(ಹೊರಬಾಗಿಲಲ್ಲಿ ಹಟದಿಂದ ಪಾರೋತಿ ಕೂತಿದ್ದಾಳೆ. ಹೊರಗೆ ಬರುತ್ತಿರುವವರನ್ನೇ ಕಾಯುತ್ತ ಶೀಲಕ್ಕ ತನ್ನ ರೂಮಿನ ಮುಂದಿನ ಅಟ್ಟದ ಮೇಲೆ ಅಡ್ಡಾಡುತ್ತಿದ್ದಾಳೆ. ಪಡಸಾಲೆಯಲ್ಲಿ ದುರ್ಗಿ ಪಾರೋತಿಯನ್ನು ಹ್ಯಾಗೆ ಸಮಾಧಾನ ಮಾಡಬೇಕೆಂದು ತೋಚದೆ ಗೊಂದಲದಲ್ಲಿದ್ದಾಳೆ.)

ದುರ್ಗಿ : ಒಳಗ ಬಾ ಪಾರೋತಿ…

ಪಾರೋತಿ : ನಾ ಬರೂದಿಲ್ಲ.

ದುರ್ಗಿ : ಚಂಪಿ ಬರಲಿ, ಬಂದ ಮ್ಯಾಲ ಕೇಳೂಣಂತ.

ಪಾರೋತಿ : ಆಕೆ ಬರೂತನಕ ನಾ ಇಲ್ಲೇ ಕೂರುವಾಕಿ.

ದುರ್ಗಿ : ಎಳೀ ಮಕ್ಕಳ್ಹಾಂಗ ಹಟ ಹಿಡೀಬ್ಯಾಡ. ಇಷ್ಟಾಗಿ ಶೀಲಕ್ಕ ಹೇಳಿದ್ದ ಖರೇ ಅಂತೇನು?

ಶೀಲಕ್ಕ : ನನಗ ಸುಳ್ಳೀ ಪಳ್ಳೀ ಅಂದರ ಸಿಟ್ಟ ಬರತೈತೇ ದುರ್ಗೀ.

ದುರ್ಗಿ : ನೀ ಬಿಡವ್ವಾ, ಚಾಡಿ ಹೇಳದಿದ್ದರ ಉಂಡ ಕೂಳ ಹೊಟ್ಟೇಗೇ ಹತ್ತೋದಿಲ್ಲ ನಿನಗ. ಚಾಡೀ ಹೇಳಾಕ ಏನಾರ ಸಿಕ್ಕೀತೋ ಇಲ್ಲೋ ಅಂತ ಹದ್ದಿನ್ಹಾಂಗ ಕಾಯತಿರತಿ. ಒಂದ  ಸಿಕ್ಕರ ಸಾಕು, ಒಂಬತ್ತ ಮಾಡಿ ಹೇಳ್ತಿ. ಚಂಪಕ್ಕನ ಕಂಡರ ಅರಗಳಿಗೆ ಸೇರಾಣಿಲ್ಲ; ವೈರೀನ ಕಂಢಾಂಗಾಡ್ತಿ. ನಿನಗ ಅಂಥಾದ್ದೇನ ಮಾಡ್ಯಾಳಾಕಿ?

ಶೀಲಕ್ಕ : ಒಡದ ಕುರುವಿನಂಥಾ ನಿನ್ನ ಬಾಯಿ ತಗೀಬ್ಯಾಡs! ಬೆಳೆದ ಹುಡಿಗಿ ಅಕ್ಕನ ಗಂಡನ ಜೋಡಿ ಕುದರೀ ಹತ್ತಿ ಓಡ್ಯಾಡಸ್ತಾಳಂದರ… ಇದ ಸಣ್ಣ ಮಾತ?

ದುರ್ಗಿ : ಸಣ್ಣ ಹುಡಿಗಿ, ಆಟಕ್ಕ ಹತ್ತಿ ಓಡ್ಯಾಡಿಸಿದರ ಏನಾಯ್ತು? ಯಾಕ, ಮೊನ್ನಿ ನೀ ಹತ್ತತ್ತೇನಂತ ಗಂಟ ಬಿದ್ದಿರಲಿಲ್ಲಾ? ಮಾವಗ?

ಶೀಲಕ್ಕ : ಅಂದರ ನಾ ಕುದರೀ ಹತ್ತಲಿಲ್ಲ.

ದುರ್ಗಿ : ಯಾಕಂದರ ಮಾವ ಹತ್ತಸಲಿಲ್ಲ.

ಪಾರೋತಿ : ಸರ್ಪ ಚಿನ್ನದ ಕೊಪ್ಪರಿಗಿ ಕಾದ್ಹಾಂಗ ನನ್ನ ಗಂಡನ್ನ ಕಾಯತಾ ಕುಂದರ ಬೇಕಾಗೇತ ದುರ್ಗಿ, ಏನ ಹೇಳಲಿ ನನ್ನ ಬಾಳುವೆ! ನಾ ಎಂದ ಸಾಯತೇನೋ, ಎಂದ ಕೊಪ್ಪರಿಗಿ ಸಿಕ್ಕೀತೋ ಅಂತ ಬೆನ್ನಿಗಿ ಬಿದ್ದವರೆಲ್ಲಾ ಕಾಯಾಕ ಹತ್ತ್ಯಾರ! ಈ ನನ್ನ ಸವತಿ ಶೀಲಿ ಏನ ಕಮ್ಮಿ?

