ಚಂದ್ರಶೇಖರ ಕಂಬಾರರು ಬಹುಮುಖ ಪ್ರತಿಭೆಯ ವ್ಯಕ್ತಿ. ಕವಿಗಳಾಗಿ, ನಾಟಕಕಾರರಾಗಿ, ಕಥೆ-ಕಾದಂಬರಿಕಾರರಾಗಿ, ವಿಮರ್ಶಕರಾಗಿ, ನಾಟಕ-ಸಿನಿಮಾ ಸಂಗೀತ ಸಂಯೋಜಕರಾಗಿ, ನಿರ್ದೇಶಕರಾಗಿ, ಗಾಯಕರಾಗಿ, ಜಾನಪದ ವಿದ್ವಾಂಸರಾಗಿ ಅವರ ಸಾಧನೆ ಗಣನೀಯವಾದುದು. ಇಷ್ಟಿದ್ದೂ ಕಂಬಾರರು ತಾವು ಕೈ ಹಾಕಿದ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಗಳಿಸಿರುವುದೊಂದು ವಿಶೇಷ. ವಿಮರ್ಶಕರ ಮರ್ಜಿಯನ್ನು ಅಷ್ಟಾಗಿ ಹಿಡಿಯದೆ ತಾವು ಮಾಡಬೇಕೆಂದಿರುವುದನ್ನು ಮೌನವಾಗಿ ಸಾಧಿಸುತ್ತಾ ನಡೆಯುವ ಕಂಬಾರರನ್ನು ನಾನು ಸುಮಾರು ವರ್ಷಗಳಿಂದ ಸನಿಹದಿಂದ ನೋಡುತ್ತಿರುವೆನಾದರೂ ಅವರನ್ನೊಂದು ಪ್ರಮಾಣಕ್ಕೆ ಬದ್ಧರನ್ನಾಗಿಸುವುದು ನನಗಿಂದಿಗೂ ಸಾಧ್ಯವಾಗಿಲ್ಲ. ಎಲ್ಲರ ಊಹೆ, ಅಂದಾಜುಗಳನ್ನು ಮೀರಿ ಬೆಳೆಯುತ್ತಿರುವ ಕಂಬಾರರ ಕೃತಿಯೊಂದರ ಬಗೆಗೆ ಬರೆಯುವುದು ಎಷ್ಟೊಂದು ಪೇಚಿನ ಕೆಲಸವಾಗಬಹುದೆನ್ನುವುದಕ್ಕೆ ನಾನು ಇಷ್ಟೆಲ್ಲ ವಿಚಾರಗಳನ್ನು ಹೇಳಬೇಕಾಯಿತು.

ಕಂಬಾರರ ’ಕಾಡು ಕುದುರೆ’ಯ ಬಗೆಗೆ ಬರೆಯಲು ನನಗಿರಬಹುದಾದ ಏಕೈಕ ಅರ್ಹತೆಯೆಂದರೆ ನಾನು ಒಬ್ಬ ಸಹೃದಯನಾಗಿ ಅವರ ರಚನೆಗಳ ಬಗೆಗೆ ಆರೋಗ್ಯಕರವಾದ ಚರ್ಚೆಯಲ್ಲಿ ತೊಡಗುತ್ತಿದ್ದುದು ಮತ್ತು ಅವರ ಈವರೆಗಿನ ನಾಟಕಗಳನ್ನೆಲ್ಲಾ ಕುತೂಹಲದಿಂದ ಗಮನಿಸುತ್ತಾ ಬಂದಿರುವುದು.

’ಕಾಡು ಕುದುರೆ’ ಜಾನಪದ ಪರಿಸರದಲ್ಲಿ ನಡೆಯುವ ಪ್ರೇಮಕಥೆಯೊಂದರ ನಾಟಕ ರೂಪ. ಕಂಬಾರರ ಬಹುಪಾಲು ಕವನ, ನಾಟಕಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಲೈಂಗಿಕ ಪ್ರತಿಮೆಗಳು ’ಕಾಡು ಕುದುರೆ’ಯಲ್ಲೂ ಇವೆ. ಶಕ್ತಿ ಮತ್ತು ಸ್ತ್ರೀಯ ಸಂಕೇತವಾಗಿ ಕಂಬಾರರು ಕಾಡುಕುದುರೆಯನ್ನು ಬಹಳಷ್ಟು ಕಡೆ ಬಳಸಿಕೊಂಡಿದ್ದಾರೆ. ಆದರೆ ಇಲ್ಲಿ ಬಳಕೆಯಾಗಿರುವ ಕಾಡುಕುದುರೆ ಒರಟುತನದಿಂದ ಕೂಡಿದ್ದರೂ ಅಖಂಡ ಸೃಷ್ಟಿಯ ಶಕ್ತಿಯುತ ಕಾಮಕ್ಕೆ ಸಂಕೇತವಾಗಿದೆ. ಪ್ರೇಮ ಮತ್ತು ಕಾಮಗಳ ನಡುವಿನ ಅಂತರ ಗೆರೆಯೆಳೆದು ಬೇರ್ಪಡಿಸಲಾಗದಷ್ಟು ಸೂಕ್ಷ್ಮವಾಗಿರುವುದರಿಂದ ’ಕಾಡುಕುದುರೆ’ಯನ್ನು ಒಂದು ಕಾಮದ ಕಥೆಯಾಗಿ ಭಾವಿಸಲೂ ಸಾಧ್ಯವಿದೆ. ಇಲ್ಲಿ ಬರುವ ಹುಲಿಗೊಂಡ ಬಡವ, ಅವನಿಗೆ ಒಂದು ಹುಡುಗಿಯ ಮೇಲೆ ಕಣ್ಣುಬಿದ್ದು, ಆರ್ಥಿಕ ಕಾರಣಗಳಿಂದಾಗಿ ಅವಳನ್ನು ಮದುವೆಯಾಗುವುದು ಸಾಧ್ಯವಾಗದೇ ಹೋಯಿತು. ಅವಳಿಗೆ ಬದಲು ರೋಗಿಷ್ಠೆಯಾಗಿದ್ದ ಅವಳಕ್ಕನನ್ನು ಮದುವೆಯಾದ. ಈನಡುವೆ ಇವರಿಬ್ಬರ ಮತ್ತೊಬ್ಬಳು ಸಹೋದರಿ-ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಹುಲಿಗೊಂಡನ ಸಂಪರ್ಕ ಬಯಸಿದಳು. ಕೊನೆಗೆ ಹುಲಿಗೊಂಡ ತನ್ನನ್ನಾವರಿಸಿದ್ದ ಎಲ್ಲ ಬಂಧನಗಳನ್ನೂ ಕಿತ್ತೊಗೆದು ತನ್ನಲ್ಲಿ ಬಯಕೆಯ ಕೆಚ್ಚೆಬ್ಬಿಸಿದ್ದವಳೊಡನೆ ಸುಂದರ ಕನಸಿನ ಪ್ರಪಂಚದತ್ತ ದೌಡಾಯಿಸಿದ. -ಇದ್ದಿಷ್ಟು ’ಕಾಡಕುದುರೆ’ ನಾಟಕದ ಕಥೆ. ಕ್ಷಣಕ್ಷಣಕ್ಕೂ ಬದುಕನ್ನು ಹಿಂಡಿ ಹಿಂಸಿಸುವ ವ್ಯವಸ್ಥೆಯ ಕ್ರೂರ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಣಯಿಗಳು ನಡೆಸುವ ಮುಗ್ಧ ಹೋರಾಟವನ್ನು ಈ ನಾಟಕ ಬಿಡಿಸಿ ತೋರುತ್ತದೆ. ಸ್ವತಂತ್ರ ಬದುಕಿಗೆ, ಕನಸುಗಳ ಈಡೇರಿಕೆಗೆ, ಅಖಂಡ ಕಾಮತೃಪ್ತಿಗೆ ಹಾತೊರೆಯುವ ಗಂಡು-ಹೆಣ್ಣುಗಳು ಹಂತಹಂತವಾಗಿ ಅಸಂಗತ ಬದುಕನ್ನು ಜಾಡಿಸಿ ಒದ್ದು ಕನಸಿನ ಲೋಕಕ್ಕೆ ಪಯಣಿಸುವುದನ್ನು ಇಲ್ಲಿ ಕಾಣಬಹುದು. ಸಾವಿನ ಭೀತಿ, ಸೋಲಿನ ಅಂಜಿಕೆಯನ್ನು ಮೀರಿ ಹೊಸದಾದ ಸ್ವತಂತ್ರ ಬಾಳನ್ನು ರೂಪಿಸಿಕೊಳ್ಳುವ ಅಸ್ತಿತ್ವವಾದದ ಸಾಧ್ಯತೆ ಕಾಡುಕುದುರೆಯಲ್ಲಿದೆ. ಹಾಗಾಗಿ ಕಾಮದ ಮೂಲಕ ಕ್ರಾಂತಿಯನ್ನು ಪ್ರತಿಪಾದಿಸುವ ಮಹತ್ವದ ಉದ್ದೇಶ ಕಂಬಾರರಿಗಿರುವುದರ ಹಿನ್ನೆಲೆಯಲ್ಲೂ ಈ ನಾಟಕವನ್ನು ನೋಡಬೇಕು. ಯಾಕೆಂದರೆ ಕಾಮ ಮಾನವನ ಮೂಲ ಪ್ರವೃತ್ತಿಗಳಲ್ಲೊಂದು ಮತ್ತು ಜನಪದರ ಬದುಕು ಕಾಮಪ್ರಧಾನವಾದದ್ದು. ಕಾಮ ಬದುಕಿನ ಅನಿವಾರ್ಯ ಅಂಗವಾದ್ದರಿಂದ ಲೈಂಗಿಕತೆಯ ಎಡವಟ್ಟು, ವಿಪರ್ಯಾಸಗಳಿಂದ ಬರುವಷ್ಟು ಸಿಟ್ಟು, ರೊಚ್ಚು ಅವರಿಗೆ ಮತ್ತಾವುದರಿಂದಲೂ ಬರುವುದಿಲ್ಲ. ಕಂಬಾರರು ತಾವು ಪ್ರೀತಿಸುವ ಜನಪದರ ಜೀವನೋತ್ಸಾಹವನ್ನು, ಸೌಂದರ್ಯವನ್ನು, ಸುಖವನ್ನು, ಸತ್ಯವನ್ನು, ತಲೆತಲಾಂತರಿಂದ ಬದಲಾವಣೆ ಕಾಣದ ಹಳ್ಳಿಯ ಬದುಕನ್ನು ತಮ್ಮ ನಾಟಕಗಳಲ್ಲಿ ಕಂಡರಿಸುತ್ತಲೇ ನಾವು ತಲುಪಬೇಕಾದ ನೆಲೆಯ ಸಾಂಕೇತಿಕ ರೂಪವನ್ನೂ ಪ್ರಕಟಪಡಿಸುತ್ತಾರೆ.’ಜೋಕುಮಾರಸ್ವಾಮಿ’ಯಲ್ಲಿ ಸಾಮಾನ್ಯರ ಬದುಕು ಅರಳಿಕೊಳ್ಳಲು ಬಿಡದ ಕರಾಳ ವ್ಯವಸ್ಥೆಯ ವಿರುದ್ಧ ತಿರುಗಿಬೀಳಲು ಹುಮ್ಮಸ್ಸು ಹುಟ್ಟಿಸುವುದು ಒಂದು ಹೆಣ್ಣು. ’ನಾಯೀಕಥೆ’ಯಲ್ಲಿ ಸರ್ವಾಧಿಕಾರೀ ಪ್ರಭುತ್ವದೆದುರು ಹೋರಾಟಕ್ಕಣಿಯಾಗಲು ಪ್ರಚೋದಿಸುವುದು ಒಂದು ಹೆಣ್ಣು. ಹಾಗೆಯೇ ಕಾಡುಕುದುರೆಯಲ್ಲಿ ಸಾಮಾಜಿಕ ಬಂಧನಗಳನ್ನು ಕಿತ್ತೆಸೆಯುವ ಪ್ರಬಲ ಒತ್ತಡವಾಗಿ ಕಂಡುಬರುವುದು ಒಂದು ಹೆಣ್ಣು. ಈ ಹೆಣ್ಣಿನ ಬಳಕೆ ಮತ್ತು ಬಯಕೆಯ ಹಿನ್ನೆಲೆಯಲ್ಲಿರುವುದು ಕಾಮ. ಹೀಗೆ ಹಿಂದೆಯೇ ಹೇಳಿದಂತೆ ಕಾಮದ ಮೂಲಕ ಕ್ರಾಂತಿಯನ್ನು ಪ್ರತಿಪಾದಿಸಬೇಕೆನ್ನುವ ಕಂಬಾರರ ಮಹತ್ವದ ಉದ್ದೇಶ ನಾಟಕಗಳಲ್ಲಿ ಸುಂದರವಾಗಿ, ಕಲಾತ್ಮಕವಾಗಿ ಅರಳಿಕೊಳ್ಳುವ ರೀತಿ ಮಾತ್ರ ಬೆರಗು ಹುಟ್ಟಿಸುವಂಥದ್ದು. ಅನುಭವದ ಒಟ್ಟಂದದ ಧ್ವನಿಯನ್ನು ಹಿಡಿದಿಡಬೇಕೆನ್ನುವ ಕಂಬಾರರ ತವಕ ಬದುಕಿನ ಅನಿವಾರ್ಯ ಹಾಗೂ ಸ್ವಾಭಾವಿಕ ಭಾಗವಾಗಿಯೇ ಕಾಮವನ್ನೂ ಚಿತ್ರಿಸುತ್ತದೆ.

