(ದುರ್ಗಿ ಕಾಳು ಹಸನು ಮಾಡುತ್ತಿದ್ದಾಳೆ. ಪಾರೋತಿ ಮುಖಕ್ಕೆ ದಟ್ಟವಾಗಿ ಪೌಡರ್ ಬಳಿದುಕೊಂಡು ತಲೆಬಾಚಿಕೊಳ್ಳುತ್ತ ಬರುತ್ತಾಳೆ.)

ದುರ್ಗಿ : ಮೊದಲs ಬಿಳಿಚಿಕೊಂಡೀದಿ. ಮತ್ತs ಬೂದಿಯಂಥಾ ಪಾವುಡರ ಯಾಕ ಬಡಕೊಮಡೇ ನಮ್ಮವ್ವಾ?

ಪಾರೋತಿ : ಶಾರದಾಗ ಅದೆಂಥಾದೋ ಕೆಂಪ ಪಾವುಡರ್ ಸಿಗತೈತಂತ, ಇವ ಗೋಕಾಂವಿಗಿ ಹೊಂಟ ನಿಂತಾಗೆಲ್ಲಾ ತಗೊಂಬಾ ಅಂತ ಎಷ್ಟ ಸಲ ಹೇಳೇನಿ, -ಒಂದ ಸರ್ತೀನೂ ತರಲಿಲ್ಲ. ಅದನ್ನ ಹಚ್ಚಿಕೊಂಡರ ಗೊಂಬೀ ಹಾಂಗ ಕಾಣಸ್ತಾರಂತ ಹೆಂಗಸರು.

ದುರ್ಗಿ : ಅದೆಲ್ಲಾ ನಿಮಗ್ಯಾಕ್ರೀಯೆವ್ವಾ? ಹೊಟ್ಟ್ಯಾಗ ಮಗರಾಮ ಮೂಡಲಿ, ನಿನಗs ಹೆಂಗ ಬಣ್ಣ ಬರತೈತಿ, ನೋಡೀಯಂತ.

ಪಾರೋತಿ : ಈ ರೋಗ ನನ್ನ ಬಿಡಬೇಕಲ್ಲ. ಔಷಧ ಕುಡದ ಕುಡದ ನನ್ನ ನಾಲಿಗ್ಯಾಗಿನ ರುಚೀನs ಹೋಗೇತಿ. ಇವಗೊಂದೀಟಾದರೂ ಕಾಳಜಿ ಐತೇನ, ಹೇಳು. ಹಗಲಿ ರಾತ್ರಿ ಆ ಕುದರಿ ಮೈ ತಿಕ್ಕತಿರತಾನ. ಅವ್ವಗ ಇಂದ ಹೇಳೇಬಿಡತೇನಿ, ಆ ಕುದರೀ ಈ ವಾರ ಮಾರಾಕs ಬೇಕಂತ.

ದುರ್ಗಿ : ಊರ ಗೌಡಂದಮ್ಯಾಲ ಹತ್ತಾಕೊಂದ ಕುದರಿ ಬ್ಯಾಡಾ?

ಪಾರೋತಿ : ಬೇಕಾದರ ಹಜಾರ ಕೊಟ್ಟ ಬ್ಯಾರೇ ಕುದರೀ ಕೊಳ್ಳಲೇ, ಆದರ ಇದು ಬ್ಯಾಡಾ. ಇದರ ಕರೀಕಲ್ಲಿನಂಥಾ ಮೈಯಿ, ಹೇಸಿ ಕಣ್ಣಾ, ಪಿಸರ ಸೋರೋ ಬಾಯೀ, -ಆವಯ್ಯಾ, ಅಧೆಂಗ ಅದರ ಮ್ಯಾಲ ಹತ್ತಿ ಹೊಡೀತಾನೊ! ನೆನಪಾದರ ಸಾಕು, ಉಂಡದ್ದ ತಿರಿಗಿ ಬಾಯಿಗಿ ಬರತೈತಿ.

ದುರ್ಗಿ : ಅಂಧಾಂಗ ಔಷಧ ತಗೊಂಡಿ?

ಪಾರೋತಿ : ಮರವಾಗಲಿ ತಡೀಯೇ ಹಡದವ್ವಾ!

(ಶೀಲಕ್ಕ ಹೊರಗಿನಿಂದ ಕಬ್ಬು ತಿನ್ನುತ್ತ ಬರುವಳು.)

ಪಾರೋತಿ : ನಿನಗೆ ಕಬ್ಬೆಲ್ಲಿ ಸಿಕ್ಕಿತ?