ಶೀಲಕ್ಕ : ಉಪಕಾರ ಮಾಡೋ ದಿನ ಅಲ್ಲಿವು. ಏನೋ ಅಕ್ಕನ ಬಾಳುವೆ ಸುದ್ದಾಗಲೆಂತ ಹೇಳಿದರ ನನಗs ತಿರಿಗಿ ಬೀಳ್ತೀಯಲ್ಲs!

ಪಾರೋತಿ : ಮೆದ್ಯಾಗ ಹುಟ್ಟಿದ್ದುವೆಲ್ಲಾ ಕಸಬರಿಗೇ!

ದುರ್ಗಿ : ಆಯ್ತಲ್ಲ ಪಾರೋತಿ, ಇನ್ನ ಒಳಗ ಬಾ, ನಿಮ್ಮವ್ವ ಬಂದಮ್ಯಾಲ ಎಲ್ಲಾ ವಿಚಾರಿಸಿಕೊಳ್ತಾಳ!

ಪಾರೋತಿ : ನಾ ಬರಾಣಿಲ್ಲಂದರ…

ಶೀಲಕ್ಕ : ಚಂಪಿ ಬಂದ್ಲು!

(ಪಾರೋತಿ ಎದ್ದು ನಿಲ್ಲುವಳು. ಶೀಲಕ್ಕ ಮೋಜು ನೋಡುವುದಕ್ಕಾಗಿ ಕೆಳಗಿಳಿದು ಬರುವಳು. ದುರ್ಗಿಯ ಆತಂಕ ಜಾಸ್ತಿಯಾಗಿದೆ. ಕೂದಲು ಕೆದರಿದ ಚಂಪಿ ಒಳಬರುವಳು. ಪಾರೋತಿ ದಾರಿಗಡ್ಡಕಟ್ಟಿ ನಿಲ್ಲುವಳು.)

ಪಾರೋತಿ : ಯಾಕs ಎಲ್ಲಿಗಿ ಹೋಗಿದ್ದಿ?

ಚಂಪಿ : ತೋಟಕ್ಕೆ ಹೋಗಿದ್ದೆ.

ಪಾರೋತಿ : ಏನ ಮಾಡಾಕ ಹೋಗಿದ್ದೆ? ಕೂದಲೆಲ್ಲಾ ಚೆದರಿ ಹೋಗೇತಿ!

ಚಂಪಿ : ಮಾವಗ ಊಟಾ ಕೊಡಾಕ ಹೋಗಿದ್ದೆ.

ಪಾರೋತಿ : ಕುದರೀ ಲದ್ದೀ ಹಾಂಗ ನಾರತಿ…

ಚಂಪಿ : ನಿನಗ ರೋಗ ಐತೆಲ್ಲಾ, ಏನೇನೋ ನಾರತೈತಿ!

ಪಾರೋತಿ : ಹುಚ್ಚರಂಡೇ, ಮಾವನ ಜೋಡೀ ಕುದರೀ ಹತ್ತಿದ್ದೆಂತ….

(ಎನ್ನುತ್ತ ಚಂಪಿಯ ಕೂದಲು ಹಿಡಿದು ಜಗ್ಗುವಳು. ಬಿಡಿಸಿಕೊಳ್ಳುವುದಕ್ಕೆ ದುರ್ಗಿ ಚಂಪಿಯ ಸಹಾಯಕ್ಕೆ ಬಂದರೂ ಉಪಯೋಗವಾಗುವುದಿಲ್ಲ. ಅಷ್ಟರಲ್ಲಿ ಹುಲಿಗೊಂಡ ಬರುವನು. ಪಾರೋತಿ ಚಂಪಿಯನ್ನು ಬಿಟ್ಟು ಅವನನ್ನು ಅಡ್ಡಗಟ್ಟುವಳು. ಚಂಪಿ ತನ್ನ ರೂಮಿಗೆ ಹೋಗುವಳು.)

ಪಾರೋತಿ : ಚಂಪೀನ ಕುದರೀಮ್ಯಾಲ ಹತ್ತಿಸಿಕೊಂಡ ಹೋಗಿದ್ದೆಂತ, ಹೌಂದ?

ಹುಲಿಗೊಂಡ : (ನಿರ್ಲಕ್ಷ್ಯದಿಂದ) ನನ್ನ ಪಾಡಿಗಿ ನನ್ನ ಬಿಡತಿ?

ಪಾರೋತಿ : ಯಾಕ ಬಿಡಲಿ? ಈ ಗೌಡಿಕಿ, ಈ ಶ್ರೀಮಂತಿಕಿ ನಿನಗ ಯಾರಿಂದಾಯ್ತು? ಒಂದೀಟಾದರೂ ನನ್ನ ದಾದ, ದರಕಾರ ಮಾಡತಿ? ಇವ ಚಂಪೀನ ಕುದರೀ ಹತ್ತಿಸಿಕೊಂಡ ಓಡ್ಯಾಡಸ್ತಾನಂತ; ನಾ? ’ಅವ್ ನನ್ನ ಗಂಡ, ಏನ ಸರದಾರ!’ – ಅನ್ನಬೇಕಂತ!

ಹುಲಿಗೊಂಡ : ನನಗೀಗ ಏನ ಮಾಡಂದಿ?

ಪಾರೋತಿ : ನನಗ ಇಂಥಾದ್ದೆಲ್ಲಾ ಸರಿಬರಾಣಿಲ್ಲ- ಅಂದೆ.

ಹುಲಿಗೊಂಡ : ಆಯ್ತು.

ಪಾರೋತಿ : ಅದರ ಆಕೀನ್ಯಾಕ ಕುದರೀ ಹತ್ತಿಸಿಕೊಂಡ ಹೋಗಿದ್ದಿ?

ಹುಲಿಗೊಂಡ : ಹೋದರೇನಾಯ್ತೀಗ?

ಪಾರೋತಿ : ಇನ್ನೇನಾಗಬೇಕು? ವಯಸ್ಸಿಗಿ ಬಂದ ಹೆಂಗಸನ್ನ ಹಿಂಗ ಜೊಡೀ ಜೋಡೀ ಕರಕೊಂಡ ಅಡ್ಡಾಡಿದರ ಮಂದಿ ಏನಂದಾರಂತ ವಿಚಾರ ಬ್ಯಾಡಾ? ನೋಡ ದುರ್ಗೀ, ಹೆಂಗ ಮಾತಾಡತಾನು?

ದುರ್ಗಿ : ಹುಲಿಗೊಂಡಾ, ಚಂಪಿ ಹುಡುಗಾಟಕ್ಕಂದರ ನೀ ಖರೆ ಖರೇನs ಕುದುರೀ ಹತ್ತಿಸಿಕೊಂಡ ಹೋಗೋದು? ಬ್ಯಾಡಂತ ಬುದ್ಧೀ ರೀತಿ ಹೇಳಿ ಕಳಸಬೇಕಪ.

ಪಾರೋತಿ : ಎತ್ತ ಹೋದರೂ ಅದೊಂದ ಕುದರಿ ಆಗೇತಿ. ಅವ್ವ ಬರಲಿ, ಇಂದs ಅದನ್ನ ಸಂತಿಗಿ ಹೊಡೀದಿದ್ದರ ನನ್ನ ಹೆಸರ ಪಾರೋತೀನ ಅಲ್ಲ!

ಹುಲಿಗೊಂಡ : ಈಗೇನು?… ಮನೀ ಬಿಟ ಹೋಗಂದಿ?

(ಈ ಮಾತು ಕೇಳಿ ಪಾರೋತಿಯ ಆರ್ಭಟ ನಿಲ್ಲುತ್ತದೆ. ಚಂಪಿ ತನ್ನ ರೂಮಿನಲ್ಲಿ ನಿಂತುಕೊಂಡು ಈ ಮಾತು ಕೇಳುತ್ತಾಳೆ.)

ನೀ ಏನೊ ಅಂದುಕೊಂಡಿದ್ದೀಯಾದೀತು: ನಿನ್ನ ಆಸ್ತಿಗಾಗಿ, ನಿನ್ನ ಗೌಡಿಕಿಗಾಗಿ ನಾ ಇಲ್ಲಿ ಇದ್ದೀನಿ-ಅಂತ. ನಂದು ಅಂಬೋದು ಈ ಮನ್ಯಾಗಿರೋದು ಒಂದs ಒಂದು. ಅದೇನ ಹೇಳ್ಲಿ?-ಹೆಣ್ಣ ಕೇಳಾಕ ಬಂದಾಗ ಹಾಕ್ಕೊಂಡು ಬಂದಿದ್ನೆಲ್ಲಾ, -ಆ ಅಂಗಿ. ಕುದರೀ ಪಳಗಿಸೋವಾಗ ಅಲ್ಲಲ್ಲಿ ಹರದೈತಿ ಖರೆ, -ಅದನ್ನಿನ್ನs ಹಾಂಗs ಇಟ್ಟೀನಿ. ಬೇಕಾದಾಗ ನಾ ಅಂಗಿ ಬದಲ ಮಾಡಿ ಹೋಗಬಲ್ಲೆ. ಮತ್ತ ಹೋಗೋವಾಗ ನನ್ನ ಕರುಳೇನೂ ಚುರ್ ಅನ್ನೋದಿಲ್ಲ,-ನಿನ್ನ ಕಣ್ಣೀರ ಕಂಡರೂ….