತ್ತು; ಊರ ತುಂಬ ಕತ್ತಲಾಯ್ತು. ಮಂದಿ ಹಾಂಗs ಕುಂತಿದ್ದರು.
ಅಷ್ಟರಾಗ ಕುದರಿ ಕಾಡದಾಟಿ ಉಸಕಿನಾಗ ಓಡುವಾಗ, ಅದರ ಆಟ ನಡೀಲಿಲ್ಲ. ಹುಡುಗ ಸಿಕ್ಕೆಲೇ ಅಂದವನ ಹತ್ತಿ ಪಳಗಿಸಿದ. ತಿರಿಗಿ ಬಂದ. ಹುಡಿಗೀ ಎದಿ ಗೆದ್ದ ಬಂದ. ಮಗೀದುರುಬಿನ ಹುಡಿಗಿ ಕುಲುಕುಲು ನಕ್ಕಳು. ಊರ ತುಂಬ ಬೆಳದಿಂಗಳು ಬಿತ್ತು. ರಾಜ “ಮಗಳ್ನ ಕೊಟ್ಟೆ”- ಅಂದ.
ಹೆಂಗ ಹೇಳಲೆ ತಂಗಿ ನಿನಗಾ
ಆ ಕುದುರೀ ಬೆರಗಾ||
ಮದಿವೀ ಮೆರವಣಿಗಿ ಬಂತು. ಬೆರಳೂರೇನಂದರ ಜಾಗಾ ಸಿಗಧಾಂಗ ಮಂದಿ ಸೇರಿತ್ತು. ಹುಡುಗ ನೋಡತಾನ: ಬ್ಯಾರೇ ಇನ್ನಾರೋಹುಡಿಗೀ ಜೊತೆ ಮದಿವೀ ತಯ್ಯಾರಿ ನಡಸ್ಯಾರ! ಛೇ-ನನಗ ಮೋಸ ಮಾಡಿದಿರಿ. ನನಗ ಈ ಮದಿವಿ ಬ್ಯಾಡ ಅಂಡ. ರಾಜಾ ಅಂದ:-
ನೋಡಪಾ, ನನಗ ಮೂರ ಮಂದಿ ಹೆಣ್ಣ ಮಕ್ಕಳು. ಹಿರೇ ಮಗಳು, ನನ್ನ ಖಾಸಾ ಮಗಳು. ಉಳಿದಿಬ್ಬರು ನನಗೆ ಹುಟ್ಟಿದವರಲ್ಲ. ಏನ ಮಾಡ್ಲೆಪಾ, ಬಂದೂಕ ಹಿಡಿಯೋ ತಾಕತಿಲ್ಲ. ಹಿರೇ ಮಗಳಿಗೆ ಮಸ್ತ ಆಸ್ತಿ ಪಾಸ್ತಿ ಐತಿ. ಯಾರಿಗುಂಟು, ಯಾರಿಗಿಲ್ಲ; ತಗೊ ಕೊಡತೀನಿ, ಕೈಮ್ಯಾಲ ಕೈಹಾಕಿ.
ಅಪ್ಪ ಬಂದ:
ಮಗನs ನಿನ್ನಿಂದ ನನ್ನ ಬಡತನ ಹೋದೀತು. ಒಪ್ಪಿಕೊಳ್ಳೋ ಅಂದ. ಸೆರಗೊಡ್ಡಿದ, ಕೈಕಾಲ ಹಿಡಿದಾ. ಕಡೀಕಾ ತಂದೀ ಒತ್ತಾಯಕ್ಕ ಮಗ ಮದಿವ್ಯಾದ.
ರಾಜಾನ ರಾಜ್ಯೋ ಎಲ್ಲಾ ಬಂಜರ ಭೂಮಿ. ನೀರ ತಗೀಬೇಕಂತ ನೆಲಾ ಒದ್ದ. ಒದ್ದಲ್ಲಿ ಒಂದೊಂದ ತಗ್ಗ ಬಿದ್ದು, ಬಿದ್ದ ತಗ್ಗ ಗೋರೀ ಮಾಡಿ ಆಸೆ ಹೂಳಬೇಕಂದ, – ನೀರ ಬೀಳಲೇ ಇಲ್ಲ. ನೀರಿತ್ತವ್ವಾ, ನೆಲದಾಗಲ್ಲ, ಮಗೀದುರುಬಿನ ಹೆಣ್ಣಿನ ಕಣ್ಣಾಗಿತ್ತು. ಜಲ ಎಲ್ಲೇ ತಾಯಿ ಜಲವೆಲ್ಲೆ? ಮಗೀದುರುಬಿನ ಹೆಣ್ಣಿನ ಕಣ್ಣಲ್ಲೆ.
ಆಯ್ತವ್ವಾ, ಕತೀ ಮುಗೀತು. ಅವರಲ್ಲೇ-ನಾವಿಲ್ಲೆ.
ಕೊಮಾಲಿ : ಆವಯ್ಯಾ, ಸರದಾರೇನಾದ? ಮಗೀದುರುಬಿನ ಹೆಣ್ಣ ಏನಾದ್ಲು?
ದುರ್ಗಿ : ಇನ್ನೇನಾಗಬೇಕು? ಎಲ್ಲಾ ಆ ಕುದರಿಂದs ಆಯ್ತು ಅಂಬವರ್ಹಾಂಗ ಹಗಲೀ ರಾತ್ರಿ ಅದನ್ನ ಹತ್ತಿ ಓಡ್ಯಾಡಸ್ತಾನ.
ಕೊಮಾಲಿ : ಕತೀ ಮುಗೀಲಿಲ್ಲ.
ದುರ್ಗಿ : ಇನ್ನs ಮುಗೀಲಿಲ್ಲ. ನಾ ಹೆಂಗ ಮುಗಸಲಿ?
ಕೊಮಾಲಿ : ಅಯ್ ಶಿವನ!
ದುರ್ಗಿ : ಹೆಂಗ ಹೇಳಲಿ ತಂಗಿ ನಿನಗಾ
ಆ ಕುದುರಿ ಬೆರಗಾ||
Leave A Comment