ಶೀಲಕ್ಕ : ಮಾವ ಕೊಟ್ಟ.

ಪಾರೋತಿ : ನನಗಷ್ಟ ಕೊಡು.

ಶೀಲಕ್ಕ : ನಿನ್ನ ಮೈಗಿ ಕಬ್ಬ ಒಳ್ಳೇದಲ್ಲಂತ ಡಾಕ್ಟರ ಹೇಳಿಲ್ಲಾ?

ಪಾರೋತಿ : ನಿನಗೂ ಕಬ್ಬ ತಂದ ತಂದ ಕೊಡಾಕ ಹತ್ತಿದನs ಅವ? ಅವ್ವ ಬರಲಿ

(ಚಂಪಿ ತನ್ನ ರೂಮಿನಿಂದ ಹೊರಬಂದು)

ಚಂಪಿ : ಶೀಲೀ, ನನಗಷ್ಟ ಕಬ್ಬ ಕೊಡ.

(ಶೀಲಿ ಒಂದು ಗಣಿಕೆ ಮುರಿದು ಚಂಪಿತ್ತ ಎಸೆಯುವಳು. ಇಬ್ಬರೂ ತಿನ್ನ ತೊಡಗುವರು. ಪಾರೋತಿ ಕುದಿಯುವಳು.)

ಪಾರೋತಿ : ತಿಂತಾವ ಹೆಂಗ ನೋಡು, ಕಸಾಪಸಾ ಕಸಪಸಾ ಅಂತ.

ಚಂಪಿ : ನೋಡಾಕ ಆಗದಿದ್ದರ ಎದ್ದ ಒಳಗ ಹೋಗು. ಇಲ್ಲಾ ಮುಚ್ಚಿಕೊಂಡ ಬಿದ್ದಿರು.

ಪಾರೋತಿ : ಬಾಯ್ಮುಚ್ಚೆ ಭೋಸಡೆ. ನನ್ನ ಜೋಡೀ ನಿಂದೇನs ಸಲಿಗಿ?

ದುರ್ಗಿ : ಬಿಡs ಪಾರೋತಿ, ಕಬ್ಬ ತಿಂದರೇನಾತು?

ಪಾರೋತಿ : ಮತ್ತs? ಮುಚ್ಚಿಕೊಂಡ ಬಿದ್ದಿರು ಅಂತಾಳ ನೋಡಲ್ಲ.

ಚಂಪಿ : ಮಾತಾಡ್ತ ಮಾತಾಡ್ತ ಜೀವ ಹೋದೀತು ಅಂತ ಹೇಳಿದೆ, ಅಷ್ಟs.

ಪಾರೋತಿ : ಎಂದ ಸಾಯತೀನೋ ಅಂತ ಹಾದಿ ನೋಡಾಕ ಹತ್ತೀದಿ. ನಾ ಸತ್ತರೂ ನಿನಗ ಮಾವ ದಕ್ಕಾಣಿಲ್ಲ, ತಿಳಕೊ.

ಚಂಪಿ : ದಕ್ಕತಾನೋ ಇಲ್ಲೊ-ತಿಳಕೊಳ್ಳಾಕಾದರೂ ನೀ ಸಾಯಬೇಕಲ್ಲ!

ಪಾರೋತಿ : ಥೂ ಹೊಲ್ಯಾಗ ಹುಟ್ಟಿದ್ದs.

ದುರ್ಗಿ : ಒಂದs ಕರಳ ಹಂಚಿಕೊಂಡೀರಿ, ತಂಗೇರಿಗಿ ಹಿಂಗ ಅಂದರ ಹೆಂಗs ಪಾರೋತಿ?

ಪಾರೋತಿ : ಅನ್ನೋ ಹಾಂಗ ಮಾಡ್ತಾಳಲ್ಲ, ಅದ್ಹೇಳು.

ಚಂಪಿ : ಹೆಂಗೂ ಸಾಯ್ತೀಯಲ್ಲಾ ಅಂತ ನಂಬಿ ಸುಮ್ಕಿರತೀನಿ, ಇಲ್ಲದಿದ್ದರ….

ದುರ್ಗಿ : ಏನಂಬೊ ಮಾತs ಚಂಪಕ್ಕಾ?….