ನಾಟಕದಲ್ಲಿ ಹುಲಿಗೊಂಡ ಕೈ ಹಿಡಿಯಬೇಕಾಗಿ ಬಂದದ್ದು ಪಾರೋತಿಯನ್ನು, ಆದರೆ ಅವನ ಮನವನ್ನು ಹುಚ್ಚೆಬ್ಬಿಸಿದ್ದವಳು ಪಾರೋತಿಯ ಕಿರಿಯ ಸೋದರಿಯಾದ ಚಂಪಿ. ತನ್ನಕ್ಕನ ಗಂಡನೊಂದಿಗೇ ಸಂಬಂಧವಿರಿಸಿಕೊಳ್ಳುವ ಚಂಪಿಯ ಕಾಮ ನಾವು ಒಪ್ಪಿಕೊಂಡು, ಅನುಸರಿಸಿಕೊಂಡು ಬರುತ್ತಿರುವ ಸಾಮಾಜಿಕ ಮೌಲ್ಯಗಳ ದೃಷ್ಟಿಯಿಂದ ಅಸಹಜವಾದರೂ ಅದರ ಹಿಂದಿರುವ ದೇಹ-ಮನಸ್ಸುಗಳ ಅಪೇಕ್ಷೆ, ಮಾನವೀಯ ಒತ್ತಡ-ಇವುಗಳನ್ನು ತಿರಸ್ಕರಿಸುವಂತಿಲ್ಲ. ಇಲ್ಲಿ ಶೀಲಕ್ಕನ ಸ್ಥಿತಿ ಪಾರೋತಿ ಮತ್ತು ಚಂಪಿಯರಿಗಿಂತ ಭಿನ್ನವಾದದ್ದು. ಅವಳು ಪಾರೋತಿಯಂತೆ ಶಾಸ್ತ್ರೋಕ್ತವಾಗಿ ಹುಲಿಗೊಂಡನ ಕೈ ಹಿಡಿದವಳಲ್ಲ, ಚಂಪಿಯಂತೆ ಹುಲಿಗೊಂಡನನ್ನು ಹುಚ್ಚೆಬ್ಬಿಸಿದವಳೂ ಅಲ್ಲ. ವಯಸ್ಸಿನಲ್ಲಿ ಚಂಪಿಗಿಂತ ಹಿರಿಯಳಾದರೂ ಅಷ್ಟೇನೂ ಸುಂದರಿಯಲ್ಲದ ಶೀಲಕ್ಕನಿಗೆ ಮದುವೆಯ ಭಾಗ್ಯ ಕೂಡಿಬರಲಿಲ್ಲ. ಹಾಗೆಂದು ಯೌವ್ವನ ಪ್ರೇರಿಸುವ ದೇಹದ ಅದಮ್ಯ ಬಯಕೆಗಳನ್ನು ಹತ್ತಿಕ್ಕಿ ಅನ್ಯಾಯ ಮಾಡಿಕೊಳ್ಳುವ ಮನಸ್ಸೂ ಅವಳಿಗಿಲ್ಲ. ಭಾವನೊಂದಿಗೆ ಕೂಡುವ ಯಾವುದೇ ಅವಕಾಶವನ್ನೂ ಅವಳು ವ್ಯರ್ಥಮಾಡಿಕೊಳ್ಳಲು ಬಯಸುವುದಿಲ್ಲ. ಸಂಪ್ರದಾಯಕ್ಕೆ ಕಟ್ಟುಬಿದ್ದು ಮನುಷ್ಯ ಸಂಬಂಧಗಳ ಸೂಕ್ಷ್ಮತೆಯನ್ನು ಗ್ರಹಿಸಿದ ಪಾರ್ಶ್ವವಾಯಿ ಪೀಡಿತ ಮನಸ್ಸಿಗೆ ಹುಲಿಗೊಂಡ-ಚಂಪಿಯರ ಸಂಬಂಧ ವ್ಯಭಿಚಾರವಾಗಿಯೋ ಅನೈತಿಕ ವ್ಯವಹಾರವಾಗಿಯೋ ಕಾಣಬಹುದು. ಹಾಗಾದಾಗ ಅಂಥ ಸಂಬಂಧವನ್ನು ಒಂದು ಸಮಸ್ಯೆಯಾಗಿ ಪರಿಭಾವಿಸಿ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲೇ ಆ ಸಮಸ್ಯೆಯ ಬೇರುಗಳು ಆಳವಾಗಿ ಊರಿಕೊಂಡಿರುವುದನ್ನು ಪರಿಶೋಧಿಸುವ ಅವಕಾಶ ತಪ್ಪಿಹೋಗುತ್ತದೆ.

ಊರಿಗೆಲ್ಲಾ ಸಿಂಹಸ್ವಪ್ನವಾಗಿರುವ ಗೌಡ್ತಿಯ ಮನೆಯಲ್ಲೇ ಈ ಸಂಬಂಧಗಳು ತೆರೆಮರೆಯಲ್ಲಿ ಏರ್ಪಡುತ್ತಾ, ಖಚಿತವಾಗುತ್ತಾ ಹೋಗುತ್ತಿದ್ದಂತೆ ಊರಲ್ಲೂ ಅದಕ್ಕೆ ಸಂವಾದಿಯಾದ ಘಟನೆಗಳು ಜರುಗುತ್ತಿರುತ್ತವೆ. ಅವುಗಳಲ್ಲಿ ಕೊಮಾಲಿಯ ಪ್ರಸಂಗವನ್ನು ನೋಡಬಹುದು: ಕೊಮಾಲಿ ನಿಸರ್ಗದ ಅತ್ಯಂತ ಸಹಜ ಭಾಗ. ಆದ್ದರಿಂದಲೇ ಕಾಡುಕುದುರೆ ಉಳಿದೆಲ್ಲರಂತೆ ಅವಳನ್ನು ಕಾಡಿಸುವುದಿಲ್ಲ. ಸಲೀಸಾಗಿ ಅದನ್ನು ಹತ್ತಿ ಗಂಡನ ಮನೆಯಿಂದ ಅವಳು ಪಾರಾಗಿ ಬರಬಲ್ಲಳು. ಸಾಮಾಜಿಕವಾಗಿ ಕೆಳ ಅಂತಸ್ತಿನಲ್ಲಿರುವ ಕೊಮಾಲಿಯನ್ನು ಸಮಾಜದ ಕಟ್ಟುಪಾಡುಗಳು, ನೀತಿ ನಿಯಮಾವಳಿಗಳು ಅಷ್ಟಾಗಿ ಹಿಂಸಿಸುವುದಿಲ್ಲ. ಆಕಳಂಥ ಗಂಡನಿಂದ ತಾನು ನಿರೀಕ್ಷಿಸಿದ ಸುಖ ದೊರೆಯಲಿಲ್ಲವೆಂದಾಗ ಅಂಥವನ ಸಂಬಂಧವನ್ನು ಕಡಿದುಕೊಳ್ಳುವುದಕ್ಕೂ ಅವಳು ಹಿಂಜರಿಯುವುದಿಲ್ಲ. ತನಗೆ ಬೇಕಾಗಿರುವ ಹೋರಿಯಂಥವನನ್ನು ಪಡೆಯುವುದಕ್ಕಾಗಿ ವ್ಯವಸ್ಥೆ ಒದಗಿಸುತ್ತೇನೆಂದು ಹೇಳುವ ಹುಸಿ ಸವಲತ್ತುಗಳನ್ನು ಧಿಕ್ಕರಿಸುವುದಕ್ಕೂ ಸಿದ್ಧಳಾಗುತ್ತಾಳೆ. ದಕ್ಕಿದಷ್ಟೂ ನೈಸರ್ಗಿಕ ಸುಖವನ್ನು ಬಾಚಿಕೊಳ್ಳಬೇಕೆನ್ನುವ ಅವಳು ಅದಕ್ಕೆ ತೊಡಕುಂಟುಮಾಡುವ ಅಸಂಗತ ಬಂಧನಗಳನ್ನು ಕಿತ್ತೊಗೆಯುತ್ತಾಳೆ. ಆದರೆ ವ್ಯವಸ್ಥೆಯ ಹಿಡಿತದಲ್ಲಿ ಬಲವಾಗಿ ಸಿಲುಕಿಕೊಂಡಿದ್ದು ಅದರ ಒಂದು ಭಾಗವೇ ಆಗಿರುವ, ನಿಸರ್ಗದಿಂದ ವಂಚಿತರಾಗಿರುವ ಶೀಲಕ್ಕ, ಚಂಪಿಯರಿಗೆ ಈ ಸ್ವಾತಂತ್ರ್ಯವಿಲ್ಲ. ನಮ್ಮೆಲ್ಲ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವಗಳನ್ನು ನುಂಗಿ ನೊಣೆಯುವ ಈ ಜಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಸಮರಕ್ಕೆ ಶೀಲಕ್ಕ, ಚಂಪಿಯರು ಸಂಕೇತ ಮಾತ್ರ ಆಗುತ್ತಾರೆ. ಅರ್ಥಪೂರ್ಣ ಬದಲಾವಣೆಗೆ ಅಥವಾ ಸುಸಂಗತ ಗುರಿಯಿರಿಸಿಕೊಂಡ ಕ್ರಿಯೆಗೆ ವ್ಯವಸ್ಥೆ ಹೇಗೆ ಮಣಿಯಬಲ್ಲದೆಂಬುದಕ್ಕೆ ಹುಲಿಗೊಂಡ-ಚಂಪಿಯರತ್ತ ಗೌಡ್ತಿ ಹಾರಿಸುವ ಗುಂಡು ಗುರಿತಪ್ಪುವಲ್ಲಿ ಸಾಂಕೇತಿಕ ಸಾಕ್ಷಿಯೊದಗಿಸುತ್ತದೆ. ನಮ್ಮ ಸಾಮಾಜಿಕ ವ್ಯವಸ್ಥೆ ಎಷ್ಟೊಂದು ಅರ್ಥಹೀನವಾಗಿ, ಘೋರವಾಗಿ ನಮ್ಮನ್ನು ಕಾಡುತ್ತದೆನ್ನುವುದಕ್ಕೆ ನಾಟಕದಲ್ಲೇ ನಿದರ್ಶನಗಳು ಸಿಗುತ್ತವೆ. ಹುಲಿಗೊಂಡ ತಾನು ಮೆಚ್ಚಿದ ಚಂಪಿಯನ್ನು ಮದುವೆಯಾಗುವಂತಿಲ್ಲ. ಆಸ್ತಿಯ ಹಕ್ಕು, ಗೌಡಿಕೆ ಹಿರಿಯಳಾದ ಪಾರೋತಿಯ ಪಾಲಿಗಿರುವುದರಿಂದ ಚಂಪಿಯನ್ನು ಮದುವೆಯಾದರೆ ಆ ಅಧಿಕಾರಿಗಳು ಪ್ರಾಪ್ತವಾಗುವುದಿಲ್ಲ. ಅಧಿಕಾರದ ಹಂಬಲವನ್ನು ತಿರಸ್ಕರಿಸಿ ಚಂಪಿಯನ್ನು ಕೈ ಹಿಡಿಯೋಣವೆಂದರೆ ಅವನ ಮೇಲೇ ಭರವಸೆಯಿರಿಸಿ ತಮ್ಮಬಡತನ ಯಾವಾಗ ನೀಗೀತು ಎಂದು ದೈನ್ಯವಾಗಿ ಕಾಯುತ್ತಿರುವ ತಂದೆತಾಯಿಗಳ ಕಡೆಯಿಂದ ಒತ್ತಡವಿದೆ. ಒಂದು ಬಾರಿ ಮದುವೆಯ ಶಾಸ್ತ್ರ ಮುಗಿಯಿತೆಂದರೆ ಕುರುಡಿಯೋ ಕುರೂಪಿಯೋ ರೋಗಿಯೋ ಏನೇ ಆಗಿರಲಿ ಹೆಂಡತಿಯಾದವಳಿಗೆ ನಿಷ್ಠೆಯಿಂದ ನಡೆದುಕೊಳ್ಳಬೇಕೆಂದು ಸಮಾಜ ಬಯಸುತ್ತದೆ ಮತ್ತು ವಿಧಿಸುತ್ತದೆ. ವೈಯಕ್ತಿಕ ಬೇಡಿಕೆ, ಬಯಕೆಗಳಿಗೆ ಅಲ್ಲಿ ಬೆಲೆಯಿಲ್ಲ. ವ್ಯವಸ್ಥೆಯ ಈ ಹೇರಿಕೆ ನಮ್ಮನ್ನು ಕ್ಷಣಕ್ಷಣಕ್ಕೂ ಹಿಂಸಿಸುವ, ದಯನೀಯವಾಗಿರುವ ಕೆಲಸವನ್ನು ಬಹು ನಾಜೂಕಾಗಿ ಮಾಡುತ್ತಿರುತ್ತದೆ. ಈ ಸಮಸ್ಯೆಯ ಬೇರುಗಳನ್ನು ಅಲ್ಲಾಡಿಸುವ ಹೋರಾಟ ಕಾಡುಕುದುರೆಯಲ್ಲಿ ಹಂತಹಂತವಾಗಿ ನಿರೂಪಿತವಾಗಿದೆ. ಕಟುವಾಸ್ತವ ಮತ್ತು ಸುಂದರ ಆದರ್ಶಗಳ ನಡುವಿನ ಹೋರಾಟದ ಆಶಯವನ್ನು ’ಕಾಡುಕುದುರೆ’ ಹೊಂದಿದೆ. ಜನಸಮುದಾಯವನ್ನೊಳಗೊಂಡೂ ಅವರ ಮೂಲಕವೇ ಬದುಕನ್ನು ಶೋಧಿಸಿ, ಜನನಾಡಿಯನ್ನು ಮಿಡಿಯುವ ಧೋರಣೆಯುಳ್ಳವರಾದುದರಿಂದ ಕಂಬಾರರು ಸಾಮಾನ್ಯರಿಗೆ ಹತ್ತಿರದ ಕವಿಯಾಗುತ್ತಾರೆ, ನಾಟಕಕಾರರಾಗುತ್ತಾರೆ.

ಕಾಡುಕುದುರೆಯ ಪಾತ್ರಪೋಷಣೆ ಸತ್ವಯುಕ್ತವಾಗಿದೆ. ಇಲ್ಲಿನ ಎಲ್ಲ ಪಾತ್ರಗಳಿಗೂ ತಮ್ಮ ತಮ್ಮ ಮಿತಿಯ ಅರಿವಿದೆ. ನಾಟಕದ ಕಕ್ಷೆಯಿಂದ ಹೊರನಿಲ್ಲುವ ಯಾವ ಪಾತ್ರವೂ ಇಲ್ಲಿಲ್ಲ. ಹುಲಿಗೊಂಡ ಈ ನಾಟಕದ ನಾಯಕನಾದರೂ ಅವನು ರಂಗದ ಮೇಲೆ ಕಾಣಿಸಿಕೊಳ್ಳುವುದು ಮತ್ತು ಮಾತಾನಡುವುದು ತೀರಾ ಕಡಿಮೆ. ಚಂಪಿ ಎದುರಾದಾಗ ಮಾತ್ರ ಅವನಿಗೆ ಬಿಚ್ಚಿಕೊಳ್ಳುವ ತವಕವಿದೆ. ಹತ್ತು ಮಾತಾಡುವ ಕಡೆ ಅವನು ಒಂದೇ ಮಾತಾಡುತ್ತಾನೆ. ಆ ಮಾತುಗಳಲ್ಲೂ ವ್ಯವಸ್ಥೆಯ ಕ್ರೌರ‍್ಯದ ಬಗೆಗಿನ ನೋವು, ಅದರ ಹಿಂಸೆಯ ವಿರುದ್ಧ ಸೆಟೆಯುವ ರೋಷ, ಅದರಿಂದ ಬಿಡುಗಡೆ ಹೊಂದಬೇಕೆನ್ನುವ ಕಾತರ ಮಾತ್ರ ವ್ಯಕ್ತವಾಗುತ್ತದೆ. ಅವನುರಂಗದ ಮೇಲೆ ಕಾಣಿಸಿಕೊಳ್ಳುವುದು ಅಪರೂಪವಾದರೂ ಅವನ ವ್ಯಕ್ತಿತ್ವದ ನೆರಳು, ಅವನ ಕ್ರಿಯೆಯ ಪರಿಣಾಮ ಉಳಿದ ಪಾತ್ರ-ಪ್ರಸಂಗಗಳ ಮೇಲೆ ಕವಿದುಕೊಂಡಿರುವುದನ್ನು ಗುರುತಿಸಬಹುದು. ವ್ಯವಸ್ಥೆಯ ಎಲ್ಲ ಕ್ರೌರ್ಯಗಳನ್ನೂ ಜೀವಂತವಾಗಿ ಮೈಗೂಡಿಸಿಕೊಂಡ ಪಾತ್ರ ಗೌಡ್ತಿಯದು, ಬೇರೆಯವರ ಹಿತವಾದವನ್ನು ಕೇಳದ, ತಾನು ಹೇಳಿದ್ದೇ ಸರಿ ಎನ್ನುವ, ಅದು ನಡೆದೇ ತೀರಬೇಕೆನ್ನುವ ಧಾರ್ಷ್ಟ್ಯದವಳು ಗೌಡ್ತಿ. ಮಾನವೀಯ ಮೌಲ್ಯಗಳಿಗೆ ಅವಳಲ್ಲಿ ಬೆಲೆಯಿಲ್ಲ. ನಾಟಕದುದ್ದಕ್ಕೂ ಕಾಣಿಸಿಕೊಂಡು ತನ್ನ ಸಹೃದಯತೆಯಿಂದಾಗಿ ಎಲ್ಲರ ಅನುಕಂಪವನ್ನೂ ಗಳಿಸಿಕೊಳ್ಳುವ ದುರ್ಗಿ ಮಾನವೀಯ ಗುಣಗಳ ಸಾಕಾರಮೂರ್ತಿ. ಒಂದು ಮನೆತನದ, ಒಂದು ಅವಧಿಯ ಇತಿಹಾಸಕ್ಕೆ ಆಕೆ ಜೀವಂತ ಸಾಕ್ಷಿ. ಅನುಭವ ಕಲಿಸಿದ ಪಾಠದಿಂದ ಅವಳಿಗೆ ಎಲ್ಲರ ಅಂತರಂಗವನ್ನೂ ಹೊಕ್ಕು ನೋಡುವ ಸಾಮರ್ಥ್ಯವಿದೆ. ತಾನು ಆ ಮನೆಯ ಅವಿಭಾಜ್ಯ ಅಂಗವೆಂಬ ಭಾವನೆ ಅವಳಲ್ಲಿ ಬೇರೂರಿದೆ. ಸದಾ ರೇಜಿಗೆಯಿಂದಲೇ ತುಂಬಿಕೊಂಡ ಆ ಸಂಸಾರವೃಕ್ಷದಲ್ಲಿ, ಹೂವು, ಮಿಡಿ, ಹಣ್ಣುಗಳನ್ನು ಕಾಣಬೇಕೆನ್ನುವ ಕನಸಿದೆ. ಹುಲಿಗೊಂಡ, ಚಂಪಿ, ಶೀಲಕ್ಕ-ಇವರ ವರ್ತನೆಯಿಂದ ಮನೆತನದ ಗೌರವ ಮಣ್ಣುಪಾಲಾಗುತ್ತಿದೆ, ಅದು ಹಾಳಾಗದಂತೆ, ನಗೆಪಾಟಲಿಗೀಡಾಗದಂತೆ ಮಾಡಬೇಕೆನ್ನುವ ಹಂಬಲ ಅವಳಿಗಿದೆ. ಆದರೆ ಪರಿಸ್ಥಿತಿ ಕೈಮೀರಿ ಹೋದಾಗ ಅವಳು ದಿಕ್ಕು ತಪ್ಪಿದಂತಾಗಿ ಎಲ್ಲ ದುರಂತಗಳ ಮೌನ ಪ್ರೇಕ್ಷಕಗಳಾಗುತ್ತಾಳೆ. ನಾಟಕದ ಆರಂಭದ ದೃಶ್ಯದಲ್ಲಿ ಅವಳು ಕೊಮಾಲಿಗೆ ಹೇಳುವ ಮುಗಿಯದ ಕಥೆ ದುರ್ಗಿಯ ಮಡುಗಟ್ಟಿದ ನೋವು ಮತ್ತು ಸದ್ಯದ ಪರಿಸ್ಥಿತಿಯ ಸ್ಪಷ್ಟ ಚಿತ್ರವೊಂದನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಕಥಾ ನಿರೂಪಣೆಯ ಭಾಗವಷ್ಟೇ ಒಂದು ಜನಪದ ಶೋಕಕಾವ್ಯದ ತುಂಡರಿಸಿದ ಭಾಗದಂತೆ ಭಾಸವಾಗುತ್ತದೆ. ಕರುಳ ಹಂಚಿಕೊಂಡವರಲ್ಲಿ ಹೊಗೆಯಾಡುವ ದ್ವೇಷಾಸೂಯೆಗಳು ಸೂಕ್ಷ್ಮತೆಯಿಂದ ಹೇಗೆ ತೀವ್ರಗೊಳ್ಳುತ್ತಾ ಸಾಗುತ್ತವೆನ್ನುವುದಕ್ಕೆ ಪಾರೋತಿ, ಶೀಲಕ್ಕ, ಚಂಪಿಯರ ಪಾತ್ರಗಳನ್ನು ಪರಿಶೀಲಿಸಬಹುದು. ಈ ಮೂವರನ್ನು ಪಾರೋತಿ ಮಾತ್ರ ಅಪ್ಪನಿಗೆ ಹುಟ್ಟಿದವಳು. ಅವಳನ್ನು ಮದುವೆಯಾದವರಿಗೆ ಮಾತ್ರ ಆಸ್ತಿ, ಗೌಡಿಕೆ ದೊರೆಯುತ್ತದೆ. ಈ ಹಮ್ಮು ಪಾರ್ವತಿಯಲ್ಲಿದೆ. ಅವಳಿಗೆ ಗಂಡಸನ್ನು ಕೆರಳಿಸುವಂಥ ರೂಪವಿಲ್ಲ. ಜೊತೆಗೆ ಚಿಕ್ಕಂದಿನಿಂದಲೇ ಎಡೆಬಿಡದೆ ಕಾಡುವ ರೋಗ ಬೇರೆ, ಹಾಗಾಗಿ ತನ್ನ ಗಂಡ ಇನ್ನೊಬ್ಬರ ವಶವಾದಾನು ಎಂದು ಸದಾ ಗುಮಾನಿಸುವ ಸ್ವಭಾವ. ಚಂಪಿ ಈ ನಾಟಕದ ನಾಯಕಿ. ಹುಲಿಗೊಂಡನನ್ನು ಒಲಿದವಳು, ತನ್ನ ಹೆಣ್ಣುತನದಿಂದ ಹುಲಿಗೊಂಡನನ್ನು ಗೆದ್ದವಳು. ಅಂತೆಯೇ ಅವನನ್ನು ಪಡೆಯುವುದು ತನ್ನ ಹಕ್ಕೆಂದು ಭಾವಿಸಿದವಳು. ಶೀಲಕ್ಕನದು ಒಂದು ತೆರನಾದ ವಿಚಿತ್ರ ಮನಸ್ಥಿತಿ. ಅಕ್ಕನ ಗಂಡನಲ್ಲಿ ಮೋಹವಿದೆ. ತನ್ನ ರೂಪವಂತ ತಂಗಿ ಅವನೊಡನಿರಿಸಿಕೊಂಡಿರುವ ಸಂಬಂಧದ ಬಗೆಗೆ ಅಸೂಯೆಯಿದೆ. ಈ ಮೋಹ-ಅಸೂಯೆಗಳ ದಳ್ಳುರಿಯಲ್ಲಿ ಬೆಂದ ಅವಳು ಅಕ್ಕತಂಗಿಯರ ಮೇಲೆ ರೋಷ ಕಾರುವ ಸ್ಥಿತಿಗೆ ತಲುಪುತ್ತಾಳೆ. ಕೊಮಾಲಿಯದು ಬದುಕಿನ ಜೀವಂತಿಕೆಗೆ ಸಾಕ್ಷಿಯಾಗಿ ನಿಲ್ಲುವ ಪಾತ್ರ. ಅವಳಿಗೆ ಬೇಕಾಗಿರುವುದು ಬದುಕಿನ ಸುಖ. ಅದನ್ನು ದೊರಕಿಸಿಕೊಳ್ಳುವುದಕ್ಕಾಗಿ ಅವಳು ಯಾವುದೇ ಬಗೆಯ ಸಾಹಸಕ್ಕಾದರೂ ಕೈ ಹಾಕಬಲ್ಲಳು. ಸಾಮಾಜಿಕ ಕಟ್ಟುಪಾಡುಗಳನ್ನು, ವ್ಯವಸ್ಥೆಯ ಅಸಂಗತೆಯನ್ನು ಮೀರುವ ಅವಳ ಕೆಚ್ಚ ನಮಗೆ ಸಾಹಸವಾಗಿ ತೋರಬಹುದಾದರೂ ಅವಳಿಗದು ನಿಜವಾದ ಬದುಕಿನತ್ತ ಚಲಿಸುವ ಸಹಜ ಕ್ರಿಯೆ ಮಾತ್ರ. ತಾನು ವಿಧ್ಯುಕ್ತವಾಗಿ ತಾಳಿ ಕಟ್ಟಿದವನೊಬ್ಬನಿಗೆ ಬಸುರಾಗಿದ್ದೇನೆ, ಸಮಾಜ ವಿಧಿಸಿರುವ ನೈತಿಕ ನಿಯಮಗಳನ್ನು ಮೀರಿದ್ದೇನೆ. ಊರಿನಿಂದ ಬಹಿಷ್ಕೃತಳಾಗಿದ್ದೇನೆ, ಬಂಧುಬಳಗದಿಂದ ದೂರವಾಗುತ್ತಿದ್ದೇನೆ-ಎನ್ನುವ ವಿಚಾರಗಳು ಅವಳನ್ನೆಲ್ಲಿಯೂ ಕಾಡುವುದಿಲ್ಲ. ಹಣ, ಅಧಿಕಾರ, ಪ್ರತಿಷ್ಠೆಗಳ ಮರೆಯಲ್ಲಿ ಸುಖ, ಸಂತೃಪ್ತಿಗಳಿಂದ ವಂಚಿತರಾಗಿ ಎದೆಯ ಹುಣ್ಣನ್ನು ಸದಾ ಕಾಪಾಡಿಕೊಳ್ಳುವವರನ್ನು ಆಕೆ ತುಚ್ಛೀಕರಿಸುತ್ತಾಳೆ. ಹೀಗೆ ಉಳಿದೆಲ್ಲರ ವ್ಯಕ್ತಿತ್ವಶೋಧನೆಗೆ ಪ್ರೇರಣೆಯಾಗುವ ಕೊಮಾಲಿಯ ಪಾತ್ರ ವಿಶಿಷ್ಟ ಬಗೆಯದಾಗಿದೆ.

ಸ್ವಚ್ಛಂದತೆಯ ಸಂಕೇತವಾಗಿ ’ಕಾಡು ಕುದುರೆ’ಯ ವ್ಯಾಪ್ತಿಯನ್ನು ಮತ್ತಷ್ಟು ದೂರ ಕೊಂಡೊಯ್ಯಬಹುದು. ದುರ್ಗಿಯೊಬ್ಬಳ ಹೊರತಾಗಿ ಈ ನಾಟಕದಲ್ಲಿ ಕಾಣಿಸಿಕೊಳ್ಳುವ ಎಲ್ಲ ಪ್ರಧಾನ ಪಾತ್ರಗಳೂ ಕಾಡುಕುದರೆಗಳೇ. ಅವರೆಲ್ಲರಿಗೂ ಕ್ಷಣ ಚಿತ್ತ. ಕ್ಷಣ ಪಿತ್ಥ. ಸ್ವಲ್ಪ ವ್ಯತ್ಯಾಸಗೊಂಡರೂ ಹುಚ್ಚು ಕೆರಳಿದವರಂತೆ ಒಬ್ಬರನ್ನೊಬ್ಬರು ಮಾತಿನ ಮೊನೆಯಿಂದ ಚುಚ್ಚುತ್ತಾರೆ, ಜಗಳವಾಡುತ್ತಾರೆ, ಶಾಪ ಹಾಕುತ್ತಾರೆ, ದ್ವೇಷ ಸಾಧಿಸುತ್ತಾರೆ. ಒಬ್ಬೊಬ್ಬರ ಹೃದಯವೂ ಒಂದೊಂದು ಅಗ್ನಿಪರ್ವತ. ಉದ್ರಿಕ್ತ ಕ್ಷಣದಲ್ಲಿ ವಿವೇಕ ಕಳೆದುಕೊಂಡು ಒಂದೇ ಕುಟುಂಬದಲ್ಲಿದ್ದೂ ಪರಸ್ಪರರ ಎದೆಯಲ್ಲಿ ಗಾಯಮಾಡಿ ಹಿಂಸಿಸುತ್ತಾರೆ. ಇಡೀ ಮನೆಯಲ್ಲಿ ಎಂಥ ಹಿಂಸ್ರ ವಾತಾವರಣವುಂಟಾಗುತ್ತದೆಂದರೆ ಒಬ್ಬೊಬ್ಬರೂ ತಮ್ಮ ತಮ್ಮ ಗಾಯದ ಮೇಲೆ ಕೈಯಿಟ್ಟುಕೊಂಡು ಇನ್ನೊಬ್ಬರು ಬಂದರೆ ಸಾಕು ಅವರಿಗೆ ತಾವೇ ಮೊದಲು ಚೂರಿ ಹಾಕಿ ತಮ್ಮನ್ನು ರಕ್ಷಿಸಿಕೊಳ್ಳಲು ಹೊಂಚುತ್ತಾರೆ. ಆದ್ದರಿಂದಲೇ ಇದು ಕಾಡುಕುದುರೆ. ಕಾಡುಕುದುರೆಯ ಸಾಂಕೇತಿಕತೆ ಇಡೀ ಮನೆಯಲ್ಲಿ ಎಂಥ ಹಿಂಸ್ರ ವಾತಾವರಣವುಂಟಾಗುತ್ತದೆಂದರೆ ಒಬ್ಬೊಬ್ಬರೂ ತಮ್ಮತಮ್ಮ ಗಾಯದ ಮೇಲೆ ಕೈಇಟ್ಟುಕೊಂಡು ಇನ್ನೊಬ್ಬರು ಬಂದರೆ ಸಾಕು ಅವರಿಗೆ ತಾವೇ ಮೊದಲು ಚೂರಿ ಹಾಕಿ ತಮ್ಮನ್ನು ರಕ್ಷಿಸಿಕೊಳ್ಳಲು ಹೊಂಚುತ್ತಾರೆ. ಆದ್ದರಿಂದಲೇ ಇದು ಕಾಡುಕುದುರೆ. ಕಾಡುಕುದುರೆಯ ಸಾಂಕೇತಿಕತೆ ಇಡೀ ವಾತಾವರಣವನ್ನು ಉದ್ರೇಕಿಸುವುದರ ಜೊತೆಗೆ ಪ್ರತಿಯೊಬ್ಬರನ್ನೂ ಆವರಿಸಿ ವಿಜೃಂಭಿಸುತ್ತದೆ. ಸಿಕ್ಕದ ಹೆಣ್ಣಿಗಾಗಿ ಹಲಬುತ್ತಾ ವ್ಯವಸ್ಥೆಯ ವಿರುದ್ಧ ಸಿಡೆದಿದ್ದು ಹುಲಿಗೊಂಡ ಕಾಡುಕುದುರೆಯಾಗುತ್ತಾನೆ. ತನ್ನ ಪಾಲಿನ ಗಂಡು ಅನ್ಯಾಯವಾಗಿ ಅಕ್ಕನ ಗಂಡನಾದುದನ್ನು ನೋಡಿ ಸಹಿಸಲಾರದೆ ಸಹಿಸುತ್ತ, ವ್ಯವಸ್ಥೆಯ ನೈತಿಕತೆಯನ್ನು ಮೀರುವ ಚಂಪಿ ಕಾಡುಕುದುರೆಯಾಗುತ್ತಾಳೆ. ದಕ್ಕದ ಗಂಡನಿಗಾಗಿ ಪಾರೋತಿ, ಮದುವೆಯ ಭಾಗ್ಯವಿಲ್ಲದೆ ಸಿಕ್ಕ ಅವಕಾಶದಲ್ಲೇ ಸುಖವನ್ನು ದೋಚಬೇಕೆಂದ ಶೀಲಕ್ಕ, ಬಂದೂಕಿನ ಬಲವಿದ್ದೂ ತನ್ನ ನೆರಳಿನಲ್ಲೇ ತಾನು ಕಷ್ಟಪಟ್ಟು ಕಟ್ಟಿದ ವ್ಯವಸ್ಥೆ ಕುಸಿಯುತ್ತಿರುವುದನ್ನು ಕಂಡ ಗೌಡ್ತಿ, ನೈತಿಕತೆಯ ಹಂಗಿಲ್ಲದ ಕೊಮಾಲಿ-ಇವರೆಲ್ಲರೂ ಕಾಡುಕುದುರೆಗಳಾಗುತ್ತಾರೆ.

’ಕಾಡುಕುದುರೆ’ ಯಲ್ಲಿ ಪಾಪದ ಜ್ವಾಲೆ ಒಂದು ಸಂಸಾರವನ್ನು ಹಸಿಹಸಿಯಾಗಿಯೇ ದಹಿಸುವ ರೀತಿ ಮಾತ್ರ ಭೀತಿ-ಕರುಣೆಗಳನ್ನು ಒಟ್ಟಿಗೇ ಉಂಟುಮಾಡುವಂಥದ್ದು. ಸ್ವಚ್ಛಂದ ಬದುಕಿನ ಕನಸುಗಾರರಾದ ಹುಲಿಗೊಂಡ, ಚಂಪಿ, ಕೊಮಾಲಿಯವರ ಬಯಕೆ ಕಾಮಪ್ರೇರಿತವಾದುದಾದರೂ ಕಾಮದ ಹಿನ್ನೆಲೆಯಲ್ಲೇ ಅವರೆಲ್ಲರ ಕನಸುಗಳಿಗೆ, ಮಾತುಗಳಿಗೆ, ಚಟುವಟಿಕೆಗಳಿಗೆ ಅರ್ಥವಿದೆ. ಅವರಿಗೆ ತಾನು ಮಾಡುವುದೆಲ್ಲ ಸರಿ, ಬೇರೆಯವರು ಮಾಡುವುದೆಲ್ಲ ತಪ್ಪಾಗಿ ತೋರುತ್ತದೆ. ತಮ್ಮ ಮಾತುಗಳಿಗೆ ಅಡ್ಡಿಯಾದವರನ್ನು, ತಮ್ಮ ಚಟುವಟಿಕೆಗಳಿಗೆ ತಡೆಯೊಡ್ಡಿದವನ್ನು ಸಿಗಿದು ತೋರಣ ಕಟ್ಟುವಷ್ಟು ರೋಷ ಅವರಿಗೆ ಹೀಗೆ ಸುಂದರ ಕನಸು ಮತ್ತು ಅಸಂಗತ ಬದುಕಿನ ಸಂಕೀರ್ಣ ಸ್ಥಿತಿಯನ್ನು ಅನುಭವಪೂರ್ಣ ವಾಗಿಸುವಲ್ಲಿ ’ಕಾಡುಕುದುರೆ’ ಯಶಸ್ವಿಯಾಗುತ್ತದೆ.

’ಕಾಡುಕುದುರೆ’ ಲೋರ್ಕಾನ ’ದಿ ಹೌಸ್ ಆಫ್ ಬರ್ನಾಡ್ ಆಲ್ಬಾ’ದಿಂದ ಪ್ರೇರಿತವಾಗಿದ್ದರೂ ಅದು ಯಾವುದೇ ದೃಷ್ಟಿಯಿಂದಲೂ ಮೂಲಕ್ಕೆ ಋಣಿಯಾಗುವ ಅಪಾಯದಿಂದ ಹೊರತಾಗಿದೆ. ಈಗಾಗಲೇ ಚಲನಚಿತ್ರವಾಗಿಯೂ ಕಾಣಿಸಿಕೊಂಡಿರುವ ’ಕಾಡುಕುದುರೆ’ ಸದಭಿರುಚಿಯ ಚಿತ್ರವೆನ್ನುವ ಖ್ಯಾತಿಗೆ ಪಾತ್ರವಾಗಿದೆ. ಆದರೆ ಕಂಬಾರರು ಚಿತ್ರಕ್ಕಿಂತ ಹೆಚ್ಚಾಗಿ ನಾಟಕದ ಬಗೆಗೆ ಅಪಾರ ಭರವಸೆ ಮತ್ತು ವಿಶ್ವಾಸಗಳನ್ನಿರಿಸಿಕೊಂಡಿದ್ದಾರೆ. ಜಾನಪದ ಸೊಗಡು, ಹಳ್ಳಿಯ ಉಲ್ಲಾಸಕರ ಪ್ರೇಮ, ವಿರಸ, ನೋವು, ಸಿಟ್ಟು, ಸಂತೋಷ ಎಲ್ಲವೂ ಇಲ್ಲಿ ಅಚ್ಚುಕಟ್ಟಾಗಿ ಸೇರ್ಪಡೆಯಾಗಿದೆ. ಕಂಬಾರರ ಎಲ್ಲ ನಾಟಕಗಳಲ್ಲೂ ಕಾಣುವ ಜನಪದ ಜೀವನದ ಸಹಜ ಚಿತ್ರಣ, ಖುಷಿ ಕೊಡುತ್ತಲೇ ಮರ್ಮಕ್ಕೆ ತಿವಿಯುವ ಚುರುಕು ಸಂಭಾಷಣೆ, ಲಯ ಹಿಡಿದರೆ ಮೆಲಕು ಹಾಕಬಹುದಾದ ಹಾಡು ಇವೆ. ಇವೆಲ್ಲಕ್ಕೂ ಮಿಗಿಲಾಗಿ ವಸ್ತುವಿನ ಕೇಂದ್ರ ತನ್ನಲ್ಲಿ ಎಲ್ಲರನ್ನೂಲೀನವಾಗಿಸಿಕೊಳ್ಳುವಂಥ ತಾದಾತ್ಮ್ಯದ ಅನುಭವವನ್ನು ಕೊಡುತ್ತದೆ. ಈ ಎಲ್ಲ ವಿಚಾರಗಳ ನೆರವಿನಿಂದ ’ಕಾಡುಕುದುರೆ’ಯನ್ನು ’ತುಘಲಕ್’ ನಂತರದ ಉತ್ತಮ ನಾಟಕವೆಂದು ಭಾವಿಸಬಹುದಾಗಿದೆ. ವಸ್ತು ಮತ್ತು ನಾಟಕದ ಚಲನೆಗೆ ಅನುಗುಣವಾಗಿ ’ಕಾಡುಕುದುರೆ’ಯ ರಂಗವಿನ್ಯಾಸ ಕೂಡ ಹೊಸಬಗೆಯದಾಗಿದೆ. ಮನೆಯ ಒಟ್ಟು ಏಳು ಭಾಗಗಳಲ್ಲಿ ಕ್ರಿಯೆ ನಡೆದು, ಯಾವುದಾದರೊಂದು ಭಾಗದಲ್ಲಿನ ಕ್ರಿಯೆ ಉಳಿದೆಲ್ಲ ಕಡೆಗೆ ಪ್ರತಿಕ್ರಿಯೆ ಹುಟ್ಟಿಸುತ್ತದೆ. ಇದು ಕಂಬಾರರ ಪ್ರಯೋಗಶೀಲತೆಗೆ, ತಾಂತ್ರಿಕ ಎಚ್ಚರಕ್ಕೆ, ಹೊಸದಾದ ಅವರ ಅರ್ಥಪೂರ್ಣವಾದುದರ ಹುಡುಕಾಟಕ್ಕೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ಮಹತ್ವಾಕಾಂಕ್ಷೆಯಿಂದ ಕನ್ನಡದಲ್ಲಿ ನಾಟಕ ಬರೆಯುತ್ತಿರುವವರಲ್ಲಿ ಪ್ರಮುಖರಾದ ಚಂದ್ರಶೇಖರ ಕಂಬಾರರ ’ಕಾಡುಕುದುರೆ’ ನಮ್ಮ ಆಧುನಿಕ ರಂಗಭೂಮಿಗೆ ಒಳ್ಳೆಯ ಕಾಣಿಕೆಯಾಗುತ್ತದೆಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ಬೈರಮಂಗಲ ರಾಮೇಗೌಡ