ಪಾರೋತಿ : ನೋಡ ದುರ್ಗೀ, ಹೆಂಗ ಮಾತಾಡತಾಳು? ಅವ್ವ ಬರಲಿ ಭೋಸಡೇ, ರಾತ್ರಿ ಕುಬಸದ ಗುಂಡೇ ಬಿಚ್ಚಿ ಬಿದ್ದಕೊಂಡಿರತೀ ಅಂತ ಹೇಳದಿದ್ದರ ಹೇಳು…

ಚಂಪಿ : ಬೇಕಂದರ ಬೆತ್ತಲೆ ಮಲಗತೇನs. ಕೇಳಾಕ ನೀ ಯಾರು?

ದುರ್ಗಿ : ಗಮ್ಮಾಗಿ ಕುಬಸದ ಗುಂಡೆ ಬಿಚ್ಚಿದರ ಏನಾತs ಪಾರೋತಿ?

ಪಾರೋತಿ : ಗಮ್ಮಾಗಿ ಬೀಳತಾಳೋ, ನನ್ನ ಗಂಡ ಬರಲೆಂತ ಬೀಳತಾಳೊ!

ಚಂಪಿ : ನನಗ ಮೈ ಐತಿ, ಮೈಗಿ ಮದಾ ಐತಿ, ಬಿದ್ದಿರತೇನs. ನಿನಗೇನೈತಿ? ಒಣಾ ಕಟಿಗೀ ಹಂತಾ ನಾಕ ಎಲುವ, ಹಾಳ ಬಾವೀ ಹಂತಾ ಎರಡ ಕಣ್ಣಾ!

ಪಾರೋತಿ : ಕೇಳದೇನs ದುರ್ಗಿ ಹೆಂಗ ಮಾತಾಡತಾಳು?

ದುರ್ಗಿ : ದಿನ ಬೆಳಗಾದರ ನಿಮ್ಮ ಜಗಳ ಕೇಳಿ ಕೇಳಿ ಸಾಕಾತs ಎವ್ವಾ! ಎಷ್ಟಂದರೂ ಅಕ್ಕ, ಒಂದೆರಡ ಮಾತ ಆಡಿರಬೇಕು. ಸೇರಿಗಿ ಸವ್ವಾ ಸೇರಂತ ನೀನೂ ಆಡೋದೆನಾ ಚಂಪಕ್ಕಾ?

ಚಂಪಿ : ದೈವಾಚಾರ ಮಾಡಾಕ ಈಕಿನ್ಯಾರ ಕರಸಿದರ? ಬಂದ್ಳು ತಂದೊಂದ ಸೋ ಸೇರಸಾಕ.

ಪಾರೋತಿ : ಮಾತಾಡ ಮಾತಾಡ. ದೇವರ ಚೆಲಿವಿಕಿ ಕೊಟ್ಟಾನ. ಸುದ್ದ ಮೂಗಿನಾಕಿ ಹೆಂಗ ಮಾತಾಡಿದರೂ ಚಂದs.

ಶೀಲಕ್ಕ : ಅಷ್ಟಾದರೂ ಇರಲಿ ಬಿಡಲ್ಲ, ನಿನ್ನ ಹಾಂಗ ನಮಗೇನು ಆಸ್ತಿ ಐತಿ?

ಪಾರೋತಿ : ನಮ್ಮಪ್ಪನ ಉತ್ತರಕ ಹುಟ್ಟೀನಿ. ಅದಕ್ಕ ನನಗೆ ಆಸ್ತಿ ಐತಿ. ಯಾರಿಗಿ ಹುಟ್ಟೀದೀರೋ ಹುಚ್ಚರಂಡೇರ್ಯಾ, ನಿಮಗೆಲ್ಲಿ ಆಸ್ತಿ ಬರಬೇಕು.

ದುರ್ಗಿ : ನಿನ್ನ ನಾಲಿಗಿ ಭಾಳ ಉದ್ದಾಯ್ತವಾ ಪಾರೋತಿ….

ಪಾರೋತಿ : ಅಂತೇನ್ಯಾಕ ಅಂತೇನ! ಅವ್ವ ಬರಲಿ, ಈಕಿ ಕುಬಸದ ಗುಂಡೆ ಬಿಚ್ಚಿ ಬಿದ್ದಕೊಂಡದ್ದ ಹೇಳಲಿಲ್ಲಂದರ ನಾ ಈಕೀ ಕುಬಸದ ಗಂಟಗಿ ಸಮ ಅಂತ ತಿಳಿ.

ಚಂಪಿ : ಹೇಳ ಹೋಗs. ನಿನಗ ಕ್ಷಯರೋಗ ಐತೆಂತ ಮಾವಗ ಹೇಳಲಿಲ್ಲಂದರ ನಾ ನಿನ್ನ ತಟ್ಲಿಗಿ ಸಮ ಅಂತ ತಿಳಿ.

ಶೀಲಕ್ಕ : ಆಸ್ತಿ ಇದ್ದರ ಎಂಥೆಂಥಾ ರೋಗ ಗುಣಾ ಆಗತಾವ ಬಿಡs ಚಂಪಿ.

ಪಾರೋತಿ : (ಶೀಲಕ್ಕನಿಗೆ) ಮತ್ತ ನೀ ಯಾರು? ಆಕೀ ಅಕ್ಕ!

(ಹೊರಗಿನಿಂದ ’ಬಾಪ್ಪ ಬಾ’ ಎನ್ನುತ್ತ ಗೌಡ್ತಿ ಒಳಗೆ ಬರುವಳು. ಇಷ್ಟೊತ್ತಿಗೆ ದುರ್ಗಿ ಧ್ಯಾನ ಕೇರಿ ಬುಟ್ಟಿ ತುಂಬಿದ್ದಾಳೆ. ಚಂಪಿ, ಶೀಲಕ್ಕ ತಂತಮ್ಮ ರೂಮುಗಳಲ್ಲಿ ಮರೆಯಾಗುವರು. ಹಿಂದಿನಿಂದ ಬೀಗರ ಕಡೆಯ ಆಳು ಬರುವನು.)

ಗೌಡ್ತಿ : ಬಾಪ್ಪ, ಬಾ. ಏ ದುರ್ಗೀ, ಬೀಗರ ಕಡೆಯವರು ಬಂದಾರ, ಏನಾರ ತಿನ್ನಾಕ ತಗೊಂಬಾ.

(ದುರ್ಗಿ ಒಳಗೆ ಹೋಗುವಳು)

ಕೂತುಕೋಳ್ಳಪಾ. ಬೀಗರೆಲ್ಲಾ ಆರಾಮದಾರ?

ಆಳು : ಹೂನ್ರಿ.

ಗೌಡ್ತಿ : ಬಾವೀದೇನೋ ತಕರಾರಿತ್ತಂತಲ್ಲ, ಬಗೀಹರೀತ?

ಆಳು : ಹೂನ್ರಿ.

ಗೌಡ್ತಿ : ಅದು ಊರಗೌಡರಾಗಿ ಸಣ್ಣ ಸಣ್ಣ ರೈತರಿಗೆಲ್ಲಾ ಅಂಜಿ ಕುಂತರ ಹೆಂಗ ಹೇಳು. ಗೌಡರಂದರ ಗೌಡರ‍್ಹಾಂಗಿರಬೇಕಪ, ಖರೆ ಅಂತಿ, ಸುಳ್ಳಂತಿ?

ಆಳು : ಹೂನ್ರಿ.

(ದುರ್ಗಿ ಬಂದು ಅವನ ಮುಂದೆ ತಿಂಡಿ ಇಡುವಳು. ಆಳು ಗಬ ಗಬ ತಿನ್ನ ತೊಡಗುವನು. ಗೌಡ್ತಿ ವೀಳ್ಯೆದೆಲೆ ಹಾಕಿಕೊಳ್ಳುತ್ತ)

ಗೌಡ್ತಿ : ಮತ್ತೇನಪಾ? ಬೀಗರು ಏನಾದರು ಸುದ್ದಿ ಹೇಳಿ, ಕಳಿಸ್ಯಾರೇನು?

ಆಳು : ಹೂನ್ರಿ.

ಗೌಡ್ತಿ : ಏನು?

ಆಳು : ವರ ಕನ್ಯಾನ ಒಪ್ಪಿಕೊಂಡಾನ್ರೀ,…. ಆದರ…

ಗೌಡ್ತಿ : ಏನಾದರ?

ಆಳು : ಅವರ ತಂದೀ ತಾಯೀನೂ ಒಪ್ಪಿಕೊಂಡಾರ‍್ರಿ. ಆದರ…

ಗೌಡ್ತಿ : ಹೌಂದ, ಮತ್ತೇನಾದರ…?

ಆಳು : ನಮಗೆಲ್ಲಾರಿಗೂ ಕನ್ಯಾ ಮನಸ್ಸಿಗೆ ಬಂದೈತ್ರಿ, ಆದರ…

ಗೌಡ್ತಿ : ಆದರ ಆದರ… ಅದೇನ ಹೇಳಬಾರದ?

ಆಳು : ಆದರ… ಹೆಹೆಹೆ… ಆ… ಈ…

(ಹುಲಿಗೊಂಡ ಹೊರಬಾಗಿಲ ಬಳಿ ನಿಂತು ಒಳಗಿನದನ್ನು ಕೇಳಿಸಿಕೊಳ್ಳುತ್ತಿದ್ದಾನೆ.)

ಗೌಡ್ತೀ : ಏಯ್! ಏನೊ ಆ ಈ ಆ ಈ ಅಂದರ? ಅದೇನ ಬೊಗಳಬಾರದ?

ಆಳು : ವರಾ ಒಪ್ಪ್ಯಾನ್ರಿ, ತಂದೀತಾಯೀ ಒಪ್ಪ್ಯಾರ‍್ರಿ, ನಾವೆಲ್ಲಾ ಒಪ್ಪೀವ್ರಿ, ಆದರ ಇಪ್ಪತ್ತೈದ ಸಾವಿರ ವರದಕ್ಷಿಣೆ ಕೇಳತಾರ‍್ರಿ.

ಗೌಡ್ತಿ : (ಪಿಚಕ್ಕನೆ ಉಗುಳಿ)

ಇಪ್ಪತ್ತೈದ ಸಾವಿರ ವರದಕ್ಷಿಣೆ? ಇಪ್ಪತ್ತೈದ ಸಾಕ? ಇನ್ನ ಹತ್ತ ಬೇಕ? ಏನಪಾ ಮುವತ್ತೈದ ಕೊಟ್ಟರ ಹೆಂಗ?

ಆಳು : ಹೋಗಿ ಹೇಳತೇನ್ರಿ.

ಗೌಡ್ತಿ : ಹೋಗ್ರೋ ಕಳ್ಳ ನನ ಮಕ್ಕಳ್ರಾ, ಅದೊಂದ ಮೂಗು, ಅದರಾಗ ಸೇರಿಸೋ ಬೆರಳು-ಎರಡ ಬಿಟ್ಟರ ಏನೈತೋ ಆ ವರನ ಹಂತ್ಯಾಕ? ಏನೋ ದೊಡ್ಡ ಮನಸ ಮಾಡಿ ಮಗಳ್ನ ಕೊಡೋಣಂದರ, ಅದೇನೋ ಅಂತಾರಲ್ಲ,-ಕರದ ಹೆಣ್ಣ ಕೊಟ್ಟರೆ ಅಳಿಯಾಗ ಮಲರೋಗ ಬಂತಂತ! ಏಯ್ ಹೋಗಿ ಹೇಳೊ, ಈ ಜಗತ್ತಿನಾಗ ವರs ನೀನೊಬ್ನs ಅಲ್ಲ. ತುಂಬ್ಯಾರಂತ ಹೇಳು. ಹೊರಬೀಳು.

(ಆಳು ಅವಸರದಿಂದ ಹೊರಡುವನು. ಗೌಡ್ತಿ ತನ್ನಪಾಡಿಗೆ ತಾನು ಮಾತಾಡುತ್ತಿದ್ದಾಳೆ. ಆಳು ಅವಸರದಿಂದ ಹೋಗುತ್ತಿದ್ದಾಗ ಹುಲಿಗೊಂಡ ಅವನನ್ನು ಹಿಡಿದು ಜೇಬಿನಿಂದ ಹಣ ತೆಗೆದು ಬಕ್ಷೀಸು ಕೊಟ್ಟು ಕಳಿಸುವನು. ಆಳು ಓಡುತ್ತಾನೆ. ಗೌಡ್ತೀಯ ಮಾತುಗಳಿಗೆ ಚಂಪಿ, ಶೀಲಿ, ಪಾರೋತಿ ಮೂವರೂ ತಂತಮ್ಮ ಕೋಣೆಗಳಲ್ಲಿ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ. ಚಂಪಿ ಖುಶಿಪಟ್ಟರೆ ಪಾರೋತಿ ತನ್ನ ಕೋಣೆಯಲ್ಲಿ ಆ ಕಡೆ ಈ ಕಡೆ ಸುತ್ತಾಡಿ ದಿಂಬು ಸೀರೆಗಳನ್ನೆಲ್ಲ ಚೆಲ್ಲಾಪಿಲ್ಲಿ ಎಸೆಯುತ್ತಾಳೆ.)

ಗೌಡ್ತಿ : ಮುನ್ನೂರ ಏಕರೆ ಜಮೀನಂತ ಇವಗ, ನಾ? ಸಾವಿರ ಎಕರೆ ಜಮೀನದಾರ‍್ತಿ, ನನಗೆಷ್ಟ ಕೊಬ್ಬ ಇರಬ್ಯಾಡ! ಹಲ್ಕಟ್ಟ ಭಾಡೇರ‍್ನ ತಂದು… ಯೋಳ್ಯೋಳ ವರ್ಸ ತಪಸ್ಸ ಮಾಡಿದರ ಇಂಥಾ ಹುಡಿಗಿ ಸಿಗತಿದ್ದಳs ಅವಗs? ನಶೀಬ ಬೇಕ ನಶೀಬ!

(ಪಾರೋತಿ ಹಣೆ ಹಣೆ ಚಚ್ಚಿಕೊಳ್ಳುತ್ತ ಹೊರಗೆ ಹೋಗುವಳು. ಗೌಡ್ತಿ ಕೋಪದಿಂದ ಇದ್ದವಳು ಈಗ ಎಚ್ಚತ್ತು ’ಪಾರೋತಿ, ಪಾರೋತೀ’, ಎನ್ನುತ್ತ ಬೆನ್ನು ಹತ್ತುತ್ತಾಳೆ. ಅಡಿಗೆ ಮನೆಯ್ಲಲಿದ್ದ ದುರ್ಗಿಯೂ ಅವಳ ಹಿಂದೆ ಹೋಗುತ್ತಾಳೆ. ಅವರು ಹೊರಗೆ ಹೋಗುವಾಗ ಅಲ್ಲೇ ಅಡಗಿ ನಿಂತಿದ್ದ ಹುಲಿಗೊಂಡ ಪಡಸಾಲೆಗೆ ಬರುತ್ತಾನೆ. ಚಂಪಿ ತನ್ನ ಕೋಣೆಯಿಂದ ಬರುತ್ತಾಳೆ. ಶೀಲಿ ತನ್ನಕೋಣೆಯಲ್ಲೇ ಇದ್ದು ಇವರ ಮಾತು ಕೇಳಿಸಿಕೊಳ್ಳುತ್ತಾಳೆ. ಚಂಪಿ ಬಂದೊಡನೆ ಹುಲಿಗೊಂಡ ಉತ್ಸಾಹದಿಂದ ಚಂಪಿಯ ಭುಜದ ಮೇಲೆ ಕೈಯಿಡುತ್ತ)

ಹುಲಿಗೊಂಡ : ಸುದ್ದಿ ತಿಳೀತ?

ಚಂಪಿ : ನನ್ನ ಮುಟ್ಟಬ್ಯಾಡ.

ಹುಲಿಗೊಂಡ : ನಿನ್ನ ಸಿಟ್ಟ ಇನ್ನೂ ಆರಿಲ್ಲ?

ಚಂಪಿ : ಅದು ಆರೋದೂ ಇಲ್ಲ.

ಹುಲಿಗೊಂಡ : ನನ್ನ ತಪ್ಪ ಮರೆಯೋದಿಲ್ಲ?

ಚಂಪಿ : ನಿನ್ನ ಹೆಂಡತಿ ಬರತಾಳ ಹೊಂಟ್ಹೋಗು.

ಹುಲಿಗೊಂಡ : ಇಂದ ರಾತ್ರಿ ಕುದರಿ ಕೊಟ್ಟಿಗ್ಗಿ ಬರತಿ?

ಚಂಪಿ : ಯಾಕ?

ಹುಲಿಗೊಂಡ : ಮಾತಾಡೋದೈತಿ.

ಚಂಪಿ :ಅದೇನ, ಇಲ್ಲೇ ಹೇಳು.

ಹುಲಿಗೊಂಡ : ನಿನ್ನ ಜೋಡಿ ಎರಡ ಮಾತಾಡೋದಕ್ಕೂ ನಾ ನಾಲಾಯಖ್ಖ ಅಂತೀಯೇನು?

ಚಂಪಿ :ನನ್ನ ಹಾಂಗ ನೋಡಬ್ಯಾಡ.

ಹುಲಿಗೊಂಡ : ಹಂಗಾದರ ಬರೋದಿಲ್ಲಾ?

ಚಂಪಿ : (ತುಸುಹೊತ್ತು ಅವನನ್ನೇ ನೋಡಿ)

ಬರತೀನಿ.

(ಶೀಲಿ ಈ ಮಾತು ಕೇಳಿಸಿಕೊಳ್ಳುತ್ತಿದ್ದಂತೆ, ಕತ್ತಲಾಗುತ್ತದೆ